"ತಮ್ಮ ಕಾಲದ ಹೆಣ್ಣಿನ ಸಮಸ್ಯೆಗಳಿಗೆ ಮಿಡಿದಿರುವ ಕವಯಿತ್ರಿ ತಾನು ಹೆಣ್ಣಾಗಿ ಅನುಭವಿಸಿದ ನೋವು-ನಲಿವುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಸುಮ್ಮನೆ ಮಾತಾಡುವುದರಿಂದ ಪ್ರಯೋಜನವಿಲ್ಲ 'ಹೆಂಗಸಾಗಿ' ಎಂದು ಹೇಳುವ ಸಾಲು `ಗಂಡು ಸಮಾಜಕ್ಕೆ ಹೆಣ್ಣಿನ ಸಮಸ್ಯೆಗಳನ್ನು ಎಂದೂ ಅರಿಯಲಾಗದು' ಎಂದು ನೇರವಾಗಿ ಹೇಳುತ್ತದೆ," ಎನ್ನುತ್ತಾರೆ ಪ್ರೊ. ವಲಿ ಹಿರಿಯೂರು. ಅವರು ಫರ್ಹಾನಾಜ್ ಮಸ್ಕಿ ಅವರ ‘ಮಂಕ್ರಿ’ ಕೃತಿ ಕುರಿತು ಬರೆದ ಅನಿಸಿಕೆ.
ಮೇಲಿನ ಶಿರ್ಷಿಕೆ ಕವಯಿತ್ರಿಯ ಮೊದಲ ಪದ್ಯದಿಂದ ತೆಗೆದುಕೊಂಡಿದ್ದು, ಇಲ್ಲಿ ಹಲವಾರು ಕವಿತೆಗಳಲ್ಲಿ ಈ ಅನುಸಂಧಾನದ ಬಗ್ಗೆ ಚರ್ಚೆ ಇದೆ. ಇದು ಮುಖ್ಯವಾಗಿ ಮಹಿಳಾ ಸಂವೇದನೆಯ ಕವನಸಂಕಲನ. ಇಲ್ಲಿ ಹೆಣ್ಣಿನ ಸಮಸ್ಯೆಗಳಿಗೆ ಅಕ್ಕಮಹಾದೇವಿ, ಬುದ್ಧ, ಗಾಂಧಿ, ಅಂಬೇಡ್ಕರ್ ಮುಂತಾದವರಿಂದ ಪರಿಹಾರ ಕಾಣುವ ಪ್ರಯತ್ನ ಮಾಡಲಾಗಿದೆ. ತಾನು ದುಃಖದಿಂದ ನುಡಿಯುವ “ಎಣಿಸಿ ಎಣಿಸಿ ಮಾಡಿಟ್ಟುಕೊಳ್ಳಬೇಕು ಲೆಕ್ಕ” ಎಂಬ ಸಾಲುಗಳು ಈ ಸಮಾಜ ಹೆಣ್ಣಿಗೆ ಮಾಡುತ್ತಿರುವ ಮೋಸದ ಲೆಕ್ಕ ಸಿಗುವುದೇ ಇಲ್ಲ. ಅದು ಮುಗಿಯುವುದೂ ಇಲ್ಲ ಎಂಬುದನ್ನು ಧ್ವನಿಸುತ್ತದೆ. ಜಂಗಮತ್ವವನ್ನು ಬಹಳಷ್ಟು ಪ್ರೀತಿಸುವ ಕವಯಿತ್ರಿ ತಾನು ಮಾಯವಾಗಲು ಬಯಸುತ್ತಾಳೆ. ತಾನು ಮಾಯವಾಗುವುದು ಎಂದರೆ ಈ ಸಮಾಜದ ಪಾಲಿಗೆ ಇಲ್ಲದಂತೆ ಬದುಕುವುದು. ಈ ಸಮಾಜವನ್ನು ಲೆಕ್ಕಿಸದೆ ಅದನ್ನೇ ಮಾಯಮಾಡುವುದು. ಇಲ್ಲಿ ಪ್ರತಿಭಟನೆಯ ಎರಡು ಮಜಲುಗಳಿವೆ ಒಂದು “ನಿರ್ಲಕ್ಷಿಸುವುದು” ಮತ್ತೊಂದು “ಮಿತಿಗಳನ್ನೆಲ್ಲಾ ಮೀರುವುದು” ಈ ಎರಡೂ ಹಲವಾರು ಕವಿತೆಗಳಲ್ಲಿ ಕಂಡುಬಂದಿವೆ. ತಮ್ಮ ಕಾಲದ ಹೆಣ್ಣಿನ ಸಮಸ್ಯೆಗಳಿಗೆ ಮಿಡಿದಿರುವ ಕವಯಿತ್ರಿ ತಾನು ಹೆಣ್ಣಾಗಿ ಅನುಭವಿಸಿದ ನೋವು-ನಲಿವುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಸುಮ್ಮನೆ ಮಾತಾಡುವುದರಿಂದ ಪ್ರಯೋಜನವಿಲ್ಲ 'ಹೆಂಗಸಾಗಿ' ಎಂದು ಹೇಳುವ ಸಾಲು “ಗಂಡು ಸಮಾಜಕ್ಕೆ ಹೆಣ್ಣಿನ ಸಮಸ್ಯೆಗಳನ್ನು ಎಂದೂ ಅರಿಯಲಾಗದು” ಎಂದು ನೇರವಾಗಿ ಹೇಳುತ್ತದೆ.
ಯುದ್ಧ ಕವಿತೆಯ “ಟಿವಿ ಪರದೆಗೆಲ್ಲಾ ನೆತ್ತರು, ಧೂಳು ಮೆತ್ತಿಕೊಂಡಿದೆ” ಎಂಬ ಸಾಲು ಇಂದಿನ ದೃಶ್ಯಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಧೂಳು ಹಿಡಿಯುತ್ತಿರುವ ಮತ್ತು ಒಂದಲ್ಲಾ ಒಂದು ರೀತಿಯ ಯುದ್ಧಗಳಿಗೆ ಕಾರಣವಾಗುತ್ತಿರುವುದನ್ನು ಹೇಳಿದರೆ, “ಕವಿತೆಗಳೆಲ್ಲಾ ಸತ್ತುಹೋಗುತ್ತಿರುವಾಗ.....” ಎಂಬ ಸಾಲು ಕವಯಿತ್ರಿಯಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಕವಿತೆಗಳು ಸಾಯುವುದೆಂದರೆ ನಮ್ಮೆಲ್ಲಾ ನಂಬಿಕೆಗಳು ಸಾಯುವುದು. 'ಕಟ್ಟುವೆವೋ? ಕೆಡಿಸುವೆವೋ?' ಎಂಬ ಕವಿತೆ ಗೋಪಾಲಕೃಷ್ಣ ಅಡಿಗರ 'ಕಟ್ಟುವೆವು ನಾವು' ಕವಿತೆಯನ್ನು ನೆನಪಿಸುತ್ತದೆ; ಜೊತೆಗೆ ಅಂದು ಅಡಿಗರು ಹೇಳಿರುವ ಹೊಸ ನಾಡನ್ನು ಇನ್ನೂ ಕಟ್ಟಬೇಕಿದೆ ಎಂದನಿಸುವುದರ ಜೊತೆಗೆ ಅದು ಮುಗಿಯುವ ಸಾಧ್ಯತೆಗಳು ತುಂಬಾ ಕಡಿಮೆಯಾಗುತ್ತಿರುವ ಸಂಗತಿಗಳು ಜರುಗುತ್ತಿರುವುದನ್ನು ಕವಿತೆ ನೋಯುತ್ತಾ ನುಡಿದಿದೆ. ಇಲ್ಲಿ ಬರುವ “ಭಕ್ತರೇನು ಕುಡುಕರೇ? ಧರ್ಮಗಳಿಂದೇಕೆ ಅಮಲೇರುತ್ತಿದೆ” ಎಂಬ ಸಾಲು “ಧರ್ಮವು ಜನಸಾಮಾನ್ಯರ ಅಫೀಮು” ಎಂಬ ಸಾಲನ್ನು ನೆನಪಿಸುತ್ತದೆ. 'ಬಾವುಟ' ಕವಿತೆಯ “ಗುಡಿಸಲು ಬೀಳಿಸಬಾರದೆಂದು ಬಾವುಟ ಕಟ್ಟಿ ಇಟ್ಟಿರುತ್ತೇನೆ” ಎಂಬ ಸಾಲು ಇಂದು ಬದುಕಬೇಕೆಂದರೆ ತಮಗೆ ಇಷ್ಟವಿಲ್ಲದಿದ್ದರೂ ಯಾವುದಾದರೊಂದು ಸಂಘಟನೆಯ ಭಾಗವಾಗಬೇಕೆಂದು ಸೂಚಿಸುವುದರೊಂದಿಗೆ ಅಲ್ಪ ಸಂಖ್ಯಾತರ ಆತಂಕಗಳನ್ನು ಚಿತ್ರಿಸುತ್ತದೆ.
ಸಂಕಲನದಲ್ಲಿ ಮಂಕ್ತಿಯಲ್ಲಿ ಅನುಭವಗಳನ್ನು ತುಂಬಿಕೊಡುವ ಪ್ರಯತ್ನ ಮಾಡಲಾಗಿದೆ. “ಸೋರಿ ಹೋದವು ಇರಬೇಕು; ಇರುವವು ಸೋರಿ ಹೋಗಬೇಕು” ಎಂಬ ಆಶಯವಿದೆ. ಆದರೆ ಯಾವ ನೆನಪುಗಳು ಬೇಡ ಎನ್ನುತ್ತೇವೆಯೋ ಅವೇ ನಮ್ಮನ್ನು ಕಾಡುತ್ತವೆ. ಕವಿತೆಗಳಾಗುತ್ತವೆ. ಇಲ್ಲಿ ಮಹಿಳಾ ಸಂವೇದನೆಯೊಂದಿಗೆ ಕವಯಿತ್ರಿ ಪ್ರಾಧ್ಯಾಪಕಿಯಾಗಿರುವುದರಿಂದ ಸಾಮಾನ್ಯವಾಗಿ ನೀತಿ ಹೇಳುವ, ದೇಶಭಕ್ತಿ, ನಾಡು- ನುಡಿಯ ಅಭಿಮಾನ, ಸ್ವಾತಂತ್ರ್ಯ- ಸಮಾನತೆ ಮುಂತಾದ ಅಂಶಗಳ ಮೇಲೆ ಬೆಳಕು ಚೆಲ್ಲುವ ಹಲವು ಕವಿತೆಗಳು ರಚನೆಯಾಗಿವೆ.
ಸುಲಲಿತ, ಸರಳ ಹೆಣ್ಣುಗನ್ನಡದ ಕವಿತೆಗಳು ಸಹೃದಯಿಗಳಿಗೆ ನೇರವಾಗಿ ತಾಕುತ್ತವೆ. ಇಲ್ಲಿ ಬಣ್ಣ, ಮುಳ್ಳು, ಬಾವುಟ, ಕೊಳಕು ಕುಂಚ, ಜಂಗಮದಂತಹ ರೂಪಕಗಳನ್ನು ಕವಯಿತ್ರಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಸಹೃದಯರಿಗೆ ತನ್ನ ಎಲ್ಲಾ ಅನುಭವಗಳನ್ನು ಮುಟ್ಟಿಸುವ ಸಲುವಾಗಿ ಕೆಲವು ಕಡೆ ಕವಿತೆಗಳು ಹೆಚ್ಚು ವಿಸ್ತರಿಸಿಕೊಂಡಿವೆ.
“ಈ ಪುಸ್ತಕವು ಮನಸ್ಸಿನ ವರ್ತನೆಗೆ ಸಂಬಂದಿಸಿದಂತೆ ತುಂಬ ತರ್ಕ ಬದ್ದ ವಿಷಯಗಳನ್ನು ಒದಗಿಸಿದೆ. ಮಕ್ಕಳು-ಪೋಷಕರು, ಪ...
“ಚಿಕ್ಕಮಗಳೂರಿನಲ್ಲಿ ಸೃಷ್ಟಿಸಿದ ಮತೀಯವಾದ, ಕೋಮುಸೌಹಾರ್ದವನ್ನು ಹಾಳುಮಾಡಲು ಮಾಡಿದ ಪ್ರಯತ್ನ, ಅದರಿಂದ ಕೆಲ ನಕಲಿ...
“ಇದರಲ್ಲಿ ಸುಮಾರು 25 ಚಿಕ್ಕ ಕಥೆಗಳಿವೆ. ಇವೆಲ್ಲ ಸರಳ ಭಾಷೆಯ ಮೂಲಕ ಸುಲಭದಲ್ಲಿ ಅರ್ಥವಾಗುವಂತಹ ಸರಳ ಕತೆಗಳು. ಜೊ...
©2025 Book Brahma Private Limited.