Date: 25-08-2023
Location: ಬೆಂಗಳೂರು
“ಕನ್ನಡದಲ್ಲಿ ಸಾಮಾನ್ಯವಾದ ವಾಕ್ಯ ರಚನಾ ಕ್ರಮ ಕರ‍್ತ್ರು-ಕರ‍್ಮ-ಕ್ರಿಯೆ ಆಗಿದೆ. ಕರ‍್ತ್ರುವಿನ ಲಿಂಗ ಮತ್ತು ವಚನಗಳನ್ನು ಕ್ರಿಯಾಪದ ಕರ‍್ತ್ರುವಿನ ಲಿಂಗ ಮತ್ತು ವಚನಪ್ರತ್ಯಯಗಳನ್ನು ಪಡೆದುಕೊಳ್ಳುವುದರ ಮೂಲಕ ಅಬಿವ್ಯಕ್ತಿಸುತ್ತದೆ. ಕನ್ನಡದಲ್ಲಿ ಸಾಮಾನ್ಯವಾಗಿ ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳು ಇವೆ,” ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು' ಅಂಕಣದಲ್ಲಿ ‘ವಾಕ್ಯಪ್ರಕಾರಗಳು' ವಿಚಾರದ ಕುರಿತು ಬರೆದಿದ್ದಾರೆ.
ವಾಕ್ಯದ ರಚನೆಯನ್ನು ಆದರಿಸಿ ವಾಕ್ಯಗಳನ್ನು ಸಾಮಾನ್ಯವಾಗಿ ಸರಳ, ಸಂಯುಕ್ತ ಮತ್ತು ಸಂಕೀರ‍್ಣ ವಾಕ್ಯಗಳು ಎಂದು ಮೂರು ಬಗೆಯಾಗಿ ಗುಂಪಿಸುವುದು ಸಾಮಾನ್ಯ. ಇಲ್ಲಿ ಈ ವಿವಿದ ಬಗೆಯ ವಾಕ್ಯಗಳನ್ನು ಪರಿಚಯಿಸಿಕೊಳ್ಳಬಹುದು.
ವಾಕ್ಯದಲ್ಲಿ ಬಳಕೆಯಾಗಿರುವ ಗಟಕಗಳು, ಅವುಗಳ ಸ್ವರೂಪ, ವಾಕ್ಯದ ರಚನೆ, ವಾಕ್ಯದೊಳಗೆ ಇರುವ ಕ್ರಿಯಾಪದಗಳ ಸಂಕೆ, ಒಳವಾಕ್ಯಗಳು ಈ ಮೊದಲಾದವುಗಳನ್ನು ಆದರಿಸಿ ವಾಕ್ಯವನ್ನು ಮುಕ್ಯವಾಗಿ ಸರಳ, ಸಂಯುಕ್ತ ಮತ್ತು ಸಂಕೀರ‍್ಣ ಎಂದು ಮೂರು ಬಗೆಯಾಗಿ ಗುಂಪಿಸಲಾಗುತ್ತದೆ. ಪಾರಂಪರಿಕ ವ್ಯಾಕರಣಗಳಲ್ಲಿಯೂ ಇದೆ ಬಗೆಯ ಗುಂಪಿಕೆ ಇದ್ದಿತು. ಆದುನಿಕ ಬಾಶಾವಿಗ್ನಾನದಲ್ಲಿಯೂ ಈ ಗುಂಪಿಕೆ ಪ್ರಚಲಿತದಲ್ಲಿದೆ.
ಸರಳ ವಾಕ್ಯ: ಒಂದು ಮಾಡುಗ, ಒಂದು ಕ್ರಿಯೆ ಇಲ್ಲವೆ ಒಂದು ಕ್ರಿಯಾಪದ ಇವುಗಳನ್ನು ಹೊಂದಿರುವಂತದ್ದು ಸರಳ ವಾಕ್ಯ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ,
ಉದಾ.: ಆಕೆ ಓಡಿದಳು
ಹೂ ಅರಳಿತು
ಈ ಸರಳವಾಕ್ಯದಲ್ಲಿ ಒಂದು ಆಗುಗ ಕೂಡ ಇರಬಹುದು.
ಉದಾ.: ಆಕೆ ಮನೆಗೆ ಹೋದಳು
ಅವರು ಹಣ್ಣು ತಿಂದರು
ಕನ್ನಡದಲ್ಲಿ ಸಾಮಾನ್ಯವಾದ ವಾಕ್ಯ ರಚನಾ ಕ್ರಮ ಕರ‍್ತ್ರು-ಕರ‍್ಮ-ಕ್ರಿಯೆ ಆಗಿದೆ. ಕರ‍್ತ್ರುವಿನ ಲಿಂಗ ಮತ್ತು ವಚನಗಳನ್ನು ಕ್ರಿಯಾಪದ ಕರ‍್ತ್ರುವಿನ ಲಿಂಗ ಮತ್ತು ವಚನಪ್ರತ್ಯಯಗಳನ್ನು ಪಡೆದುಕೊಳ್ಳುವುದರ ಮೂಲಕ ಅಬಿವ್ಯಕ್ತಿಸುತ್ತದೆ. ಕನ್ನಡದಲ್ಲಿ ಸಾಮಾನ್ಯವಾಗಿ ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳು ಇವೆ. ಏಕವಚನದಲ್ಲಿ ಮೂರು ಲಿಂಗಗಳು; ಮಾನವ ಸ್ತ್ರೀಲಿಂಗ, ಮಾನವ ಪುಲ್ಲಿಂಗ ಮತ್ತು ನಪುಂಸಕ ಲಿಂಗ. ಅದರಂತೆ ಬಹುವಚನದಲ್ಲಿ ಎರಡು ಲಿಂಗಗಳು; ಮಾನವ ಮತ್ತು ಮಾನವವಲ್ಲದ. ಹೀಗೆ ಕ್ರಿಯಾಪದ ಕರ‍್ತ್ರುವಿನ ಲಿಂಗ-ವಚನಗಳನ್ನು ಅಬಿವ್ಯಕ್ತಿಸುವುದರಿಂದಾಗಿ ಕರ‍್ತ್ರುವನ್ನು ತೆಗೆದು ಅರ‍್ತಪೂರ‍್ಣ ವಾಕ್ಯವನ್ನು ಮಾಡುವುದು ಕನ್ನಡದಲ್ಲಿ ಸಾದ್ಯ.
ಉದಾ.: ಮನೆಗೆ ಹೋದಳು
ಹಣ್ಣು ತಿಂದಳು
ಮೇಲಿನ ವಾಕ್ಯದಲ್ಲಿ ಕರ‍್ತ್ರುವನ್ನು ತೆಗೆಯಲಾಗಿದೆ. ಆದರೆ ಮನೆಗೆ ಹೋದದ್ದು ಸ್ತ್ರೀಲಿಂಗ - ಏಕವಚನ ಎಂಬುದು ಸ್ಪಶ್ಟವಾಗಿ ತಿಳಿಯುತ್ತಿದೆ. ಇದಕ್ಕೆ ಕ್ರಿಯಾಪದ ಕರ‍್ತ್ರುವಿನ ಲಿಂಗ ಮತ್ತು ವಚನ ಪ್ರತ್ಯಯಗಳನ್ನು ತೆಗೆದುಕೊಳ್ಳುವುದು ಕಾರಣವಾಗಿದೆ.
ಸಂಯುಕ್ತ ವಾಕ್ಯ: ಸಂಯುಕ್ತ ವಾಕ್ಯದಲ್ಲಿ ಒಂದು ಪ್ರದಾನವಾಕ್ಯ ಇರುತ್ತದೆ. ಪ್ರದಾನವಾಕ್ಯಕ್ಕೆ ಅಂಟಿಕೊಂಡು ಇನ್ನೊಂದು ಒಳವಾಕ್ಯ ಬರುತ್ತದೆ. ಕನ್ನಡದಾಗ ಸಾಮಾನ್ಯವಾಗಿ ಪ್ರದಾನವಾಕ್ಯ ವಾಕ್ಯದ ಬಲಗಡೆ ಬರುತ್ತದೆ. ಅದರ ಎಡಕ್ಕೆ ಒಳವಾಕ್ಯ ಬರುತ್ತದೆ. ಪ್ರದಾನವಾಕ್ಯ ಕರ‍್ತ್ರು ಮತ್ತು ಕ್ರಿಯೆಯನ್ನು ಹೊಂದಿರುತ್ತದೆ. ಕರ‍್ತ್ರುವಿನ ಲಿಂಗ ಮತ್ತು ವಚನಗಳನ್ನು ಪ್ರದಾನವಾಕ್ಯದ ಕ್ರಿಯಾಪದ ಪಡೆದುಕೊಳ್ಳುತ್ತದೆ. ಸಂಯುಕ್ತ ವಾಕ್ಯ ಎರಡು ಕ್ರಿಯೆಗಳನ್ನು ಹೊಂದಿರುತ್ತದೆ, ಎರಡು ಕ್ರಿಯೆಗಳು ಪರಸ್ಪರ ಸೇರಿಕೊಂಡಿರುತ್ತವೆ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.
ಉದಾ.: ಆಕೆ ಊಟ ಮಾಡಿ ಹೋದಳು
ಆತ ಬಂದು ಕೆಲಸ ಮಾಡಿದ
ಮೇಲಿನ ವಾಕ್ಯ ಆಕೆ ಊಟ ಮಾಡಿ ಹೋದಳು ಎಂಬುದರಲ್ಲಿ ಇರುವ ಎರಡು ಕ್ರಿಯೆಗಳು ಸ್ವತಂತ್ರವಾದವು ಮತ್ತು ಅವು ಬೇರೆ ಬೇರೆ ವಾಕ್ಯಗಳು ಎಂಬುದನ್ನು ಈ ಕೆಳಗಿನಂತೆ ವಾಕ್ಯವನ್ನು ಬಿಡಿಸಿದಾಗ ತಿಳಿಯುತ್ತದೆ.
ಉದಾ.: ಆಕೆ ಹೋದಳು
ಆಕೆ ಊಟ ಮಾಡಿದಳು
ಈ ಎರಡೂ ವಾಕ್ಯಗಳಲ್ಲಿ ಒಂದು ಸಾಮಾನ್ಯ ಕರ‍್ತ್ರು ಇದೆ. ಎರಡನೆಯ ವಾಕ್ಯದ ಕರ‍್ತ್ರುವನ್ನು ತೆಗೆದು ಮೊದಲ ವಾಕ್ಯದೊಳಗೆ ಸೇರಿಸಿದೆ. ಮೊದಲ ವಾಕ್ಯದಲ್ಲಿ ಕ್ರಿಯಾಪದದ ಮೇಲೆ ಅಂಟಿಕೊಂಡಿರುವ ಕರ‍್ತ್ರುವಿನ ಲಿಂಗ-ವಚನಗಳನ್ನು ಸೂಚಿಸುವ ಪ್ರತ್ಯಯಗಳನ್ನು ತೆಗೆದು ಕ್ರಿಯಾನ್ಯೂನ ಪ್ರತ್ಯಯವನ್ನು ಸೇರಿಸುವುದರ ಮೂಲಕ ಎರಡನೆಯ ವಾಕ್ಯವನ್ನು ಅದರ ಜೊತೆಗೆ ಸೇರಿಸಿದೆ. ಹೀಗೆ ಎರಡು ವಾಕ್ಯಗಳು ಪರಸ್ಪರ ಸೇರಿಕೊಂಡು ಒಂದು ಸಂಯುಕ್ತ ವಾಕ್ಯವನ್ನು ಸಾದಿಸಿದೆ.
ಸಂಯುಕ್ತ ವಾಕ್ಯದ ಕ್ರಿಯೆ ಮತ್ತು ಅವೆರಡರ ನಡುವಿನ ಸಂಬಂದಗಳ ಕುರಿತು ಕೆಲವು ಅಂಶಗಳನ್ನು ಇಲ್ಲಿ ಗಮನಿಸಬಹುದು. ಸಂಯುಕ್ತ ವಾಕ್ಯದಲ್ಲಿ ಕಂಡುಬರುವ ಎರಡು ಕ್ರಿಯೆಗಳು ಒಂದರ ನಂತರ ಇನ್ನೊಂದು ನಡೆಯಬಹುದು ಇಲ್ಲವೆ ಎರಡೂ ಒಟ್ಟಿಗೆ ಕೂಡ ನಡೆಯಬಹುದು. ಸಾಮಾನ್ಯವಾಗಿ ಒಳವಾಕ್ಯದ ಕ್ರಿಯೆ ನಡೆದ ಬಳಿಕ ಪ್ರದಾನವಾಕ್ಯದ ಕ್ರಿಯೆ ನಡೆಯುತ್ತದೆ.
ಉದಾ.: ಮಳೆ ಬಂದು ನೆಲ ಕೆಸರಾಯಿತು
ಅವನು ಹೂ ಮಾರಿ ಮನೆಗೆ ಹೋದ
ಇಲ್ಲಿರುವ ಮೊದಲ ವಾಕ್ಯವನ್ನು ಚರ‍್ಚೆಗೆ ತೆಗೆದುಕೊಳ್ಳುವುದಾದರೆ ಇದರಲ್ಲಿ ಮಳೆ ಬರುವ ಕೆಲಸ ಮೊದಲು ನಡೆಯುತ್ತದೆ ನಂತರ ನೆಲ ಕೆಸರಾಗುವ ಕೆಲಸ ನಡೆಯುತ್ತದೆ. ಪ್ರದಾನ ವಾಕ್ಯದ ಕೆಲಸ ನಂತರ ನಡೆಯುತ್ತದೆ.
ಕಳೆದ ಕಾಲ ಮತ್ತು ಬರುವ ಕಾಲದಲ್ಲಿ ಹೀಗೆ ಸೇರುವ ನ್ಯೂನ ರೂಪ ಒಂದೆ ಆಗಿರುತ್ತದೆ.
ಉದಾ.
ಕಳೆದಕಾಲ ಮಳೆ ಬಂದು ನೆಲ ಕೆಸರಾಯಿತು
ಬರುವಕಾಲ ಮಳೆ ಬಂದು ನೆಲ ಕೆಸರಾಗುವುದು
ಈ ಮೇಲಿನ ಎರಡು ವಾಕ್ಯಗಳು ಒಂದು ಕಳೆದ ಕಾಲದಲ್ಲಿಯೂ ಇನ್ನೊಂದು ಬರುವ ಕಾಲದಲ್ಲಿಯೂ ಇವೆ. ಮೊದಲನೆಯದರಲ್ಲಿ ಮಳೆ ಬರುವ ಮತ್ತು ನೆಲ ಕೆಸರಾಗುವ ಎರಡೂ ಕೆಲಸಗಳು ಮಾತನಾಡುವ ಸಮಯಕ್ಕಿಂತ ಮೊದಲು ಆಗಿವೆ. ಎರಡನೆಯದರಲ್ಲಿ ಮಳೆ ಬರುವ ಮತ್ತು ನೆಲ ಕೆಸರಾಗುವ ಎರಡೂ ಕೆಲಸಗಳು ಮಾತನಾಡುವ ಸಮಯಕ್ಕೆ ಇನ್ನೂ ನಡೆದಿಲ್ಲ ಮತ್ತು ಆನಂತರ ನಡೆಯುತ್ತವೆ. ಆದರೆ ಎರಡೂ ಸಂದರ‍್ಬಗಳಲ್ಲಿ ನ್ಯೂನ ರೂಪ ಬದಲಾಗಿಲ್ಲ.
ಸಂಯುಕ್ತ ವಾಕ್ಯಗಳಲ್ಲಿ ಎರಡೂ ಕೆಲಸಗಳು ಒಟ್ಟಿಗೆ ನಡೆಯುವುದನ್ನು ಹೇಳಲೂ ಸಾದ್ಯ.
ಉದಾ. ಅವನು ಬರುತ್ತಾ ಕುಣಿದಾಡಿದ
ಈ ವಾಕ್ಯದಲ್ಲಿ ಅವನು ಬರುವ ಮತ್ತು ಅವನು ಕುಣಿದಾಡುವ ಎರಡು ಕೆಲಸಗಳು ಇವೆ ಮತ್ತು ಈ ಎರಡೂ ಕೆಲಸಗಳು ಒಂದೆ ಸಮಯದಲ್ಲಿ ನಡೆಯುತ್ತಿವೆ. ಇರುವ ಕಾಲದಲ್ಲಿ ಹತ್ತುವ ನ್ಯೂನ ರೂಪ ಬೇರೆಯಾಗುತ್ತದೆ. ಸಾಮಾನ್ಯ ವರ‍್ತಮಾನದಲ್ಲಿ ಹತ್ತುವ -ಉತ್ತಾ ಪ್ರತ್ಯಯ ಈ ಸಂದರ‍್ಬದಲ್ಲಿ ಹತ್ತುತ್ತದೆ.
ಕನ್ನಡದಲ್ಲಿ ಹೀಗೆ ಒಂದು ಪ್ರದಾನವಾಕ್ಯಕ್ಕೆ ಒಳವಾಕ್ಯವನ್ನು ಸೇರಿಸುವ ಹಲವು ವಿದಾನಗಳು ಇವೆ. ಅಪೂರ‍್ಣ ಕ್ರಿಯಾಪದವನ್ನು ಸೇರಿಸುವಿಕೆ, ನ್ಯೂನ ರೂಪವನ್ನು ಹಚ್ಚುವಿಕೆ, ಕ್ರಿಯಾಪದವನ್ನು ನಾಮರೂಪಗೊಳಿಸುವಿಕೆ ಮೊದಲಾದವು. ಇಲ್ಲಿ ಪ್ರತಿಯೊಂದು ವಿದಾನಕ್ಕೆ ಉದಾಹರಣೆಗಳನ್ನು ಕೊಟ್ಟಿದೆ.
ನ್ಯೂನ ರೂಪವನ್ನು ಹಚ್ಚುವ ಮೂಲಕ, ಅಪೂರ‍್ಣ ಕ್ರಿಯಾಪದವನ್ನು ಸೇರಿಸುವ ಮೂಲಕ,
ಉದಾ. ನಾನು ಬಂದು ಕೆಲಸ ಮಾಡುತ್ತೇನೆ
ಅವನು ಬಂದರೆ ನಲಿವಿರುತ್ತದೆ
ಅವನು ಕೆಲಸ ಮಾಡಲಿಕ್ಕೆ ಬರುವನು
ಕ್ರಿಯಾಪದವನ್ನು ನಾಮರೂಪಗೊಳಿಸುವ ಮೂಲಕ,
ಉದಾ. ಅವನ ಓಡುವಿಕೆ ಚೆನ್ನಾಗಿ ಇದೆ
ಸಂಕೀರ‍್ಣ ವಾಕ್ಯ: ಸಂಕೀರ‍್ಣ ವಾಕ್ಯದಲ್ಲಿ ಒಂದು ಪ್ರದಾನ ವಾಕ್ಯ ಇರುತ್ತದೆ. ಅದರೊಂದಿಗೆ ಒಂದು ಇಲ್ಲವೆ ಒಂದಕ್ಕಿಂತ ಹೆಚ್ಚು ಒಳವಾಕ್ಯಗಳು ಇರುತ್ತವೆ. ಎರಡು ವಾಕ್ಯಗಳು ಪರಸ್ಪರ ಜೋಡಿಯಾಗಿ ಒಂದೆ ವಾಕ್ಯದ ಅಂಗದಂತೆ ವರ‍್ತಿಸುತ್ತವೆ. ಹೀಗೆ ಎರಡು ವಾಕ್ಯಗಳನ್ನು ಜೋಡಿಸುವ ಕೆಲಸವನ್ನು ಸಂಬಂದಾವ್ಯಯಗಳು ಮಾಡುತ್ತವೆ. ಸಾಮಾನ್ಯವಾಗಿ ಸಂಕೀರ‍್ಣ ವಾಕ್ಯಗಳಲ್ಲಿ ಸಂಬಂದಾವ್ಯಯಗಳು ಇರುತ್ತವೆ. ಉದಾ. ಆದರೆ, ಮೂಲಕ, ಆದ್ದರಿಂದ ಮೊದಲಾದವು. ಈ ಕೆಳಗಿನ ವಾಕ್ಯವನ್ನು ಗಮನಿಸಿ,
ಉದಾ.: ಆಕೆ ಮನೆಗೆ ಬರಬೇಕಿತ್ತು ಆದರೆ ಅಂಗಡಿಗೆ ಹೋದಳು
ಇಲ್ಲಿ ಆಕೆ ಅಂಗಡಿಗೆ ಹೋದಳು ಎಂಬುದು ಪ್ರದಾನ ವಾಕ್ಯ. ಅದರ ಜೊತೆಗೆ ಆಕೆ ಮನೆಗೆ ಬರಬೇಕಿತ್ತು ಎಂಬ ಒಂದು ಒಳವಾಕ್ಯ ಪ್ರದಾನವಾಕ್ಯದ ಒಳಗೆ ಸೇರಿಕೊಂಡಿದೆ. ಹೀಗೆ ಸೇರಿಕೊಂಡಿರುವ ಒಳವಾಕ್ಯ ಕರ‍್ತ್ರುವನ್ನು ಹೊಂದಿಲ್ಲ ಎಂಬುದನ್ನು ಗಮನಿಸಬಹುದು.
ಉದಾ.: ಆಕೆ ಮನೆಗೆ ಮತ್ತು ಅಂಗಡಿಗೆ ಹೋಗಿದ್ದಳು
ಈ ವಾಕ್ಯದಲ್ಲಿಯೂ ಪ್ರದಾನ ವಾಕ್ಯದ ಒಳಗೆ ಒಳವಾಕ್ಯವೊಂದು ಸೇರಿಕೊಂಡಿದೆ. ಆದರೆ ಈ ಒಳವಾಕ್ಯ ಕ್ರಿಯಾಪದವನ್ನು ಹೊಂದಿಲ್ಲ.
ಒಳವಾಕ್ಯಗಳು ಸಾಮಾನ್ಯವಾಗಿ ಕರ‍್ತ್ರುವನ್ನು ಇಲ್ಲವೆ ಇನ್ನೊಂದು ಕ್ರಿಯಾಪದವನ್ನು ಹೊಂದಿರುವುದಿಲ್ಲ. ಆದರೆ, ಕೆಲವು ಸಂದರ‍್ಬಗಳಲ್ಲಿ ಸಂಕೀರ‍್ಣ ವಾಕ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಕರ‍್ತ್ರುಗಳು ಇರಬಹುದು ಇಲ್ಲವೆ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳು ಇರಬಹುದು. ಹಾಗೆ ಒಳವಾಕ್ಯಗಳು ಕರ‍್ತ್ರು ಮತ್ತು ಕ್ರಿಯಾಪದವನ್ನು ಹೊಂದಿದ್ದರೂ ಅವು ಅಶ್ಟು ಮಹತ್ವವನ್ನು ಪಡೆದಿರುವುದಿಲ್ಲ. ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.
ಗಿಡಕ್ಕೆ ಗಾಳಿ ತಾಕಿದ್ದರಿಂದ ಎಲೆಗಳು ಉದುರಿದವು
ಹೂವಿಗೆ ಗಾಳಿ ಸೋಕಿದ್ದರಿಂದ ದಳಗಳು ಉದುರಿದವು
ಈ ಎರಡು ವಾಕ್ಯಗಳಲ್ಲಿನ ಒಳವಾಕ್ಯಗಳು ಕ್ರಮವಾಗಿ ಕರ‍್ತ್ರು ಮತ್ತು ಕ್ರಿಯಾಪದಗಳನ್ನು ಹೊಂದಿವೆ. ಮೊದಲ ವಾಕ್ಯದಲ್ಲಿ ಗಾಳಿ ಎಂಬ ಕರ‍್ತ್ರು ಮತ್ತು ತಾಕು ಎಂಬ ಕ್ರಿಯಾಪದ ಇವೆ. ಆದರೆ, ಇಡಿಯ ವಾಕ್ಯದಲ್ಲಿ ಅವು ಅಶ್ಟು ಮುಕ್ಯವಾಗುವುದಿಲ್ಲ. ಪ್ರದಾನ ವಾಕ್ಯವಾದ ಎಲೆಗಳು ಉದುರಿದವು ಎಂಬುದು ಮುಕ್ಯವಾಗುತ್ತದೆ. ಎಲೆಗಳು ಉದುರುವ ಕ್ರಿಯೆಗೆ ಒಳವಾಕ್ಯದ ಕ್ರಿಯೆ ಪೂರಕವಾಗುತ್ತದೆ. ಉದುರು ಎಂಬ ಪ್ರದಾನ ವಾಕ್ಯದ ಕ್ರಿಯಾಪದವು ಕರ‍್ತ್ರುವಿನ ಲಿಂಗ ಮತ್ತು ವಚನ ಪ್ರತ್ಯಯಗಳನ್ನು ಪಡೆದುಕೊಂಡಿದೆ. ಆದರೆ, ತಾಕು ಎಂಬ ಒಳವಾಕ್ಯದ ಕ್ರಿಯಾಪದವು ಹೀಗೆ ಕರ‍್ತ್ರುವಿನ ಲಿಂಗ
ಮತ್ತು ವಚನ ಪ್ರತ್ಯಯಗಳನ್ನು ಪಡೆದುಕೊಂಡಿಲ್ಲ ಎಂಬುದನ್ನು ಗಮನಿಸಬಹುದು. ಅದೆ ವೇಳೆಗೆ, ಸಂಬಂದಾವ್ಯಯ ಆದ್ದರಿಂದ ಎಂಬುದು ಒಳವಾಕ್ಯದ ಕ್ರಿಯಾಪದ ತಾಕು ಇದಕ್ಕೆ ಅಂಟಿಕೊಂಡು ಬಂದಿದೆ ಎಂಬುದನ್ನೂ ಗಮನಿಸಬೇಕು.
ಕನ್ನಡದಲ್ಲಿ ಹಲವು ಸಂಬಂದಾವ್ಯಗಳು ಇವೆ. ಮತ್ತು, ಇಲ್ಲವೆ, ಅತವಾ, ಆದರೆ, ಅದಕ್ಕೆ, ಅದಕ್ಕಾಗಿ, ಅದರಿಂದ, ಅದರಿಂದಾಗಿ, ನಂತರ ಹೀಗೆ ಹಲವು ರೂಪಗಳನ್ನು ಗಮನಿಸಬಹುದು. ಈ ರೂಪಗಳನ್ನು ಬಳಸಿರುವ ಕೆಲವು ಸಂಕೀರ‍್ಣ ವಾಕ್ಯಗಳನ್ನು ಕೆಳಗೆ ಕೊಟ್ಟಿದೆ.
ಉದಾ.: ನಾನು ಅಂಗಡಿಗೆ ಮತ್ತು ಸಿನಿಮಾಕ್ಕೂ ಹೋದೆ
ಅವನು ಬರೆಯುತ್ತಾನೆ ಇಲ್ಲವೆ ಓದುತ್ತಾನೆ
ಹುಡುಗಿ ಹಾಡುತ್ತಾಳೆ ಅತವಾ ಕುಣಿಯುತ್ತಾಳೆ
ನನಗೆ ಹಸಿವಾಗಿದೆ ಆದರೆ ಊಟ ಮಾಡುವ ಯೋಚನೆ ಇಲ್ಲ
ನನಗೆ ಬೇಸರವಾಗಿದೆ ಅದಕ್ಕೆ ಮನೆಗೆ ಹೋದೆ
ನನಗೆ ಕೆಲಸವಿಲ್ಲ ಅದಕ್ಕಾಗಿ ಊರಿಗೆ ಹೋಗುತ್ತೇನೆ
ಅವಳು ನಗುತ್ತಾಳೆ ಅದರಿಂದ ನನಗೆ ಕೋಪ ಬರುತ್ತದೆ
ಅವಳು ಕರೆಯುತ್ತಾಳೆ ಅದರಿಂದಾಗಿ ನನಗೆ ನಿಲ್ಲಲಾಗುವುದಿಲ್ಲ
ಅವನು ಬಂದ ನಂತರ ಕಾರ‍್ಯಕ್ರಮ ಶುರುವಾಗುತ್ತದೆ
ಇದರೊಂದಿಗೆ ಸಂಬಂದಸೂಚಕ ಅವ್ಯಯಗಳನ್ನು ತರುವ ಮೂಲಕ ಕೂಡ ಸಂಕೀರ‍್ಣ ವಾಕ್ಯಗಳನ್ನು ಸಾದಿಸಬಹುದು. ಕನ್ನಡದಲ್ಲಿ ನೇರವಾದ ಸಂಬಂದಸೂಚಕ ಅವ್ಯಯಗಳು ಇಲ್ಲದಿರುವುದರಿಂದ ಕ್ರಿಯಾಪದಗಳನ್ನು ನ್ಯೂನರೂಪವಾಗಿಸಿ ಹೀಗೆ ವಾಕ್ಯಗಳನ್ನು ಜೋಡಿಸಬಹುದು ಇಲ್ಲವೆ ಪ್ರಶ್ನಾರ‍್ತಕ ಸರ‍್ವನಾಮಗಳು ಸಾಮಾನ್ಯವಾಗಿ ಈ ಕೆಲಸವನ್ನು ಮಾಡುತ್ತವೆ.
ಉದಾ.: ಮನೆಗೆ ಬಂದ ಹುಡುಗ ಹೊಲಕ್ಕೆ ಹೋಗಿದ್ದಾನೆ
ಮನೆಗೆ ಯಾರು ಬಂದಿದ್ದರೊ ಅವರು ಹೊಲಕ್ಕೆ ಹೋಗಿದ್ದಾರೆ
ಈ ಎರಡೂ ವಾಕ್ಯಗಳಲ್ಲಿ ಎರಡೆರಡು ವಾಕ್ಯಗಳನ್ನು ಜೋಡಿಸಿದೆ. ಜೋಡಿಸಿರುವ ರೀತಿ ಬಿನ್ನವಾಗಿದೆ. ಮೊದಲ ವಾಕ್ಯದಲ್ಲಿ ಬರು ಕ್ರಿಯಾಪದ ನ್ಯೂನರೂಪ ಪ್ರತ್ಯಯವನ್ನು ಪಡೆದುಕೊಂದು ಬಂದು ಎಂದು ಬೆಳೆದು ಇನ್ನೊಂದು ವಾಕ್ಯವನ್ನು ಪಡೆದುಕೊಳ್ಳುವುದಕ್ಕೆ ಸಿದ್ದವಾಗಿದೆ. ಎರಡನೆಯ ವಾಕ್ಯದಲ್ಲಿ ಪ್ರಶ್ನಾರ‍್ತಕ ಸರ‍್ವನಾಮವು ಬಂದಿದೆ. ಇದರಲ್ಲಿ ಕರ‍್ತ್ರುವನ್ನು ಮೊದಲು ಪ್ರಶ್ನಾರ‍್ತಕ ಸರ‍್ವನಾಮ ಉಲ್ಲೇಕಿಸಿ ನಂತರ ಮತ್ತೊಮ್ಮೆ ಸರ‍್ವನಾಮ ಬಂದು ಅದು ಪ್ರಶ್ನಾರ‍್ತಕ ಸರ‍್ವನಾಮ ಉಲ್ಲೇಕಿಸಿರುವ ಕರ‍್ತ್ರುವನ್ನು ಉದ್ದರಿಸುತ್ತದೆ. ಆ ಮೂಲಕ ಸಂಬಂದಾವ್ಯದಂತೆ ಬಳಕೆ ಆಗಿ ಎರಡು ವಾಕ್ಯಗಳನ್ನು ಜೋಡಿಸಿದೆ.
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.