Date: 16-06-2024
Location: ಬೆಂಗಳೂರು
"ಇನ್ನೇನು ಆರು ವರುಷ ಕಳೆದರೆ ಅವರಿಗೆ ನೂರು ತುಂಬುತ್ತವೆ. ಅವರೀಗ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಂ.ಎಲ್.ಎ. ಅವರಿಗೆ ತೊಂಬತ್ತೇಳು ತುಂಬುವಾಗ ಶಾಸಕಗಿರಿಯ ಅವಧಿಯು ತುಂಬುತ್ತದೆ. ಪ್ರಾಯಶಃ ಅದು ವಿಧಾನಸಭೆ ಸದಸ್ಯತ್ವ ಮತ್ತು ಕರ್ನಾಟಕದ ಕ್ರಿಯಾಶೀಲ ರಾಜಕಾರಣದ ಮಹತ್ತರ ದಾಖಲೆಯೂ ಹೌದು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ‘ರೊಟ್ಟಿ ಬುತ್ತಿ’ ಅಂಕಣದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಬರೆದಿರುವ ‘ತೊಂಬತ್ನಾಲ್ಕರ ಮುಕ್ಕಾಗದ ಮತ್ತು ಮುಪ್ಪಾಗದ ಚೇತನ’ ಲೇಖನ.
ಶಾಮನೂರು ಎಂಬುದು ದಾವಣಗೆರೆ ನಗರಕ್ಕೆ ಲಗತ್ತಾಗಿರುವ ದಾವಣಗೆರೆ ಪರಿಸರದ ಒಂದು ಚಿರಪರಿಚಿತ ಊರಿನ ಹೆಸರು. ಶಾಮನೂರು ಶಿವಶಂಕರಪ್ಪ ಈ ಊರಿನವರಲ್ಲ. ಪರಂತು ಈ ಊರಿನ ದೇವರು ಆಂಜನೇಯ ಸ್ವಾಮಿಯ ದೈವಾರಾಧಕರು. ಹಾಗೆಯೇ ಅವರು ದಾವಣಗೆರೆ ಅಧಿದೇವತೆ ದುಗ್ಗಮ್ಮನ ಪರಮಭಕ್ತರು ಹೌದು. ಆದರೆ ಶಾಮನೂರು ಶಿವಶಂಕರಪ್ಪ ಎಂಬುದು ಕರ್ನಾಟಕದ ಸೀಮೆಯ ತುಂಬೆಲ್ಲಾ ಪ್ರಸಿದ್ಧಿ ಪಡೆದಿರುವ ಜನಜನಿತ ಹೆಸರು. ಅವರ ಬಾಳಿನುದ್ದಕ್ಕೂ ಹಾಸುಹೊಕ್ಕಾದ ಉದ್ಯಮಶೀಲತೆ, ಸಾಹುಕಾರಿಕೆಯ ಸಂಪನ್ನತೆ ಮತ್ತು ಮೆರುಗಿಟ್ಟಂತೆ ಕ್ರಿಯಾಶೀಲ ರಾಜಕಾರಣ. ಅವಕ್ಕೆಲ್ಲ ಶೃಂಗಪ್ರಾಯದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷಗಿರಿ. ಇಂತಿಪ್ಪ ನಮ್ಮ ಶಾಮನೂರು ಶಿವಶಂಕರಪ್ಪ ಇದೇ ಜೂನ್ ಹದಿನಾರರಂದು ತೊಂಬತ್ನಾಲ್ಕರ ಏರುಪ್ರಾಯಕ್ಕೆ ಕಾಲಿಟ್ಟರು.
ಇನ್ನೇನು ಆರು ವರುಷ ಕಳೆದರೆ ಅವರಿಗೆ ನೂರು ತುಂಬುತ್ತವೆ. ಅವರೀಗ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಂ.ಎಲ್.ಎ. ಅವರಿಗೆ ತೊಂಬತ್ತೇಳು ತುಂಬುವಾಗ ಶಾಸಕಗಿರಿಯ ಅವಧಿಯು ತುಂಬುತ್ತದೆ. ಪ್ರಾಯಶಃ ಅದು ವಿಧಾನಸಭೆ ಸದಸ್ಯತ್ವ ಮತ್ತು ಕರ್ನಾಟಕದ ಕ್ರಿಯಾಶೀಲ ರಾಜಕಾರಣದ ಮಹತ್ತರ ದಾಖಲೆಯೂ ಹೌದು. ಅಂತೆಯೇ ವರ್ತಮಾನದ ರಾಜಕಾರಣದಲ್ಲಿ ಸಹಜವಾಗಿ ಅವರಿಗೆ ಹಿರಿತನದ ಸ್ಥಾನಮಾನ. ಅದು ಕೇವಲ ವಯಸ್ಸಿನ ಕಾರಣಕ್ಕಾಗಿ ಖಂಡಿತಾ ಅಲ್ಲ. ಶಾಮನೂರು ಶಿವಶಂಕರಪ್ಪನವರ ಸಮಾಜೋ ಧಾರ್ಮಿಕ ಬದುಕಿನ ಪ್ರೀತಿ, ಕಳಕಳಿಯೇ ಅಮೋಘ., ಅಷ್ಟಕ್ಕೂ ಅವರ ಮೊದಲ ಆದ್ಯತೆ ಕ್ಷೇತ್ರವದು.
ಶಾಮನೂರು ಜನಾನುರಾಗಿ ರಾಜಕಾರಣಿಯಾಗಿ, ಸಾಮಾಜಿಕ ಬದುಕಿನ ಮಹತ್ತರ ವ್ಯಕ್ತಿಯಾಗಿ, ಸಂಘ ಸಂಸ್ಥೆಗಳು ಮತ್ತು ನಿರ್ಗತಿಕರ ಬದುಕಿಗೆ ನೆರವಾದ ಕೊಡುಗೈ ದಾನಿಯಾಗಿ, ನೂರಾರು ಕುಟುಂಬಗಳ ಬದುಕಿಗೆ ಆಪತ್ ಬಂಧುವಾಗಿ, ಇವೆಲ್ಲಕ್ಕೂ ಮಿಗಿಲಾಗಿ ದಾವಣಗೆರೆಯ ಶೈಕ್ಷಣಿಕ ಬದುಕಿನ ವಿದ್ಯಾಕಾಶಿಯನ್ನು ಸಮೃದ್ಧಗೊಳಿಸಿದ ಶಿಕ್ಷಣ ಶಿಲ್ಪಿ ಶಾಮನೂರು ಶಿವಶಂಕರಪ್ಪ.
ನೆನಪಿರಲಿ ಅವರ ಸಾರಥ್ಯದ ಬಾಪೂಜಿ ವಿದ್ಯಾಸಂಸ್ಥೆಯಿಂದ ಪ್ರತಿವರುಷವೂ ಇಪ್ಪತ್ತು ಸಾವಿರಕ್ಕು ಮಿಕ್ಕ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಭಾಜನರು. ಅದರಲ್ಲಿ ವೈದ್ಯರು, ಎಂಜಿನಿಯರು, ಇತರೆ ಎಲ್ಲ ಕ್ಷೇತ್ರದ ಪದವಿ, ಸ್ನಾತಕೋತ್ತರ ಪದವಿಧರರು ಸೇರಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯೇ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಆಗುವ ಎಲ್ಲಾ ಅರ್ಹತೆಗಳಿವೆ. ಆದರೆ ಅದನ್ನು ಡೀಮ್ಡ್ ಯುನಿವರ್ಸಿಟಿ ಎಂದು ಪರಿವರ್ತಿಸುವಲ್ಲಿ ಪ್ರಾಯಶಃ ಅವರು ಮನಸು ಮಾಡಿಲ್ಲವೆಂದು ಕಾಣುತ್ತದೆ.
ಇದು ಶಾಮನೂರು ಶಿವಶಂಕರಪ್ಪ ಕುರಿತು ಅವರ ಬಹುಮುಖಿ ವ್ಯಕ್ತಿತ್ವ ದರ್ಶನದ ಪುಟ್ಟ ಪರಿಚಯ. ಅವರು ನಡೆದು ಬಂದ ಆರೇಳು ದಶಕದ ಪಯಣದ ದಾರಿ ಅಷ್ಟೇನು ಸರಳ ಸುಬಗವೇನಲ್ಲ. ಅದು ಕಲ್ಲು, ಮುಳ್ಳು, ಮಣ್ಣು ತುಂಬಿದ ಕಾಠಿಣ್ಯದ ಹಾದಿಯೂ ಆಗಿತ್ತು. ಅಂತಹ ಹಾದಿಯನ್ನು ಖುದ್ದು ತಾವೇ ಹಸನು ಮಾಡಿಕೊಂಡು ನಡೆದು ಬಂದವರು. ಅದು ಕೇವಲ ವಯಕ್ತಿಕ ಬದುಕಿನ ಹಾದಿಯಾಗಿರದೇ ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ ಬದುಕಿನ ಸಾರ್ವಜನಿಕ ಜೀವನದ ಹಾದಿಯೇ ಆಗಿತ್ತು. ಅದಕ್ಕೆಂದೇ ಸಾಮಾಜಿಕ ಬದುಕಿನಲ್ಲಿ ಅವರಿಗೊಂದು ವಿಶಿಷ್ಟವಾದ ಸ್ಥಾನಮಾನ. ಶಾಮನೂರು ಎಂಬುದು ಮೋಷ್ಟ್ ಸೆಕ್ಯುಲರ್ ಬ್ರಾಂಡ್ ನೇಮ್. ಅದರಲ್ಲೂ ಅವರು ಜನಮುಖಿಯಾದ ಸೆಕ್ಯುಲರ್. ಅದು ಶಾಮನೂರು ಬದುಕಿನ ಅಸೀಮ ಲಾಲಿತ್ಯವೇ ಆಗಿದೆ.
ಹಾಗೆ ನೋಡಿದರೆ ರಾಜಕಾರಣವೇ ಅವರ ಗಮ್ಯ ಗಂತವ್ಯವೇನಲ್ಲ. ಮೇಲಾಗಿ ರಾಜಕಾರಣವೇ ಅವರನ್ನು ಹುಡುಕಿಕೊಂಡು ಬಂದುದು. ತಾನಿರುವ ಕಾಂಗ್ರೆಸ್ ಹೊರತು ಪಡಿಸಿ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಅವುಗಳದು ಶಾಮನೂರು ಜತೆಗೆ ಸದಾ ಸಹೃದಯತೆಯ ಸಖ್ಯ. ಅಷ್ಟರಮಟ್ಟಿಗೆ ಅವರು ಅಜಾತ ಶತ್ರು ರಾಜಕಾರಣಿ. ಆರಂಭಕ್ಕೆ ಮಾತ್ರವಲ್ಲ ಈಗಲೂ ವ್ಯಾಪಾರೋದ್ಯಮ, ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂದೋಹವೇ ಅವರ ಆದ್ಯತೆಯ ಕ್ಷೇತ್ರ.
1995 ರಲ್ಲಿ ಮೊದಲ ಬಾರಿಗೆ ಅವರು ಶಾಸಕರಾದರು. ಅದಾದ ನಂತರ ಅವರ ಪಾಲಿಗೆ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶ ದ್ವಾರಗಳು ಖುಲ್ಲಾ ಆದಂತೆ ಕಂಡವು. ಅಲ್ಲೀಮಟ ಕೆ.ಪಿ.ಸಿ.ಸಿ. ಖಜಾಂಚಿ ಹುದ್ದೆಯಲ್ಲೇ ಮನೋಜ್ಞರು. ಅಷ್ಟೇ ಯಾಕೆ ಅವರ ಆ ಹುದ್ದೆಯನ್ನು ಇದುವರೆಗೂ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಾಗಿಲ್ಲ. ಅವರು ಬದುಕಿರುವವರೆಗೂ ಅವರೇ ಅದರ ಖಾಯಂ ಖಜಾಂಚಿ. ಹಾಗೆಂದು ಹಣದಿಂದಲೇ ಅವರು ಯಾವತ್ತೂ ರಾಜಕೀಯ ಅಧಿಕಾರ ಖರೀದಿಸಿದವರಲ್ಲ. ದೇವರಾಜ ಅರಸು ಕಾಲದಲ್ಲೇ ಶಾಮನೂರು ಪ್ರಮುಖ ರಾಜಕಾರಣಿ ಎಂಬ ರಾಜ್ಯಮಟ್ಟದ ಹೆಸರು.
ಆದರೆ ಅದಕ್ಕೆ ಮೊದಲೇ ಅವರು ದಾವಣಗೆರೆ ನಗರಸಭೆ ಅಧ್ಯಕ್ಷಪಟ್ಟ ಏರಿ ಬಂದವರು. ಅವರಿಗೆ ಅಧಿಕಾರ ಇರಲಿ ಇಲ್ಲದಿರಲಿ ಅಪ್ಪಟ ಕಾಂಗ್ರೆಸ್ಸಿಗ ಮತ್ತು ಖಜಾಂಚಿ ಎಂಬುದು ಮಾತ್ರ ಯಾವತ್ತೂ ಖಾಯಂ. ಆದರೆ ಮುಖ್ಯಮಂತ್ರಿ ಆಗುವ ಕನಸು ಮಾತ್ರ ಸಾಕಾರಗೊಂಡಿಲ್ಲ. ಆದರೆ ಅಭೀಪ್ಸೆ ಹಂಚಿಕೊಳ್ಳ ಬೇಕಾದ ಪ್ರೀತಿಯ ಸಂಗತಿಯಿದೆ. ಅವರ ಮಗ ಎಸ್. ಎಸ್. ಮಲ್ಲಿಕಾರ್ಜುನ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು. ಹೀಗೆ ಅಪ್ಪ ಮಗ ಇಬ್ಬರೂ ಕರ್ನಾಟಕ ವಿಧಾನ ಸಭೆಯಲ್ಲಿ ದಾವಣಗೆರೆಯ ದಕ್ಷಿಣ ಉತ್ತರಗಳು ಸಂಗಮಿಸುವ ಸಂಭ್ರಮ. ಹಣ್ಣೆಲೆ ಚಿಗುರೆಲೆಗಳ ಹಸಿರಿನ ಸೊಗಸು. ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂಬಂತೆ. ಶಾಮನೂರು ಮಲ್ಲಿಕಾರ್ಜುನ ಅವರು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವರು. ಮಲ್ಲಣ್ಣ ಅಭಿವೃದ್ಧಿಯ ಕನಸುಗಾರ. ಇದೀಗ ಶಾಮನೂರು ಕುಟುಂಬದ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಅವರ ಸೃಜನಶೀಲ ಮತ್ತು ಸುಸಂಸ್ಕೃತ ಮಾತುಗಳ ಮೂಲಕ ಪ್ರಬುದ್ಧ ರಾಜಕಾರಣಿಯ ಎಲ್ಲ ಲಕ್ಷಣಗಳು ಮೇಲ್ನೋಟದಲ್ಲೇ ಕಂಡು ಬರುತ್ತಿವೆ.
ನನಗೆ ಪವಾಡಗಳಲ್ಲಿ ನಂಬಿಕೆ ಇಲ್ಲ. ಆದರೆ ಶಾಮನೂರು ಶಿವಶಂಕರಪ್ಪ ಅವರ ವಿಷಯದಲ್ಲಿ ಘಟಿಸುವ ಕೆಲವು ಪವಾಡ ಸದೃಶ ಸಂಗತಿಗಳನ್ನು ನಂಬಲೇ ಬೇಕಿದೆ. ಕಳೆದ ಎಮ್ಮೆಲ್ಲೆ ಚುನಾವಣೆಯಲ್ಲಿ ಶಿವಶಂಕರಪ್ಪ ಅವರಿಗೆ ತೊಂಬತ್ತೆರಡು ವರುಷಗಳು. ಇಂತಹ ವಯಸ್ಸಿನಲ್ಲಿ ಅವರು ಸ್ಪರ್ಧಿಸುವುದು ತರವಲ್ಲ. ಅದು ಅನೇಕರಿಗೆ ಸಹಜವೂ ಅನಿಸಿತ್ತು. ಹಾಗೊಂದು ವೇಳೆ ಸ್ಪರ್ಧಿಸಿ ಪರಾಜಿತರಾದರೆ ವೃದ್ಧಾಪ್ಯದ ಸಂಧ್ಯಾಕಾಲದಲ್ಲಿ ಸೋಲಿನ ನೋವು ನಿರಂತರ. ಅದು ಬದುಕಿನ ಕಡೇ ಗಳಿಗೆವರೆಗೂ ಬಾಧಿಸದೇ ಬಿಡುವುದಿಲ್ಲ. ಇಂತಹದ್ದೊಂದು ಗುರುತರ ಆತಂಕ ಅವರ ಹಿತೈಷಿಗಳದಾಗಿತ್ತು. ಗೆದ್ದರೂ ಅವಧಿ ಪೂರೈಸುವ ಆರೋಗ್ಯ ಅವರಿಗಿಲ್ಲವೆಂದು ಕೆಲವು ವಿರೋಧಿ ಕುಹಕಿಗಳ ಕುಹಕ ನುಡಿ. ಇದ್ಯಾವುದನ್ನು ಕೇರ್ ಮಾಡದೇ ಅವರು ಕಳೆದ ವಿಧಾನಸಭಾ ಚುನಾವಣಾ ಕಳಕ್ಕಿಳಿದೇ ಬಿಟ್ಟರು.
ಏಕೆಂದರೆ ಅವರಿಗೆ ದಾವಣಗೆರೆ ಜೀವನದ ನರನಾಡಿಗಳ ವಾಸ್ತವದ ದಟ್ಟ ಅರಿವಿತ್ತು. ದಾವಣಗೆರೆ ಜನರು ತನ್ನನ್ನು ಯಾವತ್ತೂ 'ಕೈ' ಬಿಡುವುದಿಲ್ಲ ಎಂಬ ಅಪಾರ ನಂಬುಗೆಯಿತ್ತು. ರಿಯಾಲಿಟಿ ಚೆಕ್ ಮಾಡಲು ಬಂದ ಮಾಧ್ಯಮದ ಕಣ್ಣುಗಳು ಕೂಡಾ ಚಕಿತಗೊಂಡವು. ಚುನಾವಣಾ ಪ್ರಚಾರಕ್ಕೆಂದು ಶಾಮನೂರು ಸಾಹುಕಾರರು ವಿದ್ಯುತ್ ಚಾಲಿತ ತೆರೆದ ಗಾಡಿ ಮೂಲಕ ನಗರದಲ್ಲಿ ಓಡಾಡುವಾಗ ಸಾಮಾನ್ಯ ಜನರು ತೋರಿದ ಹರಿಗಡಿಯದ ಪ್ರೀತಿ ಕಂಡು ನಾನಂತೂ ಬೆಕ್ಕಸ ಬೆರಗಾದೆ.
ಕೆಲವರಂತೂ ಅವರ ಪಾದಮುಟ್ಟಿಯೇ ನಮಸ್ಕರಿಸುತ್ತಿದ್ದರು. ಹೇಳ ಬೇಕೆಂದರೆ ಹಿರಿಯಜೀವ ಎಸ್ಸೆಸ್ ಅವರೇನು ಅದನ್ನು ಬಯಸಿದವರಲ್ಲ. ಮುಕ್ಕಾಗದ ಮತ್ತು ಮುಪ್ಪಾಗದ ಮನೋಲ್ಲಾಸ ತುಂಬಿ ತುಳುಕುವ ತಮ್ಮಕಾಲದ ಹಿರಿಯ ಚೇತನಕ್ಕೆ ಸಾಮಾನ್ಯರು ಸಲ್ಲಿಸುವ ಪ್ರೀತಿ, ಗೌರವ ಅದಾಗಿತ್ತು. ಅದು ಕೆಲವರ ಪಾಲಿನ ವಾತ್ಸಲ್ಯದ ಭಕುತಿಯಂತೆ ಗೋಚರಿಸುತ್ತಿತ್ತು. ಎಸ್ಸೆಸ್ ನಂಬಿದ ಜನ ಅವರ 'ಕೈ' ಬಿಡದೇ ನಿರೀಕ್ಷೆ ಮೀರಿ ಅಂದರೆ 27888 ರಷ್ಟು ಅಧಿಕ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಿದರು. ಇದರಿಂದ ಜನ ಮತ್ತು ಎಸ್ಸೆಸ್ ನಡುವಿನ ನಂಬುಗೆ ಅದೆಷ್ಟು 'ಅದಮ್ಯ' ಎಂಬುದು ತಿಳಿಯ ಬಲ್ಲದು. ತನ್ಮೂಲಕ ಅದನ್ನು ಈ ಗೆಲುವು ಗಟ್ಟಿಯಾಗಿ ಸಾಬೀತು ಗೊಳಿಸಿದೆ.
ಅವರ ತೊಂಬತ್ಮೂರನೇ ಹುಟ್ಟುಹಬ್ಬದ ದಿನದಂದು ದೃಶ್ಯಮಾಧ್ಯಮದ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಮುಖವಾಗಿ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಬಿ.ಜೆ.ಪಿ. ಯನ್ನು ಕರ್ನಾಟಕದಲ್ಲಿ ಎದುರಿಸುವ ಕುರಿತಾದ ಪ್ರಶ್ನೆ. ಅದಕ್ಕೇನಂತೆ ನಮ್ಮ ಕಾಂಗ್ರೆಸ್ಸಿನಲ್ಲಿ ಬೇಕಾದಷ್ಟು ಮಂದಿ ಹುರಿಯಾಳುಗಳಿದ್ದಾರೆ. ಅಗತ್ಯವೆನಿಸಿದರೆ ದಾವಣಗೆರೆಯಲ್ಲಿ ಎಂ. ಪಿ. ಎಲೆಕ್ಷನ್ನಿಗೆ ನಾನೇ ಸೆಡ್ಡು ಹೊಡೆಯುತ್ತೇನೆಂದು ಸವಾಲು ಹಾಕಿದ್ದರು.
ಹಾಗೆ ಸೆಡ್ಡು ಹೊಡೆದು ಅಳಿಯ ಜಿ. ಎಂ. ಸಿದ್ದೇಶನೆದುರು ಗೆದ್ದು ಬರುವೆ. ಹೇಗಿದ್ರೂ ಈಗೊಬ್ಬ ಬೀಗರು ಜಗದೀಶ ಶೆಟ್ರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಹೀಗೆ ಅಗ್ದೀ ಸೋಜಾಗಿ, ಅಷ್ಟೇ ಚುರುಕಾಗಿ ತಮ್ಮದೇ ಆದ ದಾವಣಗೇರಿಯ ಜವಾರಿತನದ ಮಾತುಗಳಲ್ಲಿ ಹೇಳಿದ್ದರು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದಕ್ಕೆ ದಾವಣಗೆರೆಯ ಬೀಗರು ಸೋತರು. ಹುಬ್ಬಳ್ಳಿ ಬೀಗರು ಬಿಜೆಪಿಗೆ ಮರಳಿ ಹೋಗಿ ಬೆಳಗಾವಿಯ ಸಂಸದರಾದರು.
ಕಳೆದ ಕೆಲವು ತಿಂಗಳಲ್ಲಿ ಮುಜುಗರದ ಹೇಳಿಕೆಗಳ ಮೂಲಕ ಶಾಮನೂರು ರಾಜ್ಯಮಟ್ಟದಲ್ಲಿ ಸುದ್ದಿಯಾದರು. ಅದೇನೇ ಇರಲಿ ತುಟಿಯಂಚಲೇ ನಕ್ಕು ಉತ್ತರಿಸುವ ಶಾಮನೂರು ಪರಿ, ಅದರ ಸೊಬಗು ಮತ್ತು ಸೊಗಸಿನ ನೇಟಿವಿಟಿ ತುಳುಕುತ್ತದೆ. ಅದು ದಾವಣಗೆರೆಯ ಮಂಡಕ್ಕಿ ಮೆಣಸಿನ್ಕಾಯಿಯ ಖಾರ, ಬೆಣ್ಣೆದೋಸೆಯ ಕಮ್ಮನೆಯ ಪರಿಮಳದಂತೆ. ತೊಂಬತ್ನಾಲ್ಕರ ಹಣ್ಣೆಲೆಯ ಈ ಜೀವನೋತ್ಸಾಹ ಎಂಥವರಿಗೂ ಅದು ಪವಾಡ ಸದೃಶ ಅಲ್ಲದೇ ಇನ್ನೇನು.? ಅವರಿಗೆ ನೂರು ತುಂಬಲಿ. ಅದನು ಕಾಣುವ ಭಾಗ್ಯ ಕಾಂಗ್ರೆಸ್ಸಿಗರಿಗೆ ಇರಲಿ.
- ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು:
ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ನಮ್ಮ ದಾವಣಗೇರಿಯವರು
ಅಕಟಕಟಾ ಎರಡು ಸಾವಿರದಾ ಎಂಟುನೂರು ಸೆಕ್ಸ್ ವಿಡಿಯೋಗಳಂತೆ!?
ಮೂರುಹಳ್ಳದ ಸಂಗಮ, ವಾರಿ, ಬೆಂಚಿ, ಪಾಳುಬಾವಿಗೆ ಕಾಯಕಲ್ಪ ಇತ್ಯಾದಿ...
ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ
ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು
ಜೇನುಕಂಠದ ಹುಡುಗಿ ಹಾಡಿದ `ಹಿತ್ತಲಕ ಕರಿಬ್ಯಾಡ ಮಾವ'
ನಿಗಿ ನಿಗಿ ಕೆಂಡದ ಬಿಸಿಲು ಮತ್ತು ಒಣಗಿದ ಗಂಟಲಲಿ ಕರಿಮಣಿ ಮಾಲೀಕ ನೀನಲ್ಲ
ಕಲಬುರಗಿಯ ಸಾಹಿತ್ಯ ಸಂಭ್ರಮ ಉಕ್ಕಿ ಹರಿದ ವಾತ್ಸಲ್ಯದ ಹೊನಲು
ಶಿವಕಾಂತಿ : ತಾವರೆಯ ಬಾಗಿಲು ತೆರೆದು ತೋರಿದಳು
ದಡ್ಡುಗಟ್ಟಿದ ಪ್ರಭುತ್ವ ಮತ್ತು ಕಲ್ಯಾಣ ಕರ್ನಾಟಕದ ಹಕೀಕತ್ತುಗಳು
ಬೋರಗಿ - ಪುರದಾಳದಲ್ಲಿ ತತ್ವಪದಗಳ ಅನುಸಂಧಾನ
ಜೇವರ್ಗಿಯಲ್ಲಿ ಕನ್ನಡ ತತ್ವಪದ ಸಾಹಿತ್ಯ ಸಮ್ಮೇಳನ
ಕಲ್ಯಾಣ ಕರ್ನಾಟಕದಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಪ್ರತಿಷ್ಠಾನಗಳ ಸ್ಥಾಪನೆ ಆಗಲಿ
ಜೇವರ್ಗಿ ರಾಜಣ್ಣ ಮತ್ತು ವೃತ್ತಿರಂಗ ನಾಟಕಗಳು
ಸಾಧು ಮತ್ತು ಪೂಜೇರಿ ಎಂಬ ಜವಾರಿ ಜೋಡೆತ್ತುಗಳು
ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ
ಮೊಟ್ಟಮೊದಲ ಕಥಾ ಸಂಕಲನ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.