Date: 25-09-2023
Location: ಬೆಂಗಳೂರು
''ಬಡತನ, ಹಸಿವು, ಅನಕ್ಷರತೆ ಸ್ವಾನುಭಾವವಾದ ಮೇಲೆ ಅದನ್ನು ಹೋಗಲಾಡಿಸಲು ಪ್ರಯತ್ನಿಸುವುದು ಒಳ್ಳೆಯ ಕೆಲಸ ಆದರೆ ಬಹು ಸವಾಲಿನ ಕೆಲಸ. ಸ್ವತಃ ಬಡತನವಿದ್ದರೂ ಶಿಕ್ಷಣವಂಚಿತರಿಗೆ ಶಿಕ್ಷಣ ಕೊಡುವ ಪುಣ್ಯದ ಕೆಲಸ ಮಾಡುತ್ತಿರುವ ಕುಷ್ಟಗಿ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ನವಲಹಳ್ಳಿಯ ಪುಸ್ತಕ ಪ್ರೇಮಿ ಅಂತಿಮ ವರ್ಷದ ಪದವಿ ಓದುತ್ತಿರುವ ರವಿ ನವಲಹಳ್ಳಿ ಅವರ ಅಂಬೇಡ್ಕರ್ ಅರಿವಿನ ಶಾಲೆ ಪ್ರಾರಂಭವಾದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,'' ಎನ್ನುತ್ತಾರೆ ಜ್ಯೋತಿ ಎಸ್. ಅವರು ತಮ್ಮ ‘‘ಹೆಜ್ಜೆಯ ಜಾಡು ಹಿಡಿದು” ಅಂಕಣದಲ್ಲಿ ರವಿ ನವಲಹಳ್ಳಿ ಕುರಿತು ಹೀಗೆ ಕಟ್ಟಿಕೊಟ್ಟಿದ್ದಾರೆ.
ಅಪ್ಪ ರಾಮಣ್ಣ ಅಮ್ಮ ಲಕ್ಷ್ಮಿದೇವಿ. ಮನೆಯಲ್ಲಿ ಹೇಳ ತೀರದ ಬಡತನ. ಮನೆಯಲ್ಲಿ ಎಲ್ಲರೂ ಅನಕ್ಷರಸ್ಥರು. ತಾತನನ್ನು ಬಿಟ್ಟರೆ ಬೇರೆ ಯಾರೂ ಓದಿಲ್ಲ ನಾವು ಮೊಮ್ಮಕ್ಕಳು ಅಷ್ಟೇ ಅದರಲ್ಲೂ ನಾನು ನನ್ನ ತಂಗಿ ಅಷ್ಟೇ ಡಿಗ್ರಿವರೆಗೂ ಓದುತ್ತಿರುವುದು. ಒಂದನೇ ತರಗತಿಯಿಂದ ಸಿಂಧನೂರಿನಲ್ಲಿ ನಾಲ್ಕನೇ ತರಗತಿಯವರೆಗೆ ಓದಲು ಬರುತ್ತಿರಲಿಲ್ಲ. ಏನೇನೂ ಗೊತ್ತಿಲ್ಲ ಓದಿನ ಬಗ್ಗೆ ಅಸಡ್ಡೆ. ಶಾಲೆ ಅಂದರೇನೇ ಇಷ್ಟ ಇರಲಿಲ್ಲ. ದುರ್ಗಮ್ಮನ ಗುಡಿ ಪಲ್ಲಕ್ಕಿ ಹಿಂದೆ ಹೋಗೋದು, ತೋಟಕ್ಕೆ ಹೋಗೋದು, ಕವಳೆ ಹಣ್ಣು ತಿನ್ನೋಕೆ ಹೋಗೋದು, ಈ ತರ ಬದುಕಿ ಅಕ್ಷರದ ಬೆಲೆ ಗೊತ್ತಾಗಲಿಲ್ಲ. ನಂತರ ನನ್ನ ತಂದೆ ಇಲ್ಲೇ ಇದ್ದರೆ ನೀನು ಓದಲ್ಲ ಅಂತ ನವಲಹಳ್ಳಿಯಿಂದ ಕರೆದುಕೊಂಡು ಹೋಗಿ ಕುರಕುಂದದಲ್ಲಿ ನಮ್ಮ ಮಾವನ ಮನೆಗೆ ಬಿಟ್ಟರು. ನನಗೆ ಏನೂ ಓದಲು ಬರಲ್ಲ ಅಂತ ಗೊತ್ತಾದಾಗ ಮತ್ತೆ ನನ್ನನ್ನು ಒಂದನೇ ತರಗತಿಗೆ ಸೇರಿಸಿದರು. ಹತ್ತು ವರ್ಷದವನಿದ್ದಾಗ ನಾನು ಒಂದನೇ ತರಗತಿಗೆ ಹೋಗುತ್ತಿದ್ದೆ. ಅಲ್ಲಿದ್ದ ನಮ್ಮ ಸೋದರ ಮಾವನವರು ಹಾಗೂ ಸುತ್ತ ಮುತ್ತಲಿನವರೆಲ್ಲ ಓದಿದವರಾಗಿದ್ದರು. ಆಗ ಓದಿದ್ರೆ ಏನ್ ಬೆಲೆ ಸಿಗತ್ತೆ, ಏನೆಲ್ಲಾ ಮರ್ಯಾದೆ ಸಿಗತ್ತೆ ಅನ್ನೋದು ಗೊತ್ತಾಯಿತು. ಅದು ನನ್ನ ಮನಸ್ಸಿನಲ್ಲೇ ಅಸಾಧಾರಣ ಪ್ರಭಾವ ಬೀರಿ ಬರ್ತಾ ಬರ್ತಾ ಓದಿನ ಬಗ್ಗೆ ಒಲವನ್ನು ಬೆಳೆಸಿಕೊಂಡೆ. ಏಳನೇ ತರಗತಿಗೆ ಬರುವ ಹೊತ್ತಿಗೆ ಅಂಬೇಡ್ಕರ್, ಗಾಂಧೀಜಿ, ಜ್ಯೋತಿ ಬಾ ಫುಲೆ, ರಾಮ್ ದಾಸ್, ಭಗತ್ ಸಿಂಗ್ ಅವರ ಜೀವನ ಚರಿತ್ರೆ ನನಗೆ ಸ್ಫೂರ್ತಿಯಾಗಿತ್ತು. ಅಲ್ಲಿಂದ ಪುಸ್ತಕ ಓದುವ ಹವ್ಯಾಸ ಹೆಚ್ಚಾಯ್ತು. ಆಗೆಲ್ಲ ಹತ್ತು ರೂಪಾಯಿ ಕೊಟ್ಟರೆ ಒಂದು ಚಿಕ್ಕ ಪುಸ್ತಕ ಬರುತ್ತಿತ್ತು. ನನಗೆ ತಿಂಡಿ ತಿನ್ನಲು ಅಂತ ಕೊಟ್ಟ ದುಡ್ಡನ್ನು ಉಳಿಸಿ ಪುಸ್ತಕ ತಗಳ್ತಿದ್ದೆ. ಏಳನೇ ತರಗತಿಯ ಹೊತ್ತಿಗಾಗಲೇ ಸುಮಾರು 300-400 ಪುಸ್ತಕಗಳನ್ನು ಸಂಗ್ರಹಿಸಿದ್ದೆ. ದಿನಪತ್ರಿಕೆಯಲ್ಲಿ ಬರುವ ವಿಜ್ಞಾನ, ವಿಸ್ಮಯ, ಸಮಾಜದ ಬಗ್ಗೆ ಬರುವ ವಿಶೇಷ ಮಾಹಿತಿಗಳನ್ನು ಯಾವಾಗಲಾದರೂ ಖಾಲಿ ಕೂತಾಗ ಓದಲು ಬರತ್ತೆ ಅಂತ ಕಟ್ ಮಾಡಿ ಪುಸ್ತಕಗಳಲ್ಲಿ ಅಂಟಿಸಿಕೊಳ್ಳುತ್ತಿದ್ದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಯಾರೂ ಏನು ಬರೆದುಕೊಡುತ್ತಿರಲಿಲ್ಲ ಆದರೂ ಭಾಷಣ ಮಾಡುತ್ತಿದ್ದೆ. ಆಗೆಲ್ಲ ಎಷ್ಟು ಚೆನ್ನಾಗಿ ಮಾತಾಡ್ತೀಯಾ ಅಂತ ಚಪ್ಪಾಳೆ ಹಾಕಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಇದೆಲ್ಲಾ ಸಾಧ್ಯ ಆಗಿದ್ದು ಪುಸ್ತಕದಿಂದ. ಪುಸ್ತಕ ನನಗೆ ಇಷ್ಟೊಂದು ಗೌರವ ತಂದುಕೊಡ್ತಲ್ಲ, ನನ್ನಲ್ಲಿ ಇಷ್ಟೊಂದು ಆತ್ಮ ವಿಶ್ವಾಸ ಮೂಡಿಸಿದೆಯಲ್ಲ ಅಂತ ಕುವೆಂಪು, ಅಂಬೇಡ್ಕರ್, ಪೆರಿಯಾರ್, ಗುರುನಾನಕ್, ಸಾವಿತ್ರಿಬಾಯಿ ಫುಲೆ ಇವರನ್ನೆಲ್ಲ ಓದಲು ಪ್ರಾರಂಭಿಸಿದೆ.
ಅಕ್ಕ ಪಕ್ಕದವರೆಲ್ಲ ಬೈಯಲು ಶುರು ಮಾಡಿದ್ರು. ಈ ಪುಸ್ತಕಗಳನ್ನು ಓದುವ ಬದಲು ಯಾವುದಾದರು ಸ್ಪರ್ಧಾತ್ಮಕ ಪರೀಕ್ಷೆಗೆ ಓದಿದರೆ ಕೆಲಸನಾದರೂ ಸಿಗತ್ತೆ ಅಂತ. ಓದಬೇಕು, ಎಲ್ಲರಿಗೂ ಶಿಕ್ಷಣ ಸಿಗಬೇಕು ಅನ್ನೋದಷ್ಟೇ ನನ್ನ ಕನಸಾಗಿತ್ತು. ಬುದ್ಧನ ಬೋಧನೆ, ಬಸವಣ್ಣನ ವಚನ, ಅಂಬೇಡ್ಕರ್ ಅವರ ಮಾರ್ಗ ನನ್ನಲ್ಲಿ ಅತೀ ಹೆಚ್ಚು ಪರಿಣಾಮ ಬೀರಿದವು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 86% ಬಂತು. ಪುಸ್ತಕದ ಮೇಲೆ ಒಲವು ಹೆಚ್ಚಾಗಿದ್ದರಿಂದ ಪಠ್ಯ ಪುಸ್ತಕಗಳನ್ನು ಓದುವುದು ಕಡಿಮೆ ಮಾಡಿ ಕಥೆ, ಕಾದಂಬರಿ, ಸಣ್ಣ ಕಥೆಗಳು, ಜೀವನಾಧಾರಿತ ಹೀಗೆ ಬೇರೆ ಪುಸ್ತಕಗಳನ್ನು ಓದುತ್ತಿದ್ದೆ ಹಾಗಾಗಿ ಪಿ. ಯು. ಸಿ.ಯಲ್ಲಿ 63% ಅಂಕಗಳು ಬಂದವು. ಪಿ. ಯು. ಸಿ ಮುಗಿಯುವ ಹೊತ್ತಿಗೆ ಸರಿ ಸುಮಾರು ನಾಲ್ಕುನೂರು ಪುಸ್ತಕಗಳನ್ನು ಓದಿ ಮುಗಿಸಿದ್ದೆ. ಸ್ಕಾಲರ್ ಶಿಪ್ ಹಣವನ್ನು, ಆಗಾಗ ಅಮ್ಮ ಅಪ್ಪ ಕಾಲೇಜಿಗೆ ಹೋಗುವಾಗ ಮಧ್ಯಾಹ್ನ ಊಟಕ್ಕೆ ಅಂತ ಕೊಡುತ್ತಿದ್ದ ಹಣವನ್ನು ಉಳಿಸಿ ನೆಲಗಣಿಯಲ್ಲಿ ಬಚ್ಚಿಡುತ್ತಿದ್ದೆ. ಮನೆ ದೇವರು ಹುಲಿಗೆಮ್ಮನಿಗೆ ಮುಡುಪಿನ ರೊಕ್ಕ ಅಂತ ಅಮ್ಮ ಹಣ ಕಟ್ಟಿಡುತ್ತಿದ್ದಲು. ತುಂಬ ಸಲ ಆ ರೊಕ್ಕವನ್ನು ಕದ್ದು ಪುಸ್ತಕ ತಗೊಳ್ತಿದ್ದೆ. ನಮ್ಮ ಮಾವ ಈಶ್ವರ್ ಅಲಗಿ ನಾನು ಓದೋದಕ್ಕೆ ಬಹಳ ಸಹಾಯ ಮಾಡಿದ್ರು. ಅವರ ಮನೆಯಲ್ಲೇ ಇರಿಸಿಕೊಂಡು ನೀನು ಓದು ಅಂತ ನಾನು ಯಾವ ಪುಸ್ತಕ ಕೇಳಿದ್ರೂ ತಂದುಕೊಡುತ್ತಿದ್ದರು. ಆಗಲೇ ಕವಿತೆ, ಪ್ರಬಂಧ, ಕಥೆಗಳನ್ನು ಪತ್ರಿಕೆಗಳಿಗೆ ಬರೆದು ಕಳುಹಿಸುತ್ತಿದ್ದೆ. ನಾನು ಮತ್ತು ಪುಸ್ತಕ ನನ್ನ ರೂಮ್ ಹೀಗೆ ಡಿಗ್ರಿವರೆಗೂ ಬಂದಮೇಲೆ ಇತಿಹಾಸ, ಶಾಸನಗಳ ಮೇಲೆ ಒಲವು ಬಂತು. ಏನಾದರೂ ಬರೀಬೇಕು, ಸಾಧನೆ ಮಾಡಬೇಕು ಎಂಬ ವಿಚಾರ ಆವರಿಸಿತು. ಶಾಸನಗಳನ್ನು ಓದಬೇಕೆಂಬ ಆಸೆಯಾಯ್ತು. ಆಗಿನ ಕಾಲದಲ್ಲಿ ಕದಂಬರ ಕಾಲದ ವರ್ಣಮಾಲೆಗೆ ಏನಂತಿದ್ರು, ಅಶೋಕನ ಕಾಲದಲ್ಲಿ, ಚಾಲುಕ್ಯ, ಬಾದಾಮಿ ಹೊಯ್ಸಳರು, ಮಯೂರ, ಪಲ್ಲವರು, ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಯಾವ ಯಾವ ಅಕ್ಷರಗಳು ಹೇಗೆ ಬದಲಾದವು ಎನ್ನುವುದನ್ನು ಓದುತ್ತಾ ಓದುತ್ತಾ ಪ್ರಾಕ್ಟೀಸ್ ಮಾಡುತ್ತ ಬಂದೆ. ಕರ್ನಾಟಕದ ಇತಿಹಾಸದ ಎಲ್ಲ ಪುಸ್ತಕಗಳನ್ನು ತರಿಸಿಕೊಂಡೆ. ಅಭ್ಯಾಸ ಮಾಡಲು ಪ್ರಾರಂಭಿಸಿದೆ. ಆಗಿನ ಕಾಲದ ರಾಜರು ಹೇಗೆ ಆಳ್ವಿಕೆಯನ್ನು ಮಾಡುತ್ತಿದ್ದರು ಎನ್ನುವುದನ್ನು ಅಧ್ಯಯನ ಮಾಡ್ತಿದ್ದೆ.
ನಾನು ಏನೇನು ಓದಿದ್ನೋ ಆ ಸ್ಥಳಗಳನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಕರ್ನಾಟಕದ ಮುದಗಲ್ ಕೋಟೆ, ಬಾದಾಮಿ, ಬನಶಂಕರಿ, ಚಿತ್ರದುರ್ಗ, ಕಾನೂರು, ಕುಮಟ, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾ, ಬಿಜಾಪುರ ಸುಲ್ತಾನರು, ನಿಜಾಮರು ಹೀಗೆ ಕರ್ನಾಟಕದ ಎಲ್ಲಾ ಭಾಗಗಳನ್ನು ಸುತ್ತಾಡುತ್ತಾ ಕರ್ನಾಟಕವನ್ನು ಎರಡು ಸಲ ಸುತ್ತಾಡಿದೆ. ಸುತ್ತಾಟಕ್ಕೆಲ್ಲ ಹಣ ಬೇಕಲ್ಲ ಅದಕ್ಕೆ ಗೊಬ್ಬರ ಹೊರುವುದು, ಗಿಡಕ್ಕೆ ಔಷಧಿ ಹೊಡೆಯಲು ಹೋಗುವುದು, ಕಳೆ ಕೀಳಲು, ಕಟಾವು ಮಾಡಲು ಹೋಗಿ ಅದರಲ್ಲಿ ಬರುತ್ತಿದ್ದ ಕೂಲಿಯಿಂದ ಒಂದು ಹೊತ್ತು ಊಟ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಹೋಗಬೇಕಾದ ಸ್ಥಳಗಳಿಗೆ ಹೋಗಿಬರುತ್ತಿದ್ದೆ. ಕೆಲವೊಮ್ಮೆ ಸ್ನೇಹಿತರು ನನ್ನ ಗೈಡ್ ಆಗಿ ಎಲ್ಲಾ ಖರ್ಚು ಅವರೆ ಹಾಕಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ನಾನು ಅವರಿಗೆ ಆ ಸ್ಥಳದ ಮಾಹಿತಿ ತಿಳಿಸಿಕೊಡುತ್ತಿದ್ದೆ. ಇತಿಹಾಸದ ಶಾಸನಗಳನ್ನು ಓದಲು ನನಗೆ ಪುಸ್ತಕಗಳೇ ಗುರು. ವಚನ, ತತ್ವಪದಗಳು, ಕನ್ನಡ ಸಾಹಿತ್ಯಗಳನ್ನು ಓದೋದು ಅದರ ಬಗ್ಗೆ ಅಭಿಪ್ರಾಯ, ವಿಮರ್ಶೆ ಬರೆದು ಅದನ್ನು ಫೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡುತ್ತಿದ್ದೆ. ತುಂಬ ಜನರು ಚೆನ್ನಾಗಿ ಬರೀತಿಯಪ್ಪ ಅಂತಿದ್ರು. ಖಾದರ್ ಭಾಷಾ ನಮ್ಮ ಕನ್ನಡ ಮೇಷ್ಟ್ರು. ಶಾಸನಗಳ, ಇತಿಹಾಸ, ಕನ್ನಡ ಪಾಠ ಮಾಡ್ತಾ ಇದ್ದರು. ಅವರೂ ಕೂಡ ನನ್ನ ಶಾಸನಗಳ ಆಸಕ್ತಿ ನೋಡಿ ಖುಷಿಪಡುತ್ತಿದ್ದರು. ಮುದಗಲ್ ಕೋಟೆ, ಕುಮಟ, ಹೊನ್ನಾವರ, ನವಲಹಳ್ಳಿ, ಸಿಂಧನೂರು, ಕುಷ್ಟಗಿ, ಆಂಧ್ರ ಪ್ರದೇಶಗಳಲ್ಲಿ ಶಾಸನಗಳ ಸಂಶೋಧನೆ ಮಾಡಿದ್ದೇನೆ. ಹಂಪಿಗೆಲ್ಲ ಹೋದಾಗ ಇಷ್ಟು ಭವ್ಯವಾಗಿ ಕಟ್ಟಿದ್ದಾರಲ್ಲ ಆಗೆಲ್ಲ ಈಗಿನ ತಂತ್ರಜ್ಞಾನ ಇರಲಿಲ್ಲ. ಆದರೂ ಸಾವಿರಾರು ವರ್ಷಗಳ ಕಾಲ ಇರುವ ಹಾಗೆ ಕಟ್ಟಿದ್ದಾರೆ. ಆಗೆಲ್ಲ ಹೆಚ್ಚು ಉಪಕರಣಗಳು ಇಲ್ಲದೇ ಹೋದರೂ ಇದೆಲ್ಲಾ ಹೇಗ್ ಸಾಧ್ಯ ಆಯ್ತು ಅಂತ ತಿಳಿದುಕೊಳ್ಳುವ ಕುತೂಹಲ ಹೆಚ್ಚುತ್ತಾ ಹೋಯ್ತು.
ಕರ್ನಾಟಕದಲ್ಲಿ ಬರುವ ಎಲ್ಲ ಮನೆತನಗಳನ್ನು ತಿಳಿದುಕೊಳ್ಳಬೇಕು. ಹಾಗಾಗಿ ಹೆಚ್ಚಿನ ಪುಸ್ತಕಗಳನ್ನ ಓದಲು ಶುರುಮಾಡಿದೆ. ಈಗ ಸದ್ಯ ಎಂಟನೂರಕ್ಕೂ ಹೆಚ್ಚು ಪುಸ್ತಕಗಳು ನನ್ನ ಬಳಿ ಇವೆ. ನಂತರ ಅಪ್ಪ ಹೃದಯ ಖಾಯಿಲೆಯಿಂದ ಬಳಲುತ್ತಿದ್ದರು. ಮನೆಯ ಎಲ್ಲ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ಅಮ್ಮ ದುಡಿಯಬೇಕು ಇಲ್ಲ ನಾನು ದುಡಿಯಬೇಕು. ಅದೇ ಸಮಯಕ್ಕೆ ತಮ್ಮನ ಕರುಳನ್ನು ಕುಯ್ದು ಕರುಳು ಆಪರೇಷನ್ ಆಯ್ತು. ಅಲ್ಲಿಗೆ ಇರೋಬರೋ ಹಣವೆಲ್ಲ ಖಾಲಿಯಾಗಿ ಸಾಲ ಮಾಡುವ ಪರಿಸ್ಥಿತಿ ಎದುರಾಯ್ತು. ಅಪ್ಪನಿಗೂ ಅನಾರೋಗ್ಯ ಅವರಿಗೆ ಹೇಳುವ ಹಾಗಿಲ್ಲ. ಬಡತನಕ್ಕಾಗಲಿ, ಸ್ವಾಭಿಮಾನಕ್ಕಾಗಲಿ, ತೃಪ್ತಿಗಾಗಲಿ ಶಿಕ್ಷಣ ಒಂದೇ ಅಸ್ತ್ರ. ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಅಂತ ಮಾಡಿದ್ದಾರೆ. ಆದರೆ ಹೆಸರಿಗೆ ತಕ್ಕಂತೆ ಕಲ್ಯಾಣ ಕಂಡಿಲ್ಲ. ಅವತ್ತು ದುಡಿದು ಅವತ್ತು ತಿನ್ನಬೇಕು ಹಾಗಿದೆ ಇಲ್ಲಿನ ಪರಿಸ್ಥಿತಿ. ಹಾಗಾಗಿ ನಮ್ಮ ತೋಟದಲ್ಲಿ ಹದಿನೈದು ಮಂದಿ ಮಕ್ಕಳಿಗೆ ಪಾಠ ಮಾಡಲು ಪ್ರಾರಂಭಿಸಿದೆ. ಅಂಬೇಡ್ಕರ್ ಅರಿವಿನ ಶಾಲೆ ಅಂತ ಹೆಸರಿಟ್ಟು ಸಂಜೆ ಶಾಲೆ ಅಂತ ಮಾಡಲು ಶುರು ಮಾಡಿದೆ. ಕೂಲಿ ಮಾಡಿ ಬಂದ ಹಣದಿಂದ ಆ ಮಕ್ಕಳಿಗೆ ನೋಟ್ ಬುಕ್ ಕೊಡಿಸಿ ಅವರಲ್ಲಿ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತಿದ್ದೇನೆ. ಕಾಡು ಸಿದ್ದರು, ದಾಸರು, ಅಲೆಮಾರಿ ಸಮುದಾಯಗಳು, ಕೂದಲು, ಪಿನ್ ಮಾರುವವರ ಮಕ್ಕಳು ಸೇರಿದಂತೆ ಈಗ ಎಪ್ಪತ್ತೈದು ಮಕ್ಕಳು ಬರುತ್ತಿದ್ದಾರೆ. ಸಂಜೆ ನಾಲ್ಕರಿಂದ ಏಳು ಗಂಟೆಯವರೆಗೆ ಪಾಠ ಮಾಡುತ್ತೇನೆ. ಅರಿವಿನಿಂದ ಮಾತ್ರ ಶಿಕ್ಷಣ ಸಾಧ್ಯ, ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ತನ್ನನ್ನು ತಾನು ತಿಳಿದುಕೊಂಡವನೆ ಗುರು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು.
ಅತೀ ಹೆಚ್ಚು ಅನಕ್ಷರತೆ, ಬಾಲ್ಯವಿವಾಹ, ಮೂಢ ನಂಬಿಕೆ, ದೇವದಾಸಿ ಪದ್ಧತಿ ಇವೆಲ್ಲದರಿಂದ ಮುಕ್ತವಾಗಿ ಬದುಕುವಂತಾಗಬೇಕು. ನೈತಿಕವಾದ ಶಿಕ್ಷಣದಿಂದ ಮಾತ್ರ ಇದು ಸಾಧ್ಯ ಅಂತ ಈ ಹಾದಿಯಲ್ಲಿ ಸಾಗುತ್ತಿದ್ದೇನೆ. ಅಕ್ಷರವನ್ನಷ್ಟೇ ಅಲ್ಲದೆ, ಅದರ ಹಿಂದಿನ ಸತ್ಯವನ್ನು ಕಲಿಸಬೇಕು. ಅಕ್ಷರವನ್ನು ಮಕ್ಕಳ ಎದೆಯೊಳಗೆ ಬಿತ್ತಿದರೆ ಮುಂದೊಂದು ದಿನ ಮೊಳಕೆಯೊಡೆದು ಚಿಗುರುತ್ತದೆ ಎನ್ನುವ ಬಯಕೆ ಇಪ್ಪತ್ತೈದು ವರ್ಷದ ರವಿ ಅವರದ್ದು. ನಮ್ಮ ಹಿಂದುಳಿದವರ, ಅಲೆಮಾರಿಗಳ ಮಕ್ಕಳು ಕೂದಲು, ಪಿನ್ ಮಾರಲು ಹೋಗದೆ, ಕೂಲಿ ಮಾಡದೆ, ಚೆನ್ನಾಗಿ ಓದಿ ನೌಕರಿ ತೆಗೆದುಕೊಂಡು ಎಸಿ ರೂಮಿನಲ್ಲಿ ಕೂರುವಂತಾಗಬೇಕು. ಕಲಿತ ಋಣವನ್ನು ಕಲಿಸಿಯೇ ತೀರಬೇಕು. ಹಾಗಾಗಿ ನನ್ನಿಂದ ಸಾಧ್ಯವಾದಷ್ಟು ಕಲಿಯುತ್ತ ಕಲಿಸುತ್ತ ಇನ್ನೂ ಹೆಚ್ಚು ಸಂಜೆ ಶಾಲೆಗಳನ್ನು ಮಾಡಬೇಕು. ನಾನು ಈಗಿನ್ನೂ ಅಂತಿಮ ವರ್ಷದ ಬಿ. ಎ. ಓದುತ್ತಿದ್ದೇನೆ. ಮುಂದೆ ಎಂ. ಎ. ಪಿಎಚ್ಡಿ ಮಾಡಬೇಕು ಎಂಬ ಕನಸಿದೆ'.
ಕೃಷಿ ಕೆಲಸ ಮಾಡ್ತಾ, ಕೂಲಿ ಮಾಡ್ತಾ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಮಕ್ಕಳಿಗೆ ಶಿಕ್ಷಣ ಕೊಡಬೇಕು, ಅವರಲ್ಲಿ ಪ್ರಶ್ನೆ ಮಾಡುವ ಮನೋಭಾವನೆ ಬೆಳೆಯಬೇಕು, ಎಲ್ಲರಿಗೂ ಶಿಕ್ಷಣ ದೊರೆಯಬೇಕು ಅಂತ ಹಗಲಿರುಳು ಶ್ರಮಿಸುತ್ತಿರುವ ಈ ಯುವಕನ ಕನಸು ನನಸಾಗಲಿ ಎಂದು ಆಶಿಸೋಣ...
ಯಾರಾದರೂ ಬೋರ್ಡ್, ನೋಟ್ ಬುಕ್, ಪೆನ್, ಪೆನ್ಸಿಲ್ ಏನಾದರೂ ಇತ್ಯಾದಿ ಸಹಾಯ ಮಾಡ ಬಯಸುವವರು ಈ ಯುವಕನೊಂದಿಗೆ ಕೈ ಜೋಡಿಸುವವರು ಸಂಪರ್ಕಿಸಿ..
ರವಿ ನವಲಹಳ್ಳಿ : 8748021252
ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್
ಈ ಅಂಕಣದ ಹಿಂದಿನ ಬರಹಗಳು:
ಬದುಕಿನ ಪರೀಕ್ಷೆಯಲ್ಲಿ ಎಲ್ಲರ ಮನಗೆದ್ದ ಚಿದಾನಂದ
ಮಕ್ಕಳಲ್ಲಿ ಮಕ್ಕಳಾಗಿ ಮಕ್ಕಳ ಜೀವನ ರೂಪಿಸುವಲ್ಲಿ ಸದಾ ತುಡಿದ ಜೀವ ಎಂ. ಆರ್. ಕಮಲ
ಅನುಭವ ಜಗತ್ತಿನ ವಿಸ್ತಾರವೇ ‘ಓದು’: ಎಚ್.ಎಸ್. ಸತ್ಯನಾರಾಯಣ
ವಿಶೇಷ ಚೇತನರೆಂದರೆ ಸೆಣಸಾಟಗಳೊಂದಿಗೆ ಕನಸುಗಳನ್ನು ಕಟ್ಟುವವರು
ಚುಕ್ಕಿಯಿಟ್ಟು ಚಿತ್ರ ಬರೆಯುವ ಮಾಂತ್ರಿಕ..
ಕಥೆಯಲ್ಲ, ಬದುಕಿನ ವ್ಯಥೆ ಇದು...
ಅಬ್ದುಲ್ ಅವರ ಬದುಕಿನ ಏಳುಬೀಳು
ಹಾಡನ್ನೇ ಬದುಕಾಗಿಸಿದ ದಂಪತಿ ತಂಬೂರಿ ಜವರಯ್ಯ ಮತ್ತು ಬೋರಮ್ಮ
ಶ್ರವಣ್ ಹೆಗ್ಗೋಡು ಅವರ ಗೊಂಬೆಗಳ ಜೊತೆಗಿನ ಪಯಣ
ಕಾಡುಜನರ, ಬುಡಕಟ್ಚು ಸಮುದಾಯಗಳ ಏಳಿಗೆಯ ವಿನೂತನ ‘ವನಚೇತನ’
ಸಮುದಾಯ, ಸಂಸ್ಕೃತಿಗಳ ಸಮ್ಮಿಶ್ರಣವೇ ಭಾರತ
ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯಿಂದ ಹೊರಬಂದ ಮಂಜುಳ ಮಾಳ್ಗಿ
ಮಹಾಂತೇಶ್ ಅವರ ಹಾಡುಪಾಡು ಬದುಕಿನ ನೋಟ
ಗುರಿ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮುಟ್ಟುವುದೇ ಮುಖ್ಯ
ರಂಗಭೂಮಿ ನನ್ನ ಬದುಕನ್ನು ಚೆಂದವಾಗಿ ರೂಪಿಸಿದೆ: ಪ್ರಶಾಂತ್ ಕುಮಾರ್
ವಿನು ಮಾವುತ ಅವರ ಗಜಪ್ರೀತಿ
ರಂಗಭೂಮಿಯ ಆರಾಧಕ, ಸಾಹಿತ್ಯ ಪ್ರೇಮಿ ನಂದಕುಮಾರ
ಫೋಟೋಗ್ರಾಫರ್ ಆಗುವ ಕನಸೂ ಇಲ್ಲದೆ ಪ್ರೊಫೆಷನಲ್ ಫೋಟೋಗ್ರಾಫರ್ ಆದ ಬಗೆ
ಪೂರ್ವಜರ ಕಲೆ ಸಂಸ್ಕೃತಿಯ ಆರಾಧಕ ಪಾಲಾಕ್ಷಸ್ವಾಮಿ ಎನ್. ನೆಗಳೂರುಮಠ
ವಿಭಿನ್ನ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕಲೆಗಾರ
ಯೋಗ ತಂದ ಯೋಗ...
ಅಂಗವೈಕಲ್ಯದ ಅಡೆತಡೆಯ ನಡುವೆಯು ಸಾಧನೆಯ ಗರಿ
ಕರ್ನಾಟಕದ ಜನತೆಯಿಂದ ನಡೆಯುತ್ತಿರುವ ಸಂಸ್ಥೆ ನಮ್ಮದು
ನಿರೀಕ್ಷೆಯಿಲ್ಲದೇ ರೋಗಿಗಳ ಸೇವೆ ಮಾಡುವ ‘ಕರುಣಾಶ್ರಯ’
ಓದಿನಲ್ಲಿ ಹಿಂದೆ ಬಿದ್ದರೂ ಜೀವನದಲ್ಲಿ ಮುಂದೆ ಬರಬಹುದು : ಜ್ಯೋತಿ ಎಸ್.
ಅರಸನಿಗೆ ರಾಜ್ಯವಿಲ್ಲ ಅರಮನೆಯಿಲ್ಲ.
ಹಿರಿಯರ ಕಲೆಗೆ ಹೊಸ ವಿನ್ಯಾಸ ನೀಡುವ ಗಜಾನನ ಮರಾಠೆ
ಕಿನ್ನಾಳ ಎಂಬ ಚಂದದ ಕಲೆಯ ಕಲಾವಿದ ಅಶೋಕ್ ಚಿತ್ರಗಾರ್
ಹರಿದ ಬಟ್ಟೆಯಲ್ಲೂ ಚೆಂದನೆಯ ಚಿತ್ತಾರ ಮೂಡಿಸುವ ನೇಕಾರ
ಕಲೆಯನ್ನೇ ಉಸಿರಾಗಿಸಿರುವ ಅಲೆಮಾರಿ ಸಮುದಾಯಗಳ ಚಿತ್ರಣ
ಸಕಲಕಲಾವಲ್ಲಭ ಪಂಚಾಕ್ಷರಿ ಜೀವನ ಗಾಥೆ
ವಿರಳ ವಿಶಿಷ್ಟ ಗಜಲ್ ರಚನೆಕಾರ ‘ವಾಯ್. ಜೆ. ಮಹಿಬೂಬ’
ಕಾಡಿನ ನೆಂಟ ವೆಂಕಟಗಿರಿ ನಾಯಕನ ಚಾರಣ ಪಯಣ
ಗಂಡಿರಲಿ ಹೆಣ್ಣಿರಲಿ ತೃತೀಯ ಲಿಂಗಿಯಿರಲಿ ಎಲ್ಲರೂ ಇಲ್ಲಿ ಸಮಾನರು...
ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುವ ಮಲ್ಲಿಕಾರ್ಜುನ ಖಂಡಮ್ಮನವರ
ಸಾಧನೆ ಹಾದಿಯಲ್ಲಿ ಕಲಾವಿದ ಅನಂತ ಚಿಂಚನಸೂರ
ಸಬ್ ಇನ್ಸ್ಪೆಕ್ಟರ್ ಸೋಮಶಂಕರ್ ಜೀವನಯಾನ
‘ಬದ್ದಿ ಸಹೋದರರ’ ಕಲಾಯಾನ
ಶೌರಿರಾಜು ಎಂಬುವ ಸ್ಮಶಾನ ವೀರಬಾಹುವಿನ ಜೀವನಯಾನ
ಅಪರೂಪದ ಪ್ರಕೃತಿ ಹಾಗೂ ಪಕ್ಷಿ ಪ್ರೇಮಿ ವಿನೋದ್ ಕುಮಾರ್ ವಿ.ಕೆ
ಅಪರೂಪದ ವ್ಯಕ್ತಿತ್ವ ಚಿತ್ರದುರ್ಗದ ಜ್ಯೋತಿರಾಜ್
ಶಶಿರೇಖಾ ಅವರ ಬದುಕಿನ ಯಾನ
ತಂಬೂರಿ ರಾಮಯ್ಯನ ಜೀವನಯಾನ
ಮೊಹಮ್ಮದ್ ಅಜರುದ್ದೀನ್ ಎಂಬ ಉದಯೋನ್ಮುಖ ಪ್ರತಿಭೆ
ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ
ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
"ಅದು ಎಂಬತ್ತರ ದಶಕದ ಆರಂಭ ವರುಷಗಳ ಕಾಲ. ಆಗ ಡಾ. ಚಂದ್ರಶೇಖರ ಕಂಬಾರ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ...
©2025 Book Brahma Private Limited.