ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ

Date: 12-11-2022

Location: ಬೆಂಗಳೂರು


ಕನ್ನಡ ಮತ್ತು ಉರ್ದು ಕವಿಗಳ ಒಂದೇ ವೇದಿಕೆಯ ಗೋಷ್ಠಿ ಏರ್ಪಡಿಸಿ ಭಾಷಾ ಸಮನ್ವಯ ಮತ್ತು ಸೌಹಾರ್ದತೆ ಸಂತುಲಿತಗೊಳಿಸಿದ ಶ್ರೇಯಸ್ಸು ಮಂಜೂರ್ ಅಹ್ಮದ ತನಹಾ ಅವರಿಗೆ ಸಲ್ಲುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ‘ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ’ ಕುರಿತು ಬರೆದಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಮಾತ್ರವಲ್ಲ ಭಾರತಕ್ಕೆ ಆಗಿನ್ನೂ ಸ್ವಾತಂತ್ರ್ಯ ಪೂರ್ವದ ದಿನಮಾನಗಳು. ಅಂದು ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಬೀದರ, ಕಲಬುರ್ಗಿ, ರಾಯಚೂರು ಈ ಮೂರು ಜಿಲ್ಲೆಗಳಲ್ಲಿ ಉರ್ದುವಿನದೇ ಪ್ರಾಬಲ್ಯ. ಹೊರಗೆ ಉರ್ದು ಬೋರ್ಡ್ ಹಾಕಿ ಮಠದೊಳಗೆ ಕದ್ದು ಕನ್ನಡ ಕಲಿಸುತ್ತಿದ್ದ ಅಳುಕಿನ ದುರ್ದಿನಗಳು. ಅಂತಹ ದುರ್ದಿನಗಳ ನಡುವೆ ಭಾಲ್ಕಿಯ ಪಟ್ಟದ ದೇವರು, ಕಲಬುರ್ಗಿಯ ದೊಡ್ಡಪ್ಪ ಅಪ್ಪ ಅವರು ಆ ಕಾಲದಲ್ಲಿ ಈ ರೀತಿಯಾಗಿ ಕನ್ನಡ ಕಲಿಸುವ ಹರಸಾಹಸ ಮೆರೆದವರು. ಅಂತೆಯೇ ಅವು ಕನ್ನಡದ ಪಾಲಿಗೆ ಅಕ್ಷರಶಃ ದುರಿತಕಾಲದ ದಿವಸಗಳು. ಅದೇನಿದ್ದರೂ ಆಗ ನಿಜಾಮ ಸರಕಾರದ ಉರ್ದುವಿನದೇ ಪಾರುಪತ್ಯ. ಅಂತಹ ಕಡುಕಷ್ಟದ ಕಾಲಮಾನದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಇತ್ಯಾದಿಗಳ ಕುರಿತು ಚಿಂತನೆಗಳು ಕುಡಿಯೊಡೆದು ಅರಳುತ್ತವೆಂದರೆ ನಂಬಲಾಗದು.

ಹೌದು ಅಚ್ಚರಿಯಂತೆ ಆಗ ಕನ್ನಡ ಸಾಹಿತ್ಯ ಸಂಸ್ಕೃತಿಗಾಗಿ ಟೊಂಕಕಟ್ಟಿ ನಿಂತ ಕನ್ನಡ ಸಾಹಿತ್ಯ ಸಂಘಗಳು ಹುಟ್ಟಿಕೊಂಡಿವೆಯೆಂಬುದು ಪರಮ ಸೋಜಿಗವೇ ಸರಿ. ಜಿಲ್ಲಾ ಕೇಂದ್ರ ಕಲಬುರ್ಗಿ ಮತ್ತು ತಾಲೂಕು ಕೇಂದ್ರ ಸುರಪುರ, ಅದರ ಬಾಜೂಕಿರುವ ರಂಗಂಪೇಟೆಯಂತಹ ಸಣ್ಣ ಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಂಘಗಳು ಹುಟ್ಟಿಕೊಳ್ಳುತ್ತವೆ. ಕಲಬುರ್ಗಿಯಲ್ಲಿ ತವಗ ಭೀಮಸೇನರಾಯರು, ರಂಗಂಪೇಟೆಯಲ್ಲಿ ಎಂ. ಆರ್. ಬುದ್ಧಿವಂತಶೆಟ್ಟರು, ಸುರಪುರದಲ್ಲಿ ಹೆಬ್ಬಾಳ ಶೇಷಶಾಸ್ತ್ರಿಗಳು ಕನ್ನಡ ಸಾಹಿತ್ಯ ಸಂಘಗಳನ್ನು ಸ್ಥಾಪಿಸಿದ ಕನ್ನಡದ ಪ್ರಾತಃಸ್ಮರಣೀಯರು. 1941ರಲ್ಲಿ ಕಲಬುರ್ಗಿ, 1942ರಲ್ಲಿ ಸುರಪುರ ಮತ್ತು 1943ರಲ್ಲಿ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಗಳು ಸ್ಥಾಪನೆಯಾಗುತ್ತವೆ.

ಹಾಗೆ ಹುಟ್ಟಿಕೊಂಡ ಸಾಹಿತ್ಯ ಸಂಘಗಳು ಸಾಂಸ್ಕೃತಿಕವಾಗಿ ಸಾಹಸವನ್ನೇ ಬಾಳಿ ಬೆಳಗುತ್ತವೆ. ಕನ್ನಡ ಭಾಷಾ ಕಲಿಕೆ ಮತ್ತು ಸಾಹಿತ್ಯ ಪರಿಚಾರಿಕೆ ಸಂಘದ ಮೊದಲ ಆಯ್ಕೆ. ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲದ ನಾಡಹಬ್ಬ ಆಚರಣೆ ಕನ್ನಡ ಸಾಹಿತ್ಯ ಸಂಘದ ಆದ್ಯತೆ ಆಗಿತ್ತು‌. ನಾಡಹಬ್ಬ ಆಚರಣೆಗೆ ಅತಿಥಿಗಳಾಗಿ ದೂರದ ಬೆಂಗಳೂರು ಮತ್ತಿತರೆ ಭಾಗಗಳಿಂದ ಸಾಹಿತಿಗಳು ಆಗಮಿಸುತ್ತಿದ್ದರು. ಹೀಗೆ ಕಲಬುರ್ಗಿಯ ಕನ್ನಡ ಸಾಹಿತ್ಯ ಸಂಘದ ಕಾರ್ಯಕ್ರಮಗಳಿಗೆ ಬರುವ ಹೆಸರಾಂತ ಸಾಹಿತಿಗಳನ್ನು ಬುದ್ದಿವಂತಶೆಟ್ಟರು ತಮ್ಮ ರಂಗಂಪೇಟೆ ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಕರೆದುಕೊಂಡು ಬರದೇ ಬಿಡುತ್ತಿರಲಿಲ್ಲ.

ಅಂತೆಯೇ ಇವತ್ತಿಗೂ ರಂಗಂಪೇಟೆ ಸುರಪುರ ಅವಳಿ ಊರುಗಳ ಸಾಹಿತ್ಯ ಸಂಘಗಳಲ್ಲಿ ಬಿ. ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಸೀತಾರಾಮಯ್ಯ, ತ. ರಾ. ಸುಬ್ಬರಾಯ, ಹಾ. ಮಾ. ನಾಯಕರಂತಹ ಹೇಮಾಹೇಮಿ ಸಾಹಿತಿಗಳು ಅತಿಥಿಗಳಾಗಿ ಭಾಗವಹಿಸಿದ ಬೆಳದಿಂಗಳಿನಂತಹ ನವಿರು ನೆನಪುಗಳಿವೆ. ಅಷ್ಟೇ ಯಾಕೆ ಸಾಹಿತ್ಯ ಸಂಘದ ಕಾರ್ಯಚಟುವಟಿಕೆಗಳನ್ನು ಅವರೆಲ್ಲರೂ ಮೆಚ್ಚಿ ಮಾತಾಡಿದ್ದು, ತಮ್ಮ ಅಭಿಪ್ರಾಯಗಳನ್ನು ಸಂದರ್ಶನ ಪುಸ್ತಕಗಳಲ್ಲಿ ದಾಖಲಿಸಿರುವುದನ್ನು ನೋಡಬಹುದಾಗಿದೆ.

ವೃತ್ತಿಯಿಂದ ಕಿರಾಣಿ ಅಂಗಡಿ ವರ್ತಕರಾಗಿದ್ದ ಬುದ್ದಿವಂತಶೆಟ್ಟರು ಪ್ರವೃತ್ತಿಯಿಂದ ಅಪಾರ ಸಾಹಿತ್ಯ ಪ್ರೇಮಿಗಳಾಗಿದ್ದರು. ಕಲಬುರ್ಗಿ ಜಿಲ್ಲೆಮಾತ್ರವಲ್ಲ ಬೇರೇಕಡೆ ಅದೆಲ್ಲೇ ಸಾಹಿತ್ಯ ಸಮ್ಮೇಳನ ಮತ್ತು ಸಾಹಿತ್ಯ ಕುರಿತಾದ ಕಾರ್ಯಕ್ರಮಗಳು ಜರುಗಿದರೆ ಸಾಕು ಅಲ್ಲಿ ಬುದ್ದಿವಂತಶೆಟ್ಟರ ಹಾಜರಾತಿ ಖಾಯಂ. ಅಂತಹದ್ದೊಂದು ಅಭೂತಪೂರ್ವ ಸಾಹಿತ್ಯ ಪ್ರೀತಿ ಅವರದಾಗಿತ್ತು. ಅವರ ಸಾಹಿತ್ಯ ಯಾತ್ರೆಗೆ ಸ್ಥಳೀಯವಾಗಿ ಬೋಡೆ ರಾಮಣ್ಣ ಸಾಂಗತ್ಯ. ಸುರಪುರ ಮತ್ತು ರಂಗಂಪೇಟೆಯಲ್ಲಿ ಸಾಹಿತಿಗಳ ಕೂಟವೇ ನಿರ್ಮಿಸುವಲ್ಲಿ ಅವರದು ಅಪರೂಪದ ಶ್ರಮ. ಮನ್ಸೂರ ಅಹ್ಮದ್ ತನಹಾ ತಿಮ್ಮಾಪೂರಿಯಂತಹ ಗಝಲ್ ಗಾರುಡಿಗ, ಡಾಕ್ಟರ್ ಕೆಂಬಾವಿ ಮುದ್ದಣ್ಣ ಮತ್ತು ಗುರುಬಸಯ್ಯ ಅಮ್ಮಾಪುರ, ಲಿಂಗಣ್ಣ ಸತ್ಯಂಪೇಟೆ ಅವರಂತಹ ಶಿಕ್ಷಕ ಸಾಹಿತಿಗಳು ಸುರಪುರ ಸಾಹಿತ್ಯ ಕೂಟದ ಸಂಪನ್ನರು. ತಮ್ಮ ಅಸಾಧಾರಣ ಸಾಹಿತ್ಯ ಶಕ್ತಿಯ ಮೂಲಕ ಅವರು ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದವರು.

ಅದರಲ್ಲಿ ವಿಶೇಷವಾಗಿ ಉರ್ದು ಗಝಲ್ ಸಾಹಿತ್ಯಲೋಕದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದವರೆಂದರೆ ಮಂಜೂರ್ ಅಹಮದ್ ತನಹಾ ತಿಮ್ಮಾಪೂರಿ. ದೆಹಲಿ, ಲಖನೌ, ಅಲಿಗಡ ಮುಂತಾದ ಉರ್ದು ಸಾಹಿತ್ಯ ಪ್ರಾಂತ್ಯಗಳ ನಿರಂತರ ಒಡನಾಟದಲ್ಲಿದ್ದು ತಮ್ಮ ಪ್ರಖರ ಮತ್ತು ಪ್ರಬುದ್ಧ ಕಾವ್ಯಶಕ್ತಿಯ ಮೂಲಕ ಪ್ರಪಂಚದ ಗಮನ ಸೆಳೆದ ತನಹಾ ಉರ್ದು ನವ್ಯಕಾವ್ಯದ ಖ್ಯಾತನಾಮ ಕವಿಯಾಗಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನ, ಬಂಗ್ಲಾ, ಜರ್ಮನಿ ಹಾಗೂ ಇತರೆ ದೇಶಗಳಲ್ಲೂ ತಮ್ಮ ಕಾವ್ಯದ ಕಂಪನ್ನು ಬೀರುವ ಮೂಲಕ ಭಾರತ ಮತ್ತು ಸುರಪುರದ ಸೊಗಡು ಮೆರೆದ ಕೀರ್ತಿಶೇಷರು.

ಜರ್ಮನಿ ದೇಶದ ಸಾಹಿತ್ಯ ಲೋಕವು ತನಹಾ ಅವರ ಏಳು ನಝ್ಮೇ ಕೃತಿಗಳನ್ನು ಪ್ರಕಟಿಸಿರುವುದಾಗಿ ಅವರ ಸಮೀಪವರ್ತಿಗಳಾಗಿದ್ದ ಅಡ್ವೋಕೇಟ್ ಅಗಸ್ಟಿನ್ ಜೇಮ್ಸ್ ಹೇಳುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ರಚಿಸಿದ ಭಾರತದ ವಿವಿಧ ಪ್ರಾಂತ್ಯಗಳಿಗೆ ಸೇರಿದ ಉರ್ದುಕವಿಗಳ ಉರ್ದು ಕವಿತೆಗಳನ್ನು ಸಂಪಾದಿಸಿದ ಪ್ರಥಮ ಕೀರ್ತಿ ತನಹಾ ತಿಮ್ಮಾಪುರಿ ಅವರಿಗೆ ಸಲ್ಲುತ್ತದೆ. ಕನ್ನಡ ಮತ್ತು ಉರ್ದು ಕವಿಗಳ ಒಂದೇ ವೇದಿಕೆಯ ಗೋಷ್ಠಿ ಏರ್ಪಡಿಸಿ ಭಾಷಾ ಸಮನ್ವಯ ಮತ್ತು ಸೌಹಾರ್ದತೆ ಸಂತುಲಿತಗೊಳಿಸಿದ ಶ್ರೇಯಸ್ಸು ಮಂಜೂರ್ ಅಹ್ಮದ ತನಹಾ ಅವರಿಗೆ ಸಲ್ಲುತ್ತದೆ.

ಅಷ್ಟೇಯಾಕೆ ತ್ರಿಪದಿ ಕಾವ್ಯರಚನೆಯಲ್ಲಿ ಉರ್ದು ಸಾಹಿತ್ಯ ಜಗತ್ತಿನದೇ ಪ್ರಥಮ ದಾಖಲೆ ಎಂದು ಉತ್ತರ ಭಾರತದ ಉರ್ದು ವಿದ್ವಾಂಸರು ಹೇಳಿರುವುದನ್ನು ಪ್ರಶ್ನಿಸಿ ಕನ್ನಡದ ಸರ್ವಜ್ಞನನ್ನು ಉಲ್ಲೇಖಿಸುವ ಮೂಲಕ ಉರ್ದುವಿನ ಸುಪ್ರಸಿದ್ದ ಮತ್ತು ಪರಿಶುದ್ಧ ಸಾಹಿತ್ಯ ಪತ್ರಿಕೆ ಎನಿಸಿದ ''ಶಾಯರ್" ನಿಯತಕಾಲಿಕಕ್ಕೆ ಬರೆಯುವ ಮೂಲಕ ಮಂಜೂರ ಅಹಮದ್ ತಿಮ್ಮಾಪೂರಿ ಕನ್ನಡದ ತ್ರಿಪದಿ ಪ್ರೀತಿ ತೋರುತ್ತಾರೆ. ಹಾಗೆ ನೋಡಿದರೆ ಶಾಯರ್ ಪತ್ರಿಕೆಗೆ ಬರೆಯುವುದೇ ಪ್ರತಿಷ್ಟಿತ ಸಂಗತಿ. ದಕ್ಷಿಣ ಭಾರತದಿಂದ ತನಹಾ ಅವರಿಗೆ ಅಂತಹ ಅವಕಾಶ ದಕ್ಕಿತ್ತು. ಇಂತಹ ಅಪರೂಪದ ಉರ್ದುಕವಿ ಮಂಜೂರ ಅಹಮದ್ ತನಹಾ ಅವರದು ರಂಗಪೇಟೆಗೆ ತಳಕು ಹಾಕಿಕೊಂಡಿರುವ ತಿಮ್ಮಾಪೂರವೆಂಬ ಪುಟ್ಟ ಊರು. ತನಹಾ ಎಂಬುದು ಏಕಾಂಗಿ ಅರ್ಥದ ಕಾವ್ಯನಾಮ.

ಹುಡುಕಿದರೆ ತಿಮ್ಮಾಪುರ ಗ್ರಾಮದ ಪ್ರತಿ ಹತ್ತು ಮನೆಗೊಬ್ಬ ಉರ್ದುಕವಿ ಸಿಗುತ್ತಾರೆಂಬ ಪ್ರತೀತಿ. ಅನೇಕರು ಬಿಡಿ ಬಿಡಿಯಾಗಿ ಉರ್ದು ಪತ್ರಿಕೆಗಳಿಗೆ ಬರೆಯುತ್ತಾರೆ. ಆದರೆ ತನಹಾ ಅವರಂತೆ "ಶಾಯರ್" ಎಂಬ ಶುದ್ಧ ಸಾಹಿತ್ಯ ನಿಯತಕಾಲಿಕದ ಕಮಿಟೆಡ್ ಕವಿಗಳಲ್ಲ. ನೋವಿನ ಖಬರ್ ಎಂದರೆ ತಿಮ್ಮಾಪುರದ ಮಾಸ್ತರ ಮುಬಾರಕ್ ಅಹ್ಮದ್ ಏಜಾಜ್ ಅವರ ಉರ್ದುವಿನ ಎರಡು ಕವಿತಾ ಸಂಕಲನಗಳು ಅವರು ಬದುಕಿದ್ದಾಗ ಪ್ರಕಟವಾಗುವ ಅವಕಾಶ ಸಿಗಲಿಲ್ಲ. ಅವರ ಸಾವಿನ ತರುವಾಯ ಪ್ರಕಟಗೊಂಡಿವೆ.

ಪ್ರಸ್ತಾಪಿಸಲೇಬೇಕಾದ ಮತ್ತೊಂದು ಮಹತ್ವದ ಸಂಗತಿಯೆಂದರೆ ಅದೇ ಸೀಮೆಯ ಸಗರ ಗ್ರಾಮದ ಮತ್ತೊಬ್ಬ ಉರ್ದುಕವಿಯ ಹೆಸರು ಹಮೀದ್ ಅಲ್ಮಾಸ್. ಇವರು ಬಸವಣ್ಣನ ವಚನಗಳನ್ನು ಸೊಗಸಾದ ಉರ್ದುವಿಗೆ ತರ್ಜುಮೆ ಮಾಡಿದ್ದಾರೆ. ತನ್ಮೂಲಕ ಉರ್ದು ಭಾಷಿಕರೆಲ್ಲರಿಗೂ ಬಸವಣ್ಣ ಮತ್ತು ವಚನ ಸಾಹಿತ್ಯ ಪರಿಚಯಿಸುತ್ತಾ ಸೌಹಾರ್ದತೆಯ ಬಹುದೊಡ್ಡ ಪ್ರೀತಿ ಬಿತ್ತಿ ಬೆಳೆದವರು. ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ನೆನಪಿರಲಿ ಇವರು ಸಗರನಾಡಿನ ಅದರಲ್ಲೂ "ಸಗರ" ಗ್ರಾಮದ ಮಹೋನ್ನತ ಪ್ರತಿಭೆ ಎಂಬುದನ್ನು ನಮ್ಮ ನಡುವಿನ ಉರ್ದು ಲೇಖಕ ರಿಯಾಜ್ ಅಹ್ಮದ್ ಬೋಡೆ ನೆನಪಿಸುತ್ತಾರೆ.

ಇಬ್ಬರು ಪತ್ನಿಯರ ಪತಿಯಾಗಿ ಕಡುಬಡತನದ ನಡುವೆ ಅರಳಿದ ತನಹಾ ತಿಮ್ಮಾಪೂರಿ ಅವರ ಬದುಕು ಬರಹಗಳು ಬೃಹತ್ ಪ್ರಮಾಣದ ಗ್ರಂಥವಾಗುವಷ್ಟು ಬಾಹುಳ್ಯ ಉಳ್ಳದ್ದು. ಕೆಲವರು ಅವರ ಕುರಿತು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಅದು ಅಷ್ಟಕ್ಕೆ ಸೀಮಿತವಾಗಬಾರದು. ಅವರು ಮತ್ತು ಅವರಂಥವರು ಕರ್ನಾಟಕ ಸಂಸ್ಕೃತಿಯ ಆಸ್ತಿ. ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇಲ್ಲವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆ ನಿಟ್ಟಿನಲ್ಲಿ ಗಮನ ಹರಿಸಿ ಅಗತ್ಯ ಕೆಲಸ ಮಾಡುವುದು ಸೂಕ್ತ. ಅದು ಅಕ್ಷರಶಃ ಕನ್ನಡ ಸಂಸ್ಕೃತಿಯ ಕೆಲಸ. ಹಾಗೆಯೇ ತಾನು ಸಾಹಿತಿ ಅಲ್ಲದಿದ್ದರೂ ಸಾಹಿತ್ಯ ಸಂಸ್ಕೃತಿ ಪೋಷಕರು ಮತ್ತು ಅಪ್ರತಿಮ ಸಾಹಿತ್ಯ ಆಸ್ಥೆಯ ಶ್ರೇಷ್ಠ ಓದುಗರಾಗಿದ್ದ ಎಂ. ಆರ್. ಬುದ್ದಿವಂತಶೆಟ್ಟರ ಕುರಿತು ದಾಖಲೆಗಳು ಬರಬೇಕಿದೆ. ಇವತ್ತಿಗೂ ಸುರಪುರ ನೆಲದ ಈ ಎಲ್ಲ ಸಾಂಸ್ಕೃತಿಕ ನೆನಪುಗಳ ಕಣಜದಂತೆ ಅದೇ ಊರಿನ ಕವಿಮನದ ಎಂಬತ್ತೆರಡರ ಹಿರಿಯ ಚೇತನ ಶಾಂತಪ್ಪ ಬೂದಿಹಾಳ ರಂಗಂಪೇಟೆಯಲ್ಲಿದ್ದಾರೆ. ಅವರೆಲ್ಲರೂ ಸಗರನಾಡಿನ ಪೂರ್ವಸೂರಿಗಳೇ ಆಗಿದ್ದಾರೆ.

ಈ ನೆಲದಲ್ಲಿ ಇವತ್ತಿಗೂ ಗಝಲ್ ಕಾವ್ಯದ ಭಿತ್ತಿ ಭರಪೂರವಾಗಿ ಹರಡಿಕೊಂಡಿದೆ. ಹತ್ತಾರು ಮಂದಿ ಕವಿಗಳು, ನೂರಾರು ಮಂದಿ ಗಝಲ್ ಕಾವ್ಯಾಭ್ಯಾಸಿಗಳ ಕಸುವಿನದು ಈ ಮಸಬಿನ ನೆಲ. ಅಂತಹ ಅನೇಕರಿಗೆ ಮಂಜೂರ ಅಹ್ಮದ್ ತನಹಾ ಮಾದರಿ ಕವಿಯಾಗಬೇಕಿದೆ. ಆ ಮೂಲಕ ಹಾಡುಗಬ್ಬ ಗಝಲ್ ಕಾವ್ಯದ ಅಸಲಿ ಕಸುವು, ಅದರ ಛಂದೋಬಂಧ ಸೋಪಜ್ಞಶೀಲತೆಯನ್ನು ಕಾಪಾಡಬೇಕಿದೆ. ಇಲ್ಲದೇ ಹೋದಲ್ಲಿ ಹ್ಯಾವಕ್ಕೆ ಬಿದ್ದು ಬರೆಯುವ ಮತ್ತು ಮುದ್ದಾಂ ಕವಿಗಳ ಕಸುಬಾಗುವ ಸಾಂಸ್ಕೃತಿಕ ಅಪಾಯಗಳಿರುವುದನ್ನು ಮನಗಾಣಬೇಕಿದೆ. ಸಗರನಾಡಿನ ಸಿರಿಬೆಳಕಿನಂತಹ ತನಹಾ ಅವರ ಕುರಿತು ಅವರ ಸೃಜನಶೀಲ ಸಾಹಿತ್ಯ ಪರಿಸರ ಕುರಿತು ಇನ್ನೊಮ್ಮೆ ವಿವರವಾಗಿ ಬರೆಯುವೆ.

ಸುರಪುರ ಕನ್ನಡ ಸಾಹಿತ್ಯ ಸಂಘದ ಮತ್ತೊಂದು ಮಹತ್ವದ ಕಾರ್ಯವೆಂದರೆ ಲಕ್ಷ್ಮೀಶ ಮಹಾಕವಿಯ ಹೆಸರಿನ ಪುಸ್ತಕ ಪ್ರಕಾಶನ ಮತ್ತು ವಾಚನಾಲಯ ಸ್ಥಾಪನೆಯಾಗಿವೆ. ಇದುವರೆಗಿನ ಎಂಬತ್ತು ವರುಷಗಳ ಸುದೀರ್ಘವಾದ ಅವಧಿಯಲ್ಲಿ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರುಗಿವೆ. ಕನ್ನಡ ಸಂಘದ ಮಹಾಕವಿ ಲಕ್ಷ್ಮೀಶ ಪ್ರಕಾಶನದಡಿ ಮಹತ್ವದ ಅನೇಕ ಪುಸ್ತಕಗಳು ಪ್ರಕಟಗೊಂಡಿವೆ. ಇದಕ್ಕೆಲ್ಲ ಇಲ್ಲಿನ ರಾಜರ ದಿವಿನಾದ ಪ್ರೋತ್ಸಾಹವಿದೆ. ಪ್ರಜಾವತ್ಸಲರಾದ ರಾಜರೆಲ್ಲರೂ ಸೆಕ್ಯುಲರ್ ಆಗಿದ್ದವರು. ಇತ್ತೀಚೆಗೆ ಮಹಾಂತೇಶ್ ಗೋನಾಲ ಹಾಗೂ ಜ್ಯೋತಿ ದೇಸಾಯಿ ದೇವಣಗಾವ ಅವರ ಗಝಲ್ ಕೃತಿಗಳನ್ನು ಪ್ರಕಟಿಸಿದೆ. ಈ ಕೃತಿಗಳು ಪ್ರಶಸ್ತಿಗೆ ಭಾಜನಗೊಂಡಿವೆ.

ಇದೇ ನವೆಂಬರ್‌ ಹದಿಮೂರನೇ ತಾರೀಖಿನಂದು ಗೋಪಣ್ಣ ಯಾದವ ಅವರ "ಹೆಬ್ಬಂಡೆ ಮೇಲೆ ಹೆಜ್ಜೆ" ಕಥಾ ಸಂಕಲನ ಬಿಡುಗಡೆಗೆ ಸುರಪುರ ಕನ್ನಡ ಸಾಹಿತ್ಯ ಸಂಘವು ನನ್ನನ್ನು ಆಹ್ವಾನಿಸಿದೆ. ಡಾ. ರಘುನಾಥ ಭಾರತಿ, ಡಾ. ಜಿ. ಸುಬ್ಬಯ್ಯ, ತಹಶಿಲ್ದಾರ ಚನ್ನವೀರಯ್ಯ, ಪ್ರಭುರಾವ್, ನಾಗಪ್ಪ ವಕೀಲರು, ಹೇಮರಾಜ ರತ್ನಗಿರಿ, ಶಿವಶರಣಪ್ಪ ಶಾಬಾದಿ, ಮಲ್ಲಪ್ಪ ಬಶೆಟ್ಟಿ, ಎ. ಕೃಷ್ಣ ಮೊದಲಾದವರು ಸಂಘದ ನೊಗಹೊತ್ತು ಅಹರ್ನಿಶಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಾಜಿ ಸಚಿವರಾಗಿದ್ದ ರಾಜಾ ಮದನಗೋಪಾಲ ನಾಯಕರು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾಗಿದ್ದ ಅವಧಿ ಅಕ್ಷರಶಃ ಸುವರ್ಣ ಯುಗವೇ ಸೈ. ಸುರಪುರ ಶಹರದಲ್ಲಿ ಸಂಘಕ್ಕೊಂದು ಸುಂದರ ಕಟ್ಟಡ ನಿರ್ಮಾಣ ಮತ್ತು ಸಂಘದ ಸಾಹಿತ್ಯ ಚಟುವಟಿಕೆಗಳಿಗೆ ಬೇಕಾಗುವಷ್ಟು ಸಂಪನ್ಮೂಲಗಳನ್ನು ಅವರು, ಅವರ ಸರೀಕರು ಕ್ರೋಢೀಕರಿಸಿ ಕೊಟ್ಟಿದ್ದಾರೆ.

ಈಗ್ಗೆ ಎರಡು ವರ್ಷಗಳ ಹಿಂದೆ ಕೊರೊನಾ ಕಾಲದಲ್ಲಿ ರಾಜಾ ಮದನಗೋಪಾಲ ನಾಯಕರು ತೀರಿಹೋದರು. ಅವರ ಸಾವು ಕನ್ನಡ ಸಾಹಿತ್ಯ ಸಂಘಕ್ಕೆ ನಿಜಕ್ಕೂ ತುಂಬಿ ಬಾರದ ನಷ್ಟ. ಸುರಪುರ ಕನ್ನಡ ಸಾಹಿತ್ಯ ಸಂಘದ ಸಾಕ್ಷಿಪ್ರಜ್ಞೆಯೇ ಕಣ್ಮರೆಯಾದಂತಹ 'ಶೋಕ' ಕೆಲಕಾಲ ಕಾಡಿದ್ದುಂಟು. ಕನ್ನಡದ ರಾಜ ರಾಜಾ ಮದನಗೋಪಾಲ ನಾಯಕ ಹೆಸರಿನ ಸ್ಮಾರಕ ಭವನ ನಿರ್ಮಾಣಗೊಂಡಿದೆ. ಸಾಂಸ್ಕೃತಿಕ ರಾಯಭಾರಿಯೆಂದೇ ಹೆಸರಾಗಿದ್ದ ಅವರ ತರುವಾಯ ಹಿರಿಯರಾದ ಶ್ರೀ ಬಸವರಾಜ ಜಮದ್ರಖಾನಿ ಸಂಘದ ಅಧ್ಯಕ್ಷರಾಗಿ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿದ್ದಾರೆ. ಹೈಕೋರ್ಟ್ ವಕೀಲರು, ಸಂಸ್ಕೃತಿ ಚಿಂತಕರಾದ ಜೇಮ್ಸ್ ಅಗಸ್ಟಿನ್, ಜಾಲವಾದಿ ಶ್ರೀನಿವಾಸ ಇನ್ನೂ ಅನೇಕರು ಸುರಪುರ ಕನ್ನಡ ಸಾಹಿತ್ಯ ಸಂಘದ ರಥವನ್ನು ದಣಿವರಿಯದೇ ಎಳೆಯುತ್ತಿದ್ದಾರೆ.

ಅಂದಹಾಗೆ ಸುರಪುರದ ಕನ್ನಡ ಸಾಹಿತ್ಯ ಸಂಘವು ಸಹಸ್ರ ಚಂದ್ರಮಾನೋತ್ಸವ ಆಚರಣೆಯ ಹುಮ್ಮಸ್ಸು. ಎಂಬತ್ತು ಸಂವತ್ಸರಗಳ ಸಂಸ್ಕೃತಿ ಸಂವರ್ಧನೆಯ ಸಂಭ್ರಮ. ಇನ್ನೇನು ಎರಡು ದಶಕ ಗತಿಸಿದರೆ ಶತಮಾನೋತ್ಸವದ ಸಡಗರ. ಹೈದ್ರಾಬಾದ್ ಕರ್ನಾಟಕದ ದಖನಿ ಉರ್ದು ಸಾಮ್ರಾಜ್ಯದಲ್ಲಿ ಕನ್ನಡದ ಕಹಳೆ ಮೊಳಗಿ ಶತಮಾನದ ಅಂಚಿಗೆ ಮುನ್ನಡೆಯುವ ಗಳಿಗೆಗಳು. ಕನ್ನಡ ಸಂಸ್ಕೃತಿಯ ಮಹತ್ತರ ದಾಖಲೆಯ ಸಂದರ್ಭ ಇದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇಂತಹ ಸಂಘಕ್ಕೆ ಸೂಕ್ತ ಅನುದಾನ ನೀಡಬೇಕು. ಮೈಸೂರು ದಸರಾ ಮಾದರಿಯಲ್ಲಿ ಸುರಪುರದ ನಾಡಹಬ್ಬ ಆಚರಿಸಲು ಸರಕಾರ ನೆರವಿಗೆ ಬರಬೇಕು. ಇಷ್ಟೆಲ್ಲಾ ಅಲವತ್ತುಗೊಳ್ಳಲು ದಟ್ಟಕಾರಣ ಏನೆಂದರೆ ಕಲ್ಯಾಣ ಕರ್ನಾಟಕವು ರಾಜಧಾನಿ ಬೆಂಗಳೂರಿನಿಂದ ಬಹಳೇ ದೂರದಲ್ಲಿದೆ. ಆದರೆ ನಮ್ಮದೇ ಕಲಬುರ್ಗಿಯಲ್ಲಿರುವ ಮತ್ತು ಸರಕಾರದ ಅಂಗಸಂಸ್ಥೆಯಾಗಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಣ್ಣಿಗೆ ಸುರಪುರದ ಐತಿಹಾಸಿಕ ಕನ್ನಡ ಸಾಹಿತ್ಯ ಸಂಘಗಳು ಕಾಣಿಸುವುದಿಲ್ಲವೇ.?

ಮಲ್ಲಿಕಾರ್ಜುನ ಕಡಕೋಳ, 9341010712

ಈ ಅಂಕಣದ ಹಿಂದಿನ ಬರಹಗಳು
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...