“ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆಗಳೆಲ್ಲ ಏಳೆಂಟು ದಶಕಗಳ ಹಿಂದಿನ ತುಳುನಾಡಿನ ಗ್ರಾಮೀಣ ಸ್ಥಿತಿಗಳಾಗಿವೆ,” ಎನ್ನುತ್ತಾರೆ ಅರವಿಂದ ಚೊಕ್ಕಾಡಿ. ಅವರು ತ್ವಯ್ಯಿಬ್ ಸುರಿಬೈಲ್ ಅವರ “ಸಾಮ್ರಾಟ” ಕೃತಿ ಕುರಿತು ಬರೆದ ವಿಮರ್ಶೆ.
ಕೆಲವು ದಿನಗಳ ಹಿಂದೆ ಆಳ್ವಾಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಸದಾಕತ್ ಅವರು ತ್ವಯ್ಯಿಬ್ ಸುರಿಬೈಲ್ ಎಂಬ 20 ವರ್ಷ ವಯಸ್ಸಿನ ಹುಡುಗ ಬರೆದ 'ಸಾಮ್ರಾಟ' ಕಾದಂಬರಿಯನ್ನು ಕಳಿಸಿಕೊಟ್ಟಿದ್ದರು. ಸಾಮಾನ್ಯವಾಗಿ ಪುಸ್ತಕಗಳಿಗೆ ಪ್ರತಿಕ್ರಿಯಿಸುವುದನ್ನು ನಾನು ನಿಲ್ಲಿಸಿದ್ದೇನೆ. ಏಕೆಂದರೆ ಸಾಮಾನ್ಯವಾಗಿ ಗ್ರಂಥ ಕರ್ತರು ಕೋಮು ಸಾಮರಸ್ಯದವರೊ, ಜಾತ್ಯತೀತತೆಯವರೊ, ಧರ್ಮ ರಕ್ಷಕರೊ ಏನೋ ಆಗಿ ಅವರ ಬರೆಹದಲ್ಲಿ ಯಾವುದೊ ಒಂದು ರಾಜಕೀಯ ಅಜೆಂಡಾದ ಪ್ರತಿಪಾದನೆ ಮಾಡುವವರಾಗಿರುತ್ತಾರೆ. ಆಗ ಅವರು ಕೇವಲ ಲೇಖಕರಾಗಿರುವುದಿಲ್ಲ. ಅವರ ಹಿಂದೆ ಪರೋಕ್ಷವಾಗಿ ಅಗಾಧ ಕಾರ್ಯಕರ್ತರ ಬೆಂಬಲ ಇರುತ್ತದೆ. ವಿಮರ್ಶಕ ಅವರ ಅಜೆಂಡಾಕ್ಕೆ ಬೇಕಾದ ಹಾಗೆಯೇ ಬರೆಯದಿದ್ದರೆ ಸಾಹಿತ್ಯದ ಒಂದು ಪುಸ್ತಕವನ್ನೂ ಓದದವನು ನನ್ನನ್ನು ಅವನ ಸೈನ್ಯಕ್ಕೋ ಅವನ ಎದುರಾಳಿಯ ಸೈನ್ಯಕ್ಕೊ ಹಂಚಿಕೆ ಮಾಡಲಿರುತ್ತಾನೆ. ಅದೇ ರೀತಿ ಪುಸ್ತಕ ಕೊಟ್ಟವರಿಗೂ ಅವರ ಸೃಜನಶೀಲ ಸಾಮರ್ಥ್ಯದ ವೃದ್ಧಿಗೆ ಸಲಹೆಗಳು ಬೇಕಿರುವುದಿಲ್ಲ. ಅವರ ಅಜೆಂಡಾಕ್ಕೆ ಮೆಚ್ಚುಗೆ ಪಡೆದು ಅವರ ಟ್ರೂಪಲ್ಲಿ ನಾಯಕನಾಗುವ ಹುಮ್ಮಸ್ಸೇ ಜಾಸ್ತಿ ಇರುತ್ತದೆ. ನಾನು ಬದುಕಿರುವ ತನಕ ನನ್ನನ್ನು 'ಪಾಲು' ಮಾಡಿಕೊಳ್ಳಲು ಬಿಡುವುದಿಲ್ಲ. ಆದ್ದರಿಂದ ಸುಮ್ಮನೇ ರಗಳೆ ಯಾಕೆ ಎಂದು ಬಂದ ಪುಸ್ತಕಗಳನ್ನು ಓದಿದರೂ ಪ್ರತಿಕ್ರಿಯೆ ಕೊಡಲಿಕ್ಕೆ ಇಲ್ಲ.
ಆದರೆ "ಸಾಮ್ರಾಟ' ಪುಸ್ತಕದಲ್ಲಿ ರಾಜಕೀಯ ಅಜೆಂಡಾಗಳೆಲ್ಲ ಇಲ್ಲ. ಸಾಲದ್ದಕ್ಕೆ ಕಾದಂಬರಿ. ಆದ್ದರಿಂದ ಬರೆದ ಕೂಡಲೇ ಯಾವುದಾದರೊಂದು ಅಕ್ಷೋಹಿಣಿ ಸೇನೆಯವರು ಬಂದು ನೀನು ಎಡಪಂಥವೊ ಬಲಪಂಥವೊ, ಬ್ರಾಹ್ಮಣನೊ ಅಬ್ರಾಹ್ಮಣನೊ ಎಂದು ಕಾಲರ್ ಪಟ್ಟಿ ಹಿಡಿಯಲಿಕ್ಕಿಲ್ಲ ಎಂಬ ಧೈರ್ಯದಲ್ಲಿ ಬರೆಯುತ್ತಿದ್ದೇನೆ.
'ಸಾಮ್ರಾಟ' ಹೆಸರೇ ಸೂಚಿಸುವಂತೆ ರಾಜಪ್ರಭುತ್ವದ ಕಾಲಮಾನದ ಸನ್ನಿವೇಶವನ್ನು ಕಲ್ಪಿಸಿಕೊಂಡು ಬರೆದ ಕಾದಂಬರಿ. ಆದರೆ ಇದು ಇತಿಹಾಸದಲ್ಲಿ ಇದ್ದ ಒಬ್ಬ ರಾಜನನ್ನು ಹಿಡಿದುಕೊಂಡು ಇತಿಹಾಸದಲ್ಲಿ ಇಲ್ಲದ ಒಗ್ಗರಣೆಗಳನ್ನೆಲ್ಲ ಹಾಕಿ ಕಾದಂಬರಿಯೇ ಇತಿಹಾಸ ಎನ್ನುವಂತೆ ಮಾಡುವ ಕಾದಂಬರಿಯಲ್ಲ. ಪ್ಯೂರ್ಲಿ ಕಾಲ್ಪನಿಕ ಕಾದಂಬರಿ. ಈ ಕಾದಂಬರಿಯಲ್ಲಿ ಬರುವ ಸಾಮ್ರಾಜ್ಯ, ರಾಜ, ಮಂತ್ರಿಯೆಲ್ಲ ಇತಿಹಾಸದಲ್ಲಿ ಇಲ್ಲ. ಆದರೆ ಐತಿಹಾಸಿಕ ಸನ್ನಿವೇಶದ ಕಲ್ಪನೆ ಇದೆ. ಹೆಚ್ಚು ಕಡಿಮೆ ಅದು ಗುಪ್ತ ಸಾಮ್ರಾಜ್ಯದ ಪತನದ ನಂತರ ಅಥವಾ ಮೊಘಲ್ ಸಾಮ್ರಾಜ್ಯದ ಪತನದ ನಂತರ ಹುಟ್ಟಿಕೊಂಡ ಪುಡಿ ರಾಜರುಗಳ ಕಾಲದ ಪರಸ್ಪರ ಕಚ್ಚಾಟ, ದೊಡ್ಡ ಉದ್ದೇಶವೇನೂ ಇಲ್ಲದ ಅನೈತಿಕ ಯುದ್ಧಗಳ ಕಾಲದಂಥ ಸನ್ನಿವೇಶವನ್ನು ಹೋಲುತ್ತದೆ. ಬಹುಶಃ ಈ ಕಾದಂಬರಿಯ ಅತ್ಯಂತ ಬೆಸ್ಟ್ ಪಾರ್ಟ್ ಎಂದರೆ ಯಾವ ಸಾಮ್ರಾಜ್ಯದ ಇತಿಹಾಸ ಅಲ್ಲದೆಯೂ, ಎಲ್ಲ ಸಾಮ್ರಾಜ್ಯಗಳ ಅವನತಿಗೆ ನಿಜವಾದ ಕಾರಣವಾದ ಅರಮನೆಯೊಳಗಿನ ಪಿತೂರಿ ಮತ್ತು ಅನೈತಿಕತೆಯನ್ನು ಪವರ್ಫುಲ್ ಆಗಿ ಕಂಡುಕೊಂಡಿರುವುದು. ಯಾವ ರಾಜರದ್ದೂ ಅಲ್ಲದೆ ಎಲ್ಲ ರಾಜರದ್ದೂ ಆಗಬಲ್ಲ ಈ ಭೂಮಿಕೆಯೇ ಕಾದಂಬರಿಯ ತಿರುಳಾಗಿದೆ.
ಎರಡನೆಯ ಬೆಸ್ಟ್ ಪಾರ್ಟ್ ಎಂದು ಕರೆಯಬಹುದಾದದ್ದು ಎರಡು ವಿಭಿನ್ನ ಕಥೆಗಳ ಸಂಯೋಜನೆಯ ತಂತ್ರಗಾರಿಕೆ. ಈ ಎರಡು ವಿಭಿನ್ನ ಕಥಾ ಹಂದರಗಳು ಒಂದು ರಾಜ ಕುಟುಂಬದ್ದಾದರೆ, ಮತ್ತೊಂದು ಮಲತಾಯಿಯಿಂದ ದೌರ್ಜನ್ಯಕ್ಕೊಳಗಾದ ಯುವತಿಯ ಕಥೆ;ಅರ್ಥಾತ್ ಪ್ರಜಾ ಕುಟುಂಬದ ಕಥೆ. ಈ ಪ್ರಜಾ ಕುಟುಂಬದ ಕಥೆಯನ್ನು ಪ್ರಾರಂಭದಲ್ಲಿ ಓದುವಾಗ ಈ ಕಥೆ ಇಲ್ಲಿಗೇಕೆ ಬಂತು,ಮೂಲ ಕಥೆಗೂ ಇದಕ್ಕೂ ಏನು ಸಂಬಂಧ? ಎನ್ನುವುದೇ ಹೊಳೆಯುವುದಿಲ್ಲ. ಕಥೆ ಬೆಳೆಯುತ್ತಾ ಹೋದ ಹಾಗೆ, ರಾಜಕುಮಾರನ ಪೋಷಣೆಯ ಜವಾಬ್ದಾರಿ ಹೊರುವುದೇ ಮಲತಾಯಿಯಿಂದ ತೊಂದರೆಗೊಳಗಾದ ಯುವತಿ. ರಾಜನ ಜೀವನ ಶೈಲಿಯೂ ಪ್ರಜೆಯ ಜೀವನ ಶೈಲಿಯೂ ಸಮನ್ವಯಗೊಳ್ಳುವುದು ಈ ಬಗೆಯ ಸಾಹಿತ್ಯದಲ್ಲಿ ವಿಶೇಷವಾದ ಅಂಶವೆಂದೇ ಪರಿಗಣಿಸಲು ಅರ್ಹವಾಗಿದೆ. ಅದಕ್ಕೆ ತಕ್ಕ ಹಾಗೆ ರಾಜಕುಟುಂಬದ ಆಗು ಹೋಗುಗಳು ಕೊನೆಯಲ್ಲಿ ಜನರ ಪಾಲುದಾರಿಕೆಯ ಜನತಾ ಬಂಡಾಯವಾಗಿ ಪರಿವರ್ತನೆಯಾಗಿ ರಾಜನಿಗೆ ಆತನ ರಾಜ್ಯವನ್ನು ಮತ್ತೆ ಕೊಡಿಸುತ್ತದೆ. ಈ ನಿಟ್ಟಿನಲ್ಲಿ ಇದನ್ನು ರಾಜಪ್ರಭುತ್ವವು ಡೆಮಾಕ್ರಟಿಕ್ ಶೈಲಿಗೆ ಒಗ್ಗಿಕೊಳ್ಳುವ ಕಾಲಮಾನದ ಕಥೆಯ ನೆಲೆಯಲ್ಲಿಯೂ ನೋಡಬೇಕಾಗುತ್ತದೆ. ಈ ಬಗೆಯ ವಿದ್ಯಮಾನಗಳು 16 ನೆಯ ಶತಮಾನದಲ್ಲಿ ಬ್ರಿಟನ್‌ನಲ್ಲಿ ನಡೆದಿದ್ದವು. ರಾಜಕೀಯ ಜೀವನ ಶೈಲಿ, ಸಾಮಾಜಿಕ ಜೀವನಶೈಲಿಗಳೆರಡರ ಮಿಶ್ರಣ ಓದಿನ ಹಿತ ಅನುಭೂತಿಯನ್ನು ಸೃಷ್ಟಿಸುತ್ತದೆ.
ಕಾದಂಬರಿಯಲ್ಲಿ ಬರುವ ಕಾಡಿನ ವಿವರಣೆಗಳು, ಮೂಢನಂಬಿಕೆಗಳು, ನಾಟಿ ವೈದ್ಯಕೀಯ, ಪ್ರಾಣಿಗಳ ದಾಳಿ, ಪಿಶಾಚಿಯ ಕಲ್ಪನೆಗಳೆಲ್ಲ ಏಳೆಂಟು ದಶಕಗಳ ಹಿಂದಿನ ತುಳುನಾಡಿನ ಗ್ರಾಮೀಣ ಸ್ಥಿತಿಗಳಾಗಿವೆ. ರಾಜರ ರಾಜಕೀಯ, ಜನರ ಬದುಕು, ಕೃಷಿ, ಕಾಡು ಇವೆಲ್ಲದರ ಜೊತೆಗೆ ರಾಜರುಗಳ 'ತೆವಲಿನ ಪ್ರೀತಿ' ಗಿಂತ ಭಿನ್ನವಾದ ಪ್ರೇಮ ಕಥೆಯೊಂದು ಕಾದಂಬರಿಯಲ್ಲಿ ಸೇರಿಕೊಂಡು ಮನೋಜ್ಞವಾಗಿದೆ.
ಆದರೆ ದುಷ್ಟರಲ್ಲಿ ಒಬ್ಬ ಹಿಂದೂ ಒಬ್ಬ ಮುಸ್ಲಿಂ ಇರಬೇಕು, ಒಳ್ಳೆಯವರಲ್ಲಿ ಒಬ್ಬ ಹಿಂದೂ ಒಬ್ಬ ಮುಸ್ಲಿಂ ಇರಬೇಕು, ಹಾಗೆಯೇ ಮಹಿಳೆಯರ ಪಾಲುದಾರಿಕೆಯಲ್ಲೂ ಹಿಂದೂ ಮಹಿಳೆಯೂ ಇರಬೇಕು, ಮುಸ್ಲಿಂ ಮಹಿಳೆಯೂ ಇರಬೇಕು, ಅವಿವಾಹಿತ ಅಥವಾ ಅವಿವಾಹಿತೆಯರಿದ್ದಾಗ ಇವನಿಗೆ ಅವಳನ್ನು, ಅವಳಿಗೆ ಆಚೆಯವನನ್ನು ಮದುವೆಯಾಗಿ ಪರ್ಪೆಕ್ಟಾಗಿ ಸೆಟ್ಲ್ ಆಗಬೇಕು ಎನ್ನುವ ಕಮರ್ಷಿಯಲ್ ಸಿನಿಮಾ ಶೈಲಿಯೂ ಕಾದಂಬರಿಯಲ್ಲಿದೆ. ಓದಲು ಖುಷಿ ಆಗಬಹುದು. ಆದರೆ ಇದು ಸೃಜನಶೀಲ ಸಾಹಿತ್ಯದ ಮಿತಿಯೂ ಹೌದು. ಕಾದಂಬರಿ ಉತ್ಸಾಹ ಮತ್ತು ಉದ್ವೇಗದಿಂದ ಓದಿಸಿಕೊಂಡು ಹೋಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ಬರೆವಣಿಗೆ ಕೊಂಚ ಅವಸರದ್ದಾಗಿ ಕಾಣುತ್ತದೆ. ಉದಾಹರಣೆಗೆ ಕಥಾ ಸಂವಿಧಾನ ಐತಿಹಾಸಿಕವಿದೆ. ಆದರೆ ಗುರು ಕುಲದ ಪದ್ಧತಿಯಲ್ಲಿ ಆಧುನಿಕ ಶಿಕ್ಷಣ ಪದ್ಧತಿಯ ಬೇಸಿಗೆ ರಜೆಗಳು ಸೇರಿಕೊಂಡಿವೆ. ಸೋತ ರಾಜ್ಯವನ್ನು ಮರಳಿ ಪಡೆಯಲಿಕ್ಕೆ ಕಾದಂಬರಿಯಲ್ಲಿ ಹೇಳಿದಷ್ಟು ವಿವರಗಳು ಸಾಕಾಗುವುದಿಲ್ಲ. ಇನ್ನಷ್ಟು ಸಿದ್ಧತೆಗಳ ವಿವರಗಳು ಬೇಕು. ಅಂತಹ ವಿವರಗಳನ್ನು ಕಾದಂಬರಿಗಾರ ತಾನೇ ಮುಂದೆ ನಿಂತು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಡುತ್ತಾರೆ. ಕಾದಂಬರಿಯಲ್ಲಿ ಪಾತ್ರಗಳು ಸ್ವಯಂ ಶಕ್ತಿಯಿಂದ ಸಹಜವಾಗಿ ಚಲಿಸಬೇಕು, ಕಾದಂಬರಿಗಾರನ ಶಕ್ತಿಯಿಂದ ಚಲಿಸುವಂತಾಗಬಾರದು.
ಈ ರೀತಿಯ ಸಣ್ಣ ಪುಟ್ಟ ಮಿತಿಗಳಿದ್ದಾಗಲೂ ತ್ವಯೀಬ್ ತಾನೊಬ್ಬ ಸಮರ್ಥ ಲೇಖಕನಾಗಬಲ್ಲೆ ಎಂಬ ಭರವಸೆಯನ್ನು ಮೊದಲ ಕೃತಿಯಲ್ಲೇ ಸಾಬೀತುಪಡಿಸಿದ್ದಾರೆ. ತ್ವಯ್ಯಿಬ್ ಅವರಲ್ಲಿ ಅಗಾಧ ಕಲ್ಪಕ ಶಕ್ತಿ ಇದೆ. ಪ್ರತಿಭೆ ಇದೆ. ಆ ಪ್ರತಿಭೆ ಬೆಳೆದು ಬೆಳಕಾಗಬಲ್ಲುದು ಎಂಬುದಕ್ಕೂ ಈ ಕೃತಿಯಲ್ಲೇ ಸಾಕ್ಷಿ ಇದೆ. ಹಾಗಾಲಿ ಎಂದು ಹಾರೈಸಿ ಅವರ ಭವಿಷ್ಯದ ರಚನೆಗಳಿಗೆ ಪ್ರೀತಿಯ ಸುಪ್ರಭಾತವನ್ನು ಕೋರುತ್ತೇನೆ.
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.