Kavya Sambhava; ಬಹುಶಃ ಕವಿತೆಗಳ ಪ್ರಪಂಚಕ್ಕೆ ಒಂದು ಕಿಟಕಿಯ ಹಾಗಿವೆ


“ಇಂಥ ಅನೇಕ ಕವಿಗಳ, ನಿಗೂಢ ಜಗತ್ತಿಗೆ ಕೊಂಡೊಯ್ಯುವ ಈ ಕೃತಿಯನ್ನು ಕವಿಗಳೂ ಮತ್ತು ಕಾವ್ಯಾಸಕ್ತರೂ ಓದಲೇಬೇಕು ಅನ್ನಿಸುತ್ತದೆ,” ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ ಅವರು ನರೇಂದ್ರ ಪೈ ಅವರ “ ಕಾವ್ಯ ಸಂಭವ” ಕೃತಿ ಕುರಿತು ಬರೆದ ವಿಮರ್ಶೆ.

ನೀವು ಖ್ಯಾತ ವಿಮರ್ಶಕ ಮತ್ತು ಕಥೆಗಾರ, ನರೇಂದ್ರ ಪೈ ಸರ್ ಅವರನ್ನು ಫಾಲೋ ಮಾಡುತ್ತಿದ್ದರೆ, ಓದಿರದ, ಓದಲೇಬೇಕಾದ, ಲೇಖಕರ ಆಯ್ಕೆ ಕಷ್ಟವೇನಲ್ಲ. ಅವರ ಹೊಸ ಪುಸ್ತಕ, 'ಕಾವ್ಯ ಸಂಭವ' ಅಂಥ ಹಲವು ಕವಿಗಳನ್ನು ಪರಿಚಯಿಸುತ್ತದೆ.

ನಯರ್ ಮಸೂದ್, ಜೆನ್ನಿ ಎಪರ್ನ್ಬೆಕ್, ಎಲೆನಾ ಫರಾಂಟೆ, ವಿಜಯ ಕುಮಾರ್, ಅರುಣ್ ಕೋಲಟ್ಕರ್, ಭಾನು ಕಪಿಲ್, ವಿವೇಕ್ ನಾರಾಯಣ್, ಶಂಖ ಘೋಷ್, ಆದಿಲ್ ಜುಸ್ವಾಲ್, ಎಚ್ಚೆಸ್ಸಾರ್ ಮೂಲಕ ರಿಲ್ಕ, ಎಸ್ ದಿವಾಕರ್, ಜ ನಾ ತೇಜಶ್ರೀ, ಸಿದ್ದು ಸತ್ಯಣ್ಣನವರ್ ಮುಂತಾದವರು ಪ್ರಮುಖರು. ಕೃತಿಯ ತುಂಬಾ ಬೇಂದ್ರೆ, ಜಯಂತ್ ಕಾಯ್ಕಿಣಿ, ಯು ಆರ್ ಅನಂತಮೂರ್ತಿ, ಲಂಕೇಶ್, ಚಿತ್ತಾಲರು ಮತ್ತಿತರ ಅಭಿವ್ಯಕ್ತಿ ಶೈಲಿ, ಭಾಷೆಯ ಬಳಕೆ ಮುಂತಾದುವುಗಳ ಚರ್ಚೆಯೂ ಕಾಣಸಿಗುತ್ತದೆ.

ನನಗೆ ಕಾವ್ಯಗಳನ್ನು ಬರೆಯುವುದು ಮಾತ್ರವಲ್ಲ, ಓದಿ ಸಂಪೂರ್ಣವಾಗಿ ಗ್ರಹಿಸುವುದು ಕೂಡ ಕಷ್ಟವೇ. ಇದು ನನ್ನ ಮಿತಿ. ಸರಳವಾದವು ವಾಚ್ಯ ಅನಿಸಿಬಿಡುತ್ತವೆ ಮತ್ತು ಕ್ಲಿಷ್ಟವಾದವು ಒಳಗೆ ಬಿಟ್ಟುಕೊಳ್ಳುವುದೇ ಇಲ್ಲ. ಹಾಗಾಗಿ ಈ ಪುಸ್ತಕದ ಪ್ರಸ್ತಾವನೆಯನ್ನು ಓದುವಾಗ, ಕಾವ್ಯಗಳಷ್ಟೇ ಅಲ್ಲ, ಅದರ ಕುರಿತ ಟಿಪ್ಪಣಿಗಳು, ಅಂದಮೇಲೆ ಇದು ನನಗೆ ಕನೆಕ್ಟ್ ಆಗುವುದೋ ಇಲ್ಲವೋ ಎಂದು ದಿಗಿಲಾಗಿತ್ತು ಕೂಡ. ಆದರೆ ಒಂದೊಂದೇ ಅಧ್ಯಾಯ ಓದುತ್ತಾ ಹೋದಂತೆಲ್ಲಾ, ಕಾವ್ಯ ಸಂಭವಿಸುವ ಆ ದಿವ್ಯ ಕ್ಷಣಗಳು, ಅವನ್ನು ಬರೆಯುವವರ ಪ್ರತಿಭೆ, ಸವಾಲುಗಳು ಇತರೆ ಆಸಕ್ತಿ ಮೂಡಿಸಿದವು.

ಈ ಕೃತಿಯಲ್ಲಿ ಹಲವಾರು ಅಧ್ಯಾಯಗಳು ನನಗೆ ಬಹಳ ಇಷ್ಟವಾದವು. ಅದರಲ್ಲೂ ಒಂದನ್ನು ಆರಿಸಿಕೊಂಡು ಹೇಳಬೇಕೆಂದರೆ, ಕವಿ ಸಿದ್ದು ಸತ್ಯಣ್ಣನವರ್ ಅವರ ಕವಿತೆಗಳ ಕುರಿತ 'ಅಮೂರ್ತ ಅನೂಹ್ಯಗಳನ್ನು ಹಿಡಿವ ಕವಿತೆಗಳು' ಬಗ್ಗೆ ಹೇಳಿರುವ ಈ ಮಾತುಗಳು ಬಹುಶಃ ಕವಿತೆಗಳ ಪ್ರಪಂಚಕ್ಕೆ ಒಂದು ಕಿಟಕಿಯ ಹಾಗಿವೆ.

"ಹೆಚ್ಚಿನ ಸಲ ನಾವು ಕಾಣುವ ಕನಸುಗಳಿಗೆ, ಅದು ಅರೆ ಎಚ್ಚರ, ಅರೆ ಮಂಪರುಗಳ ನಡುವೆ ನಡೆದು ಹೋಗುವುದರಿಂದ ಒಂದು ಸ್ಪಷ್ಟ ಆಕಾರ ಇರುವುದಿಲ್ಲ. ನೆನಪಿರುವ ಕೆಲವೇ ಚಿತ್ರಗಳ ಆಧಾರದ ಮೇಲೆ ಅದಕ್ಕೊಂದು ಆಕೃತಿ ಕೊಡುವ ಯತ್ನ ನಡೆಯುವುದಾದರೂ ನಿಜವಾದ ಕನಸು ಅದೇ ಎನ್ನುವುದು ಖಾತ್ರಿಯಿರುವುದಿಲ್ಲ. ಹಾಗಿದ್ದೂ ಅದನ್ನೇ ಎರಡು ಮೂರು ಬರಿ ಹೇಳಿಕೊಂಡರೆ ಕೊನೆಗೆ ಅದೇ ಸತ್ಯವಾಗುತ್ತದೆ. ಕವಿತೆ ಕೂಡ ಹಾಗೆಯೇ. ಅದು ಕವಿ ಮಾತ್ರ ಕಾಣಬಲ್ಲ ಕನಸಿನಂತೆ. ಆದರೆ ಕತೆಗಾರನಾಗದೇ, ಆಕಾರ ಒದಗಿಸುವ ಶಿಲ್ಪಿಯಾಗದೆ, ಸ್ಪಷ್ಟಗೊಳಿಸುವ ಅರ್ಥಕಾರನಾಗದೆ ಕವಿತೆಯನ್ನು ಕನಸಿನಂತೆ ಹೇಳಬಲ್ಲವನಷ್ಟೇ ಕವಿಯಾಗುತ್ತಾನೆ."

ಅವರ ಕನ್ನಡಿಯ ಸಾವು ಕವಿತೆಯ ಈ ಸಾಲುಗಳು ಬಹಳ ಅನನ್ಯವಾಗಿವೆ, ಒಂದು ವಿಕ್ಷಿಪ್ತ ಇಮೇಜ್ ಮೂಡಿಸುತ್ತವೆ.

"ಕತ್ತರಿಸಿದ ಕಾಲು ಒಂದು ಕಡೆ
ಛಿದ್ರಗೊಂಡ ಕೈಗಳು ಒಂದು ಕಡೆ
ಚಲನೆಯುಂಟು ಅವಕ್ಕೂ ನಾನಲುಗಾಡಿದಂತೆ
ಚೂರು ಚೂರಾಗಿ
ಹರಿದು ಹಂಚಿ ಹೋಗಿದ್ದೇನೆ
ನಾನೊಬ್ಬನಲ್ಲ; ಹುಳುಗಳ ಗುಂಪು
ಬೂಚಿಗೂಡುವ ನಾನು ಎಷ್ಟು ವಿಧದಲ್ಲಿ ಸತ್ತಿರುವೆ?
ನೂರೆಂಟು ವಿಧದಲ್ಲಿ ವಿಕಾರವಾಗಿ ಸತ್ತಿರುವೆ
ಉತ್ತರ ಹೇಳಲು ಕನ್ನಡಿಯೊಂದು ನೂರೆಂಟು ಚೂರುಗಳಾಗಿ
ಸಾಯಬೇಕಾಯಿತು"

ಕಡೆಯಲ್ಲಿ ನರೇಂದ್ರ ಪೈ ಅವರ ಒಂದು ಕಿವಿಮಾತು:

"ಸತ್ಯಕ್ಕೆ ತೊಡಿಸುವ ಭಾಷೆಯ ಬಟ್ಟೆಯ ಬಗ್ಗೆ ಅತ್ಯಂತ ಎಚ್ಚರ ಅಗತ್ಯ. ಮನಸ್ಸಿಗೆ ಬಂದಿದ್ದು ಅಕ್ಷರದಲ್ಲಿ ಬರುವ ಹೊತ್ತಿಗೆ ವೇಷ ತೊಟ್ಟುಬಿಡುವ ಸೋಜಿಗವೊಂದು ಭಾಷೆಯ ರೋಚಕತೆಯೋ, ಮನಸ್ಸಿನ ರೋಚಕತೆಯೋ ತಿಳಿಯದ ರಹಸ್ಯ"

ಇಂಥ ಅನೇಕ ಕವಿಗಳ, ನಿಗೂಢ ಜಗತ್ತಿಗೆ ಕೊಂಡೊಯ್ಯುವ ಈ ಕೃತಿಯನ್ನು ಕವಿಗಳೂ ಮತ್ತು ಕಾವ್ಯಾಸಕ್ತರೂ ಓದಲೇಬೇಕು ಅನ್ನಿಸುತ್ತದೆ.

MORE FEATURES

ಮನಶಾಸ್ತ್ರದ ಹೊಸ ಹೊಸ ಟರ್ಮಿನಾಲಾಜಿಯ ಪರಿಚಯ ನಮಗಿಲ್ಲಿ ಆಗುತ್ತದೆ

18-02-2025 ಬೆಂಗಳೂರು

“ಈ ಪುಸ್ತಕವು ಮನಸ್ಸಿನ ವರ್ತನೆಗೆ ಸಂಬಂದಿಸಿದಂತೆ ತುಂಬ ತರ್ಕ ಬದ್ದ ವಿಷಯಗಳನ್ನು ಒದಗಿಸಿದೆ. ಮಕ್ಕಳು-ಪೋಷಕರು, ಪ...

ನನ್ನ ಜೀವನದಲ್ಲಾದ ಅನುಭವಳಿಂದಾಗಿ ಈ ನಕಲಿ ಗಿರಾಕಿಗಳ ಬಣ್ಣ ಬಯಲಾಯಿತು

18-02-2025 ಬೆಂಗಳೂರು

“ಚಿಕ್ಕಮಗಳೂರಿನಲ್ಲಿ ಸೃಷ್ಟಿಸಿದ ಮತೀಯವಾದ, ಕೋಮುಸೌಹಾರ್ದವನ್ನು ಹಾಳುಮಾಡಲು ಮಾಡಿದ ಪ್ರಯತ್ನ, ಅದರಿಂದ ಕೆಲ ನಕಲಿ...

ಸಂವೇದನೆಗೆ ಒಳಪಡಿಸುವ ಕತೆಗಳಿವು

18-02-2025 ಬೆಂಗಳೂರು

“ಇದರಲ್ಲಿ ಸುಮಾರು 25 ಚಿಕ್ಕ ಕಥೆಗಳಿವೆ. ಇವೆಲ್ಲ ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊ...