Date: 10-11-2022
Location: ಬೆಂಗಳೂರು
ಅರಬ್ಬಿ ಕಡಲಿಗೆ ಎನ್ನುವ ಕವನದ ಸಾಲುಗಳು ಖುಲ್ಲಖುಲ್ಲಾ ಕತೆಯ ಒಂದು ಪ್ಯಾರಾದಂತೆ ಕಂಡು ಕಣ್ಣೆದರು ಆ ಘಟನೆ ಮರುಕಳಿಸಿದಂತಾದರೆ ಅದು ಖಂಡಿತಾ ನಿಮ್ಮ ತಪ್ಪಲ್ಲ. ಯಾಕೆಂದರೆ ರೇಣುಕಾರವರ ಸಾಲುಗಳಿಗೆ ಘಟನೆಗಳನ್ನು ಅಕ್ಷರಗಳಲ್ಲಿ ಪುನರ್ ರಚಿಸುವ ತಾಕತ್ತಿದೆ ಎನ್ನುತ್ತಾರೆ ಲೇಖಕಿ ಶ್ರೀದೇವಿ ಕೆರೆಮನೆ. ಅವರು ತಮ್ಮ ಸಿರಿ ಕಡಲು ಅಂಕಣದಲ್ಲಿ ಉತ್ತರಕನ್ನಡದ ‘ತಣ್ಣಗೆ ಕಥೆಯಾಗಿ ಹರಿಯುವ ಗಂಗಾವಳಿ’ಯ ಕುರಿತು ಬರೆದಿದ್ದಾರೆ.
ಅಂಕೋಲೆಯ ಗಂಗಾವಳಿಯಲ್ಲಿ ಹಾಗೂ ಸೀದಾ ಅದರ ಎದುರಲ್ಲೇ ಸಮುದ್ರ ಸೇರುವ ಅಘನಾಶಿನಿಯಲ್ಲಿ ಒಂದು ಕಥಾನಕ ಗುಣವಿದೆ. ಇಲ್ಲಿನ ಯಾವ ಹಳ್ಳಿಯ ಮುದುಕಿಯನ್ನು ಮಾತನಾಡಿಸಿದರೂ ಅಲ್ಲೊಂದು ಚಂದದ ಕಥೆ ಹೇಳದೆ ಅವಳು ಕಳಿಸುವುದಿಲ್ಲ. ಅಂಕೋಲಾದ ಗಂಗಾವಳಿ ತಟದ ಪುಟ್ಟ ಊರಾದ ಶಿರಗುಂಜಿಯಲ್ಲಿ ನನ್ನ ಸೋದರಮಾವ ಇದ್ದರು. ಅವರು ಏನೇ ಮಾತಾಡಿದರೂ ಮಾತಿಗೆ ಮುನ್ನ ಒಂದು ಗಾದೆ ಮಾತನ್ನಾಗಲಿ, ಚಿಕ್ಕ ದೃಷ್ಟಾಂತವನ್ನಾಗಲಿ ಹೇಳದೆ ಮಾತು ಮುಂದುವರೆಸುತ್ತಿರಲಿಲ್ಲ. ಆ ಕಾಲಕ್ಕೇ ಏಳನೆ ತರಗತಿ ಪಾಸು ಮಾಡಿದ್ದವರು ಅವರು. ಮನಸ್ಸು ಮಾಡಿದ್ದರೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗುವ ಅವಕಾಶವಿದ್ದರೂ ಊರಿನಲ್ಲಿ ಹೊಲ ಗದ್ದೆ ಮಾಡಿಕೊಂಡು ತಂದೆ ತಾಯಿಯರನ್ನು ನೋಡಿಕೊಂಡು ಇರಬೇಕೆಂದು ತೀರ್ಮಾನ ಮಾಡಿ ಹಳ್ಳಿಯಲ್ಲಿಯೇ ಉಳಿದು ಬಿಟ್ಟಿದ್ದರು. ‘ನೀನೇನಾದರೂ ಮಾಸ್ತರ ಆದರೆ ಆ ಮಕ್ಕಳಿಗೆ ಬರೀ ಗಾದೆ ಮಾತು ಮತ್ತು ಕಥೆನೆ ಆಗ್ತಿತ್ತು ಎಂದು ಸದಾ ನಾನು ತಮಾಷೆ ಮಾಡುತ್ತಿದ್ದೆನಾದರೂ ಅವರು ಹೇಳುತ್ತಿದ್ದ ಕಥೆಗಳಿಗೆ ಕಿವಿಗೊಡದೆ ಇರುತ್ತಿರಲಿಲ್ಲ.
ಉತ್ತರಕನ್ನಡದ ನೆಲಗುಣವೇ ಹೀಗೆ. ಇಲ್ಲಿನ ಬಹುತೇಕರು ಒಂದು ಕಥೆ ಹೇಳದೆ, ಒಂದು ಗಾದೆ ಹೇಳದೆ ಮಾತು ಮುಂದುವರಿಸಲಾರರು. ಎದೆಯೊಳಗೆ ಸದಾ ಹರಿವ ಕಥೆಯ ಝರಿ ಇವರ ಜೀವನಪ್ರೀತಿಯನ್ನು ಕಾಪಿಡುತ್ತದೆ ಎನ್ನುವುದು ರೇಣುಕಾ ರಮಾನಂದರ ‘ಸಂಬಾರ ಬಟ್ಟಲ ಕೊಡಿಸು’ ಸಂಕಲನ ಓದಿದ ನಂತರ ಅನ್ನಿಸದೇ ಇರದು. ಇಲ್ಲಿನ ಬಹುತೇಕ ಕವಿತೆಗಳನ್ನು ಓದಿದಾಗ ಒಂದು ಚಂದದ ಕಥೆ ಓದಿದ ಅನುಭವವಾಗುತ್ತದೆ.
ದಿಗಡದಿಮ್ಮಿ ಕಾಚನಬಟ್ಟೆ ಪೋರಿ
ದಿನಾ ಸಂಜೆ ಬಂಡೆ ಮರೆಗೆ ಯಾವನನ್ನೋ ಕರ‍್ಕೊಂಡು ಬಂದು
ಪೊಟ್ಲೆ ಶೇಂಗಾದ ಹುರುಬಲು ತೆಗೆಯುತ್ತ
ಗುಸಗುಸ ಪಿಸಪಿಸ
ಮೊನ್ನೆ ಅವರಿಬ್ಬರ ಹೆಣವನ್ನು ಮಹಜರು
ಮಾಡುವಾಗ ಟುವಾಲು ಮರೆತು ಬಂದ
ಪೋಲಿಸಪ್ಪನಿಗೆ
ಮೂಗು ಹಿಡಿಯಲು ಒಂದು ಆಳು ಬೇಕಾಯ್ತು
ಎನ್ನುವ ‘ಸಾಕಾಗಿದೆ ಅರಬ್ಬಿ ಕಡಲಿಗೆ’ ಎನ್ನುವ ಕವನದ ಸಾಲುಗಳು ಖುಲ್ಲಖುಲ್ಲಾ ಕತೆಯ ಒಂದು ಪ್ಯಾರಾದಂದೆ ಕಂಡು ಕಣ್ಣೆದರು ಆ ಘಟನೆ ಮರುಕಳಿಸಿದಂತಾದರೆ ಅದು ಖಂಡಿತಾ ನಿಮ್ಮ ತಪ್ಪಲ್ಲ. ಯಾಕೆಂದರೆ ರೇಣುಕಾರವರ ಸಾಲುಗಳಿಗೆ ಘಟನೆಗಳನ್ನು ಅಕ್ಷರಗಳಲ್ಲಿ ಪುನರ್ ರಚಿಸುವ ತಾಕತ್ತಿದೆ. ಹೀಗಾಗಿಯೇ ಹೆಚ್ಚಿನ ಕವನಗಳು ಕಥನ ಶೈಲಿಯಲ್ಲಿಯೇ ಮುಂದುವರೆಯುತ್ತ ಕವನದ ನಾಜೂಕನ್ನು ಬಿಟ್ಟುಕೊಡದೆ ನಮ್ಮೊಳಗೆ ಒಂದು ಸಣ್ಣ ಕಂಪನವನ್ನು ಹುಟ್ಟಿಸುತ್ತವೆ.
ನಿನ್ನೆ ಇದೇ ಹೊತ್ತಿಗೆ ಇಲ್ಲೇ ತೆಣೆಯ ಮೇಲೆ
ಕೋಳಿಬುಟ್ಟಿಯ ಸಮೀಪ
ಕಾಲಿಗೆ ಸಿಕ್ಕ ಕರಿಕುನ್ನಿ ಕುಂಯ್ಯೋ
ಅನ್ನುವಂತೆ ಜಟಾಪಟಿ ಹೊಡೆದಾಟ
ಅವನಕೈಯ್ಯಲ್ಲಿತ್ತು ಇವಳ ಜುಟ್ಟು
ಇವಳ ಒಡೆದಬಳೆ ತಾಗಿ ಅವನ ಕೆನ್ನೆ ಹೋಳಾಗಿತ್ತು.
ಎನ್ನುವ ಹೊಂದಿಕೆ ಎಂಬುದು ಕವಿತೆ ಏನೆಲ್ಲವನ್ನೂ ಹೇಳುತ್ತದೆ. ಬಡ ಹೆಂಗಸೊಬ್ಬಳ ದುಡಿಮೆ, ಅವಳ ದುಡಿಮೆಯಲ್ಲಿಯೇ ಬೀಡಿ ಬೆಂಕಿಪೊಟ್ಟಣ ಕೊಳ್ಳುವ ಗಂಡ ಒಮ್ಮೊಮ್ಮೆ ಅವಳ ಮೇಲೆ ಅಧಿಕಾರ ಚಲಾಯಿಸುತ್ತ ಅವಳ ಜುಟ್ಟು ಹಿಡಿಯುವ ಪ್ರಸಂಗ ಹಾಗೂ ಕೊನೆಯಲ್ಲಿ ಅಜಾನಕ್ ಆಗಿತೆಗೆದುಕೊಳ್ಳುವ ತಿರುವು ಕವಿತೆಯನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಇಡೀ ಸಂಕಲನದ ಸ್ಥಾಯಿಭಾವ ನಿಸ್ಸಂಶಯವಾಗಿ ಪ್ರೇಮವೇ ಆದರೂ ಪ್ರೇಮದ ಆಳದಲ್ಲಿ ಹುದುಗಿರುವ ವಿಷಾದ, ಸಣ್ಣತನ, ಈರ್ಷೆ ಹಾಗೂ ನೋವುಗಳು ಮತ್ತೆ ಮತ್ತೆ ಕಾಡುತ್ತವೆ. ಹೆಸರು ಎಂಬ ಕವಿತೆ ಇದಕ್ಕೊಂದು ತಾಜಾ ಉದಾಹರಣೆ.
ಸಿಕ್ಕಸಿಕ್ಕಲ್ಲೆಲ್ಲ ಅವನ ಹೆಸರನ್ನು ಬರೆಯುವ ಅವಳು ಊರ ಬಾವಿಕಟ್ಟೆ, ಟಿಕೇಟಿನ ಹಿಂಬದಿ ಕೊನೆಗೆ ನ್ಯಾಪ್‌ಕಿನ್‌ನ ರ‍್ಯಾಪರ್ ಮೇಲೂ ಅವನ ಹೆಸರು ಬರೆಯುತ್ತಾಳೆ ಅವಳು. ಅದು ಗಂಡನಿಗೆ ಗೊತ್ತಿರುವ ವಿಷಯವೇ ಆದರೂ ಊರವರೆಲ್ಲ ಸೇರಿ ಚಹ ಕುಡಿಯುವಾಗ ಅವನಿಗೆ ಹೇಳಿ ಆತ ಕೋಪದಿಂದ ಹಲ್ಲು ಮಸೆಯುತ್ತ ಮನೆಗೆ ಬಂದರೆ ಅವಳು ತಾನೂ ಊಟಮಾಡದೆ ಗಂಡನಿಗಾಗಿ ಮೀನು ಸಾರು ತಣ್ಣಗಾಗದಂತೆ ಕೆಂಡದ ಉರಿಗೆ ಗಾಳಿ ಹಾಕುತ್ತ ಕಾಯುತ್ತಿದ್ದಾಳೆ. ಗಂಡನ ಕೋಪ ಆಗಲೇ ತಣ್ಣಗಾಗಿದೆ. ಹೆಸರು ಬರೆವ ಕಾಯಕ ಮತ್ತೆ ಮುಂದುವರೆದಿದೆ ಎನ್ನುವುದನ್ನು ಓದುತ್ತ ಒಂದು ಚಂದದ ಸಂಸಾರ ಹಾಗೂ ಹಿಂದೆಂದೋ ಆಗಿ ಹೋದ ಒಂದು ಪುಟ್ಟ ಪ್ರೇಮಕಥೆ ಕಣ್ಣೆದುರಿಗೆ ಚಲನಚಿತ್ರದಂತೆ ಓಡುತ್ತದೆ.
ಒಂದು ಮೊಂಬತ್ತಿ ಮೆರವಣಿಗೆಯಲ್ಲಿ
ಇನ್ಯಾರದ್ದೋ ಶವಯಾತ್ರೆಯಲ್ಲಿ
ಮತ್ಯಾವುದೋ ತೀವ್ರ ಪರಿಹಾರ
ಕಾರ್ಯಾಚರಣೆಯ ಸಂದರ್ಭದಲ್ಲಿ
ಗಂಭೀರ ಅಥವಾ ದುಃಖಿತ ಮುಖ ಹೊತ್ತು
ಮುಖಾಮುಖಿಯಾಗಿದ್ದು ಬಿಟ್ಟರೆ ನಮಗಾಗಿಯೇ
ನಾವು ಸಿಕ್ಕಿಕೊಂಡಿದ್ದೇ ಇಲ್ಲ.
ಎನ್ನುವ ಪ್ರೇಮ ಎಂಬ ಕವನದ ಸಾಲುಗಳು ಪ್ರೇಮದ ವ್ಯಾಖ್ಯಾನವನ್ನು ಸಂಕಲನದ ಮೊದಲಿಗೇ ನಮ್ಮೆದುರಿಗೆ ತೆರೆದಿಡುತ್ತವೆ. ಇಲ್ಲಿರುವ ಪ್ರೇಮ ಗಂಡು ಹೆಣ್ಣು ಜೊತೆಯಾಗುವ, ಒಬ್ಬರಿಗೊಬ್ಬರು ಭೇಟಿಯಾಗಿ ತಮ್ಮ ಸಲ್ಲಾಪಗಳಲ್ಲಿ ಜಗತ್ತನ್ನೇ ಮರೆಯುವ ಹಪಾಹಪಿ ಪ್ರೇಮವಲ್ಲ. ಇದೊಂದು ತರಹದ ವಿರಹದ ಪ್ರೇಮ. ದಕ್ಕಿಸಿಕೊಳ್ಳಲಾಗದೆಯೂ ದಕ್ಕಿಸಿಕೊಂಡಂತಹ ಪ್ರೇಮ. ಜೊತೆಗಿರದಿದ್ದರೂ ಸದಾ ಜೊತೆಗಿರುವ ಭಾವ ನೀಡುವ ಪ್ರೇಮ. ಅವಳ ಸಂಸಾರದಲ್ಲಿ ಅವಳು, ವನ ಸಂಸಾರದಲ್ಲಿ ಅವನು ಸದಾ ಸುಖಿಗಳು. ಆದರೂ ಹಿಂದೊಮ್ಮೆ ಎಂದೋ ಘಟಿಸಿ ಹೋದ ಅಥವಾ ಘಟಿಸದೇ ಹೋಗಿರಬಹುದಾದ ಪ್ರೇಮ ಇಲ್ಲಿ ಸದಾ ಸಂಚರಿಸುತ್ತದೆ. ಥೇಟ್ ಅತೃಪ್ತ ಆತ್ಮದಂತೆ. ಅದಕ್ಕೆ ಸದಾ ಜೊತೆಯಾಗಿರುವ ಬಯಕೆಯಿಲ್ಲ. ಆದರೂ ಆಗಾಗ ನೋಡಬೇಕು. ಅದು ದೂರದಿಂದಾರೂ ಸರಿ. ಒಮ್ಮೆ ಕಣ್ಣೋಟಕ್ಕೆ ಸಿಕ್ಕುಬಿಟ್ಟರೆ ಮತ್ತೆ ವರ್ಷಗಟ್ಟಲೆ ನಿರಾಳ.
ನಾನು ಅವನಿಗಾಗಿ ಮತ್ತೆ ಮತ್ತೆ
ಕಾದಿರುವುದು ನಾಳೆ ಅರಳಲೇ ಬೇಕಿರುವ
ಹಿತ್ತಲ ಹೊಂಗೆ ಹೂಗಳ ಗೊಮಚಲುಗಳಿಗೆ ಗೊತ್ತು
ಆಗಾಗ ಕಣ್ಣಲ್ಲಿ ನೀರು ಉಕ್ಕಿ
ತಡೆಯಲಾರದಾದಾಗ
ಬೇರೆ ದಾರಿ ಕಾಣದೆ ಅಲ್ಲಿಗೆ
ಸಂದೇಶ ರವಾನಿಸುತ್ತವೆ
ಎನ್ನುವ ಖಾಲಿ ಊಹೆ ಕವನದ ಸಾಲುಗಳು ಸಿಗುವ ಕಾತರವನ್ನು ಹೇಳುತ್ತವೆ. ಅವನ ಮನೆಯ ಸರ‍್ಯಾಮಿಕ್ ಪಾಟುಗಳಲ್ಲಿ ಅರಳಿರುವ ಸ್ಪೈಡರ್ ಲಿಲ್ಲಿ ಹೂಗಳೂ ಅವನು ಚಡಪಡಿಸುವುದನ್ನು ಇವಳಿಗೆ ತಲುಪಿಸುತ್ತದೆ. ಆಗೊಮ್ಮೆ ಜಾತ್ರೆಯ ನಡುವಿನಲ್ಲೋ ಸಂದಿಗೊಂದಿಯಲ್ಲೋ ನೋಡಿದರೆ ಸಾಕು. ನೋಡಲೇ ಬೇಕೆಂದು ಯೋಜನೆ ರೂಪಿಸಿಕೊಂಡು ಹೊರಟರೆ ಇಬ್ಬರೂ ಒಬ್ಬರನ್ನೊಬ್ಬು ಖಂಡಿತಾ ನೋಡಲಾಗದ ಹತ್ತಾರು ಅನುಭವಗಳು ಈಗಾಗಲೇ ಆಗಿವೆ. ಮಗು ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಳ್ಳುವುದೋ ಅಥವಾ ಅವನು ಬರಬೇಕಾಗಿದ್ದ ವಿಮಾನವು ಹವಾಮಾನದ ವೈಪರಿತ್ಯದಿಮದಾಗಿ ನಿಂತು ಹೋಗುವುದೋ ಏನಾದರೊಂದು ಆಗಿ ಬಿಡುವುದರಿಮದ ನೋಡಲೇ ಬೇಕು ಎಂಬುದೂ ಇಲ್ಲ ಎಂದುಕೊಳ್ಳುತ್ತ ಪ್ರೇಮವನ್ನು ನಿಭಾಯಿಸಲು ಕಲಿತುಕೊಳ್ಳುವ ಪರಿ ಆಸಕ್ತಿದಾಯಕ. ಯಾಕೆಂದರೆ
ಪರಸ್ಪರ ಭೇಟಿಯಾಗುವ ತನಕವೂ
ಪ್ರೇಮ
ಹಾಗೆಯೇ ಉಳಿದಿರುತ್ತದೆ
ನಂತರ ಅಂತರ ಶುರುವಾಗುತ್ತದೆ
ಎನ್ನುವ ಪ್ರಜ್ಞಾಪೂರ್ವಕವಾದ ಅರಿವು ಇರುವ ಪ್ರಬುದ್ಧತೆ ಅಲ್ಲಿದೆ. ಜೊತೆಗೆ ಇಂತಹ ಕವಿತೆಗಳ ಕಥೆ ಹೇಳುವ ಶೈಲಿಯು ಓದುಗನ್ನು ಎಲ್ಲಿಯೂ ಸಾಕು ಎಂದೆನಿಸುವಂತೆ ಮಾಡುವುದಿಲ್ಲ. ಹಕ್ಕಿ ಹೋದದ್ದು ಎಲ್ಲಿಗೆ, ಖರೆ ಹೇಳಿ, ತುಸು ಮಳ್ಳು ಇಬ್ಬರೂ, ಗುಳಾಪಿನೊಳಗೊಂದು, ಮೂರನೆ ಕಿಟಕಿ, ಹೆದರುಪುಕ್ಕಿ ನಾನು ಮುಂತಾದ ಕವಿತೆಗಳ ಒಳಗಿರುವ ಕಥೆಗಳು ಕವಿತೆಯನ್ನು ನವಿರಾಗಿ, ಆಪ್ತವಾಗಿ ಓದಿಕೊಳ್ಳುವಂತೆ ಮಾಡುತ್ತದೆ.
ಅವನು ಎನ್ನುವುದು ಇಡೀ ಸಂಕಲನದಲ್ಲಿ ಭೋರ್ಗರೆವ ಕಡಲು. ಹೆಚ್ಚಿನ ಕವನಗಳನ್ನು ಕೈ ಹಿಡಿದು ನಡೆಸುವವನೇ ಅವನು. ಕೆಲವು ಕವನಗಳ ಒಳಗೆ ಗುಪ್ತಗಾಮಿನಿಯಾಗಿ ಸುಳಿದಾಡಿದರೆ ಇನ್ನು ಕೆಲವು ಕವನಗಳ ಪ್ರಕಟಿತ ನಾಯಕ. ಅವನಿಲ್ಲದೆ ಕವನಗಳು ಮುಂದುವರೆಯುವುದೇ ಇಲ್ಲ. ಹೀಗಾಗಿ ಆತ ಸಂಕಲನ ಓದುತ್ತ ಹೋದಂತೆ ನಮ್ಮೊಳಗೂ ಆತ ಇಳಿಯುತ್ತ ಹೋಗುವ ವಿಸ್ಮಯವನ್ನು ಅನುಭವಿಸಿಯೇ ತಿಳಿಯಬೇಕು.
ಹಾಳಾಗಿ ಹೋದವನು ಕವಿತೆಯನ್ನು ಒಮ್ಮೆ ಓದಿನೋಡಬೇಕು. ಅದರಲ್ಲಿ ಸಿಕ್ಕೂ ಸಿಗದಂತಹ ಅವನಿದ್ದಾನೆ. ಒಂದು ಚಂದದ ಪ್ರೇಮವಿದೆ. ಈ ಕಾಲದ ತಲ್ಲಣಗಳಿವೆ. ಕೊರೋನಾದಿಂದಾಗಿ ಹತ್ತಿರದವರು ಏನನ್ನಾದರೂ ಕಳಿಸಿದರೂ ತಕ್ಷಣ ಮುಟ್ಟಲಾಗದ, ತೆಗೆದು ನೋಡಲಾಗದ ದ್ವಂದ್ವವಿದೆ. ಕೊನೆಯಲ್ಲಿ ಎಲ್ಲ ಮುಗಿದು ಹೋದ ಉದಾಸೀನವೂ ಇದೆ.
ಕೆಲವೊಮ್ಮೆ ಇಲ್ಲಿನ ಕವಿತೆಗಳು ತೀರಾ ಗದ್ಯ ಅನ್ನಿಸಿ ಬಿಡುತ್ತದೆಯಾದರೂ ಕವಯತ್ರಿ ಅದರ ಕುರಿತು ಯೋಚಿಸುವುದಿಲ್ಲ. ಹೇಳಬೇಕಾದುದನ್ನು ಹೇಳಿಬಿಡುವ ಹಾಗೂ ಅದೂ ಕೂಡ ನೇರಾನೇರ ಹೇಳಿಬಿಡುವ ಒತ್ತಡವೊಂದು ಇಲ್ಲಿನ ಅಂತರಾಳದಲ್ಲಿದೆ. ಆಗಲೇ ಹೇಳಿದಂತೆ ಉತ್ತರಕನ್ನಡದ ನೆಲಗುಣ ಅದು. ಜಯಂತ ಕಾಯ್ಕಿಣಿಯವರ ಕವನಗಳಲ್ಲೊಂದು ಕಥೆಯ ಛಾಯೆ ಹಾಗೂ ಕಥೆಗಳಲ್ಲಿ ಕವನದ ನವಿರತೆ ಇರುವಂತೆ, ಚಿತ್ತಾಲರ ಕಥೆಗಳಲ್ಲಿ ಕಾಣುವ ಲಾಲಿತ್ಯದಂತೆ, ವಿನಯಾ ಒಕ್ಕುಂದರವರ ಕಥೆಗಳಲ್ಲಿ ತಣ್ಣನೆ ಹರಿವ ಜ್ವಾಲಾಮುಖಿಯ ಒಡಲಂತೆ, ಸಂದೀಪ ನಾಯಕರ ಹಳ್ಳಿಯೊಳಗಿನ ಸಣ್ಣ ಸಣ್ಣ ಸಂಗತಿಗಳನ್ನು ದಾಖಲಿಸುವ ಲೆಕ್ಕಾಚಾರದಂತೆ ರೇಣುಕಾರವರ ಕವನಗಳೂ ಯಾವುದೇ ಆಣೆಕಟ್ಟಿಗೂ ನಿಲ್ಲದ ಕಾಳಿಯಂತೆ ಅಬ್ಬರಿಸಿ ಮುಂದುವರೆಯುತ್ತದೆ. ಯಕ್ಷಗಾನ ಹಾಗೂ ಕಡಲು ಇಲ್ಲಿನ ಬಹುತೇಕ ಕವಿ ಹಾಗೂ ಕವಯತ್ರಿಯರನ್ನು ಪೊರೆವ ಕಣಜ. ರೇಣುಕಾ ಇಲ್ಲಿ ಈ ಕಣಜಗಳನ್ನು ಯಥೇಶ್ಚವಾಗಿ ಬಳಸಿಕೊಂಡಿರುವುದನ್ನು ಗಮನಿಸಬೇಕು. ಅವನು ಹಾಗೂ ಪ್ರೇಮ ಎಂಬುದು ಹೇಗೆ ಪ್ರತಿ ಕವನದಲ್ಲೂ ಅಂತರ್ಗಾಮಿಯಾಗಿ ಹರಿಯುತ್ತದೆಯೋ ಕಡಲೂ ಕೂಡ ಅಂತೆಯೇ ಗುಪ್ತವಾಗಿ ಉಮ್ಮಳಿಸುತ್ತಲೇ ಇರುತ್ತದೆ. ಅದೆ ಬಣ್ಣ, ಅರಬ್ಬಿ ಕಡಲಿಗೆ ಹಾಗೂ ಉಳಿದ ಕವನಗಳಲ್ಲಿ ಬರುವ ಸಮುದ್ರ ಎಲ್ಲಿಯೂ ಅನ್ಯ ಎಂದೆನಿಸದೆ ಅವನಷ್ಟೇ ಆಪ್ತವಾಗುತ್ತದೆ. ನಡು ನಡುವೆ ಧುತ್ತನೆ ಎದುರಾಗಿ ಕಕ್ಕಾಬಿಕ್ಕಿಯಾಗಿಸುವ ಹಿಂದಿ ಕೊಂಕಣ ಪದಗಳು ಉಳಿದವರಿಗೆ ಮಿಶ್ರಣದಂತೆ ಕಂಡರೂ ಉತ್ತರಕನ್ನಡದವರಿಗೆ ಅದು ದೈನಂದಿನ ಮಾತು.
ಈಗಾಗಲೇ ಹಸ್ತಪ್ರತಿಗೆ ವಿಭಾ ಪ್ರಶಸ್ತಿ ಹಾಗೂ ಸಂಕಲನಕ್ಕೆ ಸಂಗಂ ಕಾವ್ಯ ಪ್ರಶಸ್ತಿ ಪಡೆದ ಸಂಬಾರ ಬಟ್ಟಲ ಕೊಡಿಸು ತನ್ನ ತೀವ್ರತೆಯಿಂದಲೇ ಓದುಗರನ್ನು ಸೆಳೆಯುತ್ತ ಗಂಗಾವಳಿಯಂತೆ ಹರಿಯುತ್ತಿರಲಿ.
ಈ ಅಂಕಣದ ಹಿಂದಿನ ಬರಹಗಳು:
ಬದಲಾವಣೆಗಾಗಿ ಆತ್ಮಾವಲೋಕನವೊಂದೇ ಮಾರ್ಗ
ವಿಸ್ತಾರ ವಿಷಯದ ಗುಟುಕು ನೀಡುವ ಮಾಯದ ಕಥೆಗಳು
ಅಚ್ಚರಿಗೆ ನೂಕುವ ಹೊಳಹುಗಳು
ಗಜಲ್ ಕಡಲಲ್ಲಿ ಹಾಯಿದೊಣಿಯಲ್ಲೊಂದು ಸುತ್ತು
ಹಲವು ಜಾತಿಯ ಹೂಗಳಿಂದಾದ ಮಾಲೆ
ನಮ್ಮೊಳಗೆ ಹೆಡೆಯಾಡುವ ಕಥೆಗಳು
ವೈಕಂ ಮಹಮ್ಮದ್ ಬಶೀರರ ’THE MAN’ - ಮನುಷ್ಯ ಸ್ವಭಾವಗಳಿಂದ ಹೊರತಾಗದ ಕೇವಲ ಮನುಷ್ಯ
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ತ.ರಾ. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...
"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
©2024 Book Brahma Private Limited.