ಶರಣರ ದೇವರು

Date: 31-01-2022

Location: ಬೆಂಗಳೂರು


‘ಬಸವಣ್ಣನು ಕೇವಲ ವೈದಿಕ ಧರ್ಮದ ದೇವರುಗಳನ್ನು ಮಾತ್ರ ನಿರಾಕರಿಸುವದಿಲ್ಲ. ಶೈವ ಧರ್ಮದ ದೇವರನ್ನೂ ನಿರಾಕರಿಸುತ್ತಾನೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣ ಧರ್ಮ’ ಅಂಕಣದಲ್ಲಿ ಶರಣರು ಕಂಡ ದೇವರುಗಳು ಮತ್ತು ಅವರ ಗ್ರಹಿಕೆ, ಆಲೋಚನೆಗಳ ಕುರಿತು ಚರ್ಚಿಸಿದ್ದಾರೆ.

ಬಹುತೇಕ ಎಲ್ಲ ಧರ್ಮಗಳ ಕೇಂದ್ರ ದೇವರಾಗಿದ್ದಾನೆ. ಬೌದ್ಧಧರ್ಮ ಮಾತ್ರ ದೇವರ ಬಗ್ಗೆ ಮಾತನಾಡುವದಿಲ್ಲ, ಚಾರ್ವಾಕ ಧರ್ಮವು ದೇವರ ಪರಿಕಲ್ಪನೆಯನ್ನೇ ನಿರಾಕರಿಸುತ್ತದೆ. ಆದರೆ ಶರಣರ ದೇವರು ವಿಚಿತ್ರವಾಗಿದ್ದಾನೆ. ಜೈನ ಧರ್ಮೀಯರಿಗೆ ಜಿನ ದೇವರಾಗಿದ್ದರೆ, ವೈಷ್ಣವ ಧರ್ಮದವರಿಗೆ ವಿಷ್ಣು ದೇವರಾಗಿದ್ದಾನೆ. ಸಿಖ್ ಧರ್ಮೀಯರಿಗೆ ಗುರುನಾನಕ ದೇವರಾಗಿದ್ದರೆ, ಶೈವರಿಗೆ ಶಿವ ದೇವರಾಗಿದ್ದಾನೆ. ಇನ್ನು ಹೊರಗಿನಿಂದ ಬಂದ ಇಸ್ಲಾಂ ಧರ್ಮದ ದೇವರು ಅಲ್ಲಾ ಆಗಿದ್ದರೆ, ಕ್ರಿಶ್ಚಿಯನ್ ಧರ್ಮದ ದೇವರು ಏಸುಕ್ರಿಸ್ತನಾಗಿದ್ದಾನೆ.

ಶರಣರು ಚಾರ್ವಾಕರಂತೆ ದೇವರ ಪರಿಕಲ್ಪನೆಯನ್ನು ತಿರಸ್ಕರಿಸುವುದಿಲ್ಲ. ಬೌದ್ಧರಂತೆ ದೇವರ ಬಗ್ಗೆ ಮೌನವಾಗಿರುವುದಿಲ್ಲ, ಉಳಿದ ಧರ್ಮದವರಂತೆ ಯಾರನ್ನೂ ಇವರು ದೇವರೆಂದು ಪರಿಗಣಿಸುವದಿಲ್ಲ. ಈ ಕಾರಣಕ್ಕಾಗಿಯೇ ಈ ಧರ್ಮ ವಿಚಿತ್ರವಾಗಿದೆ. ಇತ್ತ ಆಸ್ತಿಕವೂ ಆಗಿರದ, ಅತ್ತ ನಾಸ್ತಿಕವೂ ಆಗಿರದ ತುಂಬ ವಿಶಿಷ್ಟ ಧರ್ಮ ಇದಾಗಿದೆ. ಶರಣರು ದೇವರನ್ನು ಒಪ್ಪುತ್ತಾರೆ, ನಂಬುತ್ತಾರೆ, ಪೂಜಿಸುತ್ತಾರೆ. ಆದರೆ ಉಳಿದ ಧರ್ಮಗಳಲ್ಲಿರುವ ದೇವರಂತೆ ಇವರ ದೇವರಿಲ್ಲ. ಉಳಿದ ಧರ್ಮಗಳ ದೇವರು ಮೂರ್ತರೂಪದಲ್ಲಿದ್ದರೆ, ಇವರ ದೇವರು ಅಮೂರ್ತನಾಗಿದ್ದಾನೆ. ತನ್ನೊಳಗಿರುವ ಆತ್ಮನೇ ಇವರ ಪರಮಾತ್ಮನಾಗಿದ್ದಾನೆ. ಆ ಪರಮಾತ್ಮನನ್ನು ಕಾಣಲು ಇಷ್ಟಲಿಂಗವೆಂಬುದು ಒಂದು ಮಾಧ್ಯಮವಾಗಿದೆ.                

ಶಿಷ್ಟವೆಂದು ಕರೆಸಿಕೊಳ್ಳುವ ಶೈವ-ವೈಷ್ಣವ-ಜೈನ-ಸಿಖ್-ಇಸ್ಲಾಂ-ಕ್ರೈಸ್ತ ಧರ್ಮಗಳಿಗೆ ಒಂದೊಂದು ದೇವರಿದ್ದರೆ; ಜನಪದರಿಗೆ ಅನೇಕ ದೇವರುಗಳಿವೆ. ಈ ಎಲ್ಲ ದೇವರುಗಳನ್ನು ನಿರಾಕರಿಸಿದ ಲಿಂಗಾಯತ ಧರ್ಮವು ಆತ್ಮನನ್ನೇ ಪರಮಾತ್ಮನೆಂದು ಭಾವಿಸಿದೆ; ನರನನ್ನೇ ಹರನೆಂದು ತಿಳಿದುಕೊಂಡಿದೆ, ವ್ಯಕ್ತಿಯಲ್ಲಿಯೇ ಶಕ್ತಿಯನ್ನು ಕಂಡುಕೊಂಡಿದೆ. ಹೀಗಾಗಿ ಇಲ್ಲಿ ಶಿವನಿಗಿಂತ ಶಿವಶರಣ ಅಧಿಕನೆಂದೆನಿಸಿದ್ದಾನೆ; ಸ್ಥಾವರಕ್ಕಿಂತ ಜಂಗಮ (ಚಲನಶೀಲತೆ) ಶ್ರೇಷ್ಠನಾಗಿದ್ದಾನೆ. ಹೀಗಾಗಿ ಶರಣರ ದೇವರ ಪರಿಕಲ್ಪನೆ ಇತರರಿಗೆ ವಿಚಿತ್ರವಾಗಿ ಕಾಣಿಸುತ್ತದೆ.

ಎಲ್ಲ ಧರ್ಮಗಳು ಪಿಂಡಾಂಡ-ಬ್ರಹ್ಮಾಂಡ ಹಾಗೂ ಪಂಚಭೂತಗಳ ಬಗ್ಗೆ ಹೆಚ್ಚು ಮಾತನಾಡಿವೆ. ಉಳಿದ ಧರ್ಮಗಳಲ್ಲಿ ಪಿಂಡಾಂಡ-ವ್ಯಕ್ತಿಯಾದರೆ, ಬ್ರಹ್ಮಾಂಡ-ದೇವರು. ಪಿಂಡಾಂಡ ಮತ್ತು ಬ್ರಹ್ಮಾಂಡ ಬೇರೆ-ಬೇರೆ, ಜೀವ-ದೇವ ಬೇರೆ-ಬೇರೆ ಎಂದು ದ್ವೈತಧರ್ಮ ಹೇಳಿದರೆ, ಲಿಂಗಾಯತ ಧರ್ಮವು ಪಿಂಡಾಂಡ-ಬ್ರಹ್ಮಾಂಡ ಬೇರೆಬೇರೆಯಲ್ಲವೆಂದು ಹೇಳುತ್ತದೆ. ಬ್ರಹ್ಮಾಂಡದಲ್ಲಿರುವ ಪಂಚಭೂತಗಳು ಪಿಂಡಾಂಡದಲ್ಲಿರುವುದರಿಂದ “ಪಂಚಭೂತಮಯಂ ದೇಹಂ” ಎಂದು ಹೇಳಿದ ಶರಣರು “ಬ್ರಹ್ಮಾಂಡದಲ್ಲುಳ್ಳ ಜನನ ಪಿಂಡಾಂಡದಲ್ಲುಂಟು, ಪಿಂಡಾಂಡದಲ್ಲುಳ್ಳ ಜನನ ಬ್ರಹ್ಮಾಂಡದಲ್ಲುಂಟು” ಎಂದು ಹೇಳಿ ಪಿಂಡಾಂಡವೇ ಬ್ರಹ್ಮಾಂಡವಾಗಿದೆಯೆಂದು ಸ್ಪಷ್ಟಪಡಿಸಿದ್ದಾರೆ.

ಶಿವನಿಗೂ ಶಿವಭಕ್ತನಿಗೂ ವ್ಯತ್ಯಾಸವಿಲ್ಲವೆಂದನ್ನು ಶರಣರು ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ವೃಕ್ಷಕ್ಕೂ, ವೃಕ್ಷದಿಂದಾದ ಬೀಜಕ್ಕೂ ಭಿನ್ನತೆಯಿಲ್ಲ; ಚಂದ್ರನಿಗೂ ಚಂದ್ರನಿಂದಾದ ಕಳೆಗೂ ಭಿನ್ನತೆಯಿಲ್ಲ, ಅಗ್ನಿಗೂ ಅಗ್ನಿಯಿಂದಾದ ಕೆಂಡಕ್ಕೂ ಭಿನ್ನತೆಯಿಲ್ಲ. ಅದೇ ರೀತಿ ಶಿವನಿಗೂ-ಶಿವನಿಂದಾದ ಭಕ್ತಿನಿಗೂ ಭಿನ್ನತೆಯಿಲ್ಲವೆಂದು ಶರಣರು ಸ್ಪಷ್ಟಪಡಿಸಿದ್ದಾರೆ.                

ಅನೇಕ ವಚನಕಾರರ ವಚನಗಳು ಇದೇ ರೀತಿಯಾಗಿ ಅಭೇದ ತತ್ವವನ್ನು ಹೇಳಿವೆ. “ತನ್ನ ಮರೆದು ದೇವರ ಕಂಡೆವೆಂಬ ಕಾರಣ ಹರಿಸುವ ಬ್ರಹ್ಮಾದಿಗಳು ತಲೆಕೆಳಗಾಗಿ ಹೋದರೆಂದು” ಅಂಬಿಗರಚೌಡಯ್ಯ ಹೇಳಿದ್ದಾನೆ. ತನ್ನ ಇನ್ನೊಂದು ವಚನದಲ್ಲಿ ಚೌಡಯ್ಯ ಶಿವನ ನಿಜವಾದ ರೂಪವನ್ನು ಹೀಗೆ ಹೇಳಿದ್ದಾನೆ.

 “ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರಗವಿಲ್ಲ
  ಬ್ರಹ್ಮ ಕಪಾಲವಿಲ್ಲ, ಭಸ್ಮ ಭೂಷಣನಲ್ಲ,
  ವೃಷಭ ವಾಹನನಲ್ಲ, ಋಷಿಗಳೊಡನಿದ್ದಾತನಲ್ಲ
  ಎಸಗುವ ಸಂಸಾರದ ಕುರುಹಿಲ್ಲದಾತಂಗೆ
  ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ”
-ಅಂಬಿಗರ ಚೌಡಯ್ಯ(ಸ.ವ.ಸಂ.೬, ವ:೪೬,೧೯೯೩)                

ಚೌಡಯ್ಯನ ದೇವರು ತ್ರಿಶೂಲ ಹಿಡಿದ ದೇವರಲ್ಲ, ಬ್ರಹ್ಮಕಪಾಲವನ್ನು ಹಿಡಿದ ದೇವರಲ್ಲ. ಆತನಿಗೂ ಕುರುಹಿಲ್ಲ, ಹೆಸರಿಲ್ಲವೆಂದು ತಿಳಿಸಿದ್ದಾನೆ. ರೂಪವಿಲ್ಲದೆ, ಹೆಸರಿಲ್ಲದ, ಮೂರ್ತನಲ್ಲದ ಅಮೂರ್ತ ದೇವರ ಬಗ್ಗೆ ಶರಣರು ಹೇಳಿದ್ದಾರೆ. ತ್ರಿಶೂಲವನ್ನೆತ್ತಿ ಹಿಡಿದು ಹೆದರಿಸುವ ಶಿವಪುರಾಣದ ಶಿವನಿಗಿಂತ, ಶರಣರು ತಮ್ಮೊಳಗೆ ಕಂಡುಕೊಂಡ ಶಿವ ಅಂತಃಕರಣೆಯಾಗಿದ್ದಾನೆ, ದಯಾಮಯಿಯಾಗಿದ್ದಾನೆ. ಅಂತೆಯೇ ಬಸವಣ್ಣನವರು “ಈ ಭಯಾನಾಕ ದೇವರುಗಳ ಬಗ್ಗೆ ಜಾಗೃತಿವಾಗಿರಬೇಕು”- ಎಂದು ತಿಳಿಸಿದ್ದಾರೆ. ದೇವರ ನಿಲುವು ಮೂರ್ತವಾದುದಲ್ಲ ಅದು ಅಮೂರ್ತವಾದುದೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ತಿಳಿಸಿದ್ದಾಳೆ.

“ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚನ್ನಮಲ್ಲಿಕಾರ್ಜುನನ ನಿಲವನರಿಯಲಾಗದು....”
-ಅಕ್ಕಮಹಾದೇವಿ (ಸ.ವ.ಸಂ.೫,ವ:೨೬೮, ೧೯೯೩)                

ಈ ವಚನದ ಆರು ಸಾಲುಗಳಲ್ಲಿ “ಮರೆಯ” ಎಂಬ ಪದ ಆರು ಸಲ ಬಂದಿದೆ. ಈ “ಮರೆಯ”- ಕಾಣದ ಎಂಬುದು ಅಮೂರ್ತ. ನೆಲ-ಫಲ-ಶಿಲೆ-ತಿಲ-ಮರ ಇವೆಲ್ಲಾ ಮೂರ್ತ. ಹೀಗೆ ಮೂರ್ತದ ಮೂಲಕ. ಅಮೂರ್ತ ಒಳಗಣ್ಣಿಗೆ ಕಾಣಿಸುತ್ತದೆ. ಅಂತರಂಗಕ್ಕೆ ತಿಳಿಯುತ್ತದೆ. ಈ ಎಲ್ಲ ಉದಾಹರಣೆಗಳನ್ನು ಕೊಡುತ್ತ ಆತ್ಮನ ಮೂಲಕ ಪರಮಾತ್ಮನನ್ನು ಕಂಡುಕೊಳ್ಳುವ ದೇವರ ಪರಿಕಲ್ಪನೆಯನ್ನು ಶರಣರು ಕಟ್ಟಿಕೊಟ್ಟಿದ್ದಾರೆ. ಲಿಂಗಾಯತ ಧರ್ಮವು ಪರವನ್ನು ತಿರಸ್ಕರಿಸುವುದಿಲ್ಲ, ಇಹವನ್ನು ಕಡೆಗಣಿಸುವುದಿಲ್ಲ. ಇಹದ ಮೂಲಕವೇ ಪರವನ್ನು ಕಂಡ, ಆತ್ಮನ ಮೂಲಕವೇ ಪರಮಾತ್ಮನನ್ನು ಕಂಡುಕೊಂಡ ವಿಶಿಷ್ಟ ಧರ್ಮವಾಗಿದೆ. ನರನೇ-ಹರನಾಗಿ ಬೆಳೆದು ನಿಲ್ಲುವ, ವ್ಯಕ್ತಿ ಸಾಧ್ಯತೆಗಳಿಗೆ ಮನ್ನಣೆಕೊಟ್ಟ ಮಹತ್ವದ ಧರ್ಮ ಇದಾಗಿದೆ. ದೇವರ ನಿಲುವು ಎಂತಹದ್ದೆಂಬುದನ್ನು ಬಸವಣ್ಣ ತನ್ನ ವಚನದಲ್ಲಿ ಸುಂದರವಾಗಿ ಹೇಳಿದ್ದಾನೆ.

“ಉದಕದೊಳಗೆ ಬಯ್ಚಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು
ನನೆಯೊಳಗಣ ಪರಿಮಳದಂತಿದ್ದಿತ್ತು
ಕೂಡಲ ಸಂಗಮದೇವರ ನಿಲುವು,
ಕನ್ಯೆಯ ಸ್ನೇಹದಂತಿದ್ದಿತ್ತು”
  -ಬಸವಣ್ಣ(ಸ.ವ.ಸಂ.೧,ವ:೧,೧೯೯೩)                

ಅಕ್ಕಮಹಾದೇವಿಯ ವಚನದಲ್ಲಿರುವ ಅಮೂರ್ತ ಪರಿಕಲ್ಪನೆ ಇಲ್ಲಿಯೂ ವ್ಯಕ್ತವಾಗಿದೆ. ಉದಕದೊಳಗಿನ-ಕಿಚ್ಚು, ಸಸಿಯೊಳಗಣ-ರಸ, ನನೆಯೊಳಗಣ-ಪರಿಮಳ ಇವು ಬೇರೆ ಬೇರೆಯಲ್ಲವೆಂದು ಹೇಳುತ್ತಲೇ ಅಂತರಂಗ ದೇವರು ಎಷ್ಟೊಂದು ಸುಂದರವಾಗಿದ್ದಾನೆಂಬುದನ್ನು ಇಲ್ಲಿ ವಿವರಿಸಲಾಗಿದೆ. ವಚನದ ಕೊನೆಯ ಎರಡು ಸಾಲುಗಳು ತುಂಬ ಹೊಸತನದಿಂದ ಕೂಡಿವೆ. ದೇವರು ಮತ್ತು ದೇವಸ್ಥಾನಗಳಿಂದ ಮಹಿಳೆಯನ್ನು ದೂರವಿಟ್ಟಿದ್ದ ಕಾಲಘಟ್ಟದಲ್ಲಿ ಬಸವಣ್ಣನ ಈ ವಚನ ತುಂಬ ಕ್ರಾಂತಿಕಾರಕವಾಗಿ ಕಾಣಿಸುತ್ತದೆ. ಇಪ್ಪತ್ತೊಂದನೇ ಶತಮಾನದ ಇವತ್ತಿನ ಸಂದರ್ಭದಲ್ಲೂ ಮಹಿಳೆಯರು ದೇವಾಲಯ ಪ್ರವೇಶಿಸಲು ಚಳುವಳಿ ನಡೆಸುತ್ತಿದ್ದಾರೆ; ದೇವಾಲಯ ಪ್ರವೇಶ ಮಾಡಿದ ಚಿತ್ರನಟಿ ಜಯಾಮಾಲಾ ಪ್ರಕರಣ ಇನ್ನೂ ಕೋರ್ಟಿನಲ್ಲಿದೆ. ಧಾರ್ಮಿಕ ಪುರೋಹಿತಶಾಹಿಗಳು ಮಹಿಳೆಯನ್ನು ಇಪ್ಪತ್ತೊಂದನೆ ಶತಮಾನದಲ್ಲಿಯೂ ತುಚ್ಛವಾಗಿ ಕಾಣುತ್ತಿರುವಾಗಿ ಬಸವಣ್ಣ, ಹನ್ನೆರಡನೆ ಶತಮಾನದಲ್ಲಿಯೇ ಮಹಿಳೆಗೆ ಗೌರವ ನೀಡಿದ್ದಾನೆ. ಕನ್ಯೆಯು ಮುಗ್ಧತೆಗೆ-ಸರಳತೆಗೆ ಸಂಕೇತ. ಅಂತಹ ಕನ್ಯೆಯ ಸ್ನೇಹದಲ್ಲಿ ದೇವರಿದ್ದಾನೆಂದು ಆ ಕಾಲಘಟ್ಟದಲ್ಲಿ ಹೇಳಿರುವುದು ಇಂದಿಗೂ ಮುಖ್ಯವೆನಿಸುತ್ತದೆ.

“ಕಲ್ಲಮನೆಯ ಮಾಡಿ ಕಲ್ಲದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ” ಎಂದು ಪ್ರಶ್ನಿಸುವ ಅಲ್ಲಮಪ್ರಭು “ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ”ವೆಂದು ಹೇಳುತ್ತಾ ಸ್ಥಾವರದೇವರಗಳನ್ನು ತಿರಸ್ಕರಿಸಿದ್ದಾನೆ.

 “ಊರೊಳಗೊಬ್ಬ ದೇವ ಮಡುವಿನಲೊಬ್ಬ ದೇವ
ಅಡವಿಯಲೊಬ್ಬ ದೇವ ಮಡಿಲಲೊಬ್ಬ ದೇವ
ನೀರ ನೀರ ಕೂಡಿ ಬಯಲು ಬಯಲು ಕೂಡಿ
ನರನೆಂಬ ದೇವ ತಾ ನಿರಾಳವೊ
ಲಿಂಗವೆಂಬುದೊಂದು ಅನಂತದ ಹೆಸರು
ಗುಹೇಶ್ವರನೆಂಬುದದೇನೊ”
-ಅಲ್ಲಮಪ್ರಭು (ಸ.ವ.ಸಂ೨,ವ:೫೨೫, ೧೯೯೩)

ಜನರು ನೂರಾರು ದೇವರುಗಳನ್ನು ನಂಬಿಕೊಂಡು, ಎಲ್ಲ ದೇವಾಲಯಗಳಿಗೆ ಸುತ್ತಿ, ಪುಜಾರಿಗಳಿಂದ-ಪುರೋಹಿತರಿಂದ ಶೋಷಣೆಗೊಳಗಾತ್ತಿದ್ದುದನ್ನು ಕಂಡು ಅಲ್ಲಮಪ್ರಭು ಇಲ್ಲಿ ವಿಡಂಬಿಸಿದ್ದಾನೆ.

 “ಕಲ್ಲು ದೇವರೆಂದು ನಂಬಿ ಪೂಜಿಸಿದವರೆಲ್ಲರೂ
  ಕಲಿಯುಗದ ಕತ್ತೆಗಳಾಗಿ ಸಿಲ್ಕಿ ಕೆಟ್ಟಳಿದು ಹೋದರು ನೋಡಾ
  ಮಣ್ಣು ದೇವರೆಂದು ನಂಬಿ ಪೂಜೆ ಮಾಡಿದವರೆಲ್ಲರೂ
  ಮುಕ್ತಿಪಥ ಕಾಣದೆ ಕೆಟ್ಟು ಶುನಿಸೂಕರಾದಿಗಳಾಗಿ
  ಕೆಟ್ಟು ಹೋದರು ನೋಡಾ......”
 -ಮೋಳಿಗೆ ಮಾರಯ್ಯಾ(ಸ.ವ.ಸಂ.೮,ವ:೧೬೪೩,೧೯೯೩)                

ಎಂದು ವಿಡಂಬಿಸಿರುವ ಮೋಳಿಗೆ ಮಾರಯ್ಯನು ಕಲ್ಲುದೇವರ ಪೂಜಿಸುವವರನ್ನು ಕಲಿಯುಗದ ಕತ್ತೆಗಳೆಂದು ಕರೆದಿದ್ದಾನೆ. ಮಣ್ಣು ದೇವರ ಪೂಜೆ ಮಾಡಿದವರು ಮುಕ್ತಿ ಕಾಣದೆ ಹೋದರೆಂದು ತಿಳಿಸಿದ್ದಾನೆ. ಹೀಗೆ ಸ್ಥಾವರ ದೇವರುಗಳನ್ನು ನಿರಾಕರಿಸಿದ ಈ ಶರಣರು ಇಷ್ಟಲಿಂಗ ಪೂಜೆಯ ಮಹತ್ವವನ್ನು ಹೇಳಿದ್ದಾರೆ. “ಎಲ್ಲ ದೇವರಿಗೆ ಮಸ್ತಕ ಪೂಜೆಯಾದರೆ. ನಮ್ಮ ಗುರು-ಲಿಂಗ-ಜಂಗಮಕ್ಕೆ ಉಂಗುಷ್ಟಪೂಜೆ ನೋಡಾ” ಎಂದು ಹೇಳುತ್ತಾ ತನ್ನ ದೇವರು ಬಡವನಲ್ಲಿದ್ದಾನೆ. ಜಂಗಮನಲ್ಲಿದ್ದಾನೆ. ಅಂತಹ ಜಂಗಮ ಇಕ್ಕಿದಡೆ ಉಣ್ಣುತ್ತಾನೆ, ಕರೆದರೆ ಮಾತನಾಡುತ್ತಾನೆ. ತಪ್ಪಿದರೆ ಬುದ್ಧಿ ಹೇಳುತ್ತಾನೆ. ಇಂಥ ಶ್ರೇಷ್ಠ ದೇವರನ್ನು ಬಿಟ್ಟು “ಭೂತ-ಪ್ರೇತ-ಪಿಶಾಚಿಗಳಿಗೆ ಅನ್ನವನಿಕ್ಕಿ ನಿಧಾನವ ಪಡೆವೆನೆಂಬಭವಭಾರಿಗೆ ನಾಯಕನರಕ ತಪ್ಪದು ನೋಡಾ” ಎಂದು ಮೋಳಿಗೆಯ ಮಾರಯ್ಯಾ ಈ ವಚನದಲ್ಲಿ ಮುಂದುವರಿದು ವಿವರಿಸಿದ್ದಾನೆ. ಹೀಗೆ ಅನೇಕ ವಚನಕಾರರು ಮನುಷ್ಯನಲ್ಲಿಯೇ ದೇವರನ್ನು ಕಂಡಿದ್ದಾರೆ.                

ದೇವರ ಹೆಸರಿನಲ್ಲಿ ನಡೆಯುವ ವ್ರತ-ನೇಮಗಳ ಬಗ್ಗೆಯೂ ವಚನಕಾರರು ವಿಡಂಬನೆ ಮಾಡಿದ್ದಾರೆ. ದೇವರಿಗೆ ಅದು ಪ್ರಿಯ, ಇದು ಪ್ರಿಯ ಎಂದು ಹೇಳಿಕೊಂಡು ತಿರುಗುವ ಡಾಂಭಿಕ ಭಕ್ತರನ್ನು ಶರಣರು ವಿಡಂಬಿಸಿದ್ದಾರೆ. 

“ಅರ್ಚನೆ ಪೂಜನೆ ನೇಮವಲ್ಲ
ಮಂತ್ರ ತಂತ್ರ ನೇಮವಲ್ಲ
ಧೂಪ ದೀಪಾರತಿ ನೇಮವಲ್ಲ
ಪರಧನ ಪರಸತಿ ಪರದೈವಗಳಿಗೆರಗದಿಪ್ಪುದೇನೇಮ”
-ಸತ್ಯಕ್ಕ (ಸ.ವ.ಸಂ.೫,ವ:೨೦೭,೧೯೯೩)

ಎಂದು ಹೇಳಿರುವ ಸತ್ಯಕ್ಕ ಇಂತಹ ಮೌಢ್ಯ ವ್ರತಾಚರಣೆಗಳನ್ನು ಕುರಿತು ಕಟುವಾಗಿ ಟೀಕಿಸಿದ್ದಾರೆ. ಅದು ನೇಮವಲ್ಲ ಇದು ನೇಮ, ಅದು ಪೂಜೆಯಲ್ಲ ಇದು ಪೂಜೆ, ಅದು ದೇವರಲ್ಲ ಇದು ದೇವರು ಎಂದು ಸಣ್ಣಮಕ್ಕಳಿಗೆ ತಿಳಿಸುವಂತೆ ವಚನಕಾರರು ತಮ್ಮ ವಚನಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಅದು ಏಕೆ ನೇಮವಲ್ಲ, ಇದು ಏಕೆ ನೇಮ; ಅದು ಏಕೆ ದೇವರಲ್ಲ ಇದು ಏಕೆ ದೇವರು? ಎಂಬಂತಹ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಿದ್ದಾರೆ. ದೇವರ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಅದುವರೆಗೆ ದೇವರ ಬಗೆಗಿದ್ದ ಮೂಢನಂಬಿಕೆಗಳನ್ನು ನೇರವಾಗಿಯೇ ತಿರಸ್ಕರಿಸಿದ್ದಾರೆ.

“ಹಾಲ ನೇಮವ ಹಿಡಿದಾತ ಬೆಕ್ಕಾಗಿ ಹುಟ್ಟುವ. ಕಡಲೆಯ ನೇಮವ ಹಿಡಿದಾತ ಕುದುರೆಯಾಗಿ ಹುಟ್ಟುವ, ಅಗ್ಘವಣಿಯ ನೇಮವ ಹಿಡಿದಾತ ಕಪ್ಪೆಯಾಗಿ ಹುಟ್ಟುವ” ಎಂದು ವಿಡಂಬಿಸಿರುವ ಅಲ್ಲಮಪ್ರಭು ನಿಜಭಕ್ತಿಯೇ ನಿಜವಾದ ನೇಮವೆಂದು ಸ್ಪಷ್ಟಪಡಿಸಿದ್ದಾನೆ.

“ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯಾ,
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲವಯ್ಯಾ
ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತ್ತು,
ವೇದವನೋದಿದ ಬ್ರಹ್ಮನ ಶಿರಹೋಯಿತ್ತು!
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ”
-ಬಸವಣ್ಣ (ಸ.ವ.ಸಂ.೧, ವ:೧೮೧, ೧೯೯೩)

ಹೀಗೆ ದೇವರ ಹೆಸರಿನಲ್ಲಿ ನಡೆಯುವ ನಾದಗೋಷ್ಠಿ-ವೇದಗೋಷ್ಠಿಗಳನ್ನು ಕಂಡ ಬಸವಣ್ಣನು “ದೇವರು ಭಕ್ತಿಪ್ರಿಯನೆಂದು” ಹೇಳಿದ್ದಾನೆ. ಪರವಸ್ತುಗಳನ್ನು ಕೊಟ್ಟು ದೇವರನ್ನೊಲಿಸಬೇಕೆಂಬ; ವೇದ-ನಾದದ ಮೂಲಕ ದೇವರನ್ನೊಲಿಸಿಬೇಕೆಂಬ ಪ್ರಯತ್ನಗಳು ವ್ಯರ್ಥವೆಂದು ಸ್ಪಷ್ಟಪಡಿಸಿದ್ದಾನೆ. ಹೀಗೆ ಹೇಳಿ ಸುಮ್ಮನೇ ಬಿಡುವುದಿಲ್ಲ, ಅದನ್ನು ಒರೆಗೆ ಹಚ್ಚುತ್ತಾರೆ ಶರಣರು. ವೇದವನ್ನೋದಿದವನಿಗೇನಾಯಿತು, ನಾದವ ಮಾಡಿದವಗೇನಾಯಿತು ಎಂದು ಉದಾಹರಣೆಸಹಿತ ವಿವರಿಸುತ್ತಾರೆ. ವೇದವನ್ನೋದುವುದು ಸುಲಭ, ನಾದವನ್ನು ಮಾಡುವುದು ಸುಲಭ ಆದರೆ ಭಕ್ತಿಯನ್ನು ಮಾಡುವುದು ಬಲುಕಷ್ಟ. ದೇವರು ಭಕ್ತಿಪ್ರಿಯ ಎಂಬ ಮಾತು ತುಂಬ ಅರ್ಥಪೂರ್ಣವಾಗಿದೆ. ಭಕ್ತಿಯಲ್ಲಿ ಸಮರ್ಪಣಾ ಭಾವವಿರುತ್ತದೆ. ತಾನು-ದೇವ ಬೇರೆಬೇರೆಯಲ್ಲವೆಂಬ ಏಕೋಭಾವವಿರುತ್ತದೆ. ಆದುದರಿಂದ ಭಕ್ತಿಯ ಹೊರತು ಮತ್ತೇನೂ ಬೇಕಿಲ್ಲವೆಂಬುದನ್ನವರು ಸ್ಪಷ್ಟಪಡಿಸಿದ್ದಾರೆ. ಅದೇರೀತಿ “ಕೂಡಲಸಂಗಮ ದೇವರನರಿವಡೆ ಶರಣರ ಸಂಗವೇ ಮೊದಲು” ಎಂದು ಬಸವಣ್ಣ ಹೇಳಿದ್ದಾರೆ. ದೇವರನ್ನು ತಿಳಿದುಕೊಳ್ಳಲು ಪೂಜಾರಿಗಳು ಪುರೋಹಿತರು ಬೇಕಾಗಿಲ್ಲ, ಶರಣರ ಸಂಗದಲ್ಲಿದ್ದರೆ ಆ ಸತ್ಯ ಸಹಜವಾಗಿಯೇ ತಿಳಿಯುತ್ತದೆಂದು ತಿಳಿಸಿದ್ದಾರೆ.                

ದೇವರಸ್ಮರಣೆ-ದೇವರಧ್ಯಾನ-ದೇವರನೆನಪು ಸದಾ ಇರಬೇಕೆಂದು ಉಳಿದ ಧರ್ಮಗಳು, ಧರ್ಮ ಸಂಸ್ಥಾಪಕರು ಹೇಳುತ್ತಾರೆ. ಆದರೆ ಶರಣರು ಇದಕ್ಕೆ ಭಿನ್ನವಾಗಿ ಆಲೋಚಿಸುತ್ತಾರೆ. “ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು” ಎಂದು ಗುಡುಗಿದ ಗಜೇಶಮಸಯ್ಯಾ ತನ್ನ ವಚನವೊಂದರಲ್ಲಿ ಹೀಗೆ ಹೇಳಿದ್ದಾನೆ.

“ದೇವರ ನೆನೆವಂಗೆ ದೇವರುಂಟೆ
ದೂರದೂರದಲ್ಲಿದ್ದವರ ನೆನೆವರಲ್ಲದೆ
ಸಮೀಪದಲ್ಲಿದ್ದವರ ನೆನೆವುದಿಲ್ಲ
ಇದನರಿದು ನೀನೆನ್ನೊಳಗಡಗಿ
ನಾ ನಿನ್ನ ನೆನೆಯಲಿಲ್ಲ
ನೀನೆನಗೆ ಮುಕ್ತಿಯನೀಯಲಿಲ್ಲ
ನೀ ನಾ ಎಂದೆನಲಿಲ್ಲ ಮಹಾಲಿಂಗ ಗಜೀಶ್ವರಾ”
-ಗಜೇಶ ಮಸಣಯ್ಯ(ಸ.ವ.ಸಂ.೭,ವ:೨೨೯,೧೯೯೩)

ದೂರದಲ್ಲಿದ್ದವರನ್ನು ನೆನೆವುದು ಸಹಜ, ಆದರೆ ಸಮೀಪದಲ್ಲಿದ್ದವರನ್ನು ಯಾರೂ ನೆನೆಯುವದಿಲ್ಲ. ಈ ಸತ್ಯವನ್ನು ಎತ್ತಿಹಿಡಿದ ಗಜೇಶ ಮಸಣಯ್ಯ, ನಾ-ನೀ ಎಂಬ ಭೇದವಿಲ್ಲದ ಅಭೇದ ತತ್ವವನ್ನು ಪರಿಚಯಿಸುತ್ತಾನೆ. ನಾ ನಿನ್ನ ನೆನೆಯಲಿಲ್ಲ, ನೀ ಎನಗೆ ಮುಕ್ತಿಕೊಡಲಿಲ್ಲ. ಇದು ಯಾವಾಗ ಸಾಧ್ಯ? ಇಬ್ಬರೂ ಬೇರೆಬೇರೆಯವರಾಗಿದ್ದಾಗ; ಇಬ್ಬರೂ ಒಬ್ಬನೇ ಆದಾಗ ನೆನೆವುದು-ಮರೆವುದು, ಕೊಡುವುದು-ತೆಗೆದುಕೊಳ್ಳುವುದು ನಡೆಯುವುದೇ ಇಲ್ಲ. “ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ ಇದು ಮೆಲ್ಲ ಮೆಲ್ಲನೆ ಕಲ್ಲಾಗಿ ಬರುತ್ತಿದೆ. ಇದ ನಾನೊಲ್ಲೆ” ಎಂದು ನಗೆಯ ಮಾರಿತಂದೆ ಹೇಳಿದ್ದಾನೆ. ಅಂದರೆ ಇಷ್ಟಲಿಂಗ ಪೂಜೆಯೆಂಬುದು ಅಂತರಾತ್ಮನನ್ನು ಕಾಣಲು ಒಂದು ದಾರಿಯೇ ಹೊರತು ಅದೇ ದೇವರಲ್ಲವೆಂಬುದನ್ನು ನಗೆಯಮಾರಿತಂದೆ ತಿಳಿಸಿದ್ದಾನೆ.

“ಈಶ್ವರನ ಕಾಂಬುದೊಂದಾಸೆಯುಳ್ಳೊಡೆ
  ಪರದೇಶಕ್ಕೆ ಹೋಗಿ ಬಳಲದಿರು
  ಕಾಶಿಯಲ್ಲಿ ಕಾಯವನು ವಿನಾಶವ ಮಾಡಬೇಡ...”
 -ಅಂಬಿಗರ ಚೌಡಯ್ಯ.(ಸ.ವ.ಸಂ.೬, ವ:೬೪, ೧೯೯೩)

ದೇವರ ದರ್ಶನ ಮಾಡಬೇಕೆಂದು ಅನೇಕರು ಅನೇಕ ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿ ಕಾಶಿ, ರಾಮೇಶ್ವರ, ಕೇದಾರ, ಗೋಕರ್ಣ, ಶ್ರೀಶೈಲ, ಕೊಲ್ಲಿಪಾಕ, ಕಾಳಹಸ್ತಿ, ಕಂಚಿ ಈ ಮೊದಲಾದವು ಪುಣ್ಯಕ್ಷೇತ್ರಗಳೆಂದು ಪ್ರಸಿದ್ದಿಯಾಗಿವೆ. ಹೀಗೆ ಕಾಶಿಗೆ ಹೋಗಿ ನಿನ್ನ ದೇಹವನ್ನು ಹಾಳುಮಾಡಿಕೊಳ್ಳಬೇಡವೆಂದು ಅಂಬಿಗರಚೌಡಯ್ಯ ಈ ವಚನದಲ್ಲಿ ಸ್ಪಷ್ಟಪಡಿಸಿದ್ದಾನೆ. ಕ್ಷೇತ್ರಗಳಲ್ಲಿ ಪುಣ್ಯಕ್ಷೇತ್ರ-ಪಾಪಕ್ಷೇತ್ರ ಎಂಬುವುಗಳು ಇಲ್ಲ, ನೆಲನೊಂದೇ ಹೊಲಗೇರಿ ಶಿವಾಲಯಕ್ಕೆಂದು ಶರಣರು ಸ್ಪಷ್ಟಪಡಿಸಿದ್ದಾರೆ. ತನ್ನಲ್ಲಿ ತಾ ತಿಳಿದು ನೋಡಿದರೆ, ಜಗವೇ ತನ್ನೊಳಗಿರುವುದೆಂದು ಚೌಡಯ್ಯ ಹೇಳಿದ್ದಾನೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅಲ್ಲಮಪ್ರಭು ತನ್ನ ವಚನವೊಂದರಲ್ಲಿ ಹೀಗೆ ಹೇಳಿದ್ದಾನೆ.

“ನಾ ದೇವನಲ್ಲದೆ ನೀ ದೇವನೆ?
 ನೀ ದೇವನಾದಡೆ ಎನ್ನನೇಕೆ ಸಲಹೆ?
  ಆರೈದು, ಒಂದು ಕುಡಿಕೆ ಉದಕವನೆರೆವೆ
  ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
  ನಾ ದೇವಾ ಕಾಣಾ ಗುಹೇಶ್ವರಾ.”
 -ಅಲ್ಲಮಪ್ರಭು (ಸ.ವ.ಸಂ.೨, ವ:೫೫೮, ೧೯೯೩)                

ಇದು ಶರಣರ ಕೊನೆಯ ಮಾತು. ನಾ-ನೀ ಎಂದು ಸುತ್ತಿ ಬಳಸುವದೇಕೆ ನಾನೇ ದೇವಾ ನೋಡೋ ಎಂದು ಅಂತಿಮ ವಾಕ್ಯ ಬರೆಯುತ್ತಾರೆ. ನಮ್ಮ ದೇಶದ ಆಧ್ಯಾತ್ಮ ಕ್ಷೇತ್ರದಲ್ಲಿ ಪ್ರಚಲಿತದಲ್ಲಿದ್ದ “ಅಹಂ ಬ್ರಹ್ಮಾಸ್ಮಿ” ಎಂಬ ನುಡಿ ಇದನ್ನೇ ಹೇಳುತ್ತದೆ. ಹೀಗೆ ಶರಣರು ದೇವರ ಅಸ್ತಿತ್ವವನ್ನು ತನ್ನೊಳಗೇ ಕಂಡುಕೊಂಡರು. ಭಕ್ತನಾದವನು ಸಾಧನೆಯಿಂದ ತಾನೇ ಗುರು-ಲಿಂಗ-ಜಂಗಮವಾಗುತ್ತಾನೆ, ತಾನೇ ದೇವರಾಗುತ್ತಾನೆಂದು ಸ್ಪಷ್ಟಪಡಿಸಿದರು.

“ಪೂಜಕರೆಲ್ಲರೂ ಪೂಜಿಸುತ್ತಿದ್ದರು.
ಭಾವುಕರೆಲ್ಲರೂ ಬಳಲುತ್ತಿದ್ದರು.
ದೇವಿ ದೂಪ ನೈವೇದ್ಯವ ಮಾಡುತ್ತಿದ್ದಳು
ಆನು ದೇವರು ಇಲ್ಲ ಇಲ್ಲ ಎನ್ನುತ್ತಿದ್ದೆನು....”
-ಘಟ್ಟಿವಾಳಯ್ಯ. (ಸ.ವ.ಸಂ.೭, ವ:೫೦೦,  ೧೯೯೩)

ಘಟ್ಟಿವಾಳಯ್ಯನ ಈ ವಚನವನ್ನು ಓದಿದಾಗ, ಘಟ್ಟಿವಾಳಯ್ಯ ನಾಸ್ತಿಕನೆ? ಎಂಬ ಪ್ರಶ್ನೆ ಕಾಡುತ್ತದೆ. “ದೇವರು ಇಲ್ಲ ಇಲ್ಲ ಎನುತ್ತಿದ್ದೆನು” ಎಂದು ಸ್ಪಷ್ಟವಾಗಿ ಹೇಳಿದ ಮೇಲೆ, ಈ ಶರಣ ದೇವರಿಲ್ಲವೆಂದೇ ಹೇಳಿದ್ದಾನೆಂದು ಈ ವಚನದ ಮೊದಲ ಅರ್ಥ ತಿಳಿಸುತ್ತದೆ. ಆದರೆ ಲಿಂಗಾಯತ ಧರ್ಮದ ತಾತ್ವಿಕತೆಯನ್ನರಿತುಕೊಂಡಾಗ, ಘಟ್ಟಿವಾಳಯ್ಯ ಹೇಳಿದ್ದು ಹೊರಗೆ ದೇವರಿಲ್ಲ, ಒಳಗಿದ್ದಾನೆಂಬುದು ನಿಜವಾದ ಅರ್ಥವಾಗಿ ಅದೇ ಸಾಲಿನಿಂದ ಹೊರಡಲು ಸಾಧ್ಯವಾಗುತ್ತದೆ. ಶರಣರ ವಚನಗಳನ್ನು ಮತ್ತೆ ಮತ್ತೆ ಓದಿದಾಗ ಅನೇಕ ಅರ್ಥಗಳು ಬಿಚ್ಚಿಕೊಳ್ಳುತ್ತವೆ. ಇಲ್ಲಿ ಘಟ್ಟಿವಾಳಯ್ಯ ಮೊದಲೆರಡು ಸಾಲುಗಳಲ್ಲಿ ಪೂಜಕರ ಪೂಜೆ, ಭಾವುಕರ ಬಳಲಿಕೆಯನ್ನು ಹೇಳಿದ್ದಾನೆ. ಬಳಲುವುದು ಯಾವಾಗ? ದೇವಾಲಯಗಳಿಗೆ ಹೋಗಿ ಅನೇಕ ಮೆಟ್ಟಿಲುಗಳನ್ನು ಹತ್ತಿ ಸಾಲಿನಲ್ಲಿ ನಿಂತು ಸ್ಥಾವರಲಿಂಗದ ದರ್ಶನ ಪಡೆಯುವ ಹೊತ್ತಿಗೆ ಮೈಯಲ್ಲಾ ಬೆವುತು ಹೋಗಿರುತ್ತದೆ, ಬಳಲಿಕೆ ಪ್ರಾರಂಭವಾಗುತ್ತದೆ. ಆದುದರಿಂದ ಬಳಲಿಕೆಗೆ ಕಾರಣವಾಗುವ ದೇವರುಗಳ ದರ್ಶನ ಬೇಡ, ನಿನ್ನೊಳಗಡೆಯೇ ದೇವರಿದ್ದಾನೆ ಅಲ್ಲಿ ದೇವರನ್ನು ಕಂಡುಕೋ ಎಂಬರ್ಥದಲ್ಲಿ ಈ ವಚನ ರಚನೆಯಾಗಿದೆ. ದೇವರು ಇಲ್ಲ ಇಲ್ಲ ಎಂದು ಹೇಳುತ್ತಿರುವುದು ದೇವಾಲಯಗಳಲ್ಲಿ ಇಲ್ಲ ಎಂದರ್ಥವಾಗುತ್ತದೆ. ಏಕೆಂದರೆ ಮುಂದಿನ ವಚನಗಳಲ್ಲಿ ಆತ ಒಳಗಡೆ ಇರುವ ದೇವರ ಬಗೆಗೆ ಹೇಳುತ್ತಾ ಹೋಗುತ್ತಾನೆ.

 “ನಮ್ಮವರು ಭಕ್ತರಲ್ಲ
  ನಮ್ಮವರಿಗೆ ದೇವರಿಲ್ಲ
  ನಮ್ಮವರು ಜಂಗಮಕ್ಕೆ ಮಾಡುವವರಲ್ಲ
  ನಮ್ಮವರು ಜಂಗಮದ ಕೈಯಲ್ಲಿ ಮಾಡಿಸಿಕೊಂಬರು.......”
  -ಘಟ್ಟಿವಾಳಯ್ಯ (ಸ.ವ.ಸಂ.೭, ವ: ೪೮೨,೧೯೯೩)                

ಈ ವಚನದಲ್ಲಿಯೂ ಕೂಡ ಅದೇ ಭಾವ ಮುಂದುವರಿದಿದೆ. ನಮ್ಮವರು ಭಕ್ತರಲ್ಲ-ಎಂದರೆ, ದೇವಾಲಯಗಳ ಭಕ್ತರಲ್ಲವೆಂದೇ ಅರ್ಥ. ನಮ್ಮವರಿಗೆ ದೇವರಿಲ್ಲ-ಎಂದರೆ, ದೇವಾಲಯಗಳಲ್ಲಿ ದೇವರಿಲ್ಲವೆಂದೇ ಅರ್ಥ. ಹೊರಗೆ ಕಾಣುವ ಜಾತಿ ಜಂಗಮರಿಗೆ ನಮ್ಮವರು ಸೇವೆಮಾಡುವವರಲ್ಲ, ಅವರಿಂದಲೇ ಸೇವೆಯನ್ನು ಮಾಡಿಸಿಕೊಳ್ಳುವ ಶಕ್ತಿಯನ್ನು ಶರಣರು ಹೊಂದಿರುವರೆಂದು ಸ್ಪಷ್ಟಪಡಿಸಿದ್ದಾನೆ. ಅಂತೆಯೇ“ಶಿವನಿಗಿಂತ ಶಿವಶರಣನಧಿಕ” ಎಂಬ ಶರಣರ ನುಡಿ ಗಾದೆಮಾತಿನಂತೆ ಬಳಕೆಯಾಗಿದೆ. ಶಿವಶರಣನಾದವ ಯಾವಾಗ ಶಿವನಿಗಿಂತ ಅಧಿಕನಾಗುತ್ತಾನೋ, ಆಗ ಈ ಸ್ವಾಮಿಗಳೆಲ್ಲಾ ಅಂತಹ ಶರಣರ ಸೇವೆ ಮಾಡಬೇಕಾಗುತ್ತದೆ. ಸ್ವತಃ ಶಿವನೇ ಭಕ್ತರ ಮನೆ ಕಾದುದನ್ನು ಪುರಾತನರ ಕಥನಗಳಲ್ಲಿ ನೋಡುತ್ತೇವೆ. ದೇವರು ಚೋಳಮಹಾರಾಜನ ಅರಮನೆಗೆ ಹೋಗದೆ ಮಾದಾರ ಚೆನ್ನಯ್ಯನ ಮನೆಯ ಅಂಬಲಿಗಾಗಿ ಹಾತೊರೆಯುತ್ತಾನೆ. ಮಾದಾರ ಧೂಳಯ್ಯನ ಚಪ್ಪಲಿಯ ಮೊನೆಯಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ. ನಂಬಿಯಣ್ಣನಿಗೆ ಕುಂಟಲಗಿತ್ತಿಯಾಗಿ ಸೇವೆ ಮಾಡುತ್ತಾನೆ. ಹೀಗೆ ಅರವತ್ತು ಮೂರು ಪುರಾತನರ ನಿಷ್ಠಾಭಕ್ತಿ ಬಹುದೊಡ್ಡದು ಎಂಬುದನ್ನು ಶರಣರು ಕಂಡುಕೊಂಡರು. ಆ ಮೂಲಕ ಅವರು ದೇವರ ಪರಿಕಲ್ಪನೆಯನ್ನು ಹೊಸದಾಗಿ ಕಟ್ಟಿಕೊಂಡರು.

“ಕಲ್ಲುದೇವರು ದೇವರಲ್ಲ, ಮಣ್ಣದೇವರು ದೇವರಲ್ಲ
  ಮರದೇವರು ದೇವರಲ್ಲ, ಪಂಚಲೋಹದ ದೇವರು ದೇವರಲ್ಲ
  ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
  ಅಷ್ಟಾಷಷ್ಠಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ
  ತನ್ನ ತಾನರಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ,
  ಅಪ್ರಮಾಣ ಕೂಡಲಸಂಗಮದೇವ”
  -ಬಾಲಸಂಗಯ್ಯ (ಸ.ವ.ಸಂ.೧೩,೧೯೯೩)

ಈ ವಚನದಲ್ಲಿ ವಚನಕಾರ ಬಾಲಸಂಗಯ್ಯನು ಎರಡು ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಯಾವುದು ದೇವರು, ಯಾವುದು ದೇವರಲ್ಲವೆಂಬ ವಿಷಯ ಒಂದಾದರೆ, ಪುಣ್ಯಕ್ಷೇತ್ರಗಳ ವಿಷಯ ಮತ್ತೊಂದಾಗಿದೆ. ಕಲ್ಲು, ಮಣ್ಣು, ಮರ, ಪಂಚಲೋಹದಿಂದ ಸಿದ್ಧಪಡಿಸಿದ ಮೂರ್ತಿಗಳು ದೇವರಲ್ಲವೆಂದು ಮೊದಲೇ ತಿಳಿಸಿಹೇಳಿದ್ದಾನೆ. ಗೋಕರ್ಣ, ಕಾಶಿ, ಕೇದಾರದಂತಹ ಪುಣ್ಯಕ್ಷೇತ್ರಗಳಲ್ಲಿರುವ ದೇವರು ದೇವರಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ದೇವರು ದೇವಾಲಯಗಳಲ್ಲಿ, ಪುಣ್ಯಕ್ಷೇತ್ರಗಳಲ್ಲಿದ್ದಾನೆಂದು ತಿಳಿದುಕೊಂಡಿರುವ ಅನೇಕರಿಗೆ ಬಾಲಸಂಗಯ್ಯನ ಈ ವಚನ ಸ್ಪಷ್ಟ ಸಂದೇಶವಾಗಿದೆ. ದೇವರು ತನ್ನಲ್ಲಿಯೇ ಇದ್ದಾನೆ. ತನ್ನನ್ನು ತಿಳಿದುಕೊಂಡಾಗ ದೇವರು ತನ್ನೊಳಗಡೆಯೇ ಕಾಣಿಸುತ್ತಾನೆಂಬ ಸತ್ಯವನ್ನು ಬಾಲಸಂಗಯ್ಯ ಈ ವಚನದಲ್ಲಿ ಹೇಳಿದ್ದಾನೆ.                

ತನ್ನೊಳಗಿರುವ ದೇವರೆಂದರೆ ದಯೆ-ಅಂತಃಕರಣ-ಪ್ರೀತಿ-ಸಮರ್ಪಣೆಯಂತಹ ಮೌಲ್ಯಗಳೇ ಆಗಿದೆ. ಹೀಗೆ ಲಿಂಗಾಯತ ಧರ್ಮದಲ್ಲಿ ಮೌಲ್ಯಗಳೇ ದೇವರುಗಳಾಗಿವೆ. ಪ್ರತಿ ಮನುಷ್ಯ ದಯಾವಂತನಾದಾಗ, ಅಂತಃಕರಣಿಯಾದಾಗ ಆತನೇ ದೇವರಾಗುತ್ತಾನೆ. ದಯೆಯೇ ದೇವರ ರೂಪದಲ್ಲಿದ್ದಾನೆಂದು ಸ್ಪಷ್ಟಪಡಿಸಿದ ಶರಣರು, ದಯೆಯೇ ಧರ್ಮದ ಮೂಲವೆಂದು ಸ್ಪಷ್ಟಪಡಿಸಿದರು. ಆಗಲೇ ಜನಮನದಲ್ಲಿ ದೇವರೆಂದು ಗಟ್ಟಿಯಾಗಿ ಬೇರೂರಿದ್ದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಬಸವಣ್ಣನವರು ದೇವರೆಂದು ಒಪ್ಪಿಕೊಳ್ಳಲಿಲ್ಲ. ಬ್ರಹ್ಮ, ವಿಷ್ಣು, ರುದ್ರ ಪದವಿಗಳು ಅವರಿಗೆ ಬಹಳ ದೊಡ್ಡ ಪದವಿಗಳಾಗಿ ಕಾಣಿಸುವುದಿಲ್ಲ. ಈ ಎಲ್ಲ ಪದವಿಗಳನ್ನು ನಯವಾಗಿಯೇ ನಿರಾಕರಿಸಿದ ಅವರು ಸದ್ಭಕ್ತರ ಪಾದವನರಿಯುವ ಮಹಾಪದವಿಯ ಕರುಣಿಸಯ್ಯ ಎಂದು ಕೇಳಿಕೊಂಡಿದ್ದಾರೆ. ಅವರು ಸದ್ಭಕ್ತರಲ್ಲಿಯೇ ದೇವರನ್ನು ಕಂಡಿದ್ದಾರೆ. ಅವರಿಗೆ ಶಿವನಿಗಿಂತ ಶಿವಶರಣನೇ ಅಧಿಕನಾಗಿ ಕಾಣಿಸಿಕೊಂಡಿದ್ದಾನೆ. ಬ್ರಹ್ಮನಿಗೆ ವಾಕ್‌ಪರುಷ, ವಿಷ್ಣುವಿಂಗೆ ನಯನಪರುಷ, ರುದ್ರಂಗೆ ಹಸ್ತ ಪರುಷವಾದರೆ, ಕೂಡಲಸಂಗಮ ಶರಣಂಗೆ ಪಾದವೇ ಪರುಷವೆಂದು ಹೇಳಿದ್ದಾರೆ. ಪರುಷ ಶಕ್ತಿ ಮೇಲಿಲ್ಲ, ಕೆಳಗಿದೆ. ಮುಖ-ಕಣ್ಣು-ಹಸ್ತಗಳಲ್ಲಿ ಮಾತ್ರ ಅದು ಇಲ್ಲ, ಅದು ಇರುವುದು ಶರಣನ ಪಾದದಲ್ಲಿ ಹೀಗಾಗಿ ಈ ಎಲ್ಲ ದೇವರುಗಳಿಗಿಂತ ಶಿವಶರಣನೇ ಅವರಿಗೆ ದೊಡ್ಡ ದೇವರಾಗಿ ಕಂಡಿದ್ದಾನೆ.

ಬ್ರಹ್ಮ ಹೇಗೆ ದೇವರಲ್ಲವೊ, ಅದೇ ರೀತಿ-ವಿಷ್ಣುವೂ ದೇವರಲ್ಲವೆಂಬುದು ಶರಣರ ನಂಬಿಕೆ. ವಿಷ್ಣು ದೇವರಾಗಿದ್ದರೆ. ವರಾಹಾವತಾರದಲ್ಲಿ ಹಂದಿಯನ್ನೇಕೆ ತಿಂದ? ಮತ್ಸಾವತರದಲ್ಲಿ ಮೀನನ್ನೇಕೆ ತಿಂದ? ಕೂರ್ಮಾವತಾರದಲ್ಲಿ ಆಮೆಯನ್ನೇಕೆ ತಿಂದ? ಹರಿಣಾವತಾರದಲ್ಲಿ ಎರಳೆಯನ್ನೇಕೆ ತಿಂದ? ಎಂದು ಬಸವಣ್ಣ ಪ್ರಶ್ನಿಸಿದ್ದಾನೆ. (ವ:೧೩೬೨) ಹೀಗೆ ಅವತಾರಗಳ ಹೆಸರಿನಲ್ಲಿ ಪಶು-ಪ್ರಾಣಿಗಳನ್ನು ತಿನ್ನುವವರು ಹೇಗೆ ದೇವರಾಗುತ್ತಾರೆಂದು ಶರಣರು ಪ್ರಶ್ನೆ ಮಾಡಿದ್ದಾರೆ. ಹದಿನಾರು ಶಾಸ್ತ್ರ ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮಗಳನ್ನು ಓದಿ, ಕೇಳಿ ಹೋಮವನಿಕ್ಕೆ ಹೋತನ ಕೊಂದು ತಿಂಬುವುದಾವ ಆಚಾರ? ಎಂದು ಕೇಳಿದ್ದಾರೆ. ಹೀಗೆ ಬ್ರಹ್ಮ, ವಿಷ್ಣು ದೇವರುಗಳಲ್ಲವೆಂದು ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸಿದ್ದಾರೆ.  

“ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು
ಅದೇನು ಕಾರಣವೆಂದಡೆ:
ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ
ಇವರು ದೇವರೆಂಬುದ ನಾ ಒಲ್ಲೆನೆಂದಾತನಂಬಿಗ ಚೌಡಯ್ಯ”
-ಅಂಬಿಗರ ಚೌಡಯ್ಯ (ಸ.ವ.ಸಂ.೬,ವ:೨೧೧)

ಇಲ್ಲಿ ಅಂಬಿಗರ ಚೌಡಯ್ಯನು ಬ್ರಹ್ಮ, ವಿಷ್ಣು ಹಾಗೂ (ತೆತ್ತೀಸ) ಮೂವತ್ತು ಮೂರು ಕೋಟಿ ದೇವತೆಗಳನ್ನೆಲ್ಲ ನಾನು ಬಲ್ಲೆನೆಂದು ಹೇಳಿದ್ದಾನೆ. ಇವರನ್ನು ದೇವರೆಂದು ಒಪ್ಪಲಾಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. “ಬ್ರಹ್ಮನ ಘಟವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ, ಬ್ರಹ್ಮನು ಕಮಲದಲ್ಲಿ ಹುಟ್ಟಿದ” ಎಂದು ಪ್ರಾರಂಭವಾಗುವ ಆತನ ಇನ್ನೊಂದು ವಚನದಲ್ಲಿ ಕಮಲದೊಂದಿಗಿನ ಎಲ್ಲ ಸಂಬಂಧಗಳು ಘನವಲ್ಲವೆಂದು ಹೇಳುತ್ತಾನೆ. ಕಮಲ ಕೆಸರಲ್ಲಿ ಹುಟ್ಟಿದೆ, ಕೆಸರು ನೀರಲ್ಲಿ ಹುಟ್ಟಿದೆ, ನೀರು ಸಮುದ್ರದಲ್ಲಿ ಹುಟ್ಟಿದೆ ಹೀಗೆ ಈ ಕೊಂಡಿ ಬೆಳೆಯುತ್ತ ಹೋಗಿ ಇವರಾರೂ ಘನವಲ್ಲ ಆದುದರಿಂದ ಬ್ರಹ್ಮ-ವಿಷ್ಣು-ರುದ್ರ-ಮಹೇಶ ಇವರಾರೂ ದೇವರಲ್ಲವೆಂಬುದನ್ನು ಅಂಬಿಗರ ಚೌಡಯ್ಯ ಸ್ಪಷ್ಟಪಡಿಸಿದ್ದಾನೆ.

ಇವರೆಲ್ಲ ವೈದಿಕ ಧರ್ಮದ ಮೂಲದೇವತೆಗಳು. ಈ ಎಲ್ಲ ದೇವರುಗಳನ್ನು ಶರಣರು ನಿರಾಕರಿಸಿದ್ದಾರೆ, ಶಿವ ವೈದಿಕರಿಗೆ ಮೂಲದೇವರಲ್ಲ, ಅವನ ಬಗ್ಗೆ ವೇದ, ಉಪನಿಷತ್ತುಗಳಲ್ಲಿ ಪ್ರಸ್ತಾಪವಿಲ್ಲ. ಸ್ಮಶಾನವಾಸಿ, ಬೂದಿ ಬಡಕನೆಂದು ವೈದಿಕರೇ ಅವನನ್ನು ಅವಹೇಳನ ಮಾಡಿದ್ದಾರೆ. ಸಾವಿರಾರು ವರ್ಷಗಳ ನಂತರ ಶಿವನನ್ನೂ ಹಿಂದೂ ಧರ್ಮದ ತೆಕ್ಕೆಯೊಳಗೆ ಸೇರಿಸಿಕೊಳ್ಳಲಾಯಿತು. ಆಗ ಶೈವ ಬ್ರಾಹ್ಮಣರು ಅಸ್ತಿತ್ವಕ್ಕೆ ಬಂದರು. ವೈದಿಕ ಧರ್ಮದ ದೇವರುಗಳನ್ನೆಲ್ಲ ತಿರಸ್ಕರಿಸಿದ ಶರಣರು ಶಿವ ಅಥವಾ ಪರಮೇಶ್ವರನೂ ಘನವಲ್ಲವೆಂದು ಹೇಳಿದ್ದಾರೆ.

 “ಪಾರ್ವತಿದೇವಿಯ ಘನವೆಂತೆಂಬಿರಯ್ಯ, ಪಾರ್ವತಿದೇವಿ ಘನವಲ್ಲ
  ಪಾರ್ವತಿದೇವಿಯು ಪರಮೇಶ್ವರನ ಎಡಗಡೆಯ ತೊಡೆಯ ಬಿಟ್ಟು
  ಬಲಗಡೆಯ ತೊಡೆಯನರಿಯಳು
  ಪರಮೇಶ್ವರನು ಘನವೆಂತೆಂಬಿರಯ್ಯ, ಪರಮೇಶ್ವರನು ಘನವಲ್ಲ
  ಪರಮೇಶ್ವರನು ಭಕ್ತನಾದ ನಮ್ಮ ಬಸವಣ್ಣನ ಎದೆಯೊಳಗೆ
  ಅಡಗಿರ್ದನೆಂದು ವೇದಗಳೇ ಸಾರುವವು ಎಂದಾತ
  ನಮ್ಮ ಅಂಬಿಗರ ಚೌಡಯ್ಯ”
  -ಅಂಬಿಗರ ಚೌಡಯ್ಯ (ಸ.ವ.ಸಂ.೬,ವ:೨೧೦)

ಹೀಗೆ ಶರಣರು ವೈದಿಕ ದೇವರುಗಳನ್ನು ತಿರಸ್ಕರಿಸಿದಂತೆ, ಶಿವನನ್ನು ನಿರಾಕರಿಸಿದ್ದಾರೆ. ಪಾರ್ವತಿಯನ್ನೂ ನಿರಾಕರಿಸಿದ್ದಾರೆ. ಆದರೆ ಶೈವ-ವೀರಶೈವ ಧರ್ಮಗಳಲ್ಲಿ ಶಿವ-ಪಾರ್ವತಿ-ಗಣೇಶ-ಷಣ್ಮುಖ ಈ ಮೊದಲಾದ ದೇವರುಗಳನ್ನು ಪೂಜಿಸಲಾಗುತ್ತದೆ. ಲಿಂಗಾಯತ ಧರ್ಮಕ್ಕೂ-ಶೈವ-ವೀರಶೈವ ಧರ್ಮಗಳಿಗೂ ದೇವರು-ದೇವಾಲಯಗಳ ವಿಷಯದಲ್ಲಿ ತದ್ವಿರುದ್ಧವಾದ ಭಾವನೆಗಳಿಗೆ. ಈ ಕಾರಣಗಳಿಗಾಗಿಯೇ ಲಿಂಗಾಯತ ಧರ್ಮವು ಹಿಂದೂ ಧರ್ಮಗಳ ಸಿದ್ಧಾಂತಗಳನ್ನು ಒಪ್ಪದೇ ತನ್ನದೇ ಆದ ವಿಶಿಷ್ಟ ದೇವರು-ದೇವಾಲಯಗಳನ್ನು ಕಟ್ಟಿಕೊಂಡಿದೆ. ಆತ್ಮನ ಬೆಳಕೇ ಲಿಂಗಾಯತರ ದೇವರಾದರೆ, ಅವರ ದೇಹವೇ ದೇವಾಲಯವಾಗಿದೆ.

 “ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ?
  ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು
  ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೊ?”
 -ಸೊಡ್ಡಳ ಬಾಚರಸ (ಸ.ವ.ಸಂ.೯,ವ:೮೧೦)

ಈ ವಚನದಲ್ಲಿ ಸೊಡ್ಡಳಬಾಚರಸನು ವಿಷ್ಣು ದೇವರಲ್ಲ, ಆತ ಪರಿಪೂರ್ಣನಲ್ಲವೆಂದು ಉದಾಹರಣೆಗಳ ಮೂಲಕ ವಿವರಿಸಿದ್ದಾನೆ. “ವಿಷ್ಣುವಿನ ಬಾಣವು ಸಮುದ್ರಕ್ಕಡ್ಡಕಟ್ಟಿದಡೆ, ಕಪಿಸೈನ್ಯದಿಂದ ಸೇತುವೆ ಕಟ್ಟಿಸಿದರೆಕೆ? ವಿಷ್ಣು ಪರಿಪೂರ್ಣನಾದರೆ ರಾಮಣನ ವಧೆಗಂಜಿದ್ದೇಕೆ?” ಎಂದು ಪ್ರಶ್ನಿಸಿದ್ದಾನೆ. ಬಸವಣ್ಣನೂ ಕೂಡ ಅನೇಕ ವಚನಗಳಲ್ಲಿ ತನ್ನ ಇಷ್ಟದೈವವಾದ ಕೂಡಲಸಂಗಮನನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಕೆಲವು ವಚನಗಳನ್ನಿಲ್ಲಿ ನೋಡಬಹುದಾಗಿದೆ.

“ದಾಸನವಸ್ತ್ರವ ಬೇಡದ ಮುನ್ನ
ತವನಿಧಿಯನಿತ್ತಡೆ ನಿಮ್ಮ ದೇವರೆಂಬೆ
ಸಿರಿಯಾಳನ ಮಗನ ಬೇಡದ ಮುನ್ನ
ಕಂಚಿಯಪುರವ ಕೈಲಾಸಕ್ಕೊಯ್ದಡೆ ನಿಮ್ಮ ದೇವರೆಂಬೆ
 ಬಲ್ಲಾಳನ ವಧುವ ಬೇಡದ ಮುನ್ನ
ಸ್ವಯಂಲಿಂಗವ ಮಾಡಿದಡೆ ನಿಮ್ಮ ದೇವರೆಂಬೆ
ದೇಹಿ ನೀನು ವ್ಯಾಪಾರಿಗಳು ನಮ್ಮವರು
ಬೇಡು, ಕೂಡಲಸಂಗಮದೇವಾ ಎಮ್ಮವರ ಕೈಯಲು.
-ಬಸವಣ್ಣ (ಸ.ವ.ಸಂ.೧, ವ:೪೪೪)

ಬಸವಣ್ಣನು ಕೇವಲ ವೈದಿಕ ಧರ್ಮದ ದೇವರುಗಳನ್ನು ಮಾತ್ರ ನಿರಾಕರಿಸುವದಿಲ್ಲ. ಶೈವ ಧರ್ಮದ ದೇವರನ್ನೂ ನಿರಾಕರಿಸುತ್ತಾನೆ. ಭಕ್ತಿಯೆಂಬುದು ವ್ಯಾಪಾರವೆ? ಎಂದು ಕೂಡಲಸಂಗಮನನ್ನೇ ಪ್ರಶ್ನಿಸಿದ್ದಾನೆ. ಒಂದನ್ನು ಕೊಟ್ಟು ಮತ್ತೊಂದನ್ನು ಪಡೆದುಕೊಳ್ಳುವದು ವ್ಯಾಪಾರವಾಗುತ್ತದೆ. ಭಕ್ತಿಯು ವ್ಯಾಪಾರವಲ್ಲ, ಭಕ್ತ ವ್ಯಾಪಾರಿಗಳಲ್ಲವೆಂದು ಸ್ಪಷ್ಟಪಡಿಸಿದ್ದಾನೆ.                

ಹಿಂದಿನ ಉದಾಹರಣೆಗಳ ಮೂಲಕ ಬಸವಣ್ಣ ದೇವರನ್ನು ಪ್ರಶ್ನಿಸುತ್ತಾ ಹೋಗುತ್ತಾನೆ. ಜೇಡರದಾಸಿಮಯ್ಯನಿಂದ ಅಮೂಲ್ಯವಾದ ವಸ್ತ್ರವನ್ನು ಬೇಡುವ ಮುಂಚೆಯೇ ಆತನಿಗೆ ತವನಿಧಿಯನ್ನಿತ್ತಿದ್ದಡೆ ನಿನ್ನನ್ನು ದೇವರೆನ್ನುತ್ತಿದ್ದೆ. ಸಿರಿಯಾಳನ ಮಗನನ್ನು ಬೇಡಿ ಸಿರಿಯಾಳ ತನ್ನ ಮಗನನ್ನು ಕೊಲ್ಲುವ ಮೊದಲೇ ಅವನಿದ್ದ ಕಂಚಿಪುರವನ್ನು ಕೈಲಾಸಕ್ಕೊಯ್ದಿದ್ದರೆ. ನಿನ್ನನ್ನು ದೇವರೆನ್ನುತಿದ್ದೆ. ಅದೇ ರೀತಿ ಬಲ್ಲಾಳ ಹೆಂಡತಿಯನ್ನು ಬಯಸುವ ಮೊದಲು ಸ್ವಯಲಿಂಗವ ನೀಡಿದ್ದರೆ ನಿನ್ನನ್ನು ದೇವರೆನ್ನುತ್ತಿದ್ದೆ. ಹೀಗೆ ಭಕ್ತರಿಂದ ಬೇಡಿ ಪಡೆದು ಆ ಮೇಲೆ ಅವರಿಗೆ ವರವ ನೀಡುವುದು ವ್ಯಾಪಾರವಾಗುತ್ತದೆ. “ನೀನು ಬೇಡುವವ, ನಮ್ಮವರು ವ್ಯಾಪಾರಿಗಳು ಏನು ಬೇಡುತ್ತೀಯೋ ಬೇಡು” ಎಂದು ಕೂಡಲಸಂಗಮನನ್ನೇ ಬಸವಣ್ಣ ವಿಡಂಬಿಸಿದ್ದಾನೆ. ಹೀಗೆ ಬೇಡುವುದು ಕೊಡುವುದು ಭಕ್ತಿಯಲ್ಲ ಅದು ವ್ಯಾಪಾರವೆಂದು ನೇರವಾಗಿ ಹೇಳಿದ ಬಸವಣ್ಣ ಎಲ್ಲ ದೇವರುಗಳನ್ನು ಆಚೆ ನೂಕಿದ್ದಾನೆ.  “ಅಯ್ಯಾ ನಿಮ್ಮ ದೇವರೆಂದು ನಂಬಿ ಪೂಜಿಸಲಾಗದಯ್ಯಾ”, (ವ:೩೯೨) ಎಂದು ಮತ್ತೊಂದು ವಚನದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.

ಇವರೆಲ್ಲ ದೇವರುಗಳಲ್ಲವೆಂದು ಹೇಳಿದ ಬಸವಣ್ಣ ತನ್ನ ದೇವರು ಹೇಗಿದ್ದಾನೆಂಬುದನ್ನು ಈ ವಚನದಲ್ಲಿ ವಿವರಿಸಿದ್ದಾನೆ.

“ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು
ಇಮ್ಮನವಾದಡೆ ನುಡಿಯನು
ಕಾಣೆಯ ಸೋಲ, ಅರ್ಧಗಾಣೆಯಗೆಲ್ಲ
ಜಾಣ್ಣನೋಡವ್ವಾ ನಮ್ಮ ಕೂಡಲಸಂಗಮದೇವ”
-ಬಸವಣ್ಣ (ಸ.ವ.ಸಂ.೧, ವ:೧೧೫)

ಮೊದಲನೇ ವಚನದಲ್ಲಿ ಬಂದ ಕೂಡಲಸಂಗಮ ನೆಗಿಟಿವ್ ಆಗಿ ಕಂಡರೆ, ಈ ವಚನದಲ್ಲಿ ಬಂದಿರುವ ಕೂಡಲಸಂಗಮದೇವ ಪೊಸಿಟಿವ್ ಆಗಿ ಕಾಣಿಸಿದ್ದಾನೆ. ಈ ವಚನದಲ್ಲಿ ಲೌಕಿಕ ವ್ಯಾಪಾರದ ಪ್ರತಿಮೆಯನ್ನೇ ಬಳಸಿದ್ದರೂ, ಇಡೀ ವಚನ ಮಾತನಾಡುವುದು ಅನುಭವವನ್ನು ಕುರಿತೆಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಆತ್ಮ-ಪರಮಾತ್ಮಗಳ ಮುಖಾಮುಖಿಯಾಗಿದೆ. ಆತ್ಮ ಒಂದೇ ಮನದಿಂದ ಒಂದೇ ಭಾವದಿಂದ ಕರೆದರೆ ಮಾತ್ರ ಪರಮಾತ್ಮ ಮಾತನಾಡುತ್ತಾನೆ. ಆತ್ಮನಾದವನು ಇಮ್ಮನವ ತೋರಿದಡೆ, ಪರಮಾತ್ಮ ಮಾತನಾಡಲಾರ. ಈ ವಿಷಯದಲ್ಲಿ ಯಾವುದೇ ರಿಯಾಯಿತಿಯಿಲ್ಲ. ಅರ್ಧಕಾಣೆಯ ಸೋಲ, ಅರ್ಧಗಾಣೆಯ ಗೆಲ್ಲನೆಂಬ ಮಾತು ಇದನ್ನೇ ಹೇಳುತ್ತದೆ. ಇಲ್ಲಿಯ ಕೂಡಲಸಂಗಮ ಜಾಣನಾಗಿದ್ದಾನೆ. ಜ್ಞಾನಿಯಾಗಿದ್ದಾನೆ, ವಚನವು ವ್ಯಾಪಾರದ ಬಗೆಗೆ ಮಾತನಾಡಿದರೂ, ವ್ಯಾಪಾರವನ್ನು ಮೀರಿ ಬೆಳೆಯುತ್ತದೆ. ಭಕ್ತಿ ವ್ಯಾಪಾರವಲ್ಲವೆಂದು ಕೊನೆಗೆ ಸ್ಪಷ್ಟಪಡಿಸುತ್ತದೆ. ಒಂದೇ ಮನ, ಒಂದೇ ಧ್ಯಾನ, ಒಂದೇ ನಿಲುವು ಇದ್ದಾಗ ಮಾತ್ರ ಕೂಡಲಸಂಗನೆಂಬ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ಇಮ್ಮನದಿಂದ, ಸಂಶಯದಿಂದ, ಅಪನಂಬಿಕೆಯಿಂದ ನೋಡುವವರಿಗೆ ಇಲ್ಲಿ ಸ್ಥಳವಿಲ್ಲ. ಸತ್ಯವೇ ಇಲ್ಲಿಯ ದೇವರಾಗಿದ್ದಾನೆ, ಪ್ರಾಮಾಣಿಕ ಬದ್ಧತೆಯೇ ಇಲ್ಲಿಯ ಸ್ಥಾಯೀಭಾವವಾಗಿದೆ. ವಚನದ ಪ್ರಾರಂಭದಲ್ಲಿ ಬರುವ ಅಂಗಡಿ ಹಾಗೂ ಮಹಾದೇವಸೆಟ್ಟಿ ಪದಗಳು ವ್ಯಾಪಾರದ ಪರಿಭಾಷೆಯನ್ನು ಪ್ರಕಟಿಸಿದರೂ ಇಲ್ಲಿ ನಿಜವಾಗಿ ನಡೆದಿರುವುದು ಅಂತರಂಗದ ಹುಡುಕಾಟವಾಗಿದೆ. ಹೀಗಾಗಿ ಈ ವಚನವು ವ್ಯಾಪಾರದ ಮೂಲಕವೇ ನಿರ್ವ್ಯಾಪಾರವನ್ನು ಹೇಳುತ್ತದೆ. ಇಮ್ಮನದಂತಹ ಚಂಚಲತೆಯ ಮೂಲಕವೇ ಒಮ್ಮನವನ್ನು, ಧ್ಯಾನಸ್ಥಸ್ಥಿತಿಯನ್ನು ತಿಳಿಸುತ್ತದೆ.                

ಬಸವಣ್ಣನ ದೇವರು ತುಂಬ ವಿಶಿಷ್ಟವಾಗಿ ಅವರ ವಚನಗಳಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರತಿಭಟನೆ ಮತ್ತು ಪ್ರೀತಿ ಎರಡನ್ನೂ ತಮ್ಮ ದೇವರೊಂದಿಗೆ ಮಾಡಲು ಸಾಧ್ಯವಾಗಿರುವುದು ಕುತೂಹಲಕಾರಿಯಾಗಿದೆ. ಇಲ್ಲಿ ಬಂದಿರುವ ಮಹಾದೇವಸೆಟ್ಟಿ ಪಾರಮಾರ್ಥಿಕ ವ್ಯಾಪಾರಿಯಾಗಿದ್ದಾನೆ. ಇಮ್ಮನವನ್ನು ತೊಡೆದು ಒಮ್ಮನವನ್ನು ಮೂಡಿಸುವ ವೈದ್ಯನಾಗಿದ್ದಾನೆ. ಷಡ್‌ವೈರಿಗಳನ್ನು ಸಂಹರಿಸಿ, ಧ್ಯಾನದ ಮೂಲಕ ಜ್ಞಾನವನ್ನು ಕಲಿಸುವ ಮಹತ್ವದ ಗುರುವಾಗಿದ್ದಾನೆ. ಹೀಗಾಗಿ ಬಸವಣ್ಣನ ಪರಿಕಲ್ಪನೆಯ ದೇವರು ವೈವಿಧ್ಯಮಯನಾಗಿದ್ದಾನೆ. ತುಂಬ ವಿಶಷ್ಟವಾಗಿ ಕಾಣಿಸುತ್ತಾನೆ.

೧.“ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ,
ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ,
ಗುಹೇಶ್ವರಾ ನಿಮ್ಮ ಶರಣ ಸಂಬಂಧ”
-ಅಲ್ಲಮಪ್ರಭು (ಸ.ವ.ಸಂ.೨, ವ:೧)

೨. “ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ,
      ಬಯಲ ಮರೆಯಲಡಿಗಿದ ಮರೀಚಿಯಂತೆ...,
      ಕಂಗಳ ಮರೆಯಲಡಗಿದ ಬೆಳಗಿನಂತೆ ಗುಹೇಶ್ವರಾ ನಿಮ್ಮ ನಿಲವು”
     -ಅಲ್ಲಮಪ್ರಭು (ಸ.ವ.ಸಂ.೨, ವ:೪)     

ಅಲ್ಲಮಪ್ರಭು ತಮ್ಮ ಈ ಎರಡು ವಚನಗಳಲ್ಲಿ ತಾನು ನಂಬಿದ ದೇವರು ಯಾರೆಂಬುದನ್ನು ಹೇಳಿದ್ದಾನೆ. ಶಿಲೆಯೊಳಗೆ ಬೆಂಕಿಯಿದೆ, ಆದರೆ ಅದು ನಮಗೆ ಕಾಣಿಸುವುದಿಲ್ಲ. ಶಿಲೆ-ಶಿಲೆ ಘರ್ಷಣೆಯಾದಾಗ ಮಾತ್ರ ಬೆಂಕಿ ಕಾಣಿಸುತ್ತದೆ. ಅದೇ ರೀತಿ ನೀರಿನೊಳಗೆ ಪ್ರತಿಬಿಂಬವಿದೆ ಆದರೆ ಅದು ತಿಳಿಯಿದ್ದಾಗ ಮಾತ್ರ ನಮ್ಮ ಪ್ರತಿಬಿಂಬ ಕಾಣಿಸುತ್ತದೆ. ಬೀಜದೊಳಗೆ ವೃಕ್ಷವಿರುವುದು, ಭತ್ತ ಬೆಳೆದಾಗ ಮಾತ್ರ ಕಾಣಿಸುತ್ತದೆ. ಅದೇ ರೀತಿ ಶಬ್ದದೊಳಗಿನ ನಿಶ್ಯಬ್ದತೆ ಧ್ಯಾನಸ್ಥನಾದಾಗ ಮನವರಿಕೆಯಾಗುತ್ತದೆ. ಈ ಎಲ್ಲ ಉದಾಹರಣೆಗಳನ್ನು ಗಮನಿಸಿದಾಗ ಇಲ್ಲಿಯ ವಸ್ತುಗಳ ಒಳಗಣ ಸತ್ವ ಹೊರನೋಟಕ್ಕೆ ಕಾಣಿಸುವುದಿಲ್ಲ. ಅಲ್ಲಿ ಜ್ಞಾನ ಕ್ರಿಯೆಗಳ ಮುಖಾಮುಖಿಯಾಗಬೇಕೆಗುತ್ತದೆ. ಅದೇರೀತಿ ಆತ್ಮನಲ್ಲಿರುವ ಬೆಳಕು (ಪರಮಾತ್ಮ) ಕಾಣಬೇಕಾದರೆ ಸಾಧನೆ ತುಂಬ ಮುಖ್ಯವಾಗುತ್ತದೆ. ಅಂತಹ ಸಾಧನೆಯ ಬೆಳಕೇ ದೇವರೆಂದು ಪ್ರಭು ಇಲ್ಲಿ ಹೇಳಿದ್ದಾನೆ.                

ಮತ್ತೊಂದು ವಚನವೂ ಇದನ್ನೇ ಹೇಳುತ್ತದೆ. ನೆಲದ ಮರೆಯಲ್ಲಿ ನಿಧಾನವಿದೆ. ಮುಗಿಲ ಮರೆಯಲ್ಲಿ ಮಿಂಚಿದೆ, ಬಯಲ ಮರೆಯಲ್ಲಿ ಮರೀಚಿಯಿದೆ ಕಂಗಳ ಮರೆಯಲ್ಲಿ ಬೆಳಗಿದೆ, ಆದರೆ ಅದು ಹೊರನೋಟಕ್ಕೆ ಕಾಣಿಸುವುದಿಲ್ಲ, ಒಳಗೆ ಹೋಗಿ ಹುಡುಕಬೇಕು. ಕ್ರಿಯೆ ಪ್ರಕ್ರಿಯೆಗಳು ನಡೆಯಬೇಕು. ಆಗ ಮಾತ್ರ ಅಂತಸ್ಸತ್ವ ಕಾಣಿಸುತ್ತದೆ. ಅದೇ ದೇವರ ಪ್ರತಿರೂಪವಾಗಿದೆ.

೧.“ಕಿಚ್ಚಿನ ದೇವನು, ಕೆಂಡದ ದೇವನು,
ಮಾರಿಯ ದೇವನು, ಮಸಣದ ದೇವನು
ತಿರುಕ ಗೊರವನೆಂದು ಅಲ್ಲಿಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ”.
-ಅಲ್ಲಮಪ್ರಭು (ಸ.ವ.ಸಂ.೨, ವ: ೫೪೧)

೨. “ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ,
     ಅಲ್ಲಿದ್ದಾತ ರುದ್ರನೊಬ್ಬ
     ಆ ಬೆಟ್ಟಕ್ಕೂ ಆ ರುದ್ರಂಗೆಯೂ
     ಪ್ರಳಯವುಂಟೆಂಬುದ
     ಗುಹೇಶ್ವರಾ ನಿಮ್ಮ ಶರಣ ಬಲ್ಲನು”
   -ಅಲ್ಲಮಪ್ರಭು (ಸ.ವ.ಸಂ.೨, ವ:೧೧೪೭)

                

ಹಿಂದೆ ಉಲ್ಲೇಖಿಸಿರುವ ಎರಡು ವಚನಗಳಲ್ಲಿ ಅಲ್ಲಮಪ್ರಭು ತನ್ನ ದೇವರು ಯಾರು? ಆತ ಎಲ್ಲಿದ್ದಾನೆಂದು ಹೇಳಿದರೆ, ಮೇಲಿನ ಎರಡು ವಚನಗಳಲ್ಲಿ ಬರುವ ದೇವರುಗಳು ದೇವರುಗಳಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಕಲ್ಲು ಗುಡಿ ಕಟ್ಟಿಸಿ, ಅದರಲ್ಲಿ ಕಲ್ಲದೇವರ ಕೂಡಿಸಿ ಲಿಂಗಪ್ರತಿಷ್ಠೆ ಮಾಡಿದವರಿಗೆ ನಾಯಕ ನರಕವೆಂದು ಉಗ್ರವಾಗಿ ಹೇಳಿದ್ದಾನೆ. ಊರೊಳಗಿನ ದೇವರು, ಅಡವಿಯೊಳಗಿನ ದೇವರು ಮಡಿಲೊಳಗಿನ ದೇವರು ದೇವರಲ್ಲವೆಂದು ಹೇಳಿದ್ದಾನೆ. ಬೆಂಕಿ, ಕೆಂಡ, ಮಾರಿ, ಮಸಣದ ದೇವರು ದೇವರಲ್ಲವೆಂದು ಹೇಳುತ್ತ ಕೈಲಾಸದಲ್ಲಿ ಬೆಳ್ಳಿ ಬೆಟ್ಟದಲ್ಲಿರುವ ರುದ್ರನೂ ದೇವರಲ್ಲ ಆತನಿಗೂ ಪ್ರಳಯವುಂಟೆಂದು ವಿವರಿಸಿದ್ದಾನೆ.

೧.“ಫಲದೊಳಗಣ ಮಧುರ ಗೋಪ್ಯದಂತಿದ್ದಿತ್ತು,
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು,
ಮಯೂರನ ತತ್ತಿನ ಚಿತ್ರದಂತಿದ್ದಿತ್ತು,
ಶಿಶುಕಂಡ ಕನಸಿನ ಪರಿಯಂತಿದ್ದಿತ್ತು;
ಕೂಡಲ ಚೆನ್ನಸಂಗಯ್ಯ ನಿಮ್ಮ ನಿಲುವು
 ಸದ್ಗರುಚಿತ್ತದ ಪದದಂತಿದ್ದಿತ್ತು”
 -ಚೆನ್ನಬಸವಣ್ಣ (ಸ.ವ.ಸಂ.೩, ವ:೧)                  

೨. “ಹರ ತನ್ನ ರೂಪ ತೊರಬೇಕೆಂದು, ಗುರುರೂಪವಾಗಿ ಬಂದು
    ಮನಸ್ಥಲಕ್ಕೆ ಮಂತ್ರವಾದ, ತನುಸ್ಥಲಕ್ಕೆ ಪ್ರಸಾದವಾದ, ಕರಸ್ಥಲಕ್ಕೆ ಲಿಂಗವಾದ
    ಇಂತೀ ತ್ರಿವಿಧದಲ್ಲಿ ತ್ರಿವಿಧ ಸಾಹಿತ್ಯವಾದನಯ್ಯಾ
    ಕೂಡಲ ಚೆನ್ನಸಂಗನಲ್ಲಿ ಬಸವಣ್ಣನು”
-ಚೆನ್ನಬಸವಣ್ಣ (ಸ.ವ.ಸಂ.೩, ವ:೨೨)

ಈ ಎರಡು ವಚನಗಳಲ್ಲಿ ಚೆನ್ನಬಸವಣ್ಣನು ತಾನು ನಂಬಿರುವ ದೇವರ ಸ್ವರೂಪದ ಬಗ್ಗೆ ಹೇಳಿದ್ದಾನೆ. ಮೊದಲ ವಚನದಲ್ಲಿ ಅನೇಕ ರೂಪಕಗಳಿವೆ. ಫಲದೊಳಗಿನ ಮಾರ‍್ಯ ಅಥವಾ ರುಚಿ ಕಣ್ಣಿಗೆ ಕಾಣುಸುವದಿಲ್ಲ, ಚಂದ್ರಕಾಂತ ಶಿಲೆಯಲ್ಲಿರುವ ಉದಕವೂ ಕಾಣಿಸುವುದಿಲ್ಲ. ಅದೇ ರೀತಿ ನವಿಲಿನ ತತ್ತಿಯಲ್ಲಿರುವ ಚಿತ್ರ ಹಾಗೂ ಶಿಶುಕಂಡ ಕನಸು ಗೋಚರಿಸುವದಿಲ್ಲ. ಕಣ್ಣಿಗೆ ಕಾಣುವದಿಲ್ಲವೆಂದಾಕ್ಷಣ ಅವು ಇಲ್ಲವೆಂದು ಅರ್ಥವೆ? ಖಂಡಿತಾ ಹಾಗಲ್ಲ. ಒಂದು ಪದಾರ್ಥದೊಳಗಿರುವ ಅಂತಸ್ವತ್ವ ಹೇಗೆ ಹೊರನೋಟಕ್ಕೆ ಕಾಣುವುದಿಲ್ಲವೊ, ಹಾಗೆ ಆತ್ಮದೊಳಗೆ ಚೈತನ್ಯವಿರುತ್ತದೆ. ಆ ಚೈತನ್ಯವೇ ದೇವರೆಂದು

ಚೆನ್ನಬಸವಣ್ಣ ಹೇಳಿದ್ದಾನೆ. ಆ ಚೈತನ್ಯ ರೂಪದ ದೇವರು ಸದ್ಗರು ಚಿತ್ತದ ಪದದಂತಿದ್ದಿತ್ತೆಂದು ಚೆನ್ನಬಸವಣ್ಣ ತಿಳಿಸಿದ್ದಾನೆ. ಇಲ್ಲಿ ಬಂದಿರುವ ರೂಪಕಗಳಲ್ಲಿ ಶಿಶುಕಂಡ ಕನಸು ಅದ್ಭುತವಾದುದಾಗಿದೆ. ಹೀಗೆ ಆತ್ಮನೊಳಗಡೆ ಇರುವ ಚೈತನ್ಯಶಕ್ತಿಯೇ ದೇವರೆಂದು ಶರಣರು ಹೇಳಿದ್ದಾರೆ.                

ಎರಡನೇ ವಚನದಲ್ಲಿ ಹರ ತನ್ನ ರೂಪವನ್ನು ತನ್ನಲ್ಲಿ ಹೇಗೆ ತೋರಿಸಿದನೆಂಬುದನ್ನು ಹೇಳಲಾಗಿದೆ. ಗುರುರೂಪದಲ್ಲಿ ಬಂದು ಮನಸ್ಥಲಕ್ಕೆ ಮಂತ್ರವಾದ, ತನುಸ್ಥಾಲಕ್ಕೆ ಪ್ರಸಾದವಾದ, ಕರಸ್ಥಲಕ್ಕೆ ಲಿಂಗವಾದ. ಮನಸ್ಥಲ, ತನುಸ್ಥಲ, ಕರಸ್ಥಲಗಳು ಶುದ್ಧವಾಗಿ ತಮ್ಮ ತಮ್ಮ ಸಾಧ್ಯತೆಗಳನ್ನು ಪ್ರಕಟಿಸಿದಾಗ ಕಾಣುವ ರೂಪವೇ ದೇವರೆಂದು ಚೆನ್ನಬಸವಣ್ಣ ತಿಳಿಸಿದ್ದಾನೆ. ಚೆನ್ನಬಸವಣ್ಣನಿಗೆ ಬಸವಣ್ಣನೇ ದೇವರಸ್ವರೂಪಿಯಾಗಿ ಕಾಣಿಸಿದ್ದಾನೆ

 ೧. ಶಿವಾಯ ವಿಷ್ಣು ರೂಪಾಯ ಶಿವ ರೂಪಾಯ ವಿಷ್ಣುವೇ |
ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ |
ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯ ಶಿವಃ |
ಇಂತೆಂಬ ಪಾತಕರು ನೀವು ಕೇಳಿಭೋ......”
 -ಚೆನ್ನಬಸವಣ್ಣ (ಸ.ವ.ಸಂ.೩, ವ:೧೪೪)

೨. ಭೈರವನನನಾರಾಧಿಸಿ ಬಾಹಿರವೋದರಯ್ಯಾ
  ಮೈಲಾರನನಾರಾಧಿಸಿ ಕುರುಳು ಬೆರಳ ಕಡಿಸಿಕೊಂಡು ನಾಯಾಗಿ ಬಗಳುತಿಪ್ಪರು,
  ಜಿನನನಾರಾಧಿಸಿ ಲಜ್ಜೆದೊರೆದರುನೋಡಾ
  ನಮ್ಮ ಕೂಡಲಚೆನ್ನಸಂಗಯ್ಯನನಾರಾಧಿಸಿ ದೇವಾ,
  ಭಕ್ತಯೆಂದೆನಿಸಿಕೊಂಬರು ನೋಡಯ್ಯಾ.”
 -ಚೆನ್ನಬಸವಣ್ಣ (ಸ.ವ.ಸಂ.೩, ವ:೧೪೬)

ಮೊದಲ ವಚನದಲ್ಲಿ ಉಲ್ಲೇಖಿಸಿದರುವ ಸಾಲುಗಳು ಶೈವಬ್ರಾಹ್ಮಣರು ಹೇಳುವ ಮಂತ್ರಗಳಾಗಿವೆ. ಶಿವ, ವಿಷ್ಣು ಬೇರೆ ಬೇರೆ ರೂಪಗಳಲ್ಲ, ಅವೆರಡೂ ಒಂದೇಯಾಗಿವೆ. ಹರಿ ಹರ ಎಲ್ಲಾ ಒಂದೇ ಎಂದು ನಂಬಿದವರನ್ನು ಚೆನ್ನಬಸವಣ್ಣನು ಪಾತಕಿಗಳೆಂದು ಕರೆದಿದ್ದಾನೆ. ಹಿಂದನರಿಯದೆ, ಮುಂದನರಿಯದೆ ಎಲ್ಲವೂ ಒಂದೇ ಎಂರ‍್ಹೇಗೆಂದು ವಿಡಂಬಿಸಿದ್ದಾನೆ. ಅರ್ಧಮರ್ಧ ತಿಳಿದುಕೊಂಡು ಹೀಗೆ ಮಾತನಾಡುವವರೇ ಅಂತ್ಯಜರೆಂದು ಟೀಕಿಸಿದ್ದಾನೆ. ಶಿವ-ವಿಷ್ಣು ಇವು ಒಂದೇ ರೂಪಗಳಲ್ಲ ಮತ್ತು ಇವರು ದೇವರುಗಳಲ್ಲವೆಂಬುದು ಚೆನ್ನಬಸವಣ್ಣನ ಸ್ಪಷ್ಟ ನಿಲುವಾಗಿದೆ.

ಎರಡನೇ ವಚನದಲ್ಲಿ ಗ್ರಾಮೀಣ ಭಕ್ತರು ತಮ್ಮ ಮೂಢನಂಬಿಕೆಗಳಿಂದ ವಿವಿಧ ದೇವತೆಗಳನ್ನು ಆರಾಧಿಸುತ್ತಿರುತ್ತಾರೆ. ಅಂತವರನ್ನು ಈ ವಚನದಲ್ಲಿ ವಿಡಂಬಿಸಲಾಗಿದೆ. ಭೈರವನನ್ನಾರಾಧಿಸಿ ಹಿಂಸಾಭಕ್ತಿಗೊಳಗಾದ ಭಕ್ತರನ್ನು ಕಂಡು, ಮೈಲಾರನನ್ನಾರಾಧಿಸಿ ಕೂದಲು ಮತ್ತು ಬೆರಳನ್ನು ಕತ್ತರಿಸಿಕೊಂಡು ನಾಯಿಯಾಗಿ ಬೊಗಳುತ್ತಿರುವ ಭಕ್ತರನ್ನು ಕಂಡು ವಿಡಂಬನೆ ಮಾಡಿದ್ದಾನೆ. ಜಿನನನಾರಧಿಸಿ ಬೆತ್ತಲೆ ತಿರುಗುವವರನ್ನು ನೋಡಿ ಲಜ್ಜೆಗೆಟ್ಟವರೆಂದು ಹಿಯಾಳಿಸಿದ್ದಾನೆ. ಆ ಕೂಡಲಚೆನ್ನಸಂಗಯ್ಯನೆಂದರೆ ಇಲ್ಲಿ ತನ್ನ ಅಂತರಾತ್ಮನೆಂದು ಅರ್ಥ. ತನ್ನ ಅಂತರಾತ್ಮನನ್ನು ಆರಾಧಿಸಿ ಭಕ್ತನೆನಿಸಿಕೊಳ್ಳಬೇಕೇ ಹೊರತು ದೇವರ ಹೆಸರಿನಲ್ಲಿ ಮೌಢ್ಯಚಾರಣೆಗಳನ್ನಾಚರಿಸಬಾರದೆಂದು ಹೇಳಿದ್ದಾನೆ.

“ದೇವಿಯರಿಬ್ಬರಿಲ್ಲದಂದು,
ಪ್ರಧಾನ ಮಂತ್ರಿಗಳಿಲ್ಲದಂದು
ಆರಾರೂ ಇಲ್ಲದಂದು,
ಸಂಕಲ್ಪ ವಿಕಲ್ಪವಿಲ್ಲದಂದು
ಉತ್ಪತ್ತಿ-ಸ್ಥಿತಿ-ಲಯಂಗಳಿಲ್ಲದಂದು,
ನಿನ್ನಲ್ಲಿ ನೀ ನಾನೆಂಬುದಿಲ್ಲದಂದು ಶೂನ್ಯನಾಗಿದ್ದ
ಎನ್ನ ಕಪಿಲಸಿದ್ಧ ಮಲ್ಲಿನಾಥಾ”
-ಸಿದ್ಧರಾಮ (ಸ.ವ.ಸಂ.೪, ವ:೪೮೯)

ಈ ವಚನದಲ್ಲಿ ಸಿದ್ಧರಾಮನು, ದೇವರನ್ನು ಬಯಲು ತತ್ವವಾದ ಶೂನ್ಯದಲ್ಲಿ ಕಂಡಿದ್ದಾನೆ. ನೀ ಮತ್ತು ನಾ ಎಂಬೆರಡು ಅಳಿದಾಗ, ದ್ವೈತವಳಿದು ಅದ್ವೈತವಾದಾಗ ಅಲ್ಲಿ ಬರೀ ಶೂನ್ಯಕಾಣಿಸುತ್ತದೆ. ಇಂತಹ ಶೂನ್ಯತತ್ವವೇ ಬಯಲು ತತ್ವವಾಗಿದೆ. ನೀ ಮತ್ತು ನಾ ಎರಡೂ ಅಳಿದಾಗ ಅಹಂ ನಾಸ್ತಿಯಾಗುತ್ತದೆ ಆಗ ನಾಥಕ “ಅಹಂಬ್ರಹ್ಮಾಸ್ಮಿ” ಯಾಗುತ್ತಾನೆ. ಇಲ್ಲಿ ಬ್ರಹ್ಮನೆಂದರೆ ಜ್ಞಾನಿಯೆಂಬರ್ಥವಿದೆ.

“ದೇವನಿಂತವನೆಂದು ನಂಬಲಾಗದಯ್ಯಾ:
ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ?
ದೇವನಿಂತವನೆಂದು ನಂಬಲಾಗದಯ್ಯಾ:
ತನ್ನ ಕಾರ್ಯಕ್ಕೆ ಹೆಣಗಾಡಿಸಿದವ ಒಳ್ಳಿದನೆ?
ಕಪಿಲಸಿದ್ಧ ಮಲ್ಲಯ್ಯಾ, ನಿನ್ನ ಲೀಲೆ ತಿಳಿಯದಾರಿಂಗೂ”
-ಸಿದ್ಧರಾಮ (ಸ.ವ.ಸಂ.೪, ವ:೮೮೯)

ಈ ವಚನದಲ್ಲಿ ಸಿದ್ಧರಾಮ ದೇವನಿಂತವನೇ ಎಂದು ಹೇಳಲಿಕ್ಕಾಗುವದಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಆತನಿಗೆ ರೂಪ, ಗುಣ, ಇದ್ದರೆ ಹೀಗೇ ಎಂದು ಹೇಳಬಹುದು. ಆದರೆ ದೇವರು ನಿರೂಪನಾಗಿದ್ದಾನೆ, ನಿರ್ಗುಣನಾಗಿದ್ದಾನೆ. ಹೀಗೆ ನಿರೂಪನಾಗಿರುವ ದೇವರನ್ನು ತನ್ನ ಧ್ಯಾನ ಸಾಧನೆಯ ಮೂಲಕ, ಕ್ರಿಯಾಸಾಧನೆಯ ಮೂಲಕ, ಜ್ಞಾನ ಸಾಧನೆಯ ಮೂಲಕ ಕಂಡುಕೊಳ್ಳಬಹುದಾಗಿದೆ. ಇದನ್ನು ಸಿದ್ಧರಾಮನು “ಲೀಲೆ” ಎಂಬ ಪರಿಭಾಷೆಯಲ್ಲಿ ಕರೆದಿದ್ದಾನೆ. ಹೀಗೆ ಸಿದ್ಧರಾಮನ ದೇವರು, ಅಂತರಂಗದ ಬೆಳಕಾಗಿ ಕಾಣಿಸಿಕೊಂಡಿದ್ದಾನೆ.

“ಶಿವನ ನೆನೆದಡೆ ಭವ ಹಿಂಗುವದೆಂಬ
  ವಿವರಗೇಡಿಗಳ ಮಾತ ಕೇಳಲಾಗದು
  ಹೇಳಿರಯ್ಯಾ, ಜ್ಯೋತಿಯ ನೆನೆದಡೆ ಕತ್ತಲೆ ಕೆಡವುದೆ?
  ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವದೆ?
  ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ?
  ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ
  ಸದ್ಗುರುಸಿದ್ಧ ಸೋಮನಾಥಲಿಂಗನ ನೆನೆಯಬಾರದು”
  -ಅಮುಗಿ ದೇವರಯ್ಯ (ಸ.ವ.ಸಂ.೬, ವ:೩೪೩)                

ಅಮುಗಿ ದೇವಯ್ಯನ ಈ ವಚನವು ಶರಣರ ದೇವರು ಎಂತಹವನೆಂಬುದನ್ನು ಸ್ಪಷ್ಟಪಡಿಸುತ್ತದೆ. ಶಿವನನ್ನು ನೆನೆಯಬೇಕು, ಸ್ಮರಿಸಬೇಕು. ಶಿವರಾತ್ರಿಯ ದಿನ ಪೂಜೆ ಮಾಡಬೇಕೆಂದು ಶೈವ-ವೀರಶೈವ ಧರ್ಮಗಳು ಹೇಳಿದರೆ; ಶಿವನನ್ನು ನೆನೆಯುವದರಿಂದೇನೂಪ್ರಯೋಜನವಿಲ್ಲವೆಂಬುದನ್ನು ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮ ಹೇಳುತ್ತದೆ. ಶಿವನ ನೆನೆಯಬೇಕೆಂದು ಹೇಳುವವರನ್ನು ಈ ವಚನಕಾರನು, ವಿವರಗೇಡಿಗಳು, ವಾಚಾಳಿಗಳೆಂದು ವಿಡಂಬಿಸಿದ್ದಾನೆ. ತುಂಬ ಸಮರ್ಪಕವಾದ ಉದಾಹರಣೆಗಳು ಈ ವಚನದಲ್ಲಿವೆ. ಜ್ಯೋತಿಯನ್ನು ನೆನೆದಾಕ್ಷಣ ಕತ್ತಲು ಹೋಗುವದಿಲ್ಲ, ಇಷ್ಟಾನ್ನವ ನೆನೆದಾಕ್ಷಣ ಹೊಟ್ಟೆ ತುಂಬುವುದಿಲ್ಲ, ರಂಭೆಯ ನೆನೆದಡೆ ಕಾಮ ಹಿಂಗುವದಿಲ್ಲ. ನೆನೆದರಾಗದು ನಿಜದಲ್ಲಿ ತಾನು ತಾನಾಗುವದನ್ನು ನಿರ್ಧರಿಸಬೇಕೆಂದು ಹೇಳಿದ್ದಾನೆ. ಶಿವ ದೇವರಲ್ಲ, ತಾನು ದೇವರು. ತಾನು ತಾನಾಗದೆ ಏನೂ ಸಾಧಿಸಲು ಸಾಧ್ಯವಿಲ್ಲವೆಂದು ಇಲ್ಲಿ ಹೇಳಲಾಗಿದೆ.

“ಒಂದೇ ವಸ್ತು ತನ್ನ ಲೀಲೆಯಿಂದ
ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೇ ಲಿಂಗ, ಜೀವಾತ್ಮನೆ ಆಂಗ, ಸಂಗವೇ ಏಕಾತ್ಮ
ತತ್‌ಪದವೇ ಪರಮಾತ್ಮ, ತ್ವಂ ಪದವೇ ಜೀವಾತ್ಮ,
 ಅಸಿ ಪದವೇ ತಾದಾತ್ಮವಯ್ಯಾ
 ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ”
-ಉರಿಲಿಂಗಪೆದ್ದಿ (ಸ.ವ.ಸಂ.೬, ವ:೧೩೪೫)                

ಉರಿಲಿಂಗಪೆದ್ದಿ ಈ ವಚನದಲ್ಲಿ ದೇವರು ಯಾರೆಂಬುದನ್ನು ಸ್ಪಷ್ಟಪಡಿಸಿದ್ದಾನೆ. ಇಲ್ಲಿ ಪರಮಾತ್ಮನೇ ಜೀವಾತ್ಮನಾಗಿದ್ದಾನೆ. ಪರಮಾತ್ಮ ಲಿಂಗವಾದರೆ ಜಿವಾತ್ಮ ಅಂಗವಾಗಿದ್ದಾನೆ. ‘ತತ್’ಪದ ಪರಮಾತ್ಮವಾದರೆ, ‘ತ್ವಂ’ ಪದ ಜೀವಾತ್ಮವಾಗಿದೆ. ಹೀಗಾಗಿ “ತತ್ವ್ಮ್‌ಸಿ”ಯಲ್ಲಿ ನಾನೇ ದೇವರು ಎಂಬ ಅರ್ಥವಿದೆ. ಹೀಗೆ ಜೀವಾತ್ಮ, ಸ್ವತಃ ತಾನೇ ಪರಮಾತ್ಮನಾಗಿದ್ದಾನೆಂದು ಉರಿಲಿಂಗಪೆದ್ದಿ ಈ ವಚನನದಲ್ಲಿ ಹೇಳಿದ್ದಾನೆ. ಜೀವಾತ್ಮ-ಪರಮಾತ್ಮನಾಗಬೇಕಾದರೆ, ಸಾಧನೆ ಬಹುಮುಖ್ಯ. ಅಂತಹ ಸಾಧನೆಯನ್ನು ಮಾಡಬೇಕೆಂದು ಶರಣರು ವಿವರಿಸಿದ್ದಾರೆ.

 “ಮಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ?
  ಮಳೆ ಶಿವಭಕ್ತನಾಗಬಲ್ಲುದೆ?
  ನಿಮ್ಮ ತನುಮನಧನವನರಿಯದಿದ್ದಡೆ
  ಸದುಭಕ್ತರಹರೆ? ರಾಮನಾಥ”
  -ಜೇಡರ ದಾಸಿಯ್ಯಾ (ಸ.ವ.ಸಂ.೭, ವ:೮೫೨)  

ಈ ವಚನದಲ್ಲಿ ಆದ್ಯವಚನಕಾರ ಜೇಡರ ದಾಸಿಮಯ್ಯನು ಬೆಟ್ಟ-ಬೆಟ್ಟದ ಮೇಲಿನ ಕಲ್ಲು ಮೂರ್ತಿಗಳು ಇವಾವೂ ದೇವರುಗಳಲ್ಲ ತನ್ನ ತನು-ಮನ-ಧನವನ್ನರಿತುಕೊಂಡಾಗ ದೇವರು ಕಾಣಿಸುತ್ತಾನೆಂದು ದಾಸಿಮಯ್ಯಾ ಹೇಳಿದ್ದಾನೆ. ಲಿಂಗಾಯತ ಧರ್ಮವು ಪ್ರತಿಯೊಬ್ಬ ಭಕ್ತನ ತನು-ಮನದ ಮೇಲೆ ನಿಂತಿದೆ. ತನು-ಮನ-ಧನಗಳನ್ನರಿತಾಗ ಭಕ್ತನೇ ದೇವರಾಗುತ್ತಾನೆ. ಹೀಗೆ ದಾಸಿಮಯ್ಯನಂತ ವಚನಕಾರರು ದೇವರ ಪರಿಕಲ್ಪನೆಯನ್ನು ಸೊಗಸಾಗಿ ಹೇಳಿದ್ದಾರೆ.

“ಪೃಥ್ವಿಯ ಮೇಲಣ ಶಿಲೆಯ ತಂದು, ಪ್ರತಿಮೆಗಳ ಮಾಡಿ
ಕಲ್ಲುಕುಟಿಗನಲ್ಲಿಯೆ ಗುರುವಾದ, ಕಲ್ಲು ಶಿಷ್ಯನಾದ
ಹಿಂದಣಾದಿಯನರಿಯದ ಗುರು
ಮುಂದೆ ಉಪದೇಶವ ಕೊಳ್ಳಲರಿಯದ ಶಿಷ್ಯ,
ಈ ಎರಡೂ ಕಲ್ಲು ಕುಟಿಗನ ಕಲ್ಲಿನಂತೆ ಕಾಣಾ ಕಲಿದೇವಯ್ಯ”
-ಮಡಿವಾಳ ಮಾಚಿದೇವ (ಸ.ವ.ಸಂ.೮, ವ:೬೭೫)

ಈ ವಚನದಲ್ಲಿ ಮಡಿವಾಳ ಮಾಚಿದೇವನು ಯಾರೂ ದೇವರಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾನೆ. ಕಲ್ಲು ತಂದು ಪ್ರತಿಮೆಯ ಮಾಡುವುದು ಆ ಪ್ರತಿಮೆಯೇ ದೇವರೆಂದು ನಂಬುವದು ಮೂಢ ಭಕ್ತಿಯಾಗಿದೆಯೆಂದು ಮಾಚಿದೇವ ಹೇಳಿದ್ದಾನೆ. ಕಲ್ಲುಕುಟಿಗ ಗುರು-ಕಲ್ಲು ಶಿಷ್ಯ ಇವೆರಡಕ್ಕೂ ಹಿಂದು-ಮುಂದು ಒಂದೂ ಗೊತ್ತಿಲ್ಲ ಕಲ್ಲು ಕುಟಿಗನ ಕಲ್ಲಿನಂತೆ ಇದೆಲ್ಲಾ ವ್ಯರ್ಥವೆಂದು ತಿಳಿಸಿದ್ದಾನೆ. ಇದೇ ವಿಚಾರವನ್ನು ಮಾಚಿದೇವನು ತನ್ನ ಇನ್ನೊಂದು ವಚನದಲ್ಲಿ ವಿವರಿಸಿದ್ದಾನೆ. ಮಣ್ಣು-ಕಲ್ಲುಗಳನ್ನು ದೇವರೆಂದು ನಂಬಿ, ಕಟ್ಟಿರ್ದ ಲಿಂಗವಡಿಯಾಗಿ ಬೀಳುವವರನ್ನು ಲೊಟ್ಟೆಗುಡಿಹಿಗಳೆಂದು ವಿಡಂಬಿಸಿದ್ದಾನೆ. ದೇವರು ಶಿಲೆ, ಕಲ್ಲು, ಮಣ್ಣುಗಳಲ್ಲಿಲ್ಲ, ದೇವರು ತನ್ನೊಳಗಡೆಯೇ ಇದ್ದಾನೆಂದು ಮಾಚಿದೇವ ಹೇಳಿದ್ದಾನೆ.

 “ವ್ಯಾಧಿ ಬಂದಡೆ ನೆರಳು, ಬೇನೆಬಂದರೆ ಒರಲು
  ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ
  ಭಾಪು ಲದ್ದೆಯ ಸೋಮಾ”
 -ಲದ್ದೆಯ ಸೋಮಯ್ಯ (ಸ.ವ.ಸಂ.೯, ವ:೨೦)

ಈ ವಚನದಲ್ಲಿ ಲದ್ದೆಯ ಸೋಮಯ್ಯ ಬಹುಮಹತ್ವದ ಮಾತನ್ನು ಹೇಳಿದ್ದಾನೆ. ಸ್ವಕಾಯಕವ ಮಾಡು, ಗುರು-ಲಿಂಗ-ಜಂಗಮರಿಗೆ ಅರ್ಪಿಸು ಇರುವಷ್ಟು ದಿನ ಚೆನ್ನಾಗಿರು. ಯಾವ ದೇವರು ಹೊರಗಿನಿಂದ ಬಂದು ನಿನ್ನನ್ನು ರಕ್ಷಿಸಲಾರ. ನಿನ್ನ ಆತ್ಮಸ್ಥೈರ್ಯವನ್ನು ಬೆಳೆಸಿಕೊ ಎಂದು ಸಾಧಕನಿಗೆ ಹೇಳಿದ್ದಾನೆ. ರೋಗ ಬಂದರೆ ನರಳಬೇಕಾಗುತ್ತದೆ, ಬೇನೆ ಬಂದಡೆ ತೀರಬೇಕಾಗುತ್ತದೆ, ಜೀವ ಹೋದರೆ ಸಾಯಬೇಕಾಗುತ್ತದೆ, ಇದನ್ನಾರೂ ತಪ್ಪಿಸಲು ಸಾಧ್ಯವಿಲ್ಲ ಹೀಗಿದ್ದಾಗ ನಿನಗೆ ದೇವರ ಹಂಗೇಕೆ? ಎಂದು ಪ್ರಶ್ನಿಸುತ್ತ ಸಾಧಕನಲ್ಲಿ ಧೈರ್ಯ ತುಂಬುತ್ತ ಹೊರಗಿನ ದೇವರನ್ನು ನಿರಾಕರಿಸಿದ್ದಾನೆ.

“ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯಂಗೊಲಿದ,
ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ,
ಆಗಮದವರನೊಲ್ಲದೆ ತೆಲುಗು ಜೊಮ್ಮಯ್ಯಂಗೊಲಿದ
ಪುರಾಣಕರ್ಮಿಗಳೆಂಬ ವಿಶಿಷ್ಟ ಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ
ಅಣ್ಣ ಕೇಳಾ ಸೋಜಿಗವ!
ದಾಸದುಗ್ಗಳೆಯರಿಗೊಲಿದ ಮುಕ್ಕಣ್ಣ ಸೊಡ್ಡಳ,
ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡ
-ಸೊಡ್ಡಳ ಬಾಚರಸ (ಸ.ವ.ಸಂ.೯,ವ:೮೧೨)

 ಈ ವಚನದಲ್ಲಿ ಸೊಡ್ಡಳ ಬಾಚರಸನು ಮುಕ್ಕಣ್ಣನಾದ ಶಿವನನ್ನು ಪ್ರಸ್ತಾಪಿಸಿದ್ದಾನೆ. ಆದರೆ ಈ ಶಿವ, ವೇದ-ಶಾಸ್ತ್ರ-ಆಗಮ ಪಂಡಿತರಿಗೊಲಿಯಲಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಕಾಯಕ ಜೀವಿಗಳಾಗಿದ್ದ ಜೇಡರದಾಸಿಮಯ್ಯ ಮತ್ತು ದುಗ್ಗಳೆಯರಿಗೆ ಈತ ಒಲಿದನೆಂದು ಹೇಳುವಲ್ಲಿ ಕಾಯಕವೇ ದೇವರೆಂದು ತಿಳಿಸಿಹೇಳಿದ್ದಾನೆ. ಕಾಯಕಜೀವಿಗಳಲ್ಲಿ ದೇವರಿದ್ದಾನೆಯೇ ಹೊರತು ಪುಂಗಿ ಊದಿ ಬದುಕುವ ಹಾರುವಣ್ಣಗಳಲ್ಲಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ.

೧. “ಸಾವ ದೇವರನೊಲ್ಲೆ, ಭಾವವಳಿಯದ ಭಕ್ತಿಯನೊಲ್ಲೆ
ಆವಾವ ಪರಿಯಲ್ಲೂ ವಿಧಿಯನೊಲ್ಲೆ
ಕಾಮೇಶ್ವರನೆಂಬುದನೊಂದನೆ ಬಲ್ಲೆ”
-ಜಗಳಗಂಟ ಕಾಮಣ್ಣ (ಸ.ವ.ಸಂ.೮, ವ:೭೧೬)

೨.“ಅಯ್ಯಾ ತನ್ನ ತಾನರಿದಡೆ ತನ್ನರುಹೇ ಗುರು,
ಆ ಅರಿದ ನಿಶ್ಚಯವೇ ಲಿಂಗ
ಆ ಅರುಹಿನ ನಿಶ್ಚಯ ನಿಷ್ಟತಿಯೇ ಜಂಗಮ,
ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರ ಲಿಂಗವು ತಾನೆ?”
 -ಜಗಳಗಂಟ ಕಾಮಣ್ಣ (ಸ.ವ.ಸಂ.೭, ವ:೭೧೪)

ಮೊದಲಿನ ವಚನದಲ್ಲಿ ಸಾವ ದೇವರನೊಲ್ಲೆನೆಂದು ಹೇಳಿದ್ದಾನೆ. ಅನೇಕ ದೇವರುಗಳು ಹುಟ್ಟುತ್ತವೆ, ಸಾಯುತ್ತವೆ. ಇವು ದೇವರುಗಳಲ್ಲ. ತನ್ನೊಳಗಿರುವ ಕಾಮೇಶ್ವರನೆಂಬ ಆತ್ಮವೇ ದೇವರೆಂದು ತಿಳಿಸಿದ್ದಾನೆ. ಎರಡನೇ ವಚನದಲ್ಲಿ ತನ್ನ ತಾನರಿತಾಗ ತಾನೇ ಗುರು-ಲಿಂಗ-ಜಂಗಮವಾಗುತ್ತೇನೆಂದು ಹೇಳಿದ್ದಾನೆ. ಅರಿವು-ಆಚಾರ-ಅನುಭಾವಗಳೇ ನಿಜವಾದ ಗುರು-ಲಿಂಗ-ಜಂಗಮಗಳಾಗಿವೆ. ಈ ಮೂರೂ ಕೂಡಿಕೊಂಡಾಗ ಅಲ್ಲಿಯೇ ಬೆಳಕು ಕಾಣಿಸುತ್ತದೆ. ಆ ಬೆಳಕೇ ನಿಜವಾದ ದೇವರೆಂದು ಹೇಳುತ್ತ ದೇವರ ಕಲ್ಪನೆಯನ್ನು ವಿವರಿಸಿದ್ದಾನೆ.                

ಹೀಗೆ ಅನೇಕ ಶರಣರು ತಮ್ಮ ವಚನಗಳಲ್ಲಿ ದೇವರ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಆ ದೇವರು ಹೊರಗಿರದೆ ಒಳಗಿದ್ದಾನೆ; ಮೇಲಿರದೆ ಕೆಳಗಿದ್ದಾನೆ. ಇಂತಹ ವಿಶಿಷ್ಟ ದೇವರನ್ನು ಕಂಡುಕೊಂಡ ಲಿಂಗಾಯತ ಧರ್ಮವು ಸಹಜವಾಗಿಯೇ ವಿಶಷ್ಟವಾಗಿದೆ. ಹಿಂದೂ ದೇವರುಗಳಿಗೂ ಶರಣರು ಕಂಡುಕೊಂಡ ದೇವರುಗಳಿಗೂ ಸಂಬಂಧವೇ ಇಲ್ಲ. ಒಂದಕ್ಕೊಂದು ತದ್ವಿರುದ್ಧವಾಗಿವೆ. ಹೀಗಾಗಿ ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿದೆ. ತನ್ನದೇ ಆದ ಧಾರ್ಮಿಕ ಸಿದ್ಧಾಂತಗಳನ್ನು ಕಟ್ಟಿಕೊಂಡಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...