Date: 12-03-2022
Location: ಬೆಂಗಳೂರು
‘ಆಚಾರವಿಡಿದು ಗುರು-ಲಿಂಗ-ಜಂಗಮರನ್ನು ಕಾಣಬೇಕೆಂದು ಹೇಳಿರುವ ಬಸವಣ್ಣನವರು, ಇದಕ್ಕೆ ಸದಾಚಾರ ಅಗತ್ಯವೆಂದು ತಿಳಿಸಿದ್ದಾರೆ’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ‘ಶರಣಧರ್ಮ’ ಅಂಕಣದಲ್ಲಿ ಶರಣಧರ್ಮದ ಪ್ರಾಣವಾದ ಪಾಂಚಾಚಾರಗಳಲ್ಲಿ ಮತ್ತೊಂದು ಮುಖ್ಯ ಅಂಶವಾದ ಸದಾಚಾರದ ಕುರಿತು ವಿಶ್ಲೇಷಿಸಿದ್ದಾರೆ.
ಶರಣರ ಪ್ರಕಾರ ಸತ್-ಆಚಾರವೇ ಸದಾಚಾರ, ಒಳ್ಳೆಯ ಆಚರಣೆಯೇ ಸದಾಚಾರವೆಂದಾಗ ಯಾವುದು ಒಳ್ಳೆಯದು ಎಂಬ ಪ್ರಶ್ನೆ ಬರುತ್ತದೆ. ಗುರು-ಲಿಂಗ-ಜಂಗಮದ ಹುಡುಕಾಟವೇ ಸದಾಚಾರವಾಗಿದೆ. ಹೀಗಾಗಿ ಶಾಸ್ತ್ರಾಧ್ಯಯನದಿಂದ ಸದಾಚಾರದ ಅರ್ಥ ತಿಳಿಯುವುದಿಲ್ಲ. ಇದರ ರಹಸ್ಯವನ್ನು ಸತ್ಪುರುಷರ ಮೂಲಕ ಶಿವಭಕ್ತರ ಮೂಲಕ ತಿಳಿದುಕೊಳ್ಳಬೇಕೆಂದು ಶರಣರು ಹೇಳಿದ್ದಾರೆ.
ಆಚಾರವಿಡಿದು ಗುರು-ಲಿಂಗ-ಜಂಗಮರನ್ನು ಕಾಣಬೇಕೆಂದು ಹೇಳಿರುವ ಬಸವಣ್ಣನವರು, ಇದಕ್ಕೆ ಸದಾಚಾರ ಅಗತ್ಯವೆಂದು ತಿಳಿಸಿದ್ದಾರೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ(ವ;235)’ಎಂಬ ಬಸವಣ್ಣನವರ ಈ ವಚನವು ಸದಾಚಾರವೇನೆಂಬುದನ್ನು ನಾಲ್ಕು ನುಡಿಗಳಲ್ಲಿ ಹೇಳಿದೆ. ಸದಾಚಾರದ ಬಗ್ಗೆ ಇಷ್ಟೊಂದು ಸರಳವಾಗಿ ಇದುವರೆಗೆ ಯಾರೂ ತಿಳಿಸಿಕೊಟ್ಟಿಲ್ಲ. ಸದಾಚಾರ-ಸದ್ಭಕ್ತಿಯಿಲ್ಲದವರನ್ನು ಶರಣರು ಒಪ್ಪುವುದಿಲ್ಲ.
ಮನುಷ್ಯ ಸತ್ತಾಗ, ಹೆಣಕ್ಕೆ ಶೃಂಗಾರ ಮಾಡಿ, ಕಹಳೆಯನ್ನೂದುತ್ತ, ಮೆರವಣಿಗೆ ಮಾಡಿ ಶ್ರಾದ್ಧದ ಕೂಳನ್ನುಣ್ಣುವವರು ಸದಾಚಾರಿಗಳಲ್ಲವೆಂದು ಹೇಳಿದ ಬಸವಣ್ಣನವರು ಮನುಷ್ಯ ಸತ್ತಾಗ ಆತನ ಶರೀರವನ್ನು ಸಮಾಧಿಯಲ್ಲಿ ನಿಕ್ಷೇಪವ ಮಾಡಿ ಲಿಂಗಭಕ್ತರಿಗೆ ವಿಭೂತಿ-ವೀಳೆಯವನ್ನು ಕೊಡುವುದೇ ಸದಾಚಾರವೆಂದು ತಿಳಿಸಿದ್ದಾರೆ. ಗುರುಕಾರಣ್ಯವೇ ನಿಜವಾದ ಸದಾಚಾರವೆಂದು ಹೇಳಿರುವ ಬಸವಣ್ಣನವರು ಗುರುವಿಗೆ ಮಹತ್ವದ ಸ್ಥಾನ ನೀಡಿದ್ದಾರೆ.
ಆಯತವಾಯಿತ್ತು ಅನುಭಾವ, ಸ್ವಾಯತ್ತವಾಯಿತ್ತು ಶಿವಜ್ಞಾನ, ಸಮಾಧಾನವಾಯಿತ್ತು ಸದಾಚಾರವೆಂದು ಹೇಳಿರುವ ಅಲ್ಲಮಪ್ರಭುಗಳು, ಲಿಂಗ-ಜಂಗಮವ ಪೂಜಿಸಿ ಭಕ್ತನಾಗಬೇಕಾದರೆ ಸದಾಚಾರವಿರಬೇಕೆಂದು ತಿಳಿಸಿದ್ದಾರೆ. ಉದಕ ಮಜ್ಜನವಲ್ಲ, ಪತ್ರೆ ಪೂಜೆಯಲ್ಲವೆಂದು ಹೇಳಿದ ಪ್ರಭು, ಸಜ್ಜನವೇ ಮಜ್ಜನ, ಸತ್ಯ ಸದಾಚಾರವೇ ಪತ್ರೆ, ಪುಷ್ಪವೆಂದು ಹೇಳಿದ್ದಾರೆ.
“ಅಯ್ಯಾ ಸದಾಚಾರ ಸದ್ಭಕ್ತಿಯಿಲ್ಲದ ಗುರುತ್ವ ಉಂಟೇನೊ ಮರುಳೆ?
ಸದಾಚಾರ ಸದ್ಭಕ್ತಿಯಿಲ್ಲದ ನಿಜಲಿಂಗ ಉಂಟೇನೊ ಮರುಳೆ?
ಸದಾಚಾರ ಸದ್ಭಕ್ತಿಯಿಲ್ಲದ ನಿಜಜಂಗಮತ್ವ ಉಂಟೇನೊ ಮರುಳೆ?
ಸದಾಚಾರ ಸದ್ಭಕ್ತಿಯಿಲ್ಲದ ಶರಣತ್ವ ಉಂಟೇನೊ ಮರುಳೆ?
ಗುಹೇಶ್ವರ ಲಿಂಗದಲ್ಲಿ ಸದಾಚಾರ ಸದ್ಭಕ್ತಿಯಿಂದಲ್ಲದೆ
ನಿಜ ಮೋಕ್ಷವುಂಟೆ ಚೆನ್ನಬಸವಣ್ಣ?”
-ಅಲ್ಲಮಪ್ರಭು (ಸ.ವ.ಸಂ.2.ವ:811)
ಈ ವಚನದಲ್ಲಿ ಪ್ರಭು ಸದಾಚಾರದ ಬಗೆಗೆ ವಿವರವಾಗಿ ತಿಳಿಸಿದ್ದಾರೆ. ಇಲ್ಲಿ ಸದಾಚಾರ-ಸದ್ಭಕ್ತಿ ಸಮನ್ವಯಗೊಂಡಿವೆ. ಇಲ್ಲಿ ಸದಾಚಾರ ಸದ್ಭಕ್ತಿಯೆಂಬ ಪದ ವಚನದ ಎಲ್ಲ ಸಾಲುಗಳಲ್ಲಿಯೂ ಬಂದಿದೆ. ಗುರು ಒಲಿಯಬೇಕಾದರೆ, ಲಿಂಗವಾಗಬೇಕಾದರೆ, ಜಂಗಮತ್ವವನ್ನು ಪಡೆಯಬೇಕಾದರೆ, ಶರಣತ್ವವನ್ನು ಹೊಂದಬೇಕಾದರೆ ಸದಾಚಾರ ಸದ್ಭಕ್ತಿಯಿಲ್ಲದೆ ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಅಂಗಸಂಗಿಯಾದವರಿಗೆ ಲಿಂಗಸಂಗವಿಲ್ಲ, ಲಿಂಗಸಂಗಿಯಾದವರಿಗೆ ಅಂಗಸಂಗವಿಲ್ಲವೆಂದು ಹೇಳಿರುವ ಚೆನ್ನಬಸವಣ್ಣನವರು ಅಂಗಸಂಗವೆಂಬುದು ಅನಾಚಾರ, ಲಿಂಗಸಂಗವೆಂಬುದು ಸದಾಚಾರವೆಂದು ತಿಳಿಸಿದ್ದಾರೆ. ಇಲ್ಲಿ ಅಂಗಸಂಗವನ್ನು ತೊರೆಯುತ್ತಲೇ ಲಿಂಗಸಂಗಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ‘ಉಂಬುದು ಉಡುವುದು ಶಿವಾಚಾರ, ಕೊಂಬುದು ಕೊಡುವುದು ಕುಲಾಚಾರ’ವೆಂದು ನಂಬಿದ್ದವರನ್ನು ಚೆನ್ನಬಸವಣ್ಣನವರು, ಅನಾಚಾರಿಗಳೆಂದು ಕರೆದಿದ್ದಾರೆ. ಉಂಬುದು-ಉಡುವುದರ ಜತೆಗೆ, ಕೊಂಬುದು-ಕೊಡುವುದನ್ನು ಮಾಡುವುದೇ ಸದಾಚಾರವೆಂದು ಹೇಳಿದ್ದಾರೆ. ಗುರುಪೂಜೆ, ಲಿಂಗಪೂಜೆ, ಜಂಗಮಪೂಜೆಯಿಂದ ಸದಾಚಾರವಳವಡುತ್ತದೆಂದು ತಿಳಿಸಿದ್ದಾರೆ. ಲಿಂಗಭಕ್ತನ ವಿವಾಹದ ಸಂದರ್ಭದಲ್ಲಿ ಶಿವಗಣಂಗಳಿಗೆ ವಿಭೂತಿ ವೀಳೆಯವ ಕೊಟ್ಟು ಆರೋಗಣೆಯ ಮಾಡಿಸಿ, ಶಿವಗಣಂಗಳ ಸಾಕ್ಷಿಯಾಗಿ ಪ್ರಸಾದವನ್ನಿಕ್ಕುವುದು ಸದಾಚಾರವೇ ಹೊರತು, ವಾರ-ತಿಥಿ-ಮೂರ್ತಗಳನ್ನು ನೋಡುತ್ತಾ ಕಾಲಹರಣ ಮಾಡುವುದು ಸದಾಚಾರವಲ್ಲ, ಇದು ಶರಣರಿಗೆ ಸಲ್ಲದೆಂದು ಸ್ಪಷ್ಟಪಡಿಸಿದ್ದಾರೆ.
‘ಭಕ್ತಂಗಾಗಲಿ, ಜಂಗಮಕ್ಕಾಗಲಿ
ಸದಾಚಾರವುಳ್ಳವರಿಗೆ ಅನಾಯತ ಹೊದ್ದಬಾರದು,
ಅನಾಯತವೆಂಬುದೆ ಅನುಸರಣೆ, ಅನುಸರಣೆಯೆಂಬುದೆ ಅಂಗದಿಚ್ಛೆ
ಅಂಗದಿಚ್ಛೆಯೆಂಬುದೆ ಅನಾಚಾರ, ಅನಾಚಾರವೆಂಬುದೆ ಪಾತಕ
ಆ ಪಾತಕವೆ ನರಕ....”
-ಚೆನ್ನಬಸವಣ್ಣ(ಸ.ವ.ಸಂ.3 ವ:184)
ಯಾವುದು ಅನಾಚಾರ, ಯಾವುದು ಸದಾಚಾರವೆಂಬುದನ್ನು ಚೆನ್ನಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ. ಅಂಗದಿಚ್ಛೆಯಿಂದಲೇ ಭಕ್ತ ಹಾಳಾಗುವುದರಿಂದ, ಅಂಗದಿಚ್ಛೆಯನ್ನು ನಿಯಂತ್ರಿಸಿ, ಲಿಂಗದಿಚ್ಛೆಯನ್ನಳವಡಿಸಬೇಕೆಂದು ಈ ವಚನದಲ್ಲಿ ಹೇಳಲಾಗಿದೆ. ಕಾಮ-ಮೋಹ-ಭೋಗ ಅಂಗದಿಚ್ಛೆಗಳಾದರೆ; ದಯೆ-ಮಾನವೀಯತೆ-ಅಂತ:ಕರಣಗಳು ಲಿಂಗದಿಚ್ಛೆಗಳಾಗಿವೆ. ಹೀಗಾಗಿ ಇಲ್ಲಿ ಲಿಂಗಾಚಾರವೆಂದರೆ ಕೇವಲ ಲಿಂಗಪೂಜೆಯಲ್ಲ, ಸದಾಚಾರವೆಂದರೆ ಕೇವಲ ಸತ್ ಸಂಪ್ರದಾಯವಲ್ಲ. ಸದಾಚಾರವೆಂಬುದನ್ನು ಧಾರ್ಮಿಕ ಪರಿಭಾಷೆಯಿಂದ ಬಿಡಿಸಿದಾಗ ಅದು ದಾನವನನ್ನು ಮಾನವನನ್ನಾಗಿ ಮಾಡುವ ಮಹತ್ವದ ಸಾಧನೆಯಾಗಿ ಕಾಣಿಸುತ್ತದೆ.
ಕೈಲಾಸದ ಪರಿಕಲ್ಪನೆಯನ್ನು ಹೊಸದಾಗಿ ಕಟ್ಟಿಕೊಟ್ಟ ಸಿದ್ಧರಾಮ ಶಿವಯೋಗಿಗಳು ಸದಾಚಾರದ ಮಹತ್ವವನ್ನು ತಮ್ಮ ಅನೇಕ ವಚನಗಳಲ್ಲಿ ವಿವರಿಸಿದ್ದಾರೆ. ಕೈಲಾಸವೆಂಬುದೊಂದು ಹಾಳುಬೆಟ್ಟ, ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರೆಂದು ಹೇಳಿರುವ ಸಿದ್ಧರಾಮ, ಸದಾಚಾರದ ತಿರುಳನ್ನು ಹೇಳಿದ್ದಾರೆ. ಲಿಂಗಾಂಗ ಸಾಮರಸ್ಯವನ್ನು ಹೊಂದಿ ಸದಾಚಾರದಿಂದ ವರ್ತಿಸಿದಾಗ, ಕಪಿಲಸಿದ್ಧ ಮಲ್ಲಿಕಾರ್ಜುನನ ಪಾದಪದ್ಮದಲ್ಲಿ ಕಾಣುವುದೇ ನಿಜವಾದ ಕೈಲಾಸವೆಂದು ತಿಳಿಸಿದ್ದಾರೆ. ನುಡಿದಂತೆ ನಡೆದ ನಡೆದಂತೆ ನುಡಿದ ಸದ್ಭಕ್ತಿ ಸದಾಚಾರವುಳ್ಳ ಮಹಾತ್ಮರ ಪಾದವ ಹಿಡಿದು ಬದುಕಿಸಯ್ಯಾ ಎಂದು ಪ್ರಭುವನ್ನು ಕೇಳಿಕೊಂಡಿದ್ದಾರೆ.
“ವೇದ ವೇದಾಂತವನೋದಿದಡೇನು ಮನಸ್ಸೂತಕವಳಿಯದನ್ನಕ್ಕ?
ಸಿದ್ಧ ಸಿದ್ಧಾಂತವ ಶ್ರಮಬಟ್ಟಡೇನು ಸಾಧಿಸಿ ಕೀರ್ತಿಯ
ಪಡೆಯದನ್ನಕ್ಕ? ಇವೆಲ್ಲ ಹೊರಗಣ ಮಾತು, ಮಾತೊಂದೆ ನಮ್ಮ
ಕಪಿಲಸಿದ್ಧ ಮಲ್ಲೇಶನಲ್ಲಿ ಸದಾಚಾರ ಸನ್ಮಾರ್ಗವಯ್ಯಾ”
-ಸಿದ್ಧರಾಮ(ಸ.ವ.ಸಂ.4.ವ:899)
ಈ ವಚನದಲ್ಲಿ ಸಿದ್ಧರಾಮ ಶಿವಯೋಗಿಗಳು ಸದಾಚಾರದ ಸಾರವನ್ನೇ ವಿವರಿಸಿದ್ದಾರೆ. ಮನಸ್ಸಿನಲ್ಲಿ ಸೂತಕವನ್ನಿಟ್ಟುಕೊಂಡು ವೇದ ವೇದಾಂತವನೋದಿದಡೇನು ಪ್ರಯೋಜನವೆಂದು ಕೇಳಿದ ಅವರು, ಸಾಧನೆ ಮಾಡದೆ ಸಿದ್ಧ ಸಿದ್ಧಾಂತವನ್ನು ನಂಬುವದರಿಂದ ಏನೂ ಉಪಯೋಗವಿಲ್ಲವೆಂದು ಹೇಳಿದ್ದಾರೆ. ಸದಾಚಾರವೇ ಸನ್ಮಾರ್ಗಕ್ಕೆ ದಾರಿಯಾಗಿದೆ. ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಸತ್ಯದ ಸಾಕ್ಷಾತ್ಕಾರವಾಗುತ್ತದೆಂದು ತಿಳಿಸಿರುವ ಶಿವಯೋಗಿಗಳು ಸದಾಚಾರಕ್ಕೆ ಹೊಸ ವ್ಯಾಖ್ಯೆ ನೀಡಿದ್ದಾರೆ.
ಐಶ್ವರ್ಯ-ಸಂಪತ್ತಿಗಾಗಿ ಬಡಿದಾಡಿ ಕೊಲೆಗೀಡಾಗದೆ, ಸತ್ಯಸದಾಚಾರದಲ್ಲಿ ನಡೆಯಬೇಕೆಂದು ಅಂಬಿಗರಚೌಡಯ್ಯನವರು ತಿಳಿಸಿದ್ದಾರೆ. ಸದಾಚಾರ-ಸದ್ಬಕ್ತಿಗಳೇ ಸಾಧಕನನ್ನು ಮುಂದೆ ಕರೆದೊಯ್ಯುತ್ತವೆಯೆಂದು ಹೇಳಿದ್ದಾರೆ.
ಸಜ್ಜನವೇ ಮಜ್ಜನ, ಸದಾಚಾರವೇ ಧೂಪಾರತಿಯೆಂದು ಹೇಳಿರುವ ಅಜಗನಣ್ಣನವರು ಶರಣನಾದವನಿಗೆ ಸದಾಚಾರವೇ ಶೋಭೆಯನ್ನು ತರುತ್ತದೆಂದು ತಿಳಿಸಿದ್ದಾರೆ. ಸದ್ಭಕ್ತಿ, ಸದಾಚಾರಗಳೇ ಸಾಧಕನಿಗೆ ಮುಖ್ಯವಾದವುಗಳೆಂದು ಅರಿವಿನ ಮಾರಿತಂದೆ ಹೇಳಿದರೆ, ಅಹಂಕಾರವನಳಿದು ಸದಾಚಾರಿಯಾಗುವುದೇ ಶರಣನ ಲಕ್ಷಣವೆಂದು ಆಯ್ದಕ್ಕಿ ಮಾರಯ್ಯನವರು ತಿಳಿಸಿದ್ದಾರೆ. ಗುರುದೀಕ್ಷೆ ಲಿಂಗಸ್ವಾಯತವ ಮಾಡಿಸುವುದು ಸದಾಚಾರವೆಂದು ಉರಿಲಿಂಗಪೆದ್ದಿಗಳು ಹೇಳಿದರೆ, ಸತ್ಯದ ಹುಡುಕಾಟವೇ ಸದಾಚಾರವೆಂದು ಏಲೇಶ್ವರ ಕೇತಯ್ಯ ತಿಳಿಸಿದ್ದಾರೆ.
ಸತ್ಯ ಸದಾಚಾರವೇ ಶರಣನ ನಿಜವಾದ ಲಕ್ಷಣವಾಗಿದೆಯೆಂದು ಅಕ್ಕಮಹಾದೇವಿ ಹೇಳಿದರೆ, ದುರಾಸೆ, ದುರ್ಬುದ್ದಿ, ಸತ್ಯಸದಾಚಾರಕ್ಕೆ ಹೊರಗು ಎಂದು ಅಕ್ಕಮ್ಮ ತಿಳಿಸಿದ್ದಾರೆ. ಆಚಾರವೆಂಬುದು ಅಗೋಚರ, ಅದು ಯಾರಿಗೂ ಸಾಧ್ಯವಿಲ್ಲ. ಮರ್ತ್ಯಲೋಕದಲ್ಲಿ ಸದಾಚಾರವನ್ನು ಬೆಳಕಿಗೆ ತರಲೆಂದೇ ಬಸವಣ್ಣ ಬಂದು ಭಕ್ತಿ ಸ್ಥಳವನ್ನು ತಿಳಿಸಿದನೆಂದು ಅಕ್ಕನಾಗಮ್ಮ ಹೇಳಿದ್ದಾರೆ. ಬಸವಣ್ಣನವರ ಅರಿವಿನಲ್ಲಿ ಸಂಶಯ ಸಂಬಂಧವ ತಿಳಿದು, ಸದಾಚಾರವನರಿದು ಬದುಕಿದೆನೆಂದು ನೀಲಮ್ಮ ತಿಳಿಸಿದ್ದಾರೆ. ಹೀಗೆ ಅನೇಕ ವಚನಕಾರರು ತಮ್ಮ ವಚನಗಳಲ್ಲಿ ಸದಾಚಾರದ ಮಹತ್ವವನ್ನು ವಿವರಿಸಿದ್ದಾರೆ.
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220
ಈ ಅಂಕಣದ ಹಿಂದಿನ ಬರಹಗಳು:
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.