Date: 12-07-2023
Location: ಬೆಂಗಳೂರು
''ಪದಗಳಿಗೆ ಅವುಗಳದೆ ಆದ ಅರ‍್ತವೊಂದು ಇರುತ್ತದೆ. ಆದರೆ, ಆ ಪದಗಳನ್ನು ಒಂದು ನಿಯತವಾದ ರೀತಿಯಲ್ಲಿ ಹೊಂದಿಸಿದಾಗ ಆ ಪದಗಳನ್ನು ಬಿಡಿಬಿಡಿಯಾಗಿ ಉಚ್ಚರಿಸಿದಾಗ ದೊರೆಯುವ ಅರ‍್ತಕ್ಕಿಂತ ಬಿನ್ನವಾದ ಮತ್ತು ಅದಕ್ಕಿಂತ ಮಿಗಿಲಾದ ಬೇರೆ ಯಾವುದೊ ಅರ‍್ತವು ನಮಗೆ ದೊರೆಯುತ್ತಿರುತ್ತದೆ,'' ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ವಾಕ್ಯದ ಗಟಕಗಳ ನಡುವಿನ ಸಂಬಂದ’ ವಿಚಾರದ ಕುರಿತು ಬರೆದಿದ್ದಾರೆ.
ಒಂದು ವಾಕ್ಯದಲ್ಲಿ ಮೂಲಬೂತವಾಗಿ ಮೂರು ಗಟಕಗಳು ಮತ್ತು ಹೆಚ್ಚಿನ ಗಟಕಗಳೂ ಇರಬಹುದು ಎಂಬುದನ್ನು ನೋಡಿದೆವು. ಯಾವುದೆ ಒಂದು ವಾಕ್ಯವನ್ನು ತೆಗೆದುಕೊಂಡರೆ ಆ ವಾಕ್ಯದಲ್ಲಿ ಪದಗಳು ಬಳಕೆಯಾಗಿರುತ್ತವೆ. ಈ ಪದಗಳಿಗೆ ಅವುಗಳದೆ ಆದ ಅರ‍್ತವೊಂದು ಇರುತ್ತದೆ. ಆದರೆ, ಆ ಪದಗಳನ್ನು ಒಂದು ನಿಯತವಾದ ರೀತಿಯಲ್ಲಿ ಹೊಂದಿಸಿದಾಗ ಆ ಪದಗಳನ್ನು ಬಿಡಿಬಿಡಿಯಾಗಿ ಉಚ್ಚರಿಸಿದಾಗ ದೊರೆಯುವ ಅರ‍್ತಕ್ಕಿಂತ ಬಿನ್ನವಾದ ಮತ್ತು ಅದಕ್ಕಿಂತ ಮಿಗಿಲಾದ ಬೇರೆ ಯಾವುದೊ ಅರ‍್ತವು ನಮಗೆ ದೊರೆಯುತ್ತಿರುತ್ತದೆ. ಇಲ್ಲಿ ಒಂದು ವಾಕ್ಯವನ್ನು ತೆಗೆದುಕೊಂಡು ಇದನ್ನು ಗಮನಿಸಬಹುದು,
‘ಅವಳು ವನಕ್ಕೆ ಹೋದಳು’
ಇದರಲ್ಲಿ ಮೂರು ಗಟಕಗಳು ಇಲ್ಲವೆ ಪದಗಳು ಇವೆ, ‘ಅವಳು’ ‘ವನಕ್ಕೆ’ ಮತ್ತು ‘ಹೋದಳು’. ಇವುಗಳ ಪದರೂಪಗಳನ್ನು ಗಮನಿಸಿದಾಗ ‘ಅವಳು’ ‘ವನ’ ಮತ್ತು ‘ಹೋಗು’ ಎಂಬುವಾಗಿವೆ. ಈ ಪದಗಳಿಗೆ ಅವುಗಳದೆ ಆದ ಅರ‍್ತ ಎಂಬುದೊಂದು ಇದೆ. ಇವುಗಳನ್ನು ಬಿಡಿಬಿಡಿಯಾಗಿ ಉಚ್ಚರಿಸಿದಾಗ ಕಾಣಬಹುದು. ಆದರೆ, ಮೇಲೆ ಕೊಟ್ಟಿರುವ ವಾಕ್ಯವೆಂಬ ರಚನೆಯಲ್ಲಿ ಈ ಮೂರು ಗಟಕಗಳನ್ನು ಒಂದು ನಿಯತ ಅನುಕ್ರಮದಲ್ಲಿ ಉಚ್ಚರಿಸಿದಾಗ ಬಿಡಿ ಪದಗಳಲ್ಲಿ ಕಾಣಿಸದಿರುವ ವಿಬಿನ್ನ ಅರ‍್ತವೊಂದು ಕಾಣಿಸುತ್ತದೆ. ಹಾಗಾದರೆ, ಈ ಅರ‍್ತ ಈ ಪದಗಳಿಗೆ ಎಲ್ಲಿಂದ ಬಂದೊದಗುತ್ತದೆ ಎಂಬುದು ಪ್ರಶ್ನೆಯಾಗಬಹುದು. ಮೂಲಬೂತವಾಗಿ ಪದಗಳಿಗೆ ಅರ‍್ತ ಹೇಗೆ ಬಂದು ಒದಗುತ್ತದೆ ಎಂಬುದಕ್ಕೆ ತಿಳುವಳಿಕೆ ಇಲ್ಲ. ಅದನ್ನು ಸುಮ್ಮನೆ ಒಂದು ಸಾಮಾಜಿಕ ಒಪ್ಪಂದ ಎಂದು ಹೇಳಬಹುದು. ಅರ‍್ತವನ್ನು ನಾವು ಎರಡು ನೆಲೆಯಲ್ಲಿ ನೋಡಬಹುದು. ಮೊದಲನೆಯದು ಪದಗಳ ಹಂತದಲ್ಲಿ, ಪದಗಳಿಗೆ ಬಂದೊದಗುವ ಅರ‍್ತ. ಎರಡನೆಯದು ಈ ಪದಗಳನ್ನು ವಾಕ್ಯದ ರಚನೆಯಲ್ಲಿ ಪೋಣಿಸಿದಾಗ ಬರುವ ಅರ‍್ತ. ಹೀಗೆ ವಾಕ್ಯವೊಂದರಲ್ಲಿ ಪದಗಳನ್ನು ಹೊಂದಿಸಿದಾಗ ಹೊರಡುವ ಅರ‍್ತವು ಸಾಮಾನ್ಯವಾಗಿ ಆ ಪದಗಳ ಅನುಕ್ರಮ ಮತ್ತು ಅವುಗಳ ಮೇಲೆ ಬಂದಿರುವ ಪ್ರತ್ಯಯಗಳ ಸಹಾಯದಿಂದ ಬಂದಿರುತ್ತವೆ. ಮೊದಲಿಗೆ ವಾಕ್ಯದಲ್ಲಿನ ಪದಗಳ ಅನುಕ್ರಮವು ನಿರ‍್ದಿಶ್ಟ ಅರ‍್ತವನ್ನು ರೂಪಿಸಬಲ್ಲದು ಎಂಬುದಕ್ಕೆ ಒಂದು ಬಳಕೆಯನ್ನು ನೋಡೋಣ.
ಹಸಿರು ಗಿಣಿ
ಗಿಣಿ ಹಸಿರು
ಇಲ್ಲಿ ಮೊದಲ ರಚನೆಯು ಗಿಣಿಯನ್ನು ಮತ್ತು ಅದರ ಬಣ್ಣವನ್ನು ಹೇಳುತ್ತಿದ್ದರೆ ಎರಡನೆಯ ರಚನೆಯು ಹಸಿರು ಬಣ್ಣವನ್ನು ಮತ್ತು ಅದರಲ್ಲಿನ ನಿರ‍್ದಿಶ್ಟ ಹಸಿರನ್ನು ಹೇಳುತ್ತಿದೆ. ಈ ಪದಗಳನ್ನು ಬಿಡಿಯಾಗಿ ಉಚ್ಚರಿಸಿದಾಗ ಅವುಗಳಿಗೆ ನಿರ‍್ದಿಶ್ಟವಾದ ಅರ‍್ತವಿದೆಯಾದರೂ ವಾಕ್ಯಮಾದರಿಯ ರಚನೆಯಲ್ಲಿ ಅವುಗಳ ಅನುಕ್ರಮವು ಬಿನ್ನವಾಗುತ್ತಿದ್ದಂತೆ ಅದರಿಂದ ದೊರೆಯುವ ಅರ‍್ತವೂ ಬಿನ್ನವಾಗುತ್ತದೆ.
ಇನ್ನು ಪ್ರತ್ಯಯಗಳು ಬರುವುದರ ಮೂಲಕ ಅರ‍್ತವು ಬಿನ್ನವಾಗಿ ಅವತರಿಸುತ್ತದೆ ಎಂಬುದನ್ನು ಗಮನಿಸೋಣ. ಕೆಳಗಿನ ವಾಕ್ಯಗಳನ್ನು ಗಮನಿಸಿ,
ಅವಳು ಮನಗೆ ಬಂದಳು
ಅವಳು ಮನೆಯಿಂದ ಬಂದಳು
ಈ ಮೇಲಿನ ಎರಡೂ ವಾಕ್ಯಗಳಲ್ಲಿ ಬಳಕೆಯಾಗಿರುವ ಪದಗಳು ಒಂದೆ ಆಗಿವೆ, ಅವುಗಳೆಂದರೆ, ‘ಅವಳು, ‘ಮನೆ’ ಮತ್ತು ‘ಬರು’. ಈ ಪದಗಳನ್ನು ಬಿಡಿಯಾಗಿ ಉಚ್ಚರಿಸಿದಾಗ ಬಿನ್ನವಾದ ಅರ‍್ತ ಬರಲಾರದು. ಅವುಗಳಿಗೆ ಒಂದೆ ಅರ‍್ತ ಇದೆ. ಆದರೆ, ಅವುಗಳನ್ನು ಮೇಲಿನಂತೆ ಬಿನ್ನ ಪ್ರತ್ಯಯಗಳನ್ನು ಸೇರಿಸಿ ಎರಡು ವಾಕ್ಯಗಳಲ್ಲಿ ಬಳಸಿದಾಗ ಎರಡೂ ವಾಕ್ಯಗಳು ಬಿನ್ನವಾದ ಅರ‍್ತವನ್ನು ಕೊಡುವುದಕ್ಕೆ ಸಾದ್ಯವಾಗುತ್ತಿದೆ. ಮೊದಲ ವಾಕ್ಯದಲ್ಲಿ ‘ಮನೆ’ ಎಂಬ ಪದದ ಮೇಲೆ ‘-ಗೆ’ ಎಂಬ ಗುರಿಯನ್ನು ಹೇಳುವ ಪ್ರತ್ಯಯ ಬಂದು ಸೇರಿದ್ದರೆ, ಎರಡನೆ ವಾಕ್ಯದಲ್ಲಿ ‘-ಇಂದ’ ಎಂಬ ಮೂಲವನ್ನು ಹೇಳುವ ಪ್ರತ್ಯಯ ಬಂದು ಸೇರಿದೆ. ಹೀಗಾಗಿ ಮೊದಲ ಮತ್ತು ಎರಡನೆಯ ವಾಕ್ಯಗಳು ಬಿನ್ನವಾದ ಅರ‍್ತವನ್ನು ಕೊಡುತ್ತಿವೆ.
ಹೀಗೆ, ವಾಕ್ಯ ಹಂತದಲ್ಲಿ ಪದಗಳ ಅನುಕ್ರಮ ಮತ್ತು ಪದಗಳ ಮೇಲೆ ಬಂದು ಸೇರುವ ಪ್ರತ್ಯಯಗಳು ಅರ‍್ತವು ಹುಟ್ಟುವುದಕ್ಕೆ ಕಾರಣವಾಗುತ್ತವೆ.
ಹಾಗಾದರೆ, ವಾಕ್ಯದಲ್ಲಿ ಇರುವ ಗಟಕಗಳ ನಡುವೆ ಸಂಬಂದ ಇರುತ್ತದೆ ಎಂಬುದು ಸ್ಪಶ್ಟವಾಯಿತು. ಈ ಸಂಬಂದ ಎಂತಹದ್ದು? ಯಾವ ಯಾವ ಗಟಕಗಳ ನಡುವೆ ಎಂತೆಂತಾ ಸಂಬಂದ ಇರುತ್ತದೆ? ಎಂಬೆಲ್ಲ ಪ್ರಶ್ನೆಗಳು ಬರಬಹುದು. ಈ ಪ್ರಶ್ನೆಗಳಿಗೆ ಪ್ರಾತಮಿಕವಾದ ಒಂದು ವಿವರಣೆಯನ್ನು ಇಲ್ಲಿ ನೋಡಬಹುದು. ಹೆಚ್ಚಿನ ಸಂಬಂದಗಳ ವಿವರಗಳನ್ನು ಆಸಕ್ತರು ಓದಲು ಮುಂದೆ ಬರಬಹುದು.
ವಾಕ್ಯದ ಗಟಕಗಳ ನಡುವಿನ ಸಂಬಂದವನ್ನು ಇಲ್ಲಿ ಗಮನಿಸಬಹದು.
ಉದಾ. ಕರ‍್ತ್ರು ಕರ‍್ಮ ಕ್ರಿಯೆ
ಅವಳು ಮನೆಯನ್ನು ಕಟ್ಟಿದಳು
ಈ ವಾಕ್ಯದಲ್ಲಿ ಬಂದಿರುವ ಅವಳು ಎಂಬ ಗಟಕ ಕಟ್ಟಿದೆ ಎಂಬ ಗಟಕದೊಂದಿಗೆ ನೇರ ಸಂಬಂದವನ್ನು ತೋರಿಸುತ್ತದೆ.
ಉದಾ.: ಅವಳು ಕಟ್ಟಿದಳು
ಮೇಲಿನ ವಾಕ್ಯದಲ್ಲಿ ಕರ‍್ಮಪದ ಇಲ್ಲದೆ ವಾಕ್ಯವನ್ನು ಮಾಡಲು ಸಾದ್ಯವಾಗುತ್ತಿದೆ. ಕರ‍್ಮಪದದ ಅವಲಂಬನೆ ಇಲ್ಲದೆ ಕರ‍್ತ್ರು ಮತ್ತು ಕ್ರಿಯೆ ಇವು ಪರಸ್ಪರ ಸಂಬಂದವನ್ನು ಹೊಂದಿವೆ. ಇದಕ್ಕೆ ಕಾರಣ ಕರ‍್ಮದ ಮಾಹಿತಿಯು ಸಾಮಾನ್ಯವಾಗಿ ಆ ಮಾತಿನ ಪರಿಸರದಲ್ಲಿ ದೊರೆಯುತ್ತಿರುತ್ತದೆ ಇಲ್ಲವೆ ಅದನ್ನು ಎತ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂಬ ಸ್ತಿತಿ ಇರುತ್ತದೆ.
ಅದರಂತೆಯೆ ಕರ‍್ಮ ಮತ್ತು ಕ್ರಿಯೆ ಇವು ನೇರ ಸಂಬಂದವನ್ನು ತೋರಿಸುತ್ತವೆ.
ಉದಾ.: ಮನೆಯನ್ನು ಕಟ್ಟಿದಳು
ಇಲ್ಲಿ ಕರ‍್ತ್ರು ಇಲ್ಲದೆಯೆ ವಾಕ್ಯವನ್ನು ಅರ‍್ತವತ್ತಾದ ರಚನೆಯನ್ನಾಗಿ ಮಾಡುವುದಕ್ಕೆ ಸಾದ್ಯವಾಗಿದೆ. ಕರ‍್ತ್ರುವಿಲ್ಲದೆ ಕರ‍್ತ್ರುವಿನ ಗುಣಸ್ವಬಾವಗಳನ್ನು ಕ್ರಿಯಾಪದದ ಮೇಲೆ ಬಂದಿರುವ ಪ್ರತ್ಯಯಗಳು ತಿಳಿಸುತ್ತಿವೆ. ಹೀಗಾಗಿ ಇವುಗಳ ನಡುವಿನ ಸಂಬಂದ ನೇರವಾಗಿದೆ.
ಇವುಗಳಿಗೆ ಎದುರಾಗಿ ಕರ‍್ತ್ರು ಮತ್ತು ಕರ‍್ಮ ಈ ಎರಡು ಅಂಗಗಳು ನೇರವಾದ ಸಂಬಂದವನ್ನು ತೋರಿಸುವುದಿಲ್ಲ.
ಉದಾ.: *ಅವಳು ಮನೆಯನ್ನು
ಈ ಮೇಲಿನ ಉದಾಹರಣೆ ಒಂದು ಅರ‍್ತಪೂರ‍್ಣ ವಾಕ್ಯ ಆಗಲಾರದು. ಹಾಗಾಗಿ ಕರ‍್ತ್ರು ಮತ್ತು ಕರ‍್ಮ ಇವುಗಳ ನಡುವೆ ನೇರ ಸಂಬಂದ ಇಲ್ಲ ಎಂದು ಹೇಳಬಹುದು. ಆದರೆ, ವಾಕ್ಯವೊಂದರಲ್ಲಿ ಅವುಗಳ ನಡುವೆ ನೇರವಲ್ಲದ ಸಂಬಂದ ಇದೆ ಎಂಬ ವಿವರಣೆಯನ್ನು ಕೊಡಬೇಕಾಗುತ್ತದೆ. ವಾಕ್ಯದಲ್ಲಿ ಇರುವ ಕ್ರಿಯಾಪದದ ಮೂಲಕ ಕರ‍್ತ್ರು ಮತ್ತು ಕರ‍್ಮ ಈ ಎರಡೂ
ಪರಸ್ಪರ ಸಂಬಂದಿಸುತ್ತವೆ. ಅಂದರೆ, ವಾಕ್ಯದಲ್ಲಿನ ಕರ‍್ತ್ರು ಮತ್ತು ಕರ‍್ಮ ಇವುಗಳೆರಡೂ ಕ್ರಿಯಾಪದದೊಂದಿಗೆ ನೇರ ಸಂಬಂದವನ್ನು ಹೊಂದಿವೆ. ಹೀಗೆ, ವಾಕ್ಯದಲ್ಲಿನ ಕ್ರಿಯೆ ಗಟಕದ ಮೂಲಕ ಆ ವಾಕ್ಯದಲ್ಲಿನ ಕರ‍್ತ್ರು ಮತ್ತು ಕರ‍್ಮ ಇವು ಪರಸ್ಪರ ಸಂಬಂದವನ್ನು ತೋರಿಸುತ್ತವೆ. ಹೀಗಾಗಿ ಅವೆರಡೂ ವಾಕ್ಯದೊಳಗೆ ಪರಸ್ಪರ ಸಂಬಂದವನ್ನು ಹೊಂದಿರುತ್ತವೆ ಎಂದು ವಿವರಿಸಬೇಕಾಗುತ್ತದೆ.
ಇಲ್ಲಿ ಚರ‍್ಚಿಸಿದ ಈ ವಾಕ್ಯದ ಅಂಗಗಳ ನಡುವಿನ ಪರಸ್ಪರ ಸಂಬಂದವನ್ನು ಈ ಕೆಳಗೆ ರೇಕೆಯನ್ನು ಬಳಸಿಕೊಂಡು ತೋರಿಸಿದೆ.
ಅವಳು ಮನೆಯನ್ನು ಕಟ್ಟಿದಳು
ಹೀಗೆ ವಾಕ್ಯವೊಂದು ಆಡುಗರ ಅಪೇಕ್ಶೆಯ ಅರ‍್ತವನ್ನು ಹೊರಡಿಸುವುದಕ್ಕೆ ಅನುವಾಗುವಂತ ರಚನೆಯನ್ನ ಹೊಂದಿರುತ್ತದೆ ಎಂದು ಹೇಳಬಹುದು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.