ವಿಜ್ಞಾನ ತಂತ್ರಜ್ಞಾನಗಳು ಹಿರಿಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿವೆ


“ಮತ್ತೆ ಕಾದಂಬರಿ ಬರೆಯಬೇಕು ಎಂದುಕೊಂಡ ತಕ್ಷಣವೇ ಗೌರಮ್ಮಳ ಬದುಕನ್ನು ಒಳಗೊಂಡಂತೆ ನನ್ನ ಹಳ್ಳಿಯ ಬದುಕಿನ ಸುಂದರ ಘಟನೆಗಳ ಸವಿ ನೆನಪುಗಳು ನನ್ನ ಕಣ್ಣು ಮುಂದೆ ಬಂದವು,” ಎನ್ನುತ್ತಾರೆ ಉಮೇಶ್ ತೆಂಕನಹಳ್ಳಿ. ಅವರು ತಮ್ಮ “ಕಪ್ಪು ಹಲ್ಲಿನ ಕಥೆ” ಕೃತಿಗೆ ಬರೆದ ಲೇಖಕರ ಮಾತು.

ನಮ್ಮ ಹಿರಿಯರ ಬದುಕಿನ ಆಳ ಅಗಲಗಳನ್ನು ಅಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ಆಹಾರ ಪದ್ಧತಿಗಳಾಗಿರಬಹುದು, ಉಡುಗೆ ತೊಡಿಗೆಗಳಾಗಿರಬಹುದು, ಆಚಾರ ವಿಚಾರಗಳಿರಬಹುದು ಸಂಸ್ಕೃತಿಯ ವಿಧಿವಿಧಾನಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಮುಂದೆ ಬಹಳಷ್ಟು ತಲೆಮಾರುಗಳನ್ನೇ ತಂದು ನಿಲ್ಲಿಸಿಬಿಡುತ್ತದೆ. ಅದರ ವಿಸ್ತಾರತೆ ತಿಳಿಯಲು ನಮ್ಮ ಒಂದು ಜನ್ಮ ಸಾಕಾಗುವುದಿಲ್ಲ.

ಕೆಲವನ್ನು ಹೊರತುಪಡಿಸಿ ನೋಡಿದಾಗ ಮೇಲುನೋಟಕ್ಕೆ ವಿಭಿನ್ನ, ವಿಚಿತ್ರ, ಅಸಂಬದ್ಧ ಅನಿಸಿದರೂ, ಅದರ ಹಿಂದೆ ಒಂದು ವೈಜ್ಞಾನಿಕ ಹಿನ್ನೆಲೆ ಇರುವುದು ಕಂಡುಬರುತ್ತದೆ. ಹಾಗೆ ನೋಡಿದರೆ ಈ ವಿಜ್ಞಾನ ತಂತ್ರಜ್ಞಾನಗಳು ಹಿರಿಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿವೆ. ವೈಜ್ಞಾನಿಕತೆ ಎಂಬುದು ನಮ್ಮ ಆದಿಮಾನವರ ಕಾಲದಿಂದಲೂ ಹುಟ್ಟಿಕೊಂಡಿರುವಂತದ್ದೆ. ಎಷ್ಟೋ ವಿಷಯಗಳಲ್ಲಿ ನಮ್ಮ ಹಿರಿಯರ ಬದುಕಿನ ಶೈಲಿ ನೋಡಿದಾಗ ಇಂದಿನ ನಮ್ಮ ಬದುಕು ಏನೂ ಇಲ್ಲ ಅನಿಸಿಬಿಡುತ್ತದೆ. ವಿಜ್ಞಾನ, ತಂತ್ರಜ್ಞಾನ, ಯಂತ್ರೋಪಕರಣಗಳ ಉಪಟಳಗಳ ನಡುವೆ ಸಿಲುಕಿಕೊಂಡು ಮಾನಸಿಕ ನೆಮ್ಮದಿ ಕಳೆದುಕೊಂಡು ಭ್ರಮನಿರಸನವಾಗಿ ನಿಂತುಬಿಟ್ಟಿದ್ದೇವೆ ಎಂದೆನಿಸಿಬಿಡುತ್ತದೆ.

ಈ ಸಮಾಜದಲ್ಲಿ ಕೆಲವರು ತಮ್ಮ ಅನುಕೂಲಕ್ಕಾಗಿ ಲೋಪದೋಷಗಳನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಅದೇ ಲೋಪದೋಷಗಳನ್ನು ಇಟ್ಟುಕೊಂಡು ಟೀಕಿಸುತ್ತ, ಪುಸ್ತಕ ರೂಪದಲ್ಲಿ ಅಥವಾ ಸಂವಾದ ರೂಪದಲ್ಲಿ ಹಳೆಯ ಬದುಕಿನ ಶೈಲಿಯನ್ನು ತೆಗಳಿ ಈ ಸಮಾಜದ ವ್ಯವಸ್ಥೆಯೇ ಸರಿಯಿಲ್ಲ ಎಂದು ಬಿಂಬಿಸಿ ಸಮಾಜವನ್ನೇ ಬದಲಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಈ ಬದಲಾವಣೆಯ ಭರಾಟೆಯಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚಾಗಿರುತ್ತದೆ. ಬದಲಾವಣೆ ಜಗದ ನಿಯಮ. ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂಬುದು ನಿಜ. ಆದರೆ ನಮ್ಮ ಹಿರಿಯರ ವಿಷಯಗಳ ಸರಿ ತಪ್ಪುಗಳ ಅವಲೋಕನ ಮಾಡಿ ಯಾವುದು ಸರಿ ಇಲ್ಲವೋ ಅದನ್ನು ಬಿಟ್ಟು ಒಳ್ಳೆಯ ವಿಷಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ತಮ್ಮ ಮೂಗಿನ ನೇರಕ್ಕೆ ಬದಲಾವಣೆ ಸರಿಯಲ್ಲ.

ನಾವು ಮಾಡಿಕೊಂಡಿರುವ ಕಾನೂನು ಕಟ್ಟಳೆಗಳು ನಮಗಷ್ಟೆ ಪ್ರಕೃತಿಯ ಕಾನೂನೆ ಬೇರೆ. ಅದು ಸಕಲ ಜೀವ ರಾಶಿಗಳಿಗೂ ಅನ್ವಯಿಸುತ್ತದೆ. ಆದರೆ ಮನುಷ್ಯ ಇದನ್ನು ಮೀರುವ, ಬದಲಿಸುವ, ಪ್ರಯತ್ನ ಮಾಡುತ್ತಾನೆ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸುತ್ತಾನೆ. ಇದನ್ನು ಮನಗಂಡ ನಮ್ಮ ಹಿರಿಯರು ಪ್ರತಿಯೊಂದು ವಿಚಾರದಲ್ಲೂ ಪ್ರಕೃತಿಗೆ ಅನುಗುಣವಾಗಿ ತಮ್ಮ ಬದುಕಿನ ಶೈಲಿಯನ್ನು ಅಳವಡಿಸಿಕೊಂಡು ತಮ್ಮ ಇತಿ ಮಿತಿಗಳಲ್ಲಿ ಬದುಕುತ್ತಿದ್ದುದು ಕಂಡುಬರುತ್ತದೆ. ಅವರಿಗೆ ಅಕ್ಷರದ ಜ್ಞಾನ ಇಲ್ಲ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲಾ ಜ್ಞಾನವು ಇತ್ತು. ಆದರೆ ಇಂದು ಅಕ್ಷರ ಜ್ಞಾನ ಇದೆ, ಉಳಿದೆಲ್ಲಾ ಜ್ಞಾನಗಳನ್ನು ಕಳೆದುಕೊಂಡು ದುರಾಸೆಗಳಿಗೆ ಬಲಿಯಾಗಿ ತನ್ನ ಸ್ವಾರ್ಥದ ಬದುಕೇ ಸತ್ಯ ಎಂದು ನಂಬಿ ಬದುಕುತ್ತಿದ್ದಾನೆ. ಮುಂದಿನ ಪೀಳಿಗೆಗಳಿಗೆ ಅದೇ ಸತ್ಯ ಎಂಬಂತೆ ಬಿಂಬಿಸಿ ಅವರನ್ನು ದುರಾಸೆಯ ಕೂಪಕ್ಕೆ ತಳ್ಳಿ ನೆಮ್ಮದಿ ಕಳೆದುಕೊಳ್ಳುವಂತೆ ಮಾಡುತ್ತಿದ್ದಾನೆ.

ಮಕ್ಕಳಿಗೆ ನಮ್ಮ ಹಿರಿಯರ ಒಳ್ಳೆಯ ಬದುಕಿನ ಶೈಲಿ ಮತ್ತು ಆ ಬದುಕಿನ ಸೊಬಗನ್ನು ಸವಿಯಲು ಬಿಡುವುದೇ ಇಲ್ಲ. ಬದಲಾಗಿ ಅವರ ಕುತ್ತಿಗೆಗೆ, ಬೆನ್ನಿಗೆ ನಿರ್ಜೀವ ಯಂತ್ರೋಪಕರಣಗಳನ್ನು ನೇತು ಹಾಕಿ ಪ್ರೀತಿ, ವಾತ್ಸಲ್ಯದ, ರಕ್ತ ಸಂಬಂಧಗಳಿಂದ ದೂರ ಮಾಡಿ ನಿರ್ಜೀವ ವಸ್ತುಗಳ ಜೊತೆಯೇ ಬದುಕುವಂತೆ ಮಾಡಿ ಅವರನ್ನು ಒಂಟಿಯಾಗಿ ನಿಲ್ಲುವಂತೆ ಮಾಡಿಬಿಡುತ್ತೇವೆ.

"ಹಳೆ ಬೇರು ಹೊಸ ಚಿಗುರು" ಎಂಬಂತೆ ಬೇಕು ಬೇಡಗಳನ್ನು ಅವಲೋಕಿಸಿ ವಿವೇಚನೆಯಿಂದ ಒಳ್ಳೆಯ ವಿಷಯಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ನೆಲ, ಜಲ, ಸಂಸ್ಕೃತಿ ಸಂಪ್ರದಾಯ ಯಾವುದನ್ನೂ ಬಿಟ್ಟುಕೊಡಬಾರದು. ಲೋಪ ದೋಷಗಳನ್ನು ತೆಗೆದು ನಮ್ಮ ಮುಂದಿನ ಪೀಳಿಗೆಳಿಗೆ ಹಳೆಯ ವಿಷಯಗಳನ್ನು ಹೊಸ ಬದುಕಿಗೆ ಜೋಡಿಸಿ ಬದುಕಿನ ರಸದೌತಣ ಉಣಬಡಿಸಬೇಕು ಎಂಬುದೇ ನನ್ನ ಆಶಯ. ಕೇವಲ ತನ್ನ ಸಿದ್ದಾಂತಕ್ಕೆ ಅಥವಾ ಕೆಲವು ಲೋಪ ದೋಷಕ್ಕೆ ಹಳೆಯದನ್ನು ನಿರ್ಲಕ್ಷಿಸಿ ಹೊಸ ಬದುಕನ್ನು ಕೊಡಲು ಹೋಗಿ ಮತ್ತೊಂದು ಕೂಪಕ್ಕೆ ತಳ್ಳಬಾರದು. ನಮ್ಮ ಇಂದಿನ ಯುವ ಪೀಳಿಗೆಗೆ ನಮ್ಮ ಹಿರಿಯರ ಅತ್ಯಮೂಲ್ಯವಾದ ಬದುಕಿನ ಶೈಲಿಯನ್ನು ಪರಿಚಯಿಸುವಂತಾಗಬೇಕು.

ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲುತ್ತವೆ. ಕೆರೆ ಕಟ್ಟೆಗಳ ಪರಿಕಲ್ಪನೆ, ಎಲ್ಲರೂ ಎಲ್ಲರಿಗೋಸ್ಕರ ಎಂಬ ಸಂತೆಯ ಪರಿಕಲ್ಪನೆ. ದೇಶವಾರು, ಪ್ರಾಂತ್ಯವಾರು ಆಹಾರ ಪದ್ಧತಿ ಇರಬಹುದು. ಹವಾಮಾನಕ್ಕೆ ಅನುಗುಣವಾಗಿ ನಮ್ಮ ಉಡುಗೆ ತೊಡಿಗೆಗಳು, ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳ ಆಚರಣೆಗಳು, ಊರಿಗೊಂದು ಅರಳಿ ಕಟ್ಟೆ, ಆಯುರ್ವೇದದ ವೈದ್ಯಕೀಯ ಪದ್ಧತಿ, ಅಧಿಕೃತ ಆಹ್ವಾನ ಇಲ್ಲದೆ ಸುತ್ತ ಮುತ್ತಲಿನ ನೂರಾರು ಹಳ್ಳಿಯ ಲಕ್ಷಾಂತರ ಜನರನ್ನು ಒಗ್ಗೂಡಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜಾತ್ರೆಗಳ ಪರಿಕಲ್ಪನೆ, ಇವೆಲ್ಲವೂ ನಿಜಕ್ಕೂ ಅದ್ಭುತ. ಹೀಗೆ ಹೇಳುತ್ತ ಹೋದರೆ ಬಹಳ ವಿಷಯಗಳು ಉಂಟು. ಈ ಕಪ್ಪು ಹಲ್ಲಿನ ಕಥೆಯನ್ನು ಅದೇ ಆಶಯದೊಂದಿಗೆ ಬರೆದಿದ್ದೇನೆ. ಇಲ್ಲಿ ಯಾವುದೂ ಕಾಲ್ಪನಿಕವಲ್ಲ. ಅನುಭವದ ಕಥೆ ಎಂಬುದು ಸ್ಪಷ್ಟ,

ತುಂಬು ಜೀವನ ಮಾಡಿದ ಗೌರಮ್ಮಳ ಭಾಷೆ, ಅವಳ ಬೈಗುಳ, ನಡೆ ನುಡಿಗಳು ನಮ್ಮ ನಯ ನಾಜೂಕಿನ ಬದುಕಿಗೆ ಇರಿಸು-ಮುರಿಸು ತರಬಹುದು. ಆದರೆ ಇಂದಿನ ಕಾಲದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ, ಜಗಳಗಳಿಗೆ ಪೋಲೀಸ್ ಕಪ್ಲೇಂಟ್, ಡೈವರ್ಸ್ ಎನ್ನುತ್ತಿರುವಾಗ ಗೌರಮ್ಮಳ ಬದುಕಿಗೆ ಹೇಗೆ ಹೋಲಿಸಲು ಸಾಧ್ಯ? ಕಷ್ಟಗಳನ್ನು ಮೆಟ್ಟಿನಿಂತು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ತನ್ನ ಬಂಜೆತನದ ಅವಮಾನಗಳನ್ನು ಸಹಿಸಿಕೊಂಡು, ತನ್ನ ಗಂಡನ ಕಿರುಕುಳಕ್ಕೆ ತಂದೆಯೇ ತವರಿಗೆ ಕರೆದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸಿ, ಗಂಡನೇ ಸೋಲುವಂತೆ ಮಾಡಿ ತನ್ನ ಕುಟುಂಬವನ್ನು ಉಳಿಸಿಕೊಂಡ ಗೌರಮ್ಮ, ನನಗೆ ಹೆಮ್ಮರವಾಗಿ ಕಾಣುತ್ತಾಳೆ. ನಡೆ ನುಡಿ ತುಂಬಾ ಒರಟು ಎನ್ನುವುದು ನನಗೆ ದೊಡ್ಡ ವಿಷಯವೇ ಅಲ್ಲ. ಅವಳು ಪ್ರತಿದಿನ, ಪ್ರತಿಕ್ಷಣ, ಕೌಟುಂಬಿಕವಾಗಿ, ಸಮಾಜ ಮುಖಿಯಾಗಿ ಸಹಾನುಭೂತಿಯಾಗಿ, ಕರುಣಾಮಯಿಯಾಗಿ ಕಾಣುತ್ತಾಳೆ.

ಈ ಕಾದಂಬರಿಯ ಸೃಷ್ಟಿಗೆ ಅವಳೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಪ್ರತಿ ಅಕ್ಷರದಲ್ಲಿ, ಪ್ರತಿ ಪುಟದಲ್ಲೂ ಗೌರಮ್ಮಳಿದ್ದಾಳೆ. ನಾನು ಪದವಿ ಪೂರ್ವ ಕಾಲೇಜು ವ್ಯಾಸಂಗ ಮಾಡುವಾಗಲೇ ರಂಗಭೂಮಿಯ ಜೊತೆಗೆ ಬರಹಗಾರನಾಗಬೇಕು ಎಂದು ಹೊರಟವನು. ಆದರೆ ಕಲೆ ಹೆಚ್ಚು ಆಕರ್ಷಣೆಯಾದ್ದರಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಮತ್ತೆ ಕಾದಂಬರಿ ಬರೆಯಬೇಕು ಎಂದುಕೊಂಡ ತಕ್ಷಣವೇ ಗೌರಮ್ಮಳ ಬದುಕನ್ನು ಒಳಗೊಂಡಂತೆ ನನ್ನ ಹಳ್ಳಿಯ ಬದುಕಿನ ಸುಂದರ ಘಟನೆಗಳ ಸವಿ ನೆನಪುಗಳು ನನ್ನ ಕಣ್ಣು ಮುಂದೆ ಬಂದವು. ಬರಹದ ಕನಸು ಚಿಗುರೊಡೆದು ಈ ಚೊಚ್ಚಲ ಕಾದಂಬರಿ ಅಡಿಪಾಯವಾಯಿತು. ಬಾಲ್ಯದ ಸುಂದರ ಕ್ಷಣಗಳು ಮತ್ತು ಗೌರಮ್ಮಳ ಬದುಕಿನ ದುರಂತಗಳು ಹತ್ತು ಕಾದಂಬರಿ ಬರೆಯುವಷ್ಟು ವಿಷಯಗಳಿವೆ. ಬಿಡುವಿಲ್ಲದ ರಂಗ ಚಟುವಟಿಕೆಗಳಿಂದ ಸಾಧ್ಯವಾಗುತ್ತಿಲ್ಲ. ಸಮಯಾವಕಾಶ ಮತ್ತು ನಿಮ್ಮ ಪ್ರೋತ್ಸಾಹ ಸಿಕ್ಕರೆ ಮುಂದಿನ ದಿನಗಳಲ್ಲಿ ಖಂಡಿತ ಪುಸ್ತಕ ರೂಪದಲ್ಲಿ ಹೊರತರುತ್ತೇನೆ.

ನನ್ನದು ಜನಪದ ಮತ್ತು ರಂಗಭೂಮಿ ಕ್ಷೇತ್ರ, ಸಾಹಿತ್ಯ ಲೋಕಕ್ಕೆ ಅಂಬೆಗಾಲು ಇಟ್ಟಿದ್ದೇನೆ. ಆಳವಾದ ಅಧ್ಯಯನ ಮಾಡಿದವನಲ್ಲ. ನನ್ನ ಕಾದಂಬರಿಯನ್ನು ಆರಂಭಿಸಿದಾಗ ಬಹಳಷ್ಟು ತೊಡಕಾಗಿದ್ದು ಉಂಟು. ಈ ಕಾದಬಂರಿಯಲ್ಲಿ ಬರುವ ಬಯಲು ಸೀಮೆಯ ಭಾಷೆಯನ್ನು ಕರ್ನಾಟಕದ ಎಲ್ಲಾ ಜನತೆಗೆ ಪರಿಚಯಿಸುವುದು ಹೇಗೆ ಎಂಬುದೇ ದೊಡ್ಡ ಸವಾಲಾಗಿತ್ತು.

MORE FEATURES

ನೆಗೆಟಿವ್ ಎನರ್ಜಿ ಇರುವ ಸ್ಥಳವೇ ಹಾಂಟೆಡ್

09-04-2025 ಬೆಂಗಳೂರು

"ದೆವ್ವ-ದೇವ-‌ದೈವ ಎಂಬ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತದೆ..ಅಲ್ಲವೇ?...

ವಿನಯವೇ ವ್ಯಕ್ತಿತ್ವಕ್ಕೆ ಭೂಷಣ

09-04-2025 ಬೆಂಗಳೂರು

“ಒಟ್ಟಿನಲ್ಲಿ ಕೆಂಪನಂಜಮ್ಮಣಿಯವರ ಜೀವನ ಸಾಧನೆ ಅಮೋಘವಾಗಿ ಮೂಡಿ ಬಂದಿದೆ. ಉತ್ತಮ ಕೃತಿ,” ಎನ್ನುತ್ತಾರೆ ಸಂ...

ಇದು ಕಟ್ಟಿದ ಕಥೆಯಲ್ಲ, ಹೇಳಿದ ಕಥೆ

09-04-2025 ಬೆಂಗಳೂರು

“ಕಾದಂಬರಿಯಲ್ಲಿ ಎರಡು ಜಾತ್ರೆಗಳು ಸಂಭವಿಸುತ್ತವೆ. ಎರಡು ಜಾತ್ರೆಗಳ ವಿದ್ಯಮಾನಗಳನ್ನು ಆರಂಭ ಜರುಗುವಿಕೆ ಮತ್ತು ನ...