ಕನ್ನಡ ವಿಮರ್ಶೆ -5 

Date: 24-03-2025

Location: ಬೆಂಗಳೂರು


"ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದಲ್ಲಿಯೂ ತೌಲನಿಕ ಮಾರ್ಗದಲ್ಲಿಯೂ ಹಾಕಬಹುದು. ಹಾಗೆಯೆ ಕುರ್ತಕೋಟಿಯವರ ಬರಹಗಳನ್ನು ಚಾರಿತ್ರಿಕ ವಿಮರ್ಶೆ, ಕವಿಕೇಂದ್ರಿತ ಅಧ್ಯಯನ, ಕೃತಿಕೇಂದ್ರಿತ ಅಧ್ಯಯನ, ಯುಗಧರ್ಮ ದೃಷ್ಟಿ, ವಿಷಯಾಧಾರಿತ ಚಿಂತನೆ ಹೀಗೆ ಹಲವಾಗಿ ವರ್ಗೀಕರಿಸಿಕೊಳ್ಳಬಹುದು," ಎನ್ನುತ್ತಾರೆ ಡಾ. ರಾಮಲಿಂಗಪ್ಪ ಟಿ. ಬೇಗೂರು. ಅವರು ತಮ್ಮ ‘ನೀರು ನೆರಳು’ ಅಂಕಣದಲ್ಲಿ ಬರೆದಿರುವ ‘ಕನ್ನಡ ವಿಮರ್ಶೆ ಭಾಗ-5’ (ಮುಂದುವರೆದ ಭಾಗ) ವಿಮರ್ಶಾ ಸರಣಿ ನಿಮ್ಮ ಓದಿಗಾಗಿ..

ಭಾಗ 3. ವಿಮರ್ಶೆಯ ಏರುಗತಿಯ ಕಾಲ: 1950ರಿಂದ ಅನಂತರದ ಕಾಲ

1. ನಮ್ಮ ಏರುಗತಿಯ ಕಾಲದ ವಿಮರ್ಶೆಯನ್ನು ಹೇಗೆ ವರ್ಗೀಕರಿಸಿಕೊಳ್ಳಬಹುದು?

ಈಗಾಗಲೆ ಮೊದಲನೆ ಭಾಗದಲ್ಲೆ ಈ ಬಗ್ಗೆ ಹಲವೆಡೆ ಸಾಕಷ್ಟು ಸೂಚನೆಗಳನ್ನು ನೀಡಲಾಗಿದೆ. ಇಂದಿನ ನಮ್ಮ ವಿಮರ್ಶೆಯನ್ನು ಗಮನಿಸಿದರೆ 1. ವಿಮರ್ಶೆಯ ರೂಪಗಳು ಅಥವಾ ಬಗೆಗಳು. 2. ಸಾಹಿತ್ಯ ಆಧಾರಿತ ವಿಮರ್ಶಾ ಪ್ರಸ್ಥಾನಗಳು. 3. ಕನ್ನಡ ವಿಮರ್ಶೆಯ ಪಂಥಗಳು/ ಸ್ಕೂಲುಗಳು ಈ ಮೂರು ರೀತಿಗಳಲ್ಲಿ ಅದನ್ನು ವರ್ಗೀಕರಿಸಿಕೊಳ್ಳಲು ಸಾಧ್ಯವಿದೆ ಅನ್ನಿಸುತ್ತದೆ.

ವಿಮರ್ಶೆಯ ರೂಪಗಳು ಅಥವಾ ಬಗೆಗಳಲ್ಲಿ ಅಭಿಜಾತ ವಿಮರ್ಶೆ, ಮಾರ್ಕ್ಸ್ವಾದಿ ವಿಮರ್ಶೆ, ಉದಾರವಾದಿ ವಿಮರ್ಶೆ, ವಿವರಣಾತ್ಮಕ ವಿಮರ್ಶೆ, ರಾಚನಿಕ ಸಿದ್ಧಾಂತ, ರಾಚನಿಕೋತ್ತರ ವಿಮರ್ಶೆ, ನಿರಚನವಾದಿ ವಿಮರ್ಶೆ, ಪೌರ್ವಾತ್ಯವಾದ, ಚಾರಿತ್ರಿಕ ವಿಮರ್ಶೆ, ಮನೋವೈಜ್ಞಾನಿಕ ವಿಮರ್ಶೆ, ನವಚಾರಿತ್ರಿಕ ವಾದ, ಓದುಗ ಸ್ಪಂದನ ಸಿದ್ಧಾಂತ, ಸ್ತ್ರೀವಾದಿ ವಿಮರ್ಶೆ, ಕವಿ - ಕೃತಿ - ಓದುಗ ಕೇಂದ್ರಿತ ವಿಮರ್ಶೆ ಇತ್ಯಾದಿಗಳು ಬರುತ್ತವೆ.

ಸಾಹಿತ್ಯ ಆಧಾರಿತ ವಿಮರ್ಶೆಯಲ್ಲಿ ಹಲವು ಬಗೆಯ ವಿಮರ್ಶೆಗಳನ್ನು ನಾವು ಗುರ್ತಿಸಿಕೊಂಡು ಚಾಲ್ತಿಗೆ ತಂದಿದ್ದೇವೆ. ಪ್ರಾಚೀನ ವಿಮರ್ಶೆ, ಆಧುನಿಕ ವಿಮರ್ಶೆ ಎಂಬ ಎರಡು ಬಗೆಯ ವರ್ಗೀಕರಣಗಳಲ್ಲದೆ ಇಲ್ಲಿ ನವೋದಯ ವಿಮರ್ಶೆ, ನವ್ಯ ವಿಮರ್ಶೆ, ಪ್ರಗತಿಶೀಲ ವಿಮರ್ಶೆ, ದಲಿತ - ಬಂಡಾಯ ವಿಮರ್ಶೆ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ಈ ರೀತಿಯ ವಿಮರ್ಶೆಗಳನ್ನೂ ನಾವು ಗುರ್ತಿಸಿ ನಾಮಕರಿಸಿಕೊಂಡಿದ್ದೇವೆ. ಇವುಗಳ ಫಿಲಾಸಫಿ ಕೂಡ ನಮ್ಮಲ್ಲಿ ಸಾಕಷ್ಟು ಸೃಷ್ಟಿಯಾಗಿದೆ. ಈ ವರ್ಗೀಕರಣದ ಹಿನ್ನೆಲೆಯಲ್ಲೆ ಹಲವು ಸಂಶೋಧನೆಗಳೂ ನಡೆದಿವೆ. ಇಂಥ ವಿಮರ್ಶೆಯ ವರ್ಗೀಕರಣಗಳನ್ನು ವರ್ಜಿಸಬೇಕಾದ ಅಗತ್ಯವಿದೆ. ಯಾಕೆಂದರೆ ಈ ರೀತಿಯಲ್ಲಿ ನಮ್ಮಲ್ಲಿ ವಿಮರ್ಶೆಗಳು ಸಂಭವಿಸಿಲ್ಲ. ನಾವು ಇಂದು ಯಾವುದನ್ನು ನವೋದಯ, ನವ್ಯ, ಪ್ರಗತಿಶೀಲ ಎಂದು ಸಾಹಿತ್ಯಗಳನ್ನು ವರ್ಗೀಕರಿಸಿಕೊಂಡಿದ್ದೇವೋ ಅದೆ ರೀತಿಯಲ್ಲಿ ವಿಮರ್ಶೆಯನ್ನು ವರ್ಗೀಕರಿಸಿಕೊಳ್ಳುವ ಹಾಗೆ ನಮ್ಮ ವಿಮರ್ಶೆಯು ಖಚಿತವಾಗಿ ಸಂಭವಿಸಿ, ಬೆಳೆದಿಲ್ಲ. ನಮ್ಮಲ್ಲಿ ನವೋದಯ, ನವ್ಯ, ಪ್ರಗತಿಶೀಲ ಇವು ನಿರ್ದಿಷ್ಟವಾದ ವಿಮರ್ಶಾ ಐಡಿಯಾಲಜಿಗಳಾಗಲಿ, ತಾತ್ವಿಕತೆಗಳಾಗಲಿ, ಸ್ಕೂಲುಗಳಾಗಲಿ ಆಗಿ ಬೆಳೆದಿಲ್ಲ. ನಾವು ಇವನ್ನು ಸಾಹಿತ್ಯ ಸಂವೇದನೆಗಳಾಗಿಯೂ, ಕಾಲಘಟ್ಟಗಳಾಗಿಯೂ ನಿರ್ವಚಿಸಿಕೊಂಡಿದ್ದೇವೆ. ಆದರೆ ಆ ರೀತಿಯ ಸಂವೇದನೆ, ಕಾಲಘಟ್ಟಗಳೂ ನಮ್ಮ ವಿಮರ್ಶೆಗೆ ದಕ್ಕಿಲ್ಲ. ಹಾಗಾಗಿ ನಮ್ಮ ವಿಮರ್ಶೆಯನ್ನು ನವೋದಯ ವಿಮರ್ಶೆ, ನವ್ಯ ವಿಮರ್ಶೆ, ಪ್ರಗತಿಶೀಲ ವಿಮರ್ಶೆ ಎಂದು ಗುರ್ತಿಸುವಷ್ಟು ಅವು ಸೃಷ್ಟಿಯೂ ಆಗಿಲ್ಲ, ಬೆಳದೂ ಇಲ್ಲ. ಆಯಾ ಕಾಲಘಟ್ಟದ ವಿಮರ್ಶಕರನ್ನು ಲಕ್ಷಿಸಿ ಆಯಾ ವಿಮರ್ಶಕರನ್ನು ನವೋದಯ ವಿಮರ್ಶಕರು ಎಂದೋ, ನವ್ಯ ವಿಮರ್ಶಕರು ಎಂದೊ, ಪ್ರಗತಿಶೀಲ ವಿಮರ್ಶಕರು ಎಂದೊ ಗುರ್ತಿಸಿಕೊಳ್ಳುವುದು ಕೇವಲ ಸಾಹಿತ್ಯ ಆಧಾರಿತ ವಿಮರ್ಶಾ ವರ್ಗೀಕರಣ ಆದೀತಷ್ಟೆ.

ಇನ್ನು ದಲಿತ ಸಾಹಿತ್ಯ ವಿಮರ್ಶೆ ಮತ್ತು ಸ್ತ್ರೀವಾದಿ ವಿಮರ್ಶೆಗಳು ನಮ್ಮಲ್ಲಿ ಸಾಕಷ್ಟು ತಾತ್ವಿಕವಾಗಿಯೂ ಆಚಾರಗಳಾಗಿಯೂ ಬೆಳೆದಿವೆ. ಅವುಗಳನ್ನು ಪ್ರತ್ಯೇಕ ಗುರ್ತಿಸಿಕೊಳ್ಳಲು ಸಾಧ್ಯವಿದೆ. ಅವನ್ನು ಕನ್ನಡದ ಎರಡು ವಿಮರ್ಶಾ ಧಾರೆಗಳಾಗಿಯೂ, ಸ್ಕೂಲುಗಳಾಗಿಯು ಕಂಡುಕೊಳ್ಳಲು ಸಾಧ್ಯವಿದೆ.

ಇನ್ನು ಮೂರನೆ ನೆಲೆಯಲ್ಲಿ ಮೊದಲ ಎರಡು ನೆಲೆಗಳ ಆಚೆಗೆ ಆಚಾರದ ತಾತ್ವೀಕರಣವನ್ನು ಮಾಡಿಕೊಂಡರೆ ಹಲವಾರು ವಿಮರ್ಶಾ ಸ್ಕೂಲುಗಳು (ಪಂಥಗಳು, ದೃಷ್ಟಿಗಳು, ಮಾರ್ಗಗಳು, ಧಾರೆಗಳು) ಸೃಷ್ಟಿಯಾಗಿರುವದನ್ನು ಕಾಣಬಹುದು. ಪುಸ್ತಕ ವಿಮರ್ಶೆ ಮಾರ್ಗ, ವಿಮರ್ಶಾತ್ಮಕ ಅಧ್ಯಯನ - ಸಂಶೋಧನೆ ಮಾರ್ಗ, ಸಂಗ್ರಹ-ಸಂಪಾದನಾ ಮಾರ್ಗ, ಮುನ್ನುಡಿ-ಬೆನ್ನುಡಿ ಮಾರ್ಗ, ಅಭಿನಂದನಾ - ಸಂಭಾವನಾ - ಸಂಸ್ಮರಣ ಮಾರ್ಗ, ಸಾಹಿತ್ಯ ಚರಿತ್ರೆ ರಚನೆ ಮಾರ್ಗ, ಒಡನಾಟ ಕಥನ ಮಾರ್ಗ, ಸೂಕ್ತಿಸಂಗ್ರಹ ಮಾರ್ಗ, ಅಂಕಣ ಬರಹ ಧಾರೆ, ರೇಡಿಯೊ ಚಿಂತನಾ ಧಾರೆ, ತೌಲನಿಕ ಅಧ್ಯಯನಗಳು, ಮಹಿಳಾ ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು, ನಾಡು ನುಡಿ ಚಿಂತನಾ ಧಾರೆ, ಟೀಕು - ವ್ಯಾಖ್ಯಾನ, ಸರಳೀಕರಣ ಮಾರ್ಗ, ಮೀಮಾಂಸಾ - ದಾರ್ಶನಿಕ ಧಾರೆ, ಪಾಂಥಿಕ ಧಾರೆ ಇತ್ಯಾದಿ ಇತ್ಯಾದಿ ಹಲವು ಪಂಥ - ಸ್ಕೂಲುಗಳನ್ನು ನಮ್ಮಲ್ಲಿ ಚಾಲ್ತಿಯಲ್ಲಿ ಇದ್ದ ಮತ್ತು ಇರುವ ವಿಮರ್ಶೆಯ ಆಚಾರವನ್ನು ತಾತ್ವೀಕರಿಸಿಕೊಳ್ಳುವ ಮೂಲಕ ಗುರ್ತಿಸಿಕೊಳ್ಳಬಹುದು.

ನಮ್ಮಲ್ಲಿ ಡಿ. ಆರ್. ನಾಗರಾಜರ ಬರವಣಿಗೆಗಳನ್ನು ದಾರ್ಶನಿಕ - ತತ್ವಜ್ಞಾನಿಕ ಮಾರ್ಗದಲ್ಲಿಯೂ, ಸಬಾಲ್ಟರ್ನ್ ಮಾರ್ಗದಲ್ಲಿಯೂ ತೌಲನಿಕ ಮಾರ್ಗದಲ್ಲಿಯೂ ಹಾಕಬಹುದು. ಹಾಗೆಯೆ ಕುರ್ತಕೋಟಿಯವರ ಬರಹಗಳನ್ನು ಚಾರಿತ್ರಿಕ ವಿಮರ್ಶೆ, ಕವಿಕೇಂದ್ರಿತ ಅಧ್ಯಯನ, ಕೃತಿಕೇಂದ್ರಿತ ಅಧ್ಯಯನ, ಯುಗಧರ್ಮ ದೃಷ್ಟಿ, ವಿಷಯಾಧಾರಿತ ಚಿಂತನೆ ಹೀಗೆ ಹಲವಾಗಿ ವರ್ಗೀಕರಿಸಿಕೊಳ್ಳಬಹುದು. ಚೆನ್ನಿಯವರ ಬರವಣಿಗೆಯನ್ನು ಒಳನೋಟವಾದಿ ಆಗಿಯೂ, ಸಾಂಸ್ಕೃತಿಕ ವಿಮರ್ಶೆ ಆಗಿಯೂ ನೋಡಬಹುದು. ಕೆ.ವಿ. ನಾರಾಯಣರ ಬರಹಗಳನ್ನು ನಾಡು ನುಡಿ ಚಿಂತನಾ ಧಾರೆಯಲ್ಲೂ, ಕೃತಿ - ಲೇಖಕ - ವಿಷಯಾಧಾರಿತ ಧಾರೆಯಲ್ಲು, ಭಾಷಾವೈಜ್ಞಾನಿಕ ನೆಲೆಯಲ್ಲೂ ನೋಡಬಹುದು. ರಹಮತ್ ತರೀಕೆರೆಯವರ ಬಹುಪಾಲು ಬರವಣಿಗೆಗಳನ್ನು ಮೀಮಾಂಸಾ ಮಾರ್ಗದಲ್ಲಿಯೂ, ಸಂಶೋಧನಾ ಅಧ್ಯಯನ ಮಾರ್ಗದಲ್ಲಿಯೂ, ಪಾಂಥಿಕತೆಯ ಅಧ್ಯಯನ ಧಾರೆಯಲ್ಲಿಯೂ ಹಾಕಬಹುದು. ಅಂದರೆ ಯಾವೊಬ್ಬ ವಿಮರ್ಶಕನೂ ಇಂಥದೇ ಒಂದು ಪಂಥಕ್ಕೆ ಮಾತ್ರ ಸೇರಿದವನು ಎಂಬಂತೆ ಬ್ರಾಂಡ್ ಮಾಡಬಹುದಾದ ರೀತಿಯಲ್ಲಿ ನಮ್ಮಲ್ಲಿ ವಿಮರ್ಶೆ ಬರೆದಿಲ್ಲ. (ನಮ್ಮಲ್ಲಿನ ಬಹುಪಾಲು ವಿಮರ್ಶೆಯು ಶೈಕ್ಷಣಿಕ ಸಂದರ್ಭಗಳ ಒತ್ತಡಗಳಿಂದ ಸೃಷ್ಟಿಯಾಗಿದೆ.) ಯಾರೊಬ್ಬರ ವಿಮರ್ಶೆಯೂ ಒಂದು ನಿರ್ದಿಷ್ಟ ರೂಪ, ಪಂಥ, ದೃಷ್ಟಿಗೆ ಸೀಮಿತವಾದ ವಿಮರ್ಶೆಯಲ್ಲ. ವ್ಯಕ್ತಿಕೇಂದ್ರಿತವಾಗಿ ನೋಡಿದಾಗ ಅವರವರ ವಿಮರ್ಶೆಗಳು ಹಲವು ತೆರನಾದ ದೃಷ್ಟಿ ರೂಪಗಳಲ್ಲಿ ಸಂಭವಿಸಿರುವುದನ್ನು ಕಾಣಬಹುದು. ಆದರೆ ನಿರ್ದಿಷ್ಟ ಪಂಥ, ಸ್ಕೂಲಿಗೆ ಮಾತ್ರವೆ ಸೇರುವ ಅಥವಾ ನಿರ್ದಿಷ್ಟ ಐಡಿಯಾಲಜಿಗೆ ಮಾತ್ರ ಬದ್ಧವಾದ ವಿಮರ್ಶಕರು ನಮ್ಮಲ್ಲಿಲ್ಲ. ಇರುವವರೆಲ್ಲರೂ ಬಹುಲಕ್ಷಣಗಳನ್ನು ಹೊಂದಿರುವವರು. ಇನ್ನು ನಮ್ಮಲ್ಲಿ ವಿಮರ್ಶೆಯ ಪಾಂಥಿಕತೆಗಳು - ಸ್ಕೂಲುಗಳು ನಿರ್ಮಾಣ ಆಗಿವೆಯಾ ಎಂದರೆ ಖಂಡಿತಾ ಆಗಿವೆ. ಆದರೆ ಅವು ವ್ಯಕ್ತಿಕೇಂದ್ರಿತ ಅಥವಾ ನಿರ್ದಿಷ್ಟ ವ್ಯಕ್ತಿನಿರ್ಮಿತ ಎಂಬAತೆ ಬೆಳೆದಿಲ್ಲ.

ಅಲ್ಲದೆ ನಮ್ಮಲ್ಲಿ ಕೆಲವರಲ್ಲಿ ಉದಾಹರಣೆಗೆ ಡಾ. ಜಿ. ರಾಮಕೃಷ್ಣ, ಡಾ. ಸಿ. ವೀರಣ್ಣ ಇಂಥವರಲ್ಲಿ ಮಾರ್ಕ್ಸ್ವಾದಿ ದೃಷ್ಟಿಯೂ, ಡಿ.ಆರ್. ನಾಗರಾಜ, ರಾಜೇಂದ್ರ ಚೆನ್ನಿ ಇಂಥವರಲ್ಲಿ ಅನುಸಂಧಾನಗಳ ಜೀರ್ಣಫಲಗಳೂ, ದಾರ್ಶನಿಕತೆಯ ದೃಷ್ಟಿಯೂ, ಕುರ್ತಕೋಟಿ ಅಂಥವರಲ್ಲಿ ಕೃತಿ ಕೇಂದ್ರಿತ, ಕರ್ತೃ ಕೇಂದ್ರಿತ ಮತ್ತು ಚಾರಿತ್ರಿಕ ದೃಷ್ಟಿಗಳೂ, ಕೆ.ವಿ. ನಾರಾಯಣ, ಡಿ.ಎನ್. ಶಂಕರಭಟ್ಟ ಇಂಥವರಲ್ಲಿ ಭಾಷಾ ಅಸ್ಮಿತೆಯ ದೃಷ್ಟಿಯೂ ಹೀಗೆ ಒಬ್ಬೊಬ್ಬರಲ್ಲಿ ಒಂದೊಂದೊ ಹಲವೊ ದೃಷ್ಟಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತವೆಯಾದರೂ ಇವುಗಳನ್ನೆಲ್ಲ ಕನ್ನಡ ಚಿಂತನಾ ಶಾಲೆಗಳನ್ನು ರೂಪಿಸಿಕೊಳ್ಳುವ ದೃಷ್ಟಿಯಿಂದ ತಾತ್ವೀಕರಿಸಿಕೊಳ್ಳಬೇಕಾದ ಅಗತ್ಯವಿದೆ. ಇದೊಂದು ಶ್ರಮಶೀಲವಾದ ಕೆಲಸ. ಅಗತ್ಯವಾಗಿ ಅಗಬೇಕಾದ ಕೆಲಸ ಕೂಡ.

ನಮ್ಮ ವಿಮರ್ಶೆಯಲ್ಲಿ ಮಾರ್ಗಗಳು ರೂಪಗೊಂಡಿವೆಯೇ?

ಹೌದು ರೂಪಗೊಂಡಿವೆ. ಹತ್ತು ಹಲವು ಪಂಥಗಳು-ದಾರಿಗಳು ನಮ್ಮಲ್ಲಿ ರೂಪಗೊಂಡಿವೆ. ಅವುಗಳನ್ನು ಸ್ಥೂಲವಾಗಿ ಈ ಕೆಳಕಂಡಂತೆ ಗುರ್ತಿಸಿಕೊಳ್ಳಬಹುದು. ನಮ್ಮಲ್ಲಿ ಆಚರಣೆಯಲ್ಲಿರುವ ಕೆಲವು ಪಂಥಗಳನ್ನಷ್ಟೆ ಇಲ್ಲಿ ಗುರ್ತಿಸಲಾಗುವುದು. ಸಾದ್ಯಂತವಾಗಿ ಲಕ್ಷಣ ಸಮೇತ ಎಲ್ಲವನ್ನು ಸೈದ್ಧಾಂತೀಕರಿಸಲು ಇಲ್ಲಿ ಯತ್ನಿಸಿಲ್ಲ. ಅದು ಪ್ರಸ್ತುತ ಲೇಖನದ ವ್ಯಾಪ್ತಿಯಲ್ಲಿ ಸಾಧ್ಯವೂ ಇಲ್ಲ. ನಮ್ಮಲ್ಲಿ ಆಚರಣೆಯಾಗಿರುವ ಕೆಲವು ಮಾರ್ಗಗಳು ಯಾವುವು ಎಂಬುದನ್ನು ಕೇವಲ ಪರಿಚಯಾತ್ಮಕವಾಗಿ ಉಲ್ಲೇಖಿಸಲು ಮತ್ತು ಮಂಡಿಸಲು ಮಾತ್ರ ಇಲ್ಲಿ ಯತ್ನಿಸಲಾಗುವುದು. (ಮೇಲೆ ಈಗಾಗಲೆ ಹೊಸನೀರಿನ ಕಾಲದ ವಿಮರ್ಶೆಯ ಕುರಿತು ಬರೆಯುವಾಗ ನಮ್ಮ ವಿಮರ್ಶೆಯ ಕೆಲವು ದೃಷ್ಟಿ, ಧೋರಣೆ, ಪಾಂಥಿಕತೆ, ವಿಮರ್ಶಾ ಸ್ಕೂಲುಗಳ ಬಗ್ಗೆ ಅಲ್ಪ ಸ್ವಲ್ಪ ಪ್ರಸ್ತಾಪಿಸಲಾಗಿದೆ.) ಹಾಗಾಗಿ ಇದೊಂದು ನಮ್ಮ ಆಚಾರಗಳ ತಾತ್ವೀಕರಣದ ಮತ್ತು ತತ್ವಗಳ ಕ್ರೋಡೀಕರಣದ ಮೊದಲ ಮೆಟ್ಟಿಲು ಮಾತ್ರ. ತೋರುಬೆರಳು ಮಾತ್ರ. ಹಾಗಾಗಿ ಈ ಕ್ಷೇತ್ರದಲ್ಲಿ ಆಚಾರದ ತಾತ್ವೀಕರಣದ ಹಿನ್ನೆಲೆಯಲ್ಲಿ ಅಪಾರವಾದ ಕೆಲಸ ಬಾಕಿಯಿದೆ. ಅಂಥ ಕೆಲಸದ ತೋರುಬೆರಳಾಗಿ ಮಾತ್ರವೆ ಈ ಲೇಖವನ್ನು ಮಂಡಿಸಲಾಗಿದೆ. ಹಾಗಾಗಿಯೆ ಈ ಬರಹ ಸರಣಿಗೆ ವಿಮರ್ಶೆಯ ತೋರುಬೆರಳು ಎಂಬ ಉಪಶೀರ್ಷಿಕೆಯನ್ನೂ ನೀಡಲಾಗಿದೆ. ಪ್ರಾಜ್ಞರು ಈ ಕೆಲಸವನ್ನು ಮುಂದುವರಿಸಬಹುದು.

1. ಅಭಿನಂದನಾ ಮಾರ್ಗ

ಆಧುನಿಕ ಸಂದರ್ಭದಲ್ಲಿ ಲೇಖಕ ಕೇಂದ್ರಿತವಾದ ಹಲವು ತೆರನ ವಿಮರ್ಶಾ ಮಾರ್ಗಗಳಲ್ಲಿ ಅಭಿನಂದನಾ ಮಾರ್ಗವೂ ಒಂದು. ಬಿ.ಎಂ.ಶ್ರೀ ಅವರಿಗೆ ಅವರ ಶಿಷ್ಯರು ಅರ್ಪಿಸಿದ ‘ಸಂಭಾವನಾ’ ಗ್ರಂಥದಿAದ ಇದರ ಆರಂಭವನ್ನು ಗುರ್ತಿಸಬಹುದು. ಅಲ್ಲಿಂದ ಇಲ್ಲಿಯವರೆಗೆ ನೂರಾರು ಸಂಭಾವನಾ ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗುತ್ತ ಬಂದಿವೆ. ತಾವು ಅಭಿನಂದಿಸಬೇಕೆಂದು ಉದ್ದೇಶಿಸಿದ ಲೇಖಕರ-ವ್ಯಕ್ತಿಗಳ ಬರವಣಿಗೆ-ಬದುಕು, ವ್ಯಕ್ತಿತ್ವ, ಸಾಧನೆಗಳನ್ನು ಪರಿಚಯಿಸುವುದು ಆಮೂಲಕ ಪ್ರೀತಿ ಪಾತ್ರರಿಗೆ ಗೌರವ ತೋರುವುದು ಇಂತಹ ಗ್ರಂಥಗಳ ಪ್ರಧಾನ ಉದ್ದೇಶ. ಇದರ ಜೊತೆಗೆ ಅಭಿನಂದಿತರ ಬದುಕು ಬರಹಗಳಲ್ಲದೆ ಯಾವುದಾದರೂ ಕ್ಷೇತ್ರ-ವಲಯಗಳ ಕುರಿತಂತೆ ಅಭಿನಂದನ ಗ್ರಂಥವನ್ನು ಒಂದು ಆಕರ ಗ್ರಂಥವನ್ನಾಗಿ ಸಿದ್ಧಪಡಿಸುವ ಯತ್ನಗಳೂ ನಮ್ಮಲ್ಲಿ ಸಾಕಷ್ಟು ನಡೆದಿವೆ. ಅಭಿನಂದನಾ ಸಮಾರಂಭ ಏರ್ಪಡಿಸಿ, ಅಭಿನಂದಿತರ ಬದುಕು-ಬರಹಗಳನ್ನು ಚರ್ಚಿಸಿ, ಅಭಿನಂದಿತರ ಕುಟುಂಬವನ್ನೂ ಆದರಿಸಿ, ಗೌರವಾರ್ಪಿಸುವ ಸಾಂಸ್ಕೃತಿಕ ಆಚರಣೆಗಳೂ ಇದರೊಟ್ಟಿಗೆ ಕಲೆತಿರುತ್ತವೆ. ಹಾಗಾಗಿ ವಿಮರ್ಶೆಯೆಂಬುದು ಇಂತಹ ಕಡೆ ಮತ್ತೆ ಮತ್ತೆ ಸಾಂಸ್ಕೃತಿಕ ಆಚಾರವಾಗಿ ಅಭಿನಯಗೊಳ್ಳುತ್ತಿರುತ್ತದೆ.

ಪ್ರಾಚೀನ ಸಂದರ್ಭದಲ್ಲು ಸತ್ಕವಿವಂದನೆ, ಕುಕವಿ ನಿಂದೆಗಳು, ಪೂರ್ವಕವಿ ಸ್ಮರಣೆ-ಪ್ರಶಂಸೆಗಳು ಸಾಕಷ್ಟು ಸಂಭವಿಸಿವೆ. ನಿಂದನಾ ಮತ್ತು ಅಭಿನಂದನಾ ಧಾಟಿಯ ವಿಮರ್ಶೆ ಇಲ್ಲೆಲ್ಲ ಪ್ರಕಟವಾಗಿದೆ. ಹಾಗಾಗಿ ಅಭಿನಂದನಾ ಮಾರ್ಗದ ಬೇರುಗಳು ನಮ್ಮ ಪ್ರಾಗ್ವಿಮರ್ಶೆಯಲ್ಲು ಕೂಡ ಇವೆ.

2. ತತ್ವ-ಮೀಮಾಂಸೆ-ಪರಿಕರ ಮಾರ್ಗ

ಕಾವ್ಯ ಮೀಮಾಂಸೆಯ ಹೆಸರಿನಲ್ಲಿ, ಅಲಂಕಾರಶಾಸ್ತ್ರ, ಛಂದಸ್‌ಶಾಸ್ತ್ರ, ಭಾಷಾಮೀಮಾಂಸೆಗಳ ಹೆಸರಿನಲ್ಲಿ, ಕಾವ್ಯತತ್ವ-ವಿಮರ್ಶೆಯ ತತ್ವ, ಪರಿಭಾಷಾ ಕೋಶ ನಿರ್ಮಾಣಗಳ ರೂಪದಲ್ಲಿ ನಡೆದಿರುವ ಎಲ್ಲ ಕರ‍್ಯವೂ ಈ ಮಾರ್ಗದ ಅಡಿಯಲ್ಲಿಯೇ ಬರುತ್ತದೆ. ನಮ್ಮ ಪ್ರಾಚೀನರ ಕಾವ್ಯಾವಲೋಕನ, ಕವಿರಾಜಮಾರ್ಗ, ಶಬ್ದಮಣಿದರ್ಪಣ, ಛಂದೋಂಬುಧಿ, ಅಭಿದಾನ ವಸ್ತುಕೋಶ ಇತ್ಯಾದಿ ಶಾಸ್ತ್ರಗಳೆಲ್ಲವೂ 1) ಸಾಹಿತ್ಯದ ಕಟ್ಟಾಣಿಕೆಗೆ ಬೇಕಾದ ಮತ್ತು 2) ಸಾಹಿತ್ಯದ ಅಧ್ಯಯನಕ್ಕೆ ಬೇಕಾದ ಪರಿಕರಗಳನ್ನು ನಿರ್ಮಾಣಮಾಡುವ ಕಡೆಗೆ ಸಾಕಷ್ಟು ದುಡಿದಿವೆ. ಸಾಹಿತ್ಯದ ತತ್ವ, ಮೀಮಾಂಸೆಯ ತತ್ವ, ಕಾವ್ಯ ಪ್ರಯೋಜನ, ಓದುಗನ ರಸಾನುಭವ ಇತ್ಯಾದಿ ವಿಚಾರಗಳನ್ನು ಸಾಕಷ್ಟು ತಾತ್ವೀಕರಿಸಿವೆ. ಹಾಗಾಗಿ ಇವನ್ನೆಲ್ಲ ತತ್ವ-ಪರಿಕರ ಮಾರ್ಗ ಎನ್ನಬಹುದು. ಹೊಸನೀರಿನ ಕಾಲದ ವಿಮರ್ಶೆಯಲ್ಲಂತೂ ಈ ತತ್ವ-ಪರಿಕರ ಮಾರ್ಗದಲ್ಲಿ ಅನೇಕ ಕೃತಿಗಳು ರಚನೆಯಾಗಿವೆ. ತೀ.ನಂ.ಶ್ರೀಯವರ ಭಾರತೀಯ ಕಾವ್ಯ ಮೀಮಾಂಸೆ, ಎ.ಆರ್.ಕೃ ಮತ್ತು ಕುವೆಂಪು ಅವರ ಕನ್ನಡ ಕೈಪಿಡಿಗಳು, ಡಾ.ಎಲ್.ಬಸವರಾಜು ಅವರ ಛಂದಸ್ ಸಂಪುಟ, ಎಚ್.ತಿಪ್ಪೇರುದ್ರಸ್ವಾಮಿಯವರ ತೌಲನಿಕ ಕಾವ್ಯ ಮೀಮಾಂಸೆ, ಎಂ.ಎ.ರಾಮಾನುಜ ಅಯ್ಯಂಗಾರರ ಕನ್ನಡ ಕವಿತಾಪದ್ಧತಿ ಹೀಗೆ ಮೀಮಾಂಸೆಗೆ ಒಂದು ಧಾರೆಯೇ ಇದೆ. ಇದರ ಮುಂದುವರಿದ ಯತ್ನವಾಗಿ ಕರ‍್ಲೊಸ್ ಅವರ ತಮಿಳು ಕಾವ್ಯ ಮೀಮಾಂಸೆ, ರಹಮತರ ಕನ್ನಡ ಸಾಹಿತ್ಯ ಮೀಮಾಂಸೆ 1, 2; ಎಸ್.ಎಂ. ಹಿರೇಮಠರ ಕನ್ನಡ ಕಾವ್ಯ ಮೀಮಾಂಸೆ, ವೀರಣ್ಣ ದಂಡೆಯವರ ಕನ್ನಡ ಕಾವ್ಯ ಮೀಮಾಂಸೆ ಮತ್ತು ಜಾನಪದ ಕಾವ್ಯ ಮೀಮಾಂಸೆ, ಜಿ.ಎಸ್.ಎಸ್ ಮತ್ತು ಕೆ.ವಿ.ನಾರಾಯಣ ಅವರ ಕಾವ್ಯಾರ್ಥ ಚಿಂತನ, ಕಾವ್ಯಾರ್ಥ ಪದಕೊಶ, ಓ.ಎಲ್.ನಾಗಭೂಷಣ ಸ್ವಾಮಿಯವರ ವಿಮರ್ಶೆಯ ಪರಿಭಾಷೆ ಹೀಗೆ ಇದಕ್ಕೊಂದು ಧಾರೆಯೇ ನಿರ್ಮಾಣವಾಗಿದೆ.

ಇದಲ್ಲದೆ ಜಿ.ಎಸ್.ಎಸ್, ಕೆ.ಕೃಷ್ಣಮೂರ್ತಿ, ಕಡೆಂಗೋಡ್ಲು ಶಂಕರಭಟ್ಟ, ವೀಸೀ ಇವರ ಕನ್ನಡ ಕವಿಗಳ ಕಾವ್ಯತತ್ವ ಜಿಜ್ಞಾಸೆಗಳನ್ನು ಕ್ರೋಡೀಕರಿಸಿ, ವ್ಯಾಖ್ಯಾನಿಸಿರುವ ಯತ್ನಗಳಿವೆ. ವಿಮರ್ಶೆಯ ತತ್ವ, ಆಧುನಿಕ ಸಾಹಿತ್ಯ ಪ್ರಕಾರ ತತ್ವಗಳ ಸಾಹಿತ್ಯ ಮೀಮಾಂಸೆ ಕುರಿತ ಬರಹಗಳೂ ಅಷ್ಟಿಷ್ಟು ಬಂದಿವೆ. ಬೌದ್ಧ ತಾತ್ವಿಕತೆಯ ಹಿನ್ನೆಲೆಯಲ್ಲಿ ನಟರಾಜ ಬೂದಾಳರು ಕನ್ನಡ ಕಾವ್ಯಮೀಮಾಂಸೆಯನ್ನು ಕಟ್ಟುವ ಪ್ರಯತ್ನವನ್ನೂ ಮಾಡಿದ್ದಾರೆ. ಆತ್ಮಾರಾಮ ಶಾಸ್ತ್ರಿ, ಓಡ್ಲಮನೆ ಅವರ ನಾಟಕ ಕಲೆ, ಆಮೂರರ ಕನ್ನಡ ಕಥನ ಸಾಹಿತ್ಯ ಕಾದಂಬರಿ, ಜಿ.ಎಚ್.ನಾಯಕರ ಸಣ್ಣ ಕತೆಯ ಹೊಸ ಒಲವುಗಳು, ಎ.ಆರ್.ಕೃಷ್ಣಶಾಸ್ತ್ರೀಗಳ ಕನ್ನಡ ಐತಿಹಾಸಿಕ ಕಾದಂಬರಿಗಳು, ಮಾಸ್ತಿಯವರ ವಿಮರ್ಶೆಯ ಕರ‍್ಯ, ಡಿವಿಜಿಯವರ ಸಾಹಿತ್ಯ ಶಕ್ತಿ, ಬೇಂದ್ರೆಯವರ ಬಡತನವು ಸಾಹಿತ್ಯದ ವಸ್ತುವೇಕಾಗಿದೆ?, ಕುವೆಂಪು ಅವರ ದರ್ಶನ ವಿಮರ್ಶೆ, ಪ್ರತಿಮಾ-ಪ್ರತಿಕೃತಿ ಮಾರ್ಗ; ಮುಗಳಿಯವರ ವಿಮರ್ಶೆಯ ವ್ರತ, ಗೋಕಾಕರ ವಿಮರ್ಶಾ ತತ್ವ ಮತ್ತು ಪ್ರಾಯೋಗಿಕ ವಿಮರ್ಶೆ, ಸಿ.ಎನ್.ರಾಮಚಂದ್ರನ್ ಅವರ ಕನ್ನಡ ಸಾಹಿತ್ಯ ವಿಮರ್ಶೆ, ಕೇಶವರ‍್ಮರ ಮಾರ್ಕ್ಸ್ವಾದಿ ಸಾಹಿತ್ಯ ವಿಮರ್ಶೆ ಹೀಗೆ ಇದಕ್ಕೊಂದು ಧಾರೆಯೇ ಇದೆ. ವಿಮರ್ಶೆಯ ತತ್ವದ ಬಗ್ಗೆ, ಪ್ರಕಾರತತ್ವದ ಬಗ್ಗೆ, ಸಾಹಿತ್ಯದ ವಸ್ತು-ಅಭಿವ್ಯಕ್ತಿ ಕ್ರಮಗಳ ಬಗ್ಗೆ ಅಪಾರವಾದ ಜಿಜ್ಞಾಸೆ ನಡೆದಿದೆ. ಲೇಖಕ ಕೇಂದ್ರಿತವಾಗಿ ಮತ್ತು ತತ್ವ-ಸಿದ್ಧಾಂತ-ವಸ್ತು-ಪ್ರಕಾರ ಕೇಂದ್ರಿತವಾಗಿಯೂ ಈ ಚರ್ಚೆ ನಡೆದಿದೆ. ಈ ಎಲ್ಲವುಗಳನ್ನೂ ಒಟ್ಟುಗೂಡಿಸಿ ತತ್ವ ಪರಿಕರ ಮಾರ್ಗ ಎಂದು ಇದನ್ನು ಗುರ್ತಿಸಿಕೊಳ್ಳಬಹುದು. ಯಾರಾದರು ಮೀಮಾಂಸೆಯನ್ನು, ಕಾವ್ಯತತ್ವವನ್ನು, ಛಂದಸ್ಸು ಅಲಂಕಾರಶಾಸ್ತçಗಳನ್ನು ವಿಮರ್ಶೆಯ ಅಡಿಯಲ್ಲಿ ತರಬಹುದೆ ಎಂದು ಪ್ರಶ್ನಿಸಬಹುದು. ಆದರೆ ಇವೆಲ್ಲವೂ ವಿಮರ್ಶೆ ಎಂಬ ಶಿಸ್ತಿನ ಕಲ್ಪನೆಯನ್ನೆ ವಿಸ್ತರಿಸಬಲ್ಲುವು. ವಿಮರ್ಶೆಯು ಆಚಾರದ ನೆಲೆ, ಮೀಮಾಂಸೆಯು (ತತ್ವದ) ಥಿಯರಿಯ ನೆಲೆ ಎಂದು ಭಾವಿಸಿದಾಗ ಇವುಗಳನ್ನೆಲ್ಲ ಪ್ರತ್ಯೇಕಿಸಿ ನೋಡುವ ಅಗತ್ಯವಿಲ್ಲ ಎಂಬುದು ಮನದಟ್ಟಾಗುತ್ತದೆ.

3. ಸಾಹಿತ್ಯ ಮಾರ್ಗ

ಪೂರ್ವದಲ್ಲಿ ಈಗಾಗಲೇ ಆಗಿಹೋದ ಲೇಖಕರ ಬಗ್ಗೆ ಅವರ ಸಾಹಿತ್ಯಕೃತಿಗಳ ಬಗ್ಗೆ, ಜೀವನಚಿತ್ರ, ಕವನ, ಕತೆ, ನಾಟಕ, ಕಾದಂಬರಿ, ಕಾವ್ಯ ಹೀಗೆ ಹಲವು ರೀತಿಯ ಸಾಹಿತ್ಯ ಪ್ರಕಾರಗಳ ರೂಪದಲ್ಲಿ ಪ್ರತಿಕ್ರಿಯೆಗಳು ಆದಿ ಕಾಲದಿಂದಲೂ ನಮ್ಮಲ್ಲಿ ಹುಟ್ಟುತ್ತ ಬಂದಿವೆ. ಅದಾಗಲೇ ರಚಿತವಾಗಿರುವ ಕಥನಗಳನ್ನು ಆಧರಿಸಿ ಅಥವಾ ಕಥನಗಳ ಪಾತ್ರಗಳನ್ನು ಆಧರಿಸಿ ತಮ್ಮದೇ ನಾಟಕ, ಕತೆ, ಕಾವ್ಯಗಳನ್ನು ರಚಿಸುವ ಯತ್ನಗಳೂ ನಮ್ಮಲ್ಲಿ ಸಾಕಷ್ಟು ನಡೆದಿವೆ. ಪಂಪ, ಅಕ್ಕ, ಅಲ್ಲಮ, ಬಸವಣ್ಣ ಮೊದಲಾದವರ ಬಗ್ಗೆ ಪ್ರಾಚೀನ ಕಾಲದಿಂದಲೂ ಸಾಹಿತ್ಯ ರೂಪದಲ್ಲಿ ಪ್ರತಿಕ್ರಿಯೆಗಳು ಹುಟ್ಟುತ್ತಲೇ ಬಂದಿವೆ. ಆಧುನಿಕ ಸಂದರ್ಭದಲ್ಲೂ ಕೂಡ ಈ ಬೆಳೆ ಕಡಿಮೆಯಾಗಿಲ್ಲ.

ಬಸವಣ್ಣನ ಬಗೆಗೇ ಹತ್ತಾರು ನಾಟಕಗಳು ಬಂದಿವೆ. ಕುವೆಂಪು ಬಗೆಗೆ ೩೦ಕ್ಕೂ ಹೆಚ್ಚು ಜೀವನಚಿತ್ರಗಳು, ಸಾಹಿತ್ಯ ಆಧರಿಸಿದ ನಾಲ್ಕಾರು ನಾಟಕಗಳೂ ನಾನೂರಕ್ಕೂ ಹೆಚ್ಚು ಬಿಡಿ ಕವಿತೆಗಳೂ ಬಂದಿವೆ. ಬಸವ, ಅಂಬೇಡ್ಕರ್, ಬುದ್ಧ ಇವರ ಮೇಲೂ ನೂರಾರು ಬಗೆಯ ಸಂಕಥನಗಳು ಸೃಷ್ಟಿಯಾಗಿವೆ. ವಿಮರ್ಶೆ ಇವೆಲ್ಲವುಗಳಲ್ಲಿ ಒಂದು ಪ್ರಜ್ಞೆ ಆಗಿಯೂ, ಮಾರ್ಗ ಆಗಿಯೂ ಇದ್ದೇ ಇದೆ. ಹಾಗಾಗಿ ಇವೆಲ್ಲವೂ ಕೂಡ ವಿಮರ್ಶೆಗಳೇ. ವಿಮರ್ಶೆ ಎಂದರೆ ಬರಿ ಸಾಹಿತ್ಯದ ಪರಿಶೀಲನೆ. ವಿಮರ್ಶೆ ಎಂದರೆ ಗದ್ಯರೂಪದ ವಿಶ್ಲೇಷಣಾತ್ಮಕ ಬರವಣಿಗೆ ಎಂದು ಮಾತ್ರ ನಾವು ತಿಳಿಯಬೇಕಿಲ್ಲ. ಕವಿಯ ಸಾಹಿತ್ಯ, ವ್ಯಕ್ತಿತ್ವ, ಬದುಕು ಎಲ್ಲವುಗಳ ಬಗೆಗಿನ ಸಾಹಿತ್ಯರೂಪಿ ಪ್ರತಿಕ್ರಿಯೆ ಕೂಡ ವಿಮರ್ಶೆಯೇ. ಅನಂತಮೂರ್ತಿಯ ಬಗ್ಗೆ ಒಂದು ಬಯೋಪಿಕ್ ಮಾದರಿಯ ಸಿನೆಮಾ ಮಾಡಿದಾಗ, ದೇವನೂರರ ಬಗ್ಗೆ ಬಯೋಪ್ಲೆ ನೆಲೆಯಲ್ಲಿ ನಾಟಕ ಮಾಡಿದಾಗ, ಕೆ. ಬಿ. ಸಿದ್ಧಯ್ಯನವರ ಕಾವ್ಯವನ್ನು ನಾಟಕ ಮಾಡಿದಾಗ ಅದೆಲ್ಲವೂ ವಿಮರ್ಶೆಯಲ್ಲದೆ ಮತ್ತೇನು? ವಿಮರ್ಶೆ ಗದ್ಯ ರೂಪಿ ವಿಶ್ಲೇಷಣೆ ಮಾತ್ರ ಎಂದು ಭಾವಿಸುವ ಅಗತ್ಯವಿಲ್ಲ. ಈ ದೃಷ್ಟಿಯಿಂದ ಸಾಹಿತ್ಯ ಮಾರ್ಗದ ವಿಮರ್ಶೆಯು ನಮ್ಮಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.

4. ಒಡನಾಟ ಕಥನ ಮಾರ್ಗ

ಆಧುನಿಕ ಸಂದರ್ಭದಲ್ಲಿ ಸೃಷ್ಟಿಯಾಗಿರುವ ಒಂದು ಮುಖ್ಯ ವಿಮರ್ಶಾ ಮಾರ್ಗ ಇದು. ಲೇಖಕರೊಂದಿಗೆ ಸಂಪರ್ಕಕ್ಕೆ ಬಂದ, ಹತ್ತಿರದಿಂದ ಕಂಡ, ಒಡನಾಡಿದ ಅನುಭವಗಳನ್ನು ಇಲ್ಲಿ ನಿರೂಪಿಸಲಾಗುತ್ತದೆ. ಲೇಖಕನ ಖಾಸಗಿ ಬದುಕಿನ ವಿಚಾರಗಳು, ಅಭಿರುಚಿಗಳು, ಸಾಹಿತ್ಯದ ಹಿನ್ನೆಲೆ, ಪ್ರೇರಣೆ-ಪ್ರಭಾವಗಳೆಲ್ಲ ಇಲ್ಲಿ ಕಥನಗೊಳ್ಳುತ್ತವೆ. ಮಗಳು ಕಂಡ ಕುವೆಂಪು, ಕುವೆಂಪುಗೆ ಪುಟ್ಟ ಕನ್ನಡಿ, ಅಣ್ಣನ ನೆನಪು, ಹೀಗಿದ್ದರು ಕುವೆಂಪು, ಕುವೆಂಪು ಅವರ ಕೊನೆಯ ದಿನಗಳು, ಮಲೆನಾಡಿನ ವಾಲ್ಮೀಕಿ ಇಂತಹ ಹಲವಾರು ಕೃತಿಗಳು ಒಡನಾಟ ರೂಪಿಯಾಗಿ ಕಥನಗಳೆ ಆಗಿವೆ. ಇವುಗಳಲ್ಲಿ ಸಾಹಿತ್ಯದ ಪರಿಶೀಲನೆ, ವ್ಯಕ್ತಿತ್ವದ ಪರಿಶೀಲನೆ, ಸಾಮಾಜಿಕ ಚರಿತ್ರೆ, ಆತ್ಮ ಚರಿತ್ರೆ, ಲೇಖಕನ ಬದುಕಿನ ಅಪರೂಪದ ವಿವರಗಳು ಹೀಗೆ ಹಲವಾರು ಸಂಗತಿಗಳು ಚರ್ಚೆಗೆ ಒಳಗಾಗಿವೆ. ಒಂದು ತೆರನ ಅಪ್ರಕಾರ ಮಾದರಿ ಅಥವಾ ಮಿಶ್ರ ಮಾದರಿ ರಚನೆಗಳೂ ಇವೆ. ಇಲ್ಲಿ ಲೇಖಕ-ಸಮಾಜ-ಸಾಹಿತ್ಯ-ಖಾಸಗಿ ಬದುಕು-ಮಾನವ ಪರಿಸರ ಹೀಗೆ ಹತ್ತು ಹಲವುಗಳ ಅಂತಃಸಂಬಂಧಗಳು ಅನಾವರಣ ಆಗುತ್ತಿರುತ್ತವೆ.

ಜ್ಞಾಪಕ ಚಿತ್ರಶಾಲೆ, ಚಿತ್ರಗಳು-ಪತ್ರಗಳು, ಸಾಹಿತಿಗಳ ಸಂಗದಲ್ಲಿ, ಇಂತಹ ಹಲವಾರು, ಒಡನಾಟ ಕೃತಿಗಳಲ್ಲಿ ವ್ಯಕ್ತಿ ಚಿತ್ರಗಳೇ ಹೆಚ್ಚು ಪ್ರಧಾನವಾಗಿವೆ. ಅಪ್ಪಟ ವ್ಯಕ್ತಿಚಿತ್ರಗಳನ್ನು ಒಡನಾಟ ರೂಪಿ ವಿಮರ್ಶೆಗಳೆಂದು ಕರೆಯಬಹುದೆ? ಒಬ್ಬರು ಇನ್ನೊಬ್ಬರ ಜೀವನಚರಿತ್ರೆ ಬರೆದಾಗ ಅವನ್ನೂ ವಿಮರ್ಶೆಗಳೆಂದು ಕರೆಯಬಹುದೆ? ಎಂಬ ಪ್ರಶ್ನೆಗಳು ಏಳಬಹುದು. ವ್ಯಕಿಚಿತ್ರಗಳನ್ನು ಜೀವನವಿಮರ್ಶೆಗಳೆನ್ನಲು ಅಡ್ಡಿಯಿಲ್ಲ; ಲೇಖಕರ ಕುರಿತ ಒಡನಾಟ ಕಥನಗಳನ್ನೆಲ್ಲ ವ್ಯಕ್ತಿವಿಮರ್ಶೆಗಳೆಂದು ಕರೆಯಲು ಅಡ್ಡಿಯಿಲ್ಲ. ಆಗ ಸಾಹಿತ್ಯ ವಿಮರ್ಶೆ, ವ್ಯಕ್ತಿ ವಿಮರ್ಶೆ, ಚಿತ್ರವಿಮರ್ಶೆ ಇತ್ಯಾದಿಯಾಗಿ ವಿಮರ್ಶೆಯ ಕವಲುಗಳನ್ನೂ ಗುರ್ತಿಸಿಕೊಳ್ಳಲು ಬರುತ್ತದೆ. ಆಗ ಅದೊಂದು ಸಾಹಿತ್ಯ ಪ್ರಕಾರ ಮಾತ್ರ ಎಂದೂ ಸೀಮಿತ ಮಾಡುವ ಅಗತ್ಯವಿರುವುದಿಲ್ಲ.

5. ಮುನ್ನುಡಿ-ಬೆನ್ನುಡಿ-ಪೀಠಿಕಾ ಮಾರ್ಗ

ನಮ್ಮ ಪ್ರಾಚೀನರಲ್ಲಿ ವಿಮರ್ಶೆಯ ರೂಪಗಳು ಮತ್ತು ದೃಷ್ಟಿಗಳು ಹೆಚ್ಚು ಪ್ರಕಟವಾಗಿರುವುದೇ ಕಾವ್ಯಗಳ ಪೀಠಿಕಾ ಸಂಧಿಗಳಲ್ಲಿ ಆದರೆ ನಮ್ಮ ಪ್ರಾಚೀನರ ಪೀಠಿಕಾ ಸಂಧಿಗಳಿಗೂ ಆಧುನಿಕರ ಮುನ್ನುಡಿ, ಬೆನ್ನುಡಿ, ಪೀಠಿಕೆ, ಪ್ರಸ್ತಾವನೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಾಚೀನರು ತಮ್ಮ ಕಾವ್ಯಗಳಲ್ಲಿ ತಾವೇ ಪೀಠಿಕೆಗಳನ್ನು ಬರೆದುಕೊಂಡರೆ ಆಧುನಿಕರಲ್ಲಿ ಅನ್ಯರಿಂದ ಬರೆಸುವ ಸಂಪ್ರದಾಯವಿದೆ. ಆಧುನಿಕ ಸಂದರ್ಭದಲ್ಲಿ ಲೇಖಕರೇ ತಮ್ಮ ಕೃತಿಗಳಿಗೆ ಪ್ರಸ್ತಾವನೆ-ಲೇಖಕರ ಮಾತುಗಳನ್ನು ಬರೆದಿರುವುದೂ ಉಂಟು. ಆದರೆ ಅನ್ಯರಿಂದ ಬರೆಯಲ್ಪಟ್ಟಿರುವ ಮುನ್ನುಡಿ, ಬೆನ್ನುಡಿಗಳದ್ದೆ ಒಂದು ವಿಮರ್ಶಾ ಪಂಥವಾಗುವಷ್ಟು ಬೆಳೆದಿದೆ. ಇನ್ನು ಸಂಪಾದಕರು ತಮ್ಮ ಸಂಪಾದಿತ ಕೃತಿಗಳಿಗೆ, ಪ್ರಾಚೀನ ಕಾವ್ಯ ಸಂಪಾದನೆಗಳಿಗೆ ಬರೆದಿರುವ ಪೀಠಿಕೆ, ಪ್ರಸ್ತಾವನೆ, ಉಪೋದ್ಘಾತಗಳದ್ದು ಕೂಡ ನಮ್ಮಲ್ಲಿ ಒಂದು ವಿಮರ್ಶಾ ಪಂಥವಾಗುವಷ್ಟು ವ್ಯಾಪ್ತಿ ಪಡೆದಿದೆ. ಹೊಸನೀರಿನ ಕಾಲದಲ್ಲ್ಲಂತು ಗ್ರಂಥಸಂಪಾದನೆಗಳಲ್ಲಿ ವಿಮರ್ಶೆಯು ಮುನ್ನುಡಿ-ಪೀಠಿಕೆ-ಪ್ರಸ್ತಾವನೆಗಳ ರೂಪದಲ್ಲೇ ಹೆಚ್ಚಾಗಿ ಪ್ರಕಟವಾಗಿದೆ. ಈಗೀಗ ಹಿರಿಯರಿಂದ ಕಿರಿಯರು ಪ್ರೋತ್ಸಾಹದಾಯಕ-ಹಾರೈಕೆ ರೂಪಿ ಮುನ್ನುಡಿ-ಬೆನ್ನುಡಿಗಳನ್ನು ಬರೆಸಿ ತಮ್ಮ ಕೃತಿಗಳನ್ನು ಪ್ರಕಟಿಸುವುದನ್ನು ಆಚಾರವೆಂಬಂತೆ ಪಾಲಿಸುತ್ತಿದ್ದಾರೆ.

ಬೇಂದ್ರೆಯವರ ನಾದಲೀಲೆ ಸಂಕಲನಕ್ಕೆ ಮಾಸ್ತಿಯವರು ಬರೆದ ಮುನ್ನುಡಿ, ಅಡಿಗರ ಸಂಕಲನಕ್ಕೆ ಅನಂತಮೂರ್ತಿ ಅವರು ಬರೆದಿರುವ ಮುನ್ನುಡಿ, ಸ್ವತಃ ತೇಜಸ್ವಿ ಅವರು ತಮ್ಮದೆ ಅಬಚೂರಿನ ಪೋಸ್ಟಾಪೀಸು ಸಂಕಲನಕ್ಕೆ ಬರೆದುಕೊಂಡಿರುವ ಮುನ್ನುಡಿ ಹೀಗೆ ಈ ಮುನ್ನುಡಿಗಳಲ್ಲಿ ಸಾಕಷ್ಟು ಗಮನ ಸೆಳೆದ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು.

6. ಸಂಗ್ರಹ-ಸಂಪಾದನೆ-ಸೂಕ್ತಿ ಪಂಥ

ಪ್ರಾಚೀನರಲ್ಲಿ ಕಾವ್ಯಸಾರ ಸಂಗ್ರಹಗಳು, ವಚನಗಳ ಶೂನ್ಯ ಸಂಪಾದನೆಗಳು, ಜೈನರ ಹಾಡುಗಳ ಸಂಕಲನಗಳು, ಕೀರ್ತನಗಳ ಸಂಗ್ರಹ-ಸಂಪಾದನೆಗಳು, ಸ್ವರವಚನ ಸಂಪಾದನೆಗಳು-ಏಕೋತ್ತರ ಶತಸ್ಥಲಗಳು ಈ ಪಂಥದಲ್ಲಿ ಬರುತ್ತವೆ. ಹಾಗೇ ಹೊಸನೀರಿನ ಕಾಲದ ವಿಮರ್ಶೆಯಲ್ಲಿನ ಬಹುತೇಕ ಶಿಕ್ಷಣಪಠ್ಯ ಸಂಗ್ರಹಗಳು, ಆಯ್ದ ಪ್ರಾಚೀನ ಕಾವ್ಯಭಾಗಗಳ ಸಂಗ್ರಹಗಳು, ಗ್ರಂಥಸಂಪಾದನೆಗಳು ಕೂಡ ಈ ಪಂಥದಲ್ಲಿ ಬರುತ್ತವೆ. ಆಧುನಿಕ ಕಾಲದಲ್ಲಿಯೂ ಸಾಹಿತ್ಯ ಭಾಗಗಳ, ಆಯ್ದ ಕವನಗಳ, ಲೇಖನಗಳ ಸಂಪಾದನೆಗಳೆಲ್ಲವು ಈ ಪಂಥದಲ್ಲೆ ಬರುತ್ತವೆ. ಇಲ್ಲೆಲ್ಲ ಸಂಗ್ರಹ-ಸಂಪಾದನೆಗಳ ಕತಾಸಾರಾಂಶೀಕರಣ, ಪ್ರಕಾರಾಂತರ ಮಾದರಿ ಹೀಗೆ ಹತ್ತು ಹಲವು ರೂಪಗಳಲ್ಲಿ ವಿಮರ್ಶೆಯು ಪ್ರಕಟವಾಗಿದೆ. ಆಯ್ಕೆ ಮತ್ತು ಸಂಯೋಜನೆ, ಆಯ್ಕೆ ಮತ್ತು ಅಲಕ್ಷ್ಯಗಳ ಮಾನದಂಡಗಳ ಮೂಲಕವೂ ಇಲ್ಲಿ ವಿಮರ್ಶೆಯು ವ್ಯಕ್ತವಾಗಿದೆ. ಆಧುನಿಕ ಸಂದರ್ಭದಲ್ಲಿ ಆಯ್ದ ಕವಿತೆಗಳ ಸಂಪಾದನೆ, ಆಯ್ದ ವಿಮರ್ಶಾ ಲೇಖನಗಳ, ಪ್ರಬಂಧಗಳ, ಕತೆಗಳ ಸಂಪಾದನೆಗಳು, ಸಮಗ್ರಗಳ ಸಂಪಾದನೆಗಳು ಸರಿಸುಮಾರು ಎಲ್ಲ ಮುಖ್ಯ ಲೇಖಕರಿಗೆ ಸಂಬಂಧಿಸಿದಂತೆ ಬಂದಿವೆ, ಬರುತ್ತಿವೆ. ಆಯ್ದ ಲೇಖನ-ಕವನ ಸಂಕಲನಗಳು ಬದುಕಿರುವ ಲೇಖಕರಿಗೆ ಸಂಬಂಧಿಸಿದಂತೆ; ಸಮಗ್ರಗಳ ಸಂಪಾದನೆಗಳು ಮರಣಿಸಿದ ಲೇಕಕರಿಗೆ ಸಂಬಂಧಿಸಿದಂತೆ ಬರುವುದು ನಮ್ಮಲ್ಲಿ ಮಾಮೂಲೆಂಬಂತೆ ಆಗುತ್ತಿದೆ.

ವಾಕ್ಯ ಮಾಣಿಕ್ಯ ಕೋಶ, ಸಂಸ್ಕೃತಿ ಸಂದರ್ಭ ಕೋಶದಂತಹ ಕೃತಿಗಳು, ಡಿವಿಜಿ ಅವರ ಕಗ್ಗದ ಸಾರರೂಪಿ ಕೃತಿಗಳು, ಸೋಮೇಶ್ವರ ಶತಕದ ಆಯ್ದ ಪದ್ಯಗಳ ಸಂಗ್ರಹಗಳು, ಕಾರಂತಚಿಂತನ, ಸರ್ವಜ್ಞ ವಚನಗಳ ಸಂಗ್ರಹಗಳು ಹೀಗೆ ಸುಭಾಷಿತ-ಸೂಕ್ತಿ ರೂಪಿ ಸಂಕಲನಗಳಿಗು ನಮ್ಮಲ್ಲಿ ಒಂದು ಪರಂಪರೆಯೇ ಇದೆ. ಸಂಪಾದನಾರೂಪಿ ಮತ್ತು ಸೂಕ್ತಿರೂಪಿ ವಿಮರ್ಶೆಗಳು ನಮ್ಮಲ್ಲಿ ಪ್ರತ್ಯೇಕವಾದ ಎರಡು ಪಂಥಗಳೇ ಆಗುವಷ್ಟು ವ್ಯಾಪ್ತಿ ಪಡೆದಿವೆ. ಆದರೂ ಸೂಕ್ತಿರೂಪಿ ಸಂಗ್ರಹಗಳು ಸಂಪಾದನೆಯ ಕವಲೇ ಆದುದರಿಂದ ಇಲ್ಲಿ ಇವನ್ನು ಪಂಥದ ಅಡಿಯಲ್ಲಿ ಪರಿಗಣಿಸಲಾಗಿದೆ.

7. ಟೀಕು-ವ್ಯಾಖ್ಯಾನ-ಸರಳ ಮಾರ್ಗ

ಟೀಕು, ಟಿಪ್ಪಣಿ, ಭಾಷ್ಯ, ಪ್ರಕಾರಾಂತರ, ಟುಪ್ಟೀಕು/ವಿಸ್ತಾರಟೀಕು ವ್ಯಾಖ್ಯಾನ ಇತ್ಯಾದಿಗಳು ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿವೆ. ನಮ್ಮಲ್ಲಿನ ಬಹು ಹಳೆಯ ವಿಮರ್ಶಾ ಮಾರ್ಗವಿದು. ದರ್ಪಣ ದೀಪಿಕೆ, ಪಂಪಭಾರತ ದೀಪಿಕೆ, ಸರಳಪಂಪ ಭಾರತ, ಸರಳ ಸಿದ್ಧರಾಮ ಚಾರಿತ್ರ ಹೀಗೆ ಕಾವ್ಯಗಳಿಗೆ ಗದ್ಯರೂಪಿ ಅರ್ಥಗಾರಿಕೆ ಒದಗಿಸುವ ಪ್ರಯತ್ನಗಳು ಹೊಸನೀರಿನ ಕಾಲದಿಂದಲೇ ಆರಂಭವಾಗಿ ಇನ್ನೂ ಜರುಗುತ್ತಿವೆ. ಹಳಗನ್ನಡ ಪಠ್ಯಗಳಿಗೆ, ಕಠಿಣವೆಂಬ ಹೊಸ ಪಠ್ಯಗಳಿಗೆ ಸರಳರೂಪ ನೀಡುವ, ಗದ್ಯ ಕಥನರೂಪ ನೀಡುವ, ಅರ್ಥಾನ್ವಯ ಮಾಡಿ ಮರು ನಿರೂಪಿಸುವ ಕೆಲಸಗಳು ಈ ವಿಮರ್ಶೆಯಲ್ಲಿ ಜರುಗುತ್ತವೆ. ಸಾಹಿತ್ಯ ಕಥನವನ್ನು ಛಂದಸ್ಸಿನಿಂದ, ಪ್ರತಿಮೆ-ರೂಪಕಗಳಿಂದ, ಕಾವ್ಯ ರೂಪದಿಂದ ಬಿಡುಗಡೆಗೊಳಿಸುವ ಕರ‍್ಯಗಳಿವು. ಸಾಹಿತ್ಯಕ್ಕೆ ಇರಬಹುದಾದ ಭಿನ್ನಾರ್ಥ ಸಾಧ್ಯತೆ-ಧ್ವನ್ಯರ್ಥ ಸಾಧ್ಯತೆಗಳನ್ನು ಅನಾವರಣ ಮಾಡುವ; ಆರೋಪಣ ಮಾಡುವ; ಅನ್ವಯೀಕರಣಮಾಡುವ ವ್ಯಾಯಾಮಗಳಿವು. ಜನಗಳಿಗೆ ಸಾಹಿತ್ಯವನ್ನು ತಲುಪಿಸ ಬೇಕೆಂಬ ಆಶಯವೇ ಇಂಥಲ್ಲಿ ಪ್ರಧಾನವಾಗಿ ಇರುತ್ತದೆ.

ಎ.ಆರ.ಕೃ. ಅವರ ವಚನಭಾರತ, ಎಚ್.ಎಸ್. ಬಿಳಿಗಿರಿ ಅವರ ಶಬ್ದಮಣಿದರ್ಪಣ ವ್ಯಾಖ್ಯಾನ, ಹಳಗನ್ನಡ ಪಠ್ಯಗಳಿಗೆ ಸಂಬಂಧಿಸಿದಂತೆ ಡಾ.ಎಲ್.ಬಸವರಾಜು ಅವರು ತಯಾರು ಮಾಡಿರುವ ಸರಳರೂಪಗಳು ಸರಳರೂಪಿ ವಿಮರ್ಶೆಯ ಒಂದು ಪಂಥವನ್ನೇ ಸ್ಥಾಪಿಸಿವೆ. ಹೀಗಾಗಿ ಟೀಕುರೂಪಿ-ಸರಳರೂಪಿ-ಪ್ರಕಾರಾಂತರ ಮಾದರಿಯ ವಿಮರ್ಶೆಗಳದ್ದೇ ಒಂದು ಪ್ರತ್ಯೇಕ ವಿಮರ್ಶಾ ಪಂಥ ನಮ್ಮಲ್ಲಿ ನಿರ್ಮಾಣವಾಗಿದೆ.

8. ಚರಿತ್ರೆ ಪಂಥ

ಪಾಶ್ಚಾತ್ಯ ಮಾದರಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ರಚಿಸಿಕೊಳ್ಳುವ ಇರಾದೆ ನಮ್ಮಲ್ಲಿ ಬೆಳೆದದ್ದೇ ಹೊಸನೀರಿನ ಕಾಲದಲ್ಲಿ. ರೈಸ್, ವೈಗಲ್, ಕೆ.ವೆಂಕಟರಾಮಪ್ಪ, ಆರ್.ನರಸಿಂಹಾಚಾರ್, ಮುಗಳಿ, ಬಿ.ಎಂ.ಶ್ರೀ, ತ.ಸು.ಶಾಮರಾಯ, ಕೀರ್ತಿನಾಥ ಕುರ್ತಕೋಟಿ, ಸಿ.ವೀರಣ್ಣ, ಜಿ.ಎಸ್.ಎಸ್, ಜಿ.ಎಚ್. ನಾಯಕ, ಎಚ್.ಎಸ್.ಶ್ರೀಮತಿ. ಎಲ್.ಎಸ್. ಶೆಷಗಿರಿರಾವ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಅರವಿಂದ ಮಾಲಗತ್ತಿ ಹೀಗೆ ಅನೇಕರು ಈ ಪಂಥಕ್ಕೆ ಕಾಲಾನುಕ್ರಮದಲ್ಲಿ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಶ್ರೀನಿವಾಸ ಹಾವನೂರ, ಆರ್. ವೈ. ಧಾರವಾಡಕರ, ವೆಂಕಟೇಶ ಸಾಂಗಲಿ, ಹರಿಕೃಷ್ಣ ಭರಣ್ಯ ಇಂತಹವರು ಸಂಶೋಧನಾತ್ಮಕವಾಗಿ ಆಧುನಿಕ ಚರಿತ್ರೆಗಳನ್ನು ಕಟ್ಟಲು ಯತ್ನಿಸಿದ್ದಾರೆ. ಆಧುನಿಕ ಚರಿತ್ರೆ-ಪ್ರಾಚೀನ ಚರಿತ್ರೆ, ಸಂಕ್ಷಿಪ್ತ ಚರಿತ್ರೆ, ಸಮಗ್ರ ಚರಿತ್ರೆ, ಶತಮಾನದ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆ, ಜಾನಪದ ಸಾಹಿತ್ಯ ಚರಿತ್ರೆ, ಸಮೀಕ್ಷೆ, ಪ್ರಕಾರ ಚರಿತ್ರೆ, ಹಸ್ತಪ್ರತಿ ಸೂಚಿ, ಕವಿಚರಿತೆ, ಗ್ರಂಥಕರ್ತರ ಚರಿತ್ರಕೋಶ ಹೀಗೆ ಹಲವು ನೆಲೆಗಳಲ್ಲಿ ನಮ್ಮಲ್ಲಿ ಸಾಹಿತ್ಯ ಚರಿತ್ರೆಗಳು ರಚನೆಯಾಗಿವೆ.

ಸಾಹಿತ್ಯ ಚರಿತ್ರೆ ಬರೆಯುವಾಗ ಅದನ್ನು ಚಳವಳಿ, ಪ್ರಕಾರ, ಕಾಲಘಟ್ಟ, ಕವಿ ಸಂವೇದನೆ, ಧರ್ಮ, ಭಾಷೆ ಹೀಗೆ ಹಲವು ದೃಷ್ಟಿಗಳಲ್ಲಿ ವರ್ಗೀಕರಿಸಿ ರಚಿಸಿರುವ ಚರಿತ್ರೆಯ ವಿಭಾಗೀಕರಣದ, (ವರ್ಗೀಕರಣದ) ಚರಿತ್ರೆಯೇ ನಮ್ಮಲ್ಲಿದೆ. ವಿಕಾಸವಾದಿ ವಿನ್ಯಾಸ, ತಳ ಸಂಸ್ಕೃತಿ ದೃಷ್ಟಿ, ವರ್ಗೀಕರಣ-ನಾಮಕರಣ ವಿನ್ಯಾಸ, ಸ್ಥಾನೀಕರಣ-ಮೌಲ್ಯೀಕರಣ ವಿನ್ಯಾಸ, ಸಮೀಕ್ಷಾ ಮಾದರಿ, ಮರುರಚನಾ ವಿನ್ಯಾಸ ಹೀಗೆ ಹಲವು ವಿನ್ಯಾಸಗಳು ಇಲ್ಲಿ ಪ್ರಕಟವಾಗಿವೆ. ಹೀಗೆ ಸಾಹಿತ್ಯ ಚರಿತ್ರೆರಚನೆ ಮತ್ತು ಸಂಗ್ರಹ ಮಾರ್ಗವು ನಮ್ಮ ವಿಮರ್ಶೆಯ (ಹಲವು ವಿಧಾನಗಳ) ಒಂದು ಪ್ರಧಾನ ಪಂಥವಾಗಿದೆ. ಆಧುನಿಕ ಸಂದರ್ಭದ ಚರಿತ್ರೆಯನ್ನು ಪಾರಿಭಾಷಿಕ ನೆಲೆಯಲ್ಲಿ, ಸಂವೇದನೆ, ಕಾಲಘಟ್ಟಗಳ ನೆಲೆಯಲ್ಲಿ ನವೋದಯ, ಪ್ರಗತಿಶೀಲ, ನವ್ಯ, ದಲಿತ - ಬಂಡಾಯ, ಸ್ತ್ರೀವಾದಿ ಹೀಗೆ ಹಲವು ನೆಲೆಗಳಲ್ಲಿ ವರ್ಗೀಕರಿಸಿ ಕಟ್ಟಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಇಂತಹ ಬಿಡಿ ಬಿಡಿ ಸಂವೇದನೆಗಳ ಚರಿತ್ರೆಗಳನ್ನು ಬರೆಸಿ ಪ್ರಕಟಿಸುವ ಕೆಲಸವನ್ನು ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಾರಗಳ ನೆಲೆಯಲ್ಲಿ ಆಧುನಿಕ ಸಾಹಿತ್ಯ ಚರಿತ್ರೆಯನ್ನು ಬರೆಸಿ ಪ್ರಕಟಿಸುವ ಕೆಲಸವನ್ನು ಮಾಡಿದೆ. ಇಲ್ಲೆಲ್ಲ ಸಾಹಿತ್ಯವನ್ನು ವರ್ಗೀಕರಿಸುವ ಕೆಲಸವನ್ನು ಮಾನ್ಯ ಮಾಡಿ ಚರಿತ್ರೆಗಳು ಹೀಗೇ ಇರುತ್ತವೆ ಎಂದು ನಂಬಿಸುವ ಕೆಲಸ ಕೂಡ ಈ ಮೂಲಕ ನಡೆದಿದೆ. ಕನ್ನಡದಲ್ಲಿ ಬರೆಯಲ್ಪಟ್ಟಿರುವ ಸಾಹಿತ್ಯ ಚರಿತ್ರೆಗಳನ್ನೆ ಪ್ರತ್ಯೇಕವಾಗಿ ಅಧ್ಯಯನಕ್ಕೆ ಗುರಿಪಡಿಸಿ ಅವುಗಳ ಲಕ್ಷಣಗಳು ಮತ್ತು ಅವುಗಳ ಹಿಂದಿನ ತಾತ್ವಿಕತೆಗಳನ್ನು ಗುರ್ತಿಸುವ ಕೆಲಸ ಮತ್ತು ಆ ಮೂಲಕ ಈ ಪಂಥದ ಹಿಂದಿನ ಐಡಿಯಾಲಜಿಗಳನ್ನು ಗುರ್ತಿಸುವ ಕೆಲಸ ನಡೆಯಬೇಕಿದೆ. (ಇದು ಪ್ರತಿಯೊಂದೂ ಪಂಥಗಳಿಗು ನಡೆಯಬೇಕಿರುವ ಕೆಲಸ)

9. ಗ್ರಂಥ ವಿಮರ್ಶೆ ಪಂಥ

ಮುದ್ರಣ ತಂತ್ರಜ್ಞಾನವು ಚಾಲ್ತಿಗೆ ಬಂದ ನಂತರದಲ್ಲಿ ಪ್ರಾಚೀನ ಓಲೆಗ್ರಂಥಗಳೆಲ್ಲ ಮುದ್ರಿತ ಗ್ರಂಥಗಳಾಗಿ ರೂಪಗೊಳ್ಳ ತೊಡಗಿದ ಸಂದರ್ಭದಲ್ಲಿ ನಮ್ಮಲ್ಲಿ ಗ್ರಂಥ ವಿಮರ್ಶೆಯು ಆರಂಭವಾಯಿತು. ಪ್ರಕಟಿತ ಗ್ರಂಥಗಳ ಕುರಿತ ಕೃತಿಕೇಂದ್ರಿತ ವಿಮರ್ಶಾ ಪಂಥವೊಂದೇ ಈ ಮೂಲಕ ನಮ್ಮಲ್ಲಿ ಸೃಷಿಯಾಯಿತು. ಹಾಗೆ ನೋಡಿದರೆ ಗ್ರಂಥ ಸಂಪಾದನಾಶಾಸ್ತ್ರ, ಹಸ್ತಪ್ರತಿಶಾಸ್ತ್ರ, ನಿಘಂಟು ರಚನೆ, ಸಾಹಿತ್ಯ ಚರಿತ್ರೆರಚನೆ ಇತ್ಯಾದಿ ಶಾಖೆಗಳಲ್ಲಿ ಮೊದಲಿಗೆ ಕಾಣಿಸಿಕೊಂಡದ್ದೆ ಈ ಗ್ರಂಥ ವಿಮರ್ಶೆ. ಈ ವಿಮರ್ಶೆಯು ತದನಂತರದಲ್ಲಿ ಪ್ರಕಟಿತ ಪುಸ್ತಕಗಳ ಪುಸ್ತಕ ಪರಿಚಯ-ಪುಸ್ತಕ ವಿಮರ್ಶೆಯಾಗಿ ಹೊರಳಿಕೊಂಡಿತು. ಹೊಸನೀರಿನ ಕಾಲದಲ್ಲಿ ಆರಂಭವಾದ ಪತ್ರಿಕೆಗಳು ಗ್ರಂಥ ವಿಮರ್ಶೆ/ಗ್ರಂಥಾವಲೋಕನಕ್ಕೆ ತಮ್ಮದೇ ಕೊಡುಗೆ ನೀಡಿವೆ. ಇಂದಿಗೂ ಪತ್ರಿಕೆಗಳಲ್ಲೇ ಇಂಥವು ಹೆಚ್ಚು ಪ್ರಕಟವಾಗುತ್ತಿವೆ. (ಅಂಕಣಗಳಲ್ಲು ಪುಸ್ತಕ ಸಮೀಕ್ಷೆಗಳು ಪ್ರಕಟ ಆಗುವುದುಂಟು. ಕೆಲವೊಮ್ಮೆ ವಾರ್ಷಿಕ ಸಮೀಕ್ಷೆಗಳಲ್ಲು ಪುಸ್ತಕ ಪರಿಚಯಗಳು ಪ್ರಕಟ ಆಗುವುದುಂಟು) ಪುಸ್ತಕ ವಿಮರ್ಶೆ, ಪುಸ್ತಕ ಪರಿಚಯ, ಪುಸ್ತಕಾವಲೋಕನ ಇತ್ಯಾದಿ ಬಳಕೆಗಳೇ ಇಲ್ಲಿನ ವಿಮರ್ಶೆಯ ಸ್ವರೂಪವನ್ನೂ ಹೇಳುತ್ತವೆ. ನಮ್ಮಲ್ಲಿನ ದಿನಪತ್ರಿಕೆ, ಮಾಸಪತ್ರಿಕೆ, ಕಿರುಸಾಹಿತ್ಯ ಪತ್ರಿಕೆಗಳೆಲ್ಲವೂ ಹೊಸ ಪುಸ್ತಕಗಳನ್ನು ಪರಿಚಯಿಸುವ-ವಿಮರ್ಶಿಸುವ ಕೆಲಸವನ್ನು ಮಾಡುತ್ತಲೇ ಇವೆ. ಪುಸ್ತಕ ಪರಿಚಯಕ್ಕೆಂದೇ ಮೀಸಲಾದ ಪುಸ್ತಕಲೋಕ ಪತ್ರಿಕೆಯೂ (ಪುಸ್ತಕ ಪ್ರಾಧಿಕಾರ), ಬಹುವಚನ ಸಾಹಿತ್ಯ ವಿಮರ್ಶೆ ಪತ್ರಿಕೆಯೂ ಬರುತ್ತಿವೆ. ಒಟ್ಟಿನಲ್ಲಿ ಇದೊಂದು ಮಾರ್ಗವಾಗಿ ನಮ್ಮಲ್ಲಿ ಸ್ಥಾಪಿತವಾಗಿದೆ/ಚಾಲ್ತಿಯಲ್ಲಿದೆ.

10. ಅಧ್ಯಯನ ಪಂಥ

ಪಿಎಚ್.ಡಿ. ಅಧ್ಯಯನ, ಸಂಶೋಧನಾ ಅಧ್ಯಯನ, ಅಧ್ಯಯನೋದ್ದೇಶಿತ ಅಧ್ಯಯನ ಹೀಗೆ ಮೂರು ಬಗೆಗಳಲ್ಲಿ ನಮ್ಮಲ್ಲಿ ಅಧ್ಯಯನ ರೂಪಿ ವಿಮರ್ಶೆಯು ಸೃಷ್ಟಿಯಾಗಿದೆ. ಪಿಎಚ್.ಡಿ. ಅಧ್ಯಯನ ಮತ್ತು ಸಂಶೋಧನೆಗಳು ಈಗ ಸಾಹಿತ್ಯ ವಿಮರ್ಶೆಗಳೆ (ವಿಮರ್ಶಾತ್ಮಕ ಅಧ್ಯಯನಗಳೇ) ಆಗಿವೆ. ಈ ಅಧ್ಯಯನಗಳಿಗೂ ಇತರೆ ವಿಮರ್ಶೆಗೂ ಗಾತ್ರ-ತಾಂತ್ರಿಕತೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇರುತ್ತದೆ. ಆದರೆ ದೃಷ್ಟಿಕೋನದಲ್ಲಿ ಅಂತಹ ವ್ಯತ್ಯಾಸ ಇರುವುದಿಲ್ಲ. ಒಂದು ನಿರ್ಧಿಷ್ಟವಾದ ಉದ್ದೇಶ, ಚೌಕಟ್ಟು, ವ್ಯಾಪ್ತಿ, ವಿಧಾನಗಳನ್ನು ಇಟ್ಟುಕೊಂಡು ಇಲ್ಲಿ ವಿಮರ್ಶೆಯು ಜರುಗುತ್ತದೆ. ಈ ಮಾರ್ಗದಲ್ಲಿ ನಮ್ಮಲ್ಲಿ ಪ್ರತಿವರ್ಷವೂ ಹತ್ತೆಂಟು ಪಿಎಚ್.ಡಿ ಅಧ್ಯಯನ ಕೃತಿಗಳು ವಿಮರ್ಶಾ ಕೃತಿಗಳೇ ಆಗಿ ಪ್ರಕಟಗೊಳ್ಳುತ್ತಿವೆ. ಒಂದು ಅಧ್ಯಯನಗಳು, ಸಾಂಸ್ಕೃತಿಕ ಅಧ್ಯಯನಗಳು, ಜಾನಪದೀಯ ಅಧ್ಯಯನಗಳು, ತೌಲನಿಕ ಅಧ್ಯಯನಗಳು, ಸಾಮಾಜಿಕ – ಆರ್ಥಿಕ ಅಧ್ಯಯನಗಳು, ಸ್ತ್ರೀವಾದಿ ಅಧ್ಯಯನಗಳು ಹೀಗೆ ಇಲ್ಲಿ ಹಲವು ತೆರನ ಅಧ್ಯಯನಗಳು ಸಂಭವಿಸಿವೆ. ಸಂಭವಿಸುತ್ತಿವೆ. ಸಂಶೋಧನಾ ಅಧ್ಯಯನದ ಚರಿತ್ರೆಯನ್ನೆ ಪ್ರತ್ಯೇಕ ಬರೆಯಬಹುದಾದಷ್ಟು ಅಧ್ಯಯನಗಳು ಇಲ್ಲಿ ಸೃಷ್ಟಿಯಾಗಿವೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಯುಜಿಸಿ ಫೆಲೋಶಿಪ್ ನೀಡಲು ತೊಡಗಿದ ನಂತರ ಹೊಟ್ಟೆಪಾಡಿನ ಅಧ್ಯಯನಗಳು ಈ ಶಾಖೆಯಲ್ಲಿ ಹೆಚ್ಚಾಗಿವೆ. ಯಾರು ಯಾರೋ ಹೇಳಹೆಸರಿಲ್ಲದವರ ಬದುಕು ಸಾಧನೆಗಳನ್ನು ಅಧ್ಯಯನ ಮಾಡುವ ಚಾಳಿಯೂ, ಒತ್ತಡವೂ ಈ ಮಾರ್ಗದಲ್ಲಿ ಸೃಷ್ಟಿಯಾಗಿದೆ. ಒಟ್ಟಾರೆ ವೈವಿದ್ಯಮಯವಾದ ಅಧ್ಯಯನ ರೂಪಿ ವಿಮರ್ಶೆ ಕೂಡ ನಮ್ಮಲ್ಲಿ ಒಂದು ಮಾರ್ಗವಾಗಿ ಸ್ಥಾಪಿತವಾಗಿದೆ.

11. ಅನುಸಂಧಾನಗಳ ಮಾರ್ಗ

ವಿಮರ್ಶೆಯು ಬರಹದ ರೂಪದಲ್ಲಿರಲಿ ಅಥವಾ ಇನ್ನಾವುದೇ ರೂಪದಲ್ಲಿರಲಿ ಅದು ಸಾಂಸ್ಕೃತಿಕ ಅನುಸಂಧಾನವೇ ಹೌದು. ನಮ್ಮಲ್ಲಿ ಅಧ್ಯಯನಗಳು ಇರುವಂತೆಯೇ ಪಠಣ-ಪಾರಾಯಣಗಳೂ ಇವೆ. ಕೇಳಿಕೆ (ವಿಚಾರಕ್ಕೆ ಹಾಕುವುದು), ತಾಳಮದ್ದಲೆ, ಹರಿಕತೆ, ಗಮಕ, ಗಾಯನ, ವಾಚನ, ನೃತ್ಯರೂಪಕ, ಸಿನೆಮಾ, ಕಿರುಚಿತ್ರ, ನಾಟಕ ಪ್ರದರ್ಶನ ಹೀಗೆ ಲೇಖಕ ಮತ್ತು ಸಾಹಿತ್ಯದ ಹತ್ತಾರು ಅನುಸಂಧಾನಗಳಿವೆ. ಇವೆಲ್ಲವೂ ಬರಹ ರೂಪದಲ್ಲಿ ಉತ್ಪಾದನೆ ಆಗದೇ ಇರಬಹುದು. ಆದರೆ ಇವೂ ಕೂಡ ವಿಮರ್ಶೆಯ ಅವತಾರಗಳೇ. ಇವೆಲ್ಲವನ್ನು ಒಟ್ಟಾರೆಯಾಗಿ ಅನುಸಂಧಾನಗಳ ಮಾರ್ಗ ಎನ್ನಬಹುದು. ಲೇಖಕನ ಬದುಕು, ಸಾಹಿತ್ಯ ಮತ್ತು ವಿಚಾರಗಳು ಸಮಾಜದಲ್ಲಿ ಬೇರೆ ಬೇರೆ ಅಂತರ್‌ಶಿಸ್ತೀಯ ವಲಯಗಳಲ್ಲಿ, ಆಚಾರಗಳಲ್ಲಿ ಬಳಕೆಗೆ-ಬಾಳಿಗೆ ಗುರಿಯಾಗುವ ಮೂಲಕವೂ ವಿಮರ್ಶೆಗೆ ಗುರಿಯಾಗುತ್ತಿರುತ್ತವೆ. ಬರಹರೂಪಿ ಉತ್ಪನ್ನವನ್ನು ಮಾತ್ರ ವಿಮರ್ಶೆ ಎಂದು ಕರೆದರೆ ಆಗದು. ಇವೂ ವಿಮರ್ಶೆಗಳೇ. ಇವೆಲ್ಲ ಅನುಸಂಧಾನಗಳೂ ಪರೋಕ್ಷವಾಗಿ ಲೇಖಕನ ಮತ್ತು ಅವನ ಸಾಹಿತ್ಯದ ಸ್ಥಾನನಿರ್ಣಯ-ಮೌಲ್ಯಮಾಪನವನ್ನು ಮಾಡುತ್ತಿರುತ್ತವೆ. ಕಾಲದ ಪ್ರವಾಹದಲ್ಲಿ ಲೇಖಕನು ಪ್ರಸ್ತುತನೊ ಅಲ್ಲವೋ ಎಂದು ಪರೀಕ್ಷಿಸುತ್ತಿರುತ್ತವೆ. ಇಂಥ ಅನುಸಂಧಾನಗಳು ಮೂಲಕ ಬರಹರೂಪಿ ವಿಮರ್ಶೆಯು ಲೇಖಕನ ಬಗ್ಗೆ ತಳೆದ ನಿಲುವುಗಳನ್ನು ಕೆಲವೊಮ್ಮೆ ಬುಡಮೇಲು ಮಾಡಬಹುದು. ಈ ಅನುಸಂಧಾನಗಳನ್ನೆಲ್ಲ ಒಂದು ಪಂಥವಾಗಿ ಅಥವಾ ಹಲವು ಪಂಥಗಳ ಒಂದು ಮಾರ್ಗವಾಗಿ ಪರಿಗಣಿಸಬಹುದು.

12. ವಿವಿಮರ್ಶೆ ಪಂಥ

ವಿಮರ್ಶೆಯ ವಿಮರ್ಶೆಯನ್ನು ವಿವಿಮರ್ಶೆ ಎಂದು ಇಲ್ಲಿ ಕರೆದುಕೊಳ್ಳಲಾಗಿದೆ. ಈಗಾಗಲೇ ಬಂದಿರುವ ವಿಮರ್ಶೆಯನ್ನು ಮರು ವಿಮರ್ಶಿಸುವ ಒಂದು ಪಂಥವೇ ನಮ್ಮಲ್ಲಿದೆ. ಕಾವ್ಯತತ್ವಗಳ ಅಧ್ಯಯನ, ಮೀಮಾಂಸಾ ಪರಂಪರೆಯ ಚರ್ಚೆ, ಶಾಸ್ತ್ರವಿಚಾರಗಳ ಮಂಡನೆಗಳ ಮರುಚಿಂತನೆ, ಈಗಾಗಲೇ ಬಂದಿರುವ ವಿಮರ್ಶಾಕೃತಿಗಳ ಪರಿಶೀಲನೆ, ವಿಮರ್ಶಾ ಚರಿತ್ರೆಯ ಅವಲೋಕನ ಇತ್ಯಾದಿ ಬಗೆಗಳಲ್ಲಿ ಈ ವಿವಿಮರ್ಶೆಯು ನಮ್ಮಲ್ಲಿ ಪ್ರಕಟವಾಗಿದೆ. ಹಲವಾರು ಪಿಎಚ್.ಡಿ. ಅಧ್ಯಯನಗಳೂ ಕೂಡ ನಮ್ಮ ವಿಮರ್ಶೆಯ ಪರಂಪರೆಯನ್ನು ಅಧ್ಯಯನಕ್ಕೆ ಗುರಿಪಡಿಸಿವೆ. ಹಾಗಾಗಿ ಅಧ್ಯಯನ ರೂಪಿಯಾಗಿ, ತೌಲನಿಕ ರೂಪದಲ್ಲಿ, ಪರಿಕರ ದೃಷ್ಟಿಯಲ್ಲಿ ಹೀಗೆ ಹಲವು ನೆಲೆಗಳಲ್ಲಿ-ಮಾರ್ಗಗಳಲ್ಲಿ ನಮ್ಮಲ್ಲಿ ವಿವಿಮರ್ಶೆಯು ಸಂಭವಿಸಿದೆ. ಹಾಗೆ ನೋಡಿದರೆ ನಮ್ಮ ಯಾವ ಮಾರ್ಗ-ಪಂಥ-ದೃಷ್ಟಿಗಳೂ ವಾಟರ್ ಟೈಟ್ ಕಂಪಾರ್ಟ್ಮೆಂಟುಗಳಲ್ಲ. ಒಂದಕ್ಕೊಂದಕ್ಕೆ ಪರಸ್ಪರ ಅಂತಃಸಂಬಂಧ ಇದ್ದೇ ಇದೆ. ಕೆಲವೊಮ್ಮೆ ಒಂದೇ ಪಂಥದಲ್ಲಿ ಹಲವು ದೃಷ್ಟಿಗಳು, ಮಾರ್ಗಗಳು ಬಳಕೆಯಾಗಬಹುದು. (ಈ ವಿಚಾರವನ್ನು ಪ್ರಸ್ತುತ ಲೇಖನದಲ್ಲಿ ಈಗಾಗಲೇ ಚರ್ಚಿಸಲಾಗಿದೆ)

೧೩. ತೌಲನಿಕ ಮಾರ್ಗ

ಇದೊಂದು ವಿಮರ್ಶಾ ವಿಧಾನವಾಗಿ, ಮನೋಧರ್ಮ ಅಥವಾ ಪ್ರವೃತ್ತಿಯಾಗಿ ಮತ್ತು ವಿಮರ್ಶಾ ಪಂಥವಾಗಿ ಬಹುನೆಲೆಗಳಲ್ಲಿ ನಮ್ಮಲ್ಲಿ ಚಲಾವಣೆಯಲ್ಲಿದೆ. ಲೇಖಕರ ತುಲನೆ, ಪ್ರಕಾರಗಳ ತುಲನೆ, ಪರಂಪರೆಗಳ ತುಲನೆ, ಕಾಲಘಟ್ಟಗಳ ತುಲನೆ, ಸಂವೇದನೆಗಳ ತುಲನೆ, ವಸ್ತು-ಶೈಲಿ-ಅಭಿವ್ಯಕ್ತಿ ಕ್ರಮ ಇತ್ಯಾದಿಗಳ ಸಮ್ಯ ವ್ಯತ್ಯಾಸಗಳ ಅಧ್ಯಯನ ಹೀಗೆ ಹತ್ತಾರು ಬಗೆಗಳ ತುಲನಾತ್ಮಕ ಅಧ್ಯಯನಗಳು ನಮ್ಮಲ್ಲಿ ಈ ಮಾರ್ಗದಲ್ಲಿ ಪ್ರಕಟವಾಗಿವೆ. ಪ್ರೇರಣೆ-ಸ್ವೀಕರಣೆಗಳ ಅಧ್ಯಯನ, ಭಿನ್ನತೆ-ಸಾಮ್ಯತೆ-ವಿಶಿಷ್ಟತೆ-ಸ್ವಂತಿಕೆಗಳ ಪರಿಶೀಲನೆ, ತರತಮ ಶ್ರೇಣೀಕರಣದ ವಿನ್ಯಾಸ, ಗುಣಲಕ್ಷಣ ನಿರ್ವಚನ ವಿಧಾನ, ಪರಸ್ಪರ ಮುಖಾಮುಖಿ ಪ್ರವೃತ್ತಿ, ಅಂತಃಸಂಬಂಧಗಳ ಅಧ್ಯಯನ, ಕಾರಣ ಮೀಮಾಂಸೆಯ ಪರಿಶೀಲನೆ ಹೀಗೆ ಹಲವು ವಿನ್ಯಾಸ-ವಿಧಾನಗಳಲ್ಲಿ ಈ ಪಂಥವು ಬೆಳೆದಿದೆ. ನಮ್ಮಲ್ಲಿ ತೌಲನಿಕ ವಿಮರ್ಶಾ ಮಾರ್ಗವು ಅಧ್ಯಯನ ಶಿಸ್ತಾಗಿ ಕೂಡ ಚಾಲ್ತಿಯಲ್ಲಿದೆ. ಸರೋವರದ ಸಿರಿಗನ್ನಡಿಯಲ್ಲಿ, ಕನ್ನಡ ಸಾಹಿತ್ಯದ ನಾಲ್ಕು ನಾಯಕ ರತ್ನಗಳು, ಕನ್ನಡ ಸಾಹಿತ್ಯ ಮತ್ತು ಆಫ್ರಿಕನ್ ಕಥನಗಳ ತೌಲನಿಕ ಅಧ್ಯಯನ ಮೊದಲಾದ ಬರಹಗಳು ಇದಕ್ಕೆ ಉದಾಹರಣೆ.

14. ಪರಿಸರ ಪಂಥ (ಹಸಿರು ಓದು)

ಪರಿಸರವಾದ, ಪರಿಸರ ಚಿಂತನೆ, ಪರಿಸರ ಸ್ತ್ರೀವಾದ, ಹಸಿರು ಓದು, ಪರಿಸರ ಪ್ರಜ್ಞೆ ಹೀಗೆ ಪರಿಸರ ಸಂಬಂಧಿಯಾಗಿ ನಮ್ಮಲ್ಲಿ ಹಲವು ಪರಿಭಾಷೆಗಳು ಬಳಕೆಯಲ್ಲಿವೆ. ಪರಿಸರ ದೃಷ್ಟಿಯ ಅನೇಕ ವಿಮರ್ಶೆಗಳು ಸೃಷ್ಟಿಯಾಗುವ ಮೂಲಕ ಪರಿಸರ ಪಂಥವೊಂದು ನಮ್ಮಲ್ಲಿ ಸೃಷ್ಟಿಯಾಗಿದೆ. ಸಾಹಿತ್ಯವನ್ನು ಪರಿಸರ ದೃಷ್ಟಿಯಿಂದ ಪರಿಶೀಲನೆಗೆ ಗುರಿಪಡಿಸುವ ಹತ್ತಾರು ಅಧ್ಯಯನಗಳು, ಹಲವಾರು ಲೇಖನಗಳು ನಮ್ಮಲ್ಲಿ ಸೃಷ್ಟಿಯಾಗಿವೆ. ಮನುಷ್ಯಕೇಂದ್ರಿತ-ಜೀವಕೇಂದ್ರಿತ-ಅರಣ್ಯಕೇಂದ್ರಿತ ಇಂತಹ ಮತ್ತು ಪ್ರಾಣಿಪರಿಸರ, ಸಸ್ಯಪರಿಸರ, ಪಕ್ಷಿಪರಿಸರ, ಮಾನವ ಪರಿಸರ ಇಂತಹ ಖಂಡ ದೃಷ್ಟಿಗಳೂ; ಪ್ರಕೃತಿ ಹಾಗೂ ಸಂಸ್ಕೃತಿ, ಪ್ರಾದೇಶಿಕ ಪರಿಸರ ಮತ್ತು ಕುವೆಂಪು ಸಾಹಿತ್ಯ, ಕಾಡು-ಕಡಲು ಇಂತಹ ಅವಳಿ ತೌಲನಿಕ ದೃಷ್ಟಿಗಳೂ; ಪರಿಸರ ವ್ಯವಸ್ಥೆ, ಜ್ಞಾನ ವ್ಯವಸ್ಥೆ, ಸಾಹಿತ್ಯ ಪರಿಸರ ಇಂತಹ ಅಖಂಡ ದೃಷ್ಟಿಗಳೂ ನಮ್ಮಲ್ಲಿ ಸಾಕಷ್ಟು ಬಳಕೆ ಆಗಿವೆ. ವಿಶೇಷವಾಗಿ ಕಾರಂತರನ್ನು ಮತ್ತು ಕುವೆಂಪುವನ್ನು ಆಧರಿಸಿ ಪರಿಸರ ಕೇಂದ್ರಿತ ವಿಮರ್ಶೆ ನಮ್ಮಲ್ಲಿ ಅಗಾಧವಾಗಿ ಸೃಷ್ಟಿಯಾಗಿದೆ. ಇದೆ ನೆಲೆಯಲ್ಲಿ ನಮ್ಮಲ್ಲಿ ಪರಿಸರ ಚಿಂತನೆ ಉಳ್ಳ ಬರಹಗಳು ಸಾಕಷ್ಟು ರಚನೆ ಆಗಿವೆ. ಚಾರಣ ದೃಷ್ಟಿಯಿಂದ ಸಾಹಿತ್ಯವನ್ನು ಓದುವ ಯತ್ನಗಳೂ ನಡೆದಿವೆ.

15. ಸ್ತ್ರೀವಾದಿ ಮಾರ್ಗ

ತತ್ವ ಮತ್ತು ಪ್ರಯೋಗ ಎರಡೂ ನೆಲೆಗಳಲ್ಲಿ ನಮ್ಮಲ್ಲಿ ಸ್ತ್ರೀವಾದವು ಸಾಕಷ್ಟು ಪ್ರಬಲವಾಗಿ ಸ್ಥಾಪಿತವಾಗಿದೆ/ಸ್ಥಾಪಿತ ಗೊಳ್ಳುತ್ತಿದೆ. ಇದೊಂದು ವಾದವಾಗಿಯೂ, ದೃಷ್ಟಿಯಾಗಿಯೂ, ಪಂಥವಾಗಿಯೂ, ವಿಮರ್ಶಾ ಮಾರ್ಗವಾಗಿಯೂ, ಅಧ್ಯಯನ ಶಿಸ್ತಾಗಿಯೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಮಹಿಳಾ ಸಾಹಿತ್ಯ ಚರಿತ್ರಗಳೇ ನಮ್ಮಲ್ಲಿ ಈ ಹಿನ್ನೆಲೆಯಲ್ಲಿ ರಚನೆಯಾಗಿವೆ. ಮಹಿಳಾ ಬರಹಗಾರ್ತಿಯರನ್ನು ಕೇಂದ್ರವಾಗಿ ಇರಿಸಿಕೊಂಡ ಅನೇಕ ಅಧ್ಯಯನಗಳೂ ನಮ್ಮಲ್ಲಿ ಬಂದಿವೆ. ಮಹಿಳಾ ಪಾತ್ರ ಕೇಂದ್ರಿತವಾಗಿ, ಲೇಖಕರ ಮಹಿಳಾ ದೃಷ್ಟಿಯ ಪರಿಶೀಲನೆಯಾಗಿ, ಸ್ತ್ರೀಮಾದರಿಗಳ ಹುಡುಕಾಟವಾಗಿ, ಪುರುಷ ದೃಷ್ಟಿಯ ಎದುರಿನ ಪ್ರತಿರೋಧವಾಗಿ, ಲಿಂಗಧಾರಿತ ಶೋಷಣೆಯ ಅಧ್ಯಯನವಾಗಿ, ಸಾಂಸ್ಕೃತಿಕ ಚರಿತ್ರೆಯ ಪ್ರತಿನಿಧೀಕರಣವಾಗಿ ಹೀಗೆ ಹತ್ತಾರು ನೆಲೆಗಳಲ್ಲಿ ನಮ್ಮಲ್ಲಿ ಸ್ತ್ರೀವಾದಿ ವಿಮರ್ಶೆಯು ಸಂಭವಿಸಿದೆ. ಆ ಮೂಲಕ ಇದೊಂದು ದೊಡ್ಡ ಪಂಥವಾಗಿ ನಮ್ಮಲ್ಲಿ ಬೆಳೆದಿದೆ/ಬೆಳೆಯುತ್ತಿದೆ. ಇಲ್ಲಿಯೂ ತಾತ್ವಿಕತೆ ಮತ್ತು ಆಚಾರ ಎಂಬ ಎರಡು ಮುಖ್ಯವಾದ ಕವಲುಗಳನ್ನು ಕಾಣಬಹುದು. ಸ್ತ್ರೀವಾದಿ ಸಂಶೋಧನೆ ಕೂಡ ವಿಮರ್ಶೆಯ ಜೊತೆಜೊತೆಗೇ ಸೃಷ್ಟಿಯಾಗುತ್ತಿದೆ.

16. ನಾಡು ನುಡಿ ಚಿಂತನಾ ಮಾರ್ಗ

ಕನ್ನಡದಲ್ಲಿ ನಾಡು ನುಡಿ ಚಿಂತನಾ ಮಾರ್ಗವು ಬಿ.ಎಂ. ಶ್ರೀಕಂಠಯ್ಯನವರ ಕನ್ನಡ ಮಾತು ತಲೆ ಎತ್ತುವ ಬಗೆ ಲೇಖನದಿಂದ ಇಂದಿನವರೆಗು ಮತ್ತೆ ಮತ್ತೆ ಪ್ರಕಟವಾಗುತ್ತಾ ಬಂದಿದೆ. ಇಂತಹ ಚಿಂತನೆಯಲ್ಲಿ ಡಾ. ಡಿ.ಎನ್. ಶಂಕರಭಟ್ಟರ ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ ಮತ್ತು ಕನ್ನಡದ ಕೆಸರುಗದ್ದೆಯಲ್ಲಿ ಇಂಗ್ಲಿಶಿನ ವೈಹಾಳಿ ಅಥವಾ ಕನ್ನಡಿಗಳು ಇನ್ನು ಸಾಕು ಇಂತಹ ಕೆ.ವಿ. ನಾರಾಯಣರ ಲೇಖನಗಳೂ ಬರುತ್ತವೆ. ಇತ್ತೀಚಿನ ಮಲ್ಲಕಾರ್ಜುನ ಮೇಟಿ ಅವರ ಮತ್ತು ರಂಗನಾಥ ಕಂಟನಕುಂಟೆ ಅವರ ಬರಹಗಳೂ ಬರುತ್ತವೆ. ಆಲೂರ ವೆಂಕಟರಾಯರ ಕರ್ನಾಟಕದ ಗತವೈಭವ, ಚಿದಾನಂದಮೂರ್ತಿಗಳ ಕನ್ನಡ ಕನ್ನಡಿಗ ಕರ್ನಾಟಕದಂತಹ ಪುಸ್ತಕಗಳು ಮತ್ತು ಆನಂತರದ ಕರ್ನಾಟಕ ಏಕೀಕರಣ ಹೋರಾಟದ ಹಾಗೂ ಕನ್ನಡ ನುಡಿ, ನಾಡು ಕುರಿತ ಎಲ್ಲ ಬಗೆಯ ಚಿಂತನಶೀಲ ಬರಹಗಳೂ ಈ ಮಾರ್ಗದ ವ್ಯಾಪ್ತಿಯಲ್ಲಿ ಬರುತ್ತವೆ. ಕನ್ನಡ ವಿಮರ್ಶೆಯಲ್ಲಿ ಇವನ್ನು ಸಾಹಿತ್ಯ ವಿಮರ್ಶೆ ಮತ್ತು ನಾಡು ನುಡಿ ವಿಮರ್ಶೆ ಎಂಬ ಭೇದವಿಲ್ಲದೆ ನೋಡುವ ಅಗತ್ಯವಿದೆ.

ಇಲ್ಲಿ ನಾಡನ್ನು ಮತ್ತು ನುಡಿಯನ್ನು ಕಟ್ಟುವ ಪ್ರಜ್ಞೆಯು ಕನ್ನಡ ರಾಷ್ಟ್ರೀಯತಾ ಪ್ರಜ್ಞೆಯಿಂದ ಪ್ರೇರಣೆಗೊಂಡಿದೆ. ನಾಡನ್ನು ತಾಯಿ ಭುವನೇಶ್ವರಿ ಎಂದು ಕರೆಯುವ ಮೂಲಕ ಇದನ್ನು ಮಾತೆಗೆ ಸಮೀಕರಿಸುವ ಹಾಗೂ ದೇಶಪ್ರೇಮದ ಹಾಗೆಯೆ ನಾಡು ನುಡಿ ಪ್ರೇಮವೂ ಪ್ರಶ್ನಾತೀತ ಎಂದು ಸ್ಥಾಪಿಸುವ ಹಾಗೂ ಕನ್ನಡ ಮಾತ್ರ ಕನ್ನಡದ ನೆಲದಲ್ಲಿ ಬಾಳಲು ಅರ್ಹ ಎಂಬ ಫೆನಟಿಕ್ಕಾದ ರಚನೆಗಳು ಇರುವಂತೆಯೆ ಅನ್ಯವನ್ನು ದ್ವೇಷಿಸುವ ದೋರಣೆಯ ಬರಹಗಳೂ ಇಲ್ಲಿವೆ. ದೇಸಿ ಚಿಂತನೆಯ ನೆಲೆಯಲ್ಲಿ, ಸ್ಥಳೀಯ ಚಿಂತನೆಯ ನೆಲೆಯಲ್ಲಿ ಇಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆಗಳು, ಸ್ವಂತಿಕೆಯ ಪ್ರಶ್ನೆಗಳು ಜೋರಾಗಿ ಕೇಳಲ್ಪಟ್ಟಿವೆ. ಹಾಗೆಯೆ ಸಂಸ್ಕೃತ, ಇಂಗ್ಲಿಶ್‌ಗಳಿಗಿಂತ ಭಿನ್ನವಾಗಿ ಕನ್ನಡದ ಪ್ರಾಚೀನತೆಯ ಸಂಬಂಧಗಳನ್ನು ಅನ್ವೇಷಿಸುವ ಷ ಶೆಟ್ಟರ್ ಅವರ ಶಂಗಂ ತಮಿಳಗಂ ರೀತಿಯ ಬರಹಗಳು ಮತ್ತು ಅವಕ್ಕೆ ಹುಟ್ಟಿಕೊಂಡ ಸಂವಾದಿ ಬರಹಗಳೂ ಇಲ್ಲಿವೆ. ನಾಡನ್ನು ಫೆನಟಿಕ್ಕಾಗಿ ಕಟ್ಟುವ ಬರಹಗಳ ಧಾರೆಯೂ, ಕರ್ನಾಟಕವನ್ನು ಭಾಷಾ ಮತ್ತು ಸಾಂಸ್ಕೃತಿಕ ವೈವಿದ್ಯತೆಯ ನಾಡಾಗಿ ಸಹಬಾಳ್ವೆಯ ಮೂಲಕ ಕಟ್ಟುವ ಧಾರೆಯೂ ಹಾಗೆಯೆ ಕನ್ನಡವನ್ನು ಅನ್ನದ ಭಾಷೆ ಮತ್ತು ಜ್ಞಾನದ ಭಾಷೆಯನ್ನಾಗಿ ಕಟ್ಟುವ ಭಾಷಾಭಿವೃದ್ಧಿಯ ಚಿಂತನಾ ಧಾರೆಯೂ, ಕನ್ನಡ ಮಾದ್ಯಮ, ಕನ್ನಡ ಕಲಿಕೆಯ ಚಿಂತನಾ ಧಾರೆಯೂ, ಹೀಗೆ ಇದರಲ್ಲಿ ಹಲವು ಒಳಧಾರೆಗಳನ್ನು ಗುರ್ತಿಸಿಕೊಳ್ಳಲು ಸಾಧ್ಯವಿದೆ.

17. ಪ್ರಾಯೋಗಿಕ ವಿಮರ್ಶಾ ಪಂಥ

ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆಯ ಪ್ರಯೋಗಗಳು ಸಾಕಷ್ಟು ನಡೆದಿವೆ. ಅಲ್ಲದೆ ಪ್ರಾಯೋಗಿಕ ವಿಮರ್ಶೆಯ ವಿಧಾನವನ್ನು ಅನುಸರಿಸಿ ನಮ್ಮಲ್ಲಿ ಸಾಕಷ್ಟು ವಿಮರ್ಶೆ ಸೃಷ್ಟಿಯಾಗಿದೆ. ಬೇರೆ ಬೇರೆ ಬಿಡಿ ಲೇಖನಗಳಲ್ಲಿ ಹೊಸ ನೀರಿನ ಕಾಲದಲ್ಲು ಏರುಗತಿಯ ಕಾಲದಲ್ಲು ಇದರ ಬಳಕೆ ಸಾಕಷ್ಟು ಆಗಿದೆ. ಗೋಕಾಕರು ಪ್ರಾಯೋಗಿಕ ವಿಮರ್ಶೆಯೆಂಬ ಹೆಸರಿನಲ್ಲಿ ಒಂದು ಪುಸ್ತಕವನ್ನೆ ಪ್ರಕಟಿಸಿದ್ದಾರೆ. ಲಕ್ಷ್ಮೀನಾರಾಯಣ ಭಟ್ಟರು ಪ್ರಾಯೋಗಿಕ ವಿಮರ್ಶೆಯ ಪ್ರಯೋಗಗಳುಳ್ಳ ಒಂದು ಗ್ರಂಥವನ್ನೆ ಪ್ರಕಟಿಸಿದ್ದಾರೆ. ಇವಲ್ಲದೆ ಬಿಡಿ ಬಿಡಿ ಪ್ರಯೋಗಗಳು ಈ ನೆಲೆಯಲ್ಲಿ ಸಾಕಷ್ಟು ಆಗಿವೆ. ಪ್ರಾಯೋಗಿಕ ವಿಮರ್ಶೆಯ ಮೇಲೆ ಹಲವು ತಾತ್ವಿಕ (ವಿಮರ್ಶೆಯ ತತ್ವದ) ಬರಹಗಳೂ ಬಂದಿವೆ. ಆದರೂ ಇದೊಂದು ಕನ್ನಡದ ಸ್ವತಂತ್ರ ಧಾರೆಯಾಗಬಲ್ಲ ವ್ಯಾಪ್ತಿಯನ್ನು ಪಡೆದಿಲ್ಲ.

ಇತರೆ ಮಾರ್ಗಗಳು

ನಮ್ಮಲ್ಲಿ ವಿಮರ್ಶಾ ಪರಿಭಾಷೆಗಳ ಮತ್ತು ಪಂಥಗಳ ಕಗ್ಗಾಡೇ ಸೃಷ್ಟಿಯಾಗಿರುವುದನ್ನು ಈಗಾಗಲೇ ಪ್ರಸ್ತಾಪಿಸಲಾಗಿದೆ. ಸೈದ್ಧಾಂತಿಕವಾಗಿ, ತಾತ್ವಿಕವಾಗಿ, ಪರಿಚಯಾತ್ಮಕವಾಗಿ ನಮ್ಮಲ್ಲಿ ಹಲವಾರು ವಿಮರ್ಶೆಯ ಪಂಥಗಳು ಚರ್ಚೆಯಾಗಿವೆ. ವಿವರಣಾತ್ಮಕ ವಿಮರ್ಶೆ, ಅಭಿಜಾತ ವಿಮರ್ಶೆ, ಮನಸ್‌ಶಾಸ್ತ್ರೀಯ ವಿಮರ್ಶೆ, ಸಮಾಜಶಾಸ್ತಿçಯ ವಿಮರ್ಶೆ, ಮಾರ್ಕ್ಸ್ವಾದಿ ವಿಮರ್ಶೆ, ರೂಪನಿಷ್ಠ ವಿಮರ್ಶೆ, ನಿರಚನವಾದಿ ವಿಮರ್ಶೆ, ವಾಚಕಕೇಂದ್ರಿತ ಓದು, ದೇಸಿ ಓದು, ಆಧುನಿಕೋತ್ತರ ವಿಮರ್ಶೆ, ರಚನಾವಾದ, ವಾಸ್ತವವಾದಿ ವಿಮರ್ಶೆ, ನವಚಾರಿತ್ರಿಕವಾದ, ಚಾರಿತ್ರಿಕ ವಿಮರ್ಶೆ, ಪೌರ್ವಾತ್ಯವಾದ ಹೀಗೆ ಅನೇಕ ಮಾರ್ಗಗಳು ನಮ್ಮಲ್ಲಿ ಮಾರ್ಗಗಳೆಂಬಂತೆ ಚರ್ಚಿತವಾಗಿವೆ. ಸೈದ್ಧಾಂತಿಕವಾಗಿ ನಿರ್ವಚನೆಯಾಗಿವೆ. ಪ್ರಯೋಗಗಳೂ-ಪ್ರಾಯೋಗಿಕ ಅನ್ವಯೀಕರಣಗಳೂ ನಡೆದಿವೆ. ಶಿಕ್ಷಣ ಪಠ್ಯಗಳಲ್ಲೂ ಕಲಿಕೆಗೆ ಅಳವಡಿಕೆಯಾಗಿವೆ. ಆದರೆ ಇವೆಲ್ಲವೂ ನಮ್ಮಲ್ಲಿ ಆಚರಣೆಯಲ್ಲಿ ಪಂಥಗಳಾಗಿ ಸ್ಥಾಪಿತವಾಗಿಲ್ಲ. ಪ್ರಾಯೋಗಿಕ ವಿಮರ್ಶೆ, ಮಾರ್ಕ್ಸ್ವಾದಿ ವಿಮರ್ಶೆ, ವರ್ಣನಾತ್ಮಕ ವಿಮರ್ಶೆ, ರೂಪನಿಷ್ಠ ವಿಮರ್ಶೆ (ಕೃತಿನಿಷ್ಠ ಎಂಬ ಅರ್ಥದಲ್ಲಿ), ಮನಸ್‌ಶಾಸ್ತ್ರೀಯ ವಿಮರ್ಶೆ (ಅಂತರ್ ಶಿಸ್ತೀಯ ಎಂಬ ನೆಲೆಯಲ್ಲಿಯೂ), ಹೀಗೆ ಇವು ನಾಲ್ಕೈದು ಮಾರ್ಗಗಳು ಮಾತ್ರವೇ ನಮ್ಮಲ್ಲಿ ತತ್ವ ಮತ್ತು ಆಚಾರ ಎರಡೂ ನೆಲೆಯಲ್ಲಿ ಸಂಭವಿಸಿವೆ. ಆದಾಗ್ಯೂ ಇವು ಪಂಥಗಳಾಗುವಷ್ಟು ಆಚರಣೆಗೆ ಗುರಿಯಾಗಿಲ್ಲ. ಮಿಕ್ಕವು ಕೂಡ ಪಂಥಗಳಾಗುವಷ್ಟು ನಮ್ಮಲ್ಲಿ ಸಂಭವಿಸಿಲ್ಲ.

ನಮ್ಮಲ್ಲಿ ವಿಮರ್ಶೆಯ ಆಚರಣೆಯನ್ನು ಕೂಲಂಕುಶವಾಗಿ ಪರಿಶೀಲಿಸಿ; ಅಧ್ಯಯನಕ್ಕೆ ಗುರಿಪಡಿಸುವ ಅಗತ್ಯವಿದೆ. ಆಗ ಮಾತ್ರವೆ ಆ ಮೂಲಕ ನಮ್ಮಲ್ಲಿ ಚಾಲ್ತಿಯಲ್ಲಿರುವ ವಿಮರ್ಶಾ ಪಂಥಗಳನ್ನು ಕಟ್ಟಿಕೊಳ್ಳಲು ಸಾಧ್ಯವಾದೀತು. ಇಲ್ಲದಿದ್ದರೆ ಬರಿದೆ ತತ್ವ-ಸಿದ್ಧಾಂತಗಳ ಆಮದಿನಲ್ಲಿ ಮತ್ತು ಅಭ್ಯಾಸದಲ್ಲಿ ತೊಳಲಬೇಕಾದೀತು. ಅನ್ಯಭಾಷೆಯ ಆಚರಣೆ-ತತ್ವಗಳನ್ನೆ ಕನ್ನಡದಲ್ಲಿವೆಯೆಂದು, ಕನ್ನಡದವೆಂದು ತಿಳಿಯಬೇಕಾದೀತು.

ಇಲ್ಲಿ ಪ್ರಸ್ತಾಪಿಸಿರುವ ವಿಮರ್ಶೆಯ ಬಗೆಗಳನ್ನು ವಿಮರ್ಶಾ ಸ್ಕೂಲುಗಳೆಂದು ಸ್ಥೂಲವಾಗಿ ಕರೆದುಕೊಳ್ಳಬಹುದು. ಆದರೆ ಇವು ಸಮಗ್ರವಲ್ಲ. ಕನ್ನಡದಲ್ಲಿನ ವಿಮರ್ಶೆಯ ಆಚಾರದ ಕೆಲವು ಬಗೆಗಳು ಮಾತ್ರ. ಇವಲ್ಲದೆ ಇನ್ನೂ ಹಲವು ಬಗೆಗಳು, ಧಾರೆಗಳು, ವಿಧಾನಗಳು, ದೃಷ್ಟಿಗಳು, ಧೋರಣೆಗಳು ಕನ್ನಡದಲ್ಲಿ ಇವೆ. ಅವುಗಳನ್ನೆಲ್ಲ ಶೋಧಿಸಿ ತಾತ್ವೀಕರಿಸಿ, ಪರಿಕಲ್ಪಿಸಿ ಕಟ್ಟಿಕೊಳ್ಳಬೇಕಾಗಿದೆ. ಇವುಗಳಲ್ಲಿ ಒಂದೊಂದು ಬಗೆಯ ಆಚಾರಗಳನ್ನೂ ವರ್ಗೀಕರಿಸಿ ಅವುಗಳ ಅಡಿಪಾಯವಾದ ಐಡಿಯಾಲಜಿಗಳನ್ನು ಶೋಧಿಸಿ ತಾತ್ವೀಕರಿಸಿಕೊಂಡು ಸೈದ್ಧಾಂತೀಕರಿಸಿಕೊಳ್ಳಬೇಕಾದ ಕೆಲಸ ಬಾಕಿಯಿದೆ.

ಡಿ. ಆರ್, ನಾಗರಾಜ, ಕಿ.ರಂ. ನಾಗರಾಜ, ಜಿ.ಎಚ್. ನಾಯಕ, ಗಿರಡ್ಡಿ ಗೋವಿಂದರಾಜ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ಜಿ.ಎಸ್. ಶಿವರುದ್ರಪ್ಪ, ಕೆ.ವಿ. ನಾರಾಯಣ, ಎಂ.ಎಂ. ಕಲಬುರ್ಗಿ, ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾಬಾಯಿ, ಶಂಕರ ಮೊಕಾಶಿ ಪುಣೇಕರ ಮೊದಲಾದವರನ್ನೆಲ್ಲ ಈ ಮೇಲೆ ಉಲ್ಲೇಖಿಸಿರುವ ಪಂಥಗಳಲ್ಲಿ ವಿವರವಾಗಿ ಚರ್ಚಿಸಿಲ್ಲ. ಆದಾಗ್ಯೂ ವಿಮರ್ಶಕ ಕೇಂದ್ರಿತವಾಗಿ ಚರ್ಚಿಸಲು ಹೊರಟಾಗ ಬೇರೆಯ ಹೊಳಹುಗಳು ಸಿಗಬಹುದು. ಆದಾಗ್ಯೂ ಹಾಗೆ ಮಾಡದೆ, ದೃಷ್ಟಿ - ಧೋರಣೆ, ಚಿಂತನಾಕ್ರಮ, ವಿಮರ್ಶಾ ಬಗೆಗಳು ಈ ನೆಲೆಯಲ್ಲಿ ಕನ್ನಡ ವಿಮರ್ಶೆಯನ್ನು ಕಟ್ಟಿಕೊಳ್ಳುವುದೆ ಹೆಚ್ಚು ಸೂಕ್ತವಾದುದು. ಅವುಗಳ ಒಳಗೇ ಇವರ ಬರಹಗಳನ್ನೆಲ್ಲ ಒಳಗೊಳ್ಳುವುದು ಸೂಕ್ತವಾದುದು.

ಸಿ.ಎನ್. ರಾಮಚಂದ್ರನ್ ಅವರ ಪುಸ್ತಕದ ಹೆಸರು ಕನ್ನಡ ಸಾಹಿತ್ಯ ವಿಮರ್ಶೆ ಎಂದೇನೂ ಇಲ್ಲ. ಅದು ಬರಿ ಸಾಹಿತ್ಯ ವಿಮರ್ಶೆ ಮಾತ್ರ. ಆದರೆ ನಾವದನ್ನು ಕನ್ನಡದ್ದೆ ಸಾಹಿತ್ಯ ವಿಮರ್ಶೆ ಎಂದು ಭಾವಿಸಿದಂತೆ ಯುಜಿಪಿಜಿಗಳಲ್ಲಿ ಪ್ರಿಸ್ಕೆçöÊಬ್ ಮಾಡುತ್ತಿದ್ದೇವೆ. ಇದೆಂಥ ಮರುಳು!? ಇದನ್ನು ಉನ್ನತ ಅಧ್ಯಯನಕ್ಕೆ, ತಾತ್ವಿಕ ತಿಳಿವಿಗೆ ಓದಿಕೊಳ್ಳುವವರು ಓದಿಕೊಳ್ಳಲಿ. ಆದರೆ ಅದೆ ಕನ್ನಡ ವಿಮರ್ಶೆ ಎಂದು ಭಾವಿಸುವ ಅಥವಾ ಅದನ್ನ ಅನ್ವಯಿಸುವ ಕೆಲಸ ಸರ್ವಥಾ ಸಲ್ಲ.

ಒಂದು ಶತಮಾನ ಕಾಲ ತೀನಂಶ್ರೀ ಅವರ ಭಾರತೀಯ ಕಾವ್ಯಮೀಮಾಂಸೆಯನ್ನೆ ಕನ್ನಡ ಕಾವ್ಯಮೀಮಾಂಸೆ ಎಂದು ಭಾವಿಸಿ ಶೈಕ್ಷಣಿಕ ಓದಿಗೂ (ಬೌದ್ಧಿಕ ಕಾಯಿಲೆಗೆ ಮದ್ದು ಕೊಡುವ ಡಾಕ್ಟರುಗಳ ರೀತಿಯಲ್ಲಿ) ಪ್ರಿಸ್ಕ್ರೈಬ್ ಮಾಡುತ್ತ; ನೋಟ್ಸ್ ಮಾಡಿ, ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳುತ್ತ, ಅದರ ಓದು ಅನಿವಾರ್ಯ ಎಂದು ಒಪ್ಪಿಸುತ್ತ ಬಂದಿರುವಾಗ ಮತ್ತದೆ ಟ್ಯ್ರಾಪಿಗೆ ಬಿದ್ದೆವೇನೋ ಎಂಬಂತೆ 1990ರಲ್ಲಿ ಬಂದ ಸಿ.ಎನ್. ರಾಮಚಂದ್ರನ್ ಅವರ ಸಾಹಿತ್ಯ ವಿಮರ್ಶೆ ಕೃತಿಯನ್ನು ಮೇರುಕೃತಿ ಎಂದು ಮುದ್ರಿಸಿಕೊಂಡು, ಮರುಮುದ್ರಿಸಿಕೊಂಡು ಸಿಲಬಸ್ಸುಗಳಲ್ಲಿ ಪ್ರಿಸ್ಕ್ರೈಬ್ ಮಾಡಿಕೊಂಡು, ಪರಾಮರ್ಶನದಲ್ಲಿ ನಿಗಧಿಸಿಕೊಂಡು ನಮ್ಮದಲ್ಲವೆಂದು ಪದೆ ಪದೆ ಮನಸ್ಸಿಗೆ ರಾಚುತ್ತಿದ್ದರೂ, ವಿದ್ಯಾರ್ಥಿಗಳ ಮೆದುಳು ಕಿವಿಚುತ್ತಿದ್ದರೂ ನಮ್ಮದೇ ಎಂದು ಜಪಿಸುತ್ತಿದ್ದೇವೆ. ರ‍್ಯಾಯವಿಲ್ಲದೆ ಓದಿ, ಓದಿಸುತ್ತಿದ್ದೇವೆ. ಇಂಥ ದಾರಿತಪ್ಪುವ ಓದನ್ನು ಸರಿದಾರಿಗೆ ತರುವ, ವಿದ್ಯರ‍್ಥಿಗಳನ್ನು ಹಾಲು ಕಂಡ ತೆನಾಲಿರಾಮನ ಬೆಕ್ಕುಗಳಾಗದಂತೆ ಮಾಡಬಹುದಾದ ದಾರಿ ಎಂದರೆ ನಮ್ಮದೇ ಪ್ರಾಕ್ಟೀಸನ್ನು ತಾತ್ವೀಕರಿಸಿಕೊಳ್ಳುವುದು. ಅಂತಹ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇದೊಂದು ಕೇವಲ ತೋರುಬೆರಳು ಮಾತ್ರವೆ ಆಗಿದ್ದು; ಇನ್ನೂ ಮಾಡಬೇಕಿರುವ ಬಾಕಿ ಕೆಲಸದ ಮೊತ್ತ ಬೃಹತ್ ಆಗಿದೆ. ಹಾಗಾಗಿ ಪ್ರಾಜ್ಞರು ಈ ದಿಸೆಯಲ್ಲಿ ಕಾರ್ಯಶೀಲರಾದಾರೆಂದು ಭಾವಿಸುತ್ತೇನೆ.

ಇಲ್ಲಿ ತೋರುಬೆರಳಿನ ರೀತಿ ಮಂಡಿಸಿರುವ ಸ್ಕೂಲುಗಳ ಸ್ವರೂಪ, ಲಕ್ಷಣಗಳನ್ನು ಕೂಡ ಸಮಗ್ರವಾಗಿ ಮಂಡಿಸಿಲ್ಲ. ಅದಕ್ಕೆ ವಿಸ್ತಾರವಾದ ಅಧ್ಯಯನದ ಅಗತ್ಯವಿದೆ. ಇದಲ್ಲದೆ, ಕನ್ನಡದಲ್ಲಿ ಪ್ರಕಟ ಆಗಿರುವ ಮುಖ್ಯವಾದ ಕೃತಿಗಳನ್ನು / ಲೇಖನಗಳನ್ನು ಚಾರಿತ್ರಿಕವಾಗಿ ಕ್ರೋಢೀಕರಿಸಿ. ವಿಂಗಡಿಸಿ ಅಧ್ಯಯನಕ್ಕೆ ಗುರಿಪಡಿಸಿ ತಾತ್ವೀಕರಿಸುವ ಅಗತ್ಯ ಕೂಡ ಇದೆ.

***

ಹೊಸ ನೀರಿನ ಕಾಲದ ನಮ್ಮ ವಿಮರ್ಶೆಯ ವಿನ್ಯಾಸಗಳ ಒಂದು ಸ್ಥೂಲ ನೋಟವನ್ನು ಪಡೆಯಲು ಈ ಕೆಳಗೆ ಕೆಲ ಬರಹಗಳನ್ನು ನೀಡಲಾಗಿದೆ: ಗಮನಿಸಿ; (ಇದು ಮೊದಲ ಭಾಗಗಳಿಗೆ ಸಂಬಂಧಿಸಿದ ಪೂರಕ ಮಾಹಿತಿ)

ಹೊಸನೀರಿನ ಕಾಲದ ಕೆಲವು ಗ್ರಂಥ ಮತ್ತು ಲೇಖನಗಳ ಅಕಾರಾದಿ

1800 - ಪ್ರಭುನಾಟಕ (ಅಲ್ಲಮನ ಕುರಿತ ಯಕ್ಷಗಾನ) - ಸಕ್ಕರಿ ಶಾಂತ
1800 - ದೇವಾಂಗ ಮತಪ್ರಕಾಶಿಕೆಗೆ ಕಾಡಸಿದ್ದಪ್ಪ ಬರೆದಿರುವ ವ್ಯಾಖ್ಯಾನ
1804 - ಕೆನರೀಸ್ ಗ್ರಾಮರ್ -ಜಾನ್ ಮೆಕೆರಲ್
1810 - ಹಿಸ್ಟಾರಿಕಲ್ ಸ್ಕೆಚಸ್ ಆಫ್ ಸೌತ್ ಇಂಡಿಯಾ -ಕರ್ನಲ್ ವಿಲ್ಕ್ಸ್ (ಮೈಸೂರು ಇತಿಹಾಸದ ಪುಸ್ತಕ)
1810 (1817) - ಕರ್ನಾಟಕ ಆಂಡ್ ಇಂಗ್ಲಿಶ್ ಡಿಕ್ಷನರಿ -ಡಬ.ರೀವ್ ಇಲ್ಲಿನ ಮುನ್ನುಡಿ
1811 - ಬೈಬಲ್ ಅನುವಾದ -ಹ್ಯಾಂಡ್ಸ್
1816 (1906) - ಹಿಂದು ಮ್ಯಾರ‍್ಸ್, ಕಸ್ಟಮ್ಸ್ ಅಂಡ್ ಸೆರಮನಿಸ್ -ಅಬೆ ದೂಬಾಯಿ
1817 - ಎ ಗ್ರಾಮರ್ ಆಫ್ ಕರ್ನಾಟ ಲಾಂಗ್ವೇಜ್ -ವಿಲಿಯಂ ಕೇರಿ
1827 - ಬೈಬಲ್ ಅನುವಾದ -ವಿಲಿಯಂ ಕೇರಿ
1838 - ಹೊಸಗನ್ನಡ ನುಡಿಗನ್ನಡಿ -ಬಿ.ಕೃಷ್ಣಮಾಚಾರಿ, ಶ್ರೀರಂಗಪಟ್ಟಣ
1840 - ಮುಮ್ಮಡಿಯವರ ಗ್ರಂಥಗಳು
1846 - ಆನ್ ಕ್ಯಾನರೀಸ್ ಲಾಂಗ್ವೇಜ್ ಅಂಡ್ ಲಿಟರೇಚರ್ -ಗಾಟ್ಫೈಡ್ ವೈಗಲ್ (ಜರ್ಮನ್), ಇದರ ಇಂಗ್ಲಿಶ್ ಅನುವಾದ ಕರೆನ್ ಸ್ಕೆರರ್
1848 - ಮುಯ್ಯದ ಪದ -ಪ್ರಾಣೇಶ ವಿಠ್ಠಲ (ದಾಸರ ಹಾಡುಗಳ 70 ಪುಟಗಳ ಸಂಗ್ರಹ)
1851 - ಕಥಾಸಾಗರ -ಮಾನವಿ ವೀರಪ್ಪ, ಇದೊಂದು ಕಥಾಸಂಕಲನವಾಗಿದ್ದು ಇದಕ್ಕೆ ಮುನ್ನುಡಿ ಇದೆ.
1864 - ವಿವೇಕ ಚಿಂತಾಮಣಿ -ಸಂ: ಸಿದ್ಧಾಂತಿ ಶಿವಶಂಕರಶಾಸ್ತ್ರೀ
1866 - ಶಬ್ದಮಣಿ ದರ್ಪಣ ವ್ಯಾಖ್ಯಾನ -ಗಂಗಾಧರ ಮಡಿವಾಳೇಶ್ವರ ತುರಮರಿ
1868 - ಪ್ರಾಕ್ಕಾವ್ಯ ಮಾಲಿಕೆ -ಜಿ.ವುರ್ತ್, ಬಾಸೆಲ್ ಮಿಶನ್, (ಇಂಗ್ಲಿಶಿನಲ್ಲಿ ಪಠ್ಯಗಳ ಸಾರಾಂಶ ಇದೆ. ಪೀಠಿಕೆ ಇದೆ)
1869 - ಶಬ್ಧಮಂಜರಿ -ಗಂಗಾಧರ ಮಡಿವಾಳೇಶ್ವರ ತುರಮರಿ, ಮುನ್ನುಡಿ
1869 - ಶಾಕುಂತಲ ಅನುವಾದ -ಚುರಮುರಿ ಶೇಷಗಿರಿರಾಯ, ಮುನ್ನುಡಿ
1872 - ಕನ್ನಡ ಗ್ರಾಮರ್ -ಕಿಟೆಲ್
1873 - ವಿಶ್ವಕೃತಿ ಪರೀಕ್ಷಣಂ -ಹಿರಣ್ಯಗರ್ಭ, ಪ್ರಾಚೀನ ಜೈನ ಕಾವ್ಯಗಳ ವಿಮರ್ಶೆ
1873 - ಮುದ್ರಾಮಂಜೂಷ -ಸಂ. ಜೆ. ಸ್ಟೀವಾನ್ಸನ್, ಪ್ರಸ್ತಾವನೆ
1874 - ಅನ್ ಎಸ್ಸೇ ಆನ್ ಕ್ಯಾನರೀಸ್ ಲಿಟರೇಚರ್ -ಕಿಟೆಲ್, ನಾಗವರ್ಮಾಸ್ ಪ್ರಸೋಡಿಗೆ ಬರೆದ ಮುನ್ನುಡಿ
1875- ಗಾಥಾಮೃತ ಕಲಶ -ಕಿಟೆಲ್ (ಗಾದೆಗಳ ಸಂಗ್ರಹ)
1876 - ಕನ್ನಡ ಕಾದಂಬರಿ ಸರಳಾನುವಾದ -ಗಂಗಾಧರ ಮಡಿವಾಳೇಶ್ವರ ತುರಮರಿ, (ಪ್ರಕಟಣೆ-1901) ಪೀಠಿಕೆ
1876 - ಉಷಾಹರಣ ನಾಟಕ -ಸಕ್ಕರಿ ಬಾಳಾಚಾರ್ಯ, ಪೀಠಿಕೆ
1877 - ರಾಮಚಂದ್ರಚರಿತ ಪುರಾಣ ಸಂಪಾದನೆ -ಬಿ.ಎಲ್.ರೈಸ್, (ಪೂರ್ಣ ಕೃತಿಯ ವಿಮರ್ಶೆ ಇದೆ)
1879 - ಮೈಸೂರಿನ ಶಾಸನಗಳು -ಫ್ಲೀಟ್
1881 - ಜಯಸಿಂಹರಾಜ ಚರಿತ್ರೆ (ಸಿಂಬಲೈನ್ ಅನುವಾದ) -ಎಂ.ಎಸ್. ಪುಟ್ಟಣ್ಣ, ಪೀಠಿಕೆ
1882 - ದಿ ಪೊಯೆಟ್ ಪಂಪ -ಇ.ಪಿ.ರೈಸ್, ಇಂಗ್ಲೆಂಡಿನ ನಿಯತಕಾಲಿಕವೊಂದಕ್ಕೆ ಬರೆದ ಲೇಖನ
1882 - ನಾಗವರ್ಮನ ಕರ್ನಾಟಕ ಭಾಷಾಭೂಷಣಕ್ಕೆ ಬರೆದ ಮುನ್ನುಡಿ -ಬಿ.ಎಲ್.ರೈಸ್
1884 - ವಿವೇಕ ಚಿಂತಾಮಣಿ -ನಿಜಗುಣ ಶಿವಯೋಗಿ
1884 - ಕನ್ನಡ ಲಿಟರೇಚರ್ -ಇ.ಪಿ.ರೈಸ್, ಹೆರಿಟೇಜ್ ಆಫ್ ಇಂಡಿಯಾ ಗ್ರಂಥಮಾಲಿಕೆಯಲ್ಲಿ ಬರೆದ ಲೇಖನ
1994 - ನೀತಿ ಚಿಂತಾಮಣಿ -ಸಂ: ಎಂ.ಎಸ್.ಪುಟ್ಟಣ್ಣ ಮತ್ತು ಎಂ.ಬಿ.ಶ್ರೀನಿವಾಸ ಐಯ್ಯಂಗಾರ್: ಪುರಾಣ, ಇತಿಹಾಸಗಳಿಂದ ಆಯ್ದ 165 ಕತೆಗಳ ಸಂಗ್ರಹ ಮತ್ತು ಪೀಠಿಕೆ
1885 - ಮಾಲವಿಕಾಗ್ನಿ ಮಿತ್ರ ಅನುವಾದ -ಧೋಂಡೋ ನರಸಿಂಹ ಮುಳಬಾಗಲ, (ಮುನ್ನುಡಿ)
1885 - ದುರ್ಗೇಶ ನಂದಿನಿ -ಅನು.ಬಿ.ವೆಂಕಟಾಚಾರ್ಯ (ಪ್ರಸ್ತಾವನೆ)
1887 - ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ -ಸಂಸ (ಮುನ್ನುಡಿ)
1888 - ಪ್ರಾಚೀನ ನಾಟ್ಯ ಕಥಾವರ್ಣನ -ಸಂಸ
1889 - ರ‍್ಯಾದೆ ರಾಮಣ್ಣನ ಕಥೆಗಳು -ಸಂ.ಮಾಲೂರು ಎಸ್. ಕೃಷ್ಣಯ್ಯ
1899 - ಶ್ರವಣಬೆಳಗೊಳದ ಶಾಸನಗಳು -ಫ್ಲೀಟ್
1890 - ವಿಮರ್ಶೆಯ ಒರೆಗಲ್ಲು -ಬಸವಪ್ಪ ಶಾಸ್ತ್ರೀ, ತಮ್ಮ ಭರ್ತೃಹರಿಯ ಸುಭಾಷಿತ ಅನುವಾದಕ್ಕೆ ಬರೆದ ಪ್ರತಿಕ್ರಿಯೆ
1892 - ಚಂಡಮಾರುತ-ಟೆಂಪೆಸ್ಟ್ ಕತಾರೂಪ -ಬಿ.ಸುಬ್ಬರಾವ್
1893 - ಮಿತ್ರವಿಂದಾ ಗೋವಿಂದ -ಅನು: ಸಿಂಗರರ‍್ಯ
1895 - ಪುರಂದರ ಮೊದಲಾದ ಅಪರೋಕ್ಷ ಜ್ಞಾನಿಗಳ ಪದಗಳು -ಹೊನ್ನಾಳಿ ಭೀಮದಾಸ (10 ಪುಟಗಳ ಪೀಠಿಕೆ ಇದೆ)
1895 - ಪ್ರತಾಪರುದ್ರ -ಅನು: ಎಂ. ಎಲ್. ಶ್ರೀಕಂಠೇಶಗೌಡ, ಮುನ್ನುಡಿ
1895 - ಕವಿಚಕ್ರವರ್ತಿ ರನ್ನನ ಜೀವನ ಚರಿತ್ರೆ, ಗ್ರಂಥವಿಮರ್ಶೆ ಇತ್ಯಾದಿ -ಎಂ.ಎ.ರಾಮಾನುಜ ಐಯ್ಯಂಗಾರ್
1897 – ಮಹಾಲಕ್ಷ್ಮೀ ವಿರಚಿತ ಶ್ರೀರಾಮ ಪಟ್ಟಾಭಿಷೇಕಂ -ಸಂ: ಎಂ.ಎ. ರಾಮಾನುಜ ಅಯ್ಯಂಗಾರ್ ಇವರ ಟೀಕು ಸಹಿತ.
1898 - ಪ್ರಬುದ್ಧ ಪದ್ಮನಯನೆ -ಗಳಗನಾಥ, ಸ್ವತಂತ್ರ ಕಾದಂಬರಿ: ಇದರ ಮುನ್ನುಡಿ
1899 - ಇಂದಿರಾಬಾಯಿ -ಗುಲ್ವಾಡಿ ವೆಂಕಟರಾಯ, ಪ್ರಸ್ತಾವನೆ
1901 - ಶೇಷರಾಮಾಯಣಂ ಪೀಠಿಕೆ -ಸೋಸಲೆ ಅಯ್ಯಾಶಾಸ್ತ್ರೀ
1904 - ಪ್ರಬಂಧಾವಳಿ -ಎಂ.ಎ.ರಾಮಾನುಜ ಐಯ್ಯಂಗಾರ್
1905 - ಕನ್ನಡ ಒಂದನೆಯ ಪುಸ್ತಕ -ಎಂ. ಆರ್. ಶ್ರೀನಿವಾಸಮೂರ್ತಿ
1907 - ಕರ್ನಾಟಕ ಕವಿಚರಿತೆ (3ಸಂಪುಟಗಳು) ಮೊದಲ ಸಂಪುಟ -ಆರ್. ನರಸಿಂಹಾಚಾರ್, ಮೊದಲ ಸಂಪುಟದ ಕರ‍್ಯಾರಂಭ 1894
1907 - ಪ್ರಭುಲಿಂಗಲೇಲೆ ಕಾವ್ಯದ ವಿಮರ್ಶೆ –ಆರ್. ತಾತಾ, ಶ್ರೀಕೃಷ್ಣಸೂಕ್ತಿ ಪತ್ರಿಕೆ, ಸಂ: ಕೆರೋಡಿ ಸುಬ್ಬರಾಯರು, ಉಡುಪಿ
1908 - ಕವಿಸಮಯಂ -ಎಂ.ಎ.ರಾಮಾನುಜ ಐಯ್ಯಂಗಾರ್ (ವಿಮರ್ಶಾಗ್ರಂಥ)
1909 - ಇಂದಿರಾ ಕಾದಂಬರಿಗೆ ಬರೆದ ಮುನ್ನುಡಿ, ಗಳಗನಾಥ
1910 - ಕುಣಿಗಲ್ ರಾಮಾಶಾಸ್ತಿçಗಳ ಚರಿತ್ರೆ -ಎಂ. ಎಸ್. ಪುಟ್ಟಣ್ಣ
1911 - ನೀತಿಮಂಜರಿ-1 -ಆರ್. ನರಸಿಂಹಾಚಾರ್, ತಮಿಳಿನ ಕುರುಳ್ ಅನುವಾದ, (ಮೊದಲ ಭಾಗದ ವಿಮರ್ಶೆ ಇದರ ಕೊನೆಯಲ್ಲಿದೆ)
1912 (1913, 1914) - ಕನ್ನಡ ಮಾದರಿ ಉಪನ್ಯಾಸಗಳು -ಶಾರದಾ ಪ್ರೆಸ್, ಬೆಂಗಳೂರು
1913 - ಜಿನಭಜನ ಸಾರ -ಸಂ. ಎರ್ತೂರ ಶಾಂತಿರಾಜ ಶಾಸ್ತ್ರೀ (ಜೈನರ ಹಾಡುಗಳ ಸಂಗ್ರಹ ಗ್ರಂಥ)
1913 - ಕವಿಕರ‍್ಯ ಪ್ರಶಂಸೆ -ಎಂ.ಎ. ರಾಮಾನುಜ ಐಯ್ಯಂಗಾರ್
1915 - ಅಕಿಂಡರೇನ್‌ಗೆ ಅಯಾಟ್ಣಕರ‍್ಸ್ ಬರೆದ ಮುನ್ನುಡಿ (ಶ್ರೀಕಂಠಯ್ಯ, ಹೆಸರು ಹಿಂದು ಮುಂದಾಗಿದೆ)
1915 - ಕನ್ನಡ ಲೇಖನ ಲಕ್ಷಣ -ಎಂ.ಎಸ್.ಪುಟ್ಟಣ್ಣ
1916 - ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ -ಎಚ್.ವಿ.ನಂಜುಂಡಯ್ಯ
1917 - ಕರ್ನಾಟಕ ಗತವೈಭವ -ಆಲೂರ ವೆಂಕಟರಾಯ
1917 - ನಂಜನಗೂಡು ತಿರುಮಲಾಂಬಾ ಕಾದಂಬರಿಗಳು -ಮಾಸ್ತಿ
1918 - ಕನ್ನಡ ಕವಿತೆಯ ಭವಿತವ್ಯ -ಹಟ್ಟಿಯಂಗಡಿ ನಾರಾಯಣರಾಯ
1919- ಕವಿಚರಿತೆ ಸಂಪುಟ 2 -ಆರ್.ನರಸಿಂಹಾಚಾರ್
1919 - ಪ್ರಾಸ ವಿಚಾರವು -ಮ.ಪ್ರ.ಪೂಜಾರ, (ವಾಗ್ಭೂಷಣ)
1919 - ಕವಿತಾವರ್ಧನ -ಹಟ್ಟಿಯಂಗಡಿ ನಾರಾಯಣರಾಯ, ಮುನ್ನುಡಿ
1919 - ಪ್ರಾಸ ನಿರಾಸ -ಕೇಶವರ‍್ಮ ಗಲಗಲಿ (ವಾಗ್ಭೂಷಣ)
1919 - ಕನ್ನಡ ಐತಿಹಾಸಿಕ ಕಾದಂಬರಿಗಳು -ಎ.ಆರ್.ಕೃಷ್ಣಶಾಸ್ತ್ರೀ
1919 -ಇಂಗ್ಲಿಶ್ ಗೀತೆಗಳು -ಬಿ.ಎಂ.ಶ್ರೀಕಂಠಯ್ಯ, ಮುನ್ನುಡಿ, ಪ್ರಕಟಣೆ 1926
1920 - ಮೈಸೂರು ಚರಿತ್ರೆಯ ಮೇಲೆ ಕಾದಂಬರಿ ರಚಿಸಲು ಇರತಕ್ಕ ಸಾಮಗ್ರಿಗಳು -ಎ.ಆರ್.ಕೃಷ್ಣಶಾಸ್ತ್ರೀ
1920- ತಿರುಮಲಾಂಬಾ ಕಾದಂಬರಿ ಮುನ್ನುಡಿ
1920 - ಸಾಹಿತ್ಯ ಮತ್ತು ಜನಜೀವನ -ಡಿ.ವಿ.ಜಿ.
1920 - ರಾಮಾಶ್ವಮೇಧ ಸಾರಸಂಗ್ರಹ -ಮ.ಪ್ರ.ಪೂಜಾರ
1920 - ನಾಟಕ ಕಲೆ -ಆತ್ಮರಾಮಕೃಷ್ಣಶಾಸ್ತ್ರೀ ಓಡ್ಲಮನೆ
1921- ಏಳನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ -ಪುಟ್ಟಣ್ಣ ಚೆಟ್ಟಿ
1921- ಕ್ಯಾನರೀಸ್ ಪ್ರೋಸ್, ಕತಾಸಂಗ್ರಹ -ಡೇನಿಯಲ್ ಸ್ಯಾಂಡರ್‌ಸನ್, ಮುನ್ನುಡಿ
1922 - ಕರ್ನಾಟಕ ಸಾಹಿತ್ಯದಲ್ಲಿ ಷಡಕ್ಷರಿಯ ಸ್ಥಾನ ನಿರ್ದೇಶನ -ಎಂ. ಆರ್. ಶ್ರೀನಿವಾಸಮೂರ್ತಿ
1922 - ನಮಗೆ ಬೇಕಾದ ಕಾವ್ಯ -ಬೇಂದ್ರೆ
1922 - ಸಾಹಿತ್ಯ -ಮಾಸ್ತಿ
1924 - ಸರ್ವಜ್ಞನ ವಚನಗಳು -ಉತ್ತಂಗಿ ಚನ್ನಪ್ಪ, ಪೀಠಿಕೆ
1924 - ವಿಮರ್ಶೆಯ ಕರ‍್ಯ -ಮಾಸ್ತಿ
1925 - ಹನ್ನೊಂದನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ -ಬೆನಗಲ್ ರಾಮರಾಯ
1925 - ವಿಮರ್ಶೆ 1 -ಮಾಸ್ತಿ
1928 - ರನ್ನಕವಿ ಪ್ರಶಸ್ತಿ -ವಿವಿಧ ಲೇಖಕರು

 

MORE NEWS

ಸಂಬಂಧ ಕಥೆಯಲ್ಲಿ ಕಾಣುವ ಜಾತಿ ಮತ್ತು ಲಿಂಗರಾಜಕಾರಣ

26-03-2025 ಬೆಂಗಳೂರು

"“ತಪ್ತ, ಫಿನಿಕ್ಸ್, ಗಿಜ್ಜಗನಗೂಡು”, ಇವು ಇವರ ಕಥಾಸಂಕಲನಗಳು. “ಪರಸಂಗದ ಗೆಂಡೆತಿಮ್ಮ, ಭುಜಂ...

ಕೊನೆಯ ದಾರಿಯಲ್ಲಿ ಕಂಡುಕೊಂಡ ಅಂತಿಮ ಸತ್ಯ

20-03-2025 ಬೆಂಗಳೂರು

"ಈ ಕಥೆಯನ್ನು ಪರಾಮರ್ಶಿಸುವುದಾದಲ್ಲಿ ವೀಣಾ ಶಾಂತೇಶ್ವರ ಅವರ ಕಥಾನಾಯಕಿಯರಾರು ದುರ್ಬಲರಲ್ಲ. ಬದಲಾಗಿ ವಿದ್ಯಾವಂತರು...

ತಾಯ್ಮಾತಿನ ಶಿಕ್ಶಣ-ಸಾದ್ಯತೆಗಳು

16-03-2025 ಬೆಂಗಳೂರು

"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...