ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

Date: 16-10-2024

Location: ಬೆಂಗಳೂರು


"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕುತ್ತರಿ ಹಾಡು” ಇವರು ಮಂಗಳೂರಿನವರಾಗಿದ್ದು, ಕೊಡವನಲ್ಲದ ಕಾರಣದಿಂದ ಇವರನ್ನು ಅಷ್ಟೊಂದು ಪ್ರೀತಿ ಅಕ್ಕರೆ ಗೌರವಾಧಾರಗಳಿಂದ ಕಾಣಲಿಲ್ಲ ಕೊಡವರು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ‘ಪಂಜೆ ಮಂಗೇಶರಾಯರ ಕಮಲಾಪುರದ ಹೊಟ್ಲಿನಲ್ಲಿ’ ಕಥೆ ಬಗ್ಗೆ ವಿವರಿಸಿದ್ದಾರೆ.

ಹೊಸಗನ್ನಡ ಸಾಹಿತ್ಯ ಪರಂಪರೆಗೆ ನೂತನವಾದ ಚಿಂತನೆಯನ್ನು ಹುಟ್ಟು ಹಾಕಿ, ಶಿಶು ಸಾಹಿತ್ಯದ ಮೂಲಕ ಇಂದಿಗೂ ಸಹ ಅವಿಸ್ಮರಣೀಯರಾದವರೆಂದರೆ “ಪಂಜೆ ಮಂಗೇಶರಾಯರು”. ಕನ್ನಡ ಶಬ್ದ ಭಂಡಾರಿ, ಹಳೆಗನ್ನಡ ಕೇಸರಿ, ಪ್ರೌಢ ವಿದ್ಯಾರ್ಥಿ, ಮುಂತಾದ ಅನ್ವರ್ಥಕ ನಾಮಗಳಿಂದ ಕರೆಯಲ್ಪಟ್ಟವರು. “ಪಂಜೆಯವರನ್ನು ನೆನೆಸಿಕೊಂಡಾಗಲೆಲ್ಲಾ ಒಂದು ತುಂಬು ಬಾಳಿನ ಚಿತ್ರ ಕಣ್ಣ ಮುಂದೆ ಬರುತ್ತದೆ. ಒಂದು ಕಾಲು ಒಂದು ಜನತೆ ಇಂಥವರ ಹುಟ್ಟು ಬದುಕುಗಳಿಂದ ಒಂದು ವಿಶೇಷ ಬಗೆಯ ಕೃತಾರ್ಥತೆಯನ್ನು ಪಡೆಯುತ್ತದೆ”.

(ವಿ. ಸೀತಾರಾಮಯ್ಯ) ಹೊಸಗನ್ನಡ ಪ್ರವರ್ತಕರಲ್ಲಿ ಪಂಜೆಯವರು ಸಹ ಪ್ರಮುಖ ಪಾತ್ರ ವಹಿಸಿರುವರು ಇವರನ್ನು “ಕವಿಶಿಷ್ಯ, ಹರಟೆ ಮಲ್ಲ”, ಗುಪ್ತ ನಾಮಗಳಿಂದ ಕರೆಯುವುದುಂಟು. ವಾಸ್ತವಿಕ ಬದುಕು ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವೇನೋ ಎನಿಸುವಷ್ಟು ನಿಕಟವರ್ತಿಯಾಗಿರುವ ಪ್ರಯುಕ್ತ ಹಲವು ಹಾಸ್ಯ ನಾಮಗಳು ಹಣೆಪಟ್ಟಿಯಾಗಿರಲೂಬಹುದು.

“ನಾಗರ ಹಾವೇ ಹಾವೊಳು ಹೂವೆ
ಬಾಗಿಲ ಬಿಲದಲಿ ನಿನ್ನಯ ಠಾವೇ”,,,

ಎಂಬಂತಹ ಲಯಬದ್ಧ ಗೀತೆ ಕಿರಿಯರಿಂದ ಹಿರಿಯರ ತನಕ ಮನದಾಳದಲ್ಲಿ ಇರುವಂತದ್ದು. ‘ತೆಂಕಣಗಾಳಿಯಾಟ’, ಹಾಗೆ “ಹುತ್ತರಿ ಹಾಡು” ಕೊಡಗಿನ ಸಾಂಸ್ಕೃತಿಕ ಚಿತ್ರಣ ಜನ ಜೀವನವನ್ನು ಬಿತ್ತರಿಸುವಂತಹದ್ದು. ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕುತ್ತರಿ ಹಾಡು” ಇವರು ಮಂಗಳೂರಿನವರಾಗಿದ್ದು, ಕೊಡವನಲ್ಲದ ಕಾರಣದಿಂದ ಇವರನ್ನು ಅಷ್ಟೊಂದು ಪ್ರೀತಿ ಅಕ್ಕರೆ ಗೌರವಾಧಾರಗಳಿಂದ ಕಾಣಲಿಲ್ಲ ಕೊಡವರು. ಆದರೆ ಆಗ ಪ್ರೀತಿ ನೀಡದಿದ್ದರೂ ಹುತ್ತರಿ ಹಾಡಿನ ಮೂಲಕ ಪಂಜೆ ಅವರು ಮಾತ್ರ ತಮ್ಮ ಪ್ರೀತಿ ಪ್ರಶಂಸೆಯನ್ನು ಸಲ್ಲಿಸಿರುವುದು ಪಂಜೆಯವರ ವ್ಯಕ್ತಿ ವಿಶೇಷತೆಯನ್ನು ಪರಿಚಯಿಸುತ್ತಿದೆ. ಇಂದು ಅದೇ ಹುತ್ತರಿ ಹಾಡು ಕೊಡವರ ನಾಡಗೀತೆಯೆ ಎನಿಸುವಷ್ಟು ಮನಕ್ಕೆ ಹತ್ತಿರವಾಗಿದೆ. ಶಿಶು ಗೀತೆಗಳು, ಸಾಮಾಜಿಕ ಮತ್ತು ಚಾರಿತ್ರಿಕ ವಸ್ತುಗಳನ್ನೊಳಗೊಂಡ ಕಥೆಗಳನ್ನು ಬರೆದಿರುವರು. ನನ್ನ ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ, ಇತ್ಯಾದಿ. ಮೃದುಲ ದುರ್ಗಾವತಿ ಮುಂತಾದ ಐತಿಹಾಸಿಕ ಅಂಶಗಳ ಒಳಗೊಂಡ ಕಥೆಗಳು ಹಲವಿವೆ.

ಈ ಹಿನ್ನಲೆಯಲ್ಲಿ ಸಾಮಾಜಿಕ ಚಿತ್ರಣವನ್ನು ಸ್ಥಾಪಿಸಲ್ಪಟ್ಟ “ಕಮಲಾಪುರ ಹೊಟ್ಲಿ” ನಲ್ಲಿ ಎಂಬಂತಹ ಕಥೆಯೂ ಸಹ ಒಂದು. ಈ ಸಣ್ಣ ಕಥೆ ಎಂಬ ವಿಚಾರಕ್ಕೆ ಬಂದಾಗ ಮಂಗಳೂರಿನ ಪಂಜೆ ಮಂಗೇಶರಾಯರು ಸಣ್ಣ ಕಥೆಗೆ ಐತಿಹಾಸಿಕವಾಗಿ ಮೊದಲಿಗರು. ಇವರು ಬರೆದದ್ದು ಕಡಿಮೆಯಾದರೂ ಬರೆದ ಸಾಮಾಜಿಕ ಕಥೆಗಳಲ್ಲಿ ಹಾಸ್ಯ ವಿನೋದ ವಿಫಲವಾಗಿ ದಕ್ಕುವುದು. ಕಮಲಾಪುರದ ಹೊಟ್ಲಿನಲ್ಲಿ ಈ ಕಥೆಯು ಬೆಳೆದಂತೆ ಇಲ್ಲಿಯ ಪಾತ್ರಗಳು ಬೆಳೆದು ಆಕಾರ ಬದಲಿಸಿಕೊಂಡು ಬಿಡುತ್ತವೆ. ಹಾಸ್ಯ ಮಿಶ್ರಿತ ಸಂಭಾಷಣೆ ಕಥೆಯುದ್ದಕ್ಕೂ ಹರಿದರು ಅದು ಹಾಸ್ಯ ಎನಿಸದೆ ವಿಡಂಬನಾತ್ಮಕ ವರ್ಣನೆ ಎಂಬಂತೆ ಭಾಸಗುತ್ತದೆ.ಹಿಂದೂ ಮುಂದು ಯಾರೂ ಇರದ ಪೂರ್ಣಸ್ವಾಮಿ ಅಥವಾ ಪೊನ್ನು ಸ್ವಾಮಿ ಹಾಗೆ ಗೇಲಿಗಾಗಿಯೋ ಎಂಬಂತೆ ಪೊಣ್ಸಾಮಿ ಎಂದು ಕರೆಯುವುದುಂಟು. ಇದಕ್ಕೂ ಕಾರಣವಿಲ್ಲವೆಂದೆನಿಲ್ಲ. 20 ವರ್ಷಗಳ ಹಿಂದೆಯೇ ಒಂದು ಹೆಣ್ಣಿಗಾಗಿ ಊರು ಬಿಟ್ಟು ಹೋದ ಪೊನ್ನು ಸ್ವಾಮಿ ಅಯ್ಯಂಗಾರ್ ಊರೂರು ಅಲೆದು ಪುಣ್ಯ ಸ್ಥಳ ದರ್ಶನ ಮಾಡಿ ಪುಡಿಗಾಸು ಹಿಡಿದು ಕಮಲಾಪುರದಲ್ಲಿ ಹೊಟ್ಲು ತೆರೆದು ಒಬ್ಬಂಟಿಗನಾಗಿಯೇ ಜೀವನ ಸಾಗಿಸುತ್ತಿದ್ದು, ಆಗೊಮ್ಮೆ ಈಗೊಮ್ಮೆ ಅಪ್ಪ! ಅಪ್ಪಯ್ಯ! ಎಂದು “ನಲ್ಲೂರು ನೀಲಾಂಬಿಕೆ” ಯ ಮಗ ದಿನಕ್ಕೆರಡು ಬಾರಿ ಕಾಸು ಕೊಂಡೊಯ್ಯುತ್ತಿರುವುದು ಹೋಟೆಲಿಗೆ ಬಂದ ಗಿರಾಕಿಗೆ ಸಕಾರಣ ತಿಳಿಯದಿದ್ದರೂ ವಸ್ತು ಸ್ಥಿತಿ ಅರಿವಿಗೆ ಬಂದಿರಬಹುದಾದ ವಿಷಯ.

ಈ ಕಥೆಯು ಬಹಳ ತೆಳುವಾದ ಸಂದರ್ಭವನ್ನು ಹೊಂದಿರುವುದು ಇಲ್ಲಿ ಮಾತುಗಳು ವಿನೋದಾತ್ಮಕವಾಗಿ ಕಂಡರೂ ನೇರ ತೀರಾ ವಾಗ್ದಾಳಿಯನ್ನು ಪ್ರತಿನಿಧಿಸುವಂತಿವೆ. ತನ್ನ ಪ್ರತಾಪಗಳನ್ನೆಲ್ಲಾ ನಿತ್ಯವೂ ಪ್ರವಚನಗಳಂತೆ ಹೋಟೆಲಿಗೆ ಬರುವ ಗಿರಾಕಿಗೆ ತಿಳಿಸುವ ಅಯ್ಯಂಗಾರ್ರರ ಮಾತಿನ ಬಗ್ಗೆ ಒಂದಿಷ್ಟು ಸತ್ಯ ಒಂದಿಷ್ಟು ಗುಮಾನಿ ಸಹಜವಾಗಿ ಎದ್ದಿರುತ್ತವೆ. ಇದನ್ನು ಕಂಡ ಅಯ್ಯಂಗಾರ್ ಅವರಿಗೆ ಇರಿಸು ಮುರಿಸು. ಹಾಗಾಗಿ ತಾವಾಗಿಯೇ ಮೈಮೇಲೆ ಇರುವೆ ಬಿಟ್ಟುಕೊಂಡರು ಎಂಬಂತೆ ಗುಂಡಾಚಾರ್ಯ ಎಂಬಾತನನ್ನು ತನ್ನ ಪ್ರಲಾಪಗಳಿಗೆ ಒಂದಿಷ್ಟು ರೆಕ್ಕೆ ಪುಕ್ಕ ಹಚ್ಚಿ ಬಣ್ಣಿಸುವ ಸಲುವಾಗಿ ಕರೆ ತಂದಿರುವಂಥದ್ದು. ನಂತರ ಗುಂಡಾಚಾರ್ಯರು ಕೂಡ ತಿರುಗಿ ಬೀಳುವ ಪ್ರಸಂಗವೇ ಕಮಲಾಪುರ ಹೊಟ್ಟಿನಲ್ಲಿ ಎಂಬ ಕಥೆಯ ಒಳತಿರುಳು.

ಈ ಕಥೆಯ ಮೂಲಕ ಜನಸಾಮಾನ್ಯರ ಸಾಮಾಜಿಕ ಜೀವನ, ಆರ್ಥಿಕತೆ ಬೂಟಾಟಿಕೆ, ರಾಜಕೀಯ, ಸ್ವಾರ್ಥತೆ, ಇತ್ಯಾದಿ ಅಂಶಗಳನ್ನು ಕಾಣಬಹುದು. ತನ್ನ ಕುರಿತು ವರ್ಣಿಸುವ ಸಹಾಯಕನಾಗಿ 15 ರೂಪಾಯಿಗಳಿಗೆ ಬಂದ ಗುಂಡಾಚಾರ್ಯ ಅಲ್ಲಿಯೇ ಠೀಕಾಣಿ ಹೂಡಲು ಬಯಸುವುದು ಮನುಷ್ಯ ಜೀವದ ಸ್ವಾರ್ಥತೆ. ಗುಂಡಾಚಾರ್ಯ ಅಥವಾ ಅಯ್ಯಂಗಾರರ ಮಾನಸಿಕ ಸ್ಥಿತಿಯನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಚಿಂತಿಸಿದಾಗ ಇವರಿಬ್ಬರಿಗೂ ಅವರವರ ಅನುಕೂಲಗಳಷ್ಟೇ ಆ ಕ್ಷಣಕ್ಕೆ ಮುಖ್ಯ ಎಂಬಂತೆ ತೋರುವುದು ಮನುಷ್ಯ ಎಲ್ಲೇ ಇದ್ದರೂ ಅವನ ಸೂಪ್ತ ಮನಸ್ಸಿಗೆ ಸುಖ ನೀಡುವಂತಾದರೆ ಅವರು ಯಾವ ತೀರ್ಮಾನಕ್ಕೂ ಹಾಗೂ ಎಂತಹ ಕಾರ್ಯಕ್ಕೂ ಇಳಿಯುವಂತದ್ದು ಸೂಪ್ತ ಚೇತನದ ಸಾಮರ್ಥ್ಯ. 15 ರೂಪಾಯಿಗೆ ಹೊಗಳುಭಟ್ಟನನ್ನು ಕರೆಸಿಕೊಂಡ ಅಯ್ಯಂಗಾರ್ ಅವರು ಸಹ ತಾನು ಅದುವರೆಗೂ ಕಟ್ಟಿಕೊಂಡ ಬಣ್ಣ ಬಣ್ಣದ ಸುಳ್ಳಿನ ಕೋಟೆಯು ಹಾಗೆಯೇ ಭದ್ರವಾಗಿ ಇರಬೇಕೆಂಬ ಹಿನ್ನೆಲೆಯಿಂದಲೇ ಗುಂಡಾಚಾರ್ಯರನ್ನು ಕರೆಸಿಕೊಂಡದ್ದು,ಹಾಗೂ ಶಿಥಿಲಗೊಂಡ ತನ್ನ ಪರಾಕ್ರಮಗಳಿಗೆ ಒಂದಿಷ್ಟು ತೇಪೆ ಹಚ್ಚಲು ಬಂದವನೇ ಇಂದು ತನ್ನ ಅಸ್ತಿತ್ವವನ್ನೇ ಅಲುಗಾಡಿಸಿ ಬಿರುಗಾಳಿ ಎಬ್ಬಿಸುಂತದ್ದು ಜರುಗಿದಾಗ ಅನ್ಯಮನಸ್ಕರಾಗಿ ಸಿಡಿದಿದ್ದು ಸರಿಯಷ್ಟೇ. ಇಲ್ಲಿಯೇ ಠೀಕಾಣಿ ಹೂಡಿ ಪುಕ್ಕಟೆ ಊಟೋಪಚಾರಕ್ಕೆ ಬಿದ್ದವನನ್ನು ಹೊರದಬ್ಬುವ ಸಲುವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳ ಬೇಕಾಗಿರುವಂತಹ ಸ್ಥಿತಿ ಮನುಷ್ಯನ ದುರಾಲೋಚನೆಗೆ ಕನ್ನಡಿ ಹಿಡಿದಂತೆ.

ಅಯ್ಯಂಗಾರ್ ಅವರಿಗೆ ಇರುವ ಶ್ರೇಷ್ಠತೆಯ ವ್ಯಸನವನ್ನು ಇನ್ನಷ್ಟು ಪುಷ್ಠಿಗೊಳಿಸುವ ಸಲುವಾಗಿ ಬಂದ ಗುಂಡಾಚಾರ್ಯ ಓದುಗರಿಗೆ ಸಾಂಕೇತಿಕ ರೂಪಗಳನ್ನು ನೀಡುತ್ತಾರೆ. ಅಷ್ಟಕ್ಕೂ ಈ ಕತೆ ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎನ್ನುವುದರೊಳಗೆ ಮುಗಿದೇ ಹೋಗುವ ಪರಿ, ನಿಜವಾದ ಕಥೆಯ ಒಳ ತಿರುಳು ಯಾವುದು ಎಂದು ಅರ್ಥೈಸುವುದರೊಳಗೆ ಕುಪ್ಪಣ್ಣ ಶಾಮರಾಯ, ಗುಂಡಾಚಾರ್ಯ, ಮತ್ತು ಅಯ್ಯಂಗಾರ ಈ ಪಾತ್ರಗಳು ತಮ್ಮ ಕಥಾ ಸಂವಿಧಾನದ ತಂತ್ರವನ್ನು ಬೆಳಸದೆ ನಿರ್ದಿಷ್ಟವಾದ ಜಾಡನ್ನು ಹಿಡಿಯದೆ ಮುಂದಿನ ನಡೆಯೇನು ಎನ್ನುವುದರೊಳಗೆ ಕಥೆಯು ಮುಗಿದು ಬಿಡುತ್ತದೆ. ತೀರ ಶಿಥಿಲ ಕಥಾ ಹೆಣಿಕೆ ಜಾಳು ಜಾಳಾದ ಮಾತಿನ ದುಂದುಗಾರಿಕೆ ಇವುಗಳ ನಡುವೆ ಶ್ರೇಷ್ಠ ವ್ಯಸನವನ್ನೇ ವಿಡಂಬಿಸುವ ಗುಂಡಾಚಾರ್ಯರ ಪಾತ್ರ ಚಿತ್ರಣ ತಮ್ಮ ಸ್ವಾರ್ಥಪರತೆಗಾಗಿ ಸೇಡು ತೀರಿಸಿಕೊಂಡಂತೆ ಭಾಸವಾಗುವುದು.

ಮನುಷ್ಯ ಸಂಘ ಜೀವಿ ಎಂದ ಮಾತ್ರಕ್ಕೆ ಮನಸ್ಸುಗಳನ್ನು ಸೆಳೆಯುವ ತಂತ್ರಕ್ಕೆ ತನ್ನ ಮೂಲ ಅಸ್ತಿತ್ವವನ್ನು ಶಿಥಿಲಗೊಳಿಸಿಕೊಳ್ಳುವುದು ಅರ್ಥಹೀನ ಬದುಕು. ಹಿಂದಿನ ಕಾಲದಲ್ಲಿ ರಾಜರು ಹೊಗಳು ಭಟ್ಟರನ್ನು ಇರಿಸಿ ಬಹುಪರಾಕ್ ತೆಗೆದು ಕೊಳ್ಳುತ್ತಿದ್ದರಂತೆ. ಹೋಟೆಲ್ ಮಾಲಿಕನ ಶ್ರೇಷ್ಠತೆಗೆ ಹೊಗಳುವಿಕೆಯ ದಿಗ್ವಿಜಯ ಸಾಧಿಸಲು ಹೊರಟಿದ್ದು ಮಾತ್ರ ವಾಸ್ತವಿಕ ಬದುಕಿನ ನೆಲೆಯನ್ನು ಮತ್ತು ಮಾನಸಿಕ ಸ್ಥಿತಿಯ ಜಾಳುತನವನ್ನು ಕಥೆ ಎತ್ತಿ ಹಿಡಿಯುತ್ತದೆ. ಅಚಲ ಮನಸಿನ ವ್ಯಕ್ತಿಗಳೆಂದೂ ತನ್ನ ಕಾರ್ಯವನ್ನು ತಾನಾಗಿಯೇ ವಿಪರೀತವಾಗಿ ವ್ಯಾಪಾರಿಕರಣ ಮಾಡುವುದಿಲ್ಲ. ಮನಸ್ಸಿನ ಸ್ಥಿಮಿತತೆಯಲ್ಲಿ ವ್ಯತ್ಯಾಯಗಳು ಉಂಟಾದಾಗ ಮಾತ್ರ ಮಾನಸಿಕ ದುಂದುಗಾರಿಕೆ ವಾಚಾಳಿಕತೆ ಇತ್ಯಾದಿ ವಸ್ತು ವಿಷಯಗಳು ಪ್ರಾತಿನಿಧಿಕ ಅಂಶಗಳಾಗಿ ಎದ್ದು ನಿಲ್ಲುತ್ತವೆ. ಈ ಹಿನ್ನೆಲೆಯಿಂದ ಈ ಕಥೆಯು ಮನುಷ್ಯನ ಸಹಜ ಮತ್ತು ಅಸಹಜ ಸ್ವಭಾವಗಳತ್ತ ಮುಖ ಮಾಡಿ ಮನಸಿನ ವ್ಯಾಪಾರಿಕರಣವನ್ನು ಪ್ರತಿನಿಧಿಸುತ್ತವೆ. ಪಾತ್ರಗಳ ಗಟ್ಟಿತನಕ್ಕೆ ಇನ್ನಷ್ಟು ಕಸುವು ಅವಶ್ಯಕತೆವಾಗಿತ್ತು. ‌

ಮೂಲತಃ ಬದುಕು ಬರಹ ಎರಡನ್ನು ಸಮತಭಾವದಿಂದ ಸ್ವೀಕರಿಸಿದ ಪಂಜೆಯವರುಬದುಕಿನಲ್ಲಿ ಹಾಸ್ಯ ರಸಿಕತೆಯಲ್ಲಿ ನೋವನ್ನು ನೀಗಿಕೊಂಡವರು. ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ “ನಿಮ್ಮಂತ ಮಂಗಗಳಿಗೆ ಈಶನಾಗಿರುವುದರಿಂದ ನಾನು ಮಂಗೇಶನಾಗಿರುವುದು” ಎಂದು ತಮ್ಮನ್ನೇ ತಾವು ಹಾಸ್ಯ ಮಾಡಿಕೊಳ್ಳುವ ಹೃದಯ ವೈಶಾಲ್ಯತೆಯುಳ್ಳವರು. ಹೆಂಡತಿಯನ್ನು ಊರಲ್ಲಿ ಬಿಟ್ಟು ಒಂಟಿಯಾಗಿ ಮೈಸೂರು ಕಡೆ ಹೋದಾಗ “ಮಡದಿಯೆಲ್ಲಿ ಎಂದು ಕೇಳಿದರೆ ಚೇಂಜ್ ಗಾಗಿ ಬಂದನೆಂದು” ಹೇಳಿ ಚೇಷ್ಟೆ ಮಾಡುವುದು ಅವರ ಮನದ ಶ್ರೀಮಂತಿಕೆ ಹಾಗೂ ಹಾಸ್ಯ ಪ್ರವೃತ್ತಿ ಎಲ್ಲವನ್ನು ತೆರೆದ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ತಮ್ಮ ತಂದೆಯನ್ನು ಹನ್ನೊಂದನೇ ವಯಸ್ಸಿನಲ್ಲಿ ಕಳೆದುಕೊಂಡು ಜವಾಬ್ದಾರಿಗಳನ್ನು ಹೊತ್ತು ಸಾಗಿದ ಪಂಜೆಯವರ ಬದುಕು ಸುಖದ ಸುಪ್ಪತ್ತಿಗೆಯೇನು ಆಗಿರಲಿಲ್ಲ. ನೋವಿಗೆ ಅವರ ಹಾಸ್ಯ ಔಷಧಿ ಎಂಬಂತೆ ಮೆರಗು ನೀಡುತ್ತಿತ್ತು. ಬಹುಶಃ ಅವರ ಬಹುಪಾಲು ಬರಹದಲ್ಲಿ ವಿನೋದ ಹಾಸ್ಯ ಹಾಸು ಹೊಕ್ಕಾಗಿ ಇರುತ್ತದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಮೇರು ವ್ಯಕ್ತಿತ್ವವನ್ನು ಹೊಂದಿದ ಪಂಜೆಯವರು “ಕವಿಗೆ ಕವಿ ಮುನಿವ” ಎಂಬ ಕೇಶಿರಾಜನ ನುಡಿಗೆ ತದ್ವಿರುದ್ಧವಾಗಿದ್ದು ಉದಯೋನ್ಮುಖರಿಗೆ ದಾರಿದೀಪವಾಗಿದ್ದರಂತೆ. ಅವರ ಶಿಷ್ಯರಾದ ಗೋವಿಂದ ಪೈ ಅವರು ಪಂಜೆಯವರು 63ನೇ ವಯಸ್ಸಿನಲ್ಲಿ ತೀರಿಕೊಂಡಾಗ “ತುಳುನಾಡಿನ ಕನ್ನಡ ಸಾಹಿತ್ಯದ ವಿಗಳ ದೀಪ ಸ್ತಂಭವಾರಿತು ಬೆಳಕು ಬೆಳಕಿಗೆ ಸಾರಿತು” (ಸಾಲುದೀಪ) ಎಂಬ ಮಾತು ಪಂಚೆಯವರ ಅಸಾಧಾರಣವಾದ ಅವಿಸ್ಮರಣೆಯ ವ್ಯಕ್ತಿತ್ವವನ್ನು ಸಾಬೀತುಪಡಿಸುತ್ತದೆ.

- ವಾಣಿ ಭಂಡಾರಿ

MORE NEWS

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...

ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

09-10-2024 ಬೆಂಗಳೂರು

"ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ...

ಹಿಂದಣ ಹೆಜ್ಜೆಯನರಿಯದೆ 

08-10-2024 ಬೆಂಗಳೂರು

"ಕನ್ನಡದ ಅರಿವನ್ನು ತಮ್ಮ ಸಾಹಿತ್ಯಕ ಪ್ರಯೋಗಗಳಿಂದ ವಿಸ್ತರಿಸಿದ ದೇವುಡುವನ್ನು ಆಯ್ಕೆ ಮಾಡಿಕೊಂಡು ಅವರ ಸೃಜನಶೀಲ ಸ...