ಶಿವರಾಮ ಕಾರಂತರು ಯಕ್ಷಗಾನ ಕಲೆಗೆ ವಿಶ್ವ ಪ್ರಸಿದ್ಧಿ ತಂದವರು : ಪ್ರಭಾಕರ ಕಾರಂತ


“ ಶಿವರಾಮ ಕಾರಂತರು ಯಾವೆಲ್ಲಾ ಮೇಳಗಳ ಎಷ್ಟೆಲ್ಲಾ ಆಟ ನೋಡಿದ್ದಾರೆ, ಎಷ್ಟು ಭಾಗವತರು, ಕಲಾವಿದರು, ವೇಷ ಭೂಷಣ ಸಿದ್ದಮಾಡುವವರು ಮತ್ತು ಯಾವೆಲ್ಲಾ ಪ್ರೇಕ್ಷಕರೊಂದಿಗೆ ಅವರು ವಿಚಾರ ಮಂಥನ ನಡೆಸಿದ್ದಾರೆ ಎಂಬುದಕ್ಕೂ ಇಲ್ಲಿ ಉತ್ತರವಿದೆ” ಎನ್ನುತ್ತಾರೆ ಪ್ರಭಾಕರ ಕಾರಂತ. ಅವರು ಸಾಹಿತಿ ಶಿವರಾಮ ಕಾರಂತ ಅವರ ‘ಯಕ್ಷಗಾನ ಬಯಲಾಟ’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಶಿವರಾಮ ಕಾರಂತರು ಯಕ್ಷಗಾನ ಕಲೆಗೆ ವಿಶ್ವ ಪ್ರಸಿದ್ಧಿ ತಂದವರು.ಆದರೆ ಅವರು ತಂದ ಬ್ಯಾಲೆ ಪ್ರಯೋಗ ಪರಿಪೂರ್ಣವಲ್ಲ. ಕಾರಂತರೇನು ಯಕ್ಷಗಾನ ಕಲಾವಿದರೇನು?. ಈ ಮಾತುಗಳನ್ನು ಹಿರಿಯ ಕಲಾವಿದರೊಬ್ಬರಿಂದ ಕೇಳಿದ್ದ ನನಗೆ ಹೌದಲ್ಲವೇ ಅನಿಸಿತ್ತು. ಅವರ ಪ್ರವೇಶದಿಂದ ಯಕ್ಷಗಾನ ದೇಶ ವಿದೇಶದ ಶಿಷ್ಟರನೇಕರ ಗಮನ ಸೆಳೆಯಿತು. ಆದರೆ ನಾನೇ ಸರಿ ಎಂಬ ಅವರ ಧೋರಣೆ ಒಪ್ಪಲಾಗದು ಎಂಬ ಅವರ ಮಾತಿಗೆ ನಾನು ತಲೆದೂಗಿದ್ದೆ.

ನನ್ನ ಸಂಶಯ ನಿವಾರಿಸಿದ್ದು ಕಾರಂತರ ಯಕ್ಷಗಾನ ಬಯಲಾಟ ಕೃತಿ. ಇದನ್ನವರು ರಚಿಸಿದ್ದು 1957ರಲ್ಲಿ.ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಯಕ್ಷಗಾನ ಕುರಿತು ಹೇಳಲು ಕಾರಂತರಿಗೆ ಅಧಿಕಾರವೇನು. ಅವರ ಅಧ್ಯಯನ ಏನು. ವೇಷ ಭೂಷಣ, ಪದ್ಯ, ನಾಟ್ಯ,ಮಾತುಗಾರಿಕೆ ಕುರಿತು ಅವರ ಅನುಭವವೇನು. ಈ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಿದಕೃತಿ ಇದು. ಕಾರಂತರು ಯಕ್ಷಗಾನ ಇರುವಲ್ಲೆಲ್ಲಾ ಎಷ್ಟು ಅಲೆದಾಟ ಮಾಡಿದ್ದಾರೆ. ಯಾವೆಲ್ಲಾ ಮೇಳಗಳ ಎಷ್ಟೆಲ್ಲಾ ಆಟ ನೋಡಿದ್ದಾರೆ, ಎಷ್ಟು ಭಾಗವತರು, ಕಲಾವಿದರು, ವೇಷ ಭೂಷಣ ಸಿದ್ದಮಾಡುವವರು ಮತ್ತು ಯಾವೆಲ್ಲಾ ಪ್ರೇಕ್ಷಕರೊಂದಿಗೆ ಅವರು ವಿಚಾರ ಮಂಥನ ನಡೆಸಿದ್ದಾರೆ ಎಂಬುದಕ್ಕೂ ಇಲ್ಲಿ ಉತ್ತರವಿದೆ.

ಹುಟ್ಟೂರಿನ ಪರಿಸರದಲ್ಲಿನ ಯಕ್ಷಗಾನ ಆಟ ನೋಡುತ್ತಾ ಬೆಳೆದವರು ಕೋಟ ಕಾರಂತರು. ಅಲ್ಲೇ ಇದ್ದ ಮೇಳ ಮಾತ್ರವಲ್ಲ ಅಲ್ಲಿಗೆ ಬರುವ ಮೇಳಗಳ ಆಟ ಅವರು ಬಿಡದೇ ನೋಡಿದ್ದಾರೆ. ಯೌವನದ ದಿನಗಳಲ್ಲಿ ಕಾರಂತರ ಆಸಕ್ತಿ ನೃತ್ಯ ಮತ್ತು ನಾಟಕಗಳತ್ತ ಹರಿಯಿತು. ಸ್ವತಃ ಅವರು ಐವತ್ತಕ್ಕೂ ಹೆಚ್ಚು ನಾಟಕ ಬರೆದಿದ್ದಾರೆ.ಸಾಮಾಜಿಕ ಬದಲಾವಣೆಯ ಬಯಕೆಯ ರಚನೆಗಳವು. ಮದ್ಯಪಾನ, ಜೂಜು, ವೇಶ್ಯಾವೃತ್ತಿ, ಹೀಗೆ ಏನೆಲ್ಲಾ ಕೆಡುಕುಗಳನ್ನೂ ನಾಟಕದಿಂದಲೇ ಪರಿಹರಿಸುವ ನಂಬಿಕೆ ಇತ್ತವರಿಗೆ. ಹೀಗೆಂದೇ ತಾವೇ ನಾಟಕ ಬರೆದು ನಿರ್ದೇಶಿಸಿ ನಾಟಕ ತಂಡ ಕಟ್ಟಿಕೊಂಡು ಊರೂರು ಸುತ್ತಿದವರವರು. ಇದಕ್ಕೂ ಮೊದಲು ಅನೇಕ ನಾಟಕ ಕಂಪನಿಗಳಲ್ಲಿದ್ದು ಎಲ್ಲಾ ಕೆಲಸ ಮಾಡಿ ಅನುಭವ ಪಡೆದವರವರು. ತಮ್ಮ ತಂಡ ಕಟ್ಟಿಕೊಂಡು ತಿರುಗುವಾಗಲೇ ಅದು ಆಡುವವರನ್ನೇ ತಿದ್ದಲಾಗದು ಎಂಬ ಸತ್ಯ ಅವರಿಗೆ ಸಾಕ್ಷಾತ್ಕಾರ ಆಯಿತು.

ಆಡುವವರೇ ಸರಿಯಾಗದಿದ್ದ ಮೇಲೆ ನೋಡುವವರು ಹೇಗೆ ಸರಿಯಾದಾರು ಎಂದು ಯೋಚನೆ ಬಂದಾಗ ನಾಟಕಕ್ಕೆ ಅವರು ವಿಧಾಯಹೇಳಿದರು.ಅದಾಗಲೇ ಅವರು ಚಿತ್ರ, ಶಿಲ್ಪ ಕಲೆ ಅರಿಯಲು ದೇಶ ಅಲೆದಿದ್ದರು. ನೃತ್ಯ ಅಭ್ಯಸಿಸಿದ್ದರು. ಹಿಂದೂಸ್ತಾನಿ ಸಂಗೀತ ಗುರು ಮುಖೇನ ಕಲಿತಿದ್ದರು. ನಾಟಕಕ್ಕೆ ವಿದಾಯ ಹೇಳಿದ ಮೇಲೆ ಬಾಲ್ಯದ ಯಕ್ಷಗಾನ ಅವರಿಗೆ ನೆನಪಿಗೆ ಬಂದಿತು."ನಮ್ಮ ಬಯಲಾಟದಲ್ಲಿ ಕಿರಿತನದಲ್ಲಿ ನನಗೆ ಅನಿಸಿದ್ದಕ್ಕಿಂತ ಹೆಚ್ಚಿನ ಸೊಗಸಿದೆ"ಎಂದವರು ಕಂಡುಕೊಂಡರು. ಹೀಗಾಗೇ ಹಳೆಯ ಯಕ್ಷಗಾನ ಪ್ರಸಂಗ ಇಟ್ಟುಕೊಂಡು ಪುತ್ತೂರಿನ ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ನೃತ್ಯ ಪ್ರಯೋಗ ನವರಾತ್ರಿಯಲ್ಲಿ ನಡೆಸತೊಡಗಿದರು.

ಹಾಡು, ಕುಣಿತ, ವೇಷ, ಮಾತುಗಾರಿಕೆ ಹೀಗೆ ಇದು ಸರ್ವಾಂಗ ಸುಂದರವಾದ ಕಲೆ ಎಂದು ಅರಿವು ಗಳಿಸುತ್ತಲೇ ಹೋದರು. 1933ರಿಂದ ಪ್ರತಿವರ್ಷ 3 ತಿಂಗಳ ಕಾಲ ಯಕ್ಷಗಾನ ತಜ್ಞರೊಂದಿಗೆ ಒಂದೊಂದು ಪ್ರಸಂಗದ ಕುರಿತೇ ಅವರ ಅಧ್ಯಯನ ದಶಕಗಳ ಕಾಲ ಸಾಗಿತು.ಪಂಚವಟಿ, ಕೀಚಕವಧೆ, ಇಂದ್ರಕೀಲಕ, ಭೀಷ್ಮ ವಿಜಯ, ಮುಂತಾದ ಯಕ್ಷಗಾನಗಳನ್ನು ಅವರು ತಮ್ಮದೇ ತಂಡದಲ್ಲಿ ಆಡಿಸಿದರು. ಮಾತಿಲ್ಲದೆ ನೃತ್ಯದ ಮೂಲಕವೇ ಯಕ್ಷಗಾನ ತೋರಿಸುವ ಪ್ರಯೋಗ ಆಗಲೇ ಆರಂಭಿಸಿದರು. ಈ ಪ್ರಯೋಗಕ್ಕವರು ಯಕ್ಷಗಾನ ನೃತ್ಯ ಎಂದು ಕರೆದಲ್ಲಿ ವಿರೋಧ ಬಂದೀತೆಂದು ಕಿನ್ನರ ನೃತ್ಯ ಎಂಬ ಹೆಸರಿಟ್ಟರು. ಅರ್ನಾಲ್ಡ್ ಬಾಕೆ ಯಂತಹ ಸಂಗೀತ ಶಾಸ್ತ್ರ ಸಂಶೋಧಕರ ಜೊತೆಗೆ ಸಂಚರಿಸಿ ಜಾನಪದ ಸಂಗ್ರಹದಲ್ಲಿ ತೊಡಗಿಸಿಕೊಂಡರು.ಮಾತಿಗೂ ಗೀತೆಗೂ ಜನಪದದಲ್ಲಿರುವ ನಿಕಟ ನಂಟು ಅವರಿಗೆ ಅರ್ಥವಾಗಿದ್ದು ಆಗ. ಯಕ್ಷಗಾನ ಪದ್ಯಗಳಲ್ಲಿ ಈ ನಂಟು ಅದೆಷ್ಟು ನಿಕಟವಾಗಿದೆ ಸುಂದರವಾಗಿದೆ ಎಂದವರು ಅಚ್ಚರಿ ಪಟ್ಟರಾಗ. ಯಕ್ಷಗಾನ ದ ಸಮಗ್ರ ಅರಿವು ಮೂಡುತ್ತಿದ್ದಂತೆ ಆ ಕಾಲದಲ್ಲಿನ ಪ್ರಸಂಗಗಳಲ್ಲಿನ ದೋಷ ಅವರಿಗೆ ಕಾಣಿಸತೊಡಗಿತು. ಹುಟ್ಟೂರು ಕೋಟದಲ್ಲಿ ಮತ್ತಷ್ಟು ಯಕ್ಷಗಾನ ನೋಡಿದ ಮೇಲೆ ಇಲ್ಲಿ ನಾಟಕ, ಸಿನಿಮಾದ ಕಲಬೆರಕೆ ಕಡಿಮೆ ಇದೆ ಎಂದವರು ಕಂಡುಕೊಂಡರು.

ಅನೇಕಾನೇಕ ಹೆಸರಾಂತ ನಟರೊಂದಿಗೆ ಕಲೆತು ವಿಮರ್ಶೆಯ ಮೂಲಕ ಕಾರಂತರ ಅಧ್ಯಯನ ಸಾಗಿತು.ತಮ್ಮದೇ ತಂಡ ಕಟ್ಟಿ ರಾಜ್ಯ ಹೊರರಾಜ್ಯ ದಲ್ಲಿ ಅವರು ಪ್ರದರ್ಶನ ನೀಡಿದರು.ತಮ್ಮ ಪಾಶ್ಚಾತ್ಯ ಕಲಾವಿದ ಗೆಳೆಯರಿಗೆ ತಮ್ಮ ಪ್ರದರ್ಶನ ತೋರಿಸಿದರು. ರಷ್ಯಾದ ರಂಗಭೂಮಿಯ ವೇಷನಿರ್ಮಾತೃ ಮಾಗ್ದ ನಾಚುಮನ್, ವೆಸ್ಟರ್ ಕೇಂಚ್, ಪೀಟರ್ ಹೋಬಿ, ಬೇಕಿನ್ ಮೊದಲಾದ ಪ್ರಖ್ಯಾತರು ಕಾರಂತರ ಪ್ರಯೋಗ ವೀಕ್ಷಿಸಿದ್ದಲ್ಲದೇ ತಮ್ಮ ಬಾಲಿ, ಜಾವಾ, ಮುಂತಾದ ನೃತ್ಯ ಅಧ್ಯಯನದ ಸಂಗತಿ ತೀಳಿಸಿ ಪರಸ್ಪರ ಹೋಲಿಕೆಗೆ ನೆರವಾದರು. ಯಕ್ಷಗಾನ ವಿಶ್ವ ರಂಗಭೂಮಿಕೆಯಲ್ಲಿ ಅದೆಷ್ಟು ಸಮೃದ್ಧ ಎಂಬ ಅರಿವು ಕಾರಂತರಲ್ಲಿ ಮೂಡಿತಾಗ. ಇಂಟರ್ ನ್ಯಾಷನಲ್ ಡಾನ್ಸ್ ಆರ್ಕೀವ್ಸ್ ಅಧ್ಯಕ್ಷ ರಾಲ್ ದ ಮಾರಿ ಆಗ ಕಾರಂತರನ್ನು ಹುಡುಕಿಕೊಂಡು ಬಂದರು. ಅವರ ಯಕ್ಷಗಾನ ಅಭ್ಯಸಿಸಿದರು. ಇಷ್ಟು ಮಾತ್ರವಲ್ಲದೇ ಕರಾವಳಿಯ ವೈದ್ಯರ ಕುಣಿತ ಅಥವಾ ನಾಗನೃತ್ಯ ಅಭ್ಯಾಸ ನಡೆಸಿದ ಕಾರಂತರು ಅದನ್ನು ಅನೇಕ ಕಲಾವಿದರಿಗೇ ತೋರಿಸಿ ಯಕ್ಷಗಾನ ಬಯಲಾಟ ಇಲ್ಲಿಂದ ಮೂಲ ಪ್ರೇರಣೆ ಪಡೆದಿರುವ ಸಾಧ್ಯತೆ ಚರ್ಚಿಸಿದರು.

ಯಾವುದರ ಕುರಿತಾದರೂ ಆಸಕ್ತಿ ಉಂಟಾದರೆ ಅದರ ಬೇರು ತನಕ ತಲುಪಿ ಅಭ್ಯಸಿಸುವುದು ಕಾರಂತರ ಜಾಯಮಾನ.ಇದು ಯಕ್ಷಗಾನ ತಾಡವಾಲೆ ಗ್ರಂಥ ಸಂಗ್ರಹ ಮತ್ತು ಅಧ್ಯಯನಕ್ಕೆ ಅವರು ತೊಡಗುವಂತೆ ಮಾಡುತ್ತದೆ.ಯಕ್ಷಗಾನ ಇರುವ ಎಲ್ಲಾ ಜಿಲ್ಲೆಗಳ ಹಳ್ಳಿ ಮೂಲೆಯನ್ನೂ ಬಿಡದೇ ಸಂಚರಿಸುವ ಕಾರಂತರು ತಾಡವಾಲೆ ಅಮೂಲ್ಯ ಸಂಗ್ರಹ ತಮ್ಮದಾಗಿಸಿ ಕೊಳ್ಳುತ್ತಾರೆ. ಇದರ ಅಧ್ಯಯನ ಪ್ರಸಂಗ ಮತ್ತು ಪ್ರಸಂಗಕರ್ತರ ಕುರಿತು ಅವರಿಗೆ ಸಮಗ್ರ ಅರಿವು ಮೂಡಿಸುತ್ತದೆ. ಈ ಅಲೆದಾಟ ಅಧ್ಯಯನದಲ್ಲಿ ಅವರು ನೂರಾರು ಅರ್ಹರ ಸಹಾಯ ಪಡೆಯುತ್ತಾರೆ. ಯಕ್ಷಗಾನ ಮೂಲ ಪ್ರಸಂಗ ಕರ್ತ ಪಾರ್ತಿ ಸುಬ್ಬು ಎಂಬ ರೂಢಿಗತ ಮಾಹಿತಿ ತಪ್ಪು ಎಂಬ ಸತ್ಯ ಅವರಿಗೆ ಗೋಚರಿಸುತ್ತದೆ.

ಹೀಗೆ ವಿಶ್ವವಿದ್ಯಾಲಯ ಒಂದಕ್ಕೂ ಅಸಾಧ್ಯವಾದ ಕಾರ್ಯವನ್ನು ಕಾರಂತರು ಏಕಾಂಗಿಯಾಗಿ ಸಾಧಿಸಿ ಈ ಗ್ರಂಥ ಬರೆದಿದ್ದಾರೆ. "ನನಗನಿಸಿದ್ದನ್ನು ಧಾಕ್ಷಿಣ್ಯವಿಲ್ಲದೇ ನಿಮ್ಮ ಮುಂದಕ್ಕೆ ಇರಿಸಿದ್ದೇನೆ. ಎಲ್ಲರೂ ಒಪ್ಪುತ್ತಾರೆ ಒಪ್ಪಬೇಕು ಎಂಬ ಹಠವಿಲ್ಲ. ಇಂತಹ ದೊಡ್ಡ ವ್ಯಕ್ತಿಯೇ ಹೀಗೆ ಹೇಳಿರುತ್ತಾ ಈ ಕಾರಂತರು ಆಕ್ಷೇಪಿಸುತ್ತಾರಲ್ಲ ಎಂದವರುಂಟು. ಚಾರಿತ್ರಿಕ ಸತ್ಯ ಎಂಬುದು ದೊಡ್ಡದು.ಹೇಳಿದಾತನ ವ್ಯಕ್ತಿ ಪ್ರತಿಷ್ಠೆ ದೊಡ್ಡದಲ್ಲ."ಎಂದಿದ್ದಾರೆ ಕಾರಂತರು.ಕಾರಂತರಿಗೆ ಯಕ್ಷಗಾನದ ಮೇಲೆ ಬರೆಯುವ ಸಂಶೋಧಿಸುವ ಅಧಿಕಾರವಿಲ್ಲ ಎಂಬ ಪ್ರಶ್ನೆ ನೀನೇಕೆ ಬಾಳುತ್ತಿ ಎಂಬಷ್ಟೆ ಅಸಂಭದ್ಧ ಎಂದಿದ್ದಾರೆ ಅವರು.

ಭಾಗವತಿಕೆಯ ಸಂಬಂಧವೂ ಕಾರಂತರು ವ್ಯಾಪಕ ಅಧ್ಯಯನ ನಡೆಸಿದ್ದಾರೆ.ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತದ ತಜ್ಞರೊಂದಿಗೆ ನಿರಂತರ ಸಮಾಲೋಚಿಸಿ ಹತ್ತಾರು ಆ ಕಾಲದ ಪ್ರಸಿದ್ಧ ಭಾಗವತರೊಂದಿಗೂ ಚರ್ಚಿಸಿ ಎಂಬತ್ತು ರಾಗ ಗುರುತಿಸಿ ಅವುಗಳನ್ನು ಹಾಡಿಸಿ,ಪದ್ಯಕ್ಕೆ ಕುಣಿಸಿ ತೀರ್ಮಾನಿಸಿ ನಂತರ ಆಗಿನಕಾಲಕ್ಕೇ ಟೇಪ್ ರಿಕಾರ್ಡ್ ಮಾಡಿಕೊಂಡು ಅವಕಾಶ ಸಿಕ್ಕಾಗಲೆಲ್ಲಾ ವಿವಿದ ಕಲಾನಿದರೊಂದಿಗೆ ಸಮಾಲೋಚಿಸಿ ಯಾವ ಪಾತ್ರಕ್ಕೆ ಯಾವ ಸನ್ನಿವೇಶದಲ್ಲಿ ಯಾವರಾಗ ಎಂಬ ತೀರ್ಮಾನ ಪ್ರಕಟಿಸಿದ್ದಾರೆ. ಅವರ ಈ ಸಾಹಸಗಳೆಲ್ಲಾ ಬೇರೊಂದು ಪುಸ್ತಕದಲ್ಲಿ ದಾಖಲಾಗಿದೆ.

ಕೃತಿಯ ಪ್ರಥಮ ಆವೃತ್ತಿ ಪ್ರಕಟವಾದ ಮೇಲೆ ಗೋವಿಂದ ಪೈಗಳು ಕಾಲಗಣನೆಯಲ್ಲಾದ ತಪ್ಪನ್ನು ತೋರಿಸಿಕೊಟ್ಟಾಗ ಕಾರಂತರು ಮುಂದೆ ಸರಿಪಡಿಸಿಕೊಂಡಿದ್ದಾರೆ. ಆದರೆ ಕುಕ್ಕಿಲ ಕೃಷ್ಣ ಭಟ್ಟ ಎಂಬುವವರು 1800ಕ್ಕಿಂತ ಮೊದಲು ತಾಡವಾಲೆಗಳೇ ಇರಲಿಲ್ಲ ಎಂಬ ವಾದ ಮಾಡಿದಾಗ ಬನ್ನಿ ಚರ್ಚಿಸುವ ಎಂದು ಕಾರಂತರು ಆಹ್ವಾನಿಸಿದ್ದಾರೆ.ಅವರು ಬಾರದಾಗ ಸತ್ಯ ಅವರಿಗೆ ಬೇಕಿಲ್ಲ ಎಂದು ದಾಖಲಿಸಿದ್ದಾರೆ.

ಕಾರಂತರ ಈ ಪುಸ್ತಕಕ್ಕೆ ಅಂತರರಾಷ್ಟ್ರೀಯ ನೃತ್ಯ ಆರ್ಕೇವ್ಸ್-ಸ್ಟಾಕ್ ಹೋಮ್ ಸಂಸ್ಥೆಯ ಪ್ರಶಸ್ತಿ ದೊರಕಿದೆ. ನಂತರವಷ್ಟೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಕಿದ್ದು.

ಈ ಪುಸ್ತಕದುದ್ದಕ್ಕೂ ಕಾರಂತರ ನುಡಿ ಮಿಂಚುಗಳು ಪ್ರಜ್ವಲಿಸಿವೆ. ಯಕ್ಷಗಾನ ಕುರಿತಷ್ಟೇ ಅಲ್ಲ ಒಟ್ಟೂ ಜೀವನದಲ್ಲಿ ಎದುರಾಗುವ ಸನ್ನಿವೇಶ ಎದುರಿಸಲು ಈ ನುಡಿಮುತ್ತುಗಳು ತೋರು ದೀಪಗಳಾಗಿವೆ.

1957ರಲ್ಲೇ ಶಿರಸಿಯ ಯಕ್ಷಗಾನ ಗೋಷ್ಠಿಯಲ್ಲಿ ಕಲಾವಿದರನ್ನು ಉದ್ದೇಶಿಸಿ ಕಾರಂತರು ಭಾಷಣ ಮಾಡಿದ್ದಾರೆ. ಅದಲ್ಲದೇ ಧಾರವಾಡ ಕರ್ನಾಟಕ ಸಂಶೋಧನಾ ಸಂಸ್ಥೆಯಲ್ಲಿ ಮೂರು ದಿನ ಉಪನ್ಯಾಸ ನೀಡಿದ್ದಾರೆ.ದೇಶದ ಪ್ರಮುಖ ಪತ್ರಿಕೆಗಳಲ್ಲಿ ಯಕ್ಷಗಾನ ಕುರಿತು ತಜ್ಞ ಲೇಖನ ಬರೆದಿದ್ದಾರೆ. ಯಕ್ಷಗಾನವನ್ನು ಪ್ರಥಮ ಬಾರಿ ಸೀಮೋಲ್ಲಂಘನ ಮಾಡಿಸಿ ಲಂಡನ್‌ನಲ್ಲಿ ಪ್ರದರ್ಶನ ಕೊಟ್ಟಿದ್ದಾರೆ.ದೇಶ ವಿದೇಶಗಳಲ್ಲಿ ತಮ್ಮ ಯಕ್ಷಗಾನ ತಂಡದ ಪ್ರದರ್ಶನ ನೀಡಿದ್ದಾರೆ. ವಿಶ್ವದಾದ್ಯಂತ ಉಪನ್ಯಾಸ ನೀಡಿದ್ದಾರೆ.ಸಂವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.

ಸಂಸ್ಕೃತಿಯು ಪರಂಪರೆಯಿಂದ ನೆಡವಳಿಕೆಯಿಂದ ಉಳಿಯುವಂತಹ ವಸ್ತುವೇ ವಿನಾ ಉಪನ್ಯಾಸ, ಕಾಯ್ದೆ ಕಾನೂನಿನಿಂದ ರಕ್ಷಿಸ ಬಹುದಾದದ್ದಲ್ಲ ಎಂದ ಕಾರಂತರು ಕಲೆಯ ಪ್ರತಿಷ್ಠೆಯನ್ನು ಅರಿತು ಅದರ ಮುಂದೆ ನಮ್ರರಾಗಿ ಬಾಳಿ ಬದುಕುವುದರಿಂದಲೇ ಅದನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.

ಯಕ್ಷಗಾನದಲ್ಲಿ ಅತಿ ಮಾತುಗಾರಿಕೆ ಕುರಿತು ಕಾರಂತರಿಗೆ ಕೋಪವಿತ್ತು."ಇದೇನು ರಂಗಭೂಮಿಯೋ ವಾದಭೂಮಿಯೋ "ಎಂದವರು ಪ್ರಶ್ನಿಸಿದ್ದರು. ರಾಮ ಸೀತೆಯವರ ನಡುವಿನ ವಾದ ನೋಡಿದಾಗ ಮುಂದೆ ಅವರಿಬ್ಬರೂ ಒಟ್ಟಿಗೆ ಬಾಳುವುದುಂಟೇ ಎಂದವರು ಪ್ರಶ್ನಿಸಿದ್ದರು. ಪಾತ್ರದಾರಿಗಳು ಪಾತ್ರದ ಶೀಲವನ್ನು ತಿಳಿಯಲೆತ್ನಿಸದೇ ಪಾತ್ರ ಪ್ರತಿಪಾದನೆ ಮಾಡದೇ ಪಾತ್ರಗಳ ವಕಾಲತ್ತು ಪಡೆದವರಂತೆ ಜಗಳಕ್ಕೆ ನಿಲ್ಲುತ್ತಾರೆ ಎಂದು ಕಾರಂತರು ಕಿಡಿಕಾರಿದ್ದಾರೆ. ರಂಗಭೂಮಿಗೆ ಕುಣಿತವನ್ನೇ ತಿಳಿಯದ ಅಡ್ಡ ಕಸುಬಿಗಳು ಬಂದಿದ್ದಾರೆ. ಪಾತ್ರದಾರಿಯಾದವ ತನ್ನ ವಾಕ್ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡು ಮಾಡುತ್ತಿರುವ ಅಪಚಾರ ಕಾರಂತರನ್ನು ಕೆರಳಿಸಿದೆ. ಇಂತಹ ವಿಚಾರದಲ್ಲಿ ಬರೆದರೆ ಜೋಕೆ, ಕಾರಂತರಿಗೆ ಸಂಶೋಧಿಸುವ ಕೆಲಸವೇಕೆ ಎನ್ನುವ ಉದ್ಧಟ ಪ್ರವೃತ್ತಿ ಪ್ರದರ್ಶಿಸುವವರ ಕುರಿತೂ ಅವರಿಗೆ ಕೋಪ ಮತ್ತು ವಿಷಾದ ಇದೆ.ಜನ ಸಾಮಾನ್ಯರಿಗೋ ಇತರರ ಜಗಳ ನೋಡುವುದು ಎಂದರೆ ಎಲ್ಲಿಲ್ಲದ ಸಂತೋಷ.ಹೀಗೆಂದೇ ಯಕ್ಷಗಾನದಲ್ಲಿ ವೀರರಸ ಪ್ರಕರಣ ಬೆಳೆದಷ್ಟು ಉಳಿದ ರಸಗಳು ಬೆಳೆದಿಲ್ಲ ಎಂದವರು ದಾಖಲಿಸಿದ್ದಾರೆ.

ಸಭಾಲಕ್ಷಣ, ವೇಷ ಭೂಷಣ ,ಪದ್ಯ, ಕುಣಿತ, ಹಾವಭಾವ ಎಲ್ಲದರ ಕುರಿತೂ ಕಾರಂತರ ಸೂಕ್ಷ್ಮ ಮನಸ್ಸು ಚಿಂತಿಸಿದೆ. ಅದು ಮೂಲದಲ್ಲಿ ಹೇಗಿತ್ತು?,ಅದು ಹೇಗಿದ್ದರೆ ಸೂಕ್ತ,ಅದರ ಅಪಚಾರ ದಿಂದಾಗುವ ನಷ್ಟ ಏನು ಎಂಬಿತ್ಯಾದಿ ಸಂಗತಿಗಳನ್ನು ಅವರು ಚರ್ಚಿಸಿದ್ದಾರೆ. ಕಲೆಯ ಎಲ್ಲಾ ಪ್ರಾಕಾರಕ್ಕೂ ಅವಕಾಶವಿರುವ ವಿಶ್ವ ಶ್ರೇಷ್ಠವಾದ ಯಕ್ಷಗಾನ ನಮ್ಮ ಪೂರ್ವಿಕರಿಂದ ನಮಗೆ ದೊರಕಿದ ಅಮೂಲ್ಯ ನಿಧಿ,ಅದನ್ನು ಶುದ್ಧವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದಿದ್ದಾರೆ ಕಾರಂತರು.

ಕಾರಂತರ ಈ ಕೃತಿಯಲ್ಲಿ ಹಾರಾಡಿ ರಾಮ,ಸಕ್ಕುಟ್ಟು ಲಕ್ಷ್ಮೀನಾರಾಯಣ, ಕೆರೆಮನೆ ಮಹಾಬಲ ಹೆಗಡೆ,ಮಂಜುನಾಥ, ಬಾಲಕೃಷ್ಣ, ವೆಂಕಟರಮಣ,ಮುಂತಾದವರ ವೇಷದ ಚಿತ್ರವಿದೆ. ಈ ಕಲಾವಿದರ ಚಿತ್ರವಾಗಲೀ ಭಾಗವತಿಕೆಯ ಪದ್ಯವಾಗಲೀ ಕಾರಂತರು ಸಂಗ್ರಹಿಸದಿದ್ದರೆ ಇಂದು ಉಳಿಯುತ್ತಲೇ ಇರಲಿಲ್ಲ .ಸಾಹಿತಿಯಾಗಿ, ವ್ಯಕ್ತಿಯಾಗಿ, ಪರಿಸರ ತಜ್ಞರಾಗಿ,ವಿಜ್ಞಾನ ಲೇಖಕರಾಗಿ, ನುಡಿಗಂಟು ರಚನಾಕಾರರಾಗಿ, ಲೋಕ ಸಂಚಾರಿಯಾಗಿ,ಮಕ್ಕಳ ಮನೋವಿಕಾಸ ತಜ್ಞರಾಗಿ, ಹೋರಾಟ ಗಾರರಾಗಿ ಕಾರಂತರು ಹೇಗೆ ಸಾಧನೆಯ ಶಿಖರದಲ್ಲಿದ್ದಾರೋ ಹಾಗೇ ಯಕ್ಷಗಾನ ವಿಶಯದಲ್ಲೂ ಇದ್ದೇ ಇದ್ದಾರೆ.ಕಾರಂತರ ಹತ್ತು ನೂರು ಮುಖಗಳಲ್ಲಿ ಯಕ್ಷಗಾನ ಮುಖದ ಪರಿಚಯ ಬೇಕಾದವರು ಓದಲೇ ಬೇಕಾದ ಪುಸ್ತಕ 'ಯಕ್ಷಗಾನ ಬಯಲಾಟ '.

MORE FEATURES

Kavya Sambhava; ಬಹುಶಃ ಕವಿತೆಗಳ ಪ್ರಪಂಚಕ್ಕೆ ಒಂದು ಕಿಟಕಿಯ ಹಾಗಿವೆ

29-01-2025 ಬೆಂಗಳೂರು

“ಇಂಥ ಅನೇಕ ಕವಿಗಳ, ನಿಗೂಢ ಜಗತ್ತಿಗೆ ಕೊಂಡೊಯ್ಯುವ ಈ ಕೃತಿಯನ್ನು ಕವಿಗಳೂ ಮತ್ತು ಕಾವ್ಯಾಸಕ್ತರೂ ಓದಲೇಬೇಕು ಅನ್...

Mankri; ಸಮಾಜ ಹೆಣ್ಣಿಗೆ ಮಾಡುತ್ತಿರುವ ಮೋಸದ ಲೆಕ್ಕ ಸಿಗುವುದೇ ಇಲ್ಲ

29-01-2025 ಬೆಂಗಳೂರು

"ತಮ್ಮ ಕಾಲದ ಹೆಣ್ಣಿನ ಸಮಸ್ಯೆಗಳಿಗೆ ಮಿಡಿದಿರುವ ಕವಯಿತ್ರಿ ತಾನು ಹೆಣ್ಣಾಗಿ ಅನುಭವಿಸಿದ ನೋವು-ನಲಿವುಗಳನ್ನು ಇಲ್ಲ...

Reshme batte; ಇತಿಹಾಸದಲ್ಲೊಂದು ವರ್ತಮಾನದ ಪಯಣ

29-01-2025 ಬೆಂಗಳೂರು

"ಭಾರತ ಇರುವುದು ʻಮಹಾಮೇರೋಃ ದಕ್ಷಿಣೇ ಪಾರ್ಶ್ವೇʼ. ರೇಷ್ಮೆ ಮಾರ್ಗ ಇರುವುದು ಕಾಶ್ಮೀರಕ್ಕಿಂತ ಬಹಳ ಮೇಲ್ಭಾಗದಲ್ಲಿ ...