ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ

Date: 16-01-2025

Location: ಬೆಂಗಳೂರು


"ಈ ಕ್ಷಿತಿಜ ಕಥೆಯು ಮಂದಾಕಿನಿ ಎಂಬ ಕಲ್ಕತ್ತೆಯ ಹೆಣ್ಣು ಮಗಳು ಕೆಲಸ ಮಾಡುತ್ತಿದ್ದ ಮಿಶನರಿ ಸ್ಕೂಲ್ ನವರು ಸ್ಕಾಲರ್ಶಿಪ್ ಕೊಟ್ಟು ಆಕೆಯನ್ನು ಇಂಗ್ಲೆಂಡಿಗೆ ಕಳಿಸಿದ ಸಮಯದಲ್ಲಿ ಆಕೆ ಹಡಗಿನ ಪ್ರಯಾಣದ ಸಂದರ್ಭದಲ್ಲಿ ಅವಳ ಒಳಗೆ ಜರಗುವ ತುಮುಲ ತಲ್ಲಣಗಳನ್ನು ಚಿತ್ರ ಸಹಿತ ಕಥೆಗಾರ ಹೇಳುತ್ತಾ ಸಾಗುತ್ತಾರೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಶಾಂತಿನಾಥ ದೇಸಾಯಿ ಅವರ "ಕ್ಷಿತಿಜ" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.

ಕನ್ನಡದ ನವ್ಯ ಸಾಹಿತ್ಯ ಸಂದರ್ಭಕ್ಕೆ ಮೊದಲ ಕಾದಂಬರಿಕಾರರಾದವರು ಶಾಂತಿನಾಥ ದೇಸಾಯಿ. ಅವರು “ಮುಕ್ತಿ” ಎಂಬ ಕಾದಂಬರಿಯನ್ನು 1961 ರಲ್ಲಿ ಪ್ರಕಟಿಸಿದರು. ಇವರು ಉತ್ತರ ಕನ್ನಡ ಜಿಲ್ಲೆಯ ಹಾವಗಿ ಎಂಬ ಗ್ರಾಮದಲ್ಲಿ 1929 ಜುಲೈ 22ರಂದು ಜನಿಸಿದರು. ನಾಲ್ಕು ದಶಕಗಳಿಗೂ ಹೆಚ್ಚು ಮೇಲ್ಪಂಕ್ತಿಯ ಬರಹಗಾರರಾಗಿ ಮಾನ್ಯತೆ ಪಡೆದುಕೊಂಡ ಇವರು ಗಂಗಾಧರ ಚಿತ್ತಾಲರ ಪ್ರಭಾವದಿಂದಾಗಿ ಇವರಿಗೆ ಇನ್ನಷ್ಟು ಓದುವ ಆಸಕ್ತಿ ಚಿಂತನಶೀಲತೆ ಮುಂತಾದ ಅಂಶಗಳು ಮೈಗೂಡಿಕೊಂಡವು. ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪದವಿಯನ್ನು ಸ್ವೀಕರಿಸಿ ದಕ್ಷತೆಯಿಂದ ನಿರ್ವಹಿಸಿದ್ದಾರೆಂಬುದು ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.

ಇವರು ಬರೆದ ಕೆಲವೇ ಕಾದಂಬರಿಗಳಾದರೂ ಆ ಬರವಣಿಗೆಯ ಓಘವೆ ಬೇರೆ ತೆರನಾದುದು. “ಮುಕ್ತಿ, ವಿಕ್ಷೇಪ, ಸೃಷ್ಟಿ ,ಸಂಬಂಧ, ಬೀಜ, ಅಂತರಾಳ, ಹಾಗೂ ಓಂಣಮೋ”, ಇವರ ಕೊನೆಯ ಕಾಲದ ಕೊನೆಯ ಕಾದಂಬರಿ. ಈ ಕಾದಂಬರಿ ಬರೆಯುವಾಗ ಉಸಿರುಗಟ್ಟೊ ಕಾಯಿಲೆಯಿಂದ ಬಳಲುತ್ತಿದ್ದ ಇವರು ಈ ಕಾದಂಬರಿ ಬರೆದು ಮುಗಿಸಿದ ವಾರದೊಳಗೆ ಮರಣವನ್ನು ಅಪ್ಪಿದರು ಎಂಬುದನ್ನು ಸಾಹಿತ್ಯ ಲೋಕ ಸ್ಮರಿಸಿ ಕೊಳ್ಳುತ್ತದೆ. “ಮಂಜುಗಡ್ಡೆ, ಪರಿವರ್ತನೆ, ದಂಡೆ, ಈಚಿನ ಕಥೆಗಳು, ಕ್ಷಿತಿಜ, ರಾಕ್ಷಸ, ಕೂರ್ಮಾವತಾರ”, ಎಂಬ ಕಥೆಗಳನ್ನು ಬರೆದ ದೇಸಾಯಿ ಅವರು ಪಿ.ಎಚ್. ಡಿ ಪಡೆದು ಶಿಷ್ಯ ವೃತ್ತಿಯ ಮೇಲೆ ಇಂಗ್ಲೆಂಡಿಗೆ ತೆರಳುವ ಸಮಯದಲ್ಲಿ ರಚಿತವಾದ ಈ ‘ಕ್ಷಿತಿಜ’ ಕಥೆಯು “ಅವರನ್ನು ಸಣ್ಣ ಕಥೆಯಲ್ಲಿ ಜನಪ್ರಿಯರನ್ನಾಗಿ ಮಾಡಿದ ‘ಕ್ಷಿತಿಜ’ ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರದಲ್ಲಿರಿಸಿದ ಕಥೆ”. (ಸಾಲುದೀಪಗಳು-ಮಾರುತಿ ಶಾನ್ ಭಾಗ್)

ಈ ಕ್ಷಿತಿಜ ಕಥೆಯು ಮಂದಾಕಿನಿ ಎಂಬ ಕಲ್ಕತ್ತೆಯ ಹೆಣ್ಣು ಮಗಳು ಕೆಲಸ ಮಾಡುತ್ತಿದ್ದ ಮಿಶನರಿ ಸ್ಕೂಲ್ ನವರು ಸ್ಕಾಲರ್ಶಿಪ್ ಕೊಟ್ಟು ಆಕೆಯನ್ನು ಇಂಗ್ಲೆಂಡಿಗೆ ಕಳಿಸಿದ ಸಮಯದಲ್ಲಿ ಆಕೆ ಹಡಗಿನ ಪ್ರಯಾಣದ ಸಂದರ್ಭದಲ್ಲಿ ಅವಳ ಒಳಗೆ ಜರಗುವ ತುಮುಲ ತಲ್ಲಣಗಳನ್ನು ಚಿತ್ರ ಸಹಿತ ಕಥೆಗಾರ ಹೇಳುತ್ತಾ ಸಾಗುತ್ತಾರೆ. ಮಿಸ್ ಜೋಸೆಫ್, ಸರ್ದಾರ್ ಜಿ, ಡಾ. ಸರೋಜಾ, ಡಾ.:ಮುಖರ್ಜಿ, ಮತ್ತು ಹ್ಯಾರಿ ಮೆಕಾರ್ಥಿ, ಮೊಸ್ಯೂರ ಸಪ್ರೂ, ಲೆಗ್ವಿ, ಹೀಗೆ ಹಲವಾರು ಪಾತ್ರಗಳು ಈ ಕಥೆಯಲ್ಲಿ ಹಾದು ಹೋಗುತ್ತವೆ. ಪಾಶ್ಚಾತ್ಯ ಸಂಸ್ಕೃತಿಯ ಜೋಡಣೆ, ಮತ್ತು ಭಾರತೀಯ ಚಿಂತನೆ ಮಂದಾಕಿನಿಯ ಮೂಲಕ ಎದುರುಗೊಳ್ಳುವಂತದ್ದು. ಮಂದಾಕಿನಿಯನ್ನು ಇಲ್ಲಿ ಬರುವ ಹಲವು ಪಾತ್ರಗಳು ಲೈಂಗಿಕತೆಗೆ ಪ್ರಚೋದಿಸುವುದು, ಮೋಜು, ಮಸ್ತಿ, ಹಾಡು, ಕುಣಿತ, ಕುಡಿತ, ಇಂತಹ ಒತ್ತಡಗಳ ನಡುವೆ ಮಂದಾಕಿನಿ ಅನುಭವಿಸುವ ಭಾರತೀಯರ ಚಿಂತನದಾರಿಗಳು ಮಂದಾಕಿಯನ್ನು ಅಧೀರಳನ್ನಾಗಿಸಿ ಹೊಸ ಬದುಕಿಗೆ ಹೊಸ ನಡೆಯನ್ನು ಇಡುವ ಕಥೆಯೇ ಈ ಕ್ಷಿತಿಜ.

ಮಂದಾಕಿನಿಯ ಮನಸ್ಸಿನ ತೊಳಲಾಟ, ಹೊಯ್ದಾಟವನ್ನು ಈ ಕಥೆಯಲ್ಲಿ ಸೊಗಸಾದ ಆವರಣವನ್ನು ಸೃಷ್ಟಿಸುವ ಮೂಲಕ ಕಥೆಗಾರ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಬಹಳ ಮುಖ್ಯವಾಗಿ ವಿಮರ್ಶಿಸಬೇಕಾದ ವಸ್ತು ವಿಚಾರ ಪಾಶ್ಚಾತ್ಯ ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿಯ ಮುಖಾಮುಖಿ. ಸಾಮಾನ್ಯವಾಗಿ ಸಾಂಸ್ಕೃತಿಕ ಚಿತ್ರಣ ಎಂದಾಗ ನಾವು ತೊಡುವ ಬಟ್ಟೆಯಿಂದ ಹಿಡಿದು ಆಹಾರ ಪದ್ಧತಿ, ಹಬ್ಬ ಹರಿದಿನ, ಆಚಾರ ವಿಚಾರ, ಹೀಗೆ ಪ್ರತಿಯೊಂದರ ಪಟ್ಟಿ ಬೆಳೆಯುತ್ತದೆ. ತನಗೆ ತಿಳಿಯದಿರುವ ಊಟ ಉಪಚಾರ ಪದಾರ್ಥಗಳನ್ನು ಪಟ್ಟಿ ಮಾಡಿಟ್ಟು ತನ್ನ ತಮ್ಮನಿಗೆ ತಿಳಿಸಬೇಕೆಂದು ಕೊಳ್ಳುವ ಮಂದಾಕಿನಿ ಪ್ರಯಾಣ ಮಾಡುವ ಆ ಸಮಯದಲ್ಲಿ ಎದುರಾಗುವ ಪಾತ್ರಗಳು ಆಕೆಗೆ ಒಂದಿಷ್ಟು ಮುಜುಗರ ಸಂಕೋಚ ತರಿಸಿದರೆ, ಮತ್ತಷ್ಟು ಪಾತ್ರಗಳು ಖುಷಿ ನೀಡುತ್ತವೆ. ಇವೆಲ್ಲದರ ನಡುವೆ ಸರಿ ತಪ್ಪುಗಳ ಬಿಗುಮಾನ, ತರ್ಕ, ಆಕೆಯನ್ನು ಮುದುಡುವಂತೆ ಮಾಡುತ್ತವೆ. ಡಾ:ಮುಖರ್ಜಿ ಆಕೆಯನ್ನು ಡಿನ್ನರ್ ಗೆ ಕರೆದೊಯ್ದು ವಿಸ್ಕಿ ಡ್ರಿಂಕ್ಸ್ ಒಂದು ಪೆಗ್ ಹಾಕುವಂತೆ ಒತ್ತಾಯಿಸುವುದು ಆಕೆಯ ಕೈ ಹಿಡಿದು ಎಳೆದಾಗ ಅವನ ಮೇಲೆ ಕೊಂಚ ಒರಗಿದಂತಾದರು ಸಾವರಿಸಿಕೊಂಡು ತಬ್ಬಿಬ್ಬಾಗಿ ಆತನಿಂದ ಬಿಡಿಸಿಕೊಂಡು ತನ್ನ ಕ್ಯಾಬಿನ್ಗೆ ಬರುವುದು, ಈ ಸನ್ನಿವೇಶದಿಂದ ಆಕೆ ಆಕ್ರೋಶಬರಿತಳಾಗುತ್ತಾಳೆ. ಆದರೆ ಅಲ್ಲಿನ ಮನಸ್ಥಿತಿಯವರಿಗೆ ಅದೆಲ್ಲ ಸಾಮಾನ್ಯ ಸಂಗತಿ. “ನಾನೆಂದರೆ ಯಕಶ್ಚಿತ್ ಹಾದಿಯ ಮೇಲಿನ ಹೆಣ್ಣೆಂದು ತಿಳಿದಿದ್ದಾನೆ ಆತ! ನಮ್ಮ ದೇಶವಾಗಿದ್ದರೆ ಚಪ್ಪಲಿಯಿಂದ ಹೊಡೆಯುತ್ತಿದ್ದೆ, ಪೊಲೀಸರ ಕೈಯಲ್ಲಿ ಕೊಡುತ್ತಿದ್ದೆ”. ಹೀಗೆ ಮೇಕಾರ್ಥನಲ್ಲಿ ಹೇಳುತ್ತಾ ಸಾಗುವ ಸಂಘರ್ಷದ ಈ ಒಂದು ನಿಲುವು ಸನ್ನಿವೇಶ ಸಂಸ್ಕೃತಿಯ ಮುಖಾಮುಖಿಯಾಗಿಸುತ್ತದೆ. ಹಾಗೂ ಸ್ತ್ರೀವಾದಿ ಸಂವೇದಿಯಾಗಿ ವಿವೇಚಿಸಿದರೆ ಪುರುಷ ಸಂವೇದಿ ಚಿಂತನೆಗಳು ಹೆಣ್ಣೆಂದರೆ ಭೋಗಕ್ಕಿರುವ ಮಾರಾಟಕ್ಕಿಟ್ಟಿರುವ ಹಾಗೂ ವಸ್ತುವಿನಂತೆ, ಪಶುವಿನಂತೆ ಬಳಸಿಕೊಳ್ಳಬಹುದು ಎಂಬ ಅವರ ಅರಿವು ಅನಾವರಣಗೊಳ್ಳುವುದು. ಆದರೆ ಮಹಿಳೆಯ ಒಳಗುದಿಯ ತೀವ್ರತೆಗೆ ಮೌಲ್ಯತೆ ಇಲ್ಲದಿರುವಿಕೆ ಒಂದೆಡೆ ಕಂಡರೆ, ಇಡೀ ಕಥೆಯ ಒಟ್ಟರ್ಥ ಸಾಂಸ್ಕೃತಿಕ ಚಿತ್ರಣದ ಕಡೆ ವಾಲುತ್ತಾ ಒಂದು ಸರಪಳಿಯ ಬಿಗಿ ಹಿಡಿತ, ಸಂಕೋಚ ಕಂಡು ಬಂದರೆ ಇನ್ನೊಂದು ಕಡೆ ಸಂಸ್ಕೃತಿಯ ಬಿಡುಗಡೆ ಸರಸ ಸಲ್ಲಾಪಗಳು ಹೀಗೆ ಎರಡು ಸಾಂಸ್ಕೃತಿಕ ಭಾಗದ ಚಿತ್ರಣ ಅನಾವರಣ ಕೊಳ್ಳುವುದು. ಇದರೊಟ್ಟಿಗೆ ಹೆಣ್ಣು ಹೊಗಳಿಗೆ ಸೋಲುತ್ತಾಳೆ ಎಂಬ ಸಂಗತಿಯನ್ನು ‌ಸೂಕ್ಷ್ಮವಾಗಿ ಸೂಚ್ಯವಾಗಿ ಗೋಚರಿಸುತ್ತದೆ.

“ಆಹ್, ಈ ಸೀರೆಯಲ್ಲಿ ನೀವು ಎಷ್ಟು ಸುಂದರ ಕಾಣಿಸುತ್ತೀರ,,, ರಾಜಪುತ್ರಿಯಂತೆ!”. ಎಂಬ ಲಾಗ್ವಿಯ ಮಾತಿಗೆ ಪೆಡಸಾಗಿ ಸಂಕೋಚದ ಮುದ್ದೆಯಾಗಿದ್ದ ಮಂದಾಕಿನಿಯಲ್ಲೂ ಸಹಜ ಭಾವಗಳ ತಾಕಲಾಟಗಳು ಏಳುತ್ತವೆ. ಲಾಗ್ವಿ ಜೊತೆಗೆ ಆರಾಮದಾಯಕ ಕ್ಷಣಗಳಿಗೆ ಆಕೆ ಸೋತರು ಸಹ ಆತನೊಂದಿಗೆ ಮುಕ್ತವಾಗಿ ಸಂಕೋಲೆಗಳನ್ನು ಕಳಚಲು ಸಾಧ್ಯವಾಗಲಿಲ್ಲ.” ತಲೆಯ ಮೇಲೆ ಕಾಣದ ಸತ್ತ ಅಪ್ಪನ ಭಯಂಕರ ಚಾಟಿ”,,, ಹೀಗೆ ಲಾಗ್ವಿಯ ಪ್ರೀತಿ ಮೃದು ಬಾಂಧವ್ಯವನ್ನು ತೊರೆದು ತನ್ನ ಕ್ಯಾಬಿನ್ ಗೆ ಮರಳಿ ಬಂದಿದ್ದಳು ಅಂದು ರಾತ್ರಿ ಮಂದಾಕಿನಿ. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶ ಒಳಗಿನ ಭಾವನೆಗಳು ಸ್ಪಂದನೆ ನೀಡಿದರು ಸಂಕೋಲೆ ಸಂಕೋಚ ಆಕೆಯನ್ನು ಕಲ್ಲಿನ ಪ್ರತಿಮೆಂತೆ ಮಾಡಲ್ಪಟ್ಟಿದ್ದವು.

ಇದರ ಇನ್ನೊಂದು ಮಗ್ಗಲನ್ನು ವಿಮರ್ಶಿಸಿದಾಗ ಸಪ್ರೂ ಎಂಬ ಹದಿನೆಂಟರ ಹರೆಯದ ಹುಡುಗ ಸಹ ಈಕೆಯನ್ನು ಹಡಗಿನಲ್ಲಿ ಬಹನ್ ,, ಬಹೆನ್,, ಎಂದು ಕರೆಯುತ್ತಾ ಹಾಗೆ ಇವಳೊಂದಿಗೆ ಇಲ್ಲಸಲ್ಲದ ವಿಚಾರಗಳನ್ನು ಕೊರೆಯುತ್ತಾ ಒಮ್ಮೆ ನೀವು ಕನಸಿನಲ್ಲಿ ಬಂದಿದ್ರಿ ಎಂಬ ಮಾತನ್ನು ಆಕೆಯ ಮೇಲೆ ಅಪೇಕ್ಷೆ ಉಳ್ಳವನಂತೆ ತೋರ್ಪಡಿಸಿದವನಿಗೆ “ಚು,, ಚು,, ಚು,, ನನ್ನ ಬಗ್ಗೆ ಕನಸು ಕಾಣಬಾರದು ನೀನು, ನಿನ್ನಂತ ಸಣ್ಣವನು”. ಎಂಬ ಮಾತನ್ನು ಮಂದಾಕಿನಿ ಹೇಳುವುದು. ಈ ಎಲ್ಲ ಸನ್ನಿವೇಶವನ್ನು ಅವಲೋಕನ ಒಳಪಡಿಸಿದಾಗ ಮತ್ತದೇ ಭಾವ ಹೆಣ್ಣೆಂದರೆ ತಾಯಿ, ತಂಗಿ, ಆದರು ಪರವಾಗಿಲ್ಲ ಒಟ್ಟಾರೆ ಭೋಗಿಸು ತಕ್ಕಂತಹ ವಸ್ತು ಎಂಬುದು ನಿರ್ವಿವಾದ ಸಂಗತಿಯಾಗಿ ನಿಲ್ಲುತ್ತದೆ. ಈ ಘಟನೆಯ ಮೂಲಕ ಮಹಿಳೆಯ ಮಾನಸಿಕ ಸ್ಥಿತಿಯನ್ನು ಚಿಂತಿಸದ ಪುರುಷ ಸಮಾಜದ ಒಡಂಬಡಿಕೆ ಏನೆಂಬುದನ್ನು ನೇರಾತಿನೇರವಾಗಿ ವ್ಯಕ್ತಪಡಿಸಬಹುದು.

“ದ್ವಂದ್ವ ಯುದ್ಧ ಮಾಡಲು ನಾನು ಮುದುಕನಾಗಿರುವೆ”- ಇಲ್ಲದಿದ್ದರೆ,,,,” ಎಂದೆನ್ನುವ ಮುದುಕ ಮೆಕಾರ್ಥಿ ಸಹ ನನ್ನ ದೃಷ್ಟಿಗೆ ವಿಭಿನ್ನ ನೆಲೆಯಲ್ಲೇ ಕಾಣಿಸುತ್ತಾನೆ. ಈ “ಇಲ್ಲದಿದ್ದರೆ” ಎಂಬ ಪದದ ಹಿಂದಿನ ಧ್ವನಿ ಏನೆಂಬುದನ್ನು ನಾವು ಪರಾಮರ್ಶಿಸಬೇಕು. ಅರ್ಥಾತ್ ಆತ ಹುಡುಗನಾಗಿದ್ದರೆ ಮಂದಾಕಿಯನ್ನು ಭೋಗಿಸದೆ ಬಿಡುತ್ತಿರಲಿಲ್ಲ ಎಂಬ ಅರ್ಥವನ್ನು ಧ್ವನಿಸುವಾಗಲು ಸಹ ಸಮಾಜ ಹೆಣ್ಣನ್ನು ನೋಡುವ ತಳಸ್ತರದ ಚಿಂತನೆಗಳು ಅಮೂರ್ತ ರೂಪದಲ್ಲಿ ಬಿತ್ತರ ಕೊಳ್ಳುತ್ತವೆ. ಈ ಕಥೆಯನ್ನು ಸ್ತ್ರೀವಾದಿ ನೆಲೆಯಲ್ಲಿ ದಿಟ್ಟಿಸಿದಾಗ ಕಾಣುವ ಆಯಾಮ ಒಂದೆಡೆಯಾದರೆ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಇನ್ನೊಂದು ಮುಖವನ್ನು ಈ ಕಥೆ ತೆರೆದಿಡುತ್ತದೆ. ನಮ್ಮ ಭಾರತೀಯ ಸಂಸ್ಕೃತಿಗೂ ಪಾಶ್ಚಾತ್ಯ ಸಂಸ್ಕೃತಿಗೂ ಇರುವ ಭಿನ್ನ ನೆಲೆಯ ಅರಿವು ಅಭಿವ್ಯಕ್ತಗೊಳ್ಳುವುದು.

“ಮಂದಾಕಿನಿಯ ಮನಸಿನ ಹೋಯ್ದಾಟನ್ನು ಒಳ ಮತ್ತು ಹೊರ ವಿವರಗಳಲ್ಲಿ ಮೂರ್ತಗೊಳಿಸುವಲ್ಲಿ ಕಥೆಗಾರ ತೋರಿಸಿರುವ ಸಂಯಮ ಮತ್ತು ತಿಳಿವಳಿಕೆ ಅತ್ಯುತ್ತಮ ಮಟ್ಟದಾಗಿದೆ”. (ಜಿ.ಹೆಚ್. ನಾಯಕ್- ಕನ್ನಡದ ಸಣ್ಣ ಕಥೆಗಳು ಪ್ರಸ್ತಾವನೆಯಿಂದ) ನಾಯಕ್ ಅವರು ತಿಳಿಸಿರುವಂತೆ ಆಕೆಯ ಕೋಲಾಹಲ ಪದಗಳಿಗೆ ನಿಲುಕದ್ದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಣ್ಣಿನ ಆಂತರ್ಯದ ತಳಮಳಗಳನ್ನು ಒಳ ನೋಟಗಳನ್ನು ಪದಗಳಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭ ಸಾಧ್ಯವಾದದಲ್ಲ. ಆ ನಿಟ್ಟಿನಲ್ಲಿ ದೇಸಾಯಿ ಅವರು ಅಮೋಘತೆಯನ್ನು ಸಾಧಿಸಿದ್ದಾರೆ. ಇಲ್ಲಿ ಬಹಳ ಮುಖ್ಯವಾಗಿ ಕಥೆಗಾರರ ದೃಷ್ಟಿ ಇರುವುದು ಕೇವಲ ಸಾಂಸ್ಕೃತಿಕ ಚಿತ್ರಣವನ್ನು ಮುಖಾಮುಖಿಯಾಗಿಸುವುದರ ಹೊರತಾಗಿ ಬೇರೆ ಕಾಣುವುದಿಲ್ಲ. ಆ ಸಂದರ್ಭಕ್ಕೆ ತಕ್ಕಂತೆ ಹಡಗಿನ ಸುಂದರ ತಾಣವನ್ನು ಸಂದರ್ಭೋಚಿತವಾಗಿ ವ್ಯಾಖ್ಯಾನಿಸಿರುತ್ತಾರೆ. ಅಲ್ಲಿಯ ಸುಂದರ ಬಾಹ್ಯ ಸ್ವರೂಪ, ಗಾಳಿ ಬೆಳಕು ಕ್ಷಿತಿಜ, ಊರಿನ ಪರಿಚಯ, ನೀರಿನ ಬಣ್ಣ ವೈವಿಧ್ಯಮಯವಾಗಿ ಕಾಣುವ ಸುಂದರ ನೋಟ ಹೀಗೆ ಸ್ಥಳಗಳನ್ನು ನೋಡುವಿಕೆ, ಈ ಎಲ್ಲ ಕಾರಣದಿಂದ ಇತರೆ ವಾಹನಗಳಿಗೆ ಇರುವ ಪರಿಮಿತಿಗೂ ಹಡಗಿನಲ್ಲಿ ಮಾಡುವ ಪ್ರಯಾಣದ ಮಿತಿಗೂ, ಆಕಾರ, ಸ್ಥಳ, ವಿಚಾರ, ಭಿನ್ನತೆ, ಪ್ರತಿಯೊಂದು ಸಂಗತಿಯನ್ನು ಕಂಡುಕೊಂಡು ಹಲವು ತರದ ಆಯಾಮ ಇರುವುದರಿಂದ ಹಡಗಿನಲ್ಲಿ ಎಲ್ಲಾ ಬಗೆಯ ಸಂಸ್ಕೃತಿಯ ಆಕರಗಳನ್ನು ಒಟ್ಟಿಗೆ ಸೇರಿಸಿ ಕಲಾತ್ಮಕವಾದ ಸನ್ನಿವೇಶ ಸೃಷ್ಟಿಸುವಲ್ಲಿ ಕಥೆಗಾರ ಗೆದ್ದಿದ್ದಾರೆ.

ಇದೇ ಕಥೆಯನ್ನು ಸಮಕಾಲಿನ ಸಂದರ್ಭಕ್ಕೆ ವಿವೇಚಿಸುವುದಾದರೆ, ಎಗ್ಗು ತಗ್ಗಿಲ್ಲದೆ ಸಾಗುವ ಪಾಶ್ಚಿಮಾತ್ಯ ಅನುಕರಣೆಯ ಅಂದಾಭಿಮಾನವೇ ಶ್ರೇಷ್ಠ ಸಂಗತಿ ಎನ್ನುವ ಮನಸುಗಳಿಗೆ ಯಾವ ಸಾಂಸ್ಕೃತಿಕ ತಡೆಗೋಡೆಯು ಅಡ್ಡ ಬರುವುದಿಲ್ಲ. ಮೋಜು, ಮಸ್ತಿಯೇ ಸರ್ವಶ್ರೇಷ್ಠ ಎನ್ನುವಂತವರಿಗೆ “ಬದುಕಿರುವುದೇ ನಲಿದು,, ಕುಣಿದು,, ಸುಖಿಸಿ ಹೋಗುವುದಕ್ಕೆ”. ಎಂಬ ಮುದುಕ ಮೆಕಾರ್ಥಿ ಮಾತನ್ನು ಅಂದಾನುಕರುಣೆಯಲ್ಲಿರುವವರು ಒಪ್ಪಬಹುದಷ್ಟೇ. ಮೆಕಾರ್ಥಿಯ ಈ ಮಾತು ನಮ್ಮ ಸಾಂಸ್ಕೃತಿಕ ಚಿತ್ರಣವನ್ನು ನೇರವಾಗಿ ದೂರುತ್ತಾ ಹಾಗೂ ಪ್ರಶ್ನೆ ಮಾಡಿದಂತೆ ಅನಿಸುತ್ತದೆ.

“ಕ್ಷಿತಿಜದಲ್ಲಿ ಕಾಡುವ ಸಂಕೀರ್ಣತೆ ಕಥೆಗಾರರ ಪ್ರಬುದ್ಧತೆಯನ್ನು ತೋರಿಸುತ್ತದೆ. ಕಥೆಯ ವರ್ಣನಾಂಶಗಳೇ ಸಹಜ ಸಂಕೇತಗಳಾಗಿ ಮಾರ್ಪಟ್ಟು ಕಥೆಯ ಅರ್ಥವಿಸ್ತರಣೆ ಸಾಧಿತವಾಗುತ್ತದೆ”. (ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು ಹೆಚ್.ಎಸ್ ವೆಂಕಟೇಶ್ ಮೂರ್ತಿ ಪು;117) ಈ ಎಲ್ಲಾ ಹಿನ್ನೆಲೆಯಿಂದ ಕಥೆಯನ್ನು ಕಥೆಯಾಗಿಸಿಕೊಳ್ಳದೆ ಒಂದು ಅನುಭವ ಮೂಟೆಯನ್ನಾಗಿ ಕಥೆಗಾರರು ಚಿತ್ರಿಸಿರುವುದು ಈ ಕಥೆಯ ತಂತ್ರಗಾರಿಕೆ ಸಂವಿಧಾನ ಶೈಲಿಗೆ ತನ್ನದೇ ಆದ ವಿಶಿಷ್ಟತೆ ಪ್ರಾಪ್ತವಾಗಿದೆ. ಮೊದಲ ಒಂದು ಪುಟ ಗಲಿಬಿಲಿಯಾದಂತೆ ಅನಿಸಿದರೂ ಸಹ ಎಷ್ಟೊಂದು ಮುಖಗಳು ಎನಿಸಿದರು ಕೂಡ ಒಂದು ದೇಶ ಭಾಷೆ ವಿಚಾರಗಳನ್ನು ಸಂಸ್ಕೃತಿಯ ಚಿತ್ರಣವನ್ನು ಪ್ರತಿನಿಧಿಸಬೇಕಾದಲ್ಲಿ ಕಥೆಗಾರ ಅವೆಲ್ಲವನ್ನೂ ಕಟ್ಟಿ ಕೊಡುವಾಗ ಸಾಂದರ್ಭಿಕ ಸನ್ನಿವೇಶ ಪಾತ್ರಗಳ ಮುಖಾಮುಖಿ ಸಹಜವಾಗಿ ಇರಲೇಬೇಕಾದ್ದು ಎಂದೆನಿಸದೆ ಇರದು. ಈ ಕತೆ ನಿಜಕ್ಕೂ ಸಂಕೀರ್ಣತೆಯನ್ನು ಹೊಂದಿ ಒಂದು ವಿಶಾಲ ಅರ್ಥ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಮಂದಾಕಿನಿ ಮನವು ಆ ತೊಳಲಾಟದಿಂದ ಪಯಣದ ಕೊನೆಯ ಹಂತಕ್ಕೆ ಬರುವಾಗ ‘ಬಂದದ್ದನ್ನು ಬಂದಂತೆ ಸ್ವೀಕರಿಸಬೇಕು’ ಎಂಬ ಸಂಕೇತಕ್ಕೆ “ಇಂಗ್ಲೆಂಡಿನ ಕ್ಷಿತಿಜದಲ್ಲಿ ಮಂಜು ತಿಳಿಯಾಗಿತ್ತು”. ಎಂದು ಕಥೆ ಮುಗಿಸುವಾಗ ನಮಗೆ ಸಂಕೇತ ಪ್ರತಿಮೆಗಳ ಮೂಲಕ ಆಕೆಯ ಮನದ ಧೋರಣೆಗೆ ಇನ್ನೊಂದು ಹೊಸ ರೂಪುರೇಷಯನ್ನು ಕಥೆಗಾರ ನೀಡಿರುವುದು ಗೋಚರಿಸುತ್ತದೆ. ಹಾಗೂ ಇಂಗ್ಲೆಂಡಿನಂತಹ ಸ್ಥಳಕ್ಕೆ ತೆರಳುವಾಗ ಮಂದಾಕಿನಿಯ ದಿಟ್ಟತೆಯ ಹೆಜ್ಜೆ, ಹೊಸ ಅನುಭವಕ್ಕೆ ಹೊಸ ನೋಟಕ್ಕೆ ಮುನ್ನುಡಿ ಹಾಡಿದಂತೆ ಭಾಸವಾಗುತ್ತದೆ.

- ವಾಣಿ ಬಂಡಾರಿ

MORE NEWS

ಕನ್ನಡ ವಿಮರ್ಶೆ -5 

24-03-2025 ಬೆಂಗಳೂರು

"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದ...

ಕೊನೆಯ ದಾರಿಯಲ್ಲಿ ಕಂಡುಕೊಂಡ ಅಂತಿಮ ಸತ್ಯ

20-03-2025 ಬೆಂಗಳೂರು

"ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು

16-03-2025 ಬೆಂಗಳೂರು

"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...