“ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ಏಕಾಂತತೆಯಲ್ಲಿ ಕೂಡ ಅವನ ಬದುಕಿರುತ್ತದೆ,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ಪಿ. ಲಂಕೇಶ್ ಅವರ “ಹುಳಿಮಾವಿನ ಮರ” ಕೃತಿ ಕುರಿತು ಬರೆದ ವಿಮರ್ಶೆ.
ಈ ಪುಸ್ತಕವನ್ನು ಸುಮಾರು ಆರು ವರ್ಷಗಳ ಹಿಂದೆ ಖರೀದಿಸಿದ್ದು. ಇಲ್ಲಿಯವರೆಗೆ ಓದಲು ಆಗಿರಲಿಲ್ಲವೆಂದರೇ ಅದಕ್ಕೆ ಕಾರಣ ನನ್ನ ಆಲಸ್ಯವೂ ಮತ್ತು ಲಂಕೇಶ್ ಅವರ ಬಗೆಗಿದ್ದ ತಾತ್ಸಾರವೂ ಕಾರಣವಿರಬಹುದು. ಆಲಸ್ಯಕ್ಕೆ ಕಾರಣ ಹಲವು ಆಯ್ಕೆಗಳ ನಡುವಿನ ಗೊಂದಲ ಮತ್ತು ಗೊಂದಲದಿಂದ ಉಂಟಾದ ತಾತ್ಸಾರ. ಹಾಗೆ ನೋಡಿದರೇ ಓದದೇ ಉಳಿದು ಹೋಗಿ ನನ್ನ ಕಣ್ಣೆದುರಿನ ಕಪಾಟಿನಲ್ಲಿ ಕುಳಿತ ಹಲವು ಪುಸ್ತಕಗಳಿಗೂ ಹೀಗೆಯೇ ಅನೇಕ ಕಾರಣಗಳನ್ನು, ಸಬೂಬನ್ನು ಕೊಡಬಲ್ಲೆ. ಇರಲಿ. ನನಗೆ ಓದಿನ ರುಚಿಯನ್ನು ಹತ್ತಿಸಿದ್ದು ಬೆಳಗೆರೆಯ ರವಿ. ನನ್ನ ಕಾಲದ ಅನೇಕರನ್ನು ಓದಿನ ಗೀಳಿಗೆ ಬೀಳಿಸಿದ ಆಪಾದನೆ ಅವರ ಮೇಲಿದೆ. ಅದಕ್ಕೂ ಮುನ್ನ ಅಂತಹ ಕೆಲಸವನ್ನು ಮಾಡಿದ್ದು ಲಂಕೆಯ ಈಶರೇ. ಬೆಳಗೆರೆ ಕೂಡ ಇದನ್ನು ಹಲವು ಬಾರಿ ಮಾರ್ದನಿಸಿದ್ದಾರೆ. ಅಂದಮೇಲೆ ಅವರಿಗಿಂತ ಇವರ ಶೈಲಿ ಹೇಗೆ ಭಿನ್ನ ಎನ್ನುವ ಕುತೂಹಲ ಮೊದಲಿನಿಂದಲೂ ನನ್ನಲ್ಲಿತ್ತು. ಇದಕ್ಕೂ ಮೊದಲು ಓದಿದ್ದು ಅವರ ಸಮಗ್ರ ಕಥೆಗಳನ್ನು. ಅದು ತೆರೆದಿಟ್ಟಿದ್ದು ಅಪ್ಪಟ ಮಣ್ಣಿನ ಕಥೆಗಾರ ಲಂಕೇಶರನ್ನು. ಗದ್ಯಕಾರ ಲಂಕೇಶರು ಮರೆಯಾಗಿಯೇ ಉಳಿದಿದ್ದರು. ಈ ಪುಸ್ತಕ ಅದಕ್ಕೆ ಉತ್ತರವಿತ್ತಿದೆ. ಒಂದು ಆತ್ಮ ಚರಿತ್ರೆ ಹೇಗೆಲ್ಲ ಬದುಕಿದರು, ಬಾಳಿದರು ಅಂತೆಲ್ಲ ಹೇಳಿದರೂ ನನಗೆ ಅದಕ್ಕಿಂತ ಮುಖ್ಯ ಅನ್ನಿಸುವುದು ಆ ವ್ಯಕ್ತಿ ಬದುಕನ್ನು ಹೇಗೆ ಗ್ರಹಿಸಿದರು ಎನ್ನುವುದು. ಆ ನಿಟ್ಟಿನಲ್ಲಿ ಇದು ಬಹಳ ಹಿಡಿಸಿತು. ಹೆಚ್ಚಿನ ಪ್ರವರ ಅನಾವಶ್ಯಕ. ನನಗೆ ಮೆಚ್ಚಿಗೆಯಾದ ಕೆಲವು ಸಾಲುಗಳನ್ನು ಅಡಿ ಟಿಪ್ಪಣಿ ಮಾಡಿಟ್ಟುಕೊಂಡಿದ್ದೆ. ಅದನ್ನೇ ಇಲ್ಲಿ ಹಾಕಿದ್ದೇನೆ. ಆಸಕ್ತಿ ಇದ್ದವರು ಓದಿಕೊಳ್ಳಿ.
ಚಿಕ್ಕ ಹುಡುಗನಿಗೆ ಹಳ್ಳಿಯೆನ್ನುವುದು ನಿಜಕ್ಕೂ ಖುಷಿ ನೀಡುವ ಘಟಕ. 'ಒಂದು ಹುಡುಗನನ್ನು ಬೆಳೆಸುವುದಕ್ಕೆ ಒಂದು ಹಳ್ಳಿಯ ಅಗತ್ಯವಿದೆ' ಎಂದು ಚೈನಾದಲ್ಲಿ ಒಂದು ಹೇಳಿಕೆಯಿದೆ. ಹಳ್ಳಿ ಅದೆಷ್ಟೇ ಚಿಕ್ಕದಾಗಿದ್ದರೂ, ನೋಡಲು ಅಷ್ಟೇನೂ ವೈವಿಧ್ಯಮಯ ದೃಶ್ಯ, ಗಂಧ, ರುಚಿಗಳಿಂದ ಕೂಡಿರದಿದ್ದರೂ ಒಬ್ಬ ಹುಡುಗನ ಹುಟ್ಟಿದೂರಾಗಿ ಅದು ಅವನಿಗೆ ನೆರವಾಗುವ ರೀತಿ ಮಹತ್ತರವಾದದ್ದು.
ಒಬ್ಬ ಹುಡುಗನೆಂದರೆ ಅವನು ಹುಟ್ಟಿದ ಮನೆ, ಹಿನ್ನೆಲೆ, ಸದ್ಯದ ಪರಿಸರ ಎಲ್ಲವೂ ಸೇರಿ ಆಗಿರುತ್ತಾನೆ. ಹುಡುಗರನ್ನು ಸಮಾನವಾಗಿ ಕಾಣುವ ಒಂದೇ ಮಾರ್ಗ ಅವರ ವೈಶಿಷ್ಟ್ಯವನ್ನು ಅರಿತು ಅದರ ಪ್ರಕಾರ ಕಾಣುವುದು.
ಹಟಮಾರಿತನದಿಂದ ಚಿಕ್ಕವರಾಗಲಿ ದೊಡ್ಡವರಾಗಲಿ ಕೆಲವು ಆಶೆಗಳನ್ನು ಮಾತ್ರ ಈಡೇರಿಸಿಕೊಳ್ಳಬಹುದು. ನಾವು ಅಳುವುದು, ಅರಚುವುದು, ಮೈಪರಚಿಕೊಳ್ಳುವುದು. ಉಪವಾಸ ಮಾಡುವುದು, ಮೌನ ತಾಳುವುದು ಮುಂತಾದ್ದಕ್ಕೆಲ್ಲ ಸೀಮಿತ ಪ್ರಭಾವವಿದೆ.
ಚಿಕ್ಕ ಹುಡುಗನ ಮನಸ್ಸಿಗೆ ಏನೇನು ಆಧಾರ ಎಂದು ನೋಡಿದರೆ, ತಂದೆತಾಯಿ. ಸುತ್ತಣ ಎತ್ತು, ಆಳು, ಸ್ನೇಹಿತರು, ಆಟ ಎಂದು ಹೇಳಬಹುದು. ಅವನ ನೆಮ್ಮದಿಗೆ ಸವಾಲುಗಳು ಆತನ ಮನಸ್ಸಿನಲ್ಲೇ ಬೆಳೆಯುವ ಅಸ್ಥಿರತೆ, ಒಂದು ರೀತಿಯ ಶೂನ್ಯಭಾವ. ತಂದೆತಾಯಿಗೆ ತಮ್ಮದೇ ಆದ ತೆವಲುಗಳಿವೆ, ಅವರ ಸೌಖ್ಯ ಕೂಡ ಸುರಕ್ಷಿತವಲ್ಲ ಮತ್ತು ಅವರಿಗೂ ಮಕ್ಕಳಿಗಿರುವಷ್ಟೇ ಭಯಗಳಿವೆ ಎಂಬುದು ಗೊತ್ತಾದಾಗ ಚಿಕ್ಕ ಮಗುವಿಗೆ ತನ್ನ ತಬ್ಬಲಿತನ ಅರ್ಥವಾಗುತ್ತಾ ಹೋಗುತ್ತದೆ. ಅವರು ದೇವರನ್ನು ನಂಬುತ್ತಾರೆ. ಆದರೆ ದೇವರು ಎಲ್ಲ ಸಮಯದಲ್ಲೂ ದೊರೆಯುವುದಿಲ್ಲ.
ಮದುವೆಗಳೆಂದರೆ ಗಂಡುಹೆಣ್ಣಿಗೆ ನೆನಪಿರುವಂಥ ಸಂದರ್ಭ: ಗಂಡುಹೆಣ್ಣು ಮುಟ್ಟುವಂಥ, ಮಾತಾಡುವಂಥ, ಪರಸ್ಪರ ಹುಡುಕುವಂಥ ಸಂದರ್ಭ. ಗ್ರಾಮಗಳಲ್ಲಿ ಮದುವೆ ಮುಖ್ಯ ಆಚರಣೆ ಮತ್ತು ವಿಶೇಷ ಸಂದರ್ಭ: ಸಂಭೋಗ ಇಲ್ಲಿಯ ಅರ್ಥಪೂರ್ಣ ಕೆಲಸ. ವಂಶಾಭಿವೃದ್ಧಿಯಿಂದ ಹಿಡಿದು ನಾಲ್ಕು ಜನ ಮೆಚ್ಚುವಂತೆ ಮಕ್ಕಳನ್ನು ಬೆಳೆಸುವುದು, ಮದುವೆ ಮಾಡಿ ಕೊಡುವುದು ಇಲ್ಲಿಯ ಬದುಕಿನ ಮುಖ್ಯ ಉದ್ದೇಶ.
ಬದುಕು ಒಂದು ದೃಷ್ಟಿಯಲ್ಲಿ ಕಾರಣವಿರುವ, ಕಾರಣವಿರಲಾರದ ಅಳುಕು, ಪಾಪಪ್ರಜ್ಞೆಯ ಸರಮಾಲೆ. ಈ ಘಟ್ಟದಲ್ಲಿ ಹೀಗೆನ್ನಿಸುತ್ತಿದೆ. ಈ ನನ್ನ ನೆನಪುಗಳನ್ನು ಹಾಳೆಯ ಮೇಲೆ ಕಾಣಿಸುತ್ತಿರುವುದೇ ಈ ಬದುಕು ಎಂತೆಂಥ ದ್ವಂದ್ವಗಳ ಮೆರವಣಿಗೆ ಎಂದು ಕಂಡುಕೊಳ್ಳುವುದಕ್ಕಾಗಿ.
ನನ್ನ ಒಳತೋಟಿಯನ್ನು ಒಳಗೊಳ್ಳದ ಘನತೆ ನಿಷ್ಟ್ರಯೋಜಕ.
ಹುಡುಗನ ಬದುಕಿನಲ್ಲಿ-ಅದೂ ಓದತೊಡಗುವ ಈ ದೇಶದ ಹುಡುಗನ ಬದುಕಿನಲ್ಲಿ ಹಿಂದಕ್ಕೆ ಹೋಗಬಹುದು ಅಥವಾ ಮುಂದಕ್ಕೆ ಹೋಗಬಹುದು ಎಂಬ ಒಂದು ಘಟ್ಟ ಬರುತ್ತದೆ. ಇದು ಅಂಥ ಕಾಲ. ಸ್ಕೂಲಿನಿಂದ ಕಷ್ಟಪಟ್ಟು ಬಿಡಿಸಿಕೊಂಡಿದ್ದರೆ ನಾನು ಹಳ್ಳಿಯಲ್ಲೇ ಇದ್ದು ಈ ಪರಿಸರದಲ್ಲಿ ಜೀವನ ಮುಗಿಸಬಹುದಿತ್ತು. ಆದರೆ ಅದು ಬಹಳ ಕಷ್ಟವಾಗುತ್ತಿತ್ತು. ನನಗೆ ಮಾತುಗಳ, ಅರ್ಥಗಳ, ಬದುಕಿನ ದ್ವಂದ್ವಗಳ ಬಗ್ಗೆ ಕುತೂಹಲ ಶುರುವಾಗಿತ್ತು. ಓದುವುದು ಖುಷಿ ಕೊಡತೊಡಗಿತ್ತು. ಅದು ಏನೇನೋ ಆಶೆ ತೋರಿಸತೊಡಗಿತ್ತು. ನನಗೆ ಬರೆಯುವ ಯಾವ ಆಶೆಯೂ ಆಗ ಇರಲಿಲ್ಲ. ನಾನು ಇತರರಿಗಿಂತ ಬೇರೆ ಎಂಬ ಭಾವನೆಯೂ ಇರಲಿಲ್ಲ.
ನಾಲ್ಕು ವರ್ಷ ಕಷ್ಟಪಟ್ಟು ಮನವೊಲಿಸಿಕೊಂಡ, ಜೀವಕ್ಕೆ ಒಗ್ಗಿಸಿಕೊಂಡ ಒಂದು ಸ್ಥಿತಿಯನ್ನು ಬಿಟ್ಟು ಇನ್ನೊಂದು ಸ್ಥಿತಿಗೆ ಹೋಗುವುದು ತುಂಬ ಕಷ್ಟ, ನಿಮ್ಮ ಧ್ವನಿ, ಜಾಣತನ, ಆಳತನ ಎಲ್ಲವನ್ನೂ ಗಮನಿಸಿ ಇಷ್ಟವಾದದ್ದನ್ನು ಮೆಚ್ಚಿದ, ಇಷ್ಟವಾಗದ್ದನ್ನು ಅಲಕ್ಷಿಸಿದ ನೂರಾರು ಪರಿಚಿತರಿರುತ್ತಾರೆ. ಒಂದು ಬಗೆಯ ಶೈಲಿಯನ್ನು ಆ ಜನ ಮತ್ತು ನಾವು ಸೇರಿ ರೂಪಿಸಿ ಕೊಂಡಿರುತ್ತೇವೆ. ಈ ವಿದಾಯದ ವ್ಯಥೆ ಹುಡುಗನಾದವನಿಗೆ ಮತ್ತೆ ಮತ್ತೆ ಕಾಡುತ್ತದೆ.
ಏನಾಗುತ್ತದೆಂದರೆ, ಪ್ರಾಯದ ಹುಡುಗರಿಗೆ ಒಂದು ತಲೆಮಾರಿನ ಎಲ್ಲ ಅಂದವಾದ ಹುಡುಗಿಯರೂ ಒಂದೇ ತರಹ ಕಾಣುತ್ತಾರೆ; ಹುಡುಗಿಯರು ಕೂಡ ತಮ್ಮ ಕಾಲದಲ್ಲಿ ಚಲಾವಣೆಯಲ್ಲಿರುವ ನಟಿಯರನ್ನೇ ವೇಷಭೂಷಣದಲ್ಲಿ ಅನುಕರಿಸುತ್ತಿರುತ್ತಾರೆ.
ನಮ್ಮಲ್ಲಿ ಬರೆಯುವುದೆಂದರೆ ಜನರನ್ನು ತಿಳಿವಳಿಕೆಯಿಂದ ದೂರ ಇಡುವುದು, ಗೊಂದಲಗೊಳಿಸುವುದು, ಭಯಪಡಿಸುವುದು ಎಂದು ಅನೇಕರು ತಿಳಿದಿರುತ್ತಾರೆ. ಅವರಿಗೆ ಒಂದು ಭಾಷೆಯನ್ನು ಹದಗೊಳಿಸುತ್ತಾ ಹೋದಂತೆ ಸಂಕೀರ್ಣವಾಗಿ, ಸ್ಪಷ್ಟವಾಗಿ, ತಿಳಿಯಾಗಿ -ಇವು ಮೂರೂ ಒಟ್ಟಿಗೇ- ಬರೆಯುವುದು ಸಾಧ್ಯವಾಗುತ್ತದೆ ಎಂಬುದು ಗೊತ್ತಿರುವುದಿಲ್ಲ. ಅಲ್ಲದೆ ಯಾವುದೇ ಶಿಷ್ಟ, ಶಿಸ್ತಿನ ಭಾಷೆಗೆ ಮಾರ್ಗದರ್ಶಿಯಾದದ್ದು, ಜೀವಕೊಡುವಂಥದ್ದು ಜನರಾಡುವ ಭಾಷೆ, ಆ ಭಾಷೆಯ ಮರ್ಯಾದೆ ಮತ್ತು ಲಯಬದ್ಧತೆ. ಇದನ್ನರಿಯದವರು ಈ ಶತಮಾನದ ಆದಿಭಾಗದಲ್ಲಿ ಬರೆದಿರುವ ಸಂಪಾದಕೀಯಗಳನ್ನು ವರದಿಗಳನ್ನು ನೋಡಿದರೆ ನಗೆ ಬರುತ್ತದೆ. ಹಾಗೆಯೇ ಈಗ ನಾನು ಬರೆಯುತ್ತಿರುವ ಶೈಲಿಯೂ ಇನ್ನೂ ನೂರು ವರ್ಷಗಳ ಬಳಿಕ ಹಾಸ್ಯಾಸ್ಪದವಾಗಿ ಕಂಡರೆ ಯಾವ ಆಶ್ಚರ್ಯವೂ ಇಲ್ಲ. ಹಾಗೆ ಹಾಸ್ಯಾಸ್ಪದವಾಗದಂಥ, ಗಂಭೀರವೂ ಸ್ಪಷ್ಟವೂ ಆಗಿರುವಂಥ ಶೈಲಿಯನ್ನು ಪಡೆದ ಭಾಷೆ ಪ್ರಬುದ್ಧವಾದದ್ದು.
ನೀವು ಕಲ್ಪಿಸಿಕೊಂಡದ್ದು, ಊಹಿಸಿಕೊಂಡದ್ದು ಕನಸಿನಲ್ಲಿ ಬರಬಹುದು, ನೀವು ನಿಜಕ್ಕೂ ಅನುಭವಿಸದೆ ಇದ್ದದ್ದು ಬರುವುದಿಲ್ಲ.
ಭಟ್ಟಂಗಿತನ, ಜಾತೀಯತೆ, ಗುಂಪುಗಾರಿಕೆ ಎಲ್ಲವನ್ನೂ ಮೀರಿದ್ದು ಸಾಹಿತ್ಯ: ಆದ್ದರಿಂದ ಸರ್ವಸಂಕೋಲೆಗಳಿಂದ ಮುಕ್ತವಾಗಿದ್ದವನು ಮಾತ್ರ ಶ್ರೇಷ್ಠ ಸಾಹಿತ್ಯ ಸೃಷ್ಟಿಸಬಲ್ಲ ಮತ್ತು ಸವಿಯಬಲ್ಲ.
ಎಲ್ಲಕ್ಕೆ ಮೂಲವಾದದ್ದು ಪ್ರಾಮಾಣಿಕತೆ: ಅನುಭವವನ್ನು ಅದರ ಎಲ್ಲ ವೈವಿಧ್ಯದೊಂದಿಗೆ ಎದುರಿಸುವ ದಿಟ್ಟತನ.
ಬೆಳೆದ ಹುಡುಗರಿಗೆ ಪಾಠ ಹೇಳುವುದು ಕಷ್ಟ; ಅವರ ತಲೆತುಂಬ ಅಭಿಪ್ರಾಯಗಳು, ಸವಾಲುಗಳು, ಘರ್ಷಣೆಗಳು ಇರುತ್ತವೆ. ಅವರ ಮನಸ್ಸನ್ನು ಗೆಲ್ಲಬೇಕಾದರೆ ಅಧ್ಯಾಪಕನ ವ್ಯಕ್ತಿತ್ವ ಜೋರಾಗಿರಬೇಕು; ಅವರ ಅಭಿಪ್ರಾಯಗಳು ಗಮನಾರ್ಹವಾಗಿರಬೇಕು.
ಇದು ಸ್ವಾರ್ಥ. ಹಾಗೆನ್ನಿಸತೊಡಗಿದ್ದು ಎದುರಿಗಿದ್ದ ಅವ್ವನ ಶವ ನೋಡಿ. ನಾನವಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡಲಿಲ್ಲ. ಅವಳು ನನಗೆ ಕೊಟ್ಟಿದ್ದರಲ್ಲಿ ಒಂದು ಪಾಲನ್ನೂ ಹಿಂದಿರುಗಿಸಲಿಲ್ಲ ಅನ್ನಿಸಿತು. ಅದಕ್ಕೆ ಕಾರಣಗಳನ್ನು ನಾನು ವಿವರಿಸುವುದಿಲ್ಲ. ಆಕೆಯ ಜಗತ್ತಿನಿಂದ ಹೊರಗೆ ಹೋಗಿದ್ದ ನಾನು ಮಹಾ ಕೃಪಣನಾಗಿದ್ದೆ: ಆಕೆಯ ಸಾವಿನ ಬಗ್ಗೆ ಹೊಣೆ, ಅಳುಕು ಅನುಭವಿಸುತ್ತಿದ್ದೆನೇ ಹೊರತು ಆಕೆ ಬದುಕಿದ್ದಾಗ ನನ್ನಿಂದ ಹೊರಬಂದು ನಿಜಕ್ಕೂ ನೆರವಾಗಿರಲಿಲ್ಲ. 'ನನ್ನ ಅವ್ವನನ್ನು ನಾನು ಕೈಯಲ್ಲಿ ಎತ್ತಿಕೊಳ್ಳಲೇ ಇಲ್ಲ' ಎಂದು ಇವತ್ತಿಗೂ ಸಂಕಟಪಡುತ್ತೇನೆ. ಇದು ನನ್ನ ಆಗಿನ ಕೃಪಣತೆಯ ಫಲ ಇರಬಹುದು.
ಒಬ್ಬ ಮನುಷ್ಯ ಮಹಾ ಬುದ್ಧಿವಂತನಾಗಿದ್ದರೂ ಕೆಟ್ಟ ನಟನಾಗಿರಲು ಸಾಧ್ಯ: ನೀನು ಹುಟ್ಟಾ ನಟನಾಗಿರುತ್ತೀ ಅಥವಾ ಆಗಿರುವುದಿಲ್ಲ. ಅಭಿನಯವನ್ನು ಯಾರಿಂದಲೂ ಕಲಿಸಲಾಗುವುದಿಲ್ಲ.
ಹೊಸಗನ್ನಡ ಕಾವ್ಯ ಸಾಕಷ್ಟು ಪಕ್ಷವಾಗಿದೆ: ಅದನ್ನು ಸರಿಯಾಗಿ ಬಳಸಿದರೆ ಗಾಂಭೀರ್ಯ ಸಾಧಿಸಬಹುದು: ಯಾವ ಭಾವನೆಯನ್ನಾದರೂ ಕನ್ನಡದಲ್ಲಿ ಹೇಳಬಹುದು.
ಯಾವ ಸಂಬಂಧವೂ ಕೃತಕ ಭಾಷೆಗೆ ಹೊಂದುವಷ್ಟು ಉನ್ನತವಾಗಿರುವುದಿಲ್ಲ.
ತುರ್ತು ಪರಿಸ್ಥಿತಿ ಎಂದರೆ ಎಲ್ಲ ಸ್ಥಗಿತಗೊಳ್ಳುವುದಾಗಲಿ, ಮೂರ್ಛೆ ಹೋಗುವುದಾಗಲಿ ಅಲ್ಲ. ಜನ ಉಣ್ಣುತ್ತಾರೆ, ಉಡುತ್ತಾರೆ, ತಮ್ಮ ತಮ್ಮ ಕೆಲಸ ಮಾಡಿಕೊಂಡಿರುತ್ತಾರೆ. ಹಾಗೆಯೇ ಎಲ್ಲ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸುತ್ತಾರೆ. ಜೀವ ಇದ್ದವರು ಮಾತ್ರ ಪ್ರತಿಭಟಿಸುವುದು ಸಾಧ್ಯ.
ಮನುಷ್ಯ ಅಭಿನಯಿಸುವುದರ ಮೂಲಕ, ಕೃತಕವಾಗಿ ಸಂಘರ್ಷಿಸುವುದರ ಮೂಲಕ ಮಾತ್ರ ಬದುಕುವುದಿಲ್ಲ. ಅವನ ಮೌನ, ಆಳದ ನೋವು, ಏಕಾಂತತೆಯಲ್ಲಿ ಕೂಡ ಅವನ ಬದುಕಿರುತ್ತದೆ.
ಅಮೂರ್ತವಾಗಿ ನೋಡುವಾಗ ಗಾಂಧೀಜಿಯವರ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಸತ್ಯಾಗ್ರಹ ಇವೆಲ್ಲ ಅಸಮರ್ಪಕವಾಗಿ ಕಾಣುತ್ತವೆ; ಅವನ್ನು ಅನುಸರಿಸಿದ ಅನೇಕ ದೇಶಗಳಲ್ಲಿ ಅವು ವಿಫಲವಾಗಿವೆ. ಆದರೆ ಭಾರತದಲ್ಲಿ ಗಾಂಧೀಜಿ ಅರ್ಧ ಶತಮಾನ ಕಾಲ ನಡೆಸಿದ ಪ್ರಯೋಗ ಇವತ್ತು ಜನರ ಅಂತರಂಗದಲ್ಲಿ ತನ್ನ ಛಾಯೆ ಬಿಟ್ಟಿದೆ. ಅದು ಅನುಷ್ಠಾನದಲ್ಲಿ ಮಹಾ ಪರಿಣಾಮಕಾರಿ ಆಗುತ್ತದೆ. ಇಲ್ಲಿ ಪ್ರತಿಯೊಬ್ಬ ಸರ್ವಾಧಿಕಾರಿಯ ದುಃಸ್ವಪ್ನ 'ಈ ಜನ ಎಲ್ಲಾದರೂ ಬೀದಿಗೆ ಇಳಿದು ಅಸಹಕಾರ ಚಳವಳಿ ಶುರುಮಾಡಿದರೆ, ಜೈಲಿಗೆ ಹೋಗಲು ತಯಾರಾದರೆ ಗತಿಯೇನು' ಎನ್ನುವುದು.
ಬರೆಯುವುದನ್ನು ಸಂಗ್ರಹವಾಗಿ, ಸ್ಪಷ್ಟವಾಗಿ ಬರೆಯಬೇಕು: ಹೇಳಬೇಕಾದ್ದನ್ನು ಧೈರ್ಯವಾಗಿ, ನೇರವಾಗಿ, ಪರಿಣಾಮಕಾರಿಯಾಗಿ ಹೇಳಬೇಕು; ಎಲ್ಲಿ ಸ್ಪಷ್ಟತೆ ಮತ್ತು ಸಂಕ್ಷಿಪ್ತತೆ ಬೇಕಾಗುತ್ತದೆಯೋ ಅಲ್ಲಿ ಬೌದ್ಧಿಕ ಕಸರತ್ತಿಗೆ, ಜಟಿಲ ತರ್ಕಕ್ಕೆ ಇಳಿಯಬಾರದು; ಎಲ್ಲಿ ಸೂಕ್ಷ್ಮವಾಗಿರಬೇಕೋ ಅಲ್ಲಿ ಹುಂಬ ಘೋಷಣೆಯಂತೆ ಬರೆಯಬಾರದು.
ನೆಲದಲ್ಲಿ ನಿಮಗೆ ಆಸಕ್ತಿ ಇಲ್ಲದಿದ್ದರೆ ನಮ್ಮ ಹಳ್ಳಿಗಳು ಅರ್ಥವಾಗುವುದೇ ಇಲ್ಲ.
ಪ್ರೇಮದಂತೆಯೇ ವಿಶ್ವಾಸ ಕೂಡ; ಅದು ಬತ್ತಿಹೋಗುತ್ತದೆ, ಇಲ್ಲವಾಗುತ್ತದೆ; ಅನೇಕಾನೇಕ ಆಕಾಂಕ್ಷೆ, ತೆವಲುಗಳೊಂದಿಗೆ ಕೆಲಸ ಮಾಡುವ ಮನುಷ್ಯ ಶತ್ರುವಾಗುತ್ತಾನೆ. ದ್ರೋಹಿಯಾಗುತ್ತಾನೆ-ಕೊಲೆ ಮಾಡಲೂ ಹೇಸದವನಾಗುತ್ತಾನೆ. ಇವೆಲ್ಲ ನನ್ನ ಬದುಕಿನ ವಿವಿಧ ಹಂತಗಳಲ್ಲಿ ಕಂಡುಕೊಂಡದ್ದು. ಇದು ಸ್ವಾಭಾವಿಕ ಎನ್ನುವುದನ್ನು ಅರಿತರೆ ಮಾತ್ರ ಸಿನಿಕನಾಗುವುದು ತಪ್ಪುತ್ತದೆ.
ಬದುಕು ವಿಚಿತ್ರವಾದದ್ದು. ಇಲ್ಲಿ ಸ್ನೇಹಕ್ಕೆ ನೂರಾರು ಕಾರಣಗಳಿರುವಂತೆಯೇ ದ್ವೇಷಕ್ಕೆ ಹಲವಾರು ಕಾರಣಗಳಿರುತ್ತವೆ; ಸಂಬಂಧ ಚಿರಂತನವಾದದ್ದು ಎಂದು ಹೊರಡುವುದೇ ತಪ್ಪು. ಸಮಾಜ ಎನ್ನುವುದು ಕೆಲವು ಸ್ವೀಕೃತ, ಸಾಂಸ್ಥಿಕ ಗ್ರಹಿಕೆಗಳ ಮೇಲೆ ನಿಂತಿರುತ್ತದೆ.
ಮನುಷ್ಯ ತನ್ನ ಅನುಕೂಲಕ್ಕಾಗಿ ಕಟ್ಟಿಕೊಂಡ ಈ ನಾಗರಿಕ ಸಮಾಜ, ಅದರ ಆಚರಣೆ, ಶಾಲೆ, ನ್ಯಾಯಾಲಯ, ಕುಟುಂಬವ್ಯವಸ್ಥೆ ಇತ್ಯಾದಿಗಳು ಆತನ ಸವಾಲುಗಳಾಗಿ ಬೆಳೆಯುತ್ತವೆ; ಆತನ ದ್ವಂದ್ವಗಳನ್ನು ಹೆಚ್ಚಿಸುತ್ತಾ ಹೋಗುತ್ತವೆ. ಹಾಗೆ ನಾವು ಆ ಮನುಷ್ಯನ ಬಗ್ಗೆ ತಿಳಿಯುವುದು ಕೂಡ ಭ್ರಮೆ.
ನಾನು ಸಾವಿನ ಬಗ್ಗೆ ಕವನ ಬರೆದರೂ, ಪ್ರೇಮಗೀತೆಗಳನ್ನು ರಚಿಸಿದರೂ ಅವುಗಳ ಬಗ್ಗೆ ನನ್ನ ಖಾಸಗಿ ಆತಂಕ ಪೂರ್ತಿ ಹೊರಟುಹೋಗಿರುವುದಿಲ್ಲ. ಸಾವಿಗೆ, ಮುಪ್ಪಿಗೆ ನಮ್ಮಲ್ಲಿ ಉತ್ತರವೇನು? ವ್ಯವಸ್ಥೆಯನ್ನು ಒಪ್ಪುತ್ತಲೇ ಸೂಕ್ಷ್ಮಾತಿಸೂಕ್ಷ್ಮ ರೀತಿಯಲ್ಲಿ ಅದರೊಂದಿಗೆ ಸಂಘರ್ಷಿಸುವ ಮನುಷ್ಯ ಮಹಾ ಅಸಹಾಯಕ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹದವರು ಸಜ್ಜನಿಕೆಯನ್ನು ಬೆಳೆಸಿಕೊಂಡಂತೆ, ಋಜುಸ್ವಭಾವವನ್ನು ರೂಢಿಸಿಕೊಂಡಂತೆ ಅನ್ನಿಸಿ ನಮಗೆ ಅವರ ಬಗ್ಗೆ ಗೌರವ ಉಂಟಾಗುತ್ತದೆ; ಇನ್ನೊಬ್ಬ ಮಹಾ ಸಾಧಕ ಅರಿಷಡ್ವರ್ಗಗಳನ್ನು ಗೆದ್ದಿರುವುದಾಗಿ ತಿಳಿದು ನಾವು ಅವನ ಬಗ್ಗೆ ಭಕ್ತಿ ಭಾವನೆ ಬೆಳೆಸಿಕೊಳ್ಳುತ್ತೇವೆ. ಇದು ಕೂಡ ನಾವು ಇನ್ನೊಬ್ಬರ ಬಗ್ಗೆ ಊಹಿಸುವ ಸಂಗತಿಯೇ ಹೊರತು ಸತ್ಯವಲ್ಲ.
ಸಮಾಜದ ಖಂಡನೆಗೆ ಹೆದರಿಯೋ, ಕೋರ್ಟಿನ ದಂಡನೆಗೆ ಹೆದರಿಯೋ ಒಬ್ಬ ಮನುಷ್ಯ ಸಾಧಕನ ವೇಷ ಹಾಕುವುದು ಸಾಧ್ಯವಿದೆ. ಆದರೆ ಜೀವಿಸುವುದು ಮನುಷ್ಯನಿಗೆ ಎಷ್ಟು ಮುಖ್ಯವೆಂದರೆ ಆತನ ಕನಸು, ನೆನಪು, ಊಹೆ, ಪಾಂಡಿತ್ಯ ಮುಂತಾದ್ದವೆಲ್ಲವೂ ಆತನ ಈ ಮೂಲೋದ್ದೇಶವಾದ ಜೀವಿಸುವ ಕ್ರಿಯೆಗೆ ನೆರವಾಗುತ್ತವೆ.
ವೇಶ್ಯಾವೃತ್ತಿ ಪ್ರಪಂಚದ ಅತ್ಯಂತ ಪ್ರಾಚೀನ ವೃತ್ತಿ ಎಂದು ಹೇಳಿ ಕೈತೊಳೆದುಕೊಳ್ಳುವವರು ಮನುಷ್ಯನಲ್ಲಿರುವ ವಾಂಛಲ್ಯ ತಿಳಿದುಕೊಂಡಿರುವುದಿಲ್ಲ.
ಒಂದೊಂದು ತ್ಯಾಗದ ಗಳಿಗೆಯೂ ಭೋಗದ ಗಳಿಗೆಗಾಗಿ ಕಾತರಿಸುತ್ತದೆ; ದೇಹವೆಂಬ ಮಾಂಸ, ರಕ್ತನಾಳ, ನರಮಂಡಲದ ವಿಶಿಷ್ಟ ರಚನೆ ಒಂದು ಮಟ್ಟದಲ್ಲಿ ಪ್ರಾಣಿ ಮಾತ್ರ, ಇನ್ನೊಂದು ಮಟ್ಟದಲ್ಲಿ ಕಟ್ಟಿಹಾಕಿದ ಪ್ರಾಣಿ, ಮತ್ತೊಂದು ಮಟ್ಟದಲ್ಲಿ ಸುಸಂಸ್ಕೃತವೆನ್ನಿಸಿಕೊಂಡ ವಿಚಿತ್ರ. ಇದು ಸಾಹಿತ್ಯ, ಕಲೆಯ ಉಗಮಸ್ಥಾನ: ಮನುಷ್ಯನ ಅವೈಚಾರಿಕ ಸ್ತರ.
ಮಾನವನ ಮೂಲಭೂತ ದ್ವಂದ್ವ ಮತ್ತು ಅಸಹಾಯಕತೆ ಆತನ ವಿಕಾಸದ ಒಂದು ಭಾಗ.
ವಿವೇಕ ಮತ್ತು ಅವೈಚಾರಿಕತೆ ಮನುಷ್ಯನನ್ನು ತಲ್ಲಣಗೊಳಿಸುತ್ತಿದ್ದಾಗ ರೋಗ, ಮುಪ್ಪು, ಸಾವು ಪ್ರತಿಯೊಬ್ಬನ ಆಳದಿಂದ ಎಚ್ಚರಿಕೆ ನೀಡುತ್ತಿರುತ್ತವೆ. ನಮ್ಮ ವ್ಯವಸ್ಥೆ ಮತ್ತು ಸ್ವೀಕೃತ ಧರ್ಮ, ಪುಣ್ಯ, ಪುನರ್ಜನ್ಮದ ಬಗ್ಗೆ ಹೇಳಿದ್ದೆಲ್ಲ ಬೊಗಳೆಯಂತೆ ಕೇಳಿಸತೊಡಗುತ್ತದೆ. ದೇವರಿದ್ದಾನೆ ಮತ್ತು ದೇವರಿಲ್ಲ, ಪುನರ್ಜನ್ಮವಿದೆ. ಪುನರ್ಜನ್ಮವಿಲ್ಲ - ಎಂಬ ಸಂದಿಗ್ಧ ಕೂಡ ವಿಸ್ಮೃತಿ ಸೇರುವಾಗ ಮನುಷ್ಯನಿಗೆ ಪ್ರೇಮ, ಸ್ಪರ್ಶ, ಸಂಭೋಗ ಜೀವನದ ಮುಂದುವರಿಕೆಯಂತೆ ಕಾಣುತ್ತದೆ.
ನೀವು ಈ ಬದುಕಿನಲ್ಲಿ ಯಾವ ಯಾವ ಆಗುಹೋಗುಗಳಿಗೆ, ಯಾವ ಯಾವ ವ್ಯಕ್ತಿಗಳಿಗೆ ಕೃತಜ್ಞರಾಗಿರುತ್ತೀರಿ? ಎಂದೋ ಜೊತೆಗೆ ಕೂತು ಸಿಗರೇಟ್ ಸೇದುತ್ತಾ ಕಾಫಿ ಕುಡಿದವರು, ಒಳ್ಳೆಯ ಪುಸ್ತಕ, ಚಿತ್ರ, ಸಂಗೀತದ ಅನುಭವ ದೊರೆಯುವಂತೆ ಮಾಡಿದವರು, ಪ್ರೀತಿಯಿಂದ ಅಪ್ಪಿಕೊಂಡವರು, ಜೀವದ ಕೆಂಡ ಆರಿ. ಬೂದಿಯಾಗುತ್ತಿದ್ದಾಗ ಕಟ್ಟಿಗೆಯನ್ನು ಹಾಕಿ ಉರಿಸಿದವರು, ನಿಮ್ಮ ಮಿತ್ರರು, ಶತ್ರುಗಳು.... ಯಾವುದನ್ನು, ಯಾರನ್ನು ನೆನೆಯುತ್ತೀರಿ?
ಪೂರ್ತಿ ಆತ್ಮನಿಗ್ರಹ ಸಾವಿನಂತೆ, ಅಥವಾ ಮಹಾ ಸಾಧನೆಯ ತಾರಕದಂತೆ. ಹೊಗಳಿಕೆ, ಪ್ರಶಂಸೆ, ಒಪ್ಪಿಗೆ, ಪ್ರೀತಿ-ಇವೆಲ್ಲ ಒಂದೇ ವಸ್ತುವಿನ ನಾನಾಮುಖಗಳು: ನೆನಪು, ಸಾಧನೆ ಮತ್ತು ಸಾಧನೆಯ ಭ್ರಮೆ-ಇವೆಲ್ಲ ಅದೇ ರೀತಿಯವು.
ಮನುಷ್ಯ ತನ್ನ ಬಗ್ಗೆ ವಿಶ್ವಾಸ ಗಳಿಸಿಕೊಳ್ಳುವುದು. ಭ್ರಮೆ ಕಟ್ಟಿಕೊಳ್ಳುವುದು. ಸುಳ್ಳುಗಳನ್ನು ನಂಬಿ ಬದುಕತೊಡಗುವುದು.... ಇದನ್ನೆಲ್ಲ ಹೇಗೆ ತಿಳಿದು ವಾಸ್ತವಕ್ಕೆ ಹತ್ತಿರವಾಗಿ ಬದುಕಬೇಕು ಅನ್ನುವುದು ಪ್ರತಿಯೊಬ್ಬ ಸೂಕ್ಷ್ಮಜ್ಞನ ಸಮಸ್ಯೆ.
ಸಾವು ತನ್ನ ತಣ್ಣನೆಯ ಹಸ್ತವನ್ನು ನಮ್ಮ ಮೇಲಿಟ್ಟಾಗ ಹೇಗಿರುತ್ತದೆ? 'ಹುಟ್ಟಿದವನು ಸಾಯಲೇಬೇಕು' ಎಂದುಕೊಂಡು ಬದುಕುತ್ತಿರುವುದಕ್ಕೂ ಸಾವಿನ ಸ್ಪರ್ಶಕ್ಕೂ ವ್ಯತ್ಯಾಸವೇನು? ಬದುಕುತ್ತಿರುವವರು ಯಾರೂ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ; ಮನುಷ್ಯ ತನ್ನ ಸೋಮಾರಿತನದಲ್ಲಿ, ನಿರ್ಲಕ್ಷದಲ್ಲಿ ಸಾವಿನ ಕಠೋರ ನಿಷ್ಟುರತೆಯನ್ನು ಎದುರಿಸುವುದಿಲ್ಲವಾದ್ದರಿಂದ ಆತನ ನೆನಪು, ಆಶೆ, ರೋಮಾಂಚನಗಳು focus ಆಗಿರುವುದೇ ಇಲ್ಲ. ಸಾವಿನ ಶಾಕ್ ಮಾತ್ರ, ವಾಸ್ತವ ಮಾತ್ರ ಆತ ತನಗೆ ಉಳಿದ ಕ್ಷಣಗಳನ್ನು ಜೀವಿಸುವಂತೆ ಮಾಡಬಲ್ಲದು.
ನನ್ನ ಗಾಢ ದುಗುಡದ ವೇಳೆಯಲ್ಲಿ, ಸಾವಿನ ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನುಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು.
ಉಳಿದಿರುವ ಕಾಲ ಎಷ್ಟೋ ಗೊತ್ತಿಲ್ಲ. ಒಂದು ಕಣ್ಣು ಮುಚ್ಚಿಹೋಗಿರುವಾಗ, ಹೊರಗೆ ತುಂತುರು ಹನಿ ಬೀಳುತ್ತಿರುವ ಈ ಆಗಸ್ಟ್ ತಿಂಗಳ ಕೊನೆಯಲ್ಲಿ ಯಾವ ಪಂಕ್ತಿಯೊಂದಿಗೆ ಇದನ್ನು ಮುಗಿಸಲಿ ಎಂದು ನೋಡುತ್ತಿದ್ದೇನೆ. ಆ ಪರಿಣಾಮಕಾರಿ ಮಾತುಗಳೂ ಅನಗತ್ಯ. ಇಷ್ಟಕ್ಕೆ ಸುಮ್ಮನಾಗುತ್ತಿದ್ದೇನೆ.
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.