ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

Date: 09-10-2024

Location: ಬೆಂಗಳೂರು


"ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ವ್ಯಕ್ತಿಗೆ ಏನು ಮಾಡಬಲ್ಲದು ಎಂಬುದನ್ನು ಸಹ ತಮ್ಮ ಕೃತಿಯ ಮೂಲಕ ಅವಲೋಕನದ ಆಳಕ್ಕೆ ಇಳಿಸುವ ಪ್ರಗತಿಶೀಲರು ಧರ್ಮಕುಂಡದ ಕಥೆಯ ಮೂಲಕ ಸಾಬೀತು ಪಡಿಸಿರುವುದು ಗಮನಿಸಬಹುದಾದ ಅಂಶ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಅಶ್ವಥ್ ಅವರ ಧರ್ಮಕೊಂಡದ ಕಥೆ ಕುರಿತು ಬರೆದ ‘ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ' ಲೇಖನ ನಿಮ್ಮ ಓದಿಗಾಗಿ.

1950ರ ಹೊತ್ತಿಗೆ ಕನ್ನಡ ಸಾಹಿತ್ಯದಲ್ಲಿ ಬೀಸಲಾರಂಭಿಸಿದ ಗಾಳಿಯು ಕೇವಲ ಕನ್ನಡಕ್ಕಷ್ಟೆ ಸೀಮಿತವಾಗದೆ ಅಖಿಲ ಭಾರತದಲ್ಲಿ ಬೀಸಿದ ಗಾಳಿಯಾಗಿತ್ತು. ಈ ಗಾಳಿಯಲ್ಲಿ ಉಸಿರಾಡಿ ನವ ಚೇತನವನ್ನು ಪಡೆದವರೆ ಪ್ರಗತಿಶೀಲರು. ಈ ಪ್ರಗತಿಶೀಲ ಕಾವ್ಯ ಸಾಹಿತ್ಯದ ಸಂದರ್ಭದಲ್ಲಿ ಕನ್ನಡ ನಾಡಿನಲ್ಲಿ ಅನಕೃ ಅವರ ನೇತೃತ್ವದಲ್ಲಿ ಅನೇಕ ಕವಿಗಳು ತಮ್ಮ ಕಾವ್ಯದ ಸಂಪನ್ನತೆಯನ್ನು ಬೆಳಗಿಸಿದರು. ಇದರಲ್ಲಿ ಪ್ರಮುಖರಾದ ಅಶ್ವತ್ಥ ಅವರು ಹಲವು ಕಥೆ ಕಾದಂಬರಿಗಳನ್ನು ರಚಿಸಿದ್ದು "ಸೊಸೆಗೊಂದು ಉಡುಗೊರೆ, ಬಾಳೆಹಣ್ಣು, ದೀಪಾವಳಿ, ಜೀವನ, ಹುಚ್ಚನ ಹೆಂಡತಿ, ಅಗ್ನಿಸಾಕ್ಷಿ". ಇಂತಹ ಸಂಕಲನಗಳನ್ನು ಹಾಗೂ ಕೆಲವು ಕಾದಂಬರಿಗಳನ್ನು ಬರೆದು ಅಮೂಲ್ಯ ಕೊಡುಗೆ ನೀಡಿರುವುದು ಗಮನರ್ಹ ಸಂಗತಿ. ಇವರ "ಧರ್ಮಕೊಂಡದ ಕಥೆ" ಜಾತಿ ಧರ್ಮದ ಸುತ್ತ ಹೆಣೆದ ಸೂಕ್ಷ್ಮಾತಿ ಸೂಕ್ಷ್ಮ ಪರಿದಿಗೆ ಒಳಪಟ್ಟ ಕಥೆಯಾಗಿದೆ.

ಸೂರಪ್ಪನ ಹೆಂಡತಿ ದೇವಿ ಆ ದಿನ ಮುಸ್ಸಂಜೆಯ ಸಮಯಕ್ಕೆ ಸಿಹಿ ನೀರು ತರಲು ಹೋದಾಗ ಅಷ್ಟೊತ್ತಿಗೆ ಅಲ್ಲಿಗೆ ಬಂದೊಬ್ಬ ಕಂದಾರಿ ಗಂಡಸು, ಅವಳಿಂದ ನೀರನ್ನು ಪಡೆದು ಅವನ ರುಮಾಲಿಂದ ಅವಳ ಬಾಯಿ ಕೈ ಒತ್ತಿ ಹಿಡಿದು ಎಳೆದೊಯ್ದು ಬೇರೊಬ್ಬ ಮುಸಲ್ಮಾನನಿಗೆ ಮಾರಿ ಅವರ ಜಾತಿಗೆ ಸೇರಿಸಿಕೊಂಡು ಹೆದರಿಸಿ ಬೆದರಿಸಿ ಹೊಡೆದು ಹೊಡೆದು ನಿಖಾ ಮಾಡಿಕೊಳ್ಳುತ್ತಾರೆ. ಆದರೆ ಅವನಿಗೆ ತನ್ನ ದೇಹವನ್ನು ಒಪ್ಪಿಸದ ದೇವಿ ಬಹಳ ಕಷ್ಟಪಟ್ಟು ತಪ್ಪಿಸಿಕೊಂಡು ಮನೆಗೆ ಬಂದು, ಆಕೆ ನಡೆದ ಸತ್ಯ ಘಟನೆಯನ್ನು ಕೇಳಿದ ಹೃದಯವಂತ ಗಂಡ ಸೂರಪ್ಪ ಮರುಗಿ ಅಸಹಾಯಕನಾದ. ಸೂರಪ್ಪನ ತಾಯಿ, ಗಂಗಮ್ಮ ಮತ್ತು ಸೂರಪ್ಪನ ಅಕ್ಕ ಗುಂಡಮ್ಮ ನಂತರ ಪಕ್ಕದ ಮನೆಯ ಶಾಸ್ತ್ರಿಗಳ ತೀರ್ಮಾನಕ್ಕೆ ದೇವಿಯ ಬದುಕು ನಾಶವಾಗುವುದರ ಸತ್ತ ಹೆಣೆದ ಕಥೆ ಬಹುಶಃ ಅಂದಿನ ಕಾಲಘಟ್ಟಕ್ಕೆ ಪ್ರಸ್ತುತ ಎನಿಸಿದರೆ ಸಮಕಾಲೀನ ಚಿಂತನೆಗೆ ಧರ್ಮಕೊಂಡದ ಕಥೆ ಹೇಗೆ ಪ್ರತಿಕ್ರಿಯೆ ನೀಡಬಹುದೆಂದು ವಿಶ್ಲೇಷಣೆ ಮಾಡಬಹುದು.

ದೇವಿಯನ್ನು ಎಲ್ಲೆಡೆ ಪೊಲೀಸರಿಂದ ಹುಡುಕಿಸಿದರು ಸಹ ಸಿಗದಿದ್ದ ಸೂರಪ್ಪನ ಹೆಂಡತಿ ಮಧ್ಯರಾತ್ರಿ ಸುಮಾರಿಗೆ ಮನೆಯ ಎದುರಿಗೆ ಬಾತುಕೊಂಡ ರಕ್ತ ಸುರಿಯುತ್ತಿರುವ ಕೈಕಾಲು ಕಳೆಗುಂದಿ ಜೀವ ಚೈತನ್ಯವೇ ಇಲ್ಲದಂತೆ ನಿಂತ ತನ್ನ ಪತ್ನಿ ದೇವಿಯನ್ನು ಕಂಡಾಗ ಸೂರಪ್ಪನ ಹೃದಯ "ದೇವರು ಕಳಿಸಿಬಿಟ್ಟ ದೇವು! ದೇವು. ನನ್ನ ಚಿನ್ನ!. ಎಂದು ಆಕೆಯನ್ನು ತಬ್ಬಿ ಹಿಡಿದು ಒಳಗೆ ಕರೆದೊಯ್ದು ಸೂರಪ್ಪ ತನ್ನ ತಾಯಿ ಗಂಗಮ್ಮನನ್ನು ಕರೆದಾಗ ನಿಜವಾದ ಕಥಾಹಂದರ ಬಿಚ್ಚಿಕೊಳ್ಳುವುದು ಅಲ್ಲಿಂದಲ್ಲೇ. ಆ ತನಕ ಈ ಕಥೆಯಲ್ಲಿ ಏನು ನಡೆಯುತ್ತಿದೆ ಯಾಕೆ ಹೀಗೆ ಏನು ಎಂಬುದರ ಕಲ್ಪನೆಗಳ ಅರಿವೇ ಇರದೇ ಪ್ರೇಕ್ಷಕ ಹೃದಯಗಳು ಸುಮ್ಮನೆ ಓದಬೇಕಷ್ಟೆ. ಸೂರಪ್ಪನ ಅಕ್ಕ ಒಳಗಿನಿಂದ ಹೊರ ಬಂದ ಮೇಲೆಯೇ ನಿಜಕ್ಕೂ ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಂತೆ ದೇವಿಯನ್ನು ಗುಂಡಮ್ಮನಾದಿಯಾಗಿ ಒಬ್ಬೊಬ್ಬರೇ ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಹಾಕಿ ಉತ್ತರ ಪಡೆಯುತ್ತಿದ್ದರು. ಈಗಾಗಲೇ ಮಧ್ಯರಾತ್ರಿ ದಾಟಿರುವ ಸಮಯದಲ್ಲಿ ಪ್ರಶ್ನಿಸುವಂಥದ್ದು ಏನಿತ್ತು? ಆ ದೇವಿಗೆ ಬೆಳಗ್ಗೆ ತನಕವಾದರೂ ಸಮಯ ಕೊಡಲಾರದಷ್ಟು ನಿಕಷ್ಟವೇ ನಮ್ಮ ಸಮಾಜದ ಜಾತಿ ವ್ಯವಸ್ಥೆ? ದೇವಿ ಮಾಡದೇ ಇರುವ ತಪ್ಪಿಗೆ ಆಕೆಯನ್ನು ಶಿಕ್ಷಿಸುವ ಹಕ್ಕನ್ನು ನೀಡಿದವರು ಯಾರು ಇವರಿಗೆಲ್ಲ? ಕಥೆಗಾರ ಈ ಕಥಾ ಹಂದರವನ್ನು ಮಧ್ಯರಾತ್ರಿಯಿಂದ ಬೆಳಗಿನ ಜಾವ ನಾಲ್ಕೈದರ ಸುಮಾರಿನೊಳಗೆ ಘಟಿಸುವ ಕಥಾ ತಂತ್ರವನ್ನು ಹೆಣದಿರುವುದು ವಿಶೇಷ.

ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಂಡಿದ್ದೆ ನಡೆದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು ಸಹ ನವೋದಯದವರಂತೆ ಬಾಳು ಸ್ವೀಕಾರ್ಹ ಎಂಬ ನಂಬಿಕೆಯಿಂದಲೇ ಬರೆಯುವುದು. ಹಾಗೂ ಬದುಕನ್ನು ಇನ್ನಷ್ಟು ಶುದ್ಧಗೊಳಿಸಬೇಕೆಂಬ ಹಂಬಲ ಬಾಳು ಅರ್ಥಪೂರ್ಣ ಎಂದು ನಂಬಿದ್ದರು. ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ವ್ಯಕ್ತಿಗೆ ಏನು ಮಾಡಬಲ್ಲದು ಎಂಬುದನ್ನು ಸಹ ತಮ್ಮ ಕೃತಿಯ ಮೂಲಕ ಅವಲೋಕನದ ಆಳಕ್ಕೆ ಇಳಿಸುವ ಪ್ರಗತಿಶೀಲರು ಧರ್ಮಕುಂಡದ ಕಥೆಯ ಮೂಲಕ ಸಾಬೀತು ಪಡಿಸಿರುವುದು ಗಮನಿಸಬಹುದಾದ ಅಂಶ. ತೋಟದ ಹತ್ತಿರ ಬಿಡಾರ ಬಿಟ್ಟ ಕಂದಾರಿಗಳಿಗೆ ಈ ದೇವಿಯ ಮೇಲಷ್ಟೇ ದೃಷ್ಟಿ ಬಿದ್ದು ಒತ್ತು ಹೋದವರು ಮಾರಿದ್ದದರೂ ಯಾವ ಪುರುಷಾರ್ಥಕ್ಕಾಗಿ ಕಂದಾರಿಗಳು ಬಹುಶಃ ಅಲೆಮಾರಿಗಳ ತರ ಬದುಕನ್ನು ಸಾಗಿಸುವವರಾಗಿದ್ದಲ್ಲಿ ದೇವಿಯೇ ಯಾಕೆ ಅವರ ಕ್ರೂರತೆಗೆ ಬಲಿಪಶು ಆಗಬೇಕಿತ್ತು?. ಊರಿನಲ್ಲಿ ಅದೆಷ್ಟೋ ಜನ ಹೆಣ್ಣು ಮಕ್ಕಳು ಇದ್ದರು ಸಹ ಎಲ್ಲರನ್ನೂ ಬಿಟ್ಟು ಒಬ್ಬ ವಿವಾಹಿತ ಬ್ರಾಹ್ಮಣ ಮಹಿಳೆಯನ್ನು ಆಕ್ರಮಣಕಾರಿಯಾಗಿ ಸೆಳೆದೊಯ್ದು ಮುಸ್ಲಿಮರಿಗೆ ಮಾರುವ ಹಿಂದಿನ ಉದ್ದೇಶವಾದರೂ ಏನು? ಹಾಗೂ ಇದುವರಿಗೂ ಊರಿನಲ್ಲಿ ಈ ತರದ ಹೆಣ್ಣು ಮಕ್ಕಳನ್ನು ಕದ್ದೊಯ್ಯವ ಪ್ರಸಂಗ ಕಂಡುಬರದಿದ್ದರ ಪರಿಣಾಮವಾಗಿ ಸಹಜತೆಯಲ್ಲಿ ಭಿನ್ನ ರೀತಿಯಿಂದ ದೃಷ್ಟಿ ಹರಿದುಬಿಡುತ್ತದೆ.

"ನಾಲ್ಕು ದಿನ ಏನು ಇಲ್ಲದೆ ಕಳೆದೆ ಅವರು ತಂಬಿಟ್ಟ ಅನ್ನ ಮುಟ್ಟಲಿಲ್ಲ ಆದರೆ ಐದನೆಯ ದಿನ ಹಸಿವು ನೇರಡಿಕೆ ನಿತ್ರಾಣ ಅಸಾಧ್ಯವಾಗಿ,",,,, ಎಂದು ಹೇಳುತ್ತಿರುವಾಗಲೇ,, "ತಿಂದು ಬಿಟ್ಟೆಯಾ ಆ ಮುಸಲ್ಮಾನರ ಅನ್ನ?" ಗುಂಡಮ್ಮನು ಆತುರದಿಂದ ಕೇಳುವ ಆಕೆಯ ಚಿಂತನ ಲಹರಿ ಬಹುಶಃ ಆ ಕಾಲದ ವಸ್ತು ಸ್ಥಿತಿ ಮನಸ್ಥಿತಿ ಎಂಬುದರ ಹಿನ್ನೆಲೆ ಏನೇ ಆದರೂ ಸಹ ಹಸಿವು ಯಾವ ಜಾತಿ ನೀತಿ ಕಾಲ ದೇಶ‌ ಸ್ಥಳ ಸನ್ನಿವೇಶವನ್ನೂ ಸಹ ಮೀರಿದ್ದು ಎಂಬುದರ ಅರಿವಿರದ ಗುಂಡಮ್ಮನ ಚಿತ್ತದ ಹಿಂದಿನ ಕ್ರೂರತೆ ಹಾಗೂ ವ್ಯವಸ್ಥೆಯ ದುರ್ಬಲತೆ ಗೋಚರಿಸುತ್ತದೆ.

ಯಾರದೋ ಬಲವಂತಕ್ಕೆ ಆ ಮುಸಲ್ಮಾನ ಮತ್ತು ಕಾಂದಾರಿಗಳ ಹೆದರಿಕೆಗೆ ಕೊರಳೊಡ್ಡಿ ನಿಖಾ ಮಾಡಿಕೊಂಡಳೆ ವಿನಹ, ಮೈ ಒಪ್ಪಿಸದೆ ರಾತ್ರೋರಾತ್ರಿ ಕಷ್ಟಪಟ್ಟು ತಪ್ಪಿಸಿಕೊಂಡು ಮನೆಗೆ ಬಂದಾಗ ಸುರಿಸುವ ಪ್ರಶ್ನೆಗಳೇ ಮಾನವೀಯ ಮೌಲ್ಯದ ಕುಸಿತವನ್ನು ಎತ್ತಿ ತೋರಿಸುತ್ತವೆ. "ಆದರೇನು ಬಂತು, ಜಾತಿ ಕೆಟ್ಟು ಹೋದಳಲ್ಲ!" ಎಂಬ ಗುಂಡಮ್ಮನ ಆಕ್ಷೇಪಣೆ, ಜಾತಿ ಕಡಟ್ಟಿರಬಹುದು ನೀತಿ ಕೆಟ್ಟಿಲ್ಲ ತನ್ನ ಹೆಂಡತಿ ಎಂದರಿತು ಸೂರಪ್ಪ ಆಕೆಯನ್ನು ಒಳಗೆ ಕರೆದೊಯ್ಯಲು ಮುಂದಾದಾಗ ಸೂರಪ್ಪನನ್ನು ತಡೆಯುವುದು ಆ ಮನೆಯ ಹೆಣ್ಣುಗಳೇ ಎಂಬುದು ಅಚ್ಚರಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ನಿಲುವು ಸಾಬೀತಾದರೂ ಅದರ ಹಿಂದಿನ ನಿಲುವು ಮನೆ ಮನೆತನ ಜಾತಿ ಪುರುಷತ್ವ ಇವೆಲ್ಲದರ ಭೀತಿಯಿಂದ ಅವರ ವರ್ತನೆ ಅಂಧಕಾರದ ತೆರೆದ ಕನ್ನಡಿ.

ತನ್ನ ಸತಿ ಧರ್ಮವನ್ನು ಚಾಚು ತಪ್ಪದೇ ಪಾಲಿಸಿ ತನ್ನ ಧರ್ಮ ಸಂಕಟದ ಪರಿಸ್ಥಿತಿಯನ್ನು ತಿಳಿಸಿದ ದೇವಿ ತನ್ನ ಧರ್ಮಕ್ಕನುಗುಣವಾಗಿ ಸತ್ಯ ನಿಷ್ಟೆ ಪ್ರಾಮಾಣಿಕಯಿಂದ ಪರಿಪಾಲಿಸಿಯೂ ಸಹ ಅವಳಿಗೆ ಸಿಕ್ಕ ಉಡುಗೊರೆ ಎಂತಹದ್ದು?.ಧರ್ಮಜಿಜ್ಞಾಸೆಯ ಕುರಿತು ಪಕ್ಕದ ಮನೆಯ ಜೋಯಿಸಿರೊಂದಿಗೆ ಚರ್ಚಿಸಿ ಧರ್ಮಶುದ್ದಿ ಕಾರ್ಯಗೊಳಿಸಿಬಹುದೆಂಬ ಚಿಗುರು ಆಸೆಯು ಸಹ ಸತ್ತುಹೋಗಿ ಅಸಹಾಯಕನಾದ ಸೂರಪ್ಪ.ಈ ಮೂರು ಜನರು ಬ್ರಾಹ್ಮಣತ್ವದ ಪರಿಚಾರಕರಂತೆ ತಮ್ಮ ಮತಧರ್ಮದ ಉಳಿವಿಗೆ ಸೆಣಸಾಡುವ ಸಂತತಿಯವರಂತೆ ದೇವಿಯ ಪ್ರಾಣಕ್ಕೆ ಸಂಚಕಾರ ತರುವ ಅವರ ಬ್ರಾಹ್ಮಣತ್ವದ ಪರಿಕಾಷ್ಟೆ ತೀವ್ರತೆಯ ಗತಿ ವಿಶ್ಲೇಷಣೆ ಮಾಡುವಂತದ್ದು. "ಹಿಂದೂ ಮತದಲ್ಲಿ ಜಾತಿ ಕೆಟ್ಟವರನ್ನ ಮತ್ತೆ ತೆಗೆದುಕೊಳ್ಳುತ್ತಾರೆನಯ್ಯ? ಅದರಲ್ಲಾಗಿ ನಮ್ಮದು ಬ್ರಾಹ್ಮಣ ಕುಲ" ಎಂದು ಶಾಸ್ತ್ರಿಗಳು ಹಾಕಿದ ಬಾಂಬಿಗೆ ಪ್ರೀತಿಯ ಹೆಂಡತಿಯನ್ನು ಉಳಿಸಿಕೊಳ್ಳಲಾರದೆ ಕುಸಿದು ಅಸಹಾಯಕನಾಗಿದ್ದೇನು ನಿಜ.ಆದರೆ ದೇವಿಯನ್ನು ಉಳಿಸಿಕೊಳ್ಳುವ ಎಲ್ಲಾ ದಾರಿಗಳನ್ನು ಮನೆಯ ಹಿರಿಕರಾದ ಗಂಗಮ್ಮ ಗುಂಡಮ್ಮ ನಿರ್ವಹಿಸಬಹುದಿತ್ತು. ಮನುಷತ್ವವನ್ನೇ ಮರೆತು ನಮ್ಮಂತೆ ಒಂದು ಹೆಣ್ಣು ಜೀವ ಅನ್ನುವುದನ್ನು ತ್ಯಜಿಸಿ ದೇವಿಯನ್ನು ತಮ್ಮ ವಂಶದ ಮನೆತನದ ಮಾನ ಮರ್ಯಾದೆಯನ್ನು ಉಳಿಸುವ ಸಲುವಾಗಿ ತ್ಯಾಗ ಮಾಡು, ಎನ್ನುವ ಆ ಹೆಂಗಳೆಯರ ಅಂತ:ಕರಣ ಅನ್ನೋದು ನೇಪತ್ಯಕ್ಕೆ ಸರಿದಿತ್ತೇ?. "ಅಮ್ಮ ನೀನು ಆಗಲೇ ಒಂದು ಸಾರಿ ನಮ್ಮ ವಂಶವನ್ನು ಉಳಿಸಿದ್ದೀಯಾ; ಎರಡನೇ ಬಾರಿಯೂ ಉಳಿಸೋ ಕಾಲ ಬಂದಿದೆ" "ನಾನಿರುವಷ್ಟು ದಿನವೂ ನಿನಗೆ ದೀಪ ಬೆಳಗುವೆ". ಎನ್ನುವುದರ ಹಿಂದಿನ ತಾತ್ಪರ್ಯ ಪರೋಕ್ಷವಾದ ಭಾವನಾತ್ಮಕ ನುಡಿಗಳಿಂದ ಕಟ್ಟಿ ತ್ಯಾಗಿ ಆಗು,ಅಂದರೆ ಪ್ರಾಣಬಿಟ್ಟುಬಿಡು ಎನ್ನುವುದಷ್ಟೆ.

ಗಂಡಿಗಿರದ ಧರ್ಮದ ಸಂಕೋಲೆಗಳು ನ್ಯಾಯ ಸತ್ಯದ ಒಕ್ಕರಲು ದೇವಿಗೇಕೆ? ತನ್ನ ಮನೆಯವರನ್ನೆಲ್ಲ ನಂಬಿ ಪ್ರಾಮಾಣಿಕವಾಗಿ ಅಲ್ಲಿ ನಡೆದ ಘಟನೆಗಳನ್ನು ತಿಳಿಸಿದ ಪರಿಣಾಮವಾಗಿ ಬ್ರಾಹ್ಮಣತ್ವದ ಶ್ರೇಷ್ಠತೆಯ ಪಾಲನೆಗಾಗಿ ಖುದ್ದು ದೇವಿಯೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದ ಕಾಲ ಸ್ಥಳ ಸನ್ನಿವೇಶ ವ್ಯಕ್ತಿಗಳ ಕ್ರೌರ್ಯಕ್ಕೆ ಕೊನೆ ಸಿಕ್ಕಂತಾಯಿತೆ?, ಹೆಣ್ಣಿಗೆ ನೀಡುವ ತೀರ್ಪು ಗಂಡಿಗೇಕೆ ನೀಡಲಾಗದು?. ತನ್ನ ಮನೆಯವರ ಒತ್ತಾಯಕ್ಕೆ ಹಾಗೂ ಅವರ ಸಂತೋಷಕ್ಕಾಗಿ ಪ್ರಾಣ ತೆತ್ತು ತ್ಯಾಗಿಯಾದ ದೇವಿಯ ಕಳೆಬರವು ಸಹ ಯಾವ ಮತಕ್ಕೆ ಸೇರಿ ಸಂಸ್ಕಾರ ನಡೆಸಬೇಕೆಂಬ ಚರ್ಚೆಯ ಪ್ರಕೋಪ ಮನುಷ್ಯ ತಾನು ಉಳಿವಿಗೆ ಮಾಡಿಕೊಂಡ ಜಾತಿ ಪ್ರಭುತ್ವದ ನೆಲೆಗಳು ಬಿಚ್ಚಿಕೊಳ್ಳುತ್ತವೆ.

ಪ್ರತ್ಯಕ್ಷವಾಗಿ ಆಕೆಯ ಸಾವಿನ ಕೊಲೆಗಾರರು ಇವರೇ ಎಂದಾದ ಮೇಲೆ ಮನುಷ್ಯ ಜಾತಿಯನ್ನು ಬದುಕಿಸಲು ಆಗದ ಧರ್ಮ ಜಾತಿ ಎಷ್ಟು ಶ್ರೇಷ್ಠವಾಗಿದ್ದರೇನು ಪ್ರಯೋಜನ?. ಜೀವಕ್ಕಿಲ್ಲದ ಬೆಲೆ ಜಾತಿ ಮತ ವರ್ಗ ಧರ್ಮಕ್ಕಿದದ್ದೇನು ಪ್ರಯೋಜನಗಳೇನು?. ಮನುಷ್ಯ ತನ್ನ ಶ್ರೇಷ್ಠತೆ ಪ್ರಾಬಲ್ಯದ ಪ್ರದರ್ಶನಕ್ಕಾಗಿ ತಾನೆ ಮಾಡಿಕೊಂಡಿರುವ ಶ್ರೇಷ್ಠತೆಯ ವ್ಯಸನ. ಮಾನವೀಯ ಮೌಲ್ಯದ ಕುಸಿತ. ಪ್ರಗತಿಶೀಲ ಕಾಲಘಟ್ಟದ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗಳು ಸಮಕಾಲಿನ ಸನ್ನಿವೇಶಕ್ಕೆ ಅಷ್ಟು ಬಿಗುವಿಲ್ಲದಿದ್ದರೂ ಶ್ರೇಷ್ಠತೆಯ ವ್ಯಸನಕ್ಕೆ ಬರ ಬಂದಿಲ್ಲ. ಇಲ್ಲಿ ಕಥೆಗಾರ ಕಂದಾರಿಗಳ ಬಗ್ಗೆ ಪರಿಪೂರ್ಣ ವಿಚಾರಗಳನ್ನು ನೀಡದರುವುದರಿಂದ ಕಥೆಯ ಆಳಕ್ಕಿಳಿಸುವ ಸಾಧ್ಯತೆ ಸಂಕೀರ್ಣಗೊಂಡು ನಮ್ಮ ಓದಿನ ಪರಿಮಿತಿಯಲ್ಲಿ ಕುಂಠಿತಗೊಳಿಸಿದಂತಾಗುವುದು..ಮನೆಯಲ್ಲಿ ನೆಲೆಸಿರುವ ಗುಂಡಮ್ಮ ಗಂಡ ಸತ್ತವಳೋ ಗಂಡ ಬಿಟ್ಟು ಬಂದು ಮನೆಯಲ್ಲಿ ಇದ್ದವಳೊ ಅಥವಾ ಮದುವೆ ಆಗದೆ ಹಾಗೆಯೇ ಉಳಿದವಳೋ ಇದ್ಯಾವ ವಿಚಾರಗಳ ಬಗ್ಗೆ ಕತೆಗಾರ ಸ್ಪಷ್ಟತೆಯ ಪ್ರಸ್ತಾಪವನ್ನು ಮಾಡದಿರುವುದು ಕಥೆಯ ಬೆಳವಣಿಗೆಗೆ ಅಡ್ಡಿಯಾದಂತೆ. ಸರಳ ಶುದ್ಧ ಭಾಷೆಯು ಸಹೃದಯರನ್ನು ಓದಿಸಿಕೊಂಡು ಸಾಗುತ್ತದೆ.

ದೇವಿ ಸತ್ತ ಕೆಲವೇ ವರ್ಷಗಳಲ್ಲಿ ಸೂರಪ್ಪನಿಗೆ ಮರು ಮದುವೆ ಮಾಡಿ ಆ ಮಕ್ಕಳಲ್ಲಿ ಒಬ್ಬರಿಗೆ ದೇವಿ ಎಂದು ಕರೆಯುವುದರ ಮೂಲಕ ತನ್ನ ಪ್ರೀತಿಯನ್ನು ದೃಢ ಪಡಿಸುವುದರ ಫಲವಾದರೂ ಏನು? ಎಂಬ ಪ್ರಶ್ನೆಗೆ ಉತ್ತರ ಶೂನ್ಯ. ದೇವಿಯ ಒಡಲ ಕುಡಿ ಚಂದು ತಬ್ಬಲಿಯಾಗಿದ್ದು, ದೇವಿಯ ಆತ್ಮಹತ್ಯೆ ಆಕೆಯ ತ್ಯಾಗಕ್ಕೆ ಸಿಕ್ಕ ಬೆಲೆಯಾದರೂ ಏನು? ಧರ್ಮೋ ರಕ್ಷತಿ ರಕ್ಷಿತಃ ಎಂಬುದರ ಆಧಾರದನ್ವಯ ದೇವಿ ರಕ್ಷಿಸಿಕೊಂಡು ಬಂದ ಆ ಧರ್ಮ ಸತ್ಯ ಸಹಿಷ್ಣುತೆಗಳು ಆಕೆಯನೇಕೆ ರಕ್ಷಿಸಲಿಲ್ಲ? ಆಕೆಯ ಮಗುವಿಗೆ ಎಲ್ಲಿ ದೊರೆಯಿತು ಪ್ರೀತಿ ಮಮಕಾರ? ಇಂತಹ ಹಲವು ಪ್ರಶ್ನೆಗಳನ್ನು ಎದೆಗವಚಿಕೊಂಡು ಮಮ್ಮಲ ಮರುಗುವಂತಹ ಕಥೆಯೇ ಈ ಧರ್ಮಕೊಂಡದ ಕಥೆ.

- ವಾಣಿ ಭಂಡಾರಿ

ಈ ಅಂಕಣದ ಹಿಂದಿನ ಬರಹಗಳು:
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...