Date: 21-01-2022
Location: ಬೆಂಗಳೂರು
'ಇಂಡೋನೇಷ್ಯಾದ ಯಾವ ಮೂಲೆಗೂ ತೆರಳಿದರೂ ಪ್ರತಿಯೊಂದರ ಮೇಲೆ ಹಿಂದೂ ಸಂಸ್ಕೃತಿ - ಪುರಾಣಗಳ ಪ್ರಭಾವ ಬೀರಿರುವುದನ್ನು ಗಮನಿಸಬಹುದು. ಮೊದಲ ಉದಾಹರಣೆಯಾಗಿ ಇಲ್ಲಿನ ರಾಷ್ಟ್ರೀಯ ವಿಮಾನದ ಹೆಸರು ಗರುಡ' ಎನ್ನುತ್ತಾರೆ ಶ್ರೀವಿದ್ಯಾ. ಅವರು ತಮ್ಮ ಸಿಂಗಾಪುರ್ ಡೈರೀಸ್ ಅಂಕಣದಲ್ಲಿ ಇಂಡೋನೇಷ್ಯಾದಲ್ಲಿ ಕಂಡುಬರುವ ಭಾರತೀಯ ಸಂಸ್ಕೃತಿಯ ಕುರಿತು ವಿಶ್ಲೇಷಿಸಿದ್ದಾರೆ.
ವೆಲ್‌ಕಮ್ ಅಬೋರ್ಡ್ ಗರುಡಾ ಇಂಡೋನೇಷ್ಯಾ…
ಹೀಗೆ ಹೇಳುತ್ತಿದ್ದಂತೆ ವಿಮಾನದೊಳಗೆ ಕೂತಿದ್ದ ನಾವು, ತಮ್ಮ ತಮ್ಮ ಸೀಟ್ ಗಳನ್ನು ನೇರ ಮಾಡುತ್ತಾ, ಸೀಟ್ ಬೆಲ್ಟ್ ಗಳನ್ನು ಬಿಗಿಗೊಳಿಸುತ್ತಾ, ಕಿಟಕಿಯ ಬಾಗಿಲನ್ನು ಸರಿಸುವ ಕೆಲಸ ಮುಗಿಸಿ ವಿಮಾನದ ಪರಿಚಾರಕರ ಪ್ರಕಟಣೆಗೆ ಕಿವಿಗೊಟ್ಟೆವು. ಲೋಹದ ಹಕ್ಕಿ ಇನ್ನೇನು ನೆಲವನ್ನು ಬಿಟ್ಟು ಆಕಾಶದೆತ್ತರಕ್ಕೆ ನೆಗೆಯಲು ಸಜ್ಜಾಗಿತ್ತು. ಇತ್ತ ಮನಸ್ಸು ಕೂಡ ತನ್ನ ಪಾಡಿಗೆ ಕುತೂಹಲದ ಗೋಪುರವನ್ನೇ ಸೃಷ್ಟಿಸಲು ಆರಂಭಿಸಿತ್ತು.
ಅದುವರೆಗೆ ಚೀನಿ ಭಾಷೆಗೆ ಒಗ್ಗಿದ್ದ ನಮಗೆ, ಅವತ್ತು ಮಾತ್ರ ಹೊಸತೊಂದನ್ನ ಆಲಿಸುವ ಖುಷಿ. ಅಂದಿನ ನಮ್ಮ ಪಯಣ ಇಂಡೋನೇಷ್ಯಾದ ರಾಜಧಾನಿ ಜಕಾರ್ತ ಕ್ಕೆ…ಸಂಚಾರದುದ್ದಕ್ಕೂ "ಬಹಾಸ" ಭಾಷೆಯನ್ನು ಮೈಯೆಲ್ಲಾ ಕಿವಿಯಾಗಿಸಿಕೊಂಡು ಕೇಳಿದ್ದೆ ಬಂತು. ತಲೆಗೆ ಹೊಕ್ಕಿದ್ದು ಮಾತ್ರ ಇಂಗ್ಲಿಷ್‌ನಲ್ಲಿ ಹೇಳಿದ ವರದಿಗಳು.
ಕಚೇರಿ ಕೆಲಸದ ನಿಮಿತ್ತ ತಿಂಗಳಿಗೊಮ್ಮೆಯಾದರೂ ತೆರಳುತ್ತಿದ್ದ ಗಂಡನ ಜೊತೆಗೆ ಅಂದು ನಾವು ರೆಡಿಯಾಗಿದ್ದೆವು. ಆಗಷ್ಟೇ ನನ್ನ ಎರಡನೇ ಮಗುವಿನ ರಾತ್ರಿ-ಹಗಲು ಸೇವೆಯಿಂದ ಕೊಂಚ ಸುಧಾರಿಸಿ ಕೊಂಡಿದ್ದ ಸಮಯ. ನಿಂತ ನೀರಿನಂತಿದ್ದ ನನ್ನ ಆಲೋಚನೆಗಳಿಗೆ ಬದಲಾವಣೆಯ ಅಗತ್ಯವೂ ಇತ್ತು. 6ತಿಂಗಳ ಮಗು ಜೊತೆಗಿನ ಪ್ರವಾಸ ಅನ್ನೋದೇ ಅವತ್ತಿನ ಹೈಲೈಟ್.
ಇಂಡೋನೇಷ್ಯಾ ದಲ್ಲಿ ವ್ಯಾಪಾರ – ವಹಿವಾಟು ನಡೆಯುವುದು ರುಪಯ್ಯದಲ್ಲಿ. ಹಣದುಬ್ಬರದ ಬಿಸಿ ಈ ದೇಶವನ್ನು ಬಿಟ್ಟಿಲ್ಲ. ಡಾಲರ್ ಕರೆನ್ಸಿ ದೇಶಗಳ ಪಯಣಿಗರಿಗಂತೂ ಈ ದ್ವೀಪಗಳಿಗೆ ಭೇಟಿ ನೀಡುವುದೆಂದರೆ ಸಸ್ತಾ ಪ್ರವಾಸ. ಸಿಂಗಾಪುರದ ಡಾಲರ್ ಮುಂದೆಯೂ ಇಂಡೋನೇಷ್ಯಾದ ರುಪಯ್ಯಾ ತಲೆತಗ್ಗಿ ನಿಂತಿದೆ. ಒಂದು ಸಿಂಗಾಪುರ ಡಾಲರ್ ಅಂದ್ರೆ 10,453.93 ರೂಪಯ್ಯ. ಇಂಡೋನೇಷ್ಯಾವನ್ನು ಏಷ್ಯಾದಲ್ಲೇ ಅಗ್ಗದ ರಾಷ್ಟ್ರ ಎಂದು ಗುರುತಿಸಲ್ಪಟ್ಟರೆ, ರಾಜಧಾನಿ ಜಕಾರ್ತವು ಈ ವಿಚಾರದಲ್ಲಿ 12ನೇ ಸ್ಥಾನವನ್ನು ಪಡೆದಿದೆ.
ಸಿಂಗಾಪುರಕ್ಕೆ ಬಂದ ಪ್ರಾರಂಭದ ದಿನಗಳಲ್ಲಿ ಏನೇ ಖರೀದಿಗೂ ನಮ್ಮ ದೇಶದ ರೂಪಾಯಿ ಜೊತೆ ಹೋಲಿಕೆ ಮಾಡುವುದು ರೂಢಿಯಾಗಿತ್ತು. ಇಲ್ಲಿನ ದುಬಾರಿ ಜೀವನ ವೆಚ್ಚದಲ್ಲಿ ಈಜಲು ಸಾಧ್ಯವೇ ಎಂಬ ಆತಂಕ ಅನೇಕ ಬಾರಿ ಕಾಡಿದ್ದಿದೆ. ಆದರೆ ಇಂಡೋನೇಷ್ಯಾ ದೇಶದ ಹಣದುಬ್ಬರದ ಪರಿಸ್ಥಿತಿ ನೋಡಿದರೆ ಎಲ್ಲವೂ ಉಲ್ಟಾ ಪಲ್ಟಾ..!
ಇಂಡೋನೇಷ್ಯಾದ ಯಾವ ಮೂಲೆಗೂ ತೆರಳಿದರೂ ಪ್ರತಿಯೊಂದರ ಮೇಲೆ ಹಿಂದೂ ಸಂಸ್ಕೃತಿ - ಪುರಾಣಗಳ ಪ್ರಭಾವ ಬೀರಿರುವುದನ್ನು ಗಮನಿಸಬಹುದು. ಮೊದಲ ಉದಾಹರಣೆಯಾಗಿ ಇಲ್ಲಿನ ರಾಷ್ಟ್ರೀಯ ವಿಮಾನದ ಹೆಸರು ಗರುಡ. 1949ರಲ್ಲಿ ಡಚ್ಚರು ಹಾಗೂ ಇಂಡೋನೇಷ್ಯಾದ ಜೊತೆಗಿನ ದುಂಡು ಮೇಜಿನ ಪರಿಷತ್ತಿನ್ನಲ್ಲಿ ಈ ಹೆಸರನ್ನು ನಿರ್ಣಯಿಸಲಾಗಿತ್ತು.
ಜಾವನೀಸ್ ಕವಿ ಹಾಗೂ ವಿದ್ವಾಂಸ ಡಚ್ ಭಾಷೆಯಲ್ಲಿ ಬರೆದ ಕವಿತೆಯಲ್ಲಿ "ನಾನು ಗರುಡ, ವಿಷ್ಣುವಿನ ಪಕ್ಷಿ, ಅದು ದ್ವೀಪಗಳ ಮೇಲೆ ತನ್ನ ರೆಕ್ಕೆಗಳನ್ನು ಹರಡುತ್ತದೆ" ಎಂಬುದಾಗಿ ಬಣ್ಣಿಸಲಾಗಿದೆ. ಇಂಡೋನೇಷ್ಯಾದ ಅಂದಿನ ಅಧ್ಯಕ್ಷರು ಈ ಕವಿತೆಯನ್ನು ಸಭೆಯಲ್ಲಿ ಉಲ್ಲೇಖಿಸಿದ್ದರು ಎಂಬುದು ವರದಿ. ಈ ದೇಶದ ರಾಷ್ಟ್ರೀಯ ಲಾಂಛನ ಕೂಡ ಗರುಡ ಚಿತ್ರದೊಂದಿಗೆ ರಚಿತಗೊಂಡಿದೆ. ಪೂರ್ವ ವಸಾಹತುಶಾಹಿ ಕಾಲದಲ್ಲಿ ಆಳ್ವಿಕೆ ನಡೆಸಿದ್ದ ಹಿಂದೂ ಸಾಮ್ರಾಜ್ಯಗಳ ಬಲವಾದ ಪ್ರಭಾವ ಇನ್ನೂ ಉಳಿದಿರುವುದು ಗಮನಾರ್ಹ.
ರಾಮಾಯಣ ಆಧಾರಿತ ಬಯಲಾಟಗಳು, ಬೊಂಬೆ ಆಟಗಳು ದೇಶದ ಪ್ರಮುಖ ಕೇಂದ್ರಗಳಲ್ಲಿ ವಿಶೇಷವಾಗಿ ಪ್ರವಾಸಿಗರಿಗೆಂದೇ ಪ್ರದರ್ಶನಗೊಳ್ಳುತ್ತವೆ. ಈ ಅಭಿನಯವು ಪ್ರಮುಖವಾಗಿ ಜಾವನೀಸ್ ಹಾಗೂ ಬಾಲಿನೀಸ್ ಎಂಬ 2ಶೈಲಿಗಳ ಹೆಸರುಗಳಲ್ಲಿ ನಡೆಯುತ್ತವೆ. ಮಾತುಕತೆ ಇಲ್ಲದೆ ಪ್ರಸ್ತುತಗೊಳ್ಳುವ ಈ ನಾಟಕಗಳಿಗೆ ಹಿಮ್ಮೇಳದಲ್ಲಿ ಸಾಂಪ್ರದಾಯಿಕ ಸಂಗೀತ ಉಪಕರಣಗಳನ್ನು ನುಡಿಸಲಾಗುತ್ತದೆ.
ಥೈಲ್ಯಾಂಡ್, ಫಿಲಿಪೈನ್ಸ್, ವಿಯೆಟ್ನಾಮ್ ಮಲೇಷ್ಯಾ ಹಾಗೂ ಇಂಡೋನೇಷ್ಯಾ ಇವಿಷ್ಟು ಸಿಂಗಾಪುರದ ನೆರೆಯ ರಾಷ್ಟ್ರಗಳು. ಇವುಗಳಲ್ಲಿ ಇಂಡೋನೇಷ್ಯಾ ರಾಜಧಾನಿ ಜಕಾರ್ತಕ್ಕೆ ಸಿಂಗಾಪುರದಿಂದ ಎರಡೂವರೆ ಗಂಟೆಯ ಪಯಣ. ಕಡಿಮೆ ಅವಧಿಯ ಪಯಣಗಳು ಹೀಗೆಯೇ. ವಿಮಾನ ಟೇಕಾಫ್ಫ್ ಆಗಿ ಸುಧಾರಿಸಿಕೊಳ್ಳುವಷ್ಟರಲ್ಲಿ ಲ್ಯಾಂಡಿಂಗ್ ಪ್ರಕಟಣೆಯೂ ಬಂದಿರುತ್ತದೆ. ಸುರಕ್ಷಿತವಾಗಿ ಹೊಸ ಜಾಗಕ್ಕೆ ಬಂದಿಳಿದ ನಮಗೆ ಅಂತಹ ದೊಡ್ಡ ಅಚ್ಚರಿ ಏನೂ ಅನಿಸಿರಲಿಲ್ಲ. ಇಲ್ಲಿನ ಜನ, ಭಾಷೆ ಮತ್ತು ಸಂಸ್ಕೃತಿ ಬಿಟ್ರೆ ಮತ್ತೆಲ್ಲವೂ ನಮ್ಮ ಊರಿನ ರೀತಿಯಲ್ಲಿ ಕಾಣಿಸತೊಡಗಿತು.
ನಮ್ಮ ಲಗೇಜು ಜೊತೆ ಹೋಟೆಲ್ ನ್ನತ್ತ ಪ್ರಯಾಣಿಸುವ ವೇಳೆ ನಮ್ಮನ್ನ ಮೊದಲ ಸ್ವಾಗತಿಸಿದ್ದು ಇಲ್ಲಿನ ಟ್ರ್ಯಾಫಿಕ್. ಈ ವಿಚಾರದಲ್ಲಿ ನಾವು ಬೆಂಗಳೂರಿನವರೇ ಹುಷಾರು ತಿಳ್ಕೊಂಡ್ರೆ, ಇವರು ಇಂಡೋನೇಷ್ಯಾದವರು ನಮಗಿಂತ ಒಂದು ಹೆಜ್ಜೆ ಮುಂದಿದ್ದಾರೆ. 2020ರವರೆ ಗಿನ ಟ್ರಾಫಿಕ್ ಜಾಮ್ ಗೆ ಕುಖ್ಯಾತಿ ಗಳಿಸಿದ್ದ ಪ್ರಪಂಚ 10ನಗರಗಳಲ್ಲಿ ಜಕಾರ್ತ ಕೂಡ ಒಂದು. ಉಪಗ್ರಹ ಸಂಚರಣೆಯ ಅಂಕಿ ಅಂಶದ ಪ್ರಕಾರ ಜಕಾರ್ತಾದಲ್ಲಿ ವರ್ಷವೊಂದಕ್ಕೆ ಸರಾಸರಿ ಎಂಬಂತೆ ಓರ್ವ ಚಾಲಕ 33,000 ಬಾರಿ ತನ್ನ ವಾಹನವನ್ನು ನಿಲ್ಲಿಸುವ ಹಾಗೂ ಚಲಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ ಎಂದು ಹೇಳುತ್ತದೆ ವರದಿ. ಈ ನಗರದ ವಾಯು ಮಾಲಿನ್ಯದಲ್ಲಿ ಶೇ. 70ರಷ್ಟು ಭಾಗ ವಾಹನಗಳದ್ದೇ ಕೊಡುಗೆಯಾಗಿವೆ.
ಇವನ್ನೆಲ್ಲಾ ನಿಯಂತ್ರಿಸಲು ಜಕಾರ್ತ ನಡೆಸುವ ಪರಿಪಾಟ ಅಷ್ಟಿಷ್ಟಲ್ಲ. ಸಮಸಂಖ್ಯೆ ನಂಬರ್ ಪ್ಲೇಟ್ ಇರುವ ವಾಹನಗಳು ಸಮ ಸಂಖ್ಯೆ ದಿನಾಂಕಗಳಲ್ಲಿ , ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಬೆಸ ಸಂಖ್ಯೆಯ ತಾರೀಕುಗಳಲ್ಲಿ ಓಡಿಸುವ ವಿನೂತನ ಪ್ರಯೋಗವೊಂದು ಇಲ್ಲಿ ಜಾರಿಯಲ್ಲಿದೆ.
ಜಕಾರ್ತವನ್ನು ಸ್ಕೂಟರ್ ಸಿಟಿ ಎಂದೂ ಕರೆಯಲಾಗುತ್ತದೆ. ನಿಮಗೆ ಗೊತ್ತಿರುವ ಹಾಗೆ " ಗೊ ಜೆಕ್ " ಕಂಪೆನಿಯ ಮೂಲ ಇಂಡೋನೇಷ್ಯಾ. ಎರಡು ಚಕ್ರದ ಉಬರ್ ಎಂದೇ ಖ್ಯಾತಿ. ಮೋಟಾರ್ ಸೈಕಲ್ ಟ್ಯಾಕ್ಸೀ ಇದೀಗ ತುಂಬಾ ಫೇಮಸ್. ಎಲ್ಲೆಂದರಲ್ಲಿ ನುಸುಳಿ ಅತಿ ವೇಗದಲ್ಲಿ ನಿರ್ದಿಷ್ಟ ಸ್ಥಳವನ್ನು ತಲುಪುವ ಈ ಬೈಕ್ ಸವಾರರಿಗೆ ಎಲ್ಲಿಲ್ಲದ ಡಿಮ್ಯಾಂಡ್. ಜನರ ಓಡಾಟ, ಆರ್ಡರ್ ಮಾಡಿದ ಫುಡ್ ಡೆಲಿವರೀ, ಸಣ್ಣ ಪುಟ್ಟ ಶಾಪಿಂಗ್, ದಿನಸಿ ವಸ್ತುಗಳನ್ನು ಕೂಡ ಇವರು ಮನೆಮನೆಗೆ ತಲುಪಿಸಬಲ್ಲರು.
ನಾವು ತೆರಳುವ ವೇಳೆಯೂ ಅಲ್ಲಲ್ಲಿ ಟ್ರ್ಯಾಫಿಕ್ ಜಾಮ್ ಸಾಮಾನ್ಯವಾಗಿತ್ತು. ಆ ಸಮಯದಲ್ಲಿ ಇಂಡೊನೇಷಿಯಾ ಅಧ್ಯಕ್ಷರ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತಿತ್ತು. ನೇರವಾದ ಮಾರ್ಗದಲ್ಲಿ ತೆರಳಬೇಕಿದ್ದ ನಮ್ಮ ಕಾರು. ಸುರಕ್ಷತೆಯ ನಿಟ್ಟಿನಲ್ಲಿ ಹೊಸ ಹೊಸ ರಸ್ತೆಗಳನ್ನು ಪರಿಚಯಿಸಿತ್ತು. ಗಲ್ಲಿಗಲ್ಲಿ ತಿರುಗಾಟ ನನ್ನ ಒಂದಷ್ಟು ಕುತೂಹಲಗಳಿಗೆ ಉತ್ತರ ದೊರಕುವಂತೆ ಮಾಡಿತ್ತು.
ಜಕಾರ್ತಾ ಆಗ್ನೇಯ ಏಷ್ಯಾದಲ್ಲಿ ನಿರಂತರವಾಗಿ ಜನವಸತಿ ಹೊಂದುತ್ತಿರುವ ಅತ್ಯಂತ ಹಳೆಯ ನಗರ. ನಾಲ್ಕನೇ ಶತಮಾನದಲ್ಲಿ ಸುಂದ ಕೆಲಪಾ ಎಂಬ ಹೆಸರಿನಿಂದ ಸ್ಥಾಪಿತವಾದ ಈ ನಗರವು ಸುಂದ ಸಾಮ್ರಾಜ್ಯಕ್ಕೆ ಪ್ರಮುಖ ವ್ಯಾಪಾರ ಬಂದರು ಆಗಿ ಕಾರ್ಯನಿರ್ವಹಿಸುತಿತ್ತು. ಜಕಾರ್ತ ಪದವು ಸಂಸ್ಕೃತದಿಂದ ಪಡೆಯಲಾಗಿದ್ದು, ಜಯ ಎಂದರೆ ವಿಜಯ ಹಾಗೂ ಕರ್ತ ಎಂದರೆ ಸಾಧಿಸಿದವನು ಎಂದರ್ಥ.
ಇಂಡೋನೇಷ್ಯವು ವಿಶ್ವದಲ್ಲೇ ಅತಿ ದೊಡ್ಡ ದ್ವೀಪ ರಾಷ್ಟ್ರ. ಈ ದೇಶದೊಳಗೆ ಬರೋಬ್ಬರಿ 17, 508 ದ್ವೀಪಗಳಿವೆ. ಇವನ್ನೆಲ್ಲಾ ಒಟ್ಟಾಗಿ ನೋಡುವ ಅವಕಾಶ ಜಕಾರ್ತಾದಲ್ಲಿದೆ. ಇಲ್ಲಿನ "ತಮನ್ ಮಿನಿ ಇಂಡೋನೇಷ್ಯಾ ಇಂಡಾ" ಉದ್ಯಾನದಲ್ಲಿ ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಸಂಸ್ಕೃತಿ ಆಧಾರಿತ ಮನರಂಜನಾ ಪ್ರದೇಶವಾಗಿರುವ ಇದು 250 ಎಕರೆ ಪ್ರದೇಶಗಳಲ್ಲಿ ವಿಸ್ತರಿಸಿಕೊಂಡಿದೆ.
ಇಂಡೋನೇಷ್ಯಾದ ಪ್ರಾಂತ್ಯಗಳನ್ನು ಪ್ರಮುಖ 6 ದ್ವೀಪಗಳ ಹೆಸರಿನಲ್ಲಿ ವಿಂಗಡಿಸಲಾಗಿದೆ. ಜಾವಾ, ಸುಮಾತ್ರಾ, ಕಲಿಮಂಟನ್ (ಬೋರ್ನಿಯೊ), ಸುಲವೆಸಿ, ಲೆಸ್ಸರ್ ಸುಂದಾ ದ್ವೀಪಗಳು, ಮಲುಕು ಮತ್ತು ಪಪುವಾ. ಪ್ರತಿಯೊಂದು ಪ್ರಾಂತ್ಯದ ಸಂಸ್ಕೃತಿ, ವಾಸ್ತುಶಿಲ್ಪ, ಸಂಪ್ರದಾಯ, ಆಚಾರ - ವಿಚಾರಗಳು, ವಸ್ತು ಸಂಗ್ರಹಾಲಯಗಳು ಹೀಗೆ ಎಲ್ಲವನ್ನೂ ವಿವರಿಸುವ ಒಂದು ವಿನೂತನ ಪ್ರಯತ್ನ ಇದಾಗಿದೆ. ಇವುಗಳ ಮಧ್ಯೆ ಇರುವ ಒಂದು ಸರೋವರದಲ್ಲಿ ರಚನೆಗೊಂಡ ಇಂಡೋನೇಷ್ಯಾದ ಅಷ್ಟೂ ದ್ವೀಪಗಳನ್ನು ವೀಕ್ಷಿಸಲು ಕೇಬಲ್ ಕಾರ್ ನ ವ್ಯವಸ್ಥೆಯನ್ನು ಮಾಡಲಾಗಿದೆ.
10 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಜಕಾರ್ತವು ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರ. ವರ್ಷವೊಂದಕ್ಕೆ 10cm ನಷ್ಟು ಭೂಪ್ರದೇಶ ನೀರು ಪಾಲಾಗುತ್ತಿದ್ದು, ನಗರದ ಅರ್ಧದಷ್ಟು ಭಾಗ ಈಗಾಗಲೇ ಸಮುದ್ರ ಮಟ್ಟಕ್ಕಿಂತ ಕೆಳಗಿದೆ. ಜೌಗು ಭೂಮಿಯಲ್ಲಿರುವ ಈ ನಗರದಲ್ಲಿ 13 ನದಿಗಳು ಹರಿಯುತ್ತವೆ ಜೊತೆಗೆ ಜಾವ ಸಮುದ್ರ. ಅಚ್ಚರಿ ಪಡಬೇಕಾಗಿಯೇ ಇಲ್ಲ..! ಧಾರಾಕಾರ ಮಳೆ ಸುರಿದರಂತೂ ಪ್ರವಾಹ ಕಟ್ಟಿಟ್ಟಬುತ್ತಿ.
ಕಳೆದ 10 ವರ್ಷಗಳಲ್ಲಿ ಜಕಾರ್ತದ ಉತ್ತರ ಭಾಗದಲ್ಲಿನ ಸುಮಾರು 2.5 ಮೀಟರ್ ನಷ್ಟು ಭೂಭಾಗ ಜಲಾವೃತಗೊಂಡಿದೆ. ಜಾಗತಿಕ ತಾಪಾಮಾನದಿಂದ ಏರುತ್ತಿರುವ ಸಮುದ್ರ ಮಟ್ಟಗಳು ಒಂದೆಡೆಯಾದರೆ ಅತಿಯಾದ ಅಂತರ್ಜಲದ ಬಳಕೆ ಈ ನಗರದ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಜಕಾರ್ತದ ಉತ್ತರ ಭಾಗವು ಸಮತಟ್ಟಾದ ಪ್ರದೇಶವನ್ನು ಹೊಂದಿದ್ದರೆ, ದಕ್ಷಿಣದ ಭಾಗ ಬೆಟ್ಟ ಗುಡ್ಡಗಳಿಂದ ಆವೃತವಾಗಿವೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಇಂಡೋನೇಷ್ಯಾ ತನ್ನ ರಾಜಧಾನಿಯನ್ನು 2024 ರ ಮೊದಲಾರ್ಧದಲ್ಲಿ ಬೊರ್ನಿಯೊ ದ್ವೀಪಕ್ಕೆ ಸ್ಥಳಾಂತರಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆಗ್ನೇಯ ಏಷ್ಯಾದಲ್ಲೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜಧಾನಿಯನ್ನು ಜಕಾರ್ತದಿಂದ ಪೂರ್ವ ಕಾಲಿಮಂಟನ್ ಪ್ರಾಂತ್ಯದ 56,180 ಹೆಕ್ಟೇರ್ ಪ್ರದೇಶಕ್ಕೆ ವರ್ಗಾಯಿಸಲಾಗುತ್ತದೆ.
ನೆದರ್ ಲ್ಯಾಂಡ್ ನ ಡಚ್ಚರು ಆಳಿದ ಇಂಡೋನೇಷ್ಯಾದಲ್ಲಿ ಅದರಲ್ಲೂ ಜಕಾರ್ತಾದಲ್ಲಿ 47ವಸ್ತು ಸಂಗ್ರಹಾಲಯಗಳಿವೆ. ಈ ನಗರಕ್ಕೆ ಜಕಾರ್ತ ಎಂದು ಹೆಸರು ನಾಮಕರಣಗೊಳ್ಳುವ ಮುಂಚೆ 13ಬಾರಿ ತನ್ನ ಹೆಸರನ್ನು ಬದಲಿಸಿಕೊಂಡಿದೆ. ಅವುಗಳಲ್ಲಿ ಈಗಲೂ ಕರೆಯಲ್ಪಡುವ ಹೆಸರು ಬಟಾವಿಯಾ. ಇದು ವಿಶ್ವದಲ್ಲೇ ಮೂರನೇ ಅತ್ಯಂತ ಹೊಲಸು ನಗರವೆಂಬ ಬಿರುದು ಹೊಂದಿದೆ. ನ್ಯೂಯಾರ್ಕ್ ಗೆ ಹೇಗೆ “ಬಿಗ್ ಆಪಲ್ “ ಎಂಬ ಹೆಸರಿದೆಯೋ ಅದೇ ರೀತಿಯಲ್ಲಿ ಜಕಾರ್ತವನ್ನು “ಬಿಗ್ ಡ್ಯೂರೇನ್” ಎಂದು ಕರೆಯುವುದಿದೆ. ಸ್ಥಳೀಯರಿಗೆ ಚೆಸ್ ಆಟ ಅಚ್ಚುಮೆಚ್ಚು. ಜನವಸತಿ ಪ್ರದೇಶಗಳಲ್ಲಿ ನೀವು ತಿರುಗಾಡುವ ವೇಳೆ ಚೆಸ್ ಆಡುವವರು ಕಣ್ಣಿಗೆ ಬಿದ್ದರೆ ಅದು ಸರ್ವೇ ಸಾಮಾನ್ಯ.
ಇಂಡೋನೇಷ್ಯಾದ ರಾಜಧಾನಿ ಜಕಾರ್ತಾ ದೇಶದ ಎಲ್ಲಾ ಜನಾಂಗೀಯ ಗುಂಪುಗಳ ಸಂಸ್ಕೃತಿಗಳನ್ನು ಒಟ್ಟಾಗಿ ಕಾಣಬಹುದಾದ ಕೇಂದ್ರವಾಗಿದೆ. ಬೆಟಾವಿ ಜನರು ಇಲ್ಲಿನ ಸ್ಥಳೀಯ ಸಮುದಾಯವಾಗಿದ್ದರೂ, ನಗರದ ಸಂಸ್ಕೃತಿಯು ಅನೇಕ ಭಾಷೆಗಳು ಮತ್ತು ಜನಾಂಗೀಯ ಗುಂಪುಗಳನ್ನು ಪ್ರತಿನಿಧಿಸುತ್ತದೆ, ಯಾವುದೇ ಏಕ ಮತ್ತು ಪ್ರಬಲ ಸಂಸ್ಕೃತಿಗಿಂತ ಹೆಚ್ಚಾಗಿ ಧರ್ಮ, ಸಂಪ್ರದಾಯಗಳು ಮತ್ತು ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ವ್ಯತ್ಯಾಸಗಳನ್ನು ಇಲ್ಲಿ ಕಾಣಬಹುದು ಬೆಟಾವಿ ಸಂಸ್ಕೃತಿಯು ಈಗ ಪ್ರಸಿದ್ಧಿಯಲ್ಲಿರುವ ಸುಂಡಾನೀಸ್ ಹಾಗೂ ಜಾವನೀಸ್ ಗಿಂತ ಭಿನ್ನವಾಗಿದೆ.
ನಾವಂತೂ ಪಕ್ಕಾ ಸಸ್ಯಾಹಾರಿಗಳು. ಟಿಕೆಟ್ ಬುಕ್ಕಿಂಗ್ ಗಿಂತಲೂ ಮೊದಲು ಮಾಹಿತಿ ಸಂಗ್ರಹಿಸುವುದು "ಇಂಡಿಯನ್ ವೆಜಿಟೇರಿಯನ್ ಫುಡ್ " ಬಗ್ಗೆ. ಆದರೆ ಕೆಲವೊಮ್ಮೆ ಪ್ರವಾಸಗಳು ವಿಚಿತ್ರ ಅನುಭವಗಳನ್ನು ನೀಡುವುದು ಇದೆ. ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ನ ರೆಸ್ಟೋರೆಂಟ್ ಒಂದರಲ್ಲಿ ಆರ್ಡರ್ ಮಾಡಿದ್ದ ಆಹಾರ ತಿನ್ನದೇ ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹೊತ್ತು ಉಪವಾಸ ಮಾಡದೇ ಬೇರೆ ವಿಧಿ ಇರಲಿಲ್ಲ. ನಾವು ಹೇಳಿದ್ದು ಅವರಿಗೆ ಅರ್ಥ ಆಗೋದಿಲ್ಲ - ಅವರು ಹೇಳಿದ್ದು ನಮಗೆ.
ಎಂದಿನಂತೆ ಜಕಾರ್ತಕ್ಕೂ ಪ್ರಾರಂಭದ ದಿನಗಳಿಗೆ ಮನೆಯಿಂದಲೇ ಹಾಳಾಗದಂತೆ ಕೆಲವೊಂದು ಆಹಾರಗಳನ್ನು ಕಟ್ಟಿಕೊಂಡರೆ, ಉಳಿದ ದಿನಗಳ ಹೊಟ್ಟೆಪೂಜೆಗೆ ಗೂಗಲ್ ಸಹಾಯ ಮಾಡಿತ್ತು. ಹೀಗೆ ಹುಡುಕಾಟದಲ್ಲಿದ್ದಾಗ ರಾಜಧಾನಿಯ ಯಾವುದೋ ಒಂದು ಭಾಗದಲ್ಲಿ ಉಡುಪಿ ರೆಸ್ಟೋರೆಂಟ್ ಸಿಕ್ಕಿದ್ದು ನಮ್ಮಲ್ಲಿ ಅಚ್ಚರಿ ಮೂಡಿಸಿತ್ತು. ಅಲ್ಲಿಗೆ ಭೇಟಿ ನೀಡಿ ಮೆನು ಓದುತ್ತಾ ಹೋದಂತೆ ನಮ್ಮ ಮಂಗಳೂರಿನ ನೀರು ದೋಸೆ ಸಿಕ್ಕಿ ಬಿಡೋದಾ..! ನಮಗಂತೂ ಎಕ್ಸ್‌ಕ್ಲೂಸಿವ್ - ಬ್ರೇಕಿಂಗ್ ನ್ಯೂಸ್ ಆಗಿತ್ತು..!!
ಈ ಅಂಕಣದ ಹಿಂದಿನ ಬರಹಗಳು:
ಅದೃಷ್ಟ-ಸಮೃದ್ಧಿಯನ್ನು ಸ್ವಾಗತಿಸುವ ಡ್ರ್ಯಾಗನ್ ನೃತ್ಯ ಮತ್ತು ಸಾಂಸ್ಕೃತಿಕ ಚರಿತ್ರೆ
ದಕ್ಷ ವ್ಯವಸ್ಥೆಯೊಂದಿಗೆ ಅಚ್ಚರಿಯ ಸಾಧನೆಯತ್ತ ಸದಾ ತುಡಿವ ‘ಗ್ರೀನೆಷ್ಟ್ ಸಿಟಿ’ ಸಿಂಗಾಪುರ್
ಅಚ್ಚರಿಯ ‘ಸಿಂಗಾಪುರ್’ ಮತ್ತು ಅದರ ಭೂವಿಸ್ತರಣಾ ಕಾರ್ಯ
"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...
"ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೆ ಎಲ್ಲ ರೀತಿಯಿಂದಲೂ ಹಿರಿಯಣ್ಣನಂತಹ ಯಡ್ರಾಮಿ ನನ್ನ ಪ್ರೀತಿಯ ಊರು. ನಮ್ಮೂ...
"ಬಿನ್ನ ರಾಜ್ಯಗಳ ಪ್ರದಾನ ಬಾಶೆಗಳಲ್ಲಿ ತಾಯ್ಮಾತಿನ ಶಿಕ್ಶಣವನ್ನು ಕೊಡುವಾಗ ವಿವಿದ ರಾಜ್ಯಗಳು ಪರಸ್ಪರ ಒಂದು ಒಪ್ಪಂ...
©2025 Book Brahma Private Limited.