ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು

Date: 23-02-2025

Location: ಬೆಂಗಳೂರು


"ಬಾಶಿಕ ಸ್ತಿತಿಯ ಹಲವು ಆಯಾಮಗಳು ತಾಯ್ಮಾತಿನ ಶಿಕ್ಶಣಕ್ಕೆ ದೊಡ್ಡ ಮಟ್ಟದ ಸವಾಲುಗಳನ್ನು ಒಡ್ಡುತ್ತಿವೆ. ಬಾಶಾವಿಗ್ನಾನಿಗಳು ಈ ಹಲವಾರು ಸಮಸ್ಯೆಗಳ ಮೇಲೆ ಹೆಚ್ಚಿನ ಕೆಲಸವನ್ನು ಮಾಡಬೇಕಿದೆ. ಇಲ್ಲಿ ಇಂತಾ ಕೆಲವು ಸಮಸ್ಯೆಗಳನ್ನು ಮಾತಿಗೆ ತೆಗೆದುಕೊಂಡಿದೆ. ಅವುಗಳಲ್ಲಿ ಮುಕ್ಯವಾಗಿ ಮತ್ತು ಮೊಟ್ಟಮೊದಲನೆಯದಾಗಿ ಬಾರತದಾಗ ತಾಯ್ಮಾತುಗಳು ಎಶ್ಟು ಎಂಬ ಪ್ರಶ್ನೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತಿನ ಶಿಕ್ಶಣ: ಕೆಲವು ಸವಾಲುಗಳು’ ಕುರಿತು ಬರೆದಿದ್ದಾರೆ.

ತಾಯ್ಮಾತಿನಲ್ಲಿ ಶಿಕ್ಶಣವನ್ನು ಒದಗಿಸುವುದು ತಕ್ಶಣಕ್ಕೆ ಮಾಡಿಬಿಡಬಹುದಾದ ಸರಳ ಕೆಲಸ ಅಲ್ಲ. ಬಾರತದಂತಾ ಸಂಕರ‍್ಣ ಬಾಶಿಕ ಸ್ತಿತಿಯನ್ನು ಹೊಂದಿರುವ ಪರಿಸರಗಳಲ್ಲಿ ಇದು ಇನ್ನೂ ಸೂಕ್ಶವಾಗಿರುತ್ತದೆ. ಬಾರತದ ಬಹುತ್ವವನ್ನು ಪರಿಚಯಿಸುವ ಪ್ರಯತ್ನವನ್ನು ಮುಂದೆ ಒಂದು ಬಾಗದಲ್ಲಿ ಮಾಡಿದೆ. ಸದ್ಯಕ್ಕೆ ಬಾರತದಲ್ಲಿ ಶಿಕ್ಶಣ ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ಮಾತ್ರ ದೊರೆಯುತ್ತಿದೆ. ಬಾರತದ ಪ್ರತಿಯೊಂದು ರಾಜ್ಯವನ್ನು ಗಮನಿಸಿದಾಗಲೂ ಕರ‍್ನಾಟಕದಲ್ಲಿ ಇರುವಂತಾ ಬಹುಬಾಶಿಕ ಪರಿಸರಕ್ಕಿಂತ ಬಿನ್ನವಾದ ಸ್ತಿತಿ ಇಲ್ಲ. ತುಸು ಹೆಚ್ಚೂ ಕಡಿಮೆ ಇರಬಹುದು ಮಾತ್ರ. ಪ್ರತಿ ರಾಜ್ಯದಲ್ಲಿಯೂ ಆ ರಾಜ್ಯದ ಒಂದು ಪ್ರದಾನ ಬಾಶೆಯ ಜೊತೆಗೆ ಬಿನ್ನ ರಾಜ್ಯಗಳಲ್ಲಿ ಪ್ರದಾನ ಮತ್ತು ಆಡಳಿತ ಬಾಶೆಗಳಾಗಿರುವ ಹಲವಾರು ಬಾಶೆಗಳು ಬಳಕೆಯಲ್ಲಿವೆ. ಇನ್ನು ಕೆಲವು ಬಾಶೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾಶೆಗಳು ಆಡಳಿತ ಬಾಶೆಯ ಸ್ತಾನವನ್ನು ಪಡೆದುಕೊಂಡಿವೆ. ಉದಾಹರಣೆಗೆ, ತೆಲಂಗಾಣದಲ್ಲಿ ತೆಲುಗು ಮತ್ತು ಉರ‍್ದು ಇವೆರಡು ಇಂಗ್ಲೀಶಿನ ಜೊತೆಗೆ ಆಡಳಿತ ಬಾಶೆಗಳು. ಇನ್ನು ಕೆಲ ರಾಜ್ಯಗಳಲ್ಲಿ ಆ ರಾಜ್ಯದ ಮಂದಿ ಆಡುವ ಬಾಶೆಗಳಿಗಿಂತ ಬಿನ್ನವಾದ ಬಾಶೆಗಳು, ಅಂದರೆ ಹೆಚ್ಚಿನ ಮಂದಿ ಬಳಸದ ಬಾಶೆಗಳು ಆಡಳಿತ ಬಾಶೆಯಾಗಿವೆ. ಉದಾಹರಣೆಗೆ, ನಾಗಾಲ್ಯಾಂಡ್ ರಾಜ್ಯದಲ್ಲಿ ಹಲವಾರು ಬಾಶೆಗಳು ಇವೆ. ಬಿನ್ನ ಬುಡಕಟ್ಟುಗಳು, ಬಿನ್ನ ಬಾಶೆಗಳನ್ನು ಬಳಸುತ್ತವೆ. ಆದರೆ ಪಿಜಿನ್ ಆಗಿ ಬೆಳೆದ ನಾಗಾಮೀಸ್ ಇದು ಆಡಳಿತ ಬಾಶೆಯಾಗಿದೆ. ಕೆಲವು ರಾಜ್ಯಗಳಲ್ಲಿ ಆಡಳಿತ ಬಾಶೆ ಬೇರೆ ಮತ್ತು ಆ ನಾಡಿನ ವಿವಿದ ಪ್ರದೇಶಗಳಲ್ಲಿ ಸಂರ‍್ಕ ಬಾಶೆ ಬೇರೆ ಬೇರೆ ಆಗಿರುತ್ತವೆ. ಕರ‍್ನಾಟಕದಲ್ಲಿಯೆ ಈ ಪರಿಸರವನ್ನು ಕಾಣಬಹುದು. ಕರ‍್ನಾಟಕದ ಕೆಲವು ನಿರ‍್ದಿಶ್ಟ ಪರಿಸರಗಳಲ್ಲಿ ಕನ್ನಡ ಸಂರ‍್ಕ ಬಾಶೆಯಾಗಿ ಇಲ್ಲ. ಮಂಗಳೂರು ಸುತ್ತಲ ಪರಿಸರದಲ್ಲಿ ತುಳು, ಕೊಡಗಿನಲ್ಲಿ ಕೊಡವ, ಅಲ್ಲಲ್ಲಿ ತೆಲುಗು, ಉರ‍್ದು, ತಮಿಳು ಮೊದಲಾದ ಬಾಶೆಗಳು ಸಂಪರ‍್ಕ ಬಾಶೆಗಳಾಗಿವೆ. ಇಂತಾ ಪರಿಸರದಲ್ಲಿ ತಾಯ್ಮಾತಿನ ಶಿಕ್ಶಣ ಜಾರಿಗೆ ತರುವುದು ಬಹುದೊಡ್ಡ ಸವಾಲೆ ಸರಿ. ಅಲ್ಲದೆ ದ್ವಿಬಾಶಿಕ ತರಗತಿಗಳನ್ನು ಪರಿಚಯಿಸುವುದು ಕೂಡ ಸವಾಲಿನಂತೆ ನಿಲ್ಲುತ್ತದೆ.

ಬಾಶಿಕ ಸ್ತಿತಿಯ ಹಲವು ಆಯಾಮಗಳು ತಾಯ್ಮಾತಿನ ಶಿಕ್ಶಣಕ್ಕೆ ದೊಡ್ಡ ಮಟ್ಟದ ಸವಾಲುಗಳನ್ನು ಒಡ್ಡುತ್ತಿವೆ. ಬಾಶಾವಿಗ್ನಾನಿಗಳು ಈ ಹಲವಾರು ಸಮಸ್ಯೆಗಳ ಮೇಲೆ ಹೆಚ್ಚಿನ ಕೆಲಸವನ್ನು ಮಾಡಬೇಕಿದೆ. ಇಲ್ಲಿ ಇಂತಾ ಕೆಲವು ಸಮಸ್ಯೆಗಳನ್ನು ಮಾತಿಗೆ ತೆಗೆದುಕೊಂಡಿದೆ. ಅವುಗಳಲ್ಲಿ ಮುಕ್ಯವಾಗಿ ಮತ್ತು ಮೊಟ್ಟಮೊದಲನೆಯದಾಗಿ ಬಾರತದಾಗ ತಾಯ್ಮಾತುಗಳು ಎಶ್ಟು ಎಂಬ ಪ್ರಶ್ನೆ. ಇನ್ನೂ ಕುತೂಹಲವೆಂದರೆ ಬಾರತದ ಪರಿಸರದಲ್ಲಿ ತಾಯ್ಮಾತು ಎಂದರೇನು ಎಂಬ ಪ್ರಶ್ನೆಯೂ ಬರುತ್ತದೆ. ಬಾರತೀಯ ಜನಗಣತಿ ಕಾಲಾಂತರದ ತನ್ನ ಬಿನ್ನ ವರದಿಗಳಲ್ಲಿ ತಾಯ್ಮಾತನ್ನು ಬಿನ್ನವಾಗಿ ಅರ‍್ತ ಮಾಡಿಕೊಂಡಿರುವಂತಿದೆ. ಬಾರತದಲ್ಲಿ ತಾಯ್ಮಾತು ಎಂಬ ಪರಿಕಲ್ಪನೆಯನ್ನು ಇತ್ತೀಚೆಗೆ ತೆಗೆದುಕೊಂಡಿರುವುದರಿಂದ ಮತ್ತು ಈ ಪರಿಕಲ್ಪನೆಯನ್ನು ಏಕಬಾಶಿಕ ದೇಶಗಳ ಹಿನ್ನೆಲೆಯಿಂದ ತೆಗೆದುಕೊಂಡಿರುವುದರಿಂದ ಬಾರತೀಯ ಪರಿಸರದಲ್ಲಿ ಹಲವು ಸಮಸ್ಯೆಗಳು ಕಾಣಲೂಬಹುದು. ಬಾರತದ ಹಲವಾರು ಪ್ರದೇಶಗಳು ಸಹಜವಾಗಿಯೆ ದ್ವಿಬಾಶಿಕ ಇಲ್ಲವೆ ಬಹುಬಾಶಿಕ.

ಅಂದರೆ ಆ ಪರಿಸರದ ಪ್ರತಿ ಮಗು ಸಹಜವಾಗಿಯೆ ಆ ಪರಿಸರದ ಎರಡು ಇಲ್ಲವೆ ಎರಡಕ್ಕಿಂತ ಹೆಚ್ಚಿನ ಬಾಶೆಗಳನ್ನು ಎಳವೆಯಲ್ಲಿಯೆ ಪಡೆದುಕೊಂಡುಬಿಡುತ್ತದೆ ಇಲ್ಲವೆ ಕಲಿತುಬಿಡುತ್ತದೆ. ಇಂತಾ ಪರಿಸರದಲ್ಲಿ ಮಗುವಿನ ತಾಯ್ಮಾತನ್ನು ನರ‍್ದರಿಸುವುದು ಕೂಡ ಕುತೂಹಲದ ವಿಶಯವೆ. ತಂದೆ-ತಾಯಿಯ ತಾಯ್ಮಾತು ಒಂದು ಮತ್ತು ಮಕ್ಕಳ ತಾಯ್ಮಾತು ಇನ್ನೊಂದು ಆಗಿ ನೊಂದಾಯಿಸಿದ ದಾಕಲೆಗಳು ಸಿಗುತ್ತವೆ. ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಒಂದು ಬಾಶೆಯನ್ನು ಇನ್ನೊಬ್ಬರಿಗೆ ಇನ್ನೊಂದು ಬಾಶೆಯನ್ನು ತಾಯ್ಮಾತು ಎಂದು ನೊಂದಾಯಿಸಿರುವ ಕುತೂಹಲಕರ ಸ್ತಿತಿಗಳೂ ಇವೆ. ಇಂತಾ ದ್ವಿಬಾಶಿಕ ಪರಿಸರದಲ್ಲಿ ಕುಟುಂಬಗಳ ಒಳಗೆ ಕೆಲಕೆಲ ಸದಸ್ಯರು ಬಿನ್ನ ಬಾಶೆಯನ್ನು ಆಡುವ ಸ್ತಿತಿಯೂ ಕಾಣಿಸುತ್ತದೆ. ತಾಯಿ ಒಂದು ಬಾಶೆಯನ್ನಾಡುವ ಮತ್ತು ತಂದೆ ಇನ್ನೊಂದು ಬಾಶೆಯನ್ನಾಡುವ ಸ್ತಿತಿಗಳು ಸಹಜವಾಗಿಯೆ ಕಾಣಿಸುತ್ತವೆ. ಈ ಪರಿಸರಗಳನ್ನು ಸೂಕ್ಶಮವಾಗಿ ಅದ್ಯಯನ ಮಾಡಬೇಕಿದೆ. ಇಲ್ಲಿಂದ ಬಾರತೀಯ ಬಹುಬಾಶಿಕ ಮತ್ತು ದ್ವಿಬಾಶಿಕ ಪರಿಸರವನ್ನು ಅರ‍್ತ ಮಾಡಿಕೊಳ್ಳಲು ಹಲವಾರು ಅಂಶಗಳು ದೊರೆಯಬಹುದು.

ಈ ಸಮಸ್ಯೆಗಳ ಆಚೆಯೂ, ಬಹುಮುಕ್ಯವಾಗಿ ಬಾರತದಲ್ಲಿ ತಾಯ್ಮಾತುಗಳು ಎಶ್ಟು ಎಂಬುದು ಕೂಡ ಬಹುದೊಡ್ಡ ಸಮಸ್ಯೆ. ಬಾರತದ ತಾಯ್ಮಾತುಗಳ ಸಂಕೆಯನ್ನು ತಿಳಿದುಕೊಳ್ಳಬೇಕಾದರೆ ಮೊದಲು ತಾಯ್ಮಾತು ಎಂದರೇನು ಎಂಬ ವಿಚಾರವನ್ನು ಸರಿಯಾಗಿ ಸ್ಪಶ್ಟಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ತಾಯ್ಮಾತುಗಳನ್ನು ಅರ‍್ತ ಮಾಡಿಕೊಳ್ಳಲು ಸಾದ್ಯವಾಗದು. 2011ರ ಜನಗಣತಿ ಪ್ರಕಾರ ಸುಮಾರು 19,500ಕ್ಕೂ ಹೆಚ್ಚು ತಾಯ್ಮಾತುಗಳು ಬಾರತದಲ್ಲಿ ಇವೆ. ಹಾಗಾದರೆ ಇದು ಬಾಶಿಕ ಸಂಕರ‍್ಣ ಸ್ತಿತಿಯನ್ನು ತೋರಿಸುತ್ತದೆ ಎಂಬುದನ್ನು, ತಾಯ್ಮಾತನ್ನು ಅರ‍್ತ ಮಾಡಿಕೊಳ್ಳುವುದರಲ್ಲಿ ಇರುವ ಸವಾಲು ಎಂತದ್ದು ಎನ್ನುವುದನ್ನು ಹೇಳುತ್ತದೆ. ಹಲವು ಬಾರಿ ತಾಯ್ಮಾತು ಎಂದು ನೊಂದಣಿಯನ್ನು ಪಡೆದುಕೊಂಡಿರುವುದು ಜಾತಿ, ಮತ, ಪಂಗಡ, ಇತರ ದರ‍್ಮಿಕ ನಿಶ್ಟೆ, ಪ್ರದೇಶ, ವಲಸೆಯನ್ನು ಹೇಳುವ ಪದ, ಇತರ ಸಮಾನ ಗುಂಪಿನಿಂದ/ಗುಂಪುಗಳಿಂದ ಬಿನ್ನತೆ ತೋರಿಸುವುದಕ್ಕೆ ಬಳಕೆಯಾಗುವ ಪದ, ವಿಬಿನ್ನ ಸಾಮಾಜಿಕ ಹಿನ್ನೆಲೆಯ ಹೆಸರು ಆಗಿರಬಹುದು. ಹಲವು ಬಾರಿ ಇದು ಒಂದು ಲಿಪಿಯ ಹೆಸರು ಆಗಿದೆ, ಕೆಲ ಬಾರಿ ಯಾವುದಕ್ಕೂ ಸಂಬಂದಿಸಲಾಗದ ಪದಗಳೂ ಹೀಗೆ ತಾಯ್ಮಾತಿನ ಪಟ್ಟಿಯಲ್ಲಿ ಬಂದಿವೆ.

ಬಾಶೆ ಮತ್ತು ಅವನ್ನು ಆಡುವ ಬುಡಕಟ್ಟುಗಳು ಬಿನ್ನ ಹೆಸರುಗಳನ್ನು ಹೊಂದಿರುತ್ತವೆ. ಇಂತಾ ಸಂರ‍್ಬದಲ್ಲಿ ಈ ಎರಡೂ ತಾಯ್ಮಾತಿನ ಪಟ್ಟಿಯಲ್ಲಿ ಸೇರಿಕೊಂಡಿರುತ್ತವೆ. ಒಂದು ಬಾಶೆಗೆ ಹಲವಾರು ಹೆಸರುಗಳು ಇರುತ್ತವೆ. ಬಾರತದಲ್ಲಿ ಹೆಚ್ಚಿನ ಬುಡಕಟ್ಟುಗಳು, ಸಮುದಾಯಗಳು ಅವು ಆಡುವ ಬಾಶೆಗೆ ಆ ಬುಡಕಟ್ಟಿನ ಇಲ್ಲವೆ ಸಮುದಾಯದ ಹೆಸರನ್ನೆ ಹೊಂದಿವೆ. ಇಂತಾ ಕೆಲವು ಸಮುದಾಯಗಳು ಬಿನ್ನ ಪರಿಸರದಲ್ಲಿ ಹರಡಿಕೊಂಡಿರುತ್ತವೆ. ಕೆಲವು ಸಮುದಾಯಗಳು ಬಾರತದ ತುಂಬ ವ್ಯಾಪಿಸಿಕೊಂಡಿವೆ, ಇನ್ನು ಕೆಲವು ಕೆಲವು ರಾಜ್ಯಗಳಲ್ಲಿ ಕಂಡುಬರುತ್ತವೆ. ಇನ್ನು ಕೆಲವು ಸಮುದಾಯಗಳು ಒಂದು ರಾಜ್ಯದಲ್ಲಿ ಮುಕ್ಯವಾಗಿ ಕಂಡುಬಂದರೂ ಆ ರಾಜ್ಯದ ವಿವಿದ ಪ್ರದೇಶಗಳಲ್ಲಿ ಹರಡಿಕೊಂಡಿದ್ದಿರಲೂಬಹುದು.

ಹೀಗೆ ಬಿನ್ನ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಸಮುದಾಯಗಳಿಗೆ ಆಯಾ ಪ್ರದೇಶಗಳಲ್ಲಿ ಬಿನ್ನ ಹೆಸರುಗಳನ್ನು ಬಳಸುತ್ತಿರಬಹುದು. ಇಂತಾ ಹಲವಾರು ನಿರ‍್ಶನಗಳು ದೊರಕುತ್ತವೆ. ಕುತೂಹಲವೆಂದರೆ ಒಂದೆ ಪ್ರದೇಶದಲ್ಲಿಯೆ ಒಂದು ಸಮುದಾಯಕ್ಕೆ ಒಂದಕ್ಕಿಂತ ಹೆಚ್ಚಿನ ಹೆಸರುಗಳು ಬಳಕೆಯಲ್ಲಿ ಇದ್ದಿರಬಹುದು. ಈ ಹೆಸರಿನ ಜಟಿಲತೆ ಇಲ್ಲಿಗೆ ನಿಲ್ಲುವುದಿಲ್ಲ. ಒಂದು ಸಮುದಾಯದ ಒಳಗೆ ಹಲವಾರು ಒಳಗುಂಪುಗಳು ಇರುತ್ತವೆ. ಹೆಚ್ಚಿನ ಸಂರ‍್ಬಗಳಲ್ಲಿಯೂ ಈ ಒಳಗುಂಪುಗಳು ಸಾಮಾಜಿಕವಾಗಿರುತ್ತವೆ. ಆದರೆ ಕೆಲ ಸಂರ‍್ಬಗಳಲ್ಲಿ ಅದು ಪ್ರಾದೇಶಿಕ ಬಿನ್ನತೆ, ವಲಸೆಯ ಬಿನ್ನತೆ ಮೊದಲಾದ ಅಂಶಗಳನ್ನೂ ಒಳಗೊಂಡಿರಬಹುದು. ಹೀಗಾಗಿ ಒಂದೆ ಸಮುದಾಯ ಹತ್ತಾರು ಹೆಸರುಗಳನ್ನು ಹೊಂದಿರುತ್ತದೆ. ಇಂತಾ ಹಲವಾರು ಸಮುದಾಯಗಳನ್ನು ಬಾರತದ ತುಂಬ ಕಾಣಬಹುದು. ಹಾಗಾದರೆ ಈ ಎಲ್ಲ ಹೆಸರುಗಳೂ ತಾಯ್ಮಾತುಗಳಾಗಿ ಬರಬಹುದು, ಬರುತ್ತವೆ.

ಈ ಸಾಮಾಜಿಕ ಒಳಗುಂಪುಗಳಲ್ಲಿಯೂ ಶ್ರೇಣೀಕರಣ ವ್ಯವಸ್ತೆ ಇರುವುದು ಕೂಡ ಕಂಡುಬರುತ್ತದೆ. ಇದು ಆನಂತರ, ಅಂದರೆ ಈ ಎಲ್ಲ ಸಂಬಂದಿತ ಗುಂಪುಗಳ ಹೆಸರುಗಳನ್ನು ಒಂದೆಡೆ ತಂದು ಒಂದು ಗುಂಪು ಎಂದು ಗುರುತಿಸುವ ಸಂದರ‍್ಬದಲ್ಲಿ ಬರುತ್ತದೆ. ಇದು ಬಾಶೆಗೆ ಸಂಬಂದಿಸಿದ ಬಹುದೊಡ್ಡ ಸಮಸ್ಯೆ. ಸದ್ಯದ ಪುಸ್ತಕಕ್ಕೆ ಈ ವಿಶಯವನ್ನು ಮಾತನಾಡುವ ಉದ್ದೇಶ ಮತ್ತು ಸಂದರ‍್ಬ ಇಲ್ಲದಿರುವುದರಿಂದ ಇದನ್ನು ಇಲ್ಲಿ ಮಾತಿಗೆ ತೆಗೆದುಕೊಳ್ಳುವುದಿಲ್ಲ. ಆದರೆ ತಾಯ್ಮಾತಿನ ಶಿಕ್ಶಣವನ್ನು ದೊಡ್ಡ ದೊಡ್ಡ ಬಾಶೆಗಳಲ್ಲಿ ಸಹಜವಾಗಿ ಶುರು ಮಾಡಬಹುದು. ಸಣ್ಣ ಸಣ್ಣ ಮತ್ತು ಬುಡಕಟ್ಟು ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಶುರು ಮಾಡುವಾಗ ಈ ಎಲ್ಲ ವಿಚಾರಗಳನ್ನು ಹೆಚ್ಚು ಅದ್ಯಯನ ಮಾಡಬೇಕಾಗುತ್ತದೆ.

ಈ ಎಲ್ಲ ಸವಾಲುಗಳನ್ನು ಎದುರಿಸಿ ಒಂದು ಬಾಶಿಕ ಗುಂಪನ್ನು ಗುರುತಿಸಲು ಸಾದ್ಯವಾದರೆ ಇನ್ನೂ ಹಲವು ಸಮಸ್ಯೆಗಳು, ಸವಾಲುಗಳು ಒದಗುತ್ತವೆ. ಪಟ್ಯ ತಯಾರಿಯ ಸಂರ‍್ಬದಲ್ಲಿ ಆ ಗುಂಪಿನ ನಡುವೆ ಇರುವ ಬಿನ್ನತೆಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದು. ಬಾರತದಲ್ಲಿ ಹಲವಾರು ಸಾಮಾಜಿಕ ಮತ್ತು ಬಾಶಿಕ ಗುಂಪುಗಳು ಸಾಮಾನ್ಯವಾಗಿ ಒಂದೆ ಆಗಿ ಇರುವಂತೆ ಕಂಡರೂ ವಾಸ್ತವ ಹಾಗೆ ಇಲ್ಲ. ಇವೆರಡೂ ಬೇರೆಯಾದ ಪರಸ್ಪರ ಸಂಬಂದ ಇಲ್ಲದ ಹಲವಾರು ನಿರ‍್ಶನಗಳು ದೊರಕುತ್ತವೆ. ಒಂದೆ ಸಾಮಾಜಿಕ ಗುಂಪು ಹಲವು ಬಿನ್ನ ಬಾಶೆಗಳನ್ನು ಬಳಸುತ್ತಿರಬಹುದು. ಬಿನ್ನ ಸಾಮಾಜಿಕ ಗುಂಪುಗಳು ಒಂದು ಬಾಶೆಯನ್ನಾಡುವ ಪರಿಸ್ತಿತಿಯೂ ಕಂಡುಬರುತ್ತದೆ. ಕುತೂಹಲವೆಂದರೆ ಕನ್ನಡದಂತಾ ದೊಡ್ಡ ಸಂಕೆಯ ಬಾಶೆಯ ವಿಶಯದಲ್ಲಿ ಮಾತ್ರವಲ್ಲದೆ ಬುಡಕಟ್ಟುಗಳಂತಾ ಮತ್ತು ಸಣ್ಣ ಸಣ್ಣ ಬಾಶೆಗಳ ಸಂದರ‍್ಬದಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ. ಇಂತಾ ಸಂದರ‍್ಬದಲ್ಲಿ ಸಮಸ್ಯೆ ಬಿನ್ನವಾಗುತ್ತದೆ, ಸಂಕರ‍್ಣವಾಗುತ್ತದೆ. ಇದು ಸಾಮಾಜಿಕ ಸಮಸ್ಯೆಯನ್ನೂ ಒಳಗೊಳ್ಳುವ ಬಯ ಹೊಂದಿರುತ್ತದೆ.

MORE NEWS

ಅಮಾಸ ಕಥೆಯಲ್ಲಿ ಕಾಣುವ ಪುನರಾವರ್ತನಾ ಬದುಕು

04-04-2025 ಬೆಂಗಳೂರು

"ಅಮಾಸ ಕಥೆಯು ಇವರ ದ್ಯಾವನೂರು ಕಥಾ ಸಂಕಲನದಿಂದ ಆಯ್ದುಕೊಂಡ ಕಥೆಯಾಗಿದ್ದು ಇದು ತಬ್ಬಲಿಯಾದ ಅಮಾಸ ಎಂಬ ಹುಡುಗನನ್ನು...

ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

28-03-2025 ಬೆಂಗಳೂರು

"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...

ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

27-03-2025 ಬೆಂಗಳೂರು

"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆ...