‘ಥೇರವಾದ’ ಎಂದರೆ ಹಿರಿಯರ ಹಾದಿ ಬೌದ್ಧಧಮ್ಮದ ಅತ್ಯಂತ ಹಳೆಯ ಶಾಖೆ


"ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕೊಳ್ಳುವ ವ್ಯವಸ್ಥೆಯನ್ನು (self correcting mechanism) ಒಳಗೊಂಡಿದ್ದು ಒಳಗಿನ ಅಥವಾ ಹೊರಗಿನ ಪ್ರತಿಕ್ರಿಯೆ, ಹಿನ್ನುಣಿಕೆಗಳನ್ನು ಗಮನಿಸುತ್ತ ಸುಧಾರಿಸಿಕೊಳ್ಳುತ್ತ, ಹೊಂದಾಣಿಕೆ ಮಾಡಿಕೊಳ್ಳುತ್ತ ಮುಂದುವರಿಯುತ್ತದೆ," ಎನ್ನುತ್ತಾರೆ ಸಂಕೇತ ಪಾಟೀಲ. ಅವರು ಶೈಲಜಾ ಅವರ ‘ಥೇರಿಗಾಥಾ ಕಾಣಿಸಿದ ಕಣ್ಣು’ ಕೃತಿ ಕುರಿತು ಕೊನರು ನಲ್ಲಿ ಬರೆದ ಅನಿಸಿಕೆ.

‘ಥೇರವಾದ’ ಎಂದರೆ ಹಿರಿಯರ ಹಾದಿ ಬೌದ್ಧಧಮ್ಮದ ಅತ್ಯಂತ ಹಳೆಯ ಶಾಖೆ. ಬುದ್ಧನ ಮೂಲ ಬೋಧನೆಗಳಿಗೆ ಹತ್ತಿರದ ಪರಂಪರೆಯೆಂದು ಪರಿಗಣಿತವಾದುದು. ‘ಥೇರ’ ಎಂದರೆ ಹಿರಿಯರು ಮತ್ತು ಅವರಿಗೆ ಸಂಬಂಧಿಸಿದ್ದು; ಅದೇ ರೀತಿ ‘ಥೇರೀ’ ಎಂದರೆ ಹಿರಿಯ ಹೆಣ್ಣುಮಕ್ಕಳಿಗೆ, ಮತ್ತು ನಿರ್ದಿಷ್ಟವಾಗಿ ಭಿಕ್ಕುಣಿಯರಿಗೆ ಸಂಬಂಧಿಸಿದ್ದು. ಅಂಥವರು ಬರೆದ ಹಾಡುಗಳೇ ‘ಥೇರೀಗಾಥಾ’. ಅದನ್ನು ಆಧಾರವಾಗಿಟ್ಟುಕೊಂಡ ಶೈಲಜಾ ಅವರ ‘ಥೇರೀಗಾಥಾ ಕಾಣಿಸಿದ ಹೆಣ್ಣು: ಬೌದ್ಧ ಧರ್ಮದಲ್ಲಿ ಮಹಿಳೆ’ ಕೃತಿಯು ಸುಮಾರು 2400 ವರ್ಷಗಳಿಗೂ ಹಿಂದಿನ (ಮಗಧ ಮತ್ತು ಸುತ್ತಣ ಪ್ರಾಂತ್ಯಗಳ) ಸಮಾಜದಲ್ಲಿ ಹೆಣ್ಣಿನ ಪಾತ್ರದ ಚಿತ್ರಣವನ್ನೂ ಬೌದ್ಧಧಮ್ಮವು ಮತ್ತು ವೈಯಕ್ತಿಕವಾಗಿ ಬುದ್ಧನೇ ಮಹಿಳೆಯರೊಂದಿಗೆ ನಡೆಸಿದ ಅನುಸಂಧಾನದ ಬಗೆಯನ್ನೂ ಕಟ್ಟಿಕೊಡುತ್ತದೆ. ಥೇರೀಗಾಥಾದ ಜೊತೆಗೆಯೇ ಅವರು ಬೌದ್ಧಧಮ್ಮದ ಹಲವು ಪವಿತ್ರಗ್ರಂಥಗಳನ್ನೂ ಅವುಗಳ ಕುರಿತಾದ ಬಹಳಷ್ಟು ಸಂಶೋಧನಾ ಕೃತಿಗಳನ್ನು ಆಳವಾಗಿ ಅಭ್ಯಸಿಸಿ ಅವುಗಳ ಸಾರವನ್ನು ಈ ಕಿರುಹೊತ್ತಿಗೆಯಲ್ಲಿ ಕಾಣಿಸಿದ್ದಾರೆ.

ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕೊಳ್ಳುವ ವ್ಯವಸ್ಥೆಯನ್ನು (self correcting mechanism) ಒಳಗೊಂಡಿದ್ದು ಒಳಗಿನ ಅಥವಾ ಹೊರಗಿನ ಪ್ರತಿಕ್ರಿಯೆ, ಹಿನ್ನುಣಿಕೆಗಳನ್ನು ಗಮನಿಸುತ್ತ ಸುಧಾರಿಸಿಕೊಳ್ಳುತ್ತ, ಹೊಂದಾಣಿಕೆ ಮಾಡಿಕೊಳ್ಳುತ್ತ ಮುಂದುವರಿಯುತ್ತದೆ. ಹಾಗೆ ಮಾಡುತ್ತ ತನ್ಮೂಲಕ ಹೆಚ್ಚು ಮಾನವೀಯವೂ ಒಟ್ಟಾರೆ ಜೈವಿಕ ಸಮತೋಲವನ್ನು ಕಾಪಿಟ್ಟುಕೊಳ್ಳುವಂಥದ್ದೂ ಆಗಿ ವ್ಯಕ್ತಿಗಳ, ಅಷ್ಟೇ ಏಕೆ ತನ್ನ ಪರಿಸರದ ಎಲ್ಲ ಜೀವಿಗಳ, ಘನತೆಯನ್ನು ಎತ್ತಿ ಹಿಡಿಯುತ್ತ ಹೋಗುತ್ತದೆ. ಈ ಪುಸ್ತಕವು ಬೌದ್ಧಧಮ್ಮ ಮತ್ತು ಸ್ವತಃ ಬುದ್ಧನೇ ಈ ಪ್ರಕ್ರಿಯೆಯಲ್ಲಿ ಸೈದ್ಧಾಂತಿಕವಾಗಿಯಷ್ಟೇ ಅಲ್ಲದೇ ಪ್ರಾತ್ಯಕ್ಷಿಕವಾಗಿಯೂ ಪಾಲ್ಗೊಂಡು ಹೆಚ್ಚು ಮಾನವೀಯವಾಗುತ್ತ ಹೋಗುವುದನ್ನು ತೋರಿಸಿಕೊಡುತ್ತದೆ. ಹೀಗಾಗಿ ಈ ಪುಸ್ತಕವು ಒಂದು ಕಡೆ ಆ ಕಾಲದ ಮಹಿಳೆಯರ — ವಿಶೇಷವಾಗಿ ಭಿಕ್ಕುಣಿಯರ — ಕುರಿತಾಗಿ ಇದ್ದರೂ ಇನ್ನೊಂದು ಕಡೆ ಬೌದ್ಧಧಮ್ಮ ಮತ್ತು ಬುದ್ಧನ ಚಿಂತನೆಯ ವಿಕಾಸದ ಕುರಿತಾಗಿಯೂ ಇದೆ. ಧಮ್ಮವು ಮಹಿಳೆಯರನ್ನು ಒಳಗೊಳ್ಳುತ್ತ ಹೋದಂತೆ ಅವರಿಂದಾಗಿಯೂ ಅದು ಬೆಳೆದು ಒಟ್ಟಾರೆ ಸಮಾಜಕ್ಕೆ ಹೆಚ್ಚು ತೆರೆದುಕೊಳ್ಳುತ್ತ ಹೊಣೆಗಾರಿಕೆಯನ್ನು ರೂಢಿಸಿಕೊಳ್ಳುವುದನ್ನು ನಾವಿಲ್ಲಿ ಕಾಣುತ್ತೇವೆ.

ಆರಂಭಿಕ ವೇದಕಾಲದ (ಸಾಮಾನ್ಯ ಶಕ ಪೂರ್ವ 1500 - 1000) ಸಮಾಜದಲ್ಲಿ ಮಹಿಳೆಯರ ಪಾತ್ರ ಗಣನೀಯವಾಗಿತ್ತೆಂದೂ ಅವರು ವಿದ್ಯಾವಂತರಾಗಿದ್ದು ಎಲ್ಲರಿಂದ ಗೌರವಿಸಲ್ಪಡುತ್ತಿದ್ದರೆಂದೂ ಗಂಡಸರಿಗೆ ಸಮನಾದ ಸ್ಥಾನವನ್ನು ಪಡೆದಿದ್ದು ಮದುವೆಯಾಗುವವರ ಆಯ್ಕೆಯಿಂದ ಹಿಡಿದು ಅನೇಕ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳಬಲ್ಲ ಕರ್ತೃತ್ವಶಕ್ತಿಯನ್ನು ಹೊಂದಿದ್ದವರಾಗಿದ್ದರೆಂದೂ ಹೇಳಲಾಗಿದೆ. ಇದನ್ನು ಒಪ್ಪಿಕೊಂಡರೂ ನಂತರದ ವೇದಕಾಲದಲ್ಲಿ (ಸಾಮಾನ್ಯ ಶಕ ಪೂರ್ವ 1000 - 600) ಪರಿಸ್ಥಿತಿ ಸಂಪೂರ್ಣವಾಗಿ ಬೇರೆಯಾಯಿತು ಎಂದು ಹೇಳಬೇಕಾಗುತ್ತದೆ. ಅರೆ ಅಲೆಮಾರಿ ದನಗಾಹಿ ಸಮುದಾಯಗಳು ಕೃಷಿಯನ್ನು ಅಳವಡಿಸಿಕೊಂಡು ಅಲ್ಲಲ್ಲಿ ನೆಲೆಗೊಂಡು, ಕೃಷಿಪ್ರಧಾನ ಆರ್ಥಿಕತೆಯಿಂದಾಗಿ ಜನಸಂಖ್ಯೆಯಲ್ಲಿ ಹೆಚ್ಚಳವುಂಟಾಗಿ ಹಳ್ಳಿಗಾಡುಗಳು ಪಟ್ಟಣ ನಗರಗಳಾಗಿ ಬೆಳೆದಂತೆ ಸಮಾಜವು ಹೆಚ್ಚು ಶ್ರೇಣೀಕೃತವಾಗುತ್ತ ಹೋಯಿತು. ಕಸುಬನ್ನು ಆಧರಿಸಿ ಅನ್ವಯವಾಗುತ್ತಿದ್ದ, ತೀರ ದೃಢವಲ್ಲದ ಸಾಮಾಜಿಕ ಏರ್ಪಾಟು ಕಟ್ಟುನಿಟ್ಟಿನ ಜಾತಿ ಪದ್ಧತಿಯಾಗಿ ನೆಲೆಗೊಳ್ಳುತ್ತಿತ್ತು. ಕೃಷೀಪ್ರಧಾನ ಆರ್ಥಿಕತೆಯು ಒಡೆತನದ ಹಕ್ಕು ವಾರಸುದಾರಿಕೆಯ ಪ್ರಶ್ನೆಗಳನ್ನು ಮೇಲೆತ್ತಿ ಸಮಾಜವು ಪಿತೃಪ್ರಾಧಾನ್ಯತೆಯತ್ತ ದಾಪುಗಾಲಿಟ್ಟಿತು. ರಾಜ್ಯ, ನೆಲ, ನೆಲೆ ಮತ್ತಿತರ ಆಸ್ತಿಗಳಂತೆ ಹೆಣ್ಣು ಕೂಡ ಆಸ್ತಿ ಎಂಬ ಗ್ರಹಿಕೆ ವ್ಯಾಪಿಸಿತು. ಇದರ ಜೊತೆಗೇ ಒಡಮೂಡಿದ ಪರಿಶುದ್ಧತೆಯ ಕಲ್ಪನೆಯು ಹೆಣ್ಣುಮಕ್ಕಳ ಕಲಿಕೆ, ಮದುವೆ, ಸಂತಾನೋತ್ಪತ್ತಿಯ ಹಕ್ಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತ ಅವರ ಪಾತ್ರವನ್ನು ಮನೆಗೆ ಮತ್ತು ಮಕ್ಕಳನ್ನು ಹೆರುವುದಕ್ಕೆ ಸೀಮಿತಗೊಳಿಸತೊಡಗಿತು. ಗಂಡಾಳಿಕೆ ಹೆಚ್ಚಾದ, ಒಳಮದುವೆಗಳು (endogamy) ಸಾಮಾನ್ಯವಾದ ಮತ್ತು ಜಾತಿ ಪದ್ಧತಿ ಬೇರೂರಿದ ಕಾಲಘಟ್ಟಗಳು ಒಂದರ ಮೇಲೊಂದು ವ್ಯಾಪಿಸಿಕೊಂಡಿವೆ; ಅವು ಆಳದಲ್ಲಿ ತಳುಕುಹಾಕಿಕೊಂಡಿರುವ ಕಗ್ಗಂಟುಗಳಾಗಿವೆ.

ಇದೆಲ್ಲ ನಡೆಯುತ್ತಿದ್ದರೂ ಆಗಿನ ಇಡೀ ಭಾರತದಾದ್ಯಂತ ಪರಿಸ್ಥಿತಿ ಒಂದೇ ರೀತಿಯದಾಗಿತ್ತು ಎಂದು ಹೇಳಲು ಬರುವುದಿಲ್ಲ. ಮೇಲೆ ಹೇಳಿದ್ದು ಬಹುತೇಕ ಗಂಗಾನದಿಯ ಬಯಲಿನ ಪ್ರದೇಶಕ್ಕೆ ಹೆಚ್ಚು ಅನ್ವಯವಾಗುತ್ತದೆ. ಅದರಾಚೆಯ ಮಗಧ ಪ್ರಾಂತ್ಯದಲ್ಲಿ ಮತ್ತು ದಕ್ಷಿಣ ಭಾಗಗಳಲ್ಲಿ ವೈದಿಕ ಪ್ರಭಾವ ಅದೇ ಮಟ್ಟದಲ್ಲಿರಲಿಲ್ಲ. ದಕ್ಷಿಣದಲ್ಲಿ ಅಲ್ಲಿಯವೇ ಸ್ಥಳೀಯ ಸಂಸ್ಕೃತಿಗಳಿದ್ದುವು. ಮಗಧದಲ್ಲಿ ಶ್ರಮಣ ಚಳವಳಿಗಳು ಮುನ್ನೆಲೆಗೆ ಬರುತ್ತಿದ್ದುವು.

ಸಮಾಜದಲ್ಲಿ ಮಹಿಳೆಯರ ಪಾತ್ರದಲ್ಲೂ ಈ ಅಂತರವನ್ನು ಕಾಣಬಹುದಿತ್ತು. The exception that proves the rule ಎಂಬ ಮಾತಿದೆ. ಈ ಕಾಲದ ವೈದಿಕ ಸಮಾಜದಲ್ಲಿ ಮಹಿಳೆಯರ ಪಾತ್ರದ ಕುರಿತ ಯಾವುದೇ ಚರ್ಚೆಯಲ್ಲಿ ಉಲ್ಲೇಖಿಸಲ್ಪಡುವ ಗಾರ್ಗಿ, ಮೈತ್ರೇಯಿಯರು ಒಟ್ಟಾರೆ ಮಹಿಳೆಯರ ಸೀಮಿತ ಪಾತ್ರವನ್ನು ಸಿದ್ಧ ಮಾಡಿ ತೋರಿಸುವ ಅಪವಾದಗಳು. ಆದರೆ, ವೈದಿಕ ಪ್ರಭಾವವಲಯದಾಚೆಗಿ ಮಹಿಳೆಯರು ಆದರ್ಶ ಸ್ಥಿಯಲ್ಲಿಲ್ಲದಿದ್ದರೂ ಅವರು ಸಾಮುದಾಯಿಕ ಜನಜೀವನದಲ್ಲಿ, ವ್ಯಾಪಾರದಲ್ಲಿ ಪಾಲ್ಗೊಳ್ಳುವುದನ್ನು ನೊಡುತ್ತೇವೆ. ಅಲ್ಲದೇ ಜೈನ, ಬೌದ್ಧ ಮತದಂಥವು ಅವರಿಗೆ ಹೊರಬೀಳುವ ಆಯ್ಕೆಯನ್ನು ತೋರುತ್ತಿದ್ದುದನ್ನೂ ನಾವು ಗಮನಿಸಬಹುದು.

ಸಂಘಕ್ಕೆ ಸೇರಬಯಸಿದ ಭಿಕ್ಕುಣಿಯರ ಜೊತೆ ಬುದ್ಧ ಒಡನಾಡಿದ್ದು, ಅವರ ಒಳಗೊಳ್ಳುವಿಕೆಯಿಂದ ಉಂಟಾದ ಹೊಸ ಸವಾಲುಗಳನ್ನು ಬುದ್ಧ ಎದುರಿಸಲು ತೊಡಗಿದ್ದು ಇಂಥ ಸಂದರ್ಭದಲ್ಲಿ.

ಒಪ್ಪಿತ ಸಿದ್ಧಾಂತ ಮತ್ತು ಅದರ ನಿತ್ಯದ ಅಳವಡಿಕೆಯ ನಡುವಿನ ಅಂತರ ಸ್ಪಷ್ಟವಾಗುತ್ತಿದ್ದಂತೆ ಹೊಸ ನಿಯಮಗಳು ಜಾರಿಗೆ ಬರಬೇಕಾಗುತ್ತದೆ. ಉದಾಹರಣೆಗೆ, “ಯಾವುದೇ ವಸ್ತುವಿನಲ್ಲಿ ಹೆಣ್ಣು ಅಥವಾ ಗಂಡು ಎಂದು ಇಲ್ಲ. ಬುದ್ಧತ್ವ ಎನ್ನುವುದು ಗಂಡಸು ಅಥವಾ ಹೆಂಗಸಿನ ದೇಹವನ್ನು ಆಧರಿಸಿಲ್ಲ. ಏಕೆಂದರೆ ದೇಹಕ್ಕೆ ಅಂಟಿಕೊಂಡಿರುವ ಮನಸ್ಸಿಗೆ ಬುದ್ಧತ್ವವನ್ನು ಪಡೆಯಲು ಸಾಧ್ಯವಿಲ್ಲ,” ಎನ್ನುವುದು ಬುದ್ಧನ ಮಾತು (ಪುಟ 129). ಆದರೆ ಇದನ್ನು ದಿನಬಳಕೆಯಲ್ಲಿ ತರುವುದು ಹೇಗೆ? ಸಿದ್ಧಾಂತಗಳನ್ನು ವ್ಯವಹಾರ್ಯಗೊಳಿಸುವುದರತ್ತ ಬುದ್ಧ ಗಮನ ಹರಿಸಬೇಕಾಗುತ್ತದೆ. ಹಲಬಗೆಯ ದೊಡ್ಡ ಸಣ್ಣ ವಿಷಯಗಳಲ್ಲಿ ಅವನು ತಲೆಹಾಕಬೇಕಾಗುವುದನ್ನು ನಾವು ನೊಡುತ್ತೇವೆ. ಅದೇ ರೀತಿ, ಹೆಣ್ಣುಮಕ್ಕಳಿಗೆ ಸಹಜವಾದ ಆದರೆ ಅವನು ಅದುವರೆಗೆ ಎದುರಿಸದ ಸವಾಲುಗಳಿಗೂ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಆ ಕ್ಷಣದ ಸಮಸ್ಯೆಗೆ ಸ್ಪಂದಿಸಿ ಪರಿಹರಿಸುವ ತುರ್ತು ಮತ್ತು ಬದ್ಧತೆ ಬುದ್ಧನಲ್ಲಿದ್ದುದನ್ನು ನಾವು ಮನಗಾಣುತ್ತೇವೆ.

ತ್ವರಿತವಾಗಿ ಬದಲಾಗುತ್ತಿದ್ದ ಸಮಾಜ ಮತ್ತು ಅದು ಒಡ್ಡುತ್ತಿದ್ದ ಹೊಸಬಗೆಯ ಪ್ರಶ್ನೆಗಳಿಗೆ ಉತ್ತರಿಸುವಾಗ ಅಲ್ಲಲ್ಲಿ ಬುದ್ಧನ ಚಿಂತನೆಯಲ್ಲಿ, ಅಥವಾ ಕಡೆಯ ಪಕ್ಷ ಅದರ ಅಭಿವ್ಯಕ್ತಿಯಲ್ಲಿ, ಅಸಮಂಜಸತೆಗಳೂ ವಿರೋಧಾಭಾಸಗಳೂ ಇದ್ದಿರಲಿಕ್ಕೆ ಸಾಕು. ಬುದ್ಧನಿಂದ ಹಿಡಿದು ಅಂಬೇಡ್ಕರ್, ಗಾಂಧಿ ಮೊದಲಾದ ಜಗತ್ತಿನ ಶ್ರೇಷ್ಠ ಚಿಂತಕರ ಮಾತು-ಕೃತಿಗಳಲ್ಲಿ ಇವನ್ನು ಗುರುತಿಸಬಹುದು. ಬಹಳಷ್ಟು ಸಲ ಅವನ್ನು ದೋಷವೆಂಬಂತೆ ಬಿಂಬಿಸಲಾಗುತ್ತದೆ. ಆದರೆ ನಿಜಕ್ಕೂ ಅವು ಅವಾಗೇ ಸಮಸ್ಯೆಗಳಲ್ಲ. ಸಾಮಂಜಸ್ಯಕ್ಕಿಂತಲೂ ಸ್ಥಿರವಾದ ಚಿಂತನೆಗೂ ಮುಖ್ಯವಾದುದು, ತೆರೆದ ಮನಸ್ಸು. ಅದು ಸಮಾಜದೊಂದಿಗೆ ಮತ್ತೆ ಮತ್ತೆ ತೊಡಗಿಕೊಳ್ಳಲು ಪ್ರೇರೇಪಿಸುತ್ತದೆ; ಹೊಣೆಗಾರಿಕೆಯನ್ನು ತರುತ್ತದೆ. ಚಿಂತನೆಯಲ್ಲಿ ಸಮಗ್ರತೆಯನ್ನೂ ಪ್ರಾಮಾಣಿಕತೆಯನ್ನೂ ಬೌದ್ಧಿಕ ವಿನಯವನ್ನು ರೂಢಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಬುದ್ಧನು ಮೊದಲು ಈ ವಿಚಾರವನ್ನು ತಿರಸ್ಕರಿಸಿದ್ದರೂ ನಂತರದಲ್ಲಿ ತನ್ನ ಆತ್ಮೀಯ ಶಿಷ್ಯ ಆನಂದನಿಂದಾಗಿ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದು ಇದಕ್ಕೊಂದು ನಿದರ್ಶನ.

ಈ ಕೃತಿಯು ಶುರುವಾಗುವುದು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ವಾತಾವರಣ, ಚಾಲ್ತಿಯಲ್ಲಿದ್ದ ವಿವಿಧ ಮತಗಳು ಮತ್ತು ಅವುಗಳ ತಿಕ್ಕಾಟ, ಹಾಗೂ ಸಮಾಜದಲ್ಲಿದ್ದ ಶ್ರೇಣೀಕೃತ ಏರ್ಪಾಟಿನ ವಿವರವಾದ ಚಿತ್ರಣದೊಂದಿಗೆ. ಅದು ನಂತರದ ಚರ್ಚೆಗೆ ಒಳ್ಳೆಯ ಪ್ರವೇಶವನ್ನು ಒದಗಿಸಿದೆ.. ಒಂದು ಅಧ್ಯಾಯದಲ್ಲಿ ಕೆಲವು ಥೇರಿಯರ ಗಾಥೆಗಳೂ ಇವೆ; ಮತ್ತು ಕೊನೆಯ ಅಧ್ಯಾಯವು ‘ಥೇರೀಗಾಥಾ' ಎಂಬ ಪ್ರಾಯಶಃ ಮಹಿಳೆಯರ ಮೊಟ್ಟಮೊದಲ ಕವನ ಸಂಕಲನದ ಕುರಿತಾಗಿದೆ. ಅಲ್ಲಿ ಥೇರಿಯರು ಕ್ರಮಿಸಿದ ಹಾದಿ, ಅವರು ತಮ್ಮ ದೇಹದ ಬಗ್ಗೆ, ಲೈಂಗಿಕತೆಯ ಬಗ್ಗೆ, ಲಿಂಗತ್ವದ ಬಗ್ಗೆ ಕಂಡುಕೊಂಡ ಅರಿವು, ಸಂಘವನ್ನು ಸೇರಿದ ಬಗೆಗಳು; ಆ ಕವಿತೆಗಳ ಸಂರಚನೆ, ಅವುಗಳ ಮುಖ್ಯ ಕಾಳಜಿಗಳು, ಕಾವ್ಯಲಕ್ಷಣ, ಇದೆಲ್ಲದರ ಬಗ್ಗೆ ಚರ್ಚೆಯಿದೆ.

ಹಾಗಿದ್ದೂ ಶೈಲಜಾ ಅವರ ಪುಸ್ತಕವು ಥೇರೀಗಾಥಾಗಿಂತಲೂ ಆ ಕಾಲದ — ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡ — ಸಾಮುದಾಯಿಕ ಚರಿತ್ರೆಯ ಸಂಗ್ರಹವಾಗಿ ಹೆಚ್ಚು ಮಹತ್ತ್ವದ್ದಾಗಿದೆ. ಇದರ ಜೊತೆಗೇ ಥೇರೀಗಾಥಾದ ಎಲ್ಲ ಕವಿತೆಗಳ ಅನುವಾದವನ್ನೂ ಕೊಟ್ಟಿದ್ದರೆ ಅದು ಇದಕ್ಕೆ ಒಳ್ಳೆಯ ಸಹಪಠ್ಯವಾಗುತ್ತಿತ್ತು. (ಮುಂದಿನ ಆವೃತ್ತಿಯಲ್ಲಿ ಇದನ್ನು ಪರಿಗಣಿಸಬಹುದು.) ಇದು ನಮ್ಮ ಚರಿತ್ರೆಯುದ್ದಕ್ಕೂ ಮತ್ತು ವರ್ತಮಾನದಲ್ಲೂ ಮಹಿಳೆಯ ಪಾತ್ರವನ್ನು ಕುರಿತು ಹಲವು ಮುಖ್ಯ ಪ್ರಶ್ನೆಗಳನ್ನು ಎತ್ತಿ, ಹಲವು ನೆಲೆಗಲ ಸಂವಾದವನ್ನು ಹುಟ್ಟುಹಾಕಲು ಪ್ರಯತ್ನಿಸಿರುವ ಕೃತಿ ಎನ್ನುವುದಂತೂ ಹೌದು.

MORE FEATURES

ದೈನಿಕ ಅನಿವಾರ್ಯತೆಯ ರೂಪಕಗಳು

02-05-2025 ಬೆಂಗಳೂರು

"ಮೂವತ್ತು ಕವಿತೆಗಳ ಗುಚ್ಛವಿರುವ ಮೊದಲ ಭಾಗದಲ್ಲಿ ಹಿಂದೆ ಬಿದ್ದ ನೆರಳು, ಮುತ್ತುಗದೆಲೆಯ ಮೇಲಿನ ಬೆಲ್ಲ, ಪಂಜರದ ಗಿ...

ಒಂದು ಕಾಲದ ಯುಗಧರ್ಮವು ಎಲ್ಲ ಕಾಲಕ್ಕೂ ಸಲ್ಲಬೇಕೆಂದೇನೂ ಇಲ್ಲ

01-05-2025 ಬೆಂಗಳೂರು

“ಒಟ್ಟು ಕಾದಂಬರಿಯಲ್ಲಿ ಕಾಲಾವಧಿಯನ್ನು (ಟೈಮ್ ಲ್ಯಾಪ್ಸ್) ನಿರ್ವಹಿಸುವಲ್ಲಿ ಲೇಖಕರು ಇನ್ನಷ್ಟು ಜಾಣೆ ತೋರಬೇಕಿತ್...

ಆಧುನಿಕ ಮೈಸೂರು ರಾಜ್ಯದ ರೂವಾರಿ ಹೈದರಾಲಿ

01-05-2025 ಬೆಂಗಳೂರು

“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡ...