Date: 20-12-2020
Location: .
ಎರಡು ಉದಾತ್ತ ಚಿಂತನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿಯ ಸಂಬಂಧದ ಪರಿಕಲ್ಪನೆ ಕುರಿತು ಹಿರಿಯ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರು ತಮ್ಮ ‘ಆವಗೆಯ ಕಿಚ್ಚು’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.
ದೇವನೂರ ಮಹಾದೇವರ ಈ ಮಾತು ಒಂದು ತುದಿಯಾದರೆ, ಪುರಂದರ ದಾಸರ ’ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ’ ಎನ್ನುವುದು ಇನ್ನೊಂದು ತುದಿ. ಆಲೋಚನೆ ಮಾಡಿದಂತೆಲ್ಲ ಹರ್ಷ, ತವಕ ಮತ್ತು ತಲ್ಲಣಗಳನ್ನು ಹುಟ್ಟಿಸುವ ಸಂಬಂಧಗಳನ್ನು ಕುರಿತ ಆಲೋಚನೆಯಲ್ಲಿ ನನ್ನ ಮನಸ್ಸು ಮುಳುಗಿದೆ. ಅವರ ’ಕುಸುಮಬಾಲೆ’ಯಲ್ಲಿ ಚೆನ್ನನ ತಂದೆ ಚೆನ್ನನ ತಾಯಿಗೆ ಈ ಮಾತುಗಳನ್ನು ಹೇಳುತ್ತಾನೆ. ಅವರಿಬ್ಬರೂ ಮಗನನ್ನು ಕಳೆದುಕೊಂಡು ಗಾಢವಾದ ವಿಷಾದದಲ್ಲಿ ಮುಳುಗಿದ್ದಾರೆ. ಸಂಬಂಧಗಳು ಬಹಳ ದೊಡ್ಡ ಶಕ್ತಿಯಾದುದರಿಂದ, ಮಗ ಚೆನ್ನನು ಮುಂಬಯಿ ಶಹರಿನಿಂದ ಯಾರನ್ನೋ ಕಳಿಸಿ, ಅಥವಾ ಹಣ ಕಳಿಸಿ ತಮ್ಮನ್ನು ಕರೆಸಿಕೊಳ್ಳುವನೆಂದು ಅವರ ನಂಬಿಕೆ. ಚೆನ್ನ ಈಗಾಗಲೇ ಕೊಲೆಯಾಗಿರುವುದರಿಂದ ಆ ಹಂಬಲ, ಆ ನಂಬಿಕೆ ನಿಜವಾಗುವ ಸಾಧ್ಯತೆಯೇ ಇಲ್ಲ. ಆದ್ದರಿಂದ ಈ ಮಾತು ಉದಾತ್ತವಾಗಿ ಕೇಳಿಸಿದರೂ ಅಲ್ಲಿ ತೀವ್ರವಾದ ವ್ಯಂಗ್ಯ, ವಿಷಾದಗಳೂ ಇದೆ.
ಮನುಷ್ಯ ಸಂಬಂಧಗಳ ಸ್ವರೂಪ ಯಾವುದು, ಅವು ನಮ್ಮೆಲ್ಲರ ಬಾಳಿನ ಮೇಲೆ ಬೀರುವ ಪ್ರಭಾವ ಯಾವ ಬಗೆಯದು, ಅವು ಹೇಗೆ, ಎಷ್ಟು ಬಾಳಿಕೆ ಬರುತ್ತವೆ ಮುಂತಾದ ಪ್ರಶ್ನೆಗಳು ನಮ್ಮನ್ನು ಎಂದಿನಿಂದಲೂ ಕಾಡಿವೆ. ಮನುಷ್ಯ-ಮನುಷ್ಯರ ಹಾಗೆಯೇ ಮನುಷ್ಯ ಮತ್ತು ಸಮಾಜ, ಮನುಷ್ಯ ಮತ್ತು ಪ್ರಕೃತಿ, ಮನುಷ್ಯ ಮತ್ತು ಕಾಲ, ಮನುಷ್ಯ ಮತ್ತು ದೇವರು.... ಇಂಥ ಸಂಬಂಧಗಳ ಸ್ವರೂಪ ಯಾವ ಬಗೆಯದು ಎನ್ನುವುದರ ಬಗ್ಗೆಯೂ, ಬೇರೆ ಯಾರೋ ಅಲ್ಲ, ಸ್ವತಃ ನಾವೇ ಆಲೋಚನೆ ಮಾಡಬೇಕಾದ ಪ್ರಮೇಯ ಹಲವು ಬಾರಿ ಬರುತ್ತದೆ. ನಾವು ಆಲೋಚಿಸಲಿ ಬಿಡಲಿ, ನಮ್ಮ ವರ್ತನೆಯೇ ಆ ಕುರಿತ ಸತ್ಯಗಳಿಗೆ, ನಮ್ಮ ಸ್ವಭಾವಗಳಿಗೆ ಸಾಕ್ಷಿಯಾಗಿರುತ್ತದೆ.
ತಾಯಿಯ ಹೊಕ್ಕಳುಬಳ್ಳಿಯಿಂದ ಮತ್ತು ಪೋಷಕರ ಪಾಲನೆಯ ಅನಿವಾರ್ಯತೆಯಿಂದ ಬಿಡುಗಡೆ ಪಡೆದ ಪ್ರತಿಯೊಂದು ದೇಹವೂ ಸ್ವತಂತ್ರವಾದ ಅಸ್ತಿತ್ವವನ್ನು ಪಡೆಯುತ್ತದೆ. ಅದಕ್ಕೆ ಅದರದೇ ಅನುಭವ ಲೋಕ, ಚಿಂತನ ಲೋಕ ಮತ್ತು ಭಾವಲೋಕ. ಪ್ರತಿಯೊಂದು ಹಕ್ಕಿಗೂ ಅದರದೇ ಪಯಣ. ಅವುಗಳ ನಡುವೆ ಪರಸ್ಪರ ಅವಲಂಬನೆ ಇರುವಂತೆಯೇ, ಕೊಳುವ- ಕೊಡುವ ಉದಾರತೆ ಇರುವಂತೆಯೇ ಒಬ್ಬರನ್ನು ಇನ್ನೊಬ್ಬರು ಬಳಸಿಕೊಳ್ಳುವ ಕ್ರೌರ್ಯ-ಸ್ವಾರ್ಥಗಳ ರಾಜ್ಯಭಾರವೂ ಇರುತ್ತದೆ. ಮನುಷ್ಯನೂ ಒಂದು ಪ್ರಾಣಿಯೆಂದು ಒಪ್ಪಿಕೊಳ್ಳುವಾಗಲೂ ಅವನ ಸಂಸ್ಕೃತಿ/ನಾಗರಿಕತೆಗಳ ಮಾತು ಕೇಳಿ ಬರುತ್ತದೆ. ಅಲ್ಲಿ, ಅವನು ಎಲ್ಲರಿಗಿಂತ ಶ್ರೇಷ್ಠನೆಂಬ ಹಮ್ಮು ಅಡಗಿರುತ್ತದೆ. ತಕ್ಷಣ, ನಮಗೆ ಯಾವುದೇ ಪ್ರಾಣಿಯು ಮನುಷ್ಯನಷ್ಟು ಕ್ರೂರಿಯಲ್ಲವೆಂಬ ದಾಸ್ತೊಯೆವ್‌ಸ್ಕಿಯ ಮಾತು ನೆನಪಿಗೆ ಬರುತ್ತದೆ. ಆ ಮಾತು ನಿಜವೆಂದು ನಮಗೂ ಗೊತ್ತಿದೆ. ಹಾಗಾದರೆ, ಸಂಬಂಜವನ್ನು ಸಂಕಟವಾಗಿ ಬದಲಾಯಿಸುವ ಸಂಗತಿ ಯಾವುದು? ಬೇರೆಯವರ ಸಂತೋಷದಲ್ಲಿ ನಾವು ಕೂಡ ಸಂತೋಷ ಪಡುತ್ತೇವೆ. ಹೌದು. ಆದರೆ ಕ್ರಮೇಣ ’ಬೇರೆಯವರು’ ಎನ್ನುವ ವಲಯ ಕಿರಿದಾಗುತ್ತಾ ಹೋಗುತ್ತದೆ. ಕುಟುಂಬದ ಚೌಕಟ್ಟಿನಲ್ಲೇ ಪರಸ್ಪರ ಸ್ಪರ್ಧೆ-ಹೊಟ್ಟೆಕಿಚ್ಚುಗಳು ಕಾಣುವಾಗ, ಜೀವದ ಗೆಳೆಯರೆಂದು ಕೊಂಡವರೇ ಕತ್ತಿ ಮಸೆಯುವಾಗ, ಸಂಬಂಧಗಳ ಸಾಚಾತನದ ಬಗ್ಗೆ ಅನುಮಾನ ಮೂಡುತ್ತದೆ. ಹಲವು ಕಾರಣಗಳಿಂದ ಹುಟ್ಟಿಕೊಳ್ಳುವ ಗುಂಪುಗಳು ಮತ್ತು ಆ ಗುಂಪುಗಳ ನಡುವೆ ನಡೆಯುವ ಹೋರಾಟಗಳು ದಿನನಿತ್ಯದ ವಾಸ್ತವವಾಗಿರುವಾಗ, ’ಸಹನಾವವತು, ಸಹ ನೌ ಭುನಕ್ತು’ ಎಂದೋ ’ಸರ್ವ ಜನಾಂಗದ ಶಾಂತಿಯ ತೋಟ’ ಎಂದೋ ಹೇಳಿಕೊಳ್ಳುವುದು ಭ್ರಮೆಯೋ ಕನಸೋ ಅಥವಾ ಆತ್ಮವಂಚನೆಯೋ? ವ್ಯಕ್ತಿಯ, ಕುಟುಂಬದ, ಸಮುದಾಯದ, ಸಮಾಜಗಳ ಚರಿತ್ರೆಯನ್ನು ಪುನರವಲೋಕನ ಮಾಡಿದಾಗ ಮೂಡಿಬರುವ ಹತಾಶೆಯ ನಿಟ್ಟುಸಿರನ್ನು ಮೀರಿ ಬಾಳಿಗೊಂದು ಅರ್ಥವನ್ನು ಕಂಡುಕೊಳ್ಳುವುದು ಹೇಗೆ? ಬೇರೆ ಬೇರೆಯ ಹಿತಾಸಕ್ತಿಗಳನ್ನು ಹೊಂದಿರುವ ಗುಂಪುಗಳ ನಡುವೆ ಶಾಶ್ವತವಾದ ಸಂಘರ್ಷದ ಸಂಬಂಧವೇ ಇರುವುದು ಅನಿವಾರ್ಯವೇ? ಸಹಜೀವನವೆನ್ನುವುದು ಕ್ರೂರವಾದ ವ್ಯವಸ್ಥೆಯಿಂದ, ಭಯದಿಂದ ಉಳಿದುಕೊಂಡಿರುವ ಹುಸಿ ಆದರ್ಶವೇ? ನಮ್ಮ ಕಾನೂನು, ಶಿಕ್ಷಣ, ಧರ್ಮ, ನೈತಿಕತೆ ಎಲ್ಲವೂ ಇಂಥ ವ್ಯವಸ್ಥೆಯನ್ನು ಪೋಷಿಸುವ ಹುನ್ನಾರಗಳೇ? ಹೌದು, ಎನ್ನಿಸಿ ಬಿಡುತ್ತದೆ. ತೆಲುಗು ಭಾಷೆಯ ಮಹಾಕವಿಯಾದ ಶ್ರೀಶ್ರೀ ಅವರು ಹೇಳಿರುವುದು ಸರಿ:
ಏ ದೇಶ ಚರಿತ ಸೂಸಿನಾ ಏಮುನ್ನದಿ ಗರ್ವಕಾರಣಂ?
ನರಜಾತಿ ಚರಿತ್ರಸಮಸ್ತಂ ಪರಪೀಡಾಪರಾಯಣತ್ವಂ.
(ಯಾವ ದೇಶದ ಚರಿತ್ರೆಯನ್ನು ನೋಡಿದರೂ ಹೆಮ್ಮೆ ಪಡುವುದಕ್ಕೆ ಕಾರಣವೇನಿದೆ? ಮನುಷ್ಯಜಾತಿಯ ಚರಿತ್ರೆಯೆಲ್ಲವೂ ಬೇರೆಯವರಿಗೆ ತೊಂದರೆ ಕೊಡುವುದರಲ್ಲಿ ತೋರಿಸುವ ಸಾಮರ್ಥ್ಯವೇ ಆಗಿದೆ.)
ಹಾಗಾದರೆ ಈ ಮಿತಿಗಳಿಗೆ ಮದ್ದಾಗಬಲ್ಲ ಶಕ್ತಿ ಯಾವುದು? ನಾವು ಸರ್ವನಾಶವಾಗದಂತೆ ಒಟ್ಟುಗೂಡಿಸಿರುವ ಸತ್ವ ಯಾವುದು? ಆಧ್ಯಾತ್ಮಿಕವಲ್ಲದ, ಧಾರ್ಮಿಕವಲ್ಲದ, ಪಾರಲೌಕಿಕವಲ್ಲದ ಮನುಷ್ಯನಲ್ಲಿಯೇ ಅಡಗಿರುವ ಆ ಸಿಹಿನೀರ ಚಿಲುಮೆಯನ್ನು ಕಂಡುಕೊಳ್ಳುವುದು ಹೇಗೆ?
ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ, ಮೂರ್ತವಾದ ನೆಲೆಯಂತೆಯೇ ಅಮೂರ್ತವಾದ ನೆಲೆಗಳೂ ಇವೆ. ಏಕೆಂದರೆ, ನಮ್ಮ ಸಂತೋಷವು ನಾವು ಎಂದೆಂದಿಗೂ ಕಾಣದೆ, ಕೇಳದೆ ಇರಬಹುದಾದ, ಹಿಂದೆಂದೋ ಇದ್ದಿರಬಹುದಾದ ಲಕ್ಷಾಂತರ ಜನರನ್ನು ಅವಲಂಬಿಸಿದೆ. ನಮ್ಮ ಆಹಾರವನ್ನು ಬೆಳೆಯುವ ರೈತರಿಂದ ಮೊದಲಾಗಿ, ನಮ್ಮ ಮನೆಯ ಕಸವನ್ನು ಎಲ್ಲೋ ಸಾಗಿಸುವ ಪೌರಕಾರ್ಮಿಕರವರೆಗೆ, ನಾವು ಏಕಾಂತದಲ್ಲಿಯೂ ಅನುಭವಿಸಬಹುದಾದ ಸಾಹಿತ್ಯ-ಸಂಗೀತಗಳನ್ನು ಸೃಷ್ಟಿಸುವವರೆಗೆ ಇಂಥ ನೆರವು ನೀಡುವವರ ಲೋಕವೇ ಇದೆ. ನಮ್ಮ ಹಾಗೆಯೇ ಅವರು ಕೂಡ ಉಳಿದ ಅನೇಕರನ್ನು ಅವಲಂಬಿಸಿರುತ್ತಾರೆ. ಇವೆರೆಲ್ಲರ ಸೇವೆಯು ನಾವು ಹಣ ಕೊಟ್ಟು ಕೊಂಡರೂ ನಿಜಕ್ಕೂ ಅದರ ಬೆಲೆಕಟ್ಟಲು ಸಾಧ್ಯವಿಲ್ಲ. ಆದ್ದರಿಂದಲೇ ನಾವು ಅನ್ಯರ ನೆರವಿಲ್ಲದೆ, ಸಂತೋಷ ಪಡುವುದಿರಲಿ, ಬದುಕಿರುವುದೂ ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆದರೂ ಅದು ನಮ್ಮ ಪ್ರಜ್ಞೆಯೊಳಗೆ ಇಳಿದು ನಮ್ಮ ವರ್ತನೆಯನ್ನು ನಿರ್ದೇಶಿಸುವುದಿಲ್ಲ. ಕೂಡುಬದುಕಿನ ಅನಿವಾರ್ಯತೆಯನ್ನು ಮನಗಾಣಿಸುವುದಿಲ್ಲ. ಪುಸ್ತಕದ ಪಾಠಗಳನ್ನು ಎಷ್ಟು ಹೇಳಿದರೂ ಕೇಳಿದರೂ ಅದು ನಮ್ಮ ನಡವಳಿಕೆಯ ಭಾಗವಾಗುವುದು ಅಪರೂಪ. ಇದು ಬುದ್ಧಿಪೂರ್ವಕವಾದ ಆಲೋಚನೆಯಿಂದ ಮಾತ್ರ ಮೂಡುವ ತಿಳಿವಳಿಕೆ, ಮಾಡುವ ಮನಸ್ಸು. ಸಾಧುಸಂತರ ತಾತ್ವಿಕತೆಯು ಈ ತಿಳಿವಳಿಕೆಯನ್ನು ಬೆಳೆಸಲು ಪ್ರಯತ್ನಿಸಿತಾದರೂ ಸಾಂಸ್ಥಿಕವಾದ ಧರ್ಮವು ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲೇ ಚಲಿಸಿತು, ಚಲಿಸುತ್ತಿದೆ.
ಈ ದಿಕ್ಕಿನಲ್ಲಿ ಯೋಚಿಸಿದಾಗ ’ತಾಯಿ ತತ್ವ’ವು ಮನಸ್ಸನ್ನು ತುಂಬಿಕೊಳ್ಳುತ್ತದೆ. ಸ್ವಾರ್ಥದ ಲವಲೇಶವೂ ಇಲ್ಲದೆ ಕೊಡುವ, ಸ್ವಂತ ಮಕ್ಕಳಿಗೆ ಮಾತ್ರವಲ್ಲ ಅಗತ್ಯವಿರುವವರಿಗೆಲ್ಲ ಕೊಡುವ, ಎಲ್ಲ ಕಟ್ಟಳೆಗಳನ್ನೂ ಮೀರಿ ಕೊಡುವ, ಹಂಚಿಕೊಳ್ಳುವ ತತ್ವ ಇದು. ಇಲ್ಲಿ ನಾನು ಕೇವಲ ತಾಯಂದಿರ ಬಗ್ಗೆಯಾಗಲೀ ಹೆಂಗಸರ ಬಗ್ಗೆಯಾಗಲೀ ಮಾತಾಡುತ್ತಿಲ್ಲ. ಆ ತತ್ವದ ಬಗ್ಗೆ, ಆ ನಿಲುವಿನ ಬಗ್ಗೆ ಮಾತಾಡುತ್ತಿದ್ದೇನೆ. ಹಾಗೆ ನೋಡಿದರೆ ಪ್ರತಿಯೊಬ್ಬ ಗಂಡಸೂ ಪ್ರತಿಯೊಬ್ಬ ಹೆಂಗಸೂ ಗಂಡು ಮತ್ತು ಹೆಣ್ಣು ಕೂಡಿ ಆದ ಮೂರುತಿ. ಆ ತತ್ವಗಳು ಎಲ್ಲರಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಒಡಗೂಡಿರುತ್ತವೆ. ಪ್ರಕೃತಿ ಪುರುಷ ಬೇರೆ ಬೇರೆ ಅಲ್ಲ. ಅವು ಸಮ್ಮಿಳಿತವಾಗಿ ಇರುವ ತತ್ವಗಳು. ಆದರೆ, ಪುರುಷಪ್ರಧಾನವಾದ ನೆಲೆಗಳ್ನು ಪಡೆದುಕೊಂಡ ಸಮಾಜಗಳು ತಾಯಿತನದ ತಿಳಿವಳಿಕೆಯನ್ನು ಬದಿಗೆ ತಳ್ಳಿದವೆಂದು ತೋರುತ್ತದೆ. ’ಪ್ರೀತಿ’ ಮತ್ತು ’ನ್ಯಾಯ’ಗಳ ನಡುವೆ ನ್ಯಾಯವನ್ನು ಆರಿಸಿಕೊಂಡಾಗ ಹಿಂಸೆಯೇ ಹೆಚ್ಚಾಗುತ್ತದೆ. ಯಾಕೆಂದರೆ ನ್ಯಾಯ ಎನ್ನುವ ಪರಿಕಲ್ಪನೆಯೇ ಸಾಪೇಕ್ಷವಾದುದು. ಯಾವುದು ನ್ಯಾಯ, ಯಾವುದು ಅನ್ಯಾಯ ಎಂಬ ತೀರ್ಮಾನವು ಶಕ್ತಿರಾಜಕೀಯದ ಭಾಗವಾಗಿರುತ್ತದೆ. ಪ್ರೀತಿಯಾದರೋ ಅಂಥ ರಾಜಕೀಯವನ್ನು ಮೀರಿದ, ಅಗತ್ಯವಿರುವವವರಿಗೆ ಹಂಚುವ ಹೃದಯವಂತಿಕೆಯನ್ನು ಪಡೆದುಕೊಳ್ಳುತ್ತದೆ. ನಮ್ಮ ಸಾಮಾಜಿಕ ರಚನೆಗಳು ಹೆಣ್ಣುತನದ ತತ್ವಗಳನ್ನು ಬದಿಗೆ ತಳ್ಳಿ ಗಂಡುಗರ್ವವನ್ನು ಸ್ಥಾಪಿಸಿವೆ. ಅನೇಕ ಹೆಂಗಸರಲ್ಲೂ ಈ ಗಂಡುತತ್ವವು ಮರವಾಗಿ ಬೆಳೆದಿದೆ. ಅನೇಕ ಗಂಡಸರಲ್ಲೂ ಹೆಣ್ಣುತತ್ವದ ಬೆಚ್ಚನೆಯ ಆಯಾಮಗಳು ಜೀವಂತವಾಗಿರುತ್ತವೆ. ಆದರೂ ಅವರು ತಮ್ಮ ತಮ್ಮ ’ಪಾತ್ರ’ಗಳನ್ನು ನಿರ್ವಹಿಸುತ್ತಿರುತ್ತಾರೆ. ಇದು ಇಂದು ನೆನ್ನೆಯ ಮಾತಲ್ಲ. ಚಿರಂತನವಾದ ಸತ್ಯ. ಅಂದಿನಿಂದಲೂ ಇದು ಇರುವುದು ಹೀಗೆಯೇ. ’ಅರ್ಧನಾರೀಶ್ವರ’ ಎನ್ನುವುದು ಕೇವಲ ರೂಪಕವಲ್ಲ, ಅದು ನಮ್ಮೆಲ್ಲರೊಳಗಿನ ವಾಸ್ತವ. ನಾನು ತಾಯಿಯಂತಹ ತಂದೆಯರನ್ನು ಕಣ್ಣಾರೆ ನೋಡಿದ್ದೇನೆ. ಸಮಸ್ಯೆ ಇರುವುದು, ಈ ಸನ್ನಿವೇಶವನ್ನು ಬುಡಮೇಲು ಮಾಡಿ ಆರೋಗ್ಯಕರವಾದ ಸ್ಥಿತಿಯನ್ನು ತರುವುದು ಹೇಗೆ ಎನ್ನುವುದರಲ್ಲಿ. ಜಗತ್ತಿನ ಎಲ್ಲ ದೇಶಗಳ ಆಯವ್ಯಯದ ಬಹು ದೊಡ್ಡ ಪಾಲು, ಶಸ್ತ್ರಾಸ್ತ್ರಗಳ ಖರೀದಿಗೆ ಮೀಸಲಾಗಿರುವುದು ಈ ರೋಗದ ಲಕ್ಷಣ. ಇಂದು ನಾವು ಉಸಿರಾಡುವ ಗಾಳಿಯಲ್ಲಿಯೇ ತುಂಬಿಕೊಂಡಿರುವ ಜಾಗತೀಕರಣ, ಕೈಗಾರಿಕೀಕರಣ, ಬಂಡವಾಳದ ಸೃಷ್ಟಿ, ಏಕರೂಪೀಕರಣ ಮುಂತಾದ ಶಕ್ತಿಗಳು ಮತ್ತು ಮೂಲಭೂತವಾದದಂತಹ ಪೀಡೆಗಳು ಈ ’ಪುರುಷತತ್ವ’ದ ವಿಜೃಂಭಣೆಯ ವಿಸ್ತರಣವೇ ಆಗಿವೆ. ನಾನು ಪುರುಷತತ್ವದ ನಿರಾಕರಣೆ ಮಾಡುತ್ತಿಲ್ಲ. ಬದಲಾಗಿ ಅದರ ಮೇಲೆ ’ಹೆಣ್ಣುತತ್ವ’ವು ಹಾಕಬಹುದಾದ ನಿಯಂತ್ರಣದ ಪರವಾಗಿ ವಾದಿಸುತ್ತಿದ್ದೇನೆ. ಈಚಿನ ದಿನಗಳಲ್ಲಿ ನಮ್ಮ ದೇಶದ, ಅಷ್ಟೇಕೆ ಇಡೀ ಜಗತ್ತಿನ ಮಾತಿನ ರೀತಿಯಲ್ಲಿಯೇ ಇಂತಹ ಆಕ್ರಮಣಶೀಲತೆಯು ತುಂಬಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಮಲಾಲ ಯೂಸುಫ್ಜಾ, ಗ್ರೆಟಾ ಥನ್ಬರ್‍ಗ್ ಮುಂತಾದ ಹದಿಹರೆಯದ ಹುಡುಗಿಯರು ಸಾಲುಮರದ ತಿಮ್ಮಕ್ಕನಂತಹ ಮುದುಕಿಯರು ಮಾಡಿದ ಪ್ರತಿಭಟನೆ/ಕೆಲಸಗಳು ಮುನ್ನೆಲೆಗೆ ಬರುತ್ತಿರುವುದು ಕುತೂಹಲಕಾರಿಯಾದ ಸಂಗತಿ. ಆದರೆ, ನಮ್ಮ ರಾಜಕೀಯವು ಇಂತಹವರನ್ನು ಕೇವಲ ಸಂಕೇತಗಳಾಗಿ ಬಳಸಿಕೊಳ್ಳುವ ಅಪಾಯ ಇದ್ದೇ ಇದೆ. ಇಂಥ ಸಂಕೇತಗಳ ಮೂಲಪ್ರೇರಣೆಗಳಲ್ಲಿ ಒಬ್ಬರಾದ ಗಾಂಧೀಜಿಯವರು ಕೂಡ ’ಪುರುಷತತ್ವ’ ಮತ್ತು ’ಸ್ತ್ರೀತತ್ವ’ಗಳ ವಿಚಿತ್ರ ಸಂಯೋಜನೆಯಾಗಿದ್ದರು. ಅವರ ’ಹಿಂದ್ ಸ್ವರಾಜ್’ ಪುಸ್ತಕದ ತಾತ್ವಿಕತೆಯು ’ಹೆಣ್ಣುತತ್ವ’ವು ಕಟ್ಟಬಹುದಾದ ಸಮಾಜದ ಘೋಷಣಾಪತ್ರದಂತಿದೆ. ಸಹಜವಾಗಿಯೇ ಅದು ವಿಕೇಂದ್ರೀಕರಣದ ಪರವಾಗಿದೆ. ರೈಲು, ಯುದ್ಧ, ಬೃಹತ್ ಕೈಗಾರಿಕೆ ಬೇಡ ಎನ್ನುತ್ತದೆ. ಗಾಂಧಿಯವರಂತೆ, ’ಅಸಂಗ್ರಹ’ದ ಪರವಾಗಿ ಮಾತನಾಡುವುದಕ್ಕೆ, ’ಹಸಿವಾದೊಡೆ ಭಿಕ್ಷಾನ್ನಗಳುಂಟು’ ಎಂದ ಮಹಾದೇವಿಯಕ್ಕನ ದಿಟ್ಟತನ ಬೇಕು. ಆದರೆ, ಅವರು ’ಟ್ರಸ್ಟೀಶಿಪ್’ನಂತಹ ಪರಿಕಲ್ಪನೆಯ ಪರವಾಗಿಯೂ ಮಾತಾಡಿದರು.
ಇದುವರೆಗಿನ ಮಾತುಗಳನ್ನು ನೋಡಿದಾಗ, ಸಾಮಾಜಿಕ ಸಂಬಂಧಗಳಿಗೂ ವೈಯಕ್ತಿಕ ಸಂಬಂಧಗಳ ಸ್ವರೂಪಕ್ಕೂ ಇರುವ ಸಂಬಂಧವು ಮನದಟ್ಟಾಗುತ್ತದೆ. ಅವು ಒಂದು ಬಿಟ್ಟು ಇನ್ನೊಂದು ಇರುವುದಿಲ್ಲ. ಕಳೆದ ಕೆಲವು ದಶಕಗಳಲ್ಲಿ ಇಂತಹ ಬದಲಾವಣೆಗಳು ಆಗಿರುವುದನ್ನು ನಾವೇ ನೋಡಿದ್ದೇವೆ. ನಾನು ಹುಡುಗನಾಗಿದ್ದಾಗ ಊರೊಟ್ಟಿನ ಹಬ್ಬಗಳಂತೆಯೇ ಸ್ವಾತಂತ್ರ್ಯೋತ್ಸವ, ಗಣರಾಜ್ಯ ದಿನಗಳೂ ಸಂಭ್ರಮ ಕಾರಣವಾಗುತ್ತಿದ್ದವು. ಈಗ ಪ್ರತಿಯೊಂದು ಮಗುವೂ ತನ್ನ ‘ಹ್ಯಾಪಿ ಬರ್ತ್ ಡೇ’ಗಾಗಿ ಕಾಯುತ್ತಿದೆ. ಹೀಗೆಂದರೆ, ನಮ್ಮ ಕಾಲ, ನಾವು ಒಳ್ಳೆಯವರಾಗಿದ್ದೆವು, ಇದು ಕೆಟ್ಟ ಕಾಲ ಎಂದು ಅರ್ಥವಲ್ಲ. ಹಾಗೆ ನೋಡಿದರೆ, ಹಲವು ನೆಲೆಗಳಲ್ಲಿ ಅದು ಇದಕ್ಕಿಂತ ಕೆಟ್ಟ ಕಾಲ. ಆದರೆ, ಈಗ ಒಳಿತಾಗಿರುವುದು ಯಾವುದು, ಯಾಕೆ ಮತ್ತು ಕೆಟ್ಟಿರುವುದು ಯಾವುದು, ಯಾಕೆ ಎಂಬ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಹುಡುಕಬೇಕಾಗಿದೆ. ಉತ್ತರ ಸಿಕ್ಕರೂ ಅವುಗಳನ್ನು ಅಳವಡಿಸಿಕೊಳ್ಳಬಹುದೆಂಬ ಭರವಸೆಯಿದೆಯೇ? ಬೇರೆ ಯಾರೋ ಅಳವಡಿಸಿಕೊಳ್ಳುವುದಿಲ್ಲ ಎಂದು ದೂರುವುದು, ಗೊಣಗುವುದು ಸುಲಭ. ಆದರೆ ಸ್ವತಃ ನನ್ನೊಳಗೆ ಆ ಬದಲಾವಣೆ ತಂದುಕೊಳ್ಳುವುದು ಹೇಗೆ ಎಂದು ಕೇಳಿಕೊಳ್ಳಬೇಕು. ನಾಟಕೀಯವಾಗಿ ಹೇಳುವುದಾದರೆ, ನಾವೆಲ್ಲರೂ ಹೆಣ್ಣುಮಕ್ಕಳಾಗಬೇಕು. ಹಾಗೆಂದರೆ, ಅವರನ್ನು ಏರಿಸಲಾಗಿರುವ ತ್ಯಾಗ, ಬಲಿದಾನಗಳ ಶಿಲುಬೆಗಳನ್ನು ನಾವು ಹೊರಬೇಕೆಂದು ಅರ್ಥವಲ್ಲ. ಬದಲಾಗಿ, ಅವರಿಗೆ ಆ ಶಿಲುಬೆಗಳಿಂದ ಬಿಡುಗಡೆ ಕೊಡುವ ಪ್ರೀತಿ ನಮ್ಮಲ್ಲಿ ಮೂಡಬೇಕು. ಇಲ್ಲಿ ಹೆಣ್ಣುಮಕ್ಕಳೆಂದರೆ ಕೇವಲ ಹೆಂಗಸರಲ್ಲ. ದಲಿತರು, ಕಾರ್ಮಿಕರು, ಬಡವರು, ರೈತರು ಎಲ್ಲರೂ ಶಿಲುಬೆಯ ಮೇಲೆಯೇ ಇರುತ್ತಾರೆ. ಅದೇ ಸಮಯದಲ್ಲಿ ಬೇರೆಯವರನ್ನು ಶಿಲುಬೆಗೆ ಏರಿಸುತ್ತಲೂ ಇರುತ್ತಾರೆ. ಶಿಲುಬೆಗಳೇ ಇಲ್ಲದ ಲೋಕದ ಕಡೆಗೆ ಚಲಿಸಲು ಈ ಒಳಗೊಳ್ಳುವಿಕೆ, ಒಂದಾಗುವಿಕೆ ಅತ್ಯಗತ್ಯ.
ಮನುಷ್ಯ ಒಂಟಿಯಾಗಿ ದುಃಖ ಪಡಬಹುದು. ಆದರೆ, ಅವನು ಒಂಟಿಯಾಗಿ ಸಂತೋಷ ಪಡಲಾರ. ನಮ್ಮ ಸಂತೋಷವು ನಿಸ್ಸಂದೇಹವಾಗಿ ಇತರರನ್ನು ಅವಲಂಬಿಸಿರುತ್ತದೆ. ನಮಗೆ ಸಂತೋಷ ಕೊಡುವ ಶಕ್ತಿಯಿಲ್ಲದವರೂ ದುಃಖ ಕೊಡಬಲ್ಲರು. ನಾವೂ ಹಾಗೆಯೇ. ಇಂತಹ ಸಂತೋಷ ಮತ್ತು ದುಃಖ ಎರಡೂ ಬೇಡವೆಂದು ಬಂಡೆಯಾದರೆ ಆಗ ಸಿಗುವ ಖಾಲಿತನವು ಅಷ್ಟೇ ಕಷ್ಟದ್ದು. ಪು.ತಿ.ನ., ಈ ಹೊರಜಗಕೂ ನನ್ನೊಳ ಮುದಕೂ ಏತರ ನಂಟು, ಅದೇತರದು? ಎಂದು ಕೇಳಿಕೊಂಡಾಗ, ಈ ಸಂಬಂಧವನ್ನೇ ಹುಡುಕುತ್ತಿದ್ದರು.
ನಾನು ಮತ್ತೆ ದೇವನೂರ ಮಹಾದೇವರಿಗೇ ಹಿಂದಿರುಗುತ್ತೇನೆ. ಅವರು ಸೃಷ್ಟಿಸಿದ ಸಾಕಮ್ಮ, ಪುಟಗೌರಿ, ಕೆಂಪಿ, ತೂರಮ್ಮ ಎಲ್ಲರೂ ಈ ತಿಳಿವಳಿಕೆಯನ್ನು ಮೈಗೂಡಿಸಿಕೊಂಡವರು. ಅವರು ಪಟ್ಟ ಭಂಗ’ ಕಡಿಮೆಯದಲ್ಲ, ತೋರಿಸಿದ ಪ್ರೀತಿಯೂ ಕಡಿಮೆಯದಲ್ಲ. ಅವರು ಕವಿ ತೇಜಶ್ರೀಯವರು ಹೇಳಿರುವ, ‘ಸಂಬಂಜ ಅನ್ನೋದು ಜವಾಬುದಾರಿ’ ಎಂಬ ದಿಟವಾದ ತಿಳಿವಳಿಕೆಯನ್ನೂ ರೂಢಿಸಿಕೊಂಡವರು. ಆ ಜವಾಬ್ದಾರಿಯನ್ನು ನಿರ್ವಹಿಸಲು ಸಂತೋಷವಾಗಿ ಶಿಲುಬೆ ಹೊತ್ತವರು. ಆದರೆ, ಅವರು ಯಮನಿಗೂ ಸವಾಲು ಹಾಕಬಲ್ಲ ಧೈರ್ಯವನ್ನೂ ಬೆಳೆಸಿಕೊಂಡರು. ಈ ತಿಳಿವಳಿಕೆಯು ನಮ್ಮ ಸ್ವಂತ ಸಂಬಂಧಗಳನ್ನು ಹಸನಾಗಿ ಇಟ್ಟುಕೊಳ್ಳುವ ಹಂಬಲವನ್ನು, ಹಟವನ್ನು ನಮ್ಮೊಳಗೆ ಮೂಡಿಸಲಿ.
ಈ ಅಂಕಣದ ಹಿಂದಿನ ಬರೆಹ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.