"ದೆವ್ವ-ದೇವ-ದೈವ ಎಂಬ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತದೆ..ಅಲ್ಲವೇ? ನಿರ್ಜನ ಪ್ರದೇಶದಲ್ಲಿ ಗೃಹಪ್ರವೇಶಕ್ಕೆ ಸಜ್ಜಾಗಿ ನಿಂತಿದ್ದ ಮನೆಯಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಮೊದಲ ಎರಡು ಪುಟದಲ್ಲಿ ಓದುತ್ತಿದ್ದಂತೆ ಕೊಲೆಯಾಗಿರುವುದು ಯಾರು ಎನ್ನುವ ಕುತೂಹಲ ಮೂಡುತ್ತದೆ," ಎನ್ನುತ್ತಾರೆ ಆಶ್ರಿತ ಕಿರಣ್. ಅವರು ರಮೇಶ್ ಶಟ್ಟಿಗಾರ್ ಮಂಜೇಶ್ವರ ಅವರ ‘ಹಾಂಟೆಡ್ ಹೊಸಮನೆ’ ಕೃತಿ ಕುರಿತು ಬರೆದ ವಿಮರ್ಶೆ.
ಪುಸ್ತಕದ ಹೆಸರು : ಹಾಂಟೆಡ್ ಹೊಸಮನೆ
ಲೇಖಕರು : ರಮೇಶ್ ಶಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು: ಟೋಟಲ್ ಕನ್ನಡ
ಪುಸ್ತಕದ ಬೆಲೆ : 150/-
ಪುಟಗಳ ಸಂಖ್ಯೆ: 150+8
ಮನೆ ಕಟ್ಟಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರ ಕನಸಾಗಿರುತ್ತದೆ. ಸ್ವಂತ ಮನೆಯಲ್ಲಿ ವಾಸ ಮಾಡುವ ಕನಸ ಕಂಡು ಮನೆ ಸಂಪೂರ್ಣವಾಗಿ ಕಟ್ಟಿ ಗೃಹಪ್ರವೇಶ ಮಾಡಿಸಿಕೊಳ್ಳುವ ಸಡಗರದಲ್ಲಿ ನೆಂಟರಿಗೆಲ್ಲಾ ಹೇಳಿಕೆ ನೀಡಿ ಇನ್ನೇನು ಮನೆಯಲ್ಲಿ ಪೂಜೆ ಆರಂಭಿಸಲು ಗಂಟೆಗಳು ಉಳಿದಿದೆ ಎನ್ನುವಷ್ಟರಲ್ಲಿ ಆ ಹೊಸ ಮನೆಯಲ್ಲಿ ಶವ ಪತ್ತೆಯಾದರೆ ಪರಿಸ್ಥಿತಿ ಹೇಗಾಗಿರಬೇಡ.. ಗೃಹಪ್ರವೇಶ ಆಗಬೇಕಿದ್ದ ಮನೆಯನ್ನು ಪೋಲೀಸರು ಸುತ್ತುವರಿದು ಮನೆಯನ್ನು ತನಿಖೆಗಾಗಿ ವಶಪಡಿಸಿಕೊಂಡು ಬೀಗ ಹಾಕಿದರೆ ಸಹಿಸುವುದು ಹೇಗೆ..! ಊಹಿಸಿದರೇ ಅಯ್ಯೋ ಅನ್ನಿಸುತ್ತೆ.. "ಹಾಟೆಂಡ್ ಹೊಸಮನೆ"ಯ ಕಥಾವಸ್ತು ಇದೆಯಾಗಿದೆ.
"ಹಾಟೆಂಡ್ ಹೊಸಮನೆ" ಹೆಸರು ನೋಡುತ್ತಿದ್ದಂತೆ ಇದೊಂದು ಹಾರರ್ ಕಥೆ ಇರಬಹುದು ಎಂದು ನೀವು ಊಹಿಸಿರಬಹುದು. ಪುಸ್ತಕದ ಮುಖಪುಟ ನೋಡಿದಾಗ ಒಂದು ಒಂಟಿ ಮನೆ, ಮನೆಯ ಮುಂದೆ ಒಂದು ದೆವ್ವ, ಹುಣ್ಣಿಮೆ ರಾತ್ರಿ ,ಒಂಟಿ ಮರ ಹಾಗು ಒಬ್ಬ ಪೋಲೀಸ್ ಗನ್ ಹಿಡಿದು ನಿಂತಿರುವುದನ್ನು ನೋಡಿದಾಗ ಒಂದಕ್ಕೊಂದು ಏನು ಸಂಬಂಧ ಎನ್ನುವ ಪ್ರಶ್ನೆ ಮೂಡುತ್ತದೆ. ಪುಸ್ತಕ ಓದಿ ಮುಗಿಸಿದ ಮೇಲೆ ಪುನಃ ಪುಸ್ತಕದ ಮುಖಪುಟ ಗಮನಿಸಿದರೆ ಕಥೆಯ ಎಳೆಯನ್ನು ಕಾಣಬಹುದು.
ಹಾಂಟೆಡ್ ಎಂದರೇನು ಎನ್ನುವ ಪ್ರಶ್ನೆಗೆ ಈ ಕಥೆಯ ಒಂದು ಪ್ರಮುಖ ಪಾತ್ರ ವಿವರಿಸಿ ಹೇಳುವ ಸನ್ನಿವೇಶವಿದೆ.
"ಕೆಲವೊಂದು ದೇವಸ್ಥಾನದಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ. ಅದನ್ನು ಕೆಲವು ಕಡೆ ಫೀಲ್ ಮಾಡ್ತೇವೆ. ಪಾಸಿಟಿವ್ ಎನರ್ಜಿ ಇದೆ ಎಂದ ಮೇಲೆ ನೆಗೆಟಿವ್ ಕೂಡ ಇರಬೇಕಲ್ಲವೇ? ಅಂತಹ ಕೆಲವೊಂದು ನೆಗೆಟಿವ್ ಎನರ್ಜಿ ಇರುವ ಸ್ಥಳವನ್ನು ಹಾಂಟೆಡ್ ಎಂದು ಹೇಳ್ತೀವಿ" ಎಂದು ಹೇಳುತ್ತಾರೆ.
ದೆವ್ವ-ದೇವ-ದೈವ ಎಂಬ ಶಕ್ತಿ ಕಣ್ಣಿಗೆ ಕಾಣಿಸುವುದಿಲ್ಲ. ಎಲ್ಲವೂ ನಂಬಿಕೆಯ ಮೇಲೆ ನಿಂತಿರುತ್ತದೆ..ಅಲ್ಲವೇ? ನಿರ್ಜನ ಪ್ರದೇಶದಲ್ಲಿ ಗೃಹಪ್ರವೇಶಕ್ಕೆ ಸಜ್ಜಾಗಿ ನಿಂತಿದ್ದ ಮನೆಯಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಮೊದಲ ಎರಡು ಪುಟದಲ್ಲಿ ಓದುತ್ತಿದ್ದಂತೆ ಕೊಲೆಯಾಗಿರುವುದು ಯಾರು ಎನ್ನುವ ಕುತೂಹಲ ಮೂಡುತ್ತದೆ. ಗೃಹಪ್ರವೇಶ ಮಾಡಿಸುವ ಪುರೋಹಿತರು ಬ್ರಾಹ್ಮಿ ಮುಹೂರ್ತದಲ್ಲಿ ನೋಡುವ ಹೆಣವನ್ನು ಕಂಡು ಹೌಹಾರಿ ಮನೆಯ ಒಡೆಯನಿಗೆ ತಿಳಿಸಿ ಅವರೆಲ್ಲರು ಬಂದು ಒಳ ಹೊಕ್ಕು ನೋಡಿದಾಗ ಮನೆಯ ಮೇಸ್ತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದು ತಿಳಿಯುತ್ತದೆ.
ಹಾರರ್ ಅಂತ ಕೈಗಿತ್ತಿಕೊಂಡ ಪುಸ್ತಕ ಕೊಲೆಯ ರಹಸ್ಯದ ಸುತ್ತ ಸುತ್ತುವಂತೆ ಕಾಣುತ್ತಿದೆಯೆಲ್ಲಾ ಎಂದು ಅನುಮಾನಿಸಿ ಮತ್ತೆ ಮುಖಪುಟ ನೋಡಿದೆ. ಶೀರ್ಷಿಕೆ ಓದಿದೆ. ಮುಂದೆ ಓದಿದರೆ ತಿಳಿಯುತ್ತದೆ ಎಂದು ನಿಲ್ಲಿಸಿದ ಪುಟದಿಂದ ಮತ್ತೆ ಓದು ಮುಂದುವರಿಸಿದೆ. ಕತೆ ಮುಂದೆ ಸಾಗಿತು. ಪೋಲಿಸ್ ವಿಚಾರಣೆಗಳು ನಡೆದವು. ಅಲ್ಲಿ ನಡೆದ ಕೊಲೆಯಾರದ್ದು ಯಾಕೆ ಎನ್ನುವ ವಿಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿಯಿತು.
ಮೂರು ಗಂಟೆಗಳಲ್ಲಿ ಗೃಹಪ್ರವೇಶದ ಪೂಜೆ ನಡೆಯಬೇಕಿದ್ದ ಮನೆಯಲ್ಲಿ ಮಾರಣ ಹೋಮ ನಡೆದು ಹೋಗಿರುತ್ತದೆ. ಹೊರಗಿನಿಂದ ನೋಡುತ್ತಾ ನಿಂತವನು ಅಲ್ಲಿಂದ ತಪ್ಪಿಸಿಕೊಂಡು ಹೊರಟಿರುತ್ತಾನೆ. ಕಥೆ ಇಲ್ಲಿಂದ ಆರಂಭವಾಗುತ್ತದೆ . ಸತ್ತವರು ಯಾರು? ಸಾಯಿಸದವರು ಯಾರು ? ಗೃಹಪ್ರವೇಶ ಯಾರದ್ದು ಎನ್ನುವ ಕುತೂಹಲ ಹೆಚ್ಚಾಗಿ ಮುಂದೆ ಓದಿದಾಗ ಮುಂಜಾನೆ ನಾಲ್ಕು ಗಂಟೆಗೆ ಮನೆಯ ಪೂಜೆಗೆ ಆಗಮಿಸುವ ಪುರೋಹಿತರ ಪರಿಚಯವಾಗುತ್ತದೆ. ನಮಗೆ ಮೊದಲು ಮನೆಯ ಸುತ್ತ ಇರುವ ನಕಾರಾತ್ಮಕ ಶಕ್ತಿಯನ್ನು ಅನುಭವಕ್ಕೆ ತರುವವರು ಇವರೇ..
ಮನೆಯ ಮಾಲಿಕ ಪ್ರಶಾಂತ್ ಮನೆಯವರನ್ನು ಅವಸರದಿಂದ ಹೊರಡಿಸುವ ವೇಳೆಗೆ ಪುರೋಹಿತರು ಕರೆ ಮಾಡುತ್ತಾರೆ. ಹೊಸ ಮನೆಯ ಸುತ್ತ ಯಾರು ಇಲ್ಲವೆಂದು ಹೇಳಿದಾಗ ಸೋಮು ಒಳಗೆ ಇರಬೇಕು ನಾನು ಈಗಲೇ ಬರುತ್ತೇನೆ ಎಂದು ಹೇಳಿ ಫೋನ್ ಇಡುತ್ತಾನೆ. ಭಟ್ಟರು ಮನೆಯ ಹೊರಗಿನಿಂದ ಕಿಟಕಿಯಲ್ಲಿ ಒಳ ನೋಡಿದಾಗ ಫ್ಯಾನ್ ನಲ್ಲಿ ನೇತಾಡುತ್ತಿದ್ದ ವ್ಯಕ್ತಿಯನ್ನು ಕಂಡು ನಡುಗುತ್ತಾರೆ. ಪ್ರಶಾಂತ್ ಅಲ್ಲಿಗೆ ಬಂದಾಗ ಪುರೋಹಿತರು ಭಯ ಭೀತರಾಗಿರುವುದನ್ನು ನೋಡಿ ಆತಂಕದಿಂದ ಮನೆಯ ಒಳಗೆ ಹೋದಾಗ ಮನೆಯ ಮೇಸ್ತ್ರಿ ಸೋಮಣ್ಣನ ಶವ ನೇತಾಡುವುದನ್ನು ನೋಡುತ್ತಾನೆ. ಮೆಟ್ಟಿಲ ಮೇಲೆ ರಕ್ತದ ಕಲೆಗಳನ್ನು ನೋಡಿ ಹಿಂಬಾಲಿಸಿ ಹೋದಾಗ ರಕ್ತದ ಮಡುವಿನಲ್ಲಿದ್ದ ಮತ್ತೊಂದು ಶವ ಕಾಣಿಸುತ್ತದೆ. ಅದು ಶೇಖರನ ಶವವೆಂದು ತಿಳಿದ ಮೇಲೆ ಮನೆಯ ಜನರಿಗೆ ದಿಕ್ಕು ತೋಚದಾಗುತ್ತದೆ.
ಹೊಸ ಮನೆಯನ್ನು ಪ್ರವೇಶಿಸುವ ಮೊದಲೇ ಇಂತಹ ಘಟನೆ ನಡೆದಿರುವುದು ಶೋಭೆಯಲ್ಲವೆಂದು ಪುರೋಹಿತರು ಪೂಜೆ ಮಾಡಿಸಲು ಆ ಮನೆಗೆ ಬರುತ್ತಾರೆ. ಪುರೋಹಿತರು ಪೂಜೆ ಶುರು ಮಾಡುವ ಮುನ್ನವೇ ಅವರ ಕೈ ಕಾಲು ತಿರುಗಿ ತೊದಲುತ್ತಾ ಪ್ರೇತ ಹೊಡಿತು ಎನ್ನುವುದನ್ನು ಓದಿದಾಗ ನಾನು ಸಣ್ಣದಾಗಿ ಬೆವರಿದೆ. ಮನದಲ್ಲಿ ನಡುಕು ಪ್ರಾರಂಭವಾಯಿತು.
ಹೊಸ ಮನೆಯಲ್ಲಿ ಜೋಡಿ ಕೊಲೆಯಾಗಿರುತ್ತದೆ ಮನೆಯ ಮೇಸ್ತ್ರಿಗಳು ಕೊಲೆಯಾಗಿದ್ದಾರೆ ಎನ್ನುವುದು ಎಲ್ಲೆಡೆ ಹರಡಿರುತ್ತದೆ. ಪೋಲೀಸರು ವಿಚಾರಣೆಗೆ ಬರುತ್ತಾರೆ. ವಿಚಾರಣೆ ಆರಂಭವಾಗುತ್ತದೆ. ಪ್ರಶಾಂತ್ ಮನೆಯ ಗೃಹಪ್ರವೇಶವನ್ನು ಮುಂದೂಡುತ್ತಾನೆ. ಕೊಲೆ ಯಾಕಾಯಿತು? ಹೇಗಾಯಿತು ಎಂದು ಪೋಲೀಸರು ತನಿಖೆ ಆರಂಭಿಸುತ್ತಾರೆ. ಪ್ರಶಾಂತ್ ನ ಮಡದಿಯ ತಮ್ಮ ಆತ್ರೇಯ ಪ್ರಶಾಂತ್ ಜೊತೆಗೆ ನಿಲ್ಲುತ್ತಾನೆ. ಜೋಡಿ ಕೊಲೆಯಾಗಿರುವ ಮನೆ "ಹಾಟೆಂಡ್" ಎನ್ನುವ ಹೆಸರನ್ನು ಹೊರಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆಯುತ್ತವೆ. ಆ ಮನೆಯ ಬಳಿ ಹೋದವರಿಗೆ ಭಯಾನಕ ಅನುಭವವಾದ ಬಗ್ಗೆ ಸುದ್ದಿ ಹರಡುತ್ತದೆ. ಏನೆಂದು ಓದಿ ತಿಳಿದರೆ ಸ್ವಾರಸ್ಯಕರ.
ಮುಂದೇನಾಗುತ್ತೇ?
ಪ್ರಶಾಂತ್ ಹೆಂಡತಿ ಮಕ್ಕಳು ಹೊಸ ಮನೆಯ ಕಡೆ ಹೋಗಲು ಇಷ್ಟ ಪಡದೆ ಇರುವಾಗ ಪ್ರಶಾಂತ್ ಆ ಮನೆಯನ್ನು ಮಾರುವ ನಿರ್ಧಾರ ಮಾಡುತ್ತಾನೆ. ಮನೆಯನ್ನು ಯಾರು ಕಂಡುಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಬೇರೆ ದಾರಿ ಕಾಣದೆ ಮನೆಯನ್ನು ಕಟ್ಟಿದ ಕಾಂಟ್ರಾಕ್ಟರ್ ಚಂದ್ರನ್ ಬಳಿ ವಿಷಯ ಪ್ರಸ್ತಾಪಿಸುತ್ತಾರೆ. ಕೋಟಿ ಬೆಲೆ ಬಾಳುವ ಮನೆಗೆ 70 ಲಕ್ಷ ಪಡೆದು ಪ್ರಶಾಂತ್ ಮನೆಯ ಆಸೆ ಕೈ ಬಿಡುತ್ತಾನೆ. ಕಾಂಟ್ರಾಕ್ಟರ್ ಚಂದ್ರನ್ ಆ ಮನೆಯನ್ನು ಖರೀದಿಸುತ್ತಾನೆ.
ಅಸಲಿ ಆಟ ಈಗ ಶುರುವಾಗುತ್ತೆ. ಚಂದ್ರನ್ ದೆವ್ವ ಭೂತಗಳನ್ನು ನಂಬುವ ಮನುಷ್ಯನಾಗಿರದ ಕಾರಣ ಹಾಂಟೆಡ್ ಮನೆಯನ್ನು ಕೊಂಡುಕೊಂಡ ಎಂದು ಪ್ರಶಾಂತ್ ಭಾವಿಸಿರುತ್ತಾನೆ. ಆದರೆ ಆ ಮನೆಯನ್ನು ಖರೀದಿಸಲು ಕೊಲೆಯಾದ ಮನೆಯಲ್ಲಿ ದೆವ್ವವಿದೆ ಎಂದು ಚಂದ್ರನ್ ನಂಬಿಸಲು ಕೆಲವು ಘಟನೆಗಳನ್ನು ಸೃಷ್ಟಿಸಿದ ಎನ್ನುವುದು ಪ್ರಶಾಂತ್ ಗೆ ತಡವಾಗಿ ತಿಳಿಯುತ್ತದೆ. ಚಂದ್ರನ್ ನನ್ನು ಕೊಲ್ಲುವುಷ್ಟು ಕೋಪ ಬರುತ್ತದೆ. ಆ ಕೋಪದಲ್ಲಿ ಚಂದ್ರನ್ ಬಳಿ ಹೋಗುತ್ತಾನೆ. ಆದರೆ ಈ ವಿಚಾರದ ಬಗ್ಗೆ ಮಾತನಾಡದೆ ಹಾಗೆಯೇ ಬರುತ್ತಾನೆ. ಮನೆಯಿಂದ ಹೊರ ಬರುವಾಗ ಹೊರಗಿನಿಂದ ಲಾಕ್ ಮಾಡಿ ಬರುತ್ತಾನೆ. ಮುಂಜಾನೆಯ ವೇಳೆಗೆ ಚಂದ್ರನ್ ಹೆಣವಾಗಿರುತ್ತಾನೆ.
ಮನೆಯನ್ನು ಪಡೆಯುವ ಆಸೆಗೆ ದೆವ್ವವಿರುವ ನಾಟಕ ಮಾಡಿಸಿದ ಚಂದ್ರನ್ ಕೂಲೆಯಾಗುತ್ತದೆ. ಪ್ರಶಾಂತ್ ಕೊಲೆಗಾರ ಅಲ್ಲ ಎನ್ನುವುದಕ್ಕೆ ಸಾಕ್ಷಿಗಳು ಸಿಗುತ್ತವೆ..ಹಾಗಾದರೆ ಕೊಂದವರು ಯಾರು? ಆರಂಭದಲ್ಲಿ ಸತ್ತ ಶೇಖರ್ ಹಾಗು ಸೋಮು ಆತ್ಮ ಚಂದ್ರನ್ ನನ್ನು ಬಲಿ ಪಡೆಯಿತೇ? ಅಲ್ಲವಾದರೆ ಚಂದ್ರನ್ ನನ್ನು ಕೊಂದವರು ಯಾರು? ನಿಜವಾಗಿಯೂ ಆ ಮನೆಯಲ್ಲಿ ದೆವ್ವ ಇತ್ತಾ? ಎನ್ನುವ ಪ್ರಶ್ನೆ ಹುಟ್ಟಿದಾಗ ನಾಯಕಿಯ ಎಂಟ್ರಿ.
ಸುಚಿ ಆಗಮನವಾದಾಗ ಕಥೆ ಮತ್ತಷ್ಟು ರೋಚಕವಾಗುತ್ತದೆ. ಸುಚಿಯ ಬಾಯಲಿ ಮೂಡುವ " ಚೇಟಾ" ಎನ್ನುವ ಧ್ವನಿ ಪುಸ್ತಕ ಬದಿಗಿಟ್ಟ ಮೇಲೂ ಪ್ರತಿಧ್ವನಿಸುತ್ತಿರುತ್ತದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರುವ ಈ ಕಥೆ ಮನದ ಭಯವನ್ನು ಕಡಿಮೆ ಮಾಡಿಸಿತು ಎನಿಸುವಷ್ಟರಲ್ಲಿ ಆ ವಿಚಿತ್ರ ಕೂಗು,ನೋವಿನ ನರಳಾಟದ ಸದ್ದು, ಹೊಳೆಯಂತೆ ಹರಿವ ರಕ್ತ ,ಮನೆಯ ಸುತ್ತ ಹರಡುತ್ತಿದ್ದ ವಾಸನೆ, ಚೆಂಗನೆ ಹಾರುವ ಬೆಕ್ಕು ಭಯ ಹೆಚ್ಚಿಸುತ್ತದೆ. ಆ ಬೆಕ್ಕು ಯಾವಾಗ ಬರುತ್ತದೋ ಎಂಬ ಭಯ ಕಾಡುತ್ತದೆ.
ಸುಚಿ ಯಾರು? ಚಂದ್ರನ್ ಕೊಲೆಗೂ ಇವಳಿಗೂ ಏನು ಸಂಬಂಧ ? ಸೋಮು ಮತ್ತು ಶೇಖರ್ ಕೊಲೆಯಾಗಲು ಯಾರು ಕಾರಣ ಎನ್ನುವ ವಿಚಾರಗಳನ್ನು ಓದಿ ತಿಳಿದರೆ ಚೆನ್ನ.
ಮರ್ಡರ್ ಮಿಸ್ಟರಿಯಲ್ಲಿ ಮೃತಪಟ್ಟ ಆತ್ಮವೊಂದು ಹೇಗೆಲ್ಲಾ ಕಾಡಿಸುತ್ತದೆ ಎನ್ನುವುದು ಒಂದೆಡೆಯಾದರೆ ವಿಜ್ಞಾನ ಹಾಗು ದೇವರ ಮೇಲಿನ ನಂಬಿಕೆ ಎರಡನ್ನು ಚೆನ್ನಾಗಿ ಒಗ್ಗೂಡಿಸಿ ಓದುಗರ ಮುಂದೆ ಇರಿಸಿರುವ ಪರಿ ಶ್ಲಾಘನೀಯ.
ವಿಜ್ಞಾನದ ಸಲಕರಣೆಗಳನ್ನು, ವಿಚಾರಗಳನ್ನು ತಿಳಿಸುತ್ತಾ ಪ್ರೇತಾತ್ಮವನ್ನು ಹುಡುಕಲು ಮುಂದಾಗುವ ಕತೆಯಲ್ಲಿನ ಪಾತ್ರದ ಜೊತೆಗೆ ನಾವು ಹೊರಡುತ್ತೇವೆ.. ಆ ಮೀಟರ್ ನಲ್ಲಿನ ಲೈಟ್ ಬಗ್ಗೆ ಓದುತ್ತಿದ್ದಂತೆ ನಮ್ಮ ಬಿ.ಪಿ ಮೀಟರ್ ಏರುತ್ತಾ ಹೋಗುತ್ತದೆ. ಮಂತ್ರವಾದಿ ಗೊಂಬೆಯನ್ನು ಹಿಡಿದು "ಬಾ" ಎಂದು ಆತ್ಮವನ್ನು ಕರೆಯುತ್ತಿದ್ದರೆ ನಾ ಬರಲ್ಲ ಎಂದು ಆ ಆತ್ಮ ನಮ್ಮನು ಹಿಡಿದು ಕುಳಿತಂತೆ ಅನಿಸುತ್ತದೆ. ಅಬ್ಬಾ..! ಈ ಪುಸ್ತಕ ಒಂದೊಳ್ಳೆ ಅನುಭವ ನೀಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಒಂದೇ ದಿನ ಪೂರ್ತಿ ಓದಿ ಮುಗಿಸುವಂತೆ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.
ಒಟ್ಟಾರೆ ಒಂಟಿಯಾಗಿ ಕುಳಿತು ಪುಸ್ತಕ ಓದುವಾಗ ಕೈ ಕಾಲು ನಡುಗುತ್ತದೆ. ಆತಂಕದಲ್ಲಿ ಬೆರಳಿನ ಉಗುರುಗಳು ಹಲ್ಲುಗಳಿಗೆ ಸಿಕ್ಕಿ ಪುಸ್ತಕ ಓದಿ ಮುಗಿಸುವುದರೊಳೆಗೆ ಬೆರಳಿಂದ ಬೇರೆಯಾಗಿ ಬಿದ್ದಿರುತ್ತದೆ. ಹಾರರ್ ಪುಸ್ತಕ ಇಷ್ಟು ಮಾಡಿಸಿದೆ ಎಂದ ಮೇಲೆ ಪುಸ್ತಕ ಗೆದ್ದಂತೆ ಅಲ್ಲವೇ.
“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...
“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
©2025 Book Brahma Private Limited.