ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ

Date: 15-01-2023

Location: ಬೆಂಗಳೂರು


''ಬದುಕು ಅಚ್ಚರಿಗಳ ಗೂಡು. ಒಮ್ಮೊಮ್ಮೆ ಬಲು ವಿಚಿತ್ರವಾದುದು ಕೂಡ. ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಮಾತ್ರ ಸಾಧಿಸಲೇಬಾರದೆಂಬಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಒಂದು ಕೈ ಕಳೆದುಕೊಂಡೂ ತಾವು ಅಂದುಕೊಂಡ ನೃತ್ಯಗಾರಿಕೆಯನ್ನ ಸಾಧಿಸಿದ ಕಲಬುರ್ಗಿಯ ಪ್ರಖ್ಯಾತ ನೃತ್ಯ ಕಲಾವಿದ ಅನಂತ ಚಿಂಚನಸೂರ”. ಲೇಖಕಿ ಜ್ಯೋತಿ ಎಸ್. ಅವರು ತಮ್ಮ ‘ಹೆಜ್ಜೆಯ ಜಾಡು ಹಿಡಿದು’ ಅಂಕಣದಲ್ಲಿ ಅನಂತ ಚಿಂಚನಸೂರ ಅವರ ಜೀವನಯಾನದ ಕುರಿತು ಬರೆದಿದ್ದಾರೆ...

ಬದುಕು ಅಚ್ಚರಿಗಳ ಗೂಡು. ಒಮ್ಮೊಮ್ಮೆ ಬಲು ವಿಚಿತ್ರವಾದುದು ಕೂಡ. ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಮಾತ್ರ ಸಾಧಿಸಲೇಬಾರದೆಂಬಂತೆ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅವೆಲ್ಲವನ್ನೂ ದಾಟುವ ಗಟ್ಟಿ ಮನಸ್ಸು ಮಾತ್ರವೇ ಸಾಧಿಸಲು ಸಾಧ್ಯವಾಗುತ್ತದೆ. ಎಂತಹದ್ದೇ ನ್ಯೂನತೆ ಇದ್ದರೂ ಗೆಲ್ಲುವ ಛಲ ಬತ್ತಬಾರದು. ಒಂದು ಕೈ ಕಳೆದುಕೊಂಡೂ ತಾವು ಅಂದುಕೊಂಡ ನೃತ್ಯಗಾರಿಕೆಯನ್ನ ಸಾಧಿಸಿದ ಕಲಬುರ್ಗಿಯ ಪ್ರಖ್ಯಾತ ನೃತ್ಯ ಕಲಾವಿದರಾದ ಅನಂತ ಚಿಂಚನಸೂರ ಅವರ ಜೀವನಯಾನ ಇಂದಿನ ಅಂಕಣದಲ್ಲಿ. ಇವರು ಶಾಸ್ತ್ರೀಯ ನೃತ್ಯದಲ್ಲಿ ಅಪಾರ ಹೆಸರು ಮಾಡಿದವರು. ಇವರಿಗೆ ಸಂದ ಗೌರವ ಪ್ರಶಸ್ತಿಗಳು ಹಲವು. ಇವರು ಅನೇಕ ಶಿಷ್ಯಂದಿರನ್ನೂ ಕೂಡ ತಯಾರಿ ಮಾಡಿದ್ದಾರೆ. ಇವರದು ಕಲಾವಿದರ ಕುಟುಂಬ ಎಂದರೆ ತಪ್ಪಾಗಲಾರದು. ತಾಯಿ ನರ್ಮದಾ ಬಾಯಿ ಕೆ. ತಂದೆ ಕಿಶನ್ ರಾವ್. ಇವರ ಮಾತುಗಳು ನಿಮ್ಮ ಓದಿಗೆ.

'ನಮ್ಮ ತಂದೆ ತಾಯಿಗೆ ನಾವು ಏಳು ಮಕ್ಕಳು‌ ಅಮ್ಮ ಮೂರನೇ ತರಗತಿಯವರೆಗೆ ಓದಿದ್ದರು. ನಮ್ಮದು ಕೂಡು ಕುಟುಂಬ. ಅಪ್ಪನಿಗೆ ಆಗ ಬರುತ್ತಿದ್ದ 180/- ರೂಪಾಯಿ ಸಂಬಳದಲ್ಲಿ ಅಮ್ಮ ನಮ್ಮೆಲ್ಲರನ್ನು ಓದಿಸಿ ಹೊಟ್ಟೆ ಬಟ್ಟೆಯನ್ನು ಹೊಂದಿಸಬೇಕಿತ್ತು. ಪರಿಸ್ಥಿತಿ ಹೀಗಿರುವಾಗ ಅಪ್ಪ ಅನಾರೋಗ್ಯದಿಂದಾಗಿ 46ನೇ ವಯಸ್ಸಿಗೆ ತೀರಿಕೊಂಡರು. ಅಮ್ಮ ನಮ್ಮನ್ನೆಲ್ಲ ತುಂಬ ಕಷ್ಟ ಪಟ್ಟು ಸಾಕಿದ್ಲು. ಎಷ್ಟೋ ದಿನ ಅಮ್ಮ ಮತ್ತು ಅಕ್ಕ ತಮ್ಮ ಪಾಲಿನ ಊಟವನ್ನು ನಮಗೆ ಕೊಟ್ಟು ಬೆಳೆಸಿದರು. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಬೇಕಾಗಿ ಬಂದರೂ ಹೇಗೋ ಕಷ್ಟಪಟ್ಟು ಬಿ. ಕಾಂ ಪದವಿ ಮುಗಿಸಿದೆ. ಶಾಲಾ ಕಾಲೇಜುಗಳಲ್ಲಿ ನೃತ್ಯ ಮಾಡುವ ಹವ್ಯಾಸವಿದ್ದ ನನಗೆ ಎಲ್ಲರೂ ಬಹಳ ಚೆನ್ನಾಗಿ ನೃತ್ಯ ಮಾಡುತ್ತಾನೆ ಎಂದು ಹೊಗಳುತ್ತಿದ್ದರು. ಆಗ ತರಗತಿಯ ಮಾಸ್ಟರ್ ಒಬ್ಬರು ಯಾವುದೇ ತರಬೇತಿ ಇಲ್ಲದೆಯೇ ನೀನು ಚೆನ್ನಾಗಿ ನೃತ್ಯ ಮಾಡುತ್ತೀಯ. ತರಬೇತಿ ಪಡೆದುಕೊ ನಿನಗೆ ಇದರಲ್ಲಿ ಭವಿಷ್ಯವಿದೆ ಎಂದು ಹರಸಿದರು. ನಾನು ಶಾಸ್ತ್ರೀಯ ನೃತ್ಯ ಕಲಿಯುತ್ತೇನೆ ಎಂದು ಅಮ್ಮನನ್ನು ಹೇಗೋ ಒಪ್ಪಿಸಿ ಕುಟುಂಬ ಸಮೇತ ಬೆಂಗಳೂರಿಗೆ ಬಂದೆವು. ನಾಟ್ಯ ವಿಶಾರದೆ ಶ್ರೀಮತಿ ನರ್ಮದಾ ಮೇಡಂ ಹತ್ತಿರ ಸತತ ಒಂಭತ್ತು ವರ್ಷ ಪರಿಶ್ರಮದಿಂದ ವಿದ್ವತ್ ವರೆಗೂ ಕಲಿತೆ. ಹವ್ಯಾಸವಾಗಿ ಚಿತ್ರ ಬಿಡಿಸುವುದು, ಪೇಂಟಿಂಗ್, ವಾಟರ್ ಕಲರ್ ಆರ್ಟ್, ರಂಗೋಲಿ ಹಾಕುವುದು, ಫ್ರೀ ಹ್ಯಾಂಡ್ ಸ್ಕೆಚ್ ಹೀಗೆ ವಿವಿಧ ರೀತಿಯ ಕೆಲಸ ಮಾಡುತ್ತಲೇ ಕಲಿತೆ. ನೀರಾವರಿ ಇಲಾಖೆಯಲ್ಲಿ ಪ್ರಥಮ ದರ್ಜೆ ನೌಕರರಾಗಿ ಕೆಲಸ ಸಿಕ್ಕಿತು. ಉಮಾ ಎಂಬುವರ ಜೊತೆಗೆ ಮದುವೆಯಾಯ್ತು. ನಮಗೆ ಮಗ ಆದಿತ್ಯ ಮಗಳು ಪದ್ಮಿನಿ ಇಬ್ಬರು ಮಕ್ಕಳಿದ್ದಾರೆ. ಕೆಲಸದ ಜೊತೆಗೆ ನೃತ್ಯವನ್ನೂ ಮುಂದುವರೆಸುತ್ತ 'ವರ್ಣ ಸಿಂಧು ನೃತ್ಯ ಕಲಾ ಕೇಂದ್ರ' ಎಂಬ ನಮ್ಮದೇ ಸೆಂಟರ್ ನಿಂದ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಪ್ರತೀ ವರ್ಷ ನಮ್ಮ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ನಮ್ಮ ನೃತ್ಯ ಇದ್ದೆ ಇರುತ್ತದೆ. ದಶಾವತಾರ, ರಾಮ ಪಟ್ಟಾಭಿಷೇಕ, ಶ್ರೀ ಕೃಷ್ಣ, ನವರತ್ನ ಮಾಲಾ, ಶಿವ ನವರಸ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿಸುತ್ತ ಬಂದಿದ್ದೇನೆ. ಜಾನಪದ ನೃತ್ಯ, ತರಂಗಂ (ತಟ್ಟೆಯ ಮೇಲೆ ಕಾಲಿಟ್ಟುಕೊಂಡು ನೃತ್ಯವನ್ನು ಮಾಡುವುದು), ಸುಗ್ಗಿ ಡಾನ್ಸ್, ಕೋಲಾಟ, ಲಾವಣಿ, ಕತಕ್, ಭರತನಾಟ್ಯ ಇತ್ಯಾದಿ ನೃತ್ಯಗಳನ್ನು ಹೇಳಿಕೊಡುತ್ತೇನೆ. ಇವು ಹಲವು ಪ್ರಶಸ್ತಿಗಳನ್ನು ತಂದುಕೊಟ್ಟಿವೆ. 'ಸಿಂಹ ನಂದಿನಿ' ನೃತ್ಯ 4/5 ಅಥವಾ 3/5 ಅಡಿಯಷ್ಟು ರಂಗೋಲಿ ಚೆಲ್ಲಿ 4. 1/2ನಿಮಿಷದಲ್ಲಿ ಕಾಲಿನಿಂದ ಸಿಂಹ ಬಿಡಿಸುವುದು. ಈ ವಿಶೇಷ ನೃತ್ಯವನ್ನು ಮಾಡುತ್ತೇನೆ. ತರಂಗಂ ಕೈನಲ್ಲಿ ದೀಪ ಇಟ್ಟುಕೊಂಡು ನೃತ್ಯ ಮಾಡುವುದು ಹೆಚ್ಚು ಪ್ರಸಿದ್ಧಿ ಪಡೆಯಿತು.'

'ಅಮ್ಮ ನಿಮಿಷ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಉಳಿದ ಮಾತ್ರೆಗಳು, ಖಾಲಿಯಾದ ವಿಕ್ಸ್ ಡಬ್ಬಿ, ಟೂತ್ ಪೇಸ್ಟ್ ಮುಚ್ಚಳಗಳು, ತೆಂಗಿನಚಿಪ್ಪು, ಮದುವೆ ಆಮಂತ್ರಣ ಪತ್ರಿಕೆ ಇತ್ಯಾದಿ ಬಿಸಾಡುವ ವಸ್ತುಗಳಿಂದ ನೂರಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಹೆಚ್ಚಿನವು ಗಣಪತಿ. ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಅಮ್ಮ ಎಲ್ಲಿಯೂ ತರಬೇತಿ ಪಡೆದಿರಲಿಲ್ಲ. ಹಲವಾರು ಆಪರೇಷನ್, ಮಧುಮೇಹದಿಂದ ಬಳಲುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ತನ್ನ ಎಂಭತ್ತರ ಇಳಿವಯಸ್ಸಿನಲ್ಲೂ ಚೈತನ್ಯದಿಂದ ಇದ್ದರು ಅಮ್ಮ. ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ಅಮ್ಮ ಪ್ರತ್ಯಕ್ಷ ಸಾಕ್ಷಿಯಾಗಿ ಹಲವಾರು ಕಡೆ ಅವರು ರಚಿಸಿದ ಕಲಾಕೃತಿಗಳನ್ನು ಪ್ರದರ್ಶನ ನಲ್ಲಿ ಇಟ್ಟಿದ್ದರು. ಅಮ್ಮನಿಂದಲೇ ಪ್ರೆರೇಪಿತನಾದ ನಾನು ಮನೆ ಮುಂದೆಯೇ ಕೈತೋಟವನ್ನು ಮಾಡಿದೆ. ಅದರಲ್ಲಿ ಟೊಮೊಟೊ, ಹೀರೆಕಾಯಿ, ತೊಂಡೆಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಮೆಣಸಿನಕಾಯಿ, ಪಡವಲಕಾಯಿ, ಬದನೇಕಾಯಿ, ಹುರುಳಿಕಾಯಿ, ನಿಂಬೆಹಣ್ಣು, ಈರುಳ್ಳಿ, ತೆಂಗು ಅಲ್ಲದೇ ಹಣ್ಣಿನ ಬೆಳೆಗಳಾದ ಬಾಳೆ, ದಾಳಿಂಬೆ, ಸಪೋಟ, ಮಾವಿನಮರಗಳು, ಹೂ ಬಳ್ಳಿಗಳಾದ ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ, ಸೂಜಿ ಮಲ್ಲಿಗೆ ಹಾಗೂ ಕನಕಾಂಬರ, ಸೇವಂತಿಗೆ, ಗುಲಾಬಿ, ದಾಸವಾಳ, ಸಂಪಿಗೆ ಹೂ ಗಿಡಗಳನ್ನು ಬೆಳೆಸಿದ್ದೇವೆ. ಹಾಗೇನೇ ಗುಲ್ಬರ್ಗಕ್ಕೆ ಅಪರೂಪ ಎನಿಸಿರುವ ಬೋನ್ಸಾಯ್ ಮರಗಳು ಅಂದರೆ ಇದು ಮರಗಳನ್ನು ಕುಬ್ಜಗೊಳಿಸಿ ಕುಂಡದಲ್ಲಿ ಬೆಳೆಸುವ ವಿಧಾನವಾಗಿದೆ. ಸುಮಾರು 25, 30 ವರ್ಷಗಳ ಮರಗಳು ನಮ್ಮ ಸಸ್ಯ ಸಂಗ್ರಹಣೆಯ ಮುಖ್ಯ ಭಾಗವಾಗಿದೆ. ಬೊನ್ಸಾಯ್ ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹತ್ತಾರು ವರ್ಷಗಳ ಮರಗಳನ್ನು ಕುಂಡಗಳಲ್ಲಿ ಬೆಳೆಸಿದ್ದೇವೆ. ಇದಕ್ಕೆ ಹೆಚ್ಚಿನ ತಾಳ್ಮೆ ಬೇಕು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಮಾರ್ಚ್ 14 ನೇ ತಾರೀಖು 2021ರಲ್ಲಿ ಅಚಾನಕ್ ಅಪಘಾತವೊಂದು ನಡೆದೇ ಹೋಯ್ತು. ಅದರಲ್ಲಿ ನನ್ನ ಬಲಗೈ ಕಳೆದುಕೊಂಡೆ. ಅದೇ ಸಮಯದಲ್ಲಿ ಅಮ್ಮನ ಆರೋಗ್ಯವೂ ಹದಗೆಟ್ಟು ಇಬ್ಬರೂ ಒಂದೇ ಆಸ್ಪತ್ರೆಯ ಪಕ್ಕ ಪಕ್ಕದ ಬೆಡ್ ಮೇಲೆ ಮಲಗಿದ್ದು ಇಂದಿಗೂ ದುಃಖಕರ ಸಂಗತಿ. ಅಕ್ಕ ಪಕ್ಕ ಇದ್ದರೂ ಒಬ್ಬರನ್ನೊಬ್ಬರು ನೋಡದ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದೆವು. ಕೊನೆಗೂ ಜೀವದ ಅಮ್ಮನನ್ನು ಕಳೆದುಕೊಂಡೆ'.

'ನನ್ನ ಬಲಗೈ ಕಳೆದುಕೊಂಡು ಅಮ್ಮನನ್ನು ಕಳೆದುಕೊಂಡು ನಾನು ಬದುಕಿದ್ದು ಮತ್ತೆ ಮರು ಜೀವ ಪಡೆದಂತೆಯೇ... ಇದನ್ನು ನನ್ನಿಂದ ಊಹಿಸಲು ಅಸಾಧ್ಯ ಅನ್ನಿಸಿತ್ತು. ನೃತ್ಯ ನನ್ನ ಬದುಕಿನ ಭಾಗವಾಗಿತ್ತು. ಹೀಗಿರುವಾಗ ಕೈ ಇಲ್ಲದೆ ನಾನು ನೃತ್ಯ ಹೇಗೆ ಮಾಡಲಿ, ನನ್ನಲ್ಲಿ ಬರುವ ಮಕ್ಕಳಿಗೆ ನಾನು ನೃತ್ಯ ಕಲಿಸುವುದಾದರು ಹೇಗೆ ಎಂಬ ಪ್ರಶ್ನೆಗಳು ನನ್ನನ್ನು ತೀವ್ರ ಖಿನ್ನತೆಗೆ ಗುರಿ ಮಾಡಿದವು. ತರುವಾಯ ಡಾಕ್ಟರ್ ಮತ್ತು ಆಪ್ತ ಸಮಾಲೋಚಕರ ಸಹಾಯದಿಂದ ಸುಮಾರು ತಿಂಗಳ ನಂತರ ಚೇತರಿಸಿಕೊಂಡೆ. ದೈಹಿಕವಾಗಿ ಮಾನಸಿಕವಾಗಿ ಚೇತರಿಕೆ ಕಾಣಲು ಸುಮಾರು ತಿಂಗಳು ಕಳೆದವು. ಹಲವಾರು ತಿಂಗಳುಗಳ ನಂತರ ನನ್ನ ಜೀವನ ಪ್ರೀತಿಯೊಂದಿಗೆ ಕೋಲಿನ ಸಹಾಯದಿಂದ ಮಕ್ಕಳಿಗೆ ನೃತ್ಯ ಹೇಳಿಕೊಡಲು ಪ್ರಾರಂಭಿಸಿದೆ. ಈಗಲೂ ಎಪ್ಪತ್ತು ಮಕ್ಕಳು ನನ್ನಲ್ಲಿ ನೃತ್ಯ ಅಭ್ಯಾಸ ಮಾಡಲು ಬರುತ್ತಿದ್ದಾರೆ. ನಾನು ನನ್ನ ಹೆಂಡತಿ ಉಮಾ ಸೇರಿ ಈಗಲೂ ಹಬ್ಬಗಳಲ್ಲಿ, ಜಾತ್ರೆ, ಹೀಗೆ ಶುಭ ಸಮಾರಂಭಗಳಲ್ಲಿ, ದೇವಸ್ಥಾನಗಳಲ್ಲಿ ದೊಡ್ಡ ದೊಡ್ಡ ಬಣ್ಣದ ರಂಗೋಲಿಗಳನ್ನು ಹಾಕಿ ಬರುತ್ತೇವೆ. ಉಳಿದಂತೆ ನನ್ನ ನೆಚ್ಚಿನ ಕೈತೋಟ ಸಾಕಷ್ಟು ಗಿಡ, ಮರ ಬಳ್ಳಿಗಳಿಗೆ ನೀರು ಹಾಕುವುದು. ಗೊಬ್ಬರವನ್ನು ನಾನೆ ಸಿದ್ಧಪಡಿಸಿ ಹಾಕುವುದು. ಕಳೆ ತೆಗೆಯುವುದು ಮಾಡುತ್ತೇನೆ. ಇದು ನನಗೆ ನೆಮ್ಮದಿಯನ್ನು ತಂದುಕೊಡುತ್ತದೆ. ಹೀಗೆ ಮನೆಯಲ್ಲೇ ಉದ್ಯಾನವನವನ್ನು ನಿರ್ಮಿಸಿ ಸಂಭ್ರಮಿಸಲು ಮನೆ ಮಂದಿಯ ಎಲ್ಲರ ಸಹಕಾರ ಜೊತೆಗಿದೆ' ಎನ್ನುತ್ತಾರೆ ಅನಂತ್.

ಎಲ್ಲ ಸರಿಯಿದ್ದೂ ಏನೂ ಮಾಡದೇ ಅಥವಾ ನನ್ನಿಂದ ಇಷ್ಟೇ ಸಾಧ್ಯ ಎಂದು ತಮ್ಮ ಸಾಮರ್ಥ್ಯಕ್ಕೆ ತಾವೇ ಸೀಮಿತ ಪರಿಧಿಯನ್ನು ಹಾಕಿಕೊಂಡಿರುವ ಜನರು ಇವರ ಜೀವನಪ್ರೀತಿಯನ್ನು ಕಲಿಯಬೇಕು. ಬದುಕೇ ಆಗಿರುವ ನೃತ್ಯವನ್ನು, ಅಪಘಾತವಾಗಿ ಬದುಕಿನಲ್ಲಿ ಎಂದೂ ನೃತ್ಯ ಮಾಡಲಾಗುವುದಿಲ್ಲ ಎನ್ನುವ ಸಂದರ್ಭ ಬಂದರೂ ಅತೀವ್ರ ಛಲದೊಂದಿಗೆ ಹಠ ಬಿಡದೇ ಸಾಧಿಸಿದವರು ಇವರು. ಒಂದು ಕೈ ಇಲ್ಲದೆಯೂ ನೃತ್ಯ ಮಾಡುವ ನೃತ್ಯ ತರಬೇತಿ ನೀಡುವ ಇವರ ಜೀವನ ಪ್ರೀತಿ ಇತರರಿಗೆ ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ.


ಧನ್ಯವಾದಗಳೊಂದಿಗೆ...
ನಿರೂಪಣೆ : ಜ್ಯೋತಿ. ಎಸ್

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...