ಸಬ್ ಇನ್ಸ್ಪೆಕ್ಟರ್  ಸೋಮಶಂಕರ್ ಜೀವನಯಾನ

Date: 08-01-2023

Location: ಬೆಂಗಳೂರು


''ಸೈನ್ಯ ಸೈನಿಕರು ಅಂದರಂತೂ ಪ್ರಾಣ. ಎಲ್ಲ ಪಾಲಕರು ತಮ್ಮ ಮಕ್ಕಳ ಹೆಸರಿನ ಮುಂದೆ ತಮ್ಮ ಹೆಸರನ್ನು ಸೇರಿಸಿದರೆ ಇವರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಸೇರಿಸಿದ್ದಾರೆ. ಇವರಿಗೆ ಯಾರೇ ಫೋನ್ ಮಾಡಿದರೂ ಹಲೋ ಎನ್ನುವ ಬದಲು ಜೈ ಹಿಂದ್ ಹೇಳುತ್ತಾರೆ. ವೃತ್ತಿಯಲ್ಲಿ ಸದಾ ಹೊಸತನ, ಪ್ರಾಮಾಣಿಕತೆಯೊಂದಿಗೆ ವೃತ್ತಿ ಬದುಕಿನಲ್ಲಿ ಅತ್ಯಂತ ಯಶಸ್ವಿಯಾಗಿರುವ ಇವರಿಗೆ ರಾಷ್ಟ್ರಪತಿ ಪದಕದಂತಹ ದೊಡ್ಡ ಗೌರವ ಸಿಕ್ಕಿದೆ'' ಎನ್ನುತ್ತಾರೆ ಲೇಖಕಿ ಜ್ಯೋತಿ ಎಸ್. ಅವರು ಬರೆದಿರುವ ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಅವರ ಜೀವನಯಾನ ನಿಮ್ಮ ಓದಿಗಾಗಿ...

ಕೆಲಸ ಒಂದು ಸಿಕ್ಕರೆ ಸಾಕು ಅದರಲ್ಲೂ ಸರ್ಕಾರಿ ಕೆಲಸ ಸಿಕ್ಕರೆ ತಾವು, ತಮ್ಮ ಮನೆ, ತಮ್ಮ ಕೆಲಸ ನೋಡಿಕೊಂಡು ಇದ್ದುಬಿಡುತ್ತಾರೆ. ಸಮಾಜ, ದೇಶ ಅಂತ ವಿಚಾರ ಮಾಡುವವರು ತುಂಬ ಕಡಿಮೆ. ಕೆಲಸದಲ್ಲೂ ಅಷ್ಟೆ ಇರುವಷ್ಟು ಮಾಡುವುದು ಹೋಗುವುದು. ಹೀಗಿರುವ ಸನ್ನಿವೇಶದಲ್ಲಿ ಇವತ್ತೊಬ್ಬ ಅಪರೂಪದ ಸರ್ಕಾರಿ ನೌಕರರ ಅದರಲ್ಲೂ ಪೊಲೀಸರೊಬ್ಬರ ಜೀವನಯಾನವನ್ನು ನಿಮ್ಮ ಮುಂದೆ ತಂದಿದ್ದೇವೆ. ಇವರು ಕಣಕಣದಲ್ಲೂ ದೇಶಭಕ್ತಿಯನ್ನು ತುಂಬಿಕೊಂಡಿರುವವರು. ಸೈನ್ಯ ಸೈನಿಕರು ಅಂದರಂತೂ ಪ್ರಾಣ. ಎಲ್ಲ ಪಾಲಕರು ತಮ್ಮ ಮಕ್ಕಳ ಹೆಸರಿನ ಮುಂದೆ ತಮ್ಮ ಹೆಸರನ್ನು ಸೇರಿಸಿದರೆ ಇವರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಸೇರಿಸಿದ್ದಾರೆ. ಇವರಿಗೆ ಯಾರೇ ಫೋನ್ ಮಾಡಿದರೂ ಹಲೋ ಎನ್ನುವ ಬದಲು ಜೈ ಹಿಂದ್ ಹೇಳುತ್ತಾರೆ. ವೃತ್ತಿಯಲ್ಲಿ ಸದಾ ಹೊಸತನ, ಪ್ರಾಮಾಣಿಕತೆಯೊಂದಿಗೆ ವೃತ್ತಿ ಬದುಕಿನಲ್ಲಿ ಅತ್ಯಂತ ಯಶಸ್ವಿಯಾಗಿರುವ ಇವರಿಗೆ ರಾಷ್ಟ್ರಪತಿ ಪದಕದಂತಹ ದೊಡ್ಡ ಗೌರವ ಸಿಕ್ಕಿದೆ. ಕೋಲಾರದಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಗೌರಮ್ಮ ನಂಜುಡಪ್ಪನವರ ಹೆಮ್ಮೆಯ ಮಗನಾದ ವಂದೇಮಾತರಂ ಸೋಮಶಂಕರ್ ಅನ್ನುವ ಸೂಪರ್ ಕಾಪ್ ಜೀವನಯಾನ ಇಂದಿನ ನಿಮ್ಮ ಓದಿಗೆ.

'ನಾಲ್ಕು ಮಕ್ಕಳಲ್ಲಿ ನಾನು ಕೊನೆಯ ಮಗನಾದ್ದರಿಂದ ಅಮ್ಮನ ಮುದ್ದು ತುಸು ಹೆಚ್ಚೆ ಇತ್ತು. ಮೂಲತ: ಕೋಲಾರದಿಂದ ಎಂಟು ಕಿ.ಮೀ. ದೂರದಲ್ಲಿರುವ ಸುಗಟೂರು ನಮ್ಮ ಗ್ರಾಮ. ಅಪ್ಪ ಪೊಲೀಸ್ ಪೇದೆಯಾದದ್ದರಿಂದ ಕೋಲಾರದ ಪೊಲೀಸ್ ಕ್ವಾಟ್ರಸ್ ನಲ್ಲೇ ಇದ್ದೆವು. ಹಾಗಾಗಿ ನಾವೆಲ್ಲ ಹುಟ್ಟಿ ಬೆಳೆದದ್ದು ಕೋಲಾರದಲ್ಲೇ. ನಮ್ಮ ತಂದೆಯ ಸಂಬಳದ ಹೊರತಾಗಿ ಬೇರೆ ಯಾವ ಆಸ್ತಿ, ಆದಾಯ ನಮಗಿರಲಿಲ್ಲ. ಹಾಗಾಗಿ ನಮ್ಮ ದೊಡ್ಡ ಅಣ್ಣನನ್ನು ನಮ್ಮ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ನಾವೆಲ್ಲ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲೇ ಓದಿದ್ದು. ತುಂಬ ಕಷ್ಟದಲ್ಲೇ ಬೆಳೆದ್ವಿ. ನಮ್ಮ ಎರಡನೇ ಅಣ್ಣ ನಾನು ಚಿಕ್ಕವರಿರುವಾಗಲೇ ಮನೆ ಮನೆಗೂ ಹೋಗಿ ಪೇಪರ್ ಹಾಕುತ್ತಿದ್ದೆವು. ತಿಂಗಳಿಗೆ ಇಪ್ಪತ್ತೈದು ರೂಪಾಯಿ ಬರುತ್ತಿತ್ತು. ಆ ಹಣದಿಂದ ಓದಿನ ಖರ್ಚುಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೆವು. ಅಣ್ಣಂದಿರು, ಅಕ್ಕ ಎಲ್ಲರೂ ಚೆನ್ನಾಗಿ ಓದುತ್ತಿದ್ದರು. ನಾನು ಸ್ವಲ್ಪ ತಲೆ ಹರಟೆಯಾಗಿ ಬೆಳೆದು ಬಿಟ್ಟೆ. ಮನೆಯಲ್ಲಿ ಚಿಕ್ಕ ಮಗ ಅಂತ ತುಂಬ ಮುದ್ದಿನಿಂದ ಬೆಳೆಸಿದ್ಲು ಅಮ್ಮ. ಆದರೆ ಅಪ್ಪ ಸ್ವಲ್ಪ ಸ್ಟ್ರಿಕ್ಟ್. ನಾನು ಓದಿನಲ್ಲಿ ಹಿಂದಿದ್ದರೂ ಕ್ರೀಡೆಯಲ್ಲಿ ಎಲ್ಲರಿಗಿಂತ ಮುಂದಿದ್ದೆ. ಎಂಟನೇ ತರಗತಿಯಲ್ಲಿ ಇರುವಾಗಿನಿಂದಲೇ ಆರ್.ಎಸ್.ಎಸ್. ಕಚೇರಿಗೆ ಹೋಗುತ್ತಿದ್ದೆ. ಅದರಿಂದ ರಾಷ್ಟ್ರೀಯತೆ, ರಾಷ್ಟ್ರಾಭಿಮಾನ, ದೇಶಭಕ್ತಿ ಬೆಳೆಯುತ್ತ ಬಂತು. ನಾವು ಕ್ವಾಟ್ರಸ್ ನಲ್ಲಿ ಇರುವಾಗ ನಮ್ಮ ಮನೆಯ ಮುಂದೆ NCC ತರಬೇತಿ ಕೊಡುವವರು ಪ್ರತಿ ವಾರ ಹೋಗುತ್ತಿದ್ದರು. ಅವರು ಹೋಗುವಾಗಲೆಲ್ಲ ನಾನು ನೋಡ್ತಾ ನಿಂತಿರುತ್ತಿದ್ದೆ. ನಮ್ಮಪ್ಪ ಆಗ ನನಗೊಂದು ಏಟು ಹೊಡೆದರು. ಅವರು ದೇಶ ಕಾಯುವವರು ಅವರು ಬಂದಾಗ ಸೆಲ್ಯೂಟ್ ಹೊಡೆಯಬೇಕು ಅಂದಿದ್ರು. ಅವರು ಕೋಲಾರದಲ್ಲೇ ಇರುತ್ತಾರೆ ದೇಶ ಯಾವಾಗ ಕಾಯುತ್ತಾರೆ ಅಂತ ಪ್ರಶ್ನೆ ಮಾಡಿದ್ದೆ. ಹೊಸದಾಗಿ ಕ್ಯಾಂಪ್ ಗೆ ಸೇರಿರುವವರಿಗೆ ವಿದ್ಯೆ ಕಲಿಸಲು ಬಂದಿರುತ್ತಾರೆ. ಇನ್ನೊಂದೆರಡು ವರ್ಷ ಇಲ್ಲಿದ್ದು ಆಮೇಲೆ ದೇಶದ ಗಡಿಗಳಲ್ಲಿ ಇದ್ದು ನಮ್ಮನ್ನೆಲ್ಲ ಕಾಪಾಡುತ್ತಾರೆ ಎಂದಿದ್ದರು. ಅವತ್ತಿನಿಂದ ಆರ್ಮಿಯವರನ್ನು ಎಲ್ಲಿ ನೋಡಿದರೂ ಸಲ್ಯೂಟ್ ಮಾಡುತ್ತೇನೆ. ಬಸ್ಸಿನಲ್ಲಿ, ವ್ಯಾನುಗಳಲ್ಲಿ ಹೋಗುವಾಗ ಆರ್ಮಿಯವರು ಕಂಡರೆ ವ್ಯಾನಿನಿಂದ ತಲೆ ಆಚೆ ಹಾಕಿ ಜೈ ಹಿಂದ್ ಅಂತ ಸಲ್ಯೂಟ್ ಹೊಡೆಯುತ್ತೇನೆ. ಆಗ ಅವರಿಗೆ ಖುಷಿಯಾಗುತ್ತದೆ. ನನ್ನ ಎಸ್.ಎಸ್.ಎಲ್.ಸಿ. ಮುಗಿಸಿ ನಂತರ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ಆಯ್ಕೆಯಾಗಿ ಧಾರವಾಡಕ್ಕೆ ಹೋದೆ. ಯಾಕೋ ಏನೋ ಆಗಿನಿಂದಲೂ ಈ ನಾಲ್ಕು ವೃತ್ತಿಗಳು ನನಗೆ ಇಷ್ಟವಿರಲಿಲ್ಲ ಪೊಲೀಸ್, ಕಂಡಕ್ಟರ್, ಡ್ರೈವರ್, ಟೀಚರ್. ಸೈನ್ಯಕ್ಕೆ ಸೇರಬೇಕು ಎಂಬುದೇ ನನ್ನ ದೊಡ್ಡ ಕನಸಾಗಿತ್ತು. ನಂತರ ಹಾಸ್ಟೆಲ್ ಕಂಠೀರವ ಸ್ಟೇಡಿಯಂ ಸ್ಪೋರ್ಟ್ ಹಾಸ್ಟೆಲ್ ಗೆ ಶಿಫ್ಟ್ ಆಗಿತ್ತು. MRC ಊಟಿಯಲ್ಲಿ ನಾನು ಸೆಲೆಕ್ಟ್ ಕೂಡ ಆಗಿಬಿಟ್ಟೆ. ಚಿಕ್ಕ ಅಣ್ಣನಿಗೂ ಸೈನ್ಯವೆಂದರೆ ಪ್ರೀತಿ. ಮನೆಯಲ್ಲಿ ಕಷ್ಟವೂ ಇತ್ತು ಹಾಗಾಗಿ ಅಣ್ಣ ಐ ಟಿ ಐ ಮುಗಿಸಿ ಸೈನ್ಯಕ್ಕೆ ಸೇರಿಕೊಂಡು ಬಿಟ್ಟಿದ್ದ. ದೊಡ್ಡ ಅಣ್ಣ ಅಜ್ಜಿ ಮನೆ, ಚಿಕ್ಕ ಅಣ್ಣ ಸೈನ್ಯಕ್ಕೆ, ಇನ್ನು ಅಕ್ಕನಿಗೆ ಮದುವೆಯಾಗಿ ಹೋಗಿದ್ಲು. ನಾನು ಸೈನ್ಯದಲ್ಲಿ ಸೇರಲು ನನ್ನ ಖರ್ಚಿಗೆ ಐದನೂರು ರೂಪಾಯಿ ಹಣವನ್ನು ತೆಗೆದುಕೊಂಡು ಹೋಗಲು ಮನೆಗೆ ಬಂದಿದ್ದೆ. ಇನ್ನು ನಾನೂ ಮನೆಯಲ್ಲಿ ಇರಲ್ಲ ಅಂತ ತಿಳಿದ ಕೂಡಲೆ ಅಮ್ಮ ಉಪವಾಸ ಮಾಡಲು ಆರಂಭಿಸಿದ್ಲು. ಆದರೂ ಹಠ ಮಾಡಿ ಬಂದಿದ್ದೆ. ಅದರ ಮರು ದಿನವೇ ಬೆಳಗ್ಗೆ ಏಳು ಗಂಟೆಗೆ ಅಪ್ಪ ಹಾಸ್ಟೆಲ್ ಎದುರು ನಿಂತಿದ್ದರು. ನಿನ್ನೆಯಿಂದ ನಿಮ್ಮಮ್ಮ ಊಟ ಮಾಡಿಲ್ಲ ಅಂತ. ಎಲ್ಲರೂ ಹೋಗಿ ಮನೆ ಬಿಟ್ಟರೆ ಮನೆಯಲ್ಲಿ ಯಾರು ಇರುತ್ತಾರೆ ಅಂತ ಹೇಳಿ ಅಮ್ಮ ಅಳುತ್ತ ಕೂತಿದ್ಲು. ಅಮ್ಮನಿಗಾಗಿ ನಾನು ಹಾಸ್ಟೆಲ್ ನಲ್ಲೇ ಉಳಿಯಬೇಕಾಯ್ತು. ಹಾಸ್ಟೆಲ್ ವಿದ್ಯಾಭ್ಯಾಸ ಮುಗಿಸಿ ಬರುವಷ್ಟರಲ್ಲಿ ಕೆಲಸವೊಂದು ಸಿಕ್ಕಿತು ಅದು ನನಗಿಷ್ಟವಿಲ್ಲದ ಕೆಲಸ. ಸ್ನೇಹಿತರು, ಮನೆಯವರು ಎಲ್ಲರೂ ಹೇಳಿ ಬಲವಂತ ಮಾಡಿ ಒಪ್ಪಿಸಿ ನನ್ನ ಕೆಲಸಕ್ಕೆ ಸೇರಿಸಿದ್ರು. ಕೆಲಸಕ್ಕೆ ಸೇರಿಕೊಂಡು ಸ್ವಲ್ಪ ದಿನಕ್ಕೆ ನನಗೆ ಕಷ್ಟ ಅನ್ನಿಸಿದಾಗ ನಾನು ಸೈನ್ಯಕ್ಕೆ ಸೇರುತ್ತೇನೆ ಎಂದು ಮತ್ತೆ ಹಠ ಹಿಡಿದೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಟೆಂಡ್ ಮಾಡುತ್ತಿದ್ದದ್ದರಿಂದ ಮೊದಲಿಗೆ ಪೇದೆ ಕೆಲಸ ಸಿಕ್ಕಿತು. ಇದರಲ್ಲಿ ಏನೋ ವಿಶೇಷತೆ ಇದೆ ಅಂತ ಸೇರಿಕೊಂಡೆ. ಆಗಿನ್ನೂ ಡಿಗ್ರಿ ಮುಗಿಸಿರಲಿಲ್ಲ. ಫಿಂಗರ್ ಪ್ರಿಂಟ್ ಎಕ್ಪರ್ಟ್ ಆಗಬೇಕು ಅಂದ್ರೆ ಒಂದು ಪರೀಕ್ಷೆ ಬರೆಯಬೇಕು. ಅದು ಆಲ್ ಇಂಡಿಯಾ ಲೆವೆಲ್ ನಲ್ಲಿ ಇರತ್ತೆ. ಅದು ಆಗಬೇಕು ಅಂದ್ರೆ ಯಾವ ವಿಷಯದಲ್ಲೇ ಆಗಿದ್ದರೂ ಪದವಿ ಮುಗಿಸಿರಬೇಕು. ಅಷ್ಟು ಹೊತ್ತಿಗೆ ನಾನು ಪದವಿ ಪರೀಕ್ಷೆ ಮುಗಿಸಿದ್ದೆ. ನಂತರವೂ ನಿರಂತರವಾಗಿ ಪರೀಕ್ಷೆ ಬರೆಯುತ್ತಿದ್ದೆ. ಪರೀಕ್ಷೆ ಹಿಂದಿ ಅಥವಾ ಇಂಗ್ಲಿಷಿನಲ್ಲಿ ಬರೆಯಬೇಕಿತ್ತು ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ನನಗೆ ಸ್ವಲ್ಪ ಕಷ್ಟವಾಗಿತ್ತು. ನಾನು ವೃತ್ತಿಯಲ್ಲಿ ಪರಿಣಿತಿ ಹೊಂದುವ ಮೊದಲೇ ಪ್ರಕರಣ ಭೇದಿಸುತ್ತಿದ್ದೆ. ಹಾಗಾಗಿ ಎಲ್ಲರ ಆಶಯ ನಾನು ಆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಎಂಬುದಿತ್ತು. ಮಗ್ಗಿ ಕಂಠಪಾಠ ಮಾಡುವ ಹಾಗೆ ಇಂಗ್ಲೀಷನ್ನು ಕಲಿತು ಪರೀಕ್ಷೆಯಲ್ಲಿ ಪಾಸ್ ಆದೆ. ಇಡೀ ನಮ್ಮ ರಾಜ್ಯದಲ್ಲಿ ಫಿಂಗರ್ ಪ್ರಿಂಟ್ ವಿಭಾಗದಲ್ಲಿ ಕಾನ್ಸ್ಟೇಬಲ್ ಆಗಿದ್ದು ಮಾನ್ಯುವಲ್ ಆಗಿ ಮೊದಲು ಕೇಸ್ ಕಂಡುಹಿಡಿಯುತ್ತಿದ್ದವರಲ್ಲಿ ನಾನೆ ಮೊದಲಿಗ. ಮೊದಲು ಫೋಟೋಸ್ ಮಾಡಬೇಕಿತ್ತು. ಘಟನೆ ನಡೆದ ಜಾಗದಲ್ಲಿ ಸಿಗುವ ಚಾನ್ಸ್ ಪ್ರಿಂಟನ್ನು ತೆಗೆದುಕೊಂಡು ಬಂದು ಫೋಟೋ ಮಾಡಬೇಕಿತ್ತು. ಫೋಟೋ ಮಾಡಿಸಲು ಬೆಂಗಳೂರಿಗೆ ಹೋಗಬೇಕಿತ್ತು. ಇನ್ನು ಎಲ್ಲೂ ಇರಲಿಲ್ಲ. ನಾವು ತಂದಿರುವ ಚಾನ್ಸ್ ಪ್ರಿಂಟ್ ಬೈ ಮಿಸ್ಟೇಕ್ ಆಗಿ ಒಂದು ಟೇಪ್ ಇತ್ತು. ಆ ಟೇಪ್ ನಲ್ಲಿ ಕೆಮಿಕಲ್ ರಿಯಾಕ್ಷನ್ ಆಗಿ ತಂದಿದ್ದ ಪ್ರಿಂಟ್ ಹಾಗೆ ಅಳಿಸಿ ಹೋಗುತ್ತಿತ್ತು. ಅಳಿಸಿ ಹೋಗುವುದನ್ನು ಹಾಗೆ ಇರಿಸಲು ಏನು ಮಾಡಬೇಕು ಅಂತ ಗೊತ್ತಾಗದೆ ನಾನು ತಂದಿದ್ದ ದಿವಸವೇ ಫಿಂಗರ್ ಪ್ರಿಂಟ್ಸ್ ಹೇಗಿತ್ತೋ ಹಾಗೆ ಅದರ ಚಿತ್ರ ಬಿಡಿಸಿಕೊಳ್ಳುತ್ತಿದ್ದೆ.. ಆ ಚಿತ್ರ ಇಟ್ಟುಕೊಂಡು ಕೇಸ್ ಹುಡುಕಲು ಶುರು ಮಾಡಿದೆ. ನಮ್ಮಲ್ಲಿ ಮಾನ್ಯುಯಲ್ ನಲ್ಲಿ ಕಳ್ಳರ ಡೇಟಾ ಬೇಸ್ ಕಾರ್ಡ್ ನಲ್ಲಿ ಇರತ್ತೆ. ಅದರಲ್ಲಿ ಒಂದು ಬೆರಳ ಸ್ಲಿಪ್ ತೆಗೆದರೆ ಹತ್ತು ಬೆರಳದ್ದು ಇರುತ್ತಿದ್ದವು. ಅದನ್ನು ಒಂದೊಂದನ್ನು ಲೆನ್ಸ್ ಮುಖೇನ ನೋಡಬೇಕು. ಇದೇ ತರಹ 10,000, 20,000 ಬಂಡಲ್ಸ್ ಇರತ್ತೆ ಅದರಲ್ಲಿ ಹುಡುಕಬೇಕು. ಅದೊಂತರ ಸವಾಲಿನ ಕೆಲಸವಾಯ್ತು. ಕೊನೆಗೆ ಅದರಲ್ಲಿ ಯಶಸ್ವಿಯಾದೆ. ಪ್ರಭುಸ್ವಾಮಿ ಅಂತ ಇನ್ಸ್ಪೆಕ್ಟರ್ ಇದ್ರು. ಅವರು ನನ್ನನ್ನು ತುಂಬ ಪ್ರೋತ್ಸಾಹಿಸುತ್ತಿದ್ದರು. ಅವರು ನಾನು ಬಿಡಿಸಿಕೊಂಡಿದ್ದ ಚಿತ್ರಗಳನ್ನು ನೋಡಿ, ನನ್ನ ಇಡೀ ಜೀವನದಲ್ಲಿ ನಿನ್ನ ತರ ಕೆಲಸ ಮಾಡುವವರನ್ನು ನಾನು ಇದೇ ಮೊದಲು ನೋಡುತ್ತಿರುವುದು ಎಂದಿದ್ದರು. ಒಮ್ಮೆ ಚಿತ್ರ ಬಿಡಿಸಿದ್ರೆ ಅದು ನನ್ನ ನೆನಪಿನಲ್ಲಿ ಉಳಿಯುತ್ತಿತ್ತು. ಹಾಗಾಗಿ ನಾನು ಡ್ರಾಯಿಂಗ್ ಮಾಡಿದವನು ಮತ್ತೆ ನೋಡುತ್ತಿರಲಿಲ್ಲ ಹಾಗೆ ಹುಡುಕುತ್ತಿದ್ದೆ. ಅದನ್ನೆಲ್ಲ ನೋಡಿ ಅವರಿಗೆ ಆಶ್ಚರ್ಯವಾಯ್ತು. ನೀನು ಇಂಗ್ಲೀಷ್ ಕಲಿತು ಪರೀಕ್ಷೆ ಬರೆಯಲೇಬೇಕು ಎನ್ನುವುದು ಅವರ ಆಶಯವಾಗಿತ್ತು. ಹಾಗಾಗಿ ನಾನು ಪುಸ್ತಕಗಳನ್ನು ತೆಗೆದುಕೊಂಡು ಆಫೀಸಿನಲ್ಲಿಯೇ ಓದುತ್ತಿದ್ದೆ. ನಾನು ಪಾಸ್ ಆದರೆ ಸಾಕು ಅಂತ ಪರೀಕ್ಷೆ ಬರೆದಿದ್ದೆ. ಆದರೆ ಆಲ್ ಇಂಡಿಯಾದಲ್ಲಿ ನಾನು ಮೂರನೇ ರ್ಯಾಂಕ್ ಬಂದಿದ್ದೆ'.

'2001 ರಲ್ಲಿ ಪರಿಣಿತ ಅಂತ ಆದೆ. ಆಗಲೂ ಹೆಚ್ಚು ಮ್ಯಾನುವಲ್ ಕೆಲಸ ಮಾಡುತ್ತಿದ್ದೆ. 2002ರಲ್ಲಿ ಹೊಸ ಸಾಫ್ಟ್ ವೇರ್ ಬಂತು. ಆಗಲೂ ಕೂಡ ಸಿಸ್ಟಮ್ ನಲ್ಲಿ ಕರ್ನಾಟಕದಲ್ಲಿ ಮೊದಲ ಕೇಸ್ ಕಂಡುಹಿಡಿದವನು ನಾನೆ. 2009ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ, 2018ರಲ್ಲಿ ರಾಷ್ಟ್ರಪತಿ ಪದಕ. ರಾಜ್ಯಮಟ್ಟದಲ್ಲಿ ಎರಡು ಸಲ ಬೆಸ್ಟ್ ಫಿಂಗರ್ ಪ್ರಿಂಟ್ ಅವಾರ್ಡ್, ನಮ್ಮ ರಾಜ್ಯದಲ್ಲಿ ಕಾನ್ಸ್ಟೇಬಲ್ ಆಗಿ ಈ ಪ್ರಶಸ್ತಿಗಳನ್ನು ತೆಗೆದುಕೊಂಡವರಲ್ಲಿ ನಾನೆ ಮೊದಲಿಗ. ಎಫ್. ಬಿ. ಐ ( ಫೆಡರಲ್ ಬ್ಯೂರೋ ಇನ್ವೆಸ್ಟಿಗೇಷನ್ ) ದೇಶದಲ್ಲಿ ತರಬೇತಿಗೆ ಒಟ್ಟು ಇಪ್ಪತ್ತೆರಡು ಜನರು ಸೆಲೆಕ್ಟ್ ಆಗಿದ್ದರು. ಅದರಲ್ಲಿ ನಾನೂ ಒಬ್ಬ. ನಮ್ಮಲ್ಲಿ ಅಮೇರಿಕಾದಲ್ಲಿರುವಷ್ಟು ಮುಂದುವರಿದ ಉಪಕರಣಗಳಿಲ್ಲ. ಅವರು ಅವುಗಳನ್ನು ತರಬೇತಿಯಲ್ಲಿ ನಮಗೆ ತೋರಿಸಿಕೊಟ್ಟಿದ್ದರು. ಅಲ್ಲಿಂದ ಬಂದಾಗ ಇಲ್ಲೊಂದು ಡಕಾಯಿತಿಯಾಗಿತ್ತು. ಒಂದು ಹೆಂಗಸನ್ನು ಚೆನ್ನಾಗಿ ಹೊಡೆದು ಪಾರ್ಸೆಲ್ ಟೇಪಿನಿಂದ ಕೈಗೆ, ಬಾಯಿಗೆ ಕಟ್ಟಿ ಹೋಗಿದ್ದರು. ಮಕ್ಕಳು ಮನೆಗೆ ಬಂದ ಮೇಲೆ ಅದನ್ನೆಲ್ಲ ಬಿಚ್ಚಿ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿದ್ದರು. ನಮಗೆ ಆ ಮನೆಯಲ್ಲಿ ಯಾವುದೇ ಫಿಂಗರ್ ಪ್ರಿಂಟ್ ಸಿಗಲ್ಲ. ಡಕಾಯತರು ಬಹಳ ಜಾಣತನದಿಂದ ಕೈಗೆ ಗ್ಲೌಸ್ ಉಪಯೋಗಿಸಿ ಕೆಲಸ ಮಾಡಿದ್ದರು. ಆದರೆ ಈ ಟೇಪ್ ಹಾಕುವಾಗ ಗ್ಲೌಸ್ ಹಾಕಿರುವುದಿಲ್ಲ. ಅಲ್ಲಿ ಪ್ರಿಂಟ್ ಸಿಗತ್ತೆ. ಆ ಟೇಪ್ ಅಂಟಾಗಿರುವ ಜಾಗದಲ್ಲಿ ಫಿಂಗರ್ ಪ್ರಿಂಟ್ ಡೆವಲಪ್ ಆಗಿರಲ್ಲ. ಅದನ್ನು FBI ತರಬೇತಿಯಲ್ಲಿ ಹೇಳಿಕೊಟ್ಟಿದ್ರು. ಅದನ್ನು ಕಂಡುಹಿಡಿಯಲು ನಮ್ಮಲ್ಲಿ ಹೆಚ್ಚಿನ ಉಪಕರಣಗಳು ಇರಲಿಲ್ಲ. ಆ ಉಪಕರಣ ಹೇಗೆ ಕೆಲಸ ಮಾಡುತ್ತಿತ್ತು ಅಂತ ತಿಳಿದುಕೊಂಡು ನನಗೆ ಗೊತ್ತಿರುವ ಸಾಮಗ್ರಿಗಳನ್ನು ಉಪಯೋಗಿಸಿ ನಾನೆ ನನ್ನದೇ ಸ್ವಂತ ತಂತ್ರಜ್ಞಾನದಿಂದ ಲಿಕ್ವಿಡ್ ತಯಾರಿಸಿದೆ.ಅದನ್ನು ಡೆವಲಪ್ ಮಾಡಿದೆ ಸಕ್ಸಸ್ ಆಯ್ತು. ಮೊಟ್ಟ ಮೊದಲ ಬಾರಿಗೆ ಭಾರತದಲ್ಲೇ ಆ ಒಂದು ಫಿಂಗರ್ ಪ್ರಿಂಟ್ ಅಂಟು ಭಾಗದಲ್ಲಿ ಫಿಂಗರ್ ಪ್ರಿಂಟ್ ಡೆವಲಪ್ ಮಾಡಿದವನು ನಾನೆ. ಅರ್ಧ ಗಂಟೆಯಲ್ಲಿ ಲಿಕ್ವಿಡ್ ಕಂಡುಹಿಡಿದು ಮೂರು ಗಂಟೆಯಲ್ಲಿ ಚೇಸ್ ಮಾಡಿ ಹುಡುಕಿ ಮಾಡಿ ಕೊಟ್ಟುಬಿಟ್ಟೆ. ಅಮೇರಿಕಾದಲ್ಲಿ ಮಾಡಿದ್ದನ್ನು ಯಾವ ಉಪಕರಣಗಳಿಲ್ಲದೆ ನಾನು ಇಲ್ಲಿ ಮಾಡಿದ್ದು. ಅದು ನನ್ನ ದೊಡ್ಡ ಖುಷಿ'.

'ನನ್ನ ಇಪ್ಪತ್ತಾರನೇ ವಯಸ್ಸಿಗೆ ಮದುವೆಯಾದೆ. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡಬೇಕು ಎಂದು ಮಗನಿಗೆ ಹರಿಹರ ಆಜಾದ್, ಮಗಳಿಗೆ ನಿಹಾರಿಕ ಝಾನ್ಸಿ ಎಂದು ಹೆಸರಿಟ್ಟಿದ್ದೇನೆ. 2018ರಲ್ಲಿ 'ಟೀಮ್ ಯೋಧ ನಮನ' ಅನ್ನುವ ತಂಡ ಮಾಡಿಕೊಂಡು ಸೈನ್ಯದಲ್ಲಿ ಪ್ರಾಣ ಒತ್ತೆಯಿಟ್ಟು ದೇಶ ಸೇವೆ ಮಾಡಿ ನಿವೃತ್ತಿ ಹೊಂದಿ ಮನೆಗೆ ಹಿಂದಿರುಗುವ ಸೈನಿಕರನ್ನು ಅವರು ಮನೆಗೆ ಹಾಗೆ ಹೋಗುವ ಬದಲು ಬಸ್ ಸ್ಟಾಂಡ್, ಏರ್ ಪೋರ್ಟ್ ನಿಂದಲೇ ಮೆರವಣಿಗೆ ಮಾಡಿಕೊಂಡು, ಸನ್ಮಾನ ಮಾಡಿ, ಜೈಕಾರ ಹಾಕಿಕೊಂಡು ಅವರ ಮನೆಯವರೆಗೂ ಗೌರವದಿಂದ ಕಳುಹಿಸುವ ಕೆಲಸವನ್ನು ಸಣ್ಣಮಟ್ಟದಲ್ಲಿ ಪ್ರಾರಂಭಿಸಿದೆವು. ಈಗ ಎಲ್ಲಾ ಕಡೆಗೆ ವಿಚಾರ ಹಬ್ಬಿ ರಾಣಿಬೆನ್ನೂರು, ಹಾವೇರಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ರೀತಿ ಯೋಧ ನಮನವನ್ನು ಮಾಡಲು ಪ್ರಾರಂಭಿಸಿದರು. ಅಮ್ಮ ಗ್ರಂಥಾಲಯದಿಂದ ಪುಸ್ತಕ, ಕಾದಂಬರಿಗಳನ್ನು ತರಲು ನನ್ನನ್ನು ಕಳುಹಿಸುತ್ತಿದ್ದರು. ಓದುವ ಹವ್ಯಾಸ ಅಲ್ಲಿಂದ ಶುರುವಾಗಿತ್ತು. ಶಾಲೆಯಲ್ಲಿ ಓದಿಗೆ ಸಿಗದ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗುತ್ತಿದ್ದವು. ಈಗ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆಯೇ ಹೆಚ್ಚು ಓದುತ್ತೇನೆ. ಆಗೆಲ್ಲ ಅವರು ದೇಶಕ್ಕಾಗಿ ಹೇಗೆಲ್ಲ ಬದುಕುತ್ತಿದ್ದರು. ಈಗ ನಾವು ದೇಶಕ್ಕೆ ಏನು ಮಾಡುತ್ತಿದ್ದೇವೆ ಎನ್ನುವ ಪ್ರಶ್ನೆ ನನ್ನ ಬಿಟ್ಟು ಬಿಡದಂತೆ ಕಾಡಿದ್ದಿದೆ. ಇಂದಿನ ಯುವ ಪೀಳಿಗೆ ನಮ್ಮ ಇತಿಹಾಸವನ್ನು ಅಧ್ಯಯನ ಮಾಡಬೇಕು' ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸುತ್ತಾರೆ.

ವೃತ್ತಿಯಿಂದ ಎಷ್ಟೇ ದೊಡ್ಡವರಾಗಿದ್ದರೂ ವ್ಯಕ್ತಿತ್ವದಿಂದ ಅದಕ್ಕಿಂತ ದೊಡ್ಡವರು ಇವರು. ಅಷ್ಟೇ ಸರಳ ಪ್ರಾಮಾಣಿಕ ವ್ಯಕ್ತಿ. ಓದು ಬರಹ ಇಷ್ಟಪಟ್ಟು ಮಾಡುವ ಇವರ ಮನೆಯಲ್ಲಿ ನೂರಾರು ಪುಸ್ತಕಗಳಿವೆ. ಪ್ರಕೃತಿ ವಿಕೋಪಗಳಲ್ಲಿ ಮತ್ತು ಇತರೆ ಸಮಾಜ ಸೇವೆಯಲ್ಲಿ ಮುಂದಿರುವ ಇವರು ನಲವತ್ತಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಹೀಗಿರುವವರು ಕಡಿಮೆ. ಯುವಜನತೆ ದೇಶಾಭಿಮಾನ, ಸಮಾಜ ಸೇವೆಯಲ್ಲಿ ಯಾವಾಗಲೂ ತೊಡಗಿಕೊಳ್ಳಬೇಕು. ನಮ್ಮ ದೇಶಭಕ್ತರ ಇತಿಹಾಸವನ್ನು ಆಸ್ಥೆಯಿಂದ ಅಧ್ಯಯನ ಮಾಡಬೇಕೆಂಬುದು ಸೋಮಶಂಕರ್ ಅವರ ಕಾಳಜಿ. ಇದನ್ನು ರೂಢಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

 

 

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ 

19-10-2024 ಬೆಂಗಳೂರು

"ತಾಯಿಯನ್ನು ತಿಳಿದುಕೊಳ್ಳುವುದು ಹೇಗೆ ಮಾನಸಿಕ ಬೆಳವಣಿಗೆಯೊ ಹಾಗೆಯೆ ಅದೊಂದು ಸಾಮಾಜಿಕ ಬೆಳವಣಿಗೆಯೂ ಆಗಿದೆ. ತಾಯಿ...

ಶಶಿಧರ ತೋಡಕರ: ಸಾಮಾಜಿಕ ಋಣ ಸಂದಾಯದ ಎರಡು ಮಾದರಿಗಳು

17-10-2024 ಬೆಂಗಳೂರು

"ಕಳೆದ ಎರಡು ವರ್ಷಗಳ ಹಿಂದೆ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಕುರಿತ ಸಂಸ್ಮರಣಾ ಗ್ರಂಥವನ್ನು ಸಂಪಾದಿಸಿ...

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...