“ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸಲ್ಲಿಸಿದ್ದಾರೆ. ಗೆಳೆಯರಾಗಿ ಜೊತೆಗಿದ್ದವರ ಬಗ್ಗೆ ಪ್ರೀತಿತುಂಬಿದ ನುಡಿ ಸ್ಮರಣಿಕೆ ಸಲ್ಲಿಸಿದ್ದಾರೆ,” ಎನ್ನುತ್ತಾರೆ ಡಾ ಬಂಜಗೆರೆ ಜಯಪ್ರಕಾಶ್ ಅವರು ಅಗ್ರಹಾರ ಕೃಷ್ಣಮೂರ್ತಿ ಅವರ “ನಾಡವರ್ಗಳ್” ಕೃತಿಗೆ ಬರೆದ ನಲ್ನುಡಿ.
ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದ್ದ 'ನೀರು ಮತ್ತು ಪ್ರೀತಿ' ಕಾದಂಬರಿ ಓದಿದ ಕಾಲದಿಂದಲೂ ಅಗ್ರಹಾರ ಕೃಷ್ಣಮೂರ್ತಿ ನನ್ನ ಪ್ರೀತಿಯ ಲೇಖಕರಲ್ಲೊಬ್ಬರಾಗಿ ಉಳಿದಿದ್ದಾರೆ. ಅವರು ಬರೆದಿರುವ 27 ವ್ಯಕ್ತಿಚಿತ್ರಗಳಿರುವ ಈ ಕೃತಿಗೆ ನಾಲ್ಕು ಮಾತು ಬರೆಯುವಾಗಲೂ ಅದೇ ಪ್ರೀತಿಯ ಭಾವ ನನ್ನೊಳಗೆ ಉಂಟಾಗುತ್ತಿದೆ. ಕಥನ ಶಕ್ತಿ ಇರುವ ಲೇಖಕರು ಯಾವುದನ್ನು ಬರೆದರೂ ರಸವತ್ತಾಗಿ ಬರೆಯಬಲ್ಲರು ಎಂಬುದಕ್ಕೆ ಈ ಕೃತಿಯೊಳಗಿರುವ ಹಲವಾರು ಬರಹಗಳು ನಿದರ್ಶನವಾಗಿವೆ.
ಕೃಷ್ಣಮೂರ್ತಿಯವರು ಸೂಕ್ಷ್ಮಗ್ರಹಿಕೆಯ ಲೇಖಕರು ಮಾತ್ರವಲ್ಲ ಸೂಕ್ಷ್ಮ ಮನಸ್ಥಿತಿಯ ವ್ಯಕ್ತಿತ್ವದವರೂ ಕೂಡ. ಕಹಿ ಪ್ರಸಂಗಗಳನ್ನು ಬರೆಯುವಾಗಲೂ ಅನಗತ್ಯ ಕಟುಭಾವನೆಯನ್ನು ವ್ಯಕ್ತಪಡಿಸದಷ್ಟು ಸಹೃದಯಿ. ಈ ಕೃತಿಯಲ್ಲಿ ಅವರು ತಮ್ಮ ಸಮಕಾಲೀನ ಸಂದರ್ಭದ, ಓರಗೆಯಲ್ಲಿ ಅವರಿಗೆ ಹಿರಿಯರಾದ, ಪ್ರಭಾವಿಸಿದ, ಮಾರ್ಗದರ್ಶಿಸಿದ, ನೆರವು ನೀಡಿದ ಹಲವಾರು ಖ್ಯಾತನಾಮರ ಜೊತೆಗಿನ ಒಡನಾಟದ ನೆನಪುಗಳನ್ನು ಕುರಿತು ಬರೆದಿದ್ದಾರೆ. ಅವರ ಬರವಣಿಗೆಯಲ್ಲಿ ಉಡಾಫೆಯ ಮಾತುಗಳಿಲ್ಲ ಹಾಗೆಯೇ ಉತ್ತೇಕ್ಷಿತ ಹೊಗಳಿಕೆಗಳೂ ಇಲ್ಲ.
ರೀಡರ್ ಹುದ್ದೆಯ ಅಭ್ಯರ್ಥಿಯೊಬ್ಬರ ಪರವಾಗಿ ಹಾ. ಮಾ. ನಾಯಕರು ಶಿಫಾರಸ್ಸು ಮಾಡುವಾಗ ಕೃಷ್ಣಮೂರ್ತಿಯವರ ಪರಿಚಯದ ನೆರವನ್ನು ಪಡೆದುಕೊಳ್ಳುವ ಸನ್ನಿವೇಶವೊಂದು ಇದರಲ್ಲಿ ಬರುತ್ತದೆ. ಆ ಅಭ್ಯರ್ಥಿ ಯಾರಿರಬಹುದೆಂಬ ಸೂಚನೆ ಓದುಗರಿಗೆ ಕೊಡಬಯಸುವಾಗ ಕೃಷ್ಣಮೂರ್ತಿಯವರು "ಆ ಅಭ್ಯರ್ಥಿಯ ಹೆಸರನ್ನು ಮರತೇನೆಂದರೆ ಮರೆಯಲಿ ಹ್ಯಾಂಗ" ಎಂದು ಹೇಳಿ ಮುಗಿಸುತ್ತಾರೆ. ಯಾರನ್ನಾದರೂ ಟೀಕಿಸುವುದಾಗಲಿ, ಹಂಗಿಸುವುದಾಗಲೀ ಇಲ್ಲಿನ ಬರಹಗಳ ಗುರಿಯಾಗಿಲ್ಲ. ಒಡನಾಟದ ಅನುಭವವನ್ನು ಮನಮುಟ್ಟುವಂತೆ ಹೇಳುವುದು, ಸಾಧ್ಯವಾದಷ್ಟು ಮನದುಂಬಿ ನೆರವನ್ನು ನೆನೆಯುವುದು ಅಗ್ರಹಾರ ಅವರ ಬರವಣಿಗೆಯ ರೀತಿಯಾಗಿದೆ ಇಲ್ಲಿ.
ಇದರಲ್ಲಿ ಚಿತ್ರಣಗೊಂಡಿರುವ ಹಲವು ವ್ಯಕ್ತಿತ್ವಗಳು ನನಗೂ ಪರಿಚಿತವಾದುವುಗಳೇ. ಹಾಗೆ ನೋಡಿದರೆ ಕೃಷ್ಣಮೂರ್ತಿಯವರ ಭಾಗ್ಯ ದೊಡ್ಡದು. ನಮ್ಮ ಸಮಕಾಲೀನ ಸಂದರ್ಭದ ಎಷ್ಟೊಂದು ಮುತ್ತುರತ್ನಗಳನ್ನು ಅವರು ಹತ್ತಿರದಿಂದ ಕಂಡಿದ್ದಾರೆ. ಜೊತೆಗೆ ಉಂಡುತಿಂದು ಒಡನಾಡಿದ್ದಾರೆ. ಅವರೆಲ್ಲರ ಪ್ರೇರಣೆಗಳ ಜೊತೆ ಬದುಕನ್ನು ಕಟ್ಟಿಕೊಂಡಿದ್ದಾರೆ. ವ್ಯಂಗ್ಯ-ಕುಹಕಗಳ ಸೋಂಕಿಲ್ಲದಂತೆ ತಾವು ನಡೆದುಬಂದ ಹಾದಿಯಲ್ಲಿ ದಾರಿದೀಪಗಳಂತಿದ್ದ ಗುರು-ಹಿರಿಯರಿಗೆ ನುಡಿಗೌರವ ಸಲ್ಲಿಸಿದ್ದಾರೆ. ಗೆಳೆಯರಾಗಿ ಜೊತೆಗಿದ್ದವರ ಬಗ್ಗೆ ಪ್ರೀತಿತುಂಬಿದ ನುಡಿ ಸ್ಮರಣಿಕೆ ಸಲ್ಲಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ, ಡಿ ಎಸ್ ನಾಗಭೂಷಣ, ಹಾಮಾನಾ, ಜಿ ಎಸ್ ಎಸ್, ಕೆ ಜಿ ನಾಗರಾಜಪ್ಪ, ಕೆ ವಿ ತಿರುಮಲೇಶ್, ಸಿದ್ದಲಿಂಗಯ್ಯ, ಕೆ ಮರುಳಸಿದ್ದಪ್ಪ, ಸಚ್ಚಿದಾನಂದನ್, ಪ್ರಭುಶಂಕರ್, ಪೂರ್ಣಚಂದ್ರ ತೇಜಸ್ವಿ, ಜಿ ಕೆ ಗೋವಿಂದರಾವ್, ಎಂಡಿಎನ್- ಇವರೆಲ್ಲ ನಮ್ಮ ಜೀವಿತಕಾಲದಲ್ಲೇ ಇರುವವರು ಹಾಗೂ ಇದ್ದು ಹೋದವರು. ಇವರನ್ನು ಮತ್ತೊಮ್ಮೆ ತಮ್ಮ ಅನುಭವ ಕಥನದ ಮೂಲಕ, ನೆನಪುಗಳ ಮೂಲಕ ಅಗ್ರಹಾರ ಕೃಷ್ಣಮೂರ್ತಿ ಪ್ರೀತಿಪೂರ್ವಕವಾಗಿ, ನಿಜಕ್ಕೆ ಹತ್ತಿರವಾಗಿ ಕಟ್ಟಿಕೊಟ್ಟಿದ್ದಾರೆ. ಕೃಷ್ಣಮೂರ್ತಿಯವರ ಬರವಣಿಗೆಯ ಪರಿಣಾಮ ಎಷ್ಟು ಚೆನ್ನಾಗಿದೆಯೆಂದರೆ, ಅವರೆಲ್ಲರ ಜೊತೆ ನಾವೂ ಈಗ ಒಡನಾಡುತ್ತಿದ್ದೇವೊ ಏನೋ ಎನಿಸುವಂತಿದೆ. ನಾವೂ ಹಾಗೆ ಒಡನಾಡಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಹಂಬಲ ಹುಟ್ಟಿಸುವಂತೆಯೂ ಇದೆ.
ಸಮಕಾಲೀನರ ಬಗ್ಗೆ ಬರೆಯುವಾಗ ಇರಬೇಕಾದ ವಿಮರ್ಶಾತ್ಮಕ ಅಂತರವನ್ನುಳಿಸಿಕೊಂಡೂ, ಮೆಚ್ಚುಗೆಯನ್ನು ದಾಖಲಿಸುವುದೆಂಬುದು ಕಸರತ್ತಿನ ಕೆಲಸ. ಜೆಟ್ಟಿಅಗ್ರಹಾರದಿಂದ ಬಂದು ನಾಲೈದು ದಶಕಗಳ ಕಾಲ ಸಾಹಿತ್ಯದಲ್ಲಿ ಸತತವಾಗಿ ಸಾಮು ಮಾಡಿರುವ ಕೃಷ್ಣಮೂರ್ತಿಯವರ ಬರವಣಿಗೆಯ ಶಕ್ತಿಗೆ ಈ ಕುಸ್ತಿಯೆಂಬುದು ಬಹಳ ಸಲೀಸಾದ ಸವಾಲು. ಯಾಕೆಂದರೆ ಅವರು ಪೂರ್ವಗ್ರಹಗಳಿಲ್ಲದೆ ಬರೆದಿದ್ದಾರಾದ್ದರಿಂದ ಇವುಗಳಲ್ಲೆಲ್ಲಾ ಪ್ರೀತಿಯ ನೀರೇ ತುಂಬಿ ಹರಿದಿದೆ.
- ಡಾ ಬಂಜಗೆರೆ ಜಯಪ್ರಕಾಶ್
“ಈ ಕೃತಿ ಬರೀ ಕೃತಿಗಳ ವಿಮರ್ಶೆಯಾಗಿ ರೂಪಗೊಂಡಿಲ್ಲ. ಸಾಹಿತ್ಯ- ಸಂಸ್ಕೃತಿ ಕುರಿತ ಸಾಂಸ್ಕೃತಿಕ ಅಧ್ಯಯನವಾಗಿ ಪರಿಣ...
“ಒಟ್ಟಾರೆ ಈ ಕೃತಿ ಕೆಲವೆಡೆ ತಲೆ ಹರಟೆ ಕಷಾಯವಾಗಿಯೂ ಕಾಡಿ, ನಿಮ್ಮ ತಲೆ ತಿನ್ನುವಂತಾದರೆ ನಾನು ತಲೆ ಕೆಡಿಸಿಕೊಂಡು...
“ಕೃತಿಯು ನನ್ನ ನಾಲ್ಕು ದಶಕಗಳ ಬರೆವಣಿಗೆ ಮತ್ತು ಚಿಂತನೆಗೆ ಪ್ರೇರಕರಾದ ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ...
©2025 Book Brahma Private Limited.