Date: 25-12-2022
Location: ಬೆಂಗಳೂರು
''ಶೌರಿರಾಜು ಮಾತಿಗಿಳಿದು 'ನಾವು ಹುಟ್ಟಿ ಬೆಳೆದದ್ದೆಲ್ಲ ಇಲ್ಲೇ ಆದ್ದರಿಂದ ನಮ್ಮ ಪ್ರಪಂಚವೇ ಇದು. ಹೊರಗಿನ ಪ್ರಪಂಚದ ಒಡನಾಟ ಹೆಚ್ಚಿಗೆ ಇಲ್ಲ. ಈ ಸ್ಮಶಾನದಲ್ಲಿ ಒಟ್ಟು ಹದಿಮೂರು ಕುಟುಂಬಗಳಿವೆ. ಮೊದಲೆಲ್ಲ ಇಲ್ಲಿಗೆ ಬರುವವರು ಕೊಡುವ ಹಣವೇ ನಮ್ಮ ಬದುಕಿಗೆ ಜೀವನೋಪಾಯವಾಗಿತ್ತು. ಗುಂಡಿ ತೋಡಿ ಮಣ್ಣು ಮಾಡಬೇಕು. ಸುಡುವುದು ಬಂದ್ರೆ ಸುಡಬೇಕು. ಮುಂಚೆ ಯಾವ ಸಂಬಳವೂ ಇಲ್ಲದೆ ಉಚಿತವಾಗಿ ಕೆಲಸ ಮಾಡಿದ್ದೇವೆ'' ಎನ್ನುತ್ತಾರೆ. ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ನಲವತ್ತೇಳು ವರ್ಷದ ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ’ ಕುರಿತು ಬರೆದಿದ್ದಾರೆ...
ರುದ್ರಭೂಮಿ ಅಂದರೆ ಶಿವನ ತಾಣ. ಸ್ಮಶಾನ ಕಾಯುವವರು ಶಿವನ ಒಡನಾಡಿಗಳು. ಕಸ ಹಾಕುವವರು ಇರುವಂತೆ ಕಸ ತೆಗೆಯುವವರು, ಹೊಲಸು ಮಾಡುವವರಿರುವಂತೆ ಹೊಲಸು ಬಳಿಯುವವರು ಇದ್ದಾರೆ. ಹಾಗೇನೇ ಮನುಷ್ಯರನ್ನು ಹೆರುವವರು ಇದ್ದಾರೆಂದರೆ ಹೂಳುವವರು ಇರಬೇಕಲ್ಲವೇ... ಇದ್ದಾರೆ ಕೂಡ. ಅಂತವರೊಬ್ಬರು ಬೆಂಗಳೂರಿನ ಜೀವನಹಳ್ಳಿ ಕಾಕ್ ಸ್ಟೋನ್ ಬಳಿಯ ಕಲ್ಪಳ್ಳಿ ಹಿಂದೂ ಸ್ಮಶಾನದಲ್ಲಿ ಸಿಕ್ಕಿದ್ದರು. ಸುಮಾರು ಆರೇಳು ತಲೆಮಾರುಗಳಿಂದ ರುದ್ರಭೂಮಿಯಲ್ಲಿಯೇ ಇದ್ದು ಬಾಲ್ಯ, ಯೌವ್ವನ, ಮದುವೆ, ಮಕ್ಕಳು ಒಟ್ಟಾರೆ ಬದುಕನ್ನೇ ಸ್ಮಶಾನದಲ್ಲಿ ಸಾಗಿಸುತ್ತಿರುವ ನಲವತ್ತೇಳು ವರ್ಷದ ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ ಇಂದಿನ ನಿಮ್ಮ ಓದಿಗೆ.
'ಇಲ್ಲೇ ಹುಟ್ಟಿ ಚಿಕ್ಕಂದಿನಿಂದ ಇಲ್ಲಿನ ಸಮಾಧಿಗಳ ಮೇಲೆ ಆಟವಾಡ್ತಾ ಬೆಳೆದಿದ್ದೇವೆ. ನಮಗೆ ಯಾವ ಭಯವೂ ಇಲ್ಲ. ನಮ್ಮ ಆಟ, ಊಟ, ಪಾಠ ಎಲ್ಲವೂ ಇಲ್ಲೆ. ಇದು ನಮಗೆ ಅಭ್ಯಾಸವಾಗಿ ಬಿಟ್ಟಿದೆ. ನಾವು ಓದಬೇಕು ಅಂದರೂ ಸಮಾಧಿಯ ಮೇಲೆ ಕುಳಿತು ಓದುತ್ತೇವೆ' ಎನ್ನುತ್ತಾರೆ ಶೌರಿರಾಜ್ ಅವರ ಕಿರಿಯ ಮಗಳು ಜಾಯ್ಸ್. ಪಿ. ಯು. ಸಿ. ಓದುತ್ತಿರುವ ಇವರು ಐ. ಎ. ಎಸ್. ಓದುವ ಗುರಿಯನ್ನು ಹೊಂದಿದ್ದಾರೆ.
ಶೌರಿರಾಜು ಮಾತಿಗಿಳಿದು 'ನಾವು ಹುಟ್ಟಿ ಬೆಳೆದದ್ದೆಲ್ಲ ಇಲ್ಲೇ ಆದ್ದರಿಂದ ನಮ್ಮ ಪ್ರಪಂಚವೇ ಇದು ಹೊರಗಿನ ಪ್ರಪಂಚದ ಒಡನಾಟ ಹೆಚ್ಚಿಗೆ ಇಲ್ಲ. ಈ ಸ್ಮಶಾನದಲ್ಲಿ ಒಟ್ಟು ಹದಿಮೂರು ಕುಟುಂಬಗಳಿವೆ. ಮೊದಲೆಲ್ಲ ಇಲ್ಲಿಗೆ ಬರುವವರು ಕೊಡುವ ಹಣವೇ ನಮ್ಮ ಬದುಕಿಗೆ ಜೀವನೋಪಾಯವಾಗಿತ್ತು. ಗುಂಡಿ ತೋಡಿ ಮಣ್ಣು ಮಾಡಬೇಕು. ಸುಡುವುದು ಬಂದ್ರೆ ಸುಡಬೇಕು. ಮುಂಚೆ ಯಾವ ಸಂಬಳವೂ ಇಲ್ಲದೆ ಉಚಿತವಾಗಿ ಕೆಲಸ ಮಾಡಿದ್ದೇವೆ. 1981 ರಲ್ಲಿ ತಿಂಗಳಿಗೆ ನೂರು ರೂಪಾಯಿ ಮಾಡಿದರು. ಅದಕ್ಕೂ ಮುಂಚೆ ಇಪ್ಪತ್ತು ರೂಪಾಯಿಗೆಲ್ಲ ಕೆಲಸ ಮಾಡಿದ್ದೇವೆ. ಆಮೇಲೆ ನಮ್ಮ ಸಂಘಟನೆ ಮುಖಾಂತರ ತುಂಬಾ ಹೋರಾಟಗಳನ್ನು ಮಾಡಿದ ನಂತರ 1995 ರಲ್ಲಿ ತಿಂಗಳಿಗೆ 1000/- ರೂಪಾಯಿ ಸಂಬಳ ಕೊಡುತ್ತಿದ್ದರು. ಮಳೆ ಬಂದರೆ ಮನೆಯೊಳಗೆ ನೀರು ಸುರಿಯುತ್ತದೆ. ಇಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಇಲ್ಲಿಂದ ಹೊರಗಡೆ ಬೇರೆ ಎಲ್ಲಿಯಾದರು ಮನೆ ಮಾಡಿದರೆ ಬಾಡಿಗೆ ಕಟ್ಟಬೇಕು. ನಮ್ಮಲ್ಲಿ ಅಷ್ಟು ಹಣವಿಲ್ಲ. ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಹೊರಗೆ ಮನೆಮಾಡಿ ಜೀವನ ಮಾಡೋದು ಕಷ್ಟದ ಸಂಗತಿ. ದಿನವೊಂದಕ್ಕೆ ಮಣ್ಣು ಮಾಡಲು ಎರಡ್ಮೂರು ಬಾಡಿಗಳು ಬರುತ್ತವೆ. ಇಲ್ಲಿಗೆ ಮಣ್ಣು ಮಾಡಲು ಬರುವವರು ನನ್ನ ನಂಬರ್ ತೆಗೆದುಕೊಂಡು ಹೋಗುತ್ತಾರೆ. ಯಾರಾದರೂ ಪೂಜೆಗೆ ಬರುವ ಹಾಗಿದ್ದರೆ ಮಣ್ಣು ಮಾಡಿದ ಜಾಗವನ್ನು ಕ್ಲೀನ್ ಮಾಡಿ ಅಂತ ಫೋನ್ ಮಾಡಿ ಹೇಳುತ್ತಾರೆ. ಮೂರನೇ ದಿನ ಹಾಲು ತುಪ್ಪ ಕಾರ್ಯ ಮಾಡುವಾಗ ಊಟ ಎಲ್ಲ ತಗೊಂಡು ಬರುತ್ತಾರೆ. ಅದನ್ನು ನಾವು ತಿನ್ನುತ್ತೇವೆ. ಎಷ್ಟೋ ಸಲ ಇದರಿಂದ ನಮ್ಮ ಜೀವನ ಸಾಗಿದೆ. ಅದನ್ನು ಮಾತ್ರವಲ್ಲ ಅಕ್ಕಿ ಹಾಕುತ್ತಾರಲ್ಲ ಅದನ್ನು ಬಟ್ಟೆಗೆ ಹಿಡಿಯುತ್ತೇವೆ. ಕೆಲವರು ಬಿಳಿ ಅಕ್ಕಿ ಹಾಕುತ್ತಾರೆ ಕೆಲವರು ಅರಿಶಿನದ ಅಕ್ಕಿ ಹಾಕುತ್ತಾರೆ. ಅದನ್ನೂ ಕೂಡ ನಾವು ತಿನ್ನುತ್ತೇವೆ. ನಮ್ಮ ಕೆಲಸದ ಸಮಯ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ. ಮಣ್ಣು ಮಾಡಲು ಒಮ್ಮೊಮ್ಮೆ ಸಂಜೆ ಐದು ಗಂಟೆಗೆ ಬರುತ್ತಾರೆ. ನಾವು ಆಗ ಗುಂಡಿ ತೆಗೆಯಬೇಕು. ಬೇರೆ ಊರಿಂದ ಯಾರೋ ಬರುತ್ತಾರೆ ಇರಿ ಅಂತಾರೆ. ಆಗ ನಾವು ಟೈಮ್ ಆಯ್ತು ಅನ್ನೋಕೆ ಆಗಲ್ಲ. ಇಷ್ಟೇ ಸಮಯ ಅಂತೇನಿಲ್ಲ. ಮಣ್ಣು ಮಾಡಿದ ಮೇಲೆ ಕೋಟಿ ಹಣ ಇದ್ದರೂ ನೋಡೋಕೆ ಆಗಲ್ಲ ಅಲ್ವಾ ನಮಗೂ ಮನಸಾಕ್ಷಿ ಅನ್ನೋದು ಇದೆಯಲ್ಲ ಅದಕ್ಕೆ ಕಾದಿದ್ದು ನಂತರ ಮಣ್ಣು ಮಾಡುತ್ತೇವೆ. ಎಷ್ಟೇ ಚೆನ್ನಾಗಿರುವ ದೇಹ ಆದರೂ ಸತ್ತಮೇಲೆ ಇಪ್ಪತ್ನಾಲ್ಕು ಗಂಟೆಗಳ ನಂತರ ಡಿಕಂಪೋಸ್ ಪ್ರಾರಂಭವಾಗುತ್ತದೆ. ಎರಡು ದಿನ ಬಿಟ್ಟರೆ ಒಂಥರಾ ಆಗಿ ಬಿಡುತ್ತದೆ ಮೂರು ದಿನದ ಮೇಲೆ ಮಣ್ಣು ಮಾಡಿದರೆ ಕಪ್ಪಾಗಲು ಪ್ರಾರಂಭಿಸುತ್ತದೆ. ಒಂದು ವಾರದ ಒಳಗೆ ದೇಹದ ಅಲ್ಲಲ್ಲಿ ನೀರು ಬಿಟ್ಟು ಕೊಳೆಯಲು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ನಾವು ಮಣ್ಣು ಮಾಡಿದ ಶವಗಳನ್ನು ಪೋಸ್ಟ್ ಮಾರ್ಟಂ ಸಲುವಾಗಿ ಆರು ತಿಂಗಳು, ವರ್ಷದ ನಂತರವೂ ತೆಗೆದಿದ್ದು ಇದೆ. ಕೋವಿಡ್ ಸಮಯದಲ್ಲಿ ಮೊದಲ ಬಾಡಿ ಸುಡಲು ತಂದ್ರು. ಆಗ ನಮ್ಮವರೇ ಯಾರೂ ಮುಟ್ಟುತ್ತಿರಲಿಲ್ಲ. ನಾನು ಮತ್ತು ನನ್ನ ಇಬ್ಬರು ತಮ್ಮಂದಿರು ಸೇರಿ ಮಣ್ಣು ಮಾಡಿದ್ದೇವೆ. ಇಡೀ ಬೆಂಗಳೂರಿಗೆ ದೇವರಿದ್ದಾನೆ ಅಂತ ಧೈರ್ಯ ಮಾಡಿ ಮಣ್ಣು ಮಾಡಿದ್ವಿ. ಆಮೇಲೆ ಎಲ್ಲಾ ಕಡೆ ರವಿ, ರುದ್ರೇಶ್ ನಾನು ಹೋಗಿ ಮಾಡಿಕೊಂಡು ಬಂದಿದ್ದೇವೆ. ನಂತರ ಬೆಂಗಳೂರಿಗೆ ಕೋ ಇಂಚಾರ್ಜ್ ಆಗಿ ನೇಮಕ ಮಾಡಿದ್ರೂ. ಕೋವಿಡ್ ಸಮಯದಲ್ಲೂ ನಮ್ಮ ಕೈನಲ್ಲಿ ಎಷ್ಟು ನೀಟಾಗಿ ಮಾಡಲು ಸಾಧ್ಯವೋ ಅಷ್ಟು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೇವೆ. ನಂತರ ಕಮಿಷನರ್ ಜೊತೆಗೆ ಮಾತಾಡಿ ಪಿ ಪಿ ಇ ಕಿಟ್ ತರಿಸಿಕೊಂಡೆವು. ನಮ್ಮ ಬೆಂಗಳೂರಿನ ಸುತ್ತ ಮುತ್ತ ಇರುವ ಸ್ಮಶಾನಗಳು ಚಿಕ್ಕವು. ಜೆಸಿಬಿ ಗಾಡಿ ಹೋಗಲು ಆಗುತ್ತಿರಲಿಲ್ಲ. ಇಡೀ ಬೆಂಗಳೂರಿಗೆ ಇದೇ ದೊಡ್ಡ ರುದ್ರಭೂಮಿ. ಹೂಳಲು ಸಾಮಾನ್ಯವಾಗಿ ಮೂರು ಅಡಿ ಅಗಲ ಆರು ಅಡಿ ಉದ್ದ ಗುಂಡಿ ತೆಗೆಯುತ್ತಿದ್ದೆವು. ಕೋವಿಡ್ ಬಾಡಿಗಳನ್ನು ಹತ್ತು ಅಡಿ ಆಳದ ಗುಂಡಿ ತೆಗೆದು ಹೂಳಬೇಕಿತ್ತು. ಬೇರೆ ಸ್ಮಶಾನಗಳಲ್ಲಿ ಜೆಸಿಬಿ ಹೋಗಲು ಸ್ಥಳಾವಕಾಶ ಇಲ್ಲದ್ದರಿಂದ ಒಂದು ಜೆಸಿಬಿ ಗಾಡಿಯನ್ನು ಹಗಲು ರಾತ್ರಿ ಇಲ್ಲೇ ಇರುವಂತೆ ಕೇಳಿಕೊಂಡು ಮಣ್ಣು ಮಾಡಿದ್ದೇವೆ'.
'ಆಗೆಲ್ಲ ಬೆರಣಿಯಲ್ಲಿ ಸತ್ತ ದೇಹವನ್ನು ಸುಡುತ್ತಿದ್ದರು. ನಾವು ರಾತ್ರಿ ಪೂರ್ತಿ ಅಲ್ಲೇ ಕಾದಿದ್ದು ಸಂಪೂರ್ಣ ಸುಡಬೇಕಿತ್ತು. ಬೆರಣಿಯನ್ನು ದುಡ್ಡು ಕೊಟ್ಟು ತಂದು ಕೆಳಗೆಲ್ಲ ಬೆರಣಿ ಜೋಡಿಸಿ ಅದರ ಮೇಲೆ ದೇಹವಿಟ್ಟು ಹತ್ತು ಮಡಕೆಯ ಬಾಯಿಗಳನ್ನು ಈ ಕಡೆ ಮೂರು ಆ ಕಡೆ ಮೂರು ಕಾಲಿನ ಹತ್ತಿರ ಒಂದು, ತಲೆಯ ಹತ್ತಿರ ಒಂದು ಮೇಲ್ ಭಾಗದಲ್ಲಿ ಎರಡು ಇಟ್ಟು ಹುಲ್ಲು ಹಾಕಿ ಅದಕ್ಕೆ ಮಣ್ಣಿನಿಂದ ಸಾರಿಸುತ್ತಿದ್ದೆವು. ಕೆಳಗಡೆ ಬೆಂಕಿ ಹಾಕಿದರೆ ಒಳಗಿನಿಂದ ಬೆರಣಿ ಹೊತ್ತಿಕೊಂಡು ಉರಿಯುತ್ತಿತ್ತು. ಮೇಲಿನ ಎರಡು ಮಡಕೆಯ ಬಾಯಿಯಿಂದ ಹೊಗೆ ಹೋಗ್ತಾ ಇತ್ತು. ನಾಲ್ಕು ಗಂಟೆಯ ನಂತರ ಮತ್ತೆ ಅದನ್ನೆಲ್ಲ ಓಪನ್ ಮಾಡಿ ಮತ್ತೆ ಬೆರಣಿ ಹಾಕಿ ಸಂಪೂರ್ಣ ಸುಡುವವರೆಗೂ ರಾತ್ರಿಯೆಲ್ಲಾ ಕಾದು ಎದ್ದಿರಬೇಕಿತ್ತು. ಈಗ ಸೌದೆ, ಮಷೀನ್ ಗಳಲ್ಲಿ ಸುಡುವುದು ಬಂದಿದೆ. ಒಂದು ಮಡಿಕೆಗೆ ಅವರದ್ದು ಹೆಸರು ಹಾಕಿ, ಪುಸ್ತಕದಲ್ಲಿನ ಅವರ ಬಿ.ಜಿ. ನಂಬರ್ ಹಾಕಿ ತಕ್ಷಣ ಆ ಬೂದಿಯನ್ನು ಅದರಲ್ಲಿ ಹಾಕಿ ಇಟ್ಟಿರುತ್ತೇವೆ. ಅವರ ಮನೆಯವರು, ಅವರ ಮಕ್ಕಳು ಸಂಸ್ಕಾರ ಮಾಡಿದ ಜಾಗವನ್ನು ಮರೆತು ಬಿಡುತ್ತಾರೆ. ಆದರೆ ನಾವು ಮರೆಯೋದಿಲ್ಲ. ಅವರ ಹೆಸರು ಹೇಳಿದ ಕೂಡಲೆ ಅವರ ಸಮಾಧಿ ಇಲ್ಲೇ ಇದೆ ಅಂತ ನಾವು ಗುರುತಿಸುತ್ತೇವೆ. ಆದರೆ ನಮ್ಮನ್ನು ಗುರುತಿಸುವವರು ಯಾರೂ ಇಲ್ಲ... ಕೋವಿಡ್ ಮೊದಲ ಅಲೆ ಬಂದಾಗ ಇನ್ನೂರೈವತ್ತು ರೂಪಾಯಿ ಕಟ್ಟೋದಕ್ಕೂ ಯಾರೂ ಇರುತ್ತಿರಲಿಲ್ಲ. ಕ್ವಾರಂಟೈನ್ ಅಂತ ಮಾಡಿದ್ರಲ್ವಾ ಆಗ ಯಾವ ಸಂಬಂಧಿಕರು ಬರುತ್ತಿರಲಿಲ್ಲ. ಅಂಬುಲೆನ್ಸ್ ನವರು ಹಾಸ್ಪಿಟಲ್ಲಿನಿಂದ ಬಾಡಿ ನೇರ ಇಲ್ಲಿಗೆ ತರುತ್ತಿದ್ದರು. ಹಾಗಾಗಿ ಎಷ್ಟೋ ಬಾಡಿಗಳಿಗೆ ನಾವೇ ಹಣ ಹಾಕಿ ಕಾರ್ಯ ಮಾಡಿದ್ದೇವೆ. ನಾವೆಲ್ಲ ಒಟ್ಟು 148 ಜನರು ಸೇರಿ ನಮ್ಮ ಒಂದು ತಿಂಗಳ ಸಂಬಳವನ್ನು ಸರ್ಕಾರಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದೇವೆ'.
'ನಾವು ಇಲ್ಲೇ ಇರುವುದರಿಂದ ನಾವು ಕಲಿತ ಪಾಠ ಸಾಕಷ್ಟಿದೆ. ಕೆಲವರು ತೀರಿಕೊಂಡಾಗ ಕಡಲೆಪುರಿಯ ಜೊತೆಗೆ ದುಡ್ಡನ್ನು ಎಸೆದುಕೊಂಡು ಬರುತ್ತಾರೆ. ಆದರೆ ಹೋಗುವಾಗ ಹಣೆಯ ಮೇಲೆ ಒಂದು ರೂಪಾಯಿ ಇಟ್ಟರೂ ಬಿಡೋದಿಲ್ಲ. ಕೈ ಕಟ್ಟಿದ್ದು, ಕಾಲಿಗೆ ಕಟ್ಟಿದ್ದು ಎಲ್ಲ ಬಿಚ್ಚಿ ಬಿಸಾಕುತ್ತಾರೆ. ತಾಯಿ ಹೊಟ್ಟೆಯಿಂದ ಬರುವಾಗ ಹೇಗೆ ಬರುತ್ತೇವೋ ಹೋಗುವಾಗ ಹೋಗಬೇಕು ಅಷ್ಟೆ. ಎಷ್ಟೇ ಕೋಟಿ ಸಂಪಾದನೆ ಮಾಡಿದರೂ ಎಲ್ಲ ಇಲ್ಲೆ ಬಿಟ್ಟುಹೋಗಬೇಕು. ಕೊನೆಗೆ ನಾವು ಮಾಡಿರುವ ಪಾಪ ಪುಣ್ಯವಷ್ಟೇ ಬರುತ್ತದೆ. ನೂರಾರು ಎಕರೆ ಆಸ್ತಿ, ಕೋಟಿಗಟ್ಟಲೇ ಹಣ, ಮಕ್ಕಳು, ಸ್ನೇಹಿತರು, ಕೊನೆಗೆ ಒಂದು ರೂಪಾಯಿಯನ್ನೂ ತೆಗೆದುಕೊಂಡು ಹೋಗುವುದಿಲ್ಲ ಎನ್ನುವ ಸಂದೇಶವನ್ನು ಇದರಿಂದ ತಿಳಿದುಕೊಳ್ಳಬಹುದು. ಒಳ್ಳೆಯ ಜೀವನಪಾಠ ಕಲಿಯಲು ಮೂರು ಜಾಗಕ್ಕೆ ಹೋಗಬೇಕು ಆಸ್ಪತ್ರೆ, ಜೈಲು, ಸ್ಮಶಾನ. ಇತ್ತೀಚೆಗೆ ಆಗತಾನೇ ಹುಟ್ಟಿದ ಒಂದು ಮಗುವನ್ನು ಕಸದಲ್ಲಿ ಬಿಸಾಕಿ ಹೋಗಿದ್ದರು. ಪೊಲೀಸ್ ನವರು ತಗೊಂಡ್ ಬಂದರು. ನಾವೇ ಮನೆಯಿಂದ ಪೂಜಾ ಸಾಮಗ್ರಿಗಳನ್ನೆಲ್ಲ ತೆಗೆದುಕೊಂಡು ಹೋಗಿ ನಾವೆಲ್ಲ ಸೇರಿ ಪೂಜೆ ಮಾಡಿ ಹಾಲು ಹಾಕಿ ಬಂದ್ವಿ. ಯಾವುದೇ ಕೆಲಸವನ್ನು ನಿರೀಕ್ಷೆ ಇಲ್ಲದೇ ಮಾಡಬೇಕು. ನಮ್ಮದೊಂದು ಹಳೆಯ ಓಮಿನಿ ಕಾರ್ ಇದೆ. ಇದರಿಂದ ಅನಾಥ ಶವಗಳಿಗೆ ಉಚಿತವಾಗಿ ಸೇವೆ ಮಾಡುತ್ತಿದ್ದೇನೆ. ಫ್ರೀಜರ್ ಬಾಕ್ಸ್ ಇರುವುದರಿಂದ ಗಾಡಿ ಪೆಟ್ರೋಲ್ ಗೆ ಆಗತ್ತೆ. ಇರುವವರಿಗೆ ನೂರು ಜನರು ಬರತ್ತಾರೆ. ಯಾರೂ ಇಲ್ಲದವರಿಗೆ ನಾವೇ ಅಪ್ಪ, ಅಮ್ಮ, ಅಣ್ಣ, ತಮ್ಮ, ಎಲ್ಲವೂ ಆಗಿ ಕಾರ್ಯ ಮಾಡುತ್ತೇವೆ. ಸುಮಾರು ಇನ್ನೂರು ವರ್ಷದಿಂದ ಇಲ್ಲಿ ಈ ಸ್ಮಶಾನ ಇದೆ. ನಾವೆಲ್ಲ ರಾತ್ರಿ ಎಷ್ಟೋ ಹೊತ್ತಿಗೆ ಹೋಗುತ್ತೇವೆ ಬರುತ್ತೇವೆ. ನಾವು ಮೂತ್ರ ವಿಸರ್ಜನೆ ಮಾಡಲು ಹೊರಗೆ ಹೋಗಬೇಕು. ಇಲ್ಲಿ ಲಕ್ಷಾಂತರ ಬಾಡಿಗಳಿವೆ. ಭಯ ಪಡುವಂಥದ್ದು ಇಲ್ಲಿ ಏನೂ ಇಲ್ಲ. ನೋಡುವವರ ರೀತಿ ಅವರಿಗೆ ಭಯ ತರಿಸಿದೆ ಅಷ್ಟೆ. ಸ್ಮಶಾನ ಅಂದರೆ ಮುಂಚೆ ಹೆಣ್ಣು ಮಕ್ಕಳು ಒಳಗೆ ಬರುತ್ತಿರಲಿಲ್ಲ. ಸ್ಮಶಾನ ಅಂದರೇನೇ ದೆವ್ವ, ಭೂತ ಹೀಗೆಲ್ಲಾ ಹಲವಾರು ಮೂಢ ನಂಬಿಕೆಗಳಿವೆ. ಈಗ ಪರಿಸ್ಥಿತಿ ಸಾಮಾನ್ಯವಾಗಿದೆ. ಹಾಗಾಗಿ ಎಲ್ಲರೂ ಬರುತ್ತಾರೆ'.
'ನನ್ನ ದೊಡ್ಡ ಮಗಳು ಸತ್ಯ ಬರಿಯಲ್ ಗ್ರೌಂಡ್ ರಿಜಿಸ್ಟರ್ ಕೆಲಸ ಮಾಡುತ್ತಾಳೆ. ಇನ್ನೊಬ್ಬ ಮಗಳು ಟೀಚರ್, ಇನ್ನೊಬ್ಬ ಮಗಳು ಡಿಪ್ಲೋಮ ಮುಗಿಸಿದ್ದಾಳೆ, ನನ್ನ ದೊಡ್ಡ ಮಗ ನನ್ನ ಜೊತೆಗೆ ಕೆಲಸ ಮಾಡುತ್ತಾನೆ ನನ್ನ ಚಿಕ್ಕ ಮಗಳು ಐ.ಎ.ಎಸ್. ಮಾಡಬೇಕು ಎಂದು ಕಷ್ಟಪಟ್ಟು ಓದುತ್ತಿದ್ದಾಳೆ. ನನ್ನ ಕೊನೆಯ ಮಗ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾವು ಎಲ್ಲಿಯಾದರೂ ಹೋದರೆ ಸ್ಮಶಾನದಲ್ಲಿ ಇರೋರು ಅಂತ ನಮ್ಮಿಂದ ದೂರ ನಿಲ್ಲುತ್ತಾರೆ. ಆಚೇನೆ ನಿಲ್ಲಿಸಿ ಮಾತಾಡಿಸಿ ಕಳಿಸಿ ಬಿಡುತ್ತಾರೆ. ಅಸ್ಪೃಶ್ಯರು ಅನ್ನುವ ಹಾಗೆ ನೋಡುತ್ತಾರೆ. ನಮ್ಮ ಮಕ್ಕಳನ್ನು ಹೆಣ ಕಾಯುವವರ ಮಕ್ಕಳು ಎನ್ನುತ್ತಾರೆ. ನಮ್ಮ ಮನೆ ಯಾವ ಸ್ಥಿತಿಯಲ್ಲಿದೆ ನೋಡಿ ಈಗಲೋ ಆಗಲೋ ಜೋರಾಗಿ ಮಳೆ ಬಂದರೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ ಹಾಗಾಗಿ ಇದರ ಪಕ್ಕದಲ್ಲಿ ನಾಲ್ಕು ಸೀಟು ಹೊದ್ದಿಸಿ ಸಣ್ಣದೊಂದು ರೂಮು ಕಟ್ಟಿಕೊಂಡಿದ್ದೇವೆ. ನಮಗೆ ಇದೇ ರೂಢಿಯಾಗಿ ಬಿಟ್ಟಿದೆ. ಮಕ್ಕಳಿಗೆ ಮದುವೆ ಮಾಡಲ್ವಾ, ಮನೆ ಎಲ್ಲಿ ಅಂತ ಕೇಳ್ತಾರೆ. ಸ್ಮಶಾನದಲ್ಲಿ ಅಂದ ಕೂಡಲೆ ಹಾಗೆ ಹೋಗಿಬಿಡುತ್ತಾರೆ. ದೊಡ್ಡ ಮಗಳಿಗೆ ಮೂವತ್ತು ವರ್ಷ ಆಗ್ತಾ ಬಂತು. ಎಲ್ಲರೂ ಕೇಳ್ತಾರೆ ಸುಮ್ಮನಾಗ್ತಾರೆ. ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ. ನಮಗೆ ರೇಷನ್ ಕಾರ್ಡ್ ಇಲ್ಲ. ಪೋಸ್ಟ್ ಮ್ಯಾನ್ ಒಳಗೆ ಬರುವುದಿಲ್ಲ. ತರಕಾರಿ ಮಾರುವವರೂ ಕೂಡ ಬರೋದಿಲ್ಲ. ಒಮ್ಮೆ ಅವರನ್ನು ನಿಲ್ಲಿಸಿ ಇಲ್ಲೂ ಕುಟುಂಬಗಳಿವೆ ನಾವೂ ಮನುಷ್ಯರೇ ಬನ್ನಿ ಎಂದು ಗೋಗರೆದದ್ದು ಉಂಟು. ಎಲ್ಲರೂ ಒಂದೊಂದು ಕಡೆ ಆಫೀಸ್ ನಲ್ಲಿ ಕೆಲಸ ಮಾಡುವ ಹಾಗೆ ನಮ್ಮದು ಒಂದು ಉದ್ಯೋಗ. ದೇವರು ಕೊಟ್ಟಿರುವ ಕೆಲಸ ಅಂತ ಇದನ್ನು ಮಾಡುತ್ತಿದ್ದೇವೆ. ನಮ್ಮನ್ನು ಅನ್ಯರು ಎಂದು ನೋಡದೆ ನಾವು ಕೂಡ ಮನುಷ್ಯರು ಎಂದು ತಿಳಿದುಕೊಂಡರೆ ನಮ್ಮ ಬದುಕನ್ನು ನಾವು ಕೂಡ ಎಲ್ಲರಂತೆ ಬದುಕುತ್ತೇವೆ' ಎನ್ನುತ್ತಾರೆ ನಮ್ಮ ವೀರಬಾಹು ಶೌರಿರಾಜು.
ಸರ್ಕಾರ ಇವರಿಗೊಂದಿಷ್ಟು ಸೌಲಭ್ಯಗಳನ್ನು ಘೋಷಿಸಿದೆ. ಆದರೆ ಅವು ಪರಿಣಾಮಕಾರಿಯಾಗಿ ಇವರನ್ನು ತಲುಪುತ್ತಿಲ್ಲ. ಇವರನ್ನು ದಿನಗೂಲಿ ಕಾರ್ಮಿರನ್ನಾಗಿ ಪರಿಗಣಿಸಿದರೆ ಇವರ ಬದುಕಿಗೆ ಒಂದಿಷ್ಟು ಆಧಾರವಾದೀತು. ನಾವೆಲ್ಲ ಕೋವಿಡ್ ಯುಗವನ್ನು ದಾಟಿಬಂದವರೇ. ಆ ಸಮಯದಲ್ಲಿ ಜೀವಂತವಿರುವ ನಮ್ಮ ಹೆತ್ತವರನ್ನು, ರಕ್ತ ಸಂಬಂಧಿಗಳನ್ನು, ಸ್ನೇಹಿತರನ್ನು ನೋಡದ ಮುಟ್ಟದ ಪರಿಸ್ಥಿತಿ, ಸತ್ತವರು ಯಾರೇ ಆಗಿದ್ದರೂ ಕೊನೆಯ ಸಲ ಮುಖ ನೋಡದಂತ ಕೆಟ್ಟಸಮಯವಿತ್ತಲ್ಲ... ಹಾಗಿದ್ದಾಗಲೂ ಇವರು ತಮ್ಮ ಕಾರ್ಯವನ್ನು ಮಾಡಿದ್ದಾರೆ. ಓಟಿನ ಆಸೆಗಾಗಿ ನಿನ್ನೆ ಮೊನ್ನೆ ಬಂದ ಅಕ್ರಮ ವಲಸಿಗರಿಗೆ ಓಟರ್ ಕಾರ್ಡ್, ಆಧಾರ್ ಕಾರ್ಡ್, ರೇಶನ್ ಕಾರ್ಡ್, ಮನೆ ಮಾಡಿಸಿಕೊಡುವ ಜನಪ್ರತಿನಿಗಳಿಗೆ ತಲೆತಲಾಂತರದಿಂದ ಇಲ್ಲೇ ವಾಸವಿರುವ ಇವರು ಕಾಣದಿರುವುದು ವಿಪರ್ಯಾಸ. ಅಂದು ಸತ್ಯಹರಿಶ್ಚಂದ್ರ ಮಾಡಿದ ಕೆಲಸವನ್ನೇ ಇಂದು ಇವರು ಮಾಡುತ್ತಿರುವುದು. ಸತ್ಯಹರಿಶ್ಚಂದ್ರನೆಂದರೆ ನಮಗೆ ಅಪಾರ ಗೌರವ ಆದರೆ ಇವರೆಂದರೆ ಅಶ್ಪೃಶ್ಯರ ಹಾಗೆ. ಎಲ್ಲರ ಕೆಲಸಗಳಂತೆ ಇವರದೂ ಒಂದು ಕೆಲಸವೇ ಅದೂ ಶ್ರೇಷ್ಠ ಕೆಲಸ. ಇವರ ಕೆಲಸವನ್ನು ನಾವು ಮಾಡಲಾಗುವುದಿಲ್ಲ. ಯಾವ ಕೆಲಸವೂ ಕೀಳಲ್ಲ ನೋಡುವ ಮನಸ್ಸು ಕೀಳಾಗಿರಬಾರದಷ್ಟೆ. ನಮ್ಮ ಕಸವನ್ನು ತೆಗೆಯುವ ಚರಂಡಿ ಬಳಿಯುವ ಪೌರ ಕಾರ್ಮಿಕರು, ಚಪ್ಪಲಿ ಹೊಲಿಯುವವರು, ಸ್ಮಶಾನ ಕಾಯುವವರು ಇವರೂ ಮನುಷ್ಯರೇ ಎಂಬುದನ್ನು ನಾವು ಮರೆಯಬಾರದು. ಇವರಿಲ್ಲದೇ ನಾವಿಲ್ಲ ಎಂಬ ಸತ್ಯವನ್ನು ನಾವು ಅರಿಯಬೇಕು. ನಾವು ಬದಲಾಗಬೇಕಿದೆ ಇವರನ್ನು ಕನಿಷ್ಟವಾಗಿ ನೋಡುವ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ಹಾಗೇನೇ ಸತ್ತವರನ್ನು ನಾವು ದೈವಾಧೀನರಾದರೆಂದು ಹೇಳುವ ಹಾಗೆ ಇವರನ್ನು ಸ್ಮಶಾನ ಕಾಯುವವರೆನ್ನುವ ಬದಲು ದೇವವಾಸಿಗಳೆಂಂದೋ, ದಲಿತರನ್ನು ಗಾಂಧೀಜಿಯವರು ಹರಿಜನರೆಂದ ಹಾಗೆ ಇವರನ್ನು ನಾವು ಹೆಣಕಾಯುವವರೆನ್ನುವ ಬದಲು ಶಿವಜನರೆಂದೋ ಕರೆಯಬಹುದು. ಶೌರಿರಾಜು ಮತ್ತವರ ಕುಟುಂಬ ಹಾಗೂ ಈ ಕಾರ್ಯ ಮಾಡುತ್ತಿರುವ ಎಲ್ಲರೂ ಖುಷಿಯಿಂದ ನೆಮ್ಮದಿಯಿಂದ ಬಾಳಲಿ ಎನ್ನುವ ಹಾರೈಕೆ ನಮ್ಮದು.
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.