Date: 13-02-2025
Location: ಬೆಂಗಳೂರು
"ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡೆಗಳಿಂದ ಬೆಳಗ್ಗೆ ಕಾಫಿ ಕುಡಿದು ಹೊರಗೆ ಹೋಗಿ ಬಂದು ಶ್ರಾದ್ಧ ಪೂಜೆಗೆ ಶ್ರೀನಿವಾಸ ಕೂರಲಿಲ್ಲ. ಅಪ್ಪನ ಮೇಲೆ ಇರತಕ್ಕ ಸಿಟ್ಟು ಕೋಪಗಳು ಆತನಿಂದ ಮರೆಯಲಾಗಿಲ್ಲ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಟಿ.ಜಿ. ರಾಘವ ಅವರ "ಶ್ರಾದ್ಧ ಕಥೆ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಕಾಲಘಟ್ಟದ ಸಂದರ್ಭದಲ್ಲಿ ಟಿ.ಜಿ. ರಾಘವ ಅವರು ಹೆಸರು ಬಹುಮುಖ್ಯ ನೆಲೆಯಲ್ಲಿ ಕಾಣುವಂತದ್ದು. ಅವರು ಕನ್ನಡದ ಪ್ರಮುಖ ಕಥೆಗಾರರು ಎನಿಸಿದ್ದಾರೆ. ಬರೆದದ್ದು ಕಡಿಮೆ ಎನಿಸಿದರು ಬರೆದ ಕೆಲವುಗಳಲ್ಲಿ ಅಗಾಧವಾದ ಅಂಶವನ್ನು ಹೇಳಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಮೂಲತಃ ಬೆಂಗಳೂರಿನವರಾದ ಇವರು 28.03 1935 ರಲ್ಲಿ ಜನಿಸಿದರು. ತಂದೆ ಗೋವಿಂದಾಚಾರ್ಯ, ತಾಯಿ ತಂಗಮ್ಮ ದಂಪತಿಗಳ ಮಗನಾದ ರಾಘವ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಇಂಗ್ಲಿಷ್ & ಭಾಷಾ ವಿಜ್ಞಾನ ಪಡೆದು ಪ್ರಾಧ್ಯಾಪಕರಾಗಿ ನಾಡಿನ ಹಲವೆಡೆ ಕಾರ್ಯನಿರ್ವಹಿಸಿದ್ದಾರೆ.
ವಿಶ್ವ ಕರ್ನಾಟಕ ದಿನಪತ್ರಿಕೆಯ ಉಪಸಂಪಾದಕರಾಗಿ ಕೆಲವು ಸಮಯ ಕಾರ್ಯನಿರ್ವಹಿಸಿರುತ್ತಾರೆ. ಬೆಂಗಳೂರಿನ ಎಂ. ಎಸ್.ಜಿ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಅಲ್ಲಿಯೇ ನಿವೃತ್ತರಾದರು. ಇವರು “ವಿಕೃತಿ”, “ಮನೆ” ಕಾದಂಬರಿಯನ್ನು ರಚಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮನೆ ಕಾದಂಬರಿಯು ಕನ್ನಡ, ಹಿಂದಿ, ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ಮನೆ ಕಾದಂಬರಿ ಮತ್ತು ಶ್ರಾದ್ದ ಕಥೆಯು ಮರಾಠಿ ಭಾಷೆಗೂ, ಪ್ರೇತ ಎಂಬ ಕಥೆ ಮಲಯಾಳಂ ಭಾಷೆಗೆ ಅನುವಾದಗೊಂಡಿದೆ. ಇವರ ವಿಮರ್ಶಾ ಬರಹಗಳ ಕೃತಿ ಪರಿಗ್ರಹ. “ ಜ್ವಾಲೆ”, “ಆರಿತು” ಎಂಬುವವು ಇವರ ಕಥಾಸಂಕಲನಗಳು. ಇವರು ಮೊದಲು ಬರೆದ ಕಥೆ “ಟಿಕ್ ಟಿಕ್”, ಶ್ರಾದ್ಧ, ಮತ್ತೊಂದು ಕಥೆ, ಹಾವು ಹೆಡೆಯಾಡಿತು, ಸಂಬಂಧಗಳು” ಎಂಬಂತಹ ಅಪರೂಪದ ಕಥೆಗಳನ್ನು ನೀಡಿರುತ್ತಾರೆ. ತಾಯಿ ತಮಿಳು ಮೂಲದವರಾಗಿ, ತಂದೆ ಆಂದ್ರಮೂಲದವರಾಗಿದ್ದರು ಸಹ ರಾಘವ ಅವರು ಕಲಿತದ್ದು ಕನ್ನಡದಲ್ಲಿ. ಅವರ ಸಾಹಿತ್ಯ ಕೃಷಿಯು ಸಹ ಕನ್ನಡದಲ್ಲಿ ನಡೆದದ್ದು.
ಇವರ ಶ್ರಾದ್ಧ ಕಥೆಯು ಮನಸ್ಸಿನ ತುಮುಲಗಳ ನಡುವೆ ಒಂದು ಸಂಘರ್ಷ ನಡೆದಿರುವುದನ್ನು ಕಥೆ ದಾಖಲಿಸುತ್ತದೆ. ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡೆಗಳಿಂದ ಬೆಳಗ್ಗೆ ಕಾಫಿ ಕುಡಿದು ಹೊರಗೆ ಹೋಗಿ ಬಂದು ಶ್ರಾದ್ಧ ಪೂಜೆಗೆ ಶ್ರೀನಿವಾಸ ಕೂರಲಿಲ್ಲ. ಅಪ್ಪನ ಮೇಲೆ ಇರತಕ್ಕ ಸಿಟ್ಟು ಕೋಪಗಳು ಆತನಿಂದ ಮರೆಯಲಾಗಿಲ್ಲ. ಹಾಸಿಗೆಯಿಂದ ಬೆಳಗ್ಗೆ ಬೇಗ ಏಳಲಿಲ್ಲವೆಂದು ಒದಸಿಕೊಂಡಿದ್ದು, ಹಣೆಗಿಲ್ಲದೆ ಊಟಕ್ಕೆ ಕುಳಿತನೆಂದು ಮುಖ ತುಂಬಾ ಉಗಿಸಿಕೊಂಡದ್ದು, ಊಟ ಬಿಟ್ಟಿದ್ದು, ಆದರೆ ಅಪ್ಪನ ಥರ್ಮಾಸ್ ಪ್ಲಾಸ್ಕ್ ಒಡೆದಾಗ ಮಾತ್ರ ಅಪ್ಪ ಏನು ಹೇಳಿರಲಿಲ್ಲ. ಎಷ್ಟೇ ಮರೆಯಬೇಕೆಂದರು ಶ್ರೀನಿವಾಸನಿಗೆ ಈ ಎಲ್ಲ ಕಹಿ ಘಟನೆಗಳು ಭೂತವಾಗಿ ಕಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ತನ್ನೊಳಗೆ ನಡೆಸುತ್ತಿದ್ದ ಕೋಲಾಹಲಕ್ಕೆ ಅಂತ್ಯ ನೀಡಲಾಗದೆ ಆತ ತೊಳಲಾಡುತ್ತಿದ್ದ. ಈ ಶ್ರಾಧ್ದ ಕಾರ್ಯಕ್ಕೆ ನಾಯಕ ಕೂರದೆ, ಆತನ ತಮ್ಮ ನರಸಿಂಹ ಕೂರುತ್ತಾನೆ. ಆ ಸಮಯ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಸ್ವ ಚಿಂತನೆಯಿಂದ ನರಕ ಸದೃಶವಾದ ಹೋಯ್ದಾಟವನ್ನು ಶ್ರೀನಿವಾಸ ಅನುಭವಿಸುವ ಕಥೆಯೇ ಈ ಶ್ರಾದ್ಧ.
ಈ ಕಥೆಯು ಒಂದೇ ದಾಟಿಯಲ್ಲಿ ಸಾಗುವ, ಮತ್ತು ಒಂದೇ ವಸ್ತು ವಿಷಯದ ಸುತ್ತ ಸುತ್ತುವ ಕಥಾಹಂದರ. ಆಚೀಚೆ ಎಲ್ಲೂ ಕದಲದೆ ಒಂದೇ ಪರಿಸರದಲ್ಲಿ ಜರುಗುತ್ತದೆ. ಕಥೆಗಾರರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದನ್ನು ವಿಮರ್ಶಿಸಿದಾಗ ಕಥೆಗಾರ ಸ್ವ ಸಂವಾದದೊಂದಿಗೆ ಕಥೆಯನ್ನು ಜರುಗಿಸುತ್ತಾರೆ. ಉಳಿದ ಪಾತ್ರಗಳೆಲ್ಲವೂ ಕಥೆಗಾರನ ಮನಸ್ಸಿನೊಳಗೆ ಬಂದು ಹೋಗಿ ಸಂವೇದನೆ ಮೂಡಿಸುವ ಭಾವ ತರಂಗಗಳಷ್ಟೇ. ಎಲ್ಲಾ ಮಾತುಗಳು ಸ್ವಗತ ಲಹರಿ ಸಂಭಾಷಣೆ. ಕಥೆಯ ನಾಯಕನಿಗೆ ತನ್ನ ಮನೆಯಲ್ಲಿ ನಡೆಯುತ್ತಿರುವ ಶ್ರಾದ್ಧಕ್ಕೆ ಪೂರ್ವತಯಾರಿಗೆ ತಾನು ನಿಲ್ಲಲಾರ. ಮತ್ತು ಸಹಾಯಾರ್ಥವಾಗಿ ಕೈಜೋಡಿಸಲಾರ. ಮೂಲತಃ ಆತನಿಗೆ ಈ ಸಂಪ್ರದಾಯ, ನಿಯಮ,ಕಂದಾಚಾರಗಳ ಮೇಲೆ ನಂಬಿಕೆಯೇ ಇಲ್ಲ. ಯಾಕೆಂದರೆ ಆತ ಇದುವರೆಗೂ ಒಮ್ಮೆ ಮಾತ್ರ ಜನಿವಾರ ಧರಿಸಿದ್ದವನು, ಮತ್ತೊಂದು ಧರಿಸಲಿಲ್ಲ.” ನಾನು ಜನಿವಾರ ಹಾಕಿದ್ದು ಒಂದೇ ದಿನ. ಮುಂಜಿಯಾದ ಮಾರನೆಯ ದಿನ ಮೈಗೆ ಒತ್ತುತ್ತೆ ಎಂದು ಅಮ್ಮನ ಹತ್ತಿರ ಹೇಳಿ ಗೂಟಕ್ಕೆ ತಗಲಿ ಹಾಕಿದವನು ಮತ್ತೆ ಹೋದ ವರ್ಷದ ತಿಥಿಯ ದಿನ ಹಾಕಿದ್ದೆ”. ಹೀಗೆ ಹೇಳುವ ಕಥೆಯ ನಾಯಕ ಆಚಾರ ವಿಚಾರ ಸಂಪ್ರದಾಯಗಳಿಗೆ ಬದ್ಧನಾಗಿದ್ದವನೇನಲ್ಲ. ಹಾಗಂತ ಇಂತಹ ವಿಚಾರಗಳ ಧರ್ಮಸೂಕ್ಷ್ಮತೆಯ ವಿರೋಧಿ ಇರಬಹುದೇ ವಿಶ್ಲೇಷಣೆ ಮಾಡಿದಾಗ ಅಡ್ಡಗೋಡೆಯ ಮೇಲೆ ದೀಪವಿರಿಸಿದ್ದಂತಿದೆ ಶ್ರೀನಿವಾಸನ ನಿಲುವು. ಹೋದ ವರ್ಷ ಈತನೇ ತಾನೇ ಅಪ್ಪನ ಶ್ರಾದ್ಧವನ್ನು ಮಾಡಿದವನು. ಈ ವರ್ಷ ತೆಗೆದುಕೊಂಡ ನಿರ್ಧಾರದ ನಿಲುವಿನ ಹಿಂದಿನ ಗಟ್ಟಿತನ ಕಳೆದ ವರ್ಷ ಆತನ ಮನಸ್ಸಿನಲ್ಲಿ ಇರಲಿಲ್ಲವಾ?? ಅಷ್ಟಕ್ಕೂ ತಮ್ಮ ನರಸಿಂಹನಾದ್ರೂ ಈ ವರ್ಷ ಶ್ರಾದ್ಧದ ಕಾರ್ಯ ಮಾಡುವುದರ ಹಿನ್ನೆಲೆಯಾದರೂ ಏನು?. “ಹೋದ ವರ್ಷ ಅಪ್ಪನ ಶ್ರಾದ್ಧದ ದಿನ ರಾತ್ರಿ ಬೆಕ್ಕೊಂದು ಇವನ ಹಾಸಿಗೆಯಲ್ಲಿ ಹೇತುಬಿಟ್ಟಿತ್ತಂತೆ, ಅದು ಅಪ್ಪನ ಕೋಪದ ರೂಪವೇ ಇರಬೇಕೆಂದು ತಪ್ಪೊಪ್ಪಿಕೊಂಡು ಮುಂದಿನ ವರ್ಷದಿಂದ ಶ್ರದ್ದೆಯಿಂದ ಶ್ರಾದ್ಧ ಮಾಡುತ್ತೇನೆ ಎಂದು ಹರಕೆ ಹೊತ್ತನಂತೆ”. ಹೀಗೆ ಸ್ವಗತ ಲಹರಿಯಲ್ಲಿ ನಾಯಕ ಹೇಳುವಾಗ ತಮ್ಮ ನರಸಿಂಹ ಸಹ ಯಾವುದೋ ನಿಯಮ, ಭಕ್ತಿ,ಪ್ರೀತಿ, ಸಂಪ್ರದಾಯದ ಪಾಲನೆಗಿಂತ ಭಯದ ಸ್ವರೂಪದಲ್ಲಿ ಶ್ರಾದ್ಧ ಕಾರ್ಯ ಮಾಡುವುದು ಅರಿವಿಗೆ ಬರುತ್ತದೆ.
ಮೂಲತಃ ಶ್ರಾದ್ಧ ದಿನ ಊಟ ಮಾಡುವಂತಿಲ್ಲ ಪುರೋಹಿತರು ಉಪಹಾರ ಸೇವಿಸಿಯೆ ಬಂದಿರುತ್ತಾರೆ ಎಂಬ ಕಥಾನಾಯಕನ ನಿಲುವು ಪುರೋಹಿತವನ್ನು ಒಳಗೊಳಗೆ ಪ್ರಶ್ನೆ ಮಾಡುವಂತಿದೆ. ಎಲ್ಲಾ ದ್ವಂದ್ವಗಳು ಮನದ ಒಳಗೆ ಸಮುದ್ರದ ಅಲೆಯಂತೆ ಎದೆಯ ದಡಕ್ಕೆ ಅಬ್ಬರಿಸಿ ಬಡಿಯುತ್ತಲೇ ಇವೆ. ಆದರೆ ಎಲ್ಲರ ಎದುರಿಗೆ ಏನು ಹೇಳಲಾರದೆ ಅಸಹಾಯಕನಾಗಿ ದುರ್ಬಲ ವ್ಯಕ್ತಿಯಂತೆ ಕಂಡುಬರುತ್ತಾನೆ. “ತಂದೆಯ ಅಧಿಕಾರ ದಬ್ಬಾಳಿಕೆಗೆ ಮಾಸ್ತರಿಕೆಗೆ ಸಂಕೇತವಾಗುತ್ತಾನೆ”. (ಕ. ಸ. ಕಥೆಗಳು- ಜಿ. ಹೆಚ್. ನಾಯಕ್) ತಂದೆಯ ಅಧಿಕಾರಕ್ಕೆ ರೋಸಿ ಹೋದ ಮನವು ಚಿಕ್ಕಂದಿನಿಂದಲೇ ಮನಸ್ಸಿಗಾದ ಘಾಸಿ, ನೋವು, ಹತಾಶಾ ಭಾವಗಳು ದೊಡ್ಡವರಾದ ನಂತರ ಸಿಟ್ಟು ದ್ವೇಷ ರೂಪದಲ್ಲಿ ಕಾಡುವುದನ್ನು ಮನೋವೈಜ್ಞಾನಿಕ ನೆಲೆಯಲ್ಲಿ ವಿಮರ್ಶಿಸಬಹುದಾದ ವಸ್ತು ವಿಷಯ. ಎಳೆ ವಯಸ್ಸಿನಲ್ಲಿ ಆದ ಕಹಿ ಘಟನೆ ಅನುಭವಗಳು ಸುಪ್ತಾವಸ್ಥೆಯಲ್ಲಿ ಅಡಗಿದ್ದು, ಕ್ರಮೇಣ ಯಾವುದೋ ಒಂದು ಸನ್ನಿವೇಶ ಸಂದರ್ಭಾನುಸಾರೇಣ ಜಾಗೃತಾವಸ್ಥೆಗೆ ಬಂದು ಆ ವಸ್ತು ವಿಚಾರಕ್ಕೆ ಪೂರಕ ಅಥವಾ ಮಾರಕ ನಿರ್ಧಾರದ ನಡೆಯನ್ನು ಕ್ರಿಯಾತ್ಮಕವಾಗಿಸಿ ಬಿಡುತ್ತವೆ. ಈ ಶ್ರಾದ್ಧ ಕಥೆಯಲ್ಲೂ ಕೂಡ ಚೈಲ್ಡ್ ಹುಡ್ನಲ್ಲಿ ಆದ ಅನುಭವವೇ ಇಂದಿನ ಈ ನಡೆಗೆ ಕಾರಣೀಭೂತ ಎಂಬುದನ್ನು ನಿಸ್ಸಂದೇಹವಾಗಿ ವ್ಯಕ್ತಪಡಿಸಬಹುದು.
“ತಂದೆಯ ಶ್ರಾದ್ಧದ ದಿನ ಮಗ ತಂದೆಯ ವಿಷಯ ಯೋಚಿಸುತ್ತಾನೆ. ಕಥೆಯದು ಸುಲಭವಾದ ವ್ಯಂಗ್ಯ ಅನಿಸುತ್ತದೆ”.( ಪ್ರೋ ಎಲ್ ಎಸ್ ಶೇಷಗಿರಿರಾಯರು- ಹೊಸಗನ್ನಡ ಸಾಹಿತ್ಯ ಚರಿತ್ರೆ ಪು.ಸಂ. 168) ಯಾವುದೇ ಹಿಂದಿನ ಘಟನೆಯಾದರೂ ಸಹ ಪ್ರಸ್ತುತ ಸನ್ನಿವೇಶಕ್ಕೆ ಸಂತೋಷ, ದುಃಖ, ವ್ಯಂಗ್ಯ, ಅಸಹಾಯಕತೆ, ಇವೆಲ್ಲವೂ ಕೂಡ ಭೂತದ ಪರಿಣಾಮವೇ ವರ್ತಮಾನದ ಕ್ರಿಯೆ ಎಂಬುದು ಮನೋವಿಜ್ಞಾನ ತಿಳಿಸುತ್ತದೆ. ಈ ಕಥೆಯ ನಾಯಕನಿಗೂ ಸಹ ಇಂತಹ ಸಂದಿಗ್ಧ ಪರಿಸ್ಥಿತಿಯ ಕೈಗೊಂಬೆಯಾಗಿ ಮನದಲ್ಲೇ ಮಂಡಿಗೆ ಕಡಿಯುತ್ತಾನೆ.
“ಶ್ರದ್ದೆಯಿಂದ ಮಾಡುವುದೇ ಶ್ರಾದ್ಧ” ಎಂಬ ಸಾಲುಗಳು ಕಥೆಯಲ್ಲಿ ಆಗಾಗ ಇಣುಕುತ್ತವೆ. ಕತೆಯ ನಾಯಕ ಶ್ರಾದ್ಧ ನಡಿವಾಗ ತನ್ನ ಕೋಣೆಯಲ್ಲಿ ಸ್ವಯಂಬಂಧಿಯಾಗಿ “ಬೆತ್ತಲೆಯಾದರೆ ಎಲ್ಲಕ್ಕೂ ಹೊಸ ಅರ್ಥ ಬರುತ್ತದೆ ಎಂಬ ಇಣುಕು ಭಾವನೆಗೂ ಇದಕ್ಕೂ ಸಂಬಂಧವಿಲ್ಲವೆನಿಸಿ, ಅರ್ಥವಿಲ್ಲವೆನಿಸಿ ಮತ್ತೆ ಬಟ್ಟೆ ತೊಟ್ಟೆ”. ಹೀಗೆ ಸ್ವಗತದಲ್ಲಿ ನಾಯಕ ಬೆತ್ತಲಾಗುವ ಯೋಚನೆ ಬಂದೊಡನೆ ಮೈ ಮೇಲಿನ ಬಟ್ಟೆ ಕಳಚಿ, ಬೆತ್ತಲಾಗಿ ಮತ್ತೆ ಬಟ್ಟೆ ತೊಟ್ಟುಕೊಳ್ಳುತ್ತಾನೆ. “ಬೆತ್ತಲಾಗುವುದು ಎಂದರೆ ಇದಲ್ಲ” ಎಂಬ ಪರಿಕಲ್ಪನೆ ಒಳಗೆ ಅಪಾರವಾದ ಅಲೌಕಿಕ ಅಂಶ ಅಡಗಿದೆ. “ಬಟ್ಟೆ ತೆಗೆಯುವ ಆಶೆಯಲ್ಲಿ ಮತ್ತು ಕ್ರಿಯೆಯಲ್ಲಿ ಸಂಪೂರ್ಣವಾಗಿ ತಾನೆ ತಾನಾಗುವ ಇತರರ ಹಂಗಿನಿಂದ ಪಾರಾಗುವ ಆಶೆ ಅತ್ಯಂತ ಸಂಗ್ರಹ ಸಮರ್ಪಕ ರೀತಿಯಲ್ಲಿ ವ್ಯಕ್ತವಾಗಿದೆ”. (ಕ. ಸ. ಕಥೆಗಳು- ಜಿ ಹೆಚ್ ನಾಯಕ್) ಅರ್ಥಾತ್ ಇಲ್ಲಿ ಪಾರಾಗುವುದು ಎಂದರೆ ಬಟ್ಟೆ ಕಳಚಿ ಬೆತ್ತಲಾಗುವುದು ಎಂದರೆ ಕತೆ ಏನನ್ನು ಧ್ವನಿಸುತ್ತದೆ? ಕಥೆಗಾರ ಏನನ್ನು ಹೇಳಲು ಹೊರಟ್ಟಿದ್ದಾರೆ? ಈ ಕಥೆಯು ಒಬ್ಬ ವ್ಯಕ್ತಿ ಎಲ್ಲರಿಂದ, ಎಲ್ಲದರಿಂದ ಮುಕ್ತನಾಗುವ ಇಚ್ಛೆಯನ್ನು ಹೊಂದಿರುವುದು ಸುಪ್ತ ಮನದಾಳ ತಿಳಿಸುವುದು. ಆದರೆ ಅದೆಲ್ಲವನ್ನು ಯಾರೊಂದಿಗೂ ಹೇಳಲಾರ. ಇಂತಹ ಸಂಕಟ, ತಳಮಳ , ತಲ್ಲಣ, ನಿವೇದನೆಗಳು ಏನನ್ನು ಪಡೆಯಲಾಗದ, ಏನನ್ನು ಧಕ್ಕಿಸಿಕೊಳ್ಳಲಾರದ, ಏನನ್ನು ಹೇಳಲಾರದ, ಗೊಂದಲ ದ್ವಂದ್ಯದಲ್ಲೇ ಜರಗುತ್ತದೆ.ತಾಯಿಯ ಮಾತಿಗಷ್ಟೇ ಮಗ ಕೋಪಗೊಳ್ಳುವ ಸನ್ನಿವೇಶ ನಡೆಯುತ್ತದೆ.
ತನ್ನ ಕೋಣೆಯಲ್ಲಿರುವಾಗ ತಾನು ಸತ್ತಂತೆ ತನ್ನ ಶ್ರಾದ್ಧದ ತಯಾರಿ ನಡೆಸಬಹುದಾಗಿತ್ತು ಎನ್ನುವ ಮನಸ್ಸು ವ್ಯತಿರಿಕ್ತವಾಗಿ ವೈರುಧ್ಯದ ನೆಲೆಯಲ್ಲಿ ಯೋಚಿಸುವುದು “ಈಗ ನಾನು ಸತ್ತರೆ ನನಗೆ ಶ್ರಾದ್ಧವಿಲ್ಲ. ಪುರೋಹಿತರಿಗೆ, ಬ್ರಾಹ್ಮಣರಿಗೆ, ಎರಡು ರೂ ಖೋತ, ಊಟ ಖೋತ ಎಲ್ಲಾ ಖೋತ”. ಎಂದು ಮನದೊಳಗೆ ಯುದ್ಧ ಮಾಡಿಸುವ ಪರಿ ಅನನ್ಯ. ಹಾಗೂ ಪುರೋಹಿತ ಬ್ರಾಹ್ಮಣ ಇವೆಲ್ಲದರ ಅರ್ಥ ಪ್ರಕ್ರಿಯೆಯನ್ನು ಕತೆಗಾರ ವಿಡಂಬಿಸುತ್ತಾರೆ. ವ್ಯಂಗ್ಯವಾಗಿ ಈ ಎಲ್ಲ ಆಚಾರ ನಿಯಮವನ್ನು ತೀವಿಯುತ್ತಾರೆ.
ಒಟ್ಟಿನಲ್ಲಿ ಸ್ವಗತವಾಗಿ ನಡೆಯುವ ಕ್ರಿಯೆ ಮೌಲ್ಯಗಳನ್ನು ಬೆದುಕುವ, ಪ್ರಶ್ನಿಸುವ, ಧೈರ್ಯವನ್ನು ಬಾಹ್ಯವಾಗಿಸದೆ ಆಂತರಿಕವಾಗಿಯೇ ಪ್ರಶ್ನಿಸುವ ದಾರಿಯನ್ನು ಕಂಡುಕೊಳ್ಳುತ್ತದೆ. ಪ್ರತಿ ಮನುಷ್ಯನಲ್ಲೂ ಅಂತರಂಗ ಬಹಿರಂಗ ಇವುಗಳ ನಡುವೆ ಸದಾ ನಡಿಯುವ ಸಂಘರ್ಷವನ್ನು ಕತೆಗಾರ ಶ್ರಾದ್ಧ ಎಂಬ ಒಂದು ವಸ್ತು ವಿಚಾರದ ಹಿನ್ನೆಲೆಯಲ್ಲಿ ವಿವರಿಸಿದ್ಧಾರೆ. ಆದರೆ ಸಮಾಜದಲ್ಲಿ ಜರುಗುವ ಪ್ರತಿಯೊಂದು ಸನ್ನಿವೇಶ ಸಂದರ್ಭಕ್ಕೂ ಮನಸು ಪ್ರತಿಕ್ರಿಯೆ ನೀಡದಿದ್ದರೂ ಆಂತರಿಕವಾಗಿ ಕೆಲವಷ್ಟು ವಿಚಾರ ಕಾದರೂ ದ್ವಂದ್ವ, ಘರ್ಷಣೆ, ಕೋಲಾಹಲ ನಿರಂತರವಾಗಿ ಸಾಗುತ್ತಲೇ ಇರುತ್ತದೆ.
"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...
"ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು...
"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...
©2025 Book Brahma Private Limited.