Date: 12-06-2022
Location: ಬೆಂಗಳೂರು
ಹಿರಿಯ ಸಾಹಿತಿಗಳು ಮತ್ತು ಕಲಾವಿದರಿಗೆ ಪ್ರಶಸ್ತಿ ಘೋಷಿಸುವ ವಿಚಾರದಲ್ಲಿ ವಿಳಂಬ ಸಲ್ಲದು. ಬದುಕಿರುವಾಗಲೇ ಸಾಂಸ್ಕೃತಿಕ ಸಾಧಕರಿಗೆ ಗೌರವ ಸಲ್ಲಿಕೆಯಾಗಬೇಕು ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ಅವಜ್ಞೆ ತೋರುವ ಸರ್ಕಾರದ ಧೋರಣೆ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.
ಸೋಮಾರಿತನವೋ, ಇಲ್ಲವೇ ಅಸಡ್ಡೆತನವೋ ಗೊತ್ತಿಲ್ಲ. ಸಮಾಜದ ಬಹುದೊಡ್ಡ ಸಾಂಸ್ಕೃತಿಕ ಆಸ್ತಿಯಂತಿರುವ ಸಾಹಿತಿ, ಕಲಾವಿದರನ್ನು ಸಮಯೋಚಿತವಾಗಿ ಗುರುತಿಸಿ ಗೌರವಿಸುವ ಔಚಿತ್ಯ ಮತ್ತು ಸಮಯ ಪ್ರಜ್ಞೆಗಳನ್ನೇ ಆಡಳಿತಶಾಹಿ ಸರಕಾರಗಳು ಕಳಕೊಂಡಿವೆ. ಸೋಜಿಗದ ಸಂಗತಿಯೆಂದರೆ ನಮ್ಮ ಕರ್ನಾಟಕ ಸರಕಾರ ಸಾಹಿತ್ಯ, ಕಲೆ, ಸಂಸ್ಕೃತಿಗಾಗಿ ಮುಡಿಪಿರಿಸಿದಷ್ಟು ಗುರುತರವಾದ ಪ್ರಶಸ್ತಿ ಪುರಸ್ಕಾರಗಳನ್ನು ಭಾರತ ದೇಶದ ಬೇರಾವ ರಾಜ್ಯಗಳೂ ಇರಿಸಿರಲಾರವು.
ಅವು ಕೇವಲ ಆಡಂಬರದ ಜಡ ಗೌರವಗಳಾಗಿರದೇ ಹತ್ತು ಲಕ್ಷಗಳವರೆಗಿನ ದೊಡ್ಡ ದೊಡ್ಡ ಮೊತ್ತಗಳ ಸಮೇತದ ಅತ್ಯುನ್ನತ ಗೌರವ ಪ್ರಶಸ್ತಿಗಳು. ನಾಡಗೌರವದ ಪ್ರತೀಕವಾಗಿ ಅವುಗಳನ್ನು ಕರ್ನಾಟಕ ಸರಕಾರ ಸ್ಥಾಪಿಸಿದೆ. ಹತ್ತು ಲಕ್ಷ ಮೊತ್ತದ ಮೂರು ರಾಷ್ಟ್ರೀಯ ಮತ್ತು ಐದು ಲಕ್ಷಗಳ ಮೌಲ್ಯಭರಿತ (ಅದು ಕೇವಲ ಹಣದ ಮೌಲ್ಯಮಾತ್ರವಲ್ಲ) ರಾಜ್ಯಮಟ್ಟದ ಹದಿನೆಂಟು ಉನ್ನತ ಪ್ರಶಸ್ತಿಗಳನ್ನು ಸರಕಾರ ನೀಡುತ್ತಿರುವುದು ಅಕ್ಷರಶಃ ಅತ್ಯಂತ ಶ್ಲಾಘನೀಯ ಮತ್ತು ಹೆಮ್ಮೆಯ ಸಂಗತಿ. ಬೇರಾವ ರಾಜ್ಯಗಳಲ್ಲೂ ವೈವಿಧ್ಯಮಯವಾದ ಇಂತಹ ಪ್ರಶಸ್ತಿಗಳಿರಲಾರವು. ಏಕೆಂದರೆ ಕೆಲವು ರಾಜ್ಯಗಳಲ್ಲಿ ಆಯಾ ನೆಲದ ಸಂಸ್ಕೃತಿಗೆ ಸಂಬಂಧಿಸಿದ ಸ್ವತಂತ್ರವಾದ ಇಲಾಖೆಗಳೇ ಇಲ್ಲ. ಹೆಚ್ಚೆಂದರೆ ಅವು ವಾರ್ತಾ ಇಲಾಖೆಗೆ ಹತಂಡಿಯಾಗಿರುತ್ತವೆ.
ಸಾಮಾಜಿಕ ಸ್ತರಗಳ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈಯ್ದ ಮತ್ತು ನಾನಾ ಜ್ಞಾನ ಸಾರದ ಸಂಸ್ಕೃತಿ ಮತ್ತು ಸೇವಾ ವಲಯಗಳ ಸಾಧಕರು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಗಮನಾರ್ಹ ಘನಕಾರ್ಯ ನಮ್ಮ ಸರಕಾರದ್ದು. ಕನ್ನಡ ರಾಜ್ಯೋತ್ಸವ ಹೊರತು ಪಡಿಸಿದರೆ ಇತರೆ ಬಹುಪಾಲು ಗೌರವ ಪ್ರಶಸ್ತಿಗಳು ಸಮಯ ಮತ್ತು ಔಚಿತ್ಯ ಪ್ರಜ್ಞೆಗಳನ್ನೇ ಮರೆತು ಬಿಟ್ಟಿವೆ. ಪ್ರಭುತ್ವವು ತಾನು ನೆನಪಿಸಿಕೊಂಡಾಗ ಎಂಬಂತೆ ತುಂಬಾ ತಡವಾಗಿ ಇಂತಹ ಮಹತ್ವದ ಸಾಂಸ್ಕೃತಿಕ ಕೈಂಕರ್ಯಗಳನ್ನು ನೆರವೇರಿಸುತ್ತದೆ. ಎರಡೆರಡು ವರ್ಷಗಳ ಕಾಲ ವಿಳಂಬಿಸುವ ಜೋಬದ್ರಗೇಡಿತನದ ಈ ಚಾಳಿ ನಿವಾರಿಸುವುದು ಹೇಗೆಂದು ತಿಳಿಯುತ್ತಿಲ್ಲ. ಸಂಸ್ಕೃತಿಗೆ ಸಂಬಂಧಿಸಿದ ಸರಕಾರದ ಈ ದುರ್ಚಾಳಿ ಉನ್ನತ ಪ್ರಶಸ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಂಸ್ಕೃತಿಕ ಅಕಾಡೆಮಿ, ಪ್ರತಿಷ್ಠಾನಗಳ ಪದಾಧಿಕಾರಿಗಳ ನೇಮಕಾತಿಯಲ್ಲೂ ಸರಕಾರ ವಿಪರೀತವಾದ ವಿಳಂಬನೀತಿ ಚಾಳಿಗೆ ಅಮರಿಕೊಂಡಿದೆ.
ಕರ್ನಾಟಕದ ಕೆಲವು ಅಕಾಡೆಮಿ, ಪ್ರತಿಷ್ಠಾನಗಳ ಅಧ್ಯಕ್ಷ ಸ್ಥಾನಗಳು ತೆರವುಗೊಂಡು ಎರಡು ವರ್ಷಗಳೇ ಕಳೆಯುತ್ತಿದ್ದರೂ ಭರ್ತಿಮಾಡುವ ಆಸಕ್ತಿಯನ್ನು ಆಳುವ ವರ್ಗ ತೋರುತ್ತಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಗಳ ಕುರಿತಂತೆ ಸರಕಾರದ್ದು ಬೇಜವಾಬ್ದಾರಿ ಧೋರಣೆ. ಪ್ರಾಯಶಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಂದೇ ಏಕೈಕ ಖಾತೆ ಹೊಂದಿದ ಮಂತ್ರಿ ಇಲ್ಲದಿರುವುದೇ ಇದಕ್ಕೆ ಬಹುಮುಖ್ಯ ಕಾರಣ ಇದ್ದೀತು.? ಸದರಿ ಇಲಾಖೆಯನ್ನು ಹೆಚ್ಚುವರಿ ಎಂಬಂತೆ ಮುಖ್ಯಮಂತ್ರಿಯಾದವರು ಹಂಚಿಕೆ ಮಾಡುವುದೇ ಕನ್ನಡ ಸಂಸ್ಕೃತಿಗೆ ಸಲ್ಲುವ ಅವಜ್ಞೆ ಅಲ್ಲದೇ ಮತ್ತಿನ್ನೇನು.? ಬಹುಪಾಲು ಮಂತ್ರಿಗಳಿಗೆ ಬೇಡವಾದ ಖಾತೆ ಇದಾಗಿದೆ.
ಅಂತೆಯೇ ಈ ಹಿಂದೆ ಸದರಿ ಇಲಾಖೆಯ ಸಚಿವರೊಬ್ಬರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬರಖಾಸ್ತು ಮಾಡಿ ಇದನ್ನು ವಾರ್ತಾ ಇಲಾಖೆಯೊಂದಿಗೆ ವಿಲೀನಗೊಳಿಸುವ ಇರಾದೆ ವ್ಯಕ್ತ ಪಡಿಸಿದ್ದರು. ಅಂದರೆ ಪ್ರಭುತ್ವಕ್ಕೆ ಕನ್ನಡ ಸಂಸ್ಕೃತಿ ಕುರಿತು ಯಾವ ಬಗೆಯ ಪ್ರೀತ್ಯಾದರಗಳಿವೆ ಎಂಬುದು ಇದರಿಂದ ಸುಸ್ಪಷ್ಟವಾಗುತ್ತದೆ. ಈಗಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಕರಾವಳಿಯ ಯಕ್ಷಗಾನದ ಮೇಲಿರುವಷ್ಟು ಪ್ರೀತಿ ಬಯಲು ಸೀಮೆಯ ಬಯಲಾಟದ ಮೇಲೆ ಇಲ್ಲ.
ಇತ್ತೀಚೆಗಷ್ಟೇ ಅವರು ಉಮೇದಿನಿಂದ ಉಡುಪಿಯಲ್ಲಿ ಹೊಸದಾಗಿ ಯಕ್ಷ ರಂಗಾಯಣ ಹುಟ್ಟು ಹಾಕಿದರು. ಅದಕ್ಕಾಗಿ ಸಂತಸ ಪಡೋಣ. ಆದರೆ ಇರುವ ರಂಗಾಯಣಗಳು ನೆಟ್ಟಗಿರುವಂತೆ ನಿಗಾ ಇರಬೇಕಲ್ಲವೇ.? ದಾವಣಗೆರೆಯ ವೃತ್ತಿ ರಂಗಾಯಣ ಎಕ್ಕುಟ್ಟಿ ಹೋಗಿದೆ. ಕಳೆದೆರಡು ವರ್ಷಗಳಿಂದ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನ ಖಾಲಿ ಬಿದ್ದಿರುವುದು ಇವೆಲ್ಲ ಅವರ ಕಣ್ಣಿಗೆ ಕಾಣಿಸುತ್ತಿಲ್ಲವೇ.? ಕನ್ನಡ, ಸಂಸ್ಕೃತಿ ಇಲಾಖೆ ಸಚಿವರಿಗೆ ಉಡುಪಿ, ಕಾರ್ಕಳ ಕಾಣಿಸಬಲ್ಲದು ಬಯಲಾಟದ ಬಾಗಲಕೋಟ ಕಾಣಿಸುತ್ತಿಲ್ಲವೇಕೆ.? ಕನ್ನಡ ರಾಜರಾಜೇಶ್ವರಿ ಭಾವಚಿತ್ರಗಳನ್ನು ಸರಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಅನಾವರಣ ಮಾಡುವ ಕುರಿತು ಸೂಕ್ತವಾದ ನಿರ್ಧಾರ ಕೈಗೊಳ್ಳುವಲ್ಲಿಯೂ ಅಂತಹದ್ದೇ ವಿಳಂಬನೀತಿ. ನಾಡಗೀತೆಗೆ ಸಂಬಂಧಿಸಿದಂತೆ ಹಾಡುವ ಅವಧಿ ಮತ್ತು ಧಾಟಿಯ ಕುರಿತು ಸೂಕ್ತ ನಿರ್ಧಾರ ಆಗುವಲ್ಲಿಯೂ ಅಂತಹದ್ದೇ ವಿಳಂಬ.
ಮತ್ತೆ ಈಗ ಮರಳಿ ಪ್ರಶಸ್ತಿಗಳ ಘೋಷಣೆ ವಿಳಂಬದ ವಿಷಯಕ್ಕೆ ಬರೋಣ. ಬಹುಪಾಲು ಉನ್ನತ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನವೇ ಸರಕಾರ ಜರುಗಿಸುತ್ತದೆ. ಸರಕಾರ ನೇಮಿಸಿದ ಸಮಿತಿಗಳು ಪ್ರಶಸ್ತಿಗಳಿಗೆ ಅರ್ಹರಾದವರ ಪಟ್ಟಿಯನ್ನು ತಯಾರಿಸುತ್ತವೆ. ಹಾಗೆ ತಯಾರಾದ ವಿವರ ಪಟ್ಟಿ ಪ್ರಕ್ರಿಯೆಗಳನ್ನು ತನ್ನ ಮೂಲಕ ಇಲಾಖೆ ಅಂತಿಮವಾಗಿ ವಿಧಾನಸೌಧದ ಮೂರನೇ ಮಹಡಿಯ ಸಂಬಂಧಿಸಿದ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಹುಕುಮಿಗಾಗಿ ಕಾಯಬೇಕಾಗುತ್ತದೆ. ಅದು ಸರಕಾರದ ಕೆಲಸ. ಅಂದರೆ ದೇವರ ಕೆಲಸ. ದೇವರ ಕೆಲಸವೆಂದರೆ ಗೊತ್ತಲ್ಲ. ದೇವರು ರುಜು ಮಾಡಬೇಕಲ್ಲವೇ.? ಅಂತಹ ರುಜುವಿಗಾಗಿ ಪ್ರಶಸ್ತಿ ಕಡತಗಳು ತಿಂಗಳಾನುಗಟ್ಟಲೇ ಕೊಳೆತು, ಕೊಳೆತು ನಿರಾಸಕ್ತಿಯ ಸ್ಥಾವರದ ಶವಸ್ಥಿತಿ ತಲುಪುತ್ತವೆ.
ಅಷ್ಟೊತ್ತಿಗಾಗಲೇ ತಜ್ಞರು ಶಿಫಾರಸು ಮಾಡಿ ಕಳಿಸಿದ ಎಷ್ಟೋ ಮಂದಿ ಹಿರಿಯ ಸಾಹಿತಿ, ಕಲಾವಿದರು ಇಹಲೋಕ ಯಾತ್ರೆ ಮುಗಿಸಿ ಬಿಟ್ಟಿರುತ್ತಾರೆ. ಹಾಗೆ ಯಾತ್ರೆ ಮುಗಿಸಿ ಹೋದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗದು. ಹಾಗೊಂದು ವೇಳೆ ಮರಣೋತ್ತರ ನೀಡಿದರೆ ಅವರ ಸಂಬಂಧಿಗಳು ಪ್ರಶಸ್ತಿ ಸ್ವೀಕರಿಸಿ ಸಮಾಧಾನ ಪಡಬಹುದಷ್ಟೇ. ಆದರೆ ಸಾಹಿತಿ, ಕಲಾವಿದರು, ಇತರೆ ಸಾಧಕರು ಬದುಕಿದ್ದಾಗಲೇ ಸೂಕ್ತ ಸಮಯದಲ್ಲಿ ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಿ ಅವರು ಜೀವಂತವಿದ್ದಾಗಲೇ ಗೌರವಿಸಿದರೆ ಅದನ್ನು ಪಡೆದವರಿಗೂ ಮತ್ತು ನೀಡಿದ ಸರಕಾರಕ್ಕೂ ನೆಮ್ಮದಿ ಮತ್ತು ಗೌರವ ಪ್ರಾಪ್ತಿ.
ಮತ್ತೆ ಕೆಲವೊಮ್ಮೆ ಪ್ರಶಸ್ತಿಗಳನ್ನು ಘೋಷಣೆ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಿಂಗಳು, ವರ್ಷಗಟ್ಟಲೇ ಸುದೀರ್ಘವಾದ ವಿಳಂಬ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿತ ಇಲಾಖೆಯ ಮಂತ್ರಿ ಇಲ್ಲವೇ ಮುಖ್ಯಮಂತ್ರಿಯವರ ಉಪಸ್ಥಿತಿಯ ದಿನಾಂಕ, ಸಮಯದ ಹೊಂದಾಣಿಕೆಗೆ ತಿಂಗಳಾನುಗಟ್ಟಲೇ ಕಾಯಬೇಕಾದ ದಯನೀಯ ಮತ್ತು ಪರೀಕ್ಷೆಗೊಡ್ಡುವ ಅಸಹನೀಯ ಸ್ಥಿತಿ. ಹಾಗೆ ಕಾಯಬೇಕಾದ ಸ್ಥಿತಿ ಇಲಾಖೆ ಮತ್ತು ಸರಕಾರಿ ಅಧಿಕಾರಿಗಳಿಗೆ ಅನಿವಾರ್ಯ ಆಗಿರಬಹುದು. ಆದರೆ ಆ ರೀತಿ ಕಾಯುವ ಶಿಕ್ಷೆಯನ್ನು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಹಿರಿಯ ಚೇತನಗಳು ಯಾಕೆ ಅನುಭವಿಸಬೇಕು.?
ಈ ಹಿಂದೊಮ್ಮೆ ಹೀಗಾಯ್ತು :
ಕರ್ನಾಟಕ ಸರಕಾರವು ರಂಗಭೂಮಿ ಕ್ಷೇತ್ರದಲ್ಲಿ ಸಾಧನೆಗೈಯ್ದವರನ್ನು ಗುರುತಿಸಿ ಗೌರವಿಸುವ ಡಾ. ಗುಬ್ಬಿ ವೀರಣ್ಣ ಮತ್ತು ಬಿ. ವಿ. ಕಾರಂತ ಪ್ರಶಸ್ತಿ ಆಯ್ಕೆ ಸಮಿತಿಗೆ ನಾನು ಸದಸ್ಯನಾಗಿದ್ದೆ. ನಮ್ಮ ಸಮಿತಿಯಿಂದ ಆ ಎರಡೂ ಪ್ರಶಸ್ತಿಗಳಿಗೆ ಅರ್ಹರನ್ನು ಆಯ್ಕೆ ಮಾಡಿ ಇಲಾಖೆ ಮೂಲಕ ಸರಕಾರಕ್ಕೆ ಕಳಿಸಲಾಯಿತು. ಸಂಬಂಧಿಸಿದ ಮಂತ್ರಿವರ್ಯರಿಗೆ ಆ ಬಗ್ಗೆ ಹೆಚ್ಚು ಆಸಕ್ತಿ ಇರದೇ ತನಗಿದ್ದ ಮತ್ತೊಂದು ಖಾತೆಯ ಬಗ್ಗೆ ಮಹತ್ವದ ಆಸಕ್ತಿ. ಹೀಗಾಗಿ ಅವರು ಈ ಕುರಿತು ಬೇಕೋ ಬೇಡವೋ ಎಂಬಂತಿದ್ದರು. ಇನ್ನೇನು ತಮ್ಮ ಸರಕಾರದ ಅವಧಿ ಮುಗಿಯುತ್ತಾ ಬಂದರೂ ಪ್ರಶಸ್ತಿ ಶಿಫಾರಸ್ಸಿನ ಕಡತದ ಕಡೆಗೆ ಅವರು ಕಣ್ಣುಹಾಯಿಸುವ ಸೌಜನ್ಯ ಕೂಡಾ ತೋರಲಿಲ್ಲ.
ದುರಂತದ ಸಂಗತಿಯೆಂದರೆ ನಾವು ಶಿಫಾರಸು ಮಾಡಿ ಕಳಿಸಿದ ರಂಗಸಂಸ್ಕೃತಿ ಸಾಧಕಿ, ಹಿರಿಯ ರಂಗಚೇತನ ತನಗೆ ಪ್ರಶಸ್ತಿ ಘೋಷಣೆಯ ಅಧಿಕೃತ ಸುದ್ದಿಯನ್ನು ಸಹಿತ ಕೇಳದೇ ಇಹಲೋಕ ಯಾತ್ರೆ ಮುಗಿಸಿತು. ಅವರಿಗೆ ಮರಣೋತ್ತರವೂ ದೊರಕಲಿಲ್ಲ. ಇದು ಅಕ್ಷರಶಃ ವಿಳಂಬ ಗತಿಯಿಂದಲೇ ಆಗಿರುವ ಘೋರ ಅನ್ಯಾಯ. ಇದೆಲ್ಲ ಈಗ ಹೇಳಲು ಬಲವಾದ ಸಂಗತಿಯೇನೆಂದರೆ ಈಗ್ಗೆ ಏಳು ತಿಂಗಳ ಹಿಂದೆಯೇ ಈಗಿನ ಸರಕಾರವೇ ನೇಮಿಸಿದ ಅತ್ಯುನ್ನತ ಪ್ರಶಸ್ತಿಗಳ ಆಯ್ಕೆ ಸಮಿತಿ ಎರಡು ವರ್ಷಗಳ ಪ್ರಶಸ್ತಿಗಳನ್ನು ಶಿಫಾರಸು ಮಾಡಿ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಸಿತು.
ಹಾಗೆ ಪ್ರಶಸ್ತಿಗಳ ಆಯ್ಕೆ ಪಟ್ಟಿಯ ಶಿಫಾರಸ್ಸು ಸಲ್ಲಿಸಿ ಅರ್ಧ ವರ್ಷವೇ ಕಳೆದಿದೆ. ಪ್ರಾಯಶಃ ಪ್ರಭುತ್ವಕ್ಕೆ ಆ ಶಿಫಾರಸುಗಳಿಗೆ ಠಸ್ಸೆ ಒತ್ತುವ ಸಮಯ ಇನ್ನೂ ಬಂದಿಲ್ಲವೆಂದರೆ.? ಮಂತ್ರಿ ಮಹೋದಯರ ಸಮ್ಮತಿಗೆ ಇನ್ನೆಷ್ಟು ತಿಂಗಳುಗಳು ಬೇಕು.? ತಜ್ಞ ಸಮಿತಿ ಶಿಫಾರಸು ಮಾಡಿದ ಹಿರಿಯ ಸಾಹಿತಿ, ಕಲಾವಿದರು ಇತರೆ ಸಾಂಸ್ಕೃತಿಕ ಲೋಕದ ಸಾಧಕರು ಬದುಕಿರುವಾಗಲೇ ಸೂಕ್ತ ಸಮಯದಲ್ಲಿ ಪ್ರಶಸ್ತಿ ಘೋಷಣೆ ಮಾಡಬೇಕು, ಮತ್ತು ಅಂತಹ ಲೋಕ ಚೇತನರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಹೆಚ್ಚು ಔಚಿತ್ಯಪೂರ್ಣ.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.