Date: 20-01-2023
Location: ಬೆಂಗಳೂರು
“ ಭಾಷಾವಾರು ಪ್ರಾಂತ ವಿಂಗಡಣೆಯು ಭಾರತದಲ್ಲಿ ಹಲವಾರು ಸ್ಥಳೀಯ ರಾಷ್ಟ್ರೀಯತೆಗಳ ಉಗಮಕ್ಕೆ ಕಾರಣವಾಗಿದೆ. ಬಹುಭಾಷಿಕತೆಯೆ ಭಾರತೀಯರ ಚಹರೆ ಆಗಿದ್ದಾಗ್ಯೂ ಆಯಾ ರಾಜ್ಯಗಳ ಭಾಷೆಯನ್ನು ಆಯಾ ರಾಜ್ಯಪ್ರಜೆಗಳು ಬಳಸಿ ಬೆಳೆಸಬೇಕೆಂದು ನಿರೀಕ್ಷಿಸಲಾಗುತ್ತಿದೆ. ದೇಶಭಕ್ತಿಯ ಎಲ್ಲ ಇತಿಮಿತಿಗಳು ಇಂದು ಭಾಷಾಭಕ್ತಿಗೂ ಇವೆ. ಚೋದ್ಯವೆಂದರೆ ಎಲ್ಲರಿಗೂ ಒಂದೊಂದೇ ತಾಯಿನುಡಿ ಇರುತ್ತದೆ ಎಂಬ ಮೂಡನಂಬಿಕೆಯೊಂದು ನಮ್ಮಲ್ಲಿಂದು ಚಾಲ್ತಿಯಲ್ಲಿದೆ” ಎನ್ನುತ್ತಾರೆ ಲೇಖಕ ರಾಮಲಿಂಗಪ್ಪ ಟಿ ಬೇಗೂರು. ಅವರು ತಮ್ಮ ‘ನೀರು ನೆರಳು' ಅಂಕಣದಲ್ಲಿ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ' ವಿಚಾರದ ಕುರಿತು ಬರೆದಿದ್ದಾರೆ.
ನಾವೆಲ್ಲರು ಈ ನಮ್ಮ ದೇಶದ ಪ್ರಜೆಗಳು; ಈ ದೇಶ ನಮ್ಮದು ಎಂಬ ಭಾವವೇ ರಾಷ್ಟ್ರೀಯತೆ. ಭಾರತದಲ್ಲಿ ಇರುವ ಎಲ್ಲರೂ ಭಾರತೀಯರು ಎಂಬುದೇ ಭಾರತ ರಾಷ್ಟ್ರೀಯತೆ. ಆದರೆ ಇಲ್ಲಿನ ಎಲ್ಲರನ್ನೂ ಒಂದೆ ಆಗಿ ಕಾಣುವ ಆಚಾರ ಇದೆಯೆ? ಖಂಡಿತವಾಗಿಯು ಇಲ್ಲ. ಏಕತೆಯನ್ನು ಉಂಟುಮಾಡುವ ಒಂದು ಸಂಘಟಕ ಶಕ್ತಿಯಂತೆ ಭಾವಿಸಬೇಕಾದ ರಾಷ್ಟ್ರೀಯತೆಯು ಜನತೆಯನ್ನು ಒಡೆಯುವ ವಿಘಟಕ ಶಕ್ತಿಯಂತೆ ರೂಪಿತಗೊಳ್ಳುತ್ತಿದೆ. ಹಲವು ತೆರನ ನಾವು ಮತ್ತು ಅನ್ಯರು ಎಂಬ ಬೈನರಿಗಳನ್ನು ಸ್ಥಳೀಯ ಮತ್ತು ಪರಕೀಯ ಎಂಬ ಬೈನರಿಗಳನ್ನು ಇಂದಿನ ನಮ್ಮ ಸೋ ಕಾಲ್ಡ್ ರಾಷ್ಟ್ರೀಯತೆಯ ವಕ್ತಾರರು ಪೋಷಿಸುತ್ತಲೂ ಇದ್ದಾರೆ. ಹೀಗಾಗಿ ಧರ್ಮ ಭಾಷೆ, ಜನಾಂಗ, ಪ್ರದೇಶ, ಸಂಸ್ಕೃತಿ, ಇಂಥ ಹಲವು ಮುಖಗಳಲ್ಲಿ ಈ ರಾಷ್ಟ್ರೀಯತೆಯು ಇಂದು ಏಕರೂಪಿಯೂ, ಬೈನರಿಯೂ ಆಗಿ ಆಚರಣೆಯಾಗಲು ಹವಣಿಸುತ್ತಿದೆ. ನಿಜಕ್ಕು ಅದು ಇರುವುದು ಬಹುರೂಪಿಯಾಗಿ ಆದರೆ ಕಟ್ಟಲ್ಪಡುತ್ತಿರುವುದು ಮತ್ತು ಕಲ್ಪಿಸಲ್ಪಡುತ್ತಿರುವುದು ಮತ್ತು ನಂಬಿಸಲ್ಪಡುತ್ತಿರುವುದು ಏಕರೂಪಿಯಾಗಿ. ಇಂತಹ ಏಕರೂಪಿ ಧರ‍್ಮಿಕ ಕಲ್ಪಿತ ರಾಷ್ಟ್ರೀಯತೆಗು ಬಹುರೂಪಿ ದೇಶಪ್ರೇಮಕ್ಕು ವ್ಯತ್ಯಾಸವಿಲ್ಲ ಎನ್ನುವಂತೆ ಕೂಡ ನಂಬಿಸಲಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾದ ಆಚಾರ ಮತ್ತು ನಡೆಗಳೂ ಇಲ್ಲಿ ಹೇರಳವಾಗಿವೆ.
ನಮ್ಮಲ್ಲಿ ಭಾಷೆ, ಧರ್ಮ, ಪ್ರದೇಶ, ಸಂಸ್ಕೃತಿ ಇವುಗಳಿಂದ ನಿರ್ದೇಶಿತವಾದ ಹಲವು ರಾಷ್ಟ್ರೀಯತೆಗಳಿವೆ. ಇವು ನಿತ್ಯ ಬದಲುಗೊಳ್ಳುತ್ತಲೆ ಇರುವ ಶ್ರೇಣೀಕೃತ ರಾಷ್ಟ್ರೀಯತೆಗಳು. ಧಾರ್ಮಿಕ ರಾಷ್ಟಿçÃಯತೆ ಕೆಲವೊಮ್ಮೆ ಭಾಷಿಕ ರಾಷ್ಟ್ರೀಯತೆಯೊಂದಿಗೆ ಸಮೀಕರಣಗೊಂಡು ‘ಅನ್ಯ’ಧರ್ಮ, ಸ್ಥಳೀಯ ರಾಷ್ಟ್ರೀಯತೆಗಳ ಮೇಲೆ ಯಜಮಾನಿಕೆ ನಡೆಸಬಹುದು. ಸಾಂಸ್ಕೃತಿಕ ರಾಷ್ಟ್ರೀಯತೆಯು ತಳಸಂಸ್ಕೃತಿಗಳನ್ನು ಕೀಳಾಗಿ ಕಾಣುತ್ತ ಕಲ್ಪಿತ ಸಾಂಸ್ಕೃತಿಕ ಏಕತೆಯನ್ನು ಸ್ಥಳೀಯ ಸಂಸ್ಕೃತಿಗಳ ಮೇಲೆ ಹೇರುತ್ತಿರಬಹುದು. ಮೊದಲಿಗೆ ಸ್ವಾತಂತ್ಯ್ರ ಬಂದ ಹೊಸತರಲ್ಲಿ ಗಾಂಧೀವಾದಿರಾಷ್ಟ್ರೀಯತೆಯೇ ಬೇರೆ, ನೆಹರೂವಾದಿ ರಾಷ್ಟ್ರೀಯತೆಯೇ ಬೇರೆ, ಆಲ್ ಇಂಡಿಯಾ ದಲಿತ್ ಫೆಡರೇಶನ್ನಿನ, ಮುಸ್ಲಿಮ್ ಲೀಗಿನ ಮತ್ತು ಸಂಘಪರಿವಾರದ ರಾಷ್ಟ್ರೀಯತೆಗಳೇ ಬೇರೆ ಬೇರೆ ಆಗಿದ್ದವು. ಆದರೆ ಇಂದು ಗಾಂಧೀವಾದಿ ರಾಷ್ಟ್ರಕಲ್ಪನೆ ಸರಿಸುಮಾರು ಇಲ್ಲವಾಗಿದೆ. ದಲಿತವಾದಿ ರಾಷ್ಟ್ರೀಯತೆ ಅಲಕ್ಷಕ್ಕೆ ಈಡಾಗಿದೆ. ನೆಹರೂವಾದಿ ಮತ್ತು ಸಂಘಪರಿವಾರದ ರಾಷ್ಟ್ರೀಯತೆಗಳು ಪರಸ್ಪರ ಕೈಜೋಡಿಸಿವೆ. ಹೀಗಾಗಿ ಇಂದಿನ ರಾಷ್ಟ್ರೀಯತೆಯು ಕೈಗಾರಿಕೀಕರಣ, ನಗರೀಕರಣ, ಸಾಮ್ರಾಜ್ಯವಾದ, ಮಾರುಕಟ್ಟೆ ಆರ್ಥಿಕತೆ, ಸಂಸ್ಕೃತಿ-ಸ್ವದೇಶಿ ರಕ್ಷಣೆ, ಧರ್ಮ, ಅಂಧಾಭಿಮಾನ, ಸನಾತನತೆ ಇವುಗಳ ಹಿಡಿತಕ್ಕೆ ಸಿಲುಕಿದೆ.
ಭಾರತಾಂಬೆಯ ಕಲ್ಪನೆ
ತಾಯಿಯ ಸಂಬಂಧವನ್ನು ರಾಷ್ಟ್ರಕ್ಕೆ ಕಲ್ಪಿಸಿ ಎಲ್ಲರ ಭಾವನಾತ್ಮಕ ತಾಯಿಯಾಗಿ ಭಾರತಾಂಬೆಯ ಕಲ್ಪನೆಯನ್ನು ಮಾಡಿಕೊಳ್ಳಲಾಗಿದೆ. ಆದರೆ ಇಂದು ಧಾರ್ಮಿಕ, ಭಾಷಿಕ, ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಈ ಕಲ್ಪನೆಯಲ್ಲಿ ಅವಕಾಶವಿಲ್ಲ. ಬ್ರಿಟಿಷರ ವಿರುದ್ಧ ಉಪಖಂಡದ ಎಲ್ಲರನ್ನು ಸಂಘಟಿಸಲು ಸಮಸ್ತರ ಕಲ್ಪನೆಯ ಮಾತೆಯ ಅಗತ್ಯ ಅಂದು ಇತ್ತು. ಆದರೆ ಎಂದೂ ಈ ಕಲ್ಪನೆ ಸಮಸ್ತರನ್ನು ಒಳಗೊಳ್ಳುವ ಕಲ್ಪನೆಯಾಗಿ ಮೂಡಲೇ ಇಲ್ಲ. ಭಾರತ
ಮಾತೆಯ ಚಿತ್ರ ಹಿಂದೂ ಮಾತೆಯ ಚಿತ್ರವೆ ಆಗಿದೆ. ಆಕೆಯ ಚಿತ್ರವನ್ನು ನೋಡಿದರೆ ಅಲ್ಲಿ ಯಾವ ಮುಸ್ಲಿಂ, ಸಿಖ್, ಜೈನ, ಗೊಲ್ಲ, ಹೊಲೆಯಾದಿ ಕುರುಹುಗಳೂ ಕಾಣಿಸುವುದಿಲ್ಲ. ಈಕೆ ಖಂಡಿತ ಹಿಂದೂ ಎಂಬ ಕಲ್ಪಿತ ಮಾತೆ. ಹಾಗಾಗಿ ಭಾರತಮಾತೆಯ ಕಲ್ಪನೆ ಒಂದು ವರ್ಗ-ಸಮುದಾಯದ ಕಲ್ಪನೆ ಮಾತ್ರ ಆಗಿದ್ದು ಅದನ್ನು ಇನ್ನಿತರರೂ ಒಪ್ಪುವಂತೆ ಒತ್ತಾಯಿಸುತ್ತದೆ.
ಪ್ರತಿಯೊಂದು ಭಾವನಾತ್ಮಕ ಸಭೆ, ಸಮಾರಂಭಗಳಲ್ಲು ಭಾರತ್ ಮಾತಾ ಕಿ ಎಂದು ಯಾರಾದರು ಕೂಗಿದರೆ ಉಳಿದವರು ಜೈ ಎನ್ನುತ್ತಾರೆ. ಈ ಜಯ ಎನ್ನುವ ಕಲ್ಪನೆಯೆ ಇನ್ನೊಬ್ಬರ ಸೋಲನ್ನೂ ನೆನಪಿಸುತ್ತದೆ.ರಾಷ್ಟ್ರೀಯತೆ ಹೀಗೆ ಭಾವನಾತ್ಮಕವಾಗಿ ಸೋಲು ಗೆಲುವಿನ ಮೇಲಾಟ ಅಲ್ಲ. ಕೆಲವೊಮ್ಮೆ ಕನ್ನಡ, ತಮಿಳು, ತೆಲುಗು ಇತ್ಯಾದಿ ಮಾತಾಡುವ ಸ್ಥಳೀಯರಿಗೆ ಈ ಭಾರತ್ ಮಾತಾ ಕಿ ಎಂದರೆ ಏನು ಎಂದರೆ ಅದರ ಅರ್ಥವೇ ಗೊತ್ತಿಲ್ಲದೆಯು ಇರಬಹುದು. ಆದರೂ ಇದೊಂದು ಆಚಾರ ಆಗಿ ನಮ್ಮಲ್ಲಿ ಚಾಲ್ತಿಯಲ್ಲಿದೆ. ಹಳೆ ಕಾಲದಲಿ ಇಂಗ್ಲಿಶರು ಲಾಂಗ್ ಲಿವ್ ದ ಕಿಂಗ್ ಎನ್ನುತ್ತಿದ್ದ ಹಾಗೆ ಭಾರತ ಮಾತೆಗೆ ಸದಾ ಜಯ ಆಗಬೇಕು ಎಂಬುದು ಇಂದು ಚಾಲ್ತಿಯಲ್ಲಿ ಇದೆ.
ರಾಷ್ಟ್ರೀಯತೆಯ ಕಲ್ಪಿತ ಚಹರೆಗಳು-ಏಕರೂಪತೆಯ ಅಪಕಲ್ಪನೆಗಳು
ಒಂದು ರಾಷ್ಟ್ರಕ್ಕೆ ಒಬ್ಬಳೇ ದೇವಿ ಇರಬೇಕೆಂಬ ಏಕರೂಪಿ ವಾದದ ಪ್ರತೀಕ ಭಾರತಮಾತೆ. ಈ ಎಕರೂಪಿತನದ ಮುಂದುವರಿಕೆಯಾಗಿ ನಮ್ಮಲ್ಲಿ ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರಪುಷ್ಪ, ರಾಷ್ಟ್ರಗೀತೆ ಎಲ್ಲವೂ ಇವೆ. ರಾಷ್ರಧರ್ಮ, ರಾಷ್ಟ್ರಭಾಷೆಗಳೂ ಇರಬೇಕೆಂದು ನಂಬಿಸಲಾಗುತ್ತಿದೆ. ಭಾರತಕ್ಕೆ ಒಂದು ರಾಷ್ಟ್ರವೆಂಬ ಚಹರೆ ಪ್ರಾಪ್ತವಾಗುತ್ತಿದ್ದಂತೆ ಇಲ್ಲಿ ಕ್ರಮೇಣ ಹಲವುತನ ನಿರಾಕರಣೆ ಆಗಿ ಯಾವುದೊ ಒಂದು ಮುನ್ನೆಲೆಗೆ ಬರುತ್ತದೆ. ಇದೆ ಹಿನ್ನೆಲೆಯಲ್ಲೆ ಬಹುಸಮಾಜ, ಸಮುದಾಯಗಳು ಹಿಂದು ಎಂಬ ಏಕರೂಪಿ ಕಲ್ಪನೆಗೆ ತುರುಕಲ್ಪಟ್ಟಿವೆ. ಹಿಂದೂ ಧರ್ಮವೆಂಬ ಒಂದು ಧರ್ಮದ ಕಲ್ಪನೆ, ಹಿಂದಿ ಭಾಷೆಯೆಂಬ ರಾಷ್ಟç ಭಾಷೆಯ ಕಲ್ಪನೆ, ಆರ್ಯ-ದ್ರಾವಿಡವೆಂಬ ಬೈನರಿ ಕಲ್ಪನೆ, ದಲಿತ ಅಚ್ಯುತ ಇತ್ಯಾದಿ ಸಮುದಾಯ ಕಲ್ಪನೆಗಳು ಹೀಗೆ ಹಲವು ಕಲ್ಪಿತ ಸಮುದಾಯಗಳು ಕೂಡ ನಮ್ಮ ರಾಷ್ಟ್ರೀಯತೆಯೊಂದಿಗೆ ಹುಟ್ಟಿಕೊಂಡಿವೆ. ಇವೆಲ್ಲ ಕಾಲಾನುಸಾರಿಯಾಗಿ ಹಲವು ತೆರನ ಧನ ಮತ್ತು ಋಣಾತ್ಮಕ ಪರಿಣಾಗಳಿಗೆ ಕಾರಣವಾಗುತ್ತ ಬಂದಿವೆ. ಮತ್ತು ಇಂದಿಗೂ ಕಾರಣವಾಗುತ್ತಿವೆ.
ಒಂದು ರಾಷ್ಟ್ರ ಅಂದ ಮೇಲೆ ಒಂದು ಸಂಸ್ಕೃತಿ ಇರಬೇಕೆಂದೇನೂ ಇಲ್ಲ. ಆದಾಗ್ಯೂ ನಮ್ಮಲ್ಲಿ ಒಂದು ‘ಭಾರತೀಯ ಸಂಸ್ಕೃತಿ’ಯ ನಿರಂತರ ನಿರ್ವಚನ ನಡೆಯುತ್ತಲೆ ಬಂದಿದೆ. ಈ ತೆರನ ಒಂದು ಸಂಸ್ಕೃತಿ ನಮ್ಮಲ್ಲಿ ಎಂದಿಗೂ ಇರಲಿಲ್ಲ. ಇಂದಿಗೂ ಇಲ್ಲ. ಆದಾಗ್ಯೂ ರಾಷ್ಟ್ರೀಯತೆ ಮಾತ್ರ ಇಂಥ ‘ಏಕತಾ ಕಲ್ಪನೆ’ಗಳ ಹುಟ್ಟಿಗೆ ಸದಾ ಪ್ರಚೋದಕವಾಗಿ ದುಡಿಯುತ್ತಲೆ ಬಂದಿದೆ. ಆದರೆ ಈ ಕಲ್ಪನೆಗಳು ಇಂದು ಏಕತೆಗಿಂತ ಯಜಮಾನಿಕೆಯ ಐಡಿಯಾಲಜಿಗಳಾಗಿ ಬೆಳೆಯುತ್ತಿವೆ. ನಮ್ಮಲ್ಲಿನ ಭಾರತೀಯ ಕಾವ್ಯಮೀಮಾಂಸೆ, ಭಾರತೀಯ ತತ್ವಶಾಸ್ತ ಭಾರತೀಯ ಸೌಂದರ್ಯಶಾಸ್ತ್ರ, ಭಾರತೀಯ ಸಾಹಿತ್ಯ ಹೀಗೆ ಭಾರತೀಯವೆಂಬ ಎಲ್ಲಕ್ಕು ಈ ಮಾತು ಅನ್ವಯಿಸುತ್ತದೆ. ಈ ಎಲ್ಲ ಕಡೆಯೂ ಏಕರೂಪೀಕರಣದ ಅಪಕಲ್ಪನೆಗಳೆ ಜರುಗಿವೆ, ಸ್ಥಾಪಿತವಾಗಿವೆ. ಕನ್ನಡದಲ್ಲಂತು ಭಾರತೀಯ ಕಾವ್ಯಮೀಮಾಂಸೆಯೆಂಬ ಏಕರೂಪೀಕೃತ ಅಪಕಲ್ಪನೆಯು ನಮ್ಮ ಬಹುರೂಪಿ ಸ್ಥಳೀಯ ಕಾವ್ಯಮೀಮಾಂಸೆಗಳನ್ನು ನೂರು ವರ್ಷಕ್ಕು ಹೆಚ್ಚು ಕಾಲ ಆಳಿದೆ. ಇಂದಿಗೂ ಈ ಅಪಕಲ್ಪನೆಯ ಭೂತದಿಂದ ನಾವು ಬಿಡಿಸಿಕೊಳ್ಳಲು ಆಗುತ್ತಿಲ್ಲ.
ಕನ್ನಡಮ್ಮನ ಕಲ್ಪನೆ
ಸ್ವಾತಂತ್ಯ್ರಕ್ಕೆ ಮುಂಚೆ ಇದ್ದ ಒಬ್ಬಳೆ ಮಾತೆಯ ಜೊತೆಗೆ ಭಾಷಾವಾರು ಪ್ರಾಂತಗಳ ವಿಂಗಡಣೆಯ ನಂತರ ರಾಜ್ಯವಾರು ಮಾತೆಯರೂ ಸೇರಿಕೊಂಡಿದ್ದಾರೆ. ಕನ್ನಡ ರಾಷ್ಟ್ರೀಯತೆಯ ಕುರುಹಾದ ಭುವನೇಶ್ವರಿ ಕೂಡ ಕೋಮುವಾದಿ ಮಾತೆಯೆ. ಎಲ್ಲ ವರ್ಗ, ಜಾತಿಗಳನ್ನು ಈಕೆ ಪ್ರತಿನಿದಿಸುವುದಿಲ್ಲ. ಹಾಗೆ ಎಲ್ಲರನ್ನು ಪ್ರತಿನಿದಿಸುವ ಒಂದು ದೇವಿಯನ್ನು ಕಲ್ಪಿಸಿಕೊಳ್ಳುವುದೂ ಕೂಡ ಸಾಧ್ಯವಿಲ್ಲದ ಸಂಗತಿ. ನಮ್ಮಲ್ಲಿ ಏಕದೇವೋಪಾಸನೆಯು ಎಷ್ಟು ಬಡಕೊಂಡರೂ ಸಾಧ್ಯವಾಗದೆ ಇರುವುದಕ್ಕೆ ಇದೇ ಕಾರಣ. ಎಲ್ಲರನ್ನು ಪ್ರತಿನಿಧಿಸುವ ಒಂದು ದೇವ-ದೇವತೆಯನ್ನು ಯಾರೂ ಎಂದಿಗೂ ನಮ್ಮಲ್ಲಿ ಕಲ್ಪಿಸಲು ಸಾಧ್ಯವಿಲ್ಲ. (ಆದರೆ ರಾಮನನ್ನು ಹಾಗೆ ಕಲ್ಪಿಸಲಾಗುತ್ತಿದೆ. ಅಯೋಧ್ಯೆಯನ್ನು ಮೆಕ್ಕಾಗೆ ಸಂವಾದಿಯಾಗಿ ಕಟ್ಟಲಾಗುತ್ತಿದೆ) ಕನ್ನಡಮ್ಮನ ಕಲ್ಪನೆ ಕೂಡ ಇದಕ್ಕೆ ಹೊರತಲ್ಲ. ಎಷ್ಟೇ ಆಗಲಿ ಈಕೆ ಭಾರತಮಾತೆಯ ತನುಜಾತೆ. ಈ ಸಂಬಂಧದಲ್ಲಿ ನಾವೆಲ್ಲರೂ ಭಾರತಮಾತೆಯ ಮಕ್ಕಳೂ ಹೌದು, ಮೊಮ್ಮಕ್ಕಳೂ ಹೌದು. ಇಬ್ಬರು ಮೂವರು ತಾಯಿಯರಾದಾಗ ಸಹಜವಾಗಿ ಶ್ರೇಣೀಕರಣ ಉಂಟಾಗುತ್ತದೆ. ಹಾಗಾಗಿ ಭಾರತ ಮಾತೆ ಎಲ್ಲರಿಗಿಂತ ದೊಡ್ಡವಳು.
ಕನ್ನಡ ರಾಷ್ಟ್ರೀಯತೆಯಂತೆಯೆ ಭಾರತದ ಎಲ್ಲ ಸ್ಥಳೀಯ ರಾಷ್ಟ್ರೀಯತೆಗಳೂ ಏಕತೆ ಮತ್ತು ಅಸಮಾನತೆಗಳೆರಡನ್ನೂ ಇರಿಸಿಕೊಂಡಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದೆಂದರೆ ಅಸಮಾನತೆಯಲ್ಲಿ ಸಹನೆಯನ್ನು ಕಾಯ್ದುಕೊಳ್ಳುವುದೆಂದೇ ಅರ್ಥ. ವಿಶ್ವಮಾನವ, ವಿಶ್ವಕುಟುಂಬ, ವಿಶ್ವಭ್ರಾತೃತ್ವ ಚಿಂತನೆಗಳು ರಾಷ್ಟ್ರೀಯತೆಗಳನ್ನು ಮೀರುವ ಆದರ್ಶಗಳೇನೋ ಹೌದು. ಆದರೆ ಈಗ ಆದರ್ಶಗಳೂ ಕೂಡ ಭಾವನಾತ್ಮಕವಾದ ಒಂದು ಸುಖೀ ಸ್ಥಿತಿಯನ್ನು ಸಾಧಿಸುವ ಕಡೆಗೆ ನಮ್ಮನ್ನು ಪ್ರಚೋದಿಸುತ್ತವೆಯೇ ವಿನಾ ವಾಸ್ತವವಾಗಿ ಅಸಮಾನತೆಯಲ್ಲಿ ಸಹನೆಯನ್ನು ನಿರಾಕರಿಸುವುದಿಲ್ಲ. ಹಾಗಾಗಿ ಯಾಜಮಾನೀಯ ಐಡಿಯಾಲಜಿಗಳನ್ನು ಒಪ್ಪಲೇಬೇಕಾದ ಒತ್ತಡ ಮತ್ತು ಅಸಮಾನತೆಯನ್ನು ಸಹಿಸಿಕೊಂಡು ಸಹಬಾಳ್ವೆ ನಡೆಸುವ ಒತ್ತಡಗಳೆರಡೂ ಇಂದು ನಮ್ಮೆದುರಿಗಿವೆ.
ಸ್ಥಳೀಯ ರಾಷ್ಟ್ರೀಯತೆಗಳು ಕೂಡ ಭಾರತೀಯ ಎಂಬ ಏಕರೂಪೀಕರಣದ ಅಪಕಲ್ಪನೆಗಳ ಮಿನಿಯೇಚರುಗಳೇ ಆಗಿವೆ. ಇಲ್ಲು ಕೂಡ ‘ಉಪ’ರಾಷ್ಟ್ರೀಯತೆ ಮತ್ತು ಸ್ಥಳೀಯಗಳ ನಡುವೆ ಅಸಮಾನ ಶ್ರೇಣೀಕರಣವೆ ಸದಾ ಹೇರಿಕೆಯಾಗುತ್ತಿರುತ್ತದೆ. ಕನ್ನಡಮ್ಮನ ಎದುರು ತುಳು, ಕೊಡವ, ಲಂಬಾಣಿಗಳೆಲ್ಲ ಎರಡನೆ ದರ್ಜೆಯನ್ನು ಒಪ್ಪಲೇಬೇಕು. ಇಲ್ಲದಿದ್ದರೆ ಕನ್ನಡಮ್ಮನನ್ನು ವಿರೋಧಿಸಬೇಕು. ಒತ್ತಡ ಹೆಚ್ಚಾದಾಗ (ಪ್ರಾದೇಶಿಕ ಅಸಮಾನತೆ ಕಣ್ಣಿಗೆ ರಾಚಿದಾಗ) ಪ್ರತ್ಯೇಕತೆಯ ಕೂಗುಗಳು ಕೇಳುವುದು ಈ ಕಾರಣಕ್ಕೇನೆ. ವಿವಿಧತೆಯಲ್ಲಿ ಏಕತೆ ಎಂಬ ಕಲ್ಪನೆ ನಿಜವಾಗಿಯೂ ನಮ್ಮಲ್ಲಿ ಬರಿ ಆದರ್ಶದ ಕಲ್ಪನೆ ಮಾತ್ರ. ಅಸಮಾನತೆಯಲ್ಲಿ ಸಹಬಾಳ್ವೆ ಎಂಬುದೇ ವಾಸ್ತವ.
ಸ್ಥಳೀಯ ರಾಷ್ಟ್ರೀಯತೆ- ಭಾಷೆಗಳ ಸಮೀಕರಣ
ಭಾಷಾವಾರು ಪ್ರಾಂತ ವಿಂಗಡಣೆಯು ಬಾರತದಲ್ಲಿ ಹಲವಾರು ಸ್ಥಳೀಯ ರಾಷ್ಟ್ರೀಯತೆಗಳ ಉಗಮಕ್ಕೆ ಕಾರಣವಾಗಿದೆ. ಬಹುಭಾಷಿಕತೆಯೆ ಭಾರತೀಯರ ಚಹರೆ ಆಗಿದ್ದಾಗ್ಯೂ ಆಯಾ ರಾಜ್ಯಗಳ ಭಾಷೆಯನ್ನು ಆಯಾ ರಾಜ್ಯಪ್ರಜೆಗಳು ಬಳಸಿ ಬೆಳೆಸಬೇಕೆಂದು ನಿರೀಕ್ಷಿಸಲಾಗುತ್ತಿದೆ. ದೇಶಭಕ್ತಿಯ ಎಲ್ಲ ಇತಿಮಿತಿಗಳು ಇಂದು ಭಾಷಾಭಕ್ತಿಗೂ ಇವೆ. ಚೋದ್ಯವೆಂದರೆ ಎಲ್ಲರಿಗೂ ಒಂದೊಂದೇ ತಾಯಿನುಡಿ ಇರುತ್ತದೆ ಎಂಬ ಮೂಡನಂಬಿಕೆಯೊಂದು ನಮ್ಮಲ್ಲಿಂದು ಚಾಲ್ತಿಯಲ್ಲಿದೆ. ದುರಂತವೆಂದರೆ ಗಡಿಭಾಗಗಳ ಜನತೆ ಸಹಜವಾಗಿಯೆ ಬಹುಭಾಷಿಕರಾಗಿದ್ದರೂ ಅವರಿಗೆ ತಮ್ಮ ತಮ್ಮ ಭಾಷಿಕ ಆಯ್ಕೆಗಳಿಗೆ ಅವಕಾಶವಿಲ್ಲ. ಸ್ಥಳೀಯ ರಾಷ್ಟ್ರೀಯತೆಯು ರಾಜ್ಯಭಾಷೆಯನ್ನೆ ಅವರು ಸ್ವೀಕರಿಸಬೇಕೆಂದು ಒತ್ತಾಯಿಸುತ್ತದೆ. ಗಡಿಗಳಲ್ಲಿ ಕೆಲವರಿಗೆ ಎರಡೆರಡು ಮೂರುಮೂರು ತಾಯ್ನುಡಿಗಳಿರುತ್ತವೆ. ಇಂತಹವರು ಯಾವ ನುಡಿಗೂ ತಾರತಮ್ಯ ತೋರುವುದಿಲ್ಲ. ಆದರೆ ಸ್ಥಳೀಯ ರಾಷ್ಟ್ರೀಯತೆಯು ಈ ಬಹುತಾಯಿ ನುಡಿಗಳನ್ನು ಒಪ್ಪುವುದಿಲ್ಲ. ಇದು ಆಯಾಯ ಭಾಷೆಗಳು ಆಯಾಯ ರಾಜ್ಯಗಳಿಗೆ ಹೋಗಲಿ ಎಂದು ಒತ್ತಾಯಿಸುತ್ತದೆ. ಮುಸ್ಲಿಮರೆಲ್ಲ ಪಾಕಿಸ್ತಾನಕ್ಕೆ ಹೋಗಲಿ ಎಂಬ ವಾದಕ್ಕಿಂತ ಇದು ಭಿನ್ನವಲ್ಲ. ವಿರ‍್ಯಾಸವೆಂದರೆ ಭಾರತ ಮಾನ್ಯ ಮಾಡಿರುವ ಎಲ್ಲ ಭಾಷೆಗಳಿಗೂ ಆವುಗಳದ್ದೇ ರಾಜ್ಯ ಇಲ್ಲ. ತಮ್ಮದೇ ರಾಜ್ಯಗಳಿಲ್ಲದ ಭಾಷೆಗಳು ಎಲ್ಲಿ ಹೋಗಬೇಕು? ಉದಾಹರಣೆಗೆ ಉರ್ದುಗೆ ಒಂದು ತನ್ನದೆ ರಾಜ್ಯ ಭಾರತದಲ್ಲಿ ಇಲ್ಲ. ಹಾಗಾದರೆ ಅದು ಎಲ್ಲಿ ಹೋಗಬೇಕು? ಸಂವಿಧಾನಿಕವಾಗಿ ಅದು ಭಾರತೀಯ ಭಾಷೆ ಅಲ್ಲವೋ?
ಕೋಲಾರದ ಗಡಿ ಪ್ರದೇಶದಲ್ಲಿ ತೆಲುಗು ಮತ್ತು ತಮಿಳು ಕನ್ನಡದೊಂದಿಗೆ ಮಾತೃಭಾಷೆಗಳಾಗಿವೆ. ಇಲ್ಲಿನ ಜನತೆ ಅದರಲ್ಲು ವಿದ್ಯೆಗೆ ಒಡ್ಡಿಕೊಳ್ಳುತ್ತಿರುವ ಜನತೆ ಇಂದು ತಮ್ಮ ಬಹುಮಾತೃಭಾಷಿಕ ಚಹರೆಯನ್ನು ಬಚ್ಚಿಟ್ಟುಕೊಳ್ಳಬೇಕಾದ - ಬಿಟ್ಟುಕೊಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇಲ್ಲಿ ಶಾಲೆಗೆ ಸೇರುವ ಪ್ರತಿಯೊಂದು ಮಗುವೂ ತನ್ನ ಮಾತೃಭಾಷೆಯನ್ನು ಕನ್ನಡವೆಂದೇ ಬರೆಯುತ್ತದೆ ಮತ್ತು ಭಾವಿಸುತ್ತದೆ. ನಮ್ಮ ಎಲ್ಲ ಶಾಲಾ ಕಾಲೇಜುಗಳ ಪ್ರವೇಶಾತಿ ಅರ್ಜಿಗಳಲ್ಲಿನ ಮಾತೃಭಾಷೆಯ ಕಾಲಮ್ಮಿನಲ್ಲಿ ಎರಡೆರಡು ಮೂರುಮೂರು ಮಾತೃಭಾಷೆಗಳನ್ನು ಉಲ್ಲೇಖಿಸಲು ನಮಗೆ ಅವಕಾಶವಿಲ್ಲ. ಸ್ಥಳೀಯ ರಾಷ್ಟ್ರೀಯತೆಯು ನಮ್ಮಲ್ಲಿ ಇಂದು ಉಂಟುಮಾಡಿರುವ ಒತ್ತಾಯ - ಒತ್ತಡಗಳಲ್ಲಿ ಇದೂ ಒಂದು.
ಸ್ಥಳೀಯ ರಾಷ್ಟ್ರೀಯತೆ ಮತ್ತು ಭಾಷೆಗಳನ್ನು ಸಮೀಕರಿಸಿದಾಗಲೂ ಕೂಡ ಸ್ಥಳೀಯ ಭಾಷಿಕರಿಗೆ ಎರಡನೆ ದರ್ಜೆಯತನವನ್ನು ಒಪ್ಪಿಕೊಳ್ಳದೆ ಗತ್ಯಂತರವಿರುವುದಿಲ್ಲ. ಕನ್ನಡದ ಎದುರು ತುಳು, ಸೋಲಿಗ, ಲಂಬಾಣಿ ಇತ್ಯಾದಿ ಭಾಷೆಗಳೆಲ್ಲ ಕರ್ನಾಟಕ ಎಂದರೆ ಕನ್ನಡ ಎಂದೇ ಭಾವಿಸಿ ಬಾಳಬೇಕಾಗುತ್ತದೆ. ಇದನ್ನು ಸಹಜವೆಂಬಂತೆ ಇಂದು ಒಪ್ಪಿಸಲಾಗುತ್ತಿದೆ ಕೂಡ. ಒಪ್ಪದಿದ್ದರೆ ಅವಕ್ಕೆ ಉಳುಬಾಳು ಇಲ್ಲ ಅಷ್ಟೆ. ಬಾಳಬೇಕೆಂದರೆ ‘ಉಪ’ರಾಷ್ಟ್ರೀಯತೆಯನ್ನು ವಿರೋಧಿಸಿ ಪ್ರತ್ಯೇಕ ಅಸ್ತಿತ್ವ ಕಂಡುಕೊಳ್ಳಬೇಕು ಇಲ್ಲದಿದ್ದರೆ ಸಾಯಬೇಕು ಅಷ್ಟೆ. ಭಾರತದಲ್ಲಿ ಅನೇಕ ಸ್ಥಳೀಯ ಭಾಷೆಗಳು ಕ್ರಮೇಣ ಸಾಯುತ್ತಿರಲು ನಮ್ಮ ಉಗ್ರ ರಾಷ್ಟ್ರೀಯತೆ ಮತ್ತು ಭಾಷಿಕ ಚಹರೆಗಳ ಸಮೀಕರಣವು ಒಂದು ಬಲವಾದ ಕಾರಣವಾಗಿದೆ.
ಪ್ರೇಮ-ಭಕ್ತಿ-ಅಭಿಮಾನ
ರಾಷ್ಟ್ರೀಯತೆಯಲ್ಲಿ ಆಯಾ ನೆಲ, ಜಲ, ಭಾಷೆ, ಕಲೆ, ಸಂಸ್ಕೃತಿ, ದೈವ, ಧರ್ಮ ಇತ್ಯಾದಿಗಳ ಬಗೆಗಿನ ಭಾವನಾತ್ಮಕ ಪ್ರೇಮವೂ ಸೇರಿರುತ್ತದೆ. ಈ ಪ್ರೇಮ ಬಹಳ ಪೊಸೆಸಿವ್ ಆದದ್ದು ಮತ್ತು ಇವೆಲ್ಲ ನಮ್ಮವು ಎಂಬ ಒಡೆತನ ಉಳ್ಳದ್ದು. ಇಂಥ ಒಡೆತನವು ಇವುಗಳಿಗೆ ಅನ್ಯರಿಂದ ಧಕ್ಕೆ ಉಂಟಾದಾಗ ರಕ್ಷಣೆಗಾಗಿ ಪ್ರಾಣತ್ಯಾಗಕ್ಕು ಸಿದ್ಧವಿರಬೇಕೆಂಬ ನಿಷ್ಠೆಯನ್ನು ಬಯಸುತ್ತದೆ. ಇದು ಬರಿ ನಿಷ್ಠೆ ಅಷ್ಟೆ ಅಲ್ಲ; ಕರ್ತವ್ಯ ಕೂಡ. ಕುರುಡು ಅಬಿಮಾನವು ಇಂತಹ ಕರ್ತವ್ಯಕ್ಕೆ ಪ್ರಾಣ ನೀಗುವುದನ್ನು ಬಲಿದಾನವೆಂದೇ ವ್ಯಾಖ್ಯಾನಿಸುತ್ತದೆ. ವಿಶೇಷವೆಂದರೆ ದೈನಂದಿನ ಸಮಾಜದಲ್ಲಿ ಯಾರಾದರೂ ಯಾರನ್ನಾದರೂ ಕೊಂದರೆ ಅದು ಅಪರಾಧವಾಗುತ್ತದೆ. ಆದರೆ ಅದೇ ರಾಷ್ಟ್ರ ರಾಷ್ಟ್ರಗಳ ನಡುವೆ ಯುದ್ಧದಲ್ಲಿ ಮಾಡುವ ಕೊಲೆಯು ಕರ್ತವ್ಯಪಾಲನೆ ಎನಿಸುತ್ತದೆ. ಶ್ಲಾಘನೀಯ ಕಾರ್ಯ ಎನಿಸುತ್ತದೆ. ಪ್ರಭುತ್ವ ಪ್ರಣೀತ ಹಿಂಸೆ-ಭಯೋತ್ಪಾದನೆಗಳನ್ನು ದೇಶಭಕ್ತಿಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ಈರಾಷ್ಟ್ರೀಯತೆಯು ಮಾನ್ಯವೆಂದು ಬೆಂಬಲಿಸುತ್ತದೆ. ಅನ್ಯರ ಮಾನ, ಪ್ರಾಣಹರಣವೆ ನಮ್ಮವರ ವಿಜಯೋತ್ಸವ ಎಂಬ ದೇಶಭಕ್ತಿಯಲ್ಲಿ ಮಾನವೀಯತೆಗೆ ಜಾಗ ಕಡಿಮೆ. ಗಡಿಗಳನ್ನು ಗೋಡೆಗಳಾಗಿಸಲು, ಸ್ವ-ಅನ್ಯ ಎಂಬ ದ್ವೀಪಗಳನ್ನು ನಿರ್ಮಿಸಲು ಸದಾ ಇದು ಕುಮ್ಮಕ್ಕು ನೀಡುತ್ತದೆ. ರಾಷ್ಟçವು ದೈವರೂಪಿ ಅದು ಪೂಜ್ಯಾರ್ಹ ಎಂದು ಹೇಳುವ ಈ ರಾಷ್ಟ್ರೀಯತೆಯು ತನ್ನನ್ನು ಪ್ರಶ್ನೆ ಮಾಡದೆ ಭಕ್ತಿ ತೋರುವುದನ್ನು ಮಾತ್ರ ಅಪೇಕ್ಷಿಸುತ್ತದೆ.
ರಾಷ್ಟ್ರ ಧರ್ಮಗಳ ಸಮೀಕರಣ
ನಮ್ಮಲ್ಲಿನ ಜಾತಿ, ಕುಲ, ಪಂಥ, ಬುಡಕಟ್ಟು ಸಮುದಾಯಗಳ ಚಹರೆಗಳನ್ನೆಲ್ಲ ಎಕರೂಪಿಸಿ ಹಿಂದೂ ಎಂಬ ಒಂದೇ ಕಲ್ಪಿತ ಧಾರ್ಮಿಕ ಸಮುದಾಯದಲ್ಲಿ ತುರುಕಲಾಗಿದೆಯಷ್ಟೆ ಅಲ್ಲ; ವಾಸ್ತವದ ಬಹುಮುಖತೆಯನ್ನು ನಿರಾಕರಿಸುವಂತಹ ರಾಷ್ಟ್ರೀಯತೆಯನ್ನಿಂದು ಆಚರಣೆಗೆ ತರಲಾಗುತ್ತಿದೆ. ಒಂದು ರಾಷ್ಟ್ರಕ್ಕೆ ಒಂದೇ ಧರ್ಮ ಒಂದೇ ಕಾನೂನು ಇರಬೇಕೆಂಬ ರಾಷ್ಟ್ರೀಯವಾದವು ಸಮಾನ ನಾಗರೀಕ ಸಂಹಿತೆಯನ್ನು ಎಲ್ಲರ ಮೇಲೂ ಹೇರುತ್ತಿದೆ. ಉರ್ದು ಮುಸ್ಲಿಮರ ಭಾಷೆ, ಹಿಂದಿ ಹಿಂದೂಗಳ ಬಾಷೆ ಎಂಬ ನಂಬಿಕೆಯನ್ನು ಬಿತ್ತಲಾಗುತ್ತಿರುವ ಈ ರಾಷ್ಟ್ರೀಯತೆಗಳಿಂದ ಇತರ ದೇಶಭಾಷೆಗಳೂ ಹಿಂದಿ ದಬ್ಬಾಳಿಕೆಗೆ ಗುರಿಯಾಗುತ್ತಲೆ ಬಂದಿವೆ. ದೇಶ ವಿಭಜನೆಯ ಹಿಂಸೆ ಘಟಿಸಿ 60 ವರ್ಷಗಳಾದರೂ ಭಾರತ ಹಿಂದೂಗಳ ಸ್ವತ್ತು, ಪಾಕಿಸ್ತಾನ ಮುಸ್ಲಿಮರ ಸ್ವತ್ತು ಎಂಬ ಭಾವನೆ ಗಾಢವಾಗಿರುವುದು ರಾಷ್ಟ್ರವನ್ನು ಧರ್ಮಗಳು ಆಳುವ ಪರಿಯಾಗಿದೆ.
ರಾಷ್ಟ್ರೀಯತೆ ಬೇಕು ಬೇಡಗಳು ಮಧ್ಯಮವರ್ಗಿ ಬಹುಸಂಖ್ಯಾತರ ಬೇಕು ಬೇಡಗಳೇ ಆಗಿದ್ದು ಅಲ್ಪಸಂಖ್ಯಾತರು ಅನಾಥಪ್ರಜ್ಞೆಗೆ ದೂಡಲ್ಪಡುತ್ತಿದ್ದಾರೆ. ಸಂಖ್ಯಾಬಲವೆ ಪ್ರಭುತ್ವವನ್ನು ನಿರ್ಧರಿಸುವ ಪ್ರಜಾಪ್ರಭುತ್ವದಲ್ಲಿ ಯಾರನ್ನಾದರು ಅಲ್ಪಸಂಖ್ಯಾತರೆಂದು ಕರೆಯುವುದೇ ಅವರ ಆತ್ಮಸ್ಥೆöÊರ್ಯವನ್ನು ಕುಂದಿಸುವ; ಆಮೂಲಕ ಧಾರ್ಮಿಕ ಆಸರೆಗೆ ಅವರನ್ನು ತಳ್ಳುವ ಕ್ರಿಯೆಯಾಗಿದೆ. ಭಾರತದಲ್ಲಿ ಮುಸ್ಲಿಮರು ಇತ್ತೀಚೆಗೆ ಹೆಚ್ಚು ಕರ್ಮಠರಾಗಲು ಈ ಹಿಂದೂ ಎಂಬ ಕಲ್ಪಿತ ಬಹುಸಂಖ್ಯಾತ ರಾಷ್ಟ್ರೀಯತೆ ಯಜಮಾನಿಕೆಯೂ ಒಂದು ಕಾರಣವಾಗಿದೆ. ಧಾರ್ಮಿಕ ದಬ್ಬಾಳಿಕೆ ಹಿಂಸೆ, ಕೋಮುಗಲಭೆಗಳು ಬಹುಸಂಖ್ಯಾತರಿಂದ ಜರುಗಿದಾಗ ನ್ಯಾಯಯುತ ಮತ್ತು ಧರ್ಮರಕ್ಷಣಾ ಕರ್ತವ್ಯಗಳೆಂದೂ ಅದೇ ಅಲ್ಪಸಂಖ್ಯಾತರ ಮೂಲಕ ಪ್ರಕಟಗೊಂಡರೆ ಅವನ್ನು ದೇಶದ್ರೋಹದಂತೆಯೂ ಭಯೋತ್ಪಾದನೆಯಂತೆಯೂ ನಮ್ಮಲ್ಲಿ ಪರಿಗಣಿಸಲಾಗುತ್ತಿದೆ. ತಪ್ಪು ಯಾರು ಮಾಡಿದರೂ ತಪ್ಪೆ ತಾನೆ? ಪ್ರಜಾಪ್ರಭುತ್ವವಾದಿ ರಾಷ್ಟ್ರೀಯತೆಯು ನಿಜಕ್ಕೂ ಪ್ರಜಾಪ್ರಭುತ್ವವಾದಿ ಆಗಿರದೆ ವರ್ಗಹಿತವಾದಿ, ಧಾರ್ಮಿಕ, ಫ್ಯೂಡಲ್ ರಾಷ್ಟ್ರೀಯತೆ ಆದಾಗ ಒದಗುವ ಕ್ರೂರತೆಯಿದು.
ಪರಕೀಯ ಪ್ರಜ್ಞೆ
ಮುಸ್ಲಿಮರನ್ನು ಅವರ ಅಲ್ಪಸಂಖ್ಯಾತ ಸ್ಥಿತಿಯೇ ಒಂದು ಸಾಮೂಹಿಕ ಅಭದ್ರತೆಗೆ ತಳ್ಳಿದೆ. ಭಾರತೀಯ ಮುಸ್ಲಿಮರಲ್ಲಿ ಬಹುಪಾಲು ಜನ ಪರಕೀಯ ಪ್ರಜ್ಞೆಯಿಂದ ನರಳುತ್ತಿದ್ದಾರೆ. ಈ ಹಿಂದೂ ಎಂಬ ಕಲ್ಪಿತ ಧರ್ಮ ಇದೆಯಲ್ಲ ಇದರ ಜಾಯಮಾನವೇ ಒಂದೋ ಜೀರ್ಣಿಸಿಕೊಂಡು ಐಕ್ಯ ಮಾಡಿಕೊಳ್ಳುವುದು, ಇಲ್ಲವೆ ಅನ್ಯವೆಂದು ಉಚ್ಛಾಟಿಸುವುದು. ಇಸ್ಲಾಂ ಧರ್ಮವನ್ನು ಇದು ಎಂದಿಗೂ ಜೀರ್ಣಿಸಿಕೊಳ್ಳಲು ಆಗಲೇ ಇಲ್ಲ. ತಮ್ಮದೇ ರಾಷ್ಟçವಿಲ್ಲದ ಜೈನ, ಸಿಖ್, ವೀರಶೈವ, ಬೌದ್ಧರು ಹಿಂದೂ ರಾಷ್ಟ್ರೀಯತೆಗೆ ಇಂದು ಅನ್ಯ ಆಗಿ ಕಾಣುತ್ತಿಲ್ಲ. ಇವೆಲ್ಲ ದೇಶವಿಭಜನೆಯ ಕಾಲದಲ್ಲಿ ತಮ್ಮದೇ ಪ್ರತ್ಯೇಕ ರಾಷ್ಟçದ ಬೇಡಿಕೆ ಒಡ್ಡದೆ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡ ಧರ್ಮಗಳು. ಹಾಗಾಗಿ ಇವು ಪರಕೀಯ ಪ್ರಜ್ಞೆಯಿಂದ ನರಳುತ್ತಿಲ್ಲ. ಅಲ್ಲದೆ ಇವು ಇಂದು ಎರಡನೆ ದರ್ಜೆಯತನದಲ್ಲಿ ಬಾಳುತ್ತಿರುವುದರಿಂದ ಇವುಗಳ ಅಲ್ಪಸಂಖ್ಯಾತತನವೇ ಇವಕ್ಕೆ ಒಂದು ಸೌಲಭ್ಯವಾಗಿದೆ
ಮುಸ್ಲಿಮರಿಗೆ ಒಂದು ಪವಿತ್ರ ಯಾತ್ರಾಕೇಂದ್ರ ಮೆಕ್ಕಾ ಇರುವಂತೆ ಎಲ್ಲ ಹಿಂದೂಗಳಿಗೆ ಒಂದೆ ಪವಿತ್ರ ಯಾತ್ರಾಸ್ಥಳ ಅಯೋಧ್ಯಾ ಇರಬೇಕೆಂದು ಕೆಲ ಪರಿವಾರದವರು (ಮತ್ತಿತರ ಸಾಫ್ಟ್ ಕೋರ್ ಪರಿವಾರಿಗಳು) ಒತ್ತಾಯಿಸುತ್ತ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಸೀದಿ ಧ್ವಂಸ, ಇಟ್ಟಿಗೆ ಯಾತ್ರೆ ಹೀಗೆ ಹಲವು ಪ್ರಯತ್ನಗಳು ನಡೆದಿವೆ. ಕೋಟ್ಯಂತರ ಭಾರತೀಯರಿಗೆ ಅವರವರಿಗೇ ಪ್ರತ್ಯೇಕವಾದ ಯಾತ್ರಾಕೇಂದ್ರಗಳಿವೆ. ಅವನ್ನೆಲ್ಲ ತಪ್ಪಿಸಿ ಒಂದು ದೈವ-ಯಾತ್ರಾಕೇಂದ್ರದೆಡೆಗೆ ತರುವುದು ಸಾಧ್ಯವೇ? ಸಾಧುವೇ? ರಾಷ್ಟ್ರೀಯತೆಯ ಹುಚ್ಚಾಟವಿದು. ಐಕ್ಯತೆಯ ಹೆಸರಿನಲ್ಲಿ ನಡೆಯುವ ಬಹುಸಂಖ್ಯಾತ ರಾಜಕಾರಣ, ವೋಟ್ ಬ್ಯಾಂಕ್ ರಾಜಕಾರಣಗಳಿಗೆ ನಮ್ಮ ಸ್ಥಳೀಯ ರಾಷ್ಟ್ರೀಯ ಪ್ರಜ್ಞೆ, ಪ್ರದೇಶಭಕ್ತಿಗಳು ಬಲಿಯಾಗುತ್ತಿರುವುದು ನಮ್ಮ ದುರಂತವಾಗಿದೆ.
‘ಸ್ಥಳೀಯ-ಪರಕೀಯ’ ವಾದವನ್ನು ಮಂಡಿಸುತ್ತಿರುವ ಪರಿವಾರದವರು ಸೋನಿಯಾ ಪರಕೀಯಳು ಎಂಬ ಕಾರಣಕ್ಕೆ ಇಲ್ಲಿ ಪ್ರಧಾನಿ ಆಗಕೂಡದೆಂದು ವಾದಿಸುತ್ತಾರೆ. ಪ್ರತಿ ಪ್ರದೇಶಗಳಲ್ಲು ಕಾಲವೆಂಬ ಗೋರಿಯನ್ನು ಅಗೆಯುತ್ತ ಹೋದರೆ ಸ್ಥಳೀಯ ಪರಕೀಯವೆಂಬ ಯಜಮಾನಾಧೀನ ಪರಿಭಾಷೆಯೆ ಬಿದ್ದುಹೋಗುತ್ತದೆ. ರಾಮಜನ್ಮಭೂಮಿ - ಬಾಬ್ರಿ ಮಸೀದಿ ಅಗೆಯುತ್ತ ಹೋದರೆ ಇತಿಹಾಸದಲ್ಲಿ ಅದು ಯಾರಿಗೆ ಸೇರಿದ್ದೆಂದು ಶೋಧಿಸಲು ಸಾಧ್ಯವೇ? ಇತಿಹಾಸವೇನೂ ನಿಂತ ನೀರಲ್ಲ. ಅದು ಶಾಶ್ವತ ಒಡೆತನಗಳಿಗೆ ಸಾಕ್ಷಿಯಂತೂ ಅಲ್ಲವೆ ಅಲ್ಲ. ಯಾವುದೇ ಭೂಮಿ-ಪ್ರದೇಶದ ಒಡೆತನವು ಇತಿಹಾಸದಲ್ಲಿ ನಿರಂತರ ಬದಲಾಗುತ್ತಲೆ ಬಂದಿದೆ. ಹೀಗಿರುವಾಗ ಐತಿಹಾಸಿಕ ಸಮರ್ಥನೆಯ ನೆಲದ ವಾರಸುದಾರಿಕೆ ಎಂಬುದೇ ಹಾಸ್ಯಾಸ್ಪದವಾದದ್ದು. ಸ್ಥಳೀಯತೆ ಪರಕೀಯತೆಯು ಪ್ರದೇಶದಿಂದ ಆಗಲೀ, ಇತಿಹಾಸದಿಂದ ಆಗಲೀ ಶೋಧಿತವಾಗತಕ್ಕ ವಿಚಾರ ಅಲ್ಲ. ಅದು ವರ್ತಮಾನದ ಲಾಭಗಳಿಗೆ ಬಳಕೆಯಾಗುವ ನಾಣ್ಯ ಅಷ್ಟೆ.
ರಾಷ್ಟ್ರೀಯತೆ ಮತ್ತು ನಿಸರ್ಗ
ಸ್ಥಳೀಯ ರಾಷ್ಟ್ರೀಯತೆಗೂ ನಿಸರ್ಗಕ್ಕು ಒಂದು ತೆರನಾದ ಸಂಬಂಧ ಇದೆ. ಇದು ಪ್ರೇಮವೂ, ಒಡೆತನವೂ ಸ್ವಾರ್ಥವೂ ಒಂದೇ ಎಂದು ಹೇಳುವ ಸಂಬಧ. ನಮ್ಮಲ್ಲಿನ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದ, ಕಾವೇರಿ ವಿವಾದ, ಆಲಮಟ್ಟಿ ವಿವಾದ, ಮಹದಾಯಿ ಯೋಜನೆ ಇತ್ಯಾದಿಗಳ ಹಿಂದೆ ಖಂಡಿತ ಸ್ಥಳೀಯ ರಾಷ್ಟ್ರೀಯತೆ ಬಲವಾಗಿ ಕೆಲಸ ಮಾಡುತ್ತಿದೆ. ಭಾಷೆಗಳಿಗೆ, ನೀರು, ಗಾಳಿ, ಬೆಳಕು ಇತ್ಯಾದಿಗಳಿಗೆ ನಾವು ಹೇಳುವ
ಸ್ಥಳೀಯ ರಾಷ್ಟ್ರೀಯ ಗಡಿಗಳಿರುವುದಿಲ್ಲ. ನೆಲವನ್ನು ಬೇಲಿ ಹಾಕಿಕೊಂಡು ತುಂಡರಿಸಿ ಇದು ನಮ್ಮದು ಎನ್ನುವಷ್ಟು ಸಲೀಸಾಗಿ ನದಿಗಳನ್ನು ತುಂಡು ಮಾಡಲಾಗುವುದಿಲ್ಲ. ಹಾಗೊಂದು ವೇಳೆ ಮಾಡಿದರೆ ಸಮುದ್ರಕ್ಕೆ ಸೇರುವ ನೀರನ್ನೆಲ್ಲ ನಮ್ಮ ಮೈಮೇಲೆ ಎಳೆದುಕೊಂಡತೆಯೆ ಸರಿ. ಆದರೆ ಸ್ಥಳೀಯ ರಾಷ್ಟ್ರೀಯತೆಗಳು ಈ ಪ್ರಾಕೃತಿಕ ವಾಸ್ತವವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಮಾನವನು ಪ್ರಕೃತಿಯನ್ನು ತನ್ನ ಆಸ್ತಿ-ಸಂಪತ್ತು ಎಂದು ತಿಳಿದಾಗ ಅದರ ಮೇಲೆ ಒಡೆತನ ಬೆಳೆಸಿಕೊಳ್ಳುತ್ತಾನೆ. ಗಾಳಿ, ನೀರು-ಸಮುದ್ರ, ಆಕಾಶಗಳೆಲ್ಲ ಇಂದು ಸರ್ಕಾರಿ ಇಲ್ಲವೆ ಖಾಸಗಿ ಆಸ್ತಿಯಾಗಿ ಮಾತ್ರವೆ ನಿರ್ವಚನಗೊಳ್ಳುತ್ತಿವೆ. ಹಾಗಾಗಿ ರಾಷ್ಟ್ರ ಕಲ್ಪನೆಯು ಪ್ರಕೃತಿಯನ್ನು ರಾಷ್ಟ್ರೀಯ ಸಂಪತ್ತು ಎಂದೇ ವ್ಯಾಖ್ಯಾನಿಸುತ್ತದೆ. ಪ್ರೇಮದ ಹೆಸರಿನಲ್ಲಿ ಪ್ರಕೃತಿಯ ಮೇಲೆ ಒಡೆತನವನ್ನು ಹೇರುತ್ತದೆ. ಇಂತಹ ಕಡೆಗಳಲ್ಲಿ ಸ್ಥಳೀಯ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯತೆಗಳ ನಡುವೆ ಸಂಘರ್ಷ ನಡೆಯುವುದೂ ಉಂಟು.
ಅಲ್ಲೆಲ್ಲೊ ನರ್ಮದಾ ನದಿಗೆ ಬೃಹತ್ ಅಣೆಕಟ್ಟು ಕಟ್ಟಿದರೆ ಅದರ ಪರಿಣಾಮಗಳು ಆ ಪ್ರದೇಶಕ್ಕೆ ಮಾತ್ರ ಸೀಮಿತವಾದುವಲ್ಲ. ಕೋಲಾರದಲ್ಲೆಲ್ಲೊ ವಿಪರೀತ ಕೊಳವೆ ಬಾವಿ ಕೊರೆದರೆ ಅದರ ಪರಿಣಾಮ ಕೋಲಾರಕ್ಕೆ ಮಾತ್ರ ಸೀಮಿತವಲ್ಲ. ಪರಿಸರದ ಮೇಲೆ ಎಲ್ಲೇ ದಾಳಿ ಮಾಡಲಿ ಅದರ ಪರಿಣಾಮಗಳು ಆಯಾ ಸ್ಥಳೀಯ, ರಾಷ್ಟ್ರೀಯ ಗಡಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಆದಾಗ್ಯೂ ಸ್ಥಳೀಯ ರಾಷ್ಟ್ರೀಯತೆಗಳು ನಿಸರ್ಗವನ್ನು ತಮ್ಮ ಉಪಯೊಗಕ್ಕೆ ಮಾತ್ರ ಇರಬೇಕೆಂದು ಬಯಸುತ್ತವೆ. ಜಗತ್ತಿನ ಸಕಲ ಸಂಪತ್ತೂ ನಮ್ಮದು ಮತ್ತು ಅನ್ಯರದ್ದು ಎಂಬುದಾಗಿ ಖಾಸಗಿ ಮತ್ತು ಸರ್ಕಾರಿ ಒಡೆತನಗಳಿಗೆ ಸೇರಲ್ಪಡುತ್ತಿದೆ. ಜಾಗತಿಕವಾಗಿ ನಿಸರ್ಗವನ್ನು ರಾಷ್ಟ್ರೀಯತೆಗಳು ಪಾಲು ಮಾಡಿಕೊಳ್ಳುತ್ತವೆ. ವಾಯುಪ್ರದೇಶ, ನದಿ, ಸಾಗರ, ಭೂಮಿಯ ಅಂತರ್ಭಾಗಗಳಿಗು ರಾಷ್ಟ್ರೀಯ ಗಡಿಗಳು ಪ್ರಾಪ್ತವಾಗಿವೆ. ಹೆಣ್ಣುಗಳಿಗಾಗಿ, ಸಾಕುಪ್ರಾಣಿಗಳಿಗಾಗಿ, ಭೂ ಒಡೆತನಕ್ಕಾಗಿ, ಅಧಿಕಾರ ಮೋಹಕ್ಕಾಗಿ ನಡೆಯುತ್ತಿದ್ದ ಎಲ್ಲ ಯುದ್ಧಗಳ ಹಿಂದೆ ಅನ್ಯರ ಸಂಪತ್ತಿನ ಕೊಳ್ಳೆಯೂ ಒಂದು ಉದ್ದೇಶವಾಗಿರುತ್ತಿತ್ತು. ಆದರೆ ಈಗ ರಾಷ್ಟ್ರೀಯ ಒಡೆತನವನ್ನು ಮೀರಿ ತನ್ನ ಹಸ್ತಕ್ಷೇಪ ನಡೆಸಲು, ಅನ್ಯರನ್ನು ಶೋಷಿಸಲು ಕದನಗಳು ನಡೆಯುತ್ತಿವೆ.
ಪ್ರಕೃತಿಯ ಒಡೆತನದ ಕಲ್ಪನೆ, ಸರ್ವವೂ ಮಾನವನ ಉಪಭೋಗಕ್ಕೆಂದೆ ಇದೆ ಎಂಬ ಧೋರಣೆ, ಪ್ರಕೃತಿಯನ್ನು ಮಾನವನ ಐಷಾರಾಮಕ್ಕೆ ಶೋಷಿಸುವ ದೋರಣೆಗಳೇ ಇಂದು ಪ್ರಶ್ನಿತವಾಗಬೇಕಿದೆ. ಈ ಕಲ್ಪನೆ, ಧೋರಣೆಗಳು ಜಾಗತಿಕ ನ್ಯಾಯವೋ, ಸಾಮಾಜಿಕ ನ್ಯಾಯವೋ, ರಾಷ್ಟ್ರೀಯವಾದವೋ ಹೀಗೆ ಯಾವುದೇ ಹೆಸರಿನಲ್ಲಿ ನಡೆದರೂ ಅದು ಅಮಾನವೀಯವಾದದ್ದು. ಅಜೈವೀಯವಾದದ್ದು. ಅಪ್ರಾಕೃತಿಕವಾದದ್ದು. ಬಲಶಾಲಿಯಾಗುವುದು, ಶ್ರೀಮಂತವಾಗುವುದು (ಅನ್ಯರನ್ನು-ಪ್ರಕೃತಿಯನ್ನು ಶೋಷಿಸುವುದು) ಇವೆಲ್ಲ ಆಧುನಿಕತೆಯಿಂದ ಬಂದಿರುವ ವಿಕಾರಗಳು. ರಾಷ್ಟ್ರಗಳಿಗೆ ಈ ವಿಕಾರ ತಗುಲಿಕೊಂಡರೆ ಜಾಗತಿಕವಾಗಿ ಪರಸ್ಪರ ಶೋಷಣೆ, ಘರ್ಷಣೆಗಳು ಉಂಟಾಗಿ ವಿಶ್ವವೇ ಕದನಕಣವಾಗುತ್ತದೆ. ವರ್ಗಸಂಘರ್ಷವು ರಾಷ್ಟ್ರ ಸಂಘರ್ಷವಾಗಿ ಬದಲಾಗುತ್ತದೆ. ವ್ಯಕ್ತಿಗಳಿಗೆ ಇರುವ ಕೆಲ ವಿಕಾರಗಳಾದ ಶ್ರೀಮಂತಿಕೆಯ ದಾಹ, ಸ್ವಪ್ರತಿಷ್ಠೆ, ನಾನೇ ಉನ್ನತವಾಗಬೇಕು, ನನ್ನ ಮಾತೇ ನಡೆಯಬೇಕು ಎಂಬ ವಾದ ರಾಷ್ಟ್ರಕ್ಕೆ ತಗುಲಿಕೊಂಡರೆ ರಾಷ್ಟ್ರೀಯ ವಾದವೇ ಒಂದು ಶೋಷಕ ವ್ಯಕ್ತಿತ್ವವಾಗಿ ಬೆಳೆಯುತ್ತದೆ. ಜಾಗತಿಕ ನ್ಯಾಯದ ಮುಖವಾಡದಲ್ಲಿ ಅಮೆರಿಕಾ ನಡೆಸುತ್ತಿರುವ ಹಸ್ತಕ್ಷೇಪ, ಪೆಟ್ರೋಟೆರರಿಸಂ, ಶಸ್ತ್ರಮಾರಾಟಗಳ ಹಿಂದೆ ಇದೇ ಧೋರಣೆ ಇದೆ.
ರಾಷ್ಟ್ರೀಯತೆಯ ಪಿತ್ತ ನೆತ್ತಿಗೆ ಏರಿದರೆ ನಾವು ಸ್ವತಂತ್ರವಾಗಿ ಅಣುಬಾಂಬು ತಯಾರಿಸುತ್ತೇವೆ. ಅದರಿಂದ ಪಾಕಿಸ್ತಾನವೂ ಭಯಪ್ರೇರಿತವಾಗಿ ನಾನೇನು ಕಡಿಮೆ ಎಂದು ಅದಕ್ಕಾಗಿ ತಾನೂ ಸಾವಿರಾರು ಕೋಟಿ ಖರ್ಚು ಮಾಡುತ್ತದೆ. ಸಾವಿರಾರು ಕೋಟಿ ರೂಪಾಯಿಗಳನ್ನು ಚಂದ್ರಯಾನಕ್ಕೆ ಖರ್ಚು ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ಪ್ರಜೆಗೆ ಈ ಸಾವಿರಾರು ಕೋಟಿಗಳ ಪ್ರತಿಷ್ಠೆಯ ಖರ್ಚಿನಿಂದ ಏನು ಲಾಭವಾಯಿತು? ನಮ್ಮಲ್ಲಿನ ಬಡತನ, ಹಸಿವು, ನಿರುದ್ಯೋಗ, ಅನಕ್ಷರತೆ, ಪ್ರಾದೇಶಿಕ ಅಸಮಾನತೆ, ರೈತರ ಆತ್ಮಹತ್ಯೆ ಇಂಥ ಯಾವುದಾದರೂ ಸಮಸ್ಯೆ ಬಗೆಹರಿಯಿತೆ? (ಜೈ ಭಾರತಮಾತೆಯೆಂಬ ಆ ಮಾತೆಗೇ ಇದೆಲ್ಲ ಪ್ರೀತಿಯಾಗಬೇಕು)
ರಾಷ್ಟ್ರೀಯತೆ-ಅತಿ ರಾಷ್ಟ್ರೀಯತೆ
ಬಂಡವಾಳಶಾಹಿಯು ಇಂದು ಜಾಗತಿಕವಾಗಿ ಎಲ್ಲ ಧನದಾಹಿಗಳನ್ನು - ಬಲಿಷ್ಠರನ್ನು ಕ್ರಮಕ್ರಮೇಣ ಒಂದು ಪ್ರತಿಷ್ಠಿತ ವರ್ಗವನ್ನಾಗಿ ರೂಪಿಸುತ್ತಿದೆ. ವಿಶ್ವದ ಶ್ರೀಮಂತ ಉದ್ಯಮಪತಿಗಳು ಒಂದು ವರ್ಗವಾಗಿ ಇಡೀ ಜಗತ್ತನ್ನು ಗ್ರಾಹಕಲೋಕವನ್ನಾಗಿ ರೂಪಿಸುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳು ರಾಷ್ಟ್ರಗಡಿಗಳನ್ನೆ ಮೀರಿ ಬಂಡವಾಳ - ಲಾಭವನ್ನೆ ಮುಖ್ಯವಾಗಿ ಇಟ್ಟುಕೊಂಡು ರಾಷ್ಟ್ರಾಂತರ ವ್ಯಾಪಾರ ನಡೆಸುತ್ತಿವೆ. ಉದ್ಯಮಪತಿಗಳಲ್ಲಿ ಒಂದು ಪರಸ್ಪರ ಒಪ್ಪಿತವಾದ ಸಂಘಟಿತ ಅಜೆಂಡಾ ಇಲ್ಲದಿದ್ದರೂ ಎಲ್ಲರ ಮಾರ್ಗವೂರಾಷ್ಟ್ರೀಯತೆಯನ್ನು ಮೀರಿದ ಲಾಭಕೋರತನವೇ ಆಗಿದೆ. ರಾಷ್ಟ್ರೀಯತೆಗಳೂ ಕೂಡ ಇವರಿಗೆ ಬಂಡವಾಳಗಳೇ ಆಗಿವೆ. ಹೀಗಾಗಿ ಇಂದು ಸ್ವ ಮತ್ತು ಅನ್ಯ ಎಂಬ ಬೈನರಿಗೆ ಒಂದು ಹೊಸ ಜಾಗತಿಕ ವಿನ್ಯಾಸವೇ ಲಭ್ಯವಾಗಿದೆ. ರಾಷ್ಟ್ರೀಯ ಗಡಿಗಳನ್ನು ಮೀರಿದ ವರ್ಗವಿನ್ಯಾಸ ಇದು. ಇದಕ್ಕೆ ಯಾವ ಜನಾಂಗ, ಧರ್ಮ, ಭಾಷೆ, ಸಂಸ್ಕೃತಿಗಳ ಗಡಿಗಳೂ ಇಲ್ಲ. ಈ ಬಲಿಷ್ಠ ವರ್ಗದ ಹಿತಾಸಕ್ತಿಗಳಿಗೆ ಅನುಗುಣವಾಗಿಯೆ ರಾಷ್ಟ್ರ ರಾಷ್ಟ್ರಗಳ ಆಲೋಚನೆ, ಬದುಕನ್ನು ರೂಪಿಸುವ ಹುನ್ನಾರಗಳನ್ನು ಹೂಡಲಾಗುತ್ತಿದೆ. ಈ ಪ್ರತಿಷ್ಟಿತ ವರ್ಗಕ್ಕೆ ರಾಷ್ಟ್ರೀಯತೆಗಳು ಕೂಡ ಲೆಕ್ಕವಿಲ್ಲ. ರಾಷ್ಟ್ರೀಯತೆಗಳನ್ನು ಆಳುವ ಸೂಪರ್ ರಾಷ್ಟ್ರೀಯತೆಗಳಿವು. ಈ ಅತಿರಾಷ್ಟ್ರೀಯತೆಯು ತನ್ನ ಲಾಭಬಡುಕ ದಬ್ಬಾಳಿಕೆಯನ್ನೆ ಸುಖೀ ಬದುಕಿನ ಸೂತ್ರವೆಂಬಂತೆ ಬಿಂಬಿಸುತ್ತಿದೆ.
ತನ್ನ ಲಾಭಕ್ಕಾಗಿ ತಾನು ನಡೆಸುವ ಗಡಿಯಾಚೆಯ ಭಯೋತ್ಪಾದನೆಯನ್ನು ಅಮೆರಿಕಾ ‘ಸಾಮ್ರಾಜ್ಯದ ಜವಾಬ್ದಾರಿ’ ಎಂಬಂತೆ ಇಂದು ಬಿಂಬಿಸುತ್ತಿದೆ. ವಸಾಹತುಶಾಹಿಗೆ ವಿರೋಧವಾಗಿ ಹುಟ್ಟಿದ ಹಲವು ರಾಷ್ಟ್ರೀಯತೆಗಳ ಎದುರಿಗೆ ಯರೋಪಿನ ಬಿಳಿಯರು ತಮ್ಮ ದಬ್ಬಾಳಿಕೆಯನ್ನು ಜನಕಲ್ಯಾಣ ಕಾರ್ಯವೆಂದು ಬಿಂಬಿಸಲು ‘ಬಿಳಿಯರ ಹೊರೆ’ ಪರಿಕಲ್ಪನೆಯನ್ನು ಪ್ರಚಾರ ಮಾಡಿದ್ದಕ್ಕಿಂತ ಈ ‘ಸಾಮ್ರಾಜ್ಯದ ಜವಾಬ್ದಾರಿ’ ಭಿನ್ನವೇನೂ ಅಲ್ಲ. ಜಗತ್ತಿನಲ್ಲಿ ಎಲ್ಲೇ ಅನ್ಯಾಯ ನಡೆದರೂ ನಾನು ನ್ಯಾಯ ಬಗೆಹರಿಸುತ್ತೇನೆ ಎಂದು ಬರುವ ಈ ಅಮೆರಿಕಾದ ಹಸ್ತಾಕ್ಷೇಪವಾದಿ ಸೂಪರ್ ರಾಷ್ಟ್ರೀಯತೆಯು ತನ್ನ ಲಾಭಕ್ಕಾಗಿಯೆ ತನ್ನೆಲ್ಲ ದುರಾಚಾರವನ್ನು ನೈತಿಕವೆಂದು ಬಿಂಬಿಸುತ್ತಿದೆ. ಅಲ್ಲದೆ ಈ ಅತಿರಾಷ್ಟ್ರೀಯತೆಯು ತನ್ನ ಐಷಾರಾಮೀ ಗರ್ವದಿಂದಾಗಿ ರಾಷ್ಟ್ರ ರಾಷ್ಟ್ರಗಳ ಸಂಸ್ಕೃತಿಯನ್ನು ಜನಾಂಗೀಯ ದೃಷ್ಟಿಯಿಂದ ನೋಡುತ್ತ ಆಯಾ ರಾಷ್ಟ್ರೀಯರಿಗೆ ತಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಕೀಳರಿಮೆ ಬರುವಂತೆ ಮಾಡುತ್ತಿದೆ. ಇದಕ್ಕೆ ಪ್ರತಿರೋಧ ತೋರಲು ತಮ್ಮ ತಮ್ಮ ರಾಷ್ಟ್ರೀಯತೆಯನ್ನೆ (ದೇಶಿ ಕಲ್ಪನೆಯನ್ನೆ) ಜಾಗತಿಕವಾಗಿ ಎದುರು ನಿಲ್ಲಿಸಬೇಕಾದ ಅನಿವಾರ್ಯತೆಗೆ ಮೂರನೆ ಜಗತ್ತು ಗುರಿಯಾಗಿದೆ. ಇದರಿಂದಾಗಿ ಭಾರತದಲ್ಲಿ ದೇಸೀವಾದವು ಸನಾತನತೆಯನ್ನು ಹೇರುವುದನ್ನು ನ್ಯಾಯಯುತವೆಂದು ಬಿಂಬಿಸಲು ಅನುಕೂಲವಾಗಿದೆ.
ರಾಷ್ಟ್ರೀಯತೆ ಅನ್ನುವುದು ನಿಜವಾಗಿಯೂ ಇಂದು ಎಲ್ಲರನ್ನು ತನ್ನ ಮಡಿಲಲ್ಲಿ ಇಟ್ಟು ಪಾಲಿಸುವ ತಾಯಿಯಂತೆ ಖಂಡಿತಾ ಇಲ್ಲ. ಬದಲಾಗಿ ತಾನೊಂದು ಸಾಮಾಜಿಕ ಸಮಸ್ಯೆಯೂ, ಹಲವು ಸಮಸ್ಯೆಗಳ ತಾಯಿಯೂ ಆಗಿ ಬೆಳೆದಿದೆ. ಹಲ ತೆರನ ಸಂಘರ್ಷಗಳಿಗೆ ಕಾರಣವಾಗುತ್ತಿದೆ. ರಾಷ್ಟ್ರೀಯತೆಯು ಇಂಥ ಆಚರಣೆಗಳಿಗೆ ಗುರಿಯಾಗುತ್ತಿರುವುದು ನಿಜಕ್ಕೂ ಒಂದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಸರಳವಾಗಿ ಪರಿಹರಿಸಲು ಬಹುದಾದ ಸಮಸ್ಯೆಯಲ್ಲ. ಇದಕ್ಕೆ ಕಾರಣಗಳನ್ನು ಚಿಂತಿಸಿ ಇದು ರೋಗವಾಗದಂತೆ ತಡೆಯುವ ಆಲೋಚನೆಗಳನ್ನು ನಾವೆಲ್ಲ ಮಾಡಬೇಕಾಗಿದೆ. ನಾವೆಲ್ಲರೂ ಸೆಕ್ಯುಲರ್ ರಾಷ್ಟ್ರೀಯತೆಗಳ ಕಡೆಗೆ, ಸೋದರ ರಾಷ್ಟ್ರಗಳ ಭಯೋತ್ಪಾದನೆಗಳನ್ನು ಪ್ರೀತಿಯಿಂದ ಗೆಲ್ಲುವ ಕಡೆಗೆ, ಅಮೇರಿಕಾದ ದೊಡ್ಡಣ್ಣತನವನ್ನು ಪ್ರತಿರೋಧಿಸಲು ಕಿರುರಾಷ್ಟçಗಳನ್ನು ಸಜ್ಜುಗೊಳಿಸುವ ಕಡೆಗೆ, ವಿಶ್ವಸರ್ಕಾರ, ವಿಶ್ವಪಾರ್ಲಿಮೆಂಟುಗಳ ಸಾಧ್ಯತೆಯ ಕಡೆಗೆ, ದೇಶಪ್ರೇಮ ಎಂದರೆ ಜನಪ್ರೇಮ, ಅಂಚಿನ ಜನಪ್ರೇಮ ಎಂಬ ಕಡೆಗೆ ಚಲಿಸಬೇಕಾಗಿದೆ
ಈ ಅಂಕಣದ ಹಿಂದಿನ ಬರೆಹಗಳು:
ನೆನ್ನೆ ಮನ್ನೆ-1
ನಿನಗೇ ಬರೆದ ಪತ್ರ
ಆಯ್ದಕ್ಕಿ ಕಾಯಕ ಎಂದರೇನು?
ಐದು ಕೃಷಿ ಸಂಬಂಧಿ ಪುಸ್ತಕಗಳು
ಅಮೃತ ಮಹೋತ್ಸವದ ಹೊತ್ತಿಗೆ ಸಂವಿಧಾನದ ಪೀಠಿಕೆಯನ್ನಾದರೂ ಸಾಧಿಸಿದೆವಾ?
ವ್ಯಕ್ತಿ ಪೂಜೆ, ಸ್ಥಾನ ಪೂಜೆ
ವೇಶಾಂತರದ ಸಿಟ್ಟು ದೇಶಾಂತರದ ದ್ವೇಶ
ಕನಸಲ್ಲಿ ಬರುವ ಛೂಮಂತ್ರಯ್ಯ
ವಸ್ತ್ರ ಸಂಹಿತೆಯ ಸುತ್ತ
‘ಉರಿವ ಉದಕ’: ಕನ್ನಡದ ಕಥನ ಜಗತ್ತಿನ ಅನುಭವ ಲೋಕವನ್ನು ವಿಸ್ತರಿಸುವಂತಹ ಕತೆಗಳು
ಲೇಖನ ಚಿಹ್ನೆಗಳು
ಆತಂಕ, ಸಂಭ್ರಮಗಳು ಒಟ್ಟಿಗೇ ಕುದಿಯುತ್ತವೆ
ಪದವಿ ಪೂರ್ವ ಕನ್ನಡ ಪಠ್ಯ ಮತ್ತು ಕಲಿಕೆಯ ಅನುವಿನ ಉಪಕ್ರಮಗಳು:
ದೇಶ ಕಟ್ಟುವ ಕನಸು: ‘ಹಿಂದ್ ಸ್ವರಾಜ್’
ಬಂಡಾಯ ಕತೆಗಳ ನೋಟ ನಿಲುವು
ವ್ಯಕ್ತಿಹೆಸರುಗಳ ಸುತ್ತ ಮುತ್ತ
ಪ್ರೀತಿಯೆ ಲೋಕನೀತಿ ಆದ ಬಳಗಪ್ರಜ್ಞೆಯ ಪದ್ಯಗಳು....!
ಪೋಸ್ಟ್ ಬಾಕ್ಸ್ ನಂ.9
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -2
ನವ್ಯ ಕಾವ್ಯದ ಕಟ್ಟಾಣಿಕೆ ಭಾಗ -1
ಹರಿಭಕ್ತಿ ಸಾರ ಎಂಬ ಗಿಳಿಪಾಠ
ಕಲ್ಲು ದೈವ, ಮೊರ ದೈವ?
ಚೆನ್ನಮಲ್ಲಿಕಾರ್ಜುನ ಅಂಕಿತದ ವಚನಗಳು: ಕೆಲ ಟಿಪ್ಪಣಿಗಳು
ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.