ಶಶಿಧರ ತೋಡಕರ: ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು

Date: 17-10-2024

Location: ಬೆಂಗಳೂರು


"ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಆಸಕ್ತರ ಗಮನ ಸೆಳೆದಿದ್ದ ಶಶಿಧರ ತೋಡಕರ, ಇದೀಗ ಸಾಮಾಜಿಕ ಋಣ ಸಂದಾಯದ ಮಾದರಿಯಾಗಬಲ್ಲ ಎರಡು ಬೃಹತ್ ಗ್ರಂಥಗಳನ್ನು ಸಂಪಾದಿಸಿ ಗದಗಿನ ತೋಂಟದಾರ್ಯಮಠದಿಂದ ಪ್ರಕಟಿಸಿದ್ದಾರೆ," ಎನ್ನುತ್ತಾರೆ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ‘ಸಮಕಾಲೀನ ಪುಸ್ತಕ ಲೋಕ’ ಅಂಕಣದಲ್ಲಿ ಶಶಿಧರ ತೋಡಕರ ಅವರ ‘ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು’ ಕೃತಿ ಕುರಿತು ಬರೆದಿದ್ದಾರೆ.

ಇದು ಅಭಿನಂದನ ಗ್ರಂಥಗಳ ಸುಗ್ಗಿಯ ಕಾಲ. ಕನ್ನಡದ ಕಣ್ವ ಎಂದೇ ಹೆಸರಾಂತ ಬಿ. ಎಂ. ಶ್ರೀಕಂಠಯ್ಯನವರಿಗೆ ಅರ್ಪಿತವಾದ ‘ಸಂಭಾವನೆ’ ಅಭಿನಂದನ ಗ್ರಂಥದಿಂದ ಆರಂಭವಾದ ಈ ಪರಂಪರೆ ಅನೇಕ ವೈವಿಧ್ಯಗಳೊಂದಿಗೆ ಕನ್ನಡ ಪುಸ್ತಕ ಲೋಕದಲ್ಲಿ ತನ್ನದೇ ಒಂದು ಪ್ರಕಾರವೆನ್ನುವಂತೆ ಬೆಳೆದು ನಿಂತಿರುವುದು ಈಗ ಇತಿಹಾಸ. ಅಂತಹ ಇತಿಹಾಸದ ಪುಟಗಳಿಗೆ ಹೊಸ ಸೇರ್ಪಡೆ; ಡಾ. ಎನ್. ಜಿ. ಮಹಾದೇವಪ್ಪನವರ ಅಭಿನಂದನ ಗ್ರಂಥ “ದರ್ಶನದೀಪ್ತಿ” ಹಾಗೂ ಪ್ರಸಿದ್ಧ ಛಾಯಾಗ್ರಾಹಕ ಶ್ರೀ ಶಶಿ ಸಾಲಿಯವರ ಅಭಿನಂದನಗ್ರಂಥ “ನೆನಪು ಹರಿಗೋಲು” ಧಾರವಾಡದ ಹಿರೇಮಲ್ಲೂರು ಈಶ್ವರನ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿರುವ ಶಶಿಧರ ತೋಡಕರ ಮೂಲತಃ ಸಾಹಿತ್ಯದ ವಿದ್ಯಾರ್ಥಿ. ಅಪಾರವಾದ ಓದು, ಸಂಯಮದ ನಡವಳಿಕೆಗಳಿಂದ ಸಾಹಿತ್ಯಿಕ ಹಾಗೂ ಸಾಮಾಜಿಕ ಸಂದರ್ಭದಲ್ಲಿ ಹೆಸರಾಂತವರು. ಪಾಂಗಿತವಾಗಿ ಕುಳಿತು ಬರೆದರೆ ಆಕರ್ಷಕವಾಗಿ ಬರೆಯಬಲ್ಲ ಅವರ ಶಕ್ತಿ ಹೆಚ್ಚು ತೊಡಗಿಕೊಂಡಿರುವುದು ಸಂಘಟನೆ ಹಾಗೂ ಸೇವೆಗಳಲ್ಲಿ. ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಆಸಕ್ತರ ಗಮನ ಸೆಳೆದಿದ್ದ ಶಶಿಧರ ತೋಡಕರ, ಇದೀಗ ಸಾಮಾಜಿಕ ಋಣ ಸಂದಾಯದ ಮಾದರಿಯಾಗಬಲ್ಲ ಎರಡು ಬೃಹತ್ ಗ್ರಂಥಗಳನ್ನು ಸಂಪಾದಿಸಿ ಗದಗಿನ ತೋಂಟದಾರ್ಯಮಠದಿಂದ ಪ್ರಕಟಿಸಿದ್ದಾರೆ. ಈ ಎರಡೂ ಗ್ರಂಥಗಳ ಬೃಹತ್ತು ಹಾಗೂ ಮಹತ್ತುಗಳು ಸಂಪಾದಕರ ಶ್ರಮ ಹಾಗೂ ಮಹತ್ವಾಕಾಂಕ್ಷೆಯ ದ್ಯೋತಕವಾಗಿವೆ.

ದರ್ಶನ ದೀಪ್ತಿ - ಡಾ. ಎನ್. ಜಿ. ಮಹಾದೇವಪ್ಪನವರ ಅಭಿನಂದನ ಗ್ರಂಥ(2023)
ಸಂಪಾದಕರು: ಶಶಿಧರ ತೋಡಕರ
ಪ್ರಕಾಶಕರು: ವಚನ ಅಧ್ಯಯನ ಕೇಂದ್ರ
ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ಪುಟ: ರಾಯಲ್ ಆಕಾರದ 682; ಬೆಲೆ: 1000/-

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದರೂ ಉತ್ತರ ಕರ್ನಾಟಕದ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಸರಳ ಸಜ್ಜನಿಕೆಗೆ ಹೆಸರಾದ ಡಾ. ಮಹಾದೇವಪ್ಪನವರು ಈಗ ಎಂಬತ್ತಾರರ ಪ್ರಾಯದಲ್ಲೂ ಉತ್ಸಾಹದ ತೊರೆಯಾಗಿದ್ದು, ನಿರಂತರ ಓದು, ಬರಹ, ಚಿಂತನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ವಚನಗಳ ತಾತ್ವಿಕ ಅಧ್ಯಯನದಲ್ಲಿ ಮಹಾದೇವಪ್ಪನವರದು ದೊಡ್ಡ ಹೆಜ್ಜೆ ಗುರುತು. ಈಗಲೂ ನಿರಂತರವಾಗಿ ಅದೇ ಧ್ಯಾನದಲ್ಲಿ ಅವರಿರುತ್ತಾರೆ. ಪ್ರಾಧ್ಯಾಪಕರಾಗಿ, ತತ್ವಶಾಸ್ತ್ರಜ್ಞರಾಗಿ, ಅಧ್ಯಯನ ಗ್ರಂಥಗಳ ಲೇಖಕರಾಗಿ, ಹಲವು ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶಕ ಗುರುವಾಗಿ ಹಲವು ಮುಖಗಳ ಕಾರ್ಯನಿರ್ವಹಿಸಿರುವ ಮಹಾದೇವಪ್ಪನವರ ಸಾಮಾಜಿಕ ಋಣವನ್ನು ಮುಟ್ಟಿಸುವ ಒಂದು ಕೈಕಂಕರ್ಯವಾಗಿ ಈ ಬೃಹತ್ ಗ್ರಂಥ ರೂಪುಗೊಂಡಿದೆ.

ನಾಲ್ಕು ಮುಖ್ಯ ಭಾಗಗಳು ಹಾಗೂ ಅನುಬಂಧ ರೂಪದ ಐದನೆಯ ಭಾಗವನ್ನು ಹೊಂದಿರುವ ಗ್ರಂಥ; ರಾಯಲ್ ಆಕಾರದ ಆರು ನೂರಾ ಐವತ್ತಕ್ಕೂ ಹೆಚ್ಚು ಪುಟಗಳಲ್ಲಿ ವ್ಯಾಪ್ತವಾಗಿದೆ. ಮೊದಲ ಭಾಗ ನಾಡಿನ ಐವರು ಪೂಜ್ಯರ ಆಶೀರ್ವಚನಗಳು ಹಾಗೂ ಸಂದೇಶಗಳನ್ನು ಒಳಗೊಂಡಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಮ್ಮ ಸಂದೇಶದಲ್ಲಿ; “ತತ್ವಶಾಸ್ತ್ರ, ವಚನ ಸಾಹಿತ್ಯ, ಲಿಂಗಾಯತ ಸಿದ್ಧಾಂತ ಯಾವುದೇ ಧಾರ್ಮಿಕ ವಿಷಯವಿರಲಿ ಆಗ ನಮ್ಮ ಕಣ್ಣೆದುರಿಗೆ ಬರುವ ಅನೇಕ ವಿದ್ವಾಂಸರಲ್ಲಿ ಡಾ. ಎನ್. ಜಿ. ಮಹಾದೇವಪ್ಪನವರು ಒಬ್ಬರು. ಇಷ್ಟೇ ಅಲ್ಲ ವಚನಗಳ ಅನುವಾದ, ಸಂಕಲನ, ಪುನರ್ ಮುದ್ರಣದಲ್ಲಿಯೂ ಅವರದು ದೊಡ್ಡ ಹೆಸರು. ಜೊತೆಗೆ ವಚನ ಸಾಹಿತ್ಯ ಹಾಗೂ ತತ್ವಶಾಸ್ತ್ರವನ್ನು ಕೇವಲ ಬೋಧಿಸದೆ ಅದನ್ನು ತಮ್ಮ ಜೀವನದಲ್ಲಿ ಅಲವಡಿಸಿಕೊಳ್ಳುವುದರಲ್ಲಿ ಅವರಿಗೆ ಅಪಾರವಾದ ಒಲವು” ಎನ್ನುವುದರ ಮೂಲಕ ಡಾ. ಮಹಾದೇವಪ್ಪನವರ ವ್ಯಕ್ತಿತ್ವಕ್ಕೆ ಪ್ರಭಾವಳಿಯನ್ನು ನಿರ್ಮಿಸಿದ್ದಾರೆ. ಶರಣರ ಮಾತಿನಂತೆ ನುಡಿದಂತೆ ನಡೆಯುವ ಸಾತ್ವಿಕ ಸದಾಶಯದ ವ್ಯಕ್ತಿತ್ವ ಮಹಾದೇವಪ್ಪನವರದು ಎಂಬುದು ಇಲ್ಲಿ ದಾಖಲಾಗಿದೆ.

ಎರಡನೆಯ ಭಾಗ ಒಡನಾಡಿಗಳು ಮಿಡಿದ ಹೃದಯಸ್ಪರ್ಷಿ ಮಾತುಗಳ ಉಗ್ರಾಣವಾಗಿದೆ. ಇಪ್ಪತ್ತೊಂದು ಜನ ಹಿತೈಷಿಗಳ ಲೇಖನ ಇಲ್ಲಿ ಸಂಗ್ರಹಗೊಂಡಿದೆ. ‘ತತ್ತ್ವಶಾಸ್ತ್ರದ ಅನನ್ಯ ಪ್ರಾಧ್ಯಾಪಕ’ ಎಂಬ ಮೊದಲನೆಯ ಲೇಖನ ಪೂಜ್ಯ ತೋಂಟದ ಸಿದ್ಧರಾಮ ಮಹಾಸ್ವಾಮಿಗಳದು. “ಬಸವಾದಿ ಶರಣರ ವಚನಗಳನ್ನು ತಾತ್ತ್ವಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದವರಲ್ಲಿ ಡಾ. ಎನ್. ಜಿ. ಮಹಾದೇವಪ್ಪ ಅಗ್ರಗಣ್ಯರು. ಆಧುನಿಕ ವಿದ್ವಾಂಸರು, ಸಾಹಿತಿ-ಸಂಶೋಧಕರು ವಚನಗಳನ್ನು ಸಾಹಿತ್ಯಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಿದ್ದಾರೆ. ಆದರೆ ಶರಣರ ವಚನಗಳಲ್ಲಿರುವ ತಾತ್ತ್ವಿಕ ಅಂಶಗಳ ಬಗ್ಗೆ ಬರೆದವರು ಬಹಳ ಕಡಿಮೆ. ಈ ದಿಶೆಯಲ್ಲಿ ಡಾ. ಮಹಾದೇವಪ್ಪ ಅವರು ರಚಿಸಿದ ‘ವಚನಗಳಲ್ಲಿ ತತ್ತ್ವ ಮೀಮಾಂಸೆ’ ಹಾಗೂ ವಚನಗಳಲ್ಲಿ ಧರ್ಮ ಮತ್ತು ನೀತಿ’ ಎಂಬ ಕೃತಿಗಳು ಗಮನಾರ್ಹವಾಗಿವೆ” ಈ ಮಾತುಗಳು ಡಾ. ಮಹಾದೇವಪ್ಪನವರ ಅಧ್ಯಯನದ ಅನನ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಹಿರಿಯ ಸಂಶೋಧಕರಾದ ಡಾ. ವೀರಣ್ಣ ರಾಜೂರ ಅವರ ಮಾತುಗಳು ಡಾ. ಮಹಾದೇವಪ್ಪನವರ ಅಕಾಡೆಮಿಕ್ ಸಾಧನೆಗಳೊಂದಿಗೆ ಅವರ ವ್ಯಕ್ತಿತ್ವದ ಹಲವು ಮುಖಗಳನ್ನೂ ತೆರೆದಿಟ್ಟಿವೆ; “ಡಾ. ಎನ್. ಜಿ. ಮಹಾದೇವಪ್ಪನವರು ಅಂತಾರಾಷ್ಟ್ರೀಯ ಖ್ಯಾತಿಯ ತತ್ತ್ವಶಾಸ್ತ್ರಜ್ಞರು. ಬಸವತತ್ತ್ವನಿಷ್ಠ, ಸತ್ಯ-ಶುದ್ಧ ಸಾತ್ವಿಕ ಶರಣ ಬದುಕಿನ ಸದ್ದಿಲ್ಲದ ಸಾಧಕರು. ಅವರದು ಬಹುಮುಖ ಪ್ರತಿಭೆಯ ವಿರಳ ವ್ಯಕ್ತಿತ್ವ. ಅವರು ಅಧ್ಯಯನಶೀಲ ಪ್ರಾಧ್ಯಾಪಕರಾಗಿ, ಸಮರ್ಥ ಸಂಶೋಧನ ಮಾರ್ಗದರ್ಶಕರಾಗಿ, ವಿಭಾಗದ ದಕ್ಷ ಅಧ್ಯಕ್ಷರಾಗಿ, ಅನೇಕ ವಿಶ್ವವಿದ್ಯಾಲಯಗಳ ತತ್ವಶಾಸ್ತ್ರ ಅಭ್ಯಾಸ ಮಂಡಳಿ-ಪರೀಕ್ಷಾ ಮಂಡಳಿಗಳ ಸಕ್ರಿಯ ಸದಸ್ಯರಾಗಿ, ಇಂಗ್ಲಿಷ್ ಕನ್ನಡ ಉಭಯಭಾಷೆಗಳ ವಿಶಾರದರಾಗಿ, ಗಂಭೀರ ಚಿಂತನಶೀಲ ಬರಹಗಾರರಾಗಿ-ಬೋಧನೆ-ಸಂಶೋಧನೆ, ಆಡಳಿತ ಮತ್ತು ಬರವಣಿಗೆಗಳಲ್ಲಿ ಸವ್ಯಸಾಚಿತ್ಯವನ್ನು ಸಾಧಿಸಿದವರು”. ಹೀಗೆ ಈ ಭಾಗದ ಎಲ್ಲ ಲೇಖನಗಳೂ ಡಾ. ಮಹಾದೇವಪ್ಪನವರೊಂದಿಗಿನ ಆಪ್ತರ ಒಡನಾಟದ, ಕೌಟುಂಬಿಕ ಸ್ಪರ್ಷದ ಹಿನ್ನೆಲೆಯಲ್ಲಿ ಆತ್ಮೀಯವಾಗಿ ಮೂಡಿಬಂದಿವೆ. ಹಲವು ಅಭಿನಂದನ ಗ್ರಂಥಗಳ ಮುಖ್ಯಭಾಗವೇ ಇದಾಗಿರುತ್ತದೆ.

ಗ್ರಂಥದ ಮೂರನೆಯ ಭಾಗ –ಕೃತಿ ಸಮೀಕ್ಷೆ. ಡಾ. ಮಹಾದೇವಪ್ಪನವರು ಬರೆದ, ಸಂಪಾದಿಸಿದ ಒಟ್ಟೂ ಬರಹದ ಕುರಿತಾಗಿ ಇಲ್ಲಿಯ 28 ಲೇಖನಗಳು ಬೆಳಕು ಚೆಲ್ಲುತ್ತವೆ. ಅದರಲ್ಲೂ ಪರಿಭಾಷಾ ಕೋಶಗಳ ರಚನೆಯಲ್ಲಿ ಪಳಗಿದ ಕೈ ಮಹಾದೇವಪ್ಪನವರದು. ತತ್ತಶಾಸ್ತ್ರದ ಪಾರಿಭಾಷಿಕ ಕೋಶ, ವಚನ ಪರಿಭಾಷಾ ಕೋಶ ಹೀಗೆ ಅವರ ಗಣ್ಯ ಕಾಣ್ಕೆಗಳು ಸಂದಿವೆ. ಮತ್ತು ಆ ಮೊದಲಿನ ಕೋಶಗಳಿಗಿಂತ ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ತಮ್ಮ ಕಾರ್ಯವನ್ನು ಪೂರ್ಣಗೊಳಿಸಿವೆ. ತತ್ವಶಾಸ್ತ್ರದ ಜೊತೆಗೆ ವಚನ ಸಾಹಿತ್ಯವೂ ಮಿಳಿತವಾಗಿರುವುದರಿಂದ ಅವರ ಅಧ್ಯಯನ ಹಾಗೂ ಬರವಣಿಗೆಗಳಿಗೆ ಹೊಳಪು ಬಂದಿದೆ. ವಚನಗಳಲ್ಲಿ ಪ್ರಸಾದದ ಪರಿಕಲ್ಪನೆ, ವಚನಗಳಲ್ಲಿ ತತ್ವಮೀಮಾಂಸೆ, ಬಸವೇಶ್ವರರ ತತ್ವಮೀಮಾಂಸೆ, ವಚನಗಳಲ್ಲಿ ಧರ್ಮ ಮತ್ತು ನೀತಿ ಮುಂತಾದ ಕೃತಿ ರತ್ನಗಳು ಮಹಾದೇವಪ್ಪನವರ ಇಂತಹ ಪರಿಶ್ರಮದ ಸತ್ಫಲಗಳು. ಈ ಎಲ್ಲ ಕೃತಿಗಳ ಹಾಗೂ ಅವರ ಇತರ ಕೃತಿಗಳ ಕುರಿತಾದ ವಿವೇಚನೆ, ಒಳನೋಟಗಳು ಇಲ್ಲಿಯ ಬರಹಗಳಲ್ಲಿ ಹೊರಹೊಮ್ಮಿವೆ.

ಭಾಷಾಂತರ ಮಹಾದೇವಪ್ಪನವರ ಇನ್ನೊಂದು ಕಾರ್ಯಕ್ಷೇತ್ರ. ಲಿಂಗಾಯತ ಹಾಗೂ ಕ್ರೈಸ್ತಧರ್ಮ, ಡಾ. ಮಹಾದೇವಪ್ಪನವರ ಮೌಲ್ಯಯುತ ಅನುವಾದಗಳು ಎಂಬೆರಡು ಲೇಖನಗಳು ಇಲ್ಲಿ ಸಂಕಲಿತವಾಗಿವೆ. ಡಾ. ಅಂಬೇಡ್ಕರ್ ಭಾಷಣಗಳು ಹಾಗೂ ಬರಹಗಳು ಸಂಪುಟಗಳಲ್ಲಿ ಮಹಾದೇವಪ್ಪನವರ ಹಲವು ಅನುವಾದಿತ ಬರಹಗಳು ಪ್ರಕಟಗೊಂಡಿವೆ. ಈ ಕುರಿತು ಬರೆದಿರುವ ಡಾ. ಸದಾಶಿವ ಮರ್ಜಿಯವರು; “(ಅಂಬೇಡ್ಕರ್) ಇಂತಹ ಬಹುಮುಖ ಬರಹಗಾರನ ಬರಹಗಳನ್ನು ಗ್ರಹಿಸಿ ಇಂಗ್ಲಿಷಿನಿಂದ ಕನ್ನದಕ್ಕೆ ಭಾಷಾಂತರ ಮಾಡುವುದು ಸುಲಭವಾದ ಕಾರ್ಯವಲ್ಲ. ಆದರೆ ನೈಪುಣ್ಯ ಮತ್ತು ಆಳವಾದ ಅಧ್ಯಯನ ಮಾಡಿದ ವಿಷಯ ತಜ್ಞರಿಗೆ ಮಾತ್ರ ಇದು ನಿಲುಕುವ ಕೆಲಸ...ಡಾ. ಎನ್.ಜಿ.ಎಂ ಅತ್ಯಂತ ಪರಿಣಾಮಕಾರಿಯಾಗಿ ಅನುವಾದ ಮಾಡಿ ಕನ್ನಡಿಗರಿಗೆ ಡಾ. ಅಂಬೇಡ್ಕರ್ ಚಿಂತನೆ ಮತ್ತು ಕೊಡುಗೆಗಳನ್ನು ಓದುವಂತೆ ಮಹದುಪಕಾರ ಮಾಡಿದ್ದಾರೆ’ ಎಂದು ಹೇಳುವ ಮೂಲಕ ಮಹಾದೇವಪ್ಪನವರ ಅನುವಾದ ಕೊಡುಗೆಯನ್ನು ಗೌರವಿಸಿದ್ದಾರೆ.

ನಾಲ್ಕನೆಯ ಹಾಗೂ ಗ್ರಂಥದ ಇನ್ನೊಂದು ಬಹುಮುಖ್ಯ ಭಾಗ ‘ಲಿಂಗಾಯತ ದರ್ಶನಗಳು’ ಕುರಿತ ಲೇಖನಗಳ ಸಂಚಯ. ‘ಲಿಂಗಾಯತ ಧರ್ಮದ ಉಗಮ ವಿಕಾಸ ಮತ್ತು ಸ್ವರೂಪ’ ದಿಂದ ಆರಂಭಿಸಿ ಅದರ ಹಲವು ಪರಿಭಾಷೆಗಳಾದ ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲ, ಪರವಸ್ತು, ಲಿಂಗಾಂಗ ಸಾಮರಸ್ಯ ಮುಂತಾದವುಗಳ ಕುರಿತು ತಜ್ಞರು ಬರೆದ ಲೇಖನಗಳು ಇಲ್ಲಿವೆ. ಲಿಂಗಾಯತ ಮತವೊ ಧರ್ಮವೊ ಎಂಬ ಚರ್ಚೆ ವಿಶೇಷವಾಗಿ ನಡೆಯುತ್ತಿರುವ ಹಾಗೂ ಅದನ್ನೊಂದು ಸಾಂಸ್ಥಿಕ ಧರ್ಮವನ್ನಾಗಿ ಸ್ಥಾಪಿಸುವ ಪ್ರಯತ್ನಗಳು ಇನ್ನಿಲ್ಲದಂತೆ ಜರುಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಈ ಲೇಖನಗಳು ಒಂದು ತಾತ್ವಿಕ ಚೌಕಟ್ಟನ್ನು ಹಾಕಿಕೊಡುತ್ತವೆ. ಲಿಂಗಾಯತ ಧರ್ಮವಾದರೆ ಅದರ ವಿಶಿಷ್ಟ ಹಾಗೂ ಅನನ್ಯವಾದ ಸ್ವರೂಪ -ಸಿದ್ಧಾಂತಗಳೇನು? ಅದರ ತಾತ್ವಿಕ ಮೂಲ ಆಶಯಗಳೇನು? ಮುಂತಾದ ಹಲವು ಪ್ರಶ್ನೆಗಳನ್ನು ಎತ್ತಿಕೊಂಡು ಇಲ್ಲಿಯ ಲೇಖನಗಳು ಚರ್ಚೆ ನಡೆಸಿವೆ.

ಅಭಿನಂದನ ಗ್ರಂಥಗಳಲ್ಲಿ ಅಭಿನಂದಿತರಿಗೆ ಒದಗುವ ಒಂದು ಮುಖ್ಯ ಅವಕಾಶವೆಂದರೆ ಅವರ ಆತ್ಮಕಥನಾತ್ಮಕ ಬರವಣಿಗೆ. ಕೆಲವು ಬಾರಿ ಅದೇ ಮುಖ್ಯವಾಗುವುದೂ ಇದೆ. ಆದರೆ ಇಲ್ಲಿ ‘ಹಿಂದಿರುಗಿ ನೋಡಿದಾಗ’ ಎಂಬ ಸಂಕ್ಷಿಪ್ತ ಸ್ವರೂಪದ ಬರವಣಿಗೆ ಮೂಡಿಬಂದಿದೆ. ಹಾಗೂ ಡಾ. ಮಹಾದೇವಪ್ಪನವರ ಬದುಕಿನ ಹಲವು ಸಂಗತಿಗಳಿಗೆ ಧ್ವನಿಯಾಗಿದೆ. ಅದರಲ್ಲೂ ‘ಲಿಂಗಾಯತ ಅಧ್ಯಯನ’ಗಳೊಂದಿಗೆ ಅವರು ತೆರೆದುಕೊಳ್ಳಲು, ಸಂಶೋಧನೆ ನಡೆಸಲು ಕಾರಣವಾದ ಹಲವು ಸಂಗತಿಗಳು ವಿವರವಾಗಿ ಬಂದಿದಿವೆ. ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ವಿಕ್ಷಿಪ್ತತೆ, ಮುಖ್ಯಸ್ಥರ ಸಣ್ಣತನ ಇತ್ಯಾದಿಗಳು ಕೆಲವು ವ್ಯಕ್ತಿಗಳು ಯಾವುದೇ ಹುದ್ದೆಯಲ್ಲಿದ್ದರೂ ಅವರು ತಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂಬ ಸಾರ್ವತ್ರಿಕ ಸಂಗತಿಗೆ ಸಾಕ್ಷ್ಯ ನುಡಿಯುತ್ತವೆ. ಪ್ರೊ. ಮಹಾದೇವಪ್ಪನವರ ಬದುಕಿನ ಹಲವು ಮಗ್ಗುಲುಗಳನ್ನು ಚಿತ್ರಿಸುವ ಛಾಯ ಚಿತ್ರಗಳ ವಿಭಾಗವೂ ಪುಸ್ತಕದಲ್ಲಿ ಲಗತ್ತಾಗಿದೆ. ಧಾರವಾಡದಲ್ಲಿ ಜರುಗಿದ ಆಲ್ ಇಂಡಿಯಾ ಫಿಲಾಸಾಫಿಕಲ್ ಕಾಂಗ್ರೆಸ್‌ನ 86ನೆಯ ಅಧಿವೇಶನದ ಸರ್ವಾಧ್ಯಕ್ಷತೆಯ ಗೌರವ ಒಲಿದುಬಂದ ಕುರಿತೂ ವಿವರವಾಗಿ ತಿಳಿಸಿದ್ದಾರೆ. ಈ ಅಧಿವೇಶನದ ಭಾಷಣವೂ ಸಂಗ್ರಹವಾಗಿ ಡಾ. ಶಿವಾನಂದ ಶೆಟ್ಟರ್ ಅವರಿಂದ ಅನುವಾದಿತವಾಗಿ ಪ್ರಸ್ತುತ ಗ್ರಂಥದಲ್ಲಿ ಪ್ರಕಟವಾಗಿದೆ.

ಒಬ್ಬ ಘನತೆವೆತ್ತ ವ್ಯಕ್ತಿಯ ಸಾಧನೆಯ ಸಮಗ್ರ ಚಿತ್ರಣ ನೀಡುವಲ್ಲಿ ‘ದರ್ಶನದೀಪ್ತಿ’ ಅಭಿನಂದನ ಗ್ರಂಥ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ. ಒಟ್ಟೂ ಎಪ್ಪತ್ತಕ್ಕೂ ಹೆಚ್ಚು ಲೇಖಕರಿಂದ ಬರೆಸಿರುವ ಸಂಪಾದಕರ ತಾಳ್ಮೆ ನಿಜಕ್ಕೂ ಮೆಚ್ಚಬೇಕಾದದ್ದು. ಜೊತೆಗೆ ಪುಸ್ತಕದ ಸಿದ್ಧತೆಯ ಎಲ್ಲ ಅಂಗಗಳಲ್ಲಿಯೂ ಸಂಪಾದಕ ಶ್ರೀ ಶಶಿಧರ ತೋಡಕರ ಅವರ ಪುಸ್ತಕ ಪ್ರೀತಿಯ ಶ್ರದ್ಧೆ ಎದ್ದು ಕಾಣಿಸುತ್ತದೆ. ಇಂತಹ ಕಾರ್ಯಗೌರವಕ್ಕಾಗಿ ಅವರು ಅಭಿನಂದನಾರ್ಹರು.

ನೆನಪು ಹರಿಗೋಲು: ಶಶಿ ಸಾಲಿ ಅಭಿನಂದನ ಗ್ರಂಥ (2024)
ಪ್ರಧಾನ ಸಂಪಾದಕರು: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
ಸಂಪಾದಕರು: ಶಶಿಧರ ತೋಡಕರ
ಪ್ರಕಾಶಕರು: ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ,
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಎಡೆಯೂರು-ಡಂಬಳ-ಗದಗ
ರಾಯಲ್ ಆಕಾರದ 682 ಪುಟಗಳು; ಬೆಲೆ: 1000/-

ಪ್ರಿ. ಶಶಿಧರ ತೋಡಕರ ಅವರ ಸಂಪಾದತ್ವದಲ್ಲಿ ಪ್ರಕಟಗೊಂಡಿರುವ ಇನ್ನೊಂದು ಹೆಬ್ಬೊತ್ತಿಗೆ; ಖ್ಯಾತ ಛಾಯಾಚಿತ್ರಗಾರ ಶ್ರೀ ಶಶಿ ಸಾಲಿಯವರ ಅಭಿನಂದನ ಗ್ರಂಥ “ನೆನಪು ಹರಿಗೋಲು”. ಗಾತ್ರ ಹಾಗೂ ಪಾತ್ರಗಳಲ್ಲಿ ಮೊದಲಿನ ಗ್ರಂಥಕ್ಕೆ ಇದು ಸರಿಮಿಗಿಲಾಗಿದೆ. ರಾಯಲ್ ಆಕಾರದ 689 ಪುಟಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಗೌರವ ಗ್ರಂಥವಿದೆ. ಜೊತೆಗೆ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಪ್ರಧಾನ ಸಂಪಾದಕ ಮಾರ್ಗದರ್ಶನವೂ ದಕ್ಕಿದೆ.

ಶಿಕ್ಷಣ ಕಾಶಿ ಎಂದೇ ಹೆಸರಾಂತ ಧಾರವಾಡ ಅಪ್ರತಿಮವಾದ ಕಲಾಕೇಂದ್ರವೂ ಆಗುವುದರೊಂದಿಗೆ ರಾಜ್ಯದ ಸಾಂಸ್ಕೃತಿಕ ರಾಜಧಾನಿಯೆನಿಸಿದೆ. ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ ಹೀಗೆ ಹಲವಂದದ ಕಲಾ ಸಾಂಸ್ಕೃತಿಕ ಲೋಕಕ್ಕೆ ಧಾರವಾದದ ಕೊಡುಗೆ ಗಣ್ಯವಾದುದು. ಬೇಂದ್ರೆ, ಶ್ರೀರಂಗ, ಕಾರ್ನಾಡರಂಥ ಶ್ರೇಷ್ಠ ಸಾಹಿತಿಗಳು; ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ. ಬಸವರಾಜ ರಾಜಗುರು, ವಿದುಷಿ ಗಂಗೂಬಾಯಿ ಹಾನಗಲ್, ಉಸ್ತಾದ್ ಬಾಲೇಖಾನ್ ಅವರಂತಹ ಸಂಗೀತ ವಾದನ ಪಟುಗಳು; ಹಾಲಭಾವಿಯವರಂತಹ ಚಿತ್ರಕಲಾವಿದರು; ನಟರು, ನಿರ್ದೇಶಕರು ಹೀಗೆ ಹಲವು ಕ್ಷೇತ್ರಗಳ ಗಣ್ಯರು ಧಾರವಾಡದ ಹೆಮ್ಮೆಯಾಗಿದ್ದಾರೆ. ಅದೇ ಸಾಲಿಗೆ ಸೇರುವ ಛಾಯಾಚಿತ್ರ ಕ್ಷೇತ್ರದ ಪ್ರತಿಭಾವಂತ ಶಶಿ ಸಾಲಿಯವರು ಎನ್ನುವುದನ್ನು ಪ್ರಸ್ತುತ ಗ್ರಂಥ ಘಂಟಾಘೋಷವಾಗಿ ಸಾರುತ್ತದೆ.

ಉತ್ತರ ಕರ್ನಾಟಕದ ಅಪರೂಪದ ಸೃಜನಶೀಲ ಛಾಯಾಗ್ರಾಹಕ ಶಶಿ ಸಾಲಿ ಸಾಂಸ್ಕೃತಿಕ ಲೋಕದಲ್ಲಿ ಹೆಸರಾಂತವರು. ತನ್ನ ಕ್ರಿಯಾಶೀಲತೆಯ ಮುಖಾಂತರವೇ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ಜನಪ್ರಿಯತೆಯನ್ನು ಉಳಿಸಿಕೊಂಡು ಬೆಳಗಿದ ವ್ಯಕ್ತಿತ್ವ ಶಶಿ ಸಾಲಿಯವರದು. ಅವರ ಜೀವನ, ಸಾಧನೆಯನ್ನು ಗುರುತಿಸುವ, ಗೌರವಿಸುವ ಉದ್ದೇಶದ ಪ್ರಸ್ತುತ ಬೃಹತ್ ಗ್ರಂಥ ಶಶಿ ಸಾಲಿಯವರ ಬಹುಮುಖೀ ಸಾಧನೆಯ ಅನಾವರಣ ಮಾಡಿದೆ. ನಾಲ್ವರು ಪೂಜ್ಯರ ಆಶೀರ್ವಾದ ರೂಪದ ಸಂದೇಶಗಳ ಬಳಿಕ ಅವರ 61 ಒಡನಾಡಿಗಳು ಬಿಡಿಸಿಟ್ಟ ಆಪ್ತವಾದ ವ್ಯಕ್ತಿತ್ವದ ಚಿತ್ರಣಗಳು ಗ್ರಂಥದುದ್ದಕ್ಕೂ ಮೂಡಿಬಂದಿವೆ. ಕೆಲವು ಹಳೆಯ ಸಾಂದರ್ಭಿಕ ಲೇಖನಗಳಾದರೂ ಹಲವು ಹೊಸವು. ಮೊದಲನೆಯ ಲೇಖನದಲ್ಲೆ ತೋಂಟದ ಸಿದ್ಧಲಿಂಗಶ್ರೀಗಳು ಛಾಯಾಚಿತ್ರದ ಕಲೆಗಾರಿಕೆಯ ಮಹತ್ವವನ್ನು ಸಾರುವ ಎರಡು ಚಿತ್ರಗಳನ್ನು ಕೊಟ್ಟು ಇದು ಎಂತಹ ಶಕ್ತಿಶಾಲಿ ಮಾಧ್ಯಮ ಎಂಬುದನ್ನು ತೋರಿಸಿದ್ದಾರೆ.

ಸರ್ವಶ್ರೀ ಬಸವರಾಜ ಹೊರಟ್ಟಿ, ಕವಿ ಚೆನ್ನವೀರ ಕಣವಿ, ವಿದ್ವಾಂಸ ಡಾ. ಗುರುಲಿಂಗ ಕಾಪಸೆ, ಕಲಾ ಮೀಮಾಂಸಕ ಪ್ರೊ. ಸದಾನಂದ ಕನವಳ್ಳಿ, ಅಧಿಕಾರಿಯಾಗಿದ್ದ ಡಾ. ಸಿ. ಸೋಮಶೇಖರ, ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ವಿಜ್ಞಾನಿ ರಾಜಶೇಖರ ಭೂಸನೂರಮಠ... ಹೀಗೆ ಹಲವು ವಲಯಗಳ ಬರಹಗಾರರು ಇಲ್ಲಿ ಸಮ್ಮಿಳಿತಗೊಂಡಿದ್ದಾರೆ. ಮತ್ತು ಶಶಿ ಸಾಲಿಯವರ ಕಲಾ ನೈಪುಣ್ಯವನ್ನು ಭಿನ್ನ ಭಿನ್ನ ದೃಷ್ಟಿಕೋನದಿಂದ ನೋಡಿದ್ದಾರೆ.

ಹೊಳೆವ ಕಣ್ಣು, ಮುಖದಗಲ ಮಾಸದ ನಗೆ, ಮೆಲುಮಾತಿನ ಮೋಡಿಯ
ಕೃಷ್ಣವರ್ನದ ಈ ಚೆಲುವ, ಕ್ಷಣಾರ್ಧದಲ್ಲಿ ಮನಗೆಲುವ.
ಕೃಷ್ಣನ ಕೈಯಲ್ಲಿ ಕೊಳಲಿನಂತೆ, ಶಶಿಯ ಕೈಯಲ್ಲಿ ಕ್ಯಾಮರಾ
ಅದು ಕಿವಿಗೆ, ಇದು ಕಣ್ಣಿಗೆ, ಪರಿಣಾಮ ಮಾತ್ರ ಅದೇ> ರಸವರ್ಷಧಾರಾ.
ಎಂಬ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಕವಿತೆಯ ಸಾಲುಗಳು ಶಶಿ ಸಾಲಿಯವರ ವ್ಯಕ್ತಿತ್ವವನ್ನು ಅಕ್ಷರ ಚಿತ್ರದಲ್ಲಿ ಮೂಡಿಸಿವೆ.

ಅಭಿನಂದನ ಗ್ರಂಥಗಳಲ್ಲಿ ಅಭಿನಂದಿತ ವ್ಯಕ್ತಿಯ ಸಾಧನೆಯ ಕ್ಷೇತ್ರದ ಕುರಿತ ಬರಹಗಳನ್ನು ಸಂಗ್ರಹಿಸುವುದು ಒಂದು ವಿಧಾಯಕ ಕಾರ್ಯ. ಪ್ರಸ್ತುತ ಗ್ರಂಥದಲ್ಲಿ ಅದು ಅಲ್ಪಪ್ರಮಾನದಲ್ಲಾದರೂ ಈಡೇರಿದೆ. ‘ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದ ಛಾಯಾಗ್ರಹಣ- ಒಂದು ಚಿತ್ರಣ’ ಎಂಬ ಖ್ಯಾತ ಕಲಾವಿದ, ಕಲಾ ವಿಮರ್ಶಕ ಓ. ಪಿ. ಶರ್ಮಾ ಅವರ ಲೇಖನದ ಅನುವಾದ ಇಲ್ಲಿ ಪ್ರಕಟವಾಗಿದೆ. ಕ್ಯಾಮರಾದ ಉಗಮದಿಂದ ಆರಂಭಿಸಿ ಛಾಯಾಚಿತ್ರ ಕಲೆಯ ಹಲವು ಆಯಾಮಗಳನ್ನು ಈ ಬರಹ ಚರ್ಚಿಸಿದೆ. ಧಾರವಾಡದ ಸಾಂಸ್ಕೃತಿಕ ಜೀವನವನ್ನು ಎತ್ತರಿಸಿದ ಫೋಟೊ ಸ್ಟುಡಿಯೊಗಳ ಕುರಿತ ಶಶಿ ಸಾಲಿಯವರ ಬರಹ ಐತಿಹಾಸಿಕ ದಾಖಲೆಯ ರೀತಿಯದು. ಈ ಎಲ್ಲವುಗಳನ್ನೂ ಒಳಗೊಳ್ಳುವ ಛಾಯಾಗ್ರಹಣದ ಭೂತ-ವರ್ತಮಾನ-ಭವಿಷ್ಯಗಳನ್ನು ಚರ್ಚಿಸುವ ಲೇಖನ; “ಛಾಯಾಚಿತ್ರ ಅಂದು, ಇಂದು, ಮುಂದೆ”. ಇದೊಂದು ಅಕೆಡೆಮಿಕ್ ಶಿಸ್ತಿನ ಹಿನ್ನೆಲೆಯ ಬರಹವಾಗಿದ್ದು, ಮೌಲಿಕವಾಗಿದೆ.

ಗ್ರಂಥದ ಬಹುಮುಖ್ಯ ಹಾಗೂ ಗಣ್ಯ ಭಾಗವೆಂದರೆ ಶಶಿ ಸಾಲಿಯವರ ಆತ್ಮಕಥನಾತ್ಮಕ ಬರಹವನ್ನೊಳಗೊಂಡಿರುವ ಕೊನೆಯ ಬರಹ. ಸುಮಾರು ಎರಡು ನೂರಾ ಎಂಬತ್ತು ಪುಟಗಳ ಈ ಬರಹ ಒಬ್ಬ ವ್ಯಕ್ತಿಯ ಬದುಕಿನ ಏಳು ಬೀಳುಗಳ ಕಥನಾಗಿದೆ. ಅದಕ್ಕಾಗಿಯೇ ಈ ಆತ್ಮಕಥನದ ಶೀರ್ಷಿಕೆ; “ಕಪ್ಪು ಮೋಡದಲ್ಲೂ ಅರಳಿದ ಬೆಳ್ಳಿರೇಖೆ” ಸಾಲಿಯವರು ಇದನ್ನು ‘ವೈಯಕ್ತಿಕ ಬದುಕಿನ ಅನುಭವ ಕಥನ’ ಎನ್ನುವುದರೊಂದಿಗೆ “ಇದು ಆತ್ಮಕಥೆಯೇ?” ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಆರಂಭದಲ್ಲಿ ಅಭಿನಂದನ ಗ್ರಂಥ ಅರ್ಪಿಸುವ ಕುರಿತಾದ ತೋಂಟದ ಸಿದ್ಧಲಿಂಗ ಶ್ರೀಗಳ ಇಚ್ಛೆಯ ಕಥನ ಬಂದಿದೆ. ಅದೂ ತುಂಬಾ ಆಕರ್ಷಕವಾಗಿ ನಿರೂಪಿತಗೊಂಡಿರುವ ಬರಹ. ಮುಂದಿನದು ನಿಜಕ್ಕೂ ಒಬ್ಬ ವ್ಯಕ್ತಿ ರೂಪುಗೊಳ್ಳಲು ಸಾಧಕನಾಗಲು ಇರುವ ಹಾದಿಯ ಹೆಜ್ಜೆಗಳ ಕಠೋರ ಕಥನ. ಕೌಟುಂಬಿಕ, ಸಾಮಾಜಿಕ ಬದುಕಿನಲ್ಲಿ ಉಳಿ, ಚಾಣದ ಪೆಟ್ಟುಗಳನ್ನು ತಿನ್ನುತ್ತಾ ವ್ಯಕ್ತಿತ್ವ ಹೇಗೆ ಅರಳಿತು ಎಂಬುದರ ಕಥನ ಓದುಗರ ಕಣ್ಣಂಚಿನಲ್ಲಿ ಹಲವು ಬಾರಿ ನೀರು ಜಿನುಗಿಸುತ್ತದೆ. ಸಾಲಿಯವರ ಬರಹವೂ ನಿರರ್ಗಳವಾದುದು. ಓದಿನ ಶ್ರಮವನ್ನು ನೀಡಲಾರದ ಸರಾಗ ಕ್ರಮ ಅವರ ಬರವಣಿಗೆಯ ಶಕ್ತಿ.

ಶಶಿ ಸಾಲಿಯವರ ಆತ್ಮಕಥನ ಕೇವಲ ಒಬ್ಬ ವ್ಯಕ್ತಿಯ ಬದುಕಿನ ಬವಣೆಯ ನಿರೂಪಣೆ ಮಾತ್ರವಲ್ಲ. ಜೊತೆಗೆ ಛಾಯಾಚಿತ್ರ ಕಲೆಯ, ಸ್ಟುಡಿಯೊ ವ್ಯವಹಾರದ, ಜೀವನದ ಗುರಿಗಾಗಿ ಪರಿತಪಿಸುವ ಮಹಾತ್ವಾಂಕ್ಷೆಯ ಅನುಭವ ಕಥನವೂ ಹೌದು. ಕಾಲ ಕಾಲಕ್ಕೆ ಛಾಯಾಗ್ರಹಣ ವಲಯದಲ್ಲಿ ಉಂಟಾದ ಬದಲಾವಣೆ, ನಾವೀನ್ಯಗಳ ಚಿತ್ರಣವೂ ಇದರಲ್ಲಿ ಸೇರಿದೆ. ಹೀಗಾಗಿ ಇದು ಸಾಂಸ್ಕೃತಿಕ ಮಹತ್ವವನ್ನು ಪಡೆದ ಬರವಣಿಗೆಯಾಗಿ ಮೂಡಿಬಂದಿದೆ.

ಕೊನೆಯ ಭಾಗವಂತೂ ‘ಜೀವನ ಪಯಣ: ನೆನಪುಗಳ ಚಿತ್ರಣ’ ಶೇರ್ಷಿಕೆಯ ಭಾವಚಿತ್ರಗಳ ಗುಚ್ಛವಾಗಿದೆ. ಸ್ವತಃ ಭಾವಚಿತ್ರ ಕಲಾವಿದರಾದ ಶಶಿ ಸಾಲಿಯವರ ಕೈಚಳಕದ ಹಲವು ಮಾದರಿಗಳು ಇಲ್ಲಿ ಕಾಣಸಿಗುತ್ತವೆ. ಅಕ್ಷರಶಃ ನೂರಾರು ಸಂಖ್ಯೆಯಲ್ಲಿರುವ ಇವುಗಳನ್ನು ನೋಡುವುದೇ ಒಂದು ಸೊಗಸು.

ಇವೆರಡೂ ಹೆಬ್ಬೊತ್ತಿಗೆಗಳನ್ನು ಯೋಜಿಸಿ, ಸಂಪಾದಿಸಿ, ಕರಡು ತಿದ್ದಿ ಸುಂದರವಾಗಿ ರೂಪಿಸಿ ನಮ್ಮ ಕೈಗೆ ನೀಡಿರುವ ಶಶಿಧರ ತೋಡಕರ ಅವರ ಶ್ರಮವನ್ನು ಗುರುತಿಸಬೇಕು. ಹತ್ತಾರು ಲೇಖನ ಬರೆಸುವುದೇ ದೊಡ್ಡ ಸವಾಲಿನ ಕಾರ್ಯವಾಗಿರುವಾಗ ನೂರಾರು ಲೇಖನಗಳನ್ನು ಬೆನ್ನು ಬಿದ್ದು ಬರೆಸುವ ಸಂಪಾದಕನ ತಾಳ್ಮೆ ಅಪಾರವಾದುದಾಗಿರಬೇಕಾಗುತ್ತದೆ. ಶಶಿಧರ ತೋಡಕರ ಅವರ ಸಾಮಾಜಿಕ ಋಣ ಸಂದಾಯದ ಪ್ರಜ್ಞೆಯೂ ಈ ಎರಡೂ ಕಾರ್ಯಗಳ ಹಿಂದೆ ಕೆಲಸ ಮಾಡಿರುವುದನ್ನು ಕಾಣಬಹುದು. ಈ ಎರಡೂ ಅಭಿನಂದನ ಗ್ರಂಥಗಳ ಮೂಲಕ ಎರಡು ಭಿನ್ನ ಕ್ಷೇತ್ರಗಳ ಗಣ್ಯರನ್ನು ಗೌರವಿಸಿದ ಅವರ ಗುಣಪಕ್ಷಪಾತಿ ನಿಲುವಿಗೆ ಹಾರ್ದಿಕ ಅಭಿನಂದನೆಗಳು. ಮುಂದೆ ನಿಂತು ಈ ಎರಡೂ ಕೆಲಸಗಳನ್ನು ಆಗು ಮಾಡಿದ ಗದುಗಿನ ತೋಂಟದಾರ್ಯಮಠದ ಪೂಜ್ಯರಿಗೆ ಸಮಾಜ ಈ ಕಾರ್ಯಗೌರವಕ್ಕಾಗಿ ನಮಿಸಲೇ ಬೇಕು.

ಈ ಅಂಕಣದ ಹಿಂದಿನ ಬರಹಗಳು:
ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’
ಸಮಕಾಲೀನ ಪುಸ್ತಕಲೋಕದ ಅಘಟಿತ ಘಟನೆ

ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

MORE NEWS

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...

ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

09-10-2024 ಬೆಂಗಳೂರು

"ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ...