ಕನ್ನಡ ಚಿತ್ರರಂಗದ ಕುರಿತು 150 ಆಸಕ್ತಿಕರ ಮಾಹಿತಿಗಳಿವೆ


“ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್ಣವಲ್ಲ. ಇದರಲ್ಲಿ ಹಲವು ವಿಷಯಗಳು ಬಿಟ್ಟು ಹೋಗಿರಬಹುದು,” ಎನ್ನುತ್ತಾರೆ ಚೇತನ್ ನಾಡಿಗೇರ್. ಅವರು ತಮ್ಮ “ಚಂದನವನದೊಳ್‌” ಕೃತಿಗೆ ಬರೆದ ಲೇಖಕರ ಮಾತು.

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟವಾದ ಸ್ಥಾನವಿದೆ. ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ, ಅತೀ ಹೆಚ್ಚು ಸಾಹಿತ್ಯಾಧಾರಿತ. ಐತಿಹಾಸಿಕ, ಮಕ್ಕಳ, ಹೊಸ ಅಲೆಯ, ಹಲವು ಉಪಭಾಷೆಗಳಿರುವ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿರುವ ಚಿತ್ರರಂಗವೆಂದರೆ ಅದು ಕನ್ನಡ ಚಿತ್ರರಂಗ ಮಾತ್ರ.

ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಬೇರೆ ಭಾಷೆಗಳ ಚಿತ್ರರಂಗಗಳಿಗೆ ಹಾಲಿವುಡ್ ಮಾದರಿಯಲ್ಲಿ ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಂದು ಗುರುತಿಸಲಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಅಚ್ಚಕನ್ನಡದ 'ಚಂದನವನ' ಎಂಬ ಹೆಸರಿದೆ. 90ಕ್ಕೂ ಹೆಚ್ಚು ವರ್ಷ ಇತಿಹಾಸವಿರುವ ಚಂದನವನದಲ್ಲಿ ಸುಮಾರು ಐದು ಸಾವಿರ ಚಿತ್ರಗಳು, ಹಲವು ದಾಖಲೆಗಳು, ವೈಶಿಷ್ಟ್ಯಗಳು, ಹೆಗ್ಗಳಿಕೆಗಳು, ಸಾಧನೆಗಳಿವೆ. ಅದರ ಕುರಿತು ಹೇಳುವ ಪ್ರಯತ್ನವೇ ಈ 'ಚಂದನವನದೊಳ್'.

ಇಲ್ಲಿರುವ ವಿಷಯಗಳು ಹೊಸದೇನಲ್ಲ. ಈ ಕುರಿತು ನೀವು ಓದಿರಬಹುದು, ಕೇಳಿರಬಹುದು ಅಥವಾ ನೋಡಿರಬಹುದು. ಕೆಲವು ವಿಷಯಗಳು ನಡೆದ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾಗಿವೆ. ಇನ್ನೂ ಕೆಲವು ವಿಷಯಗಳು ಬೆಳಕಿಗೆ ಬಾರದೆ ಮಾಯವಾಗಿವೆ. ಇದೆಲ್ಲದರ ಕುರಿತು ಇಷ್ಟು ವರ್ಷ ಬೇರೆಬೇರೆ ಪತ್ರಿಕೆ, ನಿಯತಕಾಲಿಕೆಗಳು ಮತ್ತು ವೆಬ್‌ಸೈಟ್‌ಗಳಿಗೆ ಬರೆದ ಅನುಭವದ ಹಿನ್ನೆಲೆಯಲ್ಲಿ ಈ ಪುಸ್ತಕ ಬರೆದಿದ್ದೇನೆ.

ಈ ಪುಸ್ತಕದಲ್ಲಿ 38 ಅಧ್ಯಾಯಗಳಿದ್ದು, ಈ ಪೈಕಿ 37 ಅಧ್ಯಾಯಗಳು ವಿಷಯಾಧಾರಿತವಾಗಿವೆ. ಕೊನೆಯ ಅಧ್ಯಾಯದಲ್ಲಿ ಕನ್ನಡ ಚಿತ್ರರಂಗದ ಕುರಿತು 150 ಆಸಕ್ತಿಕರ ಮಾಹಿತಿಗಳಿವೆ. ಈ ಅಧ್ಯಾಯಗಳ ಪೈಕಿ ಕೆಲವು ವಿಷಯಗಳ ಬಗ್ಗೆ ಪ್ರತ್ಯೇಕವಾಗಿ ಇಡೀ ಪುಸ್ತಕವನ್ನೇ ಮಾಡುವಷ್ಟು ಆ ವಿಷಯಗಳು ಬೃಹತ್ ಆಗಿವೆ. ಆದರೆ, ಈ ಪುಸ್ತಕದ ಮುಖ್ಯ ಉದ್ದೇಶ ಕನ್ನಡ ಚಿತ್ರರಂಗದ ಹೆಗ್ಗಳಿಕೆಗಳ ಬಗ್ಗೆ ಹೇಳುವುದಾದ್ದರಿಂದ, ವಿಶ್ಲೇಷಣೆ ಮಾಡದೆ, ಮಾಹಿತಿ ರೂಪದಲ್ಲಿ ಮಾತ್ರ ನೀಡಲಾಗಿದೆ.

ಹಲವರ ಸಹಕಾರ ಮತ್ತು ಪ್ರೋತ್ಸಹವಿಲ್ಲದ ಈ ಪುಸ್ತಕ ಸಾಧ್ಯವಾಗುತ್ತಿರಲಿಲ್ಲ. ಪುಸ್ತಕ ಓದಿ ಸೂಕ್ತ ಮಾರ್ಗದರ್ಶನ ನೀಡಿದ ಹಿರಿಯ ಪತ್ರಕರ್ತರಾದ ಬಿ.ಎನ್. ಸುಬ್ರಹ್ಮಣ್ಯ ಮತ್ತು ಮುರಳೀಧರ ಖಜಾನೆ ಅವರಿಗೆ ಚಿರಋಣಿ. ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ ಮತ್ತು ಸಲಹೆ ಕೊಡುವುದರ ಜೊತೆಗೆ ಪ್ರೋತ್ಸಾಹಿಸಿದ ಹಿರಿಯ ಪರ್ತಕರ್ತರಾದ ಕೆ.ಎಸ್. ವಾಸು, ಎನ್.ಎಸ್. ಶ್ರೀಧರಮೂರ್ತಿ ಮತ್ತು ವಿಕಾಸ್ ನೇಗಿಲೋಣಿ ಅವರಿಗೆ ಧನ್ಯವಾದಗಳು. ಈ ಕೃತಿಗೆ ನನ್ನ ಸಂಗ್ರಹದಲ್ಲಿದ್ದ ಚಿತ್ರಗಳನ್ನು (ಕೃಪೆ: ಡಿ.ಸಿ. ನಾಗೇಶ್ ಮತ್ತು ಮನು) ಬಳಸಿಕೊಂಡಿದ್ದೇನೆ. ಪ್ರೂಫ್ ಓದಿ ತಪ್ಪುಗಳನ್ನು ತಿದ್ದಿಕೊಟ್ಟ ಅಮ್ಮನಿಗೆ ಈ ಪುಸ್ತಕವನ್ನು ಹೊರತರುತ್ತಿರುವುದಕ್ಕೆ ವೀರಲೋಕದ ವೀರಕಪುತ್ರ ಶ್ರೀನಿವಾಸ ಅವರಿಗೆ ಮತ್ತು ಕಡಿಮೆ ಸಮಯದಲ್ಲಿ ಪುಸ್ತಕವನ್ನು ಚಂದವಾಗಿ ರೂಪಿಸಿಕೊಟ್ಟ ವಿಜಯ ವಿಕ್ರಮ್ ಅಡಿಗ ಅವರಿಗೆ ವಿಶೇಷ ಕೃತಜ್ಞತೆಗಳು.

ಈ ಪುಸ್ತಕದಲ್ಲಿ ಯಾವುದು ಮಾಹಿತಿಯೋ, ಹೆಗ್ಗಳಿಕೆಯೋ, ದಾಖಲೆಯೋ, ವೈಶಿಷ್ಟ್ಯವೋ ಅದು ಓದುಗರಿಗೆ ಬಿಟ್ಟಿದ್ದು. ಈ ಪುಸ್ತಕದಲ್ಲಿ ಸಾಕಷ್ಟು ವಿಷಯಗಳನ್ನು ಕ್ರೋಢೀಕರಿಸುವ ಪ್ರಯತ್ನ ಮಾಡಲಾಗಿದೆ. ಹಾಗಂತ ಇದೇ ಅಂತಿಮ ಅಥವಾ ಪರಿಪೂರ್ಣವಲ್ಲ. ಇದರಲ್ಲಿ ಹಲವು ವಿಷಯಗಳು ಬಿಟ್ಟು ಹೋಗಿರಬಹುದು. ಅವೆಲ್ಲವೂ ಕಣ್ಣಪ್ಪಿನಿಂದ ಅಥವಾ ಮರೆವಿನಿಂದ ಆಗಿದ್ದೇ ಹೊರತು, ಯಾವುದೂ ಉದ್ದೇಶಪೂರ್ವಕವಲ್ಲ. ಯಾವುದೇ ವಿಷಯವನ್ನೂ ದುರದ್ದೇಶಪೂರ್ವಕವಾಗಿ ಇಲ್ಲಿ ಬಿಟ್ಟಿಲ್ಲ.

ಈ ಪುಸ್ತಕ ಪುನರ್ ಮುದ್ರಣವಾಗುವಾಗುವ ಸಂದರ್ಭದಲ್ಲಿ ಬಿಟ್ಟು ಹೋದ ವಿಷಯಗಳು ಗಮನಕ್ಕೆ ಬಂದರೆ, ಆಗ ಖಂಡಿತವಾಗಿಯೂ ಸೇರಿಸಿಕೊಳ್ಳಲಾಗುವುದು. ಪುಸ್ತಕವನ್ನು ಓದಿ ಕನ್ನಡಿಗರಿಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಮೂಡಿದರೆ, ಪ್ರಯತ್ನ ಸಾರ್ಥಕ.

MORE FEATURES

ಇದು ಹಳ್ಳಿ ಮತ್ತು ಪಟ್ಟಣದ ಸಮಾಜವನ್ನು ಕಟ್ಟಿಕೊಡುತ್ತದೆ

29-03-2025 ಬೆಂಗಳೂರು

“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...

ನೆನಪುಗಳಿಗೆ ಬಣ್ಣ ತುಂಬುವ ಇಸ್ಕೂಲು

29-03-2025 ಬೆಂಗಳೂರು

“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...

ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ

29-03-2025 ಬೆಂಗಳೂರು

“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...