ಸಂಘರ್ಷ, ಸಾಮರಸ್ಯಗಳೇ ಕಾದಂಬರಿಯ ಕೇಂದ್ರ ಬಿಂದು


“ಬಯಲು ಸೀಮೆಯ ಬ್ಯಾಂಕ್ ಒಂದರಲ್ಲಿ ಉದ್ಯೋಗ ಪಡೆದು, ಅಲ್ಲಿ ಹೋಗಿ ಕೆಲವು ತಿಂಗಳ ಕಾಲ ನೆಲೆಸಿದಾಗ, ಎದುರಿಸಬೇಕಾಗಿ ಬಂದ ಸಂಘರ್ಷ ಮತ್ತು ಸಾಮರಸ್ಯಗಳೇ, ಈ ಕಾದಂಬರಿಯ ಕೇಂದ್ರ ಬಿಂದು,” ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಶಶಿಧರ ಹಾಲಾಡಿ ಅವರ ‘ಅಬ್ಬೆ’ ಕಾದಂಬರಿ ಕುರಿತು ಬರೆದ ವಿಮರ್ಶೆ.

"ಅಬ್ಬೆ"ಯ ಸಂಕೀರ್ಣ ರೂಪಕದ ಮೂಲಕ ಬದುಕಿನ ವಿವಿಧ ವಿನ್ಯಾಸಗಳನ್ನು, ಈ ಕಾದಂಬರಿಯಲ್ಲಿ ಶೋಧಿಸುವ ಪ್ರಯತ್ನ ಕೈಗೂಡಿದೆ. ಅವನ್ನು ನಾಲ್ಕು ನೆಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.1: ವೃತ್ತಿ ಜೀವನದ ಭಾಗವಾಗಿ. 2: ಪರಿಸರದ ಅನ್ವೇಷಣೆಯ ಮೂಲಕ. 3: ಸಮಾಜ ಜೀವನದಲ್ಲಿ 4: ವ್ಯಕ್ತಿಗಳ ವರ್ತನಾ ವಿನ್ಯಾಸದಲ್ಲಿ.

1: ವೃತ್ತಿ ಜೀವನದ ಭಾಗವಾಗಿ: ದಕ್ಷಿಣ ಕನ್ನಡ ಮೂಲದ ವ್ಯಕ್ತಿ ಶಿವರಾಂ, ಬಯಲು ಸೀಮೆಯ ಬ್ಯಾಂಕ್ ಒಂದರಲ್ಲಿ ಉದ್ಯೋಗ ಪಡೆದು, ಅಲ್ಲಿ ಹೋಗಿ ಕೆಲವು ತಿಂಗಳ ಕಾಲ ನೆಲೆಸಿದಾಗ, ಎದುರಿಸಬೇಕಾಗಿ ಬಂದ ಸಂಘರ್ಷ ಮತ್ತು ಸಾಮರಸ್ಯಗಳೇ, ಈ ಕಾದಂಬರಿಯ ಕೇಂದ್ರ ಬಿಂದು. ಸಂಘರ್ಷಕ್ಕೆ ಕಾರಣವಾಗುವ ಅಂಶಗಳು: ಬ್ಯಾಂಕ್ ಮ್ಯಾನೇಜರ್ ನ ನಿಷ್ಕಾರಣ ದ್ವೇಷ, ಭ್ರಷ್ಟಾಚಾರ ಮತ್ತು ಲಂಪಟತನಗಳೊಂದಿಗೆ ಮುಖಾಮುಖಿಯಾಗಬೇಕಾಗಿ ಬಂದ ಸಂನಿವೇಶಗಳು. ಯಾವುದೇ ಕಾರಣವಿಲ್ಲದೆ ಇವನ ವಿರುದ್ಧ ಕೇಂದ್ರ ಕಛೇರಿಗೆ ಇವನ ವಿರುದ್ಧ ವರದಿ ಸಲ್ಲಿಸಿ, ಕಿರುಕುಳ ನೀಡುತ್ತಿದ್ದ, ವಿನಾಕಾರಣ ಇವನಿಗೆ ಅವಮಾನ ಮಾಡುವ, ಅಧಿಕಾರದ ದುರುಪಯೋಗ ಮಾಡುವವರಿಗೆ ನಿದರ್ಶನವಾಗಿ, ಈ ಮ್ಯಾನೇಜರ್ ಬರುತ್ತಾನೆ. ಇವನು ನ್ಯಾಯಪರ, ಸಹಾನುಭೂತಿ ಪರವಾಗಿ ಇರುವುದೇ ಅವನಿಗೆ ಕಾಲ್ತೊಡಕು. ಪೂಜಾರಿ ಸಾಲವನ್ನು, ದಲ್ಲಾಳಿಯ ಮೂಲಕ ಸಿಕ್ಕವರಿಗೆಲ್ಲ ಹಂಚಿ, ಆ ಮೂಲಕ ಲಂಚ ಸ್ವೀಕಾರ ಮಾಡುವುದು ಅವನ ಭ್ರಷ್ಟಾಚಾರಕ್ಕೆ ಸಾಕ್ಷಿ. ಅದರಿಂದ ಕಾರು ಕೊಳ್ಳುವ, ಅದರಲ್ಲಿ ಉಳ್ಳವನ ಹೆಂಡತಿಯನ್ನು ತನ್ನವಳನ್ನಾಗಿಸಿಕೊಂಡು, ಅವಳಿಗೆ ಅಗತ್ಯವಿಲ್ಲದಿದ್ದರೂ , ಪೂಜಾರಿಯ ಸಾಲ ಮಂಜೂರು ಮಾಡಿ, ಅದನ್ನು ಇವನಿಗೆ ಕೊಡಲು ಹೇಳಿ, ಅವಳೇ ಇವನ ಕೈ ಹಿಡಿದುಕೊಂಡು, ಇವನೇ ಅವಳನ್ನು ಮುಟ್ಟಿದನೆಂದು, ಸುಳ್ಳು ಅರ್ಜಿಯನ್ನು ಅವಳ ಕೈಯಲ್ಲಿ ಬರೆಸಿ, ಅದನ್ನು ಕೇಂದ್ರ ಕಛೇರಿಗೆ ಕಳಿಸಿ, ಇವನ ಪ್ರೊಬೇಷನರಿ ಅವಧಿ ಮುಗಿಯುವ ಮುನ್ನವೇ, ಇವನನ್ನು ಇವನಿಗೆ ಬೇಡದ ದೂರದ ಜಾಗಕ್ಕೆ ಹೋಗುವಂತೆ ಮಾಡುತ್ತಾನೆ. ಇವನ ಪರವಾಗಿ ನಿಂತ ಬ್ಯಾಂಕ್ ಯೂನಿಯನ್ ಪ್ರತಿನಿಧಿ, ಮ್ಯಾನೇಜರ್ ವಿರುದ್ಧ ಠೇವಣಿ ಇಟ್ಟವನ ಹಣವನ್ನು,ಅವನ ಒಪ್ಪಿಗೆ ಇಲ್ಲದೆ ಸಾಲದ ಕಂತಿಗೆ ವರ್ಗಾವಣೆ ಮಾಡಿದನೆಂದು, ಕೇಂದ್ರ ಕಛೇರಿಗೆ ಅರ್ಜಿ ಬರೆಸಿ, ಅವನನ್ನು ದೂರದ ಊರಿಗೆ ಹೋಗುವಂತೆ ಮಾಡುತ್ತಾನೆ. ಇವನಿಗೆ ಅಪರಾಧ ಮಾಡದೆ ಶಿಕ್ಷೆಯಾಗಿ ವರ್ಗಾವಣೆ ಆದರೆ, ಅವನ ಅಪರಾಧಕ್ಕೆ ಶಿಕ್ಷೆಯಾಗಿ ವರ್ಗಾವಣೆ. ಹಾಗಾದರೆ ಅಪರಾಧ ಮತ್ತು ನಿರಪರಾಧಗಳ ನಡುವೆ ಅಂತರ ಎಲ್ಲಿದೆ ?ಎಂಬ ಮೂಲಭೂತ ಪ್ರಶ್ನೆಯನ್ನು ಈ ಮೂಲಕ ಸ್ವತಃ ಬ್ಯಾಂಕ್ ಉದ್ಯೋಗಿಯಾಗಿದ್ದ ಈ ಲೇಖಕರು ಎತ್ತುವುದು ಅವರ ವಸ್ತುನಿಷ್ಠ ಸಂಕೀರ್ಣ ಗ್ರಹಿಕೆಗೆ ಸಾಕ್ಷಿ.

ಸಾಮರಸ್ಯದ ನೆಲೆ: ಇವರ ನ್ಯಾಯ ಪರತೆ ಮತ್ತು ಆಂತರಿಕ ನೈತಿಕ ನಿಯಮಗಳೇ, ಇವರಿಗೆ ಇತರ ಸಹೋದ್ಯೋಗಿಗಳ ಜೊತೆಗೆ ಸಾಮರಸ್ಯದ ಸಂಬಂಧ ಸ್ಥಾಪಿಸಿ, ಸೌಹಾರ್ದತೆಯನ್ನು ಉಳಿಸುವ ಗಳಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ಅಲೆಮಾರಿಯಾದ ಕೆಂಚನಿಗೆ ಸಾಲ ಕೊಡಿಸುವುದು ಇವರ ನ್ಯಾಯ ಪರತೆಗೆ ಸಾಕ್ಷಿ,ಆದರೆ ಸಹೋದ್ಯೋಗಿಗಳು ಎಷ್ಟೇ ಬಲವಂತ ಮಾಡಿದರೂ, ಅವರ ಪಾರ್ಟಿಗಳಲ್ಲಿ ಪಾಲುಗೊಳ್ಳಲು ನಿರಾಕರಿಸವುದು, ಇವರ ನೈತಿಕ ನಿಯಮಗಳ ಪಾಲನೆಗೆ ನಿದರ್ಶನ.

2: ಪರಿಸರ ಅನ್ವೇಷಣೆಯ ಮೂಲಕ: ಇವರು ಬಂದ ಕರಾವಳಿ ,ಬಯಲು ಭೂಮಿಯಲ್ಲಿ ಕೂಡ, ಇವರ ಪರಿಸರ ಅನ್ವೇಷಣೆಗೆ ಪ್ರೇರಣೆ ನೀಡಿತು. ಇದರಿಂದಾಗಿ ಇವರು ಅಲ್ಲಿನ ಗರುಡನ ಗಿರಿ ಹತ್ತುವುದು, ಅಲ್ಲಿ ಮೇಕೆಗಳನ್ನು ಮೇಯಿಸುವ ಮೂಲಕ ಒಮ್ಮೆ ಕಾಡುಪ್ರದೇಶವಾಗಿದ್ದ ಅದು ಇಂದು ಬರಡು ಭೂಮಿಯಾಗಲು, ಕಾರಣವಾಗಿರುವುದನ್ನು ಕಂಡು, ಇವರ ಅಪಾರವಾದ ಕಾಳಜಿಗೆ ದಾರಿಮಾಡಿಕೊಡುತ್ತದೆ. ಅಲ್ಲಿನ ಕಾಲೇಜಿನ ಪ್ರಾಂಶುಪಾಲರಾಗಿ ಬಂದ ಪರಿಸರ ತಜ್ಞರಾದ ಡಾಕ್ಟರ್ ಕಲ್ಲೂರಾಯರು( ಕರ್ವಾಲೋ ಇಲ್ಲಿಗೆ ನೇರವಾಗಿ ಇಳಿದು ಬಂದಂತೆ, ಇವನ ಕಾಳಜಿಗೆ ನೀರೆರೆದು, ಅಲ್ಲಿನ ದು:ಸ್ಥಿತಿಯ ಮೇಲೆ ಬೆಳಕು ಚೆಲ್ಲಲು ಇವನನ್ನು ಪ್ರೇರೇಪಿಸುವ, ಅದರ ಫೋಟೋ ತೆಗೆಯಲು, ರಾಜಧಾನಿಯ ಪತ್ರಿಕೆಯಲ್ಲಿ ಅದರ ಸಮೇತ ಲೇಖನ ಪ್ರಕಟಿಸಲು ಕಾರಣಕರ್ತರಾಗುತ್ತಾರೆ. ಅದರ ಫಲವಾಗಿ ಇವನು ಬರೆದ ಲೇಖನ ಚಿತ್ರ ಸಮೇತ ಪ್ರಕಟವಾಗಿ, ವರ್ಗಾವಣೆಯಿಂದ ಇವನು ಬೇರೆ ಊರಿಗೆ ಹೋಗುವ ವೇಳೆಗೆ, ಗರುಡನ ಗಿರಿ ರಿಸರ್ವ್ ಫಾರೆಸ್ಟ್ ಸುತ್ತ ಸರ್ಕಾರದ ವತಿಯಿಂದ ಬೇಲಿ ಹಾಕುವ ಪ್ರಕ್ರಿಯೆಗೆ ಸಾಕ್ಷಿ ಆಗುತ್ತಾನೆ. ಹೀಗೆ ಇವನ ಪರಿಸರ ಪ್ರೇಮ, ಬರಡು ಭೂಮಿಯನ್ನು ಮತ್ತೆ ಚಿಗುರಿಸಲು ಸಾಧ್ಯ, ಎಂಬ ಇತ್ಯಾತ್ಮಕ ಸಾಧನೆಗೆ ಸಾಕ್ಷಿ ನುಡಿಯುತ್ತದೆ.

3: ಸಮಾಜ ಜೀವನದಲ್ಲಿ; ಇಲ್ಲಿಗೆ ಬಂದ ಹೊಸತರಲ್ಲಿ ಇಲ್ಲಿನ ಜನರಲ್ಲಿ ಹಾಸುಹೊಕ್ಕಾಗಿ ಇರುವ ಅವೈಜ್ಞಾನಿಕ ನಂಬಿಕೆಗಳು, ಇವನ ವಿಸ್ಮಯ ಮತ್ತು ವಿಷಾದಗಳಿಗೆ ಕಾರಣವಾಗುತ್ತದೆ. ಇದಕ್ಕೆ ಅಬ್ಬೆ ಎನ್ನುವ ಜೇಡ ಕಚ್ಚಿದರೆ ಹೆಬ್ಬಾಗಿಲ ತನಕ ಬರುವಷ್ಟರಲ್ಲಿ ಆ ವ್ಯಕ್ತಿ ಸಾಯುತ್ತಾನೆ ಎಂಬ ಅವರ ನಂಬಿಕೆ. "ಅದು ಕಚ್ಚಿದ್ದು ಯಾರಾದರೂ ನೋಡಿದಿರಾ" ಎಂಬ ಪ್ರಶ್ನೆಗೆ ಯಾರಲ್ಲೂ ನೇರ ಉತ್ತರ ಇಲ್ಲ. ಎಲ್ಲಾ ಅವರಿವರ ಹೇಳಿಕೆಗಳನ್ನು ಆಧರಿಸಿದ ಊಹಾಪೋಹಗಳೇ. ಇವನ ಈ ಕುತೂಹಲಕ್ಕೆ ಕಾರಣವೆಂದರೆ, ಇವನು ವಿಜ್ಞಾನದ ವಿದ್ಯಾರ್ಥಿಯಾಗಿದ್ದುದು. ಆ ಊರಿಗೆ ಬಂದ ಪರಿಸರ ತಜ್ಞ ಕಲ್ಲೂರಾಯರನ್ನು ಇವನು ವಿಚಾರಿಸಿದಾಗ, ಕಚ್ಚಿದರೆ ಸಾಯುವಷ್ಟು ವಿಷಕಾರಿಯಾದ ಜೇಡ ಭಾರತದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಅವರ ಮಾತನ್ನು ಇವನು ಬಿಟ್ಟರೆ ಬೇರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಎನ್ನುವುದು ಆ ನಂಬಿಕೆ ಎಷ್ಟು ಆಳವಾಗಿ ಆ ಸಮಾಜದಲ್ಲಿ ಬೇರು ಬಿಟ್ಟಿದೆ ಎಂದರೆ, ಯಾರು ಯಾವುದೇ ಕಾರಣದಿಂದ ಸತ್ತರೂ, ಅದು ಅಬ್ಬೆ ಕಚ್ಚಿದ್ದರಿಂದ ,ಎಂದು ಮುಗ್ಧವಾಗಿ ನಂಬುವಷ್ಟರ ಮಟ್ಟಿಗೆ.

4: ವ್ಯಕ್ತಿಗಳ ವರ್ತನಾ ವಿನ್ಯಾಸದಲ್ಲಿ: ಇವರ ಸಂಪರ್ಕಕಕ್ಕೆ ಬರುವ ಎಲ್ಲಾ ಪಾತ್ರಗಳಿಗೆ ಅನ್ಯಾನ್ಯ ಮುಖಗಳು. ಬ್ಯಾಂಕ್ ಮ್ಯಾನೇಜರ್ ಮೊದಲುಗೊಂಡು, ಎಲ್ಲರೂ ಒಂದೆರಡು ಹೊರತು ಪಡಿಸಿದರೆ. ಮ್ಯಾನೇಜರ್ ಉಳ್ಳವರ ಜೊತೆಯಲ್ಲಿ ಒಂದು ಬಗೆಯಲ್ಲಿ ವರ್ತಿಸಿದರೆ, ಇಲ್ಲದವರ ಬಳಿ ಇನ್ನೊಂದು ಬಗೆ. ಸಹೋದ್ಯೋಗಿಯನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಲು ಅವರು ಹಿಂಜರಿಯುವುದಿಲ್ಲ. ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ವರ್ಗಾವಣೆಗೆ ಕಾರಣರಾದರು. ಇವರ ಮನೆಯ ಮಾಲೀಕರು ಕೂಡ. ಹೊಯ್ಸಳ ರ ಕಾಲದ ಚಿನ್ನದ ನಾಣ್ಯಗಳನ್ನು ಗುಟ್ಟಾಗಿ ಕದ್ದವರಿಂದ ಖರೀದಿಸವರು. ಅಲೆಮಾರಿ ಮುಗ್ಧನಂತೆ ಕಾಣುವ ಕೆಂಚಪ್ಪ, ಚಿಪ್ಪು ಹಂದಿಯನ್ನು ಹಿಡಿದು ತಂದು ಕುಪ್ಪೂರು ತಿಮ್ಮಪ್ಪನಿಗೆ ಮಾರಿ ಹಣ ಮಾಡುವುದು. ಅದನ್ನು ತಂದು ಬ್ಯಾಂಕ್ ನಲ್ಲಿ ಠೇವಣಿ ಇಡುತ್ತಾನೆ.ಮತ್ತು ತಾನು ಜೇನು ಮಾರಾಟ ಮಾಡಿ ಬದುಕುವವ ಎಂದು ತೋರಿಸಿಕೊಳ್ಳುತ್ತಾನೆ.

ಇದೇ ರೀತಿ ಹೆಂಡತಿ ಮಕ್ಕಳನ್ನು ಬಿಟ್ಟು ,ಈ ಹಳ್ಳಿಯಲ್ಲಿ ಒಬ್ಬರೇ ಬದುಕುವ ನರಸಿಂಹಯ್ಯ ಎನ್ನುವವರು. ಇವರು ಊರಿಗೆ ವರ್ಗಾವಣೆ ಆಗಿ ಹೊರಡುವ ಸಂದರ್ಭದಲ್ಲಿ, ಕುಪ್ಪೂರು ತಿಮ್ಮಪ್ಪ ಇವರ ಮನೆಯಲ್ಲಿ ಸತ್ತದ್ದಕ್ಕೆ ಕಾರಣ ತಿಳಿಯ ಬಯಸಿದಾಗ, "ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈಗ ಸಿದ್ಧವಾಗಿದ, ಹಾಗೆ ಇರಲಿ ಬಿಡಿ, ಕೆಲವು ವಿಷಯಗಳ ಮೂಲವನ್ನು ತಿಳಿಯದಿರುವುದು ಒಳ್ಳೆಯದು" ಎಂದು ಅದಕ್ಕೆ ಆಧ್ಯಾತ್ಮಿಕ ಮುಸುಕು ತೊಡಿಸುತ್ತಾರೆ. ಈ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಬ್ಬೆಯ ರೂಪಕಗಳು. ಅದಕ್ಕಿಂತ ಹೆಚ್ಚು ವಿಷ ಹೊಂದಿರುವ ವಿಷಜಂತುಗಳು ಎಂಬ ಧ್ವನಿಯನ್ನು ಹೊರಡಿಸುವಲ್ಲಿ ಕಾದಂಬರಿ ಸಫಲವಾಗಿದೆ.

ಇವರನ್ನು ಹೊರತುಪಡಿಸಿದರೆ, ಸರಿಯಾಗಿ ಉದ್ಯೋಗ ಇಲ್ಲದ ನಾಗೇಶ್ ಮತ್ತು ಅವರ ಅಂತ: ಕರಣದ ತಾಯಿ, ಇವರನ್ನು ಸದಾ ತನ್ನ ಕುಡಿವ ಸಹೋದ್ಯೋಗಿಗಳಿಂದ ರಕ್ಷಿಸುವ ದಪ್ತರ್ ತುಕಾರಾಮ, ಪರಿಸರ ತಜ್ಞ ಡಾಕ್ಟರ್ ಕಲ್ಲೂರಾಯ ಮತ್ತು ಎಲ್ಲರಿಗಿಂತ ಇವರ ಜೊತೆಯಲ್ಲಿ ಕ್ರಿಕೆಟ್ ಆಟಕ್ಕೆ ಸೇರುತ್ತಿದ್ದ ಉತ್ಸಾಹಿ ಯುವಕರು - ವರ್ಗಾವಣೆಗೊಂಡು ಇವರು ಬಸ್ ನಲ್ಲಿ ಹೋಗುವಾಗ, ಬಸ್ ನ್ನು ಅಡ್ಡ ಹಾಕಿ, ನಿಲ್ಲಿಸಿ ಇವರಿಗೆ ಒಂದು ಹೊಸ ಬ್ಯಾಟನ್ನು ಉಡುಗೊರೆಯಾಗಿ ಕೊಟ್ಟು ಇವರಿಗೆ ಶುಭ ಹಾರೈಸಿದಾಗ ನಿರೂಪಕ ಭಾವುಕರಾಗುತ್ತಾರೆ.

ಈ ಕಾದಂಬರಿಯ ಮೂಲಕ ಕಲ್ಕೆರೆ ಎಂಬ ಊರನ್ನು ಕೇಂದ್ರವಾಗಿಟ್ಟುಕೊಂಡು, ಮನುಷ್ಯ ಸ್ವಭಾವದ ಸಂಕೀರ್ಣತೆಗೆ ಕನ್ನಡಿ ಹಿಡಿವಲ್ಲಿ ಸಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು. "ಅಬ್ಬೆ" ಕಾದಂಬರಿ ಕಳುಹಿಸಿದ ಪ್ರಕಾಶಕರಿಗೆ ಮತ್ತು ಲೇಖಕರಿಗೆ ವಂದನೆ ಅಭಿನಂದನೆ.

MORE FEATURES

ಹಳ್ಳಿಯ ಬದುಕನ್ನು ಚಿತ್ರಿಸುವ ಕೆಲವು ಸುಂದರ ತುಣುಕುಗಳಿವೆ

02-01-2025 ಬೆಂಗಳೂರು

“ಸಮಾಜೋ ಸಾಂಸ್ಕೃತಿಕ ಸಂರಚನೆಯನ್ನು ಆಳುತ್ತಿರುವ ಊಳಿಗಮಾನ್ಯ ಪದ್ಧತಿಯ ಪ್ರಜ್ಞೆ ಮತ್ತು ಅದರಲ್ಲಿ ಆಳವಾಗಿ ಬೇರೂರಿ...

ಹಾದು ಬಂದ ದಾರಿಯ ಮೇಲೆ ಬೆಳಕು ಚೆಲ್ಲುತ್ತದೆ

02-01-2025 ಬೆಂಗಳೂರು

"ಆ ಶಾಲೆಯ ಸಿಬ್ಬಂದಿಯೊಂದಿಗೆ ಅವಳು ತಾತ್ಕಾಲಿಕ ಸಂಬಂಧ ಉಂಟಾಗಿ, ಅದು ಊರಿನವರ ಮಾತುಕತೆಗೆ ಆಹಾರವಾಗುತ್ತದೆ. ಕಿಡಿಗ...

ಈಗಲೂ ಇದು ನನಗೊಂದು ಅಚ್ಚರಿಯ ಸಂಗತಿ

02-01-2025 ಬೆಂಗಳೂರು

“ಈ ಕೃತಿಯಲ್ಲಿ ಕಾವ್ಯ, ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ, ಸಂಶೋಧನೆ, ಸಂಗೀತ, ವ್ಯಕ್ತಿಚಿತ್ರ ಮೊದಲಾದ ವಿಷಯಗಳ...