Date: 27-11-2022
Location: ಬೆಂಗಳೂರು
''ತಂಬೂರಿ ಹಿಡಿದು ಪದಹಾಡುತ್ತ ತನ್ನ ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಮಗ ಇಂಜಿನಿಯರ್, ಮಗಳು ಎಂ. ಎ., ಮತ್ತೊಬ್ಬ ಮಗಳು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಇವತ್ತು ಮಕ್ಕಳೆಲ್ಲ ವಿದ್ಯಾವಂತರಾಗಿದ್ದಾರೆಂದರೆ ಈ ವಾದ್ಯಗಳೇ ಕಾರಣ'' ಎನ್ನುತ್ತಾರೆ ತಂಬೂರಿ ರಾಮಯ್ಯ. ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ತಂಬೂರಿ ರಾಮಯ್ಯ ಅವರ ‘ಜೀವನಯಾನ’ದ ಕುರಿತು ಬರೆದಿದ್ದಾರೆ...
ತಂಬೂರಿ ನಮ್ಮ ದೇಶದ ಸಂಗೀತ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಆದಿ ಕಾಲದ ಸಂಗೀತ ವಾದ್ಯಗಳಲ್ಲಿ ಅತ್ಯಂತ ಪ್ರಮುಖ ಸಂಗೀತ ಸಲಕರಣೆಯಾಗಿದೆ. ತಂಬೂರಿಗೆ ಎಂಥವರನ್ನೂ ತಲೆದೂಗಿಸುವ ಸಾಮರ್ಥ್ಯವಿದೆ. ಆದರೆ ಇತ್ತೀಚೆಗೆ ತಂಬೂರಿ ನುಡಿಸುವವರ ಸಂಖ್ಯೆ ತೀರ ಕಡಿಮೆಯಾಗುತ್ತದೆ. ಒಬ್ಬ ವಿರಳ ಮಾಂತ್ರಿಕ ತಂಬೂರಿ ವಾದ್ಯಗಾರರಾದ ರಾಮಯ್ಯನವರಿಗೆ ತಂಬೂರಿ ರಾಮಯ್ಯ ಎಂದೇ ಹೆಸರು ಬಂದಿದೆ. ಇವರು ತಂಬೂರಿ ಹಿಡಿದು ಹೊರಗಡೆ ಹೊರಟರೆ ತಿರಿದುಕೊಂಡು ತಿನ್ನುವವನು ಬಂದ ಭಿಕ್ಷುಕ ಅಂದಿದ್ರಂತೆ, ಈಗ ಅದೇ ತಂಬೂರಿಯಿಂದ ಪದಗಳನ್ನು ಕಟ್ಟಿ ನಾಡಿನಾದ್ಯಂತ ಅಳಿವಿನಂಚಿನಲ್ಲಿರುವ ತತ್ವಪದಗಳು, ಜಾನಪದ ಲವಣಿಪದ, ಜೋಗಿಪದ, ರಾಗಿಬೀಸುವಪದ, ಸೋಬಾನೆಪದ, ಗೀಗಿಪದ, ಪರಿಸರಗೀತೆ, ರೈತಗೀತೆ ರಂಗಗೀತೆ, ಸಾಕ್ಷರಗೀತೆಗಳನ್ನು ಇನ್ನೂ ಇತ್ಯಾದಿ ಹಾಡುಗಳನ್ನು ಹಾಡುತ್ತ, ಪದಗಳನ್ನು ಕಟ್ಟಿ ಜಗತ್ತಿಗೆ ಚೆಲ್ಲುತ್ತಾ ಜನರ ಮನಸ್ಸನ್ನು ಗೆದ್ದಿದ್ದಾರೆ ನಮ್ಮ ತಂಬೂರಿ ರಾಮಯ್ಯ ಅವರು. ಇವರು ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚು ತಂಬೂರಿಗಳನ್ನು ತಯಾರಿ ಮಾಡಿ ನಾಡಿನಾದ್ಯಂತ ಪಸರಿಸಿದ್ದಾರೆ. ಅಂತಸ ಕಲಾವಿದರ ಜೀವನಯಾನ ಇಂದಿನ ನಿಮ್ಮ ಓದಿಗೆ.
ಇವರು ಮೂಲಕಲಾವಿದರು. ತಂದೆ ನಾರಾಯಣಪ್ಪ ತಾಯಿ ಗಾಳ ಹನುಮಕ್ಕ. ಬೆಂಗಳೂರು ನಗರಜಿಲ್ಲೆಯ ಕೆಂಚನಪಾಳ್ಯದಲ್ಲಿ ಒಂದು ಕುಟೀರವನ್ನು ಕಟ್ಟಿಕೊಂಡು ವಾಸವಿದ್ದಾರೆ. 'ಆಗಿನ ಬಡತನದಲ್ಲಿ ನಮ್ಮನ್ನು ಸಾಕಲು ಆಗದೇ ಜೀತಕ್ಕೆ ಹಾಕಿದ್ರು. ಗೌಡರು ವರ್ಷಕ್ಕೆ ಒಂದು ಮೂಟೆ ರಾಗಿ ಕೊಡುತ್ತಿದ್ದರು. ಓದುವ ಆಸೆ ಬಹಳ ಇದ್ದರೂ ಅವಕಾಶ ಇರಲಿಲ್ಲ. ಜೀತದ ಮನೆಯಲ್ಲಿ ಕುರಿ ಮೇಯಿಸುವುದು, ಅವರು ಹೇಳಿದ ಕೆಲಸ ಮಾಡ್ತಿದ್ದೆ. ಅಷ್ಟು ಹೊತ್ತಿಗೆ ರಾತ್ರಿ ಶಾಲೆ ಪ್ರಾರಂಭವಾಗಿತ್ತು. ನಾನು ಜೀತದ ಮನೆಯಲ್ಲಿ ಎಲ್ಲ ಕೆಲಸ ಮುಗಿಸಿ ರಾತ್ರಿ ಶಾಲೆಗೆ ಹೋಗುತ್ತಿದ್ದೆ. ಹಗಲಿನಲ್ಲಿ ದನ ಕರುಗಳನ್ನು ಮೇಯಿಸುತ್ತಾ ರಾತ್ರಿ ಹೇಳಿ ಕೊಟ್ಟಿರುವುದನ್ನು ಮಣ್ಣಿನ ಮೇಲೆ ಬರೆಯುತ್ತಾ ಓದನ್ನು ಗಟ್ಟಿಮಾಡಿಕೊಂಡೆ. ನನಗೀಗ 62 ವರ್ಷ ಪೇಪರ್ ಓದುತ್ತೇನೆ. ನಾಟಕದ ಮೇಷ್ಟ್ರು ಆಗಿ 60-70 ಶಿಷ್ಯರನ್ನು ತಯಾರಿ ಮಾಡಿದ್ದೇನೆ. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಇಂದಿಗೂ ವಿದ್ಯಾರ್ಥಿಯಾಗಿ ಹೋಗಿ ಪಾಠ ಕೇಳುತ್ತೇನೆ' ಎನ್ನುವ ಇವರು ಮರೆಯಾದ ಜಾನಪದ ಮೂಲ ವಾದ್ಯಗಳಾದ ತಂಬೂರಿ, ಏಕಧಾರಿ, ಕಿನ್ನೂರಿ, ಚೌಟಿಕೆ, ಪುಂಗಿ, ತೆಂಗಿನಚಿಪ್ಪಿನ ಪಿಟೀಲು, ಕೊಳಲು, ದಮಡಿ, ಕಂಚಿ, ಗುಮಟೆ, ಗೆಜ್ಜೆ, ಚಿಟಿಕೆ ಹೀಗೆ ಹನ್ನೆರಡಕ್ಕೂ ಹೆಚ್ಚು ವಾದ್ಯಗಳನ್ನು ತಯಾರಿ ಮಾಡುತ್ತಾರೆ.
ತಂಬೂರಿ ಹಿಡಿದು ಪದಹಾಡುತ್ತ ತನ್ನ ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಮಗ ಇಂಜಿನಿಯರ್, ಮಗಳು ಎಂ. ಎ., ಮತ್ತೊಬ್ಬ ಮಗಳು ಶಿಕ್ಷಣಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಇವತ್ತು ಮಕ್ಕಳೆಲ್ಲ ವಿದ್ಯಾವಂತರಾಗಿದ್ದಾರೆಂದರೆ ಈ ವಾದ್ಯಗಳೇ ಕಾರಣ ಎನ್ನುತ್ತಾರೆ. 'ಸೋರೆಬಳ್ಳಿಯೊಂದು ಮನೆ ಮುಂದೆ ಬೆಳೆದಿತ್ತು. ಅದನ್ನು ಹಾಗೆ ಮನೆಮೇಲೆ ಹಬ್ಬಿಸಿದೆ. ಕೆಲವು ದಿನಗಳ ನಂತರ ತಂಬೂರಿಕಾಯಿ ಬಿಡಲು ಪ್ರಾರಂಭವಾಯಿತು. ಅದೊಂದೆ ಬಳ್ಳಿಯಿಂದ ಸುಮಾರು ಅರವತ್ತು ಕಾಯಿ ಬೆಳೆಸಿದೆ. ಹಾಗೇನೇ ಅದರಿಂದ ಪ್ರತೀವರ್ಷ ಬೀಜ ಸಂಗ್ರಹ ಮಾಡಿ ಕರ್ನಾಟಕದ ಸುತ್ತ ಎಲ್ಲಾ ಕಡೆ ಬೀಜ ಕೊಟ್ಟಿದ್ದೇನೆ. ಇದರ ಮುಖಾಂತರ ಜಾನಪದ ಬೇರನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದೇನೆ. ಬೆಂಗಳೂರಿನ ಸುತ್ತಮುತ್ತ ತುಮಕೂರು, ಕನಕಪುರ, ಮೈಸೂರು ಕಡೆ ಹೋಗಿ ಕಾರ್ಯಕ್ರಮಗಳನ್ನು ಮಾಡಿ ಬರುತ್ತೇನೆ. ಶಾಲಾ ಕಾಲೇಜುಗಳಿಗೆ ಹೋಗಿ ಮಕ್ಕಳಿಗೆ ಹನ್ನೆರಡು ವಾದ್ಯಗಳ ಪರಿಚಯ ಮಾಡಿಸಿ ಅವರಿಗೆ ಪದಗಳನ್ನು ಹೇಳಿಕೊಟ್ಟು ತರಬೇತಿ ಕೊಡುತ್ತಾ ಬಂದಿದ್ದೇನೆ. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಮಾಡುತ್ತಿದ್ದ ಭಜನೆ ಕೇಳಲು ಹೋಗುತ್ತಿದ್ದೆ. ಚಿಕ್ಕವಯಸ್ಸಿನಿಂದಲೂ ಹಾರ್ಮೋನಿಯಂ ಕಲಿಯುವುದು ಅಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ಪೌರಾಣಿಕ ನಾಟಕಗಳನ್ನು ಕಲಿತು ಅಲ್ಲಿಂದ ತಂಬೂರಿಗೆ ಬಂದೆ'.
'ಪಾಂಡವರು ವನವಾಸಕ್ಕೆ ಹೋದಾಗ ಕಾಡಿನಲ್ಲಿ ಧ್ಯಾನ ಮಾಡಬೇಕೆಂದುಕೊಂಡಾಗ ಅಲ್ಲಿ ಯಾವ ವಾದ್ಯಗಳು ಇರುವುದಿಲ್ಲ. ಆಗ ಧರ್ಮರಾಯ ಧ್ಯಾನ ಮಾಡಲು ಓಂ ಕಾರ ಧ್ವನಿಗಾಗಿ ಏನು ಮಾಡುವುದು ಎಂದು ಯೋಚಿಸುತ್ತ ಹೊರಟಾಗ ಅವನ ಕಣ್ಣಿಗೆ ಸೊಗಸಾಗಿ ಬೆಳೆದಿದ್ದ ಬಿದಿರಿನಮೆಳೆ ಕಾಣಿಸುತ್ತದೆ. ಬಿದಿರನ್ನು ಕತ್ತರಿಸಿಕೊಂಡು ಅಲ್ಲೇ ಪಕ್ಕದಲ್ಲಿ ಹಬ್ಬಿದ್ದ ಸೋರೆ ಬುರುಡೆಯನ್ನು ಜೊತೆಮಾಡಿ ಜೇನಿನ ಮೇಣವನ್ನು ಸಂಗ್ರಹ ಮಾಡಿ ಅಲ್ಲಿ ಬೆಳೆದ ಕತ್ತಾಳೆ ನಾರಿನಿಂದ ಹಗ್ಗ ಮಾಡಿಕೊಂಡು ಅದರಿಂದ ನಾದ ಬರುವಂತೆ ಮಾಡಿಕೊಳ್ಳುತ್ತಾರೆ. ಸೋರೆ ಬುರುಡೆ, ಬಿದಿರು, ಜೇನಿನ ಮೇಣ, ಕತ್ತಾಳೆಯಿಂದ ಸಿದ್ಧವಾದ ನಾರು ಎಲ್ಲವೂ ಒಟ್ಟುಗೂಡಿ ಒಂದು ವಾದ್ಯ ಸಿದ್ಧವಾಗುತ್ತದೆ. ಆಗ ಅದರಿಂದ ನಾದ ಹೊರಹೊಮ್ಮಿ ಓಂಕಾರ ಧ್ವನಿ ಮೊಳಗುತ್ತದೆ. ಆದ್ದರಿಂದ ಇದಕ್ಕೆ ಜಾನಪದ ತಳಬೇರು ಎನ್ನುವ ಹೆಸರು ಕೂಡ ಬಂದಿದೆ' ಎಂದು ಸೋರೆಕಾಯಿ ತಂಬೂರಿಯಾದ ಬಗೆಯನ್ನು ವಿವರಿಸುತ್ತಾರೆ
'ಸುಮ್ಮನೆ ಶಬ್ಧ ಮಾಡುವ ಹಲವಾರು ವಾದ್ಯಗಳಿರಬಹುದು. ಆದರೆ ಈ ತಂಬೂರಿಯಿಂದ ಹೊರ ಹೊಮ್ಮವ ನಾದ ಎಷ್ಟೇ ಚಿಂತೆ, ದುಃಖ ಎಲ್ಲವನ್ನು ಮರೆಮಾಚಿಸಿ ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ. ಮೂಟೆಗಟ್ಟಲೆ ಕಾಸೆಟ್ ಗಳಲ್ಲಿ ಇಲ್ಲದ ಹಾಡುಗಳನ್ನು ನಾನು ಹಾಡುತ್ತೇನೆ. ಆಗೆಲ್ಲ ಯಾರಾದರೂ ತೀರಿಕೊಂಡರೆ ಅವರ ಮನೆಯಲ್ಲಿ ಇಡೀ ರಾತ್ರಿ ಭಜನಾಪದ, ತತ್ವಪದಗಳನ್ನು ಹಾಡುತ್ತ ಅವರು ಕೊಟ್ಟ ಅಷ್ಟೋ ಇಷ್ಟೋ ಕಾಸಿನಿಂದ ನನ್ನ ಕುಟುಂಬವನ್ನು ಸಲಹುತ್ತ ಬಂದಿದ್ದೇನೆ. ಸುಮಾರು ನಲವತ್ತು ವರ್ಷದಿಂದ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದು, ಇಪ್ಪತ್ತು ವರ್ಷದಿಂದೀಚೆಗೆ ತಂಬೂರಿಕಾಯಿಯನ್ನು ಬೆಳೆದು ಅದರಿಂದ ಸಾವಿರಾರು ತಂಬೂರಿಗಳನ್ನು ತಯಾರಿ ಮಾಡುತ್ತ ಬಂದಿದ್ದೇನೆ. ಈ ತಂಬೂರಿಕಾಯಿ ಜಗತ್ತಿಗೆ ರಾಜ ತರಕಾರಿ. ಎಳೆಸಾಗಿದ್ದಾಗ ತಿಂದರೆ ಇದು ಬಹಳ ರುಚಿ. ಇದು ಹಲವು ಖಾಯಿಲೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆ ಹೆಚ್ಚಿಸುತ್ತದೆ, ರಕ್ತನಾಳಗಳನ್ನು ಶುದ್ದ ಮಾಡುತ್ತದೆ. ಗ್ಯಾಸ್ ಟ್ರಬಲ್, ಚರ್ಮರೋಗ, ಬಿಪಿ, ಶುಗರ್ ಸೇರಿದಂತೆ ಹಲವಾರು ಖಾಯಿಲೆಗಳಿಗೆ ಔಷಧಿಯನ್ನು ಒಳಗೊಂಡಿದೆ. ಈ ಸೋರೆ ಇಡೀ ನಾಡಲ್ಲಿ ಲೋಕ ಕಲ್ಯಾಣಕ್ಕೆ ಹೋಗುತ್ತದೆ. ಒಂದು ತಂಬೂರಿ ಸುಮಾರು ಮೂವತ್ತು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ತಂಬೂರಿ ಕಾಯಿಯನ್ನು ಬೆಳೆದು ಬೆಳೆದು ಸಂಗ್ರಹ ಮಾಡಿಕೊಂಡು ವಾದ್ಯಗಳನ್ನು ತಯಾರಿ ಮಾಡುತ್ತೇನೆ' ಎನ್ನುತ್ತಾರೆ.
ಈಗಿನ ಅರ್ಥರಹಿತ ಆಧುನಿಕ ಸಂಗೀತದ ಭರಾಟೆಯಲ್ಲೂ ನಮ್ಮ ನೆಲದ ಮೂಲ ಸಂಗೀತವನ್ನು ಶಕ್ತಿಮೀರಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ನೋಡಲೂ ಅಪರೂಪವಾಗಿರುವ ಹಳೆಯ ಸಂಗೀತ ವಾದ್ಯಗಳನ್ನು, ಜನಪದ ಸಾಹಿತ್ಯವನ್ನು ಉಳಿಸಬೇಕು, ಮುಂದಿನ ಪೀಳಿಗೆಗೂ ಉಳಿಸಿ ಪರಿಚಯಿಸಬೇಕು ಎನ್ನುವ ಸಂಕಲ್ಪ ಮಾಡಿರುವ ಇವರ ಮನೋ ಅಭಿಲಾಷೆಗೆ ಅಭಿನಂದನೆಗಳನ್ನು ತಿಳಿಸೋಣ.
ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.