Date: 24-12-2022
Location: ಬೆಂಗಳೂರು
''ಜಗದ ತುಂಬಾ ಕಾಣುವ ಜನಾಂಗೀಯ ತಾರತಮ್ಯಕ್ಕೆ ಕಾರಣವೇನು? ತನ್ನ ಮೇಲುಗಾರಿಕೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರವೇ ಇರಬೇಕು. ಅಥವಾ ಪ್ರಾಣಿ ಸಹಜದ ಗುಣವಾದ ದೀನರನ್ನು ದಮನಿಸಿ ಆಳುವ ಪ್ರವೃತ್ತಿ ಇರಬಹುದು. ಸಮಾನತೆ ಅಸಮಾನತೆಗಳ ಅರಿವಿದ್ದ ಮನುಷ್ಯ ಜಗತ್ತು ಎಷ್ಟು ಹೊಲಸುಮಯವಾಗಿದೆಯಲ್ಲವೇ? '' ಎನ್ನುವ ವಿಚಾರವನ್ನು ಇಲ್ಲಿ ಸಾಲುಗಳು ತೆರೆದಿಡುತ್ತದೆ ಎನ್ನುತ್ತಾರೆ ಲೇಖಕಿ ನಾಗರೇಖ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ‘I know why the cage bird sings’ ಕವನದ ಕುರಿತು ವಿಶ್ಲೇಷಿಸಿದ್ದಾರೆ.
ಕಾವ್ಯದ ಉಸಿರು ನಿತಾಂತ ಚಿಗುರುವುದು, ಅರಳುವುದು ಅದು ಅರಳಿಸುವ ಸಂವೇದನೆಯಲ್ಲಿ. ಬದುಕನ್ನು ಬದುಕಿನ ರೂಕ್ಷತೆಗಳನ್ನು ಅಭಿವ್ಯಕ್ತಿಸುವ ರೂಪಕಗಳಲ್ಲಿ. ಎಲ್ಲ ಕಾಲ ದೇಶಗಳ ಹಂಗಿಲ್ಲದೇ ಕಾವ್ಯ ತನ್ನೊಳಗಿನ ಆರ್ದ್ರತೆಯಿಂದ ಮೀಯುಸುತ್ತದೆ. ಅರಿವಿನ ಸೂಕ್ಷö್ಮ ಗ್ರಾಹಿತ್ವ Black Woman's Poet Laureate' ದಲ್ಲಿ ಕಾವ್ಯದ ಗಡಿ ವಿಕಸಿಸುತ್ತದೆ. ಇಂತಹ ಕವಿತೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರಾದವರು ಮಾಯ ಎಂಜೆಲ್ಲೋ. Bla” ಎಂದೇ ಹೆಸರಾಗಿರುವ ಮಾಯಾ ಎಂಜೆಲ್ಲೊ ಅಮೇರಿಕನ್ ಕವಿ, ನಾಗರಿಕ ಹಕ್ಕುಗಳ ಹೋರಾಟಗಾರ್ತಿ. ಕೇವಲ ಎಂಟು ವರ್ಷದವಳಿದ್ದಾಗ ಮಲತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗಿ, ಹತ್ತಾರು ಬಾರಿ ಜನಾಂಗೀಯ ತಾರತಮ್ಯದ ನೋವನ್ನುಂಡು, ಸಾಹಿತ್ಯದೆಡೆಗೆ ಆಕರ್ಷಿತರಾಗಿ ಜಗತ್ತಿನ ಹೆಸರಾಂತ ಕವಿಯಾಗಿ ಬೆಳೆದು ನಿಂತ ಮಾಯಾ ಎಂಜೆಲ್ಲೋ ತನ್ನರಿವಿನ ಮೂಲಕವೇ ಹೊಮ್ಮಿದ ಗಟ್ಟಿ ದನಿ.
ಆಫ್ರಿಕನ್ ಅಮೇರಿಕನ್ ಎಂದು ಕರೆಯಿಸಿಕೊಳ್ಳುವ ಕರಿಯರು ಮತ್ತು ಅಮೇರಿಕಾದ ಬಿಳಿಯರ ನಡುವಿನ ಜನಾಂಗೀಯ ವೈಷಮ್ಯ, ವರ್ಣ ತಾರತಮ್ಯಗಳು, ಅವುಗಳನ್ನು ಅನುಭವಿಸಿದ ಹೃದಯಗಳಿಗೆ ಅದರ ಒಳಕುಲುಮೆಯ ಉರಿಯ ನೋವು ಗೊತ್ತು. ಹಿಂಸೆ,ದ್ವೇಷ ಅಸೂಯೆ, ತಾರತಮ್ಯ, ಶೋಷಣೆಗಳು ಜಗತ್ತಿನ ಉದ್ದಕ್ಕೂ ಮನುಷ್ಯ ಸಂಬಂಧಗಳಲ್ಲಿ ಢಾಳಾಗಿ ಬಣ್ಣಪಡೆದಿವೆ. ಆ ಮೂಲಕ ಹುಟ್ಟುವ ಎಲ್ಲ ಸಂಘರ್ಷಗಳಿಗೆ ಶತಮಾನಗಳ ಉತ್ತರವು ಇದೆ. ಇಂತಹ ಸೂಕ್ಷö್ಮ ಸಂಗತಿಯೊAದನ್ನು ಪಂಜರದ ಹಕ್ಕಿಯ ರೂಪಕದೊಂದಿಗೆ ಎದುರಾಗಿಸುತ್ತಾರೆ ಮಾಯಾ ಎಂಜೆಲ್ಲೋ.
“The caged bird sings
with a fearful trill
Of things unknown
But longed for still
And his tune is heard
On the distant hill
For the caged bird
Sings of freedom''
ಈ ಸಾಲುಗಳು ಎಂಜೆಲೋ ಬರೆದ “I Know why the caged bird sings'' ಎಂಬ ಕವಿತೆಯ ಕೊನೆಯ ಸಾಲುಗಳು. ಇದೊಂದು ಮುಕ್ತಛಂದದ ಕವಿತೆ. ಈ ಕವಿತೆ ಕೇವಲ ಒಂದು ಕವಿತೆ ಮಾತ್ರವಾಗಿರದೇ ಅವರ ವೈಯಕ್ತಿಕ ಬದುಕನ್ನು ಪ್ರತಿನಿಧಿಸುವ ಅವರ ಏಳು ಆತ್ಮ ಚರಿತ್ರೆಗಳಲ್ಲಿ ಮೊದಲ ಕೃತಿಯ ಹೆಸರು ಆಗಿದೆ. ಈ ಕೃತಿಯಲ್ಲಿ ಎಂಜೆಲ್ಲೋ ತಮ್ಮ ಹದಿನೇಳು ವರ್ಷದೊಳಗಿನ ಬದುಕನ್ನು ತೆರೆದಿಟ್ಟಿದ್ದಾರೆ.
ಜಗದ ತುಂಬಾ ಕಾಣುವ ಜನಾಂಗೀಯ ತಾರತಮ್ಯಕ್ಕೆ ಕಾರಣವೇನು? ತನ್ನ ಮೇಲುಗಾರಿಕೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರವೇ ಇರಬೇಕು. ಅಥವಾ ಪ್ರಾಣಿ ಸಹಜದ ಗುಣವಾದ ದೀನರನ್ನು ದಮನಿಸಿ ಆಳುವ ಪ್ರವೃತ್ತಿ ಇರಬಹುದು. ಸಮಾನತೆ ಅಸಮಾನತೆಗಳ ಅರಿವಿದ್ದ ಮನುಷ್ಯ ಜಗತ್ತು ಎಷ್ಟು ಹೊಲಸುಮಯವಾಗಿದೆಯಲ್ಲವೇ? ಇತಿಹಾಸದ ತುಂಬಾ ಕಂಡುಕೇಳಿದ ಹೋರಾಟಗಳು ನಡೆದಿದ್ದು ಇನ್ನೊಬ್ಬರ ಸ್ವತ್ತನ್ನು ಕಸಿದುಕೊಳ್ಳಲು, ಇಲ್ಲ ತಮ್ಮ ಸ್ವತ್ತನ್ನು ಕಾಪಾಡಿಕೊಳ್ಳಲು ಅಥವಾ ಮರು ಗಳಿಸಲು. ಹಾಗಾದರೆ ನಾಗರಿಕ ಸಮಾಜದ ಈ ಸಂಕೀರ್ಣತೆಯ ಮುಖಗಳು ಸಾಮಾಜಿಕ ಸ್ವಾಸ್ಥ್ಯವನ್ನು ಊರ್ಜಿತಗೊಳಿಸುತ್ತವೆಯೇ? ತನ್ನಂತೆ ಪರರ ಬಗೆಯಲು ಮನುಷ್ಯನಿಗೇಕಾಗದು? ತನಗೆ ಪ್ರಿಯವೆನಿಸುವ ಸ್ವಾತಂತ್ಯ್ರ ಅನ್ಯರಿಗೂ ಪ್ರಿಯವೇ ಹೌದು ಎಂಬ ಪ್ರಜ್ಞೆ ಏಕಿರದು? ಇಂತಹ ಪ್ರಶ್ನೆಗಳನ್ನು ಈ ಕವಿತೆ ಬಡಿದೆಬ್ಬಿಸುತ್ತದೆ.
“A free bird leaps
on the back of the wind... and dares to claim the sky''
ಮುಕ್ತವಾಗಿರುವ ಸ್ವತಂತ್ರ ಹಕ್ಕಿ ಗಾಳಿಯ ಬೆನ್ನೇರಿ ಹಾರುತ್ತದೆ. ಹಾರುತ್ತಲೇ ತನಗಿಷ್ಟ ಬಂದಂತೆ ಕೆಳಮುಖವಾಗಿಯೂ ಗಾಳಿಯಲೆಯ ಉದ್ದಕ್ಕೂ ಸಾಗಿ ಸೂರ್ಯನ ಬಂಗಾರದ ಕಿರಣಗಳಲ್ಲಿ ತನ್ನ ರೆಕ್ಕೆಗಳನ್ನು ಅದ್ದಿ ಅಲ್ಲಿಂದಲೇ ಆಗಸವನ್ನೆ ಹೊಂದುವ ಧೈರ್ಯ ಮಾಡುತ್ತದೆ. ಆದರೆ ಪಂಜರದ ಪಕ್ಷಿ
‘His wings are clipped and
his feet are tied
so he opens his throat to sing'
ಜಗದ ಮೂಲ ಆಕಾಂಕ್ಷೆಗಳಲ್ಲಿ ಸ್ವಾತಂತ್ಯ್ರದ ಹಂಬಲವೂ ಪ್ರಥಮವಾಗಿಯೇ ಪರಿಗಣಿಸಲ್ಪಡುತ್ತದೆ. ಮುಕ್ತವಾಗಿ ಹಾರಾಡಿಕೊಂಡಿರುವ ಹಕ್ಕಿ ಮತ್ತು ಪಂಜರದದಲ್ಲಿ ಬಂಧಿಯಾಗಿರುವ ಹಕ್ಕಿ ಇವೆರಡೂ ಸ್ವಾತಂತ್ಯ್ರ ಮತ್ತು ಪಾರತಂತ್ಯ್ರಕ್ಕೆ ದೃಷ್ಟಾಂತಗಳಾಗಿ ನಿಲ್ಲುತ್ತವೆ. ಮುಕ್ತತೆಯನ್ನೇ ಉಸಿರಾಡುವ ಹಕ್ಕಿಯನ್ನು ಪಂಜರದಲ್ಲಿ ಕೂಡಿ ಹಾಕಿರುವುದು ಅದರ ನಿಜ ಸ್ವಭಾವಕ್ಕೆ ಮತ್ತು ಆಕಾಂಕ್ಷೆಗೆ ಸಂಪೂರ್ಣ ವಿರುದ್ಧ. ಅಂತಹ ಹತಾಶೆಯಲ್ಲೂ ಅದು ತನ್ನ ಗಂಟಲು ತೆರೆದಿದೆ. ಈ ಕಮರದ ಜೀವನೋತ್ಸಾಹ ಅದನ್ನು ಜೀವಂತ ಇಟ್ಟಿದೆ. ತನ್ನ ನಿಗ್ರಹಿಸಲ್ಪಟ್ಟ ಸ್ವಾತಂತ್ಯ್ರಕ್ಕಾಗಿ ಅದು ಹಾಡುತ್ತಿದೆ. ಆ ದನಿಯಲ್ಲಿ ಭಯವಿದೆ. ಆದರೂ ಅಲ್ಲೊಂದು ಆಶಾವಾದವೂ ಇದೆ.
ಯಾಕೆಂದರೆ ಸ್ವಾತಂತ್ರö್ಯ ಮತ್ತು ಸಮಾನತೆ ಪ್ರತಿ ಜೀವಿಯಲ್ಲಿನ ಆತ್ಯಂತಿಕ ತುಡಿತ. ಪ್ರತಿ ವ್ಯಕ್ತಿಯೂ ಜೀವಿಯೂ ತನ್ನಿಷ್ಟದಂತೆ ಇರಬಯಸುತ್ತಾರೆ. ಸಮಾನವಾಗಿ ಬದುಕಬಯಸುತ್ತಾರೆ. ಖುಷಿ ಪಡಬಯಸುತ್ತಾರೆ. ಇವೆರಡೂ ಅಸ್ತಿತ್ವದ ಎರಡು ಪರಿಕರಗಳು. ನಮ್ಮ ಇರುವಿಕೆ ಸಹ್ಯವಾಗಬೇಕಾದರೆ ಆ ನೆಲೆಯಲ್ಲಿ ಇವೆರಡು ಅಗತ್ಯವಾಗಿ ನಮ್ಮ ಜೊತೆಗಿರಬೇಕು. ಸ್ವತಂತ್ರ ಬದುಕು ಕೊಡುವ ಸುಖ ಮತ್ತು ಪರತಂತ್ರ ಬದುಕು ನೀಡುವ ಯಾತನೆ ಇವೆರಡರನ್ನು ಈ ಕವಿತೆ ಹೇಳುತ್ತಲೇ ಪರತಂತ್ರದಲ್ಲೂ ಸ್ವಾತಂತ್ರö್ಯದ ಕನಸು ಕಾಣುವ ಅದಕ್ಕಾಗಿ ದನಿಯೆತ್ತುವುದು ಅನಿವಾರ್ಯವಾಗಿರುವ ಪರಿಸ್ಥಿತಿ ಇಂದಿನದು.. ಇರುವುದು ಮತ್ತು ಇಲ್ಲದಿರುವುದರ ನಡುವೆ ಇರುವ ಭಿನ್ನತೆಗಳು, ಇರುವಿಕೆಯ ಅನುಭವಿಸುವ ಯೋಗ ಹಾಗೂ ಇರದುದರ ಕುರಿತು ಮತ್ತು ಪಡೆವ ಕುರಿತು, ತನ್ನತನಕ್ಕಾಗಿ ತನ್ನ ಅಸ್ತಿತ್ವಕ್ಕಾಗಿ ನಡೆಯುವ ಪ್ರಯತ್ನಗಳು ಆ ದನಿಯನ್ನು ಬಲಿಷ್ಟಗೊಳಿಸಿವೆ. ಅವು ದಮನಿಸಿದಷ್ಟು ಪುಟಿದೇಳುತ್ತದೆ. ಅಸ್ತಿತ್ವಕ್ಕೆ ಪೆಟ್ಟು ಬಿದ್ದಾಗಲೆಲ್ಲಾ ನಾವು ಅದನ್ನು ಮೆಟ್ಟಿನಿಲ್ಲುವ ಪ್ರಯತ್ನ ಮಾಡುತ್ತೇವೆ. ಅಂದರೆ ಮಾತ್ರ ಜೀವಂತವಾಗುತ್ತೇವೆ.
ಹಾಗಾಗಿಯೇ ಮಾಯ ಏಂಜೆಲ್ಲೋ ಹೇಳುತ್ತಾರೆ...ಪಂಜರದ ಹಕ್ಕಿ ಹತಾಶೆಯ ಪಂಜರದ ಹೊರತಾಗಿ ಏನನ್ನೂ ನೋಡಲಾರದು. ಅಸಹಾಯಕತೆ ಅದನ್ನು ಬಂಧಿಸಿದೆ. ಅದರ ಕಾಲುಗಳು ಕಟ್ಟಲ್ಪಟ್ಟಿವೆ. ರೆಕ್ಕಗಳು ಬಿಗಿಯಲ್ಪಟ್ಟಿವೆ. ಆದರ ಹಾರಾಟವನ್ನು ನಿರ್ಬಂಧಿಸಲಾಗಿದೆ. ಆದರೂ ಅದರ ಗಂಟಲು ಉದ್ಗೋಷಿಸುತ್ತದೆ, ತನ್ನ ಬಿಡುಗಡೆಯ ಹಾಡನ್ನು ಹಾಡುತ್ತದೆ. ಕೋಪದ ನಾಲಿಗೆಯನ್ನು ಅದೆಂದೂ ಮೌನವಾಗಿಸುವುದಿಲ್ಲ.
ಸ್ವತಂತ್ರ ಹಕ್ಕಿ ಮರಳಿ ಇನ್ನೊಂದು ತಂಗಾಳಿಯ ಬಗ್ಗೆ ಯೋಚಿಸಬಹುದು. ಮರಗಿಡಗಳ ಸಂದಿನಲ್ಲಿ ಸುಳಿದು ಸಾಗುವ ಮಾರುತದ ಕುರಿತು ಯೋಚಿಸಬಹುದು. ಬೆಳ್ಳಗಿನ ಹುಲ್ಲುಗಾವಲಿನ ಮೇಲೆ ಕಾಯುವ ದೊಣ್ಣೆ ಹುಳುಗಳ ಹಿಡಿದು ತಿನ್ನುವ ಕುರಿತು ಯೋಚಿಸಬಹುದು. ಬೃಹದಾಗಸವನ್ನೆ ತನ್ನದೆಂದು ಹೇಳಿಕೊಳ್ಳಬಹುದು. ಆದರೆ ಅದೇ ಪಂಜರದ ಪಕ್ಷಿ ಮಾತ್ರ ತನ್ನ ಭಗ್ನಗೊಂಡ ಕನಸುಗಳ ಗೋರಿಯ ಮೇಲೆ ನಿಲ್ಲುತ್ತದೆ. ಅದರ ನೆರಳು ದುಃಸ್ವಪ್ನದ ಆರ್ತನಾದಕ್ಕೆ ಜೊತೆಯಾಗಬಹುದಷ್ಟೇ. ಯಾಕೆಂದರೆ ಅದರ ರೆಕ್ಕೆಗಳು ಬಿಗಿಯಲ್ಪಟ್ಟಿವೆ. ಕಾಲುಗಳು ಬಂಧಿಸಲ್ಪಟ್ಟಿವೆ. ಆದರೂ
ಹಾಡುವ ತನ್ನ ಕಂಠವನ್ನು ಮಾತ್ರ ಅದು ಸದಾ ಜಾಗ್ರತವಾಗಿಟ್ಟುಕೊಳ್ಳುತ್ತದೆ. ಎಲ್ಲವೂ ದಮನಿಸಲ್ಪಟ್ಟರೂ ಅದರ ದನಿಯನ್ನು ಮಾತ್ರ ಯಾರೂ ದಮನಿಸಲಾರರು. ಹಾಗಾಗಿ ಅದು ಹಾಡುತ್ತದೆ. ಹಾಡುತ್ತಲೆ ಇರುತ್ತದೆ. ಬಿಳಿಯರ ವಿರುದ್ಧದ ಕರಿಯರ ದನಿ ಅದು. ಪುರುಷನ ದೌರ್ಜನ್ಯದ ವಿರುದ್ಧದ ದನಿಯದು. ಶ್ರೀಮಂತರ ವಿರುದ್ಧದ ಬಡವನ ದನಿಯೂ ಆಗಬಹುದು
ಇಂದ – ನಾಗರೇಖಾ ಗಾಂವಕರ
ಈ ಅಂಕಣದ ಹಿಂದಿನ ಬರಹಗಳು:
ಆಧುನಿಕತೆ ಸೃಷ್ಟಿಸುವ ಸಾಮಾಜಿಕ ವಿಪ್ಲವಗಳು- ಹಕಲ್ಬರಿ ಫಿನ್
ಜನರೇಶನ್ ಗ್ಯಾಪ್‌ನ ಮೇಲೊಂದು ಟಿಪ್ಪಣಿ “ಫಾದರ್ ವಿಲಿಯಮ್” ಕವಿತೆ.
ಬ್ರೆಕ್ಟ್‌ನ ’THE CRUTCHES’ - ಪರಾವಲಂಬಿ ಬದುಕಿಗೆ ಒಂದು ಪಾಠ
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’
"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...
"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...
"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...
©2025 Book Brahma Private Limited.