“ಕಾದಂಬರಿಯಲ್ಲಿ ಎರಡು ಜಾತ್ರೆಗಳು ಸಂಭವಿಸುತ್ತವೆ. ಎರಡು ಜಾತ್ರೆಗಳ ವಿದ್ಯಮಾನಗಳನ್ನು ಆರಂಭ ಜರುಗುವಿಕೆ ಮತ್ತು ನಂತರದ ಪರಿಣಾಮಗಳನ್ನ ಕಾದಂಬರಿ ಚಿತ್ರಿಸುತ್ತದೆ,” ಎನ್ನುತ್ತಾರೆ ಮಲ್ಲಿಕಾರ್ಜುನ ಹಿರೇಮಠ. ಅವರು ಧರಣೇಂದ್ರ ಕುರಕುರಿ ಅವರ “ಜಾತ್ರಿ” ಕೃತಿಗೆ ಬರೆದ ಮುನ್ನುಡಿ.
ಕವಿ ಮತ್ತು ಅನುವಾದಕರಾಗಿ ಖ್ಯಾತರಾದ ಪ್ರೊ. ಧರಣೇಂದ್ರ ಕುರಕುರಿ ಈಗ ತಮ್ಮ ಎಂಬತ್ತೆರಡನೇ ವಯಸ್ಸಿನಲ್ಲಿ ಕಾದಂಬರಿಕಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಆಯ್ದ ಕವನಗಳ ಸಂಕಲನವು ೧೯೯೭ರಲ್ಲೇ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ವರ್ಗಗಳಿಗೆ ಪಠ್ಯವಾಗಿತ್ತು. ಹಿಂದಿ ಮತ್ತು ಕನ್ನಡ ಎರಡೂ ಭಾಷೆಗಳ ಮೇಲೆ ಪ್ರಭುತ್ವ ಇರುವ ಕುರಕುರಿಯವರು ಅನುವಾದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಈಚೆಗೆ ಬಸವರಾಜ ಕಟೀಮನಿಯವರ ಕಾದಂಬರಿ 'ಜ್ವಾಲಾಮುಖಿಯ ಮೇಲೆ'ಯ ಹಿಂದೀ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಅಲ್ಲದೇ ತಮ್ಮ ಕಾವ್ಯ ರಚನೆಗಾಗಿ ಕೂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸಾಹಿತ್ಯ ಶ್ರೀ' ಪ್ರಶಸ್ತಿಯನ್ನು ಪಡೆದಿದ್ದಾರೆ.
ಅವರ ಈ ಇಳಿವಯಸ್ಸಿನಲ್ಲೂ ಸೃಜನಶೀಲತೆ ಬತ್ತದ ಸೆಲೆಯಾಗಿದೆ ಎಂಬುದಕ್ಕೆ ಪ್ರಸ್ತುತ ಕಾದಂಬರಿ 'ಜಾತ್ರಿ' ಉತ್ತಮ ನಿದರ್ಶನವಾಗಿದೆ. ಕಾದಂಬರಿಯಲ್ಲಿ ಎರಡು ಜಾತ್ರೆಗಳು ಸಂಭವಿಸುತ್ತವೆ. ಎರಡು ಜಾತ್ರೆಗಳ ವಿದ್ಯಮಾನಗಳನ್ನು ಆರಂಭ ಜರುಗುವಿಕೆ ಮತ್ತು ನಂತರದ ಪರಿಣಾಮಗಳನ್ನ ಕಾದಂಬರಿ ಚಿತ್ರಿಸುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಭೀಕರ ಬರಗಾಲ ಬಿದ್ದು ಬದುಕು ದುರ್ಭರವಾಗಿರುವಾಗ ತನ್ನ ಊರು ದಮಗಳ್ಳಿಯಲ್ಲಿ ಸಂಗಪ್ಪ ಜನರಿಗೆ ಮೇವು ಕೊಟ್ಟು ಊರವರ ಮೇಲೆ ಪ್ರಭಾವ ಬೀರುತ್ತಾನೆ. ಈತ ಮತ್ತು ಇವನ ಗೆಳೆಯ ಗಣಪತಿ ತರುಣರಿದ್ದಾಗ ಉಡಾಳರು. ಇವ ದೊಡ್ಡವನಾಗಿ ಕಮತದ ಭಾರ ಹೊತ್ತುಕೊಂಡು ಹೊಲದಲ್ಲಿ ನಟ್ಟು, ಕಡಿಯುತ್ತಿರುವಾಗ ಒಂದು ನಿಧಿ ಹತ್ತುತ್ತದೆ. ಬರಗಾಲದ ಸಂದರ್ಭದಲ್ಲಿ ರೈತರಿಂದ ಸಸ್ತಾದಲ್ಲಿ ಹೊಲ ಖರೀದಿ ಮಾಡುತ್ತ ದೊಡ್ಡ ಕುಳವಾಗಿ ಬೆಳೆಯುತ್ತಾನೆ. ನೆರೆಯ ಊರು ಕೆರಿಕಲ್ಲಿನ ಪಾಂಡುರಂಗರಾಯನಿಗೆ ಗೆಳೆಯ ಸಂಗಪ್ಪ ಒಮ್ಮೆಲೇ ಹೇಗೆ ಶ್ರೀಮಂತನಾದ ಎಂದು ಆಶ್ಚರ್ಯವಾಗುತ್ತದೆ. ಅತ್ಯಂತ ಬಡತನದಲ್ಲಿದ್ದ ಪಾಂಡುರಂಗರಾಯ ಕೂಡ ದಿಢೀರನೇ ಶ್ರೀಮಂತನಾದವನು. ಒಮ್ಮೆ ಬ್ರಿಟಿಶ್ ಕಲೆಕ್ಟರ್ ಆ ಊರಿನ ಕಾಡಿಗೆ ಶಿಕಾರಿಗೆ ಬಂದಾಗ ಅವನ ಮೇಲೆ ಎರಗುತ್ತಿದ್ದ ಚಿರತೆಯನ್ನು ಕೊಂದು ಪಾಂಡುರಂಗರಾಯ ಜೀವ ಉಳಿಸುತ್ತಾನೆ ಅಷ್ಟೇ ಅಲ್ಲದೇ ಬಂಗಲೆಯಲ್ಲಿ ಅವನ ಸೇವೆ ಮಾಡಿ ತನ್ನ ಗೆಳತಿಯನ್ನು ಅವನೊಂದಿಗೆ ರಾತ್ರಿ ಕಳೆಯಲು ಒಪ್ಪಿಸಿ ಕಳಿಸುತ್ತಾನೆ. ಅವನ ಈ ಎಲ್ಲ ಸೇವೆಗಳಿಗೆ ಸಂಪ್ರೀತನಾದ ಕಲೆಕ್ಟರ್ ಅವನ ಇಚ್ಛೆಯಂತೆ ಕೆರಿಯ ಕೆಳಗಿನ ಐದು ನೂರು ಎಕರೆ ಜಮೀನನ್ನು ಮಂಜೂರು ಮಾಡಿ ಕೊಡುತ್ತಾನೆ. ಆಗಿನಿಂದ ಅವ ಜಾಗೀರದಾರ ಪಾಂಡುರಂಗರಾಯನಾಗಿ ಬೆಳೆಯುತ್ತಾನೆ. ಇಂತಹ ಸಾಹುಕಾರಿಕೆಯ ಹಿಂದೆ ಏನೇನು ಕರಾಮತ್ತುಗಳು ನಡೆದಿರುತ್ತವೆ ಎಂಬುದನ್ನೆಲ್ಲ ನಿರೂಪಕ ಬಯಲು ಮಾಡುತ್ತಾನೆ. ದಮಗಳ್ಳಿ ಸಾಹುಕಾರ ಕಲಕಟ್ಟಿ ಶಂಕರಪ್ಪಜ್ಜನಿಂದ ಸಾಗುವಳಿಯ ಸಲಹೆ ಪಡೆದು ಬೇಸಾಯ ಆರಂಭಿಸುತ್ತಾನೆ. ಪಾಂಡುರಂಗ ಮತ್ತು ಸಂಗಪ್ಪ ಇಬ್ಬರೂ ಶ್ರೀಮಂತರಾದ ಬಳಿಕ ಅವರಿಗೆ ತಮ್ಮ ಊರುಗಳಲ್ಲಿ ಮರ್ಯಾದೆ, ಗೌರವಗಳು ಹೆಚ್ಚಾಗಿ ಹಿಡಿತ ಸಾಧಿಸುತ್ತಾರೆ.
ಕಾದಂಬರಿಯಲ್ಲಿ ಎರಡು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅವುಗಳನ್ನು ಶಮನಗೊಳಿಸಲು ಎರಡು ಜಾತ್ರೆಗಳು ಸಂಭವಿಸುತ್ತವೆ. ಬರಗಾಲದಲ್ಲಿ ದೇವಿಯ ಹೇಳಿಕೆಯಾಗಿ ಮೂರೂ ಊರುಗಳ ಪ್ರಮುಖರು ಜಾತ್ರೆ ಮಾಡಲು ನಿರ್ಣಯಿಸುತ್ತಾರೆ. ಮೂರೂ ಊರುಗಳವರು ಮುಡಗಿಯಂತೆ ಒಂದಾಗಿ ಶಂಕರಪ್ಪಜ್ಜನ ಹಿರಿತನದಲ್ಲಿ ಜಾತ್ರೆಯನ್ನು ಯಶಸ್ವಿಯಾಗಿ ಮುಗಿಸುತ್ತಾರೆ. ಸ್ವಾತಂತ್ರೋತ್ತರ ಸಂದರ್ಭದಲ್ಲಿ ಈ ಊರುಗಳಿಗೆ ಕಾಲರಾ ಬೇನೆ ಬಂದಾಗ ಎರಡನೇ ತಲೆಮಾರಿನ ಸಂಗಪ್ಪನ ಮಗ ನಿಂಗಪ್ಪ ದುರಗವ್ವನ ಜಾತ್ರೆ ಮಾಡಲು ನಿರ್ಧಾರ ಮಾಡಿದರೆ ಕಾಲರಾ ಬೇನೆ ತಗೀತು ಎಂದು ಜಾತ್ರೆಗೆ ಒತ್ತಾಸೆ ಮಾಡುತ್ತಾನೆ. ಪಾರೀಸನಂಥವರು ವೈದ್ಯರ ಸತತ ಪ್ರಯತ್ನದಿಂದ ಕಾಲರಾ ಬೇನೆ ಕಡಿಮೆಯಾದೀತು ಎಂದು ಹೇಳಿದರೆ ಅದೇನೆ ಇರಲಿ, ನಿರ್ಣಯದಂತೆ ಜಾತ್ರಿ ಮಾಡೋಣ ಎಂದು ತೊಡಗುತ್ತಾರೆ. ಕಾಲರಾ ಬೇನೆ ತಗ್ಗಿದ ಕೂಡಲೇ ಜಾತ್ರೆಯ ತಯಾರಿ ನಡೆಸುತ್ತಾರೆ. ನಿಂಗವ್ವನ ಖೂನಿ ಮಾಡಿದ ನಿಂಗಪ್ಪ ಜಾತ್ರಿ ಮಾಡುವ ನೇತೃತ್ವ ವಹಿಸಿಕೊಳ್ಳುತ್ತಾನೆ. ಗುಗ್ರಿ ಶಿವು, ಬ್ಯಾಳಿ ಬಸಲಿಂಗ, ಹಜರತಸಾಬ ಮತ್ತು
ಪಾರೀಸನಂಥವರು ದೂರ ಉಳಿದು ಬಿಡುತ್ತಾರೆ. ಈ ಮೊದಲಿನ ಐಕ್ಯತೆ ಈಗ ಕಾಣುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಉದಾರ ಮನೋಭಾವದ ಹಿರಿಯರ ಕೊರತೆ ಕಾಣಿಸುತ್ತದೆ. ಮುಖ್ಯವಾಗಿ ಎರಡು ತಲೆಮಾರಿನ ಚಿತ್ರಣ ಇಲ್ಲಿದೆ.
ಅಕಸ್ಮಾತ್ತಾಗಿ ('ಜರಕಡತಾ) ನಿಧಿ ಸಿಕ್ಕರೆ, ಲಾಟರಿ ಹತ್ತಿದರೆ ಅಥವಾ ಅಂತಹ ಅವಕಾಶಗಳು ಒದಗಿ ಬಂದರೆ ನಾವು ಏನು ಮಾಡಬಹುದು, ನಮ್ಮ ಸ್ವಭಾವ, ಸಂಸ್ಕಾರಕ್ಕೆ ತಕ್ಕ ಹಾಗೆ ನಾವು ಹೇಗೆ ವರ್ತಿಸುತ್ತೇವೆ ಇಲ್ಲವೇ ನಮ್ಮ ಧೋರಣೆಯೇ ಹೇಗೆ ಬದಲಾವಣೆಯಾಗಬಹುದು ಎಂಬುದರ ಶೋಧನೆಯನ್ನು ಕಾದಂಬರಿ ಮಾಡುತ್ತದೆ. ಅದು ಹೇಗೋ ಬಂದಿರಲಿ, ಅದನ್ನು ವಿವೇಕದಿಂದ ಬಳಸುವಂಥ ಪಾಂಡುರಂಗರಾಯ ಇದ್ದಾರೆ. ಸಂಗಪ್ಪ ಅವನ ಮಗ ನಿಂಗಪ್ಪ ಇನ್ನಷ್ಟು, ಮತ್ತಷ್ಟು ಬೇಕು ಅನ್ನುತ್ತಾ ದುರಾಸೆಗೆ ಬಿದ್ದವರೂ ಇದ್ದಾರೆ. 'ಕಾಲ ಬಂದಾಗ ಉಪ್ಪರಿಗಿ ತಿಪ್ಪಿ ಆಕೃತಿ, ತಿಪ್ಪಿ ಉಪ್ಪರಿಗಿ ಅಕೃತಿ.' ಆಸ್ತಿಯ ಹಪಾಹಪಿ, ದುರಾಸೆ ಮನುಷ್ಯನನ್ನು ಎಲ್ಲಿಗೆ ಒಯ್ದು ಮುಟ್ಟಿಸಬಹುದು, ಇಂಥವರಿಂದಾಗಿ ಊರುಗಳಲ್ಲಿದ್ದ ಬಾಂಧವ್ಯ ನಾಶವಾಗಿ ಊರು ಹೇಗೆ ವಿಘಟನೆ ಹೊಂದುತ್ತವೆ ಎಂಬುದನ್ನೂ ಕಾದಂಬರಿ ಚಿತ್ರಿಸುತ್ತದೆ. ಇದನ್ನು ಕಾದಂಬರಿ ದಟ್ಟಿ ಗ್ರಾಮೀಣ ಪರಿಸರದಲ್ಲಿ ಹಳ್ಳಿಯ ಸಮೃದ್ಧ ಮೌಖಿಕ ಪರಂಪರೆಗೆ ಹತ್ತಿರದಲ್ಲಿ ಅತ್ಯಂತ ರಸವತ್ತಾದ ಕಥೆಯ ಮೂಲಕ ನಿರ್ವಹಿಸುತ್ತದೆ. ಕಾದಂಬರಿಗೆ ಕಥೆಯೇ ಜೀವಾಳವಾಗಿದೆ. ಒಂದು ಕಾಲ್ಪನಿಕ ಪ್ರಪಂಚ ಸೃಷ್ಟಿಯಾಗುತ್ತದೆ. ಆದರೆ ಈ ಪ್ರಪಂಚ ತೆರೆದುಕೊಳ್ಳುವುದು ಉತ್ತರ ಕರ್ನಾಟಕದ ಮಲೆನಾಡಿನ ಸೆರಗಿನಲ್ಲಿರುವ ಮೂರು-ನಾಕು ಹಳ್ಳಿಗಳ ಪರಿಸರದಲ್ಲಿ. ಅಲ್ಲಿನ ಬದುಕಿನ ಭಾಷೆಯ ಲಯದಲ್ಲಿ, ಅಲ್ಲಿಯ ಸೊಗಡಿನ ಜೊತೆಗೆ ವಾಸ್ತವದ ಬೆನ್ನೆಲುಬೂ ಇದೆ. ಹಳ್ಳಿಯ ಪರಿಸರದ ಗಾಢ ಅನುಭವ ಲೇಖಕರಿಗಿದೆ.
ಕಥೆ ಹೇಳುವಲ್ಲಿ ಲೇಖಕರಿಗೆ ನಂಬಿಕೆ ಇದೆ. ಇದು ಕಟ್ಟಿದ ಕಥೆಯಲ್ಲ, ಹೇಳಿದ ಕಥೆ. ಲೇಖಕರು ಗ್ರಾಮೀಣ ಬದುಕನ್ನು ಅತ್ಯಂತ ಹತ್ತಿರದಿಂದ ಕಂಡವರಷ್ಟೇ ಅಲ್ಲ ಅನುಭವಿಸಿದವರೂ ಕೂಡ. ಗ್ರಾಮೀಣ ಪ್ರದೇಶದಲ್ಲಿ ಕಥೆ ಹೇಳುವ ಅನೇಕ ಹಿರಿಯರಿದ್ದರು. ಹಾಗೆಯೇ ಇಲ್ಲಿ ಒಬ್ಬ ಹಿರಿಯ ಹೇಳಿದ ಕಥೆಯಂತೆ ಈ ಕಾದಂಬರಿ ಓಡುತ್ತದೆ. ಇಲ್ಲಿನ ಕಥೆ ವರ್ತಮಾನದಿಂದ ಆರಂಭವಾಗಿ ಭೂತಕಾಲಕ್ಕೆ ಚಲಿಸಿ ಮತ್ತೆ ವರ್ತಮಾನಕ್ಕೆ ಬಂದು ಮುಂದುವರೆಯುತ್ತದೆ.
ನಿರೂಪಕ ಆಗೀಗ ಪ್ರಸಂಗಗಳನ್ನು ಅರ್ಥೈಸುತ್ತಾನೆ. ಸ್ವಾರಸ್ಯಕರವಾಗಿ ಕಥೆ ಓದಿಸಿಕೊಂಡು ಹೋಗುತ್ತದೆ. ವಾಚನೀಯತೆ ಸಹಜವಾಗಿ ಪ್ರಾಪ್ತವಾಗಿದೆ. ಈ ಕಥೆಯ ಮೂಲಕ ಗ್ರಾಮೀಣ ಬದುಕಿನ ಚಿತ್ರಣ ಸಿಗುತ್ತದೆ. ನಿರೂಪಕ ಅಲ್ಲಿಯ ಜನರ ಸಾಚಾತನ, ಲಫಂಗಗಿರಿ, ತುಂಟಾಟ, ಉಡಾಳತನ, ನಂಬಿಕೆಗಳು, ಆಚಾರ-ವಿಚಾರಗಳು, ಕಲಹಗಳು, ಕ್ಷುದ್ರತೆಗಳು, ಸ್ವಾರ್ಥಗಳು, ಕಿತ್ತಾಟಗಳು, ಝಟಾಪಟಿಗಳು- ಹೀಗೆ ಎಲ್ಲವನ್ನೂ ತೆರೆದಿಡುತ್ತಾನೆ. ಎಲ್ಲಾ ಖುಲ್ಲಂ ಖುಲ್ಲಾ ವಿವರವಾಗಿ, ಕಥೆಯ ಸಂದರ್ಭ, ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ, ಓದುಗನಿಗೆ ಮನವರಿಕೆ ಯಾಗುವಂತೆ ನಿರೂಪಿಸುತ್ತಾನೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದ ಸನ್ನಿವೇಶಕ್ಕೆ ಬಂದಾಗ ನಿರೂಪಕ ಅಲ್ಲಿಯ ಆಗುಹೋಗುಗಳನ್ನು ಮುಖಾಮುಖಿಗೊಳಿಸದೇ ಹೆಚ್ಚಾಗಿ ನಿರೂಪಣೆಯಲ್ಲಿ, ಹೇಳಿಕೆಯಲ್ಲಿ ಕೊನೆಗೊಳಿಸುತ್ತಾನೆ. ಆದರೆ ಸ್ವಾತಂತ್ರ್ಯದ ನಂತರ ಸಾಹುಕಾರ ಶಂಕರಪ್ಪನವರು ತಮ್ಮ ಆಸ್ತಿಯನ್ನು ಶಾಲೆಗೆಂದು ಬಿಟ್ಟು ಕೊಡುವಾಗಿನಿಂದ ಕಥೆ ಘಟನೆಗಳಿಂದ, ಪ್ರಸಂಗಗಳಿಂದ ಮತ್ತೆ ತುಂಬಿಕೊಂಡು ಕಣ್ಮುಂದೆ ಚಲಿಸುತ್ತದೆ. ತಮ್ಮಣ್ಣನೆಂಬ ಪ್ರಾಮಾಣಿಕ ಸ್ವಾತಂತ್ರ್ಯ ಹೋರಾಟಗಾರ ಅವಿರೋಧವಾಗಿ ಶಾಸಕನಾಗಿ ಆಯ್ಕೆಗೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಾನೆ. ಆದರೆ ನಿಂಗಪ್ಪ ಟ್ರಸ್ಟಿನ ಅಧ್ಯಕ್ಷನಾಗಿ ಅದನ್ನು ನುಂಗಲು ಮಸಲತ್ತು ನಡೆಸುತ್ತಾನೆ.
ಶಾಲೆಯ ಟ್ರಸ್ಟಿಗಳು ನಿಂಗಪ್ಪನಂಥವರ ಕೈಯಲ್ಲಿ ಸಿಕ್ಕರೆ ಆಗುವ ದುರವಸ್ಥೆಗೆ ಒಂದು ಕನ್ನಡಿ ಹಿಡಿದಂತಾಗಿದೆ. ಕೊನೆಗೆ ನಿಂಗಪ್ಪನ ಖನಿ ಆಗುತ್ತದೆ. ಪಾಂಡುರಂಗರಾಯರು ಕೊನೆಯುಸಿರೆಳೆಯುತ್ತಾರೆ. ಪಾಂಡುರಂಗರಾಯರಿಗೆ ಅತ್ಯಂತ ನಿಷ್ಠಳಾಗಿ ಉಳಿದುಕೊಂಡು ಬಂದ ಚೆಲುವಿ 'ಅಯ್ಯೋ...' ಎನ್ನುತ್ತ ಅವರ ಎದೆಯ ಮೇಲೆ ಬಿದ್ದು ಪ್ರಾಣ ಬಿಡುತ್ತಾಳೆ. ಹೀಗೆ ಹಳ್ಳಿಗಳ ಏಳುಬೀಳಿನ ಕಥೆ ನಮ್ಮ ಕಣ್ಮುಂದೆ ಸಾಭಿನಯಗೊಳ್ಳುತ್ತದೆ. ಈ ಕಥನದ ಶಕ್ತಿ ಇರುವುದು ಅದರ ಆಡುನುಡಿಯಲ್ಲಿ, ಉತ್ತರ ಕರ್ನಾಟಕದ ಗ್ರಾಮೀಣ ಭಾಷೆ ಇಲ್ಲಿ ಜೀವಂತವಾಗಿದೆ. ಈ ಭಾಷೆಗೆ ಒಮ್ಮೆ ಹೊಂದಿಕೊಂಡು ಬಿಟ್ಟರೆ ಆಯಿತು. ಅದು ಮುಂದೆ ಲೀಲಾಜಾಲವಾಗಿ ನಮ್ಮನ್ನು ಎಳೆದುಕೊಂಡು ಹೋಗುತ್ತದೆ, ಇಲ್ಲಿ ಸಾಂದರ್ಭಿಕವಾಗಿ ಬರುವ ಗಾದೆ ಮಾತು, ನಾಣ್ಣುಡಿ, ಆಡುಪದಗಳನ್ನು ಸಂಗ್ರಹಿಸಿ ಪುಟ್ಟ ನಿಘಂಟು ರಚಿಸಬಹುದು. ಇಲ್ಲಿಯ ಮಾತಿನ ಧಾಟಿ, ಲಯ ಓದುಗನನ್ನು ಸೆರೆ ಹಿಡಿಯುತ್ತದೆ. ಒಂದು ಸಶಕ್ತವಾದ ಕಥೆಯನ್ನು ಸಶಕ್ತವಾದ ಭಾಷೆಯಲ್ಲಿ ನಿರೂಪಿಸಿದ ಧರಣೇಂದ್ರ ಕುರಕುರಿ ಅವರನ್ನು ಅಭಿನಂದಿಸುತ್ತೇನೆ.
"ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ...
"ಗಿರೀಶ್ ಕಾರ್ನಾಡ್ ಅವರ "ಹೂವು" ನಾಟಕ ಅರ್ಚಕನೊಬ್ಬ ವೇಶ್ಯೆಗೆ ಒಲಿದು , ಹೂಗಳಿಂದ ಅವಳನ್ನು ಸಿಂಗರಿಸು...
"ಒಂದು ಜೀವಂತವಾದ, ಚಲನಶೀಲವೂ ಸಂವೇದನಾಶೀಲವೂ ಆದ ಸಂಸ್ಕೃತಿ, ಸಮುದಾಯ ಅಥವಾ ಸಿದ್ಧಾಂತವು ತನ್ನನ್ನು ತಾನೇ ತಿದ್ದಿಕ...
©2025 Book Brahma Private Limited.