Date: 27-12-2021
Location: ಬೆಂಗಳೂರು
‘ಸಂಪತ್ತನ್ನು ಅತಿಯಾಗಿ ಸಂಗ್ರಹಿಸುವ ಪ್ರವೃತ್ತಿ ಅನೇಕರಲ್ಲಿ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಶರಣರನ್ನು ಕುರಿತಾದ ನಾಟಕಗಳು ಹೊಸ ಭರವಸೆಯನ್ನು ಹುಟ್ಟಿಸುತ್ತವೆ. ಈ ನಿಟ್ಟಿನಲ್ಲಿ ಚಿಂತಿಸಿದಾಗ ‘ಉರಿಲಿಂಗ’ ಮಹತ್ವದ ನಾಟಕವಾಗಿ ಕಾಣಿಸುತ್ತದೆ’ ಎನ್ನುತ್ತಾರೆ ಬಸವರಾಜ ಸಬರದ. ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ವಿಜಯಶ್ರೀ ಸಬರದ ಅವರ ಉರಿಲಿಂಗ ನಾಟಕದ ಕುರಿತು ವಿಶ್ಲೇಷಿಸಿದ್ದಾರೆ.
ಶರಣರನ್ನು ಕುರಿತಂತೆ ಕೆಲವು ಮಹಿಳೆಯರು ನಾಟಕಗಳನ್ನು ರಚಿಸಿದ್ದಾರೆ. ಅವರಲ್ಲಿ ವಿಜಯಶ್ರೀಯವರ “ಉರಿಲಿಂಗ” ನಾಟಕವು ಗಮನ ಸೆಳೆಯುತ್ತದೆ. 2008ರಲ್ಲಿ “ಎರಡು ನಾಟಕಗಳು” ಶಿರೋಮಾನೆಯಲ್ಲಿ ಇವರ ನಾಟಕ ಸಂಕಲನ, ಪಲ್ಲವಿ ಪ್ರಕಾಶನದಿಂದ ಪ್ರಕಟವಾಯಿತು. “ಉರಿಲಿಂಗ” ಮತ್ತು “ಹೂವಿನತೇರನೇರಿ ಹೂವಾದವರು” ಈ ಎರಡು ನಾಟಕಗಳು ಈ ಸಂಕಲನದಲ್ಲಿವೆ. “ಹೂವಿನತೇರನೇರಿ ಹೂವಾದವರು” ನಾಟಕ ಕೂಡಾ ಶರಣರನ್ನು ಕುರಿತದ್ದೇ ಆಗಿದೆ. ಉರಿಲಿಂಗ ನಾಟಕವನ್ನು ಸಿ.ಜಿ.ಕೆಯವರು ನಿರ್ದೇಶಿಸಿದ್ದರು. ಈ ನಾಟಕ ಅನೇಕ ಕಡೆ ಪ್ರಯೋಗ ಕಂಡಿದೆ. ಇತ್ತೀಚೇಗೆ ಬೀದರದ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಬೀದರ ಜಿಲ್ಲೆಯಲ್ಲಿ ಪ್ರಯೋಗಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಬಿ.ಎ. ದ್ವೀತಿಯ ಸೇಮಿಸ್ಟರ್‍ಗೆ ಇದು ಪಠ್ಯ ಪುಸ್ತಕವಾಯಿತು. 2010ರಲ್ಲಿ ಇದೊಂದೇ ನಾಟಕ ಆಗ ಪ್ರತ್ಯೇಕವಾಗಿ “ಉರಿಲಿಂಗ” ಹೆಸರಿನಲ್ಲಿ ಮುದ್ರಣ ಕಂಡಿತು.
ತದನಂಥರದಲ್ಲಿ ಅನೇಕ ಮುದ್ರಣಗಳನ್ನು ಕಂಡಿದೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಶರಣರನ್ನು ಕುರಿತು ಗಿರೀಶ ಕಾರ್ನಾಡ, ಪಿ. ಲಂಕೇಶ, ಎಚ್.ಎಸ್. ಶಿವಪ್ರಕಾಶ ಈ ಮೊದಲಾದ ಪ್ರಮುಖ ನಾಟಕಕಾರರು ನಾಟಕಗಳನ್ನು ರಚಿಸಿದ್ದಾರೆ. ಈ ನಾಟಕಕಾರರಲ್ಲಿರುವ ಹೊಸತನದ, ವಿಶಿಷ್ಟತೆ ಮಹಿಳೆಯರ ನಾಟಕಗಳಲ್ಲಿ ಕಾಣಿಸುವದಿಲ್ಲವಾದರೂ ಶರಣರನ್ನು ಹೊಸ ರೀತಿಯಿಂದ ಪರಿಚಯಿಸಿಕೊಡುವಲ್ಲಿ ಮಹಿಳೆಯರ ನಾಟಕಗಳೂ ಗಮನಸೆಳೆಯುತ್ತವೆ. ಮಹಿಳೆಯರು ರಚಿಸಿದ ಶರಣರ ನಾಟಕಗಳಲ್ಲಿ, ಶರಣರ ಜೀವನಚರಿತ್ರೆ, ಅವರ ಸಿದ್ಧಾಂತ, ಅವರ ಸಾಧನೆಗಳು ಎದ್ದು ಕಂಡರೆ, ಈ ಮೇಲಿನ ಪುರುಷ ನಾಟಕಕಾರರಲ್ಲಿ ಇತಿಹಾಸವನ್ನು ವರ್ತಮಾನದಲ್ಲಿ ಕಟ್ಟುವ ಕೆಲಸ ಕಾಣಿಸುತ್ತದೆ. ಹೀಗಾಗಿ ಈ ನಾಟಕಗಳು ಕೇವಲ 12ನೇ ಶತಮಾನಕ್ಕೆ ಮಾತ್ರ ಸೀಮಿತವಾಗದೆ, 21ನೇ ಶತಮಾನಕ್ಕೂ ಸಂಬಂಧಿಸುತ್ತವೆ.
ಈ ನಾಟಕದಲ್ಲಿ 12 ದೃಶ್ಯಗಳಿವೆ. ಉರಿಲಿಂಗಪೆದ್ದಿಯ ಪೂರ್ವ ಪರಂಪರೆಯಿಂದ ಮೊದಲನೇ ದೃಶ್ಯ ಪ್ರಾರಂಭವಾಗುತ್ತದೆ. ಈತನ ಮೊದಲಿನ ಹೆಸರು ಪೆದ್ದಣ್ಣ. ಕಳ್ಳತನವೇ ಈತನ ವೃತ್ತಿಯಾಗಿತ್ತು. ಈತನೊಂದಿಗೆ ಅದೇ ಕೇರಿಯ ಸಿದ್ದಣ್ಣನೂ ಕಳ್ಳನಾಗಿದ್ದಾನೆ. ಅಸ್ಪಶ್ಯ ಜಾತಿಯಲ್ಲಿ ಹುಟ್ಟಿದ ಪೆದ್ದಣ್ಣ-ಸಿದ್ದಣ್ಣ ಕಳ್ಳರಾಗಲು ಈ ವ್ಯವಸ್ಥೆಯೇ ಕಾರಣವಾಗಿದೆ. ಇವರಿಗೆ ಯಾರೂ ಕೆಲಸ ಕೊಡುತ್ತಿಲ್ಲ, ಊರೊಳಗಡೆ ಬರಲು ಅನುಮತಿ ನೀಡುತ್ತಿಲ್ಲ. ಇಂತಹ ಜಾತಿಯ ಕ್ರೌರ್ಯದಿಂದಾಗಿ ಈ ಇಬ್ಬರೂ ಕಳ್ಳರಾಗಿದ್ದಾರೆ. ಸಣ್ಣ-ಪುಟ್ಟ ಕಳ್ಳತನ ಮಾಡಿಕೊಂಡು ಬದುಕುತ್ತಿರುತ್ತಾರೆ. ಪೆದ್ದಣ್ಣನ ಹೆಂಡತಿ ಕಾಳವ್ವೆ ಇವರ ಕಳ್ಳತನದ ವೃತ್ತಿಯನ್ನು ವಿರೋಧಿಸುತ್ತಾಳೆ. ದುಡಿದುಣ್ಣಬೇಕೆಂದು ತಿಳಿಸಿ ಹೇಳುತ್ತಾಳೆ. ಆದರೆ ಯಾರೂ ಕೆಲಸ ಕೊಡದೇ ಇದ್ದಾಗ ಅನಿವಾರ್ಯವಾಗಿ ಇವರು ಈ ಮಾರ್ಗ ಹಿಡಿದಿದ್ದಾರೆ. ಈ ದೃಶ್ಯದಲ್ಲಿ ತಾವುಕಳ್ಳರಾಗಲೇನು ಕಾರಣವೆಂಬುದರ ಬಗ್ಗೆ ಸ್ಪಷ್ಟತೆಯಿದೆ. ಈ ವ್ಯವಸ್ಥೆಯಲ್ಲಿ ಅಸ್ಪೃಶ್ಯರಾಗಿ ಹುಟ್ಟಿದ್ದಕ್ಕೆ ಎಂತಹ ನೋವು-ಸಂಕಟಗಳನ್ನು ಭವಿಸಬೇಕಾಗುತ್ತದೆಂಬ ಚಿತ್ರಣವಿದೆ.
ಎರಡನೇ ದೃಶ್ಯವು ಕಂದಾಪುರದ ಸೂರ್ಯನೆಂಬ ಅಸ್ಪೃಶ್ಯನ ಲಿಂಗದೀಕ್ಷಾ ಪ್ರಸಂಗದೊಂದಿಗೆ ಪ್ರಾರಂಭವಾಗ್ತುದೆ. ಕಂದಾರಪುರದಲ್ಲಿದ್ದ ಗುರು ಉರಿಲಿಂಗದೇವರು ಜಾತ್ಯಾತೀತ ಮನಸ್ಸಿನ, ಸ್ವಾಮೀಜಿಯವ ರಾಗಿದ್ದಾರೆ. ಇವರು ಆ ಕಾಲದಲ್ಲಿಯೇ ಅಸ್ಪೃಶ್ಯರಿಗೆ ದೀಕ್ಷೆ ಕೊಡುತ್ತಿರುತ್ತಾರೆ. ಒಂದು ದಿನ ಕಂದಾಪುರದಲ್ಲಿ ಅಸ್ಪೃಶ್ಯರ ಸೂರಯ್ಯನಿಗೆ ಲಿಂಗದೀಕ್ಷೆ ಕೊಡುತ್ತಿದ್ದಾಗ; ಆ ಮನೆಯ ಕಳ್ಳತನಕ್ಕೆ ಹೋಗಿದ್ದ ಪೆದ್ದಣ್ಣನಿಗೆ ಮಾಳಿಗೆಯ ಮೇಲಿನ ಬೆಳಕಿಂಡಿಯಿಂದ ಈ ದೃಶ್ಯವನ್ನು ನೋಡುತ್ತಾನೆ. ಸಿದ್ದಣ್ಣ ಕೆಳಗೆ ನಿಂತು ಯಾರಾದರೂ ಬಂದರೆ ಪೆದ್ದಣ್ಣನಿಗೆ ತಿಳಿಸಬೇಕೆಂದು ಕಾವಲು ಕಾಯುತ್ತಿರುತ್ತಾನೆ. ಉರಿಲಿಂಗದೇವರು ಸೂರಯ್ಯನಿಗೆ ಲಿಂಗದೀಕ್ಷೆ ನೀಡುವ ಸನ್ನಿವೇಶವನ್ನು ನೋಡಿದ ಪೆದ್ದಣ್ಣನ ಮನಸ್ಸು ಪರಿವರ್ತನೆಯಾಗುತ್ತದೆ. ಉರಿಲಿಂಗದೇವ ಹೇಳುತ್ತಿದ್ದ ಶರಣರ ವಚನಗಳು ಆತನಿಗೆ ಕೇಳಿಸಿ ತಕ್ಷಣ ತಾನು ಈ ಕಳ್ಳತನದ ವೃತ್ತಿಯನ್ನು ಬಿಟ್ಟು, ಲಿಂಗದೀಕ್ಷೆ ಪಡೆದು ಶರಣನಾಗ ಬೇಕೆಂಬ ಹಂಬಲ ಹುಟ್ಟಿಕೊಳ್ಳುತ್ತದೆ. ಈ ದೃಶ್ಯದಲ್ಲಿ ಉರಿಲಿಂಗದೇವರ ಮೂಲಕ ಶರಣರ ವಚನಗಳನ್ನು ಕೇಳಿಕೊಂಡ. ಪೆದ್ದಣ್ಣನ ಮನಸ್ಸು ಪೂರ್ತಿ ಬದಲಾಗಿಬಿಡುತ್ತದೆ. ತಾನು ಇಂದಿನಿಂದ ಕಳ್ಳತನ ಮಾಡುವುದನ್ನು ಬಿಟ್ಟು ಬಿಡಬೇಕೆಂದು ನಿರ್ಣಯಿಸುತ್ತಾನೆ. ಮೂರನೇ ದೃಶ್ಯದಲ್ಲಿ ಕಾಳವ್ವೆ-ಪೆದ್ದಣ್ಣ ಈ ವಿಷಯವಾಗಿ ಚರ್ಚಿಸಿ ತಾವಿಬ್ಬರೂ ಉರಿಲಿಂಗ ದೇವರಿಂದ ಲಿಂಗದೀಕ್ಷೆ ಪಡೆದುಕೊಳ್ಳಬೇಕೆಂದು ನಿರ್ಣಯಿಸುತ್ತಾರೆ. ನಾಲ್ಕನೇ ದೃಶ್ಯ ಕಣ್ಮುಂದೆ ಕಟ್ಟುವಂತೆ ಚಿತ್ರಿಸಲಾಗಿದೆ. ಈ ಮಠದಲ್ಲಿ ಉರಿಲಿಂಗ ದೇವರು ತಮ್ಮ ಶಿಷ್ಯರೊಂದಿಗಿದ್ದಾರೆ. ಪೆದ್ದಣ್ಣನನ್ನು ನೋಡಿದ ಗುರುಗಳು ಆತ ಕಳ್ಳನೆಂದು ತಿಳಿದು ಸಿಟ್ಟಿಗೆ ಬರುತ್ತಾರೆ. ತನಗೂ ಲಿಂಗದೀಕ್ಷೆ ಬೇಕೆಂದು ಪೆದ್ದಣ್ಣ ಹಠ ಹಿಡಿದಾಗ “ಘೇ ಜಾ ದಗಡಿಚ” ಎಂದ್ಹೇಳಿ ಅಲ್ಲಿಯೇ ಬಿದ್ದದ್ದ ಒಂದು ಕಲ್ಲನ್ನು ಪೆದ್ದಣ್ಣನತ್ತ ಎಸೆದು ಗುರುಗಳು ಹೋಗಿಬಿಡುತ್ತಾರೆ. ಆಗ ಪೆದ್ದಣ್ಣ ಆ ಕಲ್ಲನ್ನೇ ಭಕ್ತಿಯಿಂದ ಎತ್ತಿಕೊಂಡು, ಪೂಜಿಸತೊಡಗುತ್ತಾನೆ. ತೆಗೆದುಕೊಂಡು ಹೋಗು ಈ ಕಲ್ಲನ್ನು” ಎಂದು ಗುರುಗಳು ಪೆದ್ದಣ್ಣನತ್ತ ಆ ಕಲ್ಲನ್ನೆಸೆದಾಗ ಅದು ಪೆದ್ದಣ್ಣನ ಭಕ್ತಿಯ ಕಣ್ಣುಗಳಲ್ಲಿ ಇಷ್ಟಲಿಂಗದಂತೆಯೇ ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ಪೆದ್ದಣ್ಣನು ಉರಿಲಿಂಗದೇವರ ಕಂದಾರಮಠಕ್ಕೆ ಗುಪ್ತಭಕ್ತಿಯಿಂದ ಕಟ್ಟಿಗೆ ಹೊರೆಗಳನ್ನು ತಂದು ಹಾಕುತ್ತಾ ಹೋಗುತ್ತಿರುತ್ತಾನೆ. ಒಂದು ದಿನ ಆ ಕಟ್ಟಿಗೆ ರಾಶಿಯನ್ನು ಕಂಡ ಉರಿಲಿಂಗದೇವರು ಇವುಗಳನ್ನು ಯಾರು ತಂದು ಹಾಕಿದ್ದಾರೆಂದು ಶಿಷ್ಯರನ್ನು ಕೇಳಿದಾಗ, ಅವರು ಪೆದ್ದಣ್ಣನ ಹೆಸರು ಹೇಳುತ್ತಾರೆ. ಪೆದ್ದಣ್ಣನ ಗುಪ್ತಭಕ್ತಿಗೆ ಮೆಚ್ಚಿದ ಉರಿಲಿಂದೇವರು ಆತನಿಗೆ ಲಿಂಗದೀಕ್ಷೆ ಕೊಡಲು ಒಪ್ಪುತ್ತಾರೆ. 5ನೇ ದೃಶ್ಯದಲ್ಲಿ ಪೆದ್ದಣ್ಣ ಮತ್ತು ಕಾಳವ್ವೆ ಉರಿಲಿಂಗದೇವರಿಂದ ಲಿಂಗದೀಕ್ಷೆ ಪಡೆಯುತ್ತಾರೆ.
ಆರನೇ ದೃಶ್ಯ, ನಂದರಾಜನ ಆಸ್ಥಾನದಿಂದ ಪ್ರಾರಂಭವಾಗುತ್ತದೆ. ನಂದರಾಜ ಸಿಂಹಾಸನದ ಮೇಲೆ ಕುಳಿತಿದ್ದಾನೆ. ಮಹಾಮಂತ್ರಿ, ರಾಜಪುರೋಹಿತ, ಹೊಗಳುಭಟ್ಟರು ಇದ್ದಾರೆ. ಊರಿನ ಜನತೆಗಾಗಿ ರಾಜರು ಬೃಹತ್ ಕೆರೆಯನ್ನು ಕಟ್ಟಿಸುವ ಪ್ರಸ್ತಾಪವಾಗಿರುತ್ತದೆ. ಕೆರೆ ಕಟ್ಟಿಸುವಾಗ ದೊಡ್ಡ ಕಲ್ಲುಬಂಡೆಯೊಂದು ಎದುರಾಗಿದ್ದು ಸಮಸ್ಯೆಯಾಗಿದೆಯೆಂದು ಮಹಾಮಂತ್ರಿ ಹೇಳಿದಾಗ, ನಂದರಾಜರಿಗೆ ಅದು ಸಮಸ್ಯೆಯಾಗಿ ಕಾಡುತ್ತದೆ. ಮಹಾಭಕ್ತನಾಗಿದ್ದ ಪೆದ್ದಣ್ಣನಿಂದಲೇ ಈ ಸಮಸ್ಯೆ ಬಗೆ ಹರಿಯುತ್ತದೆಂದು ತಿಳಿದಾಗ ನಂದರಾಜನು ಪೆದ್ದಣ್ಣನನ್ನು ಕರೆಯಿಸುತ್ತಾನೆ. ವಿಷಯ ತಿಳಿದ ಪೆದ್ದಣ್ಣನು ತಾನು ಕಲ್ಲುಬಂಡೆಯನ್ನು ತೆಗೆಯುವುದಾಗಿ ಹೇಳುತ್ತ, ಆ ಕೆರೆಯ ನೀರನ್ನು ಅಸ್ಪೃಶ್ಯರೂ ಬಳಸುವಂತಾಗಬೇಕೆಂದು ಕರಾರು ಹಾಕುತ್ತಾನೆ. ನಂದಾರಜನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಆದರೆ ರಾಜಪುರೋಹಿತ ಒಪ್ಪಿಕೊಳ್ಳುವುದಿಲ್ಲ. ಆಗ ಪೆದ್ದಣ್ಣನೊಂದಿಗೆ ರಾಜಪುರೋಹಿತನ ಮುಖಾಮುಖಿಯಾಗುತ್ತದೆ. ಕಾಶಿಯಿಂದ ಪಂಡಿತರನ್ನು ಕರೆಸೋಣ, ಈ ಅಸ್ಪೃಶ್ಯನ ಸಹಾಯಬೇಕಾಗಿಲ್ಲವೆಂದು ಹೇಳಿದಾಗ ಪೆದ್ದಣ್ಣನು ಚಾತುವರ್ಣನ ವ್ಯವಸ್ಥೆಯನ್ನು ವಿರೋಧಿಸುತ್ತ ರಾಜಪುರೋಹಿತನ ಪೊಳ್ಳುತನವನ್ನು ಬಯಲಿಗೆಳೆಯುತ್ತಾನೆ. ಇದೆಲ್ಲವನ್ನು ಕೇಳಿಸಿಕೊಂಡ ನಂದಾರಜನು ರಾಜಪುರೋಹಿತನ ಮಾತನ್ನು ನಿರ್ಲಕ್ಷಿಸಿ ಪೆದ್ದಣ್ಣನ ಮಾತಿಗೆ ಒಪ್ಪಿಕೊಂಡು, ಕಲ್ಲುಬಂಡೆಯನ್ನು ತೆಗಿಸಬೇಕೆಂದು ಕೋರುತ್ತಾನೆ. ರಾಜನ ಕೋರಿಕೆ ಮೇರೆಗೆ ಕಲ್ಲುಬಂಡೆಯನ್ನು ತೆಗೆದ ಪೆದ್ದಣ್ಣನು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಕಾರಣನಾಗುತ್ತಾನೆ. ಇದರಿಂದ ಪೆದ್ದಣ್ಣನು ಕಂದಾರಮಠದ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುತ್ತಾನೆ. ಪಟ್ಟಾಭಿಷೇಕ ನಡೆದಾಗ ಗೋವಿಂದಭಟ್ಟನು ವಿರೋಧೀಸುತ್ತಾನೆ. ಅಸ್ಪೃಶ್ಯರಿಗೆ ಪಟ್ಟಾಭೀಷೇಕ ನಿಷಿದ್ಧವೆಂದು ಹೇಳಿದಾಗ, ಉರಿಲಿಂಗದೇವರು ಭಟ್ಟನ ಮಾತಿಗೆ ಬೆಲೆಕೊಡದೆ, ಪೆದ್ದಣ್ಣನಿಗೆ ಪಟ್ಟಾಭಿಷೇಕ ಮಾಡಿ ಪೆದ್ದಣ್ಣನನ್ನು, ಉರಿಲಿಂಗಪೆದ್ದಿಯನ್ನಾಗಿ ಮಾಡುತ್ತಾರೆ. ಎಂಟನೇ ದೃಶ್ಯದಲ್ಲಿ ಇದೇ ವಿಷಯ ಮುಂದುವರೆದು ಅಸ್ಪೃಶ್ಯನೊಬ್ಬ ಮಠಾಧಿಪತಿಯಾದದ್ದು, ಕೆಲಪುರೋಹಿತಶಾಹಿಗಳಿಗೆ ಒಪ್ಪಿಗೆಯಾಗುವುದಿಲ್ಲ. ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ.
ಒಂಬತ್ತನೇ ದೃಶ್ಯದಲ್ಲಿ ಉರಿಲಿಂಗದೇವ ವೃದ್ಧಾಪ್ಯದಿಂದ ಬಳಲುತ್ತಿದ್ದಾನೆ. ಶಿಷ್ಯರ ಮುಖದಲ್ಲಿ ದುಃಖವಿದೆ. ಉರಿಲಿಂಗಪೆದ್ದಿ-ಕಾಳವ್ವೆ ಎಲ್ಲರೂ ಸೇರಿದ್ದಾರೆ. ಶರಣರ ಸಂದೇಶಗಳನ್ನು ಪಾಲಿಸಬೇಕೆಂದು ಉರಿಲಿಂಗಪೆದ್ದಿಗೆ ತಿಳಿಸಿದ ಗುರು ಉರಿಲಿಂಗದೇವನು ಲಿಂಗೈಕ್ಯನಾಗುತ್ತಾನೆ. ಹತ್ತನೇ ದೃಶ್ಯವು ಕಲ್ಯಾಣದ ಅನುಭವ ಮಂಟಪಕ್ಕೆ ಸಂಬಂಧಿಸಿದ್ದಾಗಿದೆ. ಶರಣರೆಲ್ಲ ಉಲಿರಿಲಿಂಗಪೆದ್ದಿ-ಕಾಳವ್ವೆ ದಂಪತಿಗಳನ್ನು ಅನುಭವ ಮಂಟಪಕ್ಕೆ ಸ್ವಾಗತಿಸುತ್ತಾರೆ. ಅನುಭವ ಮಂಟಪದಲ್ಲಿ ಶರಣರ ದರ್ಶನ ಪಡೆದ ಈ ದಂಪತಿಗಳು ಸಂತೋಷಪಡುತ್ತಾರೆ. ಹನ್ನೊಂದನೇ ದೃಶ್ಯದಲ್ಲಿ ಈ ದಂಪತಿಗಳು ಪರಸ್ಪರ ಚರ್ಚೆ ಮಾಡುತ್ತಾರೆ. ಅಸ್ಪೃಶ್ಯರು ಹೀಗೆ ದೀಕ್ಷೆಪಡೆದು ಶರಣರಾದದ್ದು ಕೆಲವು ಸಂಪ್ರದಾಯ ಮನಸ್ಸುಗಳಿಗೆ ಸರಿಯೆನಿಸಲಿಲ್ಲವೆಂದು ವಿಷಯದಲ್ಲಿ ಪ್ರಸ್ತಾಪವಾಗುತ್ತದೆ.
ಹನ್ನೆರಡನೇ ದೃಶ್ಯದಲ್ಲಿ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಇವರ ವಚನಗಳ ಬಗ್ಗೆ ಚರ್ಚೆ ನಡೆಯುತ್ತದೆ. ಉರಿಲಿಂಗಪೆದ್ದಿ ತನ್ನ ವಚನಗಳಲ್ಲಿ ಪುರೋಹಿತಶಾಹಿಯ ಕೂೃರತನವನ್ನು ಹೇಳಿದರೆ, ಕಾಳವ್ವೆಯಂತಹ ಆಹಾರ ಪದ್ಧತಿಗೆ ಗೌರವಕೊಟ್ಟು ಮಾತನಾಡುತ್ತಾಳೆ. ಈ ಅಸ್ಪೃಶ್ಯ ದಂಪತಿಗಳಲ್ಲಿರುವ ಆಳವಾದ ಅನುಭವ ಮತ್ತು ಅಗಾಧವಾದ ತಿಳುವಳಿಕೆಯನ್ನು ಕಂಡು ಶರಣರೆಲ್ಲ ಆಶ್ಚರ್ಯವ್ಯಕ್ತಪಡಿಸುತ್ತಾರೆ. ಕಾಳವ್ವೆಯ ಪ್ರಶ್ನೆಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ.
ಹೀಗೆ ಹನ್ನೆರಡು ದೃಶ್ಯಗಳಲ್ಲಿ ಈ ನಾಟಕ ಬೆಳೆದು ನಿಂತಿದೆ. ದೃಶ್ಯದಿಂದ ದೃಶ್ಯಕ್ಕೆ ನಾಟಕ ಬೆಳೆಯುತ್ತಾ ಹೋಗುತ್ತದೆ. ಹನ್ನೊಂದನೇ ದೃಶ್ಯ ಅಗತ್ಯವಿಲ್ಲವೆನಿಸಿದರೂ, ಹತ್ತು ಮತ್ತು ಹನ್ನೆರಡು ಈ ಎರಡೂ ದೃಶ್ಯಗಳು ಅನುಭವ ಮಂಟಪದ ದೃಶ್ಯಗಳೇ ಆಗಿರುವುದರಿಂದ ನಡುವೆ ಈ ಸಣ್ಣ ದೃಶ್ಯ ಅನಿವಾರ್ಯವಾಗಿ ಕಾಣಿಸಿಕೊಂಡಿದೆ.
ಈ ನಾಟಕದಲ್ಲಿ ಮುಖ್ಯವಾಗಿ ಮೂರು ರೀತಿಯ ಸಂಘರ್ಷಗಳಿವೆ. ಪ್ರಾರಂಭದ ದೃಶ್ಯಗಳು ಚಾತುರ್ವಣ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಧ್ವನಿಯೆತ್ತುತ್ತವೆ. ಇದು ಈ ನಾಟಕದ ಪ್ರಮುಖ ಸಂಘರ್ಷವಾಗಿದೆ. ಇಂತಹ ಅಸಮಾನತೆಯ ವ್ಯವಸ್ಥೆಯಲ್ಲಿ ಪೆದ್ದಣ್ಣ-ಸಿದ್ಧಣ್ಣನಂತಹ ಅಸ್ಪೃಶ್ಯರು ಹೇಗೆ ಅನಿವಾರ್ಯವಾಗಿ ಕಳ್ಳತನದ ವೃತ್ತಿ ಮಾಡಬೇಕಾಗುತ್ತದೆಂಬುದನನು ವಿವರಿಸಲಾಗಿದೆ. ಶರಣರ ಪ್ರಭಾವಕ್ಕೋಳಗಾಗಿದ್ದ ಉರಿಲಿಂಗ ದೇವರು ಅಸ್ಪೃರ್ಶಯರಿಗೆ ಲಿಂಗದೀಕ್ಷೆ ನೀಡಿದಾಗ ಎರಡೂ ಕಡೆಯಿಂದ ವಿರೋಧವ್ಯಕ್ತವಾಗುತ್ತದೆ. ಮೂಢ ನಂಬಿಕೆಯ ಅಂತ್ಯಜರು ಇದನ್ನು ಕಂಡು ಅಸೂಯೆ ಪಟ್ಟರೆ, ಕುಲಜರು ಅಸಹ್ಯಪಡುತ್ತಾರೆ.
ನಂದರಾಜನ ಆಸ್ಥಾನದಲ್ಲಿ ನಡೆಯುವ ಚರ್ಚೆಯಲ್ಲಿ ಎರಡನೇ ಸಂಘರ್ಷವಿದೆ. ಅಸ್ಪೃಶ್ಯರಿಗೆ ಕೆರೆಯ ನೀರನ್ನ ತೆಗೆದುಕೊಳ್ಳುವ ಹಕ್ಕಿಲ್ಲವೆಂದು ವಾದಿಸುವ ರಾಜಪುರೋಹಿತನ ಜತೆಗೆ ಈ ಪ್ರಸಂಗದಲ್ಲಿ ಉರಿಲಿಂಗಪೆದ್ದಿ ಮುಖಾಮುಖಿಯಾಗಬೇಕಾಗುತ್ತದೆ. ನಂದರಾಜನಂಥಹ ಅರಸನು ಇಲ್ಲಿ ಪುರೋಹಿತಶಾಹಿಕಡೆಗಿರದೆ, ಶರಣರ ಸಮಾನತೆಯ ತತ್ವವನ್ನು ಒಪ್ಪಿಕೊಳ್ಳುತ್ತಾನೆ. ಹೀಗಾಗಿ ಇಲ್ಲಿ ರಾಜಪುರೋಹಿತ ನಿರ್ಲಕ್ಷ್ಯಕ್ಕೊಳಗಾಗುತ್ತಾನೆ. ಮೂರನೇ ಪ್ರಸಂಗವೆಂದರೆ ಉರಿಲಿಂದಪೆದ್ದಿ ಕಂದಾರಮಠದ ಉತ್ತರಾಧಿಕಾರಿಯಾಗುವ ಪಟ್ಟಾಭಿಷೇಕದ ಪ್ರಸಂಗವಾಗಿದೆ. ಇಲ್ಲಿ ಗೋವಿಂದ ಭಟ್ಟನು ಈ ಪಟ್ಟಾಭಿಷೇಕವನ್ನು ವಿರೋಧಿಸುತ್ತಾನೆ. ದಲಿತ ಕೇರಿಯ ಜನರೂ ಈ ಪಟ್ಟಾಭಿಷೇಕವನ್ನು ಒಪ್ಪಲಿಲ್ಲವೆಂದು ಸಿದ್ದಣ್ಣ ತಿಳಿಸುತ್ತಾನೆ. ಸಮಾಜದಲ್ಲಿ ಸಮಾನತೆ ತರಬೇಕೆಂದು ಶರಣರು ಕ್ರಾಂತಿಮಾಡಿದರೆ, ಒಂದುಕಡೆ ಪುರೋಹಿತಶಾಹಿ ಮನಸ್ಸುಗಳು ಇದನನು ವಿರೋಧಿಸಿದರೆ, ಮತ್ತೊಂದು ಕಡೆ ಮೌಢ್ಯತೆಯಿಂದ ಕೂಡಿರುವ ಕೆಲವು ಅಸ್ಪೃಶ್ಯರೇ ಇದನ್ನು ಒಪ್ಪುದಿಲ್ಲ. ಈ ಕ್ರಾಂತಿಯಿಂದ ಮುಂದೆ ತಮಗೆ ಎಂತಹ ಕೇಡು ಕಾದಿದಿಯೋ ಏನೋ ಎಂಬ ಭಯವರಲ್ಲಿದೆ. ಹೀಗಾಗಿ ಅವರಲ್ಲಿ ಕೆಲವರು ಇದನ್ನು ನಿರಾಕರಿಸುತ್ತಾರೆ.
ಈ ನಾಟಕವು ಕೇವಲ ಉರಿಲಿಂಗಪೆದ್ದಿಯ ಜೀವನ ಚರಿತ್ರೆಯನ್ನು ಮಾತ್ರ ಹೇಳುವುದಿಲ್ಲ. ಉರಿಲಿಂಗ ಪೆದ್ದಿಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಲೇ, ಶರಣರ ಕ್ರಾಂತಿಯ ಸಂದೇಶಗಳು ಅಂದಿನ ಪುರೋಹಿತಶಾಹಿಯೊಂದಿಗೆ ಹೇಗೆ ಮುಖಾಮುಖಿಯಾದುವೆಂಬುದನ್ನು ತಿಳಿಸುತ್ತದೆ. ಸಾಮಾನ್ಯವಾಗಿ ಅನೇಕ ನಾಟಕಗಳಲ್ಲಿ ಸ್ವಾಮೀಜಿ ಮತ್ತು ರಾಜ ವಿಲನ್ ಆಗಿರುತ್ತಾರೆ. ಆದರೆ ಈ ನಾಟಕದಲ್ಲಿ ಉರಿಲಿಂಗದೇವರು ಕಂದಾರಮಠದ ಪೀಠಾಧ್ಯಾಕ್ಷರಾಗಿದ್ದರೂ ಅಸ್ಪೃಶ್ಯರ ಪರವಾಗಿದ್ದಾರೆ, ಜನಪರವಾಗಿದ್ದಾರೆ. ಶರಣರ ವಚನಗಳನ್ನು ಓದಿಕೊಂಡವನಾಗಿದ್ದಾರೆ. ಇನ್ನು ನಂದರಾಜನೂ ಕೂಡ ಜನಪರವಿಚಾರವುಳ್ಳ ಅರಸನಾಗಿದ್ದಾನೆ. ಹೀಗಾಗಿ ಇಲ್ಲಿ ದೀಕ್ಷೆ ನೀಡುವ ಗುರು ಮತ್ತು ಆಳುವ ಅರಸ ಇಬ್ಬರೂ ಜನಪರ ವಿಚಾರಧಾರೆಯವರೇ ಆಗಿದ್ದಾರೆ. ಇಲ್ಲಿ ಖಳನಾಯಕರಾಗಿ ಕಾಣುವವರೆಂದರೆ, ರಾಜಪುರೋಹಿತ ಮತ್ತು ಗೋವಿಂದಭಟ್ಟ. ಇವರಿಬ್ಬರೂ ಪುರೋಹಿತಶಾಹಿಯ ಪ್ರತಿನಿಧಿಗಂತಿದ್ದಾರೆ. ಇವರಿಬ್ಬರಿಗೆ ಅಂತಹ ದೊಡ್ಡ ಅಧಿಕಾರವಿಲ್ಲ, ಆದರೂ ಅಧಿಕಾರಿಗಳನ್ನು, ಸ್ವಾಮೀಜಿಗಳನ್ನು, ರಾಜರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಾರೆ. ಇವರ ತಲೆಯಲ್ಲಿ ಚಾತುರ್ವರ್ಣ ವ್ಯವಸ್ಥೆಯ ಅಸಮಾನತೆ ತುಂಬಿಕೊಂಡಿದೆ. ಹೀಗಾಗಿ ಈ ನಾಟಕವು ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮಹತ್ವದ ಕೃತಿಯಾಗಿದೆ.
ಇಲ್ಲಿ ಕಾಣುವ ಮತ್ತೊಂದು ಸಮಸ್ಯೆಯೆಂದರೆ ಅಸ್ಪೃಶ್ಯರು, ಕೆಳವರ್ಗದವರಿಗೆ ಶರಣರ ವಿಚಾರಗಳು ಒಪ್ಪಿಗೆಯಾದರೂ ಅವರು ವ್ಯವಸ್ಥೆಯನ್ನು ವಿರೋಧಿಸಲು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಬದುಕಿನ ಭಯಕಾಡುತ್ತಿದೆ, ಹೀಗಾಗಿ ಅವರು ಅಸಹಾಯಕರಾಗಿದ್ದಾರೆ. ಇಂತವರ ಸಲುವಾಗಿಯೇ ಶರಣರ ಕ್ರಾಂತಿ ನಡೆದರೂ ಅವರೆಲ್ಲರೂ ಈ ಶರಣ ಸಿದ್ಧಾಂತ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ವಿಷಯ ಪಿ.ಲಂಕೇಶ ‘ಸಂಕ್ರಾಂತಿ’ ನಾಟಕದಲ್ಲಿಯೂ ವ್ಯಕ್ತವಾಗಿದೆ. ಪೆದ್ದಣ್ಣನೊಂದಿಗೆ ಲಿಂಗದೀಕ್ಷೆ ಪಡೆಯಲು ಸಿದ್ಧನಾಗಿದ್ದ ಸಿದ್ದಣ್ಣನು, ನಂತರ ಲಿಂಗದೀಕ್ಷೆ ಪಡೆಯಲು ನಿರಾಕರಿಸುತ್ತಾನೆ. ಅದಕ್ಕೆ ಮುಖ್ಯ ಕಾರಣವೆಂದರೆ ಲಿಂಗದೀಕ್ಷೆ ಪಡೆದರೆ ಪೂಜೆ ಮಾಡಬೇಕಾಗುತ್ತದೆ, ಸ್ನಾನ-ಪೂಜೆ ಮಾಡಲು ಅವರಲ್ಲಿ ಸಮಯವಿಲ್ಲ, ಮಾಂಸಾಹಾರ ಬಿಡಲು ಆಗುವುದಿಲ್ಲ. ಇಂತಹ ಕಾರಣಗಳಿಂದ ಅನೇಕ ಅಸ್ಪೃಶ್ಯರು, ದುಡಿವ ಜನ ಶರಣರ ಕ್ರಾಂತಿಯಿಂದ ದೂರವೇ ಉಳಿದರು. ಈ ಸಂಗತಿಯನ್ನು ತಿಳಿದ ಬಸವಣ್ಣನವರು ‘ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲ್ಲಿ ಸುರೆಯಗಡಿಗೆ, ಕೊರಳಲ್ಲಿ ದೇವರಿರಲಿ ಅವರ ಲಿಂಗವೆಂಬ, ಸಂಗನೆಂಬೆ... (ಪ-720)’ ಎಂದು ಹೇಳಿದರು. ಸುರೆ-ಮಾಂಸ ಸೇವನೆ ಶರಣರಾಗಲು ಅಡ್ಡಿಯಾಗಲಾರವೆಂಬುದನ್ನು ಸ್ಪಷ್ಟಪಡಿಸಿದರು. ಆದರೆ ಈ ಸಂಗತಿ ಅನೇಕ ಅಸ್ಪೃಶ್ಯರಿಗೆ-ದುಡಿಯವರ್ಗದವರಿಗೆ ಗೊತ್ತಾಗದೇ ಹೋದುದರಿಂದ ಅವರು ಚಳವಳಿಯಿಂದ ದೂರವೇ ಉಳಿದರು. ಇಂತಹ ಸೂಕ್ಷ್ಮ ವಿಷಯಗಳನ್ನೆತ್ತಿಕೊಂಡು ಈ ನಾಟಕ ಚರ್ಚಿಸುತ್ತದೆ.
ಹನ್ನೆರಡನೇ ಶತಮಾನದ ಶರಣರು ಮಠ ವ್ಯವಸ್ಥೆಯನ್ನು ವಿರೋಧಿಸಿದರು. ಪರಮಾತ್ಮನ ಬದಲು-ಆತ್ಮ, ದಾನದ ಬದಲು ದಾಸೋಹವನ್ನು ತಂದಂತೆ ಮಠದ ಬದಲು-ಮಹಾಮನೆಯ ಪರಿಕಲ್ಪನೆಯನ್ನು ಶರಣರು ಹುಟ್ಟು ಹಾಕಿದರು. ಹೀಗಿರುವಾಗ ಉರಿಲಿಂಗದೇವರು ಕಂದಾರಮಠದ ಪೀಠಾಧ್ಯಕ್ಷರಾಗಿದ್ದರು, ನಂತರದಲ್ಲಿ ಉರಿಲಿಂಗ ಪೆದ್ದಿಗೆ ಪಟ್ಟಾಭಿಷೇಕ ಮಾಡಿಸುವುದು ಇವೆಲ್ಲ ಕ್ರಿಯೆಗಳು ಶರಣರ ಸಿದ್ಧಾಂತಕ್ಕೆ ವಿರೋಧವಾದವು ಗಳಾಗಿವೆ. ಶೂನ್ಯಸಂಪಾದನೆಗಳಲ್ಲಿ ಮತ್ತು ಇತರ ಕೃತಿಗಳಲ್ಲಿ ಉರಿಲಿಂಗಪೆದ್ದಿ-ಕಾಳವ್ವೆ ದಂಪತಿಗಳು ಭಾಗವಹಿಸಿದ್ದರೆಂಬುದನ್ನು ನಂಬಿ ಹತ್ತು ಹನೆರಡನೇ ದೃಶ್ಯಗಳನ್ನು ಸೃಷ್ಟಿಸಿದ್ದಾರೆ. ಈ ದೃಶ್ಯಗಳಲ್ಲಿ ಅಸ್ಪೃಶ್ಯ ದಂಪತಿಗಳಾದ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಅವರು ವಚನಗಳನ್ನು ರಚಿಸಿದ್ದು, ಆ ವಚನಗಳನ್ನು ಕುರಿತು ಶರಣರೆಲ್ಲ ಚರ್ಚಿಸಿದ್ದು ಕಂಡುಬರುತ್ತದೆ. ಇಂತಹ ವಿಷಯಗಳ ಬೆಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ.
ಈ ನಾಟಕದಲ್ಲಿ ಉರಿಲಿಂಗಪೆದ್ದಿ ಮತ್ತು ಕಾಳವ್ವೆಯವರ ಕೆಲವು ವಚನಗಳನ್ನು ನೇರವಾಗಿ ಬಳಸಲಾಗಿದೆ. ಅವುಗಳಲ್ಲಿ “ಕೃತಯುಗದಲ್ಲಿ ಕುಂಜರನೆಂಬ ಆನೆಯ ಕೊಂದು ಹೋಮವನಿಕ್ಕಿದರು...” ಮತ್ತು “ಕುರಿಕೋಳಿ ಕಿರುವೀನು ತಿಂಬುವರಿಗೆಲ್ಲ ಕುಲಜ ಕುಲಜರೆಂಬರು...” ಈ ಎರಡೂ ವಚನಗಳು ವಚನ ಚಳವಳಿಗೆ ಹೊಸ ಆಯಾಮ ನೀಡಿವೆ. “ಹೊಲಸುತಿಂಬುವವನೇ ಹೊಲೆಯ, ಕೊಲ್ಲುವವನೇ ಮಾದಿಗ” ಎಂಬ ಬಸವಣ್ಣನವರ ವಚನಕ್ಕೆ ಇಲ್ಲಿ ಸ್ಪಷ್ಟ ಅರ್ಥವಿದೆ. ಕೃತಯುಗದಲ್ಲಿ ಆನೆಯನ್ನು ಕೊಂದು, ತ್ರೈತಾಯುಗದಲ್ಲಿ ಕರಿಎಮ್ಮೆಯ ಕೊಂದು, ದ್ವಾಪರಯುಗದಲ್ಲಿ ಕುದುರೆಯ ಕೊಂದು, ಕಲಿಯುಗದಲ್ಲಿ ಹೋತನನ್ನು ಕೊಂದು ಹೋಮವನಿಕ್ಕಿ ಅದರ ಮಾಂಸವನ್ನು ಈ ಬ್ರಾಹ್ಮಣರು ತಿನ್ನುತಿದ್ದರೆಂಬ ವಿಚಾರ ಉರಿಲಿಂಗಪೆದ್ದಿಯ ವಚನದಲ್ಲಿ ಬರುತ್ತದೆ. ಅದನ್ನೇ ಕಾಳವ್ವೆ ತನ್ನ ವಚನದಲ್ಲಿ ಪ್ರಸ್ತಾಪಿಸಿದ್ದಾಳೆ. ಅಂದರೆ ಹೊಸಲು ತಿನ್ನುವವರು ಕೊಲ್ಲುವವರು ಬ್ರಾಹ್ಮಣರೇ ಆಗಿದ್ದರು. ಅಂತಹ ಬ್ರಾಹ್ಮಣರನ್ನು ಕುರಿತೇ ಬಸವಣ್ಣನವರು ಹೊಲೆಯ, ಮಾದಿಗರೆಂದು ಕರೆದರೇ ಹೊರತು, ಊರ ಹೊರಗಿನ ಹೊಲೆ-ಮಾದಿಗರನ್ನು ಕುರಿತು ಅಲ್ಲವೆಂಬ ಸತ್ಯ ಇವರ ವಚನಗಳಿಂದ ಸ್ಪಷ್ಟವಾಗುತ್ತದೆ. ಕಾಳವ್ವೆಯ ಇನ್ನೊಂದು ವಚನದಲ್ಲಿ ಕುರಿ-ಕೋಳಿ-ಮೀನು ಇಂತಹ ಪ್ರಾಣಿಗಳನ್ನು ಕುಲಜರೆಂದು ಕರೆಯಿಸಿ ಕೊಳ್ಳುವ ಬ್ರಾಹಮ್ಣರೇ ತಿನ್ನುತಿದ್ದರೆಂದು ಹೇಳಿದ್ದಾಳೆ. ಪೂಜೆಗೆ ಯೋಗ್ಯವಲ್ಲದ ಕುರಿ-ಕೋಳಿ-ಕಿರುಮೀನುಗಳನ್ನು ಕೊಂದು ಹಿಂಸೆಮಾಡಿ ಬ್ರಾಹ್ಮಣರು ಅವುಗಳ ಮಾಂಸ ಸೇವಿಸುತ್ತಾರೆ, ಆದರೆ ನಾವು ಹೊಲೆ ಮಾದಿಗರು ಪೂಜೆಗೆ ಯೋಗ್ಯವಾದ ಮತ್ತು ಶಿವನಿಗೆ ಪಂಚಾಮೃತ ಕೊಡುವ ಆಕಳು ಸತ್ತಾಗ ಅಂಹಿಸೆಯಿಂದ ಅದರ ಮಾಂಸವನ್ನು ಸೇವಿಸುತ್ತೇವೆ. ವಸ್ತುಸ್ಥಿತಿ ಹೀಗಿದ್ದಾಗ ಇಲ್ಲಿ ಯಾರು ಕುಲಜರು? ಯಾರು ಹೊಲೆಮಾದಿಗರು? ಹೇಳಿರೋ ಎಂದು ಕೇಳುವ ಕಾಳವ್ವೆಯ ಪ್ರಶ್ನೆ ತುಂಬ ಮಹತ್ವದ್ದಾಗಿದೆ. ಹಿಂಸೆ ಮಾಡುವವ ಕುಲಜನಾಗುತ್ತಾನೆ. ಸತ್ತುದನ್ನು ತಿನ್ನುವವ ಹೊಲೆಮಾದಿಗನಾಗುತ್ತಾನೆ. ಇದು ಯಾವ ನ್ಯಾಯ?ವೆಂದು ಕೇಳಿರುವ ಕಾಳವ್ವೆಯ ಪ್ರಶ್ನೆಗೆ, ಶರಣರೆಲ್ಲರೂ ಇದೇ ಪ್ರಶ್ನೆಯನ್ನು ಪ್ರೇಕ್ಷಕರೆದುರು ಕೇಳುತ್ತ, ಪ್ರಶ್ನಾರ್ಥಕ ಮುಖಭಾವ ಪ್ರಕಟಿಸುವುದು, ಕಾಳವ್ವೆ ಸ್ವತಃ ಒಂದು ಪ್ರಶ್ನೆಯಾಕಾರದಲ್ಲಿ ನಿಂತಿರುವ ದೃಶ್ಯದೊಂದಿಗೆ ನಾಟಕ ಮುಕ್ತಾಯ ವಾಗುವುದು, ತೀವ್ರ ಪರಿಣಾಮವನ್ನುಂಟುಮಾಡುತ್ತದೆ.
ಈ ನಾಟಕದಲ್ಲಿ ನಾಟಕಕಾರರು ಅನೇಕ ಕಡೆ ಮೌಲಿಕ ನುಡಿಗಳನ್ನು ಪಾತ್ರಗಳ ಮೂಲಕ ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಸಾಲುಗಳಲ್ಲಿ ಉದಾಹರಿಸಬಹುದಾಗಿದೆ.
1. ನೋಡುಮಗಳೇ, ಅಂತರಂಗದಲ್ಲಿ ಆವರಿಸಿ ಬಹಿರಂಗದಲ್ಲಿ ತೋರುವ ಪರಂಜ್ಯೋತಿಗೆ ಮೇಲು-ಕೀಳೇಂಬ ಭೇದಗಳಿಲ್ಲ (ಪು-10)
2. ಜ್ಯೋತಿ ಮುಟ್ಟಿ ಜ್ಯೋತಿ-ಬೆಳಗಿದಂತೆ ಎಲ್ಲರೂ ಇಲ್ಲಿ ಬೆಳಕಾಗಬೇಕು (ಪು-11)
3. ಗೋವಧೆಯ ಮಾಡಿ ಗೋದಾನವ ಮಾಡಿದಡೆ, ಕೊಂದ ಕೊಲೆಗೂ ಮಾಡಿದ ದಾನಕ್ಕೂ ಸರಿಯೇ? (ಪು-21)
4. ಕ್ರಿಯೆಯೇ ಕರ್ಮ, ದಯೆಯೇ ಧರ್ಮ (ಪು-31)
5. ಮುತ್ತು ಪೋಣಿಸಿ ಮುಗಲಾಗ ಬಿಟ್ಟೆ, ಏನ್ಮಾಡ್ಲಿ? (ಪು-14)
6. ಆ, ಸ್ವಾಮೇರ ಮಾತಂದ್ರ ಜೇಣು ಸುರಿದಾಂಗ (ಪು-15)
7. ಅಂತರಂಗ ಗೆದ್ದಾವ ಅನುಭಾವಿ, ಅದನ್ನ ಗೆಲ್ಲದಾವ ಕೇವಲ ಅನುಭವಿ (ಪು-20)
8. ಊರಿಗೆ ನೀರುಣಿಸಿದ ಪುಣ್ಯ ನಿನ್ನದಾಗುತ್ತದೆ. (ಪು-43)
9. ಎಣ್ಣೆ ತೀರಿದ ಮೇಲೆ ದೀಪ ಹೇಗೆ ನಿಲ್ಲುತ್ತದೆ ತಮ್ಮಾ (ಪು-43)
10. ಸೂರ್ಯನಿಲ್ಲದೆ ಹಗಲುಂಟೆ? ದೀಪವಿಲ್ಲದೆ ಬೆಳಕುಂಟೆ (ಪು-58)
ಇಂತಹ ಅನೇಕ ಮಹತ್ವದ ನುಡಿಗಳನ್ನು ನಾಟಕಕಾರರು ಬಳಸಿದ್ದಾರೆ. ಶರಣರ ವಚನಗಳಲ್ಲಿರುವ ಅನೇಕ ಮುತ್ತುಗಳೂ ಈ ನಾಟಕದಲ್ಲಿವೆ. ಇವೆಲ್ಲಾ ಸೇರಿಕೊಂಡು ನಾಟಕದಲ್ಲಿ ಹೊಸ ಬೆಳಕು ಮೂಡಿವೆ. ಈ ನಾಟಕದಲ್ಲಿ ಬಳಕೆಯಾಗಿರುವ ದಾಗೆ ಮಾತುಗಳು ತುಂಬಾ ಪರಿಣಾಮಕಾರಿಯಾಗಿವೆ. ಗ್ರಾಮೀಣ ಬದುಕಿನಿಂದ ಬಂದಿರುವ ಲೇಖಕರು ಗಾದೆಮಾತು-ಪಡೆನುಡಿಗಳನ್ನು ಸಹಜವೆಂಭಂತೆ ಬಳಸುತ್ತಾರೆ. ಇಲ್ಲಿಯೂ ಕೂಡ ಅಂತಹ ಗಾದೆಗಳನ್ನು ಕಾಣಬಹುದಾಗಿದೆ.
1.ಹಿಂದಲ್ದ ತಗದು ಹಿತ್ತಲದಾಗ ಅತ್ತರಂಗ (ಪು-5)
2.ಕುರಿಕೇಳಿ ಮಸಾಲಿ ಅರಿತಾರೇನು? (ಪು-7)
3.ಕಲತ ಬುದ್ದೀನಾ ಕಲ್ಲು ಹಾಕಿದರೂ ಬಿಡಾಂಗಿಲ್ಲ (ಪು-14)
4.ನೆರೆಮನಿ ತಿಮ್ಮ ಸಾಯ್ಲಿ ಅಂದ್ರ ತನ್ನ ಮನ್ಯಾಗ ತಮ್ಮ ಸತ್ತಿದ್ನಂತ (ಪು-19)
5.ಬಚ್ಚಲು ನೀರು ತಿಳಿಯಾದ್ರೇನು? ಪೂಜೆಗೆ ಬರತಾದೇನು? (ಪು-31)
6.ಯೋಗಿ ಪಡದದ್ದು ಯೋಗಿಗೆ, ಭೋಗಿ ಪಡದದ್ದು, ಭೋಗಿಗೆ (ಪು-31)
7.ಹೊಟ್ಟಿಗೆ ಹಿಟ್ಟಿಲ್ಲದಾ, ಜುಟ್ಟಿಗೆ ಮಲ್ಲಿಗೆ ಹೂ ಕೇಳಿದ್ರಂತ (ಪು-40)
8.ಸುಖದ ಜೀವಕ್ಕ ಮುಳ್ಳು (ಪು-40)
ಇಂತಹ ಅನೇಕ ಗಾದೆ ಮಾತುಗಳ ಸಂಭಾಷಣೆಗಳಲ್ಲಿ ಕೂಡಿಕೊಂಡು ತೀವ್ರ ಪರಿಣಾಮವನ್ನುಂಟು ಮಾಡುತ್ತವೆ ಈ ನಾಟಕದ ಭಾಷೆ ತುಂಬ ಸರಳವಾಗಿದ್ದು, ಗ್ರಾಮೀಣ ಸೊಗಡಿನಿಂದ ಕೂಡಿಕೊಂಡಿದೆ. ಗಾದೆ, ಪಡೆನುಡಿ, ಮೌಲಿಕ ಮಾತುಗಳು ಪ್ರೇಕ್ಷಕರನ್ನು ವಿಚಾರಮಾಡತೊಡಗಿಸುತ್ತದೆ.
ಚಾತುವರ್ಣ ವ್ಯವಸ್ಥೆ ಬೇರೆ ಬೇರೆ ರೂಪಗಳಲ್ಲಿ ಇಂದಿಗೂ ಆಚರಣೆಯಲ್ಲಿದೆ. ಅಸ್ಪೃಶ್ಯರು ಇಂದು ಬೇರೆ ರೀತಿಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಜಾಗತೀಕರಣದ ಈ ಸಂದರ್ಭದಲ್ಲಿ ಮನುಷ್ಯ ಒಂದು ಸರಕಾಗಿದ್ದಾನೆ. ಸಂಪತ್ತನ್ನು ಅತಿಯಾಗಿ ಸಂಗ್ರಹಿಸುವ ಪ್ರವೃತ್ತಿ ಅನೇಕರಲ್ಲಿ ಬೆಳೆದಿದೆ. ಇಂತಹ ಸಂದರ್ಭದಲ್ಲಿ ಶರಣರನ್ನು ಕುರಿತಾದ ನಾಟಕಗಳು ಹೊಸ ಭರವಸೆಯನ್ನು ಹುಟ್ಟಿಸುತ್ತವೆ. ಈ ನಿಟ್ಟಿನಲ್ಲಿ ಚಿಂತಿಸಿದಾಗ ‘ಉರಿಲಿಂಗ’ ಮಹತ್ವದ ನಾಟಕವಾಗಿ ಕಾಣಿಸುತ್ತದೆ.
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220
ಈ ಅಂಕಣದ ಹಿಂದಿನ ಬರಹಗಳು:
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.