"ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು , ಹೂಗಳಿಂದ ಅವಳನ್ನು ಸಿಂಗರಿಸುತ್ತಿದ್ದ. ಅವನು ಪೂಜೆ ಸಲ್ಲಿಸುತ್ತಿದ್ದ ಲಿಂಗದ ಮೇಲೆ ಹಾಕಿದ ಹೂನಲ್ಲಿ ಕೂದಲು ಸಿಕ್ಕ,ಅದು ಊರಿನ ಮುಖ್ಯರ ಕಣ್ಣಿಗೆ ಬಿದ್ದು, ಅದನ್ನು ಅರ್ಚಕನು ಅಂಟಿಸಿರಬೇಕು ಅವನ ಮೇಲೆ ಆಪಾದನೆ ಮಾಡಲು ಹೋದರೆ, ಲಿಂಗ ದಿಂದ ಕೂದಲು ಹೊರಬರದೆ, ಲಿಂಗ ಅವನ ಭಕ್ತಿಗೆ ಒಲಿದು , ಅವನನ್ನು ಕಾಪಾಡುವ ಪರಿಗೆ, ಅವನಿಗೆ ತಳಮಳ ಉಂಟಾದ ಪ್ರಸಂಗದ ಸುತ್ತ ಹೆಣೆಯಲಾಗಿದೆ," ಎನ್ನುತ್ತಾರೆ ಡಾ. ಕೆ. ರಘುನಾಥ್. ಅವರು ಕಿರಣ್ ಭಟ್ ಅವರ ‘ಹೌಸ್ ಫುಲ್’ ಕೃತಿ ಕುರಿತು ಬರೆದ ಕೊನರು ನಲ್ಲಿ ಬರೆದ ಅನಿಸಿಕೆ.
ಹೌಸ್ ಫುಲ್- ಕಿರಣ ಭಟ್: ಅವರ ಮೊದಲ ಕೃತಿ ರಂಗ ಕೈರಳಿ ಕೇರಳದ ರಂಗಭೂಮಿಯ ಅನಾವರಣ ಮಾಡಿದರೆ, ಇಲ್ಲಿ ಕೂಡ ಈ ಕೃತಿಯ ಕೊನೆಯ ಭಾಗದಲ್ಲಿ ,ಅಲ್ಲಿ ನಡೆದ ಇಟ್ಫಾಕ್ ಒಂದು ವಾರದ ರಂಗ ಪ್ರದರ್ಶನದಲ್ಲಿ ರಂಗವೇರಿದ ನಾಟಕಗಳ ವಿವರ ಇದೆ.ಅದರಲ್ಲಿ ನಾನು ನೋಡಿದ ಇಲ್ಲಿ ರವೀಂದ್ರ ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ನೋಡಿದ ,ಕೆಪಿ ಲಕ್ಷ್ಮಣ್ ಅವರ ನಿರ್ದೇಶನದ ದಕ್ಲ ಕಥಾ ಕಾವ್ಯ ಕೂಡ ಒಂದು. ಸಹಜವಾಗಿಯೆ ಇವರಿಗೆ ಅದರಿಂದ ಸಂತೋಷ ಹೆಮ್ಮೆ ಉಂಟಾದ ಅನುಭವವನ್ನು ಕಟ್ಟಿ ಕೊಟ್ಟಿದ್ದಾರೆ. ಅದರಂತೆ ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದ ಶೇಕ್ಸ್‌ಪಿಯರ್ ನ ಟೆಂಪೆಸ್ಟ್ ನಾಟಕದ ಪ್ರೆಂಚ್ ರಂಗ ಪ್ರದರ್ಶನ. ಅದರಲ್ಲಿ ಗುಲಾಮಗಿರಿಯಿಂದ ಬಿಡುಗಡೆ ಹೊಂದಲು ಹೋರಾಡುವ ಕ್ಯಾಲಿಬನ್ ಮತ್ತು ಪ್ರಾಸ್ಪರೋ ಪಾತ್ರಗಳ ಕುರಿತ ಇವರ ಬರಹ ಡಿ.ಆರ್.ಎನ್ ಅದನ್ನು ಕುರಿತು ಬರೆದದ್ದರ ನೆನಪು ಮರುಕಳಿಸುವಂತೆ ಮಾಡಿತು. ಅದನ್ನು ನೋಡಲು ಮಾಡಬೇಕಾದ ಸಿದ್ಧತೆಯನ್ನು ಇಲ್ಲಿ ಕೊಟ್ಟಿರುವುದು, ರಂಗಾಸಕ್ತರಿಗೆ ಒಳ್ಳೆಯ ಮಾರ್ಗದರ್ಶನವಾಗಿದೆ
ಈ ಕೃತಿಯ ಮೊದಲ ಭಾಗದಲ್ಲಿ ಪೌರಾಣಿಕ ಐತಿಹಾಸಿಕ ವಸ್ತುಗಳನ್ನು ( ಅಯೋಧ್ಯ ಕಾಂಡ, ಶ್ರೀ ರಾಮ ಪಾದುಕಾ ಪಟ್ಟಾಭಿಷೇಕ ( ಕಂಪನಿಯ ನಾಟಕ) ಮಾಧವಿ,ದ್ರೌಪತಿ ಹೇಳ್ತವ್ಳೆ ಒಳಗೊಂಡ ಆಧುನಿಕ ನಾಟಕಗಳು ಇಂದಿನ ದಿನಗಳಲ್ಲಿ ಕೂಡ ಪ್ರಸ್ತುತವಾಗಿರುವ ಬಗ್ಗೆ ಬೆಳಕು ಚೆಲ್ಲುತ್ತದೆ. ಅದರಲ್ಲೂ ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರದಂತೆ ಇರುವ ನಾಟಕವೊಂದು ರಾಜಕೀಯ ದ್ವೇಷದ ದಳ್ಳುರಿಯ ಯುದ್ಧಗಳಿಂದಾಗಿ ,ಸಾಮಾನ್ಯ ಜನರು ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಗಂಡ ಮಕ್ಕಳ ಹೆಣಗಳ ಹುಡುಕಾಟದಲ್ಲಿ ತೊಡಗಬೇಕಾಗಿ ಬಂದ, ದುರಂತವನ್ನು ಸೆರೆಹಿಡಿದ ಪರಿ ಅನನ್ಯವಾಗಿದೆ.( ಮಹಿಳೆಯರು ಹೆಣ ಹುಡುಕುತ್ತಿದ್ದಾರೆ,) ಇದು ಕೊನೆಯ ಭಾಗದಲ್ಲಿ ಬರುವ ವಿದೇಶೀ ನಾಟಕವೊಂದಕ್ಕೂ( Told by my mother) ಅನ್ವಯಿಸುತ್ತದೆ. ಆದ್ದರಿಂದ ಇದು ದೇಶ ಕಾಲಾತೀತವಾದ ವಸ್ತು. ಮಾಸ್ತಿಯವರ ಯಶೋಧರೆ ನಾಟಕದ ರಂಗ ಸಮೀಕ್ಷೆ ಇಲ್ಲಿದೆ
ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು, ಹೂಗಳಿಂದ ಅವಳನ್ನು ಸಿಂಗರಿಸುತ್ತಿದ್ದ. ಅವನು ಪೂಜೆ ಸಲ್ಲಿಸುತ್ತಿದ್ದ ಲಿಂಗದ ಮೇಲೆ ಹಾಕಿದ ಹೂನಲ್ಲಿ ಕೂದಲು ಸಿಕ್ಕ,ಅದು ಊರಿನ ಮುಖ್ಯರ ಕಣ್ಣಿಗೆ ಬಿದ್ದು, ಅದನ್ನು ಅರ್ಚಕನು ಅಂಟಿಸಿರಬೇಕು ಅವನ ಮೇಲೆ ಆಪಾದನೆ ಮಾಡಲು ಹೋದರೆ, ಲಿಂಗ ದಿಂದ ಕೂದಲು ಹೊರಬರದೆ, ಲಿಂಗ ಅವನ ಭಕ್ತಿಗೆ ಒಲಿದು , ಅವನನ್ನು ಕಾಪಾಡುವ ಪರಿಗೆ ,ಅವನಿಗೆ ತಳಮಳ ಉಂಟಾದ ಪ್ರಸಂಗದ ಸುತ್ತ ಹೆಣೆಯಲಾಗಿದೆ. ಇದೆ ಬಗೆಯ ಪ್ರಸಂಗ ತಮಿಳು ವಿಷ್ಣು ಭಕ್ತೆ ಆಂಡಾಳ್ ಕುರಿತು ಆಳ್ವಾರ್ ಪ್ರಬಂಧಗಳಲ್ಲಿ ನೋಡಬಹುದು.
ನಿನಾಸಂ ತಿರುಗಾಟದ ನಾಟಕಗಳ ಕುರಿತು ಅವರ ಶಿಸ್ತು ಬದ್ದ ರಂಗ ಪ್ರದರ್ಶನ ಕುರಿತು ಇಲ್ಲಿನ ಬರಹಗಳನ್ನು ಓದಿದಾಗ, ನನ್ನ ಶಿಷ್ಯರೊಬ್ಬರು ನನ್ನ ಮಾರ್ಗ ದರ್ಶನದಲ್ಲಿ ,ಅದರ ಬಗ್ಗೆ ಎಂ.ಫಿಲ್ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ನೆನಪು ಮರುಕಳಿಸಿತು.
ಉತ್ತರ ಕನ್ನಡದ ಮಂಚಿಕೇರಿ, ಶಿರಸಿಗಳಲ್ಲಿನ ರಂಗಪ್ರದರ್ಶನಗಳ ಕುರಿತು ಇಲ್ಲಿ ಬರೆದಿರುವುದು ರಂಗ ಸಂಸ್ಕೃತಿ ವ್ಯಾಪಕವಾಗಿರುವುದಕ್ಕೆ ನಿದರ್ಶನ.
ಇದಲ್ಲದೆ ನಿರಂಜನರ ಚಿರಸ್ಮರಣೆ ಕಾದಂಬರಿ ಆಧಾರಿತ ನಾಟಕವನ್ನು ಅದಕ್ಕೆ ಕಾರಣವಾದ ಕಾಸರಗೋಡಿನಲ್ಲಿ, ನೋಡಲು ಸಾಧ್ಯವಾದ ಅಪೂರ್ವ ಪ್ರಸಂಗವನ್ನು ಇಲ್ಲಿ ದಾಖಲಿಸಿದ್ದಾರೆ.
ರಂಗ ಪ್ರದರ್ಶನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಬೇಕಾದ ಸೂಚನೆಗಳನ್ನು ಅವರು ಅವಶ್ಯ ಇದ್ದ ಕಡೆ ಕೊಡಲು ಹಿಂಜರಿಯುವುದಿಲ್ಲ ಎನ್ನುವುದು ಅವರ ರಂಗಪರಿಣತಿಗೆ ಸಾಕ್ಷಿ.
ನನ್ನ ಸಂಗಾತಿ ಅನುವಾದ ಮಾಡಿದ ಸಾವಿತ್ರಿ ಮರಾಠಿ ಕಾದಂಬರಿಯನ್ನು , ರಂಗರೂಪಕ್ಕೆ ಅಳವಡಿಸಿದ ಸುಧಾ ಅಡುಕಳ್ ಅವರಿಗೆ, ಮತ್ತು ಅದನ್ನು ಏಕಪಾತ್ರಾಭಿನಯದ ಮೂಲಕ ಪ್ರಸ್ತುತ ಪಡಿಸಿದ ಸಿರಿಗು, ಅದನ್ನು ನಿರ್ದೇಶನ ಮಾಡಿದ ಶ್ರೀ ಪಾದಭಟ್ ಅವರಿಗೆ,ಅದರ ರಂಗಪ್ರದರ್ಶನ ನೋಡಿ, ಅದರ ಸಮೀಕ್ಷೆ ಮಾಡಿದ ಗೆಳೆಯರಾದ ಕಿರಣ್ ಭಟ್ ಅವರಿಗೆ ಧನ್ಯವಾದಗಳು.
ರಂಗಭೂಮಿ ಎನ್ನುವುದೆ ಒಂದು ಸಂಕರ ಸೃಷ್ಟಿ. ಅದಕ್ಕೆ ಕೇವಲ ವಸ್ತು, ಪಾತ್ರಗಳು, ಸಂಭಾಷಣೆಗಳು ಮಾತ್ರ ಇದ್ದರೆ ಸಾಲದು. ಸಂಗೀತ, ಬೆಳಕು, ವಸ್ತ್ರಗಳು, ಹಿನ್ನೆಲೆ ಪ್ರತಿಯೊಂದು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ನಾಟಕ ಆಡಿಸುವವರಿಗೆ ಮಾತ್ರ ಅದರ ಅರಿವು ಇರುತ್ತದೆ. ಅಂತಹ ಒಂದು ಸೂಕ್ಷ್ಮಜ್ಞತೆ ಇವರ ಇಲ್ಲಿನ ಬರಹಗಳಲ್ಲಿ ಎದ್ದುಕಾಣುತ್ತದೆ. ಅಲ್ಲಲ್ಲಿ ಬಳಸುವ ಅನ್ಯ ಭಾಷೆಯ ಶಬ್ದಗಳು ,ಅಲ್ಲದೆ ರಂಗ ಪರಿಭಾಷೆಯಲ್ಲಿ ಪರಿಶ್ರಮ ಇಲ್ಲದೆ ಇರುವವರಿಗೆ ,ಅವು ಸಂವಹನಕ್ಕೆ ಕೆಲವು ವೇಳೆ ತೊಡಕುಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಕೆಲವು ಶಬ್ದ ಗಳು ತಪ್ಪಾಗಿ ಪ್ರಯೋಗ ಗೊಂಡಿವೆ. ಉದಾಹರಣೆಗೆ ಬಹುಶಃ ಆಗಬೇಕಾದ ಕಡೆ ಬಹುಷಃ ಆಗಿದೆ.
ಅವರ ರಂಗಕೈರಳಿಯನ್ನು ಓದಿ ಬರೆದ ಸಂತೋಷ ಪಟ್ಟ ನನಗೆ, ಅವರ ಈ ಎರಡನೇ ಕೃತಿಯನ್ನು ಕಳಿಸುವ ಮೂಲಕ, ಕರ್ನಾಟಕದ ಮೂಲೆಮೂಲೆಗಳಲ್ಲಿನ ರಂಗಪ್ರದರ್ಶನಗಳ ಕುರಿತು ತಿಳಿವ ಅವಕಾಶವನ್ನು ಒದಗಿಸಿದ ಅವರಿಗೆ, ಅಭಿನಂದನ ಮತ್ತು ಕೃತಜ್ಞತೆ. ಹೆಸರಿಗೆ ತಕ್ಕಂತೆ ಈ ಕೃತಿ ಕರ್ನಾಟಕದ ರಂಗಪ್ರದರ್ಶನಗಳ ಕೈಗನ್ನಡಿಯಾಗಿದೆ.ಪ್ರತಿ ಪ್ರದರ್ಶನದ ಚಿತ್ರವನ್ನು ಪುಸ್ತಕದಲ್ಲಿ ಅಳವಡಿಸಿರುವುದು ಇದರ ಮೆರುಗನ್ನು ಹೆಚ್ಚಿಸಿದೆ.
ಈ ಬಗೆಯ ರಂಗ ಪ್ರದರ್ಶನಗಳ ಸಮೀಕ್ಷೆಗಳ ದಾಖಲಾತಿಯನ್ನು ಕರ್ನಾಟಕ ನಾಟಕ ಅಕಾಡೆಮಿ ಕೈಗೆತ್ತಿಕೊಂಡು ಸಂರಕ್ಷಿಸಬೇಕಾದುದು ಅಗತ್ಯವಾಗಿ ಆಗಬೇಕಾದ ಕೆಲಸ.
“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...
"ಈ ಹೊತ್ತಗೆಯಲ್ಲಿ ಹಿಂದೂ ಧರ್ಮ, ಹಿಂದುತ್ವ, ಸನಾತನ ಧರ್ಮ ಇವೆಲ್ಲವೂ ಒಂದೇ ಆಗಿದೆ ಎಂದು ತರ್ಕಶುದ್ಧವಾಗಿ ಸಮನ್ವಯಗ...
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
©2025 Book Brahma Private Limited.