Date: 06-03-2022
Location: ಬೆಂಗಳೂರು
'ಆಗಮಗಳಲ್ಲಿ ಪಂಚಾಚಾರಗಳ ಪ್ರಸ್ತಾಪವೇನೋ ಇದೆ. ಆದರೆ ಅದು ನಂತರದ ಕಾಲಘಟ್ಟದಲ್ಲಿ ತಪ್ಪು ರೀತಿಯಿಂದ ಅರ್ಥೈಸಲ್ಪಟ್ಟು, ತಪ್ಪಾದ ಆಚರಣೆಗಳಿಗೆ ಕಾರಣವಾಗಿದೆ' ಎನ್ನುತ್ತಾರೆ ಲೇಖಕ ಬಸವರಾಜ ಸಬರದ ಅವರು ತಮ್ಮ ಶರಣಧರ್ಮ ಅಂಕಣದಲ್ಲಿ ಲಿಂಗಾಯತ ಧರ್ಮದಲ್ಲಿ ಪಂಚಾಚಾರಗಳ ಪ್ರಾಮುಖ್ಯತೆ ಮತ್ತು ಅವುಗಳ ಕುರಿತು ಶರಣರ ಅಭಿಪ್ರಾಯಗಳನ್ನು ವಿಶ್ಲೇಷಿಸಿದ್ದಾರೆ. ಈ ಲೇಖನದಲ್ಲಿ ಪಂಚಾಚಾರಗಳಲ್ಲಿ ಮುಖ್ಯವಾದ ಲಿಂಗಾಚಾರದ ಕುರಿತ ವಿವರಗಳಿವೆ.
ಲಿಂಗಾಯತ ಧರ್ಮದಲ್ಲಿ ಪಂಚಾಚಾರಗಳೆಂದರೆ ಪ್ರಾಣವಿದ್ದಂತೆ. ಪ್ರಾಣವಿದ್ದಾಗ ಮಾತ್ರ ಮನುಷ್ಯ ಜೀವಂತವಾಗಿರಲು ಸಾಧ್ಯ. ಅದೇ ರೀತಿ ಪಂಚಾಚಾರಗಳಿದ್ದಾಗ ಮಾತ್ರ, ಅಷ್ಟಾವರಣಗಳಿರಲು ಸಾಧ್ಯವಾಗುತ್ತದೆ. ಶರಣರು ಪಂಚಾಚಾರಗಳಿಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನ ನೀಡಿದರು. ಶಿವಾಗಮಗಳಲ್ಲಿ ಹೇಳಿರುವ ಪಂಚಾಚಾರಗಳಿಗೂ, ಶರಣರು ಕಟ್ಟಿಕೊಟ್ಟ, ಪಂಚಾಚಾರಗಳಿಗೂ ತುಂಬ ವ್ಯತ್ಯಾಸವಿದೆ.
“ಲಿಂಗಾಚಾರ: ಸದಾಚಾರ: ಶಿವಾಚಾರಸ್ತಥೈವ ಚ|
ಭೃತ್ಯಾಚಾರೋ ಗಣಾಚಾರ: ಪಂಚಾಚಾರ: ಪ್ರಕೀರ್ತಿತಾ:||
-ಚಂದ್ರಜ್ಞಾನಾಗಮ(ಕ್ರಿಯಾಪಾದರ್-, ಶ್ಲೋಕ-4)
ಆಗಮಗಳಲ್ಲಿ ಪಂಚಾಚಾರಗಳ ಪ್ರಸ್ತಾಪವೇನೋ ಇದೆ. ಆದರೆ ಅದು ನಂತರದ ಕಾಲಘಟ್ಟದಲ್ಲಿ ತಪ್ಪು ರೀತಿಯಿಂದ ಅರ್ಥೈಸಲ್ಪಟ್ಟು, ತಪ್ಪಾದ ಆಚರಣೆಗಳಿಗೆ ಕಾರಣವಾಗಿದೆ. ಪಂಚಾಚಾರಗಳಲ್ಲಿ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಭೃತ್ಯಾಚಾರಗಳೆಂಬ ಐದು ಆಚಾರಗಳಿವೆ. ಬಸವಾದಿ ಶರಣರಿಗಿಂತ ಪೂರ್ವದಲ್ಲಿ ಇಷ್ಟಲಿಂಗದ ಪರಿಕಲ್ಪನೆಯೇ ಇರಲಿಲ್ಲ. ಹೀಗಾಗಿ ಎಲ್ಲರೂ ಸ್ಥಾವರಲಿಂಗ ಪೂಜಕರೇ ಆಗಿದ್ದರು. ಗುಡಿಗುಂಡಾರಗಳಿಗೆ ಸುತ್ತುವುದು, ಸ್ಥಾವರಲಿಂಗಕ್ಕೆ ನಮಸ್ಕರಿಸುವುದನ್ನೇ ಲಿಂಗಾಚಾರವೆಂದು ತಿಳಿದುಕೊಂಡಿದ್ದರು. ಹೀಗೆ ದಿನಾಲು ದೇವಸ್ಥಾನಗಳಿಗೆ ಹೋಗಿ ಸ್ಥಾವರಲಿಂಗವನ್ನು ಪೂಜಿಸುವುದೇ ಸದಾಚಾರವಾಗಿತ್ತು. ಇನ್ನು ಶಿವನನ್ನು ಆರಾಧಿಸುವುದು, ಶಿವನನ್ನು ಒಲಿಸಿಕೊಳ್ಳಲು ಹಿಂಸಾಭಕ್ತಿ ಮಾಡುವುದು ಶಿವಾಚಾರವಾಗಿತ್ತು. ಶೈವರಲ್ಲದವರ ವಿರುದ್ದ ಮಾತನಾಡುತ್ತ, ತ್ರಿಶೂಲ ಹಿಡಿದ ಶಿವನಿಗೆ ಬದ್ಧನಾಗಿರುವುದೇ ಶಿವಾಚಾರವಾಗಿತ್ತು. ಶಿವನ ಆಜ್ಞೆಯಂತೆ ದಕ್ಷಬ್ರಹ್ಮನನ್ನು ಸಂಹರಿಸಿದ ವೀರಭದ್ರ ಗಣಾಚಾರಿಯಾಗಿದ್ದ. ಸಂನ್ಯಾಸಿಗಳನ್ನು ಕಂಡು, ಕಾವಿಧರಿಸಿದವರನ್ನು ಕಂಡು ಅವರ ಸೇವಕರಾಗಿ ಮೌಢ್ಯಭಕ್ತಿಯಲ್ಲಿ ಮುಳುಗಿರುವುದೇ ಭೃತ್ಯಾಚಾರವಾಗಿತ್ತು.
12ನೇ ಶತಮಾನದಲ್ಲಿ ಶರಣರು ಈ ಪಂಚಾಚಾರಗಳಿಗೆ ಹೊಸ ವ್ಯಾಖ್ಯೆ ನೀಡಿದರು. ಇಷ್ಟಲಿಂಗದ ಮೂಲಕ ಆತ್ಮದ ಸಾಧನೆ ಮಾಡುವುದನ್ನು ಲಿಂಗಾಚಾರವೆಂದು ಕರೆದರು. ಅಂದರೆ ಹಿಂದಿದ್ದ ಸ್ಥಾವರಲಿಂಗದ ಬದಲಾಗಿ ಇಷ್ಟಲಿಂಗಕ್ಕೆ ಪ್ರಾಮುಖ್ಯತೆ ನೀಡಿದರು. ಇಷ್ಟಲಿಂಗದ ಮೂಲಕ ಭಾವಲಿಂಗ, ಪ್ರಾಣಲಿಂಗ, ಜ್ಞಾನಲಿಂಗಗಳ ಪರಿಚಯವಾಯಿತು. ಆಗ ಲಿಂಗಾಚಾರದ ಅರ್ಥವ್ಯಾಪ್ತಿ ಬೆಳೆದುನಿಂತಿತು. ವಿಶಾಲಭಾವಕ್ಕೆ-ಜ್ಞಾನಕ್ಕೆ ಲಿಂಗಾಚಾರವೆಂದು ಕರೆಯಲಾಯಿತು. ಇಷ್ಟಲಿಂಗವಿಲ್ಲದೆ ಬೇರೆ ದೈವವಿಲ್ಲವೆಂದು ತಿಳಿಯುವುದು ಲಿಂಗಾಚಾರದ ಧ್ಯೇಯವಾಯಿತು. ಲಿಂಗಾಚಾರವು ಸಾಧಕನಿಗೆ ನಿಜವಾದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿತು. ಗುರು-ಲಿಂಗ-ಜಂಗಮದ ಪೂಜೆಯೇ ಸದಾಚಾರವಾಯಿತು. ಗುರು ಲಿಂಗ-ಜಂಗಮರು ಕೇವಲ ಹೊರಗೆ ಮಾತ್ರ ಕಾಣುವುದಿಲ್ಲ. ಅವರು ಅರಿವು-ಆಚಾರ-ಅನುಭಾವಗಳಾಗಿ ತನ್ನೊಳಗಡೆಯೇ ಇದ್ದಾರೆಂದು ಮೊದಲ ಬಾರಿಗೆ ಸದಾಚಾರ ತಿಳಿಸಿತು. ಸತ್ಯ-ಶುದ್ದ ಕಾಯಕ ಮಾಡಿ ಹೊರಗಿನ ಗುರು-ಲಿಂಗ-ಜಂಗಮರಿಗೆ ಅರ್ಪಿಸುವುದು ಸದಾಚಾರದ ಮೊದಲ ಹಂತವಾದರೆ, ಅರಿವೇ ಗುರುವಾಗಿ, ಆಚಾರವೇ ಲಿಂಗವಾಗಿ ಅನುಭಾವವೇ ಜಂಗಮವಾಗುವುದು ಸದಾಚಾರದ ನಿಜವಾದ ಉದ್ಧೇಶವಾಯಿತು. ಹೀಗೆ ತನ್ನೊಳಗಡೆಯೇ ಅರಿವಿನ ರೂಪದಲ್ಲಿರುವ ಗುರುವನ್ನು, ಅನುಭಾವದ ರೂಪದಲ್ಲಿರುವ ಜಂಗಮನನ್ನು, ಕಂಡುಕೊಳ್ಳಲು ಸದಾಚಾರದಿಂದ ಸಾಧ್ಯವಾಯಿತು.
ಶಿವನೇ ಶ್ರೇಷ್ಠ, ಶಿವಪುರಾಣದ ಕಥೆಗಳೇ ಸತ್ಯವೆಂದು ನಂಬಿದ್ದ ಬಸವಪೂರ್ವ ಯುಗದ ನಂಬಿಕೆಗೂ ತಾನೇ ಶಿವನಾಗಿ ಬೆಳೆಯಬೇಕು, ಆತ್ಮನೇ ಪರಮಾತ್ಮನಾಗಿ, ಕಾಣಿಸಿಕೊಳ್ಳಬೇಕೆಂಬ ಲಿಂಗಾಯತ ಧರ್ಮದ ಶಿವಾಚಾರಕ್ಕೂ ವ್ಯತ್ಯಾಸವಿದೆ. ಶಿವಭಕ್ತರಲ್ಲಿ ತಾರತಮ್ಯವನ್ನು ಮಾಡದೆ, ಜಾತಿಭೇದವನ್ನೆಣೆಸದೆ ಭಾವೈಕ್ಯತೆಯಿಂದ, ಸೌಹಾರ್ದತೆಯಿಂದ ಬದುಕುವುದೇ ನಿಜವಾದ ಶಿವಾಚಾರವೆಂದು ಶರಣರು ವ್ಯಾಖ್ಯಾನಿಸಿದರು.
ಬಸವಪೂರ್ವ ಯುಗದಲ್ಲಿ ಗಣಾಚಾರದ ಅರ್ಥ ಬೇರೆಯಾಗಿತ್ತು. ಶಿವನನ್ನು ಶಿವಧರ್ಮವನ್ನು ಯಾರಾದರೂ ಅವಹೇಳನ ಮಾಡಿದರೆ ಅಂತವರನ್ನು ಸಂಹರಿಸಬೇಕೆಂದು ಅಂದಿನ ಗಣಾಚಾರ ಹೇಳುತ್ತಿತ್ತು. ಶಿವನ ಕೈಯಲ್ಲಿರುವ ತ್ರಿಶೂಲ ಕೂಡ ಇದನ್ನೇ ಹೇಳುತ್ತದೆ. ಆದರೆ ಶರಣರು ಗಣಾಚಾರಕ್ಕೆ ಹೊಸ ಅರ್ಥ ನೀಡಿದರು. ಶಿವಭಕ್ತರ-ಸತ್ಯವಂತರ ಅವಹೇಳನವಾಗಬಾರದೆಂದು ನಂಬಿದ ಶರಣರು ಅಪ್ರಮಾಣ ಕತೆ-ಅಸಮಾನತೆಯ ವಿರುದ್ಧ ಬಂಡೇಳುವುದಕ್ಕಾಗಿ ಗಣಾಚಾರ ತತ್ವವನ್ನು ಬಳಸಿದರು. ನಿಜವಾದ ಅರ್ಥದಲ್ಲಿ
ಗಣಾಚಾರವೆಂದರೆ, ಅದು ಅಸಮಾನತೆಯ ವ್ಯವಸ್ಥೆಯ ವಿರುದ್ದ ಬಂಡೆದ್ದ ಚಳುವಳಿಯೇ ಆಗಿತ್ತು. ಹೀಗಾಗಿ ಗಣಾಚಾರ ಕ್ರಾಂತಿಯ ಸಂಕೇತವಾಯಿತು. ಕಾವಿಧಾರಿಗಳ ಸೇವಕರಾಗಿರುವುದೇ ಭೃತ್ಯಾಚಾರ, ಧರ್ಮಾಧಿಕಾರಿಗಳ ಆಜ್ಞೆಯನ್ನು ಪಾಲಿಸುವುದೇ ಭೃತ್ಯಾಚಾರವೆಂದು ನಂಬಿದ್ದ ನಂಬಿಕೆಯನ್ನು ಅಲ್ಲಗಳೆದ ಶರಣರು; ಅಹಂಕಾರ ತೊರೆದು, ಜನಸಾಮಾನ್ಯರ ಸೇವೆ ಮಾಡುವುದೇ ಭೃತ್ಯಾಚಾರವೆಂದು ತಿಳಿಸಿದರು. ಯಾವುದೇ ಒಬ್ಬ ವ್ಯಕ್ತಿಯನ್ನು ಆರಾಧಿಸುವುದಕ್ಕಿಂತ ಜನಸಾಮಾನ್ಯರ ಸೇವೆ ಮಾಡಬೇಕೆಂಬುದನ್ನು ಶರಣರ ಭೃತ್ಯಾಚಾರ ಹೇಳುತ್ತದೆ. ಹೀಗೆ ಬಸವಪೂರ್ವ ಕಾಲದ ಪಂಚಾಚಾರಗಳಿಗೂ, ಬಸವಾದಿ ಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದ ಪಂಚಾಚಾರಗಳಿಗೂ ತುಂಬ ವ್ಯತ್ಯಾಸವಿದೆ. ಮೊದಲಿದ್ದದ್ದು ಸಾಂಪ್ರದಾಯಿಕ ಪಂಚಾಚಾರಗಳಾದರೆ, ಶರಣರು ಸ್ಥಾಪಿಸಿದ ಪಂಚಾಚಾರಗಳು ಜೀವಪರವಾಗಿ ಕಂಡವು, ಜನಪರವಾಗಿ ಬೆಳೆಯಲು ಸಹಾಯಕವಾದವು. ಮೊದಲಿದ್ದ ಪಂಚಾಚಾರಗಳು ಶಿವಪುರಾಣದ ಪವಾಡ ಪುರುಷನಾದ ತ್ರಿಶೂಲಧಾರಿ ಶಿವನ ಸುತ್ತ ಸುತ್ತಿದರೆ; ಶರಣರು ಕಟ್ಟಿಕೊಟ್ಟ ಪಂಚಾಚಾರಗಳು ಅಂತ:ಕರಣದ ಶಿವನನ್ನು ಆತ್ಮರೂಪದಲ್ಲಿ ಕಂಡು ಕೊಂಡವು. ಜನಸಾಮಾನ್ಯರ ಸೇವೆಯೇ ದೇವರ ಸೇವೆಯೆಂದು ಶರಣರ ಪಂಚಾಚಾರಗಳು ತಿಳಿಸಿ ಹೇಳಿದವು.
ಲಿಂಗಾಚಾರ
ಶರಣರು ಹೇಳಿರುವ ಲಿಂಗಾಚಾರವು ಕೇವಲ ಲಿಂಗಪೂಜೆಗೆ ಮಾತ್ರ ಮೀಸಲಾಗಲಿಲ್ಲ. ಜಾತಿಯನ್ನು ನಿರಾಕರಿಸಿ ಸರ್ವರಿಗೂ ಲಿಂಗದೀಕ್ಷೆ ನೀಡಿ, ಆ ಮೂಲಕ ಸರ್ವರೂ ಸಮಾನರೆಂದು ಸಾರುವುದೇ ಲಿಂಗಾಚಾರವಾಗಿದೆ. ಬಹುದೇವೋಪಾಸನೆಯನ್ನು ವಿರೋಧಿಸುವುದರ ಮೂಲಕ, ಶೋಷಣಾ ಕೇಂದ್ರಗಳಾಗಿದ್ದ ಗುಡಿ-ಗುಂಡಾರಗಳಿಂದ ಜನಸಾಮಾನ್ಯರನ್ನು ದೂರವಿಡುವುದೇ ನಿಜವಾದ ಲಿಂಗಾಚಾರವಾಗಿದೆ. ಇಷ್ಟಲಿಂಗದ ಮೂಲಕ ಸ್ಥಾವರಲಿಂಗವನ್ನು ನಿರಾಕರಿಸಿ, ಪುರೋಹಿತರ ಪೂಜಾರಿಗಳ ಶೋಷಣೆಯಿಂದ ಜನಸಾಮಾನ್ಯರನ್ನು ರಕ್ಷಿಸುವುದೇ ಲಿಂಗಾಚಾರದ ಮುಖ್ಯ ಉದ್ಧೇಶವಾಗಿದೆ. ಬಹುರೂಪಗಳಲ್ಲಿ, ಬಹುವೇಷಗಳಲ್ಲಿ, ಬಹುದೇವಾಲಯಗಳಲ್ಲಿ ದೇವರಿದ್ದಾನೆಂಬುದನ್ನು ನಿರಾಕರಿಸಿ, ತನ್ನಲ್ಲಿಯೇ ದೇವರಿದ್ದಾನೆಂದು ಲಿಂಗಾಚಾರ ಹೇಳುತ್ತದೆ. 12ನೇ ಶತಮಾನದ ರಾಜಪ್ರಭುತ್ವದ ಕಾಲದಲ್ಲಿ ಶರಣರು ಇಷ್ಟಲಿಂಗದ ಮೂಲಕವೇ ಧಾರ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿದರು. ಬಹುದೇವೋಪಾಸನೆಯನ್ನು ನಿರಾಕರಿಸುವುದೆಂದರೆ, ಮೂಢ ಹಾಗೂ ಮುಗ್ಧ ಭಕ್ತರನ್ನು ಶೋಷಣೆಯಿಂದ ತಪ್ಪಿಸುವದೇ ಆಗಿದೆ.
“ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ:ಮುಟ್ಟಲಾಗದು
ಲಿಂಗವಿಲ್ಲದೆ ನುಡಿವವರ ಶಬ್ಧ ಸೂತಕ:ಕೇಳಲಾಗದು”
-ಬಸವಣ್ಣ(ಸ.ವ.ಸಂ.1, ವ:909)
ಈ ವಚನದಲ್ಲಿ ಬಸವಣ್ಣನವರು ಕ್ರಾಂತಿಕಾರಕವಾದ ಮಾತುಗಳನ್ನು ಹೇಳಿದ್ದಾರೆ. ಇಲ್ಲಿ ಲೌಕಿಕವೆಂದರೆ ಸಾಮಾಜಿಕವೆಂಬ ಅರ್ಥವಲ್ಲ; ಲೌಕಿಕವೆಂದರೆ ಲೋಕದ ವಿಷಯಗಳಲ್ಲಿ ಮುಳಿಗಿರುವುದು. ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳನ್ನು ಹೊಂದಿರುವುದು. ಲಿಂಗವಿಲ್ಲದವರು ಇಂತಹ ಷಡ್‍ವೈರಿಗಳಿಂದ ಹಾಳಾಗುತ್ತಾರೆ. ಅಂತವರನ್ನು ಮುಟ್ಟಬಾರದು ಎಂದರೆ ಅವರ ಸಮೀಪ ಹೋಗಬಾರದು. ಅದೇರೀತಿ ಲಿಂಗವಿಲ್ಲದೆ ನುಡಿವವರು ಶಬ್ಧಸೂತಕಿಗಳಾಗಿರುತ್ತಾರೆ. ಅವರ ಮಾತನ್ನು ಕೇಳಲಾಗದೆಂದು ಬಸವಣ್ಣನವರು ಇಲ್ಲಿ ಹೇಳಿದ್ದಾರೆ.
ಬಸವಣ್ಣನವರು ತಮ್ಮ ಇನ್ನೊಂದು ವಚನದಲ್ಲಿ (ವ:1356)ಲಿಂಗಾರ್ಪಿತದ ಬಗೆಗೆ ಮಾತನಾಡಿದ್ದಾರೆ. ಲಿಂಗಾರ್ಪಿತವಿಲ್ಲದ ಬೋನ ಅದು ನರಮಾಂಸಕ್ಕೆ ಸಮಾನ, ಲಿಂಗಾರ್ಪಿತವಿಲ್ಲದ ಉದಕ ಅದು ನಾಯಿಯ ಮೂತ್ರಕ್ಕೆ ಸಮಾನವೆಂದು ಹೇಳಿದ್ದಾರೆ. ಇಲ್ಲಿ ಭಕ್ತನೇ, ಆತ್ಮ, ದೈವವೇ(ಸಮಾಜವೇ)
ಪರಮಾತ್ಮ ಆತ್ಮ-ಪರಮಾತ್ಮನಾಗುವದೆಂದರೆ ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವುದೆಂದೇ ಅರ್ಥ. ಹೀಗೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ಲಿಂಗಾರ್ಪಿತ. ಇಂತಹ ಲಿಂಗಾರ್ಪಿತವಿಲ್ಲದ ಯಾವುದನ್ನೂ ಶರಣರು ಸ್ವೀಕರಿಸಲಿಲ್ಲ. ‘ಗೀತ ಬಲ್ಲಾತ ಜಾಣನಲ್ಲ, ಮಾತು ಬಲ್ಲಾತ ಜಾಣನಲ್ಲ’ವೆಂದು ಹೇಳಿದ ಬಸವಣ್ಣನವರು ಲಿಂಗವನೆರೆನಂಬಿದಾತ ಮತ್ತು ಜಂಗಮಕ್ಕೆ ಸವೆವಾದ ಜಾಣನೆಂದು ತಿಳಿಸಿದ್ದಾರೆ. ಅದೇ ರೀತಿ ತಮ್ಮ ಇನ್ನೊಂದು ವಚನದಲ್ಲಿ ಆಚಾರಲಿಂಗವೇ ಅನುಭಾವಲಿಂಗವೆಂದು ಹೇಳಿದ್ದಾರೆ.
“ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸುಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?”
- ಬಸವಣ್ಣ (ಸ.ವ.ಸಂ.1,ವ:183)
ಈ ವಚನದ ಮೂಲಕ ಬಸವಣ್ಣನವರು ಕ್ರಾಂತಿಕಾರಕವಾದ ವಿಚಾರಗಳನ್ನು ತಿಳಿಸಿದ್ದಾರೆ. ರತಿಸುಖವನ್ನು ಪಡೆಯಲು, ಊಟಮಾಡಲು ತಾನೇಬೇಕು. ತಾನಲ್ಲದೆ ಇತರರ ಕೈಯಿಂದ ಈ ಕ್ರಿಯೆಗಳನ್ನು ಮಾಡಿಸಲಿಕ್ಕೆ ಸಾಧ್ಯವಿಲ್ಲ. ಅದೇರೀತಿ ತನ್ನ ಇಷ್ಟಲಿಂಗ ಪೂಜೆಯನ್ನು ತಾನೇ ಮಾಡಿಕೊಳ್ಳಬೇಕೆ ಹೊರತು ಬೇರೆಯವರಿಂದ ಮಾಡಿಸುವದಲ್ಲ. ಕೆಲವು ಶ್ರೀಮಂತರು ಪೂಜೆ ಮಾಡಿಸಲೆಂದೇ ತಮ್ಮ ಮನೆಗಳಿಗೆ ಪೂಜಾರಿಗಳನ್ನು-ಪುರೋಹಿತರನ್ನು ಕರೆಸುತ್ತಾರೆ. ಬೇರೆಯವರು ಪೂಜೆ ಮಾಡಿದರೆ ತನಗೆ ಫಲ ಸಿಗುವುದಿಲ್ಲ. ಬೇರೆಯವರು ಊಟ ಮಾಡಿದರೆ ತನ್ನ ಹೊಟ್ಟೆ ತುಂಬುವುದಿಲ್ಲವೆಂಬ ಸತ್ಯವನ್ನು ಬಸವಣ್ಣನವರು ಈ ವಚನದಲ್ಲಿ ತಿಳಿಸಿದ್ದಾರೆ.
ಅಲ್ಲಮಪ್ರಭು ಲಿಂಗಾಚಾರದ ಬಗ್ಗೆ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ. ಲಿಂಗಾಚಾರವೆಂದರೆ ಇಷ್ಟಲಿಂಗದ ವಿವಿಧ ಹಂತಗಳಾಗಿವೆಯೆಂದವರು ಹೇಳಿದ್ದಾರೆ. ಇಷ್ಟಲಿಂಗವೇ ಅಂಗಲಿಂಗ, ಪ್ರಾಣಲಿಂಗವೇ ಮನಲಿಂಗವೆಂದು ತಿಳಿಸಿರುವ ಅವರು ಅನುಭಾವಲಿಂಗದಿಂದ ವಿಚಾರ, ಭಾವಲಿಂಗದಿಂದ ನಿರ್ಭಾವ ಕಾಣಿಸಿಕೊಳ್ಳುತ್ತದೆಂದು ಹೇಳಿದ್ದಾರೆ. ಸರ್ವಾಂಗವೆಲ್ಲ ಲಿಂಗವಾಗುವುದೇ ಲಿಂಗಾಚಾರವೆಂಬುದು ಅವರು ತಿಳಿಸಿದ್ದಾರೆ.
“ಆಚಾರಲಿಂಗವಿಡಿದು ಗುರುಲಿಂಗವ ಕಾಣಬೇಕು
ಗುರುಲಿಂಗವಿಡಿದು ಶಿವಲಿಂಗವ ಕಾಣಬೇಕು
ಶಿವಲಿಂಗವಿಡಿದು ಜಂಗಮಲಿಂಗವ ಕಾಣಬೇಕು
ಜಂಗಮಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು
ಪ್ರಸಾದಲಿಂಗವಿಡಿದು ಮಹಾಲಿಂಗವ ಕಾಣಬೇಕು........?
-ಅಲ್ಲಮಪ್ರಭು(ಸ.ವ.ಸಂ.2,ವ:868)
ಇಲ್ಲಿ ಇಷ್ಟಲಿಂಗದ ವಿವಿಧ ರೂಪಗಳನ್ನು ಪ್ರಭು ಪರಿಚಯಿಸಿದ್ದಾರೆ. ಆಚಾರಲಿಂಗದಿಂದ ಪ್ರಾರಂಭವಾದ ಈ ಹುಡುಕಾಟ ಮಹಾಲಿಂಗದವರೆಗೂ ಬೆಳೆದು ನಿಲ್ಲುತ್ತದೆ. ಇಲ್ಲಿ ಬಂದಿರುವ ಲಿಂಗಗಳ ಬೇರೆ ಬೇರೆ ಹೆಸರುಗಳು ಬೇರೆ ಬೇರೆ ಪರಿಣಾಮವನ್ನುಂಟು ಮಾಡುತ್ತವೆ. ಇಂತಹ ಪರಿಣಾಮ ಪ್ರಕ್ರಿಯೆಯಿಂದ ಆತ್ಮ-ಪರಮಾತ್ಮನಾಗುತ್ತಾನೆ, ವ್ಯಕ್ತಿ-ಸಮಾಜವಾಗಿ ಬೆಳೆಯುತ್ತಾನೆ. ಇದನ್ನೇ ಶರಣರು ಲಿಂಗಾಚಾರವೆಂದು ತಿಳಿಸಿದ್ದಾರೆ.
ಚೆನ್ನಬಸವಣ್ಣನವರು ಲಿಂಗಾಚಾರ ಕುರಿತಂತೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ ಪ್ರಸಾದಲಿಂಗ, ಮಹಾಲಿಂಗ ಈ ಆರು ಲಿಂಗಸ್ಥಲಗಳಿಗೂ ಮತ್ತು ಭಕ್ತ, ಮಹೇಶ್ವರ, ಪ್ರಸಾದಿ,ಪ್ರಾಣಲಿಂಗಿ, ಶರಣ, ಐಕ್ಯವೆಂಬ ಆರು ಅಂಗಸ್ಥಲಗಳಿಗೂ ಇರುವ ಸಂಬಂಧವನ್ನವರು ವಿವರಿಸಿದ್ದಾರೆ(ವ:986) ಘ್ರಾಣದಲ್ಲಿ ಆಚಾರಲಿಂಗ ಸಂಬಂಧ, ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ, ನೇತ್ರದಲ್ಲಿ ಶಿವಲಿಂಗ ಸಂಬಂಧವನ್ನು ಗುರುತಿಸಿರುವ ಚೆನ್ನಬಸವಣ್ಣನವರು, ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧವನ್ನು ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧವನ್ನು, ಭಾವದಲ್ಲಿ ಮಹಾಲಿಂಗ ಸಂಬಂಧವನ್ನು ಕಂಡುಕೊಂಡಿದ್ದಾರೆ.
“ಆಚಾರಲಿಂಗವಿಡಿದು ಅನುಭಾವಲಿಂಗಸಿದ್ದಿ
ಅನುಭಾವಲಿಂಗವಿಡಿದು, ಮಾರ್ಗಕ್ರಿಯಾಲಿಂಗಸಿದ್ದಿ
ಮಾರ್ಗಕ್ರಿಯಾಲಿಂಗವಿಡಿದು, ಮೀರಿದ ಕ್ರಿಯಾಲಿಂಗ ಸಿದ್ದಿ
ಮೀರಿದ ಕ್ರಿಯಾಲಿಂಗವಿಡಿದು, ಕ್ರಿಯಾನಿಷ್ಪತ್ತಿಲಿಂಗ ಸಿದ್ದಿ,
‘ಲಿಂಗಜಾತ: ಲಿಂಗಬೀಜಂ’ –ಎಂದುದಾಗಿ
-ಕೂಡಲ ಚೆನ್ನಸಂಗಯ್ಯಾ ಲಿಂಗವಿಡಿದು ಲಿಂಗಸಿದ್ದಿ”
-ಚೆನ್ನಬಸವಣ್ಣ (ಸ.ವ.ಸಂ.3,ವ:990)
ಈ ವಚನದಲ್ಲಿ ಚೆನ್ನಬಸವಣ್ಣನವರು ಲಿಂಗಾಚಾರದ ವಿವಿಧ ಕೊಂಡಿಗಳನ್ನಿಲ್ಲಿ ಕೂಡಿಸಿಕೊಟ್ಟಿದ್ದಾರೆ. ‘ಲಿಂಗಜಾತ: ಲಿಂಗ ಬೀಜಂ’ ಎಂಬನುಡಿ ’ಲಿಂಗವಿಡಿದು ಲಿಂಗಸಿದ್ಧಿ’ ಎನ್ನುವಲ್ಲಿಗೆ ಕೊನೆಗೊಳ್ಳುತ್ತದೆ. ಲಿಂಗಾಚಾರವಿಲ್ಲದೆ ಲಿಂಗಾನುಭಾವ ಸಾಧ್ಯವಿಲ್ಲವೆಂಬುದನ್ನು ಮೊದಲೇ ಸ್ಪಷ್ಟಪಡಿಸಿರುವ ಅವರು ಲಿಂಗ ಸಂಬಂಧಿ ವಿಚಾರಗಳನ್ನಿಲ್ಲಿ ಆಧ್ಯಾತ್ಮದ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಯಿಂದ ಪ್ರೀತಿ ಹುಟ್ಟುತ್ತದೆಯೇ ಹೊರತು, ದ್ವೇಷದಿಂದ ಪ್ರೀತಿ ಹುಟ್ಟುವುದಿಲ್ಲ. ಅದೇ ರೀತಿ ಲಿಂಗವಿಡಿದು ಲಿಂಗಸಿದ್ದಿ ಹೊಂದುವುದೇ ಲಿಂಗಾಚಾರವೆಂದು ವಿವರಿಸಿದ್ದಾರೆ.
ಅವರು ತಮ್ಮ ಇನ್ನೊಂದು ವಚನದಲ್ಲಿ(ವ:1610) ಮಹತ್ವದ ವಿಚಾರ ತಿಳಿಸಿದ್ದಾರೆ. ಲಿಂಗಾಂಗಿಗಳಲ್ಲಿ ಹೊಲೆಸೂತಕವಿಲ್ಲ, ಜಂಗಮದಲ್ಲಿ ಕುಲಸೂತಕವಿಲ್ಲ, ಪ್ರಸಾದದಲ್ಲಿ ಎಂಜಲು ಸೂತಕವಿಲ್ಲವೆಂದು ತಿಳಿಸಿರುವ ಅವರು ಲಿಂಗಾಚಾರದ ಸಾಮಾಜಿಕ ಮುಖವನ್ನು ಪರಿಚಯಿಸಿದ್ದಾರೆ. ಲಿಂಗಾಚಾರವು ಎಲ್ಲ ಜಾತಿ-ಲಿಂಗ-ವರ್ಗ-ವರ್ಣ ಭೇದಗಳನ್ನು ದೂರ ಸರಿಸಿ ಎಲ್ಲ ಸೂತಕಗಳನ್ನು ತೊರೆದು ಸಮಾನತೆಯ ದಾರಿ ತೋರಿಸುತ್ತದೆಂದು ಹೇಳಿದ್ದಾರೆ. ಶಿವಯೋಗಿ ಸಿದ್ದರಾಮ ಪಂಚಾಚಾರಗಳನ್ನು ಕುರಿತು ಗಂಭೀರವಾಗಿ ಚಿಂತಿಸಿದ್ದಾರೆ. ‘ಲಿಂಗವೇ ಗುರು, ಲಿಂಗವೇ ಜಂಗಮ, ಲಿಂಗವೇ ನಾನು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲಿಂಗಾಚಾರ ತತ್ವವು ‘ಅಹಂ ಬ್ರಹ್ಮಾಸ್ವಿ’ ತತ್ವಕ್ಕೆ ಸಮಾನವಾಗಿದೆಯೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
“ಕಟೆದಕಲ್ಲು ಲಿಂಗವೆಂದೆನಿಸಿತು, ಕಟೆಯದ ಕಲ್ಲು ಕಲ್ಲೆನಿಸಿತ್ತು
ಪೂಜಿಸಿದ ಮಾನವ ಭಕ್ತನೆನಿಸಿದನು, ಪೂಜಿಸದ ಮಾನವ ಮಾನವನೆನಿಸಿದನು.
ಕಲ್ಲಾದಡೇನು? ಪೂಜೆಗೆ ಫಲವಾಯಿತ್ತು,
ಮಾನವನಾದಡೇನು? ಭಕ್ತಿಗೆ ಕಾರಣ ಕನಾದನು
ಕಲ್ಲು ಲಿಂಗವಲ್ಲ, ಲಿಂಗ ಕಲ್ಲಲ್ಲ ನೋಡಾ ಕಪಿಲಸಿದ್ದ ಮಲ್ಲಿಕಾರ್ಜುನ..”
-ಸಿದ್ಧರಾಮ(ಸ.ವ.ಸಂ.4.ವ.1158)
ಈ ವಚನದಲ್ಲಿ ಶಿವಯೋಗಿಗಳು ಸ್ಥಾವರಲಿಂಗದ ಪ್ರಸ್ತಾಪದ ಮೂಲಕ ಮಾತು ಪ್ರಾರಂಭಿಸಿ, ಇಷ್ಟಲಿಂಗದ ಮಹತ್ವವನ್ನು ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಕಟೆದಕಲ್ಲು ಲಿಂಗವೆಂದರೆ ಸಂಸ್ಕಾರಗೊಂಡ ಕಲ್ಲು ಎಂದರ್ಥ. ಕಟೆಯದ ಕಲ್ಲು ಕಲ್ಲಾಗಿಯೇ ಇರುತ್ತದೆ. ಕಟೆದಕಲ್ಲು ಲಿಂಗವಾಗುತ್ತದೆಂದು ಹೇಳುವುದರ ಮೂಲಕ ಭಕ್ತಿ, ಸಂಸ್ಕಾರ, ಪೂಜೆ ಮುಖ್ಯವೆಂದು ಹೇಳಲಾಗಿದೆ. ‘ಲಿಂಗ ಮಧ್ಯೇ ಜಗತ್ಸರ್ವಂ’ ಎಂದು ಇನ್ನೊಂದು ವಚನದಲ್ಲಿ ಹೇಳಿರುವ ಅವರು ಲಿಂಗಾಚಾರದ ಮಹತ್ವವನ್ನು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಭಾವ ಬಲಿದಾಗ ಲಿಂಗವೆನಿಸುತ್ತದೆ. ಭಾವ ವಿಭಾವವಾದಾಗ ಪಾಷಾಣವಾಗುತ್ತದೆಂದು ಮತ್ತೊಂದು ವಚನದಲ್ಲಿ ಹೇಳಿದ್ದಾರೆ. ಲಿಂಗ-ಜಂಗಮ ಒಂದಾದ ಬಳಿಕ ಲಿಂಗಾರ್ಚನೆಯ ಉದ್ಧೇಶ ಹೊಸ ತಿರುವು ಪಡೆಯುತ್ತದೆ. ಲಿಂಗಾಚಾರಕ್ಕೆ ಸಂಬಂಧಪಟ್ಟಂತೆ ಸಿದ್ಧರಾಮ ತಮ್ಮ ಅನೇಕ ವಚನಗಳಲ್ಲಿ ಮಹತ್ವದ ವಿಚಾರಗಳನ್ನು ಹೇಳಿದ್ದಾರೆ.
ಅಂಗಾಚಾರವುಳ್ಳ, ಶಕ್ತಿ-ಭಕ್ತ-ಜಂಗಮದ ಗೃಹದಲ್ಲಿ ಲಿಂಗಾಚಾರವುಳ್ಳ, ಶಿವಶಕ್ತಿ- ಶಿವಭಕ್ತ-ಶಿವಜಂಗಮವು, ಅವರ ಗೃಹದಲ್ಲಿ ಲಿಂಗಾರ್ಚನೆ ಮಾಡಲಾಗದೆಂದು ಅಂಬಿಗರ ಚೌಡಯ್ಯ ತಿಳಿಸಿದ್ದಾರೆ. ಕಾಯವನ್ನು ಲಿಂಗಕ್ಕರ್ಪಿಸಿದರೆ ಕರ್ಮವಿಲ್ಲ, ಜೀವವನ್ನು ಲಿಂಗಕ್ಕರ್ಪಿಸಿದರೆ ಜನಿತವಿಲ್ಲ, ಭಾವವನ್ನು ಲಿಂಗಕ್ಕರ್ಪಿಸಿದರೆ ಭ್ರಮೆಯಿಲ್ಲವೆಂದು ಅಮುಗಿದೇವಯ್ಯ ಲಿಂಗಾಚಾರದ ಕ್ರಿಯೆಯ ಬಗೆಗೆ ಹೇಳಿದ್ದಾರೆ. ಅಂಗವ ಮರೆತು ಲಿಂಗವನರಿಯಬೇಕೆಂಬ ಮಾತನ್ನು ಅರಿವಿನ ಮಾರಿತಂದೆಗಳು ಒಪ್ಪುವುದಿಲ್ಲ. ಅಂಗವಿದ್ದಂತೆ ಲಿಂಗವನರಿಯಬೇಕೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಿಂಗವೇ ಪ್ರಾಣವಾಗುವ ಮತ್ತು ಪ್ರಾಣವೇ ಲಿಂಗವಾಗುವ ಪ್ರಕ್ರಿಯೆಯನ್ನು ಕುರಿತು ಅವಸರದ ರೇವಣ್ಣನವರು ಬಹುಸುಂದರವಾಗಿ ತಿಳಿಸಿದ್ದಾರೆ. ತತ್ತಿಯೊಳಗಿದ್ದ ಶುಕ್ಲಶೋಣ, ತತ್ತಿಯ ಭಿತ್ತಿಯ ಮರೆಯಲ್ಲಿ ಪಕ್ಷಿಯ ಸ್ಪರ್ಷನದಿಂದ ಬಲಿತು ಭಿತ್ತಿ ಒಡೆದು, ಪಕ್ಷಿ ತದ್ರೂಪಾಗಿ ರೆಕ್ಕೆ ಬಲಿವಂತೆ, ಪ್ರಾಣವೇ ಲಿಂಗವಾಗುವ ಲಿಂಗಾಚಾರದ ಬಗೆಗೆ ಮಹತ್ವದ ಮಾತುಗಳನ್ನಾಡಿದ್ದಾರೆ. ಉರಿಲಿಂಗಪೆದ್ದಿ ಲಿಂಗಾಚಾರದ ಬಗೆಗೆ ಪ್ರಮುಖ ವಿಚಾರವನ್ನು ಹೇಳಿದ್ದಾರೆ. ಲಿಂಗವನ್ನು ನಂಬಿ, ಅದನ್ನು ಪೂಜಿಸಿ ಅಸಂಖ್ಯಾತ ಪುರಾತನರು ಲಿಂಗವಾಗಿದ್ದಾರೆ. ಲಿಂಗವನ್ನು ನಂಬದೆ ಅಂಗದಿಚ್ಛೆಯಲ್ಲಿ ನಡೆದು ಭಂಗಿತರಾದರು, ದೇವದಾನವ ಮಾನವರೆಂದು ತಿಳಿಸಿದ್ದಾರೆ. ಲಿಂಗಾಚಾರಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟಿರುವ ಘಟ್ಟಿವಾಳಯ್ಯನವರು, ಭೂಮಿಯಲ್ಲಿ ಸ್ಥಾವರವಾಗಿ ಶೈವಲಿಂಗ ಪೂಜೆಗೊಂಡರೆ ಇದೇ ಭೂಮಿಯಲ್ಲಿ ಚರವಾಗಿ ಪೂಜಿಸಿಕೊಂಬುದು ಇಷ್ಟಲಿಂಗ. ಆದುದರಿಂದ ಇಷ್ಟಲಿಂಗಧಾರಣೆ ಚಲನಶೀಲವಾದುದೆಂದು ತಿಳಿಸಿದ್ದಾರೆ.
ಗುರುಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕೆಂದು ತಿಳಿಸಿರುವ ಜೇಡರ ದಾಸಿಮಯ್ಯನವರು ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತಿದಂತೆ ವ್ಯರ್ಥವೆಂದು ಹೇಳಿದ್ದಾರೆ. ಅಂಗಕ್ಕೆ ಲಿಂಗವೇ ಆಚಾರ, ಲಿಂಗಕ್ಕೆ ಸರ್ವಕ್ರಿಯಾ ಸಂಬಂಧವೇ ಆಚಾರವೆಂದು ಹೇಳಿರುವ ತುರುಗಾಹಿ ರಾಮಣ್ಣನವರು ಲಿಂಗಾಚಾರದ ವೈವಿಧ್ಯತೆ ಕುರಿತು ತಿಳಿಸಿದ್ದಾರೆ. ಕಣ್ಣಿಗೆ ಕಾಣುವ ಎಣ್ಣೆಯಜ್ಯೋತಿಯ ನಂದಿಸಬಹುದಲ್ಲದೆ ಪರಂಜ್ಯೋತಿಯ ನಂದಿಸಲು ಸಾಧ್ಯವಿಲ್ಲವೆಂದು ಹೇಳಿರುವ ದಾಸೋಹದ ಸಂಗಣ್ಣನವರು ಧ್ಯಾನವಿಲ್ಲದೆ ಲಿಂಗವ ನಿಧಾನಿಸಬಹುದೆ? ಎಂದು ಪ್ರಶ್ನಿಸಿದ್ದಾರೆ. ಅಂಗವೇ ಲಿಂಗವಾಗುವ ಆತ್ಮಲಿಂಗ ಸಂಗವು, ಸುಸಂಗಿಯ ಸಂಗದಂತೆ ಅನ್ಯೋನ್ಯವಾದುದೆಂದು ಹೇಳಿದ್ದಾರೆ.
ಬಹುರೂಪಿ ಚೌಡಯ್ಯನವರು ಲಿಂಗಾಚಾರದ ಬಗೆಗೆ ಮಹತ್ವದ ಮಾತನ್ನಾಡಿದ್ದಾರೆ. ಕಲ್ಲಿನೊಳಗೆ ಕಿಚ್ಚಿದೆ ಆದರೆ ಆ ಕಿಚ್ಚಿಗೆ ಬೂದಿಯಿಲ್ಲ, ಅದೇರೀತಿ ಗಾಳಿಯೊಳಗೆ ಗಂಧವಿದೆ, ಆದರದು ಕಣ್ಣಿಗೆ ಕಾಣುವುದಿಲ್ಲ. ಅದೇರೀತಿ ಅಂಗಲಿಂಗದ ಸಂಬಂಧವೆಂದರೆ ಸೊಡರ ಬೆಳಗಿನಲಡಗಿದ ಎಣ್ಣೆಯಂತೆಂದು ಹೇಳಿದ್ದಾರೆ. ಲಿಂಗಾಚಾರದ ಮಹತ್ವವನರಿಯದವರಿಗೆ ಲಿಂಗಕಟ್ಟಿದರೆ, ಲಿಂಗದ್ರೋಹಿಯಾಗುತ್ತಾರೆಂದು ಹೇಳಿರುವ ಮಡಿವಾಳ ಮಾಚಯ್ಯನವರು ಇಂತವರನ್ನು ಹಂದಿಯ ಕೊಂದು ಕಡಿದುತಿಂಬ ಕುನ್ನಿಗಳಿಗೆ ಹೋಲಿಸಿದ್ದಾರೆ. ಲಿಂಗವಂತನಾಗಿ ಲಿಂಗಾಚಾರಿಯೆನಿಸಿಕೊಂಡ ಮೇಲೆ ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಪರಧನ-ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದವರನ್ನು ಶಿವಶರಣರು ಮೆಚ್ಚುವುದಿಲ್ಲವೆಂದು ಮರುಳ ಶಂಕರ ದೇವರು ಹೇಳಿದ್ದಾರೆ. ಲಿಂಗವಂತನ ನಿಲುವು ಸಂಗಸೂತಕಿ ಆಗಬಾರದೆಂದವರು ಎಚ್ಚರಿಸಿದ್ದಾರೆ.
ಲಿಂಗ-ಪ್ರಾಣವಾಗಿ, ಪ್ರಾಣವೇ ಲಿಂಗವಾದ ಸಾಧಕನು ಕರಿಯೊಳಗಣ ಬರವಿನಂತೆ, ವರದೊಳಗಣ ಕರುಣದಂತೆ, ಸರಧಿಯೊಳಗಣ ಸಾರದಂತಿರುತ್ತಾನೆಂದು ಮೋಳಿಗೆ ಮಾರಯ್ಯನವರು ತಿಳಿಸಿದ್ದಾರೆ. ಲಿಂಗದ ಮಹತ್ವವನ್ನು ಬಿಡಿಸಿ ಹೇಳಿದ ಇವರು ಲಿಂಗವು ಪೃಥ್ವಿಯಲ್ಲಿ ಶಿಲೆಯಾಗಿತ್ತು, ಶಿಲ್ಪಿಯ ಕೈಯಲ್ಲಿ ರೂಪಾಯಿತ್ತು, ಗುರುವಿನ ಕೈಯಲ್ಲಿ ಮೋಕ್ಷವಾಯಿತ್ತೆಂದು ಸ್ಥಾವರಲಿಂಗದ ಬಗ್ಗೆ ಹೇಳಿದ್ದಾರೆ.
‘ಲಿಂಗ ಬಿದ್ದರೆ ಸಮಾಧಿಯ ಕೊಂಡೆನೆಂಬ ಮೂಢರು ಗುರುಸತ್ತರೇಕೆ ಸಮಾಧಿಯ ಕೊಳ್ಳರಣ್ಣ’? ಎಂದು ಪ್ರಶ್ನಿಸಿದ್ದಾರೆ. ಲಿಂಗಕ್ಕೆ ಮಜ್ಜನವ ಮಾಡಿಸುವಾಗ ಮಂಡೆಯ ಕುರುಹು ಕಾಣುವುದಿಲ್ಲ. ಈ ಕುರುಹು ಇಲ್ಲದ ಅರಿವೇ ಲಿಂಗಾಚಾರವೆಂದು ಮಾರಯ್ಯ ವಿವರಿಸಿದ್ದಾರೆ.
ಅನೇಕ ವಚನಕಾರ್ತಿಯರೂ ಕೂಡ ಲಿಂಗಾಚಾರದ ಬಗ್ಗೆ ಮಾತನಾಡಿದ್ದಾರೆ. ಅಂಗದಲ್ಲಿ ಆಚಾರವ ತೋರಿದ, ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ, ಆ ಅರಿವೇ ಜಂಗಮವೆಂದು ತೋರಿದ ಗುರು ಸಂಗನ ಬಸವಣ್ಣನೆಂದು ಅಕ್ಕಮಹಾದೇವಿ ಲಿಂಗಾಚಾರದ ಮಹತ್ವವನ್ನು ಹೇಳಿದ್ದಾರೆ. ಹರಿಬ್ರಹ್ಮರು ಮತ್ತು ವೇದ ಪುರಾಣ ಆಗಮಗಳು ಹುಡುಕಿದರೂ ಈ ಲಿಂಗ ಕಾಣಲಿಲ್ಲ, ಆದರೆ ಶರಣರ ಭಕ್ತಿಗೆ ಈ ಲಿಂಗ ಒಲಿಯಿತು. ಆದುದರಿಂದ ತನ್ನನ್ನು ತಾನು ಅರಿಯುವುದೇ ಲಿಂಗಾಚಾರವೆಂದು ಅಕ್ಕ ತಿಳಿಸಿದ್ದಾರೆ.
ಹೊನ್ನು, ಹೆಣ್ಣು, ಮಣ್ಣು ಮಾಯೆಯೆಂದು ಈ ಲೋಕದ ಜನ ತಿಳಿದುಕೊಂಡಿದ್ದಾರೆ. ಆದುದರಿಂದ ಅವರು ಇವುಗಳನ್ನು ಬಿಟ್ಟರೆ ಲಿಂಗ ಒಲಿಯುತ್ತದೆಂದು ನಂಬಿಕೊಂಡಿದ್ದಾರೆ. ಆದರೆ ಗಜೇಶಸಣ್ಣಯ್ಯಗಳ ಪುಣ್ಯಸ್ತ್ರೀ ಇದನ್ನೊಪ್ಪುವುದಿಲ್ಲ. ಅಂಗ-ಲಿಂಗಕ್ಕಾಗಲಿ, ಇಂದ್ರಿಯ-ಲಿಂಗಕ್ಕಾಗಲಿ ಜಗತ್ತು-ಲಿಂಗಕ್ಕಾಗಲಿ ಯಾವುದೇ ವೈರತ್ವವಿಲ್ಲ. ಆದುದರಿಂದ ಇದಾವುದನ್ನೂ ಬಿಡಬೇಕಾಗಿಲ್ಲವೆಂದು ತಿಳಿಸಿದ್ದಾರೆ. ಲಿಂಗ ಯಾವುದರ ವಿರುದ್ದವೂ ಇಲ್ಲ, ಅದು ಎಲ್ಲವನ್ನು ಎಲ್ಲರನ್ನೂ ಒಳಗೊಂಡಿದೆಯೆಂದು ಸ್ಪಷ್ಟಪಡಿಸಿದ್ದಾರೆ.
ಲಿಂಗವೇ ಸರ್ವಸ್ವವೆಂದು ತಿಳಿದುಕೊಂಡಿದ್ದ ಅಕ್ಕನಾಗಮ್ಮನವರು ಲಿಂಗಜಂಗಮದ ಚೈತನ್ಯವನ್ನು ಭಕ್ತಿ ಅಥವಾ ನಿಧಿಯೆಂದು, ಮುಕ್ತಿಯ ಮೂರುತಿಯೆಂದು ತಿಳಿದುಕೊಂಡಿದ್ದಾರೆ.ಲಿಂಗವೆಂಬುದು ಅಂತರಂಗದ ಜ್ಯೋತಿಯೆಂದು ಹೇಳಿದ್ದಾರೆ. ಅಂಗ-ಲಿಂಗ ಸಮರಸವಾದ ಕಾರಣ ದಿನಮಣ -ದಿನಪ್ರಕಾಶ ಸಾಧ್ಯವಾಯಿತ್ತೆಂದು ನೀಲಮ್ಮ ತಿಳಿಸಿದ್ದಾರೆ. ಲಿಂಗಸಂಗದಲ್ಲಿ ಹುಟ್ಟಿ, ಜಂಗಮಸಂಗದಲ್ಲಿ ಬೆಳೆದು, ಭೇದವಡಗಿ ಬೆಳಗು ನಿರ್ಬಯಲಾಗಲು ಆನು ಸುಖಿಯಾದೆನಯ್ಯಾ ಸಂಗಯ್ಯ ಎಂದು ನೀಲಮ್ಮ ತಮ್ಮ ಇನ್ನೊಂದು ವಚನದಲ್ಲಿ(ಏ:1067) ತಿಳಿಸಿದ್ದಾರೆ.
ಗುರುವಚನದಿಂದಲ್ಲದೆ ಲಿಂಗವನರಿಯಬಾರದೆಂದು ಹೇಳಿರುವ ಮುಕ್ತಾಯಕ್ಕ, ತನ್ನ ತಾನರಿದವನಿಗೆ ಅರಿವೇ ಗುರು, ಆಚಾರವೇ ಲಿಂಗವೆಂದು ತಿಳಿಸಿದ್ದಾರೆ. ‘ತನುವಿನ ಮೇಲಿಪ್ಪುದು ಇಷ್ಟಲಿಂಗವೆಂದೆಂಬರು, ಆತ್ಮನ ನೆನಹಿನಲ್ಲಿಪ್ಪುದು ಪ್ರಾಣಲಿಂಗವೆಂದೆಂಬದು ಇಂತೀ ಘಟಕ್ಕೂ ಆತ್ಮಕ್ಕೂ ಉಭಯಲಿಂಗವುಂಟೆ?’ (ವ:1169) ಎಂದು ಪ್ರಶ್ನಿಸಿರುವ ಮೋಳಿಗೆಯ ಮಹಾದೇವಿ, ಅದು ಒಂದೇ ಸ್ವರೂಪದ್ದಾಗಿದೆ, ಅಲ್ಲಿ ಎರಡೆನಿಸಬಾರದೆಂದು ತಿಳಿಸಿ ಹೇಳಿದ್ದಾರೆ.
ಅಂತರಂಗ-ಬಹಿರಂಗ ಬೇರೆ ಬೇರೆಯಲ್ಲವೆಂದು ಹೇಳಿರುವ ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನವರು, ಇವೆರಡೂ ಬೇರೆ ಬೇರೆಯೆಂದು ನುಡಿವವರನ್ನು ಸಂತೆಯ ಸೂಳೆಯರೆಂದು ವಿಡಂಬಿಸಿದ್ದಾರೆ. ‘ಅಂತರಂಗವೆಲ್ಲ ಅರುಹಾಯಿತ್ತು, ಬಹಿರಂಗದಲ್ಲಿ ಲಿಂಗವಾಯಿತ್ತೆಂದು’ ಹೇಳಿರುವ ಇವರು ಸರ್ವಾಂಗವೂ ಲಿಂಗವಾಗಿದೆಯೆಂದು ತಿಳಿಸಿಕೊಟ್ಟಿದ್ದಾರೆ. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ಬಸವಣ್ಣನವರ ಮಾತಿನಂತೆ ಇಷ್ಟಲಿಂಗವೆಂಬುದು ಚಲನಶೀಲವಾದುದು, ಜಂಗಮವಾದುದೆಂದು ಅನೇಕ ವಚನಕಾರ್ತಿಯರು ಹೇಳಿದ್ದಾರೆ.
12 ನೇ ಶತಮಾನದ ಶರಣರ ಪ್ರಕಾರ ಲಿಂಗಾಚಾರವೆಂದರೆ ಅದು ಕೇವಲ ಇಷ್ಟಲಿಂಗಕ್ಕೆ ಮಾತ್ರ ಸಂಬಂಧಿಸಿದ್ದಾಗಿರದೆ, ಪ್ರಾಣಲಿಂಗಕ್ಕೆ ಸಂಬಂಧಿಸಿದೆ. ಆ ಮೂಲಕ ಭಾವಲಿಂಗ-ಜ್ಞಾನಲಿಂಗಗಳು ಬೆಳೆದು ನಿಲ್ಲುತ್ತವೆ. ಕೇವಲ ನೀರನೆರೆದು, ವಿಭೂತಿಯನ್ನು ಹಚ್ಚಿ ಪೂಜೆ ಮಾಡುವುದರಿಂದ ಲಿಂಗಾಚಾರವೆನಿಸುವುದಿಲ್ಲ, ತಾನೇ ಲಿಂಗವಾಗುವುದರ ಮೂಲಕ, ತಾನೇ ಜಂಗಮವಾಗುವದರ ಮೂಲಕ ಚಲನಶೀಲತೆಯನ್ನು ಕಂಡುಕೊಳ್ಳುವದೇ ನಿಜವಾದ ಲಿಂಗಾಚಾರವಾಗಿದೆ.
ಮುಂದುವರೆಯುತ್ತದೆ....
ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220
ಈ ಅಂಕಣದ ಹಿಂದಿನ ಬರಹಗಳು:
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು
ವಸುಮತಿ ಉಡುಪ ಅವರ –“ಮೃಗತೃಷ್ಣಾ”
ಜಯಶ್ರೀ ಕಂಬಾರ ಅವರ – “ಮಾಧವಿ”
ವಿಜಯಶ್ರೀ ಸಬರದ ಅವರ –“ಉರಿಲಿಂಗ”
ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.