ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ

Date: 18-03-2022

Location: ಬೆಂಗಳೂರು


‘ಶಿವಾಚಾರವೆಂಬುದು ಬೀದಿಯಲ್ಲಿ ಆಡಿದ ಮಾತಿನಂತಲ್ಲವೆಂದು ಅಲ್ಲಮಪ್ರಭು ಹೇಳಿದ್ದಾರೆ. ಕಾಮ-ಕ್ರೋಧಗಳನ್ನು ಲಿಂಗಕ್ಕರ್ಪಿತವ ಮಾಡದೆ ಶಿವಾಚಾರ ಸಾಧ್ಯವಾಗದೆಂದು ತಿಳಿಸಿದ್ದಾರೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣಧರ್ಮ ಅಂಕಣದಲ್ಲಿ ಶರಣಧರ್ಮದ ಪ್ರಾಣವಾದ ಪಾಂಚಾಚಾರಗಳಲ್ಲಿ ಮತ್ತೊಂದು ಮಹತ್ವದ ಅಂಶವಾದ ಶಿವಾಚಾರದ ಕುರಿತು ಬರೆದಿದ್ದಾರೆ.

ಬಸವಾದಿ ಶರಣರು ಹೇಳಿದ ಶಿವಚಾರವು ಸಮಾನತೆಯನ್ನು ತಂದು ಕೊಡುವ ಮಾರ್ಗವಾಗಿದೆ. ಶಿವನೆಂದರೆ ಸತ್ಯ; ಇಂತಹ ಸತ್ಯದ ಆಚರಣೆಯೇ ಶಿವಾಚಾರ. ಮನುಷ್ಯ ಪ್ರಾಮಾಣಿಕನಾಗಿದ್ದು, ಎಲ್ಲರನ್ನೂ ಸಮದೃಷ್ಟಿಯಿಂದ ಕಾಣುವುದೇ ಶಿವಾಚಾರವೆನಿಸುತ್ತದೆ. ‘ಉಂಬುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ’ವೆಂಬ ಮಾತು ಶರಣರ ಕಾಲಕ್ಕೆ ನಾಣ್ನುಡಿಯಾಗಿತ್ತು. ಶರಣರು ಇದನ್ನು ವಿರೋಧಿಸಿದರು. ಉಂಬುದು ಉಡುವುದು ಶಿವಾಚಾರವಾದಾಗ, ಕೊಂಬುದು ಕೊಡುವದೂ ಕೂಡ ಶಿವಾಚಾರವಾಗಬೇಕೆಂದವರು ಹೇಳಿದರು. ಕುಲಾಚಾರವನ್ನು ಅಳಿಸಿ ಹಾಕುವುದೇ ಶಿವಾಚಾರದ ಉದ್ಧೇಶವಾಗಿದೆ.

ಎಲ್ಲ ಜಾತಿ ಜನಾಂಗಗಳಿಗೆ ಸೇರಿದವರು ಒಂದು ಕಡೆ ಸಹಪಂಕ್ತಿ-ಸಹಭೋಜನ ಮಾಡುವುದು ಆ ಕಾಲದಲ್ಲಿ ಸಾಧ್ಯವಿರಲಿಲ್ಲ. ಆದುದರಿಂದ ಶರಣರು ದಾಸೋಹದ ಮೂಲಕ ಈ ಸಹಪಂಕ್ತಿ ಭೋಜನವನ್ನು ಪ್ರಾರಂಭಿಸಿದರು. ಎಲ್ಲರೂ ಸಮಾನರೆಂದು ತಿಳಿಯುವುದೇ ಶಿವಾಚಾರವೆಂದರು. ಆದರೆ ಆ ಕಾಲದಲ್ಲಿ ಕೆಲವರು ಸಹಪಂಕ್ತಿ ಭೋಜನ ಮಾಡುತ್ತಿದ್ದರು, ದಾಸೋಹದಲ್ಲಿ ಪಾಲ್ಗೊಳ್ಳುತ್ತಿದ್ದರು, ಆದರೆ ಮಕ್ಕಳಿಗೆ ಮದುವೆ ಮಾಡುವಾಗ ಮತ್ತೆ ತಮ್ಮ ಕುಲದಲ್ಲಿಯೇ ವರ-ಕನ್ಯೆಗಳನ್ನು ನೋಡುತ್ತಿದ್ದರು. ಸಹಪಂಕ್ತಿ ಭೋಜನ ಮಾಡಿದಷ್ಟು ಬೇರೆ ಕುಲ-ಜಾತಿಗಳೊಂದಿಗೆ ಮದುವೆ ಸಂಬಂಧ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅಂತೆಯೇ ಅಂದಿನ ಸಾಮಾನ್ಯ ಜನತೆ ಮೊದಲನೆಯದನ್ನು ಒಪ್ಪಿಕೊಂಡರು, ಎರಡನೆಯದನ್ನು ಒಪ್ಪಿಕೊಳ್ಳಲಿಲ್ಲ. ಇದನ್ನು ಕಂಡೇ ಚೆನ್ನಬಸವಣ್ಣ ಅಂತವರನ್ನು ಕಟುವಾಗಿ ವಿಡಂಬಿಸಿದ್ದಾರೆ. ಹೀಗಾಗಿ ಕುಲಾಚಾರ ಒಂದು ಕಡೆಯಾದರೆ, ಶಿವಾಚಾರ ಮತ್ತೊಂದು ಕಡೆಗಿದೆ. ಇವೆರಡೂ ತದ್ವಿರುದ್ಧವಾದವುಗಳಾಗಿವೆ. ಆದರೆ ಶರಣರು ಇವೆರಡನ್ನು ಕೂಡಿಸಲು ಪ್ರಯತ್ನಿಸಿದರು. ಕುಲಾಚಾರವನ್ನು ಕಳೆದುಕೊಂಡು ಶಿವಾಚಾರಿಗಳಾಗಬೇಕೆಂದು ಕರೆಕೊಟ್ಟರು. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಹೊಂದಿದವರಿಗೆ, ಹಸಿವು-ತೃಷೆ-ವ್ಯಸನವುಳ್ಳವರಿಗೆ ಶಿವಾಚಾರ ಸಾಧ್ಯವಾಗುವುದಿಲ್ಲವೆಂದು ಬಸವಣ್ಣನವರು ಹೇಳಿದ್ದಾರೆ. ಶಿವಾಚಾರವೆಂಬುದು ಅಷ್ಟು ಸುಲಭವಾದದ್ದಲ್ಲ, ಅದು ಖಡ್ಗದ ಮೊನೆಯಂತೆ ಚೂಪಾಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ತೊಂದರೆಯಾಗುತ್ತದೆ. ಲಿಂಗ ಮೆಚ್ಚುವುದು ಜಂಗಮ ಮೆಚ್ಚುವುದು ನಿಜವಾದ ಶಿವಾಚಾರವಾಗುತ್ತದೆಂದು ಬಸವಣ್ಣನವರು ತಿಳಿಸಿದ್ದಾರೆ.

“ಮರುಳ ಕಂಡ ಕನಸಿನ ಪರಿಯಂತೆ ಶಿವಾಚಾರ,
ಕರಿಯು ಕನ್ನಡಿಯೊಳಗಡಗಿದಂತಯ್ಯಾ!
ಗುಣ ಅವಗುಣ ಯೊಡನಾಡಿದಡೆ
ಅದೆ ಆತನ ಕರ್ಮಫಲ ನೋಡಾ
ಕೂಡಲಸಂಗನ ಶರಣರ ಅನುಭಾವ
ಭವದು:ಖಿಗಳಿಗೆ ವೇದ್ಯವಾಗದಯ್ಯಾ”
-ಬಸವಣ್ಣ(ಸ.ವ.ಸಂ.1, ವ:860)

ಈ ವಚನದಲ್ಲಿ ಬಸವಣ್ಣನವರು ಶಿವಾಚಾರದ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ. ಮರುಳ ಕಂಡ ಕನಸು ಹೇಗೆ ಅವ್ಯಕ್ತವಾಗಿರುತ್ತದೆಯೋ ಶಿವಾಚಾರವೂ ಕೂಡ ಹಾಗೆಯೇ ಇರುತ್ತದೆ. ಆನೆಯನ್ನು ಕನ್ನಡಿಯಲ್ಲಿ ತೋರಿಸಿದಂತೆ, ಅದರ ಸ್ಥಿತಿಯಾಗಿದೆಯೆಂದು ಹೇಳಿದ್ದಾರೆ. ಭವ ದು:ಖಿಗಳಿಗೆ, ಆಳುವ ಅಹಂಕಾರಿಗಳಿಗೆ ಅನುಭಾವ ವೇದ್ಯವಾಗುವುದಿಲ್ಲವೆಂದು ತಿಳಿಸಿದ್ದಾರೆ. ಶಿವಾಚಾರವೆಂಬುದು ಬೀದಿಯಲ್ಲಿ ಆಡಿದ ಮಾತಿನಂತಲ್ಲವೆಂದು ಅಲ್ಲಮಪ್ರಭು ಹೇಳಿದ್ದಾರೆ. ಕಾಮ-ಕ್ರೋಧಗಳನ್ನು ಲಿಂಗಕ್ಕರ್ಪಿತವ ಮಾಡದೆ ಶಿವಾಚಾರ ಸಾಧ್ಯವಾಗದೆಂದು ತಿಳಿಸಿದ್ದಾರೆ.

“ಆದಿಯಾಧಾರವುಳ್ಳನ್ನಕ್ಕರ ಉಪಚಾರ,
ಎರಡೂ ಒಂದಾದಡೆ ಶಿವಾಚಾರ,
ಆ ಶಿವಾಚಾರ ಸಯವಾದಡೆ ಬ್ರಹ್ಮಾಚಾರ...”
-ಅಲ್ಲಮಪ್ರಭು(ಸ.ವ.ಸಂ.2.ವ:437)

ಎರಡೂ ಒಂದಾಗುವುದು, ದ್ವೈತವಳಿದು ಅದ್ವೈತವಾಗುವುದು ಶಿವಾಚಾರ, ಅಂತಹ ಶಿವಾಚಾರ ಸಮಾನವಾಗಿದ್ದರೆ(ಸ್ವಯ) ಅದೇ ಬ್ರಹ್ಮಾಚಾರವೆಂದು ವಚನಕಾರರು ತಿಳಿಸಿದ್ದಾರೆ. ಲಿಂಗವನ್ನರಿತುಕೊಂಡವರಿಗೆ ಹಿಂದಿಲ್ಲ. ಜಂಗಮವನ್ನರಿತುಕೊಂಡವರಿಗೆ ಮುಂದಿಲ್ಲ. ಇದೇ ನಿಜವಾದ ಶಿವಾಚಾರವೆಂದು ಚೆನ್ನಬಸವಣ್ಣನವರು ಹೇಳಿದ್ದಾರೆ.

“ಭಕ್ತಿ ಜ್ಞಾನ ವೈರಾಗ್ಯ ಕುಲಸ್ಥಲವ ಅರುಹಲೆಂದು
ಮತ್ರ್ಯಲೋಕಕ್ಕೆ ಇಳಿ ತಂದನಯ್ಯಾ ಬಸವಣ್ಣನು
ವ್ರತಾಚಾರದ ಶಿವಾಚಾರದ ಮುಂದಣ ಕನ್ನಡಕವ ಕಳೆದು
ಕರತಲಾಮಲಕ ಮಾಡಿದನಯ್ಯಾ ಬಸವಣ್ಣನು,
ಬಿಜ್ಜಳನ ಒರೆಗಲ್ಲ ಹಿಡಿದು ಶಿವಭಕ್ತಿ ಸಂಪಾದನೆಯ ಮಾಡುವಲ್ಲಿ
ಮೂವತ್ತಾರು ಕೊಂಡೆಯ ಪರಿಹರಿಸಿ ಶಿವಾಚಾರ ಧ್ವಜವನೆತ್ತಿ ಮೆರೆದನಯ್ಯ ಬಸವಣ್ಣನು....”
-ಚೆನ್ನಬಸವಣ್ಣ (ಸ.ವ.ಸಂ.3.ವ:1479)

‘ಶಿವಾಚಾರದ ಧ್ವಜವನೆತ್ತಿ ಮೆರೆದನಯ್ಯಾ ಬಸವಣ್ಣ’ ಎಂಬ ಚೆನ್ನಬಸವಣ್ಣನವರ ಈ ವಚನದಿಂದ ಬಸವಣ್ಣ ಲಿಂಗಾಯತ ಧರ್ಮ ಸಂಸ್ಥಾಪಕರಾಗಿದ್ದರೆಂಬುದು ಸ್ಪಷ್ಟವಾಗುತ್ತದೆ. ನಿಜವಾದ ಭಕ್ತಿ-ಜ್ಞಾನ-ವೈರಾಗ್ಯಗಳನ್ನು ತಿಳಿಸಲೆಂದೇ ಬಸವಣ್ಣನವರು ಮತ್ರ್ಯಕ್ಕೆ ಬಂದರೆಂಬುದನ್ನು ಚೆನ್ನಬಸವಣ್ಣ ತಿಳಿಸಿದ್ದಾರೆ. ಮೊದಲು ವ್ರತಾಚಾರ-ಶಿವಾಚಾರಗಳಿಗೆ ಕನ್ನಡಕ ಹಾಕಲಾಗಿತ್ತು. ಅಂತಹ ಕನ್ನಡಕಗಳನ್ನು ತೆಗೆದು ನಿಜವಾದ ಶಿವಭಕ್ತಿ, ನಿಜವಾದ ಶಿವಾಚಾರವೇನೆಂಬುದನ್ನು ಬಸವಣ್ಣನವರು ತಿಳಿಸಿದರೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಸದಾಚಾರ, ಶಿವಾಚಾರವುಳ್ಳವರಿಗೆ ಸರ್ವಯೋಗವಪ್ಪುದೆಂದು ಸಿದ್ಧರಾಮ ತಿಳಿಸಿದ್ದಾರೆ. ಶಿವಲಿಂಗಭಕ್ತಿ ಗುರುಚರಭಕ್ತಿ ಎಲ್ಲರಿಗೂ ಸುಲಭವಲ್ಲವೆಂದವರು ಹೇಳಿದ್ಧಾರೆ.

“ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು
ತನ್ನ ಮಠಕ್ಕೆ ಬಂದ ಲಿಂಗಜಂಗಮದ
ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯಾ
ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ
ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂದ
ಹಂದಿಗಳೆತ್ತ ಬಲ್ಲರಯ್ಯಾ ಸತ್ಯದ ನೆಲೆಯ.”
-ಅಂಬಿಗರ ಚೌಡಯ್ಯ(ಸ.ವ.ಸಂ.6,ವ:262)

ಈ ವಚನದಲ್ಲಿ ‘ಮಠ’ ಎಂಬ ಪದ ಬಳಕೆಯಾಗಿದೆ. ಶರಣರ ಕ್ರಾಂತಿಯ ನಂತರವೂ ಅಂಬಿಗರ ಚೌಡಯ್ಯನವರು ಇದ್ದರು. ಶರಣರ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಲೇ ಇದ್ದರು. ಅವರ ಇಳಿ ವಯಸ್ಸಿನಲ್ಲಿ ವೀರಶೈವಧರ್ಮ ಹುಟ್ಟಿ, ಮಠಗಳು ಸ್ಥಾಪನೆಯಾದುದನ್ನು ಅವರು ಕಂಡಿರಬೇಕು. ಅಂತೆಯೇ ಅವರು ಅದನ್ನಿಲ್ಲಿ ವಿವರಿಸಿದ್ದಾರೆ. ಸಮಯಾಚಾರ ಸಮಯಭಕ್ತಿಯ ನಡೆಸದೆ ಶಿವಪೂಜೆ ಮಾಡುತ್ತ ಸ್ಥಾವರಲಿಂಗದ ಆರಾಧಕರಾದವರನ್ನು ಹಂದಿಗಳೆಂದು ವಿಡಂಭಿಸಿದ್ದಾರೆ. ಶೀಲವಂತನೆಂಬವ ಶಿವದ್ರೋಹಿ ಎಂದು ಇನ್ನೊಂದು ವಚನದಲ್ಲಿ (ವ:263) ಹೇಳಿರುವ ಚೌಡಯ್ಯನವರು, ಬಸವಾದಿ ಶರಣರ ನಂತರ ಹೇಗೆ ಶೀಲ-ಮಡಿ-ಮೌಢ್ಯತೆಯ ಹೆಸರಿನಲ್ಲಿ ಲಿಂಗಾಯುತ ಧರ್ಮವನ್ನು ಹಾಳು ಮಾಡಿತ್ತಿದ್ದರೆಂಬುದನ್ನು ವಿವರಿಸಿದ್ದಾರೆ.

“ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ ಮತ್ತು ಗುರುಲಿಂಗಜಂಗಮದ ನಿಂದಿಸಿ ನುಡಿದವರ ಬಾಯಸೀಳಿ ನಾಲಗೆಯ ಕಿತ್ತು ಕೊಲುವೆನು”-(ವ:1576)ಎಂದು ಉರಿಲಿಂಗಪೆದ್ದಿ ಹೇಳಿದ್ದಾರೆ. ಅಂದರೆ ಆ ಹೊತ್ತಿಗಾಗಲೇ ಶರಣರ ತತ್ವಗಳು ಮಾಯವಾಗುತ್ತಿದ್ದವೆಂಬುದನ್ನು ಈ ವಚನ ಹೇಳುತ್ತದೆ.

‘ಶಿವಾಚಾರವೇ ಸರ್ವಮಯಲಿಂಗ, ಪಂಚಾಚಾರ ಶುದ್ಧಭರಿತ’ ವೆಂದು ಅಕ್ಕಮ್ಮ ಹೇಳಿದ್ದಾರೆ. ಲಿಂಗಾಚಾರಕ್ಕೂ ಶಿವಾಚಾರಕ್ಕೂ ಇರುವ ಸಂಬಂಧವನ್ನು ತಿಳಿಸಿದ್ದಾರೆ. ಅಕ್ಕನಾಗಮ್ಮನವರೂ ಕೂಡ ಚೆನ್ನಬಸವಣ್ಣನವರು ಹೇಳಿರುವ ರೀತಿಯಲ್ಲಿಯೇ ಹೇಳಿದ್ದಾರೆ. ಶಿವಾಚಾರದ ಬೆಳವಿಗೆ ಬಸವಣ್ಣನೇ ಕಾರಣ, ಬಸವಣ್ಣನೇ ಬಂದು ಭಕ್ತಿಸ್ಥಲವ ಅರುಹಿದನೆಂದು ತಮ್ಮ ವಚನದಲ್ಲಿ(ವ:790) ಹೇಳಿದ್ದಾರೆ. ಹೀಗೆ ಶಿವಾಚಾರವೆಂಬುದು ಆಚರಣೆಗೆ ಅಷ್ಟು ಸುಲಭವಾದುದಲ್ಲ, ದುರಾಸೆ, ದುರಹಂಕಾರ, ಸ್ವಾರ್ಥವನ್ನು ಬಿಟ್ಟಾಗ ಮಾತ್ರ ಅದು ಸಾಧ್ಯವಾಗುತ್ತದೆಂದು ವಚನಕಾರರು ಸ್ಪಷ್ಟಪಡಿಸಿದ್ದಾರೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ

ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ

MORE NEWS

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ

10-01-2025 ಬೆಂಗಳೂರು

"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...

ಕೊನೆಯ ಗಿರಾಕಿ ಕತೆಯಲ್ಲಿ ಶೋಷಿತ ಸಮಾಜ

02-01-2025 ಬೆಂಗಳೂರು

"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...

ಹಗಲು ವೇಷಗಾರರ ನಾಟಕ ಕಂಪನಿಗಳು ಮತ್ತು ಅನುದಾನ ಶಿಫಾರಸು ಸಮೀಕ್ಷೆಯ ಮೊದಲ ಸುತ್ತು...

01-01-2025 ಬೆಂಗಳೂರು

"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...