"ಕರಾವಳಿಯ ಘಟನೆಯಲ್ಲಿ ಶಿಕ್ಷಕಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ತಮಗೆ ಕಲಿಸಿದ ಗುರುಗಳ ವಿರುದ್ಧವೇ ಶಿಷ್ಯರು ಪ್ರತಿಭಟನೆ ನಡೆಸುವ ಸಂದರ್ಭ ಏನನ್ನು ಸೂಚಿಸುತ್ತದೆ? ಗುರುಮುಖೇನ ಬಂದ ಮಾತು ವೇದಕ್ಕೆ ಸಮ ಎಂದು ಹೇಳುವ ಪರಂಪರೆಯ ವಕ್ತಾರರೇ ಗುರುವಿನ ಮಾತನ್ನು ಅನುಮಾನಿಸುವುದು ಹಾಗೂ ಅವಮಾನಿಸುವುದು ಗುರುಪರಂಪರೆಯ ಕುರಿತು ಸಮುದಾಯ ನಂಬಿಕೆ ಕಳೆದುಕೊಳ್ಳುತ್ತಿರುವುದರ ಸೂಚನೆಯಂತಿದೆ," ಎನ್ನುತ್ತಾರೆ ರಘುನಾಥ ಚ.ಹ. ಅವರು ಸತ್ಯಮಂಗಲ ಮಹಾದೇವ ಅವರ ‘ನೆಲದ ಮಾತು ಬೇರೆ’ ಕೃತಿಗೆ ಬರೆದ ಮುನ್ನುಡಿ..
ಸತ್ಯಮಂಗಲ ಮಹಾದೇವ ಅವರ `ನೆಲದ ಮಾತು ಬೇರೆ' ಕೃತಿಯ ಲೇಖನಗಳನ್ನು ಎದುರಿಗೆ ಹರವಿಕೊಂಡು, `ಅನುಭಾವದ ಈ ಜಗತ್ತು ನನಗೆ ಸೇರಿದ್ದಲ್ಲ' ಎಂದು ಕೂತಿದ್ದ ನನಗೆ, ಈ ಕೃತಿಯನ್ನು ಪ್ರವೇಶಿಸಲು ಬೆಳಕಿಂಡಿಯಂತೆ ಒದಗಿಬಂದದ್ದು - ಕರಾವಳಿಯಲ್ಲಿನ ಶಿಕ್ಷಕಿಯೊಬ್ಬರು ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾದ ಘಟನೆ. ರವೀಂದ್ರನಾಥ ಟ್ಯಾಗೋರ್ ಅವರ Work is Worship ಕವಿತೆಯನ್ನು ಪಾಠ ಮಾಡಿದ ಶಿಕ್ಷಕಿ, ಕೋಮುವಾದಿಗಳ ಕಣ್ಣಿಗೆ ಅಪರಾಧಿಯಾಗಿ ಕಂಡಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ, ಕೋಮುವಾದಿಗಳಿಗೆ ಸಮಸ್ಯೆಯಾಗಿ ಕಂಡಿರುವುದು ಶಿಕ್ಷಕಿಯ ಪಾಠವಲ್ಲ, ರವೀಂದ್ರರ ಪಠ್ಯವೇ ಸಮಸ್ಯೆಯಾಗಿದೆ. ಸ್ಥಾವರಗಳ ನೆಲೆಗಟ್ಟಿನಲ್ಲಿ, ಜಪ ತಪ ಧ್ಯಾನದ ಮೂಲಕ ದೇವರನ್ನು ಕಾಣಲು ಹಂಬಲಿಸುವ ಪ್ರಯತ್ನಗಳು ವ್ಯರ್ಥವೆಂದು ಹೇಳುವ ಕವಿತೆ, ಮಾಡುವ ಕೆಲಸದಲ್ಲಿಯೇ ದೇವರಿದ್ದಾನೆ ಎಂದು ಪ್ರತಿಪಾದಿಸುತ್ತದೆ; ಶ್ರಮಜೀವಿಯ ಬೆವರಿನಲ್ಲಿ ದೇವರನ್ನು ಕಾಣಿಸುತ್ತದೆ. ನಮ್ಮ ಶರಣರು ದೇವರನ್ನು ಕಂಡಿದ್ದೂ ಹೀಗೆಯೇ. `ಕಾಯಕವೇ ಕೈಲಾಸ' ಎನ್ನುವುದು ವಚನ ಚಳವಳಿಯ ಬೀಜವಾಕ್ಯ. ಬಸವಣ್ಣನಂತೂ ದೇಹವನ್ನೇ ದೇಗುಲ ಎಂದು ಪರಿಭಾವಿಸಿದವನು. ಆದರೆ, ಈಗಿನ ದೇವರ ನೆಲೆ ಬದಲಾಗಿದೆ. ಮನುಷ್ಯನ ಅಂತರಂಗದಿಂದ ಹೊರಬಂದಿರುವ ದೇವರು, ಬಯಲಿನಲ್ಲಿ ಸ್ಥಾವರಗಳನ್ನು ಕಂಡುಕೊಂಡಿದ್ದಾನೆ. ದೇವರ ಮಮತೆಯ ಸ್ವರೂಪ ಭಗ್ನಗೊಂಡಿದೆ. ದೇವರ ಮುಖದಲ್ಲಿನ ಪ್ರಸನ್ನತೆಯ ಸ್ಥಾನದಲ್ಲಿ ವ್ಯಗ್ರತೆ ಕಾಣಿಸಿಕೊಂಡಿದೆ. ನಮ್ಮನ್ನು ಕಾಡುತ್ತಿರುವ ಒಂಟಿತನವನ್ನು ದೇವರಿಗೂ ಆರೋಪಿಸಿ, ಅವನನ್ನು ಕುಟುಂಬದ ಚೌಕಟ್ಟಿನಿಂದ ಹೊರಗೆ ತರುತ್ತಿದ್ದೇವೆ. ಕಾಯಕದಲ್ಲಿ ದೇವರನ್ನು ಕಾಣುವ ಪ್ರಯತ್ನಗಳು ಹಿಂದಾಗಿ, ದೇವರೇ ಉದ್ಯೋಗದ ರೂಪದಲ್ಲಿ ಪರಿಣಮಿಸಿದ್ದಾನೆ. ದೇವರು ಹಾಗೂ ಧರ್ಮ ಮನುಷ್ಯನಿಂದ ಪ್ರತ್ಯೇಕಗೊಳ್ಳುತ್ತ ಹೋದಂತೆಲ್ಲ ಜಡವಾಗಿ ಪರಿಣಮಿಸುತ್ತವಷ್ಟೇ. ಇದರ ಫಲವೇ ‘ಕಾಯಕವೇ ಕೈಲಾಸ’ ಎಂದು ಹೇಳುವುದು ಪ್ರಸಕ್ತ ಸಂದರ್ಭದಲ್ಲಿ ದೈವದ ನಿರಾಕರಣೆಯ ರೂಪದಲ್ಲಿ ವ್ಯಾಖ್ಯಾನಗೊಳ್ಳುತ್ತದೆ.
ಕರಾವಳಿಯ ಘಟನೆಯಲ್ಲಿ ಶಿಕ್ಷಕಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ತಮಗೆ ಕಲಿಸಿದ ಗುರುಗಳ ವಿರುದ್ಧವೇ ಶಿಷ್ಯರು ಪ್ರತಿಭಟನೆ ನಡೆಸುವ ಸಂದರ್ಭ ಏನನ್ನು ಸೂಚಿಸುತ್ತದೆ? ಗುರುಮುಖೇನ ಬಂದ ಮಾತು ವೇದಕ್ಕೆ ಸಮ ಎಂದು ಹೇಳುವ ಪರಂಪರೆಯ ವಕ್ತಾರರೇ ಗುರುವಿನ ಮಾತನ್ನು ಅನುಮಾನಿಸುವುದು ಹಾಗೂ ಅವಮಾನಿಸುವುದು ಗುರುಪರಂಪರೆಯ ಕುರಿತು ಸಮುದಾಯ ನಂಬಿಕೆ ಕಳೆದುಕೊಳ್ಳುತ್ತಿರುವುದರ ಸೂಚನೆಯಂತಿದೆ. ಗುರುಗಳ ಬೆನ್ನ ಹಿಂದೆ ನಿಲ್ಲುವುದನ್ನು ಬಲ್ಲ ನಾವು ಈಗ ಗುರುಗಳೆದುರು ಎದೆಸೆಟಸಿ ನಿಲ್ಲುವ ಎಳೆಯರನ್ನು ನೋಡುತ್ತಿದ್ದೇವೆ. ಮೇಷ್ಟ್ರು ಬಗ್ಗೆ ಸಮಾಜ ನಂಬಿಕೆ ಕಳೆದುಕೊಳ್ಳುವುದು ಮೌಲ್ಯಗಳ ಕುರಿತು ನಂಬಿಕೆ ಕಳೆದುಕೊಳ್ಳುವುದೇ ಆಗಿದೆ.
ಪ್ರಶ್ನಿಸುವ ಮನೋಭಾವ ಹೋಗಿ ಪ್ರತಿಭಟಿಸುವ ಪ್ರವೃತ್ತಿ ತಲೆದೋರಿದ ಪರಿಸರದಲ್ಲಿ ಶಿಕ್ಷಕನೊಬ್ಬ ತಾನು ಆಡುವ ಮಾತಿನ ಬಗ್ಗೆ ವಿಶ್ವಾಸ ಉಳಿಸಿಕೊಳ್ಳುವುದು ಕಷ್ಟವಾಗಿರುವ ಸನ್ನಿವೇಶವಿದು. ಗುರು ಪ್ರತಿನಿಧಿಸುವ ಜಾತಿ ಅಥವಾ ಧರ್ಮದ ನೆಲೆಗಟ್ಟಿನಲ್ಲಿ ಅವರ ವಿಚಾರಗಳನ್ನು ಗುರ್ತಿಸುವ ವಿದ್ಯಮಾನಗಳು ಸಾಮಾನ್ಯ ಎನ್ನುವಂತಾಗಿದೆ. ಶಿಕ್ಷಕರನ್ನೇ ನಂಬದೆಹೋದರೆ ಅಂತಿಮವಾಗಿ ನಮಗೆ ಉಳಿದಿರುವ ನಂಬಿಕೆಯಾದರೂ ಏನು? ಈ ಅಪನಂಬಿಕೆಯ ನೆರಳು ಮನೆಯ ಆವರಣದಲ್ಲೂ ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ಆತಂಕಕಾರಿ. ಹಿಂದೆಲ್ಲ ಮನೆಗಳು ಒಡೆಯಲಿಕ್ಕೆ ಆಸ್ತಿ ಕಾರಣವಾಗಿತ್ತು. ಈಗ ಆ ಜಾಗದಲ್ಲಿ ರಾಜಕೀಯ ಸಿದ್ಧಾಂತಗಳು ಸೇರಿಕೊಂಡಿವೆ.
ಆಡುವ ಮಾತಿನ ಧ್ವನಿಯನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗದೆ, ಮಾತನ್ನು ಹಿಂಜುವ ಮೂಲಕ ರೂಪುಗೊಳ್ಳುವ ಗದ್ದಲ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತಹದ್ದು. ಮಾತಿನ ಶಕ್ತಿ ಹಾಗೂ ಮಾತಿನ ಕುರಿತಾದ ನಂಬಿಕೆ ಎರಡನ್ನೂ ಕಳೆದುಕೊಳ್ಳುತ್ತಿರುವ ಸಂದರ್ಭ ಸಮಾಜದ ಆರೋಗ್ಯದ ಬಗ್ಗೆ ಯೋಚಿಸುವವರನ್ನು ಗಾಸಿಗೊಳಿಸುವಂತಹದ್ದು. ಈ ವಿಷಮ ಸನ್ನಿವೇಶಕ್ಕೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನ ಸಾಹಿತ್ಯ ಅಥವಾ ಸಾಹಿತ್ಯದಂಥ ಸೃಜನಶೀಲ ಹುಡುಕಾಟದ ಮೂಲಕವೇ ಆಗಬೇಕಾಗಿದೆ. ಅಂಥದೊಂದು ಸೃಜನಶೀಲ ಹುಡುಕಾಟ ಸತ್ಯಮಂಗಲ ಮಹಾದೇವ ಅವರ ‘ನೆಲದ ಮಾತು ಬೇರೆ’ ಕೃತಿ.
‘ನೆಲದ ಮಾತು ಬೇರೆ’ ಎನ್ನುವ ಮಾತಿಗೆ ವರ್ತಮಾನದಲ್ಲಿ ಎರಡು ಸಾಧ್ಯತೆಗಳಿವೆ. ಇತಿಹಾಸದ ಅರೆಕೊರೆಗಳನ್ನು ವರ್ತಮಾನದಲ್ಲಿ ಸರಿಪಡಿಸುವುದಾಗಿ ಹೇಳುತ್ತ, ಸಮುದಾಯಗಳ ನಡುವೆ ಬಿರುಕುಂಟುಮಾಡುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೂ ಒದಗಿಬರುವ ಮಾತಿದು. ಆದರೆ, ಮಹಾದೇವ ಅವರು ಸಹೃದಯರಿಗೆ ಕಾಣಿಸಲು ಹಂಬಲಿಸುತ್ತಿರುವ ‘ನೆಲದ ಮಾತು ಬೇರೆ’ ಔಷಧಿಗುಣವುಳ್ಳದ್ದು; ನಮಗೆ ಬೇಕಾದ ಮತ್ತು ನಾವು ಉಳಿಸಿಕೊಳ್ಳಬೇಕಾದ ಮಾತು ಯಾವುದು ಎನ್ನುವ ಸ್ಪಷ್ಟತೆ-ಎಚ್ಚರ ಹೊಂದಿರುವಂತಹದ್ದು. ಮಾತಿಗೆ ಕವಿದಿರುವ ಮೌಲ್ಯದ ಮರೆವೆಯನ್ನು ಹೋಗಲಾಡಿಸುವ ಹಂಬಲವುಳ್ಳದ್ದು.
ಲೇಖಕರು ತಮ್ಮ ಕೃತಿಯನ್ನು `ಜೀವ ಸರಪಳಿಯ ಸಾಹಿತ್ಯ ಕಥನ' ಎಂದು ಕರೆದುಕೊಂಡಿರುವುದು ಸೂಕ್ತವಾಗಿಯೇ ಇದೆ. ಸಾಹಿತ್ಯದಲ್ಲಿ ಅಡಗಿರುವ ಹಿತ ಜೀವಕಾರುಣ್ಯವೇ ಆಗಿದೆ. ಈ ಜೀವಕಾರುಣ್ಯ ಕಥನ, `ಸಂಶೋಧನೆ' ಮತ್ತು `ಸಮಾಲೋಚನೆ' ಎನ್ನುವ ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿದೆ. ಮೊದಲ ಭಾಗದಲ್ಲಿನ ಹದಿಮೂರರಲ್ಲಿ ಎಂಟು ಲೇಖನಗಳು `ಅನುಭಾವ'ದ ನೆಲೆಯನ್ನು ವಿವಿಧ ನೆಲೆಗಳಲ್ಲಿ ನಿರ್ವಚಿಸುವ ಪ್ರಯತ್ನಗಳಾಗಿವೆ. ಅನುಭವದ ನಿರ್ವಚನ, ಅನುಭಾವಿಯ ಲಕ್ಷಣಗಳು, ವಚನಕಾರರಲ್ಲಿ ಅನುಭಾವ, ಭಕ್ತಿಪ್ರಧಾನ ಕವಿಗಳ ಕಾವ್ಯದಲ್ಲಿ ಅನುಭಾವ, ತತ್ವಪದಕಾರರು, ಭಾರತೀಯ ಅಧ್ಯಾತ್ಮ ಚಿಂತಕರಲ್ಲಿ ಅನುಭಾವ, ಸೂಫಿಗಳಲ್ಲಿ ಹಾಗೂ ಆಂಗ್ಲ ಮೆಟಫಿಸಿಕಲ್ ಕವಿಗಳಲ್ಲಿ ಅನುಭಾವ - ಹೀಗೆ, ವಿವಿಧ ನೆಲೆಗಳಲ್ಲಿ ಅನುಭಾವದ ಸ್ವರೂಪವನ್ನು ನಿರ್ವಚಿಸುವ ಪ್ರಯತ್ನವನ್ನು ಮಹಾದೇವ ಮಾಡಿದ್ದಾರೆ.
ದೇವರು, ಧರ್ಮ, ಅಧ್ಯಾತ್ಮ ಹಾಗೂ ಅನುಭಾವದ ಮೂಲ ಉದ್ದೇಶ ಮನುಷ್ಯನನ್ನು ನಿರಂತರವಾಗಿ ಆರ್ದ್ರಗೊಳಿಸುವುದಾಗಿದೆ. ಆದರೆ, ಚಲನೆ ಕಳೆದುಕೊಂಡ ಸ್ಥಿತಿಯಲ್ಲಿ ಇವು ಜೀವವಿರೋಧಿಯಾಗಿ ರೂಪುಗೊಳ್ಳುತ್ತವೆ, ಹಿಂಸೆಗೆ ಕಾರಣವಾಗುತ್ತವೆ. ವರ್ತಮಾನದ ಅನೇಕು ಬಿಕ್ಕಟ್ಟುಗಳಿಗೆ ದೇವರು-ಧರ್ಮದ ಕುರಿತ ಅಪನಂಬಿಕೆಗಳೇ ಕಾರಣವಾಗಿವೆ. ಈ ಅಪನಂಬಿಕೆ, ಅಪವ್ಯಾಖ್ಯಾನಗಳ ಬಗ್ಗೆ ಅರಿವು ಮೂಡಿಸುತ್ತ, ನಿಜದ ನೆಲೆಗಳತ್ತ ಗಮನಸೆಳೆಯುವ ಪ್ರಯತ್ನದ ರೂಪದಲ್ಲಿ ‘ನೆಲದ ಮಾತು ಬೇರೆ’ ಕೃತಿಯ ಪ್ರಯತ್ನವಿದೆ. ಮಹಾದೇವ ಅವರು ಅನುಭಾವದ ನಿರ್ವಚನಕ್ಕೆ ಆರಿಸಿಕೊಂಡಿರುವ ದಾರಿ ಮತ್ತು ಪರಿಕರಗಳು ಮನುಷ್ಯ ಸಂವೇದನೆಯನ್ನು ಜಡಗೊಳಿಸುವಂತಹವುಗಳಲ್ಲ; ಆರ್ದ್ರಗೊಳಿಸುವಂತಹವು. ಲೌಕಿಕದ ದಂದುಗಗಳನ್ನು ನಿರಾಕರಿಸುವ ಬದಲು, ಅವುಗಳಿಗೆ ಮುಖಾಮುಖಿಯಾಗುತ್ತಲೇ ಬದುಕನ್ನು ಹಸನುಗೊಳಿಸಿಕೊಳ್ಳುತ್ತ ಅಂತರಂಗದ ಚೆಲುವನ್ನು ಉನ್ನತೀಕರಿಸಿಕೊಳ್ಳುವಂತಹವು. `ನೆಲದ ಮಾತು ಬೇರೆ' ಎನ್ನುವ ಕೃತಿಯ ಶೀರ್ಷಿಕೆಯನ್ನು `ದೇವರ ಮಾತು ಬೇರೆ' ಎಂದೂ ಓದಿಕೊಳ್ಳಬಹುದು.
ಈ ಕೃತಿಯ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಲೇಖಕರ ಎರಡು ಮಾತುಗಳನ್ನು ಉದಾಹರಿಸಬಹುದು. ಒಂದು: `ಅನುಭಾವ ಎನ್ನುವ ಪದ, ಅನುಭಾವಿ ಎನ್ನುವ ವ್ಯಕ್ತಿತ್ವ, ಇಂದಿನ ಜಾಗತೀಕರಣದ ಬದುಕಿನಲ್ಲಿ ನಿರ್ಜೀವ ಭಾವನೆಗಳಲ್ಲಿ ಬದುಕುತ್ತಿರುವ ಜನರಿಗೆ ಸತ್ವಯುತವಾದ ಧೀರತೆಯ ಬದುಕನ್ನು, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮನುಷ್ಯನ ಬದುಕಿನ ನೈತಿಕ ಎತ್ತರವನ್ನು ಗಳಿಸಿಕೊಡುವ ಮಾರ್ಗವಾಗಿದೆ.'' ಮತ್ತೊಂದು ಮಾತು: `ನವೋದಯ ಕಾಲಘಟ್ಟದ ಧರ್ಮ ಮತ್ತು ರಾಷ್ಟ್ರೀಯ ಪರಿಕಲ್ಪನೆ ರಾಜಕಾರಣದ ಹೊರತಾಗಿತ್ತು. ಕುವೆಂಪು, ಬೇಂದ್ರೆ, ಮಾಸ್ತಿ, ಪುತಿನ, ಮಧುರಚೆನ್ನರೇ ಮೊದಲಾದ ಕವಿಗಳ ಕಾವ್ಯಗಳಲ್ಲಿ ಪುರೋಹಿತಶಾಹಿ ಚಿಂತನೆಗಳಿಂದ ಹೊರತಾದ ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ನಿರ್ಮಿತವಾಗಿದ್ದ ದೇವರು ಮತ್ತು ಧರ್ಮದ ಪರಿಕಲ್ಪನೆಯನ್ನು ನಾವು ನೋಡಬೇಕಾಗಿದೆ.''
ಮೇಲಿನ ಎರಡು ಹೇಳಿಕೆಗಳು ಅನುಭಾವಕ್ಕೆ ಸಂಬಂಧಿಸಿದಂತೆ ಮಹಾದೇವರ ನಿಲುವನ್ನೂ, ಈ ಕೃತಿಯ ಮನೋಧರ್ಮವನ್ನೂ ಸ್ಪಷ್ಟಪಡಿಸುವಂತಿವೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ನೈತಿಕತೆ ಹಾಗೂ ಸಮಾಜವನ್ನು ಮಾನವೀಯಗೊಳಿಸುವ ದೇವರು-ಧರ್ಮದ ಅಗತ್ಯವನ್ನು ಮಹಾದೇವ ಮನಗಾಣಿಸುತ್ತಾರೆ. ಇದಕ್ಕೆ ಪೂರಕವಾಗಿ ಕನ್ನಡ ಕವಿಗಳ ವಿಚಾರಧಾರೆಯನ್ನು, ಸೂಫಿಗಳು ಮತ್ತು ಶರಣರ ಬದುಕಿನ ಮಾದರಿಗಳನ್ನು, ತತ್ವಪದಕಾರರ ಜೀವನಮೀಮಾಂಸೆಯನ್ನು ನೆನಪಿಸಿಕೊಂಡಿದ್ದಾರೆ. ಇಂಗ್ಲಿಷ್ ಕವಿಗಳ ಚಿಂತನೆಯೂ ಇಲ್ಲಿದೆ. ಬೇಂದ್ರೆ ಮತ್ತು ಮಧುರಚೆನ್ನರಂತೂ ಅನುಭಾವದ ಅರಿವಿನ ಅಕ್ಷಯಪಾತ್ರೆಗಳ ರೂಪದಲ್ಲಿ ಲೇಖಕರಿಗೆ ಒದಗಿಬಂದಿದ್ದಾರೆ. ಬೇರೆ ಬೇರೆ ದೇಶ-ಕಾಲಗಳ ದಾರ್ಶನಿಕರ ವಿಚಾರಗಳನ್ನು ಒಟ್ಟಿಗಿಟ್ಟು ನೋಡುವ ಇಲ್ಲಿನ ಪ್ರಯತ್ನ, ಮಹಾದೇವರ ಓದು ಹಾಗೂ ಆ ಓದಿನ ಮೂಲಕ ಸಾಧ್ಯವಾದ ಅರಿವನ್ನು ಸೂಚಿಸುವಂತಿವೆ; ಅಧ್ಯಯನದಲ್ಲಿನ ಶಿಸ್ತನ್ನು ಕಾಣಿಸುವಂತಿವೆ.
ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ಚಿದಾನಂದ ಅವಧೂತ, ನಿಜಗುಣ ಶಿವಯೋಗಿ, ಮಹಲಿಂಗರಂಗ ಹಾಗೂ ಕುವೆಂಪು ಅವರ ಚಿಂತನೆಗಳನ್ನು ತಮ್ಮ ಮಾತಿಗೆ ಪೂರಕವಾಗಿ ಮಹಾದೇವ ಬಳಸಿಕೊಂಡಿದ್ದಾರೆ. ಅಧ್ಯಾತ್ಮ ಪರಂಪರೆಗೆ ಕೊಡುಗೆ ನೀಡಿದ ಚೇತನಗಳ ಬದುಕು ಮತ್ತು ಬರಹಗಳ ನಿರೂಪಣೆಗಳು ಸೊಗಸಾಗಿವೆ. ಭಾರತೀಯ ಆಧ್ಯಾತ್ಮಿಕ ಚಿಂತಕರಾದ ಶ್ರೀ ಅರವಿಂದರು, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ರವೀಂದ್ರನಾಥ ಟ್ಯಾಗೋರ್ ಇಲ್ಲಿದ್ದಾರೆ. ನಾರಾಯಣ ಗುರುಗಳು ಈ ಸಾಲಿನಲ್ಲಿ ಇಲ್ಲದೆ ಇರುವುದು ಅಚ್ಚರಿಯ ಸಂಗತಿ. ಅಧ್ಯಾತ್ಮ ಹಾಗೂ ಸಮಾಜ ಎರಡನ್ನೂ ಜೀವಪರಗೊಳಿಸಿದ ಅಗ್ಗಳಿಕೆ ನಾರಾಯಣ ಗುರುಗಳದು.
ಭಾರತದ ದಾರ್ಶನಿಕರ ಜೊತೆಗೆ ಯೇಟ್ಸ್, ಖಲೀಲ್ ಗಿಬ್ರಾನ್‌ರ ಚಿಂತನೆಗಳನ್ನೂ ಮಹಾದೇವ ಗಮನಿಸಿದ್ದಾರೆ. ಕನ್ನಡದ ಸಣ್ಣಕಥೆಗಳ ಪಠ್ಯಗಳನ್ನು ಆಧರಿಸಿ, ಬದಲಾಗುತ್ತಿರುವ ಮಾನವೀಯ ಸಂಬಂಧಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕುವೆಂಪು ಅವರ `ಸಾಲದ ಮಗು', ಲಂಕೇಶರ `ಮುಟ್ಟಿಸಿಕೊಂಡವನು' ಹಾಗೂ ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ' ಕಥೆಗಳನ್ನು ಪ್ರಾತಿನಿಧಿಕವಾಗಿ ಚರ್ಚಿಸಿದ್ದಾರೆ. ಈ ವಿಶ್ಲೇಷಣೆ ಇನ್ನಷ್ಟು ವಿಸ್ತರಣೆಗೊಳ್ಳುವ ಅಗತ್ಯವಿದೆ. ಇಂದಿನ ಯುವ ಬರಹಗಾರರ ಕೆಲವು ಬರಹಗಳನ್ನು ಒಳಗೊಳ್ಳುವ ಮೂಲಕ ಕನ್ನಡದ ಸಂವೇದನೆಯನ್ನು ಕಥಾಸಾಹಿತ್ಯ ವಿಸ್ತರಿಸುತ್ತಾ ಸೂಕ್ಷ್ಮಗೊಳಿಸುತ್ತಾ ಹೋಗಿರುವ ಪರಂಪರೆಯನ್ನು ಗುರ್ತಿಸಬಹುದಾಗಿದೆ.
ಭಾಗ 2ರಲ್ಲಿನ ಮೂರು ಬರಹಗಳು, ಮೊದಲ ಭಾಗದ 13 ಬರಹಗಳಿಗೆ ಆಶಯದ ಕಾರಣದಿಂದಾಗಿ ಹೆಗಲೆಣೆಯಾಗಿಯೇ ಇವೆ. ಸಮಾಜವನ್ನು ಮಾನವೀಯಗೊಳಿಸುವಲ್ಲಿ ಸಾಹಿತ್ಯದ ಪಾತ್ರ ಯಾವ ಬಗೆಯದೆನ್ನುವುದನ್ನು ಈ ಬರಹಗಳು ಸೂಚಿಸುವಂತಿವೆ.
`ಪುಸ್ತಕವನ್ನು ಏಕೆ ಓದಬೇಕು' ಎನ್ನುವ ಬರಹ, ಪ್ರಬಂಧದಂತೆ ಓದಿಸಿಕೊಳ್ಳುತ್ತದೆ. ಕಾವ್ಯ ಮತ್ತು ವಿಮರ್ಶೆಯ ಜೊತೆಗೆ ಮಹಾದೇವ ಅವರು ತೊಡಗಿಕೊಳ್ಳಬಹುದಾದ ಹೊಸ ಪ್ರಕಾರದ ಸಾಧ್ಯತೆಯಂತೆಯೂ ಈ ಬರಹ ಕಾಣಿಸುತ್ತದೆ. ಡಿ.ಎಸ್. ವೀರಯ್ಯನವರ ಕಾವ್ಯದ ಕುರಿತ ವಿಮರ್ಶೆ, ಕಾವ್ಯವನ್ನು ಜೀವಕಾರುಣ್ಯದ ವಿಸ್ತರಣೆಯ ರೂಪದಲ್ಲಿ ನೋಡುವ ಪ್ರಯತ್ನವಾಗಿದೆ. `ಜೀವನಪ್ರೀತಿಯ ಅಕ್ಷರಗಳೇ ಕರುಣೆಯ ಒಡಲು...' ಶೀರ್ಷಿಕೆಯ ಬರವಣಿಗೆಯಲ್ಲಿ, ಪುಸ್ತಕಗಳು ಹಾಗೂ ಲೇಖಕರ ಕುರಿತು ಟಿಪ್ಪಣಿಗಳಿವೆ. ಈ ಪುಟ್ಟ ಟಿಪ್ಪಣಿಗಳು ಸಾಹಿತ್ಯದ ಗಂಭೀರ ವಿದ್ಯಾರ್ಥಿಯೊಬ್ಬರ ಓದಿನ ಪ್ರೀತಿ ಹಾಗೂ ಆ ಸೂಕ್ಷ್ಮ ಓದಿನ ಫಲವಾದ ಒಳನೋಟಗಳನ್ನು ನಮಗೆ ಕಾಣಿಸುವಂತಿವೆ.
ಸತ್ಯಮಂಗಲ ಮಹಾದೇವರ ‘ನೆಲದ ಮಾತು ಬೇರೆ’ ಕೃತಿ, ಈ ಹೊತ್ತಿನ ಧಾರ್ಮಿಕ ಆಚರಣೆಗಳ ನಿರರ್ಥಕತೆಯನ್ನು ಸೂಚಿಸುತ್ತ, ಈ ಆಚರಣೆಗಳು ಜೀವಪರವಾಗುವ ಅಗತ್ಯವನ್ನು ಒತ್ತಿ ಹೇಳುವ ಪ್ರಯತ್ನವಾಗಿದೆ. ಭಾಷೆ ಮತ್ತು ಮಾತಿಗೆ ಇರುವ ಧ್ವನಿಶಕ್ತಿಯ ಸಾಧ್ಯತೆಗಳ ಬಗ್ಗೆ ನಂಬಿಕೆ ಮೂಡಿಸುವ ಕಾರಣದಿಂದಾಗಿಯೂ ಇದು ಗಮನಾರ್ಹ ಕೃತಿ. ಅನುಭಾವ ಹಾಗೂ ಕಾವ್ಯ ಅಭಿನ್ನ ಎನ್ನುವ ನಿಲುವು ಈ ಕೃತಿಯ ಹೊಳಪನ್ನು ಹೆಚ್ಚಿಸಿದೆ. ವರ್ತಮಾನದ ಮಾತು ತನ್ನ ಅಮೃತಗುಣವನ್ನು ಕಳೆದುಕೊಂಡು ಹಾಲಾಹಲದ ಸ್ವರೂಪ ಪಡೆದುಕೊಳ್ಳಲು ತವಕಿಸುತ್ತಿರುವಾಗ, ‘ನೆಲದ ಮಾತು ಬೇರೆ’ ಎನ್ನುತ್ತಿರುವ, ಈ ಮಣ್ಣಿನ ವಿವೇಕ ಪರಂಪರೆಯನ್ನು ನೆನಪು ಮಾಡಿಕೊಡುತ್ತಿರುವ ಸತ್ಯಮಂಗಲ ಮಹಾದೇವ ಅವರ ಈ ಕೃತಿ, ಸಂವೇದನಾಶೀಲ ಲೇಖಕನೊಬ್ಬ ನಿರ್ವಹಿಸಲೇಬೇಕಾದ ಸಾಂಸ್ಕೃತಿಕ ಜವಾಬ್ದಾರಿಯಂತೆ ಕಾಣಿಸುತ್ತದೆ.
ಭಾಷೆ ಮತ್ತು ಮಾತಿನ ಧ್ವನಿಶಕ್ತಿಯ ಸಾಧ್ಯತೆಗಳಿಗೆ ಸೃಜನಶೀಲ ಅಡಿಗೆರೆಯ ರೂಪಲ್ಲಿ ‘ನೆಲದ ಮಾತು ಬೇರೆ’ ಕೃತಿಯ ಬರಹಗಳು ಕಾಣಿಸುತ್ತವೆ. ನುಡಿಯ ಬಗ್ಗೆ ನಂಬಿಕೆ ಕಳೆದುಕೊಳ್ಳುವುದೂ ಬದುಕಿನ ಭರವಸೆ ಹುಸಿಯಾಗುವುದೂ ಬೇರೆಬೇರೆಯಲ್ಲ. ಆ ಕಾರಣದಿಂದಾಗಿಯೇ, ವರ್ತಮಾನವನ್ನು ಸಹನೀಯವಾಗಿಸಿಕೊಳ್ಳುವ ನಮ್ಮ ಪ್ರಯತ್ನ ಭಾಷೆ ಮತ್ತು ಮಾತನ್ನು ಮಾನವೀಯಗೊಳಿಸುವ ಪ್ರಯತ್ನವೂ ಆಗಿದೆ. ಈ ಪ್ರಯತ್ನ ಸೋಲು ಕಾಣದಿರಲಿ ಎನ್ನುವ ಆಶಯವನ್ನೊಳಗೊಂಡ ಕನ್ನಡ ಮನಸ್ಸುಗಳ ಸಮೂಹಗಾನದ ರೂಪದಲ್ಲಿ ಮಹಾದೇವರ ಕೃತಿಯನ್ನು ಗಮನಿಸಬೇಕಾಗಿದೆ.
ಸತ್ಯಮಂಗಲ ಮಹಾದೇವ ನನ್ನ ಪ್ರೀತಿಯ ಕವಿಗಳಲ್ಲೊಬ್ಬರು. ನನ್ನ ಹಾಗೂ ಅವರ ಒಡನಾಟ ಮಾತಿಗಿಂತಲೂ ಮೌನವನ್ನೇ ಹೆಚ್ಚು ನೆಚ್ಚಿರುವಂತಹದ್ದು. ಈ ಕೃತಿಗೆ ಪ್ರವೇಶಿಕೆ ಬರೆಯುವ ಪ್ರಯತ್ನ, ಕವಿಯಾಗಿ ಮಹಾದೇವ ಅವರೊಂದಿಗೆ ಒಡನಾಡಿದ ಅನುಭವವನ್ನೇ ನೀಡಿದೆ. ಕಾವ್ಯದ ಜೊತೆಗೆ ಹೃದ್ಯ ಗದ್ಯದ ಬರವಣಿಗೆಯಲ್ಲೂ ಮಹಾದೇವ ಗಂಭೀರವಾಗಿ ತೊಡಗಿಕೊಳ್ಳಲಿ; ‘ನೆಲದ ಮಾತು ಬೇರೆ’ ಎಲ್ಲರ ಹೃದಯದ ಮಾತುಗಳಾಗಲಿ ಎಂದು ಆಶಿಸುವೆ.
- ರಘುನಾಥ ಚ.ಹ.
“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...
"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...
“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...
©2025 Book Brahma Private Limited.