“ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು ನನ್ನಲ್ಲಿ ಸೋಜಿಗವನ್ನು ಉಂಟುಮಾಡಿದೆ,” ಎನ್ನುತ್ತಾರೆ ಅಗ್ರಹಾರ ಕೃಷ್ಣಮೂರ್ತಿ ಅವರು ಡಾ. ಎ. ಓ ನರಸಿಂಹ ಮೂರ್ತಿ ಅವರ “ಜಟ್ಟಿಅಗ್ರಹಾರ” ಕೃತಿಗೆ ಬರೆದ ಮುನ್ನುಡಿ
ಹಲವಾರು ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿಗಳನ್ನು ಬರೆದು. ಇನ್ನು ಮುಂದೆ ನಿಲ್ಲಿಸಿ ಬಿಡಬೇಕು ಅನಿಸುತ್ತಿದ್ದ ದಿನಗಳಲ್ಲಿ ಗೆಳೆಯ ಡಾ. ಎ ಓ ನರಸಿಂಹಮೂರ್ತಿ ತಮ್ಮ ಸಂಶೋಧನಾ ಕೃತಿಗೆ ಕೆಲವು ಮಾತುಗಳನ್ನು ಬರೆಯಬೇಕೆಂದು ಬಯಸಿದರು. ಕೃತಿ ಕುರಿತು ವಿಚಾರಿಸಿದಾಗ ಗೊಣಗದೆ, ಸಬೂಬು ಹೇಳದೆ ನಿಂತ ನಿಲುವಿನಲ್ಲೇ ಸಂತೋಷದಿಂದ ಒಪ್ಪಿದ್ದಕ್ಕೆ ಕಾರಣ ನಮ್ಮಿಬ್ಬರ ಊರು ಒಂದೇ ಆಗಿರುವುದು! ಕೃತಿ ನಮ್ಮೂರ ಸ್ಥಳೀಯ ಇತಿಹಾಸ! ಇತಿಹಾಸ ಸಂಶೋಧನೆಗಳ ಕ್ಷೇತ್ರದಲ್ಲಿ ನಾನು ನಿರಕ್ಷರಿ. ತಮ್ಮ ಊರಿನವರು ಎಂಬ ಪ್ರೀತಿ ಅಭಿಮಾನಗಳಿಂದ ಡಾ. ಮೂರ್ತಿ ನನ್ನ ಮುಂದಿನ ಕೆಲವು ಮಾತುಗಳಿಗಾಗಿ ಬಹಳ ದಿನಗಳಿಂದ ತಾಳ್ಮೆಯಿಂದ ಕಾದಿದ್ದಾರೆ.
ಬರೆಯುವ ಉದ್ಯೋಗದಲ್ಲಿ ನಾನು ಅತಿ ವಿಳಂಬಿ. ಓದಲು ತೆಗೆದಿಟ್ಟಿರುವ ಪುಸ್ತಕಗಳು, ಮತ್ತಿತರ ಉಪದ್ವಾಪಗಳ ನಡುವೆ ಸಂತೋಷದಿಂದ ಒಪ್ಪಿಯೂ ವಿಳಂಬ ಮಾಡಿದ್ದೇನೆ. ಅದಕ್ಕೆ ಕಾರಣ ಈ ಕೃತಿಯಲ್ಲಿರುವ ಪ್ರತಿಯೊಂದು ಮಾಹಿತಿ, ಸಂಗತಿ, ಪಾತ್ರಗಳೂ ನನ್ನನ್ನು ನನ್ನ ಬಾಲ್ಯ ಕಾಲಕ್ಕೆ ಸೆಳೆದೊಯ್ಯುತ್ತಿದ್ದವು. ಕಟ್ಟಿಹಾಕುತ್ತಿದ್ದವು. ಊರ ಬೀದಿಗಳಲ್ಲಿ ಅಲೆಯುವಂತೆ ಮಾಡುತ್ತಿದ್ದವು, ಕೆರೆ ಹಳ್ಳಕೊಳ್ಳಗಳಲ್ಲಿ ಈಜಾಡಿಸುತ್ತಿದ್ದವು, ಮುಳುಗಿಸುತ್ತಲೂ ಇದ್ದವು! ಈ ವಿಶೇಷ ಅನುಭೂತಿ ಮತ್ತು ನಿರ್ಲಿಪ್ತನಾಗಿ ಬರೆಯಲಾಗದ ಸ್ಥಿತಿ ವಿಳಂಬ ಜೀವಿಗೆ ಹೊಸ ನೆಪಗಳಾದವು! ನನ್ನ ಬರಹ ಎಲ್ಲಿ ಆತ್ಮವೃತ್ತಾಂತದ ತುಣುಕುಗಳಾದಾವೋ ಎಂಬ
ಆಳುಕಿನ ಜೊತೆಗೆ ಡಾ. ಮೂರ್ತಿಯ ಬಗ್ಗೆ ಹೆಮ್ಮೆಯೂ ಮೂಡಿತು. ತಮ್ಮದೇ ಊರಿನ ಇತಿಹಾಸ ದಾಖಲೆ ಮಾಡುವ, ಮಾಹಿತಿ ಸಂಗ್ರಹ, ಅಧ್ಯಯನ ಮಾಡುವ ಗಳಿಗೆಗಳಲ್ಲಿ ನನ್ನಲ್ಲುಂಟಾದ ತುಮುಲ ತಾಕಲಾಟಗಳು ಅವರಿಗೂ ಆಗಿರಲಿಕ್ಕೇ ಬೇಕು. ಆದ್ದರಿಂದ ಈ ಕೃತಿಯ ಲೇಖಕನಿಗೆ ಮತ್ತು ಮುನ್ನುಡಿಕಾರನಿಗೆ ಇರುವ ಸಮಾನ ಮನಸ್ಥಿತಿ, ಉತ್ಸುಕತೆಯನ್ನು ಕೃತಿಯ ಓದುಗರು ಗುರುತಿಸಬಹುದು.
ನಾನು ಕೇಳಿ ತಿಳಿದಂತೆ ನಮ್ಮೂರಿಗೆ ನಾಲ್ಕಾರು ಹೆಸರುಗಳು; ಜಟ್ಟಿಅಗ್ರಹಾರ, ದೊಡ್ಡ ಅಗ್ರಹಾರ, ಥರಟಿಅಗ್ರಹಾರ, ಬಜೆಅಗ್ರಹಾರ ಮುಂತಾಗಿ. ಈ ಬಗ್ಗೆ ಡಾ. ಮೂರ್ತಿ ಪ್ರಸ್ತಾಪ ಮಾಡಿದ್ದಾರೆ. ಬಾಲ್ಯದಲ್ಲಿ ನಾನು ಕಂಡಂತೆ ನಮ್ಮೂರ ಶಾಲೆಯ ಮುಂದಿನ ತುಮಕೂರು. ಮಧುಗಿರಿ ರಸ್ತೆಬದಿಯಲ್ಲಿ ವಾಲಿಕೊಂಡು ನಿಂತಿದ್ದ ಆರಡಿಯ ಒಂದು ಸಿಮೆಂಟ್ ಕಂಬದ ಮೇಲೆ ಒಂದು ಮರದ ಹಲಗೆಯ ಮೇಲೆ ಮಾಟವಾಗಿ ಮುದ್ದಾದ ಇಂಗ್ಲೀಷ್ ಅಕ್ಷರಗಳಲ್ಲಿ 'ಜಟ್ಟಿಅಗ್ರಹಾರ' ಎಂದು ಕೊರೆಯಲಾಗಿತ್ತು. ನನ್ನ ಹುಟ್ಟಿದ ಸಮಾಜಕ್ಕಿದ್ದ ಜಾತಿನಾಮ ನಮ್ಮೂರಿಗಿದ್ದುದರಿಂದ ಊರಲ್ಲಿದ್ದ ನಮ್ಮ ನೆಂಟರು ದಾಯಾದಿಗಳಿಗೆ ಖುಶಿ ಹಮ್ಮುಬಿಮ್ಮು ಇತ್ತೋ ಏನೋ ಕಾಣೆ. ನಾನು ಕಂಡ ಕಾಲಕ್ಕೇ ವಾಲಿಕೊಂಡು ನಿಂತಿದ್ದ ಆ ಬೋರ್ಡ್ ಕ್ರಮೇಣ ಕಣ್ಮರೆಯಾಯಿತು. ಆದರೆ, ಆ ಬೋರ್ಡ್ ಇದ್ದ ದಿನಗಳಲ್ಲೂ ಊರಿನ ಪ್ರವೇಶ ತಾಣದ ಇಕ್ಕೆಲಗಳಲ್ಲಿ ಉತ್ತರ-ದಕ್ಷಿಣದಲ್ಲಿ ಅತಿಸುಂದರ ಅರ್ಧ ಚಂದ್ರಾಕೃತಿಯ ಐದಾರಡಿ ಎತ್ತರದ ಗೋಡೆಗಳ ಮೇಲೆ ಊರ ಹೆಸರನ್ನು ಕೇವಲ 'ಅಗ್ರಹಾರ' ಎಂದು ಬರೆಯಲಾಗಿತ್ತು. ಅವೆರಡು ಅರ್ಧ ಚಂದ್ರಾಕೃತಿ ಗೋಡೆಗಳ ನಡುವಿನಿಂದ ಊರೊಳಕ್ಕೆ ಪ್ರವೇಶ. ಆದರರ್ಥ ಊರೊಳಕ್ಕೆ ಅಲ್ಲಿಂದಲೇ ಪ್ರವೇಶ ಪಡೆಯಬೇಕೆಂದಲ್ಲ, ಜನ, ದನಕರು, ವಾಹನ, ಚಕ್ಕಡಿಗಳು ಇತ್ಯಾದಿ ಊರಿನ ದಶದಿಕ್ಕುಗಳಿಂದಲೂ ಊರೊಳಕ್ಕೆ ನುಗ್ಗಬಹುದು! ಅದು ಊರಿನ ಗುರುತು ಅಷ್ಟೆ! ಜನರ ರೂಢಿಮಾತಲ್ಲಿ 'ಗೇಟ್' ಅಂತಲೇ ಆ ತಾಣ ಗುರುತಿಸಲ್ಪಡುತ್ತದೆ. ತುಮಕೂರು, ಮಧುಗಿರಿ, ಮಡಕಶಿರಾಗಳ ನಡುವೆ ಓಡಾಡುವ ಬಸ್ಸುಗಳು ನಿಲ್ಲುವುದು ಗೇಟಿನತಾವೇ, ಊರ ಜನರ ಮೀಟಿಂಗ್ ಪಾಯಿಂಟ್ ಕೂಡ ಅದೇ. ಆ ಸುಂದರ ಗೋಡೆಗಳ ಮೇಲೆ ಕೇವಲ 'ಅಗ್ರಹಾರ' ಎಂದಷ್ಟೇ ಬರೆಯಲಾಗಿತ್ತು. ಬಹುಶಃ ಈ ಗೋಡೆಗಳ ನಿರ್ಮಾಣ ಹಂತದಲ್ಲಿ 'ಜಟ್ಟಿ' ಕಣ್ಮರೆಯಾಯಿತೆನಿಸುತ್ತದೆ. ಈಗ್ಗೆ ಎರಡು ಮೂರು ದಶಕಗಳ ಹಿಂದೆ ಊರಲ್ಲೇ ವಾಸ ಮಾಡುತ್ತಿರುವ ಹನುಮಂತಿಜಟ್ಟಿ, ತಮ್ಮ ಮಂಜಣ್ಣ, ನಾಗರಾಜು ಮತ್ತು ಊರಿನ ಕೆಲವರ ಸಹಕಾರದಿಂದ ಹಳೆಯ ದಾಖಲೆಗಳನ್ನೆಲ್ಲ ಸಂಬಂಧಪಟ್ಟವರಿಗೆ ತೋರಿಸಿ ಮತ್ತೆ ಊರ ಹೆಸರನ್ನು 'ಜಟ್ಟಿಅಗ್ರಹಾರ' ಎಂದು ಮರುನಾಮಕರಣ ಮಾಡಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಅಗ್ರಹಾರಗಳು ಕೆಲಕೆಲ ಉಪಸರ್ಗಗಳೊಂದಿಗೇ ಬಳಕೆಯಲ್ಲಿರುವುದು ಎಲ್ಲರಿಗೂ ತಿಳಿದಂಥ ಸಂಗತಿ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ದೃಷ್ಟಿಯಿಂದ ಊರಿನ ಅಸ್ಮಿತೆ ಮತ್ತೆ ಕೂಡಿಕೊಂಡು ಊರಿಗೆ ನ್ಯಾಯ ಸಿಕ್ಕಂತಾಗಿದೆ. ಒಂದು ಕಾಲಕ್ಕೆ ಪಟೇಲಿಕೆ ಅಥವಾ ಗೌಡಿಕೆ ನಮ್ಮ ವಂಶಸ್ಥರಿಗಿತ್ತೆಂಬ ವಿಚಾರ ಬಾಲ್ಯದಲ್ಲಿ ನನ್ನ ಅರಿವಿಗೆ ಬಂದಿತ್ತು. ನನ್ನ ಇಬ್ಬರು ದೊಡ್ಡಪ್ಪಂದಿರು ಒಂದು ಸಂಜೆ ಲೋಕಾಭಿರಾಮದಲ್ಲಿದ್ದರು. ಊರವರು ನನ್ನ ದೊಡ್ಡಯ್ಯನವರಿಗೆ, "ಮತ್ತೆ ನೀವೇ ವಹಿಸಿಕೊಳ್ಳಿ" ಎಂದು ಕೇಳಿದರಂತೆ. ಅದಕ್ಕೆ ದೊಡ್ಡಯ್ಯ, "ಈಗಾಗಲೇ ನಮ್ಮ ಹಿರೀಕರು ಬಿಟ್ಟುಕೊಟ್ಟಿರುವುದನ್ನು ಮತ್ತೆ ವಹಿಸಿಕೊಳ್ಳಲು ಒಲ್ಲೆ" ಎಂದು ಹೇಳಿದುದಾಗಿ ಚಿಕ್ಕ ದೊಡ್ಡಯ್ಯನವರಿಗೆ ಹೇಳಿದ್ದು ನನಗಿನ್ನೂ ನೆನಪಿದೆ. ಆ ಮಾತಿರಲಿ.
ಮೇಲೆ ತಿಳಿಸಿದ ಎರಡೂ ಅರ್ಧ ಚಂದ್ರಾಕೃತಿ ಇಮಾರತುಗಳ ಮೇಲೆ ಎರಡು ಆರಾಮ ಛೇರಿನಂತಹ ಅಲಂಕಾರ ಪೀಠಗಳಿದ್ದುವು. ಬಾಲಕನೊಬ್ಬ ಅದರ ಮೇಲೆ ಆರಾಮವಾಗಿ ಕುಳಿತುಕೊಳ್ಳಬಹುದಿತ್ತು. ಉತ್ತರದಿಕ್ಕಿನಲ್ಲಿದ್ದುದರ ಮೇಲೆ ಅತ್ತಿತ್ತ ಕಾಲುಗಳನ್ನು ಹಾಕಿ ಹಿಂದಕ್ಕೆ ತಲೆಯೊರಗಿಸಿ ಪಕ್ಕದಲ್ಲೇ ಇದ್ದ ಬೃಹತ್ ಮಳೆಮರದ (ರೈನ್ ಟ್ರೇ) ರೇಶಿಮೆ ನವಿರಿನಂತಹ, ತುದಿಯಲ್ಲಿ ತೆಳುಗುಲಾಬಿ (ಪಿಂಕ್) ಬಣ್ಣವಿದ್ದು ಕೆಳಭಾಗದ ಬಿಳಿ ಬಣ್ಣದಿಂದ ಕೂಡಿದ ಅಸಂಖ್ಯಾತ ಹೂವುಗಳ ಮೂಲಕ ಸುಮ್ಮನೆ ಗಂಟೆಗಟ್ಟಳೆ ಆಕಾಶವನ್ನು ದಿಟ್ಟಿಸುತ್ತಾ ಇದ್ದುಬಿಡುತ್ತಿದ್ದೆ. ನಮ್ಮೂರಿನ ನನ್ನ ಬಾಲ್ಯದ ಅತ್ಯಂತ ಪ್ರಿಯ ತಾಣಗಳಲ್ಲಿ ಈ ಅರ್ಧಚಂದ್ರಾಕೃತಿಯ ಅಟ್ಟದ ಮೇಲಿನ ಆರಾಮ ಛೇರೂ ಒಂದು! ಅದ್ಯಾಕೋ ದಕ್ಷಿಣದಿಕ್ಕಿನ ಮೇಲಿದ್ದ ಪೀಠದ ಮೇಲೆ ನಾನು ಒಂದು ದಿನಕ್ಕೂ ಕುಳಿತ ನೆನಪಿಲ್ಲ! ಬಹುಶಃ ಮುಂದೆಂದೋ ಬರಲಿರುವ ಕಾಲಘಟ್ಟದಲ್ಲಿ ಉತ್ತರದಿಕ್ಕಿನ ಕಾಶಿಯ ತಟದ ಗಂಗಾನದಿ ನೀರನ್ನು, ದಿಲ್ಲಿನೆಲಸುಗೆಯಲ್ಲಿ ಯಮುನಾ ನದಿಯ ನೀರನ್ನು ಕುಡಿಯಬೇಕೆಂಬ ಪೂರ್ವ ಸೂಚನೆ ಆಗಿದ್ದಿರಬಹುದೇ?!!
ಡಾ. ಮೂರ್ತಿ ಹಲವು ಗ್ರಾಂಥಿಕ, ಮೌಖಿಕ ಆಕರಗಳನ್ನು ಪರಿಶೀಲಿಸಿ ನಮ್ಮೂರ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. 'ಕರ್ನಾಟಕ ಕವಿಚರಿತೆ'ಯ ಕರ್ತೃ ಆರ್ ನರಸಿಂಹಾಚಾರ್ (1861-1936) ನಮ್ಮ ಊರಿನಲ್ಲಿ ತಂಗಿ ಪಟೇಲ್ ಈಶ್ವರಯ್ಯನವರ ಮನೆಯಲ್ಲಿದ್ದ ಹಸ್ತಪ್ರತಿ ಭಂಡಾರವನ್ನು ಪರಿವೀಕ್ಷಿಸಿದ್ದರೆಂಬ ಸಂಗತಿಯನ್ನು ದಾಖಲಿಸಿದ್ದಾರೆ. ಈ ಅಂಶ ನನ್ನಲ್ಲಿ ಅಪಾರ ಹೆಮ್ಮೆಯನ್ನು ಉಂಟುಮಾಡಿತು. ಈ ವಿಚಾರ ನನಗೆ ಗೊತ್ತಿರಲಿಲ್ಲ. ಡಾ. ಮೂರ್ತಿ ತಿಳಿಸಿರುವಂತೆ ಪಟೇಲ್ ಈಶ್ವರಯ್ಯನವರ ವಂಶಸ್ಥರಿಗೆ ಕೂಡ ಇದರ ಬಗ್ಗೆ ಯಾವ ಮಾಹಿತಿಯೂ ಇಲ್ಲವೆಂಬುದು ಆಶ್ಚರ್ಯವನ್ನು ಉಂಟುಮಾಡುತ್ತದೆ.
ನಮ್ಮೂರಿನ ಬೇನಾಳಮ್ಮ (ಬೇವಿನಹಳ್ಳಿಯಮ್ಮ) ನ ಗುಡಿಯ ಮುಂದೆ ಆಕಾಶಕ್ಕೆ ವಿಶಾಲವಾಗಿ ಹರಡಿಕೊಂಡಿದ್ದ ಬೃಹತ್ ಬೇವಿನಮರದ ಅಡಿಯಲ್ಲಿ ಕೋಣನ ಬಲಿಕೊಡುವುದನ್ನು ಬಾಲ್ಯದಲ್ಲಿ ಕಂಡಿದ್ದೆ. ಡಾ. ಮೂರ್ತಿ ನಮ್ಮೂರಲ್ಲಿ ಬೇನಾಳಮ್ಮ ನೆಲೆಗೊಂಡ ಕಥನವನ್ನು ನಿರೂಪಿಸಿದ್ದಾರೆ. ಗುಡಿಯ ಎದುರಿಗೇ ನಮ್ಮ ವಂಶದವರ ಗರಡಿಮನೆ ಇತ್ತು. ಅದೀಗ ಕುಸಿದು ಪಾಳು ಬಿದ್ದಿದೆ. ಬಾಲ್ಯದಲ್ಲಿ ನಮ್ಮ ಹಿರೀಕರ ಉಸ್ತುವಾರಿಯಲ್ಲಿ ಮಟ್ಟಿಯಲ್ಲಿ ಮುಳುಗಿ ಸಾಮು ಮಾಡುತ್ತ ಕುಸ್ತಿ ಕಲಿಯುತ್ತಿದ್ದೆ. ನಮ್ಮ ಕುಲದೇವತೆ ನಿಂಬುಜಾದೇವಿ. ಈಕೆ ಗುಜರಾತ್ ಮೂಲದವಳು. 'ನೀಮ್' ಅಂದರೆ ಉತ್ತರದ ಭಾಷೆಯಲ್ಲಿ ಬೇವು ಎಂದರ್ಥ. ಅದು ಇಂಗ್ಲೀಷಿಗೂ ಹೋಗಿರುವ ಶಬ್ದ, ನಿಂಬುಜಾ ಅಂದರೆ ಬೇವಿನಮರದಲ್ಲಿ ಹುಟ್ಟಿದವಳು, ನಮ್ಮೂರಿನ ಬೇನಾಳಮ್ಮ ಮತ್ತು ಸಾವಿರಾರು ಮೈಲಿಗಳ ದೂರದ ಗುಜರಾತಿನ ನಿಂಬುಜಾದೇವಿ, ಇವುಗಳ ಸಾಮ್ಯತೆ, ಗುಡಿಯ ಎದುರಿಗೇ ಜಟ್ಟಿಗಳ ಗರಡಿಮನೆ ಇರುವುದು, ಬೇವಿನಮರಕ್ಕೆ ಇರುವ ವಿಶೇಷ ಪ್ರಾಶಸ್ತ್ರ ಈ ಸಂಗತಿಗಳು ಸಂಶೋಧಕರ ಗಮನ ಸೆಳೆಯುವಂಥವು. ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಅಗತ್ಯವಿದೆ.
ಮದ್ದಗಿರಿ ಎಂಬ ಹೆಸರನ್ನು 1927 ರಲ್ಲಿ, ಆಗ ಕಲೆಕ್ಟರ್ ಆಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರರ ಉಪಸ್ಥಿತಿಯಲ್ಲಿ ಮಧುಗಿರಿ ಎಂದು ಬದಲಾಯಿಸಲಾಯಿತಂತೆ. ಇದನ್ನು ಓದುವಾಗ ಸುಮಾರು 40 ವರ್ಷಗಳ ಹಿಂದೆ ಒಮ್ಮೆ ಮಾಸ್ತಿಯವರನ್ನು ಭೇಟಿಯಾದಾಗ ನಡೆದ ಒಂದು ಪ್ರಸಂಗ ನೆನಪಾಯಿತು. ಅವರು ನಮ್ಮ ಭಾಗದ ಕಲೆಕ್ಟರ್ ಆಗಿದ್ದುದರಿಂದ ಎಲ್ಲ ಊರು ಪ್ರದೇಶಗಳ ಪರಿಚಯ ಚೆನ್ನಾಗಿಯೇ ಇದ್ದಿರಬೇಕು. ನನ್ನ ಊರು ಯಾವುದೆಂದು ಕೇಳಿದರು. ಹೇಳಿದೆ. ಅವರು ತಮ್ಮ ಬೊಚ್ಚುಬಾಯಲ್ಲಿ ಮಕ್ಕಳಂತೆ ನಗುತ್ತ "ನಿಮ್ಮೂರ ಕೆರೆಗೆ ಉಚ್ಚೆ ಮಾಡಿದರೆ ತುಂಬಿ ಹೋಗ್ನಿಡುತ್ತೆ!" ಅಂದುಬಿಟ್ರು! ಆಗ ಅವರ ವಯಸ್ಸು ತೊಂಬತ್ತರ ಆಸುಪಾಸು! ಒಬ್ಬ ಮಹತ್ತರ ಲೇಖಕರ ಬಾಯಲ್ಲಿ ನಿರಾಯಾಸವಾಗಿ ನಮ್ಮೂರ ಕೆರೆಯ ಹೊಗಳಿಕೆಗಾಗಿ ಹೊರಬಿದ್ದ ನುಡಿಮುತ್ತುಗಳನ್ನು ಕೇಳಿ ನಾನು ಪೆಚ್ಚಾಗಿಬಿಟ್ಟೆ! ನಾವು ಮದುವೆ ಮುಂತಾದ ದಿನಗಳಲ್ಲಿ ಕುಡಿಯುವ ನೀರನ್ನು ಗಾಡಿ ಹೊಡೆದುಕೊಂಡು ಹೋಗಿ ಹಂಡೆಗಳಲ್ಲಿ ತುಂಬಿಕೊಂಡು ಬರುತ್ತಿದ್ದುದು ಇದೇ ಕೆರೆಯಿಂದ! ಎಷ್ಟೇ ಸಣ್ಣದಾದರೂ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಊರ ಕೆರೆಗಳ ಬಗ್ಗೆ ಅಪಾರ ಅಭಿಮಾನವಿರುವುದು ಸಹಜವಲ್ಲವೆ! ಅವರ ನುಡಿಮುತ್ತು ಕಿರಿಕಿರಿ ಮಾಡುತ್ತ ಮನಸ್ಸಿನಲ್ಲೇ ಇತ್ತು. ಆಗಲೇ ಅದನ್ನು ಡಿ.ಆರ್ ನಾಗರಾಜನಿಗೆ ಹೇಳಿದ್ದೆ. ಅವನಿಗೆ ಬೊಚ್ಚುಬಾಯಿರಲಿಲ್ಲ! ಮಾಸ್ತಿಗಿಂತ ಜೋರಾಗಿ ತುಂಬುನಗೆ ಬೀರುತ್ತ, "ಹೇ ಗುರುವೇ ನೀನಿದನ್ನು ಎಲ್ಲಾದರೂ ಬರೀಬೇಕು," ಎಂದು ಅಪ್ಪಣೆ ಕೊಡಿಸಿದ್ದ. ಆ ಗಳಿಗೆ ಈಗ ಬಂದಿದೆ! ಮಾಸ್ತಿಯವರ 'ಮೂತ್ರ ಮಾಣಿಕ್ಯ'ವನ್ನು ಡಾ. ಮೂರ್ತಿಯವರ ಇತಿಹಾಸ ಕಟ್ಟೋಣದ ಕ್ಯೂರಿಂಗ್ ಗಾಗಿ ಬಳಸಿ ಡಿ.ಆರ್ ಆತ್ಮವನ್ನು ಸಂತುಷ್ಟಿಗೊಳಿಸುವೆ!
ಡಾ. ಮೂರ್ತಿಯವರ ಈ ಕೃತಿಯಲ್ಲಿ ಉಲ್ಲೇಖಗೊಂಡಿರುವ ಕೆಲವು ಊರುಗಳು. ಸ್ಥಳಗಳನ್ನು ಬಾಲ್ಯದಲ್ಲಿ ಕಂಡು ಓಡಾಡಿ ಅನುಭವಿಸಿದ ನೆನಪುಗಳಿಂದ ಮನಸ್ಸು ಮುದಗೊಂಡಿತು. ಉದಾಹರಣೆಗೆ ಊರ ಉತ್ತರಕ್ಕಿದ್ದ ದೊಡ್ಡಳ್ಳ, ದೊಡ್ಡಸೇತುವೆ ಇತ್ಯಾದಿಗಳು. ದೊಡ್ಡಳ್ಳದ ಹೆಸರು ಇಂಗ್ಲಿಷಿನಲ್ಲಿ 'ರಿವರ್ ಸುವರ್ಣಮುಖಿ' ಎಂಬುದನ್ನು ನಾವು ಕೊರಟಗೆರೆ ಕಡೆಯಿಂದ ಬರುವಾಗ ದೊಡ್ಡಸೇತುವೆ ಬಳಿಯಿದ್ದ ಫಲಕದ ಮೇಲಿನ ಬರಹದಿಂದ ತಿಳಿಯುತ್ತಿದ್ದೆವು. ನಮ್ಮ ಬಳಕೆಯ ಮಾತಲ್ಲಿ ಅದು ದೊಡ್ಡಳ್ಳವೇ ಆಗಿರುತ್ತಿತ್ತು. ಆಕಾಲಕ್ಕೆ ಅದು ಊರಿನ ಜೀವರೇಖೆಯಂತೆ ಬೇಸಿಗೆಯಲ್ಲೂ ಮರಳುಹಾಸಿನಲ್ಲಿ ಕೆಲವೆಡೆ ಜುಳುಜುಳು ಎನ್ನುತ್ತಾ, ಕೆಲವೆಡೆ ಪಾದ, ಮೊಳಕಾಲು, ಸೊಂಟದ ಉದ್ದ ಹರಿಯುತ್ತಿತ್ತು. ಊರ ಜನರು, ಹೆಚ್ಚಾಗಿ ಹೆಂಗಸರು, ಬೆಳೆದ ಮಕ್ಕಳು ಬಟ್ಟೆ ತೊಳೆಯುತ್ತಿದ್ದುದು ದೊಡ್ಡಳ್ಳದಲ್ಲೇ. ಮಕ್ಕಳಾಗಿದ್ದ ನಾವು ಸಣ್ಣ ಮೀನುಗಳ ಸಾಂಗತ್ಯದಲ್ಲಿ ಪಾದಳಿಗೆ ಕಚಗುಳಿ ಪಡೆಯುತ್ತ ನಲಿಯುತ್ತಿದ್ದ ತಾಣ ಅದಾಗಿತ್ತು. ನಾನು ಬೆಳೆದು ದೊಡ್ಡವನಾದ ಮೇಲೆ ದೊಡ್ಡಳ್ಳಕ್ಕಿದ್ದ ಸುವರ್ಣಮುಖಿ ಎಂಬ ಹೆಸರಿನ ಬಗ್ಗೆ ಮೋಹ ಬೆಳೆಸಿಕೊಂಡೆ. ಅಷ್ಟು ಸುಂದರ ಹೆಸರಿನ ನದಿ ನನ್ನ ಬಾಲ್ಯಕಾಲ ಸಖಿಯಾಗಿದ್ದಳು. ಈಗ ಅದೆಲ್ಲ ಕೇವಲ ಕನಸು. ಅದರ ಪುನರಾನುಭೂತಿಗೆ ಡಾ. ಮೂರ್ತಿ ಒದಗಿಸಿದ ಅವಕಾಶ ದೊಡ್ಡದು. ಈ ಕೃತಿಯನ್ನು ಅವರು ನನಗಾಗಿಯೇ, ಅಥವಾ ಊರನ್ನು ಅನುಭವಿಸಿರುವ ನನ್ನಂಥವರಿಗಾಗಿಯೇ ರಚಿಸಿದ್ದಾರೆನಿಸುತ್ತದೆ. ಸಂಶೋಧನೆ ಅವರಿಗೆ ಬಿಟ್ಟದ್ದು! ಭೂತಕಾಲದ ಯಾವುದೇ ಸಂಗತಿಗಳು ಆಪ್ಯಾಯಮಾನ, ಸಾಮಾನ್ಯವೆಲ್ಲ ಅಸಾಮಾನ್ಯ, ಪೊಲ್ಲಮೆಯೂ ಲೇಸು! ವಾಸ್ತವದ ಊರು ಬೇರೆ ಚಿತ್ರಗಳನ್ನು ತೆರೆದು ತೋರಿಸುತ್ತವೆ. ನಾವು ಹುಟ್ಟಿ ಬೆಳೆದು ಆಡಿದ ಮನೆಯ ಗೋಡೆ ಮಾಳಿಗೆ ಕುಸಿದು ಬಿದ್ದಿರುತ್ತದೆ. ಹೊಲದಲ್ಲಿದ್ದ ಬೃಹದಾಕಾರದ ಹಿಪ್ಪೆ ಮರ ಗುರುತೇ ಇಲ್ಲದಂತೆ ಕಣ್ಮರೆಯಾಗಿರುತ್ತದೆ. ಊರ ಜನರ ಎಲ್ಲ ಚಹರೆಗಳು ಬದಲಾಗಿರುತ್ತವೆ. ನಮ್ಮ ಬಜೆಗದ್ದೆಯಲ್ಲಿ ಕಳ್ಳಿ ಲಂಟಾನ ಬೆಳೆದಿರುತ್ತದೆ.
ಪಕ್ಕದ ಗ್ರಾಮಗಳಲ್ಲಿ ನಡೆಯುತ್ತಿದ್ದ ಬಯಲಾಟಗಳಿಗೆ ಕತ್ತಲದಾರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಿಬರುತ್ತಿದ್ದ ದಟ್ಟ ಅನುಭವಗಳು ಕೃತಿಯಲ್ಲಿನ ಹಳ್ಳಿಗಳ ಹೆಸರುಗಳನ್ನು ನೋಡಿದಾಗ ಮನದಲ್ಲಿ ಮೂಡುತ್ತವೆ. ಇಲ್ಲಿ ನಮೂದಾಗಿರುವ ಜನಕೆಬಂಡಿ ಮರ' ಕೆರೆ ಹಿಂದಲ ನಮ್ಮ ತೋಟದಲ್ಲೇ ಇದ್ದ ಹಲಸಿನ ಮರ. ಮೈಯೆಲ್ಲ ಫಲವಾಗುತ್ತಿದ್ದ ಅವು ಒನಕೆಯ ಹಾಗೆ ಮಾರುದ್ದ, ರುಚಿ ಜೇನಿಗಿಂತ ಹೆಚ್ಚು.
ರಸ್ತೆಬದಿಯಲ್ಲೇ ಸದಾ ತುಂಬಿ ನಿಂತಿರುತ್ತಿದ್ದ ಥರಟಿ ಕಲ್ಯಾಣಿಯಲ್ಲಿ ಈಜು. ಕಲಿತಿದ್ದೇನೆ. ಅದಕ್ಕೂ ಮೊದಲು ಊರಲ್ಲೇ ಉತ್ತರ ದಿಕ್ಕಿನ ಯಾರದೋ ತೋಟದಲ್ಲಿದ್ದ ಕಲ್ಯಾಣಿಯ ಮೆಟ್ಟಿಲಲ್ಲೇ ಜಳಕ ಮಾಡುತ್ತಿದ್ದ ನನ್ನನ್ನು ಈಜು ಎಂದು ತಳ್ಳಿದ್ದ ರಾಜಣ್ಣ, ಮುಳುಗಿ ತಳ ಸೇರಿದ ನನ್ನನ್ನು ಅವನೇ ಜುಟ್ಟು ಹಿಡಿದು ಮೇಲಕ್ಕೆ ತಂದು ಬದುಕಿಸಿದ. ಪುಸ್ತಕದಲ್ಲಿ ಆ ಕಲ್ಯಾಣಿಗಳ ಹೆಸರುಗಳನ್ನು ಓದಿ ಡಾ. ಮೂರ್ತಿ ಅವರಿಗೆ ಪೋನ್ ಮಾಡಿ ಮಾತಾಡಿದೆ. ಅವರು ರಾಜಣ್ಣನನ್ನು ಕಂಡು ಫೋನಿನಲ್ಲಿ ನನ್ನೊಂದಿಗೆ ಮಾತಾಡಿಸಿದರು! ಅನೇಕ ದಶಕಗಳ ನಂತರ ಪ್ರಾಣದಾತನೊಡನೆ ಸಂಭಾಷಣೆ. ಆ ಮಹಾರಾಯ ನನ್ನ ಜುಟ್ಟು ಹಿಡಿಯದಿದ್ದರೆ ಮೂರ್ತಿಯ ಈ ಸಂಶೋಧನೆಯ ಪುಸ್ತಕಕ್ಕೆ ಯಾರ ಮುನ್ನುಡಿ ಇರುತ್ತಿತ್ತೋ ಕಾಣೆ!
ಬಯಲುಸೀಮೆಯ ಬಡತನ ವಿಜೃಂಭಿಸುವ ನಾಡಿನ ಗ್ರಾಮವೊಂದರ ಪುಟ್ಟ ಇತಿಹಾಸಕ್ಕೆ ಮೌಖಿಕ ಆಕರಗಳ ಪ್ರಾಮುಖ್ಯತೆಯನ್ನು ಗುರುತಿಸಿರುವ ಡಾ. ಮೂರ್ತಿಯು, ಅವುಗಳ ಸಹಾಯದಿಂದ ಜಾತಿ, ಜನಾಂಗ, ಭೌಗೋಳಿಕ ವಿವರಗಳಿಂದ ಸಮೃದ್ಧಗೊಳಿಸಿದ್ದಾರೆ. ಬೇರೆ ಬೇರೆ ಕೇರಿಗಳು, ಕಸುಬುಗಳು ಕೂಡಿ ಊರು ಹೇಗೆ ರಚನೆಯಾಗುತ್ತದೆಂದು ತಿಳಿಸುತ್ತಾರೆ. ಒಂದೊಂದು ಜಾತಿಯೂ ತನ್ನ ಕಸುಬನ್ನು ಕೇವಲ ಕೌಟುಂಬಿಕ ಆಧಾರವನ್ನಷ್ಟೇ ಮಾಡದೆ ಎಲ್ಲರೂ ಸೇರಿ ಸಮುದಾಯ ಗೊತ್ತುಮಾಡಿದ ಕೆಲಸಗಳಲ್ಲಿಯೂ ಸಹಭಾಗಿಗಳಾಗುತ್ತಾರೆ. ಸದರಿ ಕೃತಿಯಲ್ಲಿ ಅವಧೂತ ಮಾರ್ಗದ ವಿವರಗಳಿವೆ. ನನ್ನ ಅಜ್ಜಿ ಕೂಡ ರಂಗಾವಧೂತ (ಮುತ್ತಮ್ಮಜ್ಜಿ) ಮಠದಲ್ಲಿ ದೀಕ್ಷೆ ಪಡೆದಿದ್ದರು.
ನಮ್ಮೂರಿನ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘವನ್ನು, ಗ್ರಾಮ ಪಂಚಾಯತಿಯನ್ನು ಕೇವಲ ಸೊಸೈಟಿ ಎಂದೇ ಕರೆಯುತ್ತಿದ್ದರು. ಸೊಸೈಟಿಯಲ್ಲಿದ್ದ ಒಂದು ಪೆಟ್ಟಿಗೆಯಲ್ಲಿ ನನಗೆ ಕುವೆಂಪು ಅವರ 'ಕಾನೂರು ಸುಬ್ಬಮ್ಮ ಹೆಗ್ಗಡತಿ' (ನಂತರದ ಆವೃತ್ತಿಗಳಲ್ಲಿ ಅದು ಬರೀ 'ಕಾನೂರು ಹೆಗ್ಗಡತಿ' ಆಯಿತು) ಪುಸ್ತಕ ಸಿಕ್ಕಿತ್ತು. ಹತ್ತು ಹನ್ನೆರಡು ವರ್ಷದ ಆ ವಯಸ್ಸಿನಲ್ಲಿ ನಾನು ಆ ಬೃಹತ್ ಕಾದಂಬರಿಯನ್ನು ಹೊತ್ತು ಕೊಂಡು ತಿರುಗುತ್ತಾ ನಮ್ಮ ಹೊಲದ ಹಿಪ್ಪೆಮರದ ನೆರಳಿನಲ್ಲಿ, ನಮ್ಮ ಮನೆಯ ಜಗಲಿಯಲ್ಲಿ, ಕೋಣೆ ಒಳಗೆ ಬೀಳುತ್ತಿದ್ದ ಬಿಸಿಲು ಕೋಲುಗಳ ಬೆಳಕಿನಲ್ಲಿ ಓದುತ್ತಿದ್ದೆ. ನಮ್ಮ ಊರಿನ ಬಾಬಣ್ಣ (ಬಾಬು ರಾಜೇಂದ್ರಪ್ರಸಾದ್) ಅವರ ಸಹೋದರ ನಾಗಣ್ಣ ಎಡಬಿಡದೆ ಆ ಪುಸ್ತಕ ಹೊತ್ತು ಹೊಲಕ್ಕೂ ಮನೆಗೂ ತಿರುಗುತ್ತಿದ್ದುದನ್ನು ಕಂಡು ನನಗೆ ಹುಚ್ಚು ಹಿಡಿದಿರಬಹುದು ಅಥವಾ ಸದ್ಯದಲ್ಲೇ ಹಿಡಿಯುತ್ತೆ ಎಂದು ಹೇಳುತ್ತಿದ್ದರು! ಆಮೇಲೆ ಹಲವು ಬಾರಿ ಆ ಕಾದಂಬರಿಯನ್ನು ಓದಿದೆನಾದರೂ ನನ್ನ ಮೊದಲ ಓದೇ ನೆನಪಿನಲ್ಲಿ ಭದ್ರವಾಗಿದೆ. ಅದಕ್ಕೆ ಕಾರಣ ಮಲೆನಾಡಿನ ಭಾಷೆ ನನಗೆ ಅಪರಿಚಿತವಿತ್ತು. ಆದರೆ ಅದು ಒಂದು ಅವರ್ಣನೀಯ ಸೆಳೆತದಲ್ಲಿ ಬಂಧಿಸಿತ್ತು. ಅರ್ಥವಾಗದಿದ್ದರೂ ಬಯಲು ಸೀಮೆಯ ಬಾಲಕನೊಬ್ಬನನ್ನು ದಟ್ಟ ಕಾಡು, ಮಳೆ, ನದಿ ಹೊಳೆಗಳು ಹಿಡಿದಿಟ್ಟಿದ್ದವು. ಅರ್ಥಮಾಡಿಕೊಳ್ಳಲು ಸಖತ್ ಸೈಕಲ್ ಹೊಡೆಯುತ್ತಿದ್ದೆ! ನಮ್ಮೂರ ಸೊಸೈಟಿಯ ಪೆಟ್ಟಿಗೆಯಲ್ಲಿ ಇನ್ನೂ ಕೆಲವು ಪುಸ್ತಕಗಳಿದ್ದವು. ನನಗೆ ಇದೊಂದನ್ನೇ ಪೂರ್ತಿ ಮುಗಿಸಲು ಆಗಲೇ ಇಲ್ಲ! ಮೂರ್ತಿಯು ಈ ಪುಸ್ತಕದಲ್ಲಿ ತಿಳಿಸಿರುವಂತೆ ನಮ್ಮೂರಿನ ಡಾ. ಶ್ರೀಕರಸ್ವಾಮಿ ಆರಾಧ್ಯರು ಆ ಸವಲತ್ತನ್ನು ಉಪಯೋಗಿಸಿಕೊಂಡಿದ್ದಾರೆ.
ಲೇಖಕ ಡಾ. ಎ ಓ ಎನ್ ಮೂರ್ತಿಯು ಅನೇಕ ಮಾಹಿತಿಗಳನ್ನು ನೀಡಿದ್ದಾರೆ. ಉದ್ಯೋಗಾರ್ಥಿಗಳಾಗಿ ಬೇರೆ ಬೇರೆ ಊರುಗಳಲ್ಲಿರುವವರು, ಬೇರೆ ಬೇರೆ ಕ್ಷೇತ್ರಗಳ ಸಾಧಕರ ಪರಿಚಯ ಹೀಗೆ. ಊರಲ್ಲಿ ನಡೆಯುತ್ತಿದ್ದ ಹೊರಬೀಡು, ಕುಂದಲಿ ಬೇಟೆ, ಜಾತ್ರೆ, ಕೃಷಿ, ಮಳೆ ಸಂಬಂಧಿ ನಂಬಿಕೆ, ಆಚರಣೆಗಳು, ಆಧುನಿಕ ಆಡಳಿತಾಂಗದ ಮಾಹಿತಿ, ಸವಲತ್ತುಗಳು ಮುಂತಾದ ಎಲ್ಲ ಆಯಾಮಗಳಲ್ಲಿ ಊರನ್ನು ಕಟ್ಟಿಕೊಟ್ಟಿದ್ದಾರೆ. ಒಂದು ಊರಿನ ಸ್ಥಳೀಯ ಅಧ್ಯಯನವೆಂದರೆ ಆ ಊರಿನ ಇತಿಹಾಸವನ್ನಷ್ಟೇ ಅರ್ಥೈಸುವುದಲ್ಲ. ಹಾಗೆ ಮಾಡಿದರೆ ಅದು ಸ್ವಯಂ ಪೂರ್ಣತೆಯನ್ನು ಪಡೆಯುವುದಿಲ್ಲ. ಯಾವುದೇ ಊರು, ಹಳ್ಳಿ ಅದರ ಸುತ್ತಮುತ್ತಲ ಇತರ ಊರು ಹಳ್ಳಿಗಳ ಜೊತೆಗಿನ ನಾನಾ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ದೈವೀಕ ಆಚರಣೆ, ಸಹಕಾರ ಸಂಬಂಧಗಳ ಜೊತೆ ಜೊತೆಯಲ್ಲಿಯೇ ಅಸ್ತಿತ್ವದಲ್ಲಿರುತ್ತದೆ. ಅಂಥ ಎಚ್ಚರವನ್ನು ಪಡೆದ ಅಧ್ಯಯನ ಇದಾಗಿರುವುದರ ಸ್ಪಷ್ಟ ಸೂಚನೆಗಳನ್ನು ಇಲ್ಲಿ ಕಾಣುತ್ತೇವೆ. ಈ ಕೃತಿಯಲ್ಲಿ ಅರೆಕೊರೆಗಳಿದ್ದರೂ ಊರಿನ ಮತ್ತು ಊರ ಹುಡುಗನ ಬಗ್ಗೆ ಇರುವ ಪ್ರೀತಿ, ಅಭಿಮಾನ ಈ ನನ್ನ ಬರಹದಲ್ಲಿದೆ. ಮೊದಲೇ ಹೇಳಿದಂತ ನನ್ನ ಆತ್ಮವೃತ್ತಾಂತದ ಈ ತುಣುಕುಗಳು ಡಾ. ಎ ಓ ನರಸಿಂಹಮೂರ್ತಿಯವರ ಪುಸ್ತಕದೊಡನೆ ತಳುಕು ಹಾಕಿಕೊಳ್ಳುತ್ತಿರುವುದು ನನ್ನಲ್ಲಿ ಸೋಜಿಗವನ್ನು ಉಂಟುಮಾಡಿದೆ. ಈ ತಳುಕು ಇನ್ನಷ್ಟು ಬೆಸೆದುಕೊಳ್ಳಲಿ. ಊರೊಳಗಿನ ಓದುಗರನ್ನು ದಾಟಿ ಪುಸ್ತಕ ಊರಾಚೆಯ ಓದುಗರನ್ನೂ ತಲುಪಲಿ.
- ಅಗ್ರಹಾರ ಕೃಷ್ಣಮೂರ್ತಿ
"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆ...
“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...
“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...
©2025 Book Brahma Private Limited.