Date: 04-12-2022
Location: ಬೆಂಗಳೂರು
“'ನನಗೆ ನನ್ನ ಮನೆಯಲ್ಲಿ ಚಿಕ್ಕ ಲೈಬ್ರರಿ ಮಾಡಬೇಕು ಎನ್ನುವ ಪುಟ್ಟ ಕನಸಿದೆ. ನಾನು ಕಲಿತಿರುವ ಎಲ್ಲ ಕೆಲಸಗಳನ್ನು ಸಾಯುವ ಮುನ್ನ ಬಡ ಮಕ್ಕಳಿಗೆ ಉಚಿತವಾಗಿ ಹೇಳಿಕೊಟ್ಟು, ನನ್ನಲ್ಲಿರುವ ವಿದ್ಯೆಯನ್ನು ನಾಲ್ಕು ಜನಕ್ಕೆ ಹಂಚಿಹೋಗಬೇಕು. ಮಗ ಪುನೀತನನ್ನು ಚೆನ್ನಾಗಿ ಓದಿಸಬೇಕು. ನಾನು ಸ್ಕ್ರಿಪ್ಟ್ ಬರಹ, ಮೇಕ್ಅಪ್ ಆರ್ಟಿಸ್ಟ್ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ತುಡಿತವಿದೆ” ಎನ್ನುತ್ತಾರೆ ಶಶಿರೇಖಾ. ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ‘ಶಶಿರೇಖಾ ಅವರ ಬದುಕಿನ ಯಾನ’ ಅವರ ಮಾತುಗಳಲ್ಲಿ ಹೀಗೆ ಕಟ್ಟಿಕೊಟ್ಟಿದ್ದಾರೆ...
ಶಾಲಾ ಸಮಯದಲ್ಲಿ ಹೆಚ್ಚು ಓದದಿದ್ದರೆ ಅಕ್ಷರ ಜ್ಞಾನ, ಸಾಹಿತ್ಯಾಸಕ್ತಿ ಬರುವುದು ಸುಲಭವಲ್ಲ. ದಿನವೂ ಏನಾದರೊಂದು ಬರೆಯುತ್ತ ಅದರಲ್ಲೂ ಪುಸ್ತಕ ಮಾಡುವಷ್ಟು ಬರೆದು ಜೊತೆಗೆ ನೇಯ್ಗೆ, ಟೈಲರಿಂಗ್, ಬ್ಯುಟಿಶಿಯನ್, ಮೇಕ್ಅಪ್ ಆರ್ಟಿಸ್ಟ್ ಹೀಗೆ ನಿರಂತರ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸದಾ ಚಟುವಟಿಕೆಯ ಲವಲವಿಕೆಯ ಹೆಣ್ಣುಮಗಳು ಮಾನಸ ಗಂಗೆ ಎಂಬ ಕಾವ್ಯ ನಾಮದಿಂದ ಗುರುತಿಸಿಕೊಂಡಿರುವ ಶಶಿರೇಖಾ ಅವರ ಬದುಕಿನ ಯಾನ ಅವರ ಮಾತುಗಳಲ್ಲಿ ಇಂದಿನ ನಿಮ್ಮ ಓದಿಗೆ....
ನನ್ನ ಹೆಸರು ಶಶಿರೇಖಾ. ಹುಟ್ಟಿದ್ದು ಬೆಂಗಳೂರಿನ ಶ್ರೀ ರಾಮಪುರದಲ್ಲಿ. ನಂತರ ಬೆಳೆದದ್ದು ಮಾಗಡಿ ರಸ್ತೆಯ, ಕೆ. ಪಿ. ಅಗ್ರಹಾರದಲ್ಲಿ. ಅಪ್ಪ ಅಮ್ಮನಿಗೆ ನಾವು ಮೂರು ಜನರು ಮಕ್ಕಳು. ಅಣ್ಣ ನಾನು ಮತ್ತು ತಂಗಿ. ನೇಕಾರಿಕೆ ನಮ್ಮ ವೃತ್ತಿ, ಬದುಕು, ಅನ್ನ. ಈಗ ಈ ವೃತ್ತಿಯಿಂದ ಒಂಚೂರು ಪರವಾಗಿಲ್ಲ ಎನ್ನುವ ಹಾಗಾಗಿದ್ದೇವೆ. ಆದರೆ ಆಗಿನ ಬಡತನ ಹೇಗಿತ್ತೆಂದರೆ ಹೀನಾಯ ಸ್ಥಿತಿ. ಅಪ್ಪ ಮಗ್ಗದ ಫ್ಯಾಕ್ಟರಿಗೆ ಹೋಗುತ್ತಿದ್ದರು. ಅಮ್ಮ ನಮ್ಮನ್ನೆಲ್ಲ ಮನೆಯಲ್ಲಿದ್ದು ನೋಡಿಕೊಳ್ಳುತ್ತಿದ್ದರು. ಕಡು ಬಡತನ. ಅದೇ ಹೊತ್ತಿಗೆ ಅಪ್ಪನಿಗೆ ಅಪಘಾತವಾಗಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಅವರು ಎಲ್ಲರಂತೆ ಸಾಮಾನ್ಯವಾಗಿ ಇರಲಿಲ್ಲ. ಹೇಗೇಗೋ ಇರೋವ್ರು, ಒಮ್ಮೊಮ್ಮೆ ಬಟ್ಟೆಯೇ ಇಲ್ಲದೆ ಊರೆಲ್ಲ ಸುತ್ತಾಡ್ತಿದ್ರು. ಆಗ ಅಮ್ಮನಿಗೆ ಅಪ್ಪನೂ ನಾಲ್ಕನೆಯ ಮಗುವಿನಂತಾಗಿಬಿಟ್ಟ. ನಾವು ದೇವಾಂಗದವರು. ಅಮ್ಮನ ಊರು ತಿಪಟೂರು. ನಮ್ಮ ಕುಲ ಕಸುಬು ಮಗ್ಗ ನೇಯುವುದು. ಅಪ್ಪನಿಗೆ ಅಪಘಾತವಾದಾಗಿನಿಂದ ಅಮ್ಮ ನಮ್ಮನ್ನೆಲ್ಲ ನೋಡಿಕೊಳ್ಳಲು ಇನ್ಸ್ಟಾಲ್ ಮೆಂಟ್ ನಲ್ಲಿ ಬಟ್ಟೆ ಮಾರುವ ವ್ಯಾಪಾರ ಮಾಡಲು ಪ್ರಾರಂಭಿಸಿದಳು. ಈ ವಾರ ಬಟ್ಟೆ ಕೊಟ್ಟರೆ ಮುಂದಿನವಾರ ಹೋಗಿ ಹಣ ಇಸ್ಕೊಂಡ್ ಬರುವ ಹಾಗಿರುತ್ತಿತ್ತು. ಅಮ್ಮ ಬಟ್ಟೆ ವ್ಯಾಪಾರ ಮಾಡುತ್ತಿದ್ದರೂ ಹಾಕಿಕೊಳ್ಳಲು ನಮ್ಮ ಹತ್ತಿರ ಸರಿಯಾಗಿ ಬಟ್ಟೆ ಇರುತ್ತಿರಲಿಲ್ಲ. ಬೇರೆಯವರ ಮನೆಗೆ ಬಟ್ಟೆ ಮಾರಲು ಹೋದಾಗ ಅವರ ಮನೆಯ ಮಕ್ಕಳ ಹಳೆ ಬಟ್ಟೆಗಳನ್ನು ಕೇಳಿ ತರುತ್ತಿದ್ದಳು. ಆ ಬಟ್ಟೆಗಳಲ್ಲಿಯೇ ನಮ್ಮ ಎಷ್ಟೋ ವರ್ಷದ ಬದುಕು ನಡೆದಿದೆ. ನನ್ನ ತಂಗಿ ಇನ್ನೂ ಹಸುಗೂಸು ಆಗಿದ್ದರಿಂದ ಅಮ್ಮ ರಸ್ತೆ, ರಸ್ತೆ ಬದಿಯಲ್ಲಿ ಕೂತು ಮಗುವಿಗೆ ಹಾಲುಣಿಸಿ ನಂತರ ವ್ಯಾಪಾರ ಮಾಡುತ್ತಿದ್ದಳು. ನಮ್ಮನ್ನೆಲ್ಲ ಬಡತನದಲ್ಲಿ ಸಾಕಲೇಬೇಕು ವಿಧಿಯಿಲ್ಲ. ಅಮ್ಮ ಏನೂ ಓದಿಲ್ಲ. ಬೆಂಗಳೂರಿನಂತಹ ನಗರದಲ್ಲಿ ನಮ್ಮನ್ನೆಲ್ಲ ಸಾಕಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಮ್ಮ ನಮ್ಮನ್ನೆಲ್ಲ ಸಾಕಿ ಹೊಟ್ಟೆ ಬಟ್ಟೆ ನೋಡಿಕೊಂಡು, ಅಪ್ಪನಿಗೆ ನಿಮ್ಹಾನ್ಸ್ ನಿಂದ ಮಾತ್ರೆ ತಂದುಕೊಡಬೇಕಿತ್ತು. ಇದರ ನಡುವೆ ನಮ್ಮನ್ನು ಶಾಲೆಗೆ ಸೇರಿಸಲು ಹರ ಸಾಹಸ ಪಡಬೇಕಾಯ್ತು. ಆಗ ನಾವು ಸೇರಿದ್ದ ಶಾಲೆಯಲ್ಲಿ ಒಂದೇ ಮನೆಯಿಂದ ಮೂರು ಜನ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಒಬ್ಬರಿಗೆ ಫೀಸ್ ಕಟ್ಟುವ ಹಾಗಿರಲಿಲ್ಲ. ಫ್ರೀ ಇರುತ್ತಿತ್ತು ಹಾಗಾಗಿ ನನ್ನ ತಂಗಿಗೆ ಫೀಸ್ ಕಟ್ಟುವ ಹಾಗಿರಲಿಲ್ಲ. ನನಗೆ ಮತ್ತು ಅಣ್ಣನಿಗೆ ತಿಂಗಳಿಗೆ ಹತ್ತು ರೂಪಾಯಿ ಫೀಸ್ ಕಟ್ಟಬೇಕಿತ್ತು. ಅಮ್ಮನಿಂದ ಸಾಧ್ಯವಾಗುತ್ತಿರಲಿಲ್ಲ. ಎಷ್ಟೋ ಸಲ ಶಾಲಾ ಫೀಸ್ ಕಟ್ಟಿಲ್ಲ ಅಂತ ವಾಪಾಸ್ ಕಳಿಸಿದ್ದಾರೆ' ಎಂದು ಬಾಲ್ಯದ ಆ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗುತ್ತಾರೆ ಶಶಿರೇಖಾ.
'ಹೇಗೋ ಪಾಡು ಬಿದ್ದು ಎಸ್. ಎಸ್. ಎಲ್. ಸಿ. ಆಯ್ತು. ಇನ್ನು ನಾವಂತೂ ಓದೋಕೆ ಆಗಲ್ಲ ಅಂತ ಅಣ್ಣ ನಾನು ನಿರ್ಧರಿಸಿ ನಾವಿಬ್ಬರೂ ಕೆಲಸಕ್ಕೆ ಸೇರಿಕೊಂಡು ತಂಗಿಯನ್ನು ಮುಂದೆ ಓದಿಸಿದೆವು. ನಾನು ಗಿಫ್ಟ್ ಸೆಂಟರ್ ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಮೊದಲ ತಿಂಗಳ ಸಂಬಳ ಅಂತ ನಾಲ್ಕನೂರು ರೂಪಾಯಿಗಳು ಬಂತು. ಜೊತೆಗೆ ಮನೆಯಲ್ಲಿ ಪೇಪರ್ ಕವರ್ ಮಾಡುತ್ತಿದ್ದೆವು. ಅಮ್ಮ ಅದನ್ನು ಮಾರ್ಕೆಟ್ ಗೆ ಹೋಗಿ ಕೊಟ್ಟು ಬರುತ್ತಿದ್ದಳು. ಹದಿನೈದನೇ ವಯಸ್ಸಿನಿಂದ ಇಪ್ಪತ್ತೊಂದನೇ ವರ್ಷದವರೆಗೂ ಕೆಲಸ ಮಾಡಿದೆ. ನಾನು ಕೆಲಸ ಬಿಡುವ ಹೊತ್ತಿಗೆ ನನ್ನ ಸಂಬಳ ಸಾವಿರದ ಎಂಟನೂರು ರೂಪಾಯಿ ಆಗಿತ್ತು. ಆ ದಿನಕ್ಕೆ ಅದೇ ಹೆಚ್ಚು. ವಯಸ್ಸಿಗೆ ಬಂದ ಮಕ್ಕಳು ಕೆಲಸಕ್ಕೆ ಹೋಗುತ್ತಾರೆ ಅಂತ ಅಮ್ಮ ವರ್ಷಕ್ಕೊಮ್ಮೆ ಮಾರ್ಕೆಟ್ ಅಥವಾ ಶಿವಾಜಿನಗರದಲ್ಲಿ ಫುಟ್ಪಾತ್ ಮೇಲೆ ಮಾರುವ ಹಳೆಯ ಬಟ್ಟೆಗಳನ್ನು ನಮಗೆ ತಂದು ಕೊಡುತ್ತಿದ್ದಳು. ಅಮ್ಮ ಹೇಗೋ ತನ್ನ ತವರೂರಾದ ತಿಪಟೂರಿಗೆ ನನ್ನನ್ನು ಮದುವೆ ಮಾಡಿಕೊಡುತ್ತಾಳೆ. ಅಜ್ಜಿ ಮನೆಯಲ್ಲಿ ಮೂರು ಮಗ್ಗಗಳಿದ್ದವು. ಅಮ್ಮನಿಗೆ ಇಲ್ಲಿಗೆ ಕೊಟ್ಟರೆ ಮಗಳು ಸುಖವಾಗಿರುತ್ತಾಳೆ ಅಂತ ಆಸೆ. ಮೊದಲು ದೀಪದಬತ್ತಿಗಳನ್ನು ಮಾಡುತ್ತಿದ್ದೆ. ಒಂದು ಪ್ಯಾಕ್ ಗೆ ಎಪ್ಪತ್ತೈದು ಪೈಸೆ ಕೊಡುತ್ತಿದ್ದರು. ಬತ್ತಿ ಮಾಡ್ತಾ ಮಾಡ್ತಾ ಕೈ ತುಂಬ ನೋವಾಗುತ್ತಿತ್ತು. ಎಷ್ಟೋ ಸಲ ಊಟ ಮಾಡುವಾಗ ಕೈಯಲ್ಲಿ ರಕ್ತ ಬರುತ್ತಿತ್ತು. ನಂತರ ಮಗ್ಗದ ಕುಚ್ಚು ಹಾಕುವುದನ್ನು ಕಲಿತೆ. ಜೊತೆಗೆ ಬೇಸಿಕ್ ಕಂಪ್ಯೂಟರ್ ಕ್ಲಾಸ್ ಗೆ ಸೇರಿಕೊಂಡು ಫೋಟೋ ಸ್ಟುಡಿಯೋದಲ್ಲಿ ಮೂರು ವರ್ಷ ತಿಪಟೂರಿನಲ್ಲಿ ಕೆಲಸ ಮಾಡಿದೆ. ನಂತರ ಮನೆ, ಕೆಲಸ ಎರಡೂ ನಿರ್ವಹಣೆ ಮಾಡುವುದು ಕಷ್ಟವೆನೆಸಿ ಅಲ್ಲಿ ಕೆಲಸ ಬಿಟ್ಟು ಮನೆಯಲ್ಲಿ ನೇಯ್ಗೆ ಮಾಡುವುದಕ್ಕೆ ಬಂದೆ. ನಮ್ಮ ಜೊತೆಗಿರುವ ಅಣ್ಣ ತಮ್ಮಂದಿರೆಲ್ಲ ಚೆನ್ನಾಗಿದ್ದಾರೆ. ನನ್ನ ಗಂಡ ಏನೂ ಓದಿಲ್ಲ ಅವರಿಗೆ ಮಗ್ಗ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಹೇಗಾದರೂ ಸರಿ ಇಲ್ಲಿಯೇ ಕೆಲಸ ಮಾಡಬೇಕು ಎಂದುಕೊಂಡು ಅವರ ಜೊತೆಗೆ ಬಾರ್ಡರ್ ಕುಚ್ಚು ಕಟ್ಟುತ್ತ ಮಗ್ಗದ ಕೆಲಸ ಕಲಿಯಲು ಪ್ರಾರಂಭಿಸಿದೆ. ಮೊದಲಿಗೆ ರೇಶಿಮೆ ಸೀರೆ ಕಲಿತೆ. ಮನೆಯಲ್ಲೇ ಮಗ್ಗ ಹಾಕಿಕೊಂಡೆವು. ಕೋವಿಡ್ ಸಮಯದಲ್ಲಿ ಮಗ್ಗ ಎಂಟು ತಿಂಗಳು ಬಾಗಿಲು ಹಾಕಬೇಕಾಗಿ ಬಂತು. ಆಗ ಬದುಕು ನಿರ್ವಹಣೆ ಮಾಡವುದು ಕಷ್ಟವಾಯಿತು ಟೈಲರಿಂಗ್ ಟಚ್ ಇದ್ದ ಕಾರಣ ಸಂಘದಿಂದ ಸಾಲ ತೆಗೆದುಕೊಂಡು ಧೈರ್ಯ ಮಾಡಿ ಒಂದು ಬೇಸಿಕ್ ಟೈಲರಿಂಗ್ ಮಷೀನ್ ತೆಗೆದುಕೊಂಡು ಜೊತೆಗೊಂದು ಬಟ್ಟೆಯಂಗಡಿ ಇಟ್ಟು ವ್ಯಾಪಾರ ಶುರು ಮಾಡಿದೆ. ಅದೃಷ್ಟ ಕೈ ಕೊಡ್ತು... ಬಟ್ಟೆ ಅಂಗಡಿ ಸರಿಯಾಗಿ ನಡೆಯದೆ ಕೊನೆಗೆ ಬಾಡಿಗೆ ಕಟ್ಟಲು ಆಗದ ಸ್ಥಿತಿಯೊದಗಿ ಬಂದು ಅಂಗಡಿ ಮುಚ್ಚಬೇಕಾಯ್ತು. ಆಮೇಲೆ ಮನೆಯಲ್ಲೇ ಬಟ್ಟೆ ಹೊಲಿಯಲು ಪ್ರಾರಂಭಿಸಿದೆ. ಕಷ್ಟಗಳೇನೋ ಬರುತ್ತವೆ ಆದರೆ ಅಂಜಬಾರದು ಧೈರ್ಯದಿಂದ ಎದುರಿಸಿ ನಡೆಯಬೇಕು'.
'ನನಗೆ ಸಾಹಿತ್ಯ ಅಂದ್ರೆ ಓದುವುದು ಅಷ್ಟೇ ಗೊತ್ತಿತ್ತು. ಕವಿಗಳು ಅಂದ್ರೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಅಷ್ಟೇ ಇರೋದು ಅಂದುಕೊಂಡಿದ್ದೆ. ನಂತರ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಪ್ ಎಲ್ಲವೂ ಪರಿಚಯವಾದ ಮೇಲೆ ಅಲ್ಲೆಲ್ಲ ಬರೆಯಲು ಪ್ರಾರಂಭಿಸಿದೆ. ಕೆಲವು ವರ್ಷದ ಹಿಂದೆ ನನ್ನ ಸ್ನೇಹಿತರೊಬ್ಬರು ಮಾನಸಗಂಗೆ ಎಂಬ ಹೆಸರು ನಿನಗೆ ತುಂಬ ಚೆನ್ನಾಗಿ ಸರಿ ಹೊಂದತ್ತೆ. ಅದನ್ನು ಉಳಿಸಿಕೊ ಅಂದರು. ಅಂದಿನಿಂದ ಮಾನಸಗಂಗೆ ಎಂಬ ಹೆಸರಿನಿಂದ ನನ್ನ ಹನಿ ಗವಿತೆಗಳನ್ನು ಬರೆಯಲು ಪ್ರಾರಂಭಿಸಿದೆ. ನಂತರ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನ ಇದರಲ್ಲೆಲ್ಲಾ ಭಾಗವಹಿಸುತ್ತಿದ್ದೆ. ನನಗೆ ರವಿ ಬೆಳಗೆರೆ ಎಂದರೆ ತುಂಬ ಇಷ್ಟ. ನಾನು ಅವರ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ. ಅವರನ್ನು ಗುರುವೆಂದರೆ ತಪ್ಪಾಗಲಾರದು. ಹುಬ್ಬಳ್ಳಿಯಲ್ಲೊಮ್ಮೆ ರವಿಬೆಳಗೆರೆ ಅವರ ಕಾರ್ಯಕ್ರಮವಿತ್ತು. ಅದರಲ್ಲಿ ನನ್ನನ್ನು ಸನ್ಮಾನ ಮಾಡಿದರು. ನನಗದು ತುಂಬ ಖುಷಿ ಕೊಟ್ಟ ದಿನ. ಹೀಗೆ ಹಲವಾರು ಕವಿಗೋಷ್ಠಿಗಳಲ್ಲಿ ಸನ್ಮಾನ ಮಾಡಿದ್ದಾರೆ. ಕಾಚಕ್ಕಿ ಪ್ರಕಾಶನದಿಂದ ನನ್ನ ಪುಸ್ತಕ "ಕತ್ತಲೊಂದಿಗೆ ಮಾತಿಗಿಳಿದ ಹಣತೆ" ಎನ್ನುವ ನನ್ನ ಹನಿಗವಿತೆಯ ಪುಸ್ತಕ ಬಿಡುಗಡೆಯಾಯಿತು. ನಾನು ಎಸ್ ಎಸ್ ಎಲ್ ಸಿ ಓದಿದ್ದರೂ ರವಿಬೆಳಗೆರೆ ಅವರ ಬರಹಗಳೇ ನಾನು ಪುಸ್ತಕ ಬರೆಯಲು ಸ್ಫೂರ್ತಿಯಾಗಿದ್ದು. ಓದು, ಬರಹ, ಈ ಸಾಹಿತ್ಯ ನನ್ನ ಅತ್ಯಂತ ಆಸಕ್ತಿದಾಯಕ ವಿಷಯಗಳು. ಇದರಲ್ಲಿ ನನಗೆ ಬಹಳ ಖುಷಿಯಿದೆ'.
'ನನಗೆ ನನ್ನ ಮನೆಯಲ್ಲಿ ಚಿಕ್ಕ ಲೈಬ್ರರಿ ಮಾಡಬೇಕು ಎನ್ನುವ ಪುಟ್ಟ ಕನಸಿದೆ. ನಾನು ಕಲಿತಿರುವ ಎಲ್ಲ ಕೆಲಸಗಳನ್ನು ಸಾಯುವ ಮುನ್ನ ಬಡ ಮಕ್ಕಳಿಗೆ ಉಚಿತವಾಗಿ ಹೇಳಿಕೊಟ್ಟು, ನನ್ನಲ್ಲಿರುವ ವಿದ್ಯೆಯನ್ನು ನಾಲ್ಕು ಜನಕ್ಕೆ ಹಂಚಿಹೋಗಬೇಕು. ಮಗ ಪುನೀತನನ್ನು ಚೆನ್ನಾಗಿ ಓದಿಸಬೇಕು. ನಾನು ಸ್ಕ್ರಿಪ್ಟ್ ಬರಹ, ಮೇಕ್ಅಪ್ ಆರ್ಟಿಸ್ಟ್ ಕ್ಷೇತ್ರದಲ್ಲಿ ಬೆಳೆಯಬೇಕೆಂಬ ತುಡಿತವಿದೆ. ಸದಾ ಹೊಸದೇನೋ ಮಾಡಬೇಕು ಕಲಿಯಬೇಕು ಎಂಬ ಹಂಬಲ ನನಗೆ. ಅವಮಾನ ಆದಲ್ಲೇ ಬೆಳೆಯಬೇಕು. ಅವಮಾನಿಸಿದವರೆದುರಲ್ಲಿ ಗಟ್ಟಿಯಾಗಿ ನಿಂತು ಬೆಳೆದು ಬದುಕಿ ತೋರಿಸಬೇಕು' ಎಂಬ ಗಟ್ಟಿಗಿತ್ತಿಯ ಈ ಕಥೆ ಇತರರಿಗೆ ಸ್ಫೂರ್ತಿಯಾಗಲಿ ಎಂಬ ಆಶಯ ನಮ್ಮದು.
ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.