ಸಕಲಕಲಾವಲ್ಲಭ ಪಂಚಾಕ್ಷರಿ​​​ ಜೀವನ ಗಾಥೆ

Date: 19-02-2023

Location: ಬೆಂಗಳೂರು


''ಪುಟ್ಟರಾಜ ಗವಾಯಿಗಳು ಸಂಗೀತ ಹಾಗೂ ರಂಗಭೂಮಿ ಕಲಾವಿದರಿಗೆಲ್ಲ ಗುರು ಸಮಾನರು. ಪಂಚಾಕ್ಷರಿ ಗವಾಯಿಗಳು ಪುಟ್ಟರಾಜರ ಗುರುಗಳು. ತಮ್ಮ ಗುರುಗಳ ಹೆಸರನ್ನೇ ಹುಟ್ಟುವ ಮಗುವಿಗೆ ಇಡಲು ಹೇಳಿದಂತೆ ನನಗೆ ಪಂಚಾಕ್ಷರಿ ಅಂತಲೇ ನಾಮಕರಣ ಮಾಡಿದರು. ಈಗಲೂ ಎಲ್ಲರೂ ಮನೆಯಲ್ಲಿ ಪ್ರೀತಿಯಿಂದ ಪಂಚು ಅಂತಲೇ ಕರೆಯುವುದುಂಟು,'' ಎನ್ನುತ್ತಾರೆ ಪಂಚಾಕ್ಷರಿ. ಲೇಖಕಿ ಜ್ಯೋತಿ ಎಸ್ ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ‘ಸಕಲಕಲಾವಲ್ಲಭ ಪಂಚಾಕ್ಷರಿ’​​​​​​ ಅವರ ಜೀವನ ಪ್ರಯಾಣದ ಕುರಿತು ಕಟ್ಟಿಕೊಟ್ಟಿದ್ದಾರೆ.

ಇಂದಿನ ಅಂಕಣದಲ್ಲಿ ಒಬ್ಬ ಸಕಲಕಲಾವಲ್ಲಭರ ಜೀವನ ಪರಿಚಯವನ್ನು ನಿಮ್ಮ ಓದಿಗಾಗಿ ತಂದಿದ್ದೇನೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿರಿವಂತೆ ಗ್ರಾಮದಲ್ಲಿ ತಂದೆ ಪ್ರಕಾಶ್ ತಾಯಿ ಪುಷ್ಪ ಸಾಗರ ದಂಪತಿಗಳ ಮಗನಾದ ಪಂಚಾಕ್ಷರಿ (ಪ್ರಮೋದ್ ಸಾಗರ್) ಅವರು ಸಂಗೀತ, ಸಾಹಿತ್ಯ, ರಂಗಭೂಮಿ, ಸಾಹಿತ್ಯ, ನಾಟಕ ರಚನೆ ಮತ್ತು ನಿರ್ದೇಶನ, ಚಿತ್ರಕಲೆ, ಫೋಟೋಗ್ರಫಿ, ಕ್ರಿಯೇಟಿವಿಟಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಇಲ್ಲಿಯವರೆಗಿನ ಜೀವನ ಪ್ರಯಾಣವನ್ನು ಅವರ ಮಾತುಗಳಲ್ಲಿ ಓದಿಕೊಳ್ಳಿ...

ಪಂಚು ಎನ್ನುವ ಹೆಸರಿನ ಹಿಂದೆ ಒಂದು ಕತೆಯಿದೆ. ನಾನು ಹುಟ್ಟುವ ಮುಂಚೆ ಅಮ್ಮ-ಅಪ್ಪ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಹೋಗಿದ್ದರಂತೆ. ಪಂಡಿತ ಪುಟ್ಟರಾಜ ಗವಾಯಿಗಳನ್ನು ಕಂಡು ಅಮ್ಮ ನಮಸ್ಕರಿಸಿದಾಗ ಅವರು ಮುಂದೆ ಗಂಡು ಮಗು ಆಗತ್ತೆ ಪಂಚಾಕ್ಷರಿ ಅಂತ ಹೆಸರಿಡಿ ಒಳ್ಳೆಯದಾಗತ್ತೆ ಎಂದು ಆಶೀರ್ವದಿಸಿದರಂತೆ. ಪುಟ್ಟರಾಜ ಗವಾಯಿಗಳು ಸಂಗೀತ ಹಾಗೂ ರಂಗಭೂಮಿ ಕಲಾವಿದರಿಗೆಲ್ಲ ಗುರು ಸಮಾನರು. ಪಂಚಾಕ್ಷರಿ ಗವಾಯಿಗಳು ಪುಟ್ಟರಾಜರ ಗುರುಗಳು. ತಮ್ಮ ಗುರುಗಳ ಹೆಸರನ್ನೇ ಹುಟ್ಟುವ ಮಗುವಿಗೆ ಇಡಲು ಹೇಳಿದಂತೆ ನನಗೆ ಪಂಚಾಕ್ಷರಿ ಅಂತಲೇ ನಾಮಕರಣ ಮಾಡಿದರು. ಈಗಲೂ ಎಲ್ಲರೂ ಮನೆಯಲ್ಲಿ ಪ್ರೀತಿಯಿಂದ ಪಂಚು ಅಂತಲೇ ಕರೆಯುವುದುಂಟು. ಇದು ಗುರುಗಳ ಮೇಲಿನ ಗೌರವದಿಂದ ಕರೆಯುವ ಹೆಸರು ಆದರೆ ನನ್ನ ನಿಜವಾದ ಹಾಗೂ ದಾಖಲಾತಿ ಹೆಸರು ಪ್ರಮೋದ ಸಾಗರ.

ಚಿಕ್ಕ ವಯಸ್ಸಿನಿಂದಲೂ ಮಣ್ಣಲ್ಲಿ ಮೂರ್ತಿ ಮಾಡೋದು, ಚಿತ್ರ ಬಿಡಿಸೋದು ನನ್ನ ಇಷ್ಟದ ವಿಷಯಗಳಾಗಿದ್ದವು. ಏಳನೇ ತರಗತಿಯಲ್ಲಿ ವಿಶ್ವಕರ್ಮ ಸಮಾಜದ ಚಿತ್ರಕಲಾ ಸ್ಪರ್ಧೆಯಲ್ಲಿ ತಿಂತಿಣಿ ಮೌನೇಶ್ವರ ದೇವರ ಚಿತ್ರ ಬಿಡಿಸಿದಾಗ ಮೊದಲನೆ ಬಹುಮಾನ ಬಂದಿತ್ತು. ಪ್ರೌಢಶಾಲೆಯಲ್ಲಿ ಓದುವಾಗ ಶಿಕ್ಷಕರ ಚಿತ್ರವನ್ನು ಬಿಡಿಸಿಕೊಡುತ್ತಿದ್ದೆ. ಆಗೆಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಷಣ, ಪ್ರಬಂಧ ಸ್ಪರ್ಧೆ ಪ್ರತಿಯೊಂದರಲ್ಲೂ ಭಾಗವಹಿಸುತ್ತಿದ್ದೆ. ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ನನ್ನ ಉದ್ದೇಶವಾಗಿತ್ತು.

ನಾನು ಪಿಯುಸಿ ಇದ್ದಾಗ ಅಪ್ಪನಿಗೆ ತೀವ್ರ ಅನಾರೋಗ್ಯವಾಗಿ ಹೃದಯಾಘಾತದಿಂದ ತೀರಿಕೊಳ್ಳುತ್ತಾರೆ. ಆದರೆ ಅಮ್ಮ ಎದೆಗುಂದದೆ ನಮ್ಮನ್ನೆಲ್ಲ ತಮ್ಮ ಕಲಾ ವೃತ್ತಿಯಿಂದಲೇ ಸಾಕಿದರು. ಅಮ್ಮನಿಗೆ ಬೆಂಬಲವಾಗಿ ನಿಲ್ಲಲು, ಸಂಸಾರ ಜವಾಬ್ದಾರಿ ಹೊರಲು ನಾನು ಕಲಾ ವೃತ್ತಿಯನ್ನೇ ಆಯ್ದುಕೊಳ್ಳುವ ಅನಿವಾರ್ಯತೆ ಆಗ ಎದುರಾಯಿತು. ಏಕೆಂದರೆ ಅಕ್ಕನಿಗೆ ಮದುವೆ ಆಗಿತ್ತು. ತಂಗಿ, ತಮ್ಮನನ್ನು ಚಿಕ್ಕವರಿದ್ದ ಕಾರಣ ಹಾಸ್ಟೆಲ್ಗೆ ಸೇರಿಸಿ ಓದಿಸಲಾಗುತಿತ್ತು. ದಾಯಾದಿ ಕಲಹದಿಂದ ಅಪ್ಪನ ಆಸ್ತಿ ಅಂತ ನಮಗೆ ಏನೂ ಬರಲಿಲ್ಲ. ಹಾಗಾಗಿ ಅಮ್ಮನೊಂದಿಗೆ ಮೂಲ ಊರನ್ನು ಬಿಡಬೇಕಾಗಿ ಬಂತು.

ಅಮ್ಮ ಚಿಕ್ಕವಯಸ್ಸಿನಿಂದಲೂ ರಂಗಭೂಮಿ ಕಲಾವಿದೆ ಆಗಿದ್ದರು. ನಮ್ಮ ಕುಟುಂಬದ ಆದಾಯದ ಮೂಲ ಅಮ್ಮನೇ ಆಗಿದ್ದರು. ಕಲಾ ಕುಟುಂಬದ ಕಾರಣ ಚಿಕ್ಕಂದಿನಿಂದಲೂ ಸಂಗೀತವೆಂದರೆ ಪ್ರಾಣ. ಚಿತ್ರ ನಟ ಸುಧೀರ್ ಅವರ ಮಗ ನಂದ ಕಿಶೋರ್ ಅವರು ನಾನು ಸಂಗೀತ ಕ್ಷೇತ್ರವನ್ನು ವೃತ್ತಿಯಾಗಿ ಆಯ್ದುಕೊಳ್ಳಲು ಮುಖ್ಯ ಕಾರಣಕರ್ತರು. ಅವರ ತಾಯಿಯವರ ಕಲಾ ಸಂಸ್ಥೆಯಲ್ಲಿ ನಾನು ಹಾಗೂ ಅಮ್ಮ ಕೂಡ ದುಡಿದಿದ್ದೇವೆ. ಅಮ್ಮ 2013 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸಂಗೀತ - ರಂಗಭೂಮಿ ದುಡಿಮೆ ಜೊತೆಗೆ ಬಿ. ಎ. ಪದವಿ ಮುಗಿಸಿ ಜಾನಪದ ವಿಷಯದಲ್ಲಿ ಎಂ. ಎ. ಸ್ನಾತಕೋತ್ತರ ಪದವಿಯನ್ನು ಮುಗಿಸಿದೆ. ಕಲಾ ವೃತ್ತಿಯ ಮೂಲಕ ಕರ್ನಾಟಕದ ತುಂಬ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಕರ್ನಾಟಕ ಅಲ್ಲದೆಯೂ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಹೀಗೆ ಹೊರ ರಾಜ್ಯಗಳಿಗೂ ಹೋಗಿ ಕಾರ್ಯಕ್ರಮವನ್ನು ಮಾಡಿದ್ದೇನೆ. ಒಂದು ದಿನ ಬೆಂಗಳೂರಿನಲ್ಲಿದ್ದರೆ ಮತ್ತೊಂದು ದಿನ ವಿಜಯಪುರದಲ್ಲೋ ಬೀದರಿನಲ್ಲೋ ಕಾರ್ಯಕ್ರಮ ಹೀಗೆ ನಮ್ಮ ಬದುಕು ಇರುತ್ತದೆ. ಎಲ್ಲಿ ಹಬ್ಬ, ಜಾತ್ರೆ, ಕಾರ್ಯಕ್ರಮಗಳು ನಡೆಯುತ್ತವೋ ಅಲ್ಲಿಗೆ ಹೋಗಬೇಕು. ಪ್ರತಿದಿನ ನಿರ್ದಿಷ್ಟ ದಿನಚರಿ ಎಂಬುವುದು ಇರುವುದಿಲ್ಲ. ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸತತವಾಗಿ ಎಂಟು ಬಾರಿ ಏಷ್ಯಾ ಬುಕ್ ಆಫ್ ರೆಕಾರ್ಡ್ ವಿಶ್ವದಾಖಲೆಗೆ ನನ್ನ ಹೆಸರು ಸೇರ್ಪಡೆಯಾಗಿದೆ. ಈಗೆಲ್ಲ ಮಕ್ಕಳಿಗೆ ಸಂಗೀತ ಪಾಠ ಕೂಡ ಮಾಡುತ್ತೇನೆ.

ಪಿ. ಯು. ಸಿ ನಂತರ ಸಂಡೂರಿನಲ್ಲಿ ಚಿತ್ರಕಲಾವಿದರಾದ ನಾಡೋಜ ವಿ. ಟಿ. ಕಾಳೆ ಹಾಗೂ ಅವರ ಮಕ್ಕಳ ಹತ್ತಿರ ಚಿತ್ರಕಲೆಯನ್ನು ಅಭ್ಯಾಸ ಮಾಡಿದೆ. ಚಿಕ್ಕಂದಿನಿಂದ ಚಿತ್ರ ಬಿಡಿಸುವ ಹುಚ್ಚಂತೂ ಇತ್ತು. ಸೋಷಿಯಲ್ ಮೀಡಿಯಾ ಬಳಕೆ ಆರಂಭವಾದ ಮೇಲೆ, ವಿವಿಧ ರೀತಿಯಲ್ಲಿ ಊರುಗಳ ಹೆಸರಲ್ಲಿ ಅಕ್ಷರ ಗಣಪತಿ ಬರೆಯಲು ಪ್ರಾರಂಭಿಸಿದೆ. ಗಣಪತಿ ಹಬ್ಬದ ಸಂದರ್ಭದಲ್ಲಿ ಇಳಕಲ್ ಊರಿನ ಹೆಸರಿನ ಗಣಪತಿ ಮಾಡಿದೆ. ಅದನ್ನು ನೋಡಿ ಎಲ್ಲರೂ ನಮ್ಮೂರಿನ ಹೆಸರನ್ನು ಬರೆದುಕೊಡಿ ಎಂದು ಕೇಳಲು ಶುರು ಮಾಡಿದ್ರು. ಆ ರೀತಿ ಬರೀತಾ ಬರೀತಾ ಎಲ್ಲಾ ಊರುಗಳು, ತಾಲ್ಲೂಕುಗಳು, ಜಿಲ್ಲೆಗಳು ಎಷ್ಟೋ ಸಂಖ್ಯೆಯಲ್ಲಿ ಆದವು. ಗಣಪತಿ ಹಿಂದೂ ದೇವರು, ಎಷ್ಟೋ ಮುಸ್ಲಿಂ ಮಿತ್ರರು ಕೂಡ ಗಣಪತಿ ಆಕಾರದಲ್ಲಿ ಅವರವರ ಊರಿನ ಹೆಸರು ಹೇಳಿ ಬರೆಸಿಕೊಂಡರು. ಅಕ್ಷರ ಗಣಪತಿ ತುಂಬ ವೈರಲ್ ಆಯ್ತು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಬಂತು. ಅಷ್ಟು ಜನರು ಪ್ರೀತಿಯಿಂದ ಒಪ್ಪಿಕೊಂಡದ್ದಕ್ಕಾಗಿ ಅದನ್ನು ದಾಖಲೆಗೆ ಅಂತ ಕಳಿಸಿ ಕೊಟ್ಟೆವು. ಅದು ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಎರಡರಲ್ಲೂ ದಾಖಲಾಯಿತು.

ಕಲಾ ಸೇವೆಯೇ ನಮ್ಮ ಬದುಕು. ಕಲೆ ಎನ್ನುವುದು ನಾಡಿನ ಪರಂಪರೆ. ಸಂಸ್ಕೃತಿ ಅಂತ ಬಂದಾಗ ಕಲಾವಿದರೆ ಸಂಸ್ಕೃತಿಯ ರಾಯಭಾರಿಗಳು. ಒಂದು ಪ್ರದೇಶವನ್ನು ಗುರುತಿಸುವುದು, ಅಲ್ಲಿನ ಕಲೆಯ ಸೊಗಡು. ಪ್ರದೇಶಾವಾರು ವೈವಿಧ್ಯತೆಯನ್ನು ನಿರ್ಧರಿಸುವುದರಲ್ಲಿ ಕಲೆಯೂ ಒಂದು ಪ್ರಮುಖ ವಿಷಯ. ಎಲ್ಲಿ ಕಲಾವಿದರು ಸಂತೃಪ್ತರಾಗಿರುತ್ತಾರೋ ಆ ನಾಡು ಸಮೃದ್ಧವಾಗಿರುತ್ತದೆ.

ರೈತರು ಧಾನ್ಯವನ್ನು ಬೆಳೆಯುತ್ತಾರೆ. ಯೋಧರು ದೇಶವನ್ನು ಕಾಯುತ್ತಾರೆ. ಡಾಕ್ಟರ್, ಪೊಲೀಸ್ ಇತ್ಯಾದಿ ಜನ ಅವರವರ ವೃತ್ತಿಯನ್ನು ಮಾಡುತ್ತಾರೆ. ಅದೆಲ್ಲ ಹೊರಗಿನ ಹಸಿವನ್ನು ನೀಗಿಸುತ್ತದೆ. ಮನಸ್ಸಿನ ಹಸಿವು ನೀಗಬೇಕಾದರೆ ಅದಕ್ಕೆ ಕಲಾವಿದರು ಮತ್ತು ಕಲೆ ಸಹಕಾರಿಯಾಗುತ್ತದೆ. ಕಲಾವಿದ ಒಂದು ದೇಶ, ಭಾಷೆ, ಜಾತಿ, ಧರ್ಮಗಳ ಎಲ್ಲಾ ಗಡಿಯಾಚೆಗೆ ನಿಂತಿರುತ್ತಾನೆ. ಕಲಾವಿದರಿಗೆ ಎಲ್ಲರೂ ನಮ್ಮವರೇ. ಎಲ್ಲಾ ಊರೂರು ನಮ್ಮದೇ. ಪರಂಪರೆ ಉಳಿಸೋದು, ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕಲೆಯನ್ನು ವರ್ಗಾಯಿಸುವುದು ಕಲಾವಿದರೆ. ಕಲೆ ಮತ್ತು ಕಲಾವಿದರು ನಿಂತ ನೀರಲ್ಲ. ಸದಾ ಹರಿಯುತ್ತಿರುವ ನೀರು. ನೀರು ಒಳ್ಳೆಯದನ್ನು ಕೆಟ್ಟದನ್ನು ಎಲ್ಲವನ್ನೂ ಸ್ವೀಕರಿಸಿ ಮುಂದೆ ಸಾಗುತ್ತಿರುತ್ತದೆ. ಸಾಗುವ ಮಾರ್ಗದಲ್ಲಿ ಕೆಸರನ್ನು ಒಯ್ಯುತ್ತದೆ. ಕಾಡಿನಲ್ಲಿ ಹರಿಯುವಾಗ ಒಳ್ಳೊಳ್ಳೆ ಹೂಗಳು, ಗಿಡ ಮೂಲಿಕೆಗಳು, ಔಷಧಿ ಬೇರು ಎಲ್ಲವನ್ನು ಒಯ್ಯುತ್ತದೆ. ಮತ್ತೆ ಇದೆಲ್ಲದರ ಹೊರತಾಗಿ ನೀರು ನೀರಾಗಿಯೇ ಉಳಿಯುತ್ತದೆ. ಕಲಾವಿದರು ಕೂಡ ಹಾಗೆಯೇ..

ನಾನು ಹಣ ಆಸ್ತಿ ಗಳಿಕೆಗಿಂತ ಜನರ ಪ್ರೀತಿ, ಚಪ್ಪಾಳೆ, ಅಭಿಮಾನ ಗಳಿಕೆಯಲ್ಲಿ ಖುಷಿ, ತೃಪ್ತಿ ಕಂಡವನು. 2021ರಲ್ಲಿ 'ಸಂಸಾರ ಗೀತೆ' ಎನ್ನುವ ಕವನ ಸಂಕಲನವನ್ನು ಬಿಡುಗಡೆ ಮಾಡಿದ್ದೇನೆ. ಜೊತೆಗೆ ಹಲವಾರು ನಾಟಕಗಳನ್ನು ರಚಿಸಿದ್ದೇನೆ. ಉದಾ- ಗಯ್ಯಾಳಿ ನನ್ನ ಹೆಂಡತಿ, ಮೋಹಿನಿ ಭಸ್ಮಾಸುರ, ಶಿವಾನಿ ಭವಾನಿ, ಯಾರು ನನ್ನವರು ಇತ್ಯಾದಿ ನಾಟಕಗಳನ್ನು ವೃತ್ತಿಪರ ಸಂಸ್ಥೆಗಳು, ಹವ್ಯಾಸಿ ತಂಡಗಳು ಪ್ರದರ್ಶನ ಮಾಡಿದ್ದಾರೆ. ನನ್ನ ಚಿತ್ರಕಲೆ - ಫೋಟೋಗ್ರಫಿಗಳ ಪ್ರದರ್ಶನಗಳಾಗಿವೆ. ಪತ್ರಿಕೆಗಳಿಗೆ ಕವಿತೆಗಳು, ಜೀವ ವೈವಿಧ್ಯತೆ, ಪ್ರವಾಸಿ ಲೇಖನಗಳನ್ನು ಬರೆಯುತ್ತೇನೆ. ಅವು ಕರ್ನಾಟಕದ ಮುಖ್ಯ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ ಅಲ್ಲದೆಯೂ, ತೆಲುಗು ಪತ್ರಿಕೆ, ಅಮೇರಿಕಾದ ನ್ಯೂ ಜೆರ್ಸಿಯಲ್ಲಿಯೂ ಪ್ರಕಟವಾಗಿವೆ. ಈ ಮೂಲಕ ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯ ಹಾಗೂ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡದ ಅಕ್ಷರಗಳು ದಾಖಲಾಗಿದೆ. ಕರ್ನಾಟಕದಾದ್ಯಂತ ಹಲವಾರು ಲೋಗೋಗಳನ್ನು ಮಾಡಿಕೊಟ್ಟಿದ್ದೇನೆ. ಇದಕ್ಕಾಗಿ ನಾನು ಯಾರನ್ನೂ ಹಣ ಕೇಳುವುದಿಲ್ಲ. ಹಾಗೆಯೇ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಪ್ರೀತಿಯಿಂದ ಗೌರವಧನ ಕೊಟ್ಟರೆ ತಗೊಂಡಿದ್ದೇನೆ. ಎಲ್ಲವೂ ಜನರ ಪ್ರೀತಿ, ಅಭಿಮಾನ.

ಶಾಸ್ತ್ರೀಯ ವಾದ್ಯಗಳು ಹಾರ್ಮೋನಿಯಂ, ತಬಲ, ಎಲೆಕ್ಟ್ರಾನಿಕ್ಸ್ ವಾದ್ಯಗಳಾದ ಕೀಬೋರ್ಡ್, ರಿದಮ್ ಪ್ಯಾಡ್, ಪಾಶ್ಚಾತ್ಯ ವಾದ್ಯಗಳಾದ ಡ್ರಮ್ ಸೆಟ್, ಕಾಂಗೋ, ಬ್ಯಾಂಗೋ ಇತ್ಯಾದಿ ವಾದ್ಯಗಳನ್ನು ನುಡಿಸುತ್ತೇನೆ.

ಶ್ರೀ ರೇಣುಕಾಂಬ ಕಲಾ ಸಂಘದ ಸಂಚಾಲಕನಾಗಿ, ಸಂಘದ ಮೂಲಕ ನಾಡಿನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದರೊಂದಿಗೆ, ಕಲಾ ರಂಗದ ಹಿರಿಯರಿಗೆ, ಅಶಕ್ತ ಕಲಾವಿದರಿಗೆ ನನ್ನಿಂದಾದ ಅಳಿಲು ಸೇವೆಯಂತೆ ಸಹಾಯವನ್ನು ಮಾಡುತ್ತೇನೆ. ಕಲೆಯನ್ನು, ಕನ್ನಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಕರ್ನಾಟಕ ಎಂಬ ಫೇಸ್ಬುಕ್ ಗ್ರೂಪನ್ನು ರಚಿಸಿದ್ದು ಗುಂಪಿನ ಸದಸ್ಯರು ನಿತ್ಯ ಅವರ ಕ್ರೀಯೇಟಿವಿಟಿಯನ್ನು ಅಲ್ಲಿ ಪೋಸ್ಟ್ ಮಾಡುತ್ತಾರೆ. ಇದೆಲ್ಲದಕ್ಕೂ ಸ್ಫೂರ್ತಿ, ಬಲಾಬಲ, ಬೆಂಬಲ ಎಲ್ಲವೂ ಅಮ್ಮನೇ. ಇಂದಿನ ನನ್ನೆಲ್ಲಾ ಕಲೆ, ಕೆಲಸ, ಸಾಧನೆಗೆ ಸ್ಫೂರ್ತಿ ಅಮ್ಮ. ತಮ್ಮ ಪ್ರಶಾಂತ ಸಾಗರ ಸಿನಿಮಾ ರಂಗದಲ್ಲಿ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ಕೆಲಸ ಮಾಡುವುದರೊಂದಿಗೆ ಅವನೂ ಕೂಡ ಕಲಾ ಸೇವೆಯಲ್ಲೇ ಇದ್ದಾನೆ.

ಪುಟ್ಟರಾಜ ಗವಾಯಿಗಳ ದರ್ಶನದ ನಂತರ ಹುಟ್ಟಿದ ಪ್ರಮೋದ ಸಾಗರ ಅವರು ಗವಾಯಿಗಳ ಆಶೀರ್ವಾದವೋ ಕಾಕತಾಳೀಯವೋ ಶಾಸ್ತ್ರೋಕ್ತವಾಗಿ ಹಿಂದೂಸ್ತಾನಿ ಸಂಗೀತವನ್ನು ಕಲಿತು ವೃತ್ತಿಯಲ್ಲಿ ಸಂಗೀತಗಾರರೇ ಆಗಿದ್ದಾರೆ. ಗವಾಯಿಗಳ ಶಿಷ್ಯರಾದ ದೇವೇಂದ್ರ ಕುಮಾರ ಪತ್ತಾರರು ಪ್ರಮೋದರ ಸಂಗೀತ ಗುರುಗಳು. ಕಲಾ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಕಲಕಲಾ ವಲ್ಲಭ, ತುಂಬಿದಕೊಡ ಪಂಚು ಸಮಯವನ್ನು ವ್ಯರ್ಥ ಮಾಡದೆ ತಮ್ಮ ಬಿಡುವಿನ ಸಮಯದಲ್ಲಿ ಕವಿತೆ, ಪೋಸ್ಟರ್ ಡಿಸೈನ್, ಪುಸ್ತಕದ ಮುಖಪುಟ ವಿನ್ಯಾಸ ಇವೆಲ್ಲಾ ಮಾಡುತ್ತಾರೆ. ಇವರ ಸೇವೆಗೆ ಕನ್ನಡ ಸೇವಾರತ್ನ, ನಾದ ಪ್ರವೀಣ, ಕಲಾ ತೇಜಸ್ವಿ ಎಂಬ ಹಲವಾರು ಪ್ರಶಸ್ತಿಗಳೊಂದಿಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಗಳು ಆಗಿವೆ. ಪ್ರಮೋದ್ ಸಾಗರ್ ಅವರ ಕಲೆ, ಕನ್ನಡ ಸೇವೆ, ಸಮಾಜ ಸೇವೆ ಎಲ್ಲವೂ ನಿರಂತರವಾಗಿ ಸಾಗಲಿ. ಅವರ ಕಲಾ ಬದುಕಿನಲ್ಲಿ ಅವರಿಗೆ ಸಾಕಷ್ಟು ಯಶಸ್ಸು ಸಿಗಲಿ ಎಂದು ಹಾರೈಸೋಣ...

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...