ಶಿವಶರಣೆ ಅಮುಗೆ ರಾಯಮ್ಮ

Date: 11-03-2022

Location: ಬೆಂಗಳೂರು


‘ಅಮುಗೆ ರಾಯಮ್ಮ 116 ವಚನಗಳನ್ನು ರಚಿಸಿದ್ದಾಳೆ. ಈಕೆಯ ವಚನಾಂಕಿತ "ಅಮುಗೇಶ್ವರ ಲಿಂಗ"ವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿರುವ ವಚನಕಾರ್ತಿಯರಲ್ಲಿ ಅಮುಗೆ ರಾಯಮ್ಮ ಕೂಡ ಒಬ್ಬಳಾಗಿದ್ದಾಳೆ’ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಅಂಕಣದಲ್ಲಿ ಶರಣೆ ಅಮುಗೆ ರಾಯಮ್ಮನ ಕುರಿತು ಚರ್ಚಿಸಿದ್ದಾರೆ.

ಅಮುಗೆ ದೇವಯ್ಯನ ಪತ್ನಿಯೇ ಅಮುಗೆ ರಾಯಮ್ಮ. ಪುಳಜೆಯಲ್ಲಿ ದೊರೆತ 1200ರಲ್ಲಿ ಬರೆದ ಒಂದು ಶಾಸನದಲ್ಲಿ ಅಮುಗೆ ದೇವಯ್ಯನ ಹೆಸರು ಬರುತ್ತದೆ. ರಾಯಮ್ಮ ಹೆಸರಿನ ಇಬ್ಬರು ವಚನಕಾರ್ತಿಯರಿದ್ದಾರೆ. ಒಬ್ಬಳು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮನಾದರೆ, ಮತ್ತೊಬ್ಬಳು ಅಮುಗೆ ದೇವಯ್ಯಗಳ ಪತ್ನಿಯಾಗಿದ್ದಾಳೆ. ಈಕೆ ಅಮುಗೆ ದೇವಯ್ಯಗಳ ಪತ್ನಿಯೆನ್ನಲು "ಅಮುಗೆ ದೇವಯ್ಯಗಳ ಸಾಂಗತ್ಯದಲ್ಲಿ" ಉಲ್ಲೇಖವಿದೆ. ಅಮುಗೆ ರಾಯಮ್ಮನಿಗೆ ವರದಾನಿಯಮ್ಮ ಎಂಬ ಮತ್ತೊಂದು ಹೆಸರು ಇದ್ದುದು ತಿಳಿದುಬರುತ್ತದೆ. ಬಿ.ಎಸ್. ಗದ್ದಗಿಮಠ ಅವರ "ಕನ್ನಡ ಜನಪದ ಗೀತೆಗಳು ಕೃತಿಯಲ್ಲಿ ಪ್ರಕಟವಾಗಿರುವ ನೇಗಿಯ ಅಮುಗಯ್ಯ ಹಾಡಿನಲ್ಲಿ ಈಕೆಯ ಹೆಸರು ಪ್ರಸ್ತಾಪವಾಗಿದೆ.

"ಕುರುಶೆಟ್ಟಿ ಲಿಂಗಿಗಳು ಹರಮತದ ಸೇವಕರು
ನೆರುವಾಗಿ ನೇಗಿ ಕಾಯಕವ | ಸೊನ್ನಲಗಿ
ಶರಣ ಅಮುಗಯ್ಯ ಹುಟ್ಟಿದ್ದು ||
ದಾನವ್ವ ಶಿವಶರಣೆ ನಾಣಿ ಅಮುಗನ ಮಡದಿ ಏನು ಹೇಳುವುದು ಶಿವಭಕ್ತಿ | ಮನೆಯೊಳಗೆ ತಾಣ ದೀವಿಗೆಯು ಕಾಯಕಕೆ ||
ವರದಾನಿ ಹೆಂಡತಿಯೆ ತರವಲ್ಲ ಈ ಊರು ಮರುದಿನವೆ ನಡೆದು ಕಲ್ಯಾಣ | ಸೇರೋಣ ತರವಲ್ಲ ಭವಿಯ ತಾಣವು ||"

ಈ ತ್ರಿಪದಿಗಳನ್ನು ಗಮನಿಸಿ, ಪುಳಜೆಯಲ್ಲಿ ದೊರೆತ ಶಾಸನವನ್ನು ನೋಡಿ, ಅಮುಗೆ ರಾಯಮ್ಮನ ಜೀವನಚರಿತ್ರೆಯನ್ನು ಹೀಗೆ ಹೇಳಬಹುದಾಗಿದೆ. ಕಲಬರುಗಿ ಸಮೀಪದ ಸೊಲ್ಲಾಪುರದಲ್ಲಿ (ಸೊನ್ನಲಿಗೆ) ಅಮುಗಯ್ಯ ಹುಟ್ಟಿದ್ದ. ಆತನ ಪತ್ನಿ ವರದಾನಿಯಾಗಿದ್ದಳು, ಇವಳೇ ರಾಯಮ್ಮ. ಇವರದು ನೇಯ್ಗೆಯ ಕಾಯಕವಾಗಿತ್ತೆಂದು ಸ್ಪಷ್ಟವಾಗುತ್ತದೆ. ರಾಯಮ್ಮ ಅಮುಗೆ ದೇವಯ್ಯಗಳ ಪತ್ನಿಯಾಗಿದ್ದಳೆಂದು ‘ಅಮುಗೆ ದೇವಯ್ಯಗಳು ಸಾಂಗತ್ಯ’ದಲ್ಲಿಯೂ ಹೇಳಲಾಗಿದೆ. ಈ ದಂಪತಿಗಳು ಸೊಲ್ಲಾಪುರದಲ್ಲಿ ನೇಯ್ಗೆಯ ಕಾಯಕ ಮಾಡಿಕೊಂಡು ಜೀವಿಸುತ್ತಿದ್ದಾಗ, ಇವರ ಬದುಕಿನಲ್ಲಿ ಒಂದು ಘಟನೆ ನಡೆಯುತ್ತದೆ.

ವೀರಶೈವ ಪುರಾಣಗಳಲ್ಲಿ ಈ ದಂಪತಿಗಳ ಕುರಿತಂತೆ ಒಂದು ಕಥೆ ಬರುತ್ತದೆ. ಸೊನ್ನಲಿಗೆಯ ಸಿದ್ಧರಾಮೇಶ್ವರನು, ಕಪಿಲಸಿದ್ಧ ಮಲ್ಲಿನಾಥನ ಪರ್ವಕ್ಕೆಂದು ಊರವರಿಗೆಲ್ಲ ಭತ್ತ ಕುಟ್ಟುವುದಕ್ಕಾಗಿ ಕೊಟ್ಟಣ ಹಾಕಿಸುತ್ತಾನೆ. ಆಗ ಸಿದ್ಧರಾಮ ಇನ್ನೂ ಕಲ್ಯಾಣಕ್ಕೆ ಹೋಗಿರುವುದಿಲ್ಲ. ಹೀಗಾಗಿ ಅವನ ಕೊರಳಲ್ಲಿ ಇಷ್ಟಲಿಂಗವಿರುವುದಿಲ್ಲ. "ಲಿಂಗವಿಲ್ಲದ ಭವಿಯ ಸೇವೆಯನ್ನು ನಾವು ಮಾಡಲಾರೆವು" ಎಂದು ಈ ದಂಪತಿಗಳು ಸೊನ್ನಲಿಗೆಯನ್ನು ಬಿಟ್ಟು ಬಸವಕ್ರಾಂತಿಯ ಕೇಂದ್ರವಾಗಿದ್ದ ಕಲ್ಯಾಣಕ್ಕೆ ಹೋದರೆಂದು ಈ ಕಥೆಯಿಂದ ತಿಳಿದಬರುತ್ತದೆ. ಕಲ್ಯಾಣದ ಅನುಭವಗೋಷ್ಠಿಯಲ್ಲಿ ಪಾಲ್ಗೊಂಡ ಈ ದಂಪತಿಗಳಿಬ್ಬರೂ ವಚನಗಳನ್ನು ರಚಿಸುತ್ತಾರೆ. ಕಲ್ಯಾಣಕ್ರಾಂತಿಯ ನಂತರ, ಪುಳಜೆ ಗ್ರಾಮಕ್ಕೆ ಬಂದು ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ.

ಅಮುಗೆ ರಾಯಮ್ಮ 116 ವಚನಗಳನ್ನು ರಚಿಸಿದ್ದಾಳೆ. ಈಕೆಯ ವಚನಾಂಕಿತ "ಅಮುಗೇಶ್ವರ ಲಿಂಗ"ವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿರುವ ವಚನಕಾರ್ತಿಯರಲ್ಲಿ ಅಮುಗೆ ರಾಯಮ್ಮ ಕೂಡ ಒಬ್ಬಳಾಗಿದ್ದಾಳೆ. ಈ ದಂಪತಿಗಳಲ್ಲಿದ್ದ ಲಿಂಗನಿಷ್ಠ ಭಕ್ತಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಸಿದ್ಧರಾಮನನ್ನೂ ವಿರೋಧಿಸಿ ಸೊಲ್ಲಾಪುರವನ್ನು ಬಿಟ್ಟು ಹೋದುದು ಇವರ ಲಿಂಗನಿಷ್ಠಭಕ್ತಿಗೆ ಸಾಕ್ಷಿಯಾಗಿದೆ.

ನಂತರದಲ್ಲಿ ಸಿದ್ಧರಾಮನು ಪಶ್ಚಾತಾಪದಿಂದ ಈ ಶರಣ ದಂಪತಿಗಳನ್ನು ಮರಳಿ ಕರೆತರಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲವೆಂಬ ವಿಷಯ ಆ ಕಥೆಯಿಂದ ಸ್ಪಷ್ಟವಾಗುತ್ತದೆ. ಅಮುಗೆ ರಾಯಮ್ಮ ಶರಣರ ಕ್ರಾಂತಿಯ ನಂತರವೂ ಕೆಲವು ವರ್ಷ ಪುಳಜೆ ಗ್ರಾಮದಲ್ಲಿ ಜೀವಿಸಿರಬಹುದಾಗಿದೆ. "ಸಿದ್ಧರಾಮ ಚಾರಿತ್ರದಲ್ಲಿ" ಈಕೆಯ ಬಗೆಗೆ ಪ್ರಸ್ತಾಪಿಸಲಾಗಿದೆ. ಈಕೆ ತನ್ನ ವಚನಗಳಲ್ಲಿ ಬಸವಾದಿ ಶರಣರನ್ನು ಸ್ಮರಿಸಿದ್ದಾಳೆ. ಅಮುಗೆ ರಾಯಮ್ಮನು ಹೈದ್ರಾಬಾದ ಕರ್ನಾಟಕ ಪ್ರದೇಶದ ಹೆಮ್ಮೆಯ ವಚನಕಾರ್ತಿ ಯಾಗಿದ್ದಾಳೆಂದು ಡಾ. ಬಸವರಾಜ ಸಬರದ ಅವರು ತಮ್ಮ "ಹೈದ್ರಾಬಾದ ಕರ್ನಾಟಕದ ವಚನಸಾಹಿತ್ಯ ಚರಿತ್ರೆ"ಯಲ್ಲಿ ಹೇಳಿದ್ದಾರೆ.

ಶಿವಲಿಂಗ ಕವಿಯ "ಅಮುಗಿ ದೇವಯ್ಯಗಳ ಸಾಂಗತ್ಯ" ಕೃತಿಯನ್ನು ಡಾ. ಎಚ್. ತಿಪ್ಪೇರುದ್ರಸ್ವಾಮಿಯವರು ಸಂಪಾದಿಸಿದ್ದಾರೆ. ಆ ಕೃತಿಯಲ್ಲಿ ರಾಯಮ್ಮನಿಗೆ ಸಂಬಂಧಿಸಿದ ಉಲ್ಲೇಖ ಹೀಗಿದೆ.

"ಸೊನ್ನಲಿಗೆಯೆಂಬ ಪುರವಾ ಪುರದೊಳೊಪ್ಪುವಂ
ಸನ್ನುತ ಸದಾನಂದ ಶಿವಸುಖವನಪ್ಪುವಂ
ಅಮುಗಿ ದೇವಗಳೆಂಬ ಸತ್ಯ ಸಮ್ಯಜ್ಞಾನಿ
ತನಗೆ ಸತಿ ವರದಾನಿ ಎಂಬ ಪೆಸರಾಗಿರಲು...." (ಪು. 149)

ಅಮುಗೆ ರಾಯಮ್ಮನಿಗೆ ವರದಾನಿಯೆಂಬ ಹೆಸರಿದ್ದುದು ಸ್ಪಷ್ಟವಾಗುತ್ತದೆ. ವರದಾನಿ ಗುಡ್ಡವ್ವೆಯೆಂಬ ಶರಣೆಯೂ ಇದೇ ಕಾಲಘಟ್ಟದಲ್ಲಿ ಆಗಿಹೋಗಿದ್ದಾಳೆ ಆದರೆ ಅಮುಗೆ ದೇವಯ್ಯನ ಪತ್ನಿ ವರದಾನಿಗೂ, ವರದಾನಿ ಗುಡ್ಡವನಿಗೂ ಯಾವುದೇ ಸಂಬಂಧವಿಲ್ಲವೆಂಬುದನ್ನು ತಿಳಿಯಬೇಕಾಗುತ್ತದೆ. ಈ ದಂಪತಿಗಳ ಕಾಲವು ಕ್ರಿ.ಶ. 1160 ಆಗಿದೆ. ನಿಷ್ಠಾಭಕ್ತಿ ಹೊಂದಿದ್ದ ಅಮುಗೆ ರಾಯಮ್ಮನ ವಚನಗಳು ತುಂಬ ಅರ್ಥಪೂರ್ಣವಾಗಿವೆ.

ಅಮುಗೆರಾಯಮ್ಮ ಶರಣಸಿದ್ಧಾಂತಕ್ಕೆ ನಿಷ್ಠಳಾಗಿದ್ದ ಶರಣೆಯಾಗಿದ್ದಾಳೆ. ತುಂಬ ಸ್ವಾಭಿಮಾನಿಯಾಗಿರುವ ಈ ಶರಣೆ ರಚಿಸಿರುವ ವಚನಗಳಲ್ಲಿ ಅನೇಕ ಮಹತ್ವದ ಸಂಗತಿಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದಾಗಿದೆ.

"ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ?
ಆಡಿನಮರಿ ಆನೆಯಾಗಬಲ್ಲುದೆ?
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?...." (ವ-628)

ಈ ವಚನದಲ್ಲಿ ಬಳಸಿರುವ ಪ್ರಾಣಿ ರೂಪಕಗಳು ತುಂಬ ಅರ್ಥಪೂರ್ಣವಾಗಿವೆ. ಕಾಗೆ-ಕೋಗಿಲೆ, ಆಡು-ಆನೆ, ಸೀಳನಾಯಿ-ಸಿಂಹ ಈ ಪ್ರಾಣಿ ಪಕ್ಷಿಗಳ ಗುಣವಿಶಿಷ್ಟತೆಯನ್ನು ಅರಿತುಕೊಂಡ ರಾಯಮ್ಮ ತಾನು ಹೇಳಬೇಕಾಗಿರುವ ವಿಷಯವನ್ನು ಸೊಗಸಾಗಿ ಹೇಳಿದ್ದಾಳೆ. ಭಕ್ತನಾಗಬೇಕಾದರೆ ಅರಿವು-ಆಚಾರ, ಸಮ್ಯಕ್‍ಜ್ಞಾನ ಅಗತ್ಯವಾದವುಗಳಾಗಿವೆ. ಇವುಗಳನ್ನು ಅರಿಯದೆ ಕೇವಲ ನಾಮವ ಹಚ್ಚಿಕೊಂಡು ತಿರುಗುವ ಗಾವಿಲರನ್ನು ಈ ವಚನದಲ್ಲಿ ವಿಡಂಬಿಸಿದ್ದಾಳೆ. ಇವರು ನಾಮ ಹಚ್ಚಿಕೊಂಡಾಕ್ಷಣ ಭಕ್ತರಾಗುವುದಿಲ್ಲ, ಶರಣರಾಗುವುದಿಲ್ಲವೆಂದು ಹೇಳುವುದಕ್ಕೆ ಮೇಲಿನ ಪ್ರಾಣಿ- ಪಕ್ಷಿಗಳನ್ನು ಉದಾಹರಿಸಿದ್ದಾಳೆ. ಕಾಗೆ-ಕೋಗಿಲೆ ನೋಡಲು ಒಂದೇ ರೀತಿಯಾಗಿದ್ದರೂ ಕೋಗಿಲೆಯ ಕಂಠಸಿರಿ ಕಾಗೆಗಿಲ್ಲ. ಆಡು-ಆನೆಯಾಗದು. ಸೀಳುನಾಯಿ-ಸಿಂಹಗಳ ಹೆಸರಿನಲ್ಲಿ "ಸಿ" ಬಂದರೂ ಸೀಳು ನಾಯಿಯೆಂದೂ ಸಿಂಹವಾಗಲಾರದು. ಇದೇ ರೀತಿ ಭಕ್ತ-ಡಾಂಭಿಕಭಕ್ತ ನೋಡಲು ವೇಷ ಭೂಷಣದಲ್ಲಿ ಒಂದೇಯಾಗಿ ಕಂಡರೂ, ಡಾಂಭಿಕನೆಂದೂ ಭಕ್ತನಾಗಲಾರನೆಂಬ ಸ್ಪಷ್ಟಸಂದೇಶವನ್ನು ಈ ವಚನದಲ್ಲಿ ಹೇಳಲಾಗಿದೆ. ರಾಯಮ್ಮ ಈ ವಿಷಯವನ್ನು ಕುರಿತು ವಿಡಂಬಿಸುವ ರೀತಿ ಕುತೂಹಲಕಾರಿಯಾಗಿದೆ.

"ಗರುಡಿಯಲ್ಲಿ ಸಾಮುವ ಮಾಡವರಲ್ಲದೆ, ಕಾಳಗದಲ್ಲಿ ಸಾಮುವ ಮಾಡುವರೆ? (ವ-640)" ಎಂದು ಕೇಳುವ ರಾಯಮ್ಮನ ಪ್ರಶ್ನೆ ತುಂಬ ಅರ್ಥಪೂರ್ಣವಾಗಿದೆ. ಆದ್ಯರ ವಚನಗಳನ್ನು, ಶರಣರ ಸಿದ್ಧಾಂತಗಳನ್ನು ಮೊದಲು ಮನನ ಮಾಡಬೆಕು. ಅದು ಗರುಡಿಯಲ್ಲಿ ಸಾಮುವ ಮಾಡಿದಂತೆ. ಹಾಗೆ ಸಾಧನೆ ಮಾಡಿದವರು ಮಾತ್ರ ಕಾಳಗದಲ್ಲಿ ಗೆಲ್ಲಲು ಸಾಧ್ಯ. ಅದುಬಿಟ್ಟು ಕಾಳಗದಲ್ಲಿಯೇ ಸಾಮುವ ಮಾಡುವದರಿಂದೇನು ಪ್ರಯೋಜನ? ಎಂಬಂತಹ ಈಕೆಯ ಪ್ರಶ್ನೆ ಇಂದಿಗೂ ಪ್ರಸ್ತುತವಾಗುತ್ತದೆ. ಅನೇಕರು ಏನೂ ತಿಳಿದುಕೊಳ್ಳದೆ, ತಿಳಿದುಕೊಂಡಂತೆ ಮಾತನಾಡುತ್ತಿರುತ್ತಾರೆ.

ವೇದಿಕೆಯ ಶೂರರಾಗಿರುತ್ತಾರೆಯೇ ಹೊರತು ವಾಸ್ತವದಲ್ಲಿ ಇವರು ಏನೂ ಆಗಿರುವುದಿಲ್ಲ. ಸಾಧನೆ ಮಾಡಿದವರೇ ಎಷ್ಟೋ ಸಲ ಸೋಲುತ್ತಾರೆ. ಆದರೆ ಏನೂ ಮಾಡದೆ ಕೇವಲ ತೋರಿಕೆಗಾಗಿ ಬದುಕುವವರು ಹೇಗೆ ಗೆಲ್ಲುತ್ತಾರೆಂಬ ಈ ಶರಣೆಯ ಅನುಭವದ ಮಾತು ಇಂದಿಗೂ ಮುಖ್ಯವೆನಿಸುತ್ತದೆ. ಇಂತಹ ಅನೇಕ ವಿಷಯಗಳನ್ನೆತ್ತಿಕೊಂಡು ರಾಯಮ್ಮ ತನ್ನ ವಚನಗಳಲ್ಲಿ ಚರ್ಚಿಸಿದ್ದಾಳೆ.

ಅನುಭಾವಿಗಳೆಂದರೆ ಯಾರೆಂಬುದನ್ನು ಅಮುಗೆ ರಾಯಮ್ಮ ತನ್ನ ಕೆಲವು ವಚನಗಳಲ್ಲಿ ಸ್ಪಷ್ಟಪಡಿಸಿದ್ದಾಳೆ. ಕಾಮ, ಕ್ರೋಧ, ಅತ್ಯಾಸೆಗಳನ್ನು ಬಿಡದವರು ಅನುಭಾವಿಗಳಲ್ಲ, ಅಹಂಕಾರಿಗಳು ಅನುಭಾವಿಗಳಲ್ಲ, ಕುರಿಗಳಂತೆ ತಿರುಗುವ ಮೂಢರು ಅನುಭಾವಿಗಳಲ್ಲ, ಇಷ್ಟಲಿಂಗವನರಿಯದವರು ಅನುಭಾವಿಗಳಲ್ಲವೆಂದು ಹೇಳಿದ್ದಾಳೆ.

ನಿಜವಾದ ಅನುಭಾವಿಗೆ ಅಂಗ ಶೃಂಗಾರವಿರುವುದಿಲ್ಲ, ಅನುಭಾವಿಗೆ ನನ್ನವರು - ತನ್ನವರು ಎನ್ನುವವರಿರುವುದಿಲ್ಲವೆಂದು ತಿಳಿಸಿದ ರಾಯಮ್ಮ ಅನುಭಾವಿಯೆಂದರೆ ಯಾರೆಂಬುದನ್ನು ಈ ವಚನದಲ್ಲಿ ಹೇಳಿದ್ದಾಳೆ.

"ನೀರಮೇಲಣ ತೆಪ್ಪದಂತೆ ಸಮುದ್ರದೊಳಗಣ ಬೆಂಗುಂಡಿನಂತೆ
ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ,
ವಚನಂಗಳ ಓದಿ ವಚನಂಗಳ ಕೇಳಿ
ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ
ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು
ಅನುಭಾವಿಗಳೆಂದಡೆ ಅಘೋರ ನರಕ ತಪ್ಪದು ಕಾಣಾ, ಅಮುಗೇಶ್ವರಾ" (ವ-594)

ಹೀಗೆ ನಿಜವಾದ ಅನುಭಾವಿಗಳಾರೆಂಬುದನ್ನು ತಿಳಿಸಿರುವ ರಾಯಮ್ಮನು ಲಿಂಗದ ಬಗೆಗೂ ಮಹತ್ವದ ವಿಚಾರಗಳನ್ನು ಹೇಳಿದ್ದಾಳೆ. "ಅಂಗದ ಮೇಲೆ ಲಿಂಗವಿಲ್ಲದವರಲ್ಲಿ ಲಿಂಗಾರ್ಪಿತವ ಬೇಡಲೇಕೆ?'' ಎಂದು ಕೇಳಿದ್ದಾಳೆ. ತನ್ನ ತಾನರಿದವನು ಎಲ್ಲರಿಗಿಂತಲೂ ಉತ್ತಮನಾಗುತ್ತಾನೆಂದು ತಿಳಿಸಿದ್ದಾಳೆ. ನಿಜವಾದ ಭಕ್ತ ಹೇಗಿರಬೇಕೆಂಬುದನ್ನು ಇನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾಳೆ.

"ಕತ್ತಲೆಯ ಮನೆಯಲ್ಲಿ ಸಕ್ಕರೆಯ ಸವಿದವನಂತಿರಬೇಕು
ಬಟ್ಟಬಯಲಲ್ಲಿನಿಂದು ಇಷ್ಟಲಿಂಗವ ಕಂಡವನಂತಿರಬೇಕು"

ಎಂದು ಹೇಳಿರುವ ರಾಯಮ್ಮ ಇದಕ್ಕೆ ಗುರುವಿನ ಹಂಗೇಕೆ, ಲಿಂಗಪೂಜೆಯ ಹಂಗೇಕೆ, ಸಮಯದ ಹಂಗೇಕೆ? ಎಂದು ಕೇಳಿದ್ದಾಳೆ. ಇಷ್ಟವನರಿದವನು ಎಲ್ಲ ಕಡೆಯೂ ಜಯಶಾಲಿಯಾಗುತ್ತಾನೆಂದು ತಿಳಿಸಿದ್ದಾಳೆ. "ದೇಶ ದೇಶಗಳ ತಿರುಗಿ ಮಾತುಗಳ ಕಲಿತು ಗ್ರಾಸಕ್ಕೆ ತಿರುಗುವ ದಾಸವೇಸಿಯ ಮಕ್ಕಳ ವಿರಕ್ತರೆಂಬೆನೆ? ಎಂದು ಪ್ರಶ್ನಿಸಿದ ರಾಯಮ್ಮ ನಿಜವಾದ ವಿರಕ್ತ ಹೇಗಿರಬೇಕೆಂಬುದನ್ನು ಹೇಳಿದ್ದಾಳೆ. ವಿರಕ್ತನಾದ ಬಳಿಕ ವಿಷಯಕ್ಕೆ ದೂರವಾಗಿರಬೇಕು. ಒಣಗಿದ ಮರನ ವಾಯು ಅಪ್ಪಿದಂತಿರಬೇಕು, ಸಮುದ್ರದೊಳಗೆ ತರುಗಿರಿಗಳು ಮುಳುಗಿದಂತಿರಬೇಕು. ಮೂಕಕಂಡ ಕನಸಿನಂತಿರಬೇಕು, ಜಾಲಗಾರ ಕಂಡ ರತ್ನದಂತಿರಬೇಕೆಂದು ತಿಳಿಸಿದ್ದಾಳೆ. ತುಂಬ ತೀವ್ರವಾಗಿ ಮೂಢಭಕ್ತರನ್ನು ವಿಡಂಬಿಸಿರುವ ರಾಯಮ್ಮನು ಆಧ್ಯಾತ್ಮ-ಅನುಭಾವಗಳ ಕುರಿತು ಮಹತ್ವದ ಚಿಂತನೆ ಮಾಡಿದ್ದಾಳೆ. ಈಕೆಯ ವಚನಗಳಲ್ಲಿ ಅನೇಕ ಗಾದೆಮಾತುಗಳು, ಪಡೆನುಡಿಗಳು ಬಳಸಲ್ಪಟ್ಟಿವೆ, ಅನೇಕ ವಚನಗಳು ಧ್ವನಿಪೂರ್ಣವಾಗಿವೆ.

ವಿಜಯಶ್ರೀ ಸಬರದ
9845824834

ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ

ಚರಿತ್ರೆ ಅಂದು-ಇಂದು

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...