ಸಾಗರ ಸೀಮೆಯ ನಿಷ್ಕಲ್ಮಶ ಹೃದಯ, ನೆಹರು ನಗರದ ಅಚ್ಚಳಿಯದ ನಗು


"“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬರುವಿಕೆಯ ಸಂದೇಶ ನೀಡಿದರು. ಲುಂಗಿ ಮತ್ತು ಬಿಳಿ ಷರ್ಟ್ ತೊಟ್ಟಿದ್ದ ನಾ.ಡಿ. ಹೊರ ಬಂದು ನಿಂತು ಕೈ ಹಿಡಿದಾಗ ಅವರ ಮುಖದಲ್ಲಿದ್ದ ಆ ನಗು, ಪ್ರೀತಿ, ವಿಶ್ವಾಸ ಶಾಶ್ವತವಾಗಿ ನಮ್ಮ ನಡುವೆ ನಿಂತು ಬಿಟ್ಟಿತು. ನಂತರ ಅದೆಷ್ಟು ಬಾರಿ ಆ ಮನೆಯ ಆತಿಥ್ಯ ಸ್ವೀಕರಿಸಿದ್ದೇನೋ ನನಗೆ ಲೆಕ್ಕ ಹಾಕಲು ಸಾಧ್ಯವಿಲ್ಲ," ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಸತೀಶ್ ಚಪ್ಪರಿಕೆ. ಅವರು ಸಾಹಿತಿ, ‘ನಾ. ಡಿಸೋಜ’ರಿಗೆ ಸಲ್ಲಿಸಿದ ನುಡಿ ನಮನ..

ಘಟ್ಟದ ಕೆಳಗಿನ ಕುಂದಾಪುರಕ್ಕೆ ಸೇರಿದ ನನಗೂ, ಘಟ್ಟದ ಮೇಲಿನ ಸಾಗರಕ್ಕೂ, ನಡುವಿನ ಸೇತುವಾಗಿರುವ ಕೋಗಾರು ಘಾಟಿ, ಕೌತಿ, ಬಿಳಿಗಾರು, ಮುಪ್ಪಾನೆ, ಕಾರ್ಗಲ್, ಹಿಡುವಾಣಿ, ಲಾಲ್ ಬಹಾದ್ದೂರ್ ಕಲೆ – ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜು, ನೆಹರು ನಗರದ ಆ ಮನೆ, ಸ್ವಲ್ಪ ದೂರದಲ್ಲಿರುವ ಹೆಗ್ಗೋಡಿನ ನೀನಾಸಂ ಆವರಣಕ್ಕೂ ಅಳಿಯಲಾಗದ ಸಂಬಂಧ.

ಅದು ಒಂದೆರಡು ವರ್ಷಗಳದ್ದಲ್ಲ. ಸುಮಾರು 36 ವರ್ಷಗಳಷ್ಟು ದೀರ್ಘವಾದದ್ದು. 30 ವರ್ಷಗಳ ಹಿಂದೆ ಸಾಗರ – ಕೌತಿಯ ಅಳಿಯನಾಗುವ ಮೊದಲೇ 5 ವರ್ಷಗಳಷ್ಟು ದೀರ್ಘ ಕಾಲ ನನಗೆ ಹೆಗ್ಗೋಡು ಮತ್ತು ನೆಹರು ನಗರದ ಜೊತೆ ಆತ್ಮೀಯ ಸಂಬಂಧ ಬೆಳೆದಿತ್ತು. ಅದಕ್ಕೆ ಕಾರಣ ಕೆ.ವಿ.ಸುಬ್ಬಣ್ಣ ಮತ್ತು ನಾ. ಡಿಸೋಜ.

ಈ ಪೈಕಿ ಸುಬ್ಬಣ್ಣ ನನ್ನ ಪಾಲಿನ ಸಾಂಸ್ಕೃತಿಕ `ಗಾಡ್ ಫಾದರ್’ ಎಂದೇ ನಾನು ಭಾವಿಸಿದ್ದೇನೆ. ಅವರ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಇನ್ನು ನಾ.ಡಿಸೋಜ ನಾನು ಜೀವನದಲ್ಲಿ ಕಂಡ ಅತ್ಯಂತ `ಅಪ್ಪಟ – ಸಜ್ಜನ – ಜನಪರ’ ಸಾಹಿತಿ. ಅದಕ್ಕಿಂತ ಹೆಚ್ಚಾಗಿ ಬದುಕಿನುದ್ದಕ್ಕೂ ನಗು ಸೂಸುತ್ತಾ, ಸಾಗರ ಸೀಮೆಯ ಜನರ ನೋವು-ನಲಿವಿಗೆ ಅಕ್ಷರ ರೂಪ ನೀಡಿದ ಮಹಾನ್ ಮಾನವ.

ನಾ.ಡಿ. ಅಂಕಲ್ ನನಗೆ ಮೊದಲು ಪರಿಚಯವಾಗಿದ್ದು ವಾರಪತ್ರಿಕೆಗಳು, ದಿನಪತ್ರಿಕೆಗಳ ಮೂಲಕ. ಅವರ ಕಥೆ- ಕಾದಂಬರಿಗಳನ್ನು ಓದುತ್ತಲೇ ಬೆಳೆದ ನಾನು ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದು `1990ರ ದಶಕದಲ್ಲಿ. ಹೆಗ್ಗೋಡಿಗೆ ಹೋದವ ಯಾರದೋ ಬಳಿ ನಾ.ಡಿ. ಅಂಕಲ್ ಲ್ಯಾಂಡ್ ಲೈನ್ ನಂಬರ್ ತೆಗೆದುಕೊಂಡು “ನಿಮ್ಮನ್ನು ಭೇಟಿಯಾಗಬೇಕು. ಮನೆಗೆ ಬರಬಹುದಾ?” ಎಂದು ಕರೆ ಮಾಡಿದಾಗ ಅವರು, “ಅದಕ್ಯಾಕೆ ಫೋನ್ ಮಾಡಬೇಕು. ನೇರವಾಗಿ ಮನೆಗೆ ಬನ್ನಿರಲ್ಲಾ” ಎಂದು ಆತ್ಮೀಯ ಆಹ್ವಾನ ನೀಡಿದ್ದರು.

ಮೊದಲ ಬಾರಿಗೆ ನೆಹರು ನಗರದ ಮೂರನೇ ಕ್ರಾಸ್ ನಲ್ಲಿರುವ ನೀಲಿ – ಬಿಳಿ ಬಣ್ಣದ ಪೈಂಟ್ ಮತ್ತು ಕಪ್ಪು ಗ್ರಿಲ್ ಇದ್ದ ಅವರ ಮನೆಯ ಒಳ ಹೊಕ್ಕಾಗ ಎದುರಾಗಿದ್ದು ಫಿಲೋಮಿನ ಆಂಟಿ, ನಾ.ಡಿ. ಅವರ ಪತ್ನಿ!

“ಬನ್ನಿ, ಬನ್ನಿ” ಎಂದು ನನ್ನನ್ನು ಕೂರಿಸಿದ ಅವರು ಒಳಗಿದ್ದ ನಾ.ಡಿ. ಅವರಿಗೆ ಕೊಂಕಣಿಯಲ್ಲಿ ನನ್ನ ಬರುವಿಕೆಯ ಸಂದೇಶ ನೀಡಿದರು. ಲುಂಗಿ ಮತ್ತು ಬಿಳಿ ಷರ್ಟ್ ತೊಟ್ಟಿದ್ದ ನಾ.ಡಿ. ಹೊರ ಬಂದು ನಿಂತು ಕೈ ಹಿಡಿದಾಗ ಅವರ ಮುಖದಲ್ಲಿದ್ದ ಆ ನಗು, ಪ್ರೀತಿ, ವಿಶ್ವಾಸ ಶಾಶ್ವತವಾಗಿ ನಮ್ಮ ನಡುವೆ ನಿಂತು ಬಿಟ್ಟಿತು. ನಂತರ ಅದೆಷ್ಟು ಬಾರಿ ಆ ಮನೆಯ ಆತಿಥ್ಯ ಸ್ವೀಕರಿಸಿದ್ದೇನೋ ನನಗೆ ಲೆಕ್ಕ ಹಾಕಲು ಸಾಧ್ಯವಿಲ್ಲ.

ಅದಾದ ನಂತರ ನಾನು ಕೊಜೆಂಟ್ರಿಕ್ಸ್ ಮತ್ತು ಇಕ್ಕೇರಿ ಗಣಿಗಾರಿಕೆ ವಿರೋಧಿ ಬಣದ ಮುಖ್ಯ ಸದಸ್ಯನಾಗಿ ಹೋರಾಟದ ಹಾದಿ ಹಿಡಿದಾಗ ಅ.ನ. ಯಲ್ಲಪ್ಪ ರೆಡ್ಡಿ, ಕೆ.ವಿ.ಸುಬ್ಬಣ್ಣ ಮತ್ತು ನಾ.ಡಿ. ಅಂಕಲ್ ನನಗೆ ನಿರಂತರ ಬೆಂಬಲ ನೀಡಿದರು. ಅದರಲ್ಲಂತೂ ಇಕ್ಕೇರಿ ಗಣಿಗಾರಿಕೆಯ ಪ್ರಸ್ತಾಪದ ವಿರುದ್ಧ ಸಾಗರದಲ್ಲಿ ನಡೆದ ಒಂದು ಬೃಹತ್ ಸಮಾವೇಶದಲ್ಲಿ ಈ ಮೂವರೇ ವೇದಿಕೆಯ ಮೇಲೆ ನಿಂತು ಹೋರಾಟದ ಕಹಳೆ ಊದಿದರು. ಆ ಪೈಕಿ ಯಲ್ಲಪ್ಪ ರೆಡ್ಡಿ ಘರ್ಜಿಸಿದರೆ, ಸುಬ್ಬಣ್ಣ ಮತ್ತು ನಾ.ಡಿ. ಅಂಕಲ್ ಸಣ್ಣ ದನಿಯಲ್ಲೇ ಪಶ್ಚಿಮ ಘಟ್ಟಗಳ ಉಳಿವಿನ ಅಗತ್ಯವನ್ನು ಸಾರಿ ಹೇಳಿದ್ದರು.
1995ರಲ್ಲಿ ನಾನು ಸಾಗರದ ಅಳಿಯನಾದ ಮೇಲೆ, ಒಮ್ಮೆ ಅವರ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಮಾತಿನ ನಡುವೆ ಅವರಿಗೆ ನನ್ನ ಕೈಹಿಡಿದು ಜೀವ ನೀಡಿದಾಕೆ ಕಾರ್ಗಲ್ ನಲ್ಲಿರುವ ಮುಪ್ಪಾನೆ ಕುಟುಂಬಕ್ಕೆ ಸೇರಿದವರು ಎಂದು ತಿಳಿದು,
“ಯಾರ ಮಗಳು?”
ಫಿಲೋಮಿನ ಆಂಟಿ ಕೇಳಿದಾಗ
“ಕೌತಿ ಪದ್ಮಯ್ಯ- ಚಂದ್ರಮತಿ ಅವರ ಮಗಳು”
ಎಂದ ಕೂಡಲೇ,
“ಅಯ್ಯಯ್ಯೋ ಚಂದ್ರಮತಿ ಮಗಳ!? ನೀವು ನಮಗೆ ಇನ್ನೂ ಬಹಳ ಹತ್ತಿರದ ಸಂಬಂಧ ಆದ್ರಲ್ಲಾ”
ಎಂದು ನಾ.ಡಿ. ಅಂಕಲ್ ಮತ್ತು ಫಿಲೋಮಿನ ಆಂಟಿ ಇಬ್ಬರೂ ಬಹಳ ಋಷಿ ಪಟ್ಟಿದ್ದರು. ಅದಕ್ಕೆ ಕಾರಣ ನನ್ನ ಅತ್ತೆ ಮತ್ತು ಫಿಲೋಮಿನ ಆಂಟಿ ಆತ್ಮೀಯ ಸ್ನೇಹಿತರಾಗಿದ್ದದ್ದು. ಅದೂ ಅಲ್ಲದೇ ನಾ.ಡಿ.ಅಂಕಲ್ ಮತ್ತು ಮುಪ್ಪಾನೆ ಕುಟುಂಬದ ನಡುವೆ ಹಲವು ದಶಕಗಳ ಆತ್ಮೀಯತೆ ಇತ್ತು. ಆ ಭೇಟಿಯ ನಂತರದ ಪ್ರತಿಯೊಂದು ಬಾರಿ ಅವರ ಮನೆಗೆ ಹೋದಾಗಲೂ, ನನಗೆ ನನ್ನದೇ ಮೂಲಮನೆಗೆ ಹೋದಂತೆ ಅನ್ನಿಸುತ್ತಿತ್ತು.

ಕೆಲವು ಸಂದರ್ಭಗಳಲ್ಲಿ ನಾ.ಡಿ.ಅಂಕಲ್ ಮತ್ತು ನಾನು ಗಂಟೆಗಟ್ಟಲೇ ಕೂತು ಸಾಹಿತ್ಯ, ಸಂಸ್ಕೃತಿ, ರಾಜಕೀಯ ಮತ್ತು ಪರಿಸರದ ಬಗ್ಗೆ ಮಾತನಾಡಿದ್ದೂ ಇತ್ತು. ಆಗೆಲ್ಲ ಫಿಲೋಮಿನ ಆಂಟಿ ಚಹಾ- ಚಕ್ಕುಲಿ- ಸಿಹಿ ತಿಂಡಿ ತಂದು ಎದುರಿಟ್ಟು, “ನಾಚ್ಕೆ ಪಟ್ಕೋಬೇಡ. ತಿನ್ನೋ ಮಾರಾಯ” ಎಂದು ಪ್ರೀತಿಯಿಂದ ಉಪಚರಿಸಿದ್ದುಂಟು.

ಅವರ ಮನೆಗೆ ಕೊನೆಯ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲೂ ದಂಪತಿ ಇಬ್ಬರೂ ಮನೆಯ ಗೇಟಿನವರೆಗೆ ಬಂದು ನಗುವಿನ ಸಾಗರದ ನಡುವೆಯೇ ನನಗೆ “ಮತ್ತೆ ಬರ್‍ರೀ” ಎಂದು ಹೇಳಿದ್ದರು. ಅವರಿಬ್ಬರ ಈ ಆತಿಥ್ಯ ಮತ್ತು ಪ್ರೀತಿ ನನಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಮನೆಗೆ ಭೇಟಿ ನೀಡುತ್ತಿದ್ದ ಪ್ರತಿಯೊಬ್ಬರನ್ನೂ ಅವರು ನಡೆಸಿಕೊಳ್ಳುತ್ತಿದ್ದದ್ದು ಹೀಗೆಯೇ. ಗೆಳೆಯ, ಲೇಖಕ ಯೋಗೀಶ್ ಮಾಸ್ಟರ್‍ ಮತ್ತು ಸಾಗರದ ಗೆಳೆಯ, ಪತ್ರಕರ್ತ ರಾಘವೇಂದ್ರ ಸೆರೆ ಹಿಡಿದ ಛಾಯಾಚಿತ್ರಗಳೇ ಸಾಕ್ಷಿ.

ಸುಮಾರು ಮೂರ್ನಾಲ್ಕು ವರ್ಷಗಳ ಹಿಂದಿನ ಮಾತು. ಗೆಳೆಯ ಪ್ರಕಾಶ್ ಕುಗ್ವೆ ಅವರ ಪುಸ್ತಕ ಬಿಡುಗಡೆ ಸಮಾರಂಭ ಸಾಗರದಲ್ಲಿತ್ತು. ನಾ.ಡಿ. ಅಂಕಲ್ ಮತ್ತು ಕುಂ.ವೀರಭದ್ರಪ್ಪ ಮುಖ್ಯ ಅತಿಥಿಗಳಾಗಿದ್ದರು. ನಾನು ಆ ಸೀಮೆಯಲ್ಲೇ ಇದ್ದ ಕಾರಣ ಸಮಾರಂಭಕ್ಕೆ ಹೋಗಿದ್ದೆ. ಕೊನೆಯ ಬಾರಿ ನಾ.ಡಿ.ಅಂಕಲ್ ಅವರನ್ನು ನಾನು ನೋಡಿದ್ದು ಆ ದಿನ. ಮೂರು ದಶಕಗಳಲ್ಲಿ ಮೊದಲ ಬಾರಿ ಅವರಿಗೆ ನನ್ನ ಗುರುತು ಹಿಡಿಯಲು ಆಗಿರಲಿಲ್ಲ. ಆದರೆ ಅವರ ಮುಖದಲ್ಲಿ ನಗು ಮಾತ್ರ ಹಾಗೆಯೇ ಉಳಿದಿತ್ತು. ಫಿಲೋಮಿನ ಆಂಟಿ, ನನ್ನ ಹೆಸರು ಹೇಳಿ “ಗುರ್ತ ಸಿಕ್ತಾ?” ಎಂದು ಕೇಳಿದಾಗ ನನ್ನ ಕೈ ಹಿಡಿದ ನಾ.ಡಿ.ಅಂಕಲ್ “ಈಗಿಗ ನೆನಪಿನ ಶಕ್ತಿ ಕಮ್ಮಿಯಾಗಿದೆ” ಎಂದು ಹೆಗಲ ಮೇಲೆ ಕೈ ಇಟ್ಟು, “ಎಲ್ಲ ಆರಾಮ ಅಲ್ಲಾ?....” ಎಂದು ಮಾತನಾಡಿಸಿದ್ದರು. ಅದೇ ಕೊನೆ!

ನಿನ್ನೆ ಅವರ ನಿರ್ಗಮನದ ಸುದ್ದಿ ತಿಳಿದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದ ಸಂತಾಪ ಸೂಚಕ ಸಂದೇಶಗಳು, ಲೇಖನಗಳು… ನಾ.ಡಿ. ಅಂಕಲ್ ಗಳಿಸಿದ ಪ್ರೀತಿ- ವಿಶ್ವಾಸದ ದ್ಯೋತಕ. ಮನುಷ್ಯ ಸರಳವಾಗಿ, ಸಾಮಾಜಿಕ ಬದ್ಧತೆಯಿಂದ ಹೇಗೆ ಬದುಕಬೇಕು ಅಂದರೆ ನಾ.ಡಿ.ಅಂಕಲ್ ಅವರಂತೆ. ನೆಹರು ನಗರದ ಆ ಹಂಚಿನ ಮನೆ ಎರಡಂತಸ್ತಿನದ್ದು. ಆದರೆ, ಅಲ್ಲಿಗೆ ಎಲ್ಲ ಅಂತಸ್ತಿನವರೂ ತಲೆ ತಗ್ಗಿಸಿ ಬಂದು ಕೂತು ಪ್ರೀತಿ-ವಿಶ್ವಾಸ ಗಳಿಸಿ, ನೀಡಿ ಹೋಗಿದ್ದಾರೆ. ಒಬ್ಬ ಪ್ರಾಮಾಣಿಕ ಸರ್ಕಾರಿ ನೌಕರನಾಗಿ, ಸಾಮಾಜಿಕ ಬದ್ಧತೆಯ ಲೇಖಕನಾಗಿ, ತಣ್ಣನೆಯ ಹೋರಾಟಗಾರನಾಗಿ… ಬದುಕಿಗೆ ಅರ್ಥ ನೀಡಿ ಹೋದ ನಾ.ಡಿ. ಅಂಕಲ್ ಅವರದ್ದು ನಿಜ ಅರ್ಥದಲ್ಲಿ ಸಾರ್ಥಕ ಬದುಕು. ಸಾಧ್ಯವಾದಲ್ಲಿ ಅವರಂತೆ ಯಾವುದೇ ಅಬ್ಬರವಿಲ್ಲದೇ, ಮೌನವಾಗಿ, ನಗು ಸೂಸುತ್ತಲೇ ಬದುಕಬೇಕು. ಅದು ಅವರಿಗೆ ನಾವೆಲ್ಲ ಸಲ್ಲಿಸಬಹುದಾದ ಬಹು ದೊಡ್ಡ ಶ್ರದ್ಧಾಂಜಲಿ.

 

 

 

 

 

 

 

 

 

MORE FEATURES

ವರ್ತಮಾನ ಸಾಯುತ್ತಲೇ ಭೂತವಾಗುತ್ತದೆ

07-01-2025 ಬೆಂಗಳೂರು

"ಸಾಹಿತಿ ಶರೀಫ ಗಂಗಪ್ಪ ಚಿಗಳ್ಳಿ ಇವರು ಈ ಪುಸ್ತಕದಲ್ಲಿ 15 ಲೇಖನ ಬರೆದಿದ್ದಾರೆ. ಬಹುತೇಕ ಕನ್ನಡಿಗರು ಕೇಳಬಲ್ಲ, ನ...

ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ

07-01-2025 ಬೆಂಗಳೂರು

“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು...

ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು

07-01-2025 ಬೆಂಗಳೂರು

“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸ...