ತೇಜಸ್ವಿ ಅವರ ಅಭಿಮಾನಿಗಳು ಓದಲೇಬೇಕಾದ ಪುಸ್ತಕವಿದು


“ಈ ಪುಸ್ತಕ ತೇಜಸ್ವಿ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಮಗೆ ಕಟ್ಟಿಕೊಡುತ್ತದೆ. ಗೊತ್ತಿರುವ ಕೆಲವು ವಿಷಯಗಳನ್ನು ಮತ್ತೆ ಕೆದಕಿ ಮುನ್ನಲೆ ತರುತ್ತವೆ. ಮತ್ತೆ ಮತ್ತೆ ತೇಜಸ್ವಿಯ ಗುಂಗಿನಲ್ಲಿ ನಾವು ಕಳೆದುಹೋಗುವಂತೆ ಮಾಡುತ್ತದೆ,” ಎನ್ನುತ್ತಾರೆ ಸುಶ್ಮಿತಾ ನೇರಳಕಟ್ಟೆ ಅವರು ಎಚ್‌. ಎಸ್‌. ಸತ್ಯನಾರಾಯಣ. ಅವರ "ತೇಜಸ್ವಿ ಕೆಲವು ಪ್ರಸಂಗಗಳು" ಕೃತಿ ಕುರಿತು ಬರೆದ ವಿಮರ್ಶೆ.

ಬಾಲ್ಯದಿಂದಲೂ ಓದುವ ಅಭ್ಯಾಸವಿದ್ದರೂ ಅದು ಕಥೆಗಳಿಗಷ್ಟೇ ಸೀಮಿತವಾಗಿತ್ತು. ಬಾಲ ಮಂಗಳ, ತುಂತುರು ಪುಸ್ತಕಗಳಲ್ಲಿ ಚಿತ್ರಕಥೆ ಬಿಟ್ಟರೇ ಬೇರೆಯದನ್ನು ಓದಿದ್ದು ಕಡಿಮೆಯೇ. ದೊಡ್ಡವಳಾಗುತ್ತಾ ಆಗುತ್ತಾ ಪುಟ್ಟ ಪುಟ್ಟ ಕಥೆಗಳು ನನ್ನನ್ನು ಸೆಳೆಯುತ್ತಿದ್ದವೇ ಹೊರತು ಮಿಕ್ಕವುಗಳ ಹತ್ತಿರ ನಾನೇ ಹೋಗುತ್ತಿರಲಿಲ್ಲ. ಆಮೇಲೆ ಆಮೇಲೆ ನನ್ನ ಓದು ದಿನ ಪತ್ರಿಕೆಗಷ್ಟೇ ಸೀಮಿತವಾಗಿತ್ತು. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಅದೊಂದು ದಿನ ಮಣಿಕಾಂತ್‌ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳನ್ನು ಕೊಂಡು ಓದಿದ್ದೆ. ಅಲ್ಲಿನ ಸಾಧಕರ ಕಥೆಯನ್ನು ಓದಿ ಕಣ್ಣೀರಾಗಿದ್ದೆ. ನಾನೊಬ್ಬಳು ಭಾವುಕ ಜೀವಿ ಅನ್ನುವುದು ಆ ಪುಸ್ತಕದ ಓದು ನನಗೆ ಮನದಟ್ಟು ಮಾಡಿತ್ತು. ಮತ್ತೆ ಓದಿಗೆ ಮರಳಿದ ನಾನು ಆಗಲೂ ಓದಲು ಆರಿಸಿಕೊಂಡಿದ್ದು ಕಥೆ, ಲಲಿತ ಪ್ರಬಂಧಗಳನ್ನೇ.

ಕುಂದಾಪುರದ ಹಳೆ ಬಸ್‌ಸ್ಟಾಂಡ್‌ ಬಳಿ ಇರುವ ಕಮಲಾ ಟೆಕ್ಸ್‌ಟೈಲ್‌ ಎದುರಿನ ಕಟ್ಟೆಯ ಮೇಲೆ ಆಗ ಕೃಷ್ಣಪ್ಪ ಅನ್ನುವ ಪುಸ್ತಕ ವ್ಯಾಪಾರಿಯೊಬ್ಬರು ಕುಳಿತಿರುತ್ತಿದ್ದರು. ನಾನು ಅವರ ಬಳಿ ಪುಸ್ತಕ ಖರೀದಿಸುತ್ತಿದ್ದೆ. ಒಮ್ಮೆ ಪುಸ್ತಕ ಖರೀದಿಸಲು ಹೋದಾಗ ಮತ್ತೆ ಕಥೆ ಪುಸ್ತಕಕ್ಕೆ ಕೋರಿಕೆ ಇಟ್ಟಿದ್ದೆ. ಅವತ್ತು ಅವರ ಬಳಿ ಇದ್ದ ಕಥೆ ಪುಸ್ತಕಗಳು ಅದಾಗಲೇ ನನ್ನ ಬಳಿ ಇತ್ತು. ಹಾಗಾಗಿ ಯಾವುದು ತೆಗೆದುಕೊಳ್ಳಲ್ಲಿ ಅಂತ ನಾನು ಯೋಚಿಸುತ್ತಿರುವಾಗಲೇ ಕೃಷ್ಣಪ್ಪ ನನ್ನ ಕೈಗೆ ಒಂದು ಕಾದಂಬರಿ ಪುಸ್ತಕ ಕೊಟ್ಟು 'ಇದು ಬಹಳ ಚೆನ್ನಾಗಿದೆ ಓದು' ಅಂದಿದ್ದರು. ಖಾಲಿ ಕೈಯಲ್ಲಿ ಹಿಂದಿರುಗಲು ಮನಸ್ಸಿಲ್ಲದೇ ಸರಿ ಎಂದು ಆ ಪುಸ್ತಕ ಕೊಂಡು ತಂದಿದ್ದೆ. ದುಡ್ಡು ಕೊಟ್ಟಿದ್ದೀನಲ್ಲ ಅದಕ್ಕಾದರೂ ಪೂರ್ತಿ ಕಾದಂಬರಿ ಓದಿ ಮುಗಿಸಲೇ ಬೇಕು ಅಂತ ಮನೆಗೆ ಬಂದವಳೇ ಪುಸ್ತಕ ಹಿಡಿದು ಕುಳಿತಿದ್ದೆ. ಆರಂಭದ ಕೆಲವು ಪುಟಗಳು ಒಂದಕ್ಕೊಂದು ಸಂಬಂಧವೇ ಇಲ್ಲದಂತಿದ್ದು ಕಥೆ ಅರ್ಥವೇ ಆಗಿರಲಿಲ್ಲ. ಆದರೂ ಪೂರ್ತಿ ಓದಬೇಕು ಅಂತ ತೀರ್ಮಾನಿಸಿದ್ದೆನಲ್ಲ ಓದು ಮುಂದುವರಿಸಿದೆ. ನಂತರ ಕಥೆಯ ಒಂದೊಂದೆ ಕೊಂಡಿಗಳು ಕೂಡಿಕೊಳ್ಳುತ್ತಾ ಸಾಗಿತ್ತು. ನಾನು ಕಥೆಯೊಳಗೆ ಇಳಿದಿದ್ದೆ. ಊಟ ತಿಂಡಿಯನ್ನು ಮರೆಯುವಷ್ಟು ಆ ಕಾದಂಬರಿ ನನ್ನನ್ನು ಆವರಿಸಿತ್ತು. ಅಂದು ನನ್ನೊಳಗಿನ ಓದುವ ಆಸಕ್ತಿ ಗಂಭೀರ ರೂಪ ಪಡೆದದ್ದು.

ಆವತ್ತು ಕೃಷ್ಣಪ್ಪ ರೆಫ‌ರ್‌ ಮಾಡಿದ ಕಾದಂಬರಿ ಪೂರ್ಣಚಂದ್ರ ತೇಜಸ್ವಿ ಅವರ "ಜುಗಾರಿ ಕ್ರಾಸ್‌'. ತೇಜಸ್ವಿಯ ನನ್ನನ್ನು ಅದೆಷ್ಟು ಆವರಿಸಿಕೊಂಡಿದ್ದರೆಂದರೇ ಅನಂತರ ಕೆಲಕಾಲ ನಾನು ಅವರ ಪುಸ್ತಕಗಳನ್ನು ಒಂದರ ನಂತರ ಒಂದು ಓದಿ, ಓದಿನ ರುಚಿ ಹೆಚ್ಚಿಸಿಕೊಂಡು ಬಳಿಕವೇ ಇತರ ಲೇಖಕರ ಎಡೆಗೆ ಹೊರಳಿದ್ದು.

ತೇಜಸ್ವಿಯವರ ಬರವಣಿಗೆಯ ಮೋಡಿಗೆ ಒಳಗಾದ ಬಹಳಷ್ಟು ಓದುಗರಲ್ಲಿ ನಾನು ಒಬ್ಬಳು. ತೇಜಸ್ವಿ ನಮ್ಮ ಪಾಲಿಗೆ ಲೇಖಕ ಮಾತ್ರ ಅಲ್ಲ, ಅವರು ಒಂದು ರೀತಿ ನಮ್ಮವರೇ ಎನ್ನುವಂತಾದವರು. ಅವರ ಹೆಸರು ಕೇಳಿದರೇ ನಮ್ಮ ಕಿವಿ ನೆಟ್ಟಗಾಗುತ್ತೆ, ಅವರ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಅವರ ಪುಸ್ತಕದ ಮೂಲಕ ಅವರ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದರೂ, ಅವರ ಬಗೆಗಿನ ಕುತೂಹಲ ಇನ್ನೂ ಹೆಚ್ಚಾಗುತ್ತಲೇ ಇದೆ.

ಈ ಕುತೂಹಲವನ್ನು ತಣ್ಣಿಸುವ ಪ್ರಯತ್ನವನ್ನು ತೇಜಸ್ವಿ ಅವರನ್ನು ಹತ್ತಿರದಿಂದ ಕಂಡ ಅನೇಕರು ತಮ್ಮ ಬರಹಗಳ ಮೂಲಕ ಮಾಡಿದ್ದಾರೆ. ಅವರಲ್ಲಿ ಡಾ| ಎಚ್‌.ಎಸ್‌. ಸತ್ಯನಾರಾಯಣ ಅವರು ಒಬ್ಬರು. ಅವರು ಬರೆದ ಅಮೂಲ್ಯ ಪುಸ್ತಕ ಹೊರತಂದಿರುವ ತೇಜಸ್ವಿ ಕೆಲವು ಪ್ರಸಂಗಗಳು ತೇಜಸ್ವಿ ಅವರ ಅಭಿಮಾನಿಗಳು ಓದಲೇಬೇಕಾದ ಪುಸ್ತಕ. ಈ ಪುಸ್ತಕ ತೇಜಸ್ವಿ ಅವರ ಬದುಕಿನ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಮಗೆ ಕಟ್ಟಿಕೊಡುತ್ತದೆ. ಗೊತ್ತಿರುವ ಕೆಲವು ವಿಷಯಗಳನ್ನು ಮತ್ತೆ ಕೆದಕಿ ಮುನ್ನಲೆ ತರುತ್ತವೆ. ಮತ್ತೆ ಮತ್ತೆ ತೇಜಸ್ವಿಯ ಗುಂಗಿನಲ್ಲಿ ನಾವು ಕಳೆದುಹೋಗುವಂತೆ ಮಾಡುತ್ತದೆ.

ಇವತ್ತು ನಮ್ಮ ಜೊತೆ ತೇಜಸ್ವಿ ಇಲ್ಲ. ಮತ್ತೆ ತೇಜಸ್ವಿಯನ್ನು ನನಗೆ ಪರಿಚಯಿಸಿದ ಕೃಷ್ಣಪ್ಪ ಅವರು ಇಲ್ಲ. ಆದರೆ ಅವರಿಬ್ಬರ ನೆನಪು ಎಂದೂ ಅಳಿಯದೇ ನನ್ನೊಳಗೆ ಸದಾ ಹಸಿರಾಗಿರುತ್ತೆ.

MORE FEATURES

ಅಭಿನಯವನ್ನು ಯಾರಿಂದಲೂ ಕಲಿಸಲಾಗುವುದಿಲ್ಲ

26-03-2025 ಬೆಂಗಳೂರು

“ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ...

ಕನ್ನಡ ಚಿತ್ರರಂಗದ ಕುರಿತು 150 ಆಸಕ್ತಿಕರ ಮಾಹಿತಿಗಳಿವೆ

26-03-2025 ಬೆಂಗಳೂರು

“ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್...

ಕಾದಂಬರಿಯಲ್ಲಿ ಬರುವ ಸಾಮ್ರಾಜ್ಯ, ರಾಜ, ಮಂತ್ರಿಯೆಲ್ಲ ಇತಿಹಾಸದಲ್ಲಿ ಇಲ್ಲ

26-03-2025 ಬೆಂಗಳೂರು

“ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆ...