ಸಂಬಂಧ ಕಥೆಯಲ್ಲಿ ಕಾಣುವ ಜಾತಿ ಮತ್ತು ಲಿಂಗರಾಜಕಾರಣ

Date: 26-03-2025

Location: ಬೆಂಗಳೂರು


"“ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರಗಳು, ಮತ್ತು ಕಾಡು”, ಈ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದವು. ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ," ಎನ್ನುತ್ತಾರೆ ಅಂಕಣಗಾರ್ತಿ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಶ್ರೀಕೃಷ್ಣ ಆಲನಹಳ್ಳಿಯವರ "ಸಂಬಂಧ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ಶ್ರೀಕೃಷ್ಣ ಆಲನಹಳ್ಳಿಯವರು ನವ್ಯ ಸಾಹಿತ್ಯ ಪರಂಪರೆ ಎಂದು ಗುರುತಿಸಿಕೊಳ್ಳಲು ಅವರ ಸಾಹಿತ್ಯದ ಹಲವು ಕೃತಿಗಳು ದೇಶಿಯ ಸೊಗಡನ್ನೆ ಹೆಚ್ಚು ಒತ್ತರಿಸಿಕೊಂಡಿರುವಂತವು. ಏಪ್ರಿಲ್ 3 1947ರಲ್ಲಿ ಹೆಗ್ಗಡದೇವನಕೋಟೆ ತಾಲೂಕು ಆಲನಹಳ್ಳಿಯಲ್ಲಿ ಜನಿಸಿದರು.ಅವರು ಬರೆದಿದ್ದು ಕಡಿಮೆಯಾದರೂ ಇಂದಿಗೂ ಜನಮಾನಸದಲ್ಲಿ ಉಳಿಯುವಂತವು. ಪ್ರಾಥಮಿಕ ಶಿಕ್ಷಣ ಹುಟ್ಟಿದಹಳ್ಳಿಯಲ್ಲಿಯೂ ಹಾಗೂ ಉನ್ನತ ಶಿಕ್ಷಣವನ್ನು ಮಾನಸ ಗಂಗೋತ್ರಿಯಲ್ಲಿ ಪಡೆದರು. ಬಿ.ಎ ಓದುತ್ತಿದ್ದಾಗಲೇ “ಸಮೀಕ್ಷಕ” ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಈ ಪತ್ರಿಕೆಯಲ್ಲಿ ಸೃಜನಶೀಲ ಬರಹಗಳಿಗೆ ಮತ್ತು ವಿಮರ್ಶೆಗಳಿಗೆ ಮೀಸಲಾದ ಪತ್ರಿಕೆಯಾಗಿತ್ತು. ಕೆಲಕಾಲ ಅಧ್ಯಾಪಕರಾಗಿ ನಂತರ ಪೂರ್ಣಾವಧಿಯ ಲೇಖಕರಾಗಿ ತೊಡಗಿಸಿಕೊಂಡ ಇವರು ಬಹಳ ಕಡಿಮೆ ಅವಧಿ ಬದುಕಿದರು. ಜನವರಿ 4. 1989ರಲ್ಲಿ ಕೇವಲ 42 ನೇ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದರು.

ಇವರ “ಮಣ್ಣಿನ ಹಾಡು, ಕಾಡು ಗಿಡದ ಪಾಡು, ಡೋಗ್ರಾ ಪಹಾರಿ ಪ್ರೇಮಗೀತೆಗಳು”, ಇವರ ಕವನ ಸಂಕಲನಗಳು. “ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂಗಯ್ಯನ ದಶಾವತಾರಗಳು, ಮತ್ತು ಕಾಡು”, ಈ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಸಿದ್ಧಿ ಪಡೆದವು. ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ. ಇವರ “ಫಿನಿಕ್ಸ್, ಗಿಜಗನಗೂಡು, ಮತ್ತು ಕುರುಬರ ಲಕ್ಕನೂ ಹಾಗೂ ಎಲಿಜಬೆತ್ ರಾಣಿಯೂ, ಎಂಬ ಕಥೆಗಳು ಸಹ ಚಲನಚಿತ್ರಗಳಾಗಿವೆ”. ಇವರ “ಮಣ್ಣಿನ ಹಾಡು” ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಪ್ರಶಸ್ತಿಯು ಲಭಿಸಿದೆ. “ಕಾಡಿನ ಹುಡುಗ ಕೃಷ್ಣ” ಇದು ಇವರ ಅಭಿನಂದನಾ ಗ್ರಂಥ. ಗ್ರಾಮಾಯಣ ಸಮೀಕ್ಷೆ, ಅವಲೋಕನ, ಅಂತ:ಕರಣ, ಇವು ಇವರ ಸಂಪಾದನ ಕೃತಿಗಳು. ‘ಆಲನಹಳ್ಳಿ ವಾಚಿಕೆ’ ಎಂಬುದು ಕಾಲಗಳನ್ನೇ ಮೀರಿ ಸದಾ ಪ್ರಸ್ತುತ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ. ಇವರ ‘ತಿಕ ಸುಟ್ಟ ದೇವರು, ಅರಮನೆ’. ಮೊದಲಾದವುಗಳು ಕೊನೆಯ ಹಂತದ ಕೃತಿಗಳು.

ಸಂಬಂಧ ಎಂಬ ಈ ಕತೆಯಲ್ಲಿ ಒಂದೇ ಊರಿನಲ್ಲಿ ಹುಟ್ಟಿ ಬೆಳೆದ ಬೇರೆ ಬೇರೆ ಜಾತಿಯ ಸ್ನೇಹಿತರಿಬ್ಬರು ದೊಡ್ಡವರಾದ ನಂತರ ಪರಸ್ಪರ ಸಂಪರ್ಕವೇ ಇಲ್ಲದಂತೆ ಇದ್ದು ಯಾವುದೋ ಒಂದು ದಿನ ಎಂಟು ವರ್ಷಗಳ ನಂತರ ಆಕಸ್ಮಿಕವಾಗಿ ಸ್ನೇಹಿತೆ ಲಲಿತಾ ಸಿಗುತ್ತಾಳೆ. ಊರಿನ ಬ್ರಾಹ್ಮಣ ಹುಡುಗಿ ಲಲಿತ ತನ್ನ ಮೂರು ವರ್ಷದ ಮಗುವನ್ನು ಎದಗವಚಿಕೊಂಡು ಆಸ್ಪತ್ರೆಯಲ್ಲಿ ನಿಂತು ಆಕೆಯೇ ಮಾತನಾಡಿಸಿದಾಗ ನಿರೂಪಕನಿಗೆ ಹಳ್ಳಿಯ ಸೊಗಡು ಲಲಿತ ಮತ್ತು ಆವರಿಬ್ಬರು ಕಲೆತು ಆಡಿದ್ದೆಲ್ಲ ಮಾತಾಡಿದ್ದೆಲ್ಲ ನೆನಪಿಸಿಕೊಂಡು ಬಹಳ ಪ್ರೀತ್ಯಾಧರಗಳಿಂದ ವಿಚಾರಿಸಿದಾಗ ಅವರ ಮನೆ ಚಾಮುಂಡಿಪುರದಲ್ಲಿ ಇರುವುದು ತಿಳಿದು ಆಕೆಯ ಮಗಳಿಗೆ ಹುಚ್ಚು ನಾಯಿ ಕಚ್ಚಿದ್ದರಿಂದ ಡಾಕ್ಟರ್ ಗೆ ತೋರಿಸಲು ಬಂದಿರುವುದು ತಿಳಿಯುತ್ತದೆ. ಆಕೆಗೆ ಗಾಡಿ ಮಾಡಿಸಿ ಮನೆಗೆ ಕಳಿಸುತ್ತಾನೆ. ಮತ್ತೊಮ್ಮೆ ಆಕೆಯ ಮನೆಗೆ ತೆರಳಿದಾಗ ಆಕೆಯ ಗಂಡನ ವರ್ತನೆ ಆತನ ರಾಕ್ಷಸತ್ವ ಜೊತೆಗೆ ಆ ಮನೆಯ ತೀವ್ರ ಬಡತನ ಆಕೆಯ ಆಸಹಾಯಕತೆಯ ಅರಿವಾಗುತ್ತದೆ. ಹುಚ್ಚು ನಾಯಿ ಕಚ್ಚಿದ್ದರಿಂದ ಬೆಂಗಳೂರಿಗೆ ಕರೆದೊಯ್ಯಲು ಡಾಕ್ಟರ್ ಸೂಚನೆ ನೀಡಿರುತ್ತಾರೆ. ನಿರೂಪಕನೇ ಆಕೆಯ ಕೈಗೆ ಒಂದಿಷ್ಟು ದುಡ್ಡು ತುರುಕಿದ್ದರೂ ಬೆಂಗಳೂರಿಗೆ ಹೋಗದೆ ಮಗಳು ಸಾವನ್ನಪ್ಪಿದ ವಿಷಯ ಮತ್ತೊಮ್ಮೆ ನಿರೂಪಕ ಲಲಿತಳ ಮನೆ ಕಡೆ ಹೋದಾಗ ವಿಷಯ ತಿಳಿಯುತ್ತದೆ. ಮನಸು ಖೇದವೆನಿಸುತ್ತದೆ. ಸಾಲದಕ್ಕೆ ಆಕೆಯ ಗಂಡ ಈತ ದುಡ್ಡು ನೀಡಿದ್ದಕ್ಕೆ ಆಕೆಗೆ ಸರಿಯಾಗಿ ಹೊಡೆದು ಮೂಲೆಗೆ ಎಸೆದಿದ್ದ. ಆ ಕ್ಷಣ ಆಕೆಯ ಪರಿಸ್ಥಿತಿ ಅವಳ ಜೀವನದ ನೈಜ್ಯ ಪರಿಸ್ಥಿತಿಯನ್ನು ಹೇಳುವ ಈ ಕಥೆಯೇ ಸಂಬಂಧ.

ಈ ಕತೆಯಲ್ಲಿ ಮೊದಲನೆಯದಾಗಿ ಜಾತಿ ನಡುವೆ ನಡೆಯುವಂತಹ ಆಚಾರ ವಿಚಾರ ಸಂಪ್ರದಾಯ ಕಂದಾಚಾರಗಳು ಕಾಣಬಹುದು. ಶೂದ್ರರ ಮನೆಯ ದನಕರುಗಳು ಸಂಜೆ ಮನೆಗೆ ಬಂದಿಲ್ಲ ಎಂದರೆ ನಿರೂಪಕನ ಅಪ್ಪ, ಲಲಿತಳ ಅಪ್ಪನ ಹತ್ತಿರ ಬಾಯ್ಕಟ್ಟು ಮಾಡಿಸಿಕೊಂಡು ಬರಲು ಕಳಿಸುತ್ತಿದ್ದರು. ಈ ತರದ ಬ್ರಾಹ್ಮಣರ ವಿಚಾರಧಾರೆಗಳು ಒಂದೆಡೆಯಾದರೆ “ನಿಮ್ಮ ಸಿದ್ದೇಗೌಡರ ಮೇಲೆ ಬರೋದು ದೇವರಲ್ಲ; ಅದೊಂತರ ಗಾಳಿ ಅಂತಪ್ಪ ದೇವರು ಗೌಡ್ರ ಜಾತಿಯವರ ಮೇಲೆ ಬರೋಲ್ಲವಂತೆ ನಮ್ಮ ಅಪ್ಪಯ್ಯ ಹೇಳ್ತು”. ಎಂದು ಹೇಳುತ್ತಿದ್ದ ಲಲಿತ ಹೀಗೆ ಬಾಲ್ಯದಲ್ಲಿ ನಿರೂಪಕ ಮತ್ತು ಲಲಿತಳ ನಡುವೆ ನಡೆಯುವ ಸಂಭಾಷಣೆಯು ಅವರವರ ಜಾತಿ ನೀತಿ ಯನ್ನು ಸೂಚಿಸುವಂತಿದೆ. ಅನಾದಿ ಕಾಲದ ಪರಂಪರೆಯನ್ನು ಮನುಷ್ಯ ಎಂದಿಗೂ ದಾಟಿ ಹೊರ ಬರಲಾರ ಎಂಬುದು ಸ್ಪಷ್ಟವಾಗಿದೆ. ಆದರೆ ಹಿಂದಿನ ಪರಂಪರೆಯನ್ನು ದಿಟ್ಟಿಸಿದಾಗ ದೇವರು ಒಲುಮೆ ಸಾಕ್ಷಾತ್ಕಾರ ಆಗಿದ್ದಲ್ಲ ಬಹುಪಾಲು ಶೂದ್ರ ದಲಿತರಿಗೆ ಎಂಬುದು ಸಹ ನಿರ್ವಿವಾದ ಸಂಗತಿ. ದೇವರು ದೆವ್ವ ಎಂಬ ಕಲ್ಪನೆಗಳ ಮನಸ್ಸಿನ ದ್ಯೋತಕವಾದರೂ ಆರಾಧಿಸುವ ಮನಸುಗಳಿಗೆ ದೇವರು ಸದಾ ನಿರಾಕಾರನಾಗಿ ಅವರು ಒಲುಮೆಗೆ ಪಾತ್ರನಾಗುವುದು ಸಾಕ್ಷಾತ್ಕಾರಗೊಳ್ಳುವುದು ಕಾಣುವಂತಹ ವಿಚಾರ.

ಒಮ್ಮೆ ಬ್ರಾಹ್ಮಣರ ದೇವರು ಹಾಗೂ ಪೂಜೆ ಹೇಗಿರುತ್ತದೆಂಬ ಕುತೂಹಲದಿಂದ ನಿರೂಪಕ ಚಿಕ್ಕವನಿರಬೇಕಾದಾಗ ಲಲಿತಳ ಮನೆಯ ಒಳಗೆ ಹೋಗಿದ್ದಕ್ಕೆ ಅಜ್ಜಿ “ಅಯ್ಯೋ ಶೂದ್ರ ಮುಂಡೇದೆ ಒಳಗೆ ನುಗ್ಬಿಟ್ಯಲ್ಲೋ”. ಎಂದು ಅರಚಿ ಸೌದೆ ಬಡಿಕೆಯಿಂದ ಆ ಚಿಕ್ಕ ಹುಡುಗ ಎನ್ನದೆ ಬಾರಿಸಿತ್ತು. ಇಂತಹ ವಿಲಕ್ಷಣ ಮನಸ್ಥಿತಿ ಹೊಂದಿದವರು ಜಾತಿ ಸೂತಕವಾಯಿತು ಮಡಿ ಹಾಳಾಯ್ತು ಎಂದುಕೊಳ್ಳುವ ಮನುಷ್ಯನ ಮನಸ್ಸು ದೂರದ ಊರಿನಲ್ಲಿ ಕಾಣದ ಕಟುಕ ಗಂಡಿಗೆ ಲಲಿತಳನ್ನು ಒಪ್ಪಿಸಿ ಆಕೆ ಪಡಬಾರದ ನೋವುಂಟು ಕಣ್ಣೀರಲ್ಲಿ ಕೈತೊಳೆಯುತ್ತಿರುವಾಗ ಇವರ ಯಾವ ಜಾತಿಯ ಮಡಿವಂತಿಕೆ, ನೀತಿಯ ಮಡಿವಂತಿಕೆ, ಮನಸ್ಸಿಗೆ ಬಡಿದ ಸೂತಕವನ್ನು ಎಲ್ಲಿ ಹೇಗೆ ತೊಡೆದು ಹಾಕಿದವು? ಮಡಿವಂತಿಕೆ ಎಂಬುದು ಕೇವಲ ದೇಹಕ್ಕೆ ಮಾತ್ರ ಸೀಮಿತವೇ ಹಾಗಾದರೆ?

ಈತ ಶೂದ್ರ ಆಕೆ ಬ್ರಾಹ್ಮಣಳಾಗಿದ್ದರು ತೀರ ಭಿನ್ನ-ಭಿನ್ನ ಸಂಸ್ಕಾರದಲ್ಲಿ ಹುಟ್ಟಿ ಬೆಳೆದವರಾಗಿದ್ದರು ಸಹ ಯಾವುದೋ ಒಂದು ಸೆಳೆತ ಇಬ್ಬರ ಹೃದಯವನ್ನು ಬಂಧಿಸಿತು. ಶಾಲೆಗೆ ಹೋದಾಗ ಊಟದ ಸಮಯದಲ್ಲಿ “ಏನು ಆಗಲ್ಲ ಸ್ವಲ್ಪ ತಿನ್ನು ಲಲಿತ” ಎಂದಾಗ “ನಮ್ಮ ಅಜ್ಜಿ ಹೇಳ್ತಾರೆ ನಾವು ಬ್ರಾಮಣ್ರು ಶೂದ್ರ ಮನೆ ತಿಂಡಿ ತಿಂದರೆ ನರಕಕ್ಕೊಗ್ತಿವಂತಪ್ಪ”. ಎಂಬ ಲಲಿತಳ ಮಾತುಗಳು ನಿರೂಪಕನಿಗೆ ತನ್ನ ಅಜ್ಜ ಹೇಳುವ ನರಕದ ವರ್ಣನೆ ಕಣ್ಮುಂದೆ ಬಂದು ಸುಮ್ಮನಾಗುತ್ತಿದ್ದ. ಇಂತಹ ಮಾತುಗಳು ಕಥೆಯಲ್ಲಿ ಕಂಡುಬರುವ ಅಂಶವಾದರೆ ಕಥೆಗಾರರು ನಮ್ಮ ಸಂಪ್ರದಾಯ ಮತ್ತು ಈ ಪರಂಪರೆ ಎಂಬುದನ್ನು ಬೆಳೆಯುವ ಮಕ್ಕಳಲ್ಲಿ ಆಗಲೇ ಬೀಜ ಬಿತ್ತಿರುವುದನ್ನು ಎತ್ತಿ ಹಿಡಿಯುತ್ತಾರೆ. ಪರಂಪರೆಯನ್ನು ಮತ್ತೆ ಮತ್ತೆ ಪ್ರಶ್ನೆ ಮಾಡುವಾಗೆಲ್ಲ ನಮ್ಮ ಅರಿವಿಗೆ ಬಾರದಂತೆ ನಮ್ಮೊಳಗೆ ಆಳವಾಗಿ ಬೇರೂರಿರುತ್ತದೆ. ಇಂತಹ ಜಾತಿ ರಾಜಕಾರಣದ ನೆಲೆಯನ್ನು ಲೇಖಕರು ಸಮರ್ಥವಾಗಿ ದಾಖಲಿಸುತ್ತಾರೆ. “ ಸಂಬಂಧ ಹೆಚ್ಚು ಕಡಿಮೆ ನವೋದಯ ಕಥೆಗಳಂತೆಯೇ ಓದುಗರ ಅಂತ:ಕರಣವನ್ನೇ ಮುಟ್ಟುವಂತಹ ಕಥೆಯಾಗಿದೆ. ಕಥೆಯ ಘಟನಾವಳಿಗಳ ಯೋಜನೆಯಲ್ಲಿ ಸರಳ ಸೂತ್ರವೊಂದು ಇದೆ ಅನಿಸುವುದಾದರೂ ಕಥೆಯ ಉದ್ದೇಶವನ್ನು ಸಾಧಿಸುವುದರಲ್ಲಿ ಕಥೆ ಯಶಸ್ವಿಯಾಗಿದೆ”.-( ಜಿಎಚ್ ನಾಯಕ್ ಕನ್ನಡ ಸಣ್ಣ ಕಥೆಗಳು ಪ್ರಸ್ತಾವನೆಯಿಂದ)

ಪುರುಷ ತನ್ನ ದಬ್ಬಾಳಿಕೆ ಎನ್ನುವಂತದ್ದನ್ನು ಕೂಡ ಅದೊಂದು ಪರಂಪರೆ ಸಂಪ್ರದಾಯ ಎಂಬಂತೆ ಆಜನ್ಮ ಸಿದ್ಧ ಹಕ್ಕು ಎನ್ನುವಂತೆ ವರ್ತಿಸುತ್ತಾನೆ. ಗಂಡಸು ವಿಜೃಂಬಿಸುವುದಕ್ಕೆ ಈ ಕಥೆಯಲ್ಲಿ ಕಂಡು ಬರುವ ಲಲಿತಳ ಗಂಡನ ಪಾತ್ರ ತನ್ನ ದುರಳತನಕ್ಕೆ ಹುಚ್ಚು ನಾಯಿ ಕಚ್ಚಿದ ಮಗಳನ್ನು ಸಾವನಪ್ಪುವಂತೆ ಮಾಡುವುದು ಆತನ ನೀಚತ್ವಕ್ಕೆ ರಾಕ್ಷಸ ಪ್ರವೃತ್ತಿಗೆ ಕನ್ನಡಿ ಹಿಡಿದಂತೆ. ಪುರುಷ ಪ್ರಾಧ್ಯಾನತೆಯ ನೆಲೆಗಟ್ಟಿನಲ್ಲಿ ಕಾಣುವ ವಸ್ತು ವಿಷಯವಾಗಿದೆ. ಕಥೆಯ ನಿರೂಪಕ ಲಲಿತಳ ಮಗಳನ್ನು ದೂರದ ಬೆಂಗಳೂರಿನ ಆಸ್ಪತ್ರೆಗೆ ಹೋಗಲು ಆರ್. ಎಂ. ಓ. ಅವರಿಂದ ಚೀಟಿ ಬರಸಿಕೊಟ್ಟು ಒಂದಷ್ಟು ದುಡ್ಡು ಕೊಟ್ಟು ಮನೆಗೆ ಕಳಿಸಿದ್ದರೂ ಸಹ, ಆಕೆಯ ಗಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯದೆ, ಲಲಿತಳನ್ನು ಕಳಿಸದೆ ನೇರವಾಗಿ ಆ ಮಗುವಿನ ಸಾವಿಗೆ ಕಾರಣವಾಗುವ ಆತನ ವರ್ತನೆ ಮನಸ್ಸಿನ ಚಿಂತನೆ ಇವೆಲ್ಲವೂ ಪುರುಷ ಅಹಂ ಎಂದು ಸಾಬೀತಾಗುತ್ತದೆ. ಸಾಲದೆಂಬಂತೆ ದುಡ್ಡು ನೀಡಿದ ನಿರೂಪಕನಿಗೂ ಸಹ ಕೆಟ್ಟ ಕೆಟ್ಟ ಭಾಷೆಯಿಂದ ಬೈದ ಸಂಗತಿಯನ್ನು ವಠಾರದ ಹೆಂಗಸರು ತಿಳಿಸಿದಾಗಷ್ಟೇ ನೈಜತೆಯ ಅರಿವಾಗುತ್ತದೆ.” ನಿಮಗೂ ಕೆಟ್ಟ ಕೆಟ್ಟದಾಗಿ ಅಂತಿದ್ದ ಅವನ ಬಾಯಿಗೆ ಹುಳ ಬೀಳ”. ಎಂದ ಓಣಿಯ ಹೆಂಗಸಿನ ಮಾತು ಕೇಳಿ ನಿರೂಪಕ ನೊಂದುಕೊಳ್ಳುತ್ತಾನೆ. ಹಾಗೂ ಆ ದಿನದ ಆಕೆಯ ಸ್ಥಿತಿಯನ್ನು ಕಂಡಾಗ ಕರುಳುಕಿತ್ತು ಬರುವಂತೆ ಹೊಡೆದಿದ್ದ ಆ ಹೊಡೆತಕ್ಕೆ ಮೂಲೆ ಸೇರಿ ಮಲಗಿದ್ದ ಲಲಿತಳ ಪರಿಸ್ಥಿತಿ ಬಹುಶಃ ಎಂತವರಿಗಾದರೂ ದುಃಖ ತರಿಸುವಂಥದ್ದು. ಹೆಣ್ಣು ಸಬಲೇ ಎಂದು ಹೇಳುವಾಗೆಲ್ಲ ಪುರುಷ ಆಕೆಯನ್ನು ಮತ್ತದೇ ಅಬಲೇ ನೀನು ಎಂದು ಪುರುಷ ಅಹಂನಡಿಯಲ್ಲಿ ಅತ್ಯಾಚಾರ, ಹೊಡೆಯುವುದು, ಬಡಿಯುವುದು ಇತ್ಯಾದಿಗಳನ್ನೆಲ್ಲ ನಿರ್ವಹಿಸಿ ಆಕೆಯನ್ನು ಸದಾ ತನ್ನ ಪಾದದಡಿಯಲ್ಲೇ ಇರುವಂತೆ ಲಿಂಗರಾಜಕಾರದ ಕಾರ್ಯ ನಿರ್ವಹಿಸುತ್ತಾನೆ. ಚಿಕ್ಕಂದಿನಿಂದಲೂ ಅವರಿಬ್ಬರಲ್ಲಿ ಇದ್ದ ಅದೆಂತದ್ದೋ ಒಂದು ಬಾಂಧವ್ಯ ಅವರನ್ನು ಸೆಳೆತದಂತೆ, ಕನಿಕರಿಸುವಂತೆ ಮಾಡಿದ್ದರೂ ಕೂಡ ಪರಿಸ್ಥಿತಿಗಳ ಕೈಗೊಂಬೆಯಾಗಿ ನಿರೂಪಕ ಹಾಗೂ ಲಲಿತಾ ಮೌನವಾಗಿ ಇರಬೇಕಾದದ್ದು ಜಾತಿ ಮತ್ತು ಲಿಂಗ ರಾಜಕಾರಣದ ನೆಲೆಯಲ್ಲಿ ಎಂಬುದನ್ನು ವಿಮರ್ಶಿಸಿದಾಗ ಉತ್ತರ ತಿಳಿಯುವುದು.

ಒಟ್ಟಾರೆ ಅರ್ಥಪೂರ್ಣ ದೇಶಿ ಭಾಷಾ ಸಂಪತ್ತನ್ನೇ ಆಳಕ್ಕಿಳಿಸಿ ಜನಪದರ ನಡುವೆ ಹಳ್ಳಿಗರ ಮನೆ ಮನದಲ್ಲಿ ಸುತ್ತು ಹಾಕುವ ಸಂಪ್ರದಾಯ ಆಚಾರ ವಿಚಾರಗಳ ಅವಲೋಕನ ಮಾಡಿರುತ್ತಾರೆ. ಪಟ್ಟಣದ ಬದುಕಿನ ದುರಾವಸ್ಥೆ, ಗಂಡಸಿನ ಮನೋವಿಕಾರತೆ ಲಲಿತಳ ಅಸಹಾಯಕತೆ, ನಿರೂಪಕನ ಸಹಾಯ ಕನಿಕರ, ಮತ್ತು ಜಾತಿ ಧರ್ಮ ಸಂಪತ್ತನ್ನು ಸಂಪ್ರದಾಯವನ್ನು ಒಟ್ಟಾರೆ ಎಲ್ಲವನ್ನು ಮೀರಿದ ವ್ಯಕ್ತಿತ್ವವಾಗಿ ನಮಗೆ ನಿರೂಪಕ ಕಾಣುತ್ತಾನೆ. ಒಟ್ಟಂದದಲ್ಲಿ ಕಟ್ಟಿಕೊಟ್ಟ ಒಂದು ಜೀವನಾನುಭವ ಹೊಂದಿದ ಕಥೆ ಎನ್ನಬಹುದಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಹಂಗಿನರಮನೆಯ ಹೊರಗೆ ಕಥೆಯಲ್ಲಿ ಪ್ರೇಮ ವೈಫಲ್ಯದ ವೈರುಧ್ಯದ ಮುಖಗಳು
ಜಿ.ಎಸ್ ಸದಾಶಿವರ ಕಥೆ 'ಹ್ಯಾಂಗೊವರ್ ನಲ್ಲಿ ಮನದ ದ್ವಂದ್ವತೆ'
ಅಬಚೂರಿ‌ನ ಪೋಸ್ಟಾಫೀಸು ಕತೆಯಲ್ಲಿ ಕಾಣುವ ಹಳ್ಳಿ ಜಗತ್ತು

ಲಂಕೇಶ್ ಅವರ ನಿವೃತ್ತರು ಎಂಬ ಕಥೆಯಲ್ಲಿ ಕಾಣುವ ಸಣ್ಣತನ
ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು
ರಾಮನ ಸವಾರಿ ಸಂತೆಗೆ ಹೋದದ್ದು ಕಥೆಯಲ್ಲಿ ಕಾಣುವ ವಿಷಮ ದಾಂಪತ್ಯ
ರಾಘವೇಂದ್ರ ಖಾಸನೀಸ ಅವರ ತಬ್ಬಲಿಗಳು ಕಥೆಯಲ್ಲಿ ಸಂಬಂಧಗಳ ಅಸಂಬದ್ಧತೆ
ಅನಂತಮೂರ್ತಿ ಅವರ `ಕ್ಲಿಪ್ ಜಾಯಿಂಟ್' ಕಥೆಯಲ್ಲಿ ಕಾಣುವ ಮೌಲ್ಯಶೋಧನೆ
ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ
ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ
ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ
‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ

ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ಕಿರುತೆರೆಯ ಶೀಘ್ರಸ್ಖಲನದ ಕಾಮೆಡಿ ಸ್ಕಿಟ್ ಗಳು

28-03-2025 ಬೆಂಗಳೂರು

"ಮನರಂಜನೆ ನೀಡುವ ಇಲ್ಲವೇ ಆಮದಾನಿ ನಿರೀಕ್ಷೆಯ ಭರದಲ್ಲಿ ಸ್ಕಿಟ್ ಗಳಿಗೆ ಆಯ್ಕೆ ಮಾಡಿಕೊಳ್ಳುವ ಅವರ ಬಹುಪಾಲು ನಾಟಕ ...

ಶಿಕ್ಶಣ: ಕೆಲವು ಜನರಲ್ಲಾದ ಮಾತುಗಳು

27-03-2025 ಬೆಂಗಳೂರು

"ಶಿಕ್ಶಣವನ್ನು ಕೊಡುವುದು ಮಕ್ಕಳಿಗೆ. ಹಾಗಾಗಿ ಒಟ್ಟು ಶಿಕ್ಶಣ ವ್ಯವಸ್ತೆಯ ಕೇಂದ್ರ ಬಿಂದು ಮಗು. ಆದ್ದರಿಂದ ಎಲ್ಲ ಆ...

ಕನ್ನಡ ವಿಮರ್ಶೆ -5 

24-03-2025 ಬೆಂಗಳೂರು

"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...