Date: 17-09-2022
Location: ಬೆಂಗಳೂರು
ಸಿದ್ದಿ ಸಮುದಾಯದವರೂ ಸಹ ನಮ್ಮ ಸಮಾಜದ ಒಂದು ಭಾಗ ಎಂಬುದನ್ನು ಸರ್ಕಾರ ಮರೆಯಬಾರದು. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಈ ಸಮುದಾಯದ ಕಡೆ ಕಾಳಜಿ ವಹಿಸಬೇಕಿದೆ ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ರಾಜೇಶ್ವರಿ ಸಿದ್ದಿ ಅವರ ಸಾಧನೆಗಳ ಕುರಿತು ಬರೆದಿದ್ದಾರೆ.
ಇಡೀ ಸಿದ್ದಿ ಸಮುದಾಯದಲ್ಲಿ ಯಾರಿಗೆ ಏನೇ ಸಮಸ್ಯೆ, ತೊಂದರೆ ಆದರೂ ಕೂಡ ಜನರು ಮೊದಲು ಭೇಟಿ ಮಾಡುವುದು ಇವರನ್ನು. ಅದೆಷ್ಟೋ ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತೆಯಾಗಿ, ಸಹಾಯ ಮಾಡುತ್ತ ಬಂದಿದ್ದಾರೆ. ರಂಗಭೂಮಿ, ಹಾಡು, ಸಂಗೀತ, ನೃತ್ಯ, ಬೀದಿ ನಾಟಕಗಳಲ್ಲಿ ನಿರಂತರವಾಗಿ ಭಾಗವಹಿಸುತ್ತ ಸಮಾನ ಮನಸ್ಕರ ತಂಡಗಳನ್ನು ಕಟ್ಟಿಕೊಂಡು ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಸಿದ್ದಿ ಸಮುದಾಯದ ಸಾಂಪ್ರದಾಯಿಕ ನೃತ್ಯವಾದ ಡಮಾಮಿಯ ವೈವಿಧ್ಯತೆಯನ್ನು, ಅವರ ಸಂಸ್ಕೃತಿಯನ್ನು ಅಳಿದು ಹೋಗುತ್ತಿದ್ದ ನೃತ್ಯವನ್ನು ಹೊರ ಜಗತ್ತಿಗೆ ಪರಿಚಯಿಸುತ್ತಿದ್ದಾರೆ. ಈ ರೀತಿಯ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗಬಾರದು ಎಂದು ನಿರ್ಧರಿಸಿ ಯುವಕರನ್ನು ಕಟ್ಟಿಕೊಂಡು ಮಂಗಳೂರು, ಬೆಂಗಳೂರು, ಜೋಯಿಡ ಇತ್ಯಾದಿ ಎಲ್ಲಾ ಕಡೆ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದ್ದಾರೆ. ತಾಳ್ಮೆಯಿಂದ, ಪ್ರೀತಿಯಿಂದ ವಯಸ್ಸಾದವರಿಗೆ, ಅಸಹಾಯಕರಿಗೆ ಸಹಾಯ ಮಾಡುತ್ತಾ ತನ್ನ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ. ಅವರು ಯಲ್ಲಾಪುರದ 42 ವರ್ಷದ ರಾಜೇಶ್ವರಿ ಸಿದ್ದಿ. ಅವರ ಜೀವನಯಾನ ಅವರ ಮಾತುಗಳಲ್ಲಿ ನಿಮ್ಮ ಓದಿಗೆ.
*
'14ನೇ ವಯಸ್ಸಿಗೆ ಕೃಷ್ಣ ಸಿದ್ದಿ ಎಂಬುವವರ ಜೊತೆಗೆ ಮದುವೆಯಾಗಿ 1993ನೇ ಇಸವಿಯಲ್ಲಿ ಕೆಳಾಸೆ ಗ್ರಾಮ, ಯಲ್ಲಾಪುರ ತಾಲ್ಲೂಕ್, ಶಿರಸಿ, ಉತ್ತರ ಕನ್ನಡಕ್ಕೆ ಬಂದೆ. ಆಗ ಈ ಊರಲ್ಲಿ ಯಾರಿಗೂ ಸ್ವಲ್ಪ ಕೂಡ ಅಕ್ಷರ ಜ್ಞಾನವೇ ಇರಲಿಲ್ಲ. ಆ ಸಮಯದಲ್ಲಿ ಇಡಗುಂಜಿ ಗ್ರಾಮ ಪಂಚಾಯತಿಯಿಂದ ನಮ್ಮ ಹಳೆಯ ಶಾಲೆಗೆ ಒಬ್ಬರು ಗುರುಗಳು ಅರಬೈಲ್ ನಿಂದ ಸೈಕಲ್ಲಿನಲ್ಲಿ ಮಕ್ಕಳಿಗೆ ಕಲಿಸಬೇಕು ಎಂದು ಬರುತ್ತಿದ್ದರು. ಮತ್ತೆ ನಿಮ್ಮಲ್ಲಿ ಯಾರಾದರೂ ದೊಡ್ಡವರಿಗೆ ಅಕ್ಷರ ಕಲಿಸುವವರಿದ್ದರೆ ಕಲಿಸಿ ಎಂದರು. ನಾನು ಆರನೇ ತರಗತಿಯವರೆಗೆ ಓದಿದ್ದೆ. ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ ಎಲ್ಲದರಲ್ಲೂ ಮುಂದಿದ್ದೆ. ಹಾಗಾಗಿ ನಾನು ಕಲಿಸುತ್ತೇನೆ ಎಂದು ಹೇಳಿ ಇಡಗುಂಜಿಗೆ ಹೋಗಿ ಅರ್ಜಿ ತುಂಬಿ ಬಂದೆ. ನಂತರ ಮರದ ಫ್ರೇಮ್ ಹಾಕಿದ 20 ಮಣ್ಣಿನ ಪಾಟಿಗಳನ್ನು, 20 ಪುಸ್ತಕಗಳನ್ನು ಕೊಟ್ಟರು. ಆ ಪುಸ್ತಕದಲ್ಲಿ ಒಂದು ಹಾಡಿತ್ತು. 'ಭಾರತ ದೇಶಕ್ಕೆ ಸ್ವಾತಂತ್ರ ಬಂತು 47ನೇ ವರುಷದಲಿ ಅಕ್ಷರ ಮಾತ್ರ ಕಲಿಯಲೆ ಇಲ್ಲ ತೊಂಬಾತ್ತಾದರು ವರ್ಷದಲಿ' ಈ ಹಾಡು ಇನ್ನೂ ನನಗೆ ನೆನಪಿದೆ. ಸುಮಾರು ಹದಿನೈದು ಜನ ಕಲಿಯಲು ಬರುತ್ತಿದ್ದರು. ನಂತರ ಅವರನ್ನು ಪ್ರತಿದಿನ ನಮ್ಮ ಮನೆಗೆ ಕರೆಸಿ ಒಂದು ತಾಸು ಅಕ್ಷರಗಳನ್ನು ಕಲಿಸುತ್ತಿದ್ದೆ. ಅವರೆಲ್ಲ ಅಕ್ಷರಗಳನ್ನು ಕಲಿತು ಹಸ್ತಾಕ್ಷರ ಹಾಕುವುದನ್ನು ಕಲಿತರು. ಅಲ್ಲಿಂದ ನನ್ನ ಪ್ರಯಾಣ ಸಮಾಜ ಸೇವೆಯತ್ತ ಶುರುವಾಯಿತು'.
'ಮೊದಲು ನಮ್ಮ ಕೆಳಾಸೆಯಲ್ಲಿ ಶಾಲೆ ಇರಲಿಲ್ಲ. ನಮ್ಮ ಸಮುದಾಯದ ಮಕ್ಕಳು ಶಾಲೆಗೆ ಹೋಗಲು ಬಹಳ ಕಷ್ಟವಾಗುತ್ತಿತ್ತು. ಎಲ್ಲೋ ದೂರ ಕಾಡಿನಲ್ಲಿ ನಡೆದು ಹೋಗಬೇಕಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರ ನೇತೃತ್ವದಲ್ಲಿ ಒಂದು ಸಭೆ ಮಾಡಿ ಕಾಡಿನಲ್ಲಿರುವ ಶಾಲೆ ನಮ್ಮೂರಿಗೆ ಬರಬೇಕು ಎಂದು ಅರ್ಜಿ ಕೊಟ್ಟೆವು. ಅದಕ್ಕಾಗಿ ಹೋರಾಟ ಮಾಡಿದ ನಂತರ ಶಾಲೆ ನಮ್ಮ ಕೆಳಾಸೆಗೆ ಬಂತು. 2001ರಲ್ಲಿ ಬಿಸಿಯೂಟವನ್ನು ಕೂಡ ಪ್ರಾರಂಭ ಮಾಡಿದರು. ಶಾಲೆ ಪ್ರಾರಂಭವಾದಾಗ ಎರಡು ಮಕ್ಕಳು ಮಾತ್ರ ಇದ್ದರು. ನಂತರದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಕರೆತಂದು ಶಾಲೆಗೆ ಸೇರಿಸಿದೆವು. ಆಗ ಒಟ್ಟು 22 ಮಕ್ಕಳು ಶಾಲೆಗೆ ಬರುವಂತಾದರು. ಬಿಸಿಯೂಟವನ್ನು ಮನೆಯಿಂದಲೇ ಮಾಡಿಕೊಂಡು ನಾಲ್ಕು ವರ್ಷಗಳ ಕಾಲ ಶಾಲೆಗೆ ತೆಗೆದುಕೊಂಡು ಹೋಗಿದ್ದೆ. 2005ರಲ್ಲಿ ದುರ್ಗಾ ದೇವಿ ಸಿದ್ದಿ ಸ್ವ ಸಹಾಯ ಸಂಘವನ್ನು ಸ್ಥಾಪನೆ ಮಾಡಿದೆವು. ಸಂಘ ಮಾಡಿ ಗಂಡು ಮಕ್ಕಳನ್ನೆಲ್ಲ ಸೇರಿಸಿಕೊಂಡು ಶಾಲೆಯ ಪಕ್ಕದಲ್ಲಿ ಒಂದು ಶೆಡ್ಡನ್ನು ಕಟ್ಟಿದೆವು. ಅದರ ಮೂಲಕ ಹಲವು ಸಾಮಾಜಿಕ ಕೆಲಸ ಮಾಡುತ್ತಿದ್ದೇವೆ. ಅಷ್ಟು ಹೊತ್ತಿಗೆ ನಾನು ಹಾವೇರಿಯಲ್ಲಿ ಹತ್ತನೇ ತರಗತಿ ಪರೀಕ್ಷೆ ಕಟ್ಟಿ ಉತ್ತೀರ್ಣಳಾಗಿದ್ದೆ. ಶಿವಪ್ಪ ಪೂಜಾರಿ ಮತ್ತು ಮೋಹಿನಿ ಪೂಜಾರಿಯವರು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ತರಬೇತಿಯನ್ನು ಕೊಡಿಸಿ 2006 ರಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿ ನನ್ನನ್ನು ಆಯ್ಕೆ ಮಾಡಿ ಕಿಟ್ ಗಳನ್ನು ಕೊಡಿಸಿದರು. ನನಗೆ ನಿಸರ್ಗ ಮನೆಯಲ್ಲಿ ಆಯುರ್ವೇದ ಮತ್ತು ಅಲೋಪತಿ ಎರಡು ರೀತಿಯಲ್ಲೂ ತರಬೇತಿಯನ್ನು ಕೊಟ್ಟಿದ್ದರು. ಒಂದು ನಮ್ಮ ಹತ್ತಿರ ಇರುವ ಗಿಡ ಮೂಲಿಕೆಗಳಿಂದ ನಾವೆ ಔಷಧಿ ತಯಾರಿಸುವುದು. ಅಲೋಪತಿ ಔಷಧಿಗಳನ್ನು ತಂದು ಕಡಿಮೆ ಹಣಕ್ಕೆ ಇಲ್ಲಿ ಅಗತ್ಯ ಇದ್ದವರಿಗೆ ಕೊಡುತ್ತಿದ್ದೆ. ಕೆಲವೊಮ್ಮೆ ಆಂಬುಲೆನ್ಸ್ ಬರುವುದು ತಡವಾಗಿ ಒಂದೆರಡು ಹೆರಿಗೆಯನ್ನೂ ಮಾಡಿಸಿದ್ದೇನೆ. ಪ್ರತೀ ತಿಂಗಳಿಗೊಂದು ಕ್ರಿಯಾ ಯೋಜನೆಗೆ ಹೋಗಬೇಕಿತ್ತು. ಆಗ ತಿಂಗಳಿಗೆ 300ರೂ ಕೊಡುತ್ತಿದ್ದರು. ಮಳೆಗಾಲದಲ್ಲಿ ಮಣ್ಣಲ್ಲಿ ಅಡ್ಡಾಡಿ ಕೆಲಸ ಮಾಡಿದವರಿಗೆ ಕೈ ಕಾಲು ಗಾಯವಾಗಿ ಕೀವಾಗುತ್ತಿದ್ದವು. ಹೈಡ್ರೋಜನ್ ಹಾಕಿ ಕ್ಲೀನ್ ಮಾಡಿ ನೋವಿನ ಮಾತ್ರೆಗಳನ್ನು ಕೊಡುತ್ತಿದ್ದೆ. ಜ್ವರ, ಕಫದ ಮಾತ್ರೆ ಎಲ್ಲ ತಂದುಕೊಡುತ್ತಿದ್ದೆ. ಇದರ ಜೊತೆಗೆ ಸಮಯ ಇದ್ದಾಗ ನೆಟ್ಟಿ ಹಾಕಲು, ಗದ್ದೆ ಮಾಡಲು ಭಟ್ಟರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದೆ. ಈ ಎಲ್ಲಾ ಕೆಲಸ ಮಾಡಲು ನನ್ನ ಗಂಡ ಕೃಷ್ಣ ಸಿದ್ದಿ, ಮಗ ಶ್ರೀನಾಥ್, ಮಗಳು ಮಹಾಲಕ್ಷ್ಮಿಯ ಸಂಪೂರ್ಣ ಬೆಂಬಲ, ಸಹಕಾರವಿದೆ.'
'ಮಗಳು ಮಹಾಲಕ್ಷ್ಮಿ ಕ್ರೀಡೆಯಲ್ಲಿ ಆರಂಭದಿಂದಲೂ ಮೊದಲಿದ್ದಳು. ಕುಸ್ತಿಯಲ್ಲಿ ಬಹಳ ಆಸಕ್ತಿ ಇದ್ದುದರಿಂದ ಕುಸ್ತಿ ಕಲಿಸಲು ಊಟ, ವಸತಿ ಎಲ್ಲವೂ ಇರುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಸೇರಿಸಿದೆವು. ಅಲ್ಲಿ ಎರಡು ತಿಂಗಳ ತರಬೇತಿಯ ನಂತರ ತುಂಬ ಕಡೆ ಕುಸ್ತಿಯಲ್ಲಿ ಪ್ರಶಸ್ತಿಗಳನ್ನು ಗೆದ್ದು ಬರುತ್ತಿದ್ದಳು. ಕುಸ್ತಿಯಲ್ಲಿ ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ತಾಲ್ಲೂಕು, ರಾಜ್ಯ, ರಾಷ್ಟ್ರಮಟ್ಟದವರೆಗೂ ಹೋಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ತಂದಿದ್ದಾಳೆ. ಮೂಡುಬಿದಿರೆಯಲ್ಲಿ ಪದವಿ ಮುಗಿಸಿ, ಈಗ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ M.Ped ಮಾಡುತ್ತಿದ್ದಾಳೆ.
ನನಗೆ ನಾಟಕ, ಹಾಡು, ನೃತ್ಯ, ಕ್ರೀಡೆ ಎಂದರೆ ಚಿಕ್ಕ ವಯಸ್ಸಿನಿಂದಲೂ ಆಸಕ್ತಿ ಜಾಸ್ತಿ. ಪ್ರತೀವರ್ಷ ರನ್ನಿಂಗ್, ಗುಂಡು ಎಸೆತ, ಚಕ್ರ ಎಸೆತದಲ್ಲಿ ಮೊದಲು ಬರುತ್ತಿದ್ದೆ. ಒಮ್ಮೆ ವನವಾಸಿ ಕಲ್ಯಾಣದಲ್ಲಿ 18 ರಿಂದ 40 ರ ವರೆಗಿನ ಯುವಕ ಯುವತಿಯರಿಗೆ ಸ್ಪರ್ಧೆ ಏರ್ಪಡಿಸಿದ್ದರು. ಆಗ ನಾನು ನನ್ನ 34ನೇ ವಯಸ್ಸಿನಲ್ಲಿ ಓಟದಲ್ಲಿ 3ನೇ ಬಹುಮಾನ, ಚಕ್ರ ಎಸೆತ ಹಾಗೂ ಗುಂಡು ಎಸೆತಗಳಲ್ಲಿ ಮೊದಲ ಬಹುಮಾನ ಪಡೆದೆ. ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿದರು ಅದರಲ್ಲೂ ಮೊದಲು ಬಂದೆ. ಶಾಲೆಯಲ್ಲಿ ಕಲಿತ ಹಾಡುಗಳನ್ನು ಇನ್ನೂ ಮರೆತಿಲ್ಲ. ಈಗ ಸುಮಾರು ಹಾಡುಗಳನ್ನು ನಾನೆ ಬರೆದಿದ್ದೇನೆ. ಆ ಹಾಡುಗಳನ್ನು ಸಭೆ, ಸಂಘ, ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ. "ಬೆಂಕಿ ಜಾತ, ಹಸಿರು ಯುಕ್ತ ಭಾರತ, ಪ್ಲಾಸ್ಟಿಕ್ ಮುಕ್ತ ಭಾರತ" ಎಂಬ ಬೀದಿ ನಾಟಕವನ್ನು ತಂಡ ಕಟ್ಟಿ ಸತತವಾಗಿ ನಾಲ್ಕು ವರ್ಷ ಮಾಡಿದ್ದೇವೆ. 2019 ರಿಂದ ಸಹ್ಯಾದ್ರಿ ಸಂಚಯದವರು ಪರಿಚಯ ಆದ ಮೇಲೆ ಶಾಲೆಗೆ ಹೋಗದ ಮಕ್ಕಳನ್ನು ಶಾಲೆಗೆ ಕರೆತರುವುದು, ಯಾರ ಮನೆಗೆ ಹೋಗಲು ಹಳ್ಳ ದಾಟಿ ಹೋಗಬೇಕೋ, ಯಾರ ಮನೆಗಳಲ್ಲಿ ಸಣ್ಣಪುಟ್ಟ ರಿಪೇರಿಗಳಿವೆಯೋ ಅಂತಹವರನ್ನು ಗುರುತಿಸಿ ಅವರಿಗೆ ನನ್ನಿಂದಾದ ಸಹಾಯ ಮಾಡುತ್ತಾ ಬರುತ್ತಿದ್ದೇನೆ. 4000 ವರ್ಷಗಳ ಹಿಂದೆ ನಮ್ಮ ಸಿದ್ದಿ ಸಮುದಾಯದವರು ಆಫ್ರಿಕಾದಿಂದ ಬರಬೇಕಾದರೆ ಎಲ್ಲಿ ಬೇಕೋ ಅಲ್ಲಿ ಕಾಡುಗಳಲ್ಲಿ ಉಳಿದುಬಿಟ್ಟಿದ್ದಾರೆ. ಆಗ ನಮ್ಮ ಸಮುದಾಯಕ್ಕೆ ಹೇಳುವವರಿಲ್ಲ ಕೇಳುವವರಿಲ್ಲ. ಕೇಳಿದ್ರೂ ನಾವು ಬೇರೆ ಯಾರ ಹತ್ತಿರ ಹೆಚ್ಚು ಮಾತಾಡುವುದಿಲ್ಲ. ಮೊದಲೆಲ್ಲ ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಪರಿಸ್ಥಿತಿ ಈಗ ಸ್ವಲ್ಪ ಸುಧಾರಿಸಿದೆ. ಆದರೂ ಶೈಕ್ಷಣಿಕವಾಗಿ ಮುಂದೆ ಬರುವಲ್ಲಿ ಹಿಂದೆ ಉಳಿಯುತ್ತಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಿಗಬೇಕಾದ ಸವಲತ್ತುಗಳು ಸಿಕ್ಕಿದರೆ ಖಂಡಿತ ನಮ್ಮ ಸಮುದಾಯದವರು ಮುಂದೆ ಬರುತ್ತಾರೆ. ನಮ್ಮ ಮಕ್ಕಳು ಶಾಲೆಗೆ ಹೋದರೆ ಗುಂಗುರು ಕೂದಲು, ಮಾತಾಡೋ ಭಾಷೆಯ ಶೈಲಿ ಬೇರೆ ಅಂತ ಕೀಳಾಗಿ ನೋಡುತ್ತಾರೆ. ಕೆಲವು ಕಡೆ ಸಿದ್ದಿ ಸಮುದಾಯದವರನ್ನು ಅಸ್ಪೃಶ್ಯರಂತೆ ನೋಡುತ್ತಾರೆ. ನಾವು ಕೂತು ಹೋದ ಜಾಗದಲ್ಲಿ ಸಗಣಿ ಹಾಕಿ ಸಾರಿಸುತ್ತಾರೆ. ಕ್ರೀಡೆಯಲ್ಲಿ ಯಾವತ್ತಿಗೂ ನಮ್ಮ ಸಿದ್ಧಿ ಯುವಕರು ಬಲಿಷ್ಠರು. ಇವರನ್ನು ಕ್ರೀಡೆಯಲ್ಲಿ ಸೂಕ್ತ ಬೆಂಬಲ ನೀಡಿ ಇವರನ್ನು ಒಲಂಪಿಕ್ ನಂತಹ ಕ್ರೀಡೆಯಲ್ಲಿ ತೊಡಗಿಸಿದರೆ ರಾಷ್ಟ್ರಕ್ಕೆ ಮೆರಗು ತರುತ್ತಾರೆ. ಯಾವುದಾದರೂ ಸಿದ್ದಿ ಮಕ್ಕಳು ಏನೇ ಸಾಧನೆ ಮಾಡಿದರೂ ಅವರ ಬಗ್ಗೆ ಬರೆಯುವವರು ಯಾರೂ ಇಲ್ಲ. ಪ್ರತ್ಯೇಕವಾಗಿ ನಮ್ಮ ಸಮುದಾಯದವರನ್ನು ಗುರುತಿಸಿ ನೇರವಾಗಿ ಸರ್ಕಾರದಿಂದ ಸಹಾಯ ಸಿಗುವಂತಾಗಬೇಕು. ನೂರಕ್ಕೆ 75% ಹೆಂಗಸರು ಮನೆಯ ಒಳಗೆ ಉಳಿದಿದ್ದಾರೆ. ಅವರಿಗೆಲ್ಲ ಸಾಕಷ್ಟು ಸ್ವ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳನ್ನು ಒದಗಿಸಿ ಕೊಡಬೇಕು. ರಸ್ತೆ ಇಲ್ಲ, ಕುಡಿಯಲು ನೀರಿಲ್ಲ. ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಹೋಗಬೇಕು. ಕುಡಿಯುವ ನೀರು ಏಪ್ರಿಲ್ ವರೆಗೆ ಬಾವಿಯಲ್ಲಿ ಸ್ವಲ್ಪ ಇರುತ್ತದೆ. ನಂತರ ಝರಿ ನೀರು ಬರುತ್ತದೆ ಅದನ್ನು ಕುಡಿಯಲು ಹಿಡಿದುಕೊಳ್ಳಬೇಕು. ಕೆಲಸಕ್ಕೆ ಹೋಗಬೇಕು ಅಂದರೆ 5 ರಿಂದ 10 ಕಿ.ಮೀ. ನಡೆದು ಹೋಗಬೇಕು. ಮಕ್ಕಳು ಹೈಸ್ಕೂಲಿಗೆ ಹೋಗಬೇಕು ಅಂದರೆ ಏಳು ಕಿ.ಮೀ. ನಡೆದು ಹೋಗಬೇಕು. ಹೊಟ್ಟೆಪಾಡಿಗಾಗಿ ತಂದೆತಾಯಿ ಕೂಲಿ ಕೆಲಸಕ್ಕೆ ಹೋದರೆ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತಾರೆ. ಕಾಡಂಚಿನಲ್ಲಿರುವ ನಮ್ಮ ಸಮುದಾಯದವರಿಗೆ ನಾಗರಿಕ ಸಮಾಜದ ಹಲವು ವಿಚಾರಗಳು ಕಬ್ಬಿಣದ ಕಡಲೆಯಾಗಿವೆ'.
'ನಮ್ಮ ಸಮುದಾಯದವರಿಗೆ ಶಿಕ್ಷಣ ಸಿಗಬೇಕು, ಕಾನೂನಿನ ಅರಿವು ಬೇಕು. ನಮ್ಮ ಉತ್ಪನ್ನಗಳು ಯೋಗ್ಯ ದರದಲ್ಲಿ ಮಾರಾಟವಾಗಲು ಮಾರುಕಟ್ಟೆ ಸೌಲಭ್ಯವಿಲ್ಲ. ಆರ್ಥಿಕವಾಗಿ ನಮ್ಮ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು. ಶಾಲೆಗಳಲ್ಲಿ ನಮ್ಮ ಮಕ್ಕಳ ದಷ್ಠಪುಷ್ಟತೆ, ಆರೋಗ್ಯದ ಕ್ಷಮತೆಯನ್ನು ನೋಡಿ ಅವರನ್ನು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿ ಮುಂದೆ ಬೆಳೆಸಬೇಕು. ಮೂಲಭೂತ ಸೌಕರ್ಯಗಳ ವ್ಯವಸ್ಥೆಯಾಗಬೇಕು. ಮಹಿಳಾ ಬ್ಯಾಂಕ್ ಗಳು ಸ್ಥಾಪಿತವಾಗಬೇಕು. ಸ್ವ ಉದ್ಯೋಗಕ್ಕೆ ಮೊದಲು ಅವರಿಗೆ ಮಾರ್ಕೆಟಿಂಗ್ ತರಬೇತಿ ಕೊಟ್ಟು ಅವಕಾಶ ಕಲ್ಪಿಸಬೇಕು. ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಏನೇ ಮಾಡಿದರೂ ನಮ್ಮಲ್ಲಿ ಮಾರ್ಕೆಟಿಂಗ್ ಕೊರತೆ ಇದೆ. ಇದರತ್ತ ಸರ್ಕಾರ ಗಮನ ಹರಿಸಬೇಕು ಎಂಬುದು ನಮ್ಮ ಬೇಡಿಕೆಗಳು' ಎಂಬ ಮಾತುಗಳನ್ನಾಡಿದರು.
ಸಿದ್ದಿ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹೊರಜಗತ್ತಿಗೆ ತೆರೆದುಕೊಳ್ಳಬೇಕು ಎಂದು ಹಗಲಿರುಳೆನ್ನದೆ ಶ್ರಮಿಸುತ್ತಿರುವವರಲ್ಲಿ ಇವರು ಕೂಡ ಒಬ್ಬರು. ಸಮಾಜ ಸೇವೆಗೆ ಸದಾ ಸಿದ್ಧರಾಗಿರುವ ರಾಜೇಶ್ವರಿ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ. ಈ ಸಮುದಾಯದವರೂ ಸಹ ನಮ್ಮ ಸಮಾಜದ ಒಂದು ಭಾಗ ಎಂಬುದನ್ನು ಸರ್ಕಾರ ಮರೆಯಬಾರದು. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಇಲಾಖೆಗಳು ಇವರ ಸಮುದಾಯದ ಕಡೆ ಕಾಳಜಿ ವಹಿಸಬೇಕು ಎಂಬುದು ಈ ಮೂಲಕ ನಮ್ಮದೊಂದು ವಿನಂತಿ.
-ಜ್ಯೋತಿ. ಎಸ್, ಬೆಂಗಳೂರು
ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.