Reshme batte; ಇತಿಹಾಸದಲ್ಲೊಂದು ವರ್ತಮಾನದ ಪಯಣ


"ಭಾರತ ಇರುವುದು ʻಮಹಾಮೇರೋಃ ದಕ್ಷಿಣೇ ಪಾರ್ಶ್ವೇʼ. ರೇಷ್ಮೆ ಮಾರ್ಗ ಇರುವುದು ಕಾಶ್ಮೀರಕ್ಕಿಂತ ಬಹಳ ಮೇಲ್ಭಾಗದಲ್ಲಿ ಹಿಮಾಲಯದ ಹೊಸ್ತಿಲಲ್ಲಿ," ಎನ್ನುತ್ತಾರೆ ವಿನಾಯಕ ಭಟ್‌ ತದ್ದಲಸೆ. ಅವರು ವಸುಧೇಂದ್ರ ಅವರ 'ರೇಷ್ಮೆ ಬಟ್ಟೆ' ಕೃತಿ ಕುರಿತು ಬರೆದ ವಿಮರ್ಶೆ.

ಈ ಕಾದಂಬರಿಗೆ ಒಬ್ಬನೇ ನಾಯಕ, ಒಬ್ಬಳೇ ನಾಯಕಿ ಇಲ್ಲ. ಪ್ರತಿ ಅಧ್ಯಾಯ ಯಾರ ಹೆಸರಲ್ಲಿದೆಯೋ ಅವರೇ ಆ ಸಂದರ್ಭಕ್ಕೆ ಮುಖ್ಯ ಪಾತ್ರಗಳು. ಇಡೀ ಪುಸ್ತಕಕ್ಕೆ ರೇಷ್ಮೆ ಬಟ್ಟೆಯ ನವಿರೇ ನಾಯಕ ನಾಯಕಿ ಎಲ್ಲಾ. ಅದಕ್ಕಾಗಿ ಸವೆಸಿದ ವ್ಯಾಪಾರಿ ದಾರಿಯ ಸಾವಿರಾರು ಮೈಲಿಗಳ ಚಿತ್ರಣವೇ ರೇಷ್ಮೆ ಬಟ್ಟೆ ಕಾದಂಬರಿ. ಇದು ಕಲ್ಪನೆಗಿಂತ ಮಿಗಿಲಾದ ಚಿತ್ರಣ. ಹೂವೇ ಹೂವು ಅಂತಾರಲ್ಲ ಹಾಗೆ.

ಬಟ್ಟೆ ಎಂದರೆ ದಾರಿ, ಮಾರ್ಗ ಎಂಬ ಅರ್ಥ ವಿವರಣೆಯನ್ನು ಕಿಟ್ಟೆಲ್‌ ಪದಕೋಶದಿಂದಲೇ ಹೆಕ್ಕಿ ಒದಗಿಸುವುದರೊಂದಿಗೆ ಲೇಖಕ ವಸುಧೇಂದ್ರ ಪುಸ್ತಕಕ್ಕೆ ಅರ್ಥಗರ್ಭಿತ ಆರಂಭವನ್ನೇ ಕೊಟ್ಟಿದ್ದಾರೆ. ನಂತರದ ಪುಟಗಳಲ್ಲಿ ಚಿತ್ರಿಸಿರುವ ಸಿಲ್ಕ್‌ ರೂಟ್‌ ನಕ್ಷೆಯನ್ನು ಮತ್ತೆ ಮತ್ತೆ ನೋಡಿ ತಲೆಯೊಳಗೆ ಕೂರಿಸಿಕೊಂಡರೆ ಮುಂದೆ ಓದುವ ರೇಷ್ಮೆ ಪಯಣ ಸುಗಮ. ಇಲ್ಲವಾದಲ್ಲಿ ಎಲ್ಲ ಅಯೋಮಯ!

ಎರಡನೆ ಶತಮಾನದಲ್ಲಿ ನಡೆಯುವ ಈ ಕಥನ ಪ್ರತಿ ಹಂತದಲ್ಲೂ ಇವತ್ತಿಗೆ ಸಮೀಕರಣಗೊಳ್ಳುತ್ತಾ ಸಾಗುತ್ತದೆ.

* ಕಾಡಿನಲ್ಲಿ ಅಲೆಮಾರಿ ಬದುಕು ಬದುಕುವ ತುಷಾರ ಎನ್ನುವ ಜನಾಂಗದ ಯುವಜೋಡಿ, ಕಷ್ಟವಾದರೂ ನಾಡಿನಲ್ಲಿ ಅಂದರೆ ಪಟ್ಟಣದಲ್ಲಿ ಒಂದೆಡೆ ನೆಲೆ ನಿಂತು ತಮ್ಮ ಪುತ್ರನಿಗೆ ಅಕ್ಷರ ಕಲಿಸಿ ಬುದ್ಧಿವಂತನನ್ನಾಗಿ ಮಾಡಬೇಕೆಂಬ ತುಡಿತ ಹೊತ್ತು ನಗರಕ್ಕೆ ಬರುತ್ತದೆ. ಇದು ತಮ್ಮ ಮಕ್ಕಳಾದರೂ ಕಲಿತು ಉದ್ಧಾರವಾಗಲಿ ಎಂಬ ಈಗಿನ ಹಳ್ಳಿಯ ತುಸು ಓದಿದ/ಓದದವರ ಕನಸೂ ಆಗಿದೆ.

* ಪಾರಸಿಕರ ಮನೆಮಗನೊಬ್ಬ ಪರಂಪರಾನುಗತ ಕೃಷಿ ತೊರೆದು ಅಪ್ಪನ ಮನಸ್ಸಿಗೆ ವಿರುದ್ಧವಾಗಿ ಗಣಿಗಾರಿಕೆ ಕೆಲಸಕ್ಕೆ ಹೋಗುವುದು, ಅಲ್ಲಿ ಅರೆಪಾರಸಿಕ ಹುಡುಗಿಯ ಮೋಹಪಾಶದಲ್ಲಿ ಬೀಳುವುದು, ಪರಂಪರಾನುಗತ ಕುಲಕಟ್ಟುಪಾಡುಗಳು ಸಡಿಲಗೊಳ್ಳುತ್ತಹೋಗುವುದು, ವರ್ಣಸಂಕರಗಳ ಭೀತಿ ಇಂದಿಗೂ ಹಲವು ಹಿರಿಯರ ಲೊಚಗುಟ್ಟುವಿಕೆಯಂತೆ ಧ್ವನಿಸುತ್ತದೆ.

* ತುಷಾರ ಜನಾಂಗದವರು ಅಲೆದಾಟದಲ್ಲಿ ನಿರ್ದಿಷ್ಟ ವಸತಿ ಜಾಗಗಳನ್ನು ಅನುಭವದಿಂದ ಗುರುತಿಸಿಕೊಂಡಿರುತ್ತಾರೆ. ರೇಷ್ಮೆ ಮಾರ್ಗ ಅಂಥ ಒಂದು ಪ್ರದೇಶವನ್ನ ಹಾದು ಹೋದಾಗ ಅಲ್ಲಿ ಮಹಲುಗಳೆದ್ದು ಇವರ ಅಲೆದಾಟ ದಿಕ್ಕುತಪ್ಪುತ್ತದೆ. ಇದು ಥೇಟ್‌ ಇಂದಿನ ರಾಷ್ಟ್ರೀಯ ಹೆದ್ದಾರಿಯಿಂದ ಛಿದ್ರವಾದ ಹಳ್ಳಿಗಳ ಹಾಗೂ ನಿಯಮಿತ ಋತುಗಳಲ್ಲಿ ಭೇಟಿ ಕೊಡುವ ಉತ್ತರ ಕರ್ನಾಟಕದ ಕುರಿಗಾಹಿ ಸಮೂಹಗಳ ದಿಕ್ಕುತಪ್ಪಿದ ಪರಿಸ್ಥಿತಿಯೊಂದಿಗೆ ಸಾಮ್ಯತೆ ಇದೆ.

* ಕುಶಾನರ ಕನಿಷ್ಕ ಮೊದಲ ಬಾರಿಗೆ ನಾಣ್ಯ ಚಲಾವಣೆ ಆಜ್ಞೆ ಹೊರಡಿಸಿದಾಗ ಅದುವರೆಗೂ ವಸ್ತುವಿನಿಮಯ ಪದ್ಧತಿ ಮಾತ್ರ ಗೊತ್ತಿದ್ದ ಕೊಡು-ಕೊಳ್ಳುವವರಿಗೆ, ಎರಡು ಸಾವಿರ ವರ್ಷಗಳ ನಂತರ ನೋಟ್‌ ಬ್ಯಾನ್‌ ಆದಾಗ ಉಂಟಾದ ಅಯೋಮಯ ಸ್ಥಿತಿ ಅಂದೇ ಬಂದಿತ್ತಲ್ಲ ಎಂಬುದೂ ಬೆರಗು ಹುಟ್ಟಿಸುತ್ತದೆ!

* ಇಂದಿನ ಮಹಿಳೆಯರಿಗಿಂತ ಒಂದು ಹೆಜ್ಜೆ ಮುಂದೆ ಇರುವ ಮಹಿಳಾವಾದದ ಉತ್ತುಂಗವೊಂದು ಇಲ್ಲಿದೆ – ಸಗನೇಮಿ ಎಂಬ ನಾಡು ಸೇರಿದ ಕಾಡು ಮಹಿಳೆ ಪತಿಯನ್ನು ಅಪಾರ ಪ್ರೀತಿಸುತ್ತಿದ್ದರೂ ʻಸ್ತ್ರೀಯರ ಯೋನಿಯ ಮೇಲೆ ಪುರುಷ ಹಕ್ಕು ಸಾಧಿಸಲು ಸಾಧ್ಯವಿಲ್ಲ; ಅದು ಸ್ತ್ರೀಯದೇ ಹಕ್ಕುʼ ಎಂದು ಪ್ರತಿಪಾದಿಸುತ್ತ ತನಗೆ ಮರುಳಾದ ಬೌದ್ಧಬಿಕ್ಕುವಿನೊಂದಿಗೆ ವ್ಯಾಮೋಹವಿಲ್ಲದೇ ಒಂದಾಗುವ ನಿರ್ಧಾರ ಕೈಗೊಂಡಿದ್ದು ವಿದ್ಯುದಾಘಾತ ನೀಡುತ್ತದೆ!.

* ಇನ್ನು, ರೇಷ್ಮೆ ಉತ್ಪಾದಿಸುವ ತಾಂತ್ರಿಕತೆಯನ್ನು ಶತಮಾನಗಳವರೆಗೆ ಹೊರಜಗತ್ತಿಗೆ ಬಿಟ್ಟುಕೊಡದ, ಸಿಲ್ಕ್‌ ರೂಟ್‌ ಕಾರಣದಿಂದ ಅಪಾರ ಸಂಪತ್ತು ಶೇಖರಿಸಿದ ಚೀನಾ, ತನ್ನ ವಿಚಿತ್ರ ಭಾಷೆ, ಪರಂಪರೆ ಮತ್ತು ಇತರರಿಗೆ ಓದಲು ಬಾರದ ಲಿಪಿಯ ಕಾರಣಕ್ಕೆ ಇಂದಿನ ಅದೇ ನಿಗೂಢ ಚೀನಾ ಆಗಿಯೇ ಇತ್ತೆ ಎಂಬಂತೆ ಭಾಸವಾಗುತ್ತದೆ.

* ಮೂರ್ತಿಪೂಜೆ ಒಪ್ಪದ ಬೌದ್ಧಧರ್ಮದಲ್ಲಿ, ಮೂರ್ತಿಪೂಜೆಯೇ ಇಲ್ಲದ ಸನಾತನ ಧರ್ಮದಲ್ಲಿ ಮೂರ್ತಿಗಳೇ ದೇವರಾದ ಕೌತುಕಕ್ಕೆ ಮೂಲ ಯಾವುದು ಎಂಬುದೂ ಇಲ್ಲಿ ಉಂಟು.

ರೇಷ್ಮೆ ಮಾರ್ಗ ಭಾರತದಲ್ಲಿ ಹಾಯ್ದು ಹೋಗಿಲ್ಲ.

ಭಾರತ ಇರುವುದು ʻಮಹಾಮೇರೋಃ ದಕ್ಷಿಣೇ ಪಾರ್ಶ್ವೇʼ. ರೇಷ್ಮೆ ಮಾರ್ಗ ಇರುವುದು ಕಾಶ್ಮೀರಕ್ಕಿಂತ ಬಹಳ ಮೇಲ್ಭಾಗದಲ್ಲಿ ಹಿಮಾಲಯದ ಹೊಸ್ತಿಲಲ್ಲಿ.

ಚೀನಾ ಮಹಾಗೋಡೆಯ ಅಂಚಿನಿಂದ ಆರಂಭಗೊಂಡು ಮಹಾಮೇರು ಪರ್ವತದ ಪಶ್ಚಿಮದ ದಿಕ್ಕಿನಲ್ಲಿ ಹಾಯ್ದು ಯವನ ದೇಶದ (ಯುರೋಪ್) ಅಂಚನ್ನು ತಲುಪುವ ಮಹಾಮಾರ್ಗ. ಕುಭೀನದಿ ದಡ [ [ಕಾಬೂಲ್‌, ಕಂದಹಾರ್(ಗಾಂಧಾರ), ಪುರುಷಪುರ(ಪೇಷಾವರ)], ಹಿಂದೂಖುಷ್‌ ಪರ್ವತಶ್ರೇಣಿ(ಇಂದಿನ ಆಫ್ಘನ್), ಸೊಗ್ದಾ ನದಿ, ತಕ್ಷಶಿಲಾ, ಸಮರಖಂಡ, ಬಾಹ್ಲೀಕ, ಪ್ರಥುನಾಡು, ತಕ್ಲಾಮಕಾನ್‌ ಎಂಬ ಮರುಭೂಮಿ ಹೀಗೆ ಸಾವಿರಾರು ಮೈಲಿ ಹಾದುಹೋಗುತ್ತದೆ. ಆದರೂ ಅಲ್ಲಿ ಬರುವ ಹಲವು ಸಮುದಾಯಗಳು, ಹೆಸರುಗಳು, ಶಾಲೆಯ ಇತಿಹಾಸ ಪುಸ್ತಕದಲ್ಲಿ ಓದಿದ ಕುಶಾನರು, ಶಕರು, ಹೂಣರು ಈ ಎಲ್ಲರೂ ಒಟ್ಟೊಟ್ಟಿಗೆ ಮಸ್ತಕದಲ್ಲಿ ಬಂದು ಇಡೀ ಕಾದಂಬರಿಯ ಅಸಂಖ್ಯ ಪಾತ್ರಗಳು ಇಲ್ಲೇ ಎಲ್ಲೋ ಇದ್ದವೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ಕಥಾವಸ್ತುವೊಂದು ಎಲ್ಲೋ ನಡೆದದ್ದಾದರೂ ನಮ್ಮದೇ ಆಗುವ ಈ ಪರಿ ಅನನ್ಯ.

ʻರೇಷ್ಮೆ ಬಟ್ಟೆʼಯ ಪ್ರತಿ ಹೆಜ್ಜೆಯ ಸೂಕ್ಷ್ಮ, ಆಳ, ವಿಸ್ತಾರ, ವೈವಿಧ್ಯಮಯ, ಭಾವತೀವ್ರ, ಅಧ್ಯಯನಶೀಲ ಅಕ್ಷರ ಕುಸುರಿ ಒಮ್ಮೆ ಆ ಹಾದಿಯಲ್ಲಿ ನಾವೂ ಹೋಗಿಬರೋಣವೇ ಎಂಬ ಸಾಹಸದ ಹುಚ್ಚನ್ನು ಕೆರಳಿಸುವಂತಿದೆ.

MORE FEATURES

ಮನಶಾಸ್ತ್ರದ ಹೊಸ ಹೊಸ ಟರ್ಮಿನಾಲಾಜಿಯ ಪರಿಚಯ ನಮಗಿಲ್ಲಿ ಆಗುತ್ತದೆ

18-02-2025 ಬೆಂಗಳೂರು

“ಈ ಪುಸ್ತಕವು ಮನಸ್ಸಿನ ವರ್ತನೆಗೆ ಸಂಬಂದಿಸಿದಂತೆ ತುಂಬ ತರ್ಕ ಬದ್ದ ವಿಷಯಗಳನ್ನು ಒದಗಿಸಿದೆ. ಮಕ್ಕಳು-ಪೋಷಕರು, ಪ...

ನನ್ನ ಜೀವನದಲ್ಲಾದ ಅನುಭವಳಿಂದಾಗಿ ಈ ನಕಲಿ ಗಿರಾಕಿಗಳ ಬಣ್ಣ ಬಯಲಾಯಿತು

18-02-2025 ಬೆಂಗಳೂರು

“ಚಿಕ್ಕಮಗಳೂರಿನಲ್ಲಿ ಸೃಷ್ಟಿಸಿದ ಮತೀಯವಾದ, ಕೋಮುಸೌಹಾರ್ದವನ್ನು ಹಾಳುಮಾಡಲು ಮಾಡಿದ ಪ್ರಯತ್ನ, ಅದರಿಂದ ಕೆಲ ನಕಲಿ...

ಸಂವೇದನೆಗೆ ಒಳಪಡಿಸುವ ಕತೆಗಳಿವು

18-02-2025 ಬೆಂಗಳೂರು

“ಇದರಲ್ಲಿ ಸುಮಾರು 25 ಚಿಕ್ಕ ಕಥೆಗಳಿವೆ. ಇವೆಲ್ಲ ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊ...